Tuesday, August 25, 2009

ಪರ್ಜನ್ಯ ಎಂಬ ಕನ್ನಡ ಪ್ರಭ ದಲ್ಲಿ ಬಂದ ಕಥೆ

ಒಣಗಿ ನಿಂತ ಮರಗಳು, ಬಿರಿದ ನೆಲ, ಮೇವುಮೆಲಕು, ಕುಡಿಯಲು ನೀರು ಇಲ್ಲದೆ ಚಕ್ಕಳಹಿಡಿದ ಜಾನುವಾರುಗಳು, ಗಾಳಿ ಎಂದರೆ ಕೆಂಬಣ್ಣದ್ದ ಧೂಳಿನ ಅಬ್ಬರ ಎಂಬಂತಹ ವಿಪರೀತದ ವಾತಾವರಣ ಇಲ್ಲದಿದ್ದರೂ ಆಷಾಢ ಶುರುವಾಗಿದ್ದರೂ ಹದದ ಮಳೆ ಬಂದಿರಲಿಲ್ಲ. ಮಳೆಯ ಅಬ್ಬರಕ್ಕೆ ಕೆಸರು ನೀರಿನಲ್ಲಿ ಕೊಚ್ಚಿಹೋಗಿ ಮೂಡುಗಾಳಿ ಬೀಸಿ ಮರಗಿಡಗಳು ತೂಗಿ ಭೂಮಿ ಬಿರಿದು ಜುಳುಜುಳು ಅಂತ ಪಳಪಳ ಹೊಳೆಯುವ ಬೆಟ್ಟುಜಲ ಏಳಬೇಕಾದ ದಿನಗಳು ಬಂದಿದ್ದರೂ ಇನ್ನೂ ನೆಲದಲ್ಲಿ ಮೊದಲನೇ ಹಂತದ ಕೆಸರೂ ಆಗಿರಲಿಲ್ಲ. ಜಿರ್ರೋ ಅನ್ನುವ ಜೀರುಂಡೆ, ವಟರ್ರ್ ವಟರ್ರ್ ಎನ್ನುವ ಮಳೆಕಪ್ಪೆ ಗಂಟಲು ಬಿರಿಯುವಂತೆ ಕೂಗಿ ಇನ್ನೇನು ಕ್ಷಣಗಳಲ್ಲಿ ಮಳೆ ಬಂದೇ ಬಿಟ್ಟಿತು , ಮಳೆಗಾಲ ಹಿಡಿದೇ ಬಿಟ್ಟಿತು ಎಂದು ಜನ ಆಕಾಶ ನೋಡಿ ಅಂದಾಜಿಸುವಷ್ಟರಲ್ಲಿ ಮೋಡಗಳು ಬಂದಂತೆ ಮುಂದೋಡುತ್ತಿದ್ದವು. ಮಳೆ ಮಳೆ ಎಂದು ಹಲುಬುವ ಮಲೆನಾಡಿನ ಕತೆಯೇ ಇದಾದಮೇಲೆ ಇನ್ನು ಬಯಲುಸೀಮೆಯದು ಎಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಅಡಿಕೆ ತೋಟದವರು ಮಳೆ ಬರಲಿ ಬಿಡಲಿ ತಮಗೇನು ನಾಟದು ಎಂಬ ನಿರುಮ್ಮಳ ಭಾವನೆಯಲ್ಲಿ ಇದ್ದಂತೆ ತೋರುತ್ತಿದ್ದರೂ ಒಳಗೊಳಗೆ ಮುಂದಿನ ದಿನಗಳಲ್ಲಿ ಬರುವ ಪವರ್ ಕಟ್ ಮುಂತಾದ
ಚಿಂತೆಗಳಲ್ಲಿ ಮುಳುಗಿದ್ದರು. ಆದರೆ ಭತ್ತದ ಬೇಸಾಯ ಮಾಡುವ ಮಂದಿಗೆ ದಿಕ್ಕೆ ತೋಚದಂತಾಗಿತ್ತು. ಬೇಸಾಯದ ಕೆಲಸ ಶುರುಮಾಡಲಾಗದೆ ಕಂಗಾಲಾಗಿದ್ದರು. ಹಿತ್ಲಗದ್ದೆಯ ಅಂಗಡಿ ಕಟ್ಟೆ, ದೇವಸ್ಥಾನದ ಚಿಟ್ಟೆಗಳಲ್ಲಿ ಮಳೆಯದ್ದೇ ಸುದ್ದಿ. ರಸ್ತೆಯಮೇಲೆ ಎದುರುಬದುರಾದ ಜನರು ತಾಸರ್ದ ತಾಸು, ಬಾರದ ಮಳೆಯ, ಬರುವ ಬರಗಾಲದ ಅವ್ಯಕ್ತ ಭಯದ ಮಾತುಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರ ಮಟ್ಟದಲ್ಲಿ ತೋಚಿದ ತೀರ್ಮಾನ ಹೇಳಿ ಆಕಾಶ ನೋಡುತ್ತಿದ್ದರು. " ಏನಾದರೂ ಮಾಡಬೇಕು, ಏನಾದರೂ ಮಾಡಬೇಕು" ಎಂಬ ಆಲೋಚನೆ ಎಲ್ಲರಲ್ಲಿಯೂ ಇತ್ತಾದರೂ ಇಂತದ್ದನ್ನೇ ಮಾಡಿದರೆ ಮಳೆ ಬರುತ್ತದೆ, ಹಾಗೆ ಮಾಡಬೇಕು ಎಂದು ಮುನ್ನುಗ್ಗುವವರಿರಲಿಲ್ಲ.
*******
ಹಿತ್ಲಗದ್ದೆಯ ಭರಮ ಮಳೆಬರುವಂತೆ ತನ್ನಿಂದ ಏನಾದರೂ ಮಾಡಲು ಸಾದ್ಯವಾ? ಎಂಬ ಪ್ರಶ್ನೆಯನ್ನು ತನ್ನಷ್ಟಕ್ಕೆ ಕೇಳಿಕೊಂಡು ಶಾಸ್ತ್ರಕ್ಕೆಂಬಂತೆ ಒಂದು ರೊಟ್ಟಿ ತಿಂದು ಬೆಳಿಗ್ಗೆ ಮನೆಬಿಟ್ಟಿದ್ದ. "ಇನ್ನು ಎಂಟು ದಿನ ಮಳೆ ಬರ್ಲಿಲ್ಲಾ ಅಂದ್ರೆ, ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕ್ಕೋಳ್ಳೋಕು ನೀರು ಇರದಿಲ್ಲ" ಎಂದು ಹೆಂಡತಿ ಹೇಳಿದ ಮಾತು ಭರಮನ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅದು ತೀರಾ ಅತಿರೇಕದ ಮಾತು ಅಂತ ಭರಮನಿಗೆ ಒಮ್ಮೆ ಅನ್ನಿಸಿದರೂ ಗದ್ದೆಬೇಸಾಯದ ಕತೆ ನೆನಪಾದಕೂಡಲೆ ಹೆಂಡತಿಯ ಮಾತು ತೀರಾ ತಳ್ಳಿಹಾಕಲಾಗದು ಎಂಬ ಮನಸ್ಥಿತಿಗೆ ಬಂದು ತಲುಪಿದ್ದ. "ಅದು ಯಾಕೆ ಹಿಂಗಾತು?, ಆದ್ರಮಳೆ ಬ್ಯಾಡ, ಅಣ್ಣನ ಮಳೆಯೂ ಹೋಗ್ಲಿ, ತಮ್ಮನ ಮಳೆಯಾದ್ರೂ ಹೊಡೀಬೇಕಾಗಿತ್ತು. ಇಷ್ಟೊತ್ತಿಗೆ ಭತ್ತದ ಸಸಿ ನೀರುಬಿಟ್ಟೆದ್ದು ಆಲ ಹೊಡೆಯಲು ಬರಬೇಕಾಗಿತ್ತು, ನೀರು ಬಿಟ್ಟೇಳೋದು ಆಮೇಲಾತು, ಭೂಮೀನೇ ಬಿಡ್ಲಾರೆ ಅಂತ ಎಲ್ಲಾ ಬೀಜಾನೂ ಸುಟ್ಟು ಸತ್ತೋತು, ಬೋರ್ ಹಾಕ್ಸಿಕೊಂಡರ ಕತೆನೂ ಅಷ್ಟೆಯಾ, ಬುಸ್ ಬುಸ್ ಅಂತ ಗಾಳಿ ಬಿಟ್ರೆ ನೀರೇ ಇಲ್ಲ, ಭೂಮಿ ಬಿರಿಯುವಂತಹ ಮಳೆ ಬರಬೇಕಾದ ಮಲೆನಾಡಿನಲ್ಲಿ ಹಿಂಗಾದ್ರೆ ಇನ್ನು ಬಯಲುಸೀಮೆ ಗತಿ ಏನು?, ಈ ದಿವಸದಲ್ಲಿ ಹನಿಯೂ ಇಲ್ಲಾ ಅಂತಾದ್ರೆ ಬರದ ಕತೆ ಕೇಳಿದ್ದು ಸುಳ್ಳು, ಬಂದಿದ್ದು ನಿಜ ಅನ್ನೋದರಲ್ಲಿ ಯಾವ ಅನುಮಾನನೂ ಇಲ್ಲ, ಘೋರಾಂಡ್ಲ ಬರಾ ಬರೋದು ಖಂಡಿತಾನಾ? " ಅಂತ ಆಲೋಚಿಸುತ್ತಾ ಗದ್ದೆ ಬದುವಿನ ಹಾದಿ ಹಿಡಿದವನಿಗೆ ದೂರದಲ್ಲಿ ಪೂಜಾರಿ ತಾಮ್ರದ ಕೊಡದಲ್ಲಿ ನೀರು ತುಂಬಿ ಮಣ ಮಣ ಮಂತ್ರ ಪಠಿಸುತ್ತಾ ದೇವಸ್ಥಾನದತ್ತ ಹೋಗುತ್ತಿದ್ದುದು ಕಾಣಿಸಿ "ಮನದ ಕಳವಳ ನೀಗಲು ಇವರೇ ಸರಿ" ಅಂಬೋ ತೀರ್ಮಾನ ಮಾಡಿ ಅತ್ತ ದಾರಿ ಬದಲಿಸಿದ.
ಭರಮ ಗದ್ದೆಬದುವಿನ ಸುತ್ತು ದಾರಿ ಬಳಸಿ ದೇವಸ್ಥಾನದ ಹಜಾರ ತಲುಪುವಷ್ಟರಲ್ಲಿ ಅರ್ಚಕರು ಆಗಲೇ ಗರ್ಭಗುಡಿ ಪ್ರವೇಶಿಸಿಯಾಗಿತ್ತು.
"ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ: sಸೂಕ್ತವಾಚ: ಪೃಥಿವಿಮಾತರ್ಮಾಮಾ ಹಿಗುಂಸಿ ರ್ಮಧುಮನಿಷ್ಯೇ........." ಅರ್ಚಕರು ಭರಮನಿಗೆ ಅರ್ಥವಾಗದ ಭಾಷೆಯಲ್ಲಿ ಅಸ್ಕಲಿತ ಮಂತ್ರಪಠಣ ಮುಂದುವರೆಸಿದ್ದರು. ಭರಮನಿಗೆ ಅರ್ಚಕರ ಸ್ವರ ಕಿವಿಗೆ ಇಂಪುನೀಡುತ್ತಿದ್ದರೂ ಬರದ ಚಿಂತೆಯಿಂದಾಗಿ ಮನಸ್ಸಿನಲ್ಲಿ ಭಯದ ಭಾವ ಆವರಿಸಿದ್ದರಿಂದ ಭಕ್ತಿ ಹುಟ್ಟಲಿಲ್ಲ, ಮನಸ್ಸಿಗೆ ಹಿತವಾದ ಅನುಭವವನ್ನೂ ನೀಡಲಿಲ್ಲ. ಇರುವ ಎರಡು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯದಿದ್ದರೆ ಮುಂದಿನ ವರ್ಷದ್ದು ಇರಲಿ ಕೆಲವೇ ದಿನಗಳಲ್ಲಿ ಉಪವಾಸ ಬೀಳಬೇಕಾದ ಪರಿಸ್ಥಿತಿ. ಮಳೆ ಬಂದು ಹೂಟಿ ಮಾಡಿ ಬತ್ತ ಮೊಳಕೆಯಾಯಿತು ಎಂದರೆ ಹೊಟ್ಟೆಯೊಳಗಿನಿಂದ ಧೈರ್ಯ ತನ್ನಿಂದತಾನೆ ಹುಟ್ಟುತ್ತದೆ. ಈ ವರ್ಷ ಮೂವತ್ತು ಚೀಲ ಬತ್ತ ಬರುತ್ತದೆ, ಮಾರುಕಟ್ಟೆ ದರ ಇಂತಿಷ್ಟು, ಒಟ್ಟು ರೊಕ್ಕ ಅಷ್ಟಾಗುತ್ತದೆ ಎಂಬ ಲೆಕ್ಕಾಚಾರವನ್ನು ಗುಣಿಸಿ ಬಾಗಿಸಿ ಸಾಲ ಹುಟ್ಟಿಸಬಹುದು. ಆದರೆ ಮಳೆಯೇ ಬರದಿದ್ದರೆ ಆಸೆ ಕಮರುತ್ತದೆ, ಸಾಲ ನೀಡುವವರ ಬಳಿ ಹೇಳಲು ಲೆಕ್ಕ ಇಲ್ಲ, ಅವರಾದರೂ ಕೊಟ್ಟಾರು ಆದರೆ ಸಾಲದ ಊಟ ಮಾಡಲು ಧೈರ್ಯ ಹುಟ್ಟದು ಎಂಬಂತ ಜೀವನದ ವಿಷಯಗಳು ಭರಮನ ಕೊರೆಯುತ್ತಿದ್ದುದರಿಂದ ಮಳೆಯ ಬಗ್ಗೆ ಖಚಿತವಾದ ನಂಬಿಕೆ ಹುಟ್ಟುವಂತಹ ಮಾತುಗಳನ್ನು ಮನ ಬಯಸಿದ್ದರಿಂದ ಅರ್ಚಕರ ಪೂಜೆ ನೆಮ್ಮದಿ ತರುತ್ತಿರಲಿಲ್ಲ.
"ಏನೋ ಭರಮ , ಬೆಳಿಗ್ಗೆ ಮುಂಚೆ ದೇವಸ್ಥಾನಕ್ಕೆ ಬಂದ್ಯಲ?. ಏನ್ಸಮಾಚಾರ?." ಹಳೆ ಹೂವನ್ನು ಹೊರಗೆಸೆಯಲು ಪೂಜೆಯ ಮಧ್ಯೆ ಬಿಡುವು ಮಾಡಿಕೊಂಡು ಬಂದ ಅರ್ಚಕರು ಕೇಳಿದರು.
"ಅಯ್ಯೋ ನಮಸ್ಕಾರ ಸ್ವಾಮಿ, ಅದೇ ಮಳೆ ವಿಚಾರ ಕೇಳಾನ ಅಂತ ಬಂದೆ" ಗಡಿಬಿಡಿಯಿಂದ ಹೇಳಿದ ಭರಮ.
"ಕಾಲ ಕೆಟ್ಟೋಯ್ತು ಭರಮ, ಶಿವ ಏನುತಾನೆ ಮಾಡ್ಯಾನು? ಜನರಿಗೆ ದೇವರುದಿಂಡಿರು ಎಂಬ ಭಯ ಭಕ್ತಿ ಹೋಗಿದೆ, ಊರಿನಲ್ಲಿ ಬರೀ ಪಾರ್‍ಟಿ ಪಂಗಡ ಅಂತ ರಾಜಕೀಯವೇ ಹೊರತು, ಪೂಜೆ ಪುನಸ್ಕಾರ ಹೋಮ ಹವನ ಅಂತ ಯಾರೂ ತಲೆಕೆಡಿಸಿಕೊಳ್ಳೋರಿಲ್ಲ.ಹಾಗಾಗಿ ಶಿವ ಮುನಿದಿದಾನೆ"
"ಆಗಿದ್ದು ಆತಲ, ಈಗೇನು ಮಾಡ್ಬೇಕು?, ಏನು ಮಾಡಿದ್ರೆ ಮಳೆ ಬತ್ತದೆ , ಅದನ್ನ ಹೇಳಿ ಸ್ವಾಮೀ..."
"ನೋಡು ಭರಮ ಇಷ್ಟು ದೊಡ್ದ ಊರ್ನಾಗೆ ಯಾರೂ ನನ್ನ ಬಂದು ಕೇಳ್ಳಿಲ್ಲ, ಎಲ್ರೂ ತಮ್ಮನ್ನೆ ಬುದ್ದಿವಂತರು ಅಂದ ಅಂದ್ಕೊಂಡಿದಾರೆ, ನೀನಾರು ಬಂದ್ಯಲ, ಅದೇ ಸಮಾಧಾನ, ಈಗ ಮಳೆ ಮುಂಚಿನ ಹಾಗೆ ಹೊಯ್ಯಬೇಕು ಅಂದ್ರೆ ಮಾಡ್ಬೇಕಾದ್ದು ಪರ್ಜನ್ಯ, ಅದರ ಮೂಲಕ ಶಿವನನ್ನ ಮೆಚ್ಚಿಸಬಹುದು. ಮಳೆ ಬೆಳೆ ಎಲ್ಲಾ ತನ್ನಿಂದ ತಾನೆ ಸರಿ ಆಗುತ್ತೆ"
"ನೀವು ಅಡ್ದಗೊಡೆ ಮೇಲೆ ದೀಪ ಇಟ್ಟಂಗೆ ಹೇಳಿದ್ರೆ ಹೆಂಗೆ? ಪಜ್ರನ್ಯ ಅಂದ್ರೆ ಹ್ಯಾಂಗೆ ಮಾಡಾದು?"
"ಅಯ್ಯೋ ಅದು ಪಜ್ರನ್ಯ ಅಲ್ವೋ ಪರ್ಜನ್ಯ ಅಂತ, ಈಶ್ವರನ ಗರ್ಭಗುಡಿಯ ದ್ವಾರಕ್ಕೆ ಬಾಳೆಕಂಬ ಅಡ್ಡ ಇಟ್ಟು, ಪುಷ್ಕರಣಿಯಿಂದ ಊರೋರೆಲ್ಲಾ ಒಂದೊಂದೇ ಕೊಡ ನೀರು ತಂದು ತುಂಬಿಸಬೇಕು. ಈಶ್ವರ ಲಿಂಗ ನೀರಲ್ಲಿ ಮುಳುಗೋವರೆಗೂ ನೀರುಹೊಯ್ತಾನೆ ಇರಬೇಕು, ಹತ್ತಾರು ಪುರೋಹಿತರು ಶತರುದ್ರ ಹೇಳ್ಬೇಕು, ಲಿಂಗ ನೀರಿನಲ್ಲಿ ಮುಳುಗಿ ಅರ್ದ ಘಂಟೆಯೊಳಗೆ ಧೋ ಅಂತ ಮಳೆ ಬರುತ್ತೆ, ಭಕ್ತರ ಪ್ರಾರ್ಥನೆಗೆ ಈಶ್ವರ ಒಲಿದೇ ಒಲಿತಾನೆ. ಭಕ್ತಿಯಿಂದ ಒಬ್ಬರೇ ಪ್ರಾರ್ಥಿಸಿದರೆ ಆಗುತ್ತೇ ಇನ್ನೂ ಊರಿಗೆ ಊರೇ ಸೇರಿ ಪ್ರಾರ್ಥಿಸಿದರೆ ಮಳೆ ಬರದೇ ಇರುತ್ತಾ?. ಹಾಗೆ ಮಳೆ ಬರ್ಲಿಲ್ಲ ಅಂದ್ರೆ ನಾನು ಉಟ್ಟಬಟ್ಟೇಲಿ ಊರುಬಿಡ್ತೀನಿ"
ಅರ್ಚಕರ ಮಾತುಗಳನ್ನು ಕೇಳಿದ ಭರಮನ ಮೈಮೇಲೆ ಜುಂ ಅಂತ ಮುಳ್ಳುಗಳೆದ್ದವು, ಆಹಾ ಇಂತಹಾ ಸುಲಲಿತ ಮಾರ್ಗ ಇರಬೇಕಾದರೆ ಸುಮ್ನೆ ಯಾಕೆ ಜನ ಎಲ್ಲಾ ತಲೆ ಇಲ್ದೆ ಆಡ್ತಾವೆ ಅಂತ ಅನ್ನಿಸಿ "ಸ್ವಾಮಿ, ಹಂಗೆ ಆಗ್ಲಿ ನಾಳೇನೆ ಆ ಕೆಲ್ಸ ಮಾಡೋಣ" ಎಂದು ಮಳೆ ಬಂದೇ ಬಿಡ್ತು ಅನ್ನೋ ಭಾವದಲ್ಲಿ ಹೇಳಿದ ಭರಮ.
" ಅಯ್ಯೋ ಅದು ನೀನು ತಿಳಿದುಕೊಂಡಷ್ಟು ಸುಲಭ ಅಲ್ಲ ಭರಮ, ದೇವಸ್ಥಾನದ ಆಡಳಿತ ಕಮಿಟಿಯವರು ಒಪ್ಪಬೇಕು, ಜಾತಿ ಜನಿವಾರ ಅಂತ ಬೇಧಭಾವ ಇಲ್ಲದೆ ಊರಿನ ಪ್ರತಿಯೊಬ್ಬರೂ ಪರ್ಜನ್ಯಕ್ಕೆ ನೀರು ಹೊರಲು ಬರಬೇಕು, ಶತರುದ್ರ ಹೇಳಲು ಪುರೋಹಿತರಿಗೆ ದಕ್ಷಿಣೆ ಕೋಡಬೇಕು.." ಅರ್ಚಕರು ತಮ್ಮ ಬಾಯಿಂದ ಅಚಾನಕ್ಕಾಗಿ ಹೊರಟ " ಮಳೆ ಬಾರದಿದ್ರೆ ಉಟ್ಟಬಟ್ಟೇಲಿ ಊರುಬಿಡ್ತೀನಿ" ಎಂಬ ಮಾತು ಸ್ವಲ್ಪ ಹೆಚ್ಚಿನದು ಅಂತ ಅನಿಸಿ ನಡದೇಬಿಡಬಹುದಾದ ಪರ್ಜನ್ಯದ ಬಗ್ಗೆ ನಕಾರಾತ್ಮಕ ದನಿ ಹೊರಡಿಸಿದರು.
"ಅಯ್ಯ, ಅದ್ಯಾವ ಮಹಾ ಸ್ವಾಮಿ, ಮಳೆ ಇಲ್ಲ ಅಂತ ಜನ ಕಂಗೆಟ್ಟಿದಾರೆ, ಎಲ್ರೂ ಸೇರ್ತಾರೆ, ದೇವಸ್ಥಾನದ ಅಧ್ಯಕ್ಷರೂ ಒಪ್ಪೇ ಒಪ್ತಾರೆ." ದೃಢಮನಸ್ಸಿನಿಂದ ಭರಮ ಹೇಳಿದ.
"ಕಷ್ಟ, ದೇವಸ್ಥಾನದ ಅಧ್ಯಕ್ಷರಾದ ಸತೀಶಪ್ಪನೋರು, ಪುಟ್ಟೇಗೌಡರು, ಎಲ್ಲ ನೆಪಕ್ಕೆ ಮಾತ್ರಾ ಹುದ್ದೆಲಿದಾರೆ, ಅವ್ರ ಕೆಲ್ಸ ಕಾಣಿಕೆ ದಬ್ಬಿ ದುಡ್ಡು ಎಣಿಸೋದಷ್ಟೆ, ಅವರ ಹಿಂದೆ ಇರೋರು ಜಯರಾಮ ಹೆಗಡೆಯವರು, ಅವರು ನಾಸ್ತಿಕರು, ಇಂತಹ ನಂಬಿಕೆಯಿಂದ ಊರಿಗೆ ಒಳ್ಳೇದು ಆಗುತ್ತೇ ಅಂದ್ರೂ ಅವ್ರು ಒಪ್ಪೋದಿಲ್ಲ,ಊರಲ್ಲಿ ಎರಡು ಪಾರ್ಟಿ ಇರೋದ್ರಿಂದ ಇದು ಅಸಾದ್ಯ" ಅರ್ಚಕರು ದೇವಸ್ಥಾನದ ಹಿಂದಿರುವ ರಾಜಕೀಯದ ಎಳೆ ಬಿಚ್ಚಿಡತೊಡಗಿದರು.
ಆದರೆ ಭರಮ ಪರ್ಜನ್ಯದಿಂದ ಮಳೆ ಬಂದೇ ಬರುತ್ತದೆ ಎಂಬ ಅಚಲನಂಬಿಕೆಗೆ ಇಳಿದುಬಿಟ್ಟಿದ್ದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇರಲಿಲ್ಲ. "ಒಡಿಯಾ ನಾನು ಊರಿನ ಜನರನ್ನು ಒಟ್ಟು ಸೇರಿಸ್ತೀನಿ, ಒಟ್ನಲ್ಲಿ ಶಿವನ ಕೋಪ ಮಾಯವಾಗಿ ಮಳೆ ಬಂದ್ರಾತು, ನೀವು ನಿಮ್ಕಡೆಯಿಂದ ತಯಾರಿ ಮಾಡಿ"
"ಆಯ್ತು ಅಡ್ಡಿಲ್ಲ ಇವತ್ತು ಸಂಜೆ ಊರಿನ ಸಮಸ್ತ ಜನರ ಸಭೆ ಸೇರ್ಸಿ ತೀರ್ಮಾನ ಮಾಡು, ಯಾಕಂದ್ರೆ ಒಂದಿಷ್ಟು ವಂತಿಗೇನೂ ಬೇಕು ಅದ್ಕೆ, ಮತೆ ಒಂದು ಮಾತು ನೆನಪಿಡು ಊರಿನ ಪ್ರತೀ ಮನೆಯವರೂ ಬಂದು ಈಶ್ವರನಿಗೆ ನೀರು ಹಾಕಿದಾಗ ಮಾತ್ರಾ ಮಳೆ ಬರುವುದು " ತಾವು ಹಿಂದೆ ಆಡಿದ್ದ ಮಾತುಗಳು ಅತಿಯಾಯಿತೇನೋ ಅಂತ ಅನಿಸಿದರೂ ಶಿವ ಕಾಯುತ್ತಾನೆ ಎಂಬ ಭರವಸೆಯೊಂದಿಗೆ ಪೂಜೆ ಮುಂದುವರೆಸಲು ದೇವಸ್ಥಾನದೊಳಕ್ಕೆ ನಡೆದರು.

********
ಬರದ ಸಮಸ್ಯೆ ಇಷ್ಟು ಸುಲಭವಾಗಿ ಪರಿಹಾರವಾಯಿತಲ್ಲ ಎಂದು ಅತ್ಯುತ್ಸಾಹದಲ್ಲಿ ದೇವಸ್ಥಾನದಿಂದ ಹೊರಟ ಭರಮ, ಪರ್ಜನ್ಯ ನಡೆಸಬೇಕಾದ ವಿಧಿವಿಧಾನ , ಹಣದ ವ್ಯವಹಾರ ಮುಂತಾದವುಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಸಂಜೆ ಊರಿನ ಜನರ ಸಭೆ ಸೇರಿಸುವ ಸಲುವಾಗಿ ದೇವಸ್ಥಾನದ ಅಧ್ಯಕ್ಷರಾದ ಸತೀಶಪ್ಪನವರ ಭೇಟಿ ಮಾಡಿದ. ಅವರು "ಇವೆಲ್ಲಾ ಕಾರ್ಯದರ್ಶಿ ಪುಟ್ಟೇಗೌಡರ ಕೆಲಸ ಅದು ನನಗೆ ಗೊತ್ತಿಲ್ಲ" ಎಂದು ಕೈತಿರುಚಿದ್ದರಿಂದ ಪುಟ್ಟೇಗೌಡರ ಮನೆಯತ್ತ ತೆರಳಿದ. ಪುಟ್ಟೇ ಗೌಡರು ಭರಮನ ಮಾತು ಕೇಳಿ ಅದ್ಯಾರಿಗೋ ಪೋನ್ ಮಾಡಿ ನಂತರ "ಹಾಗೆಲ್ಲಾ ಸಭೆ ಕರೆಯಲು ನಮಗೆ ಬೈಲಾದಲ್ಲಿ ಅಧಿಕಾರ ಇಲ್ಲ" ಎಂದು ಮುಖದ ಮೇಲೆ ಹೊಡೆದಂತೆ ಹೇಳಿದ್ದರಿಂದ ಸ್ವಲ್ಪ ಹತಾಶ ಭಾವನೆ ಹೊಂದಿದನಾದರೂ ಬಾರದ ಮಳೆಯಬಗ್ಗೆ, ಜನರ ಬವಣೆ ಬಗ್ಗೆ ವಿವರಿಸಿ ಸಭೆ ಕರೆಯುವಂತೆ ಮನವಿ ಮಾಡಿದ. ಆದರೆ ಪುಟ್ಟೇಗೌಡರು ತಮ್ಮ ಬೈಲಾದ ನಿಯಮಕ್ಕೆ ಅಂಟಿಕೊಂಡಿದ್ದರಿಂದ ಫಲಕಾಣದೆ ಊರಿನ ಸಮಸ್ತ ಜನರ ಸಭೆ ಕರೆಯಲು ಬೇರೆದಾರಿ ಹುಡುಕಬೇಕು ಎಂಬ ಲೆಕ್ಕಾಚಾರದೊಂದಿಗೆ ಮನೆಯ ದಾರಿ ಹಿಡಿದವನಿಗೆ ಸೀಮೆಯ ಗುರಿಕ್ಕಾರ ರಮಾನಂದ ಹೆಗಡೆಯವರ ನೆನಪಾಗಿ ಅವರ ಮನೆಯತ್ತ ಹೋಗಿ ಪರಿಸ್ಥಿತಿ ವಿವರಿಸಿದ.
"ಹೌದು ಭರಮ ನಿನ್ನ ಯೋಜನೆ ಯೋಚನೆ ಸರಿಯಾಗಿದೆ, ಊರಿನ ಜನರ ಸಭೆ ಸೇರಿಸಲು , ದೇವಸ್ಥಾನದ ಕಮಿಟಿಯ ಅಪ್ಪಣೆ ಏನೂ ಬೇಕಾಗಿಲ್ಲ, ನೀನು ಮಾಡ ಹೊರಟಿರುವುದು ಲೋಕಕಲ್ಯಾಣ ಕಾರ್ಯ, ಮಳೆ ಬಂದರೆ ಬೆಳೆ, ಬೆಳೆ ಇದ್ದರೆ ಜೀವನ, ಜೀವನ ಇದ್ದರೆ ದೇವರು ದೇವಸ್ಥಾನ, ಹಾಗಾಗಿ ಇಂದು ಸಂಜೆ ದೇವಸ್ಥಾನಕ್ಕೆ ಬರುವಂತೆ ಊರಿನ ಎಲ್ಲಾ ಜನರಿಗೂ ನೀನೇ ಹೇಳು. ಇಂತಹ ಒಳ್ಳೆಯ ಕೆಲಸಕ್ಕೆ ಕಾನೂನು ಕಟ್ಟಳೆ, ರಾಜಕೀಯ ಎಲ್ಲಾ ಮಾಡಬಾರದು ಅಂತ ಅವರಿಗೆ ಗೊತ್ತಿಲ್ಲ. ಎಲ್ಲರಿಗೂ ಮಳೆ ಬೇಕು ಅದಕ್ಕೆ ಪರ್ಜನ್ಯವೇ ದಾರಿ " ಎಂದರು.
ಭರಮನಿಗೆ ನೂರಾನೆಯ ಬಲ ಬಂದಂತಾಯಿತು ಊರಿನ ಪ್ರತೀ ಮನೆಗೂ ಹೋಗಿ ಸಂಜೆ "ಪರ್ಜನ್ಯ" ದ ಸಭೆಗೆ ಬರುವಂತೆ ಮನವಿ ಮಾಡಿ ಮನೆ ಸೇರಿದ.
***********
ಸಂಜೆ ಪರ್ಜನ್ಯದ ಸಭೆ ಸೇರಿತು. ಊರಿನ ಬಹುಪಾಲು ಜನರು ಬಂದಿದ್ದರು. ದೇವಸ್ಥಾನದ ಅಧ್ಯಕ್ಷರು ಕಾರ್ಯದರ್ಶಿಗಳೂ ಸಭೆಗೆ ಬಂದಿದ್ದರಿಂದ ಭರಮ ಸಂತುಷ್ಟಗೊಂಡಿದ್ದ. ಅರ್ಚಕರು ಪರ್ಜನ್ಯ ಹೇಗೆ ಮಾಡಬೇಕು? ಅದರಿಂದ ಏನಾಗುತ್ತದೆ? ಈಶ್ವರ ಹೇಗೆ ಸಂಪ್ರೀತನಾಗುತ್ತಾನೆ? ಎಂಬಂತಹ ಧಾರ್ಮಿಕ ವಿಚಾರಗಳನ್ನು ಶ್ಲೋಕ ಸಮೇತ ವಿಷದಪಡಿದರು. ಸಾಮೂಹಿಕ ಪ್ರಾರ್ಥನೆಯಿಂದ ದೇವ ಕರಗಿ ನೀರಾಗುವ ಪರಿ ವಿವರಿಸಿದರು. ಬರದ ಛಾಯೆಯಿಂದ, ಬಾರದ ಮಳೆಯಿಂದ ನೊಂದಿದ್ದ ಬೇಸಾಯಗಾರರು ತನ್ಮಯತೆಯಿಂದ ತಲೆ ಆಡಿಸುತ್ತಿದ್ದರು. ಒಟ್ಟಿನಲ್ಲಿ ಪೂಜೆಯಿಂದಾದರೂ ಸರಿ ಪರ್ಜನ್ಯದಿಂದಾದರೂ ಸರಿ ಮಳೆಬಂದರೆ ಸಾಕು ಎಂಬ ಭಾವದ ಜನಸಾಮಾನ್ಯರು ಮನ:ಪೂರ್ವಕವಾಗಿ ಪರ್ಜನ್ಯಕ್ಕೆ ಮಾರನೇ ದಿನವನ್ನು ನಿಗದಿಪಡಿಸಿ ಹಣಕಾಸು ದೇಣಿಗೆ ನೀಡುವುದಕ್ಕೂ ಒಪ್ಪಿಗೆ ನೀಡಿ ದೇವಸ್ಥಾನದ ಅರ್ಚಕರಿಗೆ ಧಾರ್ಮಿಕ ಉಸ್ತುವಾರಿಯನ್ನೂ ಭರಮನಿಗೆ ಹಣಕಾಸಿನ ಉಸ್ತುವಾರಿಯನ್ನೂ ನೀಡಿದರು. ಇನ್ನೇನು ಸಭೆ ಮುಗಿಯಿತು ನಾಳೆ ಪರ್ಜನ್ಯ ಖಂಡಿತ ಎಂಬ ತೀರ್ಮಾನ ಹೊರಬೀಳುವಷ್ಟರಲ್ಲಿ ಜಯರಾಮ ಹೆಗಡೆಯವರ ಪ್ರವೇಶವಾಯಿತು
"ಇದು ಪ್ರಜಾಪ್ರಭುತ್ವ ವಿರೋಧಿ ನಿಲುವು, ಇದು ಹಣ ಮಾಡುವ ತಂತ್ರ, ಇಲ್ಲಿ ಬೈಲಾವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ, ಹಾಗಾಗಿ ನಾಳೆ ಪರ್ಜನ್ಯ ದೇವಸ್ಥಾನದಲ್ಲಿ ನಡೆಸಲಾಗದು" ಎಂದು ಸಭೆಯನ್ನುದ್ದೇಶಿಸಿ ಹೇಳಿದರು. ಅಲ್ಲಿಯವರೆಗೆ ಎಲ್ಲವುದಕ್ಕೂ ಒಪ್ಪಿಗೆ ನೀಡಿದ್ದ ದೇವಸ್ಥಾನದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಕುಳಿತಲ್ಲಿಂದಲೇ ಸಣ್ಣ ರಾಗ ಆರಂಭಿಸಿದರು. ಸಭೆಯಲ್ಲಿ ಪಿಸುಮಾತುಗಳು ಹರಿದಾಡಲಾರಂಬಿಸಿತು. ನೋಡನೋಡುತ್ತಿದ್ದಂತೆ ಮಾತಿಗೆ ಮಾತು ಬೆಳೆಯತೊಡಗಿತು. "ದೇವಸ್ಥಾನ ಕಟ್ಟುವಾಗ ಎರಡು ವರ್ಷ ಜನರಲ್ ಬಾಡಿ ಕರೆಯಲಿಲ್ಲ" ಯಾರೋ ಕೂಗಿದರು. "ಈಗ ನೀವು ಎಂಟು ವರ್ಷ ಜನರಲ್ ಬಾಡಿ ಕರೆಯದೇ ದುಡ್ಡು ತಿಂತಾ ಇದೀರಿ, ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ". ಮತ್ಯಾರೋ ಇನ್ನೂ ದೊಡ್ಡ ದನಿಯಲ್ಲಿ ಕೂಗಿದರು. ಮಳೆ ಬೆಳೆ ಪರ್ಜನ್ಯ ಎಲ್ಲಾ ಮರೆತು ಪರಸ್ಪರ ದೋಷಾರೋಪಣೆಯಲ್ಲಿ ಜನರು ಮುಳುಗೇಳತೊಡಗಿದರು.
ಭರಮ ಎಲ್ಲರ ಬಳಿ ಕೈಮುಗಿಯುತ್ತಾ "ಅವೆಲ್ಲಾ ಇದಕ್ಕೆ ಸಂಬಂಧ ಇಲ್ಲ ಕೈಬಿಡಿ ನಮಗೆ ಈಗ ಮಳೆ ಬೇಕು ಅದಕ್ಕೆ ಪರ್ಜನ್ಯ ಬೇಕು" ಎಂದು ಎಲ್ಲರ ಬಳಿ ಕೇಳಿಕೊಳ್ಳತೊಡಗಿದ. ಆದರೆ ಹಲವಾರು ಜನ ಅವನ ಮಾತನ್ನು ಕೇಳುವ ಹಂತ ದಾಟಿದ್ದರು. ಕೆಲವರು ಕೇಳಿದರು ಆದರೆ ಅವರು ಗೌಣವಾಗಿದ್ದರು.ಪರ್ಜನ್ಯದ ಸಭೆ ಗೊಂದಲದಗೂಡಾಗಿ ಆಲದಮರದ ಕಾಗೆಗಳಹಿಂಡಿನಲ್ಲಿ ಹೊರಡುವ ಶಬ್ದದಂತೆ ಕಲರವದಿಂದ ತುಂಬಿಹೋಯಿತು. ಅರ್ಚಕರು ತಾನು ಭರಮನಿಗೆ ಇವೆಲ್ಲಾ ಆಗದು ಅಂತ ಮೊದಲೇ ಹೇಳಿದ್ದೆ ಆದರೆ ಅಂತ ಅವ ಕೇಳಲಿಲ್ಲ ಎಂದು ಅವರಿವರ ಬಳಿ ತಮ್ಮ ಮಾತು ಸತ್ಯವಾಗಿ ಗೆದ್ದ ಭಾವದಲ್ಲಿ ಹೇಳತೊಡಗಿದ್ದರು.
"ಇಲ್ಲಿಯವರೆಗಿನ ಎಲ್ಲಾ ತೀರ್ಮಾನಗಳೂ ಜನರ ಸಹಮತ ಇಲ್ಲದ್ದರಿಂದ ತಿರಸ್ಕಾರವಾಗಿದೆ ಎಂದು ಜಯರಾಮಹೆಗಡೆಯವರು ದೊಡ್ದದಾಗಿ ಕೂಗಿಹೇಳಿ ಊರನ್ನು ಗೆದ್ದ ವಿಜಯೋತ್ಸಾಹದಲ್ಲಿ ಹೊರನಡೆದರು.
**********

ಸಭೆಯಿಂದ ಜನರೆಲ್ಲಾ ಹೊರನಡೆಯುತ್ತಿದ್ದಂತೆ ಭರಮ ಹತಾಶನಾಗಿ ಕೈಮುಗಿದು ನಿಂತಿದ್ದವನು ಒಮ್ಮೇಲೆ ಕಣ್ಮುಚ್ಚಿಕೊಂಡು "ಹೋ" ಎಂದು ಕೂಗಿದ. ಹಾಗೆ ಕೂಗಿದ ಮರುಕ್ಷಣ ದೇವಸ್ಥಾನದ ಹಿಂದಿರುವ ಕುಂಬ್ರಿಗುಡ್ಡದತ್ತ ಓಡತೊಡಗಿದ. ಜನರೆಲ್ಲಾ ಒಮ್ಮೆ ಕಕ್ಕಾಬಿಕ್ಕಿಯಾಗಿ ಭರಮನತ್ತ ನೋಡಿ "ತಾನೇನೋ ಕಡಿತೇನೆ ಅಂತ ಹೊರಟ, ಈಗ ಆಯಿತಾ ಮಂಗಳಾರತಿ" ಎಂದು ಮಾತನಾಡಿಕೊಂಡರು. ಆದರೆ ಭರಮ ಜನರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಭರಮ ಅದ್ಯಾವುದೋ ಮಹತ್ತರ ಗುರಿಯನ್ನು ಸಾಧಿಸುವವನಂತೆ ಬಿರಬಿರನೆ ಕುಂಬ್ರಿಗುಡ್ಡ ಏರಿ ಗುಡ್ಡದ ನೆತ್ತಿಯಲ್ಲಿ ಪೂರ್ವದತ್ತ ಮುಖ ಮಾಡಿ ಕೈಮುಗಿದು ನಿಂತು. " ಹೇ ಭಗವಂತ ನೀನು ಯಾರು? ಎಲ್ಲಿದ್ದೀ ಹೇಗಿದ್ದೀ ನಿನ್ನ ಹೆಸರೇನು ಅಂತ ನನಗೆ ಗೊತ್ತಿಲ್ಲ, ನನಗೆ ಮಂತ್ರ ತಂತ್ರ ತಿಳಿಯದು, ನಾನೊಬ್ಬ ಬಡವ, ನನಗೆ ಮಳೆ ಬೇಕು, ನಾನು ನನ್ನ ಹೆಂಡತಿ ಮಕ್ಕಳು ಹಾಗೂ ನನ್ನ ಜಾನುವಾರುಗಳು ಮಳೆಯಿಲ್ಲದೆ ಬೆಳೆಯಿಲ್ಲದೆ ನೀರಿಲ್ಲದೆ ಬದುಕಲಾರೆವು, ನೀನು ನನಗೋಸ್ಕರ ಕಣ್ಣುಬಿಡು" ಎಂದು ಆಕಾಶದತ್ತ ಮುಖಮಾಡಿ ಕೂಗಿ ಹೇಳತೊಡಗಿದ. ಪರ್ಜನ್ಯದ ಸಭೆ ನಡೆಯದ್ದಕ್ಕೋ, ಮಳೆಬಾರದ್ದಕ್ಕೋ ಅಥವಾ ಪ್ರಾರ್ಥನೆಯ ಭಾವಕ್ಕೋ ಭರಮನ ಕಣ್ಣಂಚಿಲ್ಲಿ ನೀರು ಉಕ್ಕಿಬರತೊಡಗಿತು. ಆಗ ಇದ್ದಕ್ಕಿಂದಂತೆ ಪಡುವಣದಲ್ಲಿ ಕಪ್ಪನೆಯ ಮೊಡಗಳು ಒಂದರ ಹಿಂದೆ ಒಂದಂತೆ ಮೇಲೇರಿಬರತೊಡಗಿತು. ಮರುಕ್ಷಣ ಬಾನಲ್ಲಿ ಅಬ್ಬರದ ಗುಡುಗು ಆರಂಭವಾಯಿತು . ಭರಮನ ಕಣ್ಣಲ್ಲಿ ತುಂಬಿದ್ದ ನೀರನ್ನು ಮಳೆನೀರು ಕೊಚ್ಚಿಕೊಂಡು ಹೋಗಲಾರಂಬಿಸಿತು.
ಗುಡುಗಿನ ಶಬ್ದಕ್ಕೆ ಮಳೆಹನಿಗಳ ತಂಪಿಗೆ ಊರಿನ ಸಮಸ್ತ ಜನರು ಭರಮ ಏರಿದ್ದ ಕುಂಬ್ರಿ ಗುಡ್ಡದತ್ತ ಅಚ್ಚರಿಯಿಂದ ನೋಡತೊಡಗಿದರು. ಭರಮ ಗತ್ತಿನಲ್ಲಿ, ದೇವರನ್ನು ಗೆದ್ದು ಸ್ವಂತ ಪರ್ಜನ್ಯದಿಂದ ಮಳೆ ತಂದ ಭಾವದೊಂದಿಗೆ ಕಣ್ಬಿಟ್ಟ.

7 comments:

Maani said...

Raganna,

Very well written. I like it when you write about our great Uttara Kannada or Havyakas. Please continue to write more about our native. You are fortunate to be living in Sharavati valley. Do write more about
Havyakas and Sharavati valley.

Best,

-Maani

ಬಾಲು said...

ಅ೦ತು ಹೇವಿ ಮಳೆ ಬ೦ತು!!!

ಚೆನ್ನಾಗಿದೆ ಕಥೆ. :)

Radhika Nadahalli said...

ಕನ್ನಡ ಪ್ರಭದಲ್ಲಿ ನಾನು ಈ ಕಥೆಯನ್ನ ಓದಿದೆ...ತುಂಬಾ ಚನ್ನಾಗಿದೆ.. :)

Unknown said...

Thanks
Maani
Balu(sikkapatte heavy....!)
sinchana

shivu.k said...

ಸರ್,

ಕನ್ನಡಪ್ರಭದಲ್ಲಿ ಕಾರಣಾಂತರಗಳಿಂದ ಓದಲಾಗಿರಲಿಲ್ಲ. ಇಲ್ಲಿ ಓದಿದೆ. ಥ್ಯಾಂಕ್ಸ್...

Shambhu said...

It is a nice attempt to infuse unscientific orthodox elements in the minds of downtrodden people. Such attempt are getting momentum recently. It started with anti humanity writers (like Sl Byrappa, who creates a charactor like Lakshmi(belongs to Vokkaliga community)to oppose invasion of muslims in Avarana novel. This is very dangerous trend in the literary field.

Anonymous said...

ha ha ha Mosaralli kalla..?