Monday, December 22, 2008

ದೇವರೆಂಬ ದೇವರು

ನಿಜವಾಗಿಯೂ ದೇವರು ಎಂಬುವವನು ಆಕಾಶದಲ್ಲಿ ಇರಬೇಕಿತ್ತು. ಆತ ಪಾಪ ಪುಣ್ಯಗಳನ್ನು ಗುಣಿಸಿ ಭಾಗಿಸಿ ಟೋಟಲ್ ನೀಡಬೇಕಿತ್ತು. ಅಂತ ನನಗೆ ಬಹಳ ಸಾರಿ ಅನ್ನಿಸುತ್ತದೆ. ಸ್ವರ್ಗ ನರಕ ದೇವರು ದೇವತೆಗಳು ರಾಕ್ಷಸರು ಮುಂತಾದ ಕಲ್ಪನೆ ವಾಸ್ತವವಾಗಿದ್ದರೆ ಅದರ ಮಜವೇ ಬೇರಿತ್ತು ಅಂತ ಬಹುಪಾಲು ಜನರಿಗೆ ಅನ್ನಿಸದೇ ಇರದು. ಈಗ ನಾವು ಕೇವಲ ಜೀವನಕ್ಕಾಗಿ, ಸೋಲು ಗೆಲುವಿಗಾಗಿ ದೇವರೆಂಬ ದೇವರಿಗೆ ನೂರಾರು ತರಹದ ಕಲ್ಪನೆಯನ್ನಿಟ್ಟುಕೊಂಡು ಆನಂತರ ಒಳ್ಳಯದೇ ಆಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡು ಒದ್ದಾಡುವುದಕ್ಕಿಂತ ಹಾಗೊಂದು ಸತ್ಯ ಇದ್ದಿದ್ದರೆ ಆಹಾ ಏನು ಮಜಾ ಏನು ಮೋಜು. ಘಟೋತ್ಕಚ ಸಿನೆಮಾದಲ್ಲಿ ಶ್ರೀ ಕೃಷ್ಣ ಪ್ರತ್ಯಕ್ಷನಾದಂತೆ ನಮ್ಮೆದುರು ಆಕಾಶದಲ್ಲಿ ಗಿರಿಗಿರಿ ಚಕ್ರ ತಿರುಗಿಸುತ್ತಾ ಮುಗಳ್ನಗುತ್ತಾ " ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ವರವನ್ನು ಕೇಳಿಕೋ" ಎಂದು ಹೇಳುವಂತಿದ್ದರೆ, ಆಹಾ ಅದರ ಮಜ ಹೇಗೆ ವರ್ಣಿಸಲಿ?. ಈಗ ನಾವು ಸಿನೆಮಾದಲ್ಲಷ್ಟೇ ನೋಡಿ ಹಾಗೆ ಕಲ್ಪಿಸಿಕೊಳ್ಳಬೇಕಿದೆ. ಅಂದು ಹಿರಣ್ಯ ಮತ್ತು ಪ್ರಹ್ಲಾದರ ಮಧ್ಯೆಯ ಗಲಾಟೆಯಲ್ಲಿ ಡಣಾರ್ ಎಂದು ಪ್ರತ್ಯಕ್ಷನಾಗಿ ಅಪ್ಪನನ್ನು ಮುಕ್ತಿಗೊಳಿಸಿದಂತೆ ಇಂದು "ದೇವಾ....." ಎಂದು ಕೈಮುಗಿದು ಭಕ್ತಿಯ ರಸದಲ್ಲಿ ಒಂದು ಹಾಡು ಒಗೆದಿದ್ದರೆ ದಣ್ ದಣಾ ದಣ್ ಎಂದು ಮೇಲಿಂದ ಇಳಿದು ಬರುವಂತಿದ್ದರೆ. ಆಹಾ ಬಿಡಿ ಬಿಡಿ ರೇ ಪ್ರಪಂಚದ ಮಾತುಗಳನ್ನು ಎಷ್ಟು ಹೇಳಿದರೂ ಅಷ್ಟೆ. ಇಲ್ಲ ಆವಾಗಿನಷ್ಟೇ ಭಕ್ತಿಯಿಂದ ಪ್ರಾರ್ಥಿಸಿದರೆ ಇಂದೂ ದೇವರು ಪ್ರತ್ಯಕ್ಷನಾಗುತ್ತಾನೆ ಅಂತ ಪರಮ ಭಕ್ತಿಯ ಜನರು ಹೇಳಬಹುದು. ಇಲ್ಲ ಕಣ್ರಿ ಈಗ ಹತ್ತು ವರ್ಷದ ಹಿಂದೆ ಸೊರಬದ ಹತ್ತಿರ ಒಬ್ಬಾತ ಇಸ್ಪೀಟಿನಲ್ಲಿ ಸೋತು ಸುಣ್ಣವಾಗಿ ದೇವಸ್ಥಾನಕ್ಕೆ ಬಂದು "ಹೇ ಈಶ್ವರಾ... ತಂದೆ.. ನನಗೆ ಒಂದಿಷ್ಟು ಹಣ ಕೊಡೋ " ಎಂದು ವಿವಿಧ ಭಂಗಿಯಲ್ಲಿ ಬೆಳಗಿನವರೆಗೂ ಬೇಡಿ ಕೊನೆಗೂ ಈಶ್ವರ ಯಾವ ರೂಪದಲ್ಲಿಯೂ ಪ್ರತ್ಯಕ್ಷವಾಗದಾಗ ಅಲ್ಲಿಯೇ ದೇವಸ್ಥಾನದ ತೊಲೆಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದ. ದೇವರು ಪ್ರತ್ಯಕ್ಷನಾಗಲೇ ಇಲ್ಲ. ಮೊನ್ನೆ ಮೊನ್ನೆ ಟಿವಿಯಲ್ಲಿ ನೀವು ನೋಡಿರಬಹುದು ಒಬ್ಭಾತ ಬೇಡರ ಕಣ್ಣಪ್ಪನಂತೆ ತನ್ನ ಕಣ್ಣನ್ನೇ ತಾನು ಕಿತ್ತು ದೇವರಿಗೆ ಅರ್ಪಿಸಿದ್ದ . ಆದರೂ ದೇವರು ಇಳಿದು ಬರಲಿಲ್ಲ, ಟಿವಿ೯ ನವರು ಬಂದು "ಹೀಗೂ....ಉಂಟೇ..." ಎನ್ನುತ್ತಾ ಕೈಕುಣಿಸಿದರಷ್ಟೇ. ಆವತ್ತು ಕಣ್ಣಪ್ಪನಿಗಾದರೆ ಒಂದು ನೀತಿ ಇವತ್ತು ಈ ಭಕ್ತನಿಗಾದರೆ ಇನ್ನೊಂದು ನೀತಿ....!. ಇವೆಲ್ಲಾ ಘಟನೆಗಳು ನಡೆದಮೇಲೆ ನನಗೆ ನಿಚ್ಚಳ, ಅವತ್ತಿನ ಕಾಲದಲ್ಲಿ ಕರೆದೆ ಹಾಗೆ ಕರೆದರೂ ದೇವರು ಭುವಿಗೆ ಬರುವುದಿಲ್ಲ ಕಾರಣ ಆತ ಇಲ್ಲ.. ಆದರೂ ಆತ ಇರಬೇಕಿತ್ತು.....! ಅಂತ ನನಗೆ ದಿನನಿತ್ಯ ಮೂರ್ನಾಲ್ಕು ಗಂಟೆಗಳ ಕಾಲ ಪೂಜೆ ಮಾಡುವವರನ್ನು ನೋಡುವಾಗೆಲ್ಲಾ ಹಾಗೆ ಅನ್ನಿಸುತ್ತದೆ. ಆದರೇನು ಮಾಡುವುದು. ಎಲ್ಲಾ ನಮ್ಮ ಕೈ ಯಲ್ಲಿ ಇಲ್ಲವಲ್ಲ.

2 comments:

  1. dore saku saku ninna writing...! sumne tale tinnodu kaibidu

    ReplyDelete
  2. ರಾಘುಮಾವ,
    ಮತ್ತೊಂದು ಉತ್ತಮ ಬರಹ ಮೂಡಿ ಬಂದಿದೆ.ಒಂದು ಬ್ಲೊಗ್ ಇದ್ದಂತೆ ಇನ್ನೊದಿರುವುದಿಲ್ಲ.ಒಂದು ನಮ್ಮನ್ನ ತೀರಾ ಯೊಚನೆಗೆ ಹಚ್ಚಿದರೆ,ಇನ್ನೊಂದು ನಕ್ಕು ನಲಿಸುತ್ತದೆ.ಮತ್ತೊಂದು ನಮ್ಮ ಯೊಚನೆಗಳೇ ನಿನ್ನ ಕೈಯ ಮೂಲಕ ಅಕ್ಷರೀಕೃತ ಗೊಂಡಂತೆ ಭಾಸವಾದರೆ ಮಗದೊಂದು ಅಕ್ಷರವನ್ನೂ ಬಿಡದೆ ಓದಿಸಿಕೊಂಡು ಹೋಗುತ್ತದೆ.
    ಒಟ್ಟಿನಲ್ಲಿ ನಾ ಭರತಕ್ಕೆ ಬರುವಾಗ ಏರ್ಪೊರ್ಟಿಗೆ ಒಬ್ಬ ಗಡ್ಡದಾರಿ ಜುಬ್ಬದ ಒಳಗಿಂದ ಸ್ವಾಗತಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.
    all the best!

    ReplyDelete

Thank you