Tuesday, March 17, 2009

ಕರಿಯಜ್ಜ ಮತ್ತು ಕೆಂಪು ಜಲಪಾತ



ಜಿರ್ರನೆ ಸುರಿವ ಮಳೆ ದಿನ ದಿನಕ್ಕೆ ಹೆಚ್ಚಾಗುತ್ತಿತ್ತು. ಎರಡು ತಿಂಗಳ ಹಿಂದೆ ಶುರುವಾಗಿದ್ದ ಮಲೆನಾಡ ಮಳೆ ಅದು, ಹಾಗಾಗಿ ಕಡಿಮೆಯಾಗುವ ಯಾವ ಲಕ್ಷಣ ಇರಲಿಲ್ಲ.
ಕುಂಬದ್ರೋಣ ಮಳೆಗೂ ಬೆಚ್ಚದೆ ಬೆದರದೆ ಜೀರುಂಡೆ,ಹಿತ್ಲಪುಟ್ಟಿ,ಮಳೆಜಿರ್ಲೆ ಒಂದಕ್ಕೊಂದು ಸ್ಪರ್ಧೆಗೆ ಬಿದ್ದವರಂತೆ ಚಿರ್ ಚಿರ್ ಅಂತ ಕೂಗುತ್ತಿದ್ದವು. "ಕೂಗು.... ಕೂಗು ಕುಂಡೆ ಒಡೆದು ಸಾಯ್ತೀಯಾ," ಕರಿಯಜ್ಜ ಪಡಸಾಲೆಯಲ್ಲಿ ಮಲಗಿದ್ದಲ್ಲಿಂದಲೇ ಕೂಗಿ ಹೇಳಿದ . ಅವು ಕರಿಯಜ್ಜನ ಕೂಗಿಗೆ ಸೊಪ್ಪು ಹಾಕಿದ ಲಕ್ಷಣಗಳ್ಯಾವುವೂ ಗೋಚರಿಸಲಿಲ್ಲ, ಇನ್ನೂ ಸ್ವಲ್ಪ ಎತ್ತರದ ದನಿಯಲ್ಲಿ "ಚಿರ್ ಚಿರ್ ಚಿರ್ರರ್ರೋ......" ಎಂದು ಕೂಗತೊಡಗಿದವು. "ಈ ದರಿದ್ರ ಜೀರುಂಡೆಗಳಿಗೆ ಈ ಮಳೆ ತಾಗದೇನೋ?, ಮಳೆಯ ಜರ್ರೋ ದನಿಯ ಜತೀಗೆ ಇದ್ರದ್ದೊಂದು ರಗಳೆ " ಎನ್ನುತ್ತಾ ಕರಿಯಜ್ಜ ಮಗ್ಗಲು ಬದಲಿಸಿದ.
ನಿತ್ಯ ಇಷ್ಟೇ ರಗಳೆ ಮಾಡುತ್ತಿದ್ದ ನೂರಾರು ಜಾತಿಯ ಜೀರುಂಡೆಗಳು ಕರಿಯಜ್ಜನ ನಿದ್ರೆಗೆ ಭಂಗ ತರುತ್ತಿರಲಿಲ್ಲ. ಆದರೆ ಇಂದು ನಿದ್ರೆ ಬಾರದ್ದರಿಂದ ಅದು ಅವನಿಗೆ ರಗಳೆಯಾಗಿತ್ತು. ವಾಸ್ತವವೆಂದರೆ ಅವನ ನಿದ್ರೆ ಕೆಡಿಸಿದ್ದು ಧೋ ಎಂದು ಧಾರಾಕಾರ ಸುರಿವ ಶಬ್ಧದ ಮಳೆಯೂ ಆಲ್ಲ, ಚಿರ್ರರ್ರೋ.... ಎಂದು ಕೂಗುವ ಹಿತ್ಲಪುಟ್ಟಿಯೂ ಅಲ್ಲ ರಾತ್ರಿ ಮಲಗುವ ಮುಂಚೆ ನಾಳೆ ನಾಡಿದ್ದರೊಳಗೆ ಆಣೆಕಟ್ಟಿನ ಬಾಗಿಲು ತೆರೆಯುತ್ತಾರಂತೆ ಎಂಬ ಸುದ್ದಿ ನಿದ್ರೆ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಹಾಗಾಗಿ ಹೊರಗಡೆಯ ಎಲ್ಲಾ ಶಬ್ಧಗಳೂ ಕರಿಯಜ್ಜನನ್ನು ಎಡಬಿಡದೆ ಕಾಡುತ್ತಿದ್ದವು.
ಕರಿಯಜ್ಜ ಎಂಬ ಹೆಸರಿಗೂ ಅವನ ವಯಸ್ಸಿಗೂ ಸಂಬಂಧವಿಲ್ಲದ ವಿಚಾರ ಎನ್ನುವುದು ಅವನನ್ನು ನೋಡದೆ ಕೇವಲ ಹೆಸರು ಕೇಳಿದ ಯಾರಿಗೂ ಗೊತ್ತಾಗಲು ಸಾಧ್ಯವಿರಲಿಲ್ಲ. ಕರಿಯಜ್ಜ ನಲವತ್ತರ ಹರೆಯದ ಹುಡುಗ ಅಂತ ಯಾರು ತಾನೆ ಊಹಿಸಿಯಾರು?. ಆದರೆ ಅದು ಅವನ ಹುಟ್ಟಿನೊಂದಿಗೆ ಚಾಲ್ತಿಗೆ ಬಂದ ಹೆಸರು. ಲಿಂಗನಮಕ್ಕಿ ಆಣೆಕಟ್ಟಿನ ಕೆಳಭಾಗದಲ್ಲಿರುವ ಕಾಳಿಬೆಳ್ಳೂರಿನ ಬಸಮ್ಮ ರಾಮಪ್ಪ ದಂಪತಿಗಳ ನಾಲ್ಕನೇ ಪುತ್ರನಾಗಿ , ಮಡಿವಾಳ ಕೇರಿಯ ಎಕೈಕ ನಾಯಕ ಕರಿಯಜ್ಜ ಸತ್ತ ದಿವಸ ಜನಿಸಿದ್ದ ಒಂದೇ ಕಾರಣದಿಂದ ಅವನಿಗೆ ಊರವರೆಲ್ಲಾ ಸೇರಿ ಕರಿಯಜ್ಜನೇ ಮತ್ತೆ ಹೊಸ ಜನ್ಮ ತಳೆದು ಬಂದಿದ್ದಾನೆ ಎಂಬ ತೀರ್ಮಾನ ಕೈಗೊಂಡು ಅದೇ ಹೆಸರಿನಿಂದ ಕೂಗತೊಡಗಿದರು. ಬಸಮ್ಮನಿಗೆ ಅದು ಸುತಾರಾಂ ಇಷ್ಟವಿಲ್ಲದೆ ಅವಳು "ಲೋಕೇಸ" ಎಂಬ ನವನವೀನ ಹೆಸರನ್ನು ಶಾಲೆಗೆ ಸೇರುವಾಗ ಇಟ್ಟು ಮಗನ ಬಗಲಿಗೊಂದು ಚೀಲ ಹಾಕಿ ತನ್ನ ಮಗ ಇದ್ಯಾವಂತ ಆಗಿ ಪ್ಯಾಂಟು ಶರ್ಟು ಹಾಕ್ಕೊಳ್ಳೊ ಹಂಗಾದರೆ ಸಾಕು ಎಂಬ ಮಹತ್ತರ ಆಸೆಯಿಂದ ಶಾಲೆಗೆ ಕಳುಹಿಸುತ್ತಿದ್ದಳು. ಆದರೆ ಊರವರ ಬಾಯಲ್ಲಿ ಮಾತ್ರ ಲೋಕೇಸನ ಹೆಸರು ಕರಿಯಜ್ಜ ಎಂದೆ ಕರೆಸಿಕೊಳ್ಳುತ್ತಿತ್ತು. ಹೆಸರು ಬದಲಾಯಿಸಲು ಹಠ ಹೊತ್ತ ಬಸಮ್ಮ ಅಕಸ್ಮಾತ್ ಐದನೇ ಹೆರಿಗೆಯಲ್ಲಿ ಬಾಣಂತಿಸನ್ನಿಯಾಗಿ ಅರೆಹುಚ್ಚಿಯಾದ್ದರಿಂದ ಲೋಕೇಸ ಎಂಬ ಹೆಸರು ಕಣ್ಮರೆಯಾಗಿ ಕರಿಯಜ್ಜ ಶಾಶ್ವತವಾಯಿತು. ಶಾಲೆಗೆ ಹೋಗಿದ್ದರಾದರೂ ಅದು ಬದಲಾಗುತ್ತಿತ್ತೇನೋ ಆದರೆ ಲೋಕೇಸನಿಗೆ ಏಳನೇ ವಯಸ್ಸಿಗೆ ಕಬ್ಬಿನಗದ್ದೆಯ ಹಂದಿಕಾಯುವ ಹಕ್ಕೆ ಮನೆಯಲ್ಲಿ ಮುಂಡು ಬೀಡಿ ಸೇದುವ ಕಾಯಕ ಶಾಲೆಗಿಂತ ಆಕರ್ಷಕವಾದ್ದರಿಂದ ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವೆನು ಎಂಬ ಪದ್ಯವನ್ನು ಕಲಿತುಕೊಂಡು ಶಾಲೆಬಿಟ್ಟು ಖಾಯಂ ಕರಿಯಜ್ಜನಾಗಿ ಉಳಿದಿದ್ದ. ದಿನಕಳೆಯುತ್ತಿದ್ದಂತೆ ಅವನೂ ಆ ಹೆಸರನ್ನು ಒಪ್ಪಿಕೊಂಡ.
ಹುಟ್ತಾ ಹುಟ್ತಾ ಅಣ್ಣತಮ್ಮಂದಿರು ಬೆಳಿತಾ ಬೆಳಿತಾ ದಾಯವಾದಿಗಳು ಎಂಬ ಮಾತಿಗೆ ಒಂದಿನಿತೂ ಚ್ಯುತಿ ತರಲು ಇಚ್ಚಿಸದ ಸಹೋದರರು ಅಪ್ಪ ಸತ್ತ ಮಾರನೆದಿನ ಅರೆಹುಚ್ಚಿ ಬಸಮ್ಮನನ್ನು ಹೊರತುಪಡಿಸಿ ಹೊಡೆದಾಡಿ ಬಡಿದಾಡಿ ಇರುವ ಮೂರು ಎಕರೆ ನೀರಾವರಿ ಗದ್ದೆಯನ್ನು ಹಿಸ್ಸೆಮಾಡಿಕೊಂಡರು. ದೊಡ್ಡಣ್ಣನಿಗೆ ದೊಡ್ಡಪಾಲು ಎರಡನೆಯವನಿಗೆ ತುಸು ಹೆಚ್ಚು ಎಂಬ ಪಂಚಾಯ್ತಿದಾರರ ನ್ಯಾಯದಂತೆ ಕರಿಯಜ್ಜನಿಗೆ ಅರ್ದ ಎಕರೆಗಿಂತ ಕಡಿಮೆ ಗದ್ದೆ ಬಂತು. ಆದರೆ ಅವ್ವನ ಖಾಯಿಲೆ ಅಪ್ಪನ ಅಂತಿಮ ಕಾರ್ಯ ಎಂದು ಆಗಿದ್ದ ೧ ಲಕ್ಷ ಸಾಲದಲ್ಲಿ ಮಾತ್ರ ಸರಿಯಾಗಿ ನಾಲ್ಕನೇ ಒಂದಂಶ ಬಂದಿತ್ತು. ಅಮ್ಮ ಹುಚ್ಚಿಯಾದರೂ ತನ್ನ ಅಮ್ಮ ಹಾಗಾಗಿ ಅವಳು ತನ್ನ ಬಳಿಯೇ ಇರುತ್ತಾಳೆ ಎಂಬುದನ್ನು ಕರಿಯಜ್ಜನಾಗಿಯೆ ಹೇಳಿದ್ದ. ಇದು ಸರಿ ಅಲ್ಲ ಎಂದು ಮಿಕ್ಕ ಅಣ್ಣಂದಿರು ತಗಾದೆ ಮಾಡಲಿಲ್ಲ. ಕರಿಯಜ್ಜ ಅರೆಹುಚ್ಚಿ ಅಮ್ಮನೊಂದಿಗೆ ಗದ್ದೆ ತಲೆಯಲ್ಲಿ ಸಣ್ಣ ಗುಡಿಸಲುಕಟ್ಟಿಕೊಂಡು ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ಅರ್ಧ ಎಕರೆಯಲ್ಲಿ ಸಾಗುವಳಿ ಮಾಡಿ ಬತ್ತ ಬಿತ್ತಿದ್ದ. ಗದ್ದೆಯ ಕೆಳಗೆ ಆಣೆಕಟ್ಟಿನ ಹರಿಯೋ ನೀರಿಗಾಗಿ ಸರ್ಕಾರ ಅಳತೆ ಮಾಡಿದ್ದ ಒಂದೆಕರೆ ಜಾಗ ಖಾಲಿ ಇತ್ತು. ಅದು ಆಣೆಕಟ್ಟು ತುಂಬಿ ಹನ್ನೊಂದು ಬಾಗಿಲನ್ನು ತೆರೆದರೆ ಮಾತ್ರ ನೀರು ಬರುತ್ತಿತ್ತು. ಹತ್ತಾರು ವರ್ಷದಿಂದ ತುಂಬದಿದ್ದ ಆಣೆಕಟ್ಟು ಈ ವರ್ಷವಂತೂ ಖಂಡಿತಾ ತುಂಬಲಾರದು ಮತ್ತು ಆಣೆಕಟ್ಟು ತುಂಬಬಾರದು ಎಂದು ಹಕ್ಲು ಚೌಡಮ್ಮನಿಗೆ ಕೋಳಿ ಬಲಿ ಹರಕೆ ಹೇಳಿಕೊಂಡು ದೊಡ್ಡೇ ಗೌಡರ ಕೈಕಾಲು ಹಿಡಿದು ಹತ್ತುಸಾವಿರ ರೂಪಾಯಿ ಸಾಲ ಮಾಡಿ ಒಂದೆಕರೆ ಜಾಗಕ್ಕೆ ಶುಂಠಿ ಹಾಕಿದ್ದ. ಲಾಗಾಯ್ತಿನಿಂದ ಹಾಳುಬಿದ್ದ ಜಾಗ ಅಪರೂಪಕ್ಕೆ ಸಾಗುಮಾಡಿದ್ದರಿಂದ ಶುಂಠಿ ಹುಲುಸಾಗಿ, ಕರಿಯಜ್ಜನ ಎಲ್ಲಾ ಸಾಲವನ್ನು ಒಂದೇ ವರ್ಷದಲ್ಲಿ ತೀರಿಸಿಬಿಡುವಂತೆ ಬೆಳೆದು ನಿಂತಿತ್ತು. ಊರಿನವರೆಲ್ಲಾ ಕರಿಯಜ್ಜ ತಾಯಿಯನ್ನು ಪೊರೆದಿದ್ದಕ್ಕಾಗಿ ದೇವರು ಕಣ್ಣು ಬಿಟ್ಟ ಎಂದು ಹೇಳುತ್ತಿದ್ದರು. ಆದರೆ ಆದ್ರ ಮಳೆ, ಅಣ್ಣನ ಮಳೆ, ತಮ್ಮನ ಮಳೆ, ಎಂದು ಒಂದು ಮಳೆಯಾದ ನಂತರ ಮತ್ತೊಂದು ಮಳೆ ಬೇಕಾಬಿಟ್ಟಿ ಹೊಡೆದು ಆಣೆಕಟ್ಟು ತುಂಬಿನಿಂತು ಇನ್ನೇನು ಬಾಗಿಲು ತೆರೆಯುವುದರಿಂದ ಮಾತ್ರ ಒಳಹರಿವು ನಿಯಂತ್ರಣಕ್ಕೆ ಬರಬಹುದು ಎಂಬ ಅಧಿಕಾರಿಗಳ ಹೇಳಿಕೆ ಕರಿಯಜ್ಜನ ನಿದ್ರೆಗೆಡಿಸಿತ್ತು. ಹಾಗಾಗಿ ಮಗ್ಗಲು ಬದಲಿಸುತ್ತಾ ಹಿತ್ಲಪುಟ್ಟಿ, ಜೀರುಂಡೆ, ಮಳೆಜಿರ್ಲೆಗಳ ಮೇಲೆ ಸೇಡುತೀರಿಸಿಕೊಳ್ಳುತ್ತಿದ್ದ. ಆದರೆ ಅದರಿಂದಾಗೇನೂ ಮಳೆ ಕಡಿಮೆಯಾಗಲಿಲ್ಲ ಮತ್ತು ಆಣೆಕಟ್ಟಿನ ಬಾಗಿಲು ತೆಗೆಯುವುದು ನಿಲ್ಲಲಿಲ್ಲ.
ಹನ್ನೊಂದು ಬಾಗಿಲಿನಿಂದ ಬಿಟ್ಟ ಆಳೆತ್ತೆರದ ನೀರು ರಭಸದಿಂದ ಶುಂಠಿ ಗದ್ದೆಯತ್ತ ನುಗ್ಗಿಬರುತ್ತಿತ್ತು, ಕರಿಯಜ್ಜ ಶುಂಠಿ ಗದ್ದೆಯ ಮೇಲೆ ನಿಂತು ಅಸಾಹಾಯಕತೆಯಿಂದ ನೋಡುತ್ತಿದ್ದ, ಅಷ್ಟರಲ್ಲಿ ತಮಿಳು ಸಿನೆಮಾದಲ್ಲಿ ಆಕಾಶದಲ್ಲಿ ಗಿರಗಿರನೆ ಚಕ್ರ ತಿರುಗಿ ದೇವರು ಪ್ರತ್ಯಕ್ಷವಾಗುವಂತೆ ಚಕ್ರವೊಂದು ಗಿರಗಿರನೆ ತಿರುಗಿ ದೊಡ್ಡ ದೇಹದ ಉದ್ದುದ್ದ ಕೈ ಕಾಲಿನ ಅದಕ್ಕೆ ತಕ್ಕುದಾದ ಕಿರಿಟ ಹೊತ್ತ ಆಕೃತಿ ಪ್ರತ್ಯಕ್ಷವಾಯಿತು. ಆ ಆಕೃತಿಯ ಮುಖ ದೊಡ್ಡೇಗೌಡರನ್ನು ಹೋಲುತ್ತಿದ್ದುದು ಕರಿಯಜ್ಜನಿಗೆ ಆಶ್ಚರ್ಯವಾಗುವಂತಾಗಿತ್ತು. ಕರಿಯಜ್ಜ ಆ ಆಕೃತಿಯನ್ನು ನೋಡುತ್ತಲೆ ನಿಂತ, ಅದು ಕರಿಯಜ್ಜನನತ್ತ "ನಾನಿದ್ದೇನೆ ಹೆದರಬೇಡ" ಎನ್ನುವಂತೆ ನೋಡಿ ತನ್ನ ಅಗಲವಾದ ಎರಡು ಕೈಗಳನ್ನು ಶುಂಠಿಗದ್ದೆಗೆ ಆಣೆಕಟ್ಟಿನ ನೀರು ನುಗ್ಗದಂತೆ ಅಡ್ಡಹಿಡಿಯಿತು. ಕರಿಯಜ್ಜನಿಗೆ ಸಂತೋಷವೋ ದು:ಖವೋ ಅದೇನೆಂದು ಅರಿಯದೇ ಉಮ್ಮಳಿಸಿ ಬಂದು "ಊ ಊ ಊ" ಎಂದು ಕೂಗತೊಡಗಿದ,
"ಎಯ್ ಲೋಕೇಸ ಎಯ್ ಲೋಕೇಸ ಎಂತಾತ ಮಳ್ಳು ಮಳ್ಳು ಮಳೆ ಬಂತು ಎಂತಾತ" ಎಂದು ಬಸಮ್ಮ ಕರಿಯಜ್ಜನನ್ನು ಎಬ್ಬಿಸಿದಾಗ ತಾನು ಕಂಡಿದ್ದು ಕನಸು ಎಂಬುದು ಅರಿವಾದ ಕರಿಯಜ್ಜ ಕಣ್ಬಿಟ್ಟ ದೊಡ್ಡ ಬೆಳಗಾಗಿತ್ತು ಆಣೆಕಟ್ಟಿನ ನೀರು ನೆನಪಾಗಿ ದಡಬಡನೆ ಹಾಸಿಗೆಯಿಂದ ಎದ್ದು ಶುಂಠಿಗದ್ದೆಯತ್ತ ಓಡಿದ.
ಅಲ್ಲಿ ಶುಂಠಿ ಗದ್ದೆಯಿಂದ ಐದಡಿ ಮೇಲೆ ಕೆಂಪುನೀರು ಕೇರೇಹಾವಿನಂತೆ ಸರಸರನೆ ನಾಟ್ಯ ಮಾಡುತ್ತಾ ಮುನ್ನುಗ್ಗುತ್ತಿತ್ತು. ಅದು ಕರಿಯಜ್ಜನ ಬತ್ತದ ಗದ್ದೆಯನ್ನೂ ಮುಚ್ಚಿಹಾಕಿತ್ತು. ಕರಿಯಜ್ಜ ಗದ್ದೆಯ ಮೇಲ್ಗಡೆ ಹತಾಶನಾಗಿ ಕುಕ್ಕುರುಗಾಲಿನಲ್ಲಿಕುಳಿತ. ಸ್ವಲ್ಪ ಸಮಯ ಹಾಗೆ ಕುಳಿತವನು ಎದ್ದು ಓಡಿದ.
ಕಣ್ಣಳತೆಯ ದೂರದಲ್ಲಿ ಜೋಗ ಜಲಪಾತದ ರುದ್ರ ನರ್ತನ ನೋಡಲು ನೂರಾರು ವಾಹನಗಳು ಸಾಲುಗಟ್ಟಿನಿಂತಿದ್ದವು.
"ವಾವ್ ದಿಸ್ ಈಸ್ ಅಮೇಜಿಂಗ್, ವಾಟ್ ಎ ಬ್ಯೂಟಿಫುಲ್ ಇಟ್ ಈಸ್, ತಣ್ಣಿ ನಲ್ಲ ಇರ್ಕದು, ಎಯ್ ರಾರಾ ಇಕ್ಕಡ ಬಾಗುಂದಿ ಸೂಡು ಅಕ್ಕಡಾ, ಅಯ್ಯೋ ಮಗಾ ಮಳೆಯಲ್ಲಿ ಒದ್ದೆಯಾಗಬೇಡಾ ಈಚೆ ಬಾ, ಅಬ್ಬಾ ಇಲ್ಲಿನ ಜನರೇ ಪುಣ್ಯಾತ್ಮರಪ್ಪಾ ಯಾವಾಗಲೂ ಜೋಗದ ಸವಿ ಉಣ್ಣ ಬಹುದು," ಮುಂತಾದ ಹತ್ತು ಹಲವಾರು ಭಾಷೆಯ ಧ್ವನಿಗಳೂ ,೩ ಲಕ್ಷದಿಂದ ಹಿಡಿದು ೮ ಲಕ್ಷದ ವರೆಗಿನ ವಾಹನಗಳೂ ಜೋಗ ಜಲಪಾತದೆದುರು ತುಂಬಿಹೋಗಿತ್ತು. ಜಲಪಾತ ಒಮ್ಮೆ ಮಂಜಿನಿಂದ ಸಂಪೂರ್ಣ ಮುಚ್ಚಿ ಯಾರಿಗೂ ಕಾಣದೆ ಹಾಗೆ ನಿಧಾನ ಮಂಜಿನ ಪರದೆಯ ಸರಿಸಿ ಕಣ್ಮುಚ್ಚಾಲೆಯಾಡುತ್ತಿತ್ತು. ಜಲಪಾತ ಕಂಡಕೂಡಲೆ "ಓಹ್ ವಾಹ್" ಎಂಬ ಉದ್ಗಾರ ಹೊರಹೊಮ್ಮುತ್ತಿತ್ತು, ಅವೆಲ್ಲಾ ದನಿಗಳ ಜತೆಗೆ
"ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವನು ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು" ಎಂದು ಮಳೆಯಲ್ಲಿ ನೆನೆಯುತ್ತಾ ಕುಣಿಯುತ್ತಿದ್ದ ಮತ್ತೊಂದು ದನಿಯೂ ಸೇರಿತ್ತು. ಆದರೆ ಆ ದನಿಯ ಒಡೆಯ ಕರಿಯಜ್ಜ ಅಂತ ಹಾಗೂ ಅವನ ಹಿಂದೆ "ಲೋಕೇಸಾ... ಲೋಕೇಸಾ.. ಬಾ ಬಾ" ಎನ್ನುತ್ತಾ ಕೂಗುತ್ತಾ ಹೋಗುತ್ತಿದ್ದ ದನಿಯ ಒಡತಿ ಅವನ ಹೆತ್ತಮ್ಮ ಅಂತ ಅಲ್ಲಿ ಸೇರಿದ್ದ ಜನಸಾಗರಕ್ಕೆ ಗೊತ್ತಿರಲಿಲ್ಲ.
"ಪೋಲೀಸಿನವರು ಇಂತಾ ಹುಚ್ಚರನ್ನೆಲ್ಲಾ ಟೂರಿಸಂ ಪ್ಲೇಸ್‌ನಲ್ಲಿ ಅಲೋ ಮಾಡಬಾರದು" ಅಂತ ಯಾರೋ ಮುಖ ಸಿಂಡರಿಸಿ ಹೇಳುತ್ತಾ ಮುನ್ನಡೆಯುತ್ತಿದ್ದರು.
ಜೊರ್ರನೆ ಸುರಿವ ಮಳೆ ಮತ್ತು ಅದರ ಜನ್ಯ ಜಲಪಾತಕ್ಕೆ ಇದ್ಯಾವುದರ ಪರಿವೆಯೇ ಇಲ್ಲದೆ ಕೆಂಪು ಬಣ್ಣದೊಂದಿಗೆ ಮೇಲಿನಿಂದ ದುಮಿಕ್ಕಿ ಸಾಗರ ಸೇರಲು ತನಗೆ ತಿಳಿಯದಂತೆ ಮುನ್ನುಗ್ಗುತ್ತಿತ್ತು. ಮುನ್ನುಗ್ಗುತ್ತಿದ್ದ ಆ ಜಲಪಾತದ ಕೆಂಪು ನೀರಿನೊಂದಿಗೆ ಕರಿಯಜ್ಜನ ಶುಂಠಿ ಮತ್ತು ಬತ್ತವೂ ಇತ್ತು ಆದರೆ ಆದು ಜನರಿಗೆ ಕಾಣಿಸುತ್ತಿರಲಿಲ್ಲ. ಕರಿಯಜ್ಜನಿಗೆ ಕಾಣಿಸುತ್ತಿತ್ತೇನೋ ಆದರೆ ಆತ ನೋಡುವ ಸ್ಥಿತಿಯಲ್ಲಿ ಇರಲಿಲ್ಲ.

9 comments:

  1. ತುಂಬಾ ಚೆನ್ನಾಗಿದ್ದು ಶರ್ಮ ಸರ್, ಓದಿದ ಮೇಲೆ ಏನೋ ಒಂಥರಾ ಕಳವಳ ಶುರುವಾಗೋತು.

    ReplyDelete
  2. ಗೀತಾ..
    ಇದು ನನ್ನ ಅಕ್ಷರ ರೂಪ ಅಷ್ಟೆ. ನಮ್ಮ ಮಲೆನಾಡಿನ ಭತ್ತ ಬೆಳೆವ ರೈತರ ನಿತ್ಯ ಸಂಕಟ ಕಣ್ಣೀರಿನ ರೂಪ ಅಂತಲೂ ಅನ್ನಬಹುದು. ಯಾರಲ್ಲೂ ಹೇಳಬೇಡಿ ಹೀಗೆ ಬರೆಯುತ್ತಾ ಕರಿಯಜ್ಜನ ಕಲ್ಪಿಸಿಕೊಂಡು ನನ್ನ ಕಣ್ಣುಗಳು ತೇವವಾಗಿದ್ದಿದೆ.
    ಆದರೆ ಪ್ರಕೃತಿ ಒಮ್ಮೊಮ್ಮೆ ಕ್ರೂರಿ ನಾವು ಅಸಹಾಯಕರು
    ಧನ್ಯವಾದಗಳು

    ReplyDelete
  3. ಚೆನ್ನಾಗಿದೆ... ಓದುತ್ತಾ ಓದುತ್ತಾ ಮನಸ್ಸು ಭಾರವಾದ ಅನುಭವವಾಯಿತು.

    ReplyDelete
  4. ಅರವಿಂದ್

    ಧನ್ಯವಾದಗಳು. ನಿನ್ನ ಕಾಮೆಂಟ್ ಖುಷಿ ಕೊಟ್ಟಿತು

    ReplyDelete
  5. ರಾಘಣ್ಣ...

    ಕಥೆ ಓದುತ್ತ ಸುಮ್ಮನೆ ಯೋಚಿಸುತ್ತಿದ್ದೇನೆ. ಕರಿಯಜ್ಜನ ಹಾಗೆ ಹುಚ್ಚರಾಗದಿದ್ದರೂ ಮಳೆನಾಡಿನ ಇಂಥಮಳೆನೀರಿನಲ್ಲಿ ತೇಲಿಹೋದ ಅದೇಷ್ಟೋ ಜನರ ಬದುಕಿಗೊಂದು ಸಾಕ್ಷಿಯಾಗಿ ಕರಿಯಜ್ಜ ಮತ್ತೆ ಕಣ್ಣೊಳಗೆ ಕುಣಿಯುತ್ತಲೇ ಇದ್ದಾನೆ.

    ReplyDelete
  6. ಸರ್,

    ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ....ಕೊನೆಯಲ್ಲಿ ಮನಸ್ಸಿಗೆ ಕಳವಳವುಂಟಾಯಿತು....

    ReplyDelete
  7. To Shantala

    Hmm.Houdu

    To Shivu

    Tnx

    ReplyDelete
  8. super write up...
    kodsara

    ReplyDelete

Thank you