Monday, July 5, 2010

ಎಲೆಯೊಂದಿದ್ದರೆ ಎಲ್ಲಾ ಅಕ್ಕಿಯೂ ಪರಿಮಳವೆ


ಪರಿಮಳ ಸಣ್ಣಕ್ಕಿ ಅಥವಾ ಬಾಸ್ಮತಿ ಅಕ್ಕಿಯ ಪರಿಮಳಕ್ಕೆ ಮಾರುಹೋಗದವರಿಲ್ಲ. ಸುವಾಸನೆಯುಕ್ತ ಅಕ್ಕಿಯಿಂದ ಪಲಾವ್, ಕೆಸರೀಬಾತ್ ಮೊದಲಾದ ಐಟಂ ಮಾಡಿದರೆ ಅದರ ರುಚಿ ಬಲ್ಲವರೇ ಬಲ್ಲರು. ಶಾಖಾಹಾರಿಗಳ ಕತೆ ಬದಿಗಿರಲಿ ಮಾಂಸಾಹಾರಿಗಳಿಗೂ ಈ ಅಕ್ಕಿಯ ಪರಿಮಳ ಅಚ್ಚುಮೆಚ್ಚು. ಅಷ್ಟು ಪ್ರಿಯವಾದ ಈ ಅಕ್ಕಿಯ ಬಗ್ಗೆ ಒಂದೇ ಒಂದು ಬೇಸರದ ಸಂಗತಿಯೆಂದರೆ ಬೆಲೆಯದ್ದು. ಜನಸಾಮಾನ್ಯರ ಕೈಗೆ ಎಟುಕದ ಬೆಲೆಯಲ್ಲಿ ಅಕ್ಕಿ ತೇಲುತ್ತಲಿರುತ್ತದೆ. ಹಾಗಾಗಿ ಹಿಡಿದು ಕುಕ್ಕರ್ ಗೆ ಹಾಕುವುದು ಸ್ವಲ್ಪದ ಕಷ್ಟದ ಕೆಲಸ. ಆದರೆ ಪರಿಮಳ ಬೇಕು ದುಬಾರಿ ಬೆಲೆ ಕೊಡಲಾಗುವುದಿಲ್ಲ ಎನ್ನುವ ಮಂದಿಗೆ ಪ್ರಕೃತಿ ಇಲ್ಲೊಂದು ಪರಿಹಾರ ಇಟ್ಟಿದೆ. ಅದೇ ಸಣ್ಣಕ್ಕಿಗಿಡ.
ಹೆಸರೇ ಹೇಳುವಂತೆ ಇದು ಸಣ್ಣಕ್ಕಿ ಗಿಡ. ಹಾಗೆಂದಾಕ್ಷಣ ಇದು ಸಣ್ಣಕ್ಕಿಯನ್ನೇನು ಬಿಡುವುದಿಲ್ಲ. ಅಥವಾ ಭತ್ತದ ಹೊಸ ತಳಿಯ ಆವಿಷ್ಕಾರ ಅಂತ ಅಂದುಕೊಳ್ಳದಿರಿ. ಈ ಗಿಡದ ಎಲೆಗೆ ಪರಿಮಳ ಸಣ್ಣಕ್ಕಿಯ ಸುವಾಸನೆ ಇದೆ. ಈ ಗಿಡದ ನಾಲ್ಕೈದು ಎಲೆಗಳನ್ನು ಯಾವುದೇ ಅಕ್ಕಿಯಲ್ಲಿ ಹುಗಿದಿಟ್ಟರಾಯಿತು. ಎಲೆ ಹುಗಿದಿಟ್ಟ ಎರಡನೇ ದಿವಸ ಅಕ್ಕಿಯಿಂದ ಅಡಿಗೆ ಮಾಡಿದರೆ ಘಮಘಮ ಪರಿಮಳವನ್ನು ಸೂಸುತ್ತದೆ. ಆ ಪರಿಮಳ ಪಕ್ಕಾ ಪಕ್ಕಾ ಪರಿಮಳ ಸಣ್ಣಕ್ಕಿಯದೇ. ಸರಿ ಇನ್ನೇಕೆ ತಡ ಪರಿಮಳ ಸಣ್ಣಕ್ಕಿಯ ದರ ಎಷ್ಟೇ ಇರಲಿ ನಮಗೆ ನಿಮಗೆ ಅದರ ಚಿಂತೆ ಬೇಡ ಈ ಸಣ್ಣಕ್ಕಿಗಿಡದ ಎಲೆಯೊಂದಿದ್ದರೆ ಎಲ್ಲಾ ಅಕ್ಕಿಯೂ ಪರಿಮಳವೆ. ಮಲೆನಾಡಿನ ಮನೆಗಳ ಹಿತ್ತಲಿನಲ್ಲಿ ಈ ಗಿಡ ನೆಟ್ಟು ಕಾಪಾಡಿರುತ್ತಾರೆ. ಗುಂಪುಗುಂಪಾಗಿ ಕೇದಿಗೆಯ ಪೊದೆಯಂತೆ ಬೆಳೆಯುವ ಇದರ ಒಂದು ಗೆಲ್ಲು ನಿಮ್ಮ ಹಿತ್ತಲಿಗೂ ಬರಲಿ. ಅಕ್ಕಿಯ ಕಣಜ ಪರಿಮಳಯುಕ್ತವಾಗಲಿ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

1 comment:

  1. ನಮ್ಮ ಹಿತ್ತಿಲಲ್ಲಿದೆ. ಚೆ೦ದದ ಮಾಹಿತಿ. ಪತ್ರಿಕೆಯಲ್ಲಿ ಪ್ರಕತವಾಗಿದ್ದಕ್ಕೆ ಅಭಿನಂದನೆಗಳು.

    ReplyDelete

Thank you