Saturday, July 31, 2010

ಆಷಾಢದ ಅಡುಗೆಗೆ ಕಾಡು ತರಕಾರಿಗಳು

ಬೆಂಗಳೂರಿನ ತರಕಾರಿ ಅಂಗಡಿಗೆ ಹೋಗಿ " ಒಂದು ಕಟ್ಟು ಚೊಗಟೆ ಸೊಪ್ಪು, ಎರಡು ಕಟ್ಟು ಕೆಸ, ಒಂದು ಕೆ ಜಿ ಕಳಲೆ, ಎಲವರಿಗೆ, ಚಕ್ರಮಣಿ, ಕರಡಿಸೊಪ್ಪು, ಮರಗೆಸ ಕೊಡಿ" ಅಂತ ಕೇಳಿದರೆ ಅಂಗಡಿಯಾತ ಕಣ್ಣು ಕಣ್ಣುಬಿಡುತ್ತಾನೆ. ಇದು ಯಾವ ಸೀಮೆ ಗಿರಾಕಿ ಅಂತ ನಗಲೂ ಬಹುದು. ಹಾಗಂತ ಹೀಗೆ ಕೇಳಿದವರು ತರಕಾರಿಯಲ್ಲದ ಸೊಪ್ಪನ್ನೇನೂ ಕೇಳಿಲ್ಲ ಕೇಳಿದ ಸ್ಥಳ ವ್ಯತ್ಯಾಸ ಅಷ್ಟೆ. ಇದೇ ಮಾತನ್ನು ಮಲೆನಾಡಿನ ಹಳ್ಳಿಗಳಲ್ಲಿ ಕೇಳಿದರೆ ಖುಷ್ ಖುಷಿಯಾಗಿ ಮೇಲೆ ಹೇಳಿದ ಎಲ್ಲಾ ಸೊಪ್ಪು ತರಕಾರಿ ಕೊಟ್ಟು ಅಡಿಗೆ ಮಾಡುವ ವಿಧಾನವನ್ನೂ ಹೇಳಿಕೊಟ್ಟುಬಿಡುತ್ತಾರೆ. ಅದೂ ಪುಕ್ಕಟೆಯಾಗಿ.
ಆಹಾರವೆಂಬುದು ಔಷಧಿಯೂ ಆದಾಗ ಆರೋಗ್ಯ ನಳನಳಿಸುತ್ತದೆ. ದಿನನಿತ್ಯ ಮಾತ್ರೆ ನುಂಗುವುದಕ್ಕಿಂತಲೂ ಆಹಾರದ ಜತೆಯಲ್ಲಿ ಔಷಧಿಯುಕ್ತ ಪೌಷ್ಟಿಕಾಂಶ ಸೇವನೆ ವೈದ್ಯರನ್ನು ಗಾವುದ ದೂರ ವಿಡುತ್ತದೆ. ಎಂಬಂತಹ ವಾಕ್ಯಗಳನ್ನು ಹೇಳಲಷ್ಟೆ ಚೆನ್ನ ಅನುಷ್ಠಾನ ಕಷ್ಟಕರ ಎಂಬುದೂ ಸತ್ಯವಾದರೂ ತೀರಾ ಅನುಸರಿಸಲಾಗದ ಸಂಗತಿಯೇನಲ್ಲ. ಔಷಧಿಯುಕ್ತ ಆಹಾರ ಸೇವನೆಗೆ ಮಲೆನಾಡು ಲಾಗಾಯ್ತಿನಿಂದಲೂ ಪ್ರಸಿದ್ಧಿ. ಇಲ್ಲಿನ ಪ್ರಕೃತಿಯಲ್ಲಿ ದೊರಕುವ ಕಾಡು ಜಾತಿಯ ಸೊಪ್ಪುಗಳ ಬಳಕೆ ಬಹಳ ಹಿಂದಿನಿಂದಲೇ ಕಂಡುಕೊಂಡಿದ್ದಾರೆ. ಅವುಗಳ ಸಂಪೂರ್ಣ ಬಳಕೆ ಆಷಾಢಮಾಸದಲ್ಲಿ ಎನ್ನುವುದು ಇನ್ನೊಂದು ಅಂಶ. ಮಲೆನಾಡಿನಲ್ಲಿ ಆಷಾಢವೆಂದರೆ ಕುಂಭದ್ರೋಣ ಮಳೆಗಾಲ. ಮನೆಯಾತನಿಗೆ ಪೇಟೆಗೆ ಹೋಗಿ ತರಕಾರಿ ತರಲೂ ಆಗದಷ್ಟು ಜಡಿ ಮಳೆ. ಮನೆಯ ಪುಟ್ಟ ಹಿತ್ತಲಿನಲ್ಲಿ ಬೆಳಸಿದ ತರಕಾರಿಗಳೆಲ್ಲವೂ ಗಿಡ ಸಮೇತ ಕೊಳೆತು ಹೋಗಿರುತ್ತವೆ. ಆದರೆ ಹೊಟ್ಟೆ ಮಳೆ ಎಂದರೆ ಕೇಳುವುದಿಲ್ಲವಲ್ಲ. ಮನೆ ಮಂದಿಯ ಹೊಟ್ಟೆ ತುಂಬಿಸುವ ಜವಾಬ್ದಾರಿ ಹೊತ್ತ ಮನೆಯಾಕೆ ಮನೆಪಕ್ಕದ ಕಾಡಿಗೆ ಇಳಿಯುವುದೇ ಆವಾಗ.
ಚೊಗಟೆ, ಚಕ್ರಮಣಿ,ಕರಡಿ,ಚಿತ್ರಮೂಲ,ಒಂದೆಲಗ,ಶ್ರೀಗಂಧ, ಕಳಲೆ,ಮರಗೆಸ, ಕಾಡುಗೆಸ, ಗೋಳಿ, ಮುಂತಾದ ನೂರಾರು ಜಾತಿಯ ಸೊಪ್ಪು ತಂಬುಳಿ, ಚಟ್ನಿಯಾಗಿ ಮನೆಯವರ ಹೊಟ್ಟೆ ತುಂಬಿಸುತ್ತದೆ. ಹಾಗೆಯೇ ಆರೋಗ್ಯ ಕೂಡ ನಳನಳಿಸುವಂತೆ ಮಾಡುತ್ತದೆ. ಅತಿ ಮಳೆಯಿಂದ ತಂಡಿಯಾದ ದೇಹದ ಉಷ್ಣತೆ ಹೆಚ್ಚುವಂತೆಯೂ ಮಾಡುತ್ತದೆ ಈ ನೈಸರ್ಗಿಕ ತರಕಾರಿಗಳು.ಆಷಾಡಮಾಸದಲ್ಲಷ್ಟೇ ದೊರಕುವ ಕಳಲೆ ಎಂಬ ಬಿದಿರಿನ ಮೊಳಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡಿ ವರ್ಷಪೂರ್ತಿ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ.
ಈ ಕಾಡುತರಕಾರಿಗಳು ಕೇವಲ ಔಷಧಿ ಮಾತ್ರವಲ್ಲ ರುಚಿಯೂ ಹೌದು. ಮರಗೆಸದಿಂದ ಮಾಡುವ ಪತ್ರೊಡೆ ಯ ರುಚಿ ಸವಿದವನೇ ಬಲ್ಲ. ಸೊಪ್ಪಿನಿಂದ ಮಾಡುವ ಚಟ್ನಿ ತಂಬುಳಿಗಳ ರುಚಿಯ ನೆನಪು ವರ್ಷಪೂರ್ತಿ ಇರುತ್ತದೆ.ಮಳೆ ಬಿದ್ದಾಕ್ಷಣ ರಸ್ತೆಪಕ್ಕದಲ್ಲಿ ಹುಟ್ಟುವ ಎಲವರೆಗೆ ಚೊಗಟೆ ಮುಂತಾದ ಎಲೆಗಳನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ, ಕಾಯಿ ತುರಿ ಬೆರಸಿ ರುಚಿಗೆ ತಕ್ಕಷ್ಟು ಉಪ್ಪು ಹುಳಿ ಖಾರ ಹಾಕಿ ಸುಲಭದಲ್ಲಿ ಪದಾರ್ಥ ಮಾಡಬಹುದಾದ ಇವುಗಳ ಸವಿರುಚಿ ಗೆ ಮರುಳಾಗದವರಿಲ್ಲ. ಕಾಸು ಖರ್ಚಿಲ್ಲದೆ ತಿಂಗಳುಗಳ ಕಾಲ ಮಲೆನಾಡಿನ ಮಹಿಳೆ ಪ್ರಕೃತಿಯ ಸೊಪ್ಪನ್ನು ಬಳಸಿ ಮನೆಮಂದಿಯ ಆರೋಗ್ಯ ನಳನಳಿಸುವಂತೆ ಮಾಡಿಬಿಡುತ್ತಾಳೆ. ಆರೋಗ್ಯವೇ ಭಾಗ್ಯ ಎಂದಾದ ಮೇಲೆ ಅದೊಂದೆ ಸಾಕು ಇನ್ನು ರುಚಿ ಬೋನಸ್ ಇದ್ದಂತೆ.
(ಇಂದಿನ ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

8 comments:

  1. ನಮ್ಮನೇಲೂ ಕರಡಿ ಸೊಪ್ಪಿನ ಹುಳಿ ಮಾಡ್ತ.. ಸಣ್ಣಕ್ಕಿದ್ದಾಗ ಚಟ್ನೆ ತಿ೦ದು ನೀರ್ ಕುಡ್ಕ೦ಡು ನೆಗ್ಯಾಡದೇ ಕೆಲ್ಸಾ ಆಗಿತ್ತು...! ವಿಜಯಕರ್ನಾಟಕದಲ್ಲಿ ಈ ಲೇಖನ ನೋಡ್ದಿ... ಚನ್ನಾಗಿದ್ದು..

    ReplyDelete
  2. ಲೇಖನ ಚೆನ್ನಾಗಿದೆ. ಮಲೆನಾಡಿನ ಮತ್ತು ಅದರ ಸುತ್ತಮುತ್ತಲಿನ ಈ ಅಮೂಲ್ಯ ಖಾದ್ಯ ಸೊಪ್ಪು-ತರಕಾರಿಗಳನ್ನು ಉಳಿಸಿ, ಬೆಳೆಸಿ, ಪ್ರಸರಿಸಿ ಮತ್ತು ಪ್ರಚುರ ಪಡಿಸುವ ಕಾರ್ಯ ಈಗ ಆಗಬೇಕಾಗಿದೆ. ಉತ್ತಮವಾದ ಬ್ಲಾಗ್. ಅಭಿನಂದನೆಗಳು. ನನ್ನ www.antarangadolaginda.blogspot.com ಗೆ ಒಮ್ಮೆ ಭೇಟಿ ಕೊಡಿ.

    ReplyDelete
  3. ಮಲೆನಾಡ ಔಷಧಿಯ ಗುಣಗಳುಳ್ಳ ಸೊಪ್ಪು ತರಕಾರಿಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ಚೋಗತೆ ಸೊಪ್ಪು, ಕೆಸು, ಕಳಲೆ, ಕರಡಿ ಸೊಪ್ಪು.........
    ಇವುಗಳೆಲ್ಲಾ ನಗರದಲ್ಲೆಲ್ಲಿ ಸಿಗಬೇಕು ಹೇಳಿ? ಊರಿಗೆ ಹೋಗಿ ತಿನ್ನಬೇಕು ಅಷ್ಟೇ.

    ReplyDelete
  4. ಕಳಲೆ ಮಾರಾಟ ಕಾನೂನುಬಾಹಿರವಲ್ಲವೇ?

    ReplyDelete
  5. Nice to read this article, Thanks

    ReplyDelete
  6. ನಿಮ್ಮ ಲೇಖನ ಓದಿ ಈಗಲೇ ಊರಿಗೆ ಹೋಗಿಬಿಡೋಣ ಅನ್ನಿಸ್ತಿದೆ..ಯಲವರಿಗೆ ಕುಡಿ ತ೦ಬಳಿ,ಕಟ್ನೆ,ಸ್ವಾರ್ಲೆಕುಡಿ ಕಟ್ನೆ..ಕಳಲೆಹುಳಿ,ಕರಡಿಸೊಪ್ಪಿನ ಹುಳಿ,ಚಟ್ನೆ..ಕೆಸವಿನ್ಸೊಪ್ಪಿನ ಕರಕ್ಲಿ,ಪತ್ರೊಡೆ.. ವ೦ದೆಲಗದ ತ೦ಬ್ಳಿ..ವಾಹ್...ಬಾಯಲ್ಲಿ ನೀರು ಬತ್ತು..
    ಲೇಖನ ಖುಶಿ ಕೊಟ್ಟಿತು.

    ReplyDelete
  7. Thanks to
    chukkichittara-kavisuresh-manadaladinda-lodyashi-v r bhat and manmukta

    by r Sharma

    ReplyDelete
  8. malenaadina nenapaayitu!
    chendada lekhana. vk nalli prakatavagidakke abhinandanegalu.

    ReplyDelete

Thank you