Saturday, May 24, 2008

ನಮಸ್ಕಾರ


ಬೆಳೆಗ್ಗೆ ಮುಂಚೆ ಹಾಲು ಕೊಟ್ಟು ಮನೆಗೆ ನಡೆದುಕೊಂಡು ಹೋಗುವಾಗ ಹೀಗೊಂದು ನಮಸ್ಕಾರ ಎನ್ನುವ ಶುಭಾಶಯ ಎದುರು ಬಂದ ವ್ಯಕ್ತಿಯಿಂದ ಸಿಗುತ್ತದೆ. ಅದಕ್ಕೆ ಪ್ರತಿ ನಮಸ್ಕಾರ ನಾನೂ ಹೇಳುತ್ತೇನೆ. ಸತ್ಯವಾಗಿಯೂ ಅದು ಅಷ್ಟಕ್ಕೆ ನಿಲ್ಲಬೇಕಾದ ಯೋಚನೆ. ಆದರೆ ಅದು ಹಾಗಾಗುವುದಿಲ್ಲ. ಆತನ ನಮಸ್ಕಾರದಲ್ಲಿ ಕೊಂಕು ಹುಡುಕಲು ಶುರುವಾಗುತ್ತದೆ. ಈತ ನನಗೆ ನಮಸ್ಕರಿಸಿದ್ದು ಯಾವ ಉದ್ದೇಶದಿಂದ? ನನ್ನಿಂದ ಲಾಭವನ್ನೇನಾದರೂ ಆತ ನಿರೀಕ್ಷಿಸಿರಬಹುದಾ? ಇಲ್ಲದಿದ್ದರೆ ಪುಗ್ಸಟ್ಟೆ ನಮಸ್ಕಾರ ಹೇಳಲು ಆತನಿಗೆ ನಾನೇ ಬೇಕಾಗಿತ್ತಾ. ಹೀಗೆ ಒಂದರ ಹಿಂದೆ ಒಂದು ಆಲೋಚನೆ ಬೆನ್ನೆತ್ತಿ ಸುತ್ತಲಿದ್ದ ಸುಂದರ ಕಾಡು, ಹಾರುತ್ತಿರುವ ಬೆಳ್ಳಕ್ಕಿ,ಕೂಗುತ್ತಿರುವ ನವಿಲು, ಹರೆಯುತ್ತಿರುವ ಚೊರಟೆ ಯಾವುದನ್ನೂ ಅಸ್ವಾದಿಸಲಾಗದೆ ಪೊಳ್ಳು ನಮಸ್ಕಾರದ ಹಿಂದಿನ ಪೊಕ್ಕು ಆಲೋಚನೆಗೆ

ಒಂದು ಕಿಲೋಮೀಟರ್ ನಡಿಗೆ ವ್ಯರ್ಥವಾಗುತ್ತದೆ. ಇದು ಒಂದು ಕಿಲೋಮೀಟರ ನಡಿಗೆಯ ಪ್ರಶ್ನೆಯಷ್ಟೇ ಅಲ್ಲ ಜೀವನದ ನಲವತ್ತು ವರ್ಷದ ನನ್ನ ನಡಿಗೆ ಇಂತಹ ಪೊಕ್ಕು ಆಲೋಚನೆಗೆ ವ್ಯರ್ಥವಾಗಿದ್ದು ನೆನಪಿಗೆ ಬರುತ್ತೆ. ಆವತ್ತು ನನ್ನ ೧೮ ನೇ ಕಿಲೋಮೀಟರ್ ನಡಿಗೆ ಇರಬಹುದು ಒಂದು ದಿನ ಸೊಂಪಾಗಿ ಬೆಳೆಯುತ್ತಿದ್ದ ಭತ್ತದ ಒಂದು ಎಕರೆ ಗದ್ದೆಗೆ ಅಡಿಕೆ ತೋಟ ತುಂಬುವ ಆಲೋಚನೆ ಬಂತು. ಆದರೆ ಆ ಆಲೋಚನೆಯ ಬೆನ್ನ ಹಿಂದೆಯೇ ಅಡಿಕೆ ಎಂದರೆ ಅದು ಮಾದಕ ಪದಾರ್ಥದಂತೆ. ತಂಬಾಕಿಲ್ಲದ ಅಡಿಕೆ ಯಾರೂ ತಿನ್ನುವುದಿಲ್ಲ. ಅದರಿಂದ ಸಮಾಜಕ್ಕೆ ಹಾನಿಯೇ ಹೊರತು ಲಾಭವಿಲ್ಲ. ಕಂಡವರ ಮನೆಗೆ ಬೆಂಕಿ ಇಟ್ಟು ಬೆಂಕಿಯ ಬೆಳಕು ನಾವು ಅನುಭವಿಸಬಾರದು. ಆಹಾರ ಪದಾರ್ಥ ಬೆಳೆದರೆ ಸಮಾಜಕ್ಕೆ ಒಳಿತು. ಈಗಿರುವ ಅಡಿಕೆ ಸಾಕು. ಸುತಾರಾಂ ಇನ್ನೊಂದು ಇಂಚು ಜಾಗವನ್ನು ಅಡಿಕೆಗಾಗಿ ವಿಸ್ತರಿಸಬಾರದು, ಹೇಗಾದರೂ ಪ್ರಯತ್ನಿಸಿ ಈಗಿರುವ ಅಡಿಕೆಯನ್ನು ಕೈಬಿಡಬೇಕು.ಸಾಧ್ಯವಾದರೆ ಜೀವನಕ್ಕೆ ಬೇರೆ ಉತ್ತಮ ದಾರಿ ಹುಡುಕಬೇಕು . ಆದರೆ ಕೂಲಿ ಆಳಿನ ಸಮಸ್ಯೆ ಯಿಂದ ಗದ್ದೆ ಮಾಡಿಸಲಾಗುವುದಿಲ್ಲ . ಸರಿ ತೆಂಗು ಹಾಕೋಣ ಅದು ಒಳ್ಳೆಯದು. ಎಂಬ ಒಂದಿಷ್ಟುಜನರ ಒಳ್ಳೆಯ ಆಲೋಚನೆಗೆ ನಾನು ಪುಟಕೊಟ್ಟೆ ಅಡಿಕೆ ಕೈಬಿಟ್ಟೆ. ಆವಾಗ ಅಕ್ಕಪಕ್ಕದವರು ಅಡಿಕೆ ಹಾಕು ಎಂದರು. ಕೇಳಲಿಲ್ಲ. ಅವರು ಅಡಿಕೆ ತೋಟ ಎಬ್ಬಿಸಿದರು . ನಾನು ತೆಂಗಿಗೆ ನೀರು ಉಣಿಸುತ್ತಿದ್ದೆ. ನೋಡನೊಡುತ್ತ ಅವರು ಜಣ ಜಣ ಎಣಿಸಿದರು. ನಾನು ಕಾಯಿ ಎಣಿಸುತ್ತಿದ್ದೆ. ಒಂದು.... ಎರಡು.... ಮೂರು...... ಒಂದು ತೆಂಗಿನ ಕಾಯಿಗೆ ಖರ್ಚಾದದ್ದು ೫೦ ರೂಪಾಯಿ, ಅದರ ಮಾರಾಟ ಬೆಲೆ ೮ ರೂಪಾಯಿ . ತೆಂಗು ಒಳ್ಳೆಯದು ಎಂದು ಹಾಗೆ ಮಾಡಿದೆ ಮತ್ತು ತೋಪಾದೆ.

ಇನ್ನಾದರೂ ಪೊಕ್ಕು ಆಲೋಚನೆಗೆ ಚುಕ್ಕಿ ಹಾಕಬೇಕು. ಒಕ್ಕಣ್ಣು ರಾಜ್ಯ ಇದು .ನಮಸ್ಕಾರ ಎಂದರೆ ನಮಸ್ಕಾರ ಅದರ ಹಿಂದೆ ಏನಿದೆಯೋ ಅವನಿಗೆ ಅವನದು ಗೊತ್ತು ನನಗೆ ನನ್ನದು ಗೊತ್ತು.

No comments:

Post a Comment

Thank you