ಸಾಲು ಸಾಲು ಬಿದಿರಿನ ಪೊದೆಗಳು, ಆಕಾಶದೆತ್ತರಕ್ಕೆ ಕೈಚಾಚಿ ನಿಂತಂತೆ ತೋರುತ್ತವೆ.. ನೂರಾರು ಜಾತಿಯ ಪಕ್ಷಿಗಳ ಕಲರವ. ಕಣ್ಣಿಗೆಟುಕುವಷ್ಟು ದೂರ ಶರಾವತಿ ನದಿಯ ಹಿನ್ನೀರು. ನೀರಿನ ಮಧ್ಯೆ ನಡುಗುಡ್ಡೆಗಳು. ನೀರಿನ ಬುಡದಲ್ಲಿ ಕಣ್ಮುಚ್ಚಿ ಕುಳಿತರೆ ಆ ನೀರವ ಮೌನ ಹಾಗೂ ತೆಕ್ಕಲಿನ ಪಟ ಪಟ ಶಬ್ಧ ಅದ್ಯಾವುದೋ ಲೋಕಕ್ಕೆ ಒಯ್ದುಬಿಡುತ್ತದೆ. ದಡದಲ್ಲಿ ಒಂದಿಷ್ಟು ದೋಣಿಗಳು ಹಾಗೆ ಸುಮ್ಮನೆ ಮಲಗಿರುತ್ತವೆ. ಒಂದು ದೋಣಿಯಲ್ಲಿ ನಾವು, ಹಾಗೂ ನೀವು ಹುಟ್ಟುಹಾಕುತ್ತಾ ಹೊರಟರೆ ಅದೇಕೋ ತನ್ನಿಂದ ತಾನೆ "ದೋಣಿ ಸಾಗಲಿ ಮುಂದೆ ಹೋಗಲಿ...." ಹಾಡು ಗುನುಗುಣಿಸಲು ಪ್ರಾರಂಭವಾಗುತ್ತದೆ. ಇದು ನಮ್ಮ ಮನೆಯಿಂದ ಎಂಟು ಕಿಲೋಮೀಟರ್ ದೂರದ ಹೊನ್ನೇಮರಡು ಎಂಬ ಪ್ರವಾಸಿ ತಾಣದ ಮಜ.
ನಾನು ತಿಂಗಳಿಗೊಮ್ಮೆಯಾದರೂ ಹೊನ್ನೆಮರಡುವಿಗೆ ಹೋಗುತ್ತೇನೆ. ಮನೆಗೆ ಬಂದ ನೆಂಟರಿಗೆ ಆ ನೀರವ ಮೌನ ಹಕ್ಕಿಗಳ ಕಲರವ ತೋರಿಸಬೇಕೆಂಬುದು ಒಳಗಿನ ಹಂಬಲ. ಅದರ ಬಗ್ಗೆ ಅಲ್ಲಿ ಬಂದು ಸೇರುವ ಜೇನುಗಳ ಬಗ್ಗೆ, ಜೇನಿನ ಜೀವನದ ಬಗ್ಗೆ, ಬಿದಿರಿನ ಮೊಳೆಗಳಿಗೆ ಅಲ್ಲಷ್ಟೇ ಜಾಗದಲ್ಲಿ ಕಟ್ಟೆರೋಗ ಬಾರದಿರುವುದಕ್ಕೆ ಕಾರಣ ಹೇಳಿ ಕೊರೆಯಬೇಕು ಅನ್ನಿಸುತ್ತಿರುತ್ತದೆ. ಆದರೆ ಅವರ್ಯಾರಿಗೂ ಅದು ಬೇಡ ಬೋಟ್ ರೈಡಿಂಗ್ ಅವರುಗಳು ಇಷ್ಟಪಡುತ್ತಾರೆ ಇನ್ನು ಕೆಲವರು ಜಾಕೆಟ್ ಹಾಕಿಕೊಂಡು ಸ್ವಿಮ್ಮಿಂಗ್ ಇಷ್ಟಪಡುತ್ತಾರೆ. ಸರಿ ಅವರಿಗಿಷ್ಟವಾದದ್ದು ಅವರಿಗೆ ಎಂದುಕೊಳ್ಳುತ್ತಾ ಸ್ವಾಮಿಯ ಬಳಿ ಜಾಕೆಟ್ ಗಾಗಿ ಅಥವಾ ಬೋಟಿಂಗ್ ಗಾಗಿ ಹಲ್ಲುಗಿಂಜುತ್ತೇನೆ. ಸ್ವಾಮಿಯೆಂಬ ಸ್ವಾಮಿ ಅಸಾದ್ಯ ವ್ಯಕ್ತಿತ್ವದ ಮನುಷ್ಯ. ಬೆಂಗಳೂರಿನ ಧಾವಂತದ ಬದುಕು ಬಿಟ್ಟು ಇಲ್ಲಿ ಅದೇನನ್ನೋ ಸಾಧಿಸಿದ್ದಾರೆ. ಪ್ರಪಂಚಕ್ಕೆ ಹೊನ್ನೇಮರಡುವನ್ನು ಪರಿಚಯಿಸಿದ್ದಾರೆ. ಪರಿಸರ ಪ್ರವಾಸೋದ್ಯಮವನ್ನು ಬೆಳಸಿದ್ದಾರೆ ಒಂದಿಷ್ಟು ಜಾಗದಲ್ಲಿ ಅದ್ಬುತ ಕಾಡನ್ನು ಬೆಳಸಿದ್ದಾರೆ, ಅದು ಅತ್ಯಂತ ಸಹಜವಾಗಿದೆ ಅದರ ಜತೆ ಜತೆ ಯಲ್ಲಿ ನೇರ ನಿಷ್ಟುರ ವರ್ತನೆಯಿಂದ ಸ್ಥಳೀಯ ಜನರನ್ನು ನಿಷ್ಠೂರ ಮಾಡಿಕೊಂಡಿದ್ದಾರೆ. ಸಾಧಾರಣ ಲುಂಗಿ ಪಂಚೆಯಲ್ಲಿ ಓಡಾಡುವ ಸ್ವಾಮಿ ಮತ್ತು ಅಷ್ಟೇ ಸಹಜವಾದ ಧಿರಿಸಿನ ಅವರ ಪತ್ನಿ ನೊಮಿಟೋ( ಈಕೆ ಗುಜಾರಾತಿ ಮಹಿಳೆ) ರನ್ನು ನೋಡಿದರೆ ಇವರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯೂ ಬಾರದು ಅಬ್ಬೆಪಾರಿಗಳು ಅಂತ ಅನ್ನಿಸುವುದು ಸಹಜ. ಆದರೆ ವಾಸ್ತವ ಹಾಗಲ್ಲ ಅವರಿಗೆ ಬಾರದ ಭಾಷೆಗಳಿಲ್ಲ ಆದರೆ ವೃಥಾ ಮಾತನಾಡರು ಅಷ್ಟೆ. ಈ ದಂಪತಿಗಳಿಬ್ಬರು ಪ್ರಥಮ ಪರಿಚಯದಲ್ಲಿ ಒರಟರಂತೆ ಅನ್ನಿಸಿದರೂ ನಂತರದ ದಿನಗಳಲ್ಲಿ ಆತ್ಮೀಯರಾಗಿಬಿಡುತ್ತಾರೆ. ಪಟ್ಟಣದಲ್ಲಿ ಸಾಫ್ಟಾಗಿ ಸೂಪರ್ರಾಗಿ ಕಳೆಯಬಹುದಾಗಿದ್ದ ಜೀವನವನ್ನು ಚಾಲೆಂಜ್ ಎಂದು ಈ ಕಾಡನ್ನು ಆಯ್ಕೆಮಾಡಿಕೊಂಡಿರುವ ಈ ವಿದ್ಯಾವಂತ ದಂಪತಿಗಳು ನನಗೆ ಅಚ್ಚರಿಯ ಮೂಟೆ.
ಇರಲಿ ಇದು ಅವರ ಕಥೆಯಾಯಿತು ಈಗ ನಮ್ಮ ಕಥೆಗೆ ಬರೋಣ. ನಾನು ಸ್ವಾಮಿಯಬಳಿ ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಅವರಿಗೆ ಹೊನ್ನೆಮರಡುವಿನಲ್ಲಿ ಈಜಲು ಜಾಕೆಟ್ ಬೇಕಿತ್ತು ಎಂದು ಕೇಳಿದಾಗೆಲ್ಲಾ ಅಯ್ಯೋ ಬನ್ನಿ ಸ್ವಾಮಿ ಎಂದು ಒಕೆ ಕೊಡುತ್ತಾರೆ. ಆವಾಗ ನಾನೂ ನಮ್ಮ ಅತಿಥಿಗಳ ಜತೆ ಸೇರಿಕೊಂಡು ಮೀನಾಗುತ್ತೇನೆ. ನೀರಿಗೆ ಬೋಟಿನಿಂದ ದುಡುಂ ದುಡುಂ ಎಂದು ಹಾರಿ ಮಜ ಉಢಾಯಿಸುತ್ತೇನೆ. ನೀರಿನಿಂದೆದ್ದು ಗಡಗಡ ನಡುಗಿ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಧುಮುಕುತ್ತೇನೆ. ಅಲ್ಲಿ ಹೀಗೆ ಇದ್ದಷ್ಟು ಹೊತ್ತು ಪ್ರಪಂಚ ಮರೆಯುತ್ತೇನೆ. ಜತೆಗೆ ಬಂದವರು ನೂರಾರು ಫೋಟೋ ಕ್ಲಿಕ್ಕಿಸುತ್ತಾರೆ ಎಲ್ಲರಿಗೂ ಮಜವೋ ಮಜ. ಈಜಾಡಿ ಸ್ವಾಮಿ ಉಳಿದುಕೊಳ್ಳಲು ಮಾಡಿಕೊಂಡ ಮನೆಯ ಬಳಿಯಿರುವ ರೌಂಡ್ ಗೆ ಬಂದು ಕುಳಿತುಕೊಂಡರೆ ಮಂಜುಳ ಘಮ ಘಮ ಪರಿಮಳದ ಚಾ ಕೊಡುತ್ತಾಳೆ. ಸಾರ್ ಸಾರ್ ಟಿ ಚೆನ್ನಾಗಿದೆಯಾ ಎಂದು ಹತ್ತು ಸಾರಿ ಕೇಳುವ ಮಂಜುಳಳ ಆತ್ಮೀಯತೆ ಚಾ ಕ್ಕಿಂತಲೂ ಉತ್ತಮ. ನನ್ನ ಮಗನ ಖುಷಿಯಂತೂ ಕೇಳುವುದೇ ಬೇಡ. ಅಲ್ಲಿಯ ತರಬೇತುದಾರರೆಲ್ಲ ಅವನ ದೋಸ್ತಿಗಳು. ಹೀಗೆ ತಿಂಗಳಿಗೊಮ್ಮೆಯಾದರೂ ನನ್ನ ಹೊನ್ನೆಮರಡುವಿನ ಯಾತ್ರೆ ನಡೆಯುತ್ತಿರುತ್ತದೆ. ಆ ಪೃಕೃತಿಯ ನಡುವೆ ಒಂದಿಷ್ಟು ಸಮಯ ಕಳೆದು ಬರುವುದಿದೆಯಲ್ಲ ಅದು ಅದ್ಬುತ. ಅಲ್ಲಿದ್ದಷ್ಟು ಹೊತ್ತು ಪ್ರಪಂಚ ಮರೆಯಬಹುದು.
ಇದಿಷ್ಟು ನನ್ನ ಕಥೆಯಾಯಿತು. ಈಗ ನಿಮ್ಮ ಸರದಿ ಒಮ್ಮೆ ಇತ್ತ ಕಡೆ ಬಂದಾಗ ಬನ್ನಿ ಹೊನ್ನೆಮರಡುವಿಗೆ ಹೋಗಿ ಬರೋಣ. ನೀವೂ ದುಡಿದು ದುಡಿದು ಹೈರಾಣಾಗಿದ್ದೀರಿ ಎಂದು ನನಗೆ ತಿಳಿದಿದೆ. ಆ ದುಡಿಮೆ ಎನ್ನುವುದು ಎಷ್ಟಾದರೂ ಮುಗಿಯದು. ಎಂಟು ಲಕ್ಷ ಡೆಪಾಸಿಟ್ ಮಾಡುವಷ್ಟರಲ್ಲಿ ಹತ್ತು ಲಕ್ಶಕ್ಕೆ ಮನಸ್ಸು ಹಾತೊರೆಯುತ್ತದೆ. ಹತ್ತು ಲಕ್ಷ ಸೇರುವಷ್ಟರಲ್ಲಿ ಇಪ್ಪತ್ತು ಲಕ್ಷದ ಯೋಚನೆ ಮನಸ್ಸಿನಲ್ಲಿ ಜತೆಗೆ ಅವನನ್ನು ನೋಡು ಅಷ್ಟು ಹಣ ಮಾಡಿದ ಎನ್ನುವ ಯೋಚನೆ ಹೀಗೆ ಮುಗಿಯದ ಕಥೆ ಅದು. ದುಡಿಮೆ ಧಾವಂತ ವನ್ನೆಲ್ಲಾ ಬದಿಗಿಟ್ಟು ಹೊನ್ನೆಮರಡುವಿನ ನೀರವ ಮೌನದಲ್ಲಿ ಮಿಂದೆದ್ದು ಹೋಗಿ. ನಾನೂ ಇರಬೇಕೆಂದಿಲ್ಲ ನೀವೆ ಬಂದು ಹೋಗಬಹುದು. ಕಾರಣ ನನ್ನ ಒಂದಿಷ್ಟು ಕೊರೆತವನ್ನು ತಪ್ಪಿಸಿಕೊಳ್ಳಬಹುದು . ಏನಂತೀರಿ?
ಕೊನೆಯದಾಗಿ: ಜನರೆಲ್ಲ ಜೀವನಕ್ಕಾಗಿ ದುಡಿಯುತ್ತಿದ್ದಾರೋ? ಹಣಕ್ಕಾಗಿ ದುಡಿಯುತ್ತಿದ್ದಾರೋ? ದುಡಿಮೆಗಾಗಿ ದುಡಿಯುತ್ತಿದ್ದಾರೋ? ಎಂದು ಆನಂದರಾಮಶಾಸ್ತ್ರಿಗಳಲ್ಲಿ ಕೇಳಿದೆ. ಶೂನ್ಯದಿಂದ ಆರಂಭ, ಆರೋಗ್ಯವನ್ನೂ ಲೆಕ್ಕಿಸದೆ ಸಂಪಾದನೆ. ನಂತರ ಸಂಪಾದಿಸಿದ್ದೆಲ್ಲ ಕಳೆದುಕೊಂಡಿದ್ದಕ್ಕೆ ವ್ಯಯ. ಮತ್ತೆ ಶೂನ್ಯದಲ್ಲಿ ಅಂತ್ಯ. ಎನ್ನುವ ವಿಚಿತ್ರ ಉತ್ತರ ಕೊಟ್ಟರು. ನನಗೆ ಅರ್ಥವಾಗಲಿಲ್ಲ. ನಿಮಗೆ ಅರ್ಥವಾದರೆ ಯೆಸ್ ಅನ್ನಿ ಇಲ್ಲದಿದ್ದರೆ ನನ್ನನ್ನು ಅನ್ನಬೇಡಿ.
ಟಿಪ್ಸ್: ದೀರ್ಘ ಪ್ರಯಾಣಕ್ಕೆ ಹೊರಡುವ ಮುನ್ನ ಎಳೆ ಸೌತೆ ಕಾಯಿ ತಿಂದು ಹೊರಟರೆ ಪ್ರಯಾಣದುದ್ದಕ್ಕೂ ಅಜೀರ್ಣ, ಫುಡ್ ಪಾಯಿಸನ್, ಡಿ ಹೈಡ್ರೇಷನ್ ಮುಂತಾದ ಕಿರಿ ಕಿರಿ ಇರುವುದಿಲ್ಲ.
೩ ಬಾರಿ ಹೊನ್ನೆಮರಡುವಿಗೆ ಭೇಟಿ ಕೊಟ್ಟಿದ್ರೂ ನೀರಿಗಿಳಿಯಲು ಸಾಧ್ಯವಾಗಿಲ್ಲ, ಈ ಬಾರಿ ಅದೇನೇ ಆಗ್ಲಿ. ಅದನ್ನೂ ನೋಡೆ ಬಿಡ್ಬೇಕು.
ReplyDeleteಬಹಳ ದಿನಗಳಿಂದ, ಅಲ್ಲಲ್ಲ, ತಿಂಗಳುಗಳಿಂದ ನಿಮ್ಮ ಬ್ಲಾಗನ್ನು ಫಾಲೋ ಮಾಡ್ತಾ ಬಂದಿದೀನಿ.
ReplyDeleteಜೀವನಕ್ಕೆ ತುಂಬ ಹತ್ತಿರ ಇರೋ ರೀತಿ ಬರೀತೀರ. ಹೀಗೆಯೇ ಮುಂದುವರಿಸಿ.
ಅಂದ ಹಾಗೆ, ಈ ಲೇಖನ ಕೂಡ ಚೆನ್ನಾಗಿ ಬಂದಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲಾ ಅನ್ಕೊಂಡಿದೀನಿ.
ಕಟ್ಟೆ ಶಂಕ್ರ
http://somari-katte.blogspot.com
ರಾಘು ಮಾವ ನಾವು ೯ ವರ್ಷ ಮೊದಲು ಹೋದಾಗ ಅಲ್ಲಿ ಏನೂ ಇರಲಿಲ್ಲ ನೀರು ಬಿಟ್ಟು!
ReplyDeleteಮುಂದಿನ ಬಾರಿ ಬಂದಾಗ ಖಂಡಿತ ಹೋಗೋಣ.
ಕಳೆದ ಬಾರಿ ಹೋದಾಗ ನೀನು ಕಟ್ಟಿದ್ದ! ಅಲ್ಲ ಭಾಷಾಂತರ ಗೊಳಿಸಿದ್ದ ಹಾಡು ನಿನಪಿಗೆ ಬರುತ್ತಿದೆ.
ಲವ್ವಿನಾ ನಾವೆಲ್ಲನು ರೈಟ್ದೆನು ಐ ವಾಟ್ರಲಿ.ಸ್ಟೋರಿ ಎಂಡು ಆಗಲಿ ಎಂಡದಿರಲೀಇಇಇಇಇ ಆರೆಸ್ಟು||
ಮೈ ಸ್ಟೋರಿಗೆ ಎಂಡು ರೈಟಿ ಪೊಯಟ್ಟು ಬ್ಲಸ್ಸಿದ ಅಸ್ಸನು
ಕಮ್ಮಿ ಗೋವುವ ಫ಼್ರೆಂಡ್ಶಿಪ್ಪು ತೌಸಂಡು ಗೋಡು ಬ್ಲೆಸ್ಸಲಿ ಅಸ್ಸನು||
To:prasanna
ReplyDeleteOK,thanks
TO;Katte S'
yeno tochiddu hage baredaadu . nimma comment innastu khushi kodtu bareyalu.thanks.
To:nanu
ನಿಮ್ಮ ಈ ಬ್ಲಾಗೆಂಬ ಕನ್ನಡಿಯಲ್ಲಿ ಶಾಸ್ತ್ರಿಯು ತನ್ನನ್ನೇ ಕಂಡು ಖುಷಿಪಡುತ್ತಿದ್ದಾನೆ.
ReplyDeleteಎಚ್. ಆನಂದರಾಮ ಶಾಸ್ತ್ರೀ
ಚನ್ನಾಗಿದೆ ಅಂತ ಹೇಳಲೇ ಬೇಕಾ?, ಎಲ್ಲಾ ಲೇಖನಗಳನ್ನು ನೀವು ಚನ್ನಾಗಿಯೇ ಬರೆಯುವುದರಿಂದ ಪ್ರತಿ ಬಾರಿ ಹೇಳುವುದು ಅನಾವಶ್ಯಕ!
ReplyDeleteಗುರುಗಳೆ ನಿಮ್ಮ ಕಾರಲ್ಲೆ ಕರ್ಕಂಡು ಹೋಪ್ದಾರೆ ಬತ್ನಪ, ಅಬ್ಬಾ ಎಮ್ಮನೆ ಕಾರು ತಗಂಡು ಹೋಗಿ ಸುಸ್ತಾಗ್ಬಿಟಿದಿ, ರೋಡ್ ಸರಿ ಮಾಡ್ಸಿದ್ರನೋ? ಆ ತ್ಯಪ್ಪನ ಮಗಚಿಟ್ಟಾಗ ನೋಡಿರೆ ಹೆದ್ರಿಕೆ ಆಗ್ತು.. ಎಲ್ಲಾದಕ್ಕು ಆತರ ಪ್ಯಾಚ್ ಹಾಕಿದ್ವಲ! ಒಹ್ ಎಲ್ಲರನ್ನು ಹೆದ್ರಸ್ತಾ ಇದ್ದಿ ಅಂದಕಂಡ್ರೆ ಕಷ್ಟ, ಹೊನ್ನೆ ಮರಡು ತುಂಬಾ ಸುಂದರ ಹಿನ್ನೀರ ತಾಣ ಒಮ್ಮೆ ನೋಡಲೇ ಬೇಕಾದ ಸ್ಥಳ.. :D
ho bike lli hopana baa
ReplyDeleteಸಾಗರದವನಾರೂ ಇದರ ಬಗ್ಗೆ ನಂಗೆ ಗೊತ್ತಾಗಿದ್ದು ಮೊನ್ನೆ ಮೊನ್ನೆ.. ನಾನೂ ನನ್ ಫ್ರೆಂಡ್ಸ್ ಎಲ್ಲರನ್ನು ಕರ್ಕಂಡು ಬರಕ್ಕಾತು! ಈಗ ಹೋದ್ರೆ ರಾಶಿ ಚಳಿನೇನ ಅಲ್ದಾ?
ReplyDelete