Friday, August 6, 2010

ತಾವರೆಯ ಗಿಡ ಹುಟ್ಟಿ......

ಅದೇಕೆ ಹಾಗೆ ಚಂದದ ಹೂವು ಬಿಡುತ್ತದೆ ಅಂತ ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಸಾಮಾನ್ಯವಾಗಿ ಎಲ್ಲವೂ ಹೂವುಬಿಡುವುದು ಕಾಯಾಗಿಸುವುದಕ್ಕೆ. ಆದರೆ ತಾವರೆಯ ಹೂವಿಂದ ಕಾಯಾಗುವುದಿಲ್ಲ. ಬುಡದಲ್ಲಿ ಪುತಪುತ ಹಿಳ್ಳು ಒಡೆದು ತನ್ನ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳುತ್ತದೆ. ಆದರೂ ಸಿಕ್ಕಾಪಟ್ಟೆ ಚಂದದ ಹೂವುಬಿಡುತ್ತದೆ. ಸರಿ ಹೂವು ಬಿಡುತ್ತದೆ ನೋಡಲು ಚಂದ ಇದೆ ಇನ್ನೇನು ನಿನ್ನ ರಗಳೆ ಎಂದಿರಾ?. ಇರುವುದೇ ಅಲ್ಲ, ಘೋರಾಂಡ್ಲ ಮಳೆಗಾಲ್ದಲ್ಲಿ ದೇವರೆಂಬ ದೇವರಿಗೆ ಹೂವುಗಳೇ ಇಲ್ಲದಾಗ ಆ ಕೊರತೆಯನ್ನು ನೀಗಿಸುವ ತಾಕತ್ತು ಇರುವುದು ಈ ತಾವರೆ ಗಿಡಕ್ಕೆ. ಅಯ್ಯ ಅದೂ ಒಳ್ಳೆಯದೇ ಆಯಿತು ಮತ್ತೇನು ಸಮಸ್ಯೆ ಅಂತ ಕೇಳಬಹುದು ನೀವು. ಸಮಸ್ಯೆ ಇರುವುದೇ ಅಲ್ಲಿ, ತಾವರೆಯ ಹೂವಾಗುವ ಬಹಳ ಮುಂಚೆ ಅಂದರೆ ಗಿಡ ಹುಟ್ಟಿದಾಗ. ಆಚೀಚೆ ಮನೆಯವರು ಮತ್ತು ಊರಿನವರು "ನಿಮ್ಮಲ್ಲಿ ಕೇಸರಿ ತಾವ್ರೆ ಇದ್ದು ಅಂತ ಶಾರ್ದಕ್ಕ ಹೇಳಿದ್ದ ಒಂದು ಬುಡ ತಗಂಡು ಹೋಪನ ಅಂತ ಬಂದಿ" ಎಂದು ಬಂದಾಗ ನಿಜವಾದ ಸಮಸ್ಯೆ. ಅಯ್ಯೋ ಪುಣ್ಯಾತ್ಮ ಸಾಕು ಏನದು ಸಮಸ್ಯೆ ಹೇಳು ಅಂದಿರಾ ವಾಕೆ... ಕೇಳಿ ಈಗ.
ನಮ್ಮ ಮಲೆನಾಡಿನಲ್ಲಿ ಉದ್ಯೋಗ ಖಾತ್ರಿಯಿಂದಾಗಿ ಕೂಲಿ ಆಳಿನ ಸಮಸ್ಯೆ ಯಡ್ಡಾದಿಡ್ಡಿ. ನೂರಾ ಐವತ್ತು ರೂಪಾಯಿ ದಿನಕ್ಕೆ ಕೊಟ್ಟು ಯಾರನ್ನಾದರೂ ಹಿಡಕೊಂಡು ಬಂದು ನಾವು ಅವರನ್ನ ಕರೆದುಕೊಂಡು ಕಾದಿಗೆ ಚೊಕ್ಕ ಮಾಡಲು ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಚಾ ಕೊಟ್ಟ ಮನೆ ಹೆಂಗಸರು ಅವರನ್ನು " ಮಾರಿ(ಇದು ಹೆಸರು ಹೆದರಬೇಡಿ),,, ತಾವ್ರೆ ಗಿಡ ಹುಟ್ಟಿ ಹದಿನೈದು ದಿವ್ಸ ಆತು ಇನ್ನೂ ಅದಕ್ಕೆ ಗೂಟ ಕೊಡ್ಲಿಲ್ಲ, ಮಾರಾಯ, ಇವ್ರ ಹತ್ರ ಹೇಳಿರೆ ಹ್ವಾರ್ಯ ಇಲ್ಲ ಅಂತಾರೆ, ಹಿತ್ಲಾಕಡೆಯಿಂದ ಹೋಗಿ ಒಂದು ಹೊರೆ ಗೂಟ ತಂದುಕೊಡ" ಅಂತ ಪಾಲೀಷ್ ಮಾಡಿ ಕೆಲಸದವನನ್ನು ಕಳುಹಿಸಿಬಿಡುತ್ತಾರೆ. ಅಲ್ಲಿಗೆ ನಮ್ಮ ತೋಟದ ಕೆಲಸ ಅವತ್ತಿನ ಮಟ್ಟಿಗೆ ಪಿನಿಷ್. ಈಗ ನನ್ನ ಸಮಸ್ಯೆ ನನ್ನ ಸಮಸ್ಯೆ ಏನು ಸಮಸ್ತ ಭೂಲೋಕದಲ್ಲಿ ತಾವರೆ ಗಿಡ ಇರುವ ಮನೆಯ ಗಂಡಸರ ಸಮಸ್ಯೆ ಅರ್ಥವಾಗಿರಬೇಕು ನಿಮಗೆ.
ಹಾಗಂತ ಅದು ಅಷ್ಟಕ್ಕೆ ನಿಲ್ಲುವುದಿಲ್ಲ, ಆ ತಾವರೆ ಗಿಡ ಕೊಂಡೊಯ್ಯಲು ಬಂದಿರುತ್ತಾರಲ್ಲ ಅವರೆದುರು " ನಮ್ಮನೇಲಿ ಇವುಕ್ಕೆ ಆನು ಹೂವಿನ ಗಿಡ ಮಾಡದು ಅಂದ್ರೆ ಸಿಟ್ಟು ಮಾರಾಯ್ತಿ, ಒಂದು ಗೂಟ ತರ್ಸಲೆ ಬಿಡ್ತ್ವಲ್ಲೆ ಬೈತ" ಎಂದು ಮುಂದುವರೆಯುತಿರುತ್ತದೆ. ಆದರೂ ಅವೆಲ್ಲಾ ಒಂಥರಾ ನನ್ನ ಅಪ್ಪಯ್ಯ ಮಾಡುತ್ತಿದ ನಾನು ಮುಂದುವರೆಸುತ್ತೇನೆ ಅಷ್ಟೆ ಎನ್ನುವುದನ್ನು ಬಿಟ್ಟರೆ ಸಿಕ್ಕಾಪಟ್ಟೆ ರಗಳೆ ಇಲ್ಲ ಅನ್ನುವುದು ಬೇರೆ ಮಾತು.
ಆದರೂ ಕಾಯಾಗುವುದಿಲ್ಲ ಮತ್ತೇಕೆ ಹೂವಷ್ಟೇ ಬಿಟ್ಟು ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತದೆ ಎಂದು ಅರ್ಥವಾಗುತ್ತಿಲ್ಲ. ಇಷ್ಟಾದ್ರೂ ಚಂದ ಇದೆ ಮಾತ್ರಾ....

10 comments:

  1. ಚ೦ದ ಇದೆ..ಹೂ ಮತ್ತು..ಬರಹ..
    ಗ೦ಡಸ್ರ ಹತ್ರ ಬೈಸಿಕೊಳ್ಳುವುದೇಕೆ ಎ೦ದು ನಮ್ಮನೆ ಹಿತ್ತಿಲಲ್ಲಿ ತಾವರೆ ಗಿಡ ನೆಡಲೆ ಇಲ್ಲ....! ಈಗಿತ್ಲಾಗೆ ಯಾರ್ಮನೆಲಾರೂ ಗಿಡ ಕೇಳೀರೆ ” ಯ೦ಗೆ ಆ ಬದಿಗೆ ಕಿತ್ ನೆಡಕೂ.. ಇನ್ನೊ೦ದ್ ಹಿಳ್ಳ್ ಒಡ್ದ್ ಮೇಲೆ ನಿ೦ಗೆ ಕೊಡ್ತಿ ಅಕಾ ” ಎ೦ದು ನಮ್ಮನ್ನ ಸಮಾಧಾನ ಮಾಡುವವರೆ ಆಗೋದ....:(....:(

    ReplyDelete
  2. ಸುಂದರ ಬರಹ

    ಜೊತೆಗೆ ಅದ್ಭುತ ಫೋಟೋಗಳು

    ReplyDelete
  3. ಚೆನ್ನಾಗಿದ್ದು ... ಇದು ಪ್ರತಿ ಮಳೇಗಾಲದಲ್ಲೂ ಹೆಚ್ಚುಕಮ್ಮಿ ಎಲ್ಲ ಮಲೆನಾಡಿಗರ ಮನೇಲೂ ನಡೆಯೋ ಗಲಾಟೆ .

    ReplyDelete
  4. Ravichandran ond filmin haadu nenpaatu : ಹೂವೇ ಇಲದ ಲೋಕ ನಮಗೆಕಮ್ಮ? ಈ ಲೋಕದ ಶ್ರುಂಗಾರಕೆ ನೀನೆ ಹೂವಮ್ಮ.. :-)

    ReplyDelete
  5. ತಾವರೆ ಹೂ ಕೊಳದಲ್ಲಿ ಬೆಳೆಯೋಲ್ವ ಅದೇಗೆ ಹಿತ್ತಲಲ್ಲಿ ಬೆಳೆಯುತ್ತೆ! ಚಿತ್ರಗಳು ನಿಮ್ಮ ಮನೆ ಹಿತ್ತಲದ್ದ? ನೋಡಿದರೆ ತಾವರೆ ಅನಿಸೋಲ್ಲ!

    ReplyDelete
  6. ಶ್ರೀಶಂ ಅವರೇ... ಸೀತಾರಾಮ್ ಸರ್ ಹೇಳಿದಹಾಗೆ ತಾವರೆ ನೀರಲ್ಲಿ/ಕೆರೆಯಲ್ಲಿ ಬಿಡೋದು... ಚಿತ್ರ ನೋಡಿದರೆ ಅದು ಡೇರೆ ಅಥವ dalia ಅಂತಾರಲ್ಲ ಅದು ಅನ್ನಿಸುತ್ತೆ... ಅಲ್ವೇ...

    ReplyDelete
  7. ಡೇರೆಯೇ ಸರಿ. ಆದರೆ ನಮ್ಮ ಸಾಗ್ರದ ಕಡೆ ಡೇರೆ ಅಂದರೆ ಟೆಂಟು ಅಂತ, ಹಾಗಾಗಿ ತಾವರೆ ಎಂದುಬಿಡುತ್ತಾರೆ. ಇರಲಿ ಯಾವುದಾದರೂ ಹೇಗೋ ಫೋಟೋ ಇದೆಯಲ್ಲ ಗೊತ್ತಾಗುತ್ತದೆ ಅಂತ ಹಾಗೆಯೇ ಬಿಟ್ಟೆ
    Thanks yellarigu

    ReplyDelete
  8. ಕರೆವಗ್ಲು ಹೌದ್ರಾ............ ಹೇಳಿದ್ದು. ಚೊಲೋ ಬೈಂದು ಹ.......... ಹಳ್ಳಿ ಮಾತು ಏನಂದ್ರು ಕೇಳುಲೆ ಚಂದ್ವೇಪ.........

    ReplyDelete
  9. ಇಂದೇ ಮೊದಲು ನಿಮ್ಮ ಬ್ಲಾಗಿಗೆ ಬಂದಿದ್ದು. ಚನ್ನಾಗಿದೆ. ನಾನೂ ಅಪರೂಪಕ್ಕೆ ಬ್ಲಾಗ್ ಬರೆಯುವುದಿದೆ!!! ಒಮ್ಮೆ ಕಣ್ಣು ಹಾಯಿಸಿ-http://machikoppa.blogspot.com/

    ReplyDelete

Thank you