Saturday, July 26, 2008

ಹೀಗೊಂದು ಮೌನ ಸಾದ್ಯವಾದರೆ ಪ್ರಪಂಚ ಗೆದ್ದಂತೆ


ನಾನು ಮೌನದ ಬಗ್ಗೆ ಮಾತನಾಡಲು ಅನರ್ಹ ಅಂತ ನನ್ನ ಪರಿಚಿತರಿಗೂ ಗೊತ್ತು ಸ್ವತಃ ನನಗೂ ಗೊತ್ತು. ಕಾರಣ ನಾನು ವಾಚಾಳಿ, ನನ್ನ ಆ ತಿಕ್ಕಲು ವಾಚಾಳಿತನ ಹಲವಾರು ಅನಾಹುತಕ್ಕೆ ಕಾರಣವಾಗಿದ್ದಿದೆ. ನಾನು ಎಷ್ಟರಮಟ್ಟಿಗೆ ವಾಚಾಳಿ ಎಂದರೆ ನಿದ್ರೆಹೋದಾಗಲೂ ಏನಾದರೂ ಹಲುಬುತ್ತಿರುತ್ತೇನೆ. ಅಷ್ಟರಮಟ್ಟಿಗಿನ ವಾಚಾಳಿತನವಿದ್ದರೆ ಬಹಳ ಕಷ್ಟ ಎಂಬುದು ನನ್ನ ಸ್ವಂತ ಅನುಭವ. ನನಗೆ ಮಾತನಾಡಲು ಅವರಿವರೇ ಆಗಬೇಕಂತಿಲ್ಲ. ಯಾರಾದರೂ ಸೈ. ಸರಿ ಇರಲಿ ಇಂತಹ ಸ್ವಭಾವದ ಹಲವಾರು ಜನ ಇದ್ದಾರೆ ಅವರಲ್ಲಿ ನಾನೂ ಒಬ್ಬ. ಒಮ್ಮೆ ತಾಳಗುಪ್ಪದಲ್ಲಿ ಡಾಕ್ಟರ್ರೊಬ್ಬರು ಹೊಸದಾಗಿ ಶಾಪ್ ತೆಗೆದಿದ್ದರು. ಆ ಷಾಪ್ ನ ಉದ್ಘಾಟನೆಗೆ ನಾನೂ ಹೋಗಿದ್ದೆ. ಎಲ್ಲಾ ಕಾರ್ಯಕ್ರಮ ಮುಗಿಯುವವರೆಗೆ ಅದುಮಿಕೊಂಡು ಕುಳಿತಿದ್ದೆ. ಹೊರಡುವ ಸಮಯದಲ್ಲಿ ಡಾಕ್ಟ್ರರ್ ಮಹಾಶಯರಿಗೆ ಒಂದು ವಿಷ್ ಮಾಡಬೇಕಲ್ಲ ಎಂದು ಹೋಗಿ ಕೈ ಕೊಟ್ಟೆ. ಅವರು ಮುಗುಳ್ನಕ್ಕರು ನಾನು ಅಷ್ಟು ಮಾಡಿದ್ದರೆ ಒಳ್ಳೆಯದಿತ್ತು. ಆದರೆ ನನ್ನೊಳಗಿನ ತಿಕ್ಕಲು ವಾಚಾಳಿ ನನ್ನ ಅರಿವಿಗೆ ಬಾರದಂತೆ "ಸಾರ್ ನಾನು ನಿಮಗೆ ಒಳ್ಳೆಯ ಬ್ಯುಸಿನೆಸ್ ಆಗಲಿ ಅಂತ ಹರಸಲಾರೆ" ಎಂದೆ. ಪಾಪ ಅವರು ಕಕ್ಕಾಬಿಕ್ಕಿ ಏಕೆ? ಎಂದು ಕಾರಣ ಕೇಳಿದರು. "ನಿಮಗೆ ಒಳ್ಳೆಯ ದಂದೆಯಾಗಲಿ ಎಂದು ಹಾರೈಸಿದರೆ ಜನರಿಗೆ ರೋಗ ಬರಲಿ ಎಂದು ಪರೋಕ್ಷವಾಗಿ ಹೇಳಿದಂತಾಗುತ್ತದೆ. ಅದು ನನಗೆ ಇಷ್ಟವಿಲ್ಲ" ಎಂದು ನಗುತ್ತಾ ಹೇಳಿದೆ. ಐದು ವರ್ಷ ಎದ್ದೂಬಿದ್ದು ಎಂಬಿಬಿಎಸ್ ಓದಿ ಎರಡು ವರ್ಷ ಅಪ್ರೆಂಟಿಷಿಪ್ ಮುಗಿಸಿ ದಾವಾಕಾನೆ ಓಪನ್ ಮಾಡಿ ಬಾ ಒಂದು ಒಳ್ಳೆಯ ಆಶೀರ್ವಾದ ಮಾಡಿ ಹೋಗು ಎಂದು ಗೌರವವಾಗಿ ಕರೆದರೆ ಸೆಕೆಂಡ್ ಇಯರ್ ಪಿಯುಸಿ ಮುಗಿಸಿ ಮನೆಯಲ್ಲಿ ಮಣ್ಣು ಹೊರುತ್ತಿರುವ ನನ್ನಂತವನಿಂದ ಇಂಥಹ ಮಾತು ಬಂದರೆ ಯಾರಿಗೆ ಪಿತ್ತ ನೆತ್ತಿಗೇರುವುದಿಲ್ಲ, ಪಾಪ ಆದರೂ ಅವರಿಗೆ ಹಾಗೆ ಅನ್ನಿಸಲಿಲ್ಲ ನನ್ನ ಜತೆಗಿದ್ದ ಜನ " ಅಲ್ಲಯ್ಯಾ ರೋಗ ಬಂದವರಾದರೂ ಇಲ್ಲಿಗೆ ಬರಲಿ ಎಂದು ಹಾರೈಸಬಹುದಲ್ಲ" ಎಂದು ತಿಪ್ಪೆಸಾರಿಸಿ ವೈದ್ಯರನ್ನು ಮುಜುಗರದಿಂದ ಪಾರುಮಾಡಿದರು ಅನ್ನಿ. ಇದು ನನ್ನ ವಾಚಾಳಿತನಕ್ಕೆ ಉದಾಹರಣೆ. ಇದು ನನಗೆ ಬೇಕಿತ್ತಾ ಅಂತ ಬಹಳ ಸಾರಿ ಅನ್ನಿಸುತ್ತದೆ. ಆಗಲೆ ಗರಿಗೆದರಿದ್ದು ಈ ಮೌನವೆಂಬ ಶಕ್ತಿಯ ಯೋಚನೆಗಳು.

ದೊಡ್ದದಾಗಿ ಮಾತನಾಡುವುದನ್ನು ನಿಲ್ಲಿಸಿದರೆ ಅದು ಮೌನವಲ್ಲ.ಸುಮ್ಮನಿದ್ದರೆ ಅದು ಮೌನವಲ್ಲ, ತುಟಿಯನ್ನು ದಿವಸಗಟ್ಟಲೆ ಬಿಚ್ಚದಿದ್ದರೂ ಅದು ಮೌನವಲ್ಲ ಹಾಗಾದರೆ ಮೌನವೆಂದರೆ ಯಾವುದು ಎಂಬ ಪ್ರಶ್ನೆ ಏಳುವುದು ಸಹಜ. ತುಟಿಮುಚ್ಚಿ ಕಣ್ಮುಚ್ಚಿ ಎಲ್ಲಾ ಯೋಚನೆಗಳೂ ಮುಚ್ಚಿದರೆ ಅದು ಮೌನ. ಹೀಗೆ ಹೇಳಿದರೆ ಸ್ವಲ್ಪ ಸುಲಭ: ಸಂಧ್ಯಾವಂದನೆಗೆ ಕುಳಿತ ವಟು ಆರಂಭದಲ್ಲಿ ದೊಡ್ಡದಾಗಿ ಗಾಯಿತ್ರಿ ಮಂತ್ರ ಹೇಳುತ್ತಾನೆ. ಅದು ಮೊದಲನೆ ಹಂತ. ನಂತರ ಪಿಸುಧ್ವನಿಯಲ್ಲಿ ಹೇಳುತ್ತಾನೆ ಅದು ಎರಡನೇ ಹಂತ. ನಂತರ ತುಟಿ ಮುಚ್ಚಿ ಜಪ ಮಾಡುತ್ತಾನೆ ಅಲ್ಲಿ ಆತ ನೋಡುಗರಿಗೆ ಮೌನವಾಗಿದ್ದಾನೆ ಅನ್ನಿಸಿದರೂ ಅದು ಮೌನವಲ್ಲ. ಆತನ ನಾಲಿಗೆ ಹಾಗೂ ತುಟಿಗಳು ಮಂತ್ರದ ಪ್ರತೀ ಅಕ್ಷರಕ್ಕೂ ಸಂವೇದಿಸುತ್ತಿರುತ್ತದೆ. ಅದು ಮೂರನೆ ಹಂತ. ನಂತರದ್ದು ಆಧ್ಯಾತ್ಮಿಕ ಸಾಧನೆ ಮಾಡುವ ಜನರ ಹಂತ. ಗಾಯಿತ್ರಿ ಮಂತ್ರ ಮಿದುಳಿನ ಎಡಭಾಗದಲ್ಲಿ ಮೊಳಗಲು ಆರಂಬಿಸುತ್ತದೆ. ಅಲ್ಲಿಂದ ಮೌನದ ನಿಜವಾದ ಹಂತ ಶುರು. ಅಲ್ಲಿಗೂ ಅದು ಸಂಪೂರ್ಣ ಮೌನವಲ್ಲ. ನಂತರದ ಹಂತ ಮೌನದ್ದು. ಮನಸ್ಸು ನಾಭಿಗೆ ಹರಿಯಬೇಕು ಮತ್ತು ಅಲ್ಲಿ ಗಾಯುತ್ರಿ ಮಂತ್ರ ಮೊಳಗಬೇಕು. ಹಾಗೆಯೇ ನಿಧಾನ ಗಾಢವಾದ ಮೌನಕ್ಕೆ ಜಾರುತ್ತದೆ. ಸಾಮಾನ್ಯ ಜನರು ತಿಂಗಳುಗಟ್ಟಲೆ ಬೆನ್ನುಹತ್ತಿದರೆ ಹೆಚ್ಚೆಂದರೆ ಮೂವತ್ತರಿಂದ ನಲವತ್ತು ಸೆಕೆಂಡು ಈ ಕ್ಷಣವನ್ನು ಅನುಭವಿಸಬಹುದು. ಅದು ಮೌನ. ಆನಂತರದ ಹಂತ ನನಗೆ ಗೊತ್ತಿಲ್ಲ. ಆದರೆ ದಿನಕ್ಕೊಮ್ಮೆ ಇಷ್ಟು ಅನುಭವಿಸುವಷ್ಟು ಸಮಯ ಇದ್ದರೆ ಎಲ್ಲಾ ಜಂಜಡದಿಂದ ಮುಕ್ತಿಪಡೆದು ನಿರಾಳ ಮನಸ್ಸು ಹೊಂದಬಹುದು. ತಿಳಿನೀಲಿ ಆಕಾಶದಷ್ಟು ಶುಭ್ರ ಮನಸ್ಸು ಹೊಂದಬಹುದು. ಆದರೆ ತಿಕ್ಕಲು ಬುದ್ದಿ ಅದಕ್ಕೆ ಬಿಡಗೊಡುವುದಿಲ್ಲ. ಸಾಕು ಕಂಡಿದೀನಿ ಜಾಸ್ತಿ ತಲೆ ತಿನ್ನಬೇಡ ಮಾತಾಡು ಮಾತಾಡು ಅನ್ನುತ್ತೆ. ಮತ್ತೆ ಮಾತಿಗೆ ಜಾರುತ್ತೇನೆ. ಮೌನ ದ ಆಸೆ ಮೌನವಾಗಿಯೇ ಜಾರುತ್ತದೆ.

Monday, July 21, 2008

ಇಪ್ಪತ್ತನೇ ದಶಾವತಾರ...! ಅತಿಥಿದೇವೋ ಭವ ಎನ್ನುವ ಹೋಂ ಸ್ಟೆ


ನಾವೊಂದಿಷ್ಟು ಜನ ಹಳ್ಳಿಯಲ್ಲಿ ಸುಮ್ಮನೆ ಕೂರಲಾಗದವರು ಅಂತ ಅನ್ನಿಸಿಕೊಂಡಾಗಿದೆ. ಏನಾದರೂ ಮಾಡಬೇಕು ಏನಾದರೂ ಮಾಡಬೇಕು ಎಂಬ ತುಮಲಕ್ಕೆ ಕಟ್ಟೆ ಎಂಬ ಅಷಡ್ಡಾಳು ಹೆಸರಿನ ಪತ್ರಿಕೆ ಶುರು ಮಾಡಿದೆವು. ಅದಕ್ಕೆ ಈಗ ನಾಲ್ಕು ವರ್ಷದ ಪ್ರಾಯ. ಕಟ್ಟೆ ಪತ್ರಿಕೆಗೆ ಹಲವಾರು ಜನ ಹಣ ಸಹಾಯ ಮಾಡಿದರು. ಆದರೂ ಅದು ಕೈಕಚ್ಚುತ್ತಿರುತ್ತದೆ. ಇರಲಿ ಜೀವನದಲ್ಲಿ ಮದುವೆಯೂ ಸೇರಿದಂತೆ ಹಲವಾರು ಹೀಗೆ ...!. ಆನಂತರ ಹೀಗೆ ಹತ್ತಾರು ಹೊಸ ಹೊಸ ಪ್ಲ್ಯಾನ್ ಕಡಿದು ಗುಡ್ಡೆ ಹಾಕಿ ಕಾರ್ಯಗತಕ್ಕಿಳಿಸಿ ಇರುವ ನಾಲ್ಕು ಪುಡಿಗಾಸನ್ನು ಖರ್ಚು ಮಾಡಿಕೊಂಡಾಯಿತು. ವೆನಿಲ್ಲಾ ೩೦೦೦ ರೂಪಾಯಿ ಕೆಜಿಯಂತೆ ಮಾರಿದ ದುಡ್ಡೆಲ್ಲಾ ಹೀಗೆ ಏನೇನೋ ಮಾಡಲು ಹೋಗಿ ಡಮಾರ್. ಇರಲಿ ಒಳ್ಳೋಳ್ಳೆ ಅನುಭವ ಕೊಟ್ಟಿತು. ಕಟ್ಟೆ ಪತ್ರಿಕೆಯ ಜತೆಯಲ್ಲಿ ಹುಟ್ಟಿಕೊಂಡಿದ್ದು ಕಟ್ಟೆ ಎಜುಕೇಷನ್ ಫಂಡ್. ದಾನಿಗಳನ್ನು ಹಿಡಿದು ಬಡ ವಿದ್ಯಾರ್ಥಿಗಳಿಗೆ ತಲುಪಿಸಿದ್ದಾಯಿತು. ಕೆಲವರು ಓದಿದರು,ಕೆಲವರು ನಾವು ಕೊಡಿಸಿದ ದುಡ್ಡಲ್ಲಿ ಮೊಬೈಲ್ ಕೊಂಡರು. ಮತ್ತೆ ಕೆಲವರು ಓದಿ ಕೆಲಸಕ್ಕೆ ಸೇರಿದರು. ಇರಲಿ ಆದದ್ದೆಲ್ಲಾ ಒಳ್ಳೆಯದೇ ಆಯಿತು. ೧೧ ಎಕರೆ ಸರ್ಕಾರಿ ಜಾಗದಲ್ಲಿ ಅರಣ್ಯ ಬೆಳೆಸುವ ಅವತಾರ ಹೀಗೆ ಒಂದು ದಿವಸ ಹುಟ್ಟಿಕೊಂಡಿತು. ಗಿಡಗಳು ತೊನೆದಾಡುವುದನ್ನು ನೋಡಿದರೆ ಪೊದೆಗಳು ಅಗಲವಾಗುತ್ತಿರುವುದನ್ನು ನೋಡಿದರೆ ಒಳ್ಳೆಯ ಖುಷಿ ಕೊಡುವುದಂತೂ ಗ್ಯಾರಂಟಿ. ಹೀಗೆ ಚೆನ್ನಾಗಿ ನಡೆಯುತ್ತಿರುವ ಹಾಗೂ ಅರ್ದಕ್ಕೆ ನಿಂತುಹೋದ ಅವತಾರಗಳನ್ನು ಮೊನ್ನೆ ಕುಳಿತು ಲೆಕ್ಕ ಮಾಡಿದೆ. ನನ್ನ ನಲವತ್ತನೇ ವಯಸ್ಸಿಗೆ ಹತ್ತೊಂಬತ್ತು ಅವತರಾಗಳು ಮುಗಿದಿತ್ತು. ಈಗ ಇಪ್ಪತ್ತನೇ ಅವತಾರವಾಗಿ ಈ ಹೋಂ ಸ್ಟೆ. ಇಂತಹ ಹೊಸ ಹೊಸ ಅವತಾರಗಳು ಹುಟ್ಟಿಕೊಳ್ಳುವುದು ಹೇಗೋ ಅಂತ ನನಗಿನ್ನೂ ಅರ್ಥವಾಗಿಲ್ಲ. ಸುಮ್ಮನೆ ಕೂರಲಾರದ ಸಂಕಟಕ್ಕೆ ಇರುವೆ ಬಿಟ್ಟುಕೊಂಡರು ಎಂಬಂತೆ ಹಲವಾರು ಬಾರಿ ಆಗಿಬಿಡುತ್ತದೆ. ಬಾಳೆಹೊಳೆ ಪೆಜತ್ತಾಯರು ಒಮ್ಮೆ ಹೇಳಿದ್ದರು, ಹಣದ ಹರಿವು ಇಲ್ಲದಿದ್ದರೆ ಈಗಿನಕಾಲದಲ್ಲಿ ಎಲ್ಲಾ ಸಂಘಟನೆಗಳೂ ತನ್ನಿಂದ ತಾನೆ ನಿಂತು ಹೋಗಿಬಿಡುತ್ತವೆ ಎಂದು. ಅದು ಈಗಿನ ಕಾಲಕ್ಕೆ ಅಂತಲ್ಲ ಯಾವತ್ಕಾಲಕ್ಕೂ ನಿಜ. ಇತ್ತೀಚೆಗೆ ಜಾಸ್ತಿಯಾಗಿದೆ ಅಷ್ಟೆ. ನಾವು ಈಗ ಶುರು ಮಾಡಹೊರಟಿರುವ ಅತಿಥಿ ದೇವೋ ಭವ ಸ್ಕೀಂ ಸಿಕ್ಕಾಪಟ್ಟೆ ರಿಸ್ಕಿನ ವ್ಯವಹಾರ. ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು. ಆದರೆ ಹಾಗೆ ಪರವಾನಗಿಪಡೆದುಕೊಳ್ಳ ಹೊರಟರೆ ಅದರ ಖರ್ಚು ನಮ್ಮ ದುಡಿಮೆಯ ಎರಡುವರ್ಷದ ಶ್ರಮವನ್ನು ಬೇಡುತ್ತದೆ. ಇಂತಹ ಕೆಲಸಗಳೆಲ್ಲಾ ದುಡ್ಡು ಹಾಕಿ ದುಡ್ಡು ತೆಗೆಯುವ ತಾಕತ್ತಿನ ಜನಕ್ಕೆ ಸಾದ್ಯ. ಆದರೆ ಸುಮ್ಮನೆ ಕೂರಲು ತುಮುಲ ಬಿಡುತ್ತಿಲ್ಲ. ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗುತ್ತೋ ಗೊತ್ತಿಲ್ಲ. ಕತ್ತಲಿನಲ್ಲಿ ನೀರಿಗಿಳಿದಾಗಿದೆ, ಆಳದ ಕತೆ ಹಾಗಿರಲಿ ನೀರು ಇದೆಯೋ ಅಂತಾನೂ ತಿಳಿಯದ ಪರಿಸ್ಥಿತಿ. ಆದರೆ ಸಮಾಧಾನ ಎಂದರೆ ನಮ್ಮದು ಮಹಾನ್ ಭಾರತ ಇಲ್ಲಿ ಎಲ್ಲವೂ ಸಲ್ಲುತ್ತದೆ. ಲೀಗಲ್ ಇಲ್ಲೀಗಲ್ ಅಂತ ಬೇಧಭಾವ ಇಲ್ಲ. ನಮಗೆ ಕೇವಲ ದುಡ್ಡು ಮಾಡಬೇಕೆಂಬ ಆಸೆಯೂ ಇಲ್ಲ. ಏನೋ ಒಂದು ಮಾಡಬೇಕು ಎಂಬ ಹೃದಯಪೂರ್ವಕ ಆಸೆಯಷ್ಟೆ.
ಕೊನೆಯದಾಗಿ: ಆಗಸ್ಟ್ ೧ ರಂದು ನಮ್ಮ ಚಿಂತನವಿಕಾಸವಾಹಿನಿಯ ಕಟ್ಟೆಬಳಗದ ಹೋಂಸ್ಟೇ ಪ್ರಾರಂಬ. ನೀವು ಬರಬೇಕು. ಅಂದು ಆಗದಿದ್ದರೆ ಮುಂದೆ ಎಂದಾದರೂ ಅತಿಥಿಗಳಾಗಿ ಬನ್ನಿ. ಹಣದ ಚಿಂತೆ ಬೇಡ ಖುಷಿ ಇದ್ದರೆ ಕೊಡಿ. ಇಲ್ಲದಿದ್ದರೆ ಭಗವಂತನಿದ್ದಾನೆ.