Tuesday, March 2, 2010

ಬಿಟ್ಟು ಬಿಡಿ ಅವರುಗಳನ್ನ ಅವರ ಪಾಡಿಗೆ

ಶಿವಮೊಗ್ಗದಲ್ಲಿ ಗಲಾಟೆ, ಹಾಸನದಲ್ಲಿ ದೊಂಬಿ, ಬೆಂಗಳೂರಿನಲ್ಲೂ ಒಂಚೂರು ಗಲಭೆ, ಇದು ಮೊನ್ನೆ ನಡೆದದ್ದು. ಕಾರಣ ಕನ್ನಡಪ್ರಭದ ಲೇಖನ. ಬಲಿಯಾದವರು ಯಾರೋ...?. ಇರಲಿ ಕಾರಣರು ಕಾರಣೀಕರ್ತರು ಹೊಣೆಗಾರರೂ ಎಲ್ಲವೂ ಒತ್ತಟ್ಟಿಗಿರಲಿ. ಪ್ರಪಂಚದ ಬಹಳ ಕಡೆ ಬೇರೆ ಬೇರೆ ರೂಪಾಂತರವಾಗಿ ಹೀಗೆ ನಡೆಯುತ್ತಲಿದೆ, ನಡೆಯುತ್ತದೆ. ಅವನ್ನೆಲ್ಲಾ ತಲೆಗೇರಿಸಿಕೊಂಡು ಕುಳಿತರೆ ನಮ್ಮ ಬದುಕು ಬೆಳಕಾಗುವುದಿಲ್ಲ.
ಮಾತೆತ್ತಿದರೆ ನಾವು ಇಪ್ಪತ್ತೊಂದನೇ ಶತಮಾನದ ವಿಷಯ ಎತ್ತಿ ಆಡಲು ಶೂರರು. ಇಂತಹ ವಿಷಯ ಬಂದಾಗ ಸಹಸ್ರಮಾನ ಹಿಂದೆ ಹೋಗಿಬಿಡುತ್ತೇವೆ. ಒಂದೆಡೆ ಆರಾಧಿಸುವ ಜನ ಮತ್ತೊಂದೆಡೆ ವಿರೋಧಿಸುವ ಜನ. ಎರಡೂ ಪ್ರಯೋಜನ ಇಲ್ಲ ಕೇವಲ ನಂಬಿಕೆ ಅಂತ ಮೂರನೆಯವರಾಗಿ ನಿಂತು ನೋಡಿದಾಗ ಅರ್ಥವಾಗುತ್ತದೆ. ಆದರೂ ಇವೆಲ್ಲಾ ನಡೆಯುತ್ತಲೇ ಇರುತ್ತದೆ. ಧರ್ಮಾಂಧತೆ ಎಷ್ಟರ ಮಟ್ಟಿಗೆ ಯಡವಟ್ಟೋ ಬುದ್ಧಿಜೀವಿಗಳೆಂದು ಹಣೆ ಪಟ್ಟಿ ಅಂಟಿಸಿಕೊಂಡ ವಿರೋಧಿಗಳೂ ಅಷ್ಟೇ ಯಡವಟ್ಟು.
ನಮ್ಮ ರಕ್ತಗಳಲ್ಲಿ ಒಂದಿಷ್ಟು ನಂಬಿಕೆಗಳನ್ನು ಅಂಟಿಸಿಕೊಂಡೇ ಜೀವನ ನಮ್ಮದು. ಒಬ್ಬರು ಹಿಂದೂ, ಮತ್ತೊಬ್ಬರು ಮುಸಲ್ಮಾನ ಮಗದೊಬ್ಬರು ಕ್ರಿಶ್ಚಿಯನ್ ಆನಂತರ ಜೈನ್ ಪಾರ್ಸಿ ಹೀಗೆ ಸಾಲು ಸಾಲುಗಳು. ಮತ್ತೊಂದೆಡೆ ಜಾತಿಯಿಲ್ಲ ಜನಿವಾರ ವಿಲ್ಲ ಅವೆಲ್ಲಾ ಕಪೋಲಕಲ್ಪಿತ. ಮನುಷ್ಯ ಎಂಬುದೊಂದೆ ಸತ್ಯ ಎಂದು ಸಾರುವ ಯತ್ನದ ಆ ತುದಿಯಲ್ಲಿರುವ ಜನರು. ಇವರುಗಳು ಧರ್ಮಾಂಧರಿಗಿಂತ ಅಪಾಯ. ನಾನು ಕಂಡಂತೆ ಜಾತಿಯಿಲ್ಲ ಜನಿವಾರ ವಿಲ್ಲ ಎಂದು ಮಧ್ಯ ವಯಸ್ಸಿನ ತನಕ ಹಾರಾಡಿ ನಂತರ ತಮ್ಮ ಮಕ್ಕಳ ಮದುವೆ ಸಮಯ ಬಂದಾಗ ಬ್ಯಾಟರಿ ತೆಗೆದುಕೊಂಡು ಹುಡುಕಿ ತಮ್ಮದೇ ಜಾತಿ ಒಳಪಂಗಡಕ್ಕೆ ಮದುವೆ ಮಾಡಿದ್ದು ಕಂಡಿದ್ದೇನೆ. ಇವರುಗಳು ಸುಮ್ಮನಾದರೆ ಕೆಣಕದಿದ್ದರೆ ತಾಕತ್ತಿಲ್ಲದ ಬಹಳಷ್ಟು ವಿಷಯ ತನ್ನಷ್ಟಕ್ಕೆ ಸತ್ತು ಹೋಗುತ್ತದೆ. ಆದರೆ ಅಸ್ತಿತ್ವದ ವಿಷಯದಲ್ಲಿ ತಗಾದೆ ತೆಗೆಯುವ ಇವರುಗಳು ಕಿತಬಿ ಎಬ್ಬಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ.
ದೇವರಿಲ್ಲ ಅಂತ ನಂಬಿದವರಿಗೂ ದೇವರಿದ್ದಾನೆ ಅಂತ ನಂಬಿದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎರಡೂ ನಂಬಿಕೆಗಳಷ್ಟೆ. ಅದರಾಚೆ ಮತ್ತೊಂದು ಇರಬಹುದು. ತರ್ಕದ ತಾಕತ್ತಿನಮೇಲೆ ಜೀವನ ಅಷ್ಟೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆಯವರು ಪಬ್ ಗೆ ನುಗ್ಗಿ ಗಲಾಟೆ ಎಬ್ಬಿಸಿದಾಗ ನಮ್ಮೂರಲ್ಲಿ ಎರಡು ಜನರು ವಾಗ್ವಾದಕ್ಕಿಳಿದಿದರು.
ಒಬ್ಬ: ಮುತಾಲಿಕ್ ಮಾಡಿದ್ದು ಸರಿ , ಬಡ್ಡಿ ಮಕ್ಕಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ.

ಮತೊಬ್ಬ:ಅದು ಹ್ಯಾಗೆ ಸರಿ, ಡ್ಯಾನ್ಸ್ ಮಾಡುವುದು ಪಬ್ ಗೆ ಹೋಗುವುದು ಅವರವರ ವೈಯಕ್ತಿಕ ವಿಷಯ, ಇದಕ್ಕೆ ಅಡ್ಡಿಪಡಿಸಲು ಮುತಾಲಿಕ್ ಯಾರು?
ಒಬ್ಬ: ನಿನ್ನ ತಂಗಿಗೋ ಅಕ್ಕನಿಗೋ ಹೀಗೆ ಎಳೆದುಕೊಂಡು ಹೋಗಿ ಹಾಳು ಮಾಡಿದ್ದರೆ ನಿನಗೆ ಅರ್ಥವಾಗುತ್ತಿತ್ತು , ಮುತಾಲಿಕ್ ಯಾರು ಅಂತ.
ಮತ್ತೊಬ್ಬ: ನೋಡು ನಾವು ಬದುಕುತ್ತಿರುವುದು ತಾಲಿಬಾನ್ ನಲ್ಲೋ ಭಾರತದಲ್ಲೋ? ನನ್ನ ತಂಗಿ ಮಾನಸಿಕವಾಗಿ ಪಬ್ ಗೆ ಹೋಗುವುದನ್ನು ಬಯಸಿದರೆ ಅಡ್ಡ ಗಾಲು ಹಾಕಲು ನಾನ್ಯಾರು?
ಒಬ್ಬ: ಇವೆಲ್ಲಾ ಭಾಷಣ ಬಿಗಿಯಲು ಚಂದ, ನಿಮ್ಮಂತಹ ಹೇತ್ಲಾಂಡಿಗಳು ಇರೋದ್ರಿಂದ ಅವರು ಹೆಚ್ಕೊಂಡಿರೋದು, ನಿಮ್ಗೆ ಮೊದಲು ಬಾರಿಸಬೇಕು
ಮೂರನೆಯವ- ಅಯ್ಯಾ ನೀವು ಅಲ್ಲಿಗೆ ಹೋಗೋರಲ್ಲ ಇಲ್ಲಿ ಕಿತ್ತಾಡ್ತೀರಿ. ಅಲ್ಲಿಗೆ ಹೋಗೋರು ಅರಾಮಾಗಿ ಮಜಾ ಮಾಡ್ತಾ ಇದಾರೆ. ಅವರವರದ್ದು ಅವರವರಿಗೆ ಬಿಡಿ, ನಿಮ್ಮ ವಾದದಿಂದ ಯಾವ ನಾಲ್ಕಾಣೆ ಬದಲಾವಣೆಯೂ ಆಗೋದಿಲ್ಲ.
ಹೀಗಾಗಿದೆ ನಮ್ಮ ಪರಿಸ್ಥಿತಿ. ದೇವರ ಧರ್ಮದ ಗಂಟು ಹೊತ್ತವನಿಗೆ ಯಾರು ವಿರೋಧಿಸುತ್ತಾರೆ ಎಂದು ನೋಡುವ ಚಟ. ಅವರನ್ನು ಬೆನ್ನೆತ್ತಿ ಬಡಿಯುವ ಆಸೆ. ದೇವರ ಅಸ್ತಿತ್ವದಲ್ಲಿ ಧರ್ಮದ ಸಮುದ್ರದಲ್ಲಿ ಕಿಂಚಿತ್ತೂ ನಂಬಿಕೆ ಯಿಲ್ಲದವನಿಗೆ ಅವರುಗಳನ್ನು ಕೆಣಕುವ ಚಟ, ನಾನೇ ಸೂಪರ್ ಎಂದು ಬಿಂಬಿಸುವ ಮಹದಾಸೆ. ಪರಸ್ಪರ ಎರಚುವ ಕೆಸರು ಅಮಾಯಯಕರ ಮೈಮೇಲೆ.
ಒಮ್ಮೆ ಇವೆಲ್ಲವನ್ನೂ ಬದಿಗಿರಿಸಿ ಭೂಮಿಯಿಂದ ಒಂದತ್ತು ಕಿಲೋಮೀಟರ್ ಮೇಲೆ ಮನಸ್ಸನ್ನು ಒಯ್ದು ನಿಲ್ಲಿಸಿಕೊಂಡರೆ ಅವಾಗ ಪರಮ ಸತ್ಯ ಗೋಚರಿಸುತ್ತದೆ. ಅಯ್ಯೋ ಇಷ್ಟು ದಿವಸ ನಾನು ಸುಮ್ಮನೆ ಗುದ್ದಾಡಿದೆನಲ್ಲ. ಇಷ್ಟು ಸೂಪರ್ ಸ್ವರ್ಗ ಮತ್ತೆಲ್ಲಿದೆ. ನಮ್ಮ ಪಾಡಿಗೆ ನಾವಿರುವ ವಿಚಾರದಲ್ಲಿ. ಹಾಗಾಗಿ ಬುದ್ದಿಜೀವಿಗಳೆಂದು ಕರೆಯಿಸಿಕೊಂಡು ಮುತಾಲಿಕ್ ಚರ್ಚೆಗೋ, ಬುರ್ಕಾ ವಿವಾದಕ್ಕೋ, ಬುಡನ್ ಗಿರಿ ವಿವಾದಕ್ಕೋ ಹೋಗಿ ವೇದಿಕೆಯೇರಿ ಕುಳಿತುಕೊಂಡು ಗಡ್ಡ ನೀವುವ ನಿಮ್ಮ ಚಟ ಕೈಬಿಡಿ. ನೀವೇ ಹೇಳುವಂತೆ ಧರ್ಮದ ಅಮಲಿನಲ್ಲಿ ತೇಲುತ್ತಿರುವವರಿಗೆ ಮಾನವೀಯತೆ ಕಾಣುವುದಿಲ್ಲ ಅಂದಾದ ಮೇಲೆ ಎಲ್ಲ ಅರ್ಥವಾದಂತಿರುವ ನಿಮಗೆ ಪ್ರಪಂಚ ತಿದ್ದುವ ಚಟ ಯಾಕೆ? ನೂರಾರು ವರ್ಷದಿಂದ ಹೀಗೆ ಎನೆಲ್ಲಾ ನಡೆದಿದೆ. ಸತ್ಯದ ತಾಕತ್ತು ಯಾವುದಕ್ಕೆ ಇಲ್ಲವೋ ಅದು ಅಳಿಸಿ ಹೋಗುತ್ತದೆ. ಅದಕ್ಕೆ ಯಾರ ಪ್ರಯತ್ನದ ಅಗತ್ಯವೂ ಇರುವುದಿಲ್ಲ.
ಅರಿವು ಎಂಬುದು ನಿಜವಾದ ವೈಯಕ್ತಿಕ ವಿಷಯ. ಅದಾದಾಗ ಎಲ್ಲವೂ ಶಾಂತ. ಆದರೆ ಪ್ರಕೃತಿ ಎಲ್ಲಾ ಮನುಷ್ಯರಿಗೂ ಅರಿವು ಮೂಡಿಸುವುದಿಲ್ಲ ಎಂಬುದು ಅಷ್ಟೇ ಸತ್ಯದ ವಿಷಯ.

ನೀವು ಕೇಳಿದಿರಿ...........?

ಯಾರಾದರೂ ತಾಕತ್ತಿರುವವರು ಸುಧಾದಲ್ಲಿ ಮೂಡಿ ಬರುವ ನೀವು ಕೇಳಿದಿರಿ? ತರಹದ ಒಂದು ಬ್ಲಾಗ್ ಮಾಡಬಹುದಿತ್ತು ಅಂತ ನನಗೆ ಅನ್ನಿಸುತ್ತದೆ. ಪ್ರಶ್ನೆಗೆ ಚುಟುಕಾದ ಉತ್ತರ . ಒಂಥರಾ ಮಜ ಇರುತ್ತದೆ. ಆದರೆ ಉತ್ತರಿಸುವವರಿಗೆ ಅಂದರೆ ಉತ್ತರ ದ ಬ್ಲಾಗ್ ಮೈಂಟೇನ್ ಮಾಡುವವರಿಗೆ ಬಹಳ ತಾಳ್ಮೆ ಇರಬೇಕು. ವಾರಕ್ಕೊಮ್ಮೆ ಶ್ರದ್ಧೆಯಿಂದ ಪ್ರಶ್ನೆಗೆ ಉತ್ತರ ನಿರಂತರವಾಗಿ ಕೊಡುವಂತಿರಬೇಕು. ಪ್ರಶ್ನೆ ಯಾರೂ ಕೇಳದಿದ್ದರೆ ಅದನ್ನೂ ಬೇರೆಯವರ ಹೆಸರಿನಲ್ಲಿ ಸೃಷ್ಟಿಸಿಕೊಂಡು ಉತ್ತರಿಸಬೇಕು. ಒಳ್ಳೆ ಹಿಟ್ಸ್ ಸಿಗಬಹುದು ಅಂತ ಅಂದಾಜು ನನ್ನದು. ಯಾರಾದರೂ ಹ್ಯಾಗಾದರೂ ಐಡಿಯಾ ಮಾಡಿ ಪ್ರಯತ್ನಿಸಿರಲ್ಲ ಹೀಗೆ.
ರಾಮಚಂದ್ರ ಕಡೂರು
ಪ್ರಶ್ನೆ: ದೇವರು ಇದ್ದಾನಾ.?
ಉತ್ತರ: "ಅನು ಮಾನ" ಇಲ್ಲದಿದ್ದರೆ.
ಪ್ರಸಾದ ಮಾವಿನಸರ
ಪ್ರಶ್ನೆ: ಪ್ರಳಯ ಆಗೋದು ಯಾವಾಗ?
ಉತ್ತರ: ಪ್ರಾಯ ಸಂದಾಗ-ಕಲ್ಲು ಬೆಂದಾಗ
ಮೃತ್ಯು ಹೊಸಮನೆ
ಪ್ರಶ್ನೆ: ನಿಮಗೆ "ವಿವೇಕ" ಬರೋದು ಯಾವಾಗ?
ಉತ್ತರ: ಅಕಸ್ಮಾತ್ತಾಗಿ ಹಿಂದಿನ "ಅ"ಳಿಸಿ ಹೋದಾಗ.
ಕಾಮೇಶ್ವರ ಬಚ್ಚಗಾರು
ಪ್ರಶ್ನೆ: ನಿಮಗೆ ಮೂರನೇ ಮದುವೆ ಯಾವಾಗ?
ಉತ್ತರ: ಒಂದು, ಎರಡು ಒಟ್ಟಿಗೆ ಆದಾಗ.
ಜಿತೇಂದ್ರ ಹಿಂಡುಮನೆ
ಪ್ರಶ್ನೆ: ಹಳ್ಳಿಗಳನ್ನು ಹೆಣ್ಣು ಮಕ್ಕಳು ಏಕೆ ಇಷ್ಟಪಡುವುದಿಲ್ಲ.
ಉತ್ತರ: ನಿಮ್ಮಂಥಹವರೆಲ್ಲ ನಿತ್ಯ ಪಟ್ಟಣ ಸೇರುವುದರಿಂದ
ವಿನಾಯಕ ಸಾಗರ
ಪ್ರಶ್ನೆ: ವಿರೋಧ ಪಕ್ಷದ ನಾಯಕರಾಗಿದ್ದಾಗಿನ ಹುರುಪು ಸಿ.ಎಂ ಆದಾಗ ಏಕಿರುವುದಿಲ್ಲ?
ಉತ್ತರ; ನಾಯಕ ದಲ್ಲಿ ನಾಕ ಇದೆ ಹಾಗಾಗಿ.

ಅಯ್ಯೋ ಸುಸ್ತಾದೆ ಕಣ್ರೀ ಇನ್ನೂ ಸೂಪರ್ ಪ್ರಶ್ನೆ ಉತ್ತರ ನಿಮ್ಮ ಬಳಿ ಇದೆ. ಅದನ್ನೆಲ್ಲಾ ಶುರು ಮಾಡ್ರಲಾ. ಮಜಾ ನೋಡೂಣು.Monday, March 1, 2010

ನಭೋ ಮಂಡಲ ಗಡ ಗಡ

ಪ್ರಳಯ ಖಂಡಿತಾ ಆಗುತ್ತೆ. ಆದರೆಅದರ ಮುನ್ಸೂಚನೆ ಅಂತ ನಮಗೆ ಹಲವಾರು ತರಹದ ವಿದ್ಯಮಾನಗಳು ಕಾಣಿಸತೊಡಗುತ್ತವೆ ಅವೆಲ್ಲಾ ಹೀಗೆ.
ಸಾಕಷ್ಟು ಆಸ್ತಿ ಹೊಂದಿರುವ ಅಣ್ಣ ತಮ್ಮಂದಿರು ಹಿಸ್ಸೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸಕಲ ಚರ ಸ್ಥಿರ ಆಸ್ತಿಗಳೂ ಒಂದಿನಿತೂ ವಿವಾದವಿಲ್ಲದೆ ಹಂಚಿಕೆಯಾಗುತ್ತದೆ. ಅಪ್ಪ ಅಮ್ಮ "ಭಗವಂತನನ್ನು ನಂಬಿದವರು ತಾವು ಏನನ್ನೂ ಇಟ್ಟುಕೊಳ್ಳುವುದಿಲ್ಲ" ಎಂದುಬಿಡುತ್ತಾರೆ. ಇನ್ನೆಲ್ಲಾ ಸಾಂಗೋಪಸಾಂಗವಾಗಿ ಮುಗಿಯಿತು ಅನ್ನುವಷ್ಟರಲ್ಲಿ ತಮ್ಮನ ಕಿವಿಯಲ್ಲಿ ಆತನ ಹೆಂಡತಿ ಏನೋ ಪಿಸುಗುಟ್ಟುತ್ತಾಳೆ ತಕ್ಷಣ ಆತ ತರಲೆ ತೆಗೆಯುತ್ತಾನೆ. " ಎಲ್ಲಾ ಸರಿ ಅಪ್ಪ ಅಮ್ಮ ದೇವರು, ನನ್ನ ಹೆತ್ತು ಹೊತ್ತು ಬೆಳೆಸಿದವರು ಅವರು ನನ್ನೊಟ್ಟಿಗೆ "ಇರಬೇಕು. ತಕ್ಷಣ ಅಣ್ಣನ ಹೆಂಡತಿ ಗುಸುಗುಟ್ಟುತ್ತಾಳೆ ಅಣ್ಣ " ಅದು ಆಗದ ಮಾತು ನನ್ನನ್ನೂ ಅವರೇ ಬೆಳಸಿದ್ದು ಅವರು ನನ್ನೊಟ್ಟಿಗೆ ಇರಬೇಕು" ಎಂದು ಗದ್ದಲವನ್ನೆಬಿಸುತ್ತಾನೆ". ಮಾತಿಗೆ ಮಾತು ಬೆಳೆದು ಅಮ್ಮ ಅಪ್ಪ ನನಗೆ ನನಗೆ ಎಂದು ಹಂಚು ಹಾರಿಹೋಗುವ ಮಟ್ಟಿಗೆ ಗಲಾಟೆ. ತಮ್ಮ "ಬಂಗಾರ ಎಲ್ಲ ನೀನೆ ಇಟ್ಟುಕೋ ಅಮ್ಮ ಅಪ್ಪ ನನಗಿರಲಿ" ಎನ್ನುತ್ತಾನೆ. ಅಣ್ಣ ನನ್ನ ಆಸ್ತಿ ನೀನಿಟ್ಟುಕೋ ಅಪ್ಪ ಅಮ್ಮ ನನಗಿರಲಿ ಎಂದು ಕೂಗುತ್ತಾನೆ,
ಹೀಗೆ ಹಾರಾಟ ಚೀರಾಟ ಜೋರಾಗುವಷ್ಟರಲ್ಲಿ ನಭೋ ಮಂಡಲ ಗಡಗಡ ಸದ್ದಿನೊಂದಿಗೆ..........
ಪ್ರಖ್ಯಾತ ಜ್ಯೋತಿಷಿಯೊಬ್ಬರು ಇದ್ದಕ್ಕಿಂದ್ದಂತೆ ತಮ್ಮ ಆಸ್ತಿಯನ್ನೆಲ್ಲಾ ದಾನ ಮಾಡಲು ಆರಂಭಿಸುತ್ತಾರೆ. ಇಟ್ಟದ್ದು ಪರರಿಗೆ ಕೊಟ್ಟದ್ದು ತನಗೆ ಎಂಬ ತತ್ವ ಎಂದು ಎಲ್ಲವನ್ನೂ ದಾನ ದಾನ ದಾನ ಶುರುಮಾಡುತ್ತಾರೆ. ಯಾರೇ ಭವಿಷ್ಯ ಕೇಳಲು ಬಂದರೂ "ನೀರೇ ನೀರೂ" ಎನೂ ಕಾಣಿಸುತ್ತಿಲ್ಲ ಅನ್ನುತ್ತಾರೆ.
ತಕ್ಷಣ ನಭೋ ಮಂಡಲ ಗಡ ಗಡ.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತಿರುತ್ತದೆ. ಅಧ್ಯಕ್ಷರೂ ಗೀತಾ ನಾಗಭೂಷಣರಂತಯೇ ಮತ್ತೊಬ್ಬರು. ಅವರು ಭಾಷಣ ಶುರು ಮಾಡುತ್ತಾರೆ. " ನಾವು ಬರಹಗಾರರು ಬರೀ ಬೊಗಳೆ ಬಿಟ್ಟಿದಷ್ಟೇ, ಬರೆದ ಬರಹಕ್ಕೆ ಕಾಸು ತೆಗೆದುಕೊಂಡಿದ್ದೇವೆ. ಬಡತನದ ಕತೆ ಶ್ರೀಮಂತರಿಗೆ ಹೇಳಿದ್ದೇವೆ. ರೈತರಿಗೆ ಕರುಣೆ ತೋರಿದ ಬರಹ ಬರೆದು ನಾವು ಕಾಸು ಮಾಡಿಕೊಂಡಿದ್ದೇವೆ. ಕನ್ನಡ ಕನ್ನಡ ಎಂದು ಜಪ ಮಾಡುತ್ತಾ ನಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಕಳುಹಿಸಿ ಅವರು ಅಮೆರಿಕಾದಲ್ಲಿ ಸೆಟ್ಲ್ ಆಗುವಂತೆ ನೋಡಿಕೊಂಡಿದ್ದೇವೆ. ರಾಜಕಾರಣಿಗಳೇ ಎಷ್ಟೋ ಮೇಲು. ಅವರು ಹಲವು ಕೆಲಸಗಳನ್ನು ಮಾಡಿಸಿದ್ದಾರೆ. ನಾವುಗಳು ಬುರುಡೇ ದಾಸರು. ಹಾಗಾಗಿ ಈಗ ನನಗೆ ಕೊಟ್ಟ ಹದಿನೈದು ಲಕ್ಷ ರೂಪಾಯಿಗಳನ್ನು ಇಲ್ಲೇ ಇರುವ ರೈತರಿಗೆ ನೀಡುತ್ತಿದ್ದೇನೆ. "
ತಕ್ಷಣ
ಗಡ ಗಡ ಗಡ ನೀರೋ ನೀರು.
ಇಂತಹ ಘಟನೆ ನಿಮಗೂ ಸಾವಿರ ಹೊಳೆಯುತ್ತೆ. ಅದಾದ ದಿವಸವೇ ಪ್ರಳಯ. ಅಲ್ಲಿವರಗೆ ಜುಂ ಜಂ ಜಮಾಯ್ಸಿ.