Thursday, June 30, 2011

ಕಬ್ಬಿಣದ ಸಟ್ಟುಗವೂ ಪರಿ ಪರಿಮಳ ಒಗ್ಗರಣೆಯೂ

ಹೌದೇ ಹೌದು ಬಿಡಿ. ಏನು? ಹೌದೇ ಹೌದು ಅಂತ ಅಂದಿರಾ..? ಹಾಗಾದರೆ ಕೊರೆಯಿಸಿಕೊಳ್ಳಲು ತಯಾರಾಗಿ. ಇತಿಹಾಸ ಮರುಕಳಿಸುತ್ತದೆ ಎಂಬ ವಿಚಾರ ಹೌದೇ ಹೌದು ಅಂತ ಅಂದೆ. ನನಗೆ ಅದರ ಅರಿವಾದದ್ದು ಮೊನ್ನೆ ಕೊಡ್ಲುತೋಟದ ರಮೇಶ ಎಂಬ ಹಳ್ಳಿವೈದ್ಯರ ಬಳಿ ಅರ್ದಾಂಗಿಗೆ ಥಂಡಿ ಔಷಧಿ ತೆಗೆದುಕೊಳ್ಳಲು ಹೋದಾಗ. ಕಟಕಟ ಎಂದು ಸದ್ದು ಮಾಡುತ್ತಾ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟುತ್ತಿರುವ ಈ ನನ್ನ ದೇಹದಿಂದ ಹಿಡಿದು ಮೌನವಾಗಿ ಈ ಅಕ್ಷರಗಳನ್ನು ನಿಮ್ಮ ಮಿದುಳಿನೊಳಗೆ ದೃಶ್ಯವಾಗಿ ರೂಪಿಸಿಕೊಳ್ಳುತ್ತಿರುವ ನಿಮ್ಮ ದೇಹಕ್ಕೆ ಹಲವಾರು ಬಗೆಬಗೆ ಅಂಶಗಳು ಆಹಾರ ರೂಪದಲ್ಲಿ ಬೇಕಂತೆ. ನನಗೆ ಗೊತ್ತಿರುವ ಅಂಶವೆಂದರೆ ಹಸಿವಾದಾಗ ಮುಕ್ಕಲು ನೇರ್ಲೇ ಹಣ್ಣಿನಿಂದ ಹಿಡಿದು ನೆಲ್ಲಿ ಸಟ್ಟಿನವರೆಗೆ, ಹೂರಣ ಹೋಳಿಗೆಯಿಂದ ಹಿಡಿದು ಅವಲಕ್ಕಿ ಚುಡುವಾದವರೆಗೆ ಅಂತಿಮವಾಗಿ ಮಸಾಲೆದೋಸೆಯಿಂದ ಹಿಡಿದು ಪರೋಟಾ ಕುರ್ಮಾದ ತನಕ ಯಾವುದಾದರೂ ಆದೀತು. ಆದರೆ ಈ ದೇಹವೆಂಬ ದೇಹ ಆರೋಗ್ಯವಾಗಿ ನಳನಳಿಸಿ ಪಳಪಳನೆ ಮಿಂಚಲು ಕಬ್ಬಿಣ ಮುಂತಾದ ಸತು ಸತ್ವಗಳು ಬೇಕಂತೆ. ತನ್ಮೂಲಕ ವಾತ-ಪಿತ್ಥ -ಕಫ ಎಂಬುದು ಸಮಪಾತದಲ್ಲಿ ಇದ್ದು ಖಾಯಿಲೆ-ಕಸಾಲೆ ಗಾವುದ ದೂರವಂತೆ, ಇರಲಿ ಇರಲಿ ಅದು ವೈದ್ಯಲೋಕದ ಘಟಾನುಘಟಿಗಳಿಗೆ ಬಿಟ್ಟು ನಮ್ಮ ನಿಮ್ಮಂತ ಪಾಮರರ ಮಟ್ಟಕ್ಕೆ ಮಾತನಾಡೊಣ.
ದೇಹಕ್ಕೆ ಕಬ್ಬಿಣದ ಅಂಶ ಸೊಪ್ಪು ತರಕಾರಿಗಳ ಮೂಲಕ ಪೂರೈಕೆಯಾಗುತ್ತದೆಯಂತೆ. ಜತೆಜತೆಯಲ್ಲಿ ಒಗ್ಗರಣೆ ಹಾಕುವ ಸಟ್ಟುಗವೂ ಕೂಡ ದೇಹಕ್ಕೆ ಕಬ್ಬಿಣದ ಅಂಶ ಪೂರೈಸುತ್ತದೆಯಂತೆ. ಅದಕ್ಕೆ ಹಿಂದಿನವರು ಕಬ್ಬಿಣದ ಸೌಟನ್ನು ಒಗ್ಗರಣೆಗೆ ಬಳಸುತ್ತಿದಾರಂತೆ,ಮತ್ತು ಅವರು ಸಿಕ್ಕಾಪಟ್ಟೆ ಗಟ್ಟಿಯಂತೆ ಕಬ್ಬಿಣದಂತೆ. ಕಾಲನ ಹೊಡೆತಕ್ಕೆ ಸಿಕ್ಕಿದ ಕರಿಕಪ್ಪನೆಯ ಅಂದವಿಲ್ಲದ ಆಕಾರವಿಲ್ಲದ ಕಬ್ಬಿಣದ ಒಗ್ಗರಣೆ ಸೌಟು ತಳಕು ಬಳುಕಿನ ಸ್ಟೀಲ್ ಒಗ್ಗರಣೆ ಸೌಟಿನೆದುರು ಸೋತು ಸುಣ್ಣವಾಗಿ ಅಟ್ಟ ಸೇರಿದ ಹತ್ತಿಪ್ಪತ್ತು ವರ್ಷಗಳ ನಂತರ ಮನುಷ್ಯರಿಗೆ ಅವರ ದೇಹದಲ್ಲಿ ಅದರಲ್ಲಿಯೂ ಒಂದು ತೂಕ ಹೆಚ್ಚಾಗಿ ಹೆಂಗಸರಿಗೆ ಕಬ್ಬಿಣದ ಅಂಶದ ಕೊರತೆಯಿಂದ ಉಂಟಾಗುವ ಖಾಯಿಲೆಯ ಪ್ರಮಾಣ ಹೆಚ್ಚಾಗಿದೆಯಂತೆ. ಅದಕ್ಕೆ ಪ್ರಮುಖ ಕಾರಣ ಒಗ್ಗರಣೆಗೆ ಬಳಸುತ್ತಿದ್ದ ಕಬ್ಬಿಣದ ಸೌಟು ಅಟ್ಟ ಸೇರಿದ್ದು. ಇಂತಿಪ್ಪ ವಿಚಾರಗಳು ನಾಟಿ ವೈದ್ಯರ ಮೂಲಕ ನನ್ನಾಕೆಯ ಮಿದುಳಿನೊಳಗೆ ಅಚ್ಚಾಗಿ ನಂತರ ಕಬ್ಬಿಣದ ಸೌಟು ಮಾರುಕಟ್ಟೆಯಿಂದ ತರಲು ಆದೇಶ ಹೊರಬಿತ್ತು.
ಮಾರುಕಟ್ಟೆಯಲ್ಲಿ ಕಬ್ಬಿಣದ ಒಗ್ಗರಣೆ ಸೌಟು ಅಂದರೆ ಮಿಕಿಮಿಕಿ ನೋಡುವ ಪರಿಸ್ಥಿತಿ. ಅದು ಮಾರುಕಟ್ಟೆಯಿಂದ ಮಾಯವಾಗಿ ಮೂವತ್ತು ವರ್ಷಗಳೇ ಸಂದಿವೆಯಂತೆ. ಅದು ನಿಜವಾದ್ ಪ್ಯೂರ್..! ಕಬ್ಬಿಣದ ಹುಟ್ಟಿನ ಹಿಡಿಕೆ ಚಪ್ಪಟೆಯಾಗಿ ಇರುತ್ತದೆಯಂತೆ. ಒರಿಜಿನಲ್ ಕಬ್ಬಿಣ ರೌಂಡ್ ಆಕಾರ ಹಾಗೂ ಸಿಕ್ಕಾಪಟ್ಟೆ ದೊಡ್ಡ ತಟ್ಟೆ ಮಾಡಲು ಆಗದಂತೆ ಎಂಬ ಮಾಹಿತಿಯೊಂದಿಗೆ ಹತ್ತಾರು ಅಂಗಡಿ ತಿರುಗಿದೆ. ಕೊನೆಯದಾಗಿ ಜೇಡರ ವಾಸಸ್ಥಾನದಂತಿದ್ದ ಕಪ್ಪನೆಯ ಒಂದು ಅಂಗಡಿಯಲ್ಲಿ ಸಿಕ್ಕಿತು. ಆತನಿಗೋ ಪರಮಸಂತೋಷ, ಗಿರಾಕಿ ಕೇಳದೇ ಇದ್ದ ವಸ್ತು ನಾನು ಕೇಳಿದ್ದೆ. ಖುಶ್ ಖುಷಿಯಾಗಿ ಹುಡುಕಿ ತಂದುಕೊಟ್ಟ ಚಪ್ಪಟೆ ಹಿಡಿಕೆಯ ಸಣ್ಣ ಬಟ್ಟಲಿನ ಕಬ್ಬಿಣದ ಒಗ್ಗರಣೆ ಸೌಟನ್ನ. ದರ ಕೇಳಿದೆ. ನೂರಾ ಅರವತ್ತು ಅಂದ. ಒಮ್ಮೆ ತಲೆ ದಿಂ ಅಂತು. "ಇಲ್ಲಾ ಸಾರ್, ಈಗ ಒರಿಜಿನಲ್ ಸಟ್ಟುಗ ಇಲ್ಲೆಲ್ಲೂ ಸಿಗೋದಿಲ್ಲ ತಮಿಳುನಾಡಿನಿಂದ ತರಿಸಬೇಕು, ಅದಕ್ಕೆ ದುಬಾರಿ" ಎಂದ. ಮಡದಿಯ ಸಂತೋಷದೆದುರು ನೂರಾ ಅರವತ್ತು ಯಾವಲೆಕ್ಕ ಅಂತ ಅನ್ನಿಸಿ ತೆತ್ತು ಮನೆಗೆ ತಂದೆ.
ಅದಕ್ಕೆ ಸೊಪ್ಪುಸದೆಗಳಿಂದ ಅದನ್ನು ತಿಕ್ಕಿ ತೀಡಿ ೨-೩ ದಿನಗಳ ನಂತರ ಒಗ್ಗರಣೆಗಾಗಿ ಅದನ್ನು ನನ್ನವಳು ಬಳಸತೊಡಗಿದ್ದಾಳೆ. ನೀವೂ ಬನ್ನಿ ಅದರಲ್ಲಿನ ಒಗ್ಗರಣೆಯ ಪದಾರ್ಥ ತಿಂದು ಕಬ್ಬಿಣದಂತೆ ಗಟ್ಟಿಯಾಗಿ ಆರೋಗ್ಯವಂತಾರಗಬಹುದು ಎಂಬುದು ನನ್ನ ಈಗಿನ ಮಾತು. ಈಗ ಹೇಳಿ ನಿಮಗೂ ಹೌದೇ ಹೌದು ಅಂತ ಅನ್ನಿಸುತ್ತಿಲ್ಲವೇ?

Wednesday, June 29, 2011

ಬಿಸಿಲೇರಿ.....! ಬಾಟಲ್ ನ ಎದುರು ನಿಕ್ಕಿಯಾಗುತ್ತಿದೆ....!

ಲಿಂಗನಮಕ್ಕಿಯ ಹಿನ್ನೀರಿನಲ್ಲಿ ಮೇ ತಿಂಗಳಿನಲ್ಲಿ ಬಗಲಿಗೊಂದು ಕ್ಯಾಮೆರಾ ನೇತಾಕಿ ಓಡಾಡಿದರೆ ಇಂತಹ ಸಾವಿರ ಫೋಟೋ ತೆಗೆಯಬಹುದು. ಅಲ್ಲಿನ ಸೌಂದರ್ಯ ನೋಡಿ "ವಾವ್" ಎನ್ನಬಹುದು. ಜತೆಗೆ ನಲ್ಲೆಯೋ ನಲ್ಲನೋ ಇದ್ದರೆ ಬಿರುಕುಬಿಟ್ಟ ಮಣ್ಣಿನ ಮೇಲೆ ಚರ್ ಪರ್ ಎಂದು ಓಡಾಡುತ್ತ ಕೈಕೈ ಹಿಡಿದುಕೊಂಡು ಸಿನೆಮಾ ಹಾಡು ಗುಣುಗುಣಿಸಬಹುದು. ತೀರಾ ಸ್ವರ ಕೆಟ್ಟದಾಗಿರದಿದ್ದರೆ ಹಾಡನ್ನು ಗಂಟಲು ಬಿರಿಯುವಂತೆ ಕೂಗಿಯೂ ಹೇಳಬಹುದು. ಅಲ್ಲಿ ನೀವು ನೀವೆ ನಾವು ನಾವೆ. ಕಿಲೋಮೀಟರ್ ಗಟ್ಟಲೆ ಸಾಗಿದರೂ ಜನರಿಲ್ಲ ಜಂಜಾಟವಿಲ್ಲ. ಪಶ್ಚಿಮಘಟ್ಟದ ಸಾಲುಗಳು ನಿಮ್ಮನ್ನೂ ಉದ್ದಕ್ಕೂ ಸ್ವಾಗತಿಸುತ್ತವೆ. ಬಕ್ಕತಲೆಯ ಸುತ್ತ ಕರಿಕೂದಲು ಹಬ್ಬಿದಂತೆ ಭಾಸವಾಗುವ ನದಿಗುಂಟ ನಿರ್ಮಾನುಷ ಸ್ವರ್ಗ. ಇದು ಇಂದಿನ ಕಾಲದ ಶರಾವತಿ ನದಿಯ ಹಿನ್ನೀರಿನ ಚಿತ್ರಣ.
ನಿಮಗೆ ಈಗ ಸರಿಸುಮಾರು ಐವತ್ತು ವರ್ಷದ ಹಿಂದೆ ಕತೆಗಳಮೂಲಕ ಹಿಂದೆ ಹೋಗುವ ಆಸಕ್ತಿಯಿದ್ದರೆ ಹೀಗೆ ಸಾಗುವ ಮಾರ್ಗದಲ್ಲಿ ನೂರಾರು ಹಳ್ಳಿಗಳಿದ್ದವು. ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ಆ ಹಳ್ಳಿಗಳನ್ನು ಮುಳುಗಿಸಲಾಯಿತು. ಬಿಡಿ ಅಭಿವೃದ್ಧಿಗೋಸ್ಕರ ಒಂದಿಷ್ಟು ಜನರ ತ್ಯಾಗ ಬಲಿದಾನ ಎಂಬುದು ನಾಗರಿಕ ಪ್ರಪಂಚದ ಅನಿವಾರ್ಯತೆ. ನಮಗೆ ಅದನ್ನೆಲ್ಲಾ ಪೊಳ್ಳುವಾದಗಳಿಂದ ವಿರೋಧಿಸಿ ಬದುಕುವ ತಾಕತ್ತೂ ಇಲ್ಲ. ಕಾಡು ಕಡಿಯಬಾರದು ಆಣೆಕಟ್ಟು ಕಟ್ಟಬಾರದು ನಿರಂತರ ವಿದ್ಯುತ್ ನೀಡಬೇಕು, ಮುಂತಾದ ಅರ್ಥವಿಲ್ಲದ ತರ್ಕಕ್ಕೆ ಸಮಯ ಹಾಳುಮಾಡಿಕೊಳ್ಳುವುದು ಬೇಡ. ನಾನು ಈಗ ಹೇಳಹೊರಟಿರುವುದು ಇಂತಿಪ್ಪ ಪಶ್ಚಿಮಘಟ್ಟದ ವಲಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸರ್ಕಾರ ಸೇರಿಸುತ್ತಲಿದೆ ಎಂಬುದು. ಕೇರಳದವರೆಗೂ ಹರಡಿಕೊಂಡಿರುವ ಪಶ್ಚಿಮಘಟ್ಟ ಅತ್ಯದ್ಬುತ ಜೈವಿಕ ಸಸ್ಯ ಸಂಪತ್ತನ್ನು ಹೊಂದಿತ್ತು ಈಗ ಬಾಗಶಃ ಹೊಂದಿದೆ. ಇಲ್ಲಿ ಸಿಂಗಳೀಕ ಎನ್ನುವ ಅಪರೂಪದ ಪ್ರಾಣಿಯಿಂದ ಹಿಡಿದು ಉಡ,ಕಬ್ಬೆಕ್ಕು, ಪುನುಗುಬೆಕ್ಕು, ಇತ್ಯಾದಿ ಇತ್ಯಾದಿ ನೂರಾರು ಜಾತಿಯ ಪ್ರಾಣಿ ಪಕ್ಷಿ ಕೀಟ ಪ್ರಪಂಚವಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇದನ್ನು ಸೇರಿಸಿ ತನ್ಮೂಲಕ ಇಲ್ಲಿಯವೆರೆಗೆ ಇರುವ ಆ ಜೀವಿಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗುವ ಗುರಿ ನಮ್ಮ ಸರ್ಕಾರದ್ದು. ಅದಕ್ಕೆ ರಾಜ್ಯ ಸರ್ಕಾರ ವಿರೋಧಿಸುತ್ತಿದೆ ಅಂತ ಪೇಪರ್ ನ್ಯೂಸು. ಹೀಗೆ ಯುನೆಸ್ಕೋ ಗೆ ಸೇರಿಸುವುದರಿಂದ ಇಲ್ಲಿನ ಜನಜೀವನದ ಮೇಲೆ ಅನೇಕ ದುಷ್ಪರಿಣಾಮ ಖಂಡಿತ ಎಂಬುದು ಒಂದಷ್ಟು ಜನರ ವಾದವಾದರೆ ಇಲ್ಲ ಹಾಗೆ ಮಾಡುವುದರಿಂದ ಸಿಕ್ಕಾಪಟ್ಟೆ ಅನುಕೂಲ ಎಂಬುದು ಮತ್ತೊಂದಿಷ್ಟು ಜನರ ಆಂಬೋಣ. ಸಮರ್ಪಕ ರೀತಿಯ ಕಾರ್ಯ ಕಾರಣಗಳು ಯಾರಿಗೂ ತಿಳಿದಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ವಿದ್ದಾಗ ಅನಂತ ಹೆಗಡೆ ಅಶೀಸರ ಎಂಬಂತಹ ಹತ್ತು ಹಲವಾರು ಪರಿಸರ ವಾದಿಗಳು ಇದ್ದರು. ಈಗ ಅವರೆಲ್ಲಾ ಗೂಟದಕಾರಿನ ಪರಿಸವಾದಿಗಳು ಬಿಜೆಪಿ ಸರ್ಕಾರದಲ್ಲಿ...!. ಹಾಗಾಗಿ ಜನಸಾಮಾನ್ಯರು ಗೊಂದಲದಲ್ಲಿ ಕಣ್ಣುಕಣ್ಣು ಬಿಡುವಂತಾಗಿದೆ.
ಇಲ್ಲಿ ಉತ್ತುತ್ತಲಿದ್ದಾರೆ ರೈತರು.ಇಲ್ಲಿ ಬಿತ್ತುತ್ತಲಿದ್ದಾರೆ ರೈತರು, ಅವರುಗಳಿಗೆ ಇದ್ಯಾವುದರ ಪರಿವೆಯೂ ಇಲ್ಲ. ಅಲ್ಲಿ ಮೇಲ್ಮಟ್ಟದಲ್ಲಿ ಇವರದೇ ಜೀವನದ ಕುರಿತು ತೀರ್ಮಾನಗಳು ಎಸಿ ರೂಂ ನಲ್ಲಿ ಬಿಸ್ಲೇರಿ ಬಾಟಲ್ ನ ಎದುರು ನಿಕ್ಕಿಯಾಗುತ್ತಿದೆ. ಮುಂದೊಂದು ದಿನ ಚಿತ್ರದಲ್ಲಿನ ಮರದ ಚಕ್ಕಳಗಳಂತೆ ಇಲ್ಲಿನ ಮನುಷ್ಯರಾದರೂ ಆಶ್ಚರ್ಯವಿಲ್ಲ ಅಥವಾ ಪ್ರಕೃತಿ ಗರಿಬಿಚ್ಚಿ ನರ್ತಿಸತೊಡಗಿದರೂ ಆಶ್ಚರ್ಯವಿಲ್ಲ.
ಒಟ್ಟಿನಲ್ಲಿ ಏನೇನೋ ಆಗುತ್ತದೆ "ತೆನವಿನಾ ತೃಣಮಪಿ ನಚಲತಿ" ಅಂತ ನಾವು ನೋಡುತ್ತಾ ಇರುವುದು ಕ್ಷೇಮ.

Monday, June 27, 2011

ಆಣೆ ಪುರಾಣ ...!

"ದೇವ್ರಾಣೆ ಯಂಗೊತ್ತಿಲ್ಲೆ", (ನನಗೆ ಗೊತ್ತಿಲ್ಲ) ಎಂದು ನಾವೆಲ್ಲ ಸಣ್ಣಕ್ಕಿದ್ದಾಗ ಗೊತ್ತಿದ್ದ ವಿಷಯಗಳಿಗೂ ಹೇಳುತ್ತಿದ್ದೆವು. ಗೊತ್ತಿಲ್ಲದ ವಿಷಯಕ್ಕಂತೂ ಹೇಗೂ ಹೇಳುತ್ತಿದ್ದೆವು. ಆದರೆ ಪರಿಣಾಮ ದುಷ್ಪರಿಣಾಮ ಎರಡೂ ಆಗಿದ್ದ ಸಾಕ್ಷಿಗಳು ಇಲ್ಲ ಬಿಡಿ. ವಾರದಿಂದೀಚೆಗೆ ನಮ್ಮ ರಾಜ್ಯ ಮಟ್ಟದಲ್ಲಿ ಆಣೆ ಪ್ರಮಾಣ ಪ್ರಹಸನ ನಡೆಯುತ್ತಿದ್ದಾಗ ನನಗೂ ಅವೆಲ್ಲಾ ನೆನಪಿಗೆ ಬಂತು. ನಮ್ಮೂರಲ್ಲಿ ಒಬ್ಬರಿದ್ದಾರೆ. ಅವರ ಬಳಿ ಯಾರಾದರೂ "ಒಂದು ನೂರು ರೂಪಾಯಿ ಇದ್ರೆ ಕೊಡು" ಅಂತ ಕೇಳಿದರೆ ಅವರು ಅದಕ್ಕೆ "ದೇವ್ರಾಣೆ ದಮಡಿ ಕಾಸೂ ಇಲ್ಲ ಮಾರಾಯ" ಎನ್ನುತ್ತಾರೆ ಲಾಗಾಯ್ತಿನಿಂದಲೂ. ಹಾಗೆ ಅವರು ಧೈರ್ಯವಾಗಿ ದೇವರನ್ನು ಆಣೆಕಟ್ಟಿ ತನ್ನ ಬಳಿ ಇರುವ ದುಡ್ಡನ್ನು ಇಲ್ಲ ಎನ್ನುತ್ತಲೇ ಬಂದಿದ್ದಾರೆ, ದೇವ್ರಾಣೆ ಕಟ್ಟಿದ್ದರಿಂದ ಯಾವ ಪರಿಣಾಮವೂ ಆಗಿಲ್ಲ ಅವರು ಜತನವಾಗಿ ಕಾಪಿಟ್ಟುಕೊಂಡು ಬಂದ ದುಡ್ಡಿನ ಗಂಟಿನ ಮೇಲೆ. ಇರಲಿಬಿಡಿ ನಮಗೆ ನಿಮಗೆ ಯಾತಕ್ಕೆ ಬೇರೆಯವರ ಗಂಟಿನ ಚಿಂತೆ. ನಮ್ಮೂರಲ್ಲಿ ಒಬ್ಬಾತನಿದ್ದ, ಆತ ಸಂಜೆಮುಂದೆ ಸ್ವಲ್ಪ ಗಳಾಸು ತೆಗೆದುಕೊಂಡು ರಂಗಾಗುತ್ತಿದ್ದ. ಆ ರಂಗಾದ ಸಮಯದಲ್ಲಿ "ಏಯ್ ಏನಾ ಮಾರಾಯ ನಿನ್ನಂಥೋರು ಹೀಗೆ ಕುಡಿದರೆ ಎಂತಾ ಕಥೆಯಾ" ಎಂದು ಯಾರಾದರೂ ಕೇಳಿದರೆ "ಅಮ್ಮನ ಮೇಲಾಣೆ ನಾನು ಕುಡಿಯದು ಬಿಟ್ಟು ಒಂದು ವರ್ಷ ಆತು’ ಎನ್ನುತ್ತಾ ಅರಾಮಾಗಿದ್ದ. ಮತ್ತೊಂದು ಘಟನೆ ಒಳ್ಳೆ ಮಜ ಇದೆ. ನನ್ನ ಮೊಬೈಲ್ ಕಾಣೆಯಾಯಿತು. ಅದಕ್ಕೆ ಕಾರಣ ಗ್ಯಾರೇಜ್ ಹುಡುಗ ಅಂತ ಪಕ್ಕಾ ಆಗಿಹೋಯಿತು. ಆತನ ಬಳಿ ವಿಚಾರಿಸಿದಾಗ ಆತ ಹಿಂದುಮುಂದು ನೋಡದೆ "ಧರ್ಮಸ್ಥಳದ ದೇವರಾಣೆ ನಾನು ಕದ್ದಿಲ್ಲ,ನಾನು ಅಂಥಹವನಲ್ಲ" ಎಂದು ಅಳತೊಡಗಿದ. ನನ್ನ ಜತೆಯಲ್ಲಿದವನೊಬ್ಬ "ಬೋ...ಮಗನೆ ನಿನಗೆ ಆಣೆ ಭಾಷೆ ಬೇರೆ ಕೇಡು, ತಲೆ ಬುಲ್ಡೆ ಬಿಚ್ಚೋ ತರಹ ಬಡಿತೇನೆ ನೋಡು ಈಗ " ಎನ್ನುತ್ತಾ ಕೈಯೆತ್ತಿಕೊಂಡು ಹೊಡೆಯಲು ಹೋದಾಗ "ಅಯ್ಯೋ ಹೊಡಿಬ್ಯಾಡಣ್ಣ ಮನೇಲಿ ಇದೆ ಮೊಬೈಲ್, ತರ್ತೀನಿ ಈಗ" ಎನ್ನುತ್ತಾ ಓಟ ಕಿತ್ತ. ಅದು ಕಳೆದು ಎರಡು ವರ್ಷ ಸಂದಿದೆ ಆತ ಅರಾಮಾಗಿ "ದಸ್ ನಂಬರ್ ಸ್ಪ್ಯಾನರ್ ಲಾರೇ..."ಎನ್ನುತ್ತಾ ಅರಾಂ ಆಗಿದ್ದಾನೆ. ಆಯ್ತು ಈಗ ನೇರವಾಗಿ ಹೇಳಹೊರಟಿರುವುದನ್ನು ಹೇಳಿಬಿಡುತ್ತೇನೆ ಕೇಳಿ.
ಸಿ ಎಂ ಎಂಡ್ ಮಾಜಿ ಸಿ ಎಂ ಆಣೆ ಪ್ರಮಾಣ ಮಾಡುತ್ತೇನೆಂದು ಜಗಜ್ಜಾಹೀರು ಮಾಡಿದಾಗ ನಿಜವಾಗಿ ಬೆಚ್ಚಿಬಿದ್ದವರು ವಿರೇಂದ್ರ ಹೆಗ್ಗಡೆಯವರಂತೆ. ಕಾರಣ ಇಬ್ಬರೂ ಸ್ಥಳಕ್ಕೆ ಬಂದು ಆಣೆ ಮಾಡಿ ವಾಪಾಸು ತೆರಳಿ ವಾರದೊಳಗೋ, ತಿಂಗಳೊಳಗೋ ಸಣ್ಣಪುಟ್ಟ ಬರ್ ಬರ್ ಭೇಧಿಯಿಂದ ಹಿಡಿದು ಬೃಹತ್ ಪ್ರಮಾಣದ ಯಾವುದೇ ತೊಂದರೆ ಆದರೆ ಸರಿ, ಕ್ಷೇತ್ರದ ಸತ್ಯಾಸತ್ಯತೆಯ ಬಗ್ಗೆ ಮತ್ತಷ್ಟು ರಕ್ಕೆಪುಕ್ಕ ಸಿಗುತ್ತದೆ. ಆದರೆ ಎನೂ ಆಗದೇ ಇದ್ದರೆ ...! ಆವಾಗ ಕ್ಷೇತ್ರದ ಆಣೆಗೆ ರಾಜ್ಯದಲ್ಲಿ ಸಿಕ್ಕಾಪಟ್ಟೆ ಹಿನ್ನಡೆ...! ತತ್ ಪರಿಣಾಮ ಕ್ಷೇತ್ರದ ಬೊಕ್ಕಸ....! ಇವೆಲ್ಲಾ ರಗಳೆಯೇ ಬೇಡ ಎಂದು ಫೋನ್ ಟೊಂಯ್ ಪಂಯ್ ಎಂದು ದಿಲ್ಲಿಯ ತಲೆಯವರೆಗೂ ಹರಿಬಿಟ್ಟರಂತೆ. ಅಲ್ಲಿಂದ ಗಡ್ಕರಿ ಯಡ್ಡಿಗೆ ಗುದ್ದಿದರಂತೆ ಎಂಬಲ್ಲಿಗೆ ಆಣೆಪ್ರಮಾಣ ಬಂದ್ ಆಯಿತೆಂದು ನನ್ನ ಮಿತ್ರನೊಬ್ಬ ಇಲ್ಲಿ ಆಣೆಪ್ರಮಾಣ ಮಾಡಿ ಹೇಳುತ್ತಿದ್ದಾನೆ. ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು.

ಆ ಭಗವಂತನದೇ ರಿಸ್ಕ್.




ಸುದ್ದಿ ಕೇಳಿ ಒಮ್ಮೆ ಕಂಪಿಸಿದೆ ನಾನು. ಆ ಕಂಪನ ತನ್ನಷ್ಟಕ್ಕೆ ಒಳಗಿನಿಂದ ಬಂದದ್ದು. ಅದು ತಣಿದು ವಾಸ್ತವಕ್ಕೆ ಬಂದಮೇಲೆ ವಿಚಾರಕ್ಕಿಳಿದೆ. ಈತನ ಹೆಸರು ಸತ್ಯನಾರಾಯಣ ಕರಾರುವಕ್ಕಾಗಿ ನನ್ನದೇ ವಾರಿಗೆ. ಊರು ತಲವಾಟ. ವೃತ್ತಿ ಕೃಷಿ. ಸಿಕ್ಕಾಪಟ್ಟೆ ಶ್ರಮಜೀವಿ. ಮಿಕ್ಕ ವಿಚಾರವೆಂದರೆ ದಿನನಿತ್ಯ ಪತ್ರಿಕೆಯಲ್ಲಿ ಬರುವಂತೆ "ಈತ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾನೆ". ಯಾರದೋ ಸುದ್ದಿಯಾಗಿದ್ದರೆ ಮುಂದಿನ ವಿಷಯದತ್ತ ಗಮನಹರಿಸಬಹುದಿತ್ತು. ಆದರೆ ನನಗೆ ಈತ ವಾರಿಗೆಯವನು ಹಾಗೂ ನಿತ್ಯ ಕಣ್ಣಿಗೆ ಕಾಣಿಸುವವನು. ಗಟ್ಟಿಮುಟ್ಟಾದ ಈ ದೇಹದಿಂದ ಜೀವ ಹೊರಡಲು ಕಾರಣವಾದದ್ದು ವಿದ್ಯುತ್. ಮನೆಯ ಪಕ್ಕದಲ್ಲಿ ಅರ್ಥಿಂಗ್ ವೈರ್ ಜೋತಾಡುತ್ತಿತ್ತು. ಮನೆಯ ಮೀಟರ್ ಸುಟ್ಟು ಆ ವೈರ್ ನಲ್ಲಿ ಕರೆಂಟ್ ಹರಿಯುತಿತ್ತು. ಜೋರು ಮಳೆಯಿಂದ ನಿಂತ ನೀರನ್ನು ಸಾರಾಗವಾಗಿ ಹರಿಯಕೊಡಲು ಹೋದವನು ತಂತಿ ಮುಟ್ಟಿದ. ಕೆಲಕ್ಷಣಗಳಲ್ಲಿ ಜೀವ ಹರಿದುಹೋಯಿತು. ಸರಿ ಸಾವು ನಮ್ಮ ಕೈಯಲ್ಲಿ ಇಲ್ಲ ಹುಟ್ಟೂ ನಮ್ಮದಲ್ಲ ಅಂತ ವೇದಾಂತ ಹೇಳಬಹುದು ಆದರೆ ಬದುಕಿರುವ ಆ ಮೂವರಿಗೆ ಸ್ವಲ್ಪ ಕಷ್ಟ. ಅದನ್ನು ಸಹಿಸುವ ಶಕ್ತಿ ಒನ್ಸ್ ಅಗೈನ್ ಆ ಭಗವಂತನದೇ ರಿಸ್ಕ್.

Sunday, June 26, 2011

ಹೌದೇ ಹೌದು ಇದು ಹಾಗೆ ಬೇಕಾದರೂ ಅರ್ಥ ಕೊಡುತ್ತದೆ.

ಕೆಲ ವರ್ಷದ ಹಿಂದೆ ಚಂದನ ಟಿವಿ ವಾಹಿನಿಯಲ್ಲಿ "ಬೆಳಗು" ಎಂಬ ಕಾರ್ಯಕ್ರಮದಲ್ಲಿ ನನಗೊಂದು ಅವಕಾಶ ಕೊಟ್ಟಿದ್ದರು ಕೊರೆದು ಬಿಸಾಕಲು. ಸರಿ ಬಿಡಿ ಅಲ್ಲಿ ಕಡಿದು ಕಟ್ಟೆ ಹಾಕಿದ್ದರ ಬಗ್ಗೆ ಹೇಳಿ ಗರಿ ಗರಿ ಒಂದೂವರೆ ಸಾವಿರ ರೂಪಾಯಿ ಚೆಕ್ ರೂಪದ ಹಣ ಜೇಬಿಗಿಳಿಸಿದ್ದಾಯಿತು ಅದರ ಕತೆ ಬಿಟ್ಟು ಅದೇಕೆ ಈಗ ನೆನಪಾಯಿತು ಎಂಬುದರ ಬಗ್ಗೆ ಹೊರಡೊಣ.
ಚಂದನ ವಾಹಿನಿಯ ಸಂದರ್ಶಕ ಕಾರ್ಯಕ್ರಮದ ಮುಂಚೆ ಪಳಪಳ ಮಿಂಚಿಸಲು ನಿಮ್ಮದೆ ಆದ ಒಂದು ವಾಕ್ಯದ ಹಿತನುಡಿ ಕೊಡಿ ಅಂತ ಕೇಳಿದರು. ಹಾಗೆಲ್ಲಾ ದಿಡೀರನೆ ಒಂದು ವಾಕ್ಯದ ಹಿತನುಡಿ ಕೊಡಲು ನಾನೇನು ಕಗ್ಗ ಬರೆದೆ ಡಿವಿಜಿಯೋ ಅಥವಾ ಈಗಿನ ಹಲವರ ಬಾಯಲ್ಲಿ ಹೊರಡುವ ಗ್ನಾನಿಯೋ...! ಅಲ್ಲವಲ್ಲ. ಆದರೂ ಎಂತದೋ ಒಂದು ಸಾಲು ಹೇಳಲೇಬೇಕೆಂದು ಅವರು ವಿನಂತಿಸಿದ ಪರಿಣಾಮವಾಗಿ ಸಿಕ್ಕಾಪಟ್ಟೆ ತ್ರಾಸು ತೆಗೆದುಕೊಂಡು ಹೇಳಿದೆ " ನಮ್ಮ ಇಂದಿನ ಯೋಚನೆಗಳು ನಾಳೆಯನ್ನು ಕಟ್ಟಿಕೊಡುತ್ತವೆ". ಹಾಗೆ ಹೇಳಿದವನು ಅಂದೇ ಮರತೆ. ಆದರೆ ಜನ ಮರೆಯಲಿಲ್ಲ. ಅದೆಲ್ಲಾ ಕಳೆದು ಒಂದು ವರ್ಷದ ನಂತರ ಪರಿಚಯದ ಜನರೊಬ್ಬರು "ಏಯ್ ನಿನ್ನ ಸಂದರ್ಶನ ಮತ್ತೆ ಡಿಡಿ ಯಲ್ಲಿ ಬಂದಿತ್ತು," ಅಂದರು. ಒಳಗೊಳಗೆ ಖುಷಿಯಾಗಿ "ಓಹೋ" ಎಂದೆ. ಮುಂದುವರೆಸಿದ ಅವರು " ಆದರೆ ನೀನು ಅಂದು ಹೇಳಿದ ಸ್ಲೋಗನ್ ಮಾತ್ರಾ ಮತ್ತೆ ಹಾಕ್ಲೇ ಇಲ್ವಪ್ಪ, ತುಂಬಾ ಚೆನ್ನಾಗಿತ್ತು ಅದು" ಎಂದರು. ನಾನು ಕಕ್ಕಾಬಿಕ್ಕಿ ಏನು ಹೇಳಿದ್ದೆ ಅಂತ ನನಗೆ ನೆನಪಿಲ್ಲ ಆದರೆ ಅವರಿಗೆ ನೆನಪಿದೆ, ಹಾಗಂತ ಆ ಸಾಲು ಎಲ್ಲಿಂದಲೋ ಕದ್ದಿದಲ್ಲ ತನ್ನಷ್ಟಕ್ಕೆ ನನ್ನಿಂದ ಹುಟ್ಟಿದ್ದು ಆದರೆ ನೆನಪಿಲ್ಲ. ನನ್ನ ತಡಬಡಾಯಿಸುವಿಕೆ ಅವರಿಗೆ ಅರ್ಥವಾಯಿತಿರಬೇಕು ಅವರೇ ಮತ್ತೆ ಅದೇ ಸಾಲನ್ನು ಹೇಳಿದರು, ಮತ್ತು ಅವರದೇ ಆದ ದಾಟಿಯಲ್ಲಿ ಅದನ್ನು ತುಂಬಾ ಚನ್ನಾಗಿ ವ್ಯಾಖ್ಯಾನಿಸಿದರು. ನಾನು ಅಷ್ಟೆಲ್ಲಾ ಅರ್ಥ ಇಟ್ಟು ಹೇಳಿದ್ದಂತೂ ಅದು ಆಗಿರಲಿಲ್ಲ ಆದರೆ ಅದೊಂದು ಸಾಲು ಹಿಡಿದು ಅವರು ಸುಮಾರು ಹೊಳವುಗಳನ್ನು ಅದರಮೇಲೆ ನೀಡಿದರು.
ನನ್ನಿಂದಲೇ ಹೊರಟ ಆ ಸಾಲುಗಳು ಆಕಾಶಕ್ಕೆ ನೆಗೆದು ಅವರಮನೆ ಟಿವಿಯಲ್ಲಿ ಕಂಡು ಅವರ ಮಿದುಳೊಳಗೆ ಮಥನಗೊಂಡು ವಿವಿಧ ಅರ್ಥ ಹೊಂದಿ ಮತ್ತೆ ನನಗೆ ಒಂದು ವರ್ಷದ ನಂತರ ಬಂದು, ನನಗೆ ಮರತೇ ಹೋಗಿರುವಾಗ ಕದ ತಟ್ಟಿತ್ತು. ಅಬ್ಬಾ ಈ ನೆನಪಿನ ಕೋಶಗಳ ತಾಕತ್ತೇ ಅಂತ ನನಗೆ ಆ ಕ್ಷಣ ಅನಿಸಿ ಇಲ್ಲಿಯವರೆಗೂ ಹಲಬಾರಿ ಕಾಡುತ್ತಿರುತ್ತದೆ. ಕಗ್ಗ ಬರೆದ ಡಿವಿಜಿಯವರಿಗೆ ಅವರ ಜೀವನದಲ್ಲಿ ಅವುಗಳನ್ನು ಪಾಲಿಸಲಾಗಲಿಲ್ಲವೇನೋ ಅಥವಾ ಅದರ ಅನುಭವ ಸಾರವನ್ನು ಜೀವನಕ್ಕೆ ಅಳವಡಿಸಿಕೊಳ್ಳಲಾಗಲಿಲ್ಲವೇನೋ ಆದರೆ ಓದಿದ ಹಲವರು ತಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿಟ್ಟುಕೊಂಡು ಬೇಕಾದ ಸಮಯದಲ್ಲಿ ಬಳಸಿಕೊಳ್ಳುತ್ತಿರಬಹುದು.
ಅದೇ ರೀತಿ ಮೊನ್ನೆ ಜಿ ಟಾಕ್ ಸ್ಟೇಟಸ್ ನಲ್ಲಿ ಹಾಗೆ ಸುಮ್ಮನೆ "ಕಂಡ ಕೂಡ್ಲೆ ಇಷ್ಟವಾಗೋರು ಆಮೇಲೆ ಕಷ್ಟವಾಗ್ತಾರೆ" ಅಂತ ಜಡಿದೆ. ದಿಗ್ವಾಸ್ "ಬಹಳ ಚನ್ನಾಗಿದೆ ನಿನ್ನ ಸ್ಟೇಟಸ್" ಅಂದ, ಲಕ್ಷ್ಮಿ "ನಿಮ್ಮ ಲವ್ ಎಟ್ ಫಸ್ಟ್ ಸೈಟ್ ಕತೆ ನಂಗೂ ಹೇಳ್ರಿ... ಕವಿತಂಗೆ(ನನ್ನ ಅರ್ದಾಂಗಿ) ಹೆದ್ರಿಕೋ ಬೇಡಿ, ನಾನೂ ಹೇಳಲ್ಲ " ಅನ್ನೋದೆ...!. ಅಯ್ಯ ಈ ಸ್ಲೋಗನ್ನಿಗೂ ಲವ್ ಎಟ್ ಫಸ್ಟ್ ಸೈಟ್ ಗೂ ಎತ್ತೆಣದೆತ್ತಣ ಸಂಬಂಧ ಅಂತ ನನಗೆ ಅನ್ನಿಸಿ ಹ ಹ ಹ ಎಂದಷ್ಟೇ ಹೇಳಿ ಟೈಪಿಸಿದೆ. ಆದರೆ ಕೆಲಕ್ಷಣಗಳ ನಂತರ ಪಕಪಕನೆ ಮಿಂಚಿತು ಹೌದೇ ಹೌದು ಇದು ಹಾಗೆ ಬೇಕಾದರೂ ಅರ್ಥ ಕೊಡುತ್ತದೆ. ಲಗುಬಗೆಯಿಂದ ಸಿಕ್ಕಾಪಟ್ಟೆ ಅನಾಹುತವಾಗುವುದರ ಮೊದಲು "ಕಿವಿಯಲ್ಲಿ ಒಂದು ಹುಳ ಬಿಟ್ರೆ ಮಂಡೆಯಲ್ಲಿ ನೂರು ಹುಳ ತುಂಬಿಕೊಳ್ಳುತ್ತೆ" ಅಂತ ಸ್ಟೇಟಸ್ ಬದಲಾಯಿಸಿದೆ. ಇದಕ್ಕೂ ಇನ್ನು ಯಾವ್ಯಾವ ಅರ್ಥ ಇದೆಯೋ ಯಾರು ಬಲ್ಲ? ಅವರವರ ಭಾವಕ್ಕೆ...ಅವರವರ ಭಕುತಿಗೆ ಅಂದುಬಿಡೋಣವೆ..?