Saturday, July 3, 2010

ಗರಗತ್ತ ಇದು ನಿಸರ್ಗದತ್ತ


"ದೇವರು ಪೀಠ ಚೊಕ್ಕು ಮಾಡಕು ಗರಗತ್ತನ ಎಲೆ ಕೊಯ್ಕಂಡು ಬಾರಾ ಅಪಿ" ಅಂತ ಮಲೆನಾಡಿನ ಮನೆಯ ಮಹಿಳೆ ಹೇಳಿದ ಕೂಡಲೆ, ಮನೆ ಮಗ ಹಿತ್ತಲಿಗೆ ಹೋಗಿ ಒಂದಿಷ್ಟು ಗರಗತ್ತನ ಎಲೆ ಕೊಯ್ದು ತಂದು ಗುಡ್ಡೆಹಾಕುತ್ತಾನೆ. ರಾಶಿ ಬಿದ್ದ ಎಲೆಗಳನ್ನು ಕಂಡು ಮನೆ ಒಡತಿ ಫ಼ುಲ್ ಖುಷ್. ಹಾಗಾದರೆ ಮರದ ದೇವರು ಪೀಠ ಚೊಕ್ಕಟವಾಗಿಸುವುದಕ್ಕೂ ಈ ಎಲೆಗೂ ಏನು ಸಂಬಂಧ?, ಗರಗತ್ತ ಎಂದರೆ ಏನು? ಮುಂತಾದವುಗಳನ್ನು ತಿಳಿಯಲು ಮುಂದಿನದನ್ನು ಓದಿ ಮಾಹಿತಿ ಪಡೆಯಬೇಕಿದೆ.
ಮರದ ಪೀಠೋಪಕರಣಗಳಿಗೆ ಅಂತಿಮ ಹಂತದ ಮೆರಗುಕೊಡಲು ಮರಳುಕಾಗದ ಅತ್ಯವಶ್ಯಕ. ಸಾಮಾನ್ಯವಾಗಿ ಹಾರ್ಡ್ ವೇರ್‌ಶಾಪ್‌ಗಳಲ್ಲಿ ಈ ಸ್ಯಾಂಡ್‌ಪೇಪರ್ ದೊರಕುತ್ತದೆ. ನುಣುಪು ಹೆಚ್ಚಲು ಮರಳುಕಾಗದಕ್ಕೆ ತಯಾರಕರು ವಿವಿಧ ರೀತಿಯ ಸಂಖ್ಯೆಗಳನ್ನು ಹಾಗೂ ಮಾದರಿಗಳನ್ನು ಕೊಟ್ಟಿದ್ದಾರೆ. ಮರಗೆಲಸದವರು ತಮ್ಮ ಕೆಲಸಕ್ಕನುಗುಣವಾಗಿ ಅದನ್ನು ಬಳಸುತ್ತಾರೆ. ಇದು ಮನುಷ್ಯರು ತಯಾರುಮಾಡಿದ ಮರಳುಕಾಗದದ ಕತೆಯಾಯಿತು. ಆದರೆ ಪ್ರಕೃತಿ ಮನುಷ್ಯನಿಗಿಂತ ಚಂದವಾಗಿ ಮರವೊಂದರ ಎಲೆಯಲ್ಲಿ ಈ ವ್ಯವಸ್ಥೆಯನ್ನು ಅಭೂತಪೂರ್ವವಾಗಿ ಸೃಷ್ಟಿಸಿದೆ. ಆ ಮರದ ಹೆಸರು "ಗರಗತ್ತ".
ಮಲೆನಾಡಿನ ಹಳ್ಳಿ ಮನೆಗಳಲ್ಲಿ ಲಾಗಾಯ್ತಿನಿಂದಲೂ ಈ ಗರಗತ್ತದ ಮರದ ಎಲೆಗಳನ್ನು ಮರದ ಪೀಠೋಪಕರಣಗಳನ್ನು ನುಣುಪು ಗೊಳಿಸಿ ಪಳಪಳ ಹೊಳೆಯುವಂತಾಗಲು ಬಳಸುತ್ತಾ ಬಂದಿದ್ದಾರೆ. ಗರಗತ್ತನ ಎಲೆಯ ಹಿಂಬಾಗ ಜೀರೋ ನಂಬರ್ ಸ್ಯಾಂಡ್ ಪೇಪರ್ ಕೆಲಸ ಮಾಡಿದಂತೆ ಮಾಡುವುದರಿಂದ ಹಾಗೂ ಗರಗಸದಂತೆ ಕೆಲಸ ಮಾಡುವುದರಿಂದ "ಗರಗತ್ತ" ಎಂಬ ಹೆಸರು ಬಂದಿದೆ . ಸಣ್ಣ ಪ್ರಮಾಣದ ನೊರೆಯೂ ಇದರಿಂದ ಉಕ್ಕುತ್ತದೆ, ಹಾಗಾಗಿ ಸೋಪಿನ ಪುಡಿಯ ಅಗತ್ಯ ಇರುವುದಿಲ್ಲ. ಮನೆಗೊಂದು ಮರ ಇದ್ದರೆ ಕಾಸು ಖರ್ಚಿಲ್ಲದೆ ಮರಳುಕಾಗದ ಸಿಗುತ್ತದೆ. ಮರದ ಅಷ್ಟೂ ಸಾಮಗ್ರಿಗಳನ್ನು ಹೊಳಪು ಬರುವಂತಾಗಲು ಇಂದಿಗೂ ಬಳಸುವುದು ಈ ಗರಗತ್ತನ ಎಲೆಗಳನ್ನೇ ಎಂದರೆ ಆಶ್ಚರ್ಯವಾಗುತ್ತದೆ. ಪ್ರಕೃತಿಯೇನೋ ಅದ್ಬುತವನ್ನು ನೀಡಿದೆ ಆದರೆ ಅತಿಯಾಸೆಗೆ ಬೀಳದೆ ಉಳಿಸಿಕೊಂಡು ಹೋಗುವುದು ಪ್ರಿಯರ ಕೆಲಸವಾಗಬೇಕು.
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ)

Friday, July 2, 2010

ರೊಟ್ಟಿಗಾಗಿ ಜೇನುರೊಟ್ಟು

ಬೇಸಿಗೆ ಮುಗಿದು ಮಳೆಗಾಲ ಶುರುವಾಗುತ್ತದೆ ಎನ್ನುವಾಗ ಮಲೆನಾಡಿನ ರಸ್ತೆಬದಿಯಲ್ಲಿ ನಿಮಗೆ ಹೀಗೆ ಮೂರಡಿ ಅಗಲದ ಗೋಣಿಯಂತಹ ವಸ್ತುವನ್ನು ಹಿಡಿದ ಜನ ನಿಮಗೆ ಕಾಣಸಿಗಬಹುದು. ಅದೇನದು ಎಂಬ ನಿಮ್ಮ ಆಲೋಚನೆ ಹತ್ತಿರ ಹೋದರಷ್ಟೆ ಪತ್ತೆಯಾಗುತ್ತದೆ. ಅದು ಗೋಣಿ ಯಲ್ಲ ಗೋಣಿಯನ್ನು ಹೋಲುವ ಹೆಜ್ಜೇನು ತತ್ತಿ.
ಮಲೆನಾಡಿನ ಮುಂಗಾರಿನ ಮಳೆಯ ಅಬ್ಬರಕ್ಕೆ ಹೆಜ್ಜೇನು ಊರುಬಿಟ್ಟು ಬಯಲುಸೀಮೆ ಅಥವಾ ಅರೆಮಲೆನಾಡಿನತ್ತ ಕಂಬಿಕೀಳುತ್ತವೆ. ಹಾಗಾದಾಗ ದೊಡ್ಡ ಮರಗಳಲ್ಲಿ ಇಂಥಹ ಮೂರು ಅಡಿ ಅಗಲದ ಹತ್ತಾರು ಜೇನು ರೊಟ್ಟುಗಳು ಖಾಲಿ ಬಿದ್ದಿರುತ್ತವೆ. ಕಾಡು ತಿರುಗುವ ಊರುಮಂದಿ ಮರಹತ್ತಿ ಇವುಗಳನ್ನೆಲ್ಲಾ ಸಂಗ್ರಹಿಸಿ ಮನೆಯಾಕೆಗೆ ನೀಡುತ್ತಾರೆ. ಈ ಹೆಜ್ಜೇನು ತತ್ತಿಗಳನ್ನು ಸೂಕ್ತರೀತಿಯ ಕ್ರಮದಲ್ಲಿ ಕಾಯಿಸಿ ಇದರಿಂದ ಜೇನು ಮೇಣವನ್ನು ತೆಗೆದು ಮಾರಾಟ ಮಾಡುತ್ತಾರೆ. ಒಂದೊಂದು ತತ್ತಿಯಿಂದ ಕಡಿಮೆಯೆಂದರೂ ಕಾಲು ಕೆಜಿ ಯಷ್ಟು ಜೇನು ಮೇಣ ದೊರಕುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ ೩೦೦ ರಿಂದ ೪೦೦ ರೂಪಾಯಿಗೆ ಬಿಕರಿಯಾಗುವ ಜೇನುಮೇಣ ಮನೆಯ ವಾರದ ಖರ್ಚನ್ನು ನೀಗಿಸುತ್ತದೆ. ಹೀಗಿದೆ ಜೇನು ರೊಟ್ಟಿಯಿಂದ ರೊಟ್ಟಿ ಹುಟ್ಟುವ ಕತೆ.
(ಇಂದಿನ ವಿ.ಕ. ಲವಲವಿಕೆಯಲ್ಲಿ ಪ್ರಕಟಿತ)
http://www.vijaykarnatakaepaper.com//svww_showarticle.php?art=20100702l_008101003

Tuesday, June 29, 2010

ನಮ್ಮ ಮನೆ

ನಮ್ಮ ಮನೆ ಅಂತ ಎಲ್ಲರಿಗೂ ಹೆಮ್ಮೆ ಇರುತ್ತದೆ. ಹಾಗೆಯೇ ನನಗೂ ಇದೆ . ಹಾಗಾಗಿ ಆವಾಗಾವಾಗ ಗೂಗಲ್ ಅರ್ಥ್ ಸಹಾಯದಿಂದ ಹೀಗೆ ಮನೆ ಮೇಲೆ ಹಾರಾಟ ನಡೆಸುತ್ತಾ ಇರುತ್ತೇನೆ. ಹೀಗೆ ಮನೆಯಲ್ಲಿಯೇ ಕುಳಿತು ಪ್ರಪಂಚ ಸುತ್ತುವಾಗ ಅದರ ಮಜ ಬಲ್ಲವನೇ ಬಲ್ಲ. ಮನಸ್ಸು ವಿಶಾಲವಾಗಬೇಕಾದರೆ, ಜ್ಞಾನ ಹೆಚ್ಚಬೇಕಾದರೆ ಪ್ರಪಂಚ ಸುತ್ತಬೇಕಂತೆ. ಹೀಗೆ ಮನೆಯಲ್ಲಿಯೇ ಕುಳಿತು ಪ್ರಪಂಚ ಸುತ್ತುವ ಅವಕಾಶ ಸಿಕ್ಕಾಗ ಕಳೆದುಕೊಳ್ಳುವುದೆಂತು ಎಂದು ಈ ಕೆಲಸ. ಬಜ್ಪೆಯಲ್ಲಿ ವಿಮಾನ ನಿಲ್ದಾಣದ ಗೂಗಲ್ ಅರ್ಥ ನೋಟ ಹೀಗೆ ಏನೆಲ್ಲಾ ಇರುತ್ತದೆ ಅಲ್ಲಿ, ಅದಿರಲಿ ವಿಷಯಕ್ಕೆ ಬರೋಣ.
ಮನುಷ್ಯನ ಮನಸ್ಸು ಒಂದು ಕುಬ್ಜ ಮತ್ತೊಂದು ಎತ್ತರದ್ದು. ಕುಬ್ಜವಾಗಿದ್ದಾಗ ಮನೆಯ ಗಲಾಟೆ, ಪಕ್ಕದ ಮನೆಯ ಜಗಳ, ಊರಿನ ಸಮಸ್ಯೆ, ವ್ಯಕ್ತಿಯ ದೋಷ,ರಾಜ್ಯದ ರಾಜಕೀಯ ದೇಶದ ಪರಿಸ್ಥಿತಿ ಹೀಗೆಲ್ಲಾ ಯೋಚಿಸುತ್ತಾ ಹೋಗುವ ಸಮಯವೇ ಹೆಚ್ಚು. ಅದರಿಂದ ಗೊಜಲು ಗೊಜಲೇ ಹೊರತು ಮಜ ಇಲ್ಲ. ಎತ್ತರದ ಮನಸ್ಥಿತಿಗೆ ಇವೆಲ್ಲಾ ರಗಳೆ ಅನಿಸುತ್ತದೆ. ಆ ಮನಸ್ಥಿತಿಯ ಜನರು ಯೋಚಿಸುವ ಮಜವೇ ಬೇರೆ. ತಲುಪುವ ಮಟ್ಟವೇ ಬೇರೆ . ಅದರಿಂದ ಅವರ ಸ್ವಂತಕ್ಕೆ ಪ್ರಯೋಜನ ಬಹಳ, ಸಮಾಜಕ್ಕೆ ತೊಂದರೆಇಲ್ಲ.
ಸುಧಾದಲ್ಲಿ ಒಂದು ಲೇಖನ ಬಂದಿತ್ತು. ಮಿದುಳಿನ ಜೀವ ಕೋಶಗಳ ಸಂಖ್ಯೆ ಹೆಚ್ಚಿಸಲು ಸುಲಭಕರವಾದ ವ್ಯಾಯಾಮವೆಂದರೆ, ಕಣ್ಮುಚ್ಚಿ ಕುಳಿತು ನಮ್ಮನ್ನು ನಾವು ಮೇಲಿಂದ ಕಲ್ಪನೆಮಾಡಿಕೊಳ್ಳುವುದು. ನಂತರ ನಮ್ಮ ಮನೆಯನ್ನು ಹಾಗೆ ಕಲ್ಪಿಸಿಕೊಳ್ಳುವುದು, ನಂತರ ಊರು ಆನಂತರ ದೇಶ ಹಾಗೆ ಪ್ರಪಂಚ. ಹೀಗೆ ಕಲ್ಪಿಸಿಕೊಳ್ಳುವುದರಿಂದ ಮಿದುಳಿನ ಜೀವ ಕೋಶಗಳ ಹೆಚ್ಚು ವಿಕಸನ ಗೊಂಡು ವಿಷಯ ವಿಚಾರಗಳಿಗೆ ಸಹಾಯ ವಾಗುತ್ತದೆ ಎಂದು.ಆದರೆ ಇಲ್ಲಿ ಸಮಸ್ಯೆ ಇದೆ. ನಾವು ನಮ್ಮ ಮನೆಯನ್ನು ಮೇಲಿನಿಂದ ನೋಡಿರುವುದಿಲ್ಲ. ಹಾಗಾಗಿ ಕಲ್ಪನೆ ಅಸ್ಪಷ್ಟ. ನಾವು ಓಡಾಡಿದ ಭೂ ಮಾರ್ಗಗಳ ಆಧಾರದ ಮೇಲೆ ಕಲ್ಪಿಸಿಕೊಳ್ಳಬೇಕು. ಆಗ ಫಲಿತಾಂಶ ಅಸ್ಪಷ್ಟ. ಅದಕ್ಕೆ ಪರಿಹಾರ ಈ ಗೂಗಲ್ ಅರ್ಥ್ ನ ಪಕ್ಷಿನೋಟ.
ಹೀಗೆಲ್ಲಾ ಇದೆ, ಸಿಕ್ಕಷ್ಟು ಅವರವರ ಪುಣ್ಯ ನಮ್ಮ ಮನೆ ಅದರ ಪಕ್ಷಿನೋಟದ ಮಜ ನನಗಂತೂ ಸಿಕ್ಕಿದೆ. ಕಣ್ಬಿಟ್ಟಾಗಲೂ ಮತ್ತು ಕಣ್ಮುಚ್ಚಿದಾಗಲೂ. ಇನ್ನು ಸಿಕ್ಕಾಪಟ್ಟೆ ಜೀವ ಕೋಶ ಬೆಳೆದು ಮಂಡೆ ಒಡೆದು ಹೋಗುತ್ತದೆಯೋ ಕಾದುನೋಡಬೇಕು

ಹೌದು ಇದು ಸಿಗಡಿ


ಹೌದು ಇದು ಸಿಗಡಿ ಸಾಕಾಣಿಕಾ ಕೆರೆಗಳು. ಗಿರಿಗಿಟ್ಟಿಗಳು ನೀರಿನ ಆಮ್ಲಜನಕ ಮಟ್ತ ಹೆಚ್ಚಿಸಲೋಸುಗ ಇರುವಂತಹವು. ಇವು ಉಪ್ಪುನೀರಿನ ಸಿಗಡಿಯಂತೆ. ತಿನ್ನಲು ತುಂಬಾ ರುಚಿಯಂತೆ.ಕೆಜಿ ಗೆ ೩೫೦ ರೂಪಾಯಿಯಂತೆ. ಹೀಗಿದೆ ಅಂತೆ ಕಂತೆಗಳ ಸಂತೆ. ಕುಮುಟಾ ಹೊನ್ನಾವರ ರಸ್ತೆಯಲ್ಲಿ ಕಂಡ ಇದು ಕುತೂಹಲ ಕೆರಳಿಸಿತ್ತು.

Sunday, June 27, 2010

ನಾಲ್ಕು ಹನಿ

ಸಂಸಾರಿಯ ಸಾರ

ಅಡುಗೆ ಭಟ್ಟರೊಯ್ಯುವರು
ಯಜ್ಞ ಸುಟ್ಟವರೊಯ್ಯುವರು
ಸರ್ವಬಿಟ್ಟವರೊಯ್ಯುವರು
ಸಂಸಾರಿಯಿಂದ

ಕನ್ನಡವೆಂದರೆ.......
ಹುಡುಗ ಹೇಳಿದ
"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"
ಹುಡುಗಿ ಹೇಳಿದಳು
"ಎನ್ನದಿದ್ದರೂ ..................."

ರಾಜಕೀಯವೆಂದರೆ
ರಾವಣ
ರಾಸಂಧ
ಕೀಚಕ
ಮರುಗಳಕೂಟ

ನಾನ್ಯಾರು..?

"ಪ್ರಿಯೇ ಹೃದಯ ಶ್ರೀಮಂತಿಕೆಯಲ್ಲಿ
ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಹಾಗಾದರೆ ನಾನು ಟಾಟಾ ಬರ್ಲಾ"
ವೇದಿಕೆಯಲ್ಲಿದ್ದವರು ಕವನ ಓದಿದ ಕವಿಯ ಕರೆದು ಹೇಳಿದರು
ಇದು ದುಂಡಿರಾಜರ ಹನಿಗವನ
ಕವಿ ಹೇಳಿದ "ನಾನೇ ದುಂಡಿರಾಜ"
ಅಲ್ಲಿಯೇ ಇದ್ದ ದುಂಡಿರಾಜರು ಕೇಳಿದರು
ಹಾಗಾದರೆ ನಾನ್ಯಾರು?.