Friday, January 23, 2009

ಚಡ್ಡಿಯ ಬಣ್ಣ ಮತ್ತು ಒಳ್ಳೆಯ ಊಟ

ಹೀಗೆಲ್ಲಾ ಕೇಳುತ್ತಿದ್ದೀನೆಂದು ಬೈಯ್ದುಕೊಳ್ಳಬೇಡಿ.ಅವೆಲ್ಲಾ ಹಾಗೆ ಸುಮ್ಮನೆ.

ಈಗ ಇದನ್ನು ಓದುತ್ತಿರುವ ನೀವು ಹಾಕಿಕೊಂಡ ಒಳ ಚಡ್ದಿಯ ಬಣ್ಣ ಯಾವುದು?. ಇಂದು ಬೆಳಿಗ್ಗೆ ತಿಂದ ತಿಂಡಿ ಏನು?. ಮಧ್ಯಾಹ್ನ ಮಾಡಿದ ಊಟಕ್ಕೆ ಏನೇನೂ ಸೈಡ್ಸ್ ಇತ್ತು. ಯಾವುದದು?. ಇವತ್ತು ಮಾಡಿದ ಸ್ನಾನದಲ್ಲಿ ಎಷ್ಟು ಬಾರಿ ಸೋಪನ್ನು ಕೈಗೆತ್ತಿಕೊಂಡಿದ್ದೀರಿ? . ಇಂತಹ ಪ್ರಶ್ನೆಗಳನ್ನು ನಾನು ಎದುರಿಗಿದ್ದು ಕೇಳಿದ್ದರೆ ತಟ್ಟಿಬಿಡುವಷ್ಟು ಕೋಪ ಬರುತ್ತಿತ್ತು. ಹೋಗಿ ಹೋಗಿ ಒಳಚಡ್ದಿಯ ಬಣ್ಣ ಕೇಳುತ್ತಾನಲ್ಲ ಇಂವ ಎಂತಹ ಜನ ಅಂತ ಅಂದುಕೊಳ್ಳಬೇಕಾದ್ದೆ. ಇರಲಿ ಮುಂದೆ ನಾನು ಬರೆಯುತ್ತಾ ಹೋದಾಗ ಆ ಪ್ರಶ್ನೆಗಳ ಒಳಾರ್ಥ ತಿಳಿದಾಗ ಎಲ್ಲಾ ತಿಳಿಯಾಗುವುದು.

ಹೀಗೆ ದಿಡೀರನೆ ಒಳ ಚಡ್ಡಿಯ ಬಣ್ಣ ಕೇಳಿದಾಗ ಹೇಳಲು ಶೇಕಡಾ ತೊಂಬತ್ತೊಂಬತ್ತು ಜನಕ್ಕೆ ಆಗುವುದಿಲ್ಲ. ನಮ್ಮದೇ ಚಡ್ಡಿ ನಾವೇ ಹಾಕಿಕೊಂಡಿದ್ದು ನಾವೇ ಕೊಂಡು ತಂದಿದ್ದು ಆದರೆ ಈ ಗಳಿಗೆಯಲ್ಲಿ ಅದರ ಬಣ್ಣ ನೆನಪಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಅವೆಲ್ಲ ದಿನನಿತ್ಯ ನಡೆಯುವ ಹಾಗೂ ಯಾಂತ್ರಿಕವಾಗಿ ನಡೆಯುವ ಕೆಲಸಗಳು. ಅವುಗಳನ್ನು ನಾವುಗಳು ಎಲ್ಲೋ ಆಲೋಚಿಸುತ್ತಾ ಮಾಡುತ್ತೇವೆ. ಸರಿ ಬಿಡಿ ಚಡ್ಡಿಯದ್ದು ಹಾಗೆ ಬಿಟ್ಟುಬಿಟ್ಟರೆ ಓಕೆ ನಷ್ಟವೇನೂ ಇಲ್ಲ. ಆದರೆ ಇಂತಹ ವೇಗಭರಿತ ದಿನಗಳಲ್ಲಿ ಊಟವನ್ನೂ ನಾವು ಹಾಗೆ ಮಾಡುತ್ತಿದ್ದೇವಾ ಎಂಬ ಅನುಮಾನ ನನಗೆ. ಯಾವುದೋ ಧಾವಂತದಲ್ಲಿ ಕೆಲಸದ ಒತ್ತಡದಲ್ಲಿ ಒಂದಿಷ್ಟು ಗಬಗಬನೆ ತಿಂದು ದೇಹಕ್ಕೆ ಅನ್ಯಾಯ ಮಾಡುತ್ತಿದ್ದೇವಾ? ಎಂಬ ಚಿಂತೆ.

ನಿತ್ಯ ಮನಸ್ಸಿನ ನೆಮ್ಮದಿಗೆ ದೇವರಪೂಜೆಯಂತೆ ದೇಹದ ಸುಸ್ಥಿಗೆ ಊಟ. ಅದು ದೇಹ ದ ಪೂಜೆ ಎಂಬಂತೆ ಮಾಡಬೇಕು. ನಾವು ಈ ಪ್ರಪಂಚದಲ್ಲಿ ನೋಡಬೇಕು , ಓಡಬೇಕು ಏನನ್ನಾದರೂ ಮಾಡಬೇಕು ಅಂದಾದಲ್ಲಿ ದೇಹವಿಲ್ಲದೆ ಅಸಾಧ್ಯ. ಆದರೆ ಮನಸ್ಸಿನ ಲೆಕ್ಕಾಚಾರದಲ್ಲಿ ದೇಹವನ್ನು ಬಹುಪಾಲು ಜನರು ಕಡೆಗಣಿಸುತ್ತಿದ್ದಾರೆ ಎಂಬುದು ಪರಮ ಸತ್ಯ. ಒಂದು ಒಳ್ಳೆಯ ಊಟ ಮಾಡಬೇಕು ಅದಕ್ಕೆ ಕನಿಷ್ಟ ಕಾಲು ಗಂಟೆ ವ್ಯಯಿಸಬೇಕು ಚಪ್ಪರಿಸಿ ಚಪ್ಪರಿಸಿ ತಿನ್ನಬೇಕು, ಉಪ್ಪಿನಕಾಯಿ ನೆಕ್ಕಿ ನಾಲಿಗೆ ಲೊಚ್ ಅನ್ನಿಸಬೇಕು. ತಂಬುಳಿಯಲ್ಲಿ ಸಿಗುವ ಒಂದೊಂದೇ ಸಾಸಿವೆ ಕಾಳನ್ನು ಹೆಕ್ಕಿ ತಿಂದು ಮಜ ಅನುಭವಿಸಬೇಕು. ಊಟವಾದಮೇಲೆ ಡರ್ ಅಂತ ತೇಗಬೇಕು. ಹಾಗೂ ಹೀಗೆ ಊಟ ಮಾಡುವಷ್ಟು ಹೊತ್ತು ಖಡಾಖಂಡಿತವಾಗಿ ಹೊರಪ್ರಪಂಚ, ಭವಿಷ್ಯದ ಜೀವನ, ಬ್ಯಾಂಕ್ ಬ್ಯಾಲೆನ್ಸ್ ಅತಂತ್ರ ನೌಕರಿ ಯಾವುದೂ ನೆನಪಿಗೆ ಬಾರದಷ್ಟು ತನ್ಮಯರಾಗಬೇಕು. ಅದು ನಿಮ್ಮ ದೇಹಕ್ಕೆ ನೀವು ಸಲ್ಲಿಸುವ ಪೂಜೆ. ಅಲ್ಲಿ ಮನಸ್ಸು ಕೇಂದ್ರೀಕೃತವಾಗುತ್ತದೆ. ಮತ್ತೆ ಊಟವಾದ ಮೇಲೆ ಹೊಸ ಹುರುಪು ಬರುತ್ತದೆ.

ಈ ಊಟಕ್ಕೆ ಮೊದಲು ಒಂದು ಸ್ನಾನಾಂತ ಆಗುತ್ತದೆಯಲ್ಲ ಅದೂ ಕೂಡ ಹಾಗೆಯೇ. ತೆಗೆದುಕೊಳ್ಳುವ ಸಮಯ ಹತ್ತೇ ನಿಮಿಷವಾದರೂ ಅಲ್ಲಿ ಸ್ನಾನದಲ್ಲಿ ಮುಳುಗಿಹೋಗಿಬಿಡಬೇಕು. ಸ್ನಾನದ ನಂತರ ಚಂದವಾಗಿ ಗಮನಿಸಿ ಬಟ್ಟೆ ಹಾಕಿಕೊಳ್ಳಬೇಕು. ಈ ಉತ್ತಮ ದೇಹ ಕೊಟ್ಟ ಭಗವಂತನಿಗೆ ದೇಹ ಪೂಜೆಯ ಮೂಲಕ ತ್ಯಾಂಕ್ಸ್ ಅನ್ನಬೇಕು.

ಅದು ಆಗಲಿಲ್ಲವೆಂದಾದಾಗ ನಮಗೆ ಬೆಳಿಗ್ಗೆ ಕಾಫಿ ಕುಡಿಯುವಾಗ ಸ್ನಾನದ ಯೋಚನೆ ಸ್ನಾನ ಮಾಡುವಾಗ ಬಾಸ್ ನ ಯೋಚನೆ ತಿಂಡಿ ತಿನ್ನುವಾಗ ಟ್ರಾಫಿಕ್ ನ ಯೋಚನೆ ಆಫೀಸಿಗೆ ಹೋಗಿ ಕೂತಾಗ ಮನೆಯ ಯೋಚನೆ ಹೀಗೆ ನಾವು ಮಾಡುತ್ತಿರುವ ಕೆಲಸದ ಮುಂದೆ ಅಥವಾ ಹಿಂದೆ ಯೋಚನೆಗಳು ಓಡಾಡುತ್ತಿರುತ್ತವೆ.

ಆವೆಲ್ಲಾ ಚಂದ ಇರಬೇಕು ಎಂದಾದರೆ ವರ್ತಮಾನಕ್ಕೆ ಮನಸ್ಸನ್ನು ಎಳೆತರುವ ಸ್ನಾನ ಊಟ ಮುಂತಾದ ಸುಲಭ ವಿಧಾನವನ್ನು ಒಂದೇ ಒಂದು ದಿನ ಆಚರಿಸಿ ನೋಡಿ ಆವಾಗ ನಿಮಗೆ ಮಾಡಿದ ಊಟ ಹಾಕಿದ ಚಡ್ಡಿ ಬಳಸಿದ ಸೋಪು ಎಲ್ಲಾ ನೆನಪಿರುತ್ತದೆ ಹಾಗೂ ಅ ಖುಷಿ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಕಾಣುತ್ತದೆ.

ಅಂತಿಮವಾಗಿ :ಇವತ್ತು ಹಾಕಿದ ಚಡ್ದಿಯ ಬಣ್ಣ ಸೋಪಿನ ಲೆಕ್ಕ ಊಟದ ಸೈಡ್ಸ್ ಸರಿಯಾಗಿ ಹೇಳಿದವರಿಗೆ ಈ ಬರಹ ಅಗತ್ಯ ಇಲ್ಲ. ಹ್ಯಾಪಿ ಲೈಫ್ ನಿಮ್ಮದು . ಶುಭ ದಿನ ಎಲ್ಲರಿಗೂ

Thursday, January 22, 2009

ಹಳ್ಳಿಯ ದೇವಸ್ಥಾನಗಳು ಮತ್ತು ಶತಒರಟ ನಾಸ್ತಿಕರು

ನಮ್ಮ ಹಳ್ಳಿಗಳಲ್ಲಿ ಊರಿಗೊಂದು ದೇವಸ್ಥಾನಗಳು ಇರುತ್ತವೆ. ಅಲ್ಲಿ ಗ್ರಾಮಸ್ಥರೆಲ್ಲರೂ ವರಾಡ ಎಂಬ ರೂಪದಲ್ಲಿ ಹಣ ಸಂಗ್ರಹಿಸಿ ಒಬ್ಬ ಅರ್ಚಕರನ್ನು ನಿಯಮಿಸಿ ಪೂಜೆ ಪುನಸ್ಕಾರ ನಡೆಸಿ , ವಾರ್ಷಿಕ ಹಬ್ಬಗಳನ್ನು ಅಲ್ಲಿ ಆಚರಿಸಿ ಸಮೂಹ ನೆಮ್ಮದಿ ಹೊಂದುತ್ತಾರೆ. ಊರಿನ ಜನ ಒಂದೆಡೆ ಸೇರಲು ತಮ್ಮ ಸಂಸಾರ ಜಂಜಡಗಳನ್ನು ಮರೆಯಲು ಮಾಡಿಕೊಂಡ ಪುರಾತನ ವ್ಯವಸ್ಥೆ ಅದು. ಆದರೆ ಇತ್ತೀಚಿನ ದಶಕಗಳಲ್ಲಿ ಈ ಸ್ವಘೋಷಿತ ಬುದ್ದಿಜೀವಿಗಳೆಂಬ ಜನರ ಸಂಖ್ಯೆ ಜಾಸ್ತಿಯಾದನಂತರ ಅದೇ ದೇವಸ್ಥಾನಗಳು ಬಹಳಷ್ಟು ಊರುಗಳಲ್ಲಿ ರಾಜಕೀಯ ಕೇಂದ್ರಗಳಾಗಿರುವುದು ಅದರ ಮೂಲ ಕಲ್ಪನೆಗೆ ಬಹಳ ಧಕ್ಕೆತಂದಿದೆ. ನೆಮ್ಮದಿಯ ತಾಣಗಳಾಗಬೇಕಿದ್ದ ದೇವಸ್ಥಾನಗಳಿಂದಾಗಿ ಪಾರ್ಟಿಪಂಗಡಗಳು ಹುಟ್ಟಿ ಸಮಸ್ಯೆಯ ಹುಟ್ಟಿನ ಜಾಗವಾಗುತ್ತಿದೆ. ದೇವರು ಇದ್ದಾನೋ ಇಲ್ಲವೋ ಎಂಬ ಜಿಜ್ಞಾಸೆಗೆ ಉತ್ತರಹುಡುಕ ಹೊರಡುವುದಕ್ಕಿಂತ ಹಾಗೊಂದು ಇದ್ದಾನೆ ಎಂಬ ನಂಬಿಕೆ ನಮ್ಮ ಮಾನಸಿಕ ಧೈರ್ಯವನ್ನು ಹೆಚ್ಚಿಸಿ ನಮಗೆ ಉಮೇದುಕೊಡುತ್ತದೆ ಎಂಬ ಸುಲಲಿತ ಮನಸ್ಥಿತಿ ಎಲ್ಲರಿಗೂ ಒಳ್ಳೆಯದು. ಆದರೆ ತರ್ಕಕ್ಕೆ ಇಳಿದ ಜನರು ದೇವಸ್ಥಾನಗಳ ಮೂಲ ಸರಳ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ ಏನೇನೋ ಕುತರ್ಕಗಳಿಂದ ದೇವರು-ಗುರುಗಳು ಮುಂತಾದ ವಿಷಯಯಗಳಿಗೆ ತಮ್ಮ ಬುದ್ಧಿಮಟ್ಟದಿಂದ ವಿಚಿತ್ರ ಅರ್ಥ ಹಚ್ಚಿ ಅಧ್ವಾನ ಎಬ್ಬಿಸಿಬಿಡುತ್ತಾರೆ. ಇದು ಬಹಳಷ್ಟು ಹಳ್ಳಿಗಳಲ್ಲಿನ ದೇವಸ್ಥಾನಗಳ ಒಳಜಗಳದ ತಿರುಳು.
ಈಗ ನಮ್ಮ ಊರಿನ ಸಮೀಪ ಇರುವ ಬಚ್ಚಗಾರು ಶ್ರೀ ಮಹಾಗಣಪತಿ ದೇವಸ್ಥಾನವನ್ನೇ ತೆಗೆದುಕೊಳ್ಳೋಣ.
ಸಾಗರದಿಂದ ಜೋಗಕ್ಕೆ ತೆರೆಳುವಮಾರ್ಗದಲ್ಲಿ ಜೋಗ ಇನ್ನು ೯ ಕಿಲೋಮೀಟರ್ ಇದೆ ಎನ್ನುವಾಗ ಈದೇವಸ್ಥಾನ ನಿಮಗೆ ಕಾಣಸಿಗುತ್ತದೆ. ಈಭಾಗದ ನೂರಾರು ಜನರು ಗಣಪತಿಯನ್ನು ನಂಬಿದ್ದಾರೆ. ಪ್ರತಿನಿತ್ಯ ಮನದಲ್ಲಿ ಆರಾಧಿಸುತ್ತಾರೆ. ಆದರೆ ಊರಿನ ಮುಕ್ಕಾಲು ಪಾಲು ಜನ ಈಗ ಎಂಟು ವರ್ಷದಿಂದ ಅಲ್ಲಿ ಸಾಮೂಹಿಕವಾಗಿ ಸೇರುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣ ಒಬ್ಬ ಜಯರಾಮನೆಂಬ ಗಡ್ದಧಾರಿ ಅರೆನಾಸ್ತಿಕ. ಆತ ತನ್ನ ನಂಬಿಕೆಯನ್ನು ಸಾಮೂಹಿಕವಾಗಿ ಹೇರಿ ನೂರಾರು ವರ್ಷದಿಂದ ಬೆಳಗುತ್ತಿದ್ದ ದೇವಸ್ಥಾನಕ್ಕೆ ಸಮೂಹ ಸೇರದಂತೆ ಮಾಡಿದ. ಗುರು ಮಠ ವನ್ನು ಪಟಾಲಂ ಕಟ್ಟಿಕೊಂಡು ವಿರೋಧಿಸಿದ. ವರ್ಷವರ್ಷವೂ ಹೊಸ ಹೊಸ ಆಡಳಿತ ಕಮಿಟಿ ನೇಮಕವನ್ನು ನಿಲ್ಲಿಸಿ ಹಿಟ್ಲರ್ ಆಡಳಿತ ತಂದ. ವಿರೋಧಿಸಿದವರಿಗೆ ಅಬ್ಬೆಪಾರಿಗಳಿಗೆ ಕುಡಿಸಿ ವಾಚಾಮಗೋಚರ ಉಗಿಸಿದ. ಹೀಗೆಸಾಗುತ್ತದೆ ಆತನ ಮೌನಕ್ರೌರ್ಯ. ನೂರು ವರ್ಷಗಳಿಂದ ತಮ್ಮ ಪಾಡಿಗೆ ತಾವು ನೆಮ್ಮದಿಕೊಂಡಿದ್ದ ಊರವರ ತಾಣವನ್ನು ಈತ ಕೆಡಿಸಿದ.ತನ್ನ ವೈಯಕ್ತಿಕ ದ್ವೆಷಗಳಿಗೆಲ್ಲಾ ದೇವಸ್ಥಾನವನ್ನು ವೇದಿಕೆಯಾಗಿಸಿಕೊಂಡ. ಹೀಗೆ ಸಾಗುತ್ತದೆ ದೇವಸ್ಥಾನಗಳ ಒಳಜಗಳದ ಕಥೆಗಳು. ಬರೆದರೆ ಮೂರು ಕಾದಂಬರಿಯಾದೀತು. ಇದು ಈಊರು ಆ ಊರು ಅಂತಲ್ಲ ಇದೊಂದು ಉದಾಹರಣೆ ಅಷ್ಟೆ. ಹಾಗಾದರೆ ದೇವಸ್ಥಾನದಲ್ಲಿ ಅನ್ಯಾಯ ಇದೆ ಅಂತಾದರೆ ಸರ್ವ ಶಕ್ತ ಆ ಪರಮಾತ್ಮ ಇವನ್ನೆಲ್ಲಾ ತಡೆಯಬಹುದಿತ್ತಲ್ಲಾ ಎಂಬ ಪ್ರಶ್ನೆ ಎಲ್ಲರೂ ಕೇಳಬಹುದು. ಉತ್ತರ ಸಿಂಪಲ್ ಇದು ಮಾನವ ನಿರ್ಮಿತ ಜಗತ್ ಇಲ್ಲಿ ದೇವರನ್ನೂ ಮನುಷ್ಯರೇ ನಿರ್ಮಿಸಿದ್ದು ಕಾರಣ ತನ್ನ ನೆಮ್ಮದಿಗಾಗಿ-ಸುಖಕ್ಕಾಗಿ. ವಿಪರ್ಯಾಸವೆಂದರೆ ಅವುಗಳೇ ಅವನ ಕೊರಳಿಗೆ ಉರುಳಾಗುತ್ತಿವೆ. ದೇವಸ್ಥಾನಗಳು ವಿವಾದ ಕೇಂದ್ರಗಳಾಗುತ್ತಿವೆ ಎಂಬುದಕ್ಕೆ ಮುಖ್ಯ ಕಾರಣ ಸರ್ವೇ ಗುಣಾ: ಕಾಂಚನಂ ಆಶ್ರಯಂತಿ. ಅಲ್ಲಿದೆ ಜಣ ಜಣ ಹಣ ಹಾಗಾಗಿ ಈ ಜನರ ಕಣ್ಣು ಅಲ್ಲಿ- ಹಾಗಾಗಿ ನೆಮ್ಮದಿ ಎಲ್ಲಿ?

Wednesday, January 21, 2009

ಬೀ ಮತ್ತು ಈಟರ್


ನಮ್ಮಲ್ಲಿ ಈಗ ಪತರಗುಟ್ಟುವ ಛಳಿಗಾಲ.ಬಾಯಿಂದ ಬೆಳಗಿನ ಹೊತ್ತು ತನ್ನಷ್ಟಕ್ಕೆ ಪುಸ್ ಪುಸ್ ಅಂತ ಹೊಗೆ ಬರುತ್ತಿರುತ್ತದೆ. ಮಕ್ಕಳಿಗೆ ಅದೊಂದು ಆಟ. ಗುಟ್ಟಾಗಿ ಅದನ್ನು ಸಿಗರೇಟು ಸೇದುವ ಆಟವನ್ನಾಗಿಸಿಕೊಳ್ಳುತ್ತಾರೆ ಅವರು. ಇರಲಿಬಿಡಿ ಹಾನಿಯೇನಿಲ್ಲ ಅದು ದೇಹದ ಒಳಗಿಂದ ಬರುವ ಆವಿ ನೋಡಲಷ್ಟೇ ಖುಷಿ. ನಾವು ನೀವೆಲ್ಲ ಮಕ್ಕಳಾಗಿದ್ದಾಗ ಹಲವರು ಸಿಗರೇಟು ಸೇದುವ ಹಾಗು ಪುಸ್ ಅಂತ ಹೊಗೆಬಿಡುವ ಗತ್ತಿಗೆ ಮಾರುಹೋಗಿ ಹೀಗೆ ಮಾಡಿದ್ದಿದೆ. ನಂತರ ತುಸು ಮುಂದೆ ಹೋಗಿ ಚಳಿಗಾಲ ಮುಗಿದು ಹಾಗೆ ಬಾಯಿಂದ ಹೊಗೆಬರದಾದಾಗ ತಾವೆರೆಗಿಡದ ದಂಟಿಗೆ ಬೆಂಕಿ ಹಚ್ಚಿ ಪುಸುಪುಸು ಹೊಗೆ ಬಿಟ್ಟಿದ್ದಿದೆ ಆನಂತರ ಇನ್ನೂ ಕೆಲ ಧೈರ್ಯಸ್ಥರು...! ಅಪ್ಪನ ಜೇಬಿನಿಂದ ಒಂದೆರಡು ಬೀಡಿ ಎಗರಿಸಿ ಕದ್ದು ಸೇದಿದಿದ್ದರೂ ಇರಬಹುದು ಅವೆಲ್ಲಾ ಕಳೆದು ಈಗ ಹಾಗೆ ಮಾಡುವವರಿಗೆ ಗದರಿಸುವ ಹಂತಕ್ಕೆ ನಾವು ಬಂದು ನಿಂತಾಗಿದೆ ಹಾಗಾಗಿ ಅವೆಲ್ಲಾ ಕೆಲವೊಮ್ಮೆ ಕಂಡೂಕಾಣದಂತೆಯೂ ಮತ್ತೊಮ್ಮೆ ಕಂಡತಕ್ಷಣ ನಾವೇ ಮರೆಯಾಗುವಂತೆಯೂ ಇರಬೇಕಾಗುತ್ತದೆ ಇಲ್ಲದಿದ್ದಲ್ಲಿ ಮರ್ಯಾದೆಗೆ ಕುತ್ತು. ಇರಲಿ ಅವೆಲ್ಲಾ ಅಂದಿನ ಕಥೆಯಾಯಿತು ಈಗ ನಾನು ಅಲವತ್ತುಕೊಳ್ಳುವ ಕತೆಗೆ ಬರೋಣ.
ಈ ಚಳಿಗಾಲವೆಂಬ ಚಳಿಗಾಲದ ಬೆಳಗಿನಲ್ಲಿ ಹಕ್ಕಿಗಳ ಚಿಂವ್ ಚಿಂವ್ ಎಂಬ ಕಲರವ ಕೇಳಿದ ತಕ್ಷಣ ನನ್ನ ದುಗುಡ ಹೆಚ್ಚಾಗುತ್ತದೆ.ಹಾಗೆ ಆಗಲು ಮುಖ್ಯಕಾರಣ ಕವಿಗಳ ದೃಷ್ಟಿಯಲ್ಲಿ ಆ ಮಧುರವಾದ ಕಲರವದ ನಡುವೆ ನನ್ನ ಜೇನುಹುಳುಗಳನ್ನು ತಿನ್ನುವ ಬೀ ಈಟರ್ ಎಂಬ ಹಕ್ಕಿಯ ಕೂಗೂ ಇರುತ್ತದೆ. ಬೀ ಈಟರ್ ಎಂಬ ನನ್ನ ಹಾಗೂ ನಾನು ಸಾಕಿದ ಜೇನು ಹುಳುಗಳ ಪಾಲಿಗೆ ಯಮಕಿಂಕರರ ಅರ್ತನಾದದಂತೆ. ಜೇನುಸಾಕದವರು ನೋಡಿದರೆ ಮೆಚ್ಚಲೇಬೇಕಾದ ಬಣ್ಣ ಆಕಾರ ದಲ್ಲಿರುವ ಬೀ ಈಟರ್ ಗಳು ನಾನುಜೇನು ಸಾಕದಿದ್ದರೆ ಅಥವಾ ಅವು ಜೇನು ಹುಳುಗಳನ್ನು ಅಟ್ಟಾಡಿಸಿಕೊಂಡು ತಿನ್ನದಿದ್ದರೆ ನೋಡಲು ಸುಂದರ ಹಕ್ಕಿಗಳು. ಹಸಿರು ಬಣ್ಣದ ರಾಮಗಿಣಿಯನ್ನು ಹೋಲುವಒಂದು ಜಾತಿಯ ಬೀ ಈಟರ್ ನೋಡುವುದರ ಜತೆಗೆ ಅದರಕೂಗು ಕೇಳಲೂ ಚಂದ. ಉದ್ದನೆಯ ಬಾಲದ ಕಪ್ಪುಬಣ್ಣದ ಇನ್ನೊಂದು ಬೀ ಈಟರ್ ಹಕ್ಕಿ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಪುಟ್ಟ ಆಕಾರದ ಮಗದೊಂದು ಬೀ ಈಟರ್ ನ ಹಾರಾಟ ಎಂತಹವರನ್ನೂ ಮನಸೆಳೆಯುತ್ತದೆ.
ಆದರೆ ಮಾಡುವುದೇನು ಪ್ರಕೃತಿ ಆಹಾರ ಸರಪಣಿಯಡಿಯಲ್ಲಿ ನಾನು ಸಾಕಿದ ಜೇನು ಹುಳುಗಳನ್ನು ಆ ಹಕ್ಕಿಗಳಿಗೆ ಜೋಡಿಸಿಬಿಟ್ಟಿದ್ದಾನೆ. ಅವಾದರೋ ಒಂದೆರಡು ಹುಳುಗಳನ್ನು ತಿಂದಿದ್ದರೆ ಬಿಡಬಹುದಿತ್ತು ಆದರೆ ಅವುಸೀದಾ ಪೆಟ್ಟಿಗೆಯ ಬಳಿ ಕುಳಿತುಕೊಂಡು ಲೊಚ ಲೊಚ ಎಂದು ನೂರಾರು ಜೇನುಹುಳುಗಳನ್ನು ಲಬಕ್ಕನೆ ಸ್ವಾಹಾ ಮಾಡಿ ಬಿಡುತ್ತವೆ.ಹಾಗಾಗಿ ಈಗ ನನಗೆ ಬೆಳಗಿನ ಅತಿದೊಡ್ಡ ಕೆಲಸವೆಂದರೆ ಕಲ್ಲು ಕವಣೆಯೊಡನೆ ಜೇನು ಪೆಟ್ಟಿಗೆಯ ಬಳಿ ಹಕ್ಕಿಗಳು ಬರದಂತೆ ಕಾಯುವುದು. ಆವಾಗ ಅವುಗಳ ಕಲರವ ಕರ್ಕಶವಾಗಿಬಿಡುತ್ತವೆ. ಅವುಗಳ ಆಕಾರ ವಿಕಾರವಾಗಿ ಕಾಣುತ್ತವೆ. ಪಾಪ ಅವುಗಳು ಏನು ಮಾಡ್ಯಾವು ಅವುಗಳ ಮನೆಯಲ್ಲಿ ಬಾಯಿ ಕಳೆದು ಮರಿಗಳು ಕೂತಿವೆ ಹಸಿವೆಯಾಗಿ ತೀರಿಸಬೇಕಲ್ಲ. ಅದಕ್ಕಾಗಿ ಅವು ನನ್ನನ್ನು ನಿತ್ಯ ಶಪಿಸುತ್ತಿರಬಹುದು. ಅವರ ಪ್ರಪಂಚದಲ್ಲಿ ಬ್ಲಾಗ್ ಇದ್ದಿದ್ದರೆ ಬಹುಶಃ ಈ ಸಮಯದಲ್ಲಿ "ರಕ್ಕೆ ಬಡಿಯಲಾಗದಷ್ಟು ಚಳಿ. ಇಬ್ಬನಿ ಯ ಹನಿ ಹನಿ. ಎಲ್ಲೆಲ್ಲೂ ಮನುಷ್ಯರ ಓಡಾಟ ಆದರೆ ಕೆಲವೇ ಕೆಲವರು ಮಾತ್ರ ಕೆಟ್ಟ ಮನುಷ್ಯರು ದರಿದ್ರದವು ಕಲ್ಲು ಹೊಡೆಯುತ್ತವೆ" ಎಂದೆಲ್ಲಾ ಬರೆಯುತ್ತಿದ್ದವೇನೋ.
ಇರಲಿ ಇದು ನನ್ನ ಪ್ರಪಂಚ ನಾನು ಜೇನುಹುಳುಗಳ ಶ್ರಮವಾದ ಜೇನುತುಪ್ಪ ಕದಿಯಲುಈ ಹರಸಾಹಸ ಪಡುತ್ತಿದ್ದೇನೆ ಅವು ಕೂಡ ಹಾಗೆ. ಒಟ್ಟಿನಲ್ಲಿ ಬಲಸ್ಯ ಪೃಥ್ವಿ.

Tuesday, January 20, 2009

ಎರಡು ಬ್ಲಾಗ್ ಗಳು

ಸೃಷ್ಟಿಕ್ರಿಯೆ ಪ್ರಕೃತಿಯಲ್ಲಿ ಸಹಜವಾದದ್ದು. ಪ್ರಕೃತಿಯ ಕೂಸಾದ ಮನುಷ್ಯ ವಂಶಾಭಿವೃದ್ದಿಯ ಸಹಜ ಕ್ರಿಯೆಗೆ ರೀತಿರಿವಾಜು ಎಂಬ ಬಟ್ಟೆ ತೊಡಿಸಿದ.ಅದಕ್ಕೆ ಬೇಕಾಬಿಟ್ಟಿ ಎಂಬ ವ್ಯಾಖ್ಯೆಯಿಂದ ಹೊರಬರಲು ಶಾಸ್ತ್ರ ಸಂಪ್ರದಾಯ -ಗಂಡ ಹೆಂಡತಿಎಂಬ ಬಾಂಧವ್ಯವನ್ನು ರೂಪಿಸಿಕೊಂಡು ತನ್ನ ವ್ಯವಸ್ಥಿತ ಸಮಾಜ ಬದುಕಿಗೆ ಕವಚ ತೊಡಿಸಿಕೊಂಡ. ಹೇಳುವುದನ್ನು ಹೇಳಲೇಬೇಕಾದ ಸಂದರ್ಭದಲ್ಲಿ ಶೃಂಗಾರ ಎಂದ, ಹೇಳಬಾರದ ಜಾಗದಲ್ಲಿ ಹೇಳಿದರೆ ಅಶ್ಲೀಲ ಎಂದ ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಸಿಕ್ಕ ಈ ಸಹಜ ಕ್ರಿಯೆ ಗುಟ್ಟು ಎಂಬ ಮಾಯೆಗೆ ಸಿಕ್ಕು ಮನುಷ್ಯನ ಆಳ ಮನಸ್ಸಿನಲ್ಲಿ ಹುದುಗಿ ಚಿತ್ರವಿಚಿತ್ರವಾಗಿ ಚಿತ್ರಣಗೊಂಡು ನರಳಿತು. ಆದರೂ ಈ ಮನುಷ್ಯ ಕರೆದ ಕಾಮ ಎಂಬುದು ಪ್ರಕೃತಿ ಸಹಜವಾದ್ದರಿಂದ ಆರೋಗ್ಯವಂತ ದೇಹ ಹೊಂದಿದ ಪ್ರತಿಯೊಬ್ಬರಲ್ಲಿಯೂ ಅಡಗಿ ಒಮ್ಮೊಮ್ಮೆ ಬಹಿರಂಗವಾಗಿಯೂ ಮಗದೊಮ್ಮೆ ಗುಪ್ತವಾಗಿಯೂ ಕಾರ್ಯವೆಸಗತೊಡಗಿತು.
ಇರಲಿ ಇದು ಸೆಕ್ಸ್ ಎಂಬ ಸೆಕ್ಸ್ ನ ಪವಿತ್ರಬಾಂಧವ್ಯ ಕಥೆ. ಈಗ ನಾನು ಹೇಳಹೊರಟಿರುವುದು ಬ್ಲಾಗ್ ನ ಕಥೆ. ನಾವು ಸ್ವಂತ ಕಥೆಗೊಂದು ಬ್ಲಾಗ್ ನೋಡುತ್ತೇವೆ. ಫೋಟೋಕ್ಕೆ ಒಂದು ಬ್ಲಾಗ್ ಕಾಣಬಹುದು. ಬೇರೆಯವರ ಕಥೆಗೆ ಒಂದು ಬ್ಲಾಗ್ ನೋಡಬಹುದು. ಯಾರೋ ಬರೆದಿದ್ದಕ್ಕೆ ನನ್ನದೊಂದು ಬರಹ ಅಂತ ಬ್ಲಾಗ್ ನೋಡಬಹುದು ಹೀಗೆ ನಾನಾ ತರಹದ ಉದ್ದೇಶದ ಬ್ಲಾಗ್ ಗಳನ್ನುನೋಡ ಬಹುದು.ಆದರೆ ಈ ಸೃಷ್ಟಿ ಕ್ರಿಯೆಯ ಗುಟ್ಟನ್ನು ಜ್ಞಾನ ವೆಂಬ ಲೆಕ್ಕಾಚಾರದಲ್ಲಿ ತಿಳಿಯಲು ಯಾರಾದರೂ ಬ್ಲಾಗ್ ನೋಡಬೇಕೆಂಬ ಆಸೆ ಇದ್ದರೆ ಅದು ಸ್ವಲ್ಪ ಕಷ್ಟ ಎಂಬ ಉತ್ತರ ಎಲ್ಲರಲ್ಲಿಯೂ. ಕಾರಣ ಅಂತಹ ಬರಹಗಳನ್ನು ಮಡಿವಂತ ಜನರು ಛೀ ಎಂದು ಬಿಡುತ್ತಾರೇನೋ ಅಂಬ ಆತಂಕ. ಆದರೆ ಈಗ ನಾನು ಹೇಳುವ ಎರಡು ಬ್ಲಾಗ್ ಗಳ ಒಡೆಯರು ಸಾಹಸ ಮಾಡಿದ್ದಾರೆ. ನನ್ನ ಯುವ ಮಿತ್ರರೊಬ್ಬರು ನೋಡು ಈ ಎರಡು ಬ್ಲಾಗ್ ಗಳನ್ನ ಅಂತ ಲಿಂಕ್ ಕಳುಹಿಸಿದಾಗ ಅಚ್ಚರಿಪಟ್ಟೆ . ನಂತರ ಆ ಇಬ್ಬರೂ ಬ್ಲಾಗಿಗಳ ಪರಿಶ್ರಮಕ್ಕೆ ಖುಷ್ ಪಟ್ಟೆ.
http://skhalana.wordpress.com/ http://pranayapadmini.blogspot.com/ . ಎಲ್ಲೆಲ್ಲಿಯೂ ಅಶ್ಲೀಲವಾಗಿ ಕಾಣದಂತೆ ಪೋಲಿ ಯಾಗಿ ಅನಿಸದೆ ಆದರೆ ಅವಶ್ಯಕತೆಗೆ ತಕ್ಕಂತೆ ಕಥೆ ಹೆಣೆಯುತ್ತಾ ಸಾಗುವ ಎರಡು ಬ್ಲಾಗ್ ಗಳ ಒಡೆಯರ ಕೆಲಸಖುಶ್ ಕೊಡುತ್ತದೆ. ಜೋಕ್ ಗಳನ್ನು ಓದಿ ನಗಬಹುದು. ಆದರೆ ಇಬ್ಬರೂ ಬ್ಲಾಗಿಗಳೂ ಓದುಗರಿಗಿಡುವ ಓಂದೇ ಪ್ರಶ್ನೆಯೆಂದರೆ ಕಾಮೆಂಟ್ ನದ್ದು."ಪ್ರಿಯಓದುಗರೆ ನೀವು ಓದುತ್ತೀರಿ ದಿನದಿನಕ್ಕೂ ನೂರರ ಸಂಖ್ಯೆಯಲ್ಲಿ ಬಂದು ಹೋಗುತ್ತಿರಿ ಆದರೆ ಕಾಮೆಂಟ್ಯಾಕೆ ಮಾಡೋದಿಲ್ಲ , ನಿಮ್ಮ ಕಾಮೆಂಟ್ ನಮಗೆ ಇನ್ನಷ್ಟು ಹುರುಪು ನೀಡುತ್ತದೆ" ಎನ್ನುತ್ತಾರೆ. ಬಹಳಷ್ಟು ಓದುಗರಿಗೆ ಕಾಮೆಂಟಿಸಲೂ ಭಯ. ಅಲ್ಲಿ ಸತ್ಯವಿದೆ ಆದರೆ ನಾವು ಮುಖವಾಡ ಹಾಕಿ ಬದುಕುತ್ತಿದ್ದೇವೆ. ಒಮ್ಮೆ ಅಲ್ಲಿ ಹೋಗಿ ಬನ್ನಿ. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೇನೆ. ಇಷ್ಟವಿಲ್ಲದಿದ್ದರೆ ಹೋಗಬೇಡಿ.ಆದರೆ ಒಳಗೆ ಇಟ್ಟುಕೊಂಡು ಕೊರಗಬೇಡಿ. ಅದುಮಿಟ್ಟದ್ದು ವಿಕಾರ ರೂಪ ತಾಳಿ ಬೇರೆಡೆ ಸ್ಪೋಟಗೊಂಡರೆ ಕಷ್ಟ. ಈಗ ಇಪ್ಪತ್ತೈದು ವರ್ಷಗಳ ಹಿಂದೆ ಪ್ರಜಾಮತ ಎಂಬ ಪತ್ರಿಕೆ ಬರುತ್ತಿತ್ತು. ಅದರಲ್ಲಿ ಗುಪ್ತಸಮಾಲೋಚನೆ ಎಂಬ ಅಂಕಣ ಗುಟ್ಟಿನಲ್ಲಿ ಫೇಮಸ್ ಆಗಿತ್ತು. ಕವಚ ಹಾಕಿಕೊಂಡವರು ಅಡೆಯಲ್ಲಿ ಕುಳಿತು ಅದನ್ನು ಶ್ರದ್ಧೆಯಿಂದ ಓದುತ್ತಿದ್ದರು. ಯಾರಾದರೂ ಹತ್ತಿರ ಬಂದರೆ ಪಟಕ್ಕನೆ ಧಾರಾವಾಹಿ ಪುಟಕ್ಕೆ ಹೊರಳುತ್ತಿದ್ದರು. ಹಾಗೆಲ್ಲ ಅವಶ್ಯಕತೆಯಿಲ್ಲ ಅದೂ ಸಹಜ ತಾನೆ?. ಧನ್ಯವಾದಗಳು. ಮತ್ತೆ ಮುಂದಿನವಾರದವರೆಗೆ.