Saturday, June 26, 2010

ಆ ದಿನ

ಲೋಕಾಯುಕ್ತರ ರಾಜಿನಾಮೆಯ ದಿನ
ಭ್ರಷ್ಟರ ನಿಗ್ರಹಿಸಲಾರೆ ಎಂದ ದಿನ
ತಮ್ಮ ಸಂಕಷ್ಟಕ್ಕೆ ಸರ್ಕಾರವನ್ನು ಹೊಣೆಯಾಗಿಸಿದ ದಿನ

ಗದ್ದೆಯಾ ಮೂಲೆಯಲ್ಲಿ ಕೂತ ರೈತನೊಬ್ಬ ಯೋಚಿಸುತ್ತಿದ್ದ
ನಾನೂ ಮುಷ್ಕರ ಹೂಡಬೇಕು, ಅಕ್ಕಿ ಬೆಳೆಯಬಾರದು ಭತ್ತ ಬಿತ್ತಬಾರದು

ವೈದ್ಯರು ಮುಷ್ಕರ ನಿರತ ದಿನ
ಔಷಧಿ ಮಾತ್ರೆ ಸಿಗದ ದಿನ
ನಮ್ಮ ಬೇಡಿಕೆ ಈಡೇರಿಸಿ ಅಂದ ದಿನ

ಕೊಟ್ಟಿಗೆಯಾ ಮೂಲೆಯಲ್ಲಿ ಕೂತ ಗೌಳಿಯೊಬ್ಬ ಚಿಂತಿಸುತ್ತಿದ್ದ
ನಾನೂ ಬೇಡಿಕೆಯನ್ನಿಡಬೇಕು, ಹಿಂಡಿ ನೀಡಬಾರದು,ಹಾಲು ಕರೆಯಬಾರದು

ಬ್ಯಾಂಕ್ ನೌಕರರ ಹೋರಾಟದ ದಿನ
ವಹಿವಾಟೆಲ್ಲ ನಿಂತ ದಿನ
ಸಂಬಳ ಏರಿಕೆ ಬೇಡಿಕೆಯ ದಿನ

ಮಗ್ಗದಾ ಮೂಲೆಯಲ್ಲಿ ಕೂತ ನೇಕಾರನೊಬ್ಬ ಆಲೋಚಿಸುತ್ತಿದ್ದ
ನಾನು ಕೂಗಬೇಕು, ಹತ್ತಿ ಬಿಚ್ಚಬಾರದು, ಬಟ್ಟೆ ನೆಯ್ಯಬಾರದು.

ಬೆಚ್ಚಿದರು ಬೆದರಿದರು ರಾಜಕಾರಣಿಗಳು,
ಲೋಕಾಯುಕ್ತರ ವೈದ್ಯರ ನೌಕರರ ಸಮಸ್ಯೆ ನೀಗಿತಲ್ಲಿ.

ಚುಚ್ಚಿಸಿದರು ಬೆದರಿಸಿದರು ಆಡಳಿತಗಾರರು,
ನೇತಾಡಿತು ದೇಹ ಆಲದ ಮರದ ಕೊಂಬೆಯಲ್ಲಿ.

ಕಣ್ಸೆಳೆಯುತಿದೆ ಕಣಜದ ಕೋಣೆ

ಮಲೆನಾಡಿನ ಮುಂಗಾರಿನ ಶುರುವಿನಲ್ಲಿ, ಕಾಡಿನ ದಾರಿಯಲ್ಲಿ, ತೋಟದ ಬದುವಿನಲ್ಲಿ ಹೋಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮೈಯೆಲ್ಲ ಉರಿಯಲು ಶುರುವಾಯಿತೆಂದರೆ ಅದು ಕಣಜದ ದಾಳಿ ಎಂದರ್ಥ. ಏನಾಗುತ್ತಿದೆ, ಹೇಗಾಗುತ್ತಿದೆ, ಎಂಬ ಆಲೋಚನೆಗೂ ಅರಿವು ನೀಡದೆ "ಉರಿ ಉರಿ ಉರಿ" ಎಂಬ ಮಂತ್ರವನ್ನು ಜಪಿಸುವಂತೆ ಮಾಡುವ ಹೆಬ್ಬೆರಳಿನ ಗಾತ್ರದ ಈ ಕೀಟ ನೂರಾರು ಒಮ್ಮೆಲೆ ಧಾಳಿ ಮಾಡಿದರೆ ಮನುಷ್ಯನ ಪ್ರಾಣಕ್ಕೇ ಕುತ್ತು ತರಬಲ್ಲ ತಾಕತ್ತು ಹೊಂದಿದೆ. ಆದರೆ ಇವು ವೃಥಾ ಧಾಳಿ ಮಾಡುವುದಿಲ್ಲ. ಅಕಸ್ಮಾತ್ ಅದರ ಗೂಡಿಗೆ ಧಕ್ಕೆಯುಂಟಾದಾಗ ಮಾತ್ರ ಕ್ಷಮಿಸಲಾರವು. ಮನುಷ್ಯನನ್ನು ಹೊರತುಪಡಿಸಿ ಮತ್ಯಾವುದೂ ವೃಥಾ ಧಾಳಿ ಮಾಡುವುದಿಲ್ಲ ಎಂಬುದು ಬೇರೆ ಮಾತು.
ಆಂಗ್ಲ ಭಾಷೆಯಲ್ಲಿ ಥಿeಟಟoತಿ ತಿಚಿsಠಿ ಎಂದು ಕರೆಯಿಸಿಕೊಳ್ಳುವ ಈ ಕೀಟದ ವಂಶ ಗಿಎಸಠಿಇರಜಚಿಈ.ಇದು ಮಿಶ್ರ ಆಹಾರಿ. ಹೂವಿನ ಮಕರಂದ ದ ಜತೆಗೆ ತನಗಿಂತ ಚಿಕ್ಕದಾದ ಕೀಟಗಳನ್ನು ಭಕ್ಷಿಸುತ್ತದೆ. ಜೇನಿನಂತೆಯೇ ಜೀವನ ಕ್ರಮವಿರುವ ಕಣಜ ರಾಣಿಯನ್ನು ಅವಲಂಬಿಸದೆ ಬದುಕುತ್ತವೆ. ಜೇನು ಹುಳುಗಳ ಪರಮಶತ್ರುವಾದ ಕಣಜ ದಿನವೊಂದಕ್ಕೆ ಕನಿಷ್ಠ ಮೂವತ್ತು ನಲವತ್ತು ಜೇನುಹುಳುಗಳ ಸಾವಿಗೆ ಕಾರಣವಾಗುತ್ತದೆ. ಹಿಡಿದ ಜೇನುನೊಣವನ್ನು ತನ್ನ ಮರಿಗಳಿಗೆ ಆಹಾರವಾಗಿ ನೀಡುತ್ತವೆ. ಕಣಜದ ಜೇನು ಬೇಟೆ ವಿಶಿಷ್ಠವಾದ ಕ್ರಿಯೆ. ಕಣಜ ಜೇನುಗೂಡಿನ ಹೊರಗೆ ಭರ್ರ್ ಎಂದು ಸದ್ದು ಮಾಡುತ್ತಾ ಹಾರಡತೊಡಗುತ್ತದೆ. ಈ ಸದ್ದಿಗೆ ಜೇನು ಹುಳುಗಳು ವ್ಯಗ್ರವಾಗಿ ಆಚೆ ಬರತೊಡಗುತ್ತವೆ. ಹೀಗೆ ಆಚೆಬಂದ ಜೇನ್ನೊಣವನ್ನು ಕ್ಷಣಮಾತ್ರದಲ್ಲಿ ಕಾಲಿನಲ್ಲಿ ಹಿಡಿದುಕೊಂಡು ಕಣಜ ಪರಾರಿಯಾಗಿಬಿಡುತ್ತದೆ. ಅಪರೂಪಕ್ಕೊಮ್ಮೆ ಜೇನುಗಳೇ ಗುಂಪು ಗುಂಪಾಗಿ ಧಾಳಿ ಮಾಡಿ ಕಣಜವನ್ನು ಬಲಿ ತೆಗೆದುಕೊಳ್ಳುವುದೂ ಉಂಟು. ಜೇನುಗೂಡಿನ ದ್ವಾರದಲ್ಲಿ ಬಂದ ಕಣಜದ ಮೇಲೆ ಹಠಾತ್ತನೆ ನೂರಾರು ಜೇನುನೊಣಗಳು ಉಂಡೆಯಾಕಾರದಲ್ಲಿ ಮುತ್ತಿಬಿಡುತ್ತವೆ. ಹಾಗಾದಾಗ ಕಣಜ ಉಸಿರುಗಟ್ಟಿ, ಒಳಗಿನ ತಾಪಮಾನ ಹೆಚ್ಚಿ ಸಾವನ್ನಪ್ಪುತ್ತದೆ(ಚಿತ್ರ೨). ಇದು ಬಹು ಅಪರೂಪಕ್ಕೆ ನಡೆಯುವ ಕ್ರಿಯೆ. ಮಿಕ್ಕಂತೆ ಜೇನುನೊಣಗಳ ಸಾವಿನ ಪ್ರಮಾಣವೇ ಹೆಚ್ಚಿನದು. ಹಾಗಾಗಿ ಜೇನು ಸಾಕಾಣಿಕಾದಾರರು ಗೂಡನ್ನು ಕಣಜದಿಂದ ರಕ್ಷಿಸಲು ಹರಸಾಹಸ ಪಡುತ್ತಾರೆ. ಹತ್ತಿರದಲ್ಲಿರುವ ಕಣಜದ ಗೂಡನ್ನು ಪತ್ತೆ ಮಾಡಿ ಸುಡದಿದ್ದರೆ ಜೇನುಗೂಡನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ. ಹಾಗಾಗಿ ಕಣಜ ಜೇನುಪೆಟ್ಟಿಗೆಯ ಬಳಿ ಹಾರಾಡತೊಡಗಿತೆಂದರೆ ತಕ್ಷಣ ಜೇನು ಕೃಷಿಕರು ಸುತ್ತಮುತ್ತ ಕಣಜದ ಗೂಡು ಹುಡುಕಲಾರಂಬಿಸುತ್ತಾರೆ.
ಇಷ್ಟಿದ್ದರೂ ಕಣಜದ ಗೂಡು ನೋಡಲು ಬಲು ಚಂದ. ಅರ್ದ ಅಡಿ ಗಾತ್ರದಿಂದ ಎರಡು ಅಡಿ ಎತ್ತರದ ಗೂಡು ನಿರ್ಮಿಸುವ ಕಣಜ ತನ್ನ ಸಂಸಾರದ ಸಂಖ್ಯೆಗನುಗುಣವಾಗಿ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಸಗಣಿ, ಮಣ್ಣನ್ನು ಸೇರಿಸಿ ಬಾಯಿಮೂಲಕ ಹೊರಡುವ ಜೊಲ್ಲನ್ನು ಬಳಸಿ ಕಟ್ಟಿಕೊಳ್ಳುವ ಗೂಡು(ಚಿತ್ರ೩) ನೋಡಲು ಸುಂದರ, ಆದರೆ ಒಮ್ಮೆ ಧಾಳಿಗೀಡಾದ ಅನುಭವ ನಿಮ್ಮದಾಗಿದ್ದರೆ ಗೂಡು ನೋಡಿದಾಕ್ಷಣ ಮೈಮೇಲೆ ಮುಳ್ಳುಗಳೇಳುತ್ತವೆ. ಇಂತಹ ಕಣಜದ ಗೂಡನ್ನು ಪತ್ತೆ ಮಾಡಿ ಧ್ವಂಸ ಮಾಡುವಾಗ ಬೇಸರವಾಗುತ್ತದೆ. ಆದರೆ ಜೇನನ್ನು ಉಳಿಸಿಬೇಕೆಂದರೆ ಹೀಗೆಲ್ಲಾ ಮಾಡುವುದು ಅನಿವಾರ್ಯ. ಗೂಡು ಪತ್ತೆಯಾಗಿ ಧ್ವಂಸಮಾಡಲಾಗದಿದಲ್ಲಿ ಡಿಸೆಂಬರ್ ತಿಂಗಳವರೆಗೂ ಇವುಗಳ ಕಾಟ ಮುಂದುವರೆಯುತ್ತದೆ. ಪ್ರಕೃತಿ ಯ ಹುಟ್ಟು ಸಾವಿನ ಚಕ್ರದಲ್ಲಿ ೬ ರಿಂದ ೮ ತಿಂಗಳು ಆಯುಷ್ಯ ಹೊಂದಿರುವ ಕಣಜ ಡಿಸೆಂಬರ್ ತಿಂಗಳಿನಲ್ಲಿ ಕೆಂದಿಗೆ ಎಂಬ ಸ್ಥಳೀಯ ಭಾಷೆಯಲ್ಲಿ ಕರೆಯುವ ಜಾತಿಯ ಗಿಡವೊಂದರ ಹೂವು ಅರಳಿದಾಗ ಅದರ ಮಕರಂದ ಹೀರಲು ಹೋಗಿ ಸಾವನ್ನಪ್ಪುತ್ತದೆ ಎಂಬ ನಂಬಿಕೆ ಇದೆ ಹಾಗೆಯೇ ಅಡಿಕೆಯ ಕೊಳೆ ರೋಗದ ಹೆಚ್ಚಳಕ್ಕೂ ಇವು ಕಾರ್ಣ ಎಂಬ ಪ್ರತೀತಿಯೂ ಇದೆ . ಆದರೆ ವಾಸ್ತವ ತೀರಾ ಹಾಗೇನಲ್ಲ ಆಯುಷ್ಯ ಮುಗಿದ ಕಾರಣ ಅವು ಅವಸಾನವಾಗುತ್ತವೆ ಮತ್ತುಅವುಗಳ ಮಕರಂದಕ್ಕಾಗಿ ಅಡಿಕೆ ಸಿಂಗಾರದ ಸುತ್ತ ಯರ್ರಾಬಿರ್ರೀ ಹಾರಾಟ ಹಾಗೆಲ್ಲ ನಂಬಿಕೆ ಹುಟ್ಟಲೂ ಕಾರಣವಾಗಿರಬಹುದು. ಡಿಸೆಂಬರ್ ತಿಂಗಳ ನಂತರ ಆಯುಷ್ಯ ಮುಗಿದು ಅಳಿದುಳಿದ ಶೇಕಡಾ ೫ ರಷ್ಟು ಹುಳುಗಳು ಮತ್ತೆ ತಮ್ಮ ಸಂತಾನ ವೃದ್ಧಿಸಿಕೊಳ್ಳಲು ಆರಂಭಿಸುತ್ತವೆ.
ಜೇನು ಗೂಡನ್ನು ಮನೆಯಲ್ಲಿಟ್ಟಿರುವ ಕೃಷಿಕರು ಏನಕೇನಪ್ರಕಾರೇಣ ಕಣಜದ ಗೂಡನ್ನು ಜೂನ್ ತಿಂಗಳಿನಲ್ಲಿ ಪತ್ತೆ ಮಾಡಿ ಬೆಂಕಿ ಇಟ್ಟುಬಿಡುತ್ತಾರೆ. ಡಿಸೆಂಬರ್ ತನಕ ಕಾಯುತ್ತಾ ಕುಳಿತರೆ ಜೇನು ಉಳಿಯದು ಎಂಬುದು ಅವರ ವಾದ. ಅದೇನೆ ಇರಲಿ ನನ್ನ ಕ್ಯಾಮೆರಾ ಕಣ್ಣಿಗೆ ಅಪರೂಪದ ಕಣಜದ ಜೀವನ ಕ್ರಮ ಸಿಕ್ಕದ್ದಂತೂ ರೋಚಕ ಅನುಭವ.

ಇಂದು ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ ಬರಹ

Friday, June 25, 2010

ಗೊತ್ತಿದ್ದವರು ಹೇಳಿ

ಹೊನ್ನಾವರದಿಂದ ಕುಮುಟಾಕ್ಕೆ ಹೋಗುವ ಹೈವೆ ಪಕ್ಕದಲ್ಲಿ ಈ ಚಿತ್ರದಲ್ಲಿರುವ ದೃಶ್ಯ ಕಾಣಸಿಗುತ್ತದೆ. ಸಣ್ಣ ಸಣ್ಣ ಕೆರೆಗಳು ಅದರ ಮದ್ಯೆ ತಿರುಗುವ ಚಕ್ರಗಳು. ಇದೇನಿರಬಹುದು ಎಂಬ ಕುತೂಹಲಕ್ಕೆ ನಮ್ಮಲೊಬ್ಬ "ಓ ಅದಾ,,,ಉಪ್ಪು ತೆಗೆಯುವ ಹೊಂಡಗಳು" ಎಂದ. "ಉಪ್ಪು ತೆಗೆವ ಹೊಂಡಕ್ಕೆ ಫ್ಯಾನ್ ಗಿರಿಗಿಟ್ಟಿ ಯಾಕೆ?. ಮತ್ತೊಬ್ಬನ ಪ್ರಶ್ನೆ. "ಅಯ್ಯೋ ಇದು ಕೆಂಪನೆಯ ಕಲ್ಲುಪ್ಪು ತೆಗವ ಜಾಗ ಅಲ್ಲ ಮಾರಾಯ, ಬಿಳಿಯ ಪುಡಿ ಉಪ್ಪು ತೆಗೆವ ಜಾಗ. ಅಕೋ ಅಲ್ಲಿ ಕಾಣುತ್ತಲ್ಲ ಅದೇ ಫಿಲ್ಟರ್ ಹೌಸ್, ಇದು ಸ್ಟಾರ್ ಉಪ್ಪು ಕಂಪನಿಯದು". ಹೀಗೆ ಮುಂದುವರೆದಿತ್ತು ಆತನ ವಿವರಣೆ. ನನಗಂತೂ ಅದು ಉಪ್ಪು ತೆಗೆವ ಕ್ರಿಯೆ ಅಲ್ಲ ಎಂಬ ಅನುಮಾನ, ಆದರೆ ಪರಿಹರಿಸಿಕೊಳ್ಳಲು ಜಾಗ ದಾಟಿ ಗೋಕರ್ಣದತ್ತ ಹೊರಟಾಗಿದೆ. ನೋಡೋಣ ವಾಪಾಸು ಬರುವಾಗ ಕಂಡರೆ ಆಯಿತು ಎಂದು ಸುಮ್ಮನುಳಿದೆ. ಗೋಕರ್ಣದಿಂದ ವಾಪಾಸು ಬರುವುದು ನಾಳೆಯಾಗುತ್ತದೆ. ಉತ್ತರಕ್ಕೆ ಅಷ್ಟರತನಕ ಕಾಯಲಾಗದಿದ್ದರೆ ಗೊತ್ತಿದ್ದವರು ಹೇಳಿ. ಇಲ್ಲದಿದ್ದರೆ ನಾನು ನಾನೆ ಹೇಳುತ್ತೇನೆ, ಇದು ಉಪ್ಪಿನ ಫ್ಯಾಕ್ಟರಿಯೋ ಅಲ್ಲವೋ ಅಂತ. ಅಲ್ಲಿವರೆಗೆ ಹ್ಯಾಪಿ ಡೆ.

Thursday, June 24, 2010

ಗಿರಿಯಪ್ಪಾ ಗಿರಿಯಪ್ಪಾ................

ಶ್ರೀಮತಿ ಪ್ರಕಾಶ "ಗಿರಿಯಪ್ಪಾ ಗಿರಿಯಪ್ಪಾ" ಅಂತ ಕೂಗಿದ ತಕ್ಷಣ ದೂರದಿಂದ ಟ್ರೊಂಯ್ ಎನ್ನುತ್ತಾ ಹಾರಿ ಬಂದು ಮನೆಸೇರುತ್ತಿತ್ತು ಈ ನಮ್ಮ ರಾಷ್ತ್ರಪಕ್ಷಿ ಗಿರಿಯಪ್ಪನೆಂಬ ನವಿಲು. ಇದು ತಾಳಗುಪ್ಪದ ಸಮೀಪ ಬೂರ್ಲುಕೆರೆ ಪ್ರಕಾಶ್ ಎಂಬುವವರು ಅಕ್ಕರೆಯಿಂದ ಸಾಕಿದ ನವಿಲು. ಸಾಕಿದ್ದರು ಎನ್ನುವುದಕ್ಕಿಂತ ಅದು ಅವರ ಮನೆಯಲ್ಲಿ ಹಾಯಾಗಿ ಇತ್ತು. ಹಗಲು ಮೇಯಲು ಕಾಡಿಗೆ ಹೋಗುತ್ತಿತ್ತು. ರಾತ್ರಿ ಮನೆಗೆ ಬಂದು ಗೊಡೌನ್ ನಲ್ಲಿ ಪವಡಿಸುತ್ತಿತ್ತು. ಸಂಜೆ ಭತ್ತ ಮುಂತಾದ ಆಹಾರ ಹಾಕುತ್ತಿದ್ದರು. ಸಾಕಿದ ನವಿಲೆಂದು ತಿಳಿಯಲು ಕಾಲಿಗೊಂದು ಗಜ್ಜೆ ಕಟ್ಟಿದ್ದರು. ಅಕ್ಕರೆಯಿಂದ ಸಾಕಿದ ನವಿಲು ಒಂದು ದಿನ ಬೇಟೆಗಾರರ ಗುಂಡಿಗೆ ಆಹುತಿಯಾಗಿಯೇ ಬಿಟ್ಟಿತು. ಗುಂಡು ತಗಲಿಸಿಕೊಂಡು ಕಾಡಿನಿಂದ ಕೂಗುತ್ತಾ ಓಡಿಬಂದು ಪ್ರಕಾಶರವರ ಕೈಯಲ್ಲೇ ಪ್ರಾಣಬಿಟ್ಟಿತಂತೆ. ಪ್ರಕಾಶ ದಂಪತಿಗಳು ಮನೆಮಗನನ್ನು ಕಳೆದುಕೊಂಡ ದು:ಖ ಅನುಭವಿಸಿದ್ದರು.
ಇವೆಲ್ಲಾ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದುಹೋದವು. ಆದರೆ ನನ್ನ ಕಂಪ್ಯೂಟರ್ ನಲ್ಲಿ ಘನಗಂಭೀರದ ಗತ್ತಿನಲ್ಲಿ ಗಿರಿಯಪ್ಪ ಉಳಿದಿದ್ದಾನೆ. ಚೂರಿಕಟ್ಟೆಯ ಬಳಿ ಹಾದುಹೋಗುವಾಗೆಲ್ಲ ನೆನಪಾಗುತ್ತಾನೆ.
ಗುಂಡು ಹಾಕಿ ಕೊಂದ ಮನುಷ್ಯರು ಇನ್ನೂ ಈ ಜನ್ಮದ ಪಾಪ ಕಳೆಯಲು ಬದುಕಿದ್ದಾರೇನೋ. ಆದರೆ ಗಿರಿಯಪ್ಪನಿಗೆ ಖಂಡಿತಾ ಒಳ್ಳೆಯ ಜನ್ಮ ಸಿಕ್ಕಿರುತ್ತದೆ. ಅಥವಾ ಹಾಗೆ ನಂಬಿಕೆ.

ಗೋವಿಂದಣ್ಣ ಕಳುಹಿಸಿದ ಕಾರ್ಟೂನ್



ರಾಘಣ್ಣಾ,
ನಿಮ್ಮ ಮೊನ್ನೆಯ ಸಂಕಲನ ಪ್ರಕಟಣೆಯ ಬಗೆಗಿನ ಬ್ಲೋಗ್ ಬರಹ ಕಂಡಾಗ ನೆನಪಾಯಿತು.
ಪ್ರೀತಿಯಿಂದ
ಗೋವಿಂದ ಭಟ್
Govind BhatPost: AnanthadyVia: Mani 574253




"ನೀನು ಪತ್ರಿಕೋದ್ಯಮಿ ಅಂತ ಗೊತ್ತು ಜೀವನಕ್ಕೆ ಏನು ಮಾಡ್ತಿದಿ ಅಂತ ಕೇಳ್ದೆ" ಅಂತ ಅಲ್ಲಿನ ಪಾತ್ರ ಕೇಳುತ್ತೆ. ಕೊರವಂಜಿಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವಿದು. ಇಂದು ಪತ್ರಿಕೋದ್ಯಮಿಗಳಿಗೆ ಈ ಮಾತು ಕೇಳುವಂತಿಲ್ಲ. ಪತ್ರಿಕಾಲಯದಲ್ಲಿ ಕೆಲಸ ಮಾಡುವವರಿಗೂ ಕೇಳುವುದು ಬೇಡ. ಸಾಹಿತಿಗಳಿಗೆ...........

Wednesday, June 23, 2010

ನನ್ನದೊಂದು....................

"ನಮಸ್ಕಾರ ನನ್ನ ಹೆಸರು ................. ಅಂತ, ನಾನು ಬರಹಗಾರ, ಫ್ರೀಲಾನ್ಸರ್ , ನಿನ್ನೆ " ಕಡಲಮುತ್ತು" ಅಂತ ಕತೆ ಬಂದಿದೆ, ನೀವು ನೋಡಿಲ್ವಾ? "
"ಓಹೋ"
"ನನ್ನ ಕಥೆ ಕವನ ಎಲ್ಲಾ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ"
"ಓ ಹೌದಾ"
"ನಾಳೆ ಪುರವಣಿಯಲ್ಲಿ ಇನ್ನೊಂದು ಪ್ರಕಟವಾಗುತ್ತದೆ, ಒಂದು ಬ್ಲಾಗೂ ದಿನಾ ಅಪ್ಡೇಟ್ ಮಾಡ್ತೀನಿ"
" ಒಹ್ ಹೌದಾ , ಜೀವನಕ್ಕೆ ಏನು ಮಾಡ್ಕೋಂಡಿದೀರಾ?.
"........................"
ಎಂಬಲ್ಲಿಗೆ ಈ ಬರಹಗಾರನ ಮಾತು ......!
ನಾನು ಕೇಳಿದಂತೆ ಕಂಡಂತೆ ಬರಹಗಾರರ ದೊಡ್ಡ ದೌರ್ಬಲ್ಯವೆಂದರೆ " ನನ್ನದೊಂದು ಕತೆ ಬಂದಿದೆ ನೋಡಿದಿರಾ?" ಎಂಬ ಪ್ರಶ್ನೆ. ಇದು ತಿಂಗಳ ಸಂಬಳಕ್ಕಾಗಿ ಪತ್ರಿಕೆಗಳಲ್ಲಿ ಇರುವವರ ಕತೆ ಅಲ್ಲ. ಫ್ರೀ ಲ್ಯಾನ್ಸರ್ ಗಳ ವ್ಯಥೆ. ಬರೆಯುವುದು ಎಂದರೆ ಅದೊಂದು ಚಟ. ಬರೆದು ಬರೆದು ಪ್ರಕಟಣೆಗಾಗಿ ಪತ್ರಿಕೆಗಳಿಗೆ ಕಳುಹಿಸಿ ಆಕಾಶ ನೋಡುತ್ತಾ ಕೂರುವುದು ನಂತರದ ಕೆಲಸ. ಮತ್ತೆ ಪ್ರಕಟವಾದಮೇಲೆ ಅವರಿವರಿಗೆ "ನನ್ನದೊಂದು..." ಅಂತ ಹೇಳುತ್ತಾ ಸಾಗುವುದು ಮಗದೊಂದು ಕಾರ್ಯ. ಹಾಗೆಲ್ಲ ಆದಮೇಲೆ ಓದಿದವರಿಂದ ಶಬ್ಬಾಶ್ ಎನ್ನಿಸಿಕೊಳ್ಳಬೇಕು ಎನ್ನುತ್ತಾ ಅಲೆಯುವುದು ಇನ್ನೊಂದು ಕೆಲಸ. ಹೀಗೆ ಸಾಗುತ್ತಲಿರುತ್ತದೆ ಬರಹಗಾರನ ವರಾತ. ಪ್ರಪಂಚ ತುಂಬಾ ಅಗಾಧವಾದುದು ಇಲ್ಲಿ ಎಲ್ಲರೂ ತಮ್ಮ ಅಸ್ತಿತ್ವಕ್ಕಾಗಿ ತಿಳಿದೋ ತಿಳಿಯದೆಯೋ ಅವಿರತಶ್ರಮ ಹಾಕುತ್ತಿರುತ್ತಾರೆ. ಅಂತಹ ಒಂದು ಶ್ರಮದ ಭಾಗ ಈ "ನನ್ನದೊಂದು...." . ಇಲ್ಲಿ ಚೋಟುದ್ದದ ಹೆಸರಿನ ಹೊರತಾಗಿ ಹಣದ ಪ್ರಸ್ತಾಪ ಕಷ್ಟ. ಎಲ್ಲರ ಪರಿಸ್ಥಿತಿ ತೀರಾ ಭಿನ್ನ ಅಲ್ಲ.
ಇದ್ದಕ್ಕಿದಂತೆ ಮಂಡೆಯಲ್ಲಿ ಪಳಕ್ಕೆಂದು ಮಿಂಚುವ ಯೋಚನೆಗೆ ಅಕ್ಷರ ರೂಪ ಕೊಟ್ಟು ಅದರ ಜತೆ ಒಂದು ಫೋಟೋ ಲಗತ್ತಿಸಿ ಮೈಲ್ ಮಾಡಿದ ತಕ್ಷಣ ಇದು ಯಾವಾಗ ಪ್ರಕಟವಾಗುತ್ತದೆ ಎಂಬ ಚಿಂತೆ ಪ್ರಾರಂಭ. ಪತ್ರಿಕಾಲಯದಲ್ಲಿ ಯಾರಾದರೂ ಪರಿಚಯಸ್ತರಿದ್ದರೆ ಅವರಿಗೊಂದು ಫೋನು. ಮೂರ್ನಾಲ್ಕು ದಿವಸಗಳಕಾಲ ಪ್ರಕಟವಾಗದಿದ್ದರೆ "ನಾನೊಂದು ಕವನ ಕಳುಹಿಸಿದ್ದೆ..." ಅಂತ ಒಂದು ಮೈಲು. ಅಲ್ಲೋ ಪತ್ರಿಕಾಲಯದಲ್ಲಿ ಇಂತಹ ಬರಹಗಾರರ ದಂಡೇ ನಿತ್ಯ ಮೈಲ್ ಮಾಡುತ್ತಲಿರುತ್ತದೆ. ಅವರಾದರೂ ಎಂತ ಮಾಡಬಲ್ಲರು ಪಾಪ. ಅಂತೂ ಇಂತೂ ಕಳುಹಿಸಿದ್ದ ಲೇಖನ ಅಕಸ್ಮಾತ್ ಪ್ರಕಟವಾದರೆ ಶ್ರದ್ದೆಯಿಂದ ಅದನ್ನು ಅಟ್ಯಾಚ್ ಮಾಡಿ ಆಪ್ತಮಿತ್ರರಿಗೆ ಮತ್ತೆ ಮೈಲ್. ಜೀವನದ ಗಡಿಬಿಡಿಯಲ್ಲಿ ಇಂತಹ ಹಲವಾರು ಮೈಲ್ ಇರುತ್ತವೆ ಅದರ ಜತೆ ಇದು ಟ್ರಾಶ್ ಸೇರುತ್ತದೆ. ಇನ್ನು ಕೆಲವರು ಓದದೆ "ಸೂಪರ್" ಅಂತ ವಾಪಾಸು ಮೈಲ್ ಮಾಡುತ್ತಾರೆ ಸೌಜನ್ಯಕ್ಕಾಗಿ. ಇನ್ನು ತೀರಾ ಹತ್ತಿರದವರು ಓದಿ ಎಸ್ ಎಂ ಎಸ್ ಜಡಿಯುತ್ತಾರೆ. ಆವಾಗ ಹೊಟ್ಟೆಯ ಕಳ್ಳಿನಿಂದ ಬುಳ್ ಅಂತ ಸಂತೋಷ ಉಕ್ಕುತ್ತದೆ. ಬಿಡಿ ಅದರ ಮಜವೇ ಮಜ. ಇನ್ನು ಬರಹಗಾರರ ನಿತ್ಯ ದರ್ಶನಕ್ಕೆ ಸಿಗುವ ವ್ಯಕ್ತಿಯಾಗಿದ್ದರೆ ಕೆಲವು ವಿಶ್ ಗಳೂ ದೊರೆಯಬಹುದು. ಆದರೆ ಅಪರೂಪಕ್ಕೊಮ್ಮೆ ವಿಚಿತ್ರಗಳು ಸಂಭವಿಸಿಬಿಡುತ್ತವೆ.
ಮಟಮಟ ಮಧ್ಯಾಹ್ನ ಜೋಂಪು ನಿದ್ರೆಯಲ್ಲಿದ್ದೆ. ಯಾರೋ ಎರಡು ಜನರು ಮನೆಬಾಗಿಲಿಗೆ ಬಂದು ನಿಂತಿದ್ದರು. ಬಾಗಿಲು ತೆರೆದೆ, ಬನ್ನಿ ಎಂದೆ. ಗುರುತು ಪರಿಚಯ ಇದ್ದ ಮುಖ ಆಗಿರಲಿಲ್ಲ. ಕುಳಿತುಕೊಳ್ಳಿ ಅಂತ ಆಸನ ತೊರಿಸಿದೆ.
"ನೀವು ಎಲ್ಲಿಯವರೆಗೆ ಓದಿದ್ದೀರಿ" ಒಬ್ಬರು ಪ್ರಶ್ನಿಸಿದರು. ತಬ್ಬಿಬಾದೆ ಆದರೂ ಮಣ್ಣು ಹೊತ್ತ ವರ್ಷಗಳನ್ನು ಹೇಳಿದೆ. ಅವರು ತೀರಾ ಪರಿಚಯಸ್ತರಂತೆ ಮಾತನಾಡುತ್ತಿದ್ದರು ಹಾಗಾಗಿ ಪರಿಚಯ ಇಲ್ಲ ಅನ್ನಲು ಮುಜುಗರವಾಗಿ ಮುಗುಮ್ಮಾದೆ. ಅವರೇ ಮುಂದುವರೆಸಿದರು, "ನೀವು ಕುವೆಂಪು ರವರ ................. ಪುಸ್ತಕ ಓದಿದ್ದೀರಾ?". ಯಂತ ಹೇಳಲಿ? ನಾನು ಅದನ್ನು ಓದಿರಲಿಲ್ಲ. "ನಿಮ್ಮ ಗುಲ್ಲು ಕತೆ ಓದಿದ್ದೇ, ಅದರಲ್ಲಿ ಬರುವ ಬುಡಾನ್ ಸಾಬಿಯ ಪಾತ್ರ ಬಹಳ ಹಿಡಿಸಿತು" ಎಂದರು. ಆವಾಗ ನಾನು ಟ್ರಾಕ್ ಗೆ ಬಂದೆ, ಓಹ್ ಇವರು ನನ್ನ ಕತಾಪ್ರಿಯರು. " ನನ್ನ ಹೆಸರು ದೂರಪ್ಪನವರ್ ಅಂತ ಜೋಗದಲ್ಲಿ ಗ್ರಂಥಾಲಯ ಅಧಿಕಾರಿ, ನಿಮ್ಮ ಎಲ್ಲಾ ಕತೆಗಳನ್ನು ಓದಿದ್ದೀನಿ, ಇವತ್ತು ಬಂದ "ಬೇಲಿ" ಕತೆ ಚೆನ್ನಾಗಿದೆ, ನಿಮ್ಮ ಶೈಲಿ ಚೆನ್ನಾಗಿದೆ." ನಾನು ಒಳಗೊಳಗೆ ಆಕಾಶದಲ್ಲಿ ತೇಲಾಡುತ್ತಿದ್ದೆ. ಹೀಗೆಲ್ಲಾ ಮನೆಬಾಗಿಲಿಗೆ ಬಂದು (ಕಾರಣ ನಮ್ಮ ಮನೆ ತೀರಾ ಒಳಪ್ರದೇಶದಲ್ಲಿದೆ) ಇವರು ಕಂಗ್ರಾಟ್ಸ್ ಹೇಳಿರಬೇಕಾದರೆ ವಾವ್. ತಕ್ಷಣ ಕಾಫಿ ಚಿಪ್ಸ್ ಆತಿಥ್ಯ ನೀಡಿದೆ. ಅವರು ಅರ್ದ ಘಂಟೆ ಹರಟಿ ಕೊನೆಯದಾಗಿ ಒಂದು ಕಥಾ ಸಂಕಲನ ತನ್ನಿ ವರ್ಷಕ್ಕೆ ಐದು ಕತೆಗಳ ಪುಸ್ತಕವಾದರೂ ಸಾಕು ಎಂದು ಹುರುದುಂಬಿಸಿದರು. ಕಥಾಸಂಕಲನ ತರಬೇಕು ಅನ್ನುವುದು ನನ್ನ ಆಶಯವೂ ಆಗಿತ್ತು, ಆದರೆ ಆರ್ಥಿಕ ಮುಗ್ಗಟ್ಟು ಅವಕಾಶ ನೀಡಿರಲಿಲ್ಲ. ಹೀಗೆ ಐದು ಕತೆಗಳ ಪುಟ್ಟ ಪುಸ್ತಕವಾದರೆ ಪ್ರಯತ್ನಿಸಬಾರದೇಕೆ ಅಂತ ಅನ್ನಿಸಿತು. ಇದೇ ವಿಷಯ ನವ್ಯಾಳ ಜತೆ ಚಾಟ್ ಮಾಡುತ್ತಿದ್ದೆ. "ಅಯ್ಯೋ ಮಾವ ಅದಕ್ಯಾಕೆ ನಾನು ಒಂದಿಷ್ಟು ದುಡ್ಡು ಕೊಡುತ್ತೇನೆ ಅಂದುಬಿಡೋದೆ. ನನ್ನೋಳಗಿನ ನನಗೆ ಛೆ ಅಂತ ಅನ್ನಿಸಿತು. ಇದು ಸರಿಯಾ ಅಂತ ಸಾವಿರ ಬಾರಿ ಪ್ರಶ್ನೆ ಕೇಳಿಕೊಂಡೆ. ಹಿಂದೆ " ಒಂದು ಜೇನಿನ ಹಿಂದೆ" ಅಂತ ಒಂದು ಪುಸ್ತಕ ಪ್ರಕಟಿಸಿ ಕೈ ಸುಟ್ಟುಕೊಂಡಿದ್ದು ನೆನಪಾಯಿತು. ಆವಾಗ ವೆನಿಲಾ ಇತ್ತು ನಡೆಯಿತು. ಈಗ ಹೆಚ್ಚುವರಿ ಆದಾಯ..?. ಇರಲಿ ದೂರಪ್ಪನವರು ಪುಟಕೊಟ್ಟ ಆಸೆಗೆ ನವ್ಯಾಳ ಆಸರೆ ಹುಮ್ಮಸ್ಸು ಬಂತಾದ್ದರಿಂದ ಮುದ್ರಣಾಲಯಕ್ಕೆ ಹೋದೆ. ಮಾದುಗೆ ಎಲ್ಲಾ ಹೇಳಿದೆ. ನವ್ಯಾ ಕೊಟ್ಟ ಹಣ ಅಡ್ವಾನ್ಸ್ ಕೊಟ್ಟೆ, ನಾನು ಒಂದಿಷ್ಟು ಹಣ ಹೊಂಚಿದೆ, ಮಿಕ್ಕದ್ದು ಕಥಾ ಸಂಕಲನ ಹೊರಬಂದಮೇಲೆ ಅಂತ ಮನೆಸೇರಿದೆ.
ಇನ್ನು ಅಪ್ಪಯ್ಯನ ಬಳಿ " ನಾನು ಸಂಸಾರದಿಂದ ಒಂದು ರೂಪಾಯಿ ಹಾಕಿಲ್ಲ, ಪುಸ್ತಕದಿಂದ ಐವತ್ತು ಸಾವಿರ ರೂಪಾಯಿ ಲಾಭವಾಗುತ್ತದೆ" ಎಂದು ಹಳೇ ಸುಳ್ಳು ಹೇಳಬೇಕಾಗಿದೆ. ಒಂದು ಚಿಕ್ಕ ಸಮಾರಂಭ ಮಾಡಿ ಅಲ್ಲಿ ವೇದಿಕೆಯಲ್ಲಿದ್ದವರಿಂದ " ನಮ್ಮೂರಿನ ಆಸ್ತಿ ಇವರು, ಕತೆ ಬರೆಯುವುದೆಂದರೆ ಸಾಮಾನ್ಯವಲ್ಲ, ಅತ್ಯುತ್ತಮ ಕೆಲಸ ಮಾಡಿದ್ದಾರೆ" ಎಂದು ಸುಳ್ಳೆಪಳ್ಳೆ ಹೊಗಳಿಸಿಕೊಳ್ಳಬೇಕಾಗಿದೆ. ಮತ್ತು "ಕಥಾ ಸಂಕಲನ ಹೊರತಂದಿದ್ದೇನೋ ಸರಿ ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?" ಎಂದು ಕೇಳದೆ ಹೀಗೆ ಕಥಾ ಸಂಕಲನ ನಿಜವಾಗಲೂ ಬರಲು ಸಹಕರಿಸಿದವರಿಗೆ ಮನದಾಳದ ನಮನ ಸಲ್ಲಿಸಬೇಕಾಗಿದೆ. ನಂತರ ಮತ್ತೆ ಅಂತಿಮವಾಗಿ "ನನ್ನದೊಂದು ಕಥಾ ಸಂಕಲನ ಬಂದಿದೆ......" ಎನ್ನುತ್ತಾ ಸಾಗಬೇಕಾಗಿದೆ. ಮೈಲ್ ಮಾಡಬೇಕಿದೆ, ಬ್ಲಾಗ್ ಬರೆಯಬೇಕಿದೆ. ದೆ ದೆ ದೆ ದೆ...............

Tuesday, June 22, 2010

ಭಯ ಮತ್ತು ಸತ್ಯ


ಈಜಲು ನೀರಿಗಿಳಿದಾಗ ಸರಳವಾದ ವಾಕ್ಯವೊಂದು ನೀರಿಗಿಳಿಯಲು ಹುಮ್ಮಸ್ಸು ನೀಡುತ್ತದೆ. "ನೋಡ್ರಪ್ಪಾ... ನೀರಿನಲ್ಲಿ ಭಯ ಅನ್ನೋದು ನಿಮ್ಮನ್ನು ಮುಳುಗಿಸುತ್ತದೆ. ಧೈರ್ಯ ಅನ್ನೋದು ನಿಮ್ಮನ್ನು ತೇಲಿಸುತ್ತದೆ" ಎಂದು ಮಾಸ್ಟರ್ ಹೇಳಿದಾಗ ಓಹ್ ಇದಾ ನೀರಿನ ಉಪಾಯ ಎಂದು ಗಟ್ಟಿಯಾಗಿ ನಂಬಿ ದುಡುಂ ಅಂತ ನೀರಿಗೆ ಹಾರಬಹುದು. ಮತ್ತು ಆರಾಮವಾಗಿ ಈಜು ಕಲಿಯಬಹುದು ಹಾಗೂ ಜಯಿಸಬಹುದು. ಅದೇ ರೀತಿ ಮುಂದುವರೆದಾಗ ಈಜು ಬಂತು ಅಂದಾಗ ಅದೇ ಮಾಸ್ಟರ್ " ಅಲ್ಲಪ್ಪಾ ನೀರಿನಲ್ಲಿ ಧೈರ್ಯ ತೇಲಿಸುತ್ತೆ ನಿಜ ಆದರೆ ಹುಂಬ ಧೈರ್ಯವೂ ತೇಲಿಸುತ್ತೆ ಇನ್ನೊಂದು ರೀತಿಯಲ್ಲಿ ಅನ್ನೋದು ನೆನಪಿರಬೇಕು" ಅಂತ ಹೇಳಿದಾಗ ಅದೂ ಸತ್ಯ ಅಂತ ಅನ್ನಿಸುತ್ತದೆ. ಹುಂಬ ಧೈರ್ಯ ದೇಹವನ್ನು ಜೀವವಿಲ್ಲದೇ ತೇಲಿಸುತ್ತದೆ ಎಂಬುದು ಸತ್ಯದ ಮಾತು. ಹಾಗಾಗಿ ನೀರು ಬೆಂಕಿಯ ವಿಷಯಗಳಲ್ಲಿ ಧೈರ್ಯ ಒಳ್ಳೆಯದೇ ಆದರೆ ಹುಂಬ ಧೈರ್ಯ ಖಂಡಿತಾ ಒಳ್ಳೆಯದಲ್ಲ.
ಮನೆಯ ಅಂಗಳದಲ್ಲಿ ಪಟ್ಟಾಂಗ ಹೊಡೆಯುತ್ತಾ ಕುಂತಾಗ ಮಾತಿನ ಚಾಲಾಕಿ ಜನರು ಹೇಳುತ್ತಾರೆ " ಅಲ್ಲ ಭಗವಂತ ಪ್ರಾಣಿಗಳಿಗೆ ಈಜು ಎನ್ನುವುದನ್ನು ಸಹಜವಾಗಿ ಕಲಿಸಿರುತ್ತಾನೆ. ಬೇಕಾದರೆ ನಾಯಿಮರಿಯನ್ನು ನೀರಿಗೆ ಎಸೆಯಿರಿ ಅದು ಪಟಪಟನೆ ಈಜಿಕೊಂಡು ದಡ ಸೇರುತ್ತದೆ. ಆದರೆ ಮನುಷ್ಯನೆಂಬ ಮನುಷ್ಯ ಭಯ ಎಂಬ ವಿಷಬೀಜವನ್ನು ಮನಸ್ಸಿನಾಳಕ್ಕೆ ಬಿತ್ತಿಕೊಂಡಿರುವುದರಿಂದ ಯಾರಾದರೂ ಆತನನ್ನು ಬಲಾತ್ಕಾರವಾಗಿ ನೀರಿಗೆ ದಬ್ಬಿದಾಗ ನೀರಿನಲ್ಲಿ ತಾನು ಸಾಯುತ್ತೇನೆ ಎಂಬ ಒಂದೇ ವಿಷಯದ ನೆನಪಾಗಿ ಕೈಕಾಲು ಆಡಿಸುವುದನ್ನು ನಿಲ್ಲಿಸುತ್ತಾನೆ, ಆಗ ಸಾವನ್ನಪ್ಪುತ್ತಾನೆ". ನಿಜ, ಆ ಮಾತುಗಳು ನಿಜ ಹಾಗಂತ ಅಷ್ಟೆಲ್ಲಾ ಭಾಷಣ ಬಿಗಿಯುತ್ತಿರುವ ಅವರನ್ನು ನೀರಿಗೆ ತಳ್ಳಿದರೂ ಅವರೂ ಕೂಡ ಪತಪತ ಕೈಕಾಲು ಬಡಿದು ಕಣ್ಣುಗುಡ್ಡೆ ಮೇಲಕ್ಕೆ ಸೇರಿಸಿಕೊಳ್ಳುತ್ತಾರೆ. ಅಷ್ಟೆಲ್ಲಾ ತಿಳುವಳಿಕೆ ಇದ್ದ ಅವರೇಕೆ ಹಾಗೆ ಎಂಬ ಆಲೋಚನೆ ನಿಮಗೆ ಬಂದರೆ ನೀವು ಯೋಚನಾ ಶೀಲರು ಎಂದರ್ಥ. ಆದರೆ ಅದಕ್ಕೆ ಉತ್ತರ ಮಾತ್ರಾ ತೀರಾ ಪೇಲವ. ಸೇಫಾಗಿ ತಾನು ಕುಳಿತ ಮನುಷ್ಯ ಸೋತ ಕಂಗಾಲಾದ ಮನುಷ್ಯರಿಗೆ ಉಪದೇಶ ಕೊಡಬಲ್ಲ ಆದರೆ ಅದೇ ಕಷ್ಟ ತನಗೆ ಬಂದಾಗ ಅವನ ಆಳದಲ್ಲಿ ಹುಗಿದುಹೋದ ಭಯವೆಂಬ ವಾಕ್ಯಗಳು ದುತ್ತನೆ ಎದ್ದು ನಿಲ್ಲುತ್ತವೆ. ಪರಿಹಾರ ವಿಲ್ಲ ಸ್ವಂತಕ್ಕೆ ನಿಲುಗಡೆಯಿಲ್ಲ ಉಪದೇಶಕ್ಕೆ ಎಂಬ ವಾಕ್ಯವೇ ಸತ್ಯ.
ಭಯ ಎನ್ನುವುದು ಮನುಷ್ಯನ ಒಂದು ಅವಸ್ಥೆ. ಅದು ಅತಿಯಾದಾಗ ರೋಗ. ಆದರೆ ಭಯವೇ ಇಲ್ಲದ ಮನುಷ್ಯ ಅಂತಾದರೆ ಅದೂ ಒಂದು ರೋಗವೇ ಹೊರತು ಆರೋಗ್ಯ ಅಲ್ಲ. ಅತಿಯಾದರೆ ಅಮೃತವೂ ವಿಷ ಎಂದಾದಮೇಲೆ ವಿಷ ವಿಷವಾಗದಿರುತ್ತದೆಯೇ? ಧೈರ್ಯ ಅನ್ನುವುದೂ ಭಯದಂತೆಯೇ ಅದೂ ಯಾವಾಗಲೂ ಎಲ್ಲಾ ಸಮಯದಲ್ಲೂ ಇರಲು ಸಾದ್ಯವಿಲ್ಲ. ಆಗಾಗ ಬರುತ್ತಿರಬೇಕು ಮತ್ತೆ ಅದರ ಹಿಂದೆ ಭಯವೂ ಇರಬೇಕು. ನಿರ್ಭಯ ದ ಹಿಂದೆಯೂ ಭಯ ಇದೆ ಅಭಯದ ಹಿಂದೆಯೂ ಭಯ ಇದೆ. ಭಯಂಕರದಲ್ಲಿಯೂ ಭಯ ಇದೆ. ಆದರೆ ಬೇರೆ ಬೇರೆ ಅಷ್ಟೆ.
ಅಂತಿಮವಾಗಿ: ಭಕ್ತನೊಬ್ಬ ಜೀವನದಲ್ಲಿ ಭಯಗ್ರಸ್ಥನಾಗಿ ಗುರುಗಳೊಬ್ಬರ ಬಳಿ ಹೋಗಿ "ಮಹಾನ್,,, ನನಗೆ ಜೀವಭಯ ಶುರುವಾಗಿದೆ. ನಾನು ಸತ್ಯ ಹೇಳುತ್ತಾ ಬದುಕುತ್ತೇನೆ ಎಂಬ ಸ್ವಘೋಷಿತ ತೀರ್ಮಾನಕ್ಕೆ ಬಂದೆ ಹಾಗೇಯೇ ನಡೆದುಕೊಂಡೆ. ಆದರೆ ಈಗ ಅದರ ಪರಿಣಾಮ ನನ್ನ ಸುತ್ತೆಲ್ಲಾ ವೈರಿಗಳು ತುಂಬಿಕೊಂಡಿದ್ದಾರೆಂಬ ಭಯ ನನ್ನನ್ನು ನಿತ್ಯ ಕಾಡುತ್ತಿದೆ. ಅದಕ್ಕಾಗಿ ಜೀವಭಯದಿಂದ ಪ್ರತಿನಿತ್ಯ ನರಳುವಂತಾಗಿದೆ. ಪರಿಹಾರ ಕೊಡಿ " ದೀನನಾಗಿ ಕೇಳಿದ.
ಅದಕ್ಕೆ ಗುರುಗಳು " ಹೆದರಬೇಡ ಭಕ್ತಾ, ಸತ್ಯ ಹೇಳುವುದರಿಂದ ಯಾರೂ ನಿನ್ನನ್ನು ಏನೂ ಮಾಡಲಾಗದು, ಭಗವಂತ ನಿನ್ನ ಪರವಾಗಿ ಇರುತ್ತಾನೆ, ನಾನು ನಿನಗೆ ಅಭಯ ನೀಡುತ್ತೇನೆ" ಎಂದು ಹೇಳಿ ಪ್ರಸಾದ ನೀಡಿದರು.
ಕಾಲ್ಮುಟ್ಟಿ ನಮಸ್ಕಾರ ಮಾಡಿ ಪ್ರಸಾದ ತೆಗೆದುಕೊಂಡ ಭಕ್ತನಿಗೆ ಎದ್ದುನಿಂತ ತಕ್ಷಣ ಗುರುಗಳ ಹಿಂದೆ ನಿಂತ ಅಂಗರಕ್ಷಕರು
ಕಾಣಿಸಿದರು. ಮರುಕ್ಷಣ ಆತ " ಗುರುಗಳಿಗೆ ಜೀವಭಯ ಇದ್ದಂತಿದೆ, ಹಿಂದೆ ಈ ಪಾಟಿ ಅಂಗರಕ್ಷಕರು ಇದ್ದಾರೆ, ಇನ್ನು ನನಗೆಂತ ಈ ಹೂವಿನ ಪ್ರಸಾದದ ಅಭಯ" ಎಂದು ಸತ್ಯ ನುಡಿದುಬಿಟ್ಟ.
ತಕ್ಷಣ ಅಂಗರಕ್ಷಕರು ಆತನನ್ನು ದರದರ ಎಳೆದುಕೊಂಡು ಆಚೆಬಿಟ್ಟರು. ಗುರುಗಳು ವ್ಯಗ್ರರಾದರು. ಭಕ್ತ ಸತ್ಯ ಹೇಳಿದ್ದರ ಪರಿಣಾಮವಾಗಿ ದಬ್ಬಿಸಿಕೊಂಡು ಮನೆಸೇರಿದ. ಅವನ ಭಯ ಹೊರಟುಹೋಯಿತು.


Monday, June 21, 2010

ಜೋಗ್ ಇಂದು

ಜೋಗ ಹೀಗಿದೆಯಪ್ಪ ಇವತ್ತು ಅಂತ ನಾನು ಹೇಳುತ್ತೇನೆ. ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಎಂಬಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು. ಇನ್ನು ಮುಂದೆ ಕನ್ನಡದಲ್ಲಿ ತಮಿಳು ಚಿತ್ರಗೀತೆಗಳು,

Sunday, June 20, 2010

ಸೇವಂತಿಯೇ... ಸೇವಂತಿಯೇ.......




ಸಪ್ಟೆಂಬರ್-ಅಕ್ಟೋಬರ್ ತಿಂಗಳು ಬಂತೆಂದರೆ "ಗೋಟಗಾರಿನ ಸೇವಂತಿಗೆ ಹೂವು ನೋಡಿ ಬಂದೆಯಾ?" ಎಂಬ ಪ್ರಶ್ನೆ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಗೋಟಗಾರು ಊರಿನ ಸುತ್ತಮುತ್ತಲಿನ ಊರುಗಳಾದ ಮರಹಾನಕುಳಿ, ಹಂಸಗಾರು, ಊರುಗಳಲ್ಲಿ ಹೆಂಗಳೆಯರ ಪ್ರಶ್ನೆ ಸಾಮಾನ್ಯ.
ಕೇವಲ ಐದು ಮನೆಗಳ ಪುಟ್ಟ ಊರಾದ ಗೋಟಗಾರು ಬಣ್ಣಬಣ್ಣದ ಸೇವಂತಿಗೆ ಹೂವಿಗೆ ಅಲ್ಲಿನ ಸುತ್ತಮುತ್ತಲ ಊರುಗಳಲ್ಲಿ ಪ್ರಖ್ಯಾತ. ಗೋಟಗಾರು, ಸೇವಂತಿಗೆಗೆ ಪ್ರಸಿದ್ದಿ ಎಂದ ತಕ್ಷಣ ಎಕರೆಗಟ್ಟಲೆ ಜಾಗದಲ್ಲಿ ಸೇವಂತಿಗೆ ಬೆಳೆದಿರಬಹುದೆಂದು ಊಹಿಸಬೇಡಿ. ಬಣ್ಣ ಬಣ್ಣದ ಕಾರದ ಕಡ್ಡಿ, ಹೊಸಬಾಳೆ ಸೇವಂತಿಗೆ, ಬಟನ್ ಸೇವಂತಿ, ಗುಚ್ಚುಸೇವಂತಿ ಮುಂತಾದ ಗ್ರಾಮೀಣ ಭಾಗದವರಿಂದ ನಾಮಾಂಕಿತಗೊಂಡ ಇಪ್ಪತ್ತರಿಂದ ಮೂವತ್ತು ಜಾತಿಯ ಆಕರ್ಷಕಹೂವುಗಳು ಮನೆಯಂಗಳದಲ್ಲಿ ರಾರಾಜಿಸುತ್ತವೆ. ಪ್ರತೀ ವರ್ಷ ಒಂದೆರಡು ಹೊಸಜಾತಿಯ ಹೂವುಗಳು ಸೇರ್ಪಡೆಗೊಳ್ಳುತ್ತವೆ. ಇರುವ ಐದು ಮನೆಗಳಲ್ಲಿನ ಹೂವುಗಳನ್ನು ನೋಡಲು ನೂರಾರು ಕಿಲೋಮೀಟರ್ ದೂರದಿಂದ ಜನರು ಬಾರದಿದ್ದರೂ ಹತ್ತಾರು ಕಿಲೋಮೀಟರ್ ದೂರದ ಹಳ್ಳಿಗಳಿಂದ ಪ್ರತೀವರ್ಷ ಸೇವಂತಿ ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಗೋಟಗಾರಿನ ಅರುಣ-ಸೌಮ್ಯ ದಂಪತಿಗಳು. ಇಲ್ಲಿ ಪ್ರತೀ ಮನೆಯಲ್ಲಿನ ಯುವ ದಂಪತಿಗಳು ಕಳೆದ ಐದುವರ್ಷಗಳಿಂದ ಪ್ರತೀ ವರ್ಷವೂ ಶ್ರದ್ಧೆಯಿಂದ ಸೇವಂತಿಯನ್ನು ಬೆಳೆಸುತ್ತಾ ಬಂದಿರುವುದು ನೋಡುಗರ ಕಣ್ಣುಗಳಿಗೆ ತಂಪನ್ನು ನೀಡುತ್ತಿರುವುದಂತೂ ನಿಜ. ಸೇವಂತಿಗೆ ಹೂವನ್ನು ಮಾರಾಟಮಾಡಿ ಹಣಗಳಿಸುವುದಕ್ಕಾಗಿ ಬೆಳಸದೆ ಇರುವುದರಿಂದ ಹೂವುಗಳು ಗಿಡದಲ್ಲಿಯೇ ಉಳಿದು ನೋಡುಗರ ಮನತಣಿಸುವಲ್ಲಿ ಯಶಸ್ವಿಯಾಗಿದೆ. ಇದೇ ತರಹ ಸಾಗರದ ಸುತ್ತಮುತ್ತಲಿನ ಊರುಗಳಾದ ಮಂಕಾಳೆ, ಇಕ್ಕೇರಿ ಮುಂತಾದ ಹಳ್ಳಿಗಳಲ್ಲಿ ತಾವರೆ(ಡೇರೆ) ಹಾಗೂ ಸೇವಂತಿ ಹೂವುಗಳನ್ನು ಅಂದಕ್ಕಾಗಿಯೇ ಬೆಳಸುತ್ತಾ ಬಂದಿರುವ ಹವ್ಯಾಸಿಗರು ತಾವೂ ಆನಂದ ಹೊಂದಿ ಹಾದಿಹೋಕರ ಮನವನ್ನು ಪುಕ್ಕಟ್ಟೆ ತಣಿಸುತ್ತಿದ್ದಾರೆ.