Wednesday, October 5, 2011

ಇಲ್ಲಿಗೆ ಬಂದವರು ಅಲ್ಲಿಗೆ ಬರುತ್ತೀರಿ ಎಂಬ ನಂಬಿಕೆಯೊಂದಿಗೆ.

ಹೌದೇ ಹೌದು, ಈ ಬರಹ ಓದಿ ಮುಗಿದ ನಂತರ ನೀವು ಕಂಗ್ರಾಟ್ಸ್ ಅಂತ ಕಾಮೆಂಟ್ ಹಾಕಿಯೇ ಹಾಕುತ್ತೀರಿ, ಅಯ್ಯೋ ಕಾಮೆಂಟ್ ಬರೆದು ಆನಂತರ ಒಂದಿಷ್ಟು ಅಕ್ಷರ ತುಂಬಿ ಪೋಸ್ಟ್ ಮಾಡುವಷ್ಟು ಸಮಯ ನಿಮಗೆ ಇಲ್ಲ ಅಂತ ನನಗೂ ಗೊತ್ತು, ಆದರೆ ಹಾಗೆಯೇ ಬಿಡುವುದಿಲ್ಲ, ಮನಸ್ಸಿನೊಳಗೆ ಗುಡ್ ಅಂತ ಅಂದುಕೊಳ್ಳುತ್ತೀರಿ, ಎಲ್ಲಾ ಭಾವನೆಗಳಿಗೆ ಅಕ್ಷರ ರೂಪವನ್ನೇ ಕೊಡಬೇಕೆಂದಿಲ್ಲ, ಮನಸಾರೆ ಹರಸಿದರೂ ಅದು ತಲುಪುತ್ತದೆ, ತಲುಪಿದೆ. ಭೂಮಿ ದುಂಡಗಿದೆ(ಸರ್ಕಲ್ ಅರ್ಥದಲ್ಲಿ), ಹಾಗಾಗಿ ನಾವೂ ನೀವು ಒಂದಲ್ಲ ಒಂದು ದಿವಸ ಸೇರಲೇ ಬೇಕು ಅವತ್ತು ನಿಮ್ಮ ಕೈಯಲ್ಲಿ ಒಂದು ಪುಸ್ತಕ ಇಡುತ್ತೇನೆ. ಹಿಂದೆ ಬರೆದ ಒಂದು ಜೇನಿನ ಹಿಂದೆ, ಹಾಗೂ ಕಟ್ಟು ಕತೆಯ ಕಟ್ಟು, ಕೂಡ ನೀವು ಆಸ್ಥೆಯಿಂದ ನನಗೊಂದು ಕಾಪಿ ಕಳುಹಿಸು ಅಂತ ಹೇಳಿದರೂ ನನಗೆ ಕಳುಹಿಸಲಾಗಲಿಲ್ಲ, ಇರಲಿ ಈಗ ನೇರ ವಿಷಯಕ್ಕೆ ಬರೋಣ,
ಡಿಸೆಂಬರ್ ಅಂತ್ಯದೊಳಗೆ "ಬ್ಲಾಗ್ ಬರಹಗಳು" ಮುದ್ರಣವಾಗಿ ಹೊರಬರುತ್ತಿದೆ ಎಂಬ ವಿಷಯ ನನ್ನಷ್ಟೇ ಸಂತೋಷ ನಿಮಗೆ. ದಿನಾಂಕ ತಿಳಿಸುತ್ತೇನೆ ಅಕಸ್ಮಾತ್ ಪುರ್ಸೂತ್ತು ಇದ್ದರೆ ಬನ್ನಿ, ಇಲ್ಲಿಗೆ ಬಂದವರು ಅಲ್ಲಿಗೆ ಬರುತ್ತೀರಿ ಎಂಬ ನಂಬಿಕೆಯೊಂದಿಗೆ.

ಇತಿ
ಆರ್.ಶರ್ಮಾ.ತಲವಾಟ

Monday, October 3, 2011

ನಾವಲ್ಲ ಗ್ರೇಟ್, ಅವರೇ...!.ಶಕ್ತಿ ಬಹುಪಾಲು ಎಲ್ಲರಲ್ಲಿಯೂ ಇರುತ್ತದೆ, ವಿಧಿ ವಿಧಾನ ಬೇರೆ ಬೇರೆಯಷ್ಟೆ. ಆದರೆ ಬಹುಪಾಲು ಜನರ ಶಕ್ತಿ ಯುಕ್ತಿಗಳೆಲ್ಲಾ ಇದೆ ಅಂತ ಗೊತ್ತಾಗಲು ಮತ್ತೊಬ್ಬರು ಬೇಕು. ಆ ಮತ್ತೊಬ್ಬರು ಇದ್ದರೆ ನಮ್ಮ ನಿಮ್ಮಲ್ಲಿ ಸಂದುಮೂಲೆಯಲ್ಲಿ ಅಡಗಿದ್ದ ಶಕ್ತಿ ಧುತ್ತನೆ ಎದ್ದು ನಿಲ್ಲುತ್ತದೆ. ಕೈಕಾಲು ಮುಂತಾದ ಅವಯವಗಳೆಲ್ಲಾ ನೂರಕ್ಕೆ ನೂರು ಸರಿಯಿರುವ ನಮ್ಮ ನಿಮ್ಮಂತಹ ಜನರ ಬಳಿ ಸಿಕ್ಕಾಪಟ್ಟೆ ಓಡುವ ಶಕ್ತಿಯಿದ್ದರೂ ನಿತ್ಯ ಜೀವನದಲ್ಲಿ ನಾವು ಬಿರಬಿರನೆ ನಡೆಯಲಾರೆವೂ ಕೂಡ. ಮಾರುದ್ದ ಹೋಗಲು ಕುಂಡೆಗೊಂದು ಬೈಕ್ ಬೇಕಾಗಿದೆ. ಜಸ್ಟ್ ಹೀಗೆ ನೆನಪಿಸಿಕೊಳ್ಳಿ, ಒಬ್ಬರೇ ಹೋಗುತ್ತಿದ್ದಾಗ ಹುಲಿಯೊಂದು ಅಟ್ಟಿಸಿಕೊಂಡು ಬಂದರೆ..?, ಹೌದು ಆವಾಗ ನಮ್ಮ ಓಟದ ಶಕ್ತಿ ನಮಗೇ ಅಚ್ಚರಿ ಹುಟ್ಟಿಸಿಬಿಡುವಷ್ಟಿದೆ, ಬಳಸದ ಕತ್ತಿ ತುಕ್ಕು ಹಿಡಿದಂತಾಗಿದೆ ನಮ್ಮ ಸ್ಥಿತಿ ಅಷ್ಟೆ.
ಇವೆಲ್ಲಾ ಪೀಠಿಕೆಯ ಹಿಂದಿದೆ ಯಥಾಪ್ರಕಾರ ನನ್ನದೊಂದು ರಗಳೆ, ಪುರ್ಸೊತ್ತಿದ್ದರೆ ಕೇಳಿ ಅಲ್ಲ ಓದಿ, ಇಲ್ಲದಿದ್ದರೆ ಹೋಗಲಿ ಬಿಡಿ.
ಮನೆಗೆ ಕರೆಂಟು ಬೇಕು, ಆ ಕರೆಂಟ್ ಎಂಬ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಒಂದಿಷ್ಟು ನಿಯಮಗಳಿವೆ, ಮನೆಕಟ್ಟಿಸುವ ಭರಾಟೆಯಲ್ಲಿ ಮುಳುಗಿದ್ದ ನಾನು ಅವನ್ನೆಲ್ಲಾ ಮರೆತು ತೆಗೆದುಕೊಂಡರಾಯಿತು ಎಂಬ ಉಢಾಫೆಯಲ್ಲಿ ನನ್ನ ಪಾಡಿಗೆ ನಾನು ಕಟ್ಟಿಸುವ ಕೆಲಸದಲ್ಲಿ ತಲ್ಲೀನನಾಗಿಬಿಟ್ಟಿದ್ದೆ. ಮೊನ್ನೆ ಶುಕ್ರವಾರ ನನ್ನ ಕಿವಿಯಲ್ಲಿ ಒಬ್ಬರು " ರಾಗು, ನಿನ್ನ ಹೊಸ ಮನೆಗೆ ಕರೆಂಟು ಕೊಡಬೇಡಿ ಎಂಬರ್ಥದ ಅರ್ಜಿ ಗ್ರಾಮಪಂಚಾಯಿತಿಗೆ ಬಂದು ಬಿದ್ದಿದೆ, ..........ಎಂಬಾತ ಹಠಕ್ಕೆ ಬಿದ್ದಿದ್ದಾನೆ ನಿನಗೆ ಕರೆಂಟು ಕೊಡಬಾರದೆಂದು" ಎಂದರು, ಮತ್ತೂಬ್ಬರು ರಾಗು ".......:, ಕೆಇಬಿ ಯವರಿಗೆ ಫೋನ್ ಮಾಡಿ ’ಅವರ ಡಾಕ್ಯುಮೆಂಟ್ ಸರಿ ಇಲ್ಲ ಕರೆಂಟು ಕೊಡಬೇಡಿ" ಎಂದಿದ್ದಾನೆ ಎಂದರು. ಅಬ್ಬಾ ಅನ್ನಿಸಿಬಿಟ್ಟಿತು. ಶುಕ್ರವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ಈ ನ್ಯೂಸ್ ಕಿವಿಗೆ ಬಿದ್ದದ್ದೆ ಅದೆಂತದೋ ಬೂತ ಶಕ್ತಿ ಆವರಿಸಿಕೊಂಡಂತಾಯಿತು, ಬೈಕು, ಕಾರು, ಜನ, ಡಾಕ್ಯುಮೆಂಟ್ ಮುಂತಾದ ಅವಶ್ಯಕತೆಯಿರುವ ಎಲ್ಲಾವುದನ್ನು ಒಟ್ಟು ಮಾಡಿಕೊಂಡು ಹಿಂದೆಮುಂದೆ ಓಡಾಡಿ ಮಂಡೆಯ ಮೇಲೆ ದೋಸೆ ಹಿಟ್ಟು ಹೊಯ್ದರೆ ಚುಂಯ್ ಎಂದು ಕ್ಷಣ ಮಾತ್ರದಲ್ಲಿ ದೋಸೆಯಾಗುವಷ್ಟು ತಲೆಕೆಡಿಸಿಕೊಂಡೆ. ಶನಿವಾರ ಮಧ್ಯಾಹ್ನ ವಿದ್ಯುತ್ ಮನೆ ಬೆಳಗಿತು.
ಚಕ್ ಎಂದು ಬಲ್ಪ್ ಹತ್ತಿದ ತಕ್ಷಣ ಒಂಥರಾ ನಿರುಮ್ಮಳ ಭಾವ. ಸರಿ ಸರಿ ಸರಿ ಈಗ ಮತ್ತೆ ಆರಂಭಕ್ಕೆ ಬರೋಣ. ನಮ್ಮ ಶಕ್ತಿ ಇದೆ ಅಂತ ನಮಗೆ ಗೊತ್ತಾಗಲು ಹುಲಿ ನಮ್ಮ ಹಿಂದೆ ಬರಬೇಕಾ, ಅಥವಾ ಇಲಿಯ ಹಿಂದೆ ನಾವು ಓಡಬೇಕಾ?, ಇರಲಿ ಅವೆಲ್ಲಾ ಮಿಲಿಯನ್ ಡಾಲರ್ ಪ್ರಶ್ನೆಗಳಂತೂ ಅಲ್ಲ ಸಿಕ್ಕಾಪಟ್ಟೆ ತಲೆಕೆರೆದುಕೊಂಡು ಉತ್ತರಿಸಲು, ಹಿಂದೆಯೂ ಕೋಟ್ಯಾಂತರ ಜನ ಮನೆ ಕಟ್ಟಿದ್ದಾರೆ, ಅವರೆಲ್ಲಾ ಕರೆಂಟು ಪಡೆದಿದ್ದಾರೆ, ಅಲ್ಲಿ ಲಕ್ಷಾಂತರ ಜನಕ್ಕೆ ಇಂಥಹ ಬೆನ್ನೆಟ್ಟಿಬರುವವರು ಇದ್ದರು, ಅವರುಗಳು ಕೂಡ ಹೀಗೆ ಎನೋ ಒಂದು ಮಾಡಿದ್ದರು. ಪ್ರಶ್ನೆ ಅದಲ್ಲ, ಆದರೆ ನಮ್ಮನ್ನು ತಿವಿದು ಎಬ್ಬಿಸಲು ಮತ್ತೊಬ್ಬರು ಬೇಕಲ್ಲ, ಅವರು ಮಾತ್ರಾ ಅಪರೂಪ. ಪಾಪ ಮಂದಿ ಅವರಿಗೆ ಹಿಡಿಶಾಪ ಹಾಕುತ್ತಾರೆ ಆದರೆ ಅವರು ತಮ್ಮ ಕೆಲಸ ಬಿಟ್ಟು ಎನೆಲ್ಲಾ ಮಾಡುತ್ತಿರುತ್ತಾರಲ್ಲ ಅದು ನಿಜವಾಗಿಯೂ ಕಷ್ಟದ್ದು, ಕಾರಣ ಅವರ ಹಿಂದೆ ಹುಲಿಯೂ ಇಲ್ಲ ಮುಂದೆ ಇಲಿಯೂ ಇಲ್ಲ, ಜತೆಗೆ ಗುರಿಯೂ ಇಲ್ಲ ಬಹಳಷ್ಟು ಗೊತ್ತೂ ಇಲ್ಲ, ಹಾಗಾಗಿ ನಾವಲ್ಲ ಗ್ರೇಟ್, ಅವರೇ...!. ಟೋಟಲ್ ಏನೇ ಆದರೂ ತೆನವಿನಾ ತೃಣಮಪಿ ನಚಲತಿ ಅಂತ ನಾವು ನಂಬಿಕೊಂಡಮೇಲೆ ಮುಗಿಯಿತಷ್ಟೆ.