Thursday, September 9, 2010

ಗೌರಿ-ಗಣೇಶ ಹಬ್ಬದ ಶುಭಾಶಯಗಳು

ಪ್ರಿಯ ಓದುಗನ್,
ಆ ಪರಮಾತ್ಮನೆಂದು ಬಹು ಜನರಿಂದ ಕರೆಯಲ್ಪಡುವ ಗಣೇಶನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂಬುದು ನನ್ನ ಹರಕೆ ಹಾರೈಕೆ. ಓದಿದ-ಕಾಮೆಂಟಿಸಿದ-ನೋಡಿದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ಈ ಗೌರಿ ಹೂವು ಅರಳಿ ನಿಂತಂತೆ ನಿಮ್ಮ ಬಾಳಿನ ಸಂತೋಷದ ಕ್ಷಣಗಳು ಅರಳಲಿ. ನಾನಂತೂ ವರ್ಷದಿಂದ ವರ್ಷಕ್ಕೆ ಗಣೇಶನಿಗೆ ಹತ್ತಿರವಾಗುತ್ತಿದ್ದೇನೆ. ಹೋದ್ವರ್ಷ ಚಿತ್ರವಿಚಿತ್ರವಾಗಿರುವ ಗಣನಾಯಕನ ಹೆಸರು ಪಠಿಸಿ ಸಹಸ್ರನಾಮಾವಳಿ ಮಾಡುವುದು ಕಷ್ಟ ಎನ್ನಿಸಿದ್ದರಿಂದ ಸಾವಿರ ಬಾರಿ ಗಣೇಶ ಗಣೇಶ ಗಣೇಶ ಅಂತ ಹೇಳಿ ಸಹಸ್ರನಾಮ ಪುಸ್ತಕ ಮುಚ್ಚಿಟ್ಟಿದ್ದೆ. ಈ ವರ್ಷ ಹೊಸ ಐಡಿಯಾ ಹೊಳೆದಿದೆ " ೧೦೦ಗಣೇಶ X ೧೦ ಗಣೇಶ" ಎಂದು ಒಂದು ಬಾರಿ ಹೇಳಿಬಿಡುತ್ತೇನೆ. ಅಲ್ಲಿಗೆ ಗಣಪತಿ ಸಹಸ್ರನಾಮ ಮುಗಿದಂತೆ. ಅವನು ಖಂಡಿತಾ ಖುಷ್ ಆಗುತ್ತಾನೆ ಅಂತ ಗೊತ್ತು ಕಾರಣ ತೇನವಿನಾ ತೃಣಮಪಿ ನಚಲತಿ, ಹಾಗಾದಮೇಲೆ ಇಂತಹ ಘನಂದಾರಿ ಐಡಿಯಾ ಅವನಿಂದಲೇ ವರಪ್ರಸಾದ ಅಲ್ಲವೇ. ಅದಾದಮೇಲೆ ಭಾನುವಾರ ಪಂಚಮಿ,ಚಕ್ಲಿ-ಕಡುಬು- ಕಜ್ಜಾಯದ ಊಟ ನಮ್ಮಮನೆಯಲ್ಲಿ ಇರುತ್ತದೆ, ಸಂಜೆ ಗಣಪತಿಯನ್ನು ಕೆರೆಗೆ ದುಡೂಂ ಮಾಡುವ ಪ್ರೋಗ್ರಾಂ ಇದೆ. ಸಂಜೆ ಡಂ ಡಂ ಕೂಡ ಇದೆ. ಎಲ್ಲರೂ ಬನ್ನಿ ಎನ್ನುತ್ತಾ...... ಮತೊಮ್ಮೆ ಗಣಪತಿ ಬಪ್ಪಾ ಮೋರಯಾ......

ವಿಸೂ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಬ್ಲಾಗಿಂಗ್ ಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ

Wednesday, September 8, 2010

ಜಾಯಿಕಾಯಿ ಜಾಪತ್ರೆ
ವಾಮಾಚಾರಿ ಸದಾಚಾರಿಯಾದ ಬಗೆ...!

ಅದೊಂದು ಮೂವತ್ತು ಮನೆಗಳ ಸಣ್ಣ ಊರು. ಎಲ್ಲರ ಮನೆಗಳೂ ಬಹುಪಾಲು ಖಾಲಿ ಖಾಲಿ. ಹುಡುಗರು ಪಟ್ಟಣ ಸೇರಿದ್ದು-ಪಾಲಕರು ಕುಟುಂಬ ಯೋಜನೆ ಪಾಲಿಸಿದ್ದು ಹೀಗೆ ಹತ್ತಾರು ಕಾರಣಗಳು ಊರು ಭಣ ಭಣ ಎನ್ನಲು. ಇಡೀ ಊರು ಜಾಲಾಡಿದರು
ಆಗರ್ಭ ಶ್ರೀಮಂತರು ಇಲ್ಲ. ಬಹುಪಾಲು ಜನ ಅವರಮಟ್ಟಿಗಿನ ಜೀವನಕ್ಕೆ ಸಾಕಾಗುವಷ್ಟು.
ಆತನಿಗೂ ಅಷ್ಟೆ ಎರಡೆ ಎಕರೆ ತೋಟ ಹತ್ತು ವರ್ಷದ ಹಿಂದೆ. ಇದ್ದಕ್ಕಿದ್ದಂತೆ ಒಂದು ದಿವಸ ಮನೆಯಮೇಲೆ ಕಲ್ಲುಗಳು ಬೀಳತೊಡಗಿದವು. ಅಲ್ಲಿಗೆ ಜ್ಯೋತಿಷ್ಯ ಪ್ರಾರಂಭವಾಯಿತು. ಮಾಟಮಂತ್ರ ಜಪತಪ ನಿತ್ಯ. ಜನರ ಕಷ್ಟಗಳ ಪ್ರಮಾಣ ಪ್ರಪಂಚದಲ್ಲಿ ಎಷ್ಟಿದೆ ನೋಡಿ? ಹತ್ತೇ ವರ್ಷದಲ್ಲಿ ಆತ ೧೩ ಎಕರೆ ಭಾಗಾಯ್ತು ಒಡೆಯನಾದ. ಮನೆಯೆದುರು ಮೂರು ಕಾರುಗಳು ಸ್ವಂತದ್ದು. ಶ್ರಾವಣ ಮಾಸದಲ್ಲಿ ಕನಿಷ್ಟವೆಂದರೂ ನಾಲ್ಕದು ಲಕ್ಷದ ಸಂಪಾದನೆ. ಆತ ಎಸ್ ಎಸ್ ಎಲ್ ಸಿ ಫೇಲ್. ಆದರೆ ಬರುವ ಜನರು ಇಂಜನಿಯರಿಂಗ್ ಮೆಡಿಕಲ್ ಪಾಸ್. ಇಷ್ಟಿದರೂ ಆತ ಊರಿನ ದೇವಸ್ಥಾನಕ್ಕೆ ವರಾಡ ಕೊಡುತ್ತಿರಲಿಲ್ಲ. ಸೀಮೆಯ ದೇವಸ್ಥಾನಕ್ಕೂ ನಾಸ್ತಿ. ಆದರೂ ದೇವರ ನಂಬಿ ಜೀವನ....!
ಊರಿನ ತಲೆಯಲ್ಲೊಂದು ಎರಡೆಕರೆ ವಿಶಾಲ ಜಾಗ. ಅಲ್ಲಿ ಲಕ ಲಕ ಎನ್ನುವ ಅರಳಿ ಮರ. ಊರವರು ನೂರಾರು ವರ್ಷದಿಂದ ಪೂಜಿಸುತ್ತಿದ್ದ ಜಟಕ ಚೌಡಿಗಳ ನಂಬಿಕೆಯ ಸ್ಥಳ. ಅದು ಆತನಿಗೆ ಕಣ್ಣಿಗೆ ಬಿತ್ತು. ಬೇಲಿ ಹಾಕಿದ. ಮಲಗಿದ್ದ ಊರು ಪುಟಿದೆದ್ದಿತು. ಪ್ರತಿಭಟಿಸಿತು. ಹಣವಿಲ್ಲದವರ ಕೂಗು ಎಷ್ಟರವರೆಗೆ ನಡೇದೀತು ಎಂಬ ಹಮ್ಮು ಆತನದ್ದು. ಆದರೆ ತಾತ್ಕಾಲಿಕ ವಿಜಯ ಊರವರಿಗೆ. ಬೇಲಿ ಕಿತ್ತೆಸೆಯಲ್ಪಟ್ಟಿತು.
ಬಂತು ಶ್ರಾವಣ ಮಾಸ. ಆತ ತನ್ನ ದಾರಿ ಬದಲಿಸಿದ. ಬಾಗಿನದ ಹೆಸರಿನಲ್ಲಿ ಸುತ್ತಮುತ್ತಲಿನ ನೂರಾರು ದಂಪತಿಗಳನ್ನು ಮನೆಗೆ ಕರೆಯಿಸಿದ. ಜನ ಬೆಂಬಲ ತನಗಿದೆ ಎಂದು ಸಹಿ ಹಾಕಿಸಿಕೊಂಡ. ಅಲ್ಲಿಯವರೆಗೆ ದೇವರ ಪೂಜೆ ಮಾಡದಿದ್ದವರು ಬಂದು ಎರಡು ಸೀರೆ ಪಡೆದು ಉಂಡೆದ್ದು ಹೋದರು. ಟ್ರಸ್ಟ್ ಶ್ರಾವಣ ಮಾಸದಲ್ಲಿ ರಚಿಸಿದ. ಶಾಲೆಗೆ ಬೀರು ಕೊಟ್ಟ, ಮೂರೂವರೆ ಸಾವಿರ ರೂಪಾಯಿಯ ಬೆಲೆಯ ಬೀರು ಕೊಡಲು ಒಂದು ನೂರಾಐವತ್ತು ಜನರ ಬರೊಬ್ಬರಿ ಮೆರವಣಿಗೆ. ನಂತರ ಒಂದು ಕಾರ್ಯಕ್ರಮ ಅಲ್ಲಿ "ಜಾಗ ಬಿಡೆವು" ಎಂಬ ಪರೋಕ್ಷ ಘೋಷಣ ದೂರದೂರದಿಂದ ನೂರೈವತ್ತು ಜನರು ಇಲ್ಲಿಗೆ ಬರಲು ಖರ್ಚಾದ ಹಣ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು. ಪಕ್ಕದೂರಿನ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟ. ಈಗ ಆ ಜಾಗ ಟ್ರಸ್ಟ್ ಗೆ ಬೇಕು ಕೊಡಿ ಎಂದು ಸರ್ಕಾರಕ್ಕೆ ಅರ್ಜಿ. ಅಲ್ಲೊಂದು ಔಷಧಿವನ ದ ತಯಾರಿ ನಡೆದಿದೆ. ನೋಡಿ ಉದ್ದೇಶ ಒಂದೆ ಜಾಗ ಕಬಳಿಸುವುದು ಆದರೆ ಮಾರ್ಗ ಬೇರೆ. ಆದರೆ ಏನೇನೋ ಮಾಡುತ್ತಿದ್ದವನನ್ನು ಸದಾಚಾರಿಯನ್ನಾಗಿಸಿ ಟರ್ನ್ ಮಾಡಿದ ಹೆಮ್ಮೆಯಿಂದ ಬಡಗ್ರಾಮಸ್ಥರು ಒಳಗೊಳಗೆ ನಗುತ್ತಿದ್ದಾರೆ.
ಇರಲಿ ಹಣಬಲವೋ ಸತ್ಯಬಲವೋ ಎಂಬುದು ಕಾಲ ನಿರ್ಧರಿಸುತ್ತದೆ. ಆದರೆ ಪ್ರಪಂಚ ಎಷ್ಟೇ ಮುಂದುವರೆದರೂ ಮಂದಿಯ ಮಟ್ಟ ಮಾತ್ರಾ ವಿಚಿತ್ರ ವಿಶೇಷ ವಿಪರ್ಯಾಸ. ಪ್ರಕೃತಿಯ ಶಕ್ತಿ ಅಗಾಧ. ಯಾರ ಜೀವನವೂ ಯಾರ ಕೈಯಲ್ಲಿಯೂ ಇಲ್ಲ ಎಂಬುದು ಮೇಲ್ಮಟ್ಟದ ಆಲೋಚನೆಗೆ ಸಿಗುತ್ತದೆ. ಆದರೆ ಬಳಸಿಕೊಳ್ಳುವವರು ಬುದ್ಧಿವಂತರು ಕಾಲನ ಚಕ್ರಕ್ಕೆ ಸಿಕ್ಕಿ ಕಾಲವಾಗುತ್ತಾರೆ ಎಂಬ ಸರಳ ತತ್ವ ಮರೆತಿರುತ್ತಾರೆ. ಅದಕ್ಕೆ ಎನ್ನುವುದು "ಕರ ಎಷ್ಟು ಹಾರಿದರೂ ಗೂಟದ ಕೆಳಗೆ". ಪ್ರಕೃತಿಯೆಂಬ ಗೂಟ ನಿಗೂಢ ಹುಲು ಮನುಷ್ಯ ಅದ ತಿಳಿಯದೇ ಹಾರುತ್ತಲೇ ಇದ್ದಾನೆ ಲಾಗಾಯ್ತಿನಿಂದ ಸತ್ಯ ತಿಳಿಯದೆ. ಪಿಚ್ಚೆನಿಸುತ್ತದೆ.


Tuesday, September 7, 2010

ನನ್ನದು ಧ್ಯಾನಮುದ್ರೆ...!

ಫೋನ್ ಇಟ್ಟವನು ಕಣ್ಮುಚ್ಚಿ ಕುಳಿತಿದ್ದೆ. ನೋಡುಗರಿಗೆ ಅದು ಧ್ಯಾನ ಮುದ್ರೆ. ನನ್ನೊಳಗೆ ಅವೆಲ್ಲಾ ಯಾವುದೂ ಇರಲಿಲ್ಲ. ಮನಸ್ಸು ಬಹಳ ಗಲಿಬಿಲಿಗೊಂಡಿತ್ತು. ಅದನ್ನು ಸಮಾಧಾನ ಸ್ಥಿತಿಗೆ ತಂದು ನಿಲ್ಲಿಸುವುದು ಅದೇಕೋ ನನ್ನ ಬಳಿ ಆಗುತ್ತಿರಲಿಲ್ಲ. ಗಲಿಬಿಲಿಗೆ ಮುಖ್ಯ ಕಾರಣ ಮಂಜ. ಆಮೇಲೆ ಮಿಕ್ಕಿದ್ದು
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಂಜನಿಗೆ ಅದ್ಯಾರೋ ಗೇಣಿ ಗದ್ದೆ ಮಾಡು ಅಂತ ತಲೆ ತುಂಬಿದರೋ ಗೊತ್ತಿಲ್ಲ. ಮಲೆನಾಡಿನಲ್ಲಿ ಭತ್ತದ ಗದ್ದೆ ಅಷ್ಟೊಂದು ಲಾಭದಾಯಕ ಅಲ್ಲ. ಜಮೀನು ಸ್ವಂತದ್ದಾದರೆ ಅಷ್ಟಿಷ್ಟು ಉಳಿಯುತ್ತದೆ, ಗೇಣಿಗೆ ಮಾಡಿ ಲಾಭ ಮಾಡುವುದು ಕಷ್ಟಕರ. ಆದರೆ ಮಂಜನಿಗೆ ಲಾಭ ನಷ್ಟದ ಅಂದಾಜು ಇರಲಿಲ್ಲ, ಎಕರೆ ಗದ್ದೆಗೆ ಹತ್ತು ಚೀಲ ಬತ್ತ ಗೇಣಿ ಕೊಡುವುದಾಗಿ ಮಾತನಾಡಿ ಗದ್ದೆ ಮಾಡಿದ. ಗದ್ದೆ ಯಜಮಾನರು ಸರ್ಕಾರಿ ಗೊಬ್ಬರ ಕೊಡುವುದು ಎಂಬುದು ತೀರ್ಮಾನವಾಗಿತ್ತು. ಅವರು ಅದ್ಯಾವುದೋ ಸಾದಾರಣ ಗೊಬ್ಬರ ಕೊಟ್ಟರು. ಆರು ತಿಂಗಳುಗಳ ಕಾಲ ಗಂಡಹೆಂಡತಿ ಇಬ್ಬರೂ ಖುಷಿಯಾಗಿ ದುಡಿದರು. ಫಸಲು ಕಣ ಸೇರಿದಾಗ ಗೇಣಿಗೆ ಗದ್ದೆ ಕೊಟ್ಟವರು ಭತ್ತ ಒಯ್ಯಲು ಬಂದರು. ಅವರಿಗೆ ಕೊಡಬೇಕಾದ ಹತ್ತು ಚೀಲ ಕೊಟ್ಟ ನಂತರ ಇವನಿಗೆ ಉಳಿದದ್ದು ಕೇವಲ ಅರ್ದ ಚೀಲ ಭತ್ತ. ಮಂಜನ ತಲೆ ಮೇಲೆ ಒಂದಿಷ್ಟು ಸಾಲ. ಗಂಡ ಹೆಂಡತಿ ಇಬ್ಬರೂ ಹತಾಶರಾದರು. ಗೇಣಿಗೆ ಕೊಟ್ಟವರು ಸ್ವಲ್ಪ ಕರುಣೆ ತೋರಬಹುದಿತ್ತು. ಇಲ್ಲ ಅವರು ಖಡಕ್ಕಾಗಿ ವರ್ತಿಸಿದರು. ನೋವನ್ನು ನುಂಗಿದ ಹತಾಶ ಜೀವಗಳು ಮನೆಗೆ ಹೋಗಿ ಕದ ಹಾಕಿಕೊಂಡರು. ಆ ಕದವಾದರೋ ತಳ್ಳಿದರೆ ಬೀಳುವಂತಹದು.
ಮಂಜನ ಕತೆ ಕೇಳಿದ ವ್ಯಥೆಗೆ ನಾನೊಂದಿಷ್ಟು ಹಣ ಕೊಟ್ಟೆ. ಅದು ತೀರಾ ದೊಡ್ಡ ಮೊತ್ತವಲ್ಲ. ಇರಲಿ ಅವರವರ ಪಾಡು ಅವರವರಿಗೆ, ಆದರೂ ಅನ್ನದಾತ ಬೆವರು ಸುರಿಸಿದರೂ ಹೀಗೇಕೆ ಎಂಬ ಪ್ರಶ್ನೆ ಹಲವುಬಾರಿ ನನಗೆ ಕಾಡುತ್ತದೆ ಉತ್ತರ ಸಿಗದೆ.
ಈಗ ಮೊದಲು ಬಂದ ಫೋನಿನ ವಿಚಾರಕ್ಕೆ ಬರೋಣ. ಅವರು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ತಿಂಗಳ ಸಂಬಳ ಬರೋಬ್ಬರಿ ಆರಂಕಿಯದು. "ಇವತ್ತು ನಮ್ಮದು ಸ್ಟ್ರೈಕ್ ಇತ್ತು, ದರಿದ್ರ ರಾಜಕೀಯದೋರು ತಮ್ಮ ಸಂಬಳ ಏರ್ಸೋದಕ್ಕೆ ತಂಟೇನೂ ಇಲ್ಲ ತಕರಾರು ಇಲ್ಲ, ನಮ್ದು ಎಲ್ಲಾ ರೆಕಮಂಡೇಷನ್ ಆಗಿದೆ ಮಾರಾಯ, ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತೆ ಸಕ್ರೇಟರಿಯೇಟ್ ನಲ್ಲಿ ಹಿಡಿದುಕೊಂಡಿದ್ದಾರೆ ----ನನ್ ಮಕ್ಳು...."
ಕಟ್ ಮಾಡಿ ಕಣ್ಮುಚಿದೆ, ಅದೇ ಅದೇ ಕಾಣಿಸುತ್ತೆ, ಮತ್ತೆ--- ಹೊರಗಡೆ ಪ್ರಪಂಚಕ್ಕೆ ನನ್ನದು ಧ್ಯಾನಮುದ್ರೆ...!

Monday, September 6, 2010

ಸೃಷ್ಟಿ ಕ್ರಿಯೆಯ ಸೋಜಿಗ


ಮನುಷ್ಯ ತನಗೆ ಬೇಕಾದ ಸಸ್ಯಗಳ ಬೀಜವನ್ನು ಸಂಗ್ರಹಿಸುತ್ತಾನೆ.ಬೇಕಾದೆಡೆ ಬಿತ್ತುತ್ತಾನೆ ಬೇಕಾದ್ದದ್ದನ್ನೇ ಬೆಳೆಯುತ್ತಾನೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ಹಾಗಾಗಿ ಮನುಷ್ಯನಿಗೆ ಬೇಕಾದ ಅವನ ಜೀವನಕ್ಕೆ ಅವಶ್ಯಕತೆಇರುವ ಸಸ್ಯಗಳ ಬೀಜಗಳು ಕಣಜದಲ್ಲಿ ಭದ್ರವಾಗಿ ಶೇಕರಿಸಲ್ಪಡುತ್ತವೆ ತನ್ಮೂಲಕ ಸಂತಾನಭಿವೃದ್ಧಿಯ ಆನಂದವನ್ನು ಹೊಂದುತ್ತವೆ.ಕಾಡಿನ ಸಹಜ ಸಸ್ಯಗಳು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ಸಸ್ಯ ತಾನು ಬೆಳೆಯಬೇಕು ತನ್ನ ಸಂತಾನವನ್ನೂ ಬೆಳೆಸಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ ಅದರ ಜೀವಕ್ಕೆ ಕುತ್ತು ಹಾಗಾಗಿ ಅವುಗಳಲ್ಲಿ ಹಲವಾರು ಸಸ್ಯಗಳು ತನ್ನದೇ ಹಣ್ಣಿನೊಳಗೆ ಬೀಜವನ್ನಿಟ್ಟು ಪಕ್ಷಿಗಳನ್ನು ಆಕರ್ಷಿಸಿ ಅದರಮೂಲಕ ಸಂತಾನವನ್ನು ಪಸರಿಸುತ್ತವೆ.
ಇದೆಲ್ಲದರ ಹೊರತಾಗಿ ಕೆಲವು ಸಸ್ಯಗಳು ತಮ್ಮ ಬೀಜವನ್ನು ಆಕಾಶದಲ್ಲಿ ತೇಲಿಬಿಟ್ಟು ಗಿರಿಗಿಟ್ಟಿಯಂತೆ ಹಾರಾಡುತ್ತಾ ಹೆಲಿಕ್ಯಾಪ್ಟರ್ ತಾಂತ್ರಿಕವಿಧಾನ ಬಳಸಿ ಪಸರಿಸುತ್ತವೆ. ಅವು ನೋಡಲು ಅಂದ, ಅಲ್ಲಿನ ನಿಸರಗದ ಅಚ್ಚರಿಯನ್ನು ಸವಿಯಲು ಆನಂದ. ಅಂತಹ ಒಂದು ಸಸ್ಯ ಇದು.
ದೊಡ್ಡ ಉರಾಳ ಎಂದು ಗ್ರಾಮ್ಯ ಭಾಷೆಯಲ್ಲಿ ಕರಯಿಸಿಕೊಳ್ಳುವ ಈ ಗಿಡ ಕೆಂಪನೆಯ ಹೂವನ್ನುಬಿಡುತ್ತದೆ. ಇದರ ಎಲೆಗಳನ್ನು ಕಿವುಚಿ ರಸ ಹಿಂಡಿ ತತ್ಕಾಲದ ಗಾಯಗಳಿಗೆ ಟಿಂಚರ್ ರೀತಿ ಬಳಸುತ್ತಾರೆ ಮಲೆನಾಡಿಗರು. ಈ ಗಿಡದ ಹೂವು ಬಲಿತು ಬೀಜವಾದಾಗ ಹತ್ತಿಯನ್ನು ಹೋಲುವ ಸಣ್ಣದಾದ ನವಿರಾದ ಎಳೆಯ ದಾರಗಳು ಬೀಜದ ತುದಿಯಲ್ಲಿ ಜೋತಾಡುತ್ತವೆ. ಸಣ್ಣ ಕಪ್ಪು ಬಣ್ಣದ ಬೀಜಕ್ಕೆ ಇಪ್ಪತ್ತು ಇಪ್ಪತ್ತೈದು ದಾರಗಳು ನೇತಾಡುತ್ತಿರುತ್ತವೆ. ಜೂನ್ ತಿಂಗಳಿನಲ್ಲಿ ಗಾಳಿ ಯರ್ರಾಬಿರ್ರಿ ಬೀಸತೊಡಗಿದಾಗ ಬಲಿತ ಬೀಜಗಳು ಸಾರಾಗವಾಗಿ ಗಾಳಿಯಲ್ಲಿ ದಾರದ ಸಹಾಯದಿಂದ ತೆಲತೊಡಗುತ್ತವೆ. ಗಾಳಿಯ ರಭಸಕ್ಕನುಗುಣವಾಗಿ ಬೀಜಗಳು ಎರಡು ಕಿಲೋಮೀಟರ್ ದೂರದವರೆಗೂ ಹಾರಿಹೋಗಿ ಬೀಳುವುದುಂಟು. ಬೀಜ ಇಳಿಯುವಾಗ ಚಿಕ್ಕ ಚಿಕ್ಕ ಹೆಲಿಕ್ಯಾಪ್ಟರ್ ಇಳಿಯುವ ಭಾಸವಾಗುತ್ತದೆ. ಅಲ್ಲಿ ಭೂಮಿಕಂಡ ಬೀಜ ಮೊಳಕೆಯೊಡೆಯುತ್ತವೆ. ಪ್ರಕೃತಿಯ ಚಕ್ರದಲ್ಲಿ ತನ್ನ ಪಾತ್ರವನ್ನು ದೊಡ್ಡ ಉರಾಳ ಹೀಗೆ ಯಶಸ್ವಿಯಾಗಿ ನಿರ್ವಹಿಸುತ್ತದೆ. ಅದರ ಬೀಜಪ್ರಸರಣ ಕ್ರಿಯೆ ನೋಡಲು, ಬೀಜ ಗಾಳಿಗೆ ಗಿಡ ಬಿಟ್ಟು ಹೊರಡುವ ಕ್ರಿಯೆ ವೀಕ್ಷಿಸಲು ಅದ್ಬುತವೆನಿಸುತ್ತದೆ. ಪ್ರಕೃತಿ ಮೌನವಾಗಿದ್ದು ತನ್ನದೇ ರೀತಿಯಲ್ಲಿ ಸೃಷ್ಟಿ ಕ್ರಿಯಯ ಸೌಜಿಗಗಳನ್ನು ಒಂದೊಂದು ಜೀವಿಯಲ್ಲಿಯೂ ಒಂದೊಂದು ಬಗೆಯಾಗಿ ಹುದುಗಿಸಿಟ್ಟಿದೆ. ಸ್ವಚ್ಛ ಹೃದಯದಿಂದ ಗಮನಿಸುವ ಮನಸ್ಸು ನಮಗಿರಬೇಕಷ್ಟೆ.

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ ಬರಹ)

Sunday, September 5, 2010

ಜೋಗದ ನೆರೆ ನಿಪ್ಲಿ


ಶಿವಮೊಗ್ಗ ಜಿಲ್ಲೆಯ ಜೋಗಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಜಲಪಾತದಲ್ಲಿ ನೀರಿಲ್ಲದಿದ್ದರೆ ಬೇಸರವಾಗುತ್ತದೆ. ವರುಣನ ಕೃಪೆಯಿಲ್ಲದ ವರ್ಷಗಳಲ್ಲಿ ನೀರಿಲ್ಲದಿದ್ದರೆ ಜೋಗಕ್ಕೆ ರಂಗಿಲ್ಲ. ಇರುವ ಅಲ್ಪಸ್ವಲ್ಪ ನೀರಿಗೆ ತಲೆ ಕೊಡೋಣವೆಂದರೂ ೯೦೦ ಅಡಿ ಪ್ರಪಾತಕ್ಕೆ ಇಳಿಯಬೇಕು. ಅಂತ ಸಮಯದಲ್ಲಿ ಖುಷ್ ಕೊಡುವ ಜಲಪಾತಗಳೆಂದರೆ ಜೋಗದ ಸುತ್ತಮುತ್ತಲು ಇರುವ ನೀರಧಾರೆಗಳು. ಅಂತಹ ಒಂದು ಜಲಧಾರೆ ನಿಪ್ಪಲಿ ಡ್ಯಾಂ.
ಜೋಗದಿಂದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದತ್ತ ಸಾಗುವ ಮಾರ್ಗದಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿ ಹಲಗೇರಿ ಎಂಬ ಊರಿನ ಬಳಿ ಇರುವ ನಿಪ್ಲಿ ಎಂಬಲ್ಲಿ ಕೃಷಿನೀರಾವರಿಗಾಗಿ ಒಂದು ಡ್ಯಾಂ ಕಟ್ಟಲಾಗಿದೆ. ಡ್ಯಾಂ ನ ವಿಸ್ತೀರ್ಣ ಮೂವತ್ತು ಎಕರೆಯಷ್ಟು ಇರುವುದರಿಂದ ಮಳೆಗಾಲ ಆರಂಭವಾದ ಕೆಲವೇ ದಿವಸಗಳಲ್ಲಿ ಆಣೆಕಟ್ಟು ಭರ್ತಿಯಾಗುತ್ತದೆ. ಆಣೆಕಟ್ಟು ಭರ್ತಿಯಾಗಿ ನಂತರದ ಹೊರಹರಿವು ಇನ್ನೂರು ಅಡಿ ಮುಂದೆ ಹೋಗಿ ನಯನಮನೋಹರ ಜಲಪಾತವೊಂದರ ಸೃಷ್ಟಿಗೆ ಕಾರಣವಾಗಿದೆ. ಹೊರಹರಿವಿನ ಇನ್ನೂರು ಮೀಟರ್ ಜಾಗ ಲ್ಯಾಟ್ರೇಟ್ ಕಲ್ಲಿನ ಸ್ಥಳವಾದ್ದರಿಂದ ನೀರಾಟಕ್ಕೆ ಪ್ರಶಸ್ಥ ಸ್ಥಳ. ಜಲಪಾತದ ಮೇಲ್ಬಾಗದಲ್ಲಿ ನಡೆದು ಸಾಗಬೇಕಾದ ಸಂದರ್ಭದಲ್ಲಿ ಇಲ್ಲೊಂದು ಅದ್ಬುತ ಜಲಧಾರೆ ಇದೆ ಎಂಬ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ನೀರು ಬೀಳುವ ಅಂತಿಮ ಘಟ್ಟ "ವಾವ್" ಎನ್ನುವಷ್ಟು ಖುಷಿನೀಡುತ್ತದೆ. ಹದಿನೆಂಟು ಅಡಿ ಎತ್ತರದಿಂದ ಬೀಳುವ ಅರವತ್ತು ಅಡಿ ಅಗಲದ ಈ ಜಲಧಾರೆ ಸಂತೋಷ ನೀಡುವುದು ಖಂಡಿತ. ಜಲಪಾತದಲ್ಲಿ ನೀರು ಕಡಿಮೆಯಿದ್ದರೆ ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಈಜುಬಲ್ಲವರು ಆಣೆಕಟ್ಟಿನ ಹಿನ್ನೀರಿನಲ್ಲಿ ತೇಲಬಹುದು. ಅಪಾಯಕಾರಿ ಆಳವಿಲ್ಲದ ಕಾರಣ ಇಲ್ಲಿ ಈಜು ನಿರ್ಭಯ. ಅಕ್ಟೋಬರ್ ಅಂತ್ಯದವರೆಗೂ ಈ ಜಲಪಾತದಡಿಯಲ್ಲಿ ತಲೆಕೊಟ್ಟು ಕುಳಿತುಕೊಳ್ಳಬಹುದು. ಆನಂತರದ ಜೂನ್ ತಿಂಗಳವರೆಗೆ ಅಣೆಕಟ್ಟಿನ ನೀರಿನಲ್ಲಿ ಮೋಜಿಗಷ್ಟೆ ಸೀಮಿತ. ಇಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿ "ನಮ್ಮನೆ" ಮತ್ತು "ಮತ್ತುಗ" ಎಂಬ ಎರಡು ಹೋಂ ಸ್ಟೇಗಳು ಇದ್ದು ಅಲ್ಲಿ ವಸತಿಮಾಡಿದವರಿಗೆ ಈ ನೀರಧಾರೆಯ ಪತ್ತೆ ಸುಲಭ. (ನಮ್ಮನೆ: ೦೮೧೮೩೨೦೭೩೬೧- ಮತ್ತುಗ: ೯೪೪೮೦ ೬೮೮೭೦ )
ಇನ್ನೋಮ್ಮೆ ಜೋಗಕ್ಕೆ ಬರುವಾಗ ನಿಪ್ಪಲಿ ಜಲಪಾತಕ್ಕೆ ಭೇಟಿ ಕೊಡುವುದನ್ನ ಮರೆಯಬೇಡಿ. ಆದರೆ ನೆನಪಿರಲಿ ಅದು ಜೂನ್ ನಿಂದ ಅಕ್ಟೋಬರ್ ಅಂತ್ಯದೊಳಗಾಗಿರಬೇಕು. ಸಪ್ಟೆಂಬರ್ ಅಂತ್ಯದೊಳಗಾದರೆ ಅತಿ ಸುಂದರ.

(ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ ಬರಹ)
http://prajavani.net/Content/Sep52010/weekly20100904202796.asp