Friday, November 21, 2008

ಸೂರ್ಯ ಮತ್ತು ಪಾನ


ಸೂರ್ಯಪಾನ ಹೆಸರು ಏನೋ ಒಂಥರಾ ಹಿತವಾಗಿದೆ. ಈಗ ನಾಲ್ಕೈದು ತಿಂಗಳಿನ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಸೂರ್ಯಪಾನದ ಕುರಿತು ಒಂದು ವಿಸ್ತೃತವಾದ ಲೇಖನ ಬಂದಿತ್ತು. ಸೂರ್ಯನ ಬೇಳಕನ್ನು ಹೀರಿಕೊಂಡೇ ಬದುಕಬಹುದು , ಆಹಾರದ ಅಗತ್ಯವೇ ಇಲ್ಲ ನಳನಳಿಸುವ ಆರೋಗ್ಯ ನಿತ್ಯ, ಎಂಬುದು ಆ ಲೇಖನದ ಒಟ್ಟಾರೆ ಸಾರಾಂಶ. ಸಿಕ್ಕಿದಾಗೆಲ್ಲ ಸಿಕ್ಕಷ್ಟು ತಿನ್ನುವ ನನ್ನಂತ ಜಾಯಮಾನದವರಿಗೆ ಆಹಾರ ಬಿಟ್ಟು ಸೂರ್ಯನ ಕಿರಣ ಕುಡಿದು ಬದುಕುವುದು ಎನ್ನುವ ವಿಚಾರವೇ ಹೆದರಿಕೆ ಹುಟ್ಟಿಸಿಬಿಡುತ್ತದೆ. ಆದರೆ ಈ ಪ್ರಪಂಚದಲ್ಲಿ ಇದ್ದಾರೆ ಅಂತಹವರು ಎಂತವರೂ ಎಂತೆಂತವರೂ. ಅವರುಗಳು ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಇರಲಿ ಅವರವರ ಜೀವನ ಅವರವರಿಗೆ. ಉಳ್ಳವರ ಆರೋಗ್ಯ ಕಾಪಾಡಲು ಹೀಗೆ ನೂರಾರು ವಿಧಿವಿಧಾನಗಳಿವೆ. ಧ್ಯಾನವಂತೆ, ಪ್ರಾರ್ಥನೆಯಂತೆ, ಹ ಹ ಹ ಎನ್ನುವ ನಗೆಕೂಟವಂತೆ. ತಿಂಗಳೂ ತಿಂಗಳು ಅಕಸ್ಮಾತ್ ಆರೋಗ್ಯ ಏರುಪೇರಾದರೆ ಎಂದು ಮಂತ್ಲಿ ಚೆಕ್ ಅಪ್ ಅಂತೆ ಹೀಗೆ ಹತ್ತು ಹಲವು. ಆದರೂ ಅವರಿಗೆ ಟೆನ್ಷನ್ ತಲೆಬಿಸಿ ತನ್ನ ನಂತರ ಆರನೇ ತಲೆಮಾರಿನವರ ಬಗ್ಗೆ ಕಾಡುವ ಚಿಂತೆ. ಇರಲಿ ಇದು ಉಳ್ಳವರ ಕಥೆಯಾಯಿತು. ಪಾಮರರ ಕಥೆ ನೋಡೋಣ.
ನಮ್ಮ ಊರಲ್ಲಿ ಗೋಪಾಲ ಎಂಬ ಕೂಲಿಕಾರ್ಮಿಕನಿದ್ದಾನೆ. ಆತನಿಗೆ ಎಪ್ಪತ್ತೈದರ ಹರೆಯ. ಈಗಲೂ ಆತನ ಖರ್ಚನ್ನು ಆತನೇ ಸಂಪಾದಿಸುತ್ತಾನೆ. ಅವನಿಗೊಬ್ಬ ತಮ್ಮ ಆತನ ಹೆಸರು ಮಾರಿ. ಈತನದೂ ಅಣ್ಣನಷ್ಟೆ ಸಿದ್ಧಾಂತ. ಇಬ್ಬರೂ ಬೆಳಿಗ್ಗೆ ಸೂರ್ಯ ಇನ್ನೇನು ಹುಟ್ಟುತ್ತಾನೆ ಎನ್ನುವಷ್ಟರಲ್ಲಿ ಬಿರಬಿರನೆ ಮನಮನೆಯೆಂಬ ಊರಿನತ್ತ ಹೆಜ್ಜೆಹಾಕುತ್ತಾರೆ. ಅಲ್ಲಿ ಹೋಗಿ ಒಂದೇ ಒಂದು ಕ್ವಾಟರ್ ಕಳ್ಳಬಟ್ಟಿ ನೇಟುತ್ತಾರೆ. ನಂತರ ಅಣ್ಣ ಬೀಡಿ ಹಚ್ಚುತ್ತಾನೆ ತಮ್ಮ ಹೊಗೆಸೊಪ್ಪಿನ ದಂಟು ಮುರಿದು ಕವಳ ಹಾಕುತ್ತಾನೆ. ಅದಾದ ನಂತರ ಅವರ ದಿನದ ಕಾಯಕ ಶುರು .ಮಧ್ಯಾಹ್ನ ಕೂಲಿ ಕೆಲಸ ಮುಗಿದನಂತರ ಮೂರುಗಂಟೆಗೆ ಒಂದು ಊಟಮಾಡಿ ಮತ್ತೆ ಮನಮನೆಗೆ ರೈಟ್. ಸಂಜೆ ಸೀದಾ ಹಾಸಿಗೆಗೆ. ಈ ಕಾಯಕ ಸುಮಾರು ಐವತ್ತು ವರ್ಷದಿಂದ ನಿತ್ಯ ನಡೆದು ಬಂದಿದೆ. ಅವರಿಬ್ಬರು ಈ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸಗಾರರು ಪ್ರಾಮಾಣಿಕರು ಹಾಗೂ ನಯವಿನಯ ಹೊಂದಿದವರು ಮತ್ತು ಒಳ್ಳೆಯ ಆರೋಗ್ಯ ಹೊಂದಿದವರು. ಎಪ್ಪತ್ತರ ದಶಕ ದಾಟಿರುವ ಅವರುಗಳು ಅವರ ಜೀವಮಾನದಲ್ಲಿ ಒಂದೇ ಒಂದು ದಿನ ಆಸ್ಪತ್ರೆ ಯತ್ತ ಮುಖ ಹಾಕಿಲ್ಲವಂತೆ. ದಿನಕ್ಕೆ ಒಂದೇ ಊಟ ಹಾಗೂ ಎರಡು ಬಾರಿ ಸರಾಯಿ. ಬೆಳಿಗ್ಗೆ ಮನಮನೆಗೆ ಹೋಗುವಾಗ ಅರ್ದ ಗಂಟೆ ಅವರು ಏರು ಸೂರ್ಯನನ್ನೇ ನೋಡುತ್ತಾ ಸಾಗುತ್ತಾರೆ, ಮತ್ತೆ ಸಂಜೆ ಮನಮನೆಯಿಂದ ವಾಪಾಸುಬರುವಾಗ ಇಳಿ ಸೂರ್ಯನನ್ನೇ ನೆನೆಯುತ್ತಾ ಮನೆ ಸೇರುತ್ತಾರೆ. ಇವರೀರ್ವರ ಜೀವನಪದ್ದತಿಯನ್ನು ನೋಡಿದ ನನಗೆ ಈಗ ಸೂರ್ಯಪಾನದಲ್ಲಿ ನಂಬಿಕೆ ಬರತೊಡಗಿದೆ. ಅದೂ ಸೂರ್ಯ ಮತ್ತು ಪಾನ ಬೇರೆಬೇರೆಯಾಗಿ...!
ಧ್ಯಾನ,ವನ್ನು ಬೆನ್ನು ಹತ್ತಿ ಆರೋಗ್ಯದಿಂದ ನಳನಳಿಸುತ್ತಾ ಇರುವವರೇನು ಸಾವಿರ ವರ್ಷ ಬದುಕಿಲ್ಲ. ಅವನ್ನೆಲ್ಲಾ ಬದಿಗಿಟ್ಟವರೂ ಹತ್ತೇ ವರ್ಷಕ್ಕೆ ಸತ್ತಿಲ್ಲ. ಇರಲಿ ಎಲ್ಲವೂ ಬೇಕು ಇಲ್ಲಿ. ನಮಗೆ ಸಿಕ್ಕಿದ್ದು ನಮಗೆ ದಕ್ಕಿದ್ದು ನಮಗೆ. ನಿಮಗೆ ಸಿಕ್ಕಿದ್ದು ನಿಮಗೆ ದಕ್ಕಿದ್ದು ನಿಮಗೆ. ಒಟ್ಟಿನಲ್ಲಿ ನಗುನಗುತಾ ನಲೀ ನಲೀ ಎಂದರೆ ಮುಗಿಯಿತು.

Thursday, November 20, 2008

ಹಳ್ಳಿಯಿಂದ ದಿಲ್ಲಿಯೋ ದಿಲ್ಲಿಯಿಂದ ಹಳ್ಳಿಯೋ...



ಮಧ್ಯಮ ವರ್ಗದವರು ಹೆಚ್ಚಿರುವ ಹಳ್ಳಿಗಳು ತುಂಬಾ ಚೆಂದ. ಅತ್ತ ಶ್ರೀಮಂತರೂ ಇಲ್ಲದ ಇತ್ತ ಕೂಳಿಗೆ ಗತಿ ಇರದ ಬಡವರೂ ಅಲ್ಲದ ಜನರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಅವರ ಗುರಿ ಹೆಚ್ಚಿನ ಪಾಲು ದೇವಸ್ಥಾನ ದೇವರು ಜ್ಯೋತಿಷ್ಯ ಜ್ಯೋತಿಶಿ, ಮತ್ತು ಪ್ರಸ್ತುತ ರಾಜಕೀಯ ಹೀಗೆ ಸುತ್ತಿತ್ತಿರುತ್ತದೆ. ಹಾ ಸ್ವಲ್ಪ ಗುಟ್ಟಾಗಿ ಹೇಳುತ್ತೀನಿ ಇದು ನಿಮ್ಮಲ್ಲಿಯೇ ಇರಲಿ ಸಂಜೆ ಹೊತ್ತು ಕದ್ದು ಬೇಲಿ ಹಾರುವುದು ಹಾಗೂ ಒಂದೇ ಒಂದು ಕ್ವಾಟರ್ ಗಟಗಟನೆ ಅಡಗಿ ಕುಡಿಯುವುದು ಕೆಲವರ ಚಾಳಿ. ನಾನು ನಮ್ಮನೆ ಇರುವುದು ಇಂತಹ ಹಳ್ಳಿಯಲ್ಲಿಯೇ. ಇದರ ಸಂಪೂರ್ಣ ಮಜವನ್ನು ನಾನು ಅನುಭವಿಸುತ್ತೇನೆ. ಸಾಮಾನ್ಯವಾಗಿ ಊರಲ್ಲಿ ಎರಡು ಪಾರ್ಟಿಗಳಿರುತ್ತವೆ. ಪಾರ್ಟಿಗಳಿವೆ ಎಂದಾಕ್ಷಣ ಎಂತದೋ ಒಂದು ಸಿದ್ದಾಂತದ ಮೇಲೆ ಅವು ನಿಂತಿವೆ ಎಂದು ಅಂದಾಜಿಸಬೇಡಿ ಒಟ್ಟು ಒಂದಿಷ್ಟು ಸುದ್ದಿ ರಗಳೆಯ ತತ್ವದ ಮೇಲೆ ಎರಡು ಪಾರ್ಟಿ. ಅದರ ಸದಸ್ಯರುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತಾರೆ. ಹಾಗೆಯೇ ಒಂದು ನಾಲ್ಕೈದು ಜನ ನಾರದನ ಕೆಲಸಮಾಡುವವರು. ಅವರು ಯಾವ ಪಾರ್ಟಿಯ ಜತೆಯೂ ಗುರುತಿಸಿಕೊಳ್ಳುವುದಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಇಲ್ಲಿಗೆ ಸುದ್ದಿವಾಚಕ ಕೆಲಸ ಅವರಿಗೆ. ಸಾಮಾನ್ಯವಾಗಿ ಇಂತಹ ಹಳ್ಳಿಗಳಲ್ಲಿ ಎರಡು ಪಾರ್ಟಿಗಳಾಗಲು ಮುಖ್ಯ ಕೇಂದ್ರ ಸ್ಥಾನ ಆಯಾ ಊರಿನ ದೇವಸ್ಥಾನ. ಅಲ್ಲಿ ಒಂದು ಕ್ಯಾತೆ ತೆಗೆದು ಪಕ್ಕಾ ಎರಡು ಬಣಗಳಾಗಿಬಿಡುತ್ತವೆ.. ಈಗ ಹತ್ತು ವರ್ಷದಿಂದೀಚೆ ಮಠ ಪರಿಷತ್ತು ಎಂದು ಹೊಸ ಸೇರ್ಪಡೆಯಾದ್ದರಿಂದ ಅದು ಇನ್ನಷ್ಟು ಅನುಕೂಲವಾಗುತ್ತದೆ. ಸಾರ್ವಜನಿಕ ಕೆಲಸದ ಸಮಯದಲ್ಲಂತೂ ಅವನ್ಯಾಕೆ ಬರಲಿಲ್ಲ ಇವನ್ಯಾಕೆ ಬರಲಿಲ್ಲ? ಹೀಗೆ ಅಲ್ಲಿ ಬಾರದಿದ್ದವರ ಬಗ್ಗೆ ಚರ್ಚೆ ಕುಚರ್ಚೆಗಳು ನಡೆಯುತ್ತವೆ. ಮಜ ತೆಗೆದುಕೊಳ್ಳಲು ನೀವು ನಿಂತಿರಾದರೆ ಬರಾಪ್ಪೂರ್ ವಿಷಯ.ಇಂತಹ ವಾತಾವರಣದಲ್ಲಿ ಬದುಕು ಕಳೆಯುತ್ತಿರುವ ನೂರಕ್ಕೆ ತೊಂಬತ್ತು ಜನ ತಮ್ಮ ಜೀವನದ ಬಗ್ಗೆ ತಮ್ಮ ಊರಿನ ರಸ್ತೆಯೆ ಬಗ್ಗೆ ತಮ್ಮ ಊರಿನ ಶಾಲೆಯ ಬಗ್ಗೆ ತಲೆ ಕಡಿಸಿಕೊಳ್ಳುವುದೇ ಇಲ್ಲ. ಆದರೆ ಅವರ ಮಾತುಗಳನ್ನು ಕೇಳಬೇಕು, ಅಮೆರಿಕಾದ ಒಬಾಮನ ವರೆಗೂ ಅಳೆದು ಗುಡ್ಡೆ ಹಾಕಿ ಸಾಪ್ಟ್ ವೇರ್ ಮುಳುಗಿ ಹೋಯಿತಂತೆ ಎನ್ನುವ ಸ್ವಯಂ ತೀರ್ಮಾನವನ್ನೂ ತೆಗೆದುಕೊಂಡುಬಿಡುತ್ತಾರೆ. ಕೆಲವರಂತೂ ತಾವು ಪರಮ ನಾಸ್ತಿಕರು ಎಂಬ ಫೋಸು ಬೇರೆ. ನಮ್ಮ ಪಕ್ಕದೂರಿನಲ್ಲಿ ಗಡ್ದದಾರಿ ವ್ಯಕ್ತಿ ಯೊಬ್ಬನಿದ್ದಾನೆ( ಪಾಪ ಹೆಸರು ಬೇಡ ಅವರು ಅವರದೇ ಲಹರಿಯಲ್ಲಿ ಇದ್ದಾರೆ , ಅವರನ್ನು ನಾವು ಅನ್ನೋದೇಕೆ?) ನಾನು ಬಾಲ್ಯದಿಂದ ಆತನನ್ನು ಗಮನಿಸುತ್ತಾ ಬಂದಿದ್ದೇನೆ. ತಾನು ಪರಮ ನಾಸ್ತಿಕ ಹಾಗೂ ಸಾಚಾ ಎಂದು ಬಿಂಬಿಸಿಕೊಂಡು ಮಿಕ್ಕವರೆಲ್ಲಾ ಒಂಥರಾ ಸರಿ ಇಲ್ಲದವರು ಎನ್ನುವ ವ್ಯಕ್ತಿತ್ವ. ಅವನ ಹರೆಯದಲ್ಲಿ ಅವನಂತಿರುವ ಒಂದು ಗುಂಪು ಕಟ್ಟಿಕೊಂಡು ದೇವಸ್ಥಾನಕ್ಕೆ ಜನರಲ್ ಬಾಡಿಯಲ್ಲಿ ತರ್ಲೆ ಎತ್ತುವುದು ಆತನ ಮುಖ್ಯ ಕೆಲಸ. ಸಂಜೆ ಒಂಚೂರು ರಂಗಾಗುವುದು ಹವ್ಯಾಸ. ಮಠ ಗುರುಗಳು ಎಂಬ ಹೊಸ ವಿಷಯ ಬಂದಮೇಲೆ ಆತನಿಗೆ ಇನ್ನಷ್ಟು ಹುರುಪು. ಗಂಟೆಗಟ್ಟಲೆ ಭಾಷಣ ಬಿಗಿದು ಮಠದ ವಿರುದ್ದ ತನ್ನ ಸಮರ ಎಂದ. ಜಾತಿಯ ವಿಷಯ ಆತನಿಗೆ ಒಗ್ಗದು. ಎಲ್ಲರೂ ಒಂದೇ ಜಾತಿ ಹಿಂದೂಗಳೆಲ್ಲಾ ಒಂದೇ ಅಂದ. ಸಾಬರು ಮಾತ್ರಾ ಬೇರೆ ಎಂದ. ವರ್ಷಗಳು ಉರುಳಿದವು. ಈಗ ಮಗಳು ಮದುವೆಗೆ ಬಂದಮೇಲೆ ಬ್ರಾಹ್ಮ್ಣಣ ಹುಡುಗನೇ ಆಗಬೇಕೆಂದು ಹುಡುಕಿ ಮದುವೆ ಮಾಡಿದ. ಅಳಿಯ ಮಗಳು ಮಠಕ್ಕೆ ಅಲೆದರೆ ಈತ ಸೈ ಸೈ ಅಂದ. ಗುರುತಿಸಿಕೊಳ್ಳಬೇಕು ಎಂಬ ಅಧಮ್ಯ ಆಸ್ದೆಯಿರುವ ಆತ ಡೈರಿ ನಿಲ್ಲಿಸುತ್ತೇನೆಂದ. ಅದು ನಿಲ್ಲಲಿಲ್ಲ. ಮಕಾಡೆ ಮಲಗಿದ. ಹೀಗೆ ಇಂಥಹಾ ವ್ಯಕ್ತಿಗಳು ನೂರಾರು ಸಿಗುತ್ತಾರೆ ನಮ್ಮ ಹಳ್ಳಿಗಳಲ್ಲಿ. ಮತ್ತೊಬ್ಬಾತ ಹರೆಯದಲ್ಲಿ ಆಟ ಆಡಿಸುತ್ತಾ ಉನ್ಮಾದದ ಉಮ್ಮೇದಿನಲ್ಲಿದ್ದ. ಅವನೂರಿನ ಒಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿತ್ತು. ಈತನದ್ದು ಅದನ್ನು ತಪ್ಪಿಸಲು ಹಗಲುರಾತ್ರಿ ಓಡಾಟ, ಕಾರಣ ಕೇಳಿದರೆ ಸನ್ಮಾನ ಪ್ರಶಸ್ತಿ ಎಲ್ಲಾ ಇರಬಾರದು ಎಂಬ ಒಣ ಸಿದ್ಧಾಂತ. ಈಗ ಆತನಿಗೆ ವಯಸ್ಸಾಗಿದೆ ತಿಂಗಳೊಪ್ಪತ್ತಿನಲ್ಲಿ ದೊಡ್ಡದಾಗಿ ಸನ್ಮಾನ ಕಾರ್ಯಕ್ರಮ ತಯಾರಿ ನಡೆದಿದೆ. ಸಂಜೆಯ ಬೇಲಿಯ ವ್ಯವಹಾರ ನಿತ್ಯ ಸಾಗಿದೆ. ಮತ್ತೊಬ್ಬನದು ಮತ್ತೂ ವಿಚಿತ್ರ. ಹತ್ತು ವರ್ಷದ ಹಿಂದೆ ದೇವಸ್ಥಾನದ ವಿಷಯದಲ್ಲಿ ಅ ವನದು ನಿತ್ಯ ರಗಳೆ. ಅವರು ಇಪ್ಪತ್ತೈದು ವರ್ಷದ ಹಿಂದೆ ಒಂದು ವರ್ಷ ಜನರಲ್ ಬಾಡಿ ಕರೆಯಲಿಲ್ಲ. ಅಷ್ಟು ತಿಂದರು ಇಷ್ಟು ತಿಂದರು ಹಾಗೆ ಹೀಗೆ. ನಂತರ ಊರವರು ಸತ್ಯ ಎಂದು ತಿಳಿದು ಇವನ ಪಟಾಲಂ ಗೆ ಅಧಿಕಾರ ಕೊಟ್ಟರು. ಈತ ಜನರಲ್ ಬಾಡಿ ಕರೆಯದೆ ಇವತ್ತಿಗೆಗೆ ಎಂಟು ವರ್ಷ.
ಇಂತಹ ಸಾವಿರ ಸಾವಿರ ಅಭಾಸಕರ ಕಥೆಗಳು ಹಳ್ಳಿಗಳಲ್ಲಿ ಧಾರಾಳ. ಅವುಗಳಲ್ಲಿ ತೊಡಗಿಕೊಳ್ಳದೆ ಹೊರ ನಿಂತು ನೋಡುತ್ತಿದ್ದರೆ ಮಜವೋ ಮಜ. ಅವರುಗಳ ಹುಟ್ಟುಗುಣವನ್ನಂತೂ ಯಾರಿಂದಲೂ ಬದಲಾಯಿಸಲಾಗದು, ಮಜ ತೆಗೆದುಕೊಳ್ಳಬಹುದಷ್ಟೆ. ಪಟ್ಟಣದಲ್ಲಿನ ಜನ ಹಳ್ಳಿಯ ಬಗ್ಗೆ ತಾತ್ಸಾರ ಹೊಂದಲು ಇದುವೆ ಮುಖ್ಯ ಕಾರಣ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದಂತೆ ಆಗುತ್ತದೆ. ನಮ್ಮ ರಾಜ್ಯ ಮಟ್ಟದ ರಾಜಕಾರಣಿಗಳ ಕಿತ್ತಾಟ ಕಿರುಚಾಟ ದಿನನಿತ್ಯ ನೋಡಿದಾಗ ನನಗೆ ಇದು ಹೊರಟಿದ್ದು ಇಲ್ಲಿಂದಲೇಯಾ? ಎಂಬ ಅನುಮಾನ ಕಾಡುತ್ತದೆ. ಹಳ್ಳಿಯಿಂದ ದಿಲ್ಲಿಯವರಗೂ ಇದೇ ಅನಾವಶ್ಯಕ ಕಿತ್ತಾಟ. ಪರ ನಿಂದೆ ದ್ವೇಷ ಅಸೂಯೆ. ಇವುಗಳ ನಡುವೆ ಮನುಷ್ಯನಲ್ಲಿನ ರಚನಾತ್ಮಕ ಶಕ್ತಿ ಉಡುಗಿ ಹೋಗುತ್ತಿದೆ. ನನಗೂ ಒಮ್ಮೊಮ್ಮೆ ಭಯ ಕಾಡುತ್ತಿದೆ. ಒಕ್ಕಣ್ಣು ರಾಜ್ಯದಲ್ಲಿ ಬದುಕಲು ಎರಡು ಕಣ್ಣು ಇದ್ದವ ಒಂದು ಕಣ್ಣು ಮುಚ್ಚಿ ನಾಟಕ ಮಾಡಲು ಹೋಗಿ ಅವನೂ ಒಕ್ಕಣ್ಣ ನಾದಂತೆ ನನ್ನನ್ನೂ ಎಳೆದುಕೊಂಡು ಬಿಡುತ್ತದೆಯಾ..? ಎಂದು.

Wednesday, November 19, 2008

ಹೆಸರು ಹೆಸರೆಂದು

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? /
ಕಸದೊಳಗೆ ಕಸವಾಗಿ ಹೋಹನಲೆ ನೀನು ? /
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು/
ಮಿಸುಕದಿರು ಮಣ್ಣಿನಲಿ -ಮಂಕುತಿಮ್ಮ//

ಹೀಗೆ ಮಂಕುತಿಮ್ಮನ ಕಗ್ಗದಲ್ಲಿನ ಚತುಷ್ಪದಿ ಹೇಳುತ್ತದೆ. ಹೆಸರಿಗಾಗಿ ಹಂಬಲಿಸದಿರು, ಈ ದೇಹ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ, ಕೀರ್ತಿಯ ಹಿಂದೆ ಬೀಳಬೇಡ. ಎಂಬುದು ಕಗ್ಗ ರಚಿಸಿದ ಡಿ.ವಿ.ಜಿ ಯವರ ಆಶಯ. ಇಂತಹ ಒಂದು ಕಗ್ಗ ರಚಿಸಲು ಅಪಾರ ತಾಕತ್ತಿರಬೇಕು. ಮಂಕುತಿಮ್ಮನ ಕಗ್ಗ ಓದಿದರೆ ಅದರಲ್ಲಿನ ಜೀವನಾನುಭವದ ಸಾರ ತಿಳಿಯುತ್ತದೆ. ಎಲ್ಲೋ ಲಕ್ಷಕ್ಕೊಬ್ಬರು ಇಂತಹ ಸಾರ್ವಕಾಲಿಕ ಅರ್ಥ ಕೊಡುವ ಕಗ್ಗಗಳನ್ನು ರಚಿಸಬಲ್ಲರು. ಸರ್ವಜ್ಞನಂತೆ. ಆತ ಯಾರು ಏನು ಎಂಬುದು ಯಾರಿಗೂ ಗೊತ್ತಿಲ್ಲ. ಆತ ಮಾತ್ರ ಅದ್ಬುತ ಜೀವನಾಮೃತಗಳನ್ನು ಹೇಳಿ ಹೋಗಿದ್ದಾನೆ. ಆತನಿಗೆ ಈ ಮೇಲಿನ ಚತುಷ್ಪದಿ ಅನ್ವರ್ಥ. ನನಗೆ ಸಣ್ಣದೊಂದು ಅನುಮಾನ ವೇಳುತ್ತದೆ ಹಾಗಂತ ಅದೇನು ಗಟ್ಟಿ ಎಂದಲ್ಲ. ಹೆಸರಿನ ವ್ಯಾಮೋಹ ತೊರೆ ಎಂಬ ಉತ್ತಮ ಕಗ್ಗ ರಚಿಸಿದ ಡಿವಿಜಿ ಅದೇಕೋ ಕಗ್ಗದ ಪುಸ್ತಕದಲ್ಲಿ ತಮ್ಮ ಹೆಸರನ್ನು ಕಾಣಿಸಿಬಿಟ್ಟಿದ್ದಾರೆ. ಇದರ ಅರ್ಥ ಇದೊಂದು ಕಗ್ಗದ ರಚನಾಕಾರ ಅವರಲ್ಲ ಅಥವಾ ಕಗ್ಗದ ಪುಸ್ತಕದಲ್ಲಿ ಅವರ ಹೆಸರು ಹಾಕುವುದು ಅವರಿಗೆ ಗೊತ್ತಿಲ್ಲ. ಯಾಕೆಂದರೆ ಹೆಸರಿನ ವ್ಯಾಮೋಹ ತೊರೆ ಎಂಬ ಸಂದೇಶ ನೀಡುವ ಕತೃ ತನ್ನ ಹೆಸರನ್ನು ಹಾಕಗೊಡುವುದಿಲ್ಲ. ಅಲ್ಲಿಗೆ ಅವರಿಗೂ ತಮ್ಮ ಹೆಸರಿನ ಬಗ್ಗೆ ಒಂದು ಸಣ್ಣ ವ್ಯಾಮೋಹ ಇದೆಯಾ ಎಂಬ ಅನುಮಾನ ನಮ್ಮಂತಹ ಪಾಮರರಿಗೆ ಏಳುತ್ತದೆ. ಇರಲಿ ನಾವೆಲ್ಲ ಡಿವಿಜಿಯಂತಹ ಮಹಾತ್ಮರ ಬಗ್ಗೆ ಹಾಗೆಲ್ಲ ಅಂದುಕೊಳ್ಳಬಾರದು ಅದೇಕೋ ಹಾಗಾಗಿದೆ ಅಂತ ನನಗಂತೂ ಗೊತ್ತಿಲ್ಲ. ಈಗ ನಾನು ಹೇಳಹೊರಟಿರುವುದು ಈ ಹೆಸರಿನ ವ್ಯಾಮೋಹದ ಬಗ್ಗೆ ಹಾಗಾಗಿ ಅಪ್ರಸ್ತುತವನ್ನು ಕೈಬಿಟ್ಟು ಮುಂದುವರೆಸೋಣ.
ಈ ಆರಡಿ ಬೆಳೆಯುವ ದೇಹ ಒಂದಡಿ ಇದ್ದಾಗ ಒಂದಿಂಚು ಉದ್ದದ ಹೆಸರೊಂದನ್ನು ನಮಗೆ ತಿಳಿಯದಂತೆ ಇಡುತ್ತಾರೆ. ಅಪ್ಪ ಕರೆದ ಅಮ್ಮ ಕರೆದಳು ಹಾಗೂ ನೆಂಟರು ಕೂಗಿದರು ಮತ್ತು ಅಕ್ಕಪಕ್ಕದವರು ಕೊಬ್ಬರಿದರು ಅಂತ ನಾವು ಓ ಅನ್ನಲು ಪ್ರಾರಂಬಿಸುತ್ತೇವೆ. ನಮಗೆ ಆ ಹೆಸರು ಇಷ್ಟವಿರಲಿ ಇಲ್ಲದಿರಲಿ ಚೋಟುದ್ದದ ನಾಮಾಂಕಿತಕ್ಕೆ ನಾವು ಎಷ್ಟು ಪ್ರತಿಕ್ರಿಯೇ ನೀಡುತ್ತೇವೆ ಎಂದರೆ ಗಾಢವಾದ ನಿದ್ರೆಯಲ್ಲಿದ್ದಾಗಲೂ ಯಾರಾದರೂ ಕೂಗಿದರೂ ನಾವು ಆ ಆ ಎಂದು ದಡಕ್ಕನೆ ಏಳುತ್ತೇವೆ. ಇಷ್ಟು ವ್ಯಾಮೋಹ ಹೊಂದಿರುವ ಒಂದಿಂಚು ಉದ್ದದ ಹೆಸರು ಬಾಲ್ಯ ಕಳೆದು ಯೌವನ ಮುಗಿದು ಅರೆಮುಪ್ಪು ಶುರುವಾದಾಗ ದುರಾಸೆಯನ್ನು ಎಬ್ಬಿಸಲು ಕಾರಣವಾಗುತ್ತದೆ. ನನ್ನದೊಂದು ಹೆಸರು ಅಲ್ಲಿ ಇರಬೇಕು, ತನ್ಮೂಲಕ ಜಗತ್ತಿಗೆ ತನ್ನೀ ದೇಹದ ಪರಿಚಯವಾಗಬೇಕು ನಂತರ ತನ್ನ ಆಲೋಚನೆಗಳು ಪ್ರಸರಿಸಬೇಕು ಅದಕ್ಕೆಲ್ಲ ಜನ ಯೆಸ್ ಯೆಸ್ ಅನ್ನಬೇಕು ಜೈಕಾರ ಹಾಕಬೇಕು ಹೀಗೆ ಮುಂದುವರೆಯುತ್ತದೆ. ಅವರು ರಾಜಕಾರಣಿಗಳಿರಲಿ ಬರಹಗಾರರಿರಲಿ, ವರದಿಗಾರರಿರಲಿ, ಮಂತ್ರ ಹೇಳುವ ಪುರೋಹಿತರಿರಲಿ ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಚಿಂತೆ. ಈ ಹೆಸರಿನ ಚಿಂತೆ ಇಲ್ಲದಿದ್ದರೆ ಏನೇನು ಆಗುತ್ತಿತ್ತು ಗೊತ್ತಿತ್ತಾ?. ಈಗ ಡಜನ್ ಗಟ್ಟಲೆ ಪತ್ರಿಕೆಗಳು , ಬ್ಲಾಗ್ ಗಳು ಇವೆಯೆಲ್ಲಾ ಅವುಗಳಲ್ಲಿ ಒಂದಿಂಚು ಉದ್ದದ ಹೆಸರು ಹೊತ್ತ ಲೇಖನಗಳು ಬರುತ್ತಿವೆಯೆಲ್ಲಾ ಅವೆಲ್ಲಾ ಇರುತ್ತಲೇ ಇರಲಿಲ್ಲ. ಪತ್ರಿಕೆಯ ಸಂಪಾದಕರುಗಳು ಬರಹಗಾರರಿಗೆ " ನೀವು ಕಥೆ ಕಳುಹಿಸಿ ಪ್ರಕಟಿಸುತ್ತೇವೆ ಆದರೆ ನಿಮ್ಮ ಹೆಸರು ಹಾಕುವುದಿಲ್ಲ" ಎಂಬ ಒಂದೇ ಠರಾವು ಹೊರಡಿಸಿದರೆ ಸಾಕು, ಶೇಕಡಾ ತೊಂಬತ್ತೊಂಬತ್ತು ಬರಹಗಾರರು ಬರೆಯುವುದನ್ನೇ ಕೈಬಿಡುತ್ತಾರೆ. ಮತಾಂತರದ ಕುರಿತು ಪುಟಗಟ್ಟಲೆ ಲೇಖನ ಬರುತ್ತಿದೆಯಲ್ಲಾ ಲೇಖಕರ ಹೆಸರೆಂಬ ಹೆಸರನ್ನು ಹಾಕದಿದ್ದರೆ ಅದು ಚರ್ಚೆಯೇ ಆಗುತ್ತಿರಲಿಲ್ಲ. ಹೆಸರನ್ನು ಹಾಕಬಾರದು ಎಂದಿದ್ದರೆ ಕೆಟ್ಟ ಕೆಟ್ಟ ಬೈಗುಳದ ಪ್ರತಿಕ್ರಿಯೆಗಳು ಮಾತ್ರಾ ಇರುತ್ತಿತ್ತು. ಇರಲಿ ರೆ ಪ್ರಪಂಚದ ಈಚೆ ಬಂದು ನೋಡಿದರೆ ಈ ಹೆಸರಿನ ಹಿಂದೆ ಬೀಳುವವರ ಕಥೆ ಸಾವಿರ ಇದೆ. ಗ್ರಾಮ ಪಂಚಾಯತಿ ಸದಸ್ಸನಿಂದ ಪ್ರಾರಂಭವಾಗಿ ಪ್ರಧಾನಿ ಪಟ್ಟದವರೆಗಿನ ಜನರ ತನಕವೂ ಈ ವ್ಯಾಮೋಹ ತಪ್ಪಿದ್ದಲ್ಲ. , ಹಳ್ಳಿಗಳಲ್ಲಿ ಈ ಹೆಸರಿನ ಮಹಿಮೆ ಅಪಾರ. ಪತ್ರಿಕಾ ಸಂಪಾದಕರೊಬ್ಬರು ಹೇಳುತ್ತಿದ್ದರು. ಉತ್ತರ ಕರ್ನಾಟಕದ ವರದಿಗಾರರ ಬಳಿ ಜನ ದುಂಬಾಲು ಬಿದ್ದು ತಮ್ಮ ಹೆಸರನ್ನು ಪತ್ರಿಕೆಯಲ್ಲಿ ಹಾಕಿಸಿಕೊಳ್ಳುತ್ತಾರಂತೆ. ಅದೂ ಎಲ್ಲಿ ಅಂತ ಅಂದುಕೊಂಡಿರಿ? ಕಾರ್ಯಕ್ರಮದ ಕೊನೆಯಲ್ಲಿ ಹಾಜರಿದ್ದರು ಎಂಬ ಹೆಸರು ಬರುತ್ತದಲ್ಲ ಅಲ್ಲಿ. ಅದಕ್ಕಿಂತ ಮಜ ಎಂದರೆ ನಮ್ಮ ಊರಿಗೆ ಬರುವ ನಾಟಕ ಕಂಪನಿಗಳದ್ದು. ಅವರೋ ತುಂಬಾ ಶಾಣ್ಯಾಗಳು. ನಾಟಕ ಪ್ರಾರಂಭವಾಗಿ ಅರ್ದದಲ್ಲಿ "ನಾಟಕದ ಸ್ತ್ರೀ ಪಾತ್ರಧಾರಿ ರುದ್ರೇಶನಿಗೆ ಭದ್ರಪ್ಪ ನವರಿಂದ ಇಪ್ಪತ್ತು ರೂಪಾಯಿ ಕಾಣಿಕೆ ಎಂದು ಮೈಕ್ ನಲ್ಲಿ ಘೋಷಣೆ ಮಾಡುತ್ತಾರೆ. ನಂತರ ತಮ್ಮ ಹೆಸರನ್ನು ಮೈಕಿನಲ್ಲಿ ಕೇಳಿಸಿಕೊಳ್ಳಲು ಜನರ ನೂಕು ನುಗ್ಗಲು ಆರಂಭವಾಗುತ್ತದೆ. ಅಂತಿಮವಾಗಿ ನಾಟಕದವರ ಜೇಬು ಭರ್ತಿ. ಪ್ರೇಕ್ಷಕರ ಜೇಬು ಖಾಲಿ ಅದೂ ಯಾತಕ್ಕಪಾ ಅಂದ್ರೆ ಅರೆಕ್ಷಣ ತಮ್ಮ ಹೆಸರನ್ನು ಮೈಕಿನಲ್ಲಿ ಕೇಳಿಸಿಕೊಳ್ಳಲು. ಇರಲಿ ಬೀಡಿ ಇದು ಪಾಮರರ ಕಥೆ.
ಇದು ಸಾಧು ಸಂತರನ್ನು ಕೈಬಿಟ್ಟಿಲ್ಲ. ಸರ್ವ ಬಿಟ್ಟ ಸಾಧು ಸಂತರಿಗೆ ನಮಗಿಂತ ಒಂದು ತೂಕ ಈ ಹೆಸರಿನ ವ್ಯಾಮೋಹ ಹೆಚ್ಚು. ನಮ್ಮ ಹೆಸರುಗಳು ಒಂದಿಂಚು ಉದ್ದ ಇದ್ದರೆ ಅವರ ನಾಮಾಂಕಿತಗಳು ಶ್ರೀ ಶ್ರೀ ಶ್ರೀ ಎಂದು ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ಬರೊಬ್ಬರಿ ಆರಿಂಚು ತಲುಪಿರುತ್ತದೆ. ಈ ಆರಿಂಚು ಉದ್ದದ ನಾಮಾಂಕಿತವನ್ನು ಶಾಶ್ವತಗೊಳಿಸುವ ಮಹದಾಸೆ ಅವರಿಗೆ ಪಾಮರರು ಅವರ ಕಾಲದಲ್ಲಿ ಅವರ ಹೆಸರು ವಿರಾಜಮಾನವಾಗಿರಲಿ ಎಂದಷ್ಟೇ ಆಲೋಚಿಸಿದರೆ ಶ್ರೀ ಶ್ರೀ ಶ್ರೀ ಗಳು ಮುಂದಿನ ತಲೆತಲಾಂತರದವೆರೆಗೂ ತಮ್ಮ ಹೆಸರು ಇರಬೇಕೆಂದು ಹವಣಿಸುತ್ತಾರೆ. ಇನ್ನು ಹೆಸರಿನ ಮೂಲಕ ಗುರುತಿಸಿಕೊಳ್ಳಹೊರಟವರಲ್ಲಿ ಎರಡು ವಿಧಾನವಿದೆ. ಮೊದಲನೆಯದು ಉತ್ತಮ ಕೆಲಸವನ್ನು ಮಾಡುವುದು. ಅದು ತುಂಬಾ ಕಷ್ಟಕರ ವರ್ಷಗಟ್ಟಲೆ ಕಾಲವನ್ನು ನುಂಗುತ್ತದೆ. ಎರಡನೆಯದು ವಿವಾದವನ್ನು ಎಬ್ಬಿಸಿ ತನ್ಮೂಲಕ ತಮ್ಮ ಹೆಸರನ್ನು ಜಗಜ್ಜಾಹೀರು ಗೊಳಿಸುವುದು. ಇದು ಅತ್ಯಂತ ಸುಲಭ ಮಾರ್ಗ ತಂಟೆ ತಕರಾರು ಎತ್ತಿದರೆ ಮುಗಿಯಿತು. ಹೆಸರು ಪ್ರಸಿದ್ಧಿಗೆ ಬರುತ್ತದೆ. ಹೀಗೆ ಹೆಸರಿನ ಕುರಿತು ಹೇಳುತ್ತಾ ಸಾಗಿದರೆ ನಿಮ್ಮ ಮನಸ್ಸಿನಲ್ಲಿ ನನ್ನ ಹೆಸರೇ ಇಲ್ಲದಷ್ಟು ಆಗುವಷ್ಟು ವಿಷಯ ಇದೆ. ಹಾಗೂ ಅಲ್ಲೂ ಮತ್ತೆ ಹೆಸರಿನದ್ಡೇ ವಿಚಾರವಿದೆ.ವಾರಗಟ್ಟಲೆ ಆಲೋಚಿಸಿ ಒಂದು ಕಥೆ ಬರೆದು ನಂತರ ಅದನ್ನು ಪತ್ರಿಕೆಗೆ ಕಳುಹಿಸಿ ಅದು ಪ್ರಕಟವಾದ ನಂತರ ಗುರುತು ಪರಿಚಯ ಇರುವವರ ಬಳಿ ಸುತ್ತಿ ಬಳಸಿ ಮಾತನಾಡಿ " ನನ್ನ ದೊಂದು ಕಥೆ ಬಂದಿದೆ ನೋಡಿದೆಯಾ?" ಎಂದು ಅಲವತ್ತು ಕೊಳ್ಳುವುದಿದೆಯಲ್ಲಾ ಅದೂ ಚೋಟುದ್ದದ ಹೆಸರಿಗಾಗಿಯೇ. ನಿಜವಾಗಿಯೂ ಕಥೆಗಳಲ್ಲಿ ತಾಕತ್ತು ಇದ್ದರೆ ಬರಹಗಳಲ್ಲಿ ಸತ್ವ ಇದ್ದರೆ ಬರೆದವನು (ನಮ್ಮಂತೆ) ಪ್ರಕಟವಾದ ಪತ್ರಿಕೆಯ ಲೀಂಕನ್ನು ಮೈಲ್ ಮಾಡುವ ಅಗತ್ಯ ಇರುವುದಿಲ್ಲ. ಅದು ತನ್ನಿಂದ ತಾನೆ ಮನಸ್ಸಿನಿಂದ ಮನಸ್ಸಿಗೆ ದಾಟುತ್ತದೆ. ಬರಹಗಳಲ್ಲಿ ಸತ್ವ ತುಂಬಲಾಗದವರು, ಪಾಮರರು ಅವರಿಗೆ ಹೀಗೆ ಹೆಸರನ್ನು ದಾಖಲಿಸುವ ಆಸೆ ,ಆವಾಗ ಇಂತಹ ಕೆಲಸ. ಟೀಕೆ ಹಾಗೂ ಟಿಪ್ಪಣಿ.
ಅಂತಿಮವಾಗಿ:
ಹಾರ ತುರಾಯಿ ಬೇಕು ಪಂಡಿತಂಗೆ
ಹೆಸರಿಸಿರೆ ಸಾಕು ಪಾಮರಂಗೆ
ಕೊಪ್ಪರಿಗೆ ಹಣ ಬೇಕು ಕೃಪಣಂಗೆ
ಮೌನವೊಂದೇ ಸಾಕು ಸುಖಿಪಂಗೆ

Monday, November 17, 2008

ನಗುಮುಖ ಹೊರಗೆ ನಿಜ ಮುಖ ಒಳಗೆ


"ನಗುನಗುತಾ ನಲೀ ನಲೀ ಏನೇ ಆಗಲಿ" ಅನ್ನೋ ಹಳೆಯ ಹಾಡು ನಿಮಗೆಲ್ಲಾ ಗೊತ್ತಿದೆ. ಆದರೆ ಹಾಗೆ ಏನೇ ಆದರೂ ನಗುನಗುತ್ತಾ ಇರಲು ಇವತ್ತಿನವರೆಗೆ ಯಾರಿಗೂ ಆಗಿಲ್ಲ. ಮುಂದೆಯೂ ಆಗೋದಿಲ್ಲ. ಯಡ್ದಾದಿಡ್ಡಿ ಹಲ್ಲು ನೋವು ಬಂದಾಗ ಆ ಹಾಡಲ್ಲಿ ನಗುನಗುತಾ... ಎಂದು ಹೇಳಿದ್ದಾನೆ ಅಂದುಕೊಂಡು ನಗಿ ನೋಡೋಣ..? ಆಗೋದೇ ಇಲ್ಲ. ಇಲ್ಲ ಅದು ಹಾಗಲ್ಲ ನೂರಾರು ಜಂಜಡ ಬಂದಾಗ ಅದು ಆ ಕಾಣದ ದೇವನ ಲೀಲೆಯೆಂದು ನಗು ಅಂತ ಆ ಹಾಡಿನ ಅರ್ಥ. ಇರಲಿ ಅವರು ಹಾಡಿದ್ದು ನಾವು ಕೇಳಿದ್ದು ಎಲ್ಲಾ ಮುಗಿದಕತೆ ಈಗ ಲೈಫ್ ಎಂಬ ಲೈಫ್ ನಲ್ಲಿ ನಮ್ಮ ನಿಮ್ಮ ಜೀವನದಲ್ಲಿ ನಗು ಎಂಬುದು ಎಲ್ಲಿದೆ ಅಂತ ನೋಡೋಣ. ಬಾಲ್ಯದಲ್ಲಿ ನಾವೂ ನೀವು ಎಲ್ಲಾ ಗಿಟಿ ಗಿಟಿ ನಕ್ಕಿದ್ದು ಇದೆಯಂತೆ ಅಪ್ಪ ಅಮ್ಮ ನೆಂಟರು ಎಲ್ಲಾ ಹಾಗೆ ಹೇಳುವುದು ಇದೆ. ಆದರೆ ಅದು ನನಗೆ ನಿಮಗೆ ಇಬ್ಬರಿಗೂ ಗೊತ್ತಿಲ್ಲ. ಅಷ್ಟಾದ ಮೇಲೆ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ದಿನ ಇವತ್ತು ತಗಡಿನಂತಿರುವ "ವಿಚಿತ್ರ ವಾರ್ತೆಯೋ", ಫ್ಯಾನ್ಸಿ ಡ್ರೆಸ್ಸೋ" ನಮ್ಮ ನಿಮ್ಮನ್ನು ಬಿದ್ದು ಬಿದ್ದು ನಗಿಸಿದ್ದಿದೆ. ಆನಂತರ ಹೈಸ್ಕೂಲು ದಿನಗಳಲ್ಲಿ ಅತ್ತ ಪೂರ್ಣ ಪೋಲಿಯೂ ಅಲ್ಲದ ಇತ್ತ ಸ್ಟ್ಯಾಂಡರ್ಡೂ ಅಲ್ಲದ " ಮೇಸ್ಟರ ಡ್ರಾಯರ್ ಕಸೆ ಆಚೆ ಬಿದ್ದಾಗ, ಜಿಪ್ ಓಪನ್ ಆದಾಗ, ಮಳೆಗಾಲದಲ್ಲಿ ಮೇಡಂ ಸೊಯಕ್ ಅಂತ ಜಾರಿಬಿದ್ದಾಗ , ಶಾಲೆಯಲ್ಲಿ ಸಹಪಾಠಿ ಚಡ್ಡಿಯಲ್ಲಿ ಇಶ್ಯಿಶ್ಯಿ ಮಾಡಿಕೊಂಡಾಗ ಕಿಸಕ್ಕನೆ ನಕ್ಕಿದ್ದಿದೆ. ಅಂತಹ ನಗುವಿಗೆ ಮತ್ತೊಬ್ಬರ ಹೆದರಿಕೆ ಇತ್ತು ಬಿಡಿ. ಆನಂತರ ಕಾಲೇಜು ದಿನಗಳಲ್ಲಿ ನಕ್ಕಿದ್ದೇ ನಕ್ಕಿದ್ದು, ಪೂರ್ಣ ಪ್ರಮಾಣದ ಪೋಲಿ ಜೋಕ್ ಗಳು, ನಗಿಸಲು ಹೆಚ್ಚಿನ ದೇಣಿಗೆ ನೀಡಿತ್ತು. ಕಾಲೇಜು ಮುಗಿದು ಕೆಲಸದ ಬೇಟೆ ಆರಂಭವಾಯಿತು ನೋಡಿ ಅಲ್ಲಿಂದ ನಗು ಎಂಬುದು ಒಂತರಾ ಒತ್ತಾಯದ ಕ್ರಿಯೆ ಅನ್ನಿಸುವಂತೆ ಅನ್ನಿಸಿತು. ಆ ಕೆಲಸವೆಂಬ ಕೆಲಸ ಸಿಕ್ಕಿ ಸರಿ ಸುಮಾರು ಮದುವೆ ಅಂಬೋ ಒಂದು ಶಾಸ್ತ್ರ ಮುಗಿದ ಮೇಲೆ ಮನಸ್ಸುಬಿಚ್ಚಿ ನಕ್ಕದ್ದು ಕಡಿಮೆ ಅಂತ ಹೇಳುವುದು ತೀರಾ ಜೋಕಿಗೇನೂ ಅಲ್ಲ . ಇನ್ನು ಹಲವು ಬಾರಿ ಹೊರಗಿನವರಿಗೆ ನಕ್ಕಂತೆ ಕಂಡರೂ ಒಳಗೊಳಗೆ ಅದೇನೋ ನೋವು ಅಡಗಿರುತ್ತದೆ. ಹೆಂಡತಿಯ ಆಸೆ ಗಂಡನಿಗೆ ಭಾಷೆ ಮಕ್ಕಳ ಭವಿಷ್ಯ ಹೀಗೆ ಏನೇನೋ ಸೇರಿಕೊಂಡು ನಗು ಮಾಯವಾಗಿಬಿಡುತ್ತದೆ ಹಲವರ ಬಾಳಿನಲ್ಲಿ. ಆದರೆ ವಿಚಿತ್ರ ನೋಡಿ , ಅತಿಯಾಗಿ ನೋವು ತಿಂದವರು ಅದೇಕೋ ಹೆಚ್ಚು ನಗುತ್ತಾರೆ ಮತ್ತು ನಗಿಸುತ್ತಾರೆ.
ನಮ್ಮೂರಲ್ಲಿ ಶೇಷಜ್ಜ ಎಂಬ ವೃದ್ಧರು ತನ್ನ ಪತ್ನಿಯೊಡನೆ ಇದ್ದಾರೆ. ಎಪ್ಪತ್ತರ ಇಳಿವಯಸ್ಸಿನಲ್ಲಿಯೂ ಅವರಿಗೆ ನಗಲು ನಗಿಸಲು ನೂರಾರು ಕಾರಣಗಳು ಸಿಗುತ್ತವೆ. ಯಡ್ದಾದಿಡ್ಡಿ ದಮ್ಮಿನ(ಉಬ್ಬಸ) ಗಿರಾಕಿಯಾದ ಅವರು "ಯನ್ನ ಹತ್ತಿರ ಮಾತನಾಡಲು ನಿಂಗೆ ದಮ್ಮು ಇದ್ದನಾ ಯಂಗಾದ್ರೆ ನೋಡಿರೆ ಗೊತ್ತಾಕ್ತು. ಮಾತು ಶುರು ಮಾಡಕ್ಕಿಂತ ಮುಂಚೆ ನೋಡ್ಕ್ಯ" ಎನ್ನುತ್ತಾ ತಮಗಿರುವ ದಮ್ಮನ್ನು ತಾವೇ ಆಡಿಕೊಳ್ಳುತ್ತಾರೆ. ಯಾವಾಗಲೂ ನಗಿಸುವ ಅವರ ಕಥೆ ಮಾತ್ರಾ ದುರಂತದ್ದು. ಎರಡು ಗಂಡು ಮಕ್ಕಳು ಅಕಾಲ ಮೃತ್ಯುವಿಗೀಡಾಗಿದ್ದಾರೆ, ಇನ್ನುಳಿದ ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಾಕೆಗೆ ಗಂಡ ತೀರಿಕೊಂಡಿದ್ದಾನೆ, ಇವರು ಗಂಡ ಹೆಂಡತಿ ಬಾಡಿಗೆ ಮನೆಯೊಂದರಲ್ಲಿ ದಿನ ತಳ್ಳುತ್ತಿದ್ದಾರೆ. ಆರೋಗ್ಯ ಏರುಪೇರಾದರೆ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೂ ನಮ್ಮ ಶೇಷಜ್ಜ ಜುಂ ಅಂತ ದಮ್ಮಿನ ಸೊಂಯ್ ಸೊಂಯ್ ಶಬ್ಧದ ನಡುವೆ ಗಿಟಿಗಿಟಿ ನಗುತ್ತಾರೆ ಹಾಗೂ ನಗಿಸುತ್ತಾರೆ. ನಿಮ್ಮ ಬಳಿಯೂ ಇಂತಹ ಹತ್ತಾರು ಕಥೆಗಳು ಸಿಗುತ್ತವೆ. ಆದರೆ ವಿಚಿತ್ರವೆಂದರೆ ದಿನವಿಡೀ ನಗುತ್ತಲೇ ಇರಬಹುದಾದಷ್ಟು ಸೌಲಭ್ಯ ಇರುವ ಎಲ್ಲವೂ ಸರಿಯಿರುವ ಜನರು "ಅಯ್ಯೋ ಬದುಕುವುದೇ ಕಷ್ಟ" ಅಂತ ಅಳುತ್ತಿರುತ್ತಾರೆ. ಇದು ಪ್ರಕೃತಿಯ ವೈಚಿತ್ರ್ಯ. ಹೀಗೆ ಮುಂದುವರೆಯುತ್ತದೆ ಕಾಲ..... ಆದರೂ ನಮ್ಮ ನಿಮ್ಮ ನಡುವೆ ನಿತ್ಯ ನಗುತ್ತಾ ಇರುವ ಹಲವಾರು ಜನರು ಸಿಗುತ್ತಾರೆ. ಅಂತಹ ನಗುವವರಿಂದ ನಾವೂ ನಗುವುದ ಕಲಿತು ಪಾವನರಾಗಬಹುದು. ಮನೆಯಲ್ಲಿ ನಗು ಮಾಯವಾಗಿ ಬೆಳೆಗ್ಗೆ ಮುಂಚೆ ಪಾರ್ಕಿನಲ್ಲಿ ಹಾ ಹಾ ಹ ಹ ಹ ಎಂದು ನಗುವ ನಗೆ ಕ್ಲಬ್ ಗಳೂ ಇಂದು ಇವೆ. ಸಹಜವಾಗಿದ್ದದ್ದನ್ನು ಕೃತಕವಾಗಿ ಪಡೆದಾದರೂ ಅನುಭವಿಸುತ್ತೇನೆ ಎಂಬ ಹಠ ಉತ್ತಮವೇ ನಿಜ.
ಕೊನೆಯದಾಗಿ: ನಗಿಸುವವ ಜೀವನ ಅದೇಕೆ ಅಳುತ್ತಿರುತ್ತದೆ .? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ."ಅವರು ಜೀವನದಲ್ಲಿ ಅತ್ತಿದ್ದಕ್ಕಾಗಿ ಇತರರನ್ನು ನಗಿಸುತ್ತಿದ್ದಾರೆ. ಈ ಮನುಷ್ಯ ಪ್ರಪಂಚ ಯಾವಾಗಲೂ ವಿಚಿತ್ರವೇ, ಸೂಟು ಬೂಟು ಹಾಕಿ ಮೆರಯಬಹುದಾಗಿದ್ದ ಗಾಂಧಿ ಎಲ್ಲಾ ಬಿಚ್ಚಿ ಎಸೆದರು, ಅಂಗಿಗೂ ಗತಿಯಿಲ್ಲದವರ ನೇತಾರ ಅಂಬೇಡ್ಕರ್ ನಿರಂತರ್ಐಷರಾಮಿನ ಧಿರಿಸಿನಲ್ಲಿಯೇ ಕಾಲ ಕಳೆದರು. ಅಲ್ಲಿಗೆ ಇದು ತಿಳಿದಿರಲಿ ಯಾರಿಗೆ ಯಾವುದು ಇರುತ್ತದೆಯೋ ಅದು ಬೇಡ ಯಾವುದು ಇಲ್ಲವೋ ಅದರತ್ತ ನಿರಂತರ ನೋಟ" ಎಂದು ಉತ್ತರಿಸಿದರು. ನನಗೆ ನಾನು ಕೇಳಿದ್ದಕ್ಕೂ ಅವರು ಹೇಳಿದ್ದಕ್ಕೂ ಸಂಬಂಧವೇ ಇಲ್ಲವೇನೋ ಅಂತ ಅನ್ನಿಸಿತು. ಆದರೂ ಉತ್ತರವನ್ನು ಯಥಾವತ್ತು ಟೈಪಿಸಿದ್ದೇನೆ ಕಾರಣ ನೀವು ಬುದ್ಧಿವಂತರು ನಿಮಗಾದರೂ ಅರ್ಥವಾಗುತ್ತೆ ಅಂತ
ಟಿಪ್ಸ್: ನಿಮಗೆ ಯಾರಾದರೂ ಸಿಟ್ಟಿನಿಂದ ಏನಾದರೂ ಅನ್ನಲು ಬಂದಾಗ ಮುಗಳ್ನಗಲು ಆರಂಬಿಸಿ ಆಗ ಅವರ ಪರಿಸ್ಥಿತಿ ನೋಡಿ ಮಜ ಅನುಭವಿಸಿ.

Sunday, November 16, 2008

ಕಥೆ ಕಥೆ ಕಾರಣ

ಹಾಯ್ ಪ್ರಿಯ ಓದುಗರೆ,

ನಾನು ಬರೆಯುತ್ತೇನೆ ಆದರೆ ಕವಿಯಲ್ಲ. ಅಡಿಕೆ ತೋಟ ಜೀವನ ನಿರ್ವಹಣೆಗೆ ಆಗುವಷ್ಟು ಇದೆ ಆದರೆ ಕೃಷಿಕನಲ್ಲ. ಕಾರು ಬಿಡುತ್ತೇನೆ ಡ್ರೈವರ್ ಅಲ್ಲ. ಜೇನು ಸಾಕಿದ್ದೇನೆ ಹಾಗಂತ ಜೇನುಕುಡುಬಿ ಅಲ್ಲ. ಹತ್ತೆಕೆರೆ ಜಾಗದಲ್ಲಿ ಸ್ನೇಹಿತರೊಡಗೂಡಿ ಸಹಜ ಅರಣ್ಯ ಬೆಳೆಸಿದ್ದೇನೆ ಹಾಗಂತ ತೀರಾ ಪರಿಸರಪ್ರೇಮಿ ಅಲ್ಲ. ಒಂದು ಜೇನಿನ ಹಿಂದೆ ಎಂಬ ಪುಸ್ತಕವೊಂದನ್ನು ಬರೆದಿದ್ದೇನೆ ಎಂದಾಕ್ಷಣ ಕಾದಂಬರಿಕಾರನಲ್ಲ. ಅಂತ್ಯಾಕ್ಷರಿ ಆಡುವಾಗ ಒಂದಿಷ್ಟು ಹಾಡು ಹೇಳುತ್ತೇನೆ ಹಾಗಂತ ಹಾಡುಗಾರನಲ್ಲ. ಸಿಕ್ಕಾಪಟ್ಟೆ ವಾಚಾಳಿ ಹಾಗಂತ ಭಾಷಣಕಾರನಲ್ಲ. ಕೈಯಲ್ಲಿ ಕಾಸಿದ್ದಾಗ ಒಂದಿಷ್ಟು ದಾನ ಮಾಡಿದ್ದೇನೆ ಹಾಗಂತ ಕರ್ಣನಲ್ಲ. ಈ ಅಲ್ಲಗಳ ನಡುವೆ ಈ ಭಾನುವಾರದ ಪ್ರಜಾವಾಣಿಯಲ್ಲೊಂದು ಕಥೆ ಪ್ರಕಟವಾಗಿಬಿಟ್ಟಿದೆ ನಿಮಗೆ ಪುರುಸೊತ್ತು ಇದ್ದರೆ ನೋಡಿ. http://prajavani.net/Content/Nov162008/weekly20081115104048.asp