Monday, February 2, 2009

ಹೂವೊಂದು

ಅದೇಕೋ ಗೊತ್ತಿಲ್ಲ ಹಸಿರು ಕಂಡ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಹೂವು ಕಂಡ ಹೃದಯ ಶೃಂಗಾರಕ್ಕೆ ಒಯ್ಯುತ್ತದೆ. ಹೂವನ್ನು ಹೆಂಗಸರು ಮುಡಿಯುತ್ತಾರೆಂದು ಹಾಗೆ ಇರಬಹುದೇನೋ. ಹೂವಿನ ಮೇಲಿನ ಹಾಡುಗಳೆಲ್ಲ , ಕಟ್ಟಿದ ಕವನಗಳೆಲ್ಲಾ, ಬರೆದ ಲೇಖನಗಳೆಲ್ಲಾ ಶೃಂಗಾರಮಯ. ಮಲ್ಲಿಗೆಯಿಂದ ಗುಲಾಬಿಯವರೆಗೆ ಸಂಪಿಗೆಯಿಂದ ಸೇವಂತಿಯ ವರೆಗೂ ಅದೊಂತರಾ ರಸಭರಿತದ್ದೇ ಸಾಲುಗಳು. ತಾವರೆ ಕಮಲ ಹೀಗೆ ಯಾವುದೇ ಹೂವು ಇದ್ದರೂ ಮನುಷ್ಯ ಅದಕ್ಕೆ ಪ್ರೀತಿ ಪ್ರೇಮ ಎಂದೆಲ್ಲಾ ತಳಕು ಹಾಕಿದ್ದಾನೆ. ಹಾಗೇಕೆ ಹೂವಿಗೆ ಕವಿಗಳು ಅಷ್ಟೊಂದು ಮುರಿಬಿದ್ದರು ಮುರಿಬೀಳುತ್ತಿದ್ದಾರೆ ಎಂದು ಸಾಮಾನ್ಯ ಮಟ್ಟಿಗೆ ಬಗೆ ಹರಿಯದ ಸಂಗತಿ.
ಬೀಜವಾಗಿ ಸಂತಾನಾಭಿವೃದ್ದಿಗೆ ಕಾರಣವಾಗುವ ಕಾರಣೀಕರ್ತ ಹೂವು ಅಂತಲೋ , ಮೆತ್ತ ಮೆತ್ತಗೆ ನೋಡಲು ಅಂದವಾಗಿ ಇದೆ ಅಂತಲೋ, ಬಣ್ಣದ ಚಿಟ್ಟೆಗೆ ಆಕರ್ಷಣೆಯಂತಲೋ, ಅದಕ್ಕೆ ಶೃಂಗಾರ ರಸ ತೊಡಿಸಿದ ಅಂತ ಊಹಿಸಬಹುದಷ್ಟೆ. ಆದರೂ ಅವುಗಳೆಲ್ಲಾ ಕಲ್ಪನೆಯ ಉತ್ತರವಷ್ಟೆ. ಒಬ್ಬಿಬ್ಬ ಕವಿಗಳು ಹೂವನ್ನು ಬೆನ್ನತ್ತಿದ್ದರೆ ಕಾರಣವನ್ನು ಕೊಡಬಹುದಿತ್ತೇನೋ ಆದರೆ ಕಾಲಾಂತರಗಳಿಂದ ಎಲ್ಲಾ ಕವಿವರೇಣ್ಯರೂ ಹೀಗೆ ಹೂವಿನ ಹಿಂದೆ ಬಿದ್ದಿದ್ದಾರೆ. ಅಂದಮೇಲೆ ಪ್ರಕೃತಿ ಅದರಲ್ಲೇನೋ ಶಕ್ತಿ ಇಟ್ಟಿರಬೇಕು. ಹೌದು ಈಗ ಸುಮಾರಾದ ಉತ್ತರ ಹೊಳೆಯಿತು . ಹೂವಿನಲ್ಲಿ ಇರುವ ಪರಿಮಳ ಶೃಂಗಾರಕ್ಕೆ ಪ್ರೇರೇಪಿಸುತ್ತದೆಯಂತೆ ಹಾಗಾಗಿ ಅದು ಹಾಗೆ. ಅಯ್ಯೋ ಮಳ್ಳೆ ತಾವರೆಯ ಹೂವಿನಲ್ಲಿ ಪರಿಮಳವೇ ಇಲ್ಲವಲ್ಲ ಆದರೂ "ತಾವರೆಯ ಗಿಡ ಹುಟ್ಟಿ.....ದೇವರಿಗೆ ಎರವಾದೆ" ಎಂದು ಹಾಡು ರಚಿಸಿಲ್ಲವೇ? ಎಂದು ನೀವು ಕೇಳಬಹುದು. ನಿಜ ಅಲ್ಲೂ ತಂತ್ರವಿದೆ. ಪರಿಮಳವಿಲ್ಲದ ಗೊಡ್ಡು ಹೂವನ್ನು ಕವಿಗಳು ಅಪ್ಪಿತಪ್ಪಿಯೂ ಪ್ರೇಮ ಕಾಮಕ್ಕೆ ಬಳಸಿಲ್ಲ. ಅವುಗಳು ಬಳಕೆಯಾಗಿರುವುದು ತವರು-ದೇವರು- ಇಂತಹ ವಿಷಯಗಳಿಗೆ ಎಂಬಲ್ಲಿಗೆ ಇದನ್ನು ಓದುತ್ತಿರುವ ನೀವು ಬರೆಯುತ್ತಿರುವ ನಾನು ಒಂದು ಸಹಮತದ ತೀರ್ಮಾನಕ್ಕೆ ಬರೋಣ. ಹಲವಾರು ಪರಿಮಳ ಭರಿತ ಹೂವುಗಳು ವಂಶಾಭಿವೃದ್ಧಿಯ ಪ್ರಕ್ರಿಯೆಗಳಾದ್ದರಿಂದ ಅದರಿಂದ ಹೊರಡುವ ಸುವಾಸನೆ ಮನುಷ್ಯರಲ್ಲಿ ಶೃಂಗಾರವನ್ನು ಕೆಣಕುತ್ತದೆ. ಹಾಗಾಗಿ ಮನುಷ್ಯ ಹೂವಿನ ಹಿಂದೆ ಬಿದ್ದ . ಮತ್ತು ಇಂದಿಗೂ ಬೀಳುತ್ತಲೇ ಇದ್ದಾನೆ. ಹಾಗಾಗಿ ಮಲ್ಲಿಗೆ ಸಂಪಿಗೆ ಎಲ್ಲಾ ಫೇಮಸ್.

Sunday, February 1, 2009

ಶಿವಪ್ಪ ಕಾಯೋ ತಂದೆ... ಮೂರು ಲೋಕ ಸ್ವಾಮಿ ದೇವ

ಹಸಿವೆಯನ್ನು ತಾಳಲಾರೆ ಕಾಪಾಡೆಯಾ..ಶಿವನೇ ಕಾಪಾಡೆಯಾ, ಹರನೇ... ಹೀಗೆ ಆ ಹಸಿವೆಯ ಹಳೇ ಹಾಡು ಮುಂದುವರೆಯುತ್ತದೆ. ನನಗೆ ಇಲ್ಲಿ ಬರೆಯಲು ಹಾಡು ಮುಂದೆ ಬರುವುದಿಲ್ಲ. ಇನ್ನು ನಮ್ಮ ಯಜ್ಞೇಶ್(http://nammasangraha.blogspot.com/) ಮನಸ್ಸು ಮಾಡಿದರೆ ಸಂಪೂರ್ಣ ಹಾಡು ಸಿಗಬಹುದು. ಆಯಿತು ಅದು ಹಾಡಿನ ಕತೆ ಈಗ ನನ್ನ ವರಾತ ಆ ಹಾಡಿಗೆ ಕಾರಣವಾದ ಹಸಿವೆಯ ಕುರಿತು ಅದೇನೆಂದು ನೋಡೋಣ.
ಒಂದಾನೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ( ರಾಜ್ಯ ಎಂದಮೇಲೆ ರಾಜ ಇರಲೇ ಬೇಕು ಅಂದಿರಾ..?) ಆತನಿಗೆ ಮುದ್ದು ಕುವರನೊಬ್ಬ ಇದ್ದ. ಒಬ್ಬನೇ ಒಬ್ಬ ಏಕಮಾತ್ರ..! ಪುತ್ರನಾದ್ದರಿಂದ ರಾಜ ಮಗನಿಗೆ ಕಷ್ಟ ಕಾರ್ಪಣ್ಯಗಳು ಎರವಾಗದಂತೆ ಬೆಳಸುತ್ತಿದ್ದ. ಇಂತಿಪ್ಪ ದಿವಸಗಳಲ್ಲಿ ಒಂದು ದಿನ ಬೆಳ್ಳಂಬೆಳಗ್ಗೆ ರಾಜಕುಮಾರ ನನ್ನ ಹೊಟ್ಟೆಯಲ್ಲಿ ಏನೋ ಆಗುತ್ತಿದೆ ಎಂದು ಬೊಬ್ಬಿಡಲು ಪ್ರಾರಂಬಿಸಿದ. ರಾಜವೈದ್ಯರು ತರಾತುರಿಯಲ್ಲಿ ಬಂದರು ಪರೀಕ್ಷಿಸಿದರು.ಪರಿಣಾಮ ಇಲ್ಲ. ರಾಜ ಜ್ಯೋತಿಷಿಗಳು ಬಂದರು ಇಲ್ಲ ಪರಿಣಾಮ. ರಾಜಧಾನಿಯಲ್ಲಿರುವ ಇತರೇ ವೈದ್ಯರನ್ನು ಕರೆಸಲಾಯಿತು . ಇಲ್ಲ ನಿಲ್ಲಲಿಲ್ಲ ರಾಜಕುವರನ ಬೊಬ್ಬೆ. ಕ್ಷಣಕ್ಷಣಕ್ಕೂ ಹೊಟ್ಟೆ ಹಿಡಿದುಕೊಂಡು ಕೂಗುವ ಪರಿ ಹೆಚ್ಚಾಗುತ್ತಾ ಹೋಯಿತು. ಜನ ಸೇರಿದರು ಜಾತ್ರೆ ಸೇರಿತು ರಾಜಕುಮಾರನ ಬೊಬ್ಬೆ ಶಕ್ತಿಯಿಲ್ಲದೆ ಕ್ಷೀಣಿಸತೊಡಗಿತು. ಸೇವಕ ಸೇವಕಿಯರು ಗುಸುಗುಸು ಪಿಸ ಅಂತ ಮಾತಾಡತೊಡಗಿದರು. ಈ ಗುಸುಗುಸು ಪಿಸಪಿಸ ಮಾಡುತ್ತಿದ್ದ ಸೇವಕರ ನಡುವೆ ಜಾಗ ಮಾಡಿಕೊಂಡು ರಾಜಕುಮಾರನಿಗೆ ಬೆಳಗಿನ ತಿಂಡಿಕೊಡುವ ಸೇವಕ ರೂಮು ಸೇರಿ ಬಾಗಿಲು ಹಾಕಿಕೊಂಡ. ಸ್ವಲ್ಪ ಹೊತ್ತಿನ ನಂತರ ರಾಜಕುವರ ಖುಶ್ ಆಗಿ ನಳನಳಿಸತೊಡಗಿದ. ಆ ಸೇವಕ ಮಾಡಿದ್ದಷ್ಟೇ ಅಂದು ಎಂದಿನ ಸಮಯಕ್ಕೆ ಕುವರನಿಗೆ ತಿಂಡಿ(ರಾಜಕುವರ ನಾದ್ದರಿಂದ ಉಪಹಾರ ಶಭ್ದ ಸರಿ) ಕೊಡುವುದನ್ನು ಮರೆತಿದ್ದ. ಅದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿತ್ತು. ಆ ದಿವಸದ ವರೆಗೂ ಹಸಿವು ಎಂದರೆ ಏನು ? ಎಂದು ತಿಳಿಯದಂತೆ ಬೆಳೆದಿದ್ದ ರಾಜಕುವರ ಹಸಿವಿನ ಅವಸ್ಥೆಯ ಹೊಸ ಅನುಭವಕ್ಕೆ ಬೆದರಿ ಬೊಬ್ಬೆ ಹಾಕಿದ್ದ.
ಇದು ಯಾರೋ ಹಸಿವಿನ ಬಗ್ಗೆ ಸೃಷ್ಟಿಸಿದ ಕತೆ. ಅದನ್ನು ನೇರವಾಗಿ ಕದ್ದು ನಿಮಗೆ ಹೇಳಿದ್ದೇನೆ. ನಿಜ ರಾಜಕುವರನ ಕತೆ ಹೀಗಾಯಿತು ಕಾರಣ ಆತನಿಗೆ ಹಸಿವಿನ ಅರಿವೇ ಇರಲಿಲ್ಲ. ನಮಗೆ ನಿಮಗೆ ಹಾಗಲ್ಲ ಹಸಿವಿನ ಅನುಭವ ಇದೆ ಆದರೆ ಆಹಾರ ಸಿಗದ ಸಿಗಲಾರದ ರಣ ಹಸಿವಿನ ಅರಿವು ಇಲ್ಲ. ಅದು ತುಂಬಾ ಕಷ್ಟಕರವಾದ್ದು. ಸೋಮಾಲಿಯಾದಲ್ಲಿ ಚಕ್ಕಳ ಹಿಡಿದ ಜನರ ಪೋಟೋಗಳನ್ನು ನೀವು ನೋಡಿರಬಹುದು. ಹಸಿವಿನಿಂದ ಅಲ್ಲಿ ಜನ ಸಾಯುತ್ತಿರುತ್ತಾರಂತೆ. ನಮ್ಮ ದೇಶದಲ್ಲಿ ಹಾಗಲ್ಲ ಸಧ್ಯ. ಹಸಿ ಹಸಿ ಬಡತನ ಇರಬಹುದು ಸ್ಲಂ ಡಾಗ್ ಸಿನೆಮಾದ ಸನ್ನಿವೇಶ ಇರಬಹುದು ಕೊಳಕುತನ ಇರಬಹುದು ಆದರೆ ಆಹಾರವೇ ಇಲ್ಲದೆ ಸಾಯುತ್ತಿರುವ ಮನುಷ್ಯರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹುದು. ಇದು ಸಧ್ಯದ ಸ್ಥಿತಿ. ಇದರ ಪ್ರಮುಖ ಹಿನ್ನೆಲೆ ನಾವು ಬೆಳೆದು ಬಂದ ರೀತಿ. ಇಲ್ಲಿ ಕಠೋರತನದ ನಡುವೆ ಮಾನವೀಯತೆ ಇದೆ. ಕಟುಕತನದ ನಡುವೆಯೂ ಹೃದಯ ವೈಶಾಲ್ಯವಿದೆ. ಕರ್ಮಠರಲ್ಲಿಯೂ ಕನಿಕರವಿದೆ. ದುಷ್ಟರಲ್ಲಿಯೂ ಪ್ರೀತಿ ಇದೆ. ಅದಕ್ಕೊಂದು ನಮ್ಮ ಧರ್ಮ ರೀತಿ ರಿವಾಜು ನಡೆದು ಬಂದ ಪಾಪ ಪುಣ್ಯ ಬಿತ್ತುವ ಬೀಜ ಮಂತ್ರ ಇದೆ. ಅವುಗಳು ನಮಗೆ ಅರಿವಿಗೆ ಬಾರದಂತೆ ನಮ್ಮ ಆಳದಲ್ಲಿ ಹುದುಗಿ ನಮಗೂ ಹಾಗೂ ನಮ್ಮ ಜತೆಯಲ್ಲಿ ಸಹಜೀವನ ನಡೆಸುತ್ತಿರುವವ ಪ್ರಾಣಿ ಪಕ್ಷಿಗಲಾದಿಯಾಗಿ ಎಲ್ಲರಿಗೂ ರಣ ಹಸಿವು ಆಗದಂತೆ ಕಾಪಾಡುತ್ತದೆ. ಇರಲಿ ಆ ಶಕ್ತಿಯ ಮಹತ್ವ ತಿಳಿಯಲು ಆಧ್ಯಾತ್ಮ ಚಿಂತಕರೇ ಬೇಕು ಹಾಗಾಗಿ ಅದಬಿಟ್ಟು ಈಗ ನಮ್ಮ ಮಟ್ಟದ ಯೋಚನೆಗೆ ಹೊರಳೋಣ.
ಹೀಗೆ ಮನುಷ್ಯನ ಹುಟ್ಟಿನೊಂದಿಗೆ ಹುಟ್ಟಿ ಸಾವಿನವರೆಗೂ ಕಾಡುವ ಈ ಆಹಾರದ ಹೊಟ್ಟೆ ಹಸಿವು ದಿನನಿತ್ಯ ನಿಮಗೆ ಒಂದು ವಿಷಯವೇ ಅಲ್ಲ ಅದು ನೆನಪಾಗುತ್ತಲೇ ಇಲ್ಲ ಕಾಟ ಕೊಡುತ್ತಲೇ ಇಲ್ಲ ಅದು ಸಮಸ್ಯಯೇ ಅಲ್ಲ ಅಂತಿದ್ದರೆ ನೀವು ಸುಖದಲ್ಲಿ ತೇಲುತ್ತಿದ್ದಿರಿ ಅಂಬೋ ಅರ್ಥ ಅಂಡರ್ ಸ್ಟುಡ್. ಇಷ್ಟಿದ್ದಮೇಲೆ ಒಂದೇ ಒಂದು ದಿವಸ ನೀವು ಆ ರಣ ಹಸಿವನ್ನು ಅನುಭವಿಸಬೇಕು. ಸಾಬರು ರಂಜಾನ್ ಉಪವಾಸ ಮಾಡುತ್ತಾರಲ್ಲ ಹಾಗೆ. ಬೆಳಿಗ್ಗೆ ಯಿಂದ ಹಗಲು ಮುಗಿಯೋವರಗೆ ಒಂದು ದಿನ ನಿರಾಹಾರ ದ ಉಪವಾಸ. ಹೀಗೆ ಯಾಕೆ ಹೇಳುತ್ತಿದ್ದೀನಿ ಅಂದರೆ ಎಲ್ಲಾ ಕಡೆ ಉಪವಾಸ ಚಾಲ್ತಿಯಲ್ಲಿದೆ . ಹಲ ಜನರು ವಾರಕ್ಕೊಮ್ಮೆ ಮಾಡುತ್ತಾರೆ. ಅವರ ಲೆಕ್ಕದಲ್ಲಿ ಉಪವಾಸ ಎಂದರೆ ಬೆಳಿಗ್ಗೆ ನಾಲ್ಕು ಚಪಾತಿ. ಮಧ್ಯಾಹ್ನ ಗೋದಿ ಅನ್ನ ರಾತ್ರಿ ಸೇಬು ಹಣ್ಣು ಹಾಲು. ಈಗ ನಾನು ಹೇಳುತ್ತಿರುವ ಉಪವಾಸ ಅದಲ್ಲ. ಹಾಗಾಗಿಯೇ ನಿರಾಹಾರದ ಉಪವಾಸ ಎಂದಿರುವುದು. ಅಂತಹ ಒಂದು ಹಗಲಿನ ನಿರಾಹಾರ ಉಪವಾಸ ಧೈರ್ಯದಿಂದ ನೀವು ಕೈಗೊಂಡಲ್ಲಿ(ಬಿ.ಪಿ. ಷುಗರ್ ಇದ್ದರೆ ಧೈರ್ಯ ಮಾಡುವ ಕೆಲಸ ಮಾಡಬೇಡಿ) ಅದರ ಮಜ ಮಾರನೇ ದಿವಸ ನಿಮಗೆ ಅರಿವಾಗುತ್ತದೆ. ಅದನ್ನು ಇಲ್ಲಿ ನಾನು ಹೇಳಿ ಪ್ರಯೋಜನ ಇಲ್ಲ. ಹಸಿವಿನ ಅನುಭವ ಆಹಾರದ ಮಹತ್ವ ತಿಳಿದು ಮಾರನೇ ದಿನ ಹೊಸ ಪ್ರಪಂಚ... ಹೊಸ ಗಾಳಿ... ಹೊಸ ಪ್ರಫುಲ್ಲ ಮನಸ್ಸು... ಆಹಾ.... ಹಾಗೂ ಆ ಶಿವಪ್ಪ ಕಾಯೋ ತಂದೆ ಹಾಡಿನ ಒಳ ಮರ್ಮ ಎಲ್ಲಾ ನಿಮಗೆ ಸ್ವಂತ.
ಕೊನೆಯದಾಗಿ: ಸಾಬರಲ್ಲಿ ಯಡ್ದಾದಿಡ್ಡಿ ಆತ್ಮಸ್ಥೈರ್ಯಕ್ಕೆ ರಂಜಾನ್ ತಿಂಗಳ ಉಪವಾಸವೂ ಒಂದು ಕಾರಣ.

ಎರಡು ಬ್ಲಾಗ್ ಗಳು

ಪ್ರವಾಸ ಪ್ರಯಾಸವಾಗಬಾರದು ಎಂದರೆ ನಾವು ಹೋಗುವ ಸ್ಥ್ಲಳದ ಮಾಹಿತಿ ನಮಗೆ ಚೆನ್ನಾಗಿರಬೇಕು. ಆಗ ಆತಂಕ ಇರುವುದಿಲ್ಲ. ಸ್ಥಳದ ಮಾಹಿತಿಗೆ ನಕ್ಷೆ ಗೈಡ್ ಮುಂತಾದವುಗಳಿವೆ ಎಂದಾದರೂ ಈಗಾಗಲೇ ಅಲ್ಲಿಗೆ ಹೋಗಿಬಂದವರ ಅನುಭವ ಸಿಕ್ಕರೆ ಸೂಪರ್. ಆದರೆ ಅವರು ಸಿಕ್ಕುವುದು ಹೇಗೆ ಎಂಬುದಕ್ಕೆ ಉತ್ತರ ಬ್ಲಾಗ್ ಗಳು. ಅಂತಹ ಪ್ರವಾಸಿ ತಾಣಗಳಿಗೆ ಹೋಗಿ ಬಂದು ತಮ್ಮ ಅನುಭವಗಳನ್ನು ಫೋಟೊ ಸಮೇತ ದಾಖಲಿಸುವ ನೂರಾರು ಬ್ಲಾಗ್ ಗಳು ಇಂಗ್ಲೀಷ್ ನಲ್ಲಿವೆ.ಕನ್ನಡದಲ್ಲಿ ಸ್ವಲ್ಪ ಕಡಿಮೆ ಇವೆ. ಅವುಗಳಲ್ಲಿ ರಾಜೇಶ್ ನಾಯ್ಕರ (http://rajesh-naik.blogspot.com/) ಅಲೆಮಾರಿ ಅನುಭಗಳು ಬ್ಲಾಗ್ ಕೂಡ ಒಂದು. ತಮ್ಮ ಪರಿಚಯದಲ್ಲಿ ಆದಿತ್ಯವಾರಗಳಂದು ಮತ್ತು ರಜಾದಿನಗಳಂದು ತಿರುಗಾಟ, ಅಲೆದಾಟ, ಸುತ್ತಾಟ.....ನಥಿಂಗ್ ಎಲ್ಸ್. ಎಂದು ಹೇಳಿಕೊಳ್ಳುವ ರಾಜೇಶ್ ಉತ್ತಮ ಫೋಟೊಗಳು ಹಾಗೂ ತಮ್ಮ ಅಲ್ಲಿನ ಅನುಭವಗಳನ್ನು ಇಂಚಿಂಚೂ ಹಂಚಿಕೊಳ್ಳುತ್ತಾ ನಮ್ಮನ್ನೂ ಅಲ್ಲಿಗೆ ಪುಕ್ಕಟೆಯಾಗಿ ಕರೆದುಕೊಂಡು ಹೋಗಿಬಿಡುತ್ತಾರೆ. ಒಮ್ಮೆ ಸುಖವಾದ ಪ್ರವಾಸ ಅನುಭವಿಸಿ.
ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. ಎಂದು ತಮ್ಮ ಹಾಗೆ ಸುಮ್ಮನೆ (http://adibedur.blogspot.com/) ಬ್ಲಾಗ್ ಮೂಲಕ ಕೇಳಿಕೊಳ್ಳುವ ಆದಿತ್ಯ ಈವಾರ ಕೇರಳಕ್ಕೆ ಹೋಗಿ ಬಂದ ತಮ್ಮ ಅನುಭವಗಳನ್ನು ಅತ್ಯುತ್ತಮವಾಗಿ ಹಂಚಿಕೊಂಡಿದ್ದಾರೆ. ಈ ವಾರ ಮಾತ್ರ ಪ್ರವಾಸದ ಬ್ಲಾಗ್ ಬರೆದಿರುವ ಮನಸ್ವಿಯೆಂಬ ಆದಿ ಖಾಯಂ ಪ್ರವಾಸಿ ಬ್ಲಾಗ್ ನ ಒಡೆಯರಲ್ಲ. ಅಲ್ಲಿ ಮಾಹಿತಿ ಇದೆ ಸಿನೆಮಾ ವಿಮರ್ಶೆಯಿದೆ. ಒಮ್ಮೊಮ್ಮೆ ಅಪ್ಡೇಟ್ ಆಗುವುದು ತಿಂಗಳಿಗೊಮ್ಮೆಗೂ ಕಷ್ಟ ಎನ್ನುವ ವಿಷಯವೊಂದು ಬಿಟ್ಟರೆ ಉತ್ತಮ ಬರಹದ ಬ್ಲಾಗ್ ಆದಿಯದು. ಅಪರೂಪಂ....... ಅನ್ನಬಾರದು ಅಷ್ಟೇ.
ಮತ್ತೆ ಮುಂದಿನವಾರ ಎಲ್ಲವೂ ಹೀಗೆ ಇದ್ದರೆ ಬೆಟ್ಟಿಯಾಗೋಣ ಹ್ಯಾಪಿ ವೀಕ್.