Saturday, July 10, 2010

ನಾಕ್ ಜನ ಸಾಕ್ ಜಿ

ಕರಾವಳಿಯ ಸಿಗಡಿಯ ಭಕ್ಷ್ಯದಂತೆ ಕೊರಿಯಾ ದೇಶದಲ್ಲಿನ ಅತ್ಯಂತ ರುಚಿರುಚಿಯಾದ ಸ್ವಾದಿಷ್ಟಕರವಾದ ಭಕ್ಷ್ಯದ ಹೆಸರು "ಸಾನ್ ನಾಕ್ ಜಿ" . ತುಂಬಾ ರುಚಿ ಅಂದರೆ ಅದು ಹೇಳಲರಾದಷ್ಟು ಬಾಯಿ ಚಪ್ಪರಿಸುವಷ್ಟು. ಹೆಸರನ್ನಷ್ಟೆ ಕೇಳಿ ಸುಂದರವಾಗಿದೆ ಅಂತ ತಿಳಿದು ನೀವು "ಏಕ್ ಪ್ಲೇಟ್ ದೇದೋಜಿ" ಅಂದುಬಿಡಬೇಡಿ, ಅದರ ಉತ್ಕೃಷ್ಟ ರುಚಿಯ ಜತೆ ಅದರ ತಿನ್ನುವ ಕಲೆಯೂ ಗೊತ್ತಿರಬೇಕು ಹಾಗೂ ಜತೆಯಲ್ಲಿ ಇನ್ನಿತರೆ ಮಹತ್ವವೂ...! ಇದೆ.
ಕೊರಿಯಾ ಹಾಗೂ ಜಪಾನ್ ನಲ್ಲಿ ಮಾತ್ರಾ ಸಿಗುವ "ಸಾನ್ ನಾಕ್ ಜಿ" ಎಂದರೆ ಜೀವಂತ ಆಕ್ಟೋಪಸ್ ನಿಂದ ತಯಾರಿಸಿದ್ದು. ತಿಂಡಿ...!. ಆರ್ಡರ್ ಮಾಡಿದಾಕ್ಷಣ ಸರ್ವಾಲಂಕಾರ ಮಾಡಿ ಬೌಲ್ ನಲ್ಲಿ ಮುಚ್ಚಿ ಟೇಬಲ್ ಮೇಲೆ ತಂದಿಟ್ಟಾಗ ಅದರ ಮುಚ್ಚಳ ತೆಗೆಯ ಹೊರಟ ನಿಮಗೆ ಸ್ವಲ್ಪ ಬಿಗಿ ಬರಬಹುದು. ಹೆದರಬೇಡಿ ಅಲ್ಲಿರುವ ಆಕ್ಟೋಪಸ್ ಮೇಲಿನ ಮುಚ್ಚಳ ಹಿಡಿದಿದೆಯಷ್ಟೆ. ನಿಧಾನ ಅದರ ಬಿಡಿಸಿ ಅದನ್ನು ನೀವು ನುಂಗಬೇಕು. ಆ ಸ್ವಾದಿಷ್ಟ ತಿಂಡಿಯನ್ನು ನುಂಗುವುದೂ ಒಂದು ಕಲೆ. ತುಸು ಹೆಚ್ಚುಕಡಿಮೆಯಾದರೂ ಉಸಿರುಗಟ್ಟಿ ಸಾಯುತ್ತಾರೆ. ಸಮರ್ಪಕವಾಗಿ ನುಂಗಿದರೆ ಆಕ್ಟೋಪಸ್ ಸಾಯುತ್ತದೆ ಆಗ ಅದು ಸಾನ್ ನಾಕ್ ಜಿ ಯಾಗಿ ನಿಮ್ಮಿಂದ ಸೂಪರ್ ವಾ ಎಂದು ಚಪ್ಪರಿಸುವಂತೆ ಮಾಡುತ್ತದೆ. ಸಮರ್ಪಕವಾಗಿ ನುಂಗಲಿಕ್ಕೆ ಆಗದಿದ್ದರೆ ತಿನ್ನ ಹೊರಟವರು ಉಸಿರುಗಟ್ಟಿ ಸಾಯುತ್ತಾರೆ. ಆಗ ನಿಮಗೆ "ನಾಕ್ ಜನ ಸಾಕ್ ಜಿ" ಎನ್ನುವಂತೆ ಆಗುತ್ತದೆ. ಪ್ರತೀ ವರ್ಷವೂ ಈ ಸ್ವಾದಿಷ್ಟ ಆಹಾರ ತಿನ್ನಲುಹೋಗಿ ಕನಿಷ್ಟ ಐದಾರು ಜನ ಕೊರಿಯಾ ದೇಶದಲ್ಲಿ ಸಾಯುತ್ತಾರಂತೆ. ಆದರೂ ಜನರಿಗೆ ಇದನ್ನು ತಿನ್ನುವ ಹುಚ್ಚುಬಿಟ್ಟಿಲ್ಲ. ಕಾರಣ ಅಷ್ಟೊಂದು ರುಚಿ ಇದೆ ಅದರಲ್ಲಿ.
ಕೃಪೆ: ಅಮೇಜಿಂಗ್ ನೆಟ್
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Friday, July 9, 2010

ಸೌತೇಪುರಾಣ


ಬೇಕಾಗುವ ಸಾಮಾಗ್ರಿ: ಹಿತ್ತಲಿಂದ ಆಗಷ್ಟೆ ಕೊಯ್ದ ಮುಳ್ಳು ಸೌತೇ ಕಾಯಿ- ಸೌತೇ ಕಾಯಿ ಜತೆಯಲ್ಲಿಯೇ ಕೊಯ್ದುಕೊಂಡು ಬಂದ ನಿಂಬೆಹಣ್ಣು ಹಾಗೂ ಸೂಜಿ ಮೆಣಸಿನಕಾಯಿ- ವಾಟೆ ಹುಡಿ-ಕೊಬ್ಬರಿ ಎಣ್ಣೆ-ರುಚಿಗೆ ತಕ್ಕಷ್ಟು ಉಪ್ಪು. ಸೌತೇಕಾಯಿ ಇನಸ್ಟಂಟ್ ಆಗಿ ಹೆಚ್ಚಿಕೊಡಲು ಅಮ್ಮ, ಭಾಗ ತಿನ್ನಲು ನಾಲ್ಕೈದು ಜನ.
ಅಯ್ಯೋ ಅದೇನೋ ದೊಡ್ಡ ಅಡಿಗೆ ಸಾಹಿತ್ಯದ ಪಟ್ಟಿಯ ತರ ಆಯ್ತು ವಿಷಯ ಹೇಳು ಅಂತ ನೀವು ಅಂದುಕೊಳ್ಳಬಹುದು. ಈಗ ಹೊರಟಿದ್ದೇ ಅಲ್ಲಿಗೆ. ಮಧ್ಯಾಹ್ನ ಹನ್ನೆರಡು ಘಂಟೆಯ ಹೊತ್ತಿಗೆ ನಮ್ಮ ಮಲೆನಾಡಿನ ಮನೆಗಳಲ್ಲಿ ಈ ಸೌತೇಕಾಯಿ ಉಪ್ಪುಕಾರದ ಕಾರ್ಯಕ್ರಮ ವಾರಕ್ಕೊಮ್ಮೆಯಾದರೂ ಇರುತ್ತದೆ.ಜುಲೈ ತಿಂಗಳ ನಂತರ ಹಿತ್ತಲ ಸೌತೇ ಬಳ್ಳಿಗಳು ಕಾಯಿಬಿಡಲಾರಂಬಿಸಿದ ತಕ್ಷಣ ಅದು ಸೈಜಿಗೆ ಬರಲು ಒಬ್ಬರಲ್ಲಾ ಒಬ್ಬರು ಕಾಯುತ್ತಿರುತ್ತಾರೆ. ಅಯ್ಯೋ ಅದೇನು ಅಂತಹಾ ಮಜದ ವಿಷಯ ಅಂತ ನಿಮಗೆ ಅನ್ನಿಸಬಹುದು. ಇರುವುದು ಅಲ್ಲಿಯೇ. ಪರಿಮಳಯುಕ್ತ ಮನೆನಿಂಬೆಹಣ್ಣು ಎಳೆ ಸೌತ ಕಾಯಿ, ಸೂಜಿಮೆಣಸಿನ ಖಾರ, ವಾಟೆಪುಡಿಯ ಹುಳಿ ಬೆರತದ್ದಷ್ಟೇ ರುಚಿ ಅಲ್ಲಿಲ್ಲ. ಅದರ ಜತೆ ಗಾಸಿಪ್ಪು ಊರ ಸುದ್ಧಿ ಎಲ್ಲಾ ಖಾರದ ಬಾಯಿ ಸೆಳೆಯುತ್ತಾ ವಿಷಯವಾಗುತ್ತದೆ ಅಲ್ಲಿ. ಒಬ್ಬರು ಸೌತೇಕಾಯಿಯನ್ನು ಹೆಚ್ಚಿಕೊಡುವವರು ಸುತ್ತಲೂ ಮೂರ್ನಾಲ್ಕು ಜನ ಒಬ್ಬೊಬ್ಬರು ಒಂದೊಂದು ಸುದ್ಧಿ ಹೇಳುತ್ತಾ ಸೌತೇ ಕಾಯಿ ಹೆಚ್ಚಿದಂತೆ ಹೆಚ್ಚಿದಂತೆ ಖಾಲಿಯಾಗಿಬಿಡುತ್ತದೆ. (ಮತ್ತೆ ಈ ಫೋಟೋದಲ್ಲಿ ಅಷ್ಟೊಂದು ಪೀಸ್ ಇದೆ ಅಂತ ನೀವು..? ಕೇಳಬಹುದು. ಅದು ಫೋಟೋಕ್ಕಾಗಿಯೇ ಗಂಟುಬಿದ್ದು ಉಳಿಸಿಕೊಂಡದ್ದು) ಸೌತೇ ಕಾಯಿ ಮುಗಿದಂತೆ ನಂತರ ಸಿಪ್ಪೆಯತ್ತಲೂ ಕೆಲವು ಜನರ ವಾರೇನೋಟ ಬಿದ್ದು ಅದೂ ಖಾಲಿ. ಆನಂತರ ನಿಂಬೆಹಣ್ಣಿನ ಬಾಗದೊಳಕ್ಕೆ ಉಪ್ಪುಕಾರ, ಹಾಗೆ ಅದೂ ಖಾಲಿ.(ಇದು ಅಭ್ಯಾಸವಿದ್ದ ಓದುಗರಿಗೆ ಈಗಾಗಲೇ ಬಾಯಲ್ಲಿ ಜುಳುಜುಳು ನೀರು ಬಂದಾಯಿತು. ಸತ್ಯ ಅಂದರೆ ಬರೆಯುವಾಗ ನನಗೇ ಬರುತ್ತಿದೆ) ಆನಂತರದ್ದು ಬಟ್ಟಲಿನಲ್ಲಿ ಉಳಿಯುವ ಉಪ್ಪುಕಾರದ ನೀರು. ಅದು ಸೌತೇಕಾಯಿ ಭಾಗದಲ್ಲಿರುವ ನೀರಿನ ಜತೆ ಸೇರಿ ಒಳ್ಳೆ ರುಚಿ ಬಂದಿರುತ್ತದೆ. ಅದು ಖಾಲಿಯಾದನಂತರದ್ದೇ ರಾಮಾಯಣ. ಖಾರ ಹೆಚ್ಚಾಗಿ ಅರ್ದಕ್ಕರ್ದ ಜನ ಸೊಸ್ ಸೊಸ್ ಅಂತ ಬಾಯಿಯೊಳಕ್ಕೆ ಗಾಳಿ ಸೇದಲು ಆರಂಭಿಸುತ್ತಾರೆ. ಆವಾಗ ಚಿಟ್ಟೆ ತುದಿಯಲ್ಲಿ ಹೋಗಿ ಕುಕ್ಕುರಗಾಲಿನಲ್ಲಿ ಕುಳಿತು ಬಾಯಿತೆರೆದು ನೆಲದತ್ತ ಬಗ್ಗಿದರಾಯಿತು. ಬಾಯಿಂದ ಜುಳುಜುಳು ನೀರು ಬಸಿಯತೊಡಗುತ್ತದೆ. ಖಾರದ ತಾಕತ್ತಿಗೆ ಕಣ್ಣಿಂದಲೂ ನೀರು ಬರುತ್ತದೆ. ಒಂದೈದು ನಿಮಿಷ ಪ್ರಪಂಚದಲ್ಲಿ ನಾವಿರುವುದಿಲ್ಲ ನಮ್ಮೊಳಗೆ ಪ್ರಪಂಚ. ಬಾಯಿಂದ ನೀರೆಲ್ಲಾ ಸುರಿದು ಹೋದಮೇಲೆ ಸ್ವರ್ಗ. ಅದರ ಮಜ ಅನುಭವಿಸಿದವರಿಗೇ ಗೊತ್ತು. ಹೀಗಿದೆ ಸೌತೇಪುರಾಣ, ಅವಕಾಶ ಸಿಕ್ಕಾಗ ಅನುಭವಿಸಿ. ನಾನು ಹೇಳಿದ ಸತ್ಯದ ದರ್ಶನವಾಗುತ್ತದೆ.

Tuesday, July 6, 2010

ಕಂಗನ ಹಳ್ಳು.


ಸಹಜ ಕಾಡು ಎಂದರೆ ವೈವಿಧ್ಯಗಳ ಆಗರ. ಔಷಧಿಯ ಕಣಜ. ರಾಮಾಯಣದ ಹನುಮಂತ ಹೊತ್ತು ತಂದ ಸಂಜೀವಿನಿ ಬೆಟ್ಟದಂತೆ ಹಿಂದೆ ಮಲೆನಾಡಿನಲ್ಲಿ ನೂರಾರು ಗುಡ್ಡಗಳಿದ್ದವು. ಅವು ಕುರುಚಲು ಕಾಡಲ್ಲ ನಾನಾ ವಿಧದ ಜಾತಿಯ ಸಸ್ಯ ಸಂಪತ್ತು ಅಲ್ಲಿತ್ತು. ಇಂದು ಅಕೇಶಿಯಾ ಯುಪಟೋರಿಯಂ ಆ ಜಾಗಗಳನ್ನು ಆಕ್ರಮಿಸಿಕೊಂಡಿದೆ.ಈ ಆಕ್ರಮಣದಿಂದಾಗಿ ಅನೇಕ ಔಷಧೀಯ ಗಿಡಗಳು ಕಣ್ಮರೆಯಾಯಿತು. ಇರಲಿ ಅದು ಪ್ರಕೃತಿಯ ಆಸೆಯೂ ಆಗಿತ್ತೇನೋ. ಕಾರಣ ಈ ಕ್ಷಣದ ವರೆಗೆ ಏನು ನಡೆಯಿತೋ ಅದನ್ನು ಬದಲಾಯಿಸಲು ಆಗುವುದಿಲ್ಲ. ಅಂತಹ ಕಣ್ಮರೆಯ ವರ್ಗಕ್ಕೆ ಸೇರುವ ಅಪರೂಪದ ಬಳ್ಳಿ ಸಸ್ಯ ಗ್ರಾಮ್ಯ ಭಾಷೆಯಲ್ಲಿ ಕರೆಯುವ ಈ ಕಂಗನ ಹಳ್ಳು.
ಈ ಸಸ್ಯ ಮೊದಲನೆಯದಾಗಿ ಮಕ್ಕಳಿಗೆ ಬಹುಪ್ರಿಯ. ಮಳೆಗಾಲದ ದಿನಗಳಲ್ಲಿ ಹಿಂದೆ ಬಿದಿರಿನಿಂದ ಪೆಟ್ಟಲು ಎಂಬ ಆಟಿಕೆಯನ್ನು ತಯಾರಿಸುತ್ತಿದ್ದರು. ಅದು ಮಕ್ಕಳ ಎಕೆ ೪೭ . ಈ ಕಂಗನ ಹಳ್ಳು ಅದಕ್ಕೆ ಬಳಸುವ ಗುಂಡು. ಜುಮ್ಮ ಎಣ್ನೆಕಾಯಿ ಮುಂತಾದ ನಾನಾ ಅಸ್ತ್ರಗಳ ಜತೆಯಲ್ಲಿ ಕಂಗನಹಳ್ಳೂ ಪೆಟ್ಟಲುಗುಂಡಾಗಿ ಬಳಕೆಯಾಗುತ್ತಿತ್ತು. ಪೆಟ್ಟಲಿನ ಹೋಲಿನಲ್ಲಿ ಕಂಗನ ಹಳ್ಳ(ಕಾಯಿ) ಇಟ್ಟು ಹೊಡೆದರೆ ಸೋಂಂಂಯ್ ಟಬಕ್ ಎಂಬ ಸದ್ಧಿನ ಜತೆ ಪಟಾರನೆ ಹಸಿರುಬಣ್ಣದ ರಸವನ್ನು ಹೊಗೆಯ ರೂಪದಲ್ಲಿ ಉಗುಳುತ್ತಿತ್ತು. ಹಾಗಾಗಿ ಮಕ್ಕಳಪ್ರಿಯ ಕಾಯಿ ಕಂಗನ ಹಳ್ಳು.
ಈ ಸಸ್ಯದ ಕಾಯಿ ಯಥೇಚ್ಚ ಔಷಧೀಯ ಗುಣವನ್ನು ಹೊಂದಿದೆ. ನಂಜು ಹೆಚ್ಚಾದಲ್ಲಿ ಇದರ ಎಣ್ಣೆಯನ್ನು ಬಳಸುತ್ತಾರೆ. ಷುಗರ್ ಗೂ ಇದರ ರಸ ಸ್ವಲ್ಪಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ಹಳ್ಳಿ ವೈದ್ಯರ ಆಂಬೋಣ.
ಹೀಗೆಲ್ಲಾ ಇರುವ ಈ ಬಳ್ಳಿ ನಿಧಾನ ಅವಸಾನದತ್ತ ಸರಿಯುತ್ತಿದೆ. ಹೀಗೆ ಲೇಖನ ಬರೆಯುತ್ತಾ ಕುಂತರೆ ಅದು ಪರಿಹಾರವಲ್ಲ ಎಂಬ ವಾಸ್ತವ ಅರಿವಾಗಿ ನಾವು ಒಂದಿಷ್ಟು ಬಳ್ಳಿ ಕಾಪಾಡಿದ್ದೇವೆ. ಆದರೆ ನಮ್ಮ ಯತ್ನ ಹಲವು ಬಾರಿ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ. ಹತ್ತು ಬಳ್ಳಿಗಳಲ್ಲಿ ಮೂರು ಮಾತ್ರಾ ಉಳಿದು ಈ ವರ್ಷ ಯಥೇಚ್ಚ ಕಾಯಿಬಿಟ್ಟಿದೆ. ಮುಂದೆ ಅದರ ಬೀಜದ ಮೂಲಕ ಬಳ್ಳಿ ಪ್ರಸರಣವಾಗುತ್ತೋ ಕಾದುನೋಡಬೇಕು

Monday, July 5, 2010

ಎಲೆಯೊಂದಿದ್ದರೆ ಎಲ್ಲಾ ಅಕ್ಕಿಯೂ ಪರಿಮಳವೆ


ಪರಿಮಳ ಸಣ್ಣಕ್ಕಿ ಅಥವಾ ಬಾಸ್ಮತಿ ಅಕ್ಕಿಯ ಪರಿಮಳಕ್ಕೆ ಮಾರುಹೋಗದವರಿಲ್ಲ. ಸುವಾಸನೆಯುಕ್ತ ಅಕ್ಕಿಯಿಂದ ಪಲಾವ್, ಕೆಸರೀಬಾತ್ ಮೊದಲಾದ ಐಟಂ ಮಾಡಿದರೆ ಅದರ ರುಚಿ ಬಲ್ಲವರೇ ಬಲ್ಲರು. ಶಾಖಾಹಾರಿಗಳ ಕತೆ ಬದಿಗಿರಲಿ ಮಾಂಸಾಹಾರಿಗಳಿಗೂ ಈ ಅಕ್ಕಿಯ ಪರಿಮಳ ಅಚ್ಚುಮೆಚ್ಚು. ಅಷ್ಟು ಪ್ರಿಯವಾದ ಈ ಅಕ್ಕಿಯ ಬಗ್ಗೆ ಒಂದೇ ಒಂದು ಬೇಸರದ ಸಂಗತಿಯೆಂದರೆ ಬೆಲೆಯದ್ದು. ಜನಸಾಮಾನ್ಯರ ಕೈಗೆ ಎಟುಕದ ಬೆಲೆಯಲ್ಲಿ ಅಕ್ಕಿ ತೇಲುತ್ತಲಿರುತ್ತದೆ. ಹಾಗಾಗಿ ಹಿಡಿದು ಕುಕ್ಕರ್ ಗೆ ಹಾಕುವುದು ಸ್ವಲ್ಪದ ಕಷ್ಟದ ಕೆಲಸ. ಆದರೆ ಪರಿಮಳ ಬೇಕು ದುಬಾರಿ ಬೆಲೆ ಕೊಡಲಾಗುವುದಿಲ್ಲ ಎನ್ನುವ ಮಂದಿಗೆ ಪ್ರಕೃತಿ ಇಲ್ಲೊಂದು ಪರಿಹಾರ ಇಟ್ಟಿದೆ. ಅದೇ ಸಣ್ಣಕ್ಕಿಗಿಡ.
ಹೆಸರೇ ಹೇಳುವಂತೆ ಇದು ಸಣ್ಣಕ್ಕಿ ಗಿಡ. ಹಾಗೆಂದಾಕ್ಷಣ ಇದು ಸಣ್ಣಕ್ಕಿಯನ್ನೇನು ಬಿಡುವುದಿಲ್ಲ. ಅಥವಾ ಭತ್ತದ ಹೊಸ ತಳಿಯ ಆವಿಷ್ಕಾರ ಅಂತ ಅಂದುಕೊಳ್ಳದಿರಿ. ಈ ಗಿಡದ ಎಲೆಗೆ ಪರಿಮಳ ಸಣ್ಣಕ್ಕಿಯ ಸುವಾಸನೆ ಇದೆ. ಈ ಗಿಡದ ನಾಲ್ಕೈದು ಎಲೆಗಳನ್ನು ಯಾವುದೇ ಅಕ್ಕಿಯಲ್ಲಿ ಹುಗಿದಿಟ್ಟರಾಯಿತು. ಎಲೆ ಹುಗಿದಿಟ್ಟ ಎರಡನೇ ದಿವಸ ಅಕ್ಕಿಯಿಂದ ಅಡಿಗೆ ಮಾಡಿದರೆ ಘಮಘಮ ಪರಿಮಳವನ್ನು ಸೂಸುತ್ತದೆ. ಆ ಪರಿಮಳ ಪಕ್ಕಾ ಪಕ್ಕಾ ಪರಿಮಳ ಸಣ್ಣಕ್ಕಿಯದೇ. ಸರಿ ಇನ್ನೇಕೆ ತಡ ಪರಿಮಳ ಸಣ್ಣಕ್ಕಿಯ ದರ ಎಷ್ಟೇ ಇರಲಿ ನಮಗೆ ನಿಮಗೆ ಅದರ ಚಿಂತೆ ಬೇಡ ಈ ಸಣ್ಣಕ್ಕಿಗಿಡದ ಎಲೆಯೊಂದಿದ್ದರೆ ಎಲ್ಲಾ ಅಕ್ಕಿಯೂ ಪರಿಮಳವೆ. ಮಲೆನಾಡಿನ ಮನೆಗಳ ಹಿತ್ತಲಿನಲ್ಲಿ ಈ ಗಿಡ ನೆಟ್ಟು ಕಾಪಾಡಿರುತ್ತಾರೆ. ಗುಂಪುಗುಂಪಾಗಿ ಕೇದಿಗೆಯ ಪೊದೆಯಂತೆ ಬೆಳೆಯುವ ಇದರ ಒಂದು ಗೆಲ್ಲು ನಿಮ್ಮ ಹಿತ್ತಲಿಗೂ ಬರಲಿ. ಅಕ್ಕಿಯ ಕಣಜ ಪರಿಮಳಯುಕ್ತವಾಗಲಿ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

ಲೇ....ನೋಡೆ ಜೋಗ...."


ಜೋಗ ಜಲಪಾತ ಹಿಂದೆ ಜಗದ್ವಿಖ್ಯಾತ.!. ಇರಲಿ ಪ್ರತೀ ವರ್ಷದಂತೆ ಮಳೆಯಾಗಿದ್ದರೆ ಇವತ್ತಿನ ಸಮಯದಲ್ಲಿ ನಾನು ತೆಗೆದ ಜೋಗೋ ಫೋಟೋ ಹೀಗಿರುತ್ತಿರಲಿಲ್ಲ. ನೊರೆ ನೊರೆ ನೀರು ಉಕ್ಕಿ ಪ್ರಪಾತ ಸೇರುತ್ತಿತ್ತು. ಆದರೆ ಅದೇಕೋ ವರುಣ ಸ್ವಲ್ಪ ಮಟ್ಟಿಗೆ ಮುನಿದಿದ್ದಾನೆ ಅಂತ ಹೇಳಬಹುದು. ಜೂನ್ ತಿಂಗಳ ಅಬ್ಬರದ ಮಳೆ ಬೀಳಲೇ ಇಲ್ಲ. ಹಾಗಂತ ಮಳೆ ಬಂದೇ ಇಲ್ಲವೇನೋ ಅನ್ನುವಂತಿಇಲ್ಲ. ಈಗ ಮೂರುವರ್ಷದ ಹಿಂದೆ ಅಂದರೆ ೨೦೦೭ ನೇ ಇಸವಿಯಂತೀ ಬರಲಿಲ್ಲ. ಇನ್ನು ಮೂರು ತಿಂಗಳು ಬಾಕಿ ಇದೆ ಮಳೆಗೆ. ಅಷ್ಟರೊಳಗೆ ಲಿಂಗನಮಕ್ಕಿ ಆಣೆಕಟ್ಟು ತುಂಬಬೇಕು ಅಲ್ಲಿನ ಗೇಟು ತೆಗೆಯಬೇಕು ಶರಾವತಿ ಖುಷ್ ಖುಷಿಯಾಗಿ ಜುಳು ಜುಳು ಕೆಂಪಗೆ ಹರಿಯುತ್ತಾ ನಂತರ ಬಿಳಿ ಬಣ್ಣ ಪಡೆದು ಧುಮ್ಮಿಕ್ಕಬೇಕು. ಆವಾಗ ನೀವು ಅಲ್ಲಿಗೆ ಬಂದು "ವಾವ್ ಎಂತ ಅಂದ ಎಂಥ ಚಂದ......ಅಂತ ಅನ್ನಬೇಕು. ಈಗ ಪೇಪರ್ ನಲ್ಲಿ ಟಿವಿ ಯಲ್ಲಿ ಮಲೆನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆ ಎಂಬ ಸುದ್ಧಿ ಕೇಳಿ ಜೋಗಕ್ಕೆ ಹೋಗಿ ಬಂದುಬಿಡೋಣ ಅಂತ ಬಂದು " ಥೋ ಇಷ್ಟೇ ನೀರು" ಅಂತ ಗೋಣಗಿಕೊಂಡು ಹೋಗುವಂತಾಗಬಾರದಲ್ಲ. ಇಷ್ಟು ನೀರಾದರೆ ನಿಮ್ಮ ಮನೆಯಲ್ಲಿ ಕುಳಿತು "ಲೇ....ನೋಡೆ ಜೋಗ...." ಅಂತ ಬಿಸಿಬಿಸಿ ಬೋಂಡ ತಿನ್ನುತ್ತಾ ನೋಡಬಹುದು ಸಂಪದದ ಸಹಾಯದಿಂದ, ಎಂದು ಇವತ್ತು ಮಧ್ಯಾಹ್ನ ಎದ್ದೂ ಬಿದ್ದು ಜೋಗಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿ ತಂದು ಹಾಕಿದ್ದೇನೆ. ನೀರು ಜೋರಾದಾಗ ಹೇಳುತ್ತೇನೆ ಆವಾಗ ಖುದ್ದಾಗಿ ಬರುವಿರಂತೆ ಅಷ್ಟರತನಕ ಇಷ್ಟು ಸಾಕು.. ಹ್ಯಾಪಿ ಸಂಡೆ....