Saturday, October 30, 2010

ಹೊನ್ನೇಮರಡಿನ ಹೊಂಗನಸು


"ನೋಡಮ್ಮಾ ನೀನು ಇನ್ನೂರು ಮೀಟರ್ ದೂರದಿಂದ ದಡಕ್ಕೆ ಈಜುತ್ತಾ ಬರುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಆದರೆ ನನಗೆ ಅಚ್ಚರಿ ಅನಿಸಿದ್ದು ನಿನಗೆ ದಡದತ್ತಲೇ ಈಜುತ್ತಿದ್ದೇನೆ ಅಂತ ಕಾಣಿಸಿದ್ದು ಹೇಗೆ?". ಅಂಧಮಕ್ಕಳು ಹಾಗೂ ವಿಕಲಾಂಗಚೇತನರಿಗೆ ಮೀಸಲಾಗಿಟ್ಟಿದ್ದ ಪರಿಸರ ಶಿಕ್ಷಣ ಸಮಾರೋಪ ಸಮಾರಂಭದ ಅಧ್ಯಕ್ಷರು ಶಿಭಿರಾರ್ಥಿಗಳಲ್ಲಿ ಶಿಬಿರದ ಕುರಿತು ಅನುಭವ ಹೇಳಿದ ಅಂಧ ಯುವತಿಯ ಬಳಿ ಪ್ರಶ್ನಿಸಿದರು.
ಒಮ್ಮೆ ಮುಖವನ್ನು ಮೇಲಕ್ಕೆ ತಿರುಗಿಸಿ ನಂತರ " ಸಾರ್ ನನಗೆ ಕಣ್ಣಿಲ್ಲದಿದ್ದರೂ ಅದರ ಶಕ್ತಿಯನ್ನು ಕಿವಿಗೆ ಕೊಟ್ಟಿದ್ದಾನೆ, ನೊಮಿತೋ ಮೇಡಂ ನಂತಹ ಜನರ ಮೂಲಕ ಧೈರ್ಯ ತುಂಬಿದ್ದಾನೆ " ಎಂದು ಉತ್ತರಿಸಿದಾಗ ಕಾರ್ಯಕ್ರಮದ ಅಧ್ಯಕ್ಷರೂ ಸೇರಿದಂತೆ ಸೇರಿದ್ದ ಎಲ್ಲಾ ಜನರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು. ಏನಿದು ಕಾರ್ಯಕ್ರಮ. ನಡೆಯುವುದೆಲ್ಲಿ? ಭಾಗವಹಿಸುವುದು ಹೇಗೆ? ಎಂಬಂತಹ ಪ್ರಶ್ನೆಗಳಿಗೆ ಉತ್ತರ ಹೀಗಿದೆ.

ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಹೆಸರು ಕೇಳದವರು ವಿರಳ. ಆ ಜಲಪಾತಕ್ಕೆ ಭೇಟಿನೀಡುವ ಬಹಳ ಮಂದಿ ಅಲ್ಲಿಂದ ಕೇವಲ ೧೪ ಕಿಲೋಮೀಟರ್ ದೂರದಲ್ಲಿ ಶರಾವತಿ ನದಿಯ ಹಿನ್ನೀರಿನ ಪ್ರದೇಶವಾದ ಹೊನ್ನೇಮರಡುವಿಗೆ ಭೇಟಿ ನೀಡಿ ಒಂದು ಸುತ್ತು ಬೋಟಿಂಗ್ ವಿಹಾರ ಮಾಡಿ ಬರುತ್ತಾರೆ. ಹಸಿರು ಪರಿಸರದ ಪ್ರಶಾಂತವಾದ ಹಿನ್ನೀರಿನ ಶರಾವತಿ ನದಿ ಪರಿಸರಪ್ರಿಯರ ಮನತಣಿದುತ್ತದೆ. ಆಹ್ಲಾದಕರ ವಾತಾವರಣ ಮುದ ನೀಡುತ್ತದೆ. ಭಾನುವಾರಗಳನ್ನು ಬಹಳ ಜನರು ಇಲ್ಲಿ ಕಳೆಯಲು ಇಷ್ಟಪಡುತ್ತಾರೆ. ಹೀಗೆ ಪ್ರವಾಸಿಗಳ ಆಕರ್ಷಣೀಯ ಕೇಂದ್ರವಾದ ಹೊನ್ನೆಮರಡುವಿನ ಉಸ್ತುವಾರಿ ಹೊತ್ತ ಎಸ್.ಎಲ್.ಎನ್ ಸ್ವಾಮಿ ಹಾಗೂ ನೊಮೀತೋ ದಂಪತಿಗಳ ಕನಸಿನ ಕೂಸಾದ ಹೊನ್ನೆಮರಡು ಸಾರ್ವಜನಿಕರಿಗೆ ತೆರೆದುಕೊಳ್ಳುತ್ತದೆ. ಆದರೆ ಇದೇ ಹೊನ್ನೇಮರಡುವಿನ ’ದಿ ಅಡ್ವೆಂಚರರ್ಸ್" ಸಂಸ್ಥೆಯ ಶಿಕ್ಷಣದ ಮುಖ ಬಹಳ ಪ್ರವಾಸಿಗರಿಗೆ ತಿಳಿಯುವುದೇ ಇಲ್ಲ. ಅಲ್ಲಿ ನಡೆಯುವ ಪರಿಸರ ಶಿಕ್ಷಣ ತರಬೇತಿಗಳು ಎಲೆಮರೆಯ ಕಾಯಿಯಂತೆ ವರ್ಷಪೂರ್ತಿ ನಡೆಯುತ್ತಲೇ ಇರುತ್ತವೆ. ತಿಂಗಳೊಗೊಮ್ಮೆ ನಡೆಯುವ ತರಬೇತಿ ವರ್ಷಕ್ಕೊಮ್ಮೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕಯಾಕಿಂಗ್, ಸ್ವಿಮ್ಮಿಂಗ್ ಟ್ರೈನಿಂಗ್, ರ್ರಾಫ್ಟಿಂಗ್, ಹಂಪಿ ವಿಶ್ವವಿದ್ಯಾಲ್ಯದ ಕಾರ್ಯಕ್ರಮಗಳು,ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಪರಿಸರ ಪ್ರಜ್ನಾ ಶಿಬಿg, ಪೋಲೀಸ್ ತರಬೇತಿ ಶಿಬಿರ ಹೀಗೆ ನಾನಾ ತರಹದ ಕಾರ್ಯಕ್ರಮಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಬೆಂಗಳೂರಿನ ಎಸ್. ಎಲ್. ಎನ್ ಸ್ವಾಮಿ ಹಾಗೂ ನೊಮಿತೋ ದಂಪತಿಗಳೂ ಈ ಹೊನ್ನೇ ಮರಡುವಿನಲ್ಲಿ ನಡೆಯುವ ಕಾರ್ಯಕ್ರಮಗಳ ರೂವಾರಿಗಳು. ಇವರ ಹಿಂದೆ ದಿ ಅಡ್ವೇಂಚರರ್ಸ್ ಹಾಗೂ ಬೆಂಗಳೂರಿನ ಹಲವು ಸ್ವಯಂ ಸೇವಾ ಸಂಘಟನೆಗಳು ಹೆಗಲುಕೊಟ್ಟು ನಿಂತಿದೆ. ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿರುವ "ಡ್ರೀಂ ಎ ಡ್ರೀಮ್" ಎಂಬ ಸ್ವಯಂ ಸೇವಾ ಸಂಸ್ಥೆ ತನ್ನ ಆಶ್ರಯಕ್ಕೆ ಬರುವ ಮಕ್ಕಳಿಗೆ ವರ್ಷದಲ್ಲಿ ನಾಲ್ಕೈದು ಬಾರಿ ನಾಲ್ಕು ದಿನಗಳ ಕ್ಯಾಂಪ್ ಹೊನ್ನೇ ಮರಡುವಿನಲ್ಲಿಯೇ ನಡೆಸುತ್ತದೆ. ಪಟ್ಟಣದ ಮಕ್ಕಳಿಗೆ ಹಳ್ಳಿಯ ಬದುಕಿನ ನಿಸರ್ಗದ ಪರಿಚಯ ಈಜು ಮುಂತಾದವುಗಳನ್ನು ವ್ಯವಸ್ಥಿತವಾಗಿ ಪರಿಚಯಿಸುತ್ತಾರೆ ಇಲ್ಲೆ. ಅದೇ ರೀತಿ ಬೆಂಗಳೂರಿನ ಲಿಂಗರಾಜಪುರಂನ "ಅಸೋಷಿಯೇಷನ್ ಫಾರ್ ಫಿಸಿಕಲಿ ಡಿಸೇಬಲ್ಡ್" ಎಂಬ ಸಂಸ್ಥೆಯ ಸಹಯೋಗದೊಂದಿಗೆ ಹೊನ್ನೇ ಮರಡುವಿನ ದಿ ಅಡ್ವೇಂಚರರ್ಸ್ ವಿಕಲಾಂಗ ಚೇತನರಿಗೆ ಚೈತನ್ಯ ತುಂಬುವ ವಾರದ ಶಿಬಿರ ಏರ್ಪಡಿಸುತ್ತಾರೆ. ಕುರುಡು ಮಕ್ಕಳು ನಡೆಯಲಾಗದೆ ತೆವಳುವ ಮಕ್ಕಳಲ್ಲಿ ಹೊನ್ನೆಮರಡುವಿಗೆ ಬರುವಾಗ ಇರುವ ಭಯ ಹೋಗುವಾಗ ಧೈರ್ಯವಾಗಿ ಮಾರ್ಪಾಡಾಗಿರುತ್ತದೆ. ನೀರಿನಲ್ಲಿ ಅವರು ಸಮರ್ಪಕವಾಗಿ ಈಜುವುದನ್ನು ಕಲಿತಮೇಲೆ ಅವರ ಕಣ್ಣಂಚಿನ ಹೊಳಪು ನಮಗೆ ನೀಡುವ ಸಮಾಧಾನ ತರುತ್ತದೆ ಹಾಗೂ ಅದಕ್ಕೆ ಬೆಲೆಕಟ್ಟಲಾಗದು ಎನ್ನುತ್ತಾರೆ ನೊಮಿತೋ. ಕುಕ್ ಟೌನ್ ನ "ಮಾಯಾ ವಿಷನ್" ,ಮಹಾಲಕ್ಷ್ಮಿ ಲೇ ಔಟ್ ನ ಸಮಾ ಫೌಂಡೇಷನ್ ಕೂಡ ದಿ ಅಡ್ವೇಂಚರರ್ಸ್ ನ ಸಹಯೋಗದಲ್ಲಿ ತಮ್ಮ ಸಂಪರ್ಕಕ್ಕೆ ಬರುವ ಜನರಿಗೆ ಕಾರ್ಯಕ್ರಮಗಳನ್ನು ಹೊನ್ನೇಮರಡುವಿನಲ್ಲಿ ನೀಡುತ್ತದೆ.
ಪರಿಸರ ತಿಳುವಳಿಕೆ ಕಾರ್ಯಕ್ರಮಗಳಲ್ಲಿ ಜೇನಿನ ಬಗ್ಗೆ ಮಾಹಿತಿ, ಸ್ಥಳೀಯ ಔಷಧಿ ಸಸ್ಯಗಳ ಮಾಹಿತಿ ಮುಂತಾದವುಗಳಿಗೆ ಸ್ಥಳೀಯರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಸ್ಥಳೀಯರಿಗೆ ಉಪ ಆದಾಯವೂ ಬಂದಂತಾಗಿದೆ. ಮೂಗಿಮನೆ ಲಂಬೋಧರ ಎಂಬ ಸ್ಥಳೀಯ ಯುವಕ ಸ್ವಿಂಗ್ ಕ್ಯಾಂಪ್ ಗಳನ್ನು ನಿರ್ವಹಿಸುತ್ತಾರೆ. "ದಿ ಅಡ್ವೇಂಚರರ್ಸ್" ಸಂಸ್ಥೆಯಿಂದಾಗಿ ಉದ್ಯೋಗವೇ ನಮ್ಮನ್ನು ಅರಸಿಕೊಂಡು ಬಂದಿದೆ ನಾವು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವ ಪ್ರಶ್ನೆ ಉದ್ಬವವಾಗಿಲ್ಲ, ಇದರಿಂದಾಗಿ ಹಳ್ಳಿ ತೊರೆಯುವ ಪ್ರಮೇಯವೇ ತಪ್ಪಿದಂತಾಗಿದೆ ಎಂದು ಸಂತೋಷದಿಂದ ಹೇಳುತ್ತಾರೆ. ಇದೇ ರೀತಿ ಮಂಜ, ಬಾಬು ಮುಂತಾದವರೂ ಕೂಡ ತಮ್ಮ ಬಿಡುವಿನ ವೇಳೆಯನ್ನು ಇಲ್ಲಿ ತೊಡಗಿಸಿಕೊಳ್ಳುತ್ತಾರೆ. ಹತ್ತು ವರ್ಷಗಳ ಹಿಂದೆ ಕೆಲವು ಭಾಹ್ಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಸ್ಥಳೀಯರು ಸ್ವಲ್ಪ ಪ್ರಮಾಣದ ಪ್ರತಿಭಟನೆ ತೋರಿದ್ದರೂ ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಂಸ್ಥೆಗೆ ಸಂಪೂರ್ಣ ಬೆನ್ನೆಲುಬಾಗಿ ಸ್ಥಳೀಯರೇ ನಿಂತಿದ್ದಾರೆ ಎಂಬುದು ಸಂಸ್ಥಾಪಕರಾದ ಎಸ್.ಎಲ್.ಎನ್ ಸ್ವಾಮಿಯವರ ಹೇಳಿಕೆ. ಪ್ರತೀ ವರ್ಷ ೨೦ ರಿಂದ ೨೫ ಮಕ್ಕಳು ನಮ್ಮಲ್ಲಿ ನೀರಿನ ಎಲ್ಲಾ ವಿದ್ಯೆಗಳನ್ನು ಕಲಿತು ಸ್ವಯಂ ಉದ್ಯೋಗ ನಡೆಸುವ ಸಾಮರ್ಥ್ಯವುಳ್ಳವರಾಗಿ ಹೊರಹೋಗುತ್ತಿದ್ದಾರೆ ಎನ್ನುವುದು "ಅಶೋಕಾ ಫೆಲೋಷಿಪ್" ಪಡೆದ ಸ್ವಾಮಿಯವರ ಆತ್ಮಸ್ಥೈರ್ಯದ ಮಾತು. ಇಲ್ಲಿ ನಡೆಯುವ ಎಲ್ಲಾ ತರಹದ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಪಾಲ್ಗೊಳ್ಳಬಹುದು. ಬೆಂಗಳೂರಿನ ಮೇಲ್ಕಂಡ ಸಂಸ್ಥೆಗಳ ಮೂಲಕವಾದರೂ ಸರಿ ಅಥವಾ ದಿ ಅಡ್ವೇಂಚರರ್ಸ್ ಮೂಲಕವಾದರೂ ಸರಿ ಎನ್ನುತ್ತಾರೆ ಸ್ವಾಮಿ.
ಕರ್ನಾಟಕದ ಮೂಲೆಯ ಕುಗ್ರಾಮವನ್ನು ಪರಿಸರ ಶಿಕ್ಷಣಕ್ಕಾಗಿ ಬಳಸಿಕೊಂಡು ತನ್ಮೂಲಕ ತಾವೂ ಬೆಳೆದು ಸಂಸ್ಥೆಯನ್ನು ಬೆಳೆಸಿ ನಿರ್ಗತಿಕರಿಗೆ ಅಂಗವಿಕಲರಿಗೆ ಅಸಾಹಾಯಕರಿಗೆ ಪ್ರತ್ಯಕ್ಷ ಪರೋಕ್ಷ ಚೈತನ್ಯ ತುಂಬುತ್ತಿರುವ ಸ್ವಾಮಿ ದಂಪತಿಗಳ ಹೊನ್ನೇಮರಡುವಿನಲ್ಲಿ ನಡೆಸುವ ಕಾರ್ಯಕ್ರಮಗಳು ಶ್ಲಾಘನೀಯವೇ ಎಂಬುದರಲ್ಲಿ ಎರಡು ಮಾತಿಲ್ಲ.
ಸಂಪರ್ಕ
ದಿ ಅಡ್ವೆಂಚರರ್ಸ್
ಹೊನ್ನೇಮರಡು
ಅಂಚೆ: ಹಿರೇಮನೆ
ಸಾಗರ -ಶಿವಮೊಗ್ಗ ೫೭೭೪೩೦
9448485508-08183-207740

(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)

Monday, October 25, 2010

ತ್ಯಾರಣ ಮನೆ ಬಾಗಿಲ ತೋರಣ


ಮನೆಯೆಂದಮೇಲೆ ಹೂದೋಟವೊಂದು ಇಲ್ಲದಿದ್ದರೆ ಅದು ಅಪೂರ್ಣ. ಚಿಕ್ಕದಾದರೂ ಚೊಕ್ಕವಾಗಿರುವ ಬಣ್ಣ ಬಣ್ಣದ ಹೂವರಳಿಸುವ ಗಿಡಗಳ ಸಾಲು ಮನೆಗೆ ಬರುವ ಅತಿಥಿಗಳ ಸ್ವಾಗತಿಸುವಂತಿದ್ದರೆ ಅದರ ಅಂದ ವರ್ಣಿಸಲಸದಳ. ಅಂತಹ ಹೂದೋಟಕ್ಕೆ ಅಂದ ನೀಡಲು ಗುಲಾಬಿ ದಾಸವಾಳ ಮಲ್ಲಿಗೆ ಜಾಜಿ ಮುಂತಾದ ಬಹುವಾರ್ಷಿಕ ಹೂವಿನಗಿಡಗಳು ಇವೆ. ಆದರೆ ಅವು ಸರ್ವಋತುವಿನಲ್ಲಿಯೂ ಹೂವು ಅರಳಿಸುವುದಿಲ್ಲ. ಹಾಗಾಗಿ ನಿರಂತರವಾಗಿ ಹೂದೋಟ ಚೈತನ್ಯ ತುಂಬಿರಬೇಕೆಂದರೆ ವಿವಿಧಬಗೆಯ ಹೂವಿನಗಿಡಗಳ ಅವಶ್ಯಕತೆಯಿದೆ. ಬಗೆ ಬೇರೆಯದಾದ್ರೂ ಮಳೆಗಾಲದ ಅಂತ್ಯದಲ್ಲಿ ಹೂವು ಬಿಡುವ ಗಿಡಗಳ ಸಂಖ್ಯೆ ಅಪರೂಪ. ಆ ಅಪರೂಪವನ್ನು ಹುಡುಕಿ ತೋಟವನ್ನು ಚಂದಗೊಳಿಸುವುದು ಹೂದೋಟಾಸಕ್ತರ ಮುಖ್ಯ ಕಸುಬು. ಅಂತಹ ಮಳೆಗಾಲದಲ್ಲಿ ಹೂ ಅರಳಿಸುವ ಬಗೆಗಳಲ್ಲಿ ಈ ತ್ಯಾರಣವೂ ಒಂದು.
ಮಲೆನಾಡಿನ ಕೃಷಿಕರಮನೆಯ ಎದುರು ವಿಶಾಲ ಅಂಗಳ ಸಾಮಾನ್ಯ. ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ಅದು ಬಳಕೆಯಾದರೆ ಮಳೆಗಾಲದಲ್ಲಿ ಹೂದೋಟವಾಗಿ ಮಾರ್ಪಾಡಾಗಿಬಿಡುತ್ತದೆ. ಆ ಮಾರ್ಪಾಡಿಗೆ ಈ ತ್ಯಾರಣದ ಗಿಡಗಳು ಮುಖ್ಯ ಕಾರಣ. ಸಾಸಿವೆ ಕಾಳಿನಂತಹ ತ್ಯಾರಣದ ಬೀಜವನ್ನು ಮಹಿಳೆಯರು ಜತನವಾಗಿ ಕಾಪಿಟ್ಟು ಮಳೆಗಾಲದಲ್ಲಿ ಬೇಕಾದ ರೀತಿಯ ಆಕಾರದಲ್ಲಿ ಬಿತ್ತುತ್ತಾರೆ. ಬೀಜ ಬಿತ್ತಿ ತಿಂಗಳೊಳಗೆ ಹಸಿರುಬಣ್ಣದ ಮೃದೂ ದಂಟಿನ ಗಿಡಗಳು ಪುತುಪುತು ಎಳುತ್ತವೆ. ಸಪ್ಟೆಂಬರ್ ನಲ್ಲಿ ಇನ್ನೇನು ಮಳೆಗಾಲ ಮುಗಿಯಿತು ಎಂದಾಗ ಕೆಂಪು,ನೀಲಿ, ಕೇಸರಿ ಬಣ್ಣದ ಎರಡು ಪೊಕಳೆ, ಒಂಟಿ ಪೊಕಳೆ ಯ ಹೆಸರನ್ನಿಟ್ಟುಕೊಂಡು ಹೂವು ಅರಳಲಾರಂಬಿಸುತ್ತವೆ. ಒಟ್ಟಿಗೆ ಹೂವು ಬಿಟ್ಟು ಸರಿಸುಮಾರು ಒಂದು ತಿಂಗಳುಗಳಕಾಲ ನಿರಂತ ಕಣ್ಣಿಗೆ ಹಬ್ಬ ನೀಡುವ ತ್ಯಾರಣ ಮತ್ತೆ ಬೀಜವಾಗಿ ಮಹಿಳೆಯರ ಮಜ್ಜಿಗೆಗೂಡಿನಲ್ಲಿ ಕಾಪಾಡಲ್ಪಡುತ್ತದೆ ಮತ್ತೆ ಮುಂದಿನವರ್ಷ ಅಂಗಳಕ್ಕೆ ರಂಗೇರಿಸಲು. ಹೀಗೆ ಅಂಗಳವನ್ನೇ ಹೂದೋಟಗಿಸುವ ತ್ಯಾರಣ ಮಲೆನಾಡಿನ ಮಳೆಗಾಲದ ಹೂವು ಪೂರೈಕೆ ಗಣಿ. ಸರಿ ಸುಮಾರು ಎಲ್ಲಾ ಮನೆಗಳಲ್ಲಿಯೂ ಕಾಣುವ ಇದು ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಆಕಾರ ಆಕೃತಿಗಳಲ್ಲಿ ಮನತಣಿಸುತ್ತಿದೆ.
(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)