Saturday, October 23, 2010

ಬಾಲ್ಯಕ್ಕೆ ಬೇಕು ಅಜ್ಜನ ಮನೆಬಾಲ್ಯ ಎಂಬ ಎರಡಕ್ಷರದ ಶಬ್ದ ಬಹು ಸುಂದರ. ಬಡತನವಿರಲಿ ಶ್ರೀಮಂತಿಕೆಯಿರಲಿ ಆವಾಗ ಅದು ಬಾಧಿಸದ ವಯಸ್ಸು. ಆಟ ಊಟ ಓಟ ಎಲ್ಲವೂ ಅವರವರ ಮಟ್ಟಕ್ಕೆ ಚೆನ್ನ. ಎಲ್ಲರ ಜೀವನದಲ್ಲಿಯೂ ಬಾಲ್ಯದ ಜೀವನ ಬಹುಮುಖ್ಯವಾದ ಘಟ್ಟ. ವಿಪರ್ಯಾಸವೆಂದರೆ ಬಹು ಜನರಿಗೆ ಅದು ತಿಳಿಯುವುದು ಅವರು ಬೆಳೆದು ದೊಡ್ಡವರಾದಮೇಲೆಯೇ. ಅದೃಷ್ಟವಂತ ಮಕ್ಕಳಿಗೆ ಬಾಲ್ಯವನ್ನು ಸುಂದರವನ್ನಾಗಿಸುವ ಪಾಲಕರು ಸಿಕ್ಕುತ್ತಾರೆ. ಆವಾಗ ಅದು ಅವರ ನಡೆ ನುಡಿ ಸ್ವಭಾವದಮೇಲೆ ಜೀವನಪೂರ್ತಿ ಉತ್ತಮ ಪರಿಣಾಮಬೀರುತ್ತದೆ. ಬಾಲ್ಯ ಅಸಹನೆಯಿಂದ, ಸಮಾಜದ ತಿರಸ್ಕಾರದ ನೋಟದಿಂದ ಕೂಡಿದ್ದರೆ ಅದು ವ್ಯಕ್ತಿಯ ಜೀವನದಮೇಲೆ ಹೇರಳ ದುಶ್ಪರಿಣಾಮವನ್ನೂ ಬೀರುತ್ತದೆ. ಹಾಗಾಗಿ ಬಾಲ್ಯವನ್ನು ವಿಕಸಿಸಲು ಬಿಡಬೇಕು. ಭಯದಿಂದ, ಗದರುವಿಕೆಯಿಂದ ಮಕ್ಕಳ ವಿಕಸನಕ್ಕೆ ಬಹಳ ಧಕ್ಕೆಯಾಗುತ್ತದೆ ಎಂಬುದು ಹಿರಿಯರು ತಿಳುವಳಿಕೆಹೊಂದಿದಷ್ಟೂ ಸಮಾಜಕ್ಕೆ ಉತ್ತಮ ಪ್ರಜೆಗಳ ಕೊಡುಗೆ ಸಾದ್ಯವಾಗಬಲ್ಲದು.
ಸುತ್ತಲೂ ಹಸಿರು ಮರಗಿಡಗಳು, ನಡುವೆ ಜುಳುಜುಳು ಹರಿವ ನದಿ, ತಂಪಾಗಿ ಹಾರಾಡುವ ಬಣ್ಣ ಬಣ್ಣದ ಚಿಟ್ಟೆಗಳು, ನದಿಯ ಪಕ್ಕದಲ್ಲೊಂದು ಅಜ್ಜನ ಮನೆ,ಕಂಡ ಕುತೂಹಲಕ್ಕೆ ತಾಳ್ಮೆಯಿಂದ ಉತ್ತರ ನೀಡಿ ತಣಿಸುವ ಮಾವಂದಿರು, ರಾಕ್ಷಸನ ಸೋಲಿನ, ಭೀಮನ ಶಕ್ತಿಯ, ಅರ್ಜುನನ ಗುರಿಯ, ಜಟಾಯುವಿನ ಹೋರಾಟದ ಕತೆ ಹೇಳುವ ಅಜ್ಜ, ರುಚಿ ರುಚಿ ಕುರುಕಲು ಕೊಡುವ ಅಜ್ಜಿ, ಗರಿ ಗರಿ ಬಟ್ಟೆ ತೊಳೆದು ನೀಡುವ ಅತ್ತೆ, ಇವಿಷ್ಟೂ ಅಥವಾ ಇನ್ನಷ್ಟು ನಿಮ್ಮ ಬಾಲ್ಯದಲ್ಲಿ ಸಿಕ್ಕರೆ ಅದರ ಸವಿ ನೆನಪು ಬೇಕಾದಾಗ ನಿಮ್ಮನ್ನು ಆಕಾಶದಲ್ಲಿ ತೇಲಾಡುತ್ತದೆ. ಆದರೆ ಅದು ಎಲ್ಲರಿಗೂ ಇದೇ ರೀತಿಯಲ್ಲಿ ಸಿಗುವುದಿಲ್ಲ. ಹಾಗಂತ ಎಲ್ಲವೂ ಹೀಗೆಯೇ ಇರಬೇಕೆಂಬ ಕಾನೂನು ಅಲ್ಲಿಲ್ಲ. ಹಿರಿಯರು ಮನಸ್ಸು ಮಾಡಿ ಇದ್ದುದ್ದರಲ್ಲಿಯೇ ಗದರದೇ ಸಾವಧಾನದಿಂದ, ತಾಳ್ಮೆಯಿಂದ ವ್ಯವಹರಿಸಿ ಸುಖವನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಅವರ ಚೇತನಕ್ಕೆ ಚೈತನ್ಯ ತುಂಬಬಹುದು. ಮನೆಯ ಅಡಿಪಾಯ ಗಟ್ಟಿಯಿದ್ದರೆ ಮೇಲ್ಮನೆಯ ಭದ್ರತೆ ಹೆಚ್ಚುವಂತೆ, ಬಾಲ್ಯದ ಅಡಿಪಾಯವನ್ನು ಭದ್ರಗೊಳಿಸಿ ಜೀವನವನ್ನು ಸುಭದ್ರಗೊಳಿಸಬಹುದು ಎಂಬುದು ಸಂಶೋಧಕರ ಅಭಿಮತ. "ನನ್ನ ಮಾವ ಚಾರಣಕ್ಕೆ ಕರೆದೊಯ್ಯುತ್ತಿದ್ದರು, ಅಲ್ಲಿನ ನಿಗೂಢತೆಯ ಪರಿಚಯ ಮಾಡಿಒಸುತ್ತಿದ್ದರು, ಅದರ ಹಸಿ ಹಸಿ ನೆನಪು ಯಾವಾಗ್ಲೂ ನನ್ನನ್ನು ಉತ್ಸಾಹಕ್ಕೆ ಕರೆದಿಯ್ಯುತ್ತದೆ" ಹೀಗಂತ ಬೆಂಗಳೂರಿನ ಹನಿವೆಲ್ ಕಂಪನಿಯ ಉದ್ಯೋಗಿ ರಮ್ಯಾ ತಮ್ಮ ಬ್ಲಾಗಿನಲ್ಲಿ ಅಜ್ಜನ ಮನೆಯ ಸವಿನೆನಪಿನ ಕತೆ ವಿವರಿಸುತ್ತಾರೆ. ಇಂದಿನ ಒತ್ತಡದ ಜೀವನದಲ್ಲಿ ಬಾಲ್ಯದ ನೆನಪುಗಳು ಆಡಿದ ಆಟಗಳು, ಮರಳುಗುಡ್ಡೆ ಹಾಕಿ ಕಟ್ಟಿದ ಮನೆಗಳು, ಕೆರೆಯನೀರಿನಲ್ಲಿ ಕುಣಿದಾಡಿದ ದಿವಸಗಳು, ಅಜ್ಜನ ಕತೆಗಳು, ಹೀಗೆ ಎಲ್ಲವೂ ಹುರುಪು ನೀಡಲು ಕಾರಣವಾಗುತ್ತದೆಯಂತೆ. ಇದು ಒಬ್ಬ ರಮ್ಯಾಳ ಕತೆಯಲ್ಲ, ಪಟ್ಟಣದಲ್ಲಿ ಓದಿ ರಜೆಯಲ್ಲಿ ಹಳ್ಳಿ ಸುಖ ಪಡೆದ ಎಲ್ಲಾ ಮೊಮ್ಮಕ್ಕಳ ಕತೆ ಇಂತಹ ಸವಿಸವಿ ನೆನಪುಗಳಿಂದಲೇ ಆರಂಭವಾಗುತ್ತದೆ.
ಬಾಲ್ಯ ಎಂದರೆ ಆಡಿನಲಿಯುತ್ತಾ ನೋಡಿ ಕಲಿಯುತ್ತಾ ಬೆಳೆಯುವ ಹಂತ. ಅಂತಹ ಅಭೂತಪೂರ್ವ ಸಮಯವನ್ನು ಕೇವಲ ಪುಸ್ತಕದ ಕಲಿಕೆಗೆ ಸೀಮಿತ ಗೊಳಿಸುವ ಆಸಕ್ತಿ ಪಾಲಕರಿಗಿದ್ದರೆ ಮಕ್ಕಳ ಮನಸ್ಸು ಕುಬ್ಜಗೊಳ್ಳುತ್ತದೆ. ಗಿಳಿಪಾಠ ಬೇಸರ ತರಿಸುತ್ತದೆ. ಹಾಗಂತ ಕುತೂಹಲಕ್ಕೆ ಅವಕಾಶವಿರದ ಪ್ರಶ್ನೆಗೆ ಉತ್ತರವಿರದ ವಿಶಾಲಬಯಲಿನ ಮನುಷ್ಯ ಸೃಷ್ಟಿಯ ಆಟಗಳು ಮಾತ್ರಾ ವ್ಯಾಯಾಮ, ಹಾಗೂ ಸಂತೋಷ ಎಂಬುದು ಹಲವರ ದೃಷ್ಟಿ.ಆದರೆ ವಾಸ್ತವ ತೀರಾ ಭಿನ್ನ, ಪಟ್ಟಣದ ಮೈದಾನದಲ್ಲಿ ಆಡುವ ಆಟ ಏಕತಾನತೆಯಿಂದ ಕೂಡಿರುವುದರಿಂದ ಅದು ಜೀವನಪೂರ್ತಿ ಸವಿನೆನಪಿಗೆ ಅವಕಾಶವಿರುವುದಿಲ್ಲ, ಅದೇ ವರ್ಷಕ್ಕೊಮ್ಮೆ ಹಳ್ಳಿಯತ್ತ ಹೊರಳಿ ಅಲ್ಲಿ ನೋಡುವ ನೋಟವೇ ಮನಸ್ಸಿನಲ್ಲಿ ಅಚ್ಚಾಗಿಬಿಡುತ್ತದೆ. ಅದು ಸುಮಧುರ ಸುಂದರ.
ಯಾವಾಗ ನಾನು ದೊಡ್ದವನಾದೇನೋ? ಇವರನ್ನೂ ತಿರುಗಿ ಬೈದೇನೋ? ಎಂಬಂತಹ ಆಲೋಚನೆ ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತಿದೆಯೆಂದರೆ ಅಲ್ಲಿ ಮಕ್ಕಳ ಮನಸ್ಸು ಕುಬ್ಜವಾಗುತ್ತಿದೆಯೆಂದು ಅರ್ಥ. ಮಕ್ಕಳು ಬಾಯಿಬಿಟ್ಟು ತಮ್ಮ ಅವ್ಯಕ್ತ ಭಯವನ್ನು ಹೇಳಲಾರವು, ಆದರೆ ಅವರ ವರ್ತನೆ ಹೇಳುತ್ತದೆ. ನಿತ್ಯ ಜಗಳ ಮಾಡುವ ಅಪ್ಪ ಅಮ್ಮಂದಿರನ್ನು ನೋಡುತ್ತಾ ಬೆಳೆದ ಮಗು ತನಗೆ ಗೊತ್ತಿಲ್ಲದಂತೆ ತನ್ನ ಜೀವನದಲ್ಲಿಯೂ ಅದನ್ನೇ ಮುಂದುವರೆಸುತ್ತದೆ. ಹಾಗಾಗಿ ಹಿರಿಯರ ಜಗಳ ಕಾದಾಟ ಎಲ್ಲಾ ಮಕ್ಕಳೆದುರಿಗೆ ಸಲ್ಲ. ಅಥವಾ ಅಂತಹ ಸಮಸ್ಯೆಗಳಿದ್ದರೆ ಅಂತಹ ಬೇಡದ ನೆನಪುಗಳನ್ನೆಲ್ಲಾ ಅಡಿಗೆ ಒತ್ತಿ ಅದರ ಮೇಲೆ ಸುಂದರ ಭಾವನೆಗಳನ್ನು ಅರಳಿಸುವ ಕೆಲಸ ವರ್ಷಕ್ಕೊಮ್ಮೆಯಾದ್ರೂ ಸಿಗುವಂತಿರಬೇಕು. ಅದು ಅಜ್ಜನ ಮನೆಯಲ್ಲಿ ಮಾತ್ರಾ ಸಾದ್ಯ ಎಂಬುದು ಅನುಭವ ವೇದ್ಯ.
"ನನ್ನ ಅಮ್ಮ ಹಸಿಹಾಲು ಕುಡಿಯುತ್ತಿದ್ದಳಂತೆ ನನಗೂ ಕುಡಿಸು ಮಾಮಾ" ಎಂಬುದು ಭಾರತದಲ್ಲಿ ಹುಟ್ಟಿ ದುಬೈ ನಲ್ಲಿ ಬೆಳೆಯುತ್ತಿರುವ ಕಾವ್ಯಳ ಆಸೆ. ದುಬೈ ಸೇರಿ ಇಪ್ಪತ್ತು ವರ್ಷಗಳು ಸಂದರೂ ಆಕೆಯ ಅಮ್ಮಳಿಗೆ ಎಂದೋ ಕುಡಿದ ಹಸಿಹಾಲಿನ ಬಿಸಿ ಮರೆತಿಲ್ಲ. ಮನದ ಮೂಲೆಯಲ್ಲಿ ಮಗಳಿಗೂ ಸಿಗಲಿ ಎಂಬ ಆಸೆಯಿಂದ ರಜೆಯಲ್ಲಿ ಪ್ರತೀ ವರ್ಷ ಹದಿನೈದು ದಿನಗಳ ಮಟ್ಟಿಗೆ ಹುಟ್ಟಿದ ಹಳ್ಳಿಗೆ ಮಗಳನ್ನು ಕಳುಹಿಸುವ ಅಮ್ಮ ತನ್ನ ಮಗಳ ಬಾಳಿನುದ್ದಕ್ಕೂ ಸವಿನೆನಪನ್ನು ದಾಖಲಿಸಲು ನೆರವಾಗುತ್ತಾಳೆ. ಆಕಳಿನ ಮೊಲೆಯಿಂದ ಸೀದಾ ಕಾವ್ಯಳ ಬಾಯಿಗೆ ಹಾರಿದ ಹಾಲು ಕೇವಲ ಕ್ಷಣಿಕ ಹಸಿಬಿಸಿ ಹಾಲಿನ ಸುಖವೊಂದನ್ನೇ ಅಲ್ಲ ಅವಳ ನೆನಪಿನ ಕೋಶದಲ್ಲಿ ಶಾಶ್ವತವಾಗಿ ದಾಖಲಾಗಿ ನೆನಪುಗಳನ್ನು ಶ್ರೀಮಂತಗೊಳಿಸುತ್ತವೆ. ಆದರೆ ಅಂತಹ ವ್ಯವಸ್ಥೆಗೆ ಹಳ್ಳಿಗಳು ಜೀವಂತವಾಗಿರಬೇಕು. ಅಲ್ಲಿರುವ ಜೀವಗಳಿಗೆ ಚೈತನ್ಯ ಇರಬೇಕು. ಅಂತಹ ಚೈತನ್ಯವಿರುವ ಜೀವಗಳ ಜೊತೆ ಪಟ್ಟಣಿಗರಿಗೆ ಸಂಬಂಧವಿರಬೇಕು, ಹೀಗೆ ಬೇಕುಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಮನಸ್ಸಿದ್ದರೆ ಮಾರ್ಗ ಎಂಬಂತೆ ಹಳ್ಳಿಯಲ್ಲಿರುವ ಮಕ್ಕಳಿಗೆ ಪಟ್ಟಣ ತೊರಿಸಿ ಅವುಗಳ ಮುಖ ಅರಳುವುದನ್ನೂ, ಪಟ್ಟಣದ ಮಕ್ಕಳಿಗೆ ಹಳ್ಳಿಯ ಸೊಗಡು ಪರಿಚಯಿಸಿ ಅವುಗಳ ಕಣ್ಣುಗಳು ಅಗಲವಾಗುವುದನ್ನೂ ನೋಡುವ ಆಸೆ ಪಾಲಕರಿಗೆ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು. ಅದೂ ಅವರುಗಳ ಜೀವನಪೂರ್ತಿ ನೆನಪುಗಳ ಮೂಲಕ. ಅದಕ್ಕೊಂದು ಅಜ್ಜನ ಮನೆ ಅವಶ್ಯಕತೆ ಇದೆ. ಇಲ್ಲದಿದ್ದರೆ ಸೃಷ್ಟಿಸಿಕೊಳ್ಳುವಷ್ಟು ಜಗತ್ತು ಇಂದು ಮುಂದುವರೆದಿದೆ. ಆದರೆ ಮನಸ್ಸು ಅರಳಬೇಕಷ್ಟೆ, ಮತ್ತು ಅಜ್ಜನ ಮನೆಯತ್ತ ಹೊರಳಬೇಕಷ್ಟೆ.

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Wednesday, October 20, 2010

ಅಂತೂ ಇಂತೂ ಬಂತು "ಕಟ್ಟು ಕತೆಯ ಕಟ್ಟು

ಕತೆಗಳು ಏಕೆ ಹುಟ್ಟಿಕೊಂಡವು? ಹೇಗೆ ಸೃಷ್ಟಿಯಾಯಿತು? ಯಾಕಾಗಿ ಬರೆಯಬೇಕು? ಯಾಕಾಗಿ ಓದಬೇಕು? ಎಂಬಂತಹ ಪ್ರಶ್ನೆಗಳ ಉತ್ತರ ನನ್ನ ಬಳಿಯಲ್ಲಿ ಇಲ್ಲ. ಮನುಷ್ಯ ಸಮಾಜೀವಿಯಾದ್ದರಿಂದ ಅವನು ವರ್ತಮಾನದ ವಾಸ್ತವಕ್ಕಿಂತ ಕಲ್ಪನೆಗಳಿಗೆ ಹೆಚ್ಚು ಮಾನ್ಯತೆ ನೀಡುವುದರಿಂದ, ತನ್ನ ನೋವನ್ನು ಹೇಳಿ ಮರೆಯಬಹುದು ಅಂದುಕೊಂಡಿರುವುದರಿಂದ, ತಾನು ಪಟ್ಟ ಸಂತೋಷ ಹಂಚಿ ಸುಖಿಸುವುದರಿಂದ, ಕಂಡ ಘಟನೆ, ಅನುಭವಿಸಿದ ನೋವು ನಲಿವು, ಹೀಗೆ ಏನೇನೆಲ್ಲಾವುಗಳನ್ನು ಹಂಚಿಕೊಂಡಾಗ ಅದೇನೋ ಒಂಥರಾ ಆನಂದದ ಭಾವನೆ ಆಳದಲ್ಲಿ ಮೂಡುವುದರಿಂದ ಆತ ಕತೆ ಹೇಳುವುದನ್ನು ರೂಢಿಸಿಕೊಂಡ, ಹೇಳುವ ಕತೆಯ ವಿಸ್ತಾರ ಪ್ರಸಾರದ ವೇಗ ದೂರ ಕಡಿಮೆ ಅನ್ನಿಸಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡ . ಹೀಗೆ ಏನೇನೆಲ್ಲಾ ವ್ಯಾಖ್ಯಾನ ನೀಡಬಹುದು ಕತೆಗಳ ಬಗ್ಗೆ. ಅದು ಅವರವರ ಬುದ್ದಿಮತ್ತೆಗನುಗುಣವಾಗಿರುತ್ತದೆ. ನನಗೆ ಅವೆಲ್ಲಾ ತಿಳಿಯದು.
ಕತೆಗಳಿಗೆ ಆಳ ಇದೆ ಉದ್ದ ಇದೆ ಅಗಲ ಇದೆ. ಕತೆಯನ್ನು ಬರೆದವನ ದೃಷ್ಟಿಯಿಂದ ಓದಬಹುದು, ಓದುಗನ ದೃಷ್ಟಿಯಿಂದ ನೋಡಬಹುದು, ಬರೆಯುವವನ ಓದುವವನ ವಯಸ್ಸು ಕಾಲಗಳಿಂದಲೂ ಅಳೆಯಬಹುದು. ಬರಹಗಾರ ಪಕ್ವವಾಗಿದ್ದರೆ ಎರಡು ಶಬ್ಧಗಳ ನಡುವೆ ಸದ್ದನ್ನು ಮೂಡಿಸಬಲ್ಲ. ಓದುಗ ಪರಿಪಕ್ವನಾಗಿದ್ದರೆ ಅದನ್ನು ಅರ್ಥೈಸಿಕೊಳ್ಳಬಲ್ಲ. ಕತೆಗಾರನ ವೈಯಕ್ತಿಕ ಜೀವನದಿಂದಲೂ ಕತೆಗಳನ್ನು ಪರಿಚಯಮಾಡಿಕೊಳ್ಳಬಹುದು. ಎಂತೆಲ್ಲಾ ವಿಮರ್ಶಕರು ಹೇಳುತ್ತಾರೆ. ನನಗೆ ಅವೆಲ್ಲಾ ಅರ್ಥವಾಗದು.
ಕತೆಯ ಅಂತ್ಯವನ್ನು ಓದುಗನೇ ಊಹಿಸಿಕೊಳ್ಳಲಿ ಅಂತ ಬಿಡಬಹುದು. ಅಥವಾ ಬರಹಗಾರನೇ ಅಂತ್ಯ ನೀಡಬಹುದು. ನೀಡಿದ ಅಂತ್ಯ ಅಂತ್ಯವಾಗದೆಯೂ ಇರಬಹುದು, ಮತ್ತೆ ಅಲ್ಲಿಂದ ಆರಂಭ ಅಂತಲೂ ಅನ್ನಿಸಬಹುದು. ಹಾಗಾಗಿ ಕತೆಗಳ ವಿಷಯದಲ್ಲಿ ಆರಂಭ ಗೊತ್ತಿಲ್ಲ ಅಂತ್ಯ ಎಂಬುದು ಇಲ್ಲ. ಅಷ್ಟಾದಮೇಲೆ ನನಗೆ ಅದರ ಗೊಡವೆ ಬೇಡ.
ನಾನೂ ಒಂದಿಷ್ಟು ಬರೆದೆ, ಕಂಡಿದ್ದು, ಕೇಳಿದ್ದು, ನೋಡಿದ್ದೂ ಹಾಗೂ ನನ್ನದೇ ಆದ ಕೈಕರ್ಚಿನದು. ಬರೆದದ್ದು ಹಾಗೆ ಇಡುವುದು ಬೇಡ ಅಂತ ಅನ್ನಿಸಿ ಪತ್ರಿಕೆಗೆ ಕಳುಹಿಸಿದೆ. ಪ್ರಕಟವಾದಾಗ ಮಾತ್ರ ಮತ್ತೆ ಮತ್ತೆ ಓದಿ ಸಂಭ್ರಮಿಸಿದೆ. ನಂತರ ಮತ್ತೆ ಮತ್ತೆ ಬರೆದೆ. ಮತ್ತೆ ಮತ್ತೆ ಓದಿದೆ. ಹೀಗೆ ನಾನು ಬರೆಯಲು ಪ್ರಕಟವಾಗಲು ಸಹಕರಿಸಿದ ಜನರ ಸಂಖ್ಯೆ ಅಪಾರ. ಹೊತ್ತು ಹೆತ್ತವರು, ಒಡಹುಟ್ಟಿದವರು, ಜತೆಗೆ ಬೆಳೆದವರು, ನನ್ನನ್ನು ಸಹಿಸಿಕೊಂಡವರು,ಜೀವನ ಹಂಚಿಕೊಂಡವರು, ಅನ್ನ ಔಷಧಿ ಬಟ್ಟೆ ಬೆಳೆದು ನೆಯ್ದು ನೀಡಿದವರು, ಕಾರಣರು ಕಾರಣೀಕರ್ತರು ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಒಟ್ಟಿನಲ್ಲಿ ಸಮಷ್ಠಿಯ ಸಮಾಜದ ಋಣ ತೀರಿಸಲಾಗದ್ದು, ಅವೆಲ್ಲಾ ಸಹಕಾರದಿಂದ ನಾನು ಒಂದಿಷ್ಟು ದಾಖಲಿಸಿ ಅವುಗಳನ್ನ ಕತೆಯಾಗಿಸಿ ಸಂಕಲನವನ್ನಾಗಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಕತೆಗಳು ಚೆನ್ನಾಗಿದೆ ಎಂದರೂ, ಚೆನ್ನಾಗಿಲ್ಲ ಎಂದರೂ ನನಗೆ ಸಂತೋಷವೇ, ಕಾರಣ ಓದಿದ ನಂತರ ಹೇಳುವ ಅಭಿಪ್ರಾಯಗಳು ಅವು. ನನ್ನ ಕತೆಗಳನ್ನು ಓದಿದ ನಂತರ ಹೇಳುವ ಅಭಿಪ್ರಾಯಗಳು ಓದುಗನ ಮನಸ್ಥಿತಿಯನ್ನೂ ಅವಲಂಬಿಸಿರುತ್ತದೆಯಾದರಿಂದ ನೀವು ಓದುವುದಷ್ಟೆ ನನಗೆ ಮುಖ್ಯ. ಅಭಿಪ್ರಾಯ ಹೇಗಿದ್ದರೂ ನನಗದು ಆನಂದವೇ.
ನೆಟ್ ಮುಂದೆ ಕುಳಿತ ಒಂದು ದಿನ ಚಾಟ್ ನಲ್ಲಿ "ನೀನೇಕೆ ಒಂದು ಕಾದಂಬರಿ ಬರೆಯಬಾರದು? ಎಂಬ ಪ್ರಶ್ನೆ ಟೈಪಿಸಿ ಅದಕ್ಕೆ " ಅಯ್ಯೋ ಬರೆಯುವುದು ದೊಡ್ಡದಲ್ಲ ಆದರೆ ಮುದ್ರಿಸುವುದು ಕಷ್ಟ, ಈಗ ನೋಡು ಕಥಾಸಂಕಲನ ಮುದ್ರಿಸಲಾಗದೇ ಒದ್ದಾಡುತ್ತಿದ್ದೇನೆ" ಎಂದಾಗ ಸುಮ್ಮನೇ ಕೇಳಿದ ಮಾತಾಗದೆ "ನಾನಷ್ಟು ಕೊಡುತ್ತೇನೆ" ಎಂದ ನನ್ನ ಅಕ್ಕನ ಮಗಳು ನವ್ಯಾಳಿಗೆ ಹಾಗೂ ಕಳೆದ ಹತ್ತು ವರ್ಷದಿಂದ ನಾ ಬರೆದ ಎಲ್ಲಾ ಕತೆಗಳನ್ನು ಜತನವಾಗಿ ಕಾಪಿಟ್ಟು, ವ್ಯವಹಾರದ ವಿಷಯ ಬದಿಗಿಟ್ಟು, ತನ್ನದೇ ಕತೆಯ ಕಟ್ಟು ಎಂಬಂತೆ ಮುದ್ರಿಸಿಕೊಟ್ಟ ವೇಣುಮಾಧವನಿಗೆ, "ಬೇಲಿ" ಎಂಬ ಕತೆ ಕನ್ನಡ ಪ್ರಭದಲ್ಲಿ ಪ್ರಕಟವಾದ ಮಾರನೇ ದಿವಸ ಕಾಡಿನ ಒಳಗೆ ಇರುವ ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು ಬಂದು ನೀವು ನಿಮ್ಮ ಕತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ ಎಂದು ಹುರಿದುಂಬಿಸಿ ನನಗಿಂತ ಚೆನ್ನಾಗಿ ನಾ ಬರೆದ ಕತೆಗಳನ್ನು ನೆನಪಿಟ್ಟುಕೊಂಡು ಅರ್ಥೈಸಿದ ಜೋಗದ ಸರ್ಕಾರಿ ಕಾಲೇಜಿನ ಗ್ರಂಥಪಾಲಕರಾದ ದೂರಪ್ಪನವರಿಗೆ, ನಾನು ಆಭಾರಿ ಎಂದಷ್ಟೇ ಹೇಳಿದರೆ ಕಡಿಮೆ. ಆಂತರ್ಯದ ಧನ್ಯವಾದ ಅವರುಗಳಿಗೆ. ಚಿತ್ರ ಬಿಡಿಸಿಕೊಟ್ಟ ಮಾಹಬಲೇಶ್ವರ ಸಾಲೇಕೊಪ್ಪ ಹಾಗೂ ಜಿ ಎಂ ಹೆಗಡೆ ಬೊಮ್ನಳ್ಳಿ ಅವರಿಗೆ ವಂದನೆಗಳು. ನಿತ್ಯದ ದಿವಸಗಳಲ್ಲಿ ಅವರಿಗೆ ತಿಳಿಯದಂತೆ ನನ್ನನ್ನು ಕತೆ ಬರೆಯಲು ಪ್ರೇರೇಪಿಸಿದ ಡೈರಿಕಟ್ಟೆಯ ಸಹವರ್ತಿಗಳಿಗೆ ನಮಸ್ಕಾರಗಳು. "ಕಟ್ಟು ಕತೆಯ ಕಟ್ಟು ಎಂಬ ಕಥಾಸಂಕಲನ ಬಗ್ಗೆ ಬ್ಲಾಗ್ ನಲ್ಲಿ ಹಾಗೂ ಸಂಪದದಲ್ಲಿ ಬರೆದಾಗ "ಯಾವಾಗ ಬಿಡುಗಡೆ ? ನನಗೊಂದು ಪ್ರತಿ ಇರಲಿ" ಎಂದ ಎಲ್ಲ ಆತ್ಮೀಯರಿಗೆ ಧನ್ಯವಾದಗಳು, ಮುನ್ನುಡಿ ಬರೆದುಕೊಡುತ್ತೀರಾ? ಎಂದಾಕ್ಷಣ ತಮ್ಮ ಎಲ್ಲಾ ಖಾಯಿಲೆ ನೋವುಗಳನ್ನು ಬದಿಗಿಟ್ಟು ಒಂದೇ ಗುಟುಕಿನಲ್ಲಿ ಎಲ್ಲಾ ಕತೆಗಳನ್ನು ಓದಿ ಮುನ್ನುಡಿ ಬರೆದುಕೊಟ್ಟ ಸುಳಿಮನೆಯ ಕೇಸರಿ ಪೆಜತ್ತಾಯರಿಗೂ ಹಾಗೂ ಬೆನ್ನುಡಿ ಬರೆದ ರಾಧಾಕೃಷ್ಣ ಭಡ್ತಿಯವರಿಗೂ ಹಾಗೂ ನನ್ನ ಭಾವಚಿತ್ರ ತೆಗೆದುಕೊಟ್ಟ ಪಾಲಚಂದ್ರರವರಿಗೂ ಪ್ರಣಾಮಗಳು. ಗಣಪತಿ ಪ್ರಿಂಟಿಗ್ ಪ್ರೆಸ್ ನ ಮಾಲಿಕರಾದ ಎಚ್ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಗಳಿಗೆ ತ್ಯಾಂಕ್ಸ್. ಪ್ರತ್ಯಕ್ಷ ಪರೋಕ್ಷ ಸಹಕರಿಸಿದ ಎಲ್ಲರಿಗೂ ಅನಂತಾನಂತವಂದನೆ.
ದೀಪಾವಳಿಯ ದಿನ ಸಂಜೆ ಆರೂವರೆಗೆ ತಲವಾಟಾ ಶಾಲಾ ಆವರಣದಲ್ಲಿ "ಕಟ್ಟು ಕತೆಯ ಕಟ್ಟು" ಕಥಾಸಂಕಲನದ ಬಿಡುಗಡೆಯ ಸಮಾರಂಭ. ಬನ್ನಿ ಒಂದಿಷ್ಟು ಖುಷಿ ಹಂಚಿಕೊಳ್ಳೋಣ.

Tuesday, October 19, 2010

ರಾಣಿ ಈಗ ಗೂಡಿಗೆ


" ರಾಣಿ ಈಗ ಗೂಡಿಗೆ
ಗಂಡು ಯಮನ ಬೀಡಿಗೆ"
ಮುನ್ನಾದಿನ ಮುತ್ತಣ್ಣ ಹೇಳಿದ ಕವನದ ಕೊನೆಯ ಸಾಲುಗಳನ್ನು ಗುಣುಗುಣಿಸುತ್ತಾ ಚೆನ್ನ ನಸುಕಿನಲ್ಲಿ ಗುಡ್ಡ ಏರುತ್ತಿದ್ದ. ಕವನದ ವಿಸ್ತಾರದ ಕತೆ ಕೇಳಿದ ಚೆನ್ನನಿಗೆ ಆ ಕೊನೆಯ ಸಾಲಿನ ಹೊರತಾಗಿ ಮತ್ಯಾವುದೂ ನೆನಪಿಗೆ ಬರಲಿಲ್ಲ. ಇಡೀ ಕತೆಯ ಸಾರಾಂಶವನ್ನು ಅವೆರಡು ಸಾಲಿಗೆ ತುಂಬಿಕೊಂಡು ಆಸ್ವಾದಿಸುತ್ತಾ ಪದೇ ಪದೇ ಅವಷ್ಟೇ ಸಾಲುಗಳನ್ನು ಹಿಂದುಮುಂದಾಗಿ ತನ್ನದೇ ಆದ ದಾಟಿಯಲ್ಲಿ ಹಾಡುತ್ತಾ ನಡು ನಡುವೆ ಹಣೆಯಮೇಲೆ ಕೈಯನ್ನಿಟ್ಟು ಸೂರ್ಯನ ಕಿರಣದಿಂದ ಕಣ್ತಪ್ಪಿಸಿ ಮುನ್ನಡೆಯುತಿದ್ದ. ಚೆನ್ನನ ಉತ್ಸಾಹಕ್ಕೆ ಜೇನು ಹುಡುಕುವ ಭರಾಟೆಯೋ ಅಥವಾ ಉಲ್ಲಾಸದಾಯಕ ವಾತಾವರಣವೋ ಎನ್ನುವುದನ್ನ ತರ್ಕಿಸಿ ತೀರ್ಮಾನ ತೆಗೆದುಕೊಳ್ಳುವ ಗೋಜಿನ ಮನಸ್ಥಿತಿ ಅವನದಾಗಿರಲಿಲ್ಲವಾದ್ದರಿಂದ ಉತ್ಸಾಹವನ್ನು ಮಾತ್ರಾ ಅನುಭವಿಸುತ್ತಿದ್ದ. ಅವನಿಗೆ ಬುದ್ದಿಬಂದಾಗಿನಿಂದ ಇಬ್ಬನಿ ಬೀಳುವ ಕಾಲದಲ್ಲಿ ಹೀಗೆ ಜೇನು ಹುಡುಕುತ್ತಾ ಹೊರಡುವುದು ಇಷ್ಟವಾದ ಕೆಲಸ. ಕಳೆದ ವರ್ಷದವರೆಗೂ ಜೇನಿಗೂ ಚೆನ್ನನಿಗೂ ಕೇವಲ ಹಣದ ಸಂಬಂಧ ಮಾತ್ರಾ ಇತ್ತು. ಕಾಡಿಗೆ ಹೋಗುವುದು ಮರದ ಪೊಟರೆಯಲ್ಲಿಯೋ, ಹುತ್ತದ ಆಳದಲ್ಲಿಯೂ ಹುದುಗಿದ್ದ ಜೇನನ್ನು ಪತ್ತೆ ಮಾಡುವುದು, ಹಾಗೂ ಬೀಡಿ ಹೊಗೆ ಹಾಕಿ ಜೇನಿನ ಕುಟುಂಬ ಹಾರಿಸುವುದು ಮತ್ತು ತುಪ್ಪ ತೆಗೆದು ಪೇಟೆಗೋ ಅಥವಾ ಗಿರಾಕಿಗೋ ಮಾರಿ ಹಣ ಎಣಿಸುವುದು. ಒಂದು ಕುಡಗೋಲು, ತುಪ್ಪ ಹಾಕಲು ಒಂದು ಪಾತೆ, ಬೀಡಿಕಟ್ಟು ಬೆಂಕಿಪೊಟ್ಟಣ ಇಷ್ಟಿದ್ದರೆ ಚೆನ್ನನಿಗೆ ಒಂದುದಿನದ ಸಂಬಳ ಬಂದಂತೆ. ಆದರೆ ಪಟ್ಟಣದಲ್ಲಿ ಇಂಜನಿಯರ್ ಆಗಿದ್ದ ಮುತ್ತಣ್ಣ ನಿವೃತ್ತ ಜೀವನಕ್ಕೆ ಹಳ್ಳಿಯನ್ನು ಆರಿಸಿಕೊಂಡು ಊರಿಗೆ ಬಂದಮೇಲೆ ಚೆನ್ನನ ಜೇನಿನ ಪಾಲನೆಯ ರೀತಿರಿವಾಜುಗಳು ಬದಲಾಗತೊಡಗಿದವು. ಕಾಡಿಗೆ ಹೋಗಿ ಜೇನು ಗೂಡು ಪತ್ತೆಮಾಡಿ ಅವನ್ನು ಪೆಟ್ಟಿಗೆಗೆ ತುಂಬಿ ಮನೆಯಂಗಳಕ್ಕೆ ತಂದು ಸಾಕಾಣಿಕೆ ಆರಂಭಿಸಲು ಪ್ರೋತ್ಸಾಹಿಸಿದ್ದೇ ಮುತ್ತಣ್ಣ. ಹಾಗಾಗಿ ಕಾಡಿಗೆ ಹೊರಡುವ ಚೆನ್ನನ ಕೈಯಲ್ಲಿ ಈಗ ಒಂದು ಕೂಡುಪೆಟ್ಟಿಗೆ, ಹಗ್ಗ, ಕೈಹುಟ್ಟು, ಮುಂತಾದ ಹೊಸ ಪರಿಕರಗಳು ಕೂಡಿಕೊಂಡಿದ್ದವು. ಜೇನು ತತ್ತಿ ಹಿಂಡಿ ಹಿಪ್ಪೆಮಾಡಿ ತುಪ್ಪ ತೆಗೆದು, ಹುಳುಗಳನ್ನು ಹೊಗೆ ಹಾಕಿಸಿ ಹಿಂಸೆ ಮಾಡುವ ಚೆನ್ನನ ಮಾಮೂಲಿ ವಿಧಾನಗಳಿಗೆ ವಿದಾಯ ಹೇಳಿದ್ದ. ಚೆನ್ನ ಮುತ್ತಣ್ಣನಿಂದ ಶಿಸ್ತಿನ ಜೇನುಸಾಕಾಣಿಕೆದಾರನಾಗಿದ್ದ. ಮನೆಯ ಸುತ್ತಮುತ್ತ ನಾಲ್ಕೈದು ಜೇನುಪೆಟ್ಟಿಗೆಗಳನ್ನಿಟ್ಟು ಆದಾಯದ ಜತೆ ಜೀವನಾನುಭೂತಿಯನ್ನು ಪಡೆದುಕೊಳ್ಳುವಂತಾಗಿದ್ದ. ದಿನನಿತ್ಯ ಜೇನು ಸಾಮ್ರ್ಯಾಜ್ಯದ ಹೊಸ ಹೊಸ ವಿಷಯಗಳನ್ನು ಕಥಾ ರೂಪದಲ್ಲಿ ಕೇಳುತ್ತಾ ಬೆರಗಾಗುತ್ತಿದ್ದ. ಮನುಷ್ಯರಂತೆ ಹಿಸ್ಸೆಯಾಗುವುದು, ಯುದ್ಧ ಮಾಡುವುದು, ಆಹಾರ ಕಾಪಿಡುವುದು ಮುಂತಾದ ಹತ್ತಾರು ವಿಷಯಗಳನ್ನು ಮುತ್ತಣ್ಣ ಹೇಳಿದ್ದರೂ ಹಾಡಿನ ರೂಪದಲ್ಲಿ ನಿನ್ನೆ ಹೇಳಿದ ವಿಷಯ ಮಾತ್ರಾ ಚೆನ್ನನನ್ನು ಮಹದಾಶ್ಚರ್ಯಕ್ಕೆ ತಳ್ಳಿತ್ತು. ಹತ್ತಿಪ್ಪತ್ತು ವರ್ಷಗಳಿಂದ ಜೇನುಹುಟ್ಟಿನಲ್ಲಿ ಕೈ ಇಟುಕೊಂಡು ಕುಳಿತಿದ್ದ ಚೆನ್ನನಿಗೆ ಅಲ್ಲೊಂದು ಜೀವಂತ ಪ್ರಪಂಚ ಇದೆ ಎಂದು ಅರಿವು ಮೂಡತೊಡಗಿದ್ದು ಇತ್ತೀಚಿಗಷ್ಟೆ.
"ಹಳೆಯ ರಾಣಿ ಚಳಿಗಾಲದ ಒಂದು ದಿನ ಗೂಡಿನಲ್ಲಿದ್ದ ಅರ್ದದಷ್ಟು ಹುಳುಗಳನ್ನು ಕರೆದುಕೊಂಡು ಬೇರೆಯ ಗೂಡನ್ನು ಅರಸುತ್ತಾ ಹೊರಟುಬಿಡುತ್ತದೆಯೆಂದರೆ ಅದು ಹಿಸ್ಸೆಯ ಸಂಭ್ರಮ ಎಂದರ್ಥ. ಮೂರ್ನಾಲ್ಕು ದಿವಸಗಳಲ್ಲಿ ಗೂಡಿನಲ್ಲಿ ಹೊಸ ರಾಣಿ ಮೊಟ್ಟೆಯಿಂದ ಈಚೆ ಬಂದು ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ನವಯೌವನದ ರಾಣಿಗೆ ಹುಟ್ಟಿದ ಮಾರನೆಯ ದಿನವೇ ಗಂಡಿನೊಡನೆ ಸೇರುವ ಯೋಗ. ರಾಣಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರಾ ಗಂಡಿನೊಡನೆ ಸೇರುತ್ತದೆ, ಆನಂತರ ನಿರಂತರ ಮೊಟ್ಟೆಯನ್ನಿಡುತ್ತಾ ಜೇನು ಸಾಮ್ರಾಜ್ಯವನ್ನು ವಿಸ್ತರಿಸುತ್ತದೆ. ಜೇನು ರಾಣಿ ಹುಟ್ಟಿದ ಮಾರನೇ ದಿನ ಗಂಡು ನೊಣದೊಂದಿಗೆ ಹೊರ ಹೊರಟು ಸೇರುವ ಕ್ರಿಯೆ ಪ್ರಕೃತಿಯ ಅದ್ಬುತ ಸಂಯೋಜನೆ. ರಾಣಿಗೆ ದಾರಿ ತೋರಿಸಲು ನಾಲ್ಕಾರು ಕೆಲಸಗಾರ ನೊಣಗಳು , ಹತ್ತಾರು ಗಂಡುನೊಣಗಳು ರಾಣಿಯ ಸೇರಲು ಜತೆಯಾಗಿ ಗೂಡಿನಿಂದ ಹೊರಹೊರಡುತ್ತವೆ. ರಾಣಿಯ ಮಿಲನ ಬಾನಂಗಳದಲ್ಲಿ ಪ್ರಕೃತಿ ನಿಗದಿಪಡಿಸಿದೆ. ಹೊರ ಹಾರಾಟದಲ್ಲಿ ರಾಣಿಯ ಜತೆ ಗಂಡು ಸ್ಪರ್ಧೆಗೆ ಇಳಿಯಬೇಕು, ರಾಣಿ ತನ್ನ ಉದ್ದನೆಯ ನುಣುಪಾದ ದೇಹ, ಅಗಲವಾದ ರಕ್ಕೆಯನ್ನು ಬಳಸಿಕೊಂಡು ಮೇಲೇರಲು ಆರಂಭಿಸುತ್ತದೆ. ಈಗ ಗಂಡು ನೊಣಗಳು ರಾಣಿಯ ಜತೆ ಹಾರಾಟದ ಸ್ಪರ್ಧೆಗೆ ಇಳಿಯುತ್ತವೆ. "ಏರಿ ಏರಿ ಮೇಲಕೇರಿ" ಎಂಬಂತೆ ರಾಣಿ ನೊಣ ಏರುತ್ತಲೇ ಸಾಗುತ್ತದೆ. ಹತ್ತಾರು ಗಂಡು ನೊಣಗಳ ಪೈಕಿ ಅಶಕ್ತ ನೊಣಗಳು ರಾಣಿಯ ಜತೆ ಏರಲಾಗದೆ ಹಾರಲಾಗದೆ ಹಿಂದುಳಿಯುತ್ತವೆ. ಅಂತಿಮವಾಗಿ ಸಶಕ್ತ ಗಂಡುನೊಣವೊಂದು ಬಾನಂಗಳದಲ್ಲಿ ರಾಣಿಯನ್ನು ಕೂಡುತ್ತವೆ. ಪಾಪ ಆ ಗಂಡುನೊಣದ ಮಿಲನ ಎಂದರೆ ತನ್ನದೇ ಚರಮಗೀತೆ ಎಂದು ತಿಳಿಯದೆ ರಾಣಿನೊಣವನ್ನು ಸಂಭ್ರಮದ ಸಂಗೀತದ ನಿನಾದದೊಂದಿಗೆ ಸೇರುತ್ತದೆ. ಆರೋಗ್ಯವಂತ ಸಶಕ್ತ ಜೇನುಪೀಳಿಗೆಗೆ ನಾಣ್ಣುಡಿ ಬರೆದು ರಾಣಿಯ ಸೇರಿದ ಕೆಲಕ್ಷಣಗಳ ನಂತರ ಅದು ಸಾವನ್ನಪ್ಪುತ್ತದೆ. ರಾಣಿನೊಣ ಗರ್ಭವತಿಯಾಗಿ ಮಿಕ್ಕ ಕೆಲಸಗಾರನೊಣಗಳ ಅಣತಿಯಂತೆ ಗೂಡಿನ ದಾರಿ ಹಿಡಿಯುತ್ತದೆ. ಅಲ್ಲಿಗೆ ಮತ್ತೊಂದು ಹೊಸ ಜೇನು ಸಂಸಾರ ಆರಂಭವಾದಂತೆ. ಈಗ ನಿನಗೆ ಅರ್ಥವಾಗಿರಬೇಕು ಜೇನು ಪ್ರಪಂಚದಲ್ಲಿ ಅಂಗವೈಕಲ್ಯತೆ ಯಾಕಿಲ್ಲ?, ಸಶಕ್ತ ಹುಳುಗಳ ಸೃಷ್ಟಿ ಮಾತ್ರಾ ಅಲ್ಲಿದೆ" ಅಂತ ಹಾಡಿನ ಸಹಿತ ಹೇಳಿದ ಮುತ್ತಣ್ಣನ ಮಾತುಗಳು ಬೆರಗು ಮೂಡಿಸಿದ್ದವು.
ಮುತ್ತಣ್ಣ ಹೇಳಿದ ಕತೆಯನ್ನು ಮೆಲುಕು ಹಾಕುತ್ತಾ ಜೇನು ಪ್ರಪಂಚದೊಳಗಿದ್ದ ಚೆನ್ನ ಮಾವಿನ ಹಕ್ಕಿಯ ಕೂಗಿಗೆ ವಾಸ್ತವಕ್ಕೆ ಬಂದ. ಮಾವಿನ ಹಕ್ಕಿ ಕೂಗಿತೆಂದರೆ ಅಲ್ಲೆಲ್ಲಿಯೋ ಜೇನು ಇದೆ ಅಂತ ನೆನಪಾಗುತ್ತಲೆ ಸೂರ್ಯನ ಎಳೆ ಕಿರಣಕ್ಕೆ ಕೈ ಅಡ್ಡ ಇಟ್ಟು ಹುಡುಕತೊಡಗಿದ. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಜೇನು ಹುಳುಗಳು ಹತ್ತಿರದ ಹುತ್ತದಿಂದ ಪುರುಪುರನೆ ಹೊರಡುತ್ತಿದ್ದವು. ಒಮ್ಮೊಮ್ಮೆ ದಿನಗಟ್ಟಲೆ ಅಲೆದರೂ ಸಿಗದ ಜೇನು ಮಗದೊಮ್ಮೆ ಹೀಗೆ ಅಚ್ಚರಿ ಮೂಡಿಸುವಷ್ಟು ಬೇಗನೆ ಸಿಗುವುದು ಚೆನ್ನನಿಗೆ ಹೊಸತೇನಲ್ಲ. ಕೂಡು ಪೆಟ್ಟಿಗೆ ತಲೆಯಿಂದ ಇಳಿಸಿ ಕೈ ಹಾರೆಯಿಂದ ಹುತ್ತದ ಬಾಯಿ ಬಿಡಿಸಿ ಬಗ್ಗಿ ಹುತ್ತದೊಳಗೆ ಕಣ್ಣಾಡಿಸಿದ. ಬಿಳಿಯದಾದ ಬರೊಬ್ಬರಿ ಐದು ತತ್ತಿಗಳು ಗೋಚರಿಸಿತು. "ಅಬ್ಬಾ ಸಣ್ಣಾಟದ ಜೇನಲ್ಲ ಇದು" ಎಂದು ತನ್ನಷ್ಟಕ್ಕೆ ಹೇಳಿಕೊಂಡ. ಚೆನ್ನನ ಕೈಹಾರೆಯಿಂದಾದ ಶಬ್ಧಕ್ಕೆ ಗಾಬರಿ ಬಿದ್ದ ಜೇನು ಕುಟುಂಬ ತತ್ತಿ ಬಿಟ್ಟು ಮೇಲೇರತೊಡಗಿತ್ತು. ಸ್ಪಷ್ಟವಾಗಿ ಕಾಣಿಸುತಿದ್ದ ಜೇನು ತತ್ತಿಗಳನ್ನು ಗಮನಿಸಿದ ಚೆನ್ನ ಒಮ್ಮೆ ಹತಾಶನಾದ. ಕಾರಣ ತತ್ತಿಯ ಬುಡದಲ್ಲಿ ನಾಲ್ಕಾರು ರಾಣಿ ಮೊಟ್ಟೆ ಜೋತಾಡುತಿತ್ತು. ಗಂಡು ನೊಣಗಳ ಸಂಖ್ಯೆ ವಿಪುಲವಾಗಿತ್ತು. ಅದರ ಅರ್ಥ ರಾಣಿ ಹೆಸ್ಸೆಯಾಗಿ ಹಾರಿ ಹೋಗಿದೆ. ಇನ್ನಷ್ಟೇ ಹೊಸ ರಾಣಿ ಬರಬೇಕಿದೆ. ಎಂದು ಆಲೋಚಿಸುತ್ತಾ ಹುತ್ತದೊಳಗೆ ಕೈ ಹಾಕಿದಾಗ ಹತ್ತಾರು ಗಂಡುನೊಣಗಳು ಪುರುಪುರು ಶಬ್ಧ ಮಾಡುತ್ತಾ ಹೊರಬಂದವು . ಗಂಡು ನೊಣಗಳ ಸಂಭ್ರಮದ ಹಾರಾಟ ನೋಡಿದ ಚೆನ್ನ, ಮುತ್ತಣ್ಣ ಹೇಳಿದ ಸಾವಿನ ಕತೆ ನೆನಪಾಗಿ ಮನಸ್ಸಿನಲ್ಲಿಯೇ ನಕ್ಕ. ಒಂದೊಂದೇ ತತ್ತಿಗಳನ್ನು ಬಿಡಿಸಿ ಬಾಳೆಪಟ್ಟೆ ಹಗ್ಗದಲ್ಲಿ ತತ್ತಿಗಳನ್ನು ನಿಧಾನವಾಗಿ ಮರದ ಚೌಕಟ್ಟಿಗೆ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಕೈಹುಟ್ಟಿನಲ್ಲಿ ಜೇನು ನೊಣಗಳನ್ನು ಪೆಟ್ಟಿಗೆಗೆ ತುಂಬತೊಡಗಿದ. ಮುಕ್ಕಾಲು ಪಾಲು ನೊಣಗಳು ಪೆಟ್ಟಿಗೆ ಸೇರಿದ ನಂತರ ಮುಚ್ಚಲು ಹಾಕಿ ಮಿಕ್ಕ ಹುಳುಗಳ ಪೆಟ್ಟಿಗೆ ಪ್ರವೇಶವನ್ನು ನೋಡುತ್ತಾ ಬೀಡಿ ಹಚ್ಚಿದ.
ಪೆಟ್ಟಿಗೆಯ ಹೊರಗಡೆ ದಪ್ಪನೆಯ ಕಪ್ಪನೆಯ ಗಂಡುಹುಳುಗಳ ಹಾರಾಟ ಹೆಚ್ಚತೊಡಗಿತು. ಈ ಗಂಡು ಹುಳಗಳನ್ನು ನೋಡಿದಾಗಲೆಲ್ಲ ಚೆನ್ನನಿಗೆ ನೆನಪಿಗೆ ಬರುವುದು ನಾಣ ಭಟ್ಟರ ಪ್ರಣಯ ಪ್ರಕರಣ. ಕಪ್ಪಗೆ ಪುಷ್ಟಿಯಾಗಿ ಗಂಡುನೊಣದಂತೆ ಇರುವ ಯಕ್ಷಗಾನದ ಹವ್ಯಾಸಿಯಾದ ನಾಣಭಟ್ಟರು ಮೂರು ಮದುವೆ ಮಾಡಿಕೊಂಡು ಮತ್ತೂ ಪ್ರಕರಣಗಳನ್ನು ಸೃಷ್ಟಿಸಿಕೊಂಡು ಊರಿನ ಜನರ ಬಾಯಿಗೆ ಗ್ರಾಸವಾಗಿದ್ದರು. ಭಗವಂತ ಜೇನು ರಾಣಿ ಕೂಡಿದ ಗಂಡುನೊಣಕ್ಕೆ ಸಾವಿನ ನಿಯಮ ಇಟ್ಟಂತೆ ಮನುಷ್ಯರಿಗೂ ಇದ್ದಿದ್ದರೆ ..ನಾಣಭಟ್ಟರ ಕತೆ ಎಂದೋ ಇಲ್ಲವಾಗಿತ್ತು ಅಂತ ಚೆನ್ನನಿಗೆ ಅನ್ನಿಸಿದರೂ ಮರುಕ್ಷಣ ತಾನೂ ಇರುತ್ತಿರಲಿಲ್ಲ ಎಂದು ಅರಿವಾಗಿ ತನ್ನಷ್ಟಕ್ಕೆ ಮುಗುಳ್ನಕ್ಕ. ಆದರೆ ಭಗವಂತ ಮನುಷ್ಯರ ಮಟ್ಟಿಗೆ ತಿದ್ದುಪಡಿಮಾಡಿ ಎರಡನೆ ಹೆಣ್ಣಿನ ತಂಟೆಗೆ ಹೋದರೆ ಸಾವು ಅಂತ ಇಡಬೇಕಾಗಿತ್ತು ಎಂದು ಆಲೋಚಿಸಿದ. ಜೇನು ಹುಳುಗಳು ಸಂಪೂರ್ಣ ಪೆಟ್ಟಿಗೆಯೊಳಗೆ ತೂರಿಕೊಂಡಿದ್ದರಿಂದ ಯೋಚನಾಸರಣಿಯಿಂದ ಹೊರಬಂದ ಚೆನ್ನ ಪೆಟಿಗೆ ಮನೆಗೆ ತೆಗೆದುಕೊಂಡುಹೋಗಲು ಸಂಜೆ ಬರಬೇಕೆಂದು ಇಲ್ಲದಿದ್ದಲ್ಲಿ ಹೂವುತರಲು ಹೋದ ಜೇನುಗಳು ಅನಾಥವಾಗುತ್ತವೆ ಎಂದು ಎಣಿಸಿ, ಪೆಟ್ಟಿಗೆಗೆ ಇರುವೆ ಮುತ್ತದಿರಲು ನುಮ್ಮಣ್ಣು ಸುತ್ತರಿಸಿ ಮನೆಯತ್ತ ಹೊರಟ.
ಕುಂಬ್ರಿಗುಡ್ಡ ಇಳಿದು ಅಡಿಕೆ ತೋಟದ ಸೊಪ್ಪಿನ ಬೆಟ್ಟದ ಒಳದಾರಿ ಹಿಡಿದ ಚೆನ್ನನಿಗೆ ಯಾರೋ ದೊಡ್ಡದಾಗಿ ಮಾತನಾಡುತ್ತಾ ಮರ ಕಡಿಯುತ್ತಿರುವ ಸದ್ದು ಕೇಳಿಸಿ ಅಲ್ಲಿಯೇ ನಿಂತ. ತೋಟಕ್ಕೆ ಸೊಪ್ಪು ಹಾಕುವ ಕಾಲ ಇದಲ್ಲ ಹಾಗಾದರೆ ಈಗ ಯಾರು ಯಾಕೆ ಮರ ಕಡಿಯುತ್ತಿರಬಹುದು, ಕಳ್ಳ ನಾಟದವರಾ? ಎಂಬಂತಹ ಹತ್ತಾರು ಪ್ರಶ್ನೆ ಒಟ್ಟಿಗೆ ಮೂಡಿತು. ಅಂತಿಮವಾಗಿ ನಿಷಣಿ ಸೊಪ್ಪಿನ ನೆನಪಾಗಿ "ಓಹೋ ಯಾರೋ ನಿಷಣಿ ಸೊಪ್ಪು ಕಡಿತಾ ಇದಾರೆ, ದುಡ್ಡಿನಾಸೆಗೆ ಮರ ಕಡ್ದು ಕಾಡು ಲೂಟಿ ಮಾಡ್ಬಿಟ್ರು ಕಳ್ರು" ಎಂದು ತನ್ನಷ್ಟಕ್ಕೆ ಹೇಳಿಕೊಂಡು ಯಾರಿರಬಹುದು ಎಂದು ತಿಳಿಯಲು ಇನ್ನಷ್ಟು ಹತ್ತಿರಕ್ಕೆ ಹೋದ. ನಿಷಣಿ ಮರದ ಹತ್ತಿರ ಹೋದಂತೆಲ್ಲಾ ನಿಷಣಿ ಸೊಪ್ಪು ಕಡಿಯವರು ತನ್ನ ಹೆಸರಲ್ಲೇ ಸುದ್ದಿ ಹೇಳುತ್ತಿರುವುದು ಕೇಳಿದಂತಾಗಿ ಅವರಿಗೆ ಕಾಣದಂತೆ ನಿಂತ.
" ಅಲ್ಲ ಮಾರಾಯ ಆ ನಾಣ ಭಟ್ರಿಗೆ ದೇವ್ರು ಕಬ್ಣದ್ದು ಹಾಕಿ ಕಳ್ಸಿದಾನ ಅಂತ ನಂಗೆ ಅನುಮಾನ" ಮರದ ಮೇಲಿದ್ದವ ಹೇಳಿದ
"ಎಂತಕಾ..?" ಸೊಪ್ಪು ಬಿಡಿಸುತ್ತಾ ಕೆಳಗಡೆ ಇದ್ದವ ಕೇಳಿದ.
"ಮತ್ತೆಂತ ಅವ್ರಿಗೆ ಅರವತ್ತು ವರ್ಷ ಆತು, ಈಗ ಚೆನ್ನನ ಹೆಂಡ್ತಿ ಸಹವಾಸ ಶುರು ಮಾಡಿದ್ರಲೋ.. ಪಾಪ ಚೆನ್ನಂಗೆ ಇದೆಲ್ಲ ಗೊತಿಲ್ಲ, ಅಂವ ಮಳ್ಳು ಜೇನು ಹಿಡೀತಾ ಕಾಡಲ್ಲಿ ಅಲಿತಾ..ರಾಣುಹುಳು ಹಿಂದೆ ಬಿದ್ದಿದ್ದಾ.... ಇಲ್ಲಿ ಅವನ ರಾಣಿ ತಲೆ ಈ ಭಟ್ರು ಕೆಡ್ಸೀರು, ಅವ್ಳು ಪಾಪದವ್ಳೂ,,, ಇವ್ರು ತಮ್ಮ ಸಂಸಾರ್ ಹಾಳು ಮಾಡೋದಲ್ದೇ ಊರಿನವ್ರನೆಲ್ಲಾ ಹಾಳು ಮಾಡ್ತ್ರು..ಮತೆ ಕೇಳಿರೇ ನಾನೇ ದೊಡ್ಡ ಜನ, ಯಕ್ಷಗಾನದಾಗೆ ಅಂತ ಹೇಳ್ತ್ರು..........ಈಗ ನಾನು ಬರ್ತಾ ಇರೋವಾಗ ಭಟ್ರು ಅವ್ರ ಮನೆಗೆ ಹೋದ್ರಪಾ... ಆ ಯಡವಟ್ಟು ಚೆನ್ನ ಎಲ್ಲಿ ಕಾಡಿಗೆ ಹೋದ್ನ ಮಳ್ಳು...................."

ಅನತಿ ದೂರದಲ್ಲಿ ನಿಂತು ತನ್ನದೇ ಸಂಸಾರದ ಕತೆ ಊರವರ ಬಾಯಲ್ಲಿರುವುದನ್ನು ಕೇಳಿದ ಚೆನ್ನನಿಗೆ ಒಮ್ಮೆ ಏನು ಮಾಡಬೇಕೆಂದು ತೋಚಲಿಲ್ಲ. ನಾಣಭಟ್ಟರ ಅಲ್ಲಿ ಇಲ್ಲಿನ ಕತೆ ತನ್ನ ಮನೆಯ ಚಾವಡಿಯಲ್ಲಿಯೇ ನಡೆಯುತ್ತಿದೆ ಎಂಬ ಲವಲೇಶದ ಅನುಮಾನವೂ ಇಷ್ಟು ದಿನ ಚೆನ್ನನಿಗೆ ಇರಲಿಲ್ಲ. ಅಕಸ್ಮಾತ್ ಕಿವಿಯಮೇಲೆ ಬಿದ್ದ ಈ ಸುದ್ದಿಯಿಂದ ಒಮ್ಮೆ ಅಧಿರನಾದ ಚೆನ್ನ ಮರುಕ್ಷಣ ಮೈಮೇಲೆ ದೇವರು ಬಂದವನಂತೆ ಕೊಂಡಿಯಲ್ಲಿದ್ದ ಕತ್ತಿಯನ್ನು ಎತ್ತಿ ಹಿಡಿದು ಮನೆಯತ್ತ ಓಡಿದ.
"ಏಯ್ ಹಲ್ಕಟ್ ರಂಡೇ ತೆಗಿ ಬಾಗಿಲ, ನಿಮ್ಮಿಬ್ಬರ ರುಂಡ ಚೆಂಡಾಡ್ತೀನಿ ಇವತ್ತು" ಎಂದು ದಬ ದಬ ಬಾಗಿಲ ಒದೆದ ಚೆನ್ನ. ಬಾಗಿಲು ತೆರೆಯಲಿಲ್ಲ. ಇನ್ನಷ್ಟು ಸಿಟ್ಟಿನಿಂದ ಬಾಗಿಲು ಒದ್ದ. ಚೆನ್ನನ ಹೊಡೆತಕ್ಕೆ ದಡಾರನೆ ಬಾಗಿಲು ಮುರಿದು ಬಿತ್ತು. ಮುರಿದ ಬಾಗಿಲ ಬದಿಯಿಂದ ನಾಣ ಭಟ್ಟರು ಓಡಲೆತ್ನಿಸಿದರು. ಉಗ್ರ ನರಸಿಂಹನ ಅವತಾರ ಎತ್ತಿ ನಿಂತಿದ್ದ ಚೆನ್ನ ಎಡ ಕೈಯಲ್ಲಿ ಭಟ್ಟರನ್ನು ಹಿಡಿದುಕೊಂಡು ಒಮ್ಮೆ ಹೆಂಡತಿಯತ್ತ ನೋಡಿ "ಈಗ ರಾಣಿ ಗೂಡಿಗೆ....."ಎಂದು ಅಬ್ಬರಿಸಿ ಕೂಗಿ ಮರುಕ್ಷಣ "ಗಂಡು....ಗಂಡು.... ಯಮನ ಬೀಡಿಗೆ" ಎಂದು ಕತ್ತಿ ಎತ್ತಿದ.
ಚೆನ್ನನ ಅಬ್ಬರಾಟಕ್ಕೆ ಮಾಡೊಳಗಿದ್ದ ಪಾರಿವಾಳ, ಗೂಡಿನಲ್ಲಿದ್ದ ಕೋಳಿ, ದಣಪೆ ಬಳಿಯಿದ್ದ ನಾಯಿ ತಮಗೆ ತಿಳಿಯದಂತೆ ಚಿತ್ರ ವಿಚಿತ್ರ ಸದ್ದು ಮಾಡುತ್ತಾ ಕಂಬಿ ಕಿತ್ತವು.
ಮನೆಯ ಅಂಗಳದಲ್ಲಿದ್ದ ಪೆಟ್ಟಿಗೆಯಲ್ಲಿ ಜೇನು ರಾಣಿಯೊಂದು ಆಗಷ್ಟೇ ತನ್ನ ಮಿಲನ ಮಹೋತ್ಸವ ಮುಗಿಸಿ ತತ್ತಿ ಸೇರಲು ಹವಣಿಸುತ್ತಿತ್ತು. ಮಿಲನಕ್ಕೆ ಕಾರಣವಾದ ಗಂಡು ಅಲ್ಲೆಲ್ಲೋ ದೂರದಲ್ಲಿ ತಿರುಗಿ ತಿರುಗಿ ಬೀಳುತ್ತಾ ಪ್ರಪಂಚಕ್ಕೆ ವಿದಾಯ ಹೇಳುತ್ತಿತ್ತು.

(ಕಳೆದ ವಾರ ಕರ್ಮವೀರದಲ್ಲಿ ಪ್ರಕಟಿತ ಕತೆ)