Saturday, October 16, 2010

ಸೊಬಗಿನ ಹಿಡ್ಲುಮನೆ


ಜಲಪಾತವೆಂದರೆ ಬೆಳ್ಳನೆಯ ನೊರೆಯ ರಾಶಿ, ಅದರ ಸೊಬಗು ಮಳೆಗಾಲದಲ್ಲಿ ಮೈದುಂಬಿ ನಿಲ್ಲುತ್ತದೆ. ಆ ಕಾರಣದಿಂದ ಜಲಪಾತ ನೋಡಲು ನಾವುನೀವೆಲ್ಲಾ ಮುಗಿಬೀಳುವುದು ಮಳೆಗಾಲದಲ್ಲಿಯೇ. ಆದರೆ ಮಳೆಗಾಲದಲ್ಲಿ ನೋಡಲಾಗದ ಜಲಪಾತಗಳೂ ಇವೆ ಎಂದರೆ ಅಚ್ವರಿಯೇ ಸರಿ. ಅಂತಹ ಅಪರೂಪದ ಜಲಪಾತ ಹಿಡ್ಲುಮನೆ ಫಾಲ್ಸ್. ಏಳು ಸುತ್ತಿನ ಕೋಟೆ ಅಲ್ಲೊಬ್ಬ ರಾಜಕುಮಾರಿ ಎಂಬ ಕತೆ ಎಲ್ಲರಿಗೂ ತಿಳಿದದ್ದೆ. ಅದೇ ರೀತಿ ಈ ಏಳು ಹಂತದಲ್ಲಿ ಬೀಳುವ ಹಿಡ್ಲುಮನೆ ಜಲಪಾತ ರಾಜಕುಮಾರಿಯ ಕತೆಯಷ್ಟೇ ಮುದನೀಡುತ್ತದೆ. ಸರಿ ಸುಮಾರು ಒಂದು ಕಿಲೋಮೀಟರ್ ದೂರದಿಂದ ಕಪ್ಪು ಶಿಲೆಯಮೂಲಕ ನಾಟ್ಯವಾಡುತ್ತಾ ಹರಿದುಬರುವ ಹಿಡ್ಲುಮನೆ ಜಲಪಾತ ಮನಸ್ಸಿಗೆ ಆಹ್ಲಾದಕರ ಎನಿಸುವುದು ನಿಶ್ಚಯ. ಆದರೆ ಜಲಪಾತ್ ವೀಕ್ಷಣೆಗೆ ನೀರುಬೀಳುವ ಜಾಗದಲ್ಲಿಯೇ ಶಿಲೆಗಳ ಮೂಲಕ ಸಾಗಬೇಕಾದ್ದರಿಂದ ಮಳೆಗಾಲದ ನಂತರದ ಜಲಪಾತವಿದು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಪರ್ವತದಿಂದ ಹೊರಡುವ ನೀರು ಎರಡು ಕವಲಾಗಿ ಒಂದೆಡೆ "ಅರಿಶನಗುಂಡಿ" ಎಂಬ ಜಲಪಾತವನ್ನು ನಿರ್ಮಿಸಿದರೆ ಇನ್ನೊಂದೆಡೆ "ಹಿಡ್ಲುಮನೆ" ಎಂಬ ಜಲಪಾತವನ್ನು ನಿರ್ಮಿಸಿದೆ. ಅರಿಶಿನಗುಂಡಿ ತಾಕತ್ತಿನ ಜನರಿಗೆ ಮಾತ್ರಾ ಸೀಮಿತ. ಆದ್ರೆ ಹಿಡ್ಲುಮನೆ ಮಾತ್ರಾ ಹಾಗಲ್ಲ ಸಾಮಾನ್ಯ ಜನರೆಲ್ಲ ಅನುಭವಿಸಬಹುದು. ಹೊಸನಗರ-ಕೊಲ್ಲೂರು ದಾರಿಯಲ್ಲಿ ಸಿಗುವ ನಿಟ್ಟೂರಿಗೆ ಬಂದು ಅಲ್ಲಿಂದ ವಾಹನ(ಒಂದು ಜೀಪಿಗೆ ೫೦೦ ರೂ ಬಾಡಿಗೆ) ಮುಖಾಂತರ ಎಂಟು ಕಿಲೋಮೀಟರ್ ದೂರ ಕ್ರಮಿಸಿದರೆ ಹಿಡ್ಲುಮನೆ ಜಲಪಾತ ಬುಡದ ವರೆಗೂ ತಲುಪಬಹುದು. ಆನಂತರ ಬತ್ತ-ಕಬ್ಬಿನ ಗದ್ದೆಯ ದಾರಿಯಲ್ಲಿ ಅರ್ದ ಕಿಲೋಮೀಟರ್ ಸಾಗಿದರೆ "ಹಿಡ್ಲುಮನೆ" ಜಲಪಾತದ ಬುಡ ಸಿಗುತ್ತದೆ. ವಸತಿ ವ್ಯವಸ್ಥೆ ಬಯಸುವವರಿಗೆ ನಿಟ್ಟೂರಿನ ಸಮೀಪದ ಕಲ್ಯಾಣಿ ನಿಸರ್ಗಧಾಮದ ಮಂಜಣ್ಣ ಸದಾ ಸಿದ್ದ.
ಸಾಮಾನ್ಯವಾಗಿ ಜಲಪಾತಗಳೆಂದರೆ ಕಡಿದಾದ ಜಾಗದಿಂದ ನೇರವಾಗಿ ಬೀಳುತ್ತದೆ. ಆದರೆ ಓರೆಯಾಗಿ ಬೀಳುವುದು ಹಿಡ್ಲುಮನೆ ಜಲಪಾತದ ವೈಶಿಷ್ಟ್ಯ. ಜಲಪಾತ ನೋಡುವವರು ನೀರುಬೀಳುವ ಜಾಗದಲ್ಲಿಯೇ ಏರುತ್ತಾ ಸಾಗಬೇಕು. ಹಾಗಾಗಿ ಭರ್ಜರಿ ಮಳೆಗಾಳದ ದಿನಗಳಾದ ಜೂನ್ ನಿಂದ ಸಪ್ಟೆಂಬರ್ ತಿಂಗಳುಗಳಲ್ಲಿ ಈ ಜಲಪಾತ ನೋಡಲು ಕಷ್ಟಕರ. ಆನಂತರದ ದಿನಗಳಲ್ಲಿ ಜಲಪಾತದ ದಾರಿಯಲ್ಲಿ ಸಾಗುತ್ತಾ ಹಂತಹಂತವಾಗಿ ಏಳು ಮಜಲುಗಳಲ್ಲಿ ಹರಿಯುವ ಜಲಪಾತದ ಸೊಬಗನ್ನು ಅನುಭವಿಸಬಹುದು.
ನಡುಬೇಸಿಗೆಯ ದಿನಗಳಲ್ಲೂ ಸೂರ್ಯನ ಕಿರಣವನ್ನು ನೆಲಕ್ಕೆ ಬಿಟ್ಟುಕೊಡದ ಬೃಹತ್ ಮರಗಳ ಸಾಲುಗಳನ್ನು ಹಾಗೂ ಪಶ್ಚಿಮಘಟ್ಟಗಳ ಸೃಷ್ಟಿಯನ್ನು ಕಣ್ತುಂಬಿಕೊಳ್ಳಬಹುದು.
ಒಂದು ಕಿಲೋಮೀಟರ್ ದೂರದವರೆಗೂ ಕಪ್ಪುಶಿಲೆಗಳ ಪದರುಗಳ ನಡುವೆ ನಾಟ್ಯವಾಡುತ್ತಾ ಬೆಳ್ಳಿನೊರೆಯಂತೆ ಹರಿಯುವ ನೀರು ಎಂತಹವರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಪ್ರಕೃತಿಪ್ರಿಯರಿಗೆ ಇಷ್ಟವಾಗುತ್ತದೆ ಈ ಶಿಲಾಪಾತದಲ್ಲಿನ ಜಲಪಾತ. ಮಾರ್ಚಿನ ನಂತರ ನೀರಿನ ಓಘ ಕಡಿಮೆಯಾದರೂ ಕಪ್ಪುಕಲ್ಲುಗಳ,ಹಸಿರು ಕಾಡುಗಳ ಸೊಬಗನ್ನು ಸವಿಯಬಹುದು.
(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)

Monday, October 11, 2010

ಸೇವಂತಿಯೇ ಸೇವಂತಿಯೇ
"ಈ ವರ್ಷ ಎಷ್ಟು ಪಿಂಟಾಲ್ ಸೇವಂತೀ ಬೇಳ್ದೀಯಪ್ಪಾ..? ಎಲ್ಡು ಎಕ್ರೆಗೆ ಹಾಕಿದೀನಿ ಎಷ್ಟು ಬರ್ತಾವ್ ನೋಡ್ಬೇಕು" ಎಂದು ಸೇವಂತಿಯೆಂಬ ಸುಂದರ ಹೂವಿನ ಮಾತುಗಳು ಕೇಳಿಬಂದರೆ ಅದು ಬಯಲುಸೀಮೆಯ ರೈತರ ಬೆಳೆ ಹಾಗೂ ಬದುಕಿನ ಕತೆ. "ನಿಮ್ಮ ಮನೇಲಿ ಕಾರದ ಕಡ್ಡಿ, ಅರಿಶಿನ ಮುಡಿ ಶ್ಯಾವಂತಿಗೆ ಹಿಳ್ಳು ಇದ್ರೆ ನಂಗೊಂದು ಬೇಕು" ಎಂದು ಶ್ಯಾವಂತಿಗೆ ಎಂಬ ನಯನಮನೋಹರ ಹೂವಿನ ಹೆಸರು ಕೇಳಿತೆಂದರೆ ಅದು ಮಲೆನಾಡಿನ ಹೆಂಗಳೆಯರ ಚಿಟ್ಟೆ ಶ್ಯಾವಂತಿಗೆ ಹೂವಿನ" ಹವ್ಯಾಸದ ಕತೆ.
ಸೇವಂತಿ, ಶ್ಯಾವಂತಿ ಎಂಬ ಪುಷ್ಪ ಹೀಗೆ ಒಂದೆಡೆ ವ್ಯವಹಾರವಾಗಿ ಇನ್ನೊಂದೆಡೆ ಹವ್ಯಾಸವಾಗಿ ಹಾಸುಹೊಕ್ಕಾಗಿದೆ. ಬಯಲುಸೀಮೆಯಲ್ಲಿ ಎಕರೆಗಟ್ಟಲೆ ಹೊಲದಲ್ಲಿ ಒಂದೆರಡು ಬಣ್ಣದಲ್ಲಿ ಅಂದವಾಗಿ ನಿಲ್ಲುವ ಸೇವಂತಿ ಮಲೆನಾಡಿನ ಅಂಗಳದ ತುದಿಯ ಚಿಟ್ಟೆ ಎಂದು ಕರೆಯಿಸಿಕೊಳ್ಳುವ ಮೂರಡಿ ಅಗಲದ ಜಾಗದಲ್ಲಿ ಶ್ಯಾವಂತಿಗೆಯಾಗಿ ಹತ್ತು ಹಲವಾರು ಬಣ್ಣಗಳಲ್ಲಿ ವಿಧವಿಧ ಆಕಾರದಲ್ಲಿ ಅರಳಿ ನಿಲ್ಲುತ್ತಾಳೆ.
ಜಡಿ ಮಳೆಹೊಡೆದರೆ ಶ್ಯಾವಂತಿಗೆ ಗಿಡ ಬದುಕುವುದಿಲ್ಲ ಹಾಗಾಗಿ ಮಳೆ ತಗುಲದ ಸೂರಂಚಿನ ಚಿಟ್ಟೆ ಮಲೆನಾಡಿನ ಮಹಿಳೆಯರ ಹೂದೋಟವಾಗುತ್ತದೆ. ಜೂನ್ ತಿಂಗಳಿನಿಂದ ಬಂಧುಬಳಗ ನೆಂಟರಿಷ್ಟರ ಮನೆಯಿಂದ ಹಾಗೂ ಸ್ವಂತ ಖಜಾನೆಯಲ್ಲಿ ಕಾಪಿಟ್ಟ ಹಿಳ್ಳುಗಳು ಚಿಟ್ಟೆಯಲ್ಲಿ ಆರೈಕೆ ಪಡೆಯಲಾರಂಬಿಸುತ್ತವೆ. ಅಕ್ಟೋಬರ್ ಹೊತ್ತಿಗೆ ಮೋಡಮಾಯವಾಗಿ ಬಿಸಿಲ ರೇಷ್ಮೆ ಗಿಡದ ನೆತ್ತಿಗೆ ಬೀಳಲಾರಂಬಿಸಿದಕೂಡಲೇ ನಾನಾ ತರಹದ, ವಿವಿಧ ಬಣ್ಣದ ಹೂವುಗಳು ಅರಳಲಾರಂಬಿಸುತ್ತವೆ. ಆವಾಗ ಹೂದೋಟದ ಒಡತಿಯ ಗತ್ತು ಬದಲಾಗುತ್ತದೆ. ಹೆಚ್ಚು ಹೆಚ್ಚು ಹೂವುಗಳು ಅರಳಿ ನಿಂತರೆ ಆ ವರ್ಷ ಅವರ ಸುದ್ದಿ ಹತ್ತಿರದ ಊರುಗಳಿಗೆಲ್ಲಾ ಹಬ್ಬಿ ವೀಕ್ಷಕರ ದಂಡು ಹರಿದುಬರುತ್ತದೆ. ನಿತ್ಯ ಕಂಬಳಿ ಹುಳುವಿನಿಂದ ರಕ್ಷಣೆ ನೀಡಲು ಬೂದಿ ಸೋಕುವುದು, ಒಣಗಿದ ಎಲೆ ಕೀಳುವುದು ಒಡತಿಯ ಎರಡು ತಾಸು ಸಮಯ ಕಳೆಯುವ ಕೆಲಸವಾಗುತ್ತದೆ. ಅಪ್ಪಿತಪ್ಪಿಯೂ ಹೂವನ್ನು ಗಿಡದಿಂದ ಕೀಳದೆ ಅಲ್ಲಿಯೇ ಅಂದವನ್ನು ಸವಿಯುವುದು ಮಲೆನಾಡ ಮಹಿಳೆಯರ ಈ ಹವ್ಯಾಸದ ಪ್ರಮುಖ ಅಂಶಗಳಲ್ಲೊಂದು. ಹಾಗಂತ ನೋಡಲು ಬರುವ ವಿಶ್ವಾಸಕರಿಗೆ ಖಾಲಿ ಜಡೆಯಿಂದ ಕಳುಹಿಸುವ ಹಾಗಿಲ್ಲ, ಅದಕ್ಕಾಗಿ ಮೂಲೆಯಲ್ಲಿ ಒಂದೆರಡು ಬಿಳಿ ಬಣ್ಣದ ಆದರೆ ಹೆಚ್ಚು ಹೂವು ಬಿಡುವ ಶ್ಯಾವಂತಿಗೆ ಮುಡಿಗೇರಲು ಸಿದ್ಧವಾಗಿರುತ್ತದೆ.ಹೀಗೆ ಒಂದೆಡೆ ವಹಿವಾಟು ನಡೆಸಿ ಇನ್ನೊಂದೆಡೇ ಹವ್ಯಾಸಕ್ಕೆ ಬಳಕೆಯಾಗುತ್ತಿರುವ ಸೇವಂತಿ ತನ್ನ ಸುವಾಸನೆ ಹಾಗೂ ಅಂದದಿಂದ ಗಾರ್ಡನ್ ಪ್ರಿಯರ ಮನಸೂರೆಗುಳ್ಳುತ್ತಿದೆ
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ

Sunday, October 10, 2010

ಮೀನು ಕುಣಿ


ಮೀನು ಎಂಬ ಎರಡಕ್ಷರ ಹಲವರಿಗೆ ಬಾಯಲ್ಲಿ ನೀರು ತರಿಸುತ್ತದೆ. ಅದೂ ಪುಕ್ಕಟ್ಟೆ ಮೀನು ಅಂದರೆ ಇನ್ನಷ್ಟು ಖುಷಿ ನೀಡುವುದು ಖಂಡಿತ. ಹಾಗೆ ರುಚಿರುಚಿಯಾದ ಪುಕ್ಕಟ್ಟೆ ಮೀನು ತಿನ್ನಲು ಮಲೆನಾಡಿನ ಹೊಳೆಯಂಚಿನ ಊರುಗಳಲ್ಲಿ ನೀವು ವಾಸವಾಗಿರಬೇಕಷ್ಟೆ, ಆಗ ಮಳೆಗಾಲದ ನಂತರ ಮೀನೂಟ ದಿನಾಲೂ ಉಚಿತ.
ಜಡಿಮಳೆ ಮುಗಿದ ಮಾರನೇ ದಿನ ಮಲೆನಾಡಿನ ಹೊಳೆಬದಿಯಲ್ಲಿ ಮೂರ್ನಾಲ್ಕು ಜನ ನಿಂತಿದ್ದಾರೆಂದರೆ ಅವರು ಅಲ್ಲಿ ಕುಣಿ ಹಾಕಿದ್ದಾರೆ ಎಂದರ್ಥ. ಹರಿವ ನೀರಿಗೆ ಅಡಿಕೆ ಮರದಿಂದ ದೋಣಿಯನ್ನು ಮಾಡಿ ಹೊಳೆಯ ಬದಿಯಲ್ಲಿ ಬೀಳುವಂತೆ ಮಾಡುತ್ತಾರೆ. ಹಾಗೆಯೇ ಆ ನೀರು ಹರಿವ ಬುಡದಲ್ಲಿ ಒಂದು ಡಬ್ಬವನ್ನಿಟ್ಟು ಮನೆ ಸೇರುತ್ತಾರೆ. ಆ ಮೀನುಗಳೋ ಮಳೆಗಾಲ ಮುಗಿಯೆತೆಂದಾಗ ನೀರಿನ ಮೂಲ ಸೇರಿಕೊಳ್ಳುವ ತವಕದಲ್ಲಿ ಹರಿವ ಹೊಳೆಯ ವಿರುದ್ಧವಾಗಿ ಹೋಗುತ್ತಿರುತ್ತವೆ. ಹಾಗೆ ಹೊರಟ ಮೀನುಗಳಿಗೆ ಈ ಸಣ್ಣ ಸಣ್ಣ ತೊರೆಗಳು ಅಪ್ಯಾಯಮಾನವೆನಿಸಿ ಅಲ್ಲಿ ಹೋಗಿ ನಂತರ ದಿಡೀರನೆ ಸಿಗುವ ಇಳಿಜಾರಿನಲ್ಲಿ ಜಾರುತ್ತಾ ಡಬ್ಬಿಯಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ಸಾವಿಗೆ ತಾವೇ ಚರಮಗೀತೆ ಹಾಡುತ್ತಾ ಕುಣಿ ಹಾಕಿದವರು ಬರುವವರೆಗೂ ಅಲ್ಲಿಯೇ ಪಳಕ್ಕನೆ ಎಗರುತ್ತಾ ಕುಣಿಯುತ್ತಾ ಇರುತ್ತವೆ. ಸಂಜೆಮುಂದೆ ಇಟ್ಟುಹೋಗಿದ್ದ ಡಬ್ಬ ಬೆಳಿಗ್ಗೆ ಬರುವ ಹೊತ್ತಿಗೆ ಮೀನುಗಳಿಂದ ತುಂಬಿತುಳುಕುತ್ತಿರುತ್ತದೆ. ಒಂದು ಕೂಣಿಯನ್ನು ಮೂರ್ನಾಲ್ಕು ಜನ ಸೇರಿ ಹಾಕುವುದರಿಂದ ಅಲ್ಲಿ ಸಮಪಾಲು. ಪಾಲು ಹಂಚಿಕೊಂಡು ಮತ್ತೆ ಡಬ್ಬ ಅಲ್ಲಿಯೇ ಇಟ್ಟು ಹೊರಟರೆ ಮತೆ ಆಯುಷ್ಯ ಕಡಿಮೆಯಾದ ಮೀನುಗಳ ದಾರಿ ಅದರತ್ತ. ಮನುಷ್ಯರ ಚಿತ್ತ ಡಬ್ಬದತ್ತ.
ಹೀಗೆ ಸುಲಭವಾಗಿ ಮೂರ್ನಾಲ್ಕು ತಿಂಗಳು ಮೀನಿನೂಟ ಪುಕ್ಸಟ್ಟೆ ಮಾಡುವ ಮಲೆನಾಡು ಮಂದಿಯ ಅದೃಷ್ಟ ಯಾರಿಗುಂಟು ಯಾರಿಗಿಲ್ಲ. ಆದರೆ ಹೀಗೆ ಮೂರ್ನಾಲ್ಕು ತಿಂಗಳು ಪುಕ್ಕಟ್ಟೆ ರುಚಿ ಹಚ್ಚಿಸಿದ ಮೀನು ನಂತರದ ಒಂಬತ್ತು ತಿಂಗಳು ಹತ್ತಿದ ರುಚಿ ತಣಿಸಲು ಜೇಬು ಖಾಲಿಮಾಡಿಸಿಬಿಡುತ್ತದೆ.

(ವಿಕೆ ಲವಲವಿಕೆಯಲ್ಲಿ ಶನಿವಾರ ಪ್ರಕಟಿತ ಬರಹ)