Friday, September 18, 2009

ಕಾಪ್ಯಾಂತು ಮರಣಾನ್ ಮುಕ್ತಿಃ



ಬೆಳಿಗ್ಗೆ ಮೊದಲ ಭೇಟಿಯ ಹಲೋ ನಂತರ "ಕಾಫಿ ಆಯ್ತಾ?" ಎಂಬ ಪ್ರಶ್ನೆಯೊಂದಿಗೆ ನಾವು ಮತ್ತೊಬ್ಬರನ್ನು ಮಾತನಾಡಿಸುತ್ತೇವೆ. ಅದೊಂದು ಡೈಲಾಗ್ ನೊಂದಿಗೆ ಕಾಫಿಗೆ ಮರ್ಯಾದೆ ಆರಂಭ. ಹುಡುಕು ಎನ್ನುವುದಕ್ಕೆ ಗೂಗಲ್ ಪರ್ಯಾಯವಾದ ಹಾಗೆ "ಹಲೋ" ಎನ್ನುವುದಕ್ಕೆ ಕಾಫ್ಹಿ ಆಯ್ತಾ ಎಂದು ಬೆಳಗಿನ ಸಮಯದಲ್ಲಿ ಬದಲಾಗಿದ್ದು ನಿಜ.

ಇರಲಿ ಈ ಕಾಪಿ ಎಂದು ನಮ್ಮ ಹಳ್ಳಿಗರ ಮುಖಾಂತರ ಕರೆಯಿಸಿಕೊಂಡಿರುವ ಕಾಫಿ ಅದ್ಯಾವುದೋ ರಾಜರ ಕಾಲದಲ್ಲಿ ವಿದೇಶದಿಂದ ಬಂದು ನಮ್ಮ ಭಾರತದಲ್ಲಿ ಮನೆಮಾತಾಯಿತಂತೆ. ಅವೆಲ್ಲ ಅಂತೆಕಂತೆಗಳ ಸಂತೆಯಾಯಿತು ಈಗ ವಾಸ್ತವಕ್ಕೆ ಬರೋಣ.

ಬೆಳಿಗ್ಗೆ ಎದ್ದಕೂಡಲೆ ಒಂದು ಲೋಟ ಕಾಪಿ..! ಕುಡಿಯದಿದ್ದರೆ ಬಹಳಷ್ಟು ಜನರಿಗೆ ದಿನವೇ ಆರಂಭವಾಗುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ಮಲಗುವ ಮುಂಚೆಯೂ ಕಾಫಿ ಬೇಕು. ದಿನಕೆ ಹತ್ತೆಂಟು ಲೋಟ ಕಾಫಿ ಕುಡಿಯುವವರೂ ಇದ್ದಾರೆ ಒಂದೇ ಲೋಟ ಕುಡಿದು " ಅಯ್ಯೋ ಹೀಟ್ ಆಗಿ ಬಾಯೆಲ್ಲಾ ಹುಣ್ಣಾಗೋಗ್ತ ಬ್ಯಾಡ" ಎನ್ನುವವರೂ ಇದ್ದಾರೆ. ಹಾಲಿಗೆ ಡಿಕಾಕ್ಷನ್ ಬೆರೆಸಿ ಲೈಟ್ ಕಾಫ್ಹಿ ಕುಡಿಯುವವರಿಂದ ಹಿಡಿದು ಡಿಕಾಕ್ಷನ್ ಗೆ ಹಾಲು ಬೆರೆಸಿ ಸ್ಟ್ರಾಂಗ್ ಕಾಫಿ ಕುಡಿಯುವ ಜನರ ವರೆಗೆ ಹತ್ತಾರು ಬಗೆ ಜನ ಈ ಕಾಪ್ಯಾಭಿಮಾನಿಗಳಿದ್ದಾರೆ. ಬೆಡ್ ಕಾಫಿ, ಬ್ರೆಡ್ ಕಾಫಿ, ಮುಂತಾದ ಬಗೆಯ ಜತೆ ಕಾಪಿ ತಿಂಡಿ ಆತನ ಎಂದು ಕರೆಯಿಸಿಕೊಳ್ಳುವ ರಾಜಾತಿಥ್ಯ ಕಾಫಿಗೆ.

ಕಾಫಿಯಲ್ಲಿ ಕೆಫಿನ್ ಎಂಬ ರಾಸಾಯನಿಕ ಇರುತ್ತದೆ ಅದು ಸಣ್ಣ ಪ್ರಮಾಣದ ಮಜ ಕೊಡುತ್ತದೆ ಎನ್ನುವ ಕಾರಣಕ್ಕೆ ಅದು ನಮ್ಮನಿಮ್ಮೆಲ್ಲರಿಗೆ ಅಡಿಕ್ಟ್ ಆಗಿದೆ. ( ಕಾಫಿಯಲ್ಲಿ ಕೆಫಿನ್ ಇದೆ ಹಾಗಾದರೆ ಟಿ ಯಲ್ಲಿ ಏನಿದೆ ? ಎಂದು ಮೇಷ್ಟು ಕೇಳಿದಾಗ ಟಿ ಯಲ್ಲಿ ಟಿಫಿನ್ ಇದೆ ಎಂದು ಗುಂಡ ಹೇಳಿದ ಎಂಬ ಒಂದು ಜೋಕ್ ಚಾಲ್ತಿಯಲ್ಲಿತ್ತು) ಆದರೆ ವಾಸ್ತವವಾಗಿ ಕಾಫಿಯಲ್ಲಿ ಡ್ರೌಜೀನೆಸ್ ತರಿಸಲು ಅದಕ್ಕೆ ಚಿಕೋರಿ ( ಚಕೋರಿ...!) ಎಂಬ ಗಡ್ಡೆಯ ಪುಡಿಯನ್ನು ಬೆರೆಸುತ್ತಾರೆ. ಆ ಗಡ್ಡೆ ನಮ್ಮನ್ನು ಕಾಫಿಗೆ ಅಡಿಕ್ಟ್ ಮಾಡಿಬಿಡುತ್ತದೆ . ಚಿಕೋರಿ (ಆ ಶಬ್ಧವೇ ಹಲವರಿಗೆ ಒಂಥರಾ ಅಮಲು ತರಿಸುತ್ತದೆ ಎನ್ನುವುದು ಗುಟ್ಟಿನ ವಿಚಾರ) ರಹಿತ ಕೇವಲ ಕಾಫಿಬೀಜವನ್ನು ಹುರಿದು ಪುಡಿ ಮಾಡಿಸಿ ಅದಕ್ಕೆ ಏನೂ ಮಿಶ್ರ ಮಾಡದೇ ಹಾಗೆಯೇ ಹಾಲು ಸಕ್ಕರೆ ಬೆರೆಸಿ ಕುಡಿದರೆ ಕಾಫಿಯ ಮಜ ಬೇರೆಯೇ ಇದೆ.

ಅವಕಾಶ ಸಿಕ್ಕರೆ ಚಿಕೋರಿ ರಹಿತ ಕಾಫಿ ಕುಡಿಯಿರಿ ಮತ್ತು ಅನುಭವ ಹೇಳಿರಿ. ಹ್ಯಾಪಿ ಕಾಫಿಡೆ...

Thursday, September 17, 2009

ಕದ್ದ ಕತೆ

ಹುಡುಗನೊಬ್ಬ ಪುಸ್ತಕವೊಂದನ್ನು ಓದುತ್ತಿದ್ದ . ಅದರಲ್ಲಿ ಹೀಗೊಂದು ಸಾಲು ಇತ್ತು. "ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ" . ಹುಡುಗನಿಗೆ ಖುಷಿಯಾಯಿತು. ಕಾರಣ ಆತನ ಬಳಿ ಒಂದು ರೂಪಾಯಿ ಇತ್ತು. ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಅಂದಾದಮೇಲೆ ಮುಗಿಯಿತಲ್ಲ. ತಾನು ಬೇಕಷ್ಟು ರೂಪಾಯಿಗಳನ್ನು ಸಂಗ್ರಹಿಸಿಕೊಳ್ಳಬಹುದು ಎಂದು ಆಲೋಚಿಸಿ ಹೊರಟ. ಒಂದು ರೂಪಾಯಿಯನ್ನು ಕೈಯಲ್ಲಿ ಹಿಡಿದು ಊರೆಲ್ಲಾ ಸುತ್ತಾಡಿದ . ಆದರೆ ಸುತ್ತಾಡಿ ಸುಸ್ತಾಯಿತೇ ಹೊರತು ಹುಡುಗನ ರೂಪಾಯಿ ರೂಪಾಯಿಯನ್ನು ಸೆಳೆಯಲಿಲ್ಲ. ಹೀಗೆ ತಿರುಗಾಡಿ ತಿರುಗಾಡಿ ಆತ ಅಂತಿಮವಾಗಿ ಅಂಗಡಿಯೊಂದರ ಬಳಿ ಬಂದ. ಅಂಗಡಿಯಾತ ಗಲ್ಲದಲ್ಲಿ ಕುಳಿತು ಜಣಜಣ ಅಂತ ಹಣ ಎಣಿಸುತ್ತಿದ್ದ. ಹುಡುಗನಿಗೆ ಈಗ ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಅಂಬುದರಲ್ಲಿ ಸ್ವಲ್ಪ ನಂಬಿಕೆ ಬರತೊಡಗಿತು. ಹುಡುಗ ಅಂಗಡಿಯ ಹೊರಗಡೆ ನಿಂತು ತನ್ನ ಬಳಿಯಿದ ರೂಪಾಯಿಯನ್ನು ಹಿಡಿದುಕೊಂಡು ಹಿಂದೆ ಮುಂದೆ ತಿರುಗಿಸತೊಡಗಿದೆ. ಹೀಗೆ ಕೆಲಹೊತ್ತು ಕಳೆದರೂ ರೂಪಾಯಿ ರೂಪಾಯಿಯನ್ನು ಸೆಳೆಯಲಿಲ್ಲ. ಆನಂತರ ಹುಡುಗ ತನ್ನಬಳಿ ಇದ್ದ ರೂಪಾಯಿಯನ್ನು ಅಂಗಡಿಯ ಗಲ್ಲಪೆಟ್ಟಿಗೆಯತ್ತ ಎಸೆದ. ಹಾಗೆ ಮಾಡಿದಾಗ ತನ್ನ ರೂಪಾಯಿ ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಹೆಚ್ಚು ರೂಪಾಯಿಯನ್ನು ಎಳೆದುಕೊಂಡು ಬರುತ್ತದೆ ಎಂಬುದು ಹುಡುಗನ ಲೆಕ್ಕಾಚಾರ. ರೂಪಾಯಿಯನ್ನು ಗಲ್ಲಾಪೆಟ್ಟಿಗೆಯತ ಎಸೆದು ಗಂಟೆಗಳ ಕಾಲ ಅಂಗಡಿ ಮುಂದೆ ಕಾದರೂ ಹುಡುಗನ ರೂಪಾಯಿ ವಾಪಾಸು ಬರಲಿಲ್ಲ. ಆಗ ಹುಡುಗ " ಪುಸ್ತಕದಲ್ಲಿ ಸುಳ್ಳು ಬರೆದಿದ್ದಾರೆ" ಎಂದು ತನ್ನಷ್ಟಕೆ ಗೊಣಗಿಕೊಂಡ. ಹುಡುಗನ ಗೊಣಗಾಟ ಅಂಗಡಿಯಾತನಿಗೆ ಕೇಳಿಸಿತು. ಆತ ಏನು? ಎಂದು ವಿಚಾರಿಸಿದ. ಅದೇ ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಅಂತ ಒಂದು ಪುಸ್ತಕದಲ್ಲಿ ಬರೆದಿತ್ತು ಅ ದನ್ನ ನಾನು ನಂಬಿ ಮೋಸ ಹೋದೆ, ಅದು ಸುಳ್ಳು " ಎಂದು ತಾನು ಗಲ್ಲಾಪೆಟ್ಟಿಗೆಯತ ರೂಪಾಯಿ ಎಸೆದದ್ದನ್ನು ಹೇಳಿದ

ಅದಕ್ಕೆ ಅಂಗಡಿಯಾತ ಹೇಳಿದೆ" ಅಯ್ಯೋ ಹುಡುಗಾ ಪುಸ್ತಕದಲ್ಲಿ ನಿಜವನ್ನೇ ಬರೆದಿದೆ, ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಎನ್ನುವುದು ನಿಜವಾಯಿತಲ್ಲೋ, ಇನ್ನು ನೀನು ಹೊರಡು" ಎಂದ.

ಹೌದು ಕಣ್ರೀ ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ. ನಿಮ್ಮ ಬಳಿ ಎಷ್ಟಿದೆ ಅದಕ್ಕಿಂತ ಹೆಚ್ಚಿದ್ದವರ ಬಳಿ ಅದು ಸೇರುತ್ತದೆ. ಕತೆ ಚೆನ್ನಾಗಿದೆ ಅಲ್ವಾ?. ಅರ್ಥವಾಗದಿದ್ದರೆ ಮತ್ತೆ ಓದಿ ನನ್ನ ಅನ್ನಬೇಡಿ.

Wednesday, September 16, 2009

ಸನ್ಯಾಸಿಯ ಕತೆ

ಸನ್ಯಾಸ ಎಂದರೆ ಪ್ರವಾಹದ ವಿರುದ್ಧ ಈಜುವುದು ಅಂತ ಅನ್ನಬಹುದು. ಅಲ್ಲಿ ಎಷ್ಟರಮಟ್ಟಿಗಿನ ಮಾನಸಿಕ ಸ್ಥಿರತೆ ಇದೆಯೋ ಅಷ್ಟರ ಮಟ್ಟಿಗಿನ ಏರುಗತಿ ಸಾದ್ಯ. ಹಾಗಾಗಿ ಪ್ರಸ್ತುತಕ್ಕೆ ಒಂದು ಸ್ನ್ಯಾಸಿಯ ಕತೆಯತ್ತ ಹೊರಳೋಣ.

ಯಥಾಪ್ರಕಾರ ಒಂದಾನೊಂದು ಊರು ಅಲ್ಲೊಬ್ಬ ಸನ್ಯಾಸಿ ಇದ್ದ. ಆತ ಜಪ ತಪ ಗಳಲ್ಲಿ ಮುಳುಗೇಳುತ್ತಾ ಪಾಮರರಿಗೆ ಸನ್ಮಾರ್ಗ ತೋರಿಸುತ್ತ ತಾನೂ ಭಗವಂತನತ್ತ ಸಾಗುವ ಪಯಣದಲ್ಲಿ ಮಗ್ನನಾಗಿದ್ದ. ಹೀಗೆ ಇರಬೇಕಾದ ಒಂದು ದಿನ ಆ ಊರಿನಲ್ಲಿ ಘಟನೆಯೊಂದು ನಡೆಯಿತು. ಮದುವೆಯಾಗದ ಸುಂದರಿಯೊಬ್ಬಳು ಮಗುವಿಗೆ ಜನ್ಮ ನೀಡಿದಳು. ಜಡಭರಿತ ಊರಿನ ಜನರಿಗೆ ಮಾತನಾಡಲು ಭರ್ಜರಿ ವಿಷಯ. ಯಾರು? ಆಕೆಯ ಈ ಸ್ಥಿತಿಗೆ ತಂದವನು ಎಂಬ ಕುತೂಹಲದ ಮಾತುಗಳು ಹರಿದಾಡಲಾರಂಬಿಸಿತು. ಹೀಗೆಲ್ಲಾ ಆಗುವುದು ಎಂದರೆ ಊರಿನ ಮರ್ಯಾದೆ ಹರಾಜು ಎಂಬ ಲೆಕ್ಕಾಚಾರ ಹಿರಿಕರಿದ್ದಾದ್ದರಿಂದ ಸರಿ ಪಂಚಾಯ್ತಿ ಕಟ್ಟೆ ಸೇರಿಯಾಯಿತು. ಹಸುಗೂಸಿನ ತಾಯಿ ಮಗುವಿನ ಸಮೇತ ಪಂಚಾಯ್ತಿ ಕಟ್ಟೆ ಏರಿದಳು. ಪಂಚರ ಸಮ್ಮುಖದಲ್ಲಿ ವಿಚಾರಣೆ ಆರಂಭಗೊಂಡು ಅಂತಿಮವಾಗಿ ಆಕೆಯ ಬಳಿ ಈ ಕೂಸಿನ ತಂದೆ ಯಾರು? ಮತ್ತು ಆತನನ್ನು ದಂಡಿಸಬೇಕು ಎಂದು ಕೇಳಲಾಯಿತು. ಬಹಳ ಹೊತ್ತು ಸುಮ್ಮನಿದ್ದ ಆಕೆ ಕೊನೆಗೂ ಒತ್ತಡ ತಡೆಯಲಾರದೆ " ಈ ಕೂಸಿನ ಅಪ್ಪ ಅದೇ ಸನ್ಯಾಸಿ" ಎಂದು ಹೇಳಿದಳು.

ಒಮ್ಮೆಲೆ ಇಡೀ ಸಭೆ ಮೌನವಾಯಿತು. ಆತ ಹೇಳಿಕೇಳಿ ಮಹಾನ್ ಆಧ್ಯಾತ್ಮಿಕ ಮನುಷ್ಯ ಅವನನ್ನು ಶಿಕ್ಷಿಸುವುದು ಹೇಗೆ? ಎಂಬ ವಿಷಯ ಎಲ್ಲರಲ್ಲಿಯೂ. ಹೀಗೆ ಗಂಟೆಗಟ್ಟಲೆ ಜಿಜ್ಞಾಸೆ(ಈಗಿನ ಜಿಗ್ನಾಸೆ) ನಡೆದು ಅಂತಿಮವಾಗಿ "ಹಸುಗೂಸಿನ ಜನ್ಮಕ್ಕೆ ಸನ್ಯಾಸಿ ಕಾರಣ ಎಂದಾದಮೇಲೆ ಅದರ ಲಾಲನೆಗೂ ಅವನೇ ಜವಾಬ್ದಾರಿ" ಎಂದು ತೀರ್ಮಾನಿಸಿ ಆತನ ಬಳಿ ಹಸುಗೂಸನ್ನು ಒಯ್ದುಬಿಡಬೇಕು, ಹಾಗೂ ಆತನಿಗೆ ಊರಿನಲ್ಲಿ ಯಾರೂ ಬಿಕ್ಷೆ ನೀಡಬಾರದು " ಎಂಬ ಠರಾವಿನೊಂದಿಗೆ ಪಂಚಾಯ್ತಿ ಮುಗಿಯಿತು. ಸನ್ಯಾಸಿಯನ್ನು ಠಕ್ಕ ಕಪಟಿ ಮೋಸಗಾರ ಮುಂತಾದ ಶಬ್ಧಗಳೊಂದಿಗೆ ಬಯ್ಯುತ್ತಾ ಜನರು ಮನೆ ಸೇರಿದರು.

ದಿನತುಂಬಿದ ಕೂಸನ್ನು ಸನ್ಯಾಸಿಯಬಳಿ ಬಿಟ್ಟು ಊರ ಜನರು ದೂರ ನಡೆದರು. ಸನ್ಯಾಸಿ ಮುಗುಳ್ನಕ್ಕು ಮಗುವನ್ನು ಮುದ್ದಿಸಿದ. ಸ್ವಲ್ಪ ಸಮಯದ ನಂತರ ಮಗು ಹಸಿವಿಯಿಂದ ಅಳಲಾರಂಬಿಸಿತು. ಸನ್ಯಾಸಿಯ ತೀರ್ಥ ಗಳು ಮಗುವಿನ ಅಳುವನ್ನು ನಿಲ್ಲಿಸಲಿಲ್ಲ. ಸನ್ಯಾಸಿ ಈಗ ಅಧೀರನಾದ ತಾನು ಹೇಳಿಕೇಳಿ ಸನ್ಯಾಸಿ ಮಗುವಿನ ಹಸಿವೆ ನೀಗಿಸಲು ತನ್ನ ಬಳಿ ಏನಿಲ್ಲವಲ್ಲ ಈಗ ಏನಾದರೂ ಮಾಡಲೇಬೇಕು ಎಂದು ಅಳುವ ಮಗುವನ್ನು ಜೋಳಿಗೆಗೆ ಹಾಕಿಕೊಂಡು ಊರಮೇಲೆ ಹೊರಟ. ಮನೆಬಾಗಿಲಿನಲ್ಲಿ ಸನ್ಯಾಸಿಯನ್ನು ಕಂಡ ಜನ ಒಬ್ಬೊಬ್ಬರಾಗಿ ಠಪ್ಪಂತ ಬಾಗಿಲು ಹಾಕಿಕೊಂಡರು. "ನೀ ಮಾಡಿದ್ದು ನೀನೆ ಅನುಭವಿಸು" ಎಂದರು ಸನ್ಯಾಸಿ ಮುಗುಳ್ನಕ್ಕ ಮತ್ತು ಮುಂದಿನ ಮನೆಗೆ ಹೋಗಿ " ಮಗು ಹಸಿವೆಯಿಂದ ಅಳುತ್ತಿದೆ ಅದಕ್ಕೆ ಏನಾದರೂ ನೀಡಿ" ಎಂದ. ಅಲ್ಲೂ ಇದೇ ಬೈಗಳದ ಪುನರಾವರ್ತನೆ. ಆದರೂ ಸನ್ಯಾಸಿ ಎದೆಗುಂದಲಿಲ್ಲ ಆತನಿಗೆ ಭಗವಂತನ ಮೇಲೆ ಅಪಾರ ನಂಬಿಕೆ. ಹೀಗೆ ಸಾಗುತ್ತಾ ಸಾಗುತ್ತ ಆತ ಆ ಹಸುಗೂಸಿನ ತಾಯಿಯ ಮನೆಬಾಗಿಲಿಗೆ ಬಂದ ಮತ್ತು ಮಗುವಿನ ಹಸಿವೆಯ ಸುದ್ದಿ ಹೇಳಿ ಭಿಕ್ಷೆ ಕೇಳಿದ. ಈಗ ಅಚ್ಚರಿ ನಡೆಯಿತು. ಆ ತಾಯಿಯ ಮನೆಯವರು ಟಪ್ಪಂತ ಬಾಗಿಲು ಹಾಕಿದರೂ ಹಸುಗೂಸಿನ ತಾಯಿಗೆ ಮಾತ್ರಾ ಹಾಗೆ ಮಾಡಲಾಗಲಿಲ್ಲ. ಆಕೆ " ಸ್ವಾಮಿ ನನ್ನನ್ನು ಕ್ಷಮಿಸಿ" ಎಂದು ಸನ್ಯಾಸಿಯ ಕಾಲು ಹಿಡಿದು ಕೇಳಿಕೊಂಡು ನಂತರ ಮಗುವನ್ನು ಸನ್ಯಾಸಿಯಿಂದ ಎತ್ತಿಕೊಂಡು ಹಾಲುನೀಡಿ ಸಂತೈಸಿದಳು. ಮಗು ಅಳುವುದು ನಿಂತಮೇಲೆ ತಾಯಿ ಸನ್ಯಾಸಿಯ ಬಳಿ" ಸ್ವಾಮಿ ಈ ಮಗುವಿನ ತಂದೆ ನೀವಲ್ಲ , ಆದರೆ ಇದಕ್ಕೆ ಕಾರಣೀ ಕರ್ತನಾದವನ ಹೆಸರು ಹೇಳಿದರೆ ಆತನಿಗೆ ಘೋರ ಶಿಕ್ಷೆಯಾಗುತ್ತದೆಯೆಂಬ ಕಾರಣದಿಂದ ನಿಮ್ಮ ಹೆಸರು ಹೇಳಿದೆ, ನನ್ನ ತಪ್ಪನ್ನು ಮನ್ನಿಸಿ" ಎಂದು ಕಾಲಿಗೆ ಬಿದ್ದಳು. ಸನ್ಯಾಸಿ ಆಗಲೂ ಮುಗುಳ್ನಕ್ಕ ಅಷ್ಟೆ.

ಈ ಸುದ್ದಿ ಕ್ಷಣಮಾತ್ರದಲ್ಲಿ ಊರಿನಲ್ಲ್ಲೆಲ್ಲಾ ಹಬ್ಬಿತು . ತಕ್ಷಣ ಊರಿನ ಹಿರಿಕರಿಗೆ ತಮ್ಮ ತಪ್ಪಿನ ಅರಿವಾಗಿ ಸನ್ಯಾಸಿಯ ಕ್ಷಮೆಕೇಳಲು ಸ್ಥಳಕ್ಕೆ ಧಾವಿಸಿದರು. " ಅಯ್ಯಾ ಮಹಾತ್ಮರೆ ನೀವು ಈ ಮಗುವಿನ ಜನ್ಮಕ್ಕೆ ಕಾರಣ ಅಲ್ಲ ಅಂದಾದಮೇಲೆ ಆವಾಗ ಯಾಕೆ ಸುಮ್ಮನಿದ್ದೀರಿ ?. ನಮ್ಮಿಂದ ಅಪರಾಧವಾಯಿತು ಮನ್ನಿಸಿ " ಎಂದು ಕಾಲಿಗೆ ಬಿದ್ದರು. ಜನರೆಲ್ಲಾ " ಸನ್ಯಾಸಿ ಉಘೇ ಉಘೇ, ಇವರೇ ಮಹಾತ್ಮರು, ದೇವರು" ಎಂದೆಲ್ಲಾ ಜೈಕಾರ ಹಾಕತೊಡಗಿದರು. ಸನ್ಯಾಸಿ ಆವಾಗಲೂ ಮುಗಳ್ನಕ್ಕರು ಮತ್ತು ಹೇಳಿದರು. " ನೀವುಗಳು ಆವಾಗ ಆಪಾದನೆ ಹೊರಿಸಿದಾಗಲೂ ನನಗೆ ತಗುಲಲಿಲ್ಲ ಮತ್ತು ಈಗ ಜೈಕಾರ ಹಾಕಿದಾಗಲೂ ಅದು ತಗುಲಲಿಲ್ಲ"

ನೀತಿ: ರಗಳೆ ರಾಮಾಯಣದಿಂದ ದೂರವಿರಲು "ಐಪಿಲ್" ಬಳಸಿ.