Thursday, August 14, 2008

ಭೃಂಗದ ಬೆನ್ನೇರಿ

ಆನಂದರಾಮ ಶಾಸ್ತ್ರಿ ಸೂರ್ಯನನ್ನು ಎಬ್ಬಿಸುತ್ತಾನೋ ಸೂರ್ಯ ಆನಂದರಾಮಶಾಸ್ತ್ರಿಯನ್ನೆಬ್ಬಿಸುತ್ತಾನೋ ಎನ್ನುವುದು ಇಲ್ಲಿಯವರೆಗೂ ಯಕ್ಷಪ್ರಶ್ನೆಯೇ. ಚುಮು ಚುಮು ಬೆಳಕು ಭೂಮಿಗೆ ಬೀಳುವುದಕ್ಕೆ ಮೊದಲು ಆನಂದರಾಮ ಶಾಸ್ತ್ರಿ ದೊಡ್ಡಗುಡ್ಡದ ನೆತ್ತಿಯಮೇಲೆ ನಿಂತು ಸೂರ್ಯಪಾನದಲ್ಲಿ ತೊಡಗುವ ಕಾರ್ಯ ಯಾವತ್ತಿಂದ ಪ್ರಾರಂಭವಾಯಿತು ಎಂದು ಸೂರ್ಯನಿಗೆ ಮತ್ತು ಆನಂದರಾಮ ಶಾಸ್ತ್ರಿಗೆ ಹೊರತಾಗಿ ಮತ್ಯಾರಿಗೂ ತಿಳಿದಿರಲಿಲ್ಲ. ಆರಂಭದ ಕೆಲವರ್ಷಗಳಲ್ಲಿ ಗೇರುಸೊಪ್ಪದ ಜನತೆ ಇದು ಮಾಮೂಲು ಅಂತ ಸುಮ್ಮನಿದ್ದರು. ಆದರೆ ಶಾಸ್ತ್ರಿ ಯಾರು ನೋಡಲಿ ಬಿಡಲಿ ತನ್ನಷ್ಟಕ್ಕೆ ತಾನು ಎದ್ದು ಬಿರಬಿರನೆ ನಡೆಯುತ್ತಾ ದೊಡ್ಡಗುಡ್ಡದ ನೆತ್ತಿಯಮೇಲೆ ತಲುಪಿ ಇಪ್ಪತ್ತು ನಿಮಿಷಗಳ ಕಾಲ ನಿಲ್ಲುವುದನ್ನು ನೋಡಿ ಕುತೂಹಲಕ್ಕೆ ಒಳಗಾದರು. ಶಾಸ್ತ್ರಿ ಜೇನು ಸಾಕುವುದು, ಕೊಳೆ ಔಷಧಿ ಹೊಡೆಯದೆ ಅಡಿಕೆ ಬೆಳೆಯುವುದು, ಪ್ರಕೃತಿ ಸಹಜವಾಗಿ ಭತ್ತ ಬೆಳೆಯುವುದು, ಎಪ್ಪತ್ತು ವರ್ಷದ ಕೇದಿಗೆಯನ್ನು ಕೊಳಸಿ ತನ್ನ ಉಡುಪಿಗಾಗುವಷ್ಟು ಚಂದದ ಬಟ್ಟೆ ತೆಗೆಯುವುದು ಮುಂತಾದ ಕೆಲಸಗಳು ಜನಸಾಮಾನ್ಯರಿಗೆ ಅಚ್ಚರಿಯ ವಿಷಯವಾಗಿರಲಿಲ್ಲ. ಆದರೆ ಆತ ದಿನಕ್ಕೆ ಒಂದೇ ಬಾರಿ ಊಟ ಮಾಡುವುದು ಮತ್ತು ಮೈಮುರಿಯುವಷ್ಟು ಕೆಲಸಮಾಡುವುದು ಮತ್ತು ಪುಷ್ಠಿಕರವಾದ ಮೈಮಾಟ ಹೊಂದಿರುವುದು ಬಿಡಿಸಲಾರದ ರಹಸ್ಯವಾಗಿತ್ತು. ಜನರು ಆತನ ಬಳಿ ಆಹಾರದ ರಹಸ್ಯ ಕೇಳಿದರೆ ಆತ ಮುಗಳ್ನಗುತ್ತಿದ್ದ. ಆದರೆ ಸೂರ್ಯಪಾನದ ಬಗ್ಗೆ ಕೇಳಿದರೆ ವಿವರಿಸುತ್ತಿದ್ದ.
ಜನರು ದೇಹದ ಅವಶ್ಯಕತೆಗಿಂತ ಶೇಕಡಾ ಎಂಬತ್ತು ಹೆಚ್ಚಿನ ಆಹಾರ ಸೇವಿಸುತ್ತಾರೆ. ಮತ್ತು ಇಲ್ಲದ ಖಾಯಿಲೆಗೆ ಪರೋಕ್ಷ ಆಹ್ವಾನ ನೀಡುತ್ತಾರೆ. ಶೇಕಡಾ ಇಪ್ಪತ್ತು ದೇಹಕ್ಕೆ ಉಳಿದ ಶೇಕಡಾ ಎಂಬತ್ತು ಆಹಾರ ವೈದ್ಯರಿಗೆ ಎನ್ನುವಂತಾಗುತ್ತದೆ. ಆದರೆ ನಾನು ಇಪ್ಪತ್ತು ಮಾತ್ರಾ ಸೇವಿಸುತ್ತೇನೆ ಮತ್ತು ಸೂರ್ಯಪಾನ ಮಾಡುತ್ತೇನೆ. ನೀವೂ ಮಾಡಬಹುದಾದ ಜಗತ್ತಿನ ಮನುಷ್ಯನ ಹೊರತಾದ ಪ್ರತೀ ಜೀವಿಯೂ ಮಾಡುತ್ತಿರುವ ಕೆಲಸ ಇದು. ಮನುಷ್ಯ ಯೋಚನಾಜೀವಿ ಆದರೆ ಅವನ ಮಿದುಳಿನಿಂದ ಯೋಚಿಸುವ ಪ್ರಕ್ರಿಯೆಯಿಂದ ದೇಹದ ವ್ಯವಸ್ಥೆ ತಲತಲಾಂತರದಿಂದ ಹಾನಿಗೊಳಗಾಗುತ್ತಾ ಬಂತು. ಅದನ್ನು ಸಂಪೂರ್ಣ ಸರಿಪಡಿಸಲು ಒಂದುತಲೆಮಾತಿನಿಂದ ಸಾಧ್ಯವಿಲ್ಲ. ಆದರೆ ವ್ಯಕ್ತಿ ಬದಲಾವಣೆ ಬಯಸಿದಲ್ಲಿ ತನ್ನ ಜೀವಿತಾವಧಿಯಲ್ಲಿ ತನ್ನಮಟ್ಟಿಗೆ ಸುಖವಾಗಿ ಕಳೆಯಬಹುದು. ಯಾರಾದರೂ ನಿಮ್ಮನ್ನು ಊಟ ಮಾಡಿದಿರಾ?,ತಿಂಡಿ ತಿಂದಿರಾ? ಎಂಬ ಪ್ರಶ್ನೆಗಳನ್ನು ಕೇಳಿದರೆ, ನೀವು ಹೋ ಆಯಿತು ಎನ್ನುತ್ತೀರಿ. ಒಮ್ಮೆ ಯೋಚಿಸಿ ನೀವು ಊಟ ಮಾಡಿದ್ದೀರಾ..? ದೈಹಿಕವಾಗಿ ಅದು ಸರಿಯಾದ ಉತ್ತರ. ಆದರೆ ಮಾನಸಿಕವಾಗಿ ಅಲ್ಲ. ನೀವು ಊಟಮಾಡುವಾಗ ನಿಮ್ಮ ಮನಸ್ಸು ಎಲ್ಲಿತ್ತು? ಎಂದು ಯೋಚಿಸಿ.ಆಗ ತಿಳಿಯುತ್ತದೆ ನೀವು ಮಾಡಿದ್ದು ಏನು? ಎಂದು. ಸ್ನಾನ ಮಾಡುವಾಗ ದೇಹ ಬಚ್ಚಲುಮನೆಯಲ್ಲಿತ್ತು ಸರಿ ಆದರೆ ನಿಮ್ಮ ಮನಸ್ಸು ಎಲ್ಲಿತ್ತು?. ಒಂದೋ ಭವಿಷ್ಯದ ಚಿಂತೆಯಲ್ಲಿ ಅಥವಾ ಭೂತಕಾಲದ ನೆನಪಲ್ಲಿ ಓಡಾಡುತ್ತಿತ್ತಲ್ಲವೇ?. ವರ್ತಮಾನದಲ್ಲಿ ನಿಮ್ಮ ಮನಸ್ಸು ಇರಲಿಲ್ಲ. ನೀವು ವರ್ತಮಾನದಲ್ಲಿ ಇರಲಾಗದೆ ಯಾವಕೆಲಸವನ್ನು ಮಾಡುತ್ತೀರೋ ಅದು ವ್ಯರ್ಥ. ಅದರ ಸಾರ್ಥಕತೆ ನಿಮಗೆ ದೊರಕಲಾರದು. ನಿತ್ಯ ವರ್ತಮಾನದಲ್ಲಿ ಇದ್ದು ಭೂತಕಾಲದ ಅನುಭವಗಳನ್ನು ಭವಿಷ್ಯಕ್ಕೆ ಬಳಸಿಕೊಂಡರೆ ಅದೇ ಸ್ವರ್ಗ. ಈ ಪ್ರಕ್ರಿಯೆ ಸುಲಭವಾಗಲು ಬೆಳಗಿನ ಸೂರ್ಯಪಾನ ಕ್ರಿಯೆ ಮಾರ್ಗದರ್ಶಕ.
ಆನಂದರಾಮ ಶಾಸ್ತ್ರಿಯ ಇಂತಹ ವಾಕ್ಯಗಳು ಕೆಲವರಿಗೆ ವೇದಾಂತದ ಕೊರತವಾಗಿಯೂ ಇನ್ನು ಕೆಲವರಿಗೆ ಕಬ್ಬಿಣದ ಕಡಲೆಯಾಗಿಯೂ ಮತ್ತು ಹಲವರಿಗೆ ಪೇಲವವಾಗಿಯೂ ಇನ್ನೂ ಹಲವರಿಗೆ ಹುಚ್ಚುತನವಾಗಿಯೂ ಅನ್ನಿಸುತ್ತಿತ್ತು. ಆದರೆ ನಿಜದ ಅರ್ಥ ತಿಳಿದುಕೊಂಡ ಸಾವಿರಕ್ಕೊಬ್ಬರಿಗೆ ಜೀವನದ ದಾರಿ ಸೋಪಾನವಾಗುತ್ತಿತ್ತು.

Wednesday, August 13, 2008

ಜೋಗದ ಸಿರಿ ಬೆಳಕಿನಲ್ಲಿ



ಆಹಾ ಎಂತಹಾ ಚೆನ್ನಾಗಿದೆ ಆ ಕವಿತೆ. ಹಾಡುವ ಕಂಠ ಇಂಪಿದ್ದರೆ ಕೇಳಲು ಕರ್ಣಾನಂದ. ಆದರೆ ಈ ಜೋಗದ ಸಮೀಪ ಕುಳಿತು ಅನಾಮತ್ತು ನಾಲ್ಕು ತಿಂಗಳು ಮಳೆಗಾಲ ಅನುಭವಿಸುವುದಿದೆಯಲ್ಲ ಇತ್ತೀಚಿನ ವರ್ಷಗಳಲ್ಲಿ ಯಮ ಹಿಂಸೆಯಾಗುತ್ತಿದೆ. ದೀಪದ ಬುಡ ಕತ್ತಲು ಎಂಬ ಗಾದೆಯನ್ನು ಚಾಲ್ತಿಯಲ್ಲಿಡಬೇಕೆಂದು ಮೆಸ್ಕಾಂ ನವರು ಹಠ ಹೊತ್ತಿರುವಂತಿದೆ. ಸರಿ ಸುಮಾರು ಇಪ್ಪತ್ತು ದಿನಗಳಿಂದ ನಮ್ಮ ಊರಿನಲ್ಲಿ ಜೋಗದ ಸಿರಿ ಬೆಳಕು ಇಲ್ಲ. ಕರಿ ಬೆಳಕು ನಮ್ಮ ಪಾಲಿಗೆ. ಹೊರಜಗತ್ತಿಗೆ ನಾವು ಇದ್ದರೂ ಸತ್ತಂತಯೇ. ಅಡಿಕೆ ತೋಟ ಕೊಳೆ ರೋಗ ಹೊತ್ತು ಕೊಳೆಯುತ್ತಿದೆ. ಭತ್ತದ ಗದ್ದೆಗಳು ನೀರಿನಿಂದ ತಲೆಯೆತ್ತಲಾರದೆ ಬಳಲಿ ಬಾಗಿವೆ. ಆದರೂ ಬದುಕುವ ಛಲ ಇವೆಲ್ಲಾ ವರ್ಷಾನುಗಟ್ಟಲೆಯಿಂದ ನಡೆದು ಬಂದಿದೆಯಲ್ಲಾ ಎಂಬ ಸಮಾಧಾನದ ಮಾತಿನೊಂದಿಗೆ ಮುಂದುವರೆಯುತ್ತದೆ. ಹಿಂದೆಲ್ಲಾ ಈ ಕರೆಂಟು,ಟಿ.ವಿ.ಕಂಪ್ಯೂಟರ್ ಮುಂತಾದ ಹರಗಣಗಳೆಲ್ಲಾ ಇರಲಿಲ್ಲ. ಆವಾಗ ಹೊರ ಪ್ರಪಂಚದ ಅರಿವು ಕಡಿಮೆ. ಮಳೆ ಬಂದರೂ ಬಾರದಿದ್ದರೂ ಹೊಳೆ ಕಟ್ಟು ಒಡೆದರೂ ನೀರು ಹರಿದರೂ ನಮ್ಮದೇ ಜಗತ್ತು. ಆದರೆ ಈಗ ಮಂಡೆ ಬಿಸಿಯಾಗುತ್ತದೆ. ಇಲ್ಲಿ ಮಳೆ ಕೊಳೆ ಎಂದು ನಾವು ಒದ್ದಾಡುತ್ತಿದ್ದರೆ ಜುಂ ಎಂದು ಹತ್ತು ಲಕ್ಷದ ಕಾರಿನಲ್ಲಿ ಜೋಗ ನೋಡಲು ನೂರಾರು ಜನ ಭಾನುವಾರ ಬರುತ್ತಾರಲ್ಲ, ನಮಗೆ ಇಲ್ಲಿ ವರ್ಷಕ್ಕೊಮ್ಮೆಯೂ ಹೊರಜಗತ್ತು ನೋಡಲಾಗುವುದಿಲ್ಲವಲ್ಲ. ನಮಗೆ ರಗಳೆ ಶಾಶ್ವತವೇ? ಮುಂತಾದ ನೂರಾರು ಪ್ರಶ್ನೆಗಳು ಇಲ್ಲಿಯ ನಿತ್ಯ ಮಳೆಯ ಜತೆ ಗುದ್ದಾಡುತ್ತಾ ಜೀವನ ಸಾಗಿಸಲು ಯತ್ನಿಸುತ್ತಿರುವ ಕೃಷಿಕರ ಪ್ರಶ್ನೆ. ಅಯ್ಯೋ ಅವೆಲ್ಲಾ ಇದ್ದದ್ದೆ, ಅವರವರು ಪಡೆದು ಬಂದಿದ್ದು ಎಂದಿರಾ..? ಸರಿ ಬಿಡಿ ಸೀದಾ ಜೋಗದ ವೈಭವಕ್ಕೆ ಹೋಗೋಣ.
ಕಳೆದ ವರ್ಷ ಇಷ್ಟೋತ್ತಿಗೆ ಲಿಂಗನಮಕ್ಕಿಯ ಹನ್ನೊಂದು ಬಾಗಿಲು ತೆರೆದಿದ್ದರು. ಎಲ್ಲಿನೋಡಿದರಲ್ಲಿ ನೀರೇ ನೀರು. ನೀರ ನೋಡಲು ಬಂದ ನೀರೆಯರು. ಆಹಾ ಎಂತ ಮಧುರ ಯಾತನೆ ಎಂಬ ಹಾಡನ್ನೂ ಹಾಡುವಷ್ಟಿತ್ತು. ಆದರೆ ಈ ವರ್ಷ ಇನ್ನೂ ಆಣೆಕಟ್ಟು ತುಂಬಿಲ್ಲ. ಆದರೂ ಜೋಗದ ಜಲಪಾತದ ನೀರಿಗೇನು ಕೊರತೆಯಿಲ್ಲ. ಇನ್ನೊಂದು ಮಜ ಎಂದರೆ ಈ ವರ್ಷ ತಾಕತ್ತಿದ್ದರೆ ಜಲಪಾತದ ಕೆಳಗೆ ಇಳಿದು ಮೇಲೆ ನೋಡಬಹುದು. ಹಾ ಹುಷಾರಿ ಸ್ವಲ್ಪ ಎಚ್ಚರ ತಪ್ಪಿದರೂ ತೀರಾ ಮೇಲಕ್ಕೂ ಹೋಗಬಹುದು. ಇಲ್ಲಿ ನೀವು ಕೆಳಗಿನಿಂದ ಜೋಗ ನೋಡಿದರೆ ಹೇಗೆ ಕಾಣುತ್ತದೆ ಎಂಬ ಒಂದು ಫೋಟೋ ಹಾಕಿದ್ದೇನೆ. ಹೀಗೆ ಕೆಳಗಿನಿಂದ ಜೋಗ ಜಲಪಾತ ನೋಡಲು ತಾಕತ್ತಿನ ಹಾಗೂ ಧೈರ್ಯದ ಅವಶ್ಯಕತೆ ಇದೆ. ಧೈರ್ಯ ದಿಂದ ಇಳಿದರೆ ಅದರ ಮಜ ಅನುಭವಿಸಿದವರೇ ಹೇಳಬಲ್ಲರು. ಹಾಗಾಗಿ ಈಗ ಜೋಗಕ್ಕೆ ಹೋದರೆ ಕಾವಲುಗಾರರ ಕಣ್ಣುತಪ್ಪಿಸಿ ಗೋಡೆ ಹಾರಿ ಮೆಟ್ಟಿಲಿಳಿದು ತಳ ಸೇರಿ ಆನಂದ ಅನುಭವಿಸಿ. ಆಣೆಕಟ್ಟು ತುಂಬಿದರೆ ಈ ನೋಟ ಅಸಾಧ್ಯ.
ಕೊನೆಯದಾಗಿ: ಈ ಬ್ಲಾಗ್ ಬರೆದು ಮುಗಿಸಲು ತೆಗೆದುಕೊಂಡ ಅವಧಿ ಅನಾಮತ್ತು ಹದಿನೈದು ದಿವಸಗಳು ಕಾರಣ ಆರಂಭದಲ್ಲಿಯೇ ಹೇಳಿದ್ದೇನಲ್ಲ. ಜೋಗದ ಕರಿ ಬೆಳಕಿನಲ್ಲಿ.....

Saturday, July 26, 2008

ಹೀಗೊಂದು ಮೌನ ಸಾದ್ಯವಾದರೆ ಪ್ರಪಂಚ ಗೆದ್ದಂತೆ


ನಾನು ಮೌನದ ಬಗ್ಗೆ ಮಾತನಾಡಲು ಅನರ್ಹ ಅಂತ ನನ್ನ ಪರಿಚಿತರಿಗೂ ಗೊತ್ತು ಸ್ವತಃ ನನಗೂ ಗೊತ್ತು. ಕಾರಣ ನಾನು ವಾಚಾಳಿ, ನನ್ನ ಆ ತಿಕ್ಕಲು ವಾಚಾಳಿತನ ಹಲವಾರು ಅನಾಹುತಕ್ಕೆ ಕಾರಣವಾಗಿದ್ದಿದೆ. ನಾನು ಎಷ್ಟರಮಟ್ಟಿಗೆ ವಾಚಾಳಿ ಎಂದರೆ ನಿದ್ರೆಹೋದಾಗಲೂ ಏನಾದರೂ ಹಲುಬುತ್ತಿರುತ್ತೇನೆ. ಅಷ್ಟರಮಟ್ಟಿಗಿನ ವಾಚಾಳಿತನವಿದ್ದರೆ ಬಹಳ ಕಷ್ಟ ಎಂಬುದು ನನ್ನ ಸ್ವಂತ ಅನುಭವ. ನನಗೆ ಮಾತನಾಡಲು ಅವರಿವರೇ ಆಗಬೇಕಂತಿಲ್ಲ. ಯಾರಾದರೂ ಸೈ. ಸರಿ ಇರಲಿ ಇಂತಹ ಸ್ವಭಾವದ ಹಲವಾರು ಜನ ಇದ್ದಾರೆ ಅವರಲ್ಲಿ ನಾನೂ ಒಬ್ಬ. ಒಮ್ಮೆ ತಾಳಗುಪ್ಪದಲ್ಲಿ ಡಾಕ್ಟರ್ರೊಬ್ಬರು ಹೊಸದಾಗಿ ಶಾಪ್ ತೆಗೆದಿದ್ದರು. ಆ ಷಾಪ್ ನ ಉದ್ಘಾಟನೆಗೆ ನಾನೂ ಹೋಗಿದ್ದೆ. ಎಲ್ಲಾ ಕಾರ್ಯಕ್ರಮ ಮುಗಿಯುವವರೆಗೆ ಅದುಮಿಕೊಂಡು ಕುಳಿತಿದ್ದೆ. ಹೊರಡುವ ಸಮಯದಲ್ಲಿ ಡಾಕ್ಟ್ರರ್ ಮಹಾಶಯರಿಗೆ ಒಂದು ವಿಷ್ ಮಾಡಬೇಕಲ್ಲ ಎಂದು ಹೋಗಿ ಕೈ ಕೊಟ್ಟೆ. ಅವರು ಮುಗುಳ್ನಕ್ಕರು ನಾನು ಅಷ್ಟು ಮಾಡಿದ್ದರೆ ಒಳ್ಳೆಯದಿತ್ತು. ಆದರೆ ನನ್ನೊಳಗಿನ ತಿಕ್ಕಲು ವಾಚಾಳಿ ನನ್ನ ಅರಿವಿಗೆ ಬಾರದಂತೆ "ಸಾರ್ ನಾನು ನಿಮಗೆ ಒಳ್ಳೆಯ ಬ್ಯುಸಿನೆಸ್ ಆಗಲಿ ಅಂತ ಹರಸಲಾರೆ" ಎಂದೆ. ಪಾಪ ಅವರು ಕಕ್ಕಾಬಿಕ್ಕಿ ಏಕೆ? ಎಂದು ಕಾರಣ ಕೇಳಿದರು. "ನಿಮಗೆ ಒಳ್ಳೆಯ ದಂದೆಯಾಗಲಿ ಎಂದು ಹಾರೈಸಿದರೆ ಜನರಿಗೆ ರೋಗ ಬರಲಿ ಎಂದು ಪರೋಕ್ಷವಾಗಿ ಹೇಳಿದಂತಾಗುತ್ತದೆ. ಅದು ನನಗೆ ಇಷ್ಟವಿಲ್ಲ" ಎಂದು ನಗುತ್ತಾ ಹೇಳಿದೆ. ಐದು ವರ್ಷ ಎದ್ದೂಬಿದ್ದು ಎಂಬಿಬಿಎಸ್ ಓದಿ ಎರಡು ವರ್ಷ ಅಪ್ರೆಂಟಿಷಿಪ್ ಮುಗಿಸಿ ದಾವಾಕಾನೆ ಓಪನ್ ಮಾಡಿ ಬಾ ಒಂದು ಒಳ್ಳೆಯ ಆಶೀರ್ವಾದ ಮಾಡಿ ಹೋಗು ಎಂದು ಗೌರವವಾಗಿ ಕರೆದರೆ ಸೆಕೆಂಡ್ ಇಯರ್ ಪಿಯುಸಿ ಮುಗಿಸಿ ಮನೆಯಲ್ಲಿ ಮಣ್ಣು ಹೊರುತ್ತಿರುವ ನನ್ನಂತವನಿಂದ ಇಂಥಹ ಮಾತು ಬಂದರೆ ಯಾರಿಗೆ ಪಿತ್ತ ನೆತ್ತಿಗೇರುವುದಿಲ್ಲ, ಪಾಪ ಆದರೂ ಅವರಿಗೆ ಹಾಗೆ ಅನ್ನಿಸಲಿಲ್ಲ ನನ್ನ ಜತೆಗಿದ್ದ ಜನ " ಅಲ್ಲಯ್ಯಾ ರೋಗ ಬಂದವರಾದರೂ ಇಲ್ಲಿಗೆ ಬರಲಿ ಎಂದು ಹಾರೈಸಬಹುದಲ್ಲ" ಎಂದು ತಿಪ್ಪೆಸಾರಿಸಿ ವೈದ್ಯರನ್ನು ಮುಜುಗರದಿಂದ ಪಾರುಮಾಡಿದರು ಅನ್ನಿ. ಇದು ನನ್ನ ವಾಚಾಳಿತನಕ್ಕೆ ಉದಾಹರಣೆ. ಇದು ನನಗೆ ಬೇಕಿತ್ತಾ ಅಂತ ಬಹಳ ಸಾರಿ ಅನ್ನಿಸುತ್ತದೆ. ಆಗಲೆ ಗರಿಗೆದರಿದ್ದು ಈ ಮೌನವೆಂಬ ಶಕ್ತಿಯ ಯೋಚನೆಗಳು.

ದೊಡ್ದದಾಗಿ ಮಾತನಾಡುವುದನ್ನು ನಿಲ್ಲಿಸಿದರೆ ಅದು ಮೌನವಲ್ಲ.ಸುಮ್ಮನಿದ್ದರೆ ಅದು ಮೌನವಲ್ಲ, ತುಟಿಯನ್ನು ದಿವಸಗಟ್ಟಲೆ ಬಿಚ್ಚದಿದ್ದರೂ ಅದು ಮೌನವಲ್ಲ ಹಾಗಾದರೆ ಮೌನವೆಂದರೆ ಯಾವುದು ಎಂಬ ಪ್ರಶ್ನೆ ಏಳುವುದು ಸಹಜ. ತುಟಿಮುಚ್ಚಿ ಕಣ್ಮುಚ್ಚಿ ಎಲ್ಲಾ ಯೋಚನೆಗಳೂ ಮುಚ್ಚಿದರೆ ಅದು ಮೌನ. ಹೀಗೆ ಹೇಳಿದರೆ ಸ್ವಲ್ಪ ಸುಲಭ: ಸಂಧ್ಯಾವಂದನೆಗೆ ಕುಳಿತ ವಟು ಆರಂಭದಲ್ಲಿ ದೊಡ್ಡದಾಗಿ ಗಾಯಿತ್ರಿ ಮಂತ್ರ ಹೇಳುತ್ತಾನೆ. ಅದು ಮೊದಲನೆ ಹಂತ. ನಂತರ ಪಿಸುಧ್ವನಿಯಲ್ಲಿ ಹೇಳುತ್ತಾನೆ ಅದು ಎರಡನೇ ಹಂತ. ನಂತರ ತುಟಿ ಮುಚ್ಚಿ ಜಪ ಮಾಡುತ್ತಾನೆ ಅಲ್ಲಿ ಆತ ನೋಡುಗರಿಗೆ ಮೌನವಾಗಿದ್ದಾನೆ ಅನ್ನಿಸಿದರೂ ಅದು ಮೌನವಲ್ಲ. ಆತನ ನಾಲಿಗೆ ಹಾಗೂ ತುಟಿಗಳು ಮಂತ್ರದ ಪ್ರತೀ ಅಕ್ಷರಕ್ಕೂ ಸಂವೇದಿಸುತ್ತಿರುತ್ತದೆ. ಅದು ಮೂರನೆ ಹಂತ. ನಂತರದ್ದು ಆಧ್ಯಾತ್ಮಿಕ ಸಾಧನೆ ಮಾಡುವ ಜನರ ಹಂತ. ಗಾಯಿತ್ರಿ ಮಂತ್ರ ಮಿದುಳಿನ ಎಡಭಾಗದಲ್ಲಿ ಮೊಳಗಲು ಆರಂಬಿಸುತ್ತದೆ. ಅಲ್ಲಿಂದ ಮೌನದ ನಿಜವಾದ ಹಂತ ಶುರು. ಅಲ್ಲಿಗೂ ಅದು ಸಂಪೂರ್ಣ ಮೌನವಲ್ಲ. ನಂತರದ ಹಂತ ಮೌನದ್ದು. ಮನಸ್ಸು ನಾಭಿಗೆ ಹರಿಯಬೇಕು ಮತ್ತು ಅಲ್ಲಿ ಗಾಯುತ್ರಿ ಮಂತ್ರ ಮೊಳಗಬೇಕು. ಹಾಗೆಯೇ ನಿಧಾನ ಗಾಢವಾದ ಮೌನಕ್ಕೆ ಜಾರುತ್ತದೆ. ಸಾಮಾನ್ಯ ಜನರು ತಿಂಗಳುಗಟ್ಟಲೆ ಬೆನ್ನುಹತ್ತಿದರೆ ಹೆಚ್ಚೆಂದರೆ ಮೂವತ್ತರಿಂದ ನಲವತ್ತು ಸೆಕೆಂಡು ಈ ಕ್ಷಣವನ್ನು ಅನುಭವಿಸಬಹುದು. ಅದು ಮೌನ. ಆನಂತರದ ಹಂತ ನನಗೆ ಗೊತ್ತಿಲ್ಲ. ಆದರೆ ದಿನಕ್ಕೊಮ್ಮೆ ಇಷ್ಟು ಅನುಭವಿಸುವಷ್ಟು ಸಮಯ ಇದ್ದರೆ ಎಲ್ಲಾ ಜಂಜಡದಿಂದ ಮುಕ್ತಿಪಡೆದು ನಿರಾಳ ಮನಸ್ಸು ಹೊಂದಬಹುದು. ತಿಳಿನೀಲಿ ಆಕಾಶದಷ್ಟು ಶುಭ್ರ ಮನಸ್ಸು ಹೊಂದಬಹುದು. ಆದರೆ ತಿಕ್ಕಲು ಬುದ್ದಿ ಅದಕ್ಕೆ ಬಿಡಗೊಡುವುದಿಲ್ಲ. ಸಾಕು ಕಂಡಿದೀನಿ ಜಾಸ್ತಿ ತಲೆ ತಿನ್ನಬೇಡ ಮಾತಾಡು ಮಾತಾಡು ಅನ್ನುತ್ತೆ. ಮತ್ತೆ ಮಾತಿಗೆ ಜಾರುತ್ತೇನೆ. ಮೌನ ದ ಆಸೆ ಮೌನವಾಗಿಯೇ ಜಾರುತ್ತದೆ.

Monday, July 21, 2008

ಇಪ್ಪತ್ತನೇ ದಶಾವತಾರ...! ಅತಿಥಿದೇವೋ ಭವ ಎನ್ನುವ ಹೋಂ ಸ್ಟೆ


ನಾವೊಂದಿಷ್ಟು ಜನ ಹಳ್ಳಿಯಲ್ಲಿ ಸುಮ್ಮನೆ ಕೂರಲಾಗದವರು ಅಂತ ಅನ್ನಿಸಿಕೊಂಡಾಗಿದೆ. ಏನಾದರೂ ಮಾಡಬೇಕು ಏನಾದರೂ ಮಾಡಬೇಕು ಎಂಬ ತುಮಲಕ್ಕೆ ಕಟ್ಟೆ ಎಂಬ ಅಷಡ್ಡಾಳು ಹೆಸರಿನ ಪತ್ರಿಕೆ ಶುರು ಮಾಡಿದೆವು. ಅದಕ್ಕೆ ಈಗ ನಾಲ್ಕು ವರ್ಷದ ಪ್ರಾಯ. ಕಟ್ಟೆ ಪತ್ರಿಕೆಗೆ ಹಲವಾರು ಜನ ಹಣ ಸಹಾಯ ಮಾಡಿದರು. ಆದರೂ ಅದು ಕೈಕಚ್ಚುತ್ತಿರುತ್ತದೆ. ಇರಲಿ ಜೀವನದಲ್ಲಿ ಮದುವೆಯೂ ಸೇರಿದಂತೆ ಹಲವಾರು ಹೀಗೆ ...!. ಆನಂತರ ಹೀಗೆ ಹತ್ತಾರು ಹೊಸ ಹೊಸ ಪ್ಲ್ಯಾನ್ ಕಡಿದು ಗುಡ್ಡೆ ಹಾಕಿ ಕಾರ್ಯಗತಕ್ಕಿಳಿಸಿ ಇರುವ ನಾಲ್ಕು ಪುಡಿಗಾಸನ್ನು ಖರ್ಚು ಮಾಡಿಕೊಂಡಾಯಿತು. ವೆನಿಲ್ಲಾ ೩೦೦೦ ರೂಪಾಯಿ ಕೆಜಿಯಂತೆ ಮಾರಿದ ದುಡ್ಡೆಲ್ಲಾ ಹೀಗೆ ಏನೇನೋ ಮಾಡಲು ಹೋಗಿ ಡಮಾರ್. ಇರಲಿ ಒಳ್ಳೋಳ್ಳೆ ಅನುಭವ ಕೊಟ್ಟಿತು. ಕಟ್ಟೆ ಪತ್ರಿಕೆಯ ಜತೆಯಲ್ಲಿ ಹುಟ್ಟಿಕೊಂಡಿದ್ದು ಕಟ್ಟೆ ಎಜುಕೇಷನ್ ಫಂಡ್. ದಾನಿಗಳನ್ನು ಹಿಡಿದು ಬಡ ವಿದ್ಯಾರ್ಥಿಗಳಿಗೆ ತಲುಪಿಸಿದ್ದಾಯಿತು. ಕೆಲವರು ಓದಿದರು,ಕೆಲವರು ನಾವು ಕೊಡಿಸಿದ ದುಡ್ಡಲ್ಲಿ ಮೊಬೈಲ್ ಕೊಂಡರು. ಮತ್ತೆ ಕೆಲವರು ಓದಿ ಕೆಲಸಕ್ಕೆ ಸೇರಿದರು. ಇರಲಿ ಆದದ್ದೆಲ್ಲಾ ಒಳ್ಳೆಯದೇ ಆಯಿತು. ೧೧ ಎಕರೆ ಸರ್ಕಾರಿ ಜಾಗದಲ್ಲಿ ಅರಣ್ಯ ಬೆಳೆಸುವ ಅವತಾರ ಹೀಗೆ ಒಂದು ದಿವಸ ಹುಟ್ಟಿಕೊಂಡಿತು. ಗಿಡಗಳು ತೊನೆದಾಡುವುದನ್ನು ನೋಡಿದರೆ ಪೊದೆಗಳು ಅಗಲವಾಗುತ್ತಿರುವುದನ್ನು ನೋಡಿದರೆ ಒಳ್ಳೆಯ ಖುಷಿ ಕೊಡುವುದಂತೂ ಗ್ಯಾರಂಟಿ. ಹೀಗೆ ಚೆನ್ನಾಗಿ ನಡೆಯುತ್ತಿರುವ ಹಾಗೂ ಅರ್ದಕ್ಕೆ ನಿಂತುಹೋದ ಅವತಾರಗಳನ್ನು ಮೊನ್ನೆ ಕುಳಿತು ಲೆಕ್ಕ ಮಾಡಿದೆ. ನನ್ನ ನಲವತ್ತನೇ ವಯಸ್ಸಿಗೆ ಹತ್ತೊಂಬತ್ತು ಅವತರಾಗಳು ಮುಗಿದಿತ್ತು. ಈಗ ಇಪ್ಪತ್ತನೇ ಅವತಾರವಾಗಿ ಈ ಹೋಂ ಸ್ಟೆ. ಇಂತಹ ಹೊಸ ಹೊಸ ಅವತಾರಗಳು ಹುಟ್ಟಿಕೊಳ್ಳುವುದು ಹೇಗೋ ಅಂತ ನನಗಿನ್ನೂ ಅರ್ಥವಾಗಿಲ್ಲ. ಸುಮ್ಮನೆ ಕೂರಲಾರದ ಸಂಕಟಕ್ಕೆ ಇರುವೆ ಬಿಟ್ಟುಕೊಂಡರು ಎಂಬಂತೆ ಹಲವಾರು ಬಾರಿ ಆಗಿಬಿಡುತ್ತದೆ. ಬಾಳೆಹೊಳೆ ಪೆಜತ್ತಾಯರು ಒಮ್ಮೆ ಹೇಳಿದ್ದರು, ಹಣದ ಹರಿವು ಇಲ್ಲದಿದ್ದರೆ ಈಗಿನಕಾಲದಲ್ಲಿ ಎಲ್ಲಾ ಸಂಘಟನೆಗಳೂ ತನ್ನಿಂದ ತಾನೆ ನಿಂತು ಹೋಗಿಬಿಡುತ್ತವೆ ಎಂದು. ಅದು ಈಗಿನ ಕಾಲಕ್ಕೆ ಅಂತಲ್ಲ ಯಾವತ್ಕಾಲಕ್ಕೂ ನಿಜ. ಇತ್ತೀಚೆಗೆ ಜಾಸ್ತಿಯಾಗಿದೆ ಅಷ್ಟೆ. ನಾವು ಈಗ ಶುರು ಮಾಡಹೊರಟಿರುವ ಅತಿಥಿ ದೇವೋ ಭವ ಸ್ಕೀಂ ಸಿಕ್ಕಾಪಟ್ಟೆ ರಿಸ್ಕಿನ ವ್ಯವಹಾರ. ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು. ಆದರೆ ಹಾಗೆ ಪರವಾನಗಿಪಡೆದುಕೊಳ್ಳ ಹೊರಟರೆ ಅದರ ಖರ್ಚು ನಮ್ಮ ದುಡಿಮೆಯ ಎರಡುವರ್ಷದ ಶ್ರಮವನ್ನು ಬೇಡುತ್ತದೆ. ಇಂತಹ ಕೆಲಸಗಳೆಲ್ಲಾ ದುಡ್ಡು ಹಾಕಿ ದುಡ್ಡು ತೆಗೆಯುವ ತಾಕತ್ತಿನ ಜನಕ್ಕೆ ಸಾದ್ಯ. ಆದರೆ ಸುಮ್ಮನೆ ಕೂರಲು ತುಮುಲ ಬಿಡುತ್ತಿಲ್ಲ. ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗುತ್ತೋ ಗೊತ್ತಿಲ್ಲ. ಕತ್ತಲಿನಲ್ಲಿ ನೀರಿಗಿಳಿದಾಗಿದೆ, ಆಳದ ಕತೆ ಹಾಗಿರಲಿ ನೀರು ಇದೆಯೋ ಅಂತಾನೂ ತಿಳಿಯದ ಪರಿಸ್ಥಿತಿ. ಆದರೆ ಸಮಾಧಾನ ಎಂದರೆ ನಮ್ಮದು ಮಹಾನ್ ಭಾರತ ಇಲ್ಲಿ ಎಲ್ಲವೂ ಸಲ್ಲುತ್ತದೆ. ಲೀಗಲ್ ಇಲ್ಲೀಗಲ್ ಅಂತ ಬೇಧಭಾವ ಇಲ್ಲ. ನಮಗೆ ಕೇವಲ ದುಡ್ಡು ಮಾಡಬೇಕೆಂಬ ಆಸೆಯೂ ಇಲ್ಲ. ಏನೋ ಒಂದು ಮಾಡಬೇಕು ಎಂಬ ಹೃದಯಪೂರ್ವಕ ಆಸೆಯಷ್ಟೆ.
ಕೊನೆಯದಾಗಿ: ಆಗಸ್ಟ್ ೧ ರಂದು ನಮ್ಮ ಚಿಂತನವಿಕಾಸವಾಹಿನಿಯ ಕಟ್ಟೆಬಳಗದ ಹೋಂಸ್ಟೇ ಪ್ರಾರಂಬ. ನೀವು ಬರಬೇಕು. ಅಂದು ಆಗದಿದ್ದರೆ ಮುಂದೆ ಎಂದಾದರೂ ಅತಿಥಿಗಳಾಗಿ ಬನ್ನಿ. ಹಣದ ಚಿಂತೆ ಬೇಡ ಖುಷಿ ಇದ್ದರೆ ಕೊಡಿ. ಇಲ್ಲದಿದ್ದರೆ ಭಗವಂತನಿದ್ದಾನೆ.

Friday, July 18, 2008

ಅನ್ನಪೂರ್ಣೇಶ್ವರಿ ಸೂರಮ್ಮ ಇನ್ನಿಲ್ಲ


ತೊಂಬತ್ತೆರಡರ ಅತ್ತೆ ಗುರುವಾರ ಇಹಲೋಕದ ಜಂಜಡಗಳನ್ನು ತೊರೆದಳು. ದಪ್ಪಗೆ ದಿಂಡಗೆ ಇದ್ದ ಅತ್ತೆ ಸಣ್ಣ ಕಡ್ದಿಯಂತಾಗಿ ಇದು ಅತ್ತೆಯಾ...? ಎಂಬಂತಾಗಿದ್ದಳು. ತಲವಾಟದ ಗೋವಿಂದ ಭಟ್ಟ ದಂಪತಿಗಳ ಆರು ಜನ ಮಕ್ಕಳಲ್ಲಿ ಒಬ್ಬಳಾಗಿ ಪ್ರಸ್ತುತ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ಮುಳುಗಡೆಯಾದ ಗಿಂಡಿಮನೆ ಎಂಬ ಊರಿನ ರಾಮಚಂದ್ರಪ್ಪ ಪಟೇಲ್ರ ಹೆಂಡತಿಯಾಗಿ ಸೇರಿ ನಂತರ ಅಲ್ಲಿ ಒಂಬತ್ತು ಮಕ್ಕಳ ತಾಯಿಯಾಗಿ ಗಿಂಡಿಮನೆ ಎಂಬ ಊರು ಮುಳುಗಡೆಯಾದನಂತರ ಮುಂಡಗೋಡು ತಾಲ್ಲೂಕಿನ ಕಂಚಿಕೊಪ್ಪ ಎಂಬ ಊರಿಗೆ ಹೋಗಿ ನೆಲೆನಿಂತ ಸೂರಮ್ಮ ನೆಂಬ ಅತ್ತೆ ಸಾಕ್ಷಾತ್ ಅನ್ನಪೂರ್ಣೆಶ್ವರಿ. ಅವಳು ಅದೆಷ್ಟು ಜನರಿಗೆ ಊಟ ಹಾಕಿದಳೋ..? ಅದೆಷ್ಟು ಜನರಿಗೆ ಆತಿಥ್ಯ ಮಾಡಿದಳೋ ಲೆಕ್ಕ ಇಟ್ಟರೆ ದೊಡ್ಡ ಪುಸ್ತಕ ಬೇಕಾಗಿತ್ತು.
ಆಕೆ ಮೊನ್ನೆ ತನ್ನ ತೊಂಬತ್ತೆರಡರ ಹರೆಯದಲ್ಲಿ ದೇಹ ತ್ಯಜಿಸಿದಳು. ಆಕೆಯ ಹತ್ತಿರದವರಿಗೆ ನೆನಪು ಶಾಶ್ವತ. ಅತ್ತೆಗೆ ಸ್ವರ್ಗ ಗ್ಯಾರಂಟಿ . ನಾನು ಬ್ಲಾಗಿನಲ್ಲಿ ಇಷ್ಟು ಮಾತ್ರಾ ಬರೆಯುವುದು ಶ್ರದ್ಧಾಂಜಲಿಗಾಗಿ. ಆಕೆಯ ಪರಿಚಯ ನಿಮಗೆ ಇಲ್ಲದಿದ್ದರೂ ಒಂದು ಶುಭ ಹಾರೈಕೆ ಹಾಕಿಬಿಡಿ.

Wednesday, July 9, 2008

ಕಾಡುಕೋಣ ಓಡಿ ಬಂದಿತ್ತಾ


ಅದ್ಯಾವುದೋ ಕೆಲಸದ ಮೇಲೆ ಹಿರೇಮನೆಗೆ ಹೊರಟಿದ್ದೆ. ನಮ್ಮ ಮನೆಯಿಂದ ಹಿರೇಮನೆಗೆ ಹೋಗಬೇಕೆಂದರೆ ಕಾಲು ದಾರಿ ಗುಡ್ಡದ ಮೂಲಕ ಸಾಗುತ್ತದೆ. ಬೈಕ್ ಒಯ್ಯಲು ಬಳಸುದಾರಿಯನ್ನೇ ಬಳಸಬೇಕು. ನಮ್ಮ ಮನೆಯ ಹಿಂದಿನ ಸಣ್ಣ ಗುಡ್ಡ ಏರಿ ನಂತರ ಒಂದು ಫರ್ಲಾಂಗ್ ಇಳಿದರೆ ಹಿರೇಮನೆ. ಮನೆಯಿಂದ ಅದ್ಯಾವುದೋ ಆಲೋಚನೆ ಮಾಡುತ್ತಾ ಸಣ್ಣ ಗುಡ್ದ ಏರಿ ಇಳಿಯಲು ಆರಂಬಿಸಿದ್ದ. ರಸ್ತೆ ಪಕ್ಕದ ಅಗಳ(ಕಾಲುವೆ) ದಿಂದ ಒಮ್ಮೆಲೆ ಸುಟಿಲ್ ಎಂಬ ಶಬ್ಧದೊಡನೆ ಏನೋ ಕಪ್ಪಗೆ ನನ್ನೆಡೆ ನುಗ್ಗಿದಂತಾಯಿತು. ತಲೆ ಎತ್ತಿ ನೋಡಿದರೆ ಬೃಹತ್ ಗಾತ್ರದ ಕಾಡುಕೋಣ ಅಗಳದ ಒಳಗಿನಿಂದ ಬುಸ್ ಎನ್ನುತ್ತಾ ನನ್ನತ್ತ ಬರುತ್ತಿತ್ತು. ತಡಬಡ ಮಾಡಲಿಲ್ಲ ಹತ್ತಿರದಲ್ಲಿದ್ದ ಒಂದು ಗೇರುಮರವನ್ನು ಅದ್ಯಾಯ ಮಾಯೆಯಲ್ಲಿಯೋ ಛಂಗನೆ ಏರಿ ಕುಳಿತೆ. ಗಡಿಬಿಡಿಯಲ್ಲಿ ನಾನು ಗೇರುಮರದ ಅತ್ಯಂತ ಸಪೂರ ಹೆರೆಯನ್ನು ಏರಿದ್ದೆ. ಹಾಗಾಗಿ ಏರಿದ ಮರುಕ್ಷಣದಲ್ಲಿಯೇ ಗಾಡ್ಸ್ ಮಸ್ಟ್ ಬಿ ಕ್ರೇಝಿ ಸಿನೆಮಾದ ಹೀರೋವಿನಂತೆ ಗೇರುಮರದ ಹೆರೆ ಸಮೇತ ಮತ್ತೆ ಭೂಮಿಯ ಮೆಲೆ ಬಂದು ನಿಂತಿದ್ದೆ. ನನ್ನಿಂದ ಐದು ಅಡಿ ದೂರದಲ್ಲಿ ಕಾಡುಕೋಣ ಮಾಡುವುದೇನು ಅಂತ ಅರ್ಥ ಆಗಲಿಲ್ಲ. ಹಿಂದೆ ಬಚ್ಚಗಾರು ದೇವಸ್ಥಾನದ ಭಟ್ಟರನ್ನು ಹಾಯ್ದು ನುಜ್ಜುಗುಜ್ಜು ಮಾಡಿದ್ದು ಆ ಕ್ಷಣದಲ್ಲಿಯೂ ನೆನಪಾಯಿತು. ತಕ್ಷಣ ಗುಡ್ಡ ಹತ್ತಿ ಓಡ ತೊಡಗಿದೆ. ಸುಮಾರು ನೂರು ಅಡಿ ದೂರ ನಿಂತು ಕೋಣನತ್ತ ತಿರುಗಿ ನೋಡಿದೆ. ಕೋಣ ಅಲ್ಲಿಯೇ ಇದೆ. ಆದರೆ ಬುಸುಗುಟ್ಟುವುದು ಮಾತ್ರಾ ನಿಂತಿಲ್ಲ. ಈಗ ಸ್ವಲ್ಪ ಧೈರ್ಯ ಬಂತು. ನಿದಾನ ಹೆಜ್ಜೆಯ ಮೇಲೆ ಹೆಜ್ಜೆಯ ನಿಡುತ್ತಾ ಹತ್ತಿರ ಹೋದೆ. ಇಲ್ಲ ಕಾಡು ಕೋಣ ಬುಸುಗುಡುತ್ತದೆ ಹೊರತು ಮುಂದೆ ಬರುವುದಿಲ್ಲ. ಅಲ್ಲಿಗೆ ಅದು ನನ್ನಮೇಲೆ ಧಾಳಿ ಮಾಡಲು ಬರುತ್ತಿಲ್ಲ ಅಂತ ಮನವರಿಕೆಯಾಯಿತು. ಹುಯ್ ಹುಯ್ ಎಂದೆ . ಆದರೂ ಮುಂದೆ ಬರುತ್ತಿಲ್ಲ. ಇನ್ನೂ ಹತ್ತಿರ ಹೋಗಿನೋಡಿದಾಗ ಕೋಣ ಕಂದಕದಲ್ಲಿ ಸಿಕ್ಕು ಮೇಲೆಬರಲಾರದೆ ಬುಸ್ ಗುಡುತ್ತಿತ್ತು. ನಾನು ಅದು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ತಪ್ಪು ತಿಳಿದುಕೊಂಡಿದ್ದೆ. ಈಗ ನೂರಕ್ಕೆ ನೂರು ಧೈರ್ಯ ಬಂತಾದರೂ ಕೋಣವನ್ನು ಕಂದಕದಿಂದ ಮೇಲೆತ್ತುವ ಕಾರ್ಯಾಚರಣೆಗೆ ಮನಸ್ಸು ಮಾಡಲಿಲ್ಲ ಕಾರಣ ಮುಂದಿನ ಎರಡನೆ ಕ್ಲಾಸಿನ ಪಾಠದಲ್ಲಿ ಹುಲಿಯನ್ನು ಬೋನಿನಿಂದ ಬಿಡಿಸಿದ ಬ್ರಾಹ್ಮಣನ ಕತೆಯ ಬದಲು ಕಾಡುಕೋಣನನ್ನು ಬಿಡಿಸಿದ ಬ್ರಾಹ್ಮಣ ಎಂದು ಒಂದು ಪಾಠವನ್ನಿಡಲು ಣಾನು ಕಾರಣನಾಗುತ್ತೇನೆ ಆಂತ ಅನ್ನಿಸಿತು. ಆ ಬ್ರಾಹ್ಮಣನ ಸಹಾಯಕ್ಕೆ ನರಿ ಇತ್ತು ಈ ಬ್ರಾಹ್ಮಣನಿಗೆ ನರಿ ಬರುವುದಿರಲಿ ನರಿ ಬುದ್ದಿಯ ಜನರನ್ನು ಹುಡುಕಲೂ ಊರಿಗೆ ಹೋಗಬೇಕಲ್ಲ. ಎಂದು ಆಲೋಚಿಸುತ್ತಾ ಹಿರೇಮನೆ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ. ವಾಪಾಸು ಮನೆಗೆ ನಡೆದೆ.
ಈ ಘಟನೆ ನಡೆದು ಇಪ್ಪತ್ತು ವರ್ಷಗಳು ಸಂದವು. ಇವತ್ತು ಕಂಪ್ಯೂಟರ್ ನಲ್ಲಿ ಯಾವಾಗಲೋ ತೆಗೆದ ಕಾಡುಕೋಣನ ಫೊಟೋ ಕಾಣಿಸಿತು ಮತ್ತು ವೃಥಾ ಹೆದರಿದ್ದು ನೆನಪಾಯಿತು. ಜೀವನವೆಂದರೆ ಹಾಗೆ ನಾವು ಸುಮ್ಮನೆ ಹಲವಾರು ಕಾರಣಗಳಿಗೆ ಹೆದರುತ್ತೇವೆ. ಅವರು ಬದುಕಲು ಹೋರಾಟ ನಡೆಸುತ್ತಿರುತ್ತಾರೆ ಅಷ್ಟೆ ಅದು ನಮಗೆ ಹೆದರಿಕೆಯಾದರೆ ಕಷ್ಟ, ನೋಡಲು ನಿಂತರೆ ಸುಖ.
(ಮುಕ್ತಾಯ: ಸಂಜೆ ಹೋಗಿ ನೋಡಿದಾಗ ಕಾಡುಕೋಣ ತನ್ನಷ್ಟಕ್ಕೆ ಹೊರಟುಹೋಗಿತ್ತು.)

Tuesday, July 8, 2008

ಪಂಚಕುತಂತ್ರದ ಅನೀತಿ ಕತೆಗಳು

ಅಡಿಕೆ ಚೀಲ
ಒಂದಾನೊಂದು ಊರಿನಲ್ಲಿ ಶ್ಯಾಮಯ್ಯ ಎನ್ನುವ ಗ್ರಹಸ್ಥನಿದ್ದನು. ಆತ ಊರಿನ ದೇವಸ್ಥಾನದ ಪಕ್ಕದಲ್ಲಿಯೇ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಡನೆ ಸುಖವಾಗಿ ಕಾಲ ಕಳೆಯುತ್ತಿದ್ದನು. ಒಂದು ದಿವಸ ಅವನಿಗೆ ಎರಡು ಸಾವಿರ ರೂಪಾಯಿಯ ಅಗತ್ಯ ಬಿತ್ತು. ಊರಿನವರ್ಯಾರು ಅವನಿಗೆ ಹಣಕೊಡಲು ಮುಂದೆಬರಲಿಲ್ಲ. ಆ ಸಂದರ್ಭದಲ್ಲಿ ಭಕ್ತರೊಬ್ಬರು ದೇವರ ಹರಕೆ ತೀರಿಸಲು ದೇವಸ್ಥಾನಕ್ಕೆ ಬಂದರು, ಅವರ ಬಳಿ ಶ್ಯಾಮಯ್ಯ ಬಣ್ಣ ಬಣ್ಣದ ಮಾತನಾಡಿ ಎರಡುಸಾವಿರ ರೂಪಾಯಿ ದೇವರಿಗೆ ಅರ್ಪಿಸಿದರೆ ಸುಖವಾಗಿ ಬಾಳಬಹುದು ಎಂದು ನಂಬಿಸಿದನು. ಅವರು ಒಪ್ಪಿ ಹುಂಡಿಗೆ ಹಣ ಹಾಕಲು ಹೋದಾಗ ನಾನೇ ದೇವರಿಗೆ ಅರ್ಪಿಸುತ್ತೇನೆ ಎಂದು ಹಣ ಇಸಿದುಕೊಂಡು ಗುಳುಂ ಸ್ವಾಹಾ ಮಾಡಿಬಿಟ್ಟನು.
ಒಂದು ವಾರದ ನಂತರ ಶ್ಯಾಮಯ್ಯನಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಅಲ್ಲಿಯವರೆಗೆ ಕಂಡದ್ದನ್ನೆಲ್ಲಾ ತಿಂದು ದಕ್ಕಿಸಿಕೊಂಡದ್ದ ಶ್ಯಾಮಯ್ಯನಿಗೆ ಹೆದರಿಕೆ ಪ್ರಾರಂಭವಾಯಿತು. ಈ ಎದೆ ನೋವು ಹೀಗೆ ದಿಡೀರನೆ ಬರಲು ತಾನು ಎರಡು ಸಾವಿರ ದೇವರ ಹಣ ತಿಂದದ್ದೇ ಕಾರಣವಿರಬಹುದೇ ಎಂಬ ಭಯ ಹೆಜ್ಜೆಹೆಜ್ಜೆಗೂ ಕಾಡಿ ಅಂತಿಮವಾಗಿ ದೇವರ ಶಕ್ತಿಗೆ ಮನಸೋತು "ಅಯ್ಯಾ ಭಗವಂತ ನಿನ್ನ ದುಡ್ಡು ತಿಂದು ತಪ್ಪು ಮಾಡಿಬಿಟ್ಟೆ, ಪ್ರಾಯಶ್ಚಿತ್ತವಾಗಿ ಒಂದು ಚೀಲ ಅಡಿಕೆಯನ್ನು ಅರ್ಪಿಸುತ್ತೇನೆ ನನ್ನ ತಪ್ಪು ಮನ್ನಿಸು" ಎಂತ ಬೋರಲಿಟ್ಟನು. ಅದ್ಯಾವ ಮಾಯವೋ ಮಂತ್ರವೋ ಮಹಿಮೆಯೋ ಅಂತೂ ಕ್ಷಣಮಾತ್ರದಲ್ಲಿ ಶ್ಯಾಮಯ್ಯನ ಎದೆನೋವು ಮಾಯವಾಯಿತು.
ಎರಡು ಮೂರು ದಿನದ ನಂತರ ಅಡಿಕೆಚೀಲದ ಹರಕೆ ನೆನಪಾಯಿತು. ಆದರೆ ಎದೆನೋವು ಮಾಯವಾದ್ದರಿಂದ ಈಗ ಒಂದುಚೀಲ ಅಡಿಕೆ ಕೊಡಲು ಮನಸ್ಸು ಒಪ್ಪಲಿಲ್ಲ. ಆರೋಗ್ಯವಂತ ದೇಹ ಮನಸ್ಸು ಸುಮ್ಮನೆ ಹತ್ತುಸಾವಿರ ರೂಪಾಯಿ ಗಂಟನ್ನು ದೇವರಿಗೆ ಒಪ್ಪಿಸಲು ಹೇಗೆ ಪರವಾನಿಗೆ ಕೊಡುತ್ತೆ? ಹಾಗಾಗಿ ಪ್ರಪಂಚವನ್ನೇ ನಡೆಸುವ ದೇವರಿಗೆ ಪುಟಗೋಸಿ ನನ್ನ ಅಡಿಕೆ ಯಾವ ಲೆಕ್ಕ. ಬೇಕಾದರೆ ಅವನೇ ಕ್ಷಣ ಮಾತ್ರದಲ್ಲಿ ಸೃಷ್ಟಿಸಿಕೊಳ್ಳಬಲ್ಲ ಎಂಬಂತಹ ಆಲೋಚನೆಗಳು ಮುತ್ತತೊಡಗಿದವು. ಆದರೆ ಹರಕೆ ತೀರಿಸದಿರಲು ಮನಸ್ಸು ಒಪ್ಪಲಿಲ್ಲ. ಆವಾಗ ಮತ್ತೊಂದು ಉಪಾಯ ಹೊಳೆಯಿತು. ಒಂದು ಕರವಸ್ತ್ರವನ್ನು ಎರಡು ಮಡಚಿಗೆ ಮಾಡಿ ಹೊಲಿಗೆ ಹಾಕಿದನು. ಅದಕ್ಕೊಂದು ತೊಟ್ಟನ್ನು ಇಟ್ಟು ಮಗನನ್ನು ಕರೆದು ಇದು ಏನು? ಎಂದು ಕೇಳಿದನು. ಮಗ ಇದು ಚೀಲ. ಎಂದು ಉತ್ತರಿಸಿದನು. ಮಕ್ಕಳು ದೇವರ ಸಮಾನ ಹಾಗಾಗಿ ದೇವರೆ ಇದನ್ನು ಚೀಲ ಎಂದು ಹೇಳಿದಂತಾಯಿತು ಎಂಬ ತೀರ್ಮಾನಕ್ಕೆ ಬಂದ ಶ್ಯಾಮಯ್ಯ ಅದರ ತುಂಬಾ ಒಂದು ಮುಷ್ಠಿ ಅಡಿಕೆ ತುಂಬಿ ದೇವಸ್ಥಾನಕ್ಕೆ ಹೋಗಿ ದೇವರ ಎದುರು ನಿಂತು," ಭಗವಂತಾ ನನ್ನ ಹರಕೆಯನ್ನು ಮನ್ನಿಸಿ ಎದೆನೋವು ಮಾಯಮಾಡಿದೆ, ಮಾತಿಗೆ ನಾನು ತಪ್ಪುವ ಜಾಯಮಾನ ನನ್ನದಲ್ಲ ನನ್ನ ಮನೆತನದ್ದೂ ಅಲ್ಲ ಇದೋ ಅಡಿಕೆ ತುಂಬಿದ ಚೀಲವನ್ನು ಒಪ್ಪಿಸಿಕೋ" ಎಂದು ಕೈಮುಗಿದನು.
ಮಾತಿನಂತೆ ನಡೆದ ಶ್ಯಾಮಯನನ್ನು ನೋಡಿದ ದೇವರು ಸ್ಥಂಭೀಭೂತ..! ನಾದನು. ದೇವಸ್ಥಾನದ ಗಂಟೆಗಳು ತಮಿಳು ಸಿನೆಮಾದಲ್ಲಿ ತೂಗಾಡುವಂತೆ ಡಣ ಡಣ ಎಂದು ಹೊಡೆದುಕೊಳ್ಳುತ್ತಾ ತೂಗಾಡತೊಡಗಿದವು.
ಅನೀತಿ: ಬುದ್ಧಿಯಿದ್ದರೆ ದೇವರಿಗೂ ಬುದ್ಧಿ ಕಲಿಸಬಹುದು.
ಬುಡಕ್ಕೆ ಬಂದಾಗ
ಒಂದು ಊರಿನಲ್ಲಿ ರಾಮಯ್ಯನೆಂಬ ಗೃಹಸ್ಥನಿದ್ದನು. ಅವನು ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವನಾದನು..!. ಅವನಿಗೆ ತನ್ನನ್ನು ಊರಿನಲ್ಲಿ ಯಾರೂ ಗುರುತಿಸುತ್ತಿಲ್ಲ ಎಂಬ ಭಾವನೆ ಇತ್ತು. ಹಾಗಾಗಿ ಜನರ ನಡುವೆ ತಾನು ಗುರುತಿಸಿಕೊಳ್ಳುವ ಸಲುವಾಗಿ ತಕರಾರು ತೆಗೆಯುವ ಸ್ವಭಾವವನ್ನು ಮೈಗೂಡಿಸಿಕೊಂಡನು. ದೇವಸ್ಥಾನದಲ್ಲಿ ತಕರಾರು, ಸಂಘದಲ್ಲಿ ತಕರಾರು, ರಾಜಕೀಯದಲ್ಲಿ ತಕರಾರು ಹೀಗೆ ಯಾರು ಏನೇ ಮಾಡಿದರೂ ಅದರ ವಿರುದ್ದ ತಕರಾರೆತ್ತಿ ಗುರುತಿಸಿಕೊಳ್ಳತೊಡಗಿದನು. ಅವನ ಊರಿಗೆ ಒಮ್ಮೆ ಗುರುಗಳೊಬ್ಬರ ಆಗಮನವಾಯಿತು. ಊರವರೆಲ್ಲಾ ಸೇರಿ ಗುರುಗಳಿಗೆ ಪಾದಪೂಜೆ ಮಾಡಬೇಕೆಂದು ತೀರ್ಮಾನಿಸಿ ಯಜಮಾನನೊಬ್ಬನನ್ನು ನಿಯಮಿಸಿದರು. ಆಗ ರಾಮಯ್ಯನನ್ನು ಯಾರೂ ಕೇಳಲಿಲ್ಲ. ರಾತ್ರಿ ಪೂರ್ತಿ ಕಣ್ಣು ಕೆಂಪಗೆ ಮಾಡಿಕೊಂಡು ರಾಮಯ್ಯ ತನ್ನ ಸಹವರ್ತಿಗಳ ಜತೆ ಪ್ರತಿಭಟನೆಯಲ್ಲಿ ತೊಡಗಿದನು. ಭಕ್ತರ್ಯಾರೂ ಕ್ಯಾರೇ? ಎನ್ನದಿದ್ದ ಪರಿಣಾಮವಾಗಿ ರಾಮಯ್ಯ ಇನ್ನಷ್ಟು ಕೆರಳಿ ಕೆಂಡವಾಗಿ ಗುರುಗಳು ಜಾತಿವಾದಿಗಳು ಮನುಷ್ಯರೆಲ್ಲಾ ಒಂದೇ ಜಾತಿ ಎಲ್ಲರ ಮೈಯಲ್ಲಿ ಒಸರುವುದೂ ಕೆಂಪು ರಕ್ತವೇ ಹಾಗಾಗಿ ಗುರುಗಳನ್ನು ದೂರವಿಡಿ ಎಂದು ಪಟಾಲಂ ಜತೆಗೂಡಿ ನಿತ್ಯ ಮೀಟಿಂಗ್ ಮಾಡತೊಡಗಿದನು. ಮೀಟಿಂಗ್ ನಲ್ಲಿ ಈಟಿಂಗ್ ಹಾಗೂ ಡ್ರಿಂಕಿಂಗ್ ಖರ್ಚು ರಾಮಯ್ಯನೇ ವಹಿಸಿಕೊಳ್ಳುತ್ತಿದ್ದುರಿಂದ ಹತ್ತೆಂಟು ಜನರ ಜತೆ ರಾಮಯ್ಯನಿಗೆ ಯಾವಾಗಲೂ ಇರುತ್ತಿತ್ತು. ಈ ನಡುವೆ ರಾಮಯ್ಯನ ತಂಗಿಯ ಮದುವೆ ನಡೆಯಿತು. ಆಕೆಯ ಗಂಡ ಗುರುಗಳ ಪರಮ ಭಕ್ತ. ಇದರಿಂದ ಸಿಟಗೊಂಡ ರಾಮಯ್ಯ ತಂಗಿಯ ಬಳಿ." ನೀನು ನನ್ನ ಮನೆಯ ಹೊಸ್ತಿಲು ತುಳಿಯಬೇಡ, ತವರುಮನೆ ನಿನಗೆ ಬಾಗಿಲು ಮುಚ್ಚಿದೆ" ಎಂದನು.
ವರ್ಷಗಳು ಸಂದವು ಗುರುಗಳ ವಿರುದ್ಧ ಪ್ರತಿಭಟನೆಗೆ ಯಾವ ಪ್ರತಿಕ್ರಿಯೆಯೂ ಸಿಗಲಿಲ್ಲ. ದಿನ ದಿನಕ್ಕೆ ಪಟಾಲಂ ಕರಗತೊಡಗಿತು. ಈ ನಡುವೆ ರಾಮಯ್ಯನ ಮಗಳು ಬೆಳೆದು ದೊಡ್ಡವಳಾದಳು. ಪ್ರಾಯಕ್ಕೆ ಬಂದ ಹೆಣ್ಣನ್ನು ಮದುವೆಯಾಗಲು ಆಗರ್ಭ ಶ್ರೀಮಂತರೊಬ್ಬರು ಮುಂದೆ ಬಂದರು. ರಾಮಯ್ಯ ಸಂತೋಷದಿಂದ ಮದುವೆ ಮಾಡಿಕೊಟ್ಟನು. ರಾಮಯ್ಯನ ಅಳಿಯ ಮಗಳೊಡನೆ ಅದೇ ಗುರುಗಳನ್ನು ಮನೆಗೆ ಕರೆಯಿಸಿ ಪಾದಪೂಜೆ ಭಿಕ್ಷಾ ಕಾರ್ಯಕ್ರಮ ಏರ್ಪಡಿಸಿದನು. ರಾಮಯ್ಯ ನಗುನಗುತ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡನು.
"ಮತ್ತೆ ಗುರುಗಳು ಜಾತಿವಾದಿಗಳು, ಮನುಷ್ಯರಲ್ಲಿ ಜಾತಿ ಎಂಬುದಿಲ್ಲ ಎಲ್ಲರ ರಕ್ತದ ಬಣ್ಣವೂ ಕೆಂಪು ಹಾಗಾಗಿ ಎಲ್ಲಾ ಒಂದೇ ಅಂದಿದ್ದೆಯೆಲ್ಲಾ " ಎಂದು ಊರಿನವರೊಬ್ಬರು ಕೇಳಿದರು
" ಅಯ್ಯಾ ಮಂಕೇ ನಿಮ್ಮ ಕಣ್ಣಿಗೆ ರಕ್ತ ಕೆಂಪಗೆ ಕಾಣಿಸುತ್ತದೆಯಷ್ಟೆ, ಅದರಲ್ಲಿ ಎ,ಬಿ,ಒ ಮುಂತಾದ ಗುಂಪುಗಳಿವೆ. ಅವು ನಿಮ್ಮಂತಹ ಮಾಮೂಲಿ ಜನರ ಬರಿಗಣ್ಣಿಗೆ ಕಾಣದು. ಅದಕ್ಕೆ ಗುರುಗಳೆಂಬ ಲ್ಯಾಬ್ ಗೆ ಹೋದಾಗ ಗೋಚರಿಸುತ್ತದೆ. ಹಾಗಾಗಿ ಮನುಷ್ಯರಲ್ಲಿ ಖಂಡಿತಾ ಜಾತಿಗಳಿವೆ, ಅದು ಜ್ಞಾನಿಗಳಿಗೆ ಮಾತ್ರಾ ಗೋಚರಿಸುತ್ತೆ. ನಿಮ್ಮಂತಹ ಸಾಮಾನ್ಯ ಜನರಿಗಲ್ಲ." ಎಂದು ಹೇಳಿ ಮಂತ್ರಾಕ್ಷತೆ ಕಣ್ಣಿಗೊತ್ತಿಕೊಂಡನು. ಆವಾಗಲೂ ಗುರುಮಠದ ಗಂಟೆ ಡಣ ಡಣ ಎಂದು ಕನ್ನಡ ಸಿನೆಮಾದಲ್ಲಿ ಓಲಾಡಿದಂತೆ ಓಲಾಡಿ ಶಭ್ದ ಮಾಡಿತು. ಅದರ ನಡುವೆ ಕರ ಕರ ಶಬ್ಧವೂ ಕೇಳಿತು. ಬಹುಶಃ ಒಂದು ಗಂಟೆಗೆ ಮರದ ಕೋಲು ಹಾಕಿದ್ದಿರಬೇಕು.
ಅನೀತಿ: ಕು.ಬುದ್ದಿ ಸೋಲನ್ನೂ ಗೆಲುವನ್ನಾಗಿ ಪರಿವರ್ತಿಸುತ್ತದೆ.
ಮಾತೃದೇವೋ ಭವ
ಓಂದು ಊರಿನಲ್ಲಿ ಶಿವಯ್ಯ ಘನಂದಾರಿ ಪುರೋಹಿತರಿದ್ದರು. ಅವರು ನಿಯಮ ನಿಷ್ಟೆಗಳಲ್ಲಿ ಪ್ರಖ್ಯಾತರಾಗಿದ್ದರು. ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಉತ್ತಮ ಉಪನ್ಯಾಸ ನೀಡುತ್ತಿದ್ದರು. ಒಂದು ದಿನ ಊರಿನ ಗೃಹಸ್ಥನ ಮನೆಯಲ್ಲಿ ಮಾತೆಯೊಬ್ಬರ ಪತಂಗ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದರು. ಫಲಮಂತ್ರಾಕ್ಷತೆಯ ನಂತರ ಪುರೋಹಿತ ಶಿವಯ್ಯರ ಬಳಿ ಆಶೀರ್ವಾಚನ ಮಾಡಿರೆಂದು ಮನೆಯವರು ಕೇಳಿಕೊಂಡರು. ಆಗ ಶಿವಯ್ಯನವರು ಗಂಟಲು ಸರಿ ಮಾಡಿಕೊಂಡು " ನಮ್ಮ ಹಿಂದೂ ಧರ್ಮದಲ್ಲಿ ತಾಯಿ ಎಂದರೆ ದೇವರ ಸಮಾನ, ತಾಯಿಗಿಂತ ಮಿಗಿಲಾದ ದೇವರಿಲ್ಲ. ಆಕೆ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿ ಬೆಳಸುತ್ತಾಳೆ. ಆದ್ದರಿಂದಲೇ ವೇದ "ಮಾತೄ ದೇವೋ ಭವ" ಎಂದಿದೆ. ಆಕೆಯ ಮನಸ್ಸು ಮಕ್ಕಳ ಜೀವನಕ್ಕಾಗಿ ಮಿಡಿಯುತ್ತಿರುತ್ತದೆ. ಆಕೆಯನ್ನು ಮನಸಾರೆ ಪ್ರೀತಿಸಬೇಕು. ಆಕೆಗೆ ಕೆಟ್ಟ ಮಾತನ್ನು ಹೇಳಬಾರದು. ಪ್ರತ್ಯಕ್ಷ ನಡೆದಾಡುವ ದೇವತೆ ಎಂದರೆ ಮಾತೆ. ಆಕೆಯನ್ನು ಪೂಜಿಸಿದರೆ ಸಕಲ ದೇವತೆಗಳನ್ನೂ ಪೂಜಿಸಿದಂತೆ. ಹಾಗೇಯೇ ಇಂತಹ ಸಂದರ್ಭಗಳಲ್ಲಿ ದಾನ ಧರ್ಮಗಳನ್ನು ಹೆಚ್ಚು ಮಾಡಿ ಸಂತುಷ್ಟಗೊಳಿಸಿದರೆ ಅದು ತಾಯಿಗೆ ನಮಿಸಿದಂತೆ............." ಹೀಗೆ ಅರ್ದ ಗಂಟೆಯ ಶಿವಯ್ಯನವರ ಆಶೀರ್ವಚನವನ್ನು ಸೇರಿದ್ದ ಜನತೆ ಆಸ್ವಾದಿಸಿ ತಲೆದೂಗಿತು. ಎಂಥಹಾ ಪಂಡಿತರಪ್ಪಾ ನಿಜವಾಗಿಯೂ ಪೂಜ್ಯರು ಎಂದಿತು. ಕಾರ್ಯಕ್ರಮ ಮುಗಿಸಿ ಎಲ್ಲರೂ ಅವರವರ ಮನೆಗೆ ಹೊರಟರು.
ಶಿವಯ್ಯನವರು ಅಕ್ಕಿ ಗಂಟಿನೊಂದಿಗೆ ಮನೆಗೆ ಬಂದರು. ಜಗುಲಿಯಲ್ಲೆ ಒಂದಿಷ್ಟು ಅಕ್ಕಿ ಕಾಯಿ ರಾಶಿ ಬಿದ್ದಿತ್ತು. ಅದನ್ನು ಕಂಡ ಶಿವಯ್ಯನವರು ಕೆಂಡಾಮಂಡಲರಾಗಿ ಹೆಂಡತಿಯನ್ನು ಕೂಗಿ ಕರೆದು " ಇದೇನು ನಿನಗೆ ಸ್ವಲ್ಪ ಜವಾಬ್ದಾರಿ ಇದೆಯಾ ಈ ತರ ಅಕ್ಕಿ ಕಾಯಿ ರಾಶಿ ಹಾಕಿದ್ದೀಯಲ್ಲ, ಇರುವೆ ಬಂದು ತಿಂದು ಹೋದರೆ ನಾನು ತಂದು ಹಾಕುವವ ಇದ್ದೀನೆ ಅಂತ ನಿನಗೆ ಅಸಡ್ಡೆ" ಎಂದರು. ಆಗ ಹೆಂಡತಿ " ಅದು ನಾ ಮಾಡಿದ್ದಲ್ಲ, ನನ್ನ ಮೇಲೆ ಹಾರಾಡುವುದು ಬೇಡ, ನಿಮ್ಮ ಮ್ಮ ಮುದ್ಕಿ ಇದಾಳಲ್ಲ ಅವಳ ಕೆಲಸ" ಎಂದಳು. ಹೆಂಡತಿ ಹಾಗಂದಿದ್ದೇ ಶಿವಯ್ಯ ನವರ ಧ್ವನಿ " ಅಮ್ಮಾ .. ಅಮ್ಮಾ ನಿಂಗೆ ತಲೆ ಇದೆಯಾ...? ಇವತ್ತಿನ ಕಾಲದಲ್ಲಿ ದುಡಿಯೋದು ಎಷ್ಟು ಕಷ್ಟ ಅಂತ ಕೂತು ತಿನ್ನುವ ನಿನಗೆ ಏನು ಗೊತ್ತು? . ಆ ಭಗವಂತ ನಿಮ್ಗೆಲ್ಲಾ ಆಯುಷ್ಯಾನು ಜಾಸ್ತಿ ಕೊಟ್ಟೀರ್ತಾನೆ......" ಐದು ನಿಮಿಷಗಳ ಕಾಲ ಮಾತೃದೇವೋ ಭವದ ಪೂಜೆಯನ್ನು ಶಿವಯ್ಯನವರು ಮಾಡಿದರು. ಈ ಸಂದರ್ಭದಲ್ಲಿಯೂ ಮನೆ ದೇವರ ಗಂಟೆ ತೆಲಗು ಸಿನಿಮಾದಲ್ಲಿ ಓಲಾಡುವಂತೆ ಓಲಾಡಿ ಶಬ್ದ ಮಾಡಿತು. ಆದರೆ ಗಂಟೆ ಸಣ್ಣದಾದ್ದರಿಂದ ಶಬ್ಧ ಜೋರಾಗಿ ಕೇಳಲಿಲ್ಲ.
ಅನೀತಿ: ಬುದ್ಧಿ ಉಪಯೋಗಿಸಿದರೆ ಗಂಟೆ ಗಂಟೆಗೆ ಸ್ವಭಾವ ಬದಲಿಸಬಹುದು.
ಈ ಮೇಲಿನ ಪಂಚಕುತಂತ್ರದ ಮೂರು ಕತೆಗಳನ್ನು ನೀವುಗಳು ಈಗಾಗಲೆ ಕೇಳಿದ್ದರೆ ನಾನು ಜವಾಬ್ದಾರನಲ್ಲ.......! - ಆರ್ಶ