Friday, November 7, 2008

ತುಂಬೆ ಇಳಕಲ ಬಿಳಿ ದೆವ್ವ.


ಅಮಾವಾಸೆಯಾದ್ದರಿಂದ ಎಲ್ಲೆಲ್ಲೂ ಗಾಢಾಂಧಕಾರ. ಬೆಳಕಿನ ಹುಡುಕಾಟಕ್ಕೆ ನಕ್ಷತ್ರಗಳನ್ನಾದರೂ ಅವಲಂಬಿಸೋಣ ಎಂದರೆ ಮೋಡಗಳು ಅವನ್ನು ಮರೆಮಾಚಿದ್ದವು. ಸಾಗರದಿಂದ ಕನಿಷ್ಟ ೧೨ ಕಿಲೋಮೀಟರ್ ದೂರದ ಮನೆಗೆ ಹೋಗಲು ಬಸ್ಸೂ ಇರಲಿಲ್ಲ. ಇನ್ನೇನು ಮಾಡುವುದು ಲಟಾರಿ ಸೈಕಲ್ಲೇ ಗತಿ ಎಂದು ಅನಿವಾರ್ಯವಾಗಿ ಮನೆಯತ್ತ ಪೆಡಲ್ ತುಳಿಯತೊಡಗಿದೆ. ವರದಳ್ಳಿ ಕ್ರಾಸ್ ವರೆಗೆ ಜೋಗಕ್ಕೆ ಹೋಗುವ ವಾಹನಗಳ ಬೆಳಕು ಸಿಕ್ಕಿತು. ನಂತರ ಕರ್ಕಿಕೊಪ್ಪದ ಕಡೆ ತಿರುಗಿದಾಗ ಬೆಳಕಿಲ್ಲದೆ ಕಂಗಾಲಾದೆ. ಡೈನಮೋ ದುರಸ್ತಿ ಮಾಡಲು ಹೆಣಗಿದೆ. ಬಡಪೆಟ್ಟಿಗೆ ಅದು ಬಗ್ಗಲಿಲ್ಲ ಗರಗರ ಸದ್ದು ಬಂತೇ ಹೊರತು ಬೆಳಕು ಬರಲಿಲ್ಲ. ಬೆಳಕು ಇಲ್ಲದ ಸೈಕಲ್ ತುಳಿಯುವುದೊಂದೇ ಅನಿವಾರ್ಯ.ಕಣ್ಣು ನಿಧಾನ ಕತ್ತಲೆಗೆ ಹೊಂದಿಕೊಂಡಿತು. ತುಳಿಯುತ್ತಾ ಸಾಗಿದೆ. ಕರ್ಕಿಕೊಪ್ಪ ದಾಟಿದ ಮೇಲೆ ಬೆಂಕಟವಳ್ಳಿತನಕ ಘಟ್ಟದ ರಸ್ತೆ ನಂತರ ಭರ್ಜರಿ ಇಳಿಜಾರು. ಘಟ್ಟದಲ್ಲಿ ಸೈಕಲ್ ತುಳಿಯಲಾರದೆ ದಬ್ಬಿಕೊಂಡು ಹೊರಟೆ. ಸೈಕಲ್ ಘಟ್ಟದಲ್ಲಿ ದಬ್ಬಿ ದಬ್ಬಿ ಬೆವರು ಗುದುಕುತ್ತಿತ್ತು . ಅಂತೂ ಇಂತೂ ಸುರಿವ ಬೆವರಿನೊಡನೆ ಘಟ್ಟದ ರಸ್ತೆ ಮುಗಿಯಿತು. ಇಳಿಜಾರು ಪ್ರಾರಂಭವಾದ್ದರಿಂದ ಸ್ವಲ್ಪ ಹಿತ . ಪೆಡಲ್ ಮಾಡದೆ ೨ ಕಿಲೋಮೀಟರ್ ಸಾಗಬಹುದು ಎಂದು ಆಲೋಚಿಸುತ್ತಾ ಸೈಕಲ್ ಹತ್ತಿ ಕುಳಿತು ಒಂದೆರಡು ಮಾರು ದೂರ ಸಾಗಿದ್ದೆ. ಇದ್ದಕ್ಕಿದ್ದಂತೆ ಪಳಕ್ಕನೆ ಸೈಕಲ್ ಡೈನಮೋ ಹತ್ತಿಕೊಂಡಿತು. ಅನಿರೀಕ್ಷಿತವಾದ ಆಘಾತಕ್ಕೆ ಬೆಚ್ಚಿದೆ. ನಂತರ ತುಸು ಸಾವಾರಿಸಿಕೊಂಡು ತನ್ನಿಂದತಾನೆ ಹತ್ತಿರಬೇಕೆಂದು ಆಲೋಚಿಸುತ್ತಾ ಮುಂದೆ ಸಾಗಿದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತುಕೊಂಡ ಅನುಭವಾಯಿತು. ನನ್ನ ಸೊಂಟದ ಬಳಿ ಬಿಳಿಯದಾದ ಎರಡು ಉದ್ದನೆಯ ಕೈಗಳು ನೇತಾಡುತ್ತಿದ್ದವು. ಒಮ್ಮೆಲೆ ಮೈ ಮರಗಟ್ಟಿದ ಅನುಭವವಾಯಿತು. ಈಗ ನನಗೆ ಸೈಕಲ್ ಡೈನಾಮೋ ತನ್ನಿಂದ ತಾನೆ ಹತ್ತಿಕೊಂಡದ್ದರ ರಹಸ್ಯ ತಿಳಿಯಿತು. ಘಟ್ಟದ ರಸ್ತೆಯಲ್ಲಿ ಸೈಕಲ್ ದಬ್ಬುವಾಗಲೂ ಅಷ್ಟೊಂದು ಬೆವರು ಗುದುಕಿರಲಿಲ್ಲ. ಅಂಗಿ ಚೊಣ್ಣ ಎಲ್ಲೂ ಎಲ್ಲೆಲ್ಲೂ ನೀರು ದುಮ್ಮಿಕ್ಕುತ್ತಿದೆ. ಯಾವ ರಗಳೆಯೂ ಬೇಡ ಸೈಕಲ್ ನಿಲ್ಲಿಸಿ ಬಿದ್ದು ಓಡಿಬಿಡೋಣ ಎಂದು ಬ್ರೆಕ್ ಹಾಕಿದೆ. ಇಲ್ಲ ಬ್ರೇಕ್ ಎಷ್ಟು ಗಟ್ಟಿಯಾಗಿ ಅಮುಕಿದರೂ ಅದು ಕೆಲಸ ಮಾಡುತ್ತಿಲ್ಲ. ಕಾಲನ್ನಾದರೂ ನೆಲಕ್ಕೆ ಊರೊಣ ಎಂದರೆ ಕಾಲು ಸೈಕಲ್ ಪೆಡಲ್ಲಿಗೆ ಅಂಟಿಕೊಂಡಿದೆ. ಇಷ್ಟಾದ ಮೇಲೆ ನನಗೆ ಮನವರಿಕೆಯಾಯಿತು ಇಷ್ಟು ದಿವಸ ನಾನು ಚೌಡಿ ಭೂತ ದೆವ್ವ ಎನ್ನುವುದೆಲ್ಲಾ ಬೋಗಸ್ ಎನ್ನುತ್ತಿದ್ದೆ. ಆದರೆ ಇಂದು ಸ್ವಯಂ ನನಗೆ ಅನುಭೂತಿಯಾಗುತ್ತಿದೆ. ಮಾಡುವುದೇನು? ಎಂದು ತೋಚುತ್ತಿಲ್ಲ. ಒಂದೇಸವನೆ ಗಾಯಿತ್ರಿ ಮಂತ್ರ ಹೇಳಲೆತ್ನಿಸಿದೆ. ಆದರೆ ಅರ್ದದ ವರೆಗೆ ಗಾಯಿತ್ರಿ ಮಂತ್ರ ಬಂತು ಮುಂದೆ ನೆನಪಾಗುತ್ತಿಲ್ಲ. ಇಲ್ಲ ಇವೆಲ್ಲ ಸತ್ಯ ಅಲ್ಲ ನಾನು ಭ್ರಮೆಗೊಳಗಾಗಿದ್ದೇನೆ ಎಂದು ಹೊರಮನಸ್ಸಿಗೆ ಧೈರ್ಯ ತುಂಬಿಸಲೆತ್ನಿಸಿದೆ. ಅಷ್ಟರಲ್ಲಿ ನನ್ನ ಕಿರುಗಣ್ಣಿಗೆ ಕಾಣುತ್ತಿದ್ದ ಬಿಳಿಯ ಕೈಗಳದ್ದೇ ಇರಬೇಕು ಧ್ವನಿ ಹೊರಟಿತು. "ಹ ಹ ಹ ಮೂರ್ಖ ನಿನ್ನ ಪ್ರಯತ್ನ ಬಿಡು, ". ಈಗ ಮಾತ್ರ ಇವ್ಯಾವುದೂ ನನ್ನ ಭ್ರಮೆಯಲ್ಲ ಎಂಬುದು ಅರಿವಿಗೆ ಬಂತು. ತಿರುಗಿ ನನ್ನ ಹಿಂದೆ ಕುಳಿತಿರುವುದು ಏನು ಎಂದು ನೋಡಿಬಿಡೋಣ, ಎಂಬ ಭಯಮಿಶ್ರಿತ ಕುತೂಹಲದಿಂದ ತಿರುಗಲೆತ್ನಿಸಿದೆ ಆದರೆ ಕುತ್ತಿಗೆ ತಿರುಗುತ್ತಿಲ್ಲ. ಯಾರೋ ಹಿಂದಿನಿಂದ ಕುತ್ತಿಗೆ ಒತ್ತಿ ಹಿಡಿದಂತೆ ಆಯಿತು. ಜತೆಗೆ ಹಿಂದಿನ ದನಿ ಹೇಳಿತು " ಮೂರ್ಖ ತಿರುಗಿ ನನ್ನನ್ನೇನು ನೋಡುತ್ತೀ... ಮುಂದೆ ನೋಡು ಅಲ್ಲೇನಿದೆ ಅಂತ" ಎಂದಿತು. ನನ್ನ ಸೈಕಲ್ಲಿನ ಅನತಿ ದೂರದಲ್ಲಿ ಕಾಲೇ ಇಲ್ಲದ ವಿಕಾರ ಮುಖದ ಆಕೃತಿ ಸೈಕಲ್ ಜತೆಜತೆಗೆ ತೇಲುತ್ತಾ ಬರತೊಡಗಿತು. ಅಮ್ಮಾ ಇದ್ಯಾವ ಮಾಯೆ. ದೆವ್ವ ಅಂಬೋದು ಮನುಷ್ಯ ಸೃಷ್ಟಿ ಎಂದು ನಾಸ್ತಿಕ ವಾದ ಮಾಡಿ ಎಲ್ಲರನ್ನೂ ಸೋಲಿಸುತ್ತಿದ್ದ ನನಗೆ ಇಂಥಹಾ ಅನುಭವ ವಾಯಿತಲ್ಲ. ಏನು ಮಾಡಲಿ ಈಗ ಒಟ್ಟಿನಲ್ಲಿ ಇನ್ನು ನಾನು ಬದುಕಲಾರೆ ಎನ್ನುವ ಹಂತ ತಲುಪಿದೆ. ಅಂತಿಮವಾಗಿ ಶ್ರೀಧರ ಸ್ವಾಮಿಗಳು ನೆನಪಾದರು. "ಶ್ರೀಧರ ಸ್ವಾಮಿ ಕಾಪಾಡು ತಂದೆ" ಎಂದು ಕಿರುಚಿಕೊಂಡೆ. ಮರುಕ್ಷಣ ಎಲ್ಲಾ ಮಾಯವಾಯಿತು. ನಾನು ನನ್ನ ಬಡಕಲು ಸೈಕಲ್ ನಲ್ಲಿ ಘಟ್ಟದ ರಸ್ತೆಯ ಆರಂಭದಲ್ಲಿ ಇದ್ದೆ. ಇಷ್ಟೊತ್ತು ಕಂಡಿದ್ದು ಭ್ರಮೆ ಎನ್ನುವಷ್ಟರಮಟ್ಟಿಗೆ ಎಲ್ಲ ತಿಳಿಯಾಗಿತ್ತು. ಶ್ರೀಧರ ಸ್ವಾಮಿಗಳ ಮಹಿಮೆ ನೆನೆದು ಪುಳಕಿತನಾದೆ. ಎಲ್ಲರೀಗೂ ಈ ಸತ್ಯದ ಘಟನೆ ಹೇಳಬೇಕೆಂದುಕೊಂಡು ಸುಲಲಿತವಾಗಿ ಮನೆ ಸೇರಿದೆ.
ಇದೊಂದು ಘಟನೆ ನಡೆದು ಸುಮಾರು ನಲವತ್ತು ವರ್ಷಗಳು ಸಂದಿವೆ. ಈಗ ವಾಸ್ತವದ ಕತೆ ಹೇಳುತ್ತೇನೆ. ಮೇಲೆ ನಿಮಗೆ ವಿವರಿಸಿದ ಅನುಭವ ನನ್ನದಲ್ಲ. ನನ್ನ ಬಾಲ್ಯದಲ್ಲಿ ಸುಬ್ಬಣ್ಣ ಎಂಬ ನನಗೆ ವಾರಿಗೆಯಲ್ಲಿ ಅಣ್ಣನಾದವನ ಕಥೆ ಇದು. ನಮ್ಮನ್ನೆಲ್ಲಾ ಸುತ್ತು ಕೂರಿಸಿಕೊಂಡು ಇಂತಹ ಹಸಿ ಹಸಿ ಸುಳ್ಳಿನ ಕತೆಗಳನ್ನು ತೇಲಿಬಿಡುತ್ತಿದ್ದ. ನಮಗೆಲ್ಲಾ ಅವನು ಕಥೆ ವಿವರಿಸುವ ಪರಿಯಿಂದ ಮೈಮೇಲೆ ಮುಳ್ಳುಗಳು ಏಳುತ್ತಿದ್ದವು. ಅವನು ಇವನ್ನೆಲ್ಲಾ ಗೆದ್ದ ವೀರನಂತೆ ತೋರುತ್ತಿದ್ದ. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಈ ದೆವ್ವ ಭೂತಗಳು ಅಚ್ಚೊತ್ತಿ ಕುಳಿತು ಬಿಟ್ಟಿದೆ. ಅವೆಲ್ಲಾ ಪರಮ ಸುಳ್ಳು ಎಂದು ತಿಳಿದ್ದಿದ್ದರೂ ಹುಲ್ಕೋಡಿಗೆ ಹೋಗುವಾಗ ಕರ್ಕಿಕೊಪ್ಪ ದಾಟಿದಮೇಲೆ ತುಂಬೆ ಇಳಕಲು ಇಳಿಯುವಾಗ ಸುಬಣ್ಣನ ಕಥೆಗಳು ನೆನಪಾಗುತ್ತವೆ. ಅಕಸ್ಮಾತ್ ರಾತ್ರಿಯಾಗಿದ್ದರೆ ಒಂದು ಕ್ಷಣ ಮೈಮೇಲೆ ಮುಳ್ಳುಗಳೆದ್ದು ಮಾಯವಾಗುತ್ತದೆ. ಸುಬ್ಬಣ್ಣ ಹೀರೋ ಆಗಲು ಹೋಗಿ ಇಂತಹ ಓಳಿನ ಕಥೆಗಳು ಬಾಲ್ಯದಲ್ಲಿ ಸ್ವಲ್ಪ ಯಡವಟ್ಟು ನಂಬಿಕೆಗಳು ಉಳಿದಿವೆ. ಆದರೆ ನಾನಂತೂ ಸಣ್ಣ ಹುಡುಗರಿಗೆ ಇಂತಹ ಕಥೆಗಳನ್ನು ಹೇಳುವುದಿಲ್ಲ. ನೀವೂ ಹಾಗೆಯೇ ಅಂತ ಅಂದುಕೊಂಡಿದ್ದೇನೆ. ಅವು ತುಂಬಾ ತುಂಬಾ ದುಷ್ಪರಿಣಾಮ ಮಾಡಿಬಿಡುತ್ತವೆ. ಏನಂತೀರಿ.?
ಕೊನೆಯದಾಗಿ: ಭೂತ ದೆವ್ವ ವೆಂಬುದು ಭ್ರಮೆಯೋ ..ವಾಸ್ತವವೋ ..? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು ಭೂತವೆಂಬುದು ವಾಸ್ತವ ದೆವ್ವವೆಂಬುದು ಭ್ರಮೆ ಎಂದುತ್ತರಿಸದರು, ನಾನು ಬೂತವನ್ನು ಹೊಡೆದು ಪ್ರಶ್ನೆ ಕೇಳಿದ್ದರಿಂದ ಅಂತಹ ಉತ್ತರ ಬಂತು. ಮತ್ತೆ ಮರುಪ್ರಶ್ನಿಸಲಿಲ್ಲ.
ಟಿಪ್ಸ್: ಹುಳುಕು ಹಲ್ಲಿನ ಕಾಟ ತಪ್ಪಿಸಿಕೊಳ್ಳಲು ಎಲೆ ಅಡಿಕೆ ಜತೆ ತಂಬಾಕನ್ನು ಅಗಿಯಿರಿ. ಇದರಿಂದಾಗಿ ತಂಬಾಕು ಹಾಕುವುದಕ್ಕೆ ಕಾರಣ ಸಿಗುವುದು ಸುಲಭವಾಗುತ್ತದೆ
ಅಂತಿಮವಾಗಿ : ಸುಶ್ರುತ ದೊಡ್ಡೇರಿಯವರು ಬರೆದ ಸಂಪಿಗೆ ಮರದ ಬರಹವನ್ನು ಇದು ಹೋಲುತ್ತದೆ ಎಂಬ ಕಾಮೆಂಟ್ ಮಾಡಿದ್ದಾರೆ. ಹೋಲುವುದು ನಿಜ. ಅದನ್ನು ಅಂದು ಓದಿದ ನಾನು ಇದನ್ನು ಬರೆಯಬೇಕೆಂದು ಅಂದೇ ತೀರ್ಮಾನಿಸಿದ್ದೆ. ಆದರೆ ಇಂದು ತದ್ಗತ್ ಆಯಿತು.

Friday, October 31, 2008

ಜೇನಿನಂತ ಜೇನು ಕೊನೆಯಲ್ಲಿ ಕನ್ನಡ




ನವೆಂಬರ್ ತಿಂಗಳು ಬಂತೆಂದರೆ ನನಗೆ ದಿನಾಲೂ ಜೇನು ಪೆಟ್ಟಿಗೆಯನ್ನು ನೋಡುವ ಕೆಲಸ ಆರಂಭವಾಗುತ್ತದೆ. ಮಳೆಗಾಲದ ಅಬ್ಬರ ಕಳೆದು ತಣ್ಣನೆಯ ಚಳಿ ಕೊರೆಯಲು ಆರಂಭವಾಗುವ ಈ ದಿನಗಳಲ್ಲಿ ವಾತಾವರಣ ಆಹ್ಲಾದಕರ. ಮಲಗಿದ್ದವನ ಹಿಡಕೊಂಡೆ ಎದ್ದವನಿಂದ ಒದೆಸಿಕೊಂಡೆ ಎನ್ನುವುದು ಚಳಿಯ ಧ್ಯೇಯ ವಾಕ್ಯ. ಹಪ್ಪರೆ ಮೈನವರಿಗೆ ಮೈಯೆಲ್ಲಾ ಉರಿಉರಿ. ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಸಾಫ್ ಮಾಡಬೇಕು. ಅಂತಹ ಚಳಿಗಾಲದಲ್ಲಿ ಜೇನುಪೆಟ್ಟಿಗೆಯಲ್ಲಿ ಅದೊಂದು ನಿರ್ಧಾರ ಮೊಳಕೆಯೊಡೆಯುತ್ತದೆ. ರಾಣಿ ಎಂಬ ಹೆಣ್ಣು ನೊಣ ತನ್ನ ಆ ನಿರ್ಧಾರವನ್ನು ಕೆಲಸಗಾರ ನೊಣಕ್ಕೆ ರವಾನಿಸುತ್ತದೆ. ಆ ನಿರ್ಧಾರ ಯಾವುದೆಂದು ಕೇಳಿದಿರಾ..? ಅದೇ ನಮ್ಮ ವಂಶದ ರಥ ಮುಂದುವರೆಯಲು ಗಂಡಿನ ಅವಶ್ಯಕತೆಯಿದೆ ಗಂಡು ಮೊಟ್ಟೆಯನ್ನಿಡಿ. ನಾನಿಡುವ ಲಾರ್ವಾ ಗಂಡು ನೊಣವಾಗಬೇಕು ಹಾಗಾಗಿ ಅದಕ್ಕೆ ಗಂಡುನೊಣವಾಗುವ ಆಹಾರ ನೀಡಿ. ಎಂದು ಫರ್ಮಾನು ಹೊರಡಿಸುತ್ತದೆ. ಜೂನ್ ತಿಂಗಳಿನಿಂದ ಗೂಡಿನಿಂದ ಅಕ್ಷರಶಃ ಮಾಯವಾಗಿದ್ದ ಗಂಡು ನೊಣಗಳು ನವೆಂಬರ್ ಹದಿನೈದು ಇಪ್ಪತ್ತರ ಹೊತ್ತಿಗೆ ಒಂದೊಂದೆ ಜೇನಿನ ಪ್ರಪಂಚದಲ್ಲಿ ಕಣ್ಣುಬಿಡಲಾರಂಭಿಸುತ್ತವೆ. ಜೇನಿನ ಪ್ರಪಂಚದಲ್ಲಿ ಗಂಡು ಎಂಬುದು ಕೇವಲ ಸಂತಾನೋತ್ಪತ್ತಿಯ ಕೆಲಸಕ್ಕೆ ಸೀಮಿತ. ಒಂದು ಗೂಡಿನ ಒಂದು ನೊಣಕ್ಕೆ ಆ ಭಾಗ್ಯ. ಅದು ಭಾಗ್ಯವೆನ್ನುತ್ತೀರೋ ಅಥವಾ ಅಬ್ಬಾ ಅನ್ನುತ್ತೀರೋ ಅದು ನಿಮಗೆ ಬಿಟ್ಟ ವಿಚಾರ. ಈಗ ಕತೆಗೆ ಬರೊಣ. ಹೀಗೆ ನವೆಂಬರ್ ತಿಂಗಳು ಮುಗಿಯುವ ಹೊತ್ತಿಗೆ ನೂರಾರು ಗಂಡು ನೊಣಗಳು ಪ್ರಾಯಕ್ಕೆ ಬಂದುಬಿಡುತ್ತವೆ. ಆವಾಗ ರಾಣಿ ನೊಣ ತನ್ನ ಕೆಲಸಗಾರ ನೊಣಗಳಿಗೆ ಮತ್ತೊಂದು ಫರ್ಮಾನು ಹೊರಡಿಸುತ್ತದೆ. ನಾವು ಈಗ ಹಿಸ್ಸೆ ಮಾಡಿಕೊಳ್ಳಬೇಕು, ಆ ಕಾರಣದಿಂದ ಹಿಸ್ಸೆಯಾಗಬೇಕು ಎಂದಾದಾಗ ಯಜಮಾನಿಕೆಗೆ ರಾಣಿ ನೊಣದ ಅವಶ್ಯಕತೆಯಿದೆ ಹಾಗಾಗಿ ನಾನು ಇಡುವ ಮೊಟ್ಟೆ ರಾಣಿಯಾಗುವಂತೆ ರಾಜಾಷಾಹಿ ಆಹಾರ ಕೊಡಿ ಎನ್ನುತ್ತದೆ. ಕೆಲಸಗಾರ ನೊಣಗಳು ತಮ್ಮ ಕುಟುಂಬದ ಎಲ್ಲಾ ನೊಣಗಳನ್ನು ಲೆಕ್ಕ ಮಾಡಿ ಎಷ್ಟು ರಾಣಿ ಮೊಟ್ಟೆಗಳನ್ನು ಇಡಬಹುದೆಂದು ಎಣಿಸಿ ಒಂದೈದು ಹೊಸ ರಾಣಿಮೊಟ್ಟೆ ಸಿದ್ಧಪಡಿಸುತ್ತವೆ. ರಾಣಿ ಮೊಟ್ಟೆ ೧೩ ರಿಂದ ೧೫ ದಿವಸಗಳೊಳಗೆ ರಾಣಿಯಾಗುತ್ತವೆ. ಅಲ್ಲಿಂದ ಹಿಸ್ಸೆ ಪ್ರಕ್ರಿಯೆ ಷುರು. ಹೊಸ ರಾಣಿ ಒಂದೊಂದಾಗಿ ಹೊರಬಂದಂತೆ ಗಂಡು ನೋಣಗಳು ಮೀಸೆಯಮೇಲೆ ಕೈ ಅಲ್ಲಲ್ಲ ಕಾಲನ್ನಿಟ್ಟು ತಿರುವಿಕೊಳ್ಳಲು ಪ್ರಾರಂಭಿಸುತ್ತವೆ. ಹೊಸರಾಣಿ ಹೊರ ಬಂದು ನಾಲ್ಕೈದು ತಾಸಿನೊಳಗೆ ಒಂದಿಷ್ಟು ಗಂಡು ನೊಣ ಹಾಗೂ ಮತ್ತೊಂದಿಷ್ಟು ಕೆಲಸಗಾರ ನೊಣವನ್ನು ಕಟ್ಟಿಕೊಂಡು ಬೇರೆ ಗೂಡಿಗೆ ರೈಟ್. ಗೂಡು ಸೇರಿ ಕೆಲಸಗಾರ ನೊಣ ತತ್ತಿಕಟ್ಟುವ ಕೆಲ್ಸ ಆರಂಬಿಸುತ್ತಿದ್ದಂತೆ ರಾಣಿ ನೊಣ ಮಿಲನ ಮಹೋತ್ಸವದ ಹಾರಾಟ ಆರಂಬಿಸುತ್ತದೆ. ಒಂದಿಷ್ಟು ಗಂಡು ನೊಣದೊಂದಿಗೆ ಎತ್ತರಕ್ಕೆ ಎತ್ತರದೆತ್ತರಕ್ಕೆ ಏರುವ ರಾಣಿ ತನ್ನಷ್ಟು ಎತ್ತರಕ್ಕೇರುವ ಒಂದೇ ಒಂದು ಗಂಡಿನೊಂದಿಗೆ ಬಾನಲ್ಲಿ ಮಧುಚಂದ್ರವನ್ನು ಆಚರಿಸುತ್ತದೆ. ರಾಣಿಯೊಡನೆ ಮಿಲನ ಹೊಂದಿದ ಮರುಕ್ಷಣ ಆ ಗಂಡುನೊಣ ಸಾವನ್ನಪ್ಪುತ್ತದೆ. ಮಿಕ್ಕ ಗಂಡು ನೊಣಕ್ಕೆ ರಾಣಿಯೊಡನೆ ಸೇರುವ ಅವಕಾಶದೊರೆಯದಿದ್ದರೂ ಜೀವದಾನವಾಗಿರುತ್ತದೆ. ಮತ್ತೆ ಜೂನ್ ತಿಂಗಳು ತನಕ ಪುಕ್ಕಟ್ಟೇ ಕೆಲಸಮಾಡದೇ ತುಪ್ಪ ತಿನ್ನುತ್ತಾ ಆರಾಮಾವಾಗಿರುವ ಯೋಗ.ಒಮ್ಮೆ ಗಂಡನ್ನು ಸೇರಿದ ರಾಣಿ ನೊಣ ಅದರ ಜೀವಿತಾವಧಿಯಾದ ಮೂರು ವರ್‍ಷಗಳ ತನಕ ನಿರಂತರ ಅವಶ್ಯಕತೆ ಇದ್ದರೆ ದಿನವೊಂದಕ್ಕೆ ಒಂದೂವರೆ ಸಾವಿರ ಮೊಟ್ಟೆಗಳವರೆಗೂ ಇಡುತ್ತಾ ಸಂಸಾರ ನಡೆಸುತ್ತದೆ. ಮತ್ತೆ ಜೂನ್ ತಿಂಗಳು ಆರಂಭವಾಗುತ್ತಿದಂತೆ ಪ್ರಕೃತಿಯಲ್ಲಿ ಜೇನಿಗೆ ಬೇಕಾದ ಆಹಾರ ಸಿಗದ ಕಾರಣ ಅನಾವಶ್ಯಕ ಗಂಡು ನೊಣಗಳ ಜೀವಕ್ಕೆ ಮೊದಲ ಕುತ್ತು. ಎಲ್ಲಾ ಗಂಡುನೊಣಗಳನ್ನು ಆಹಾರ ಕೊಡದೆ ಫಿನಿಶ್ ಮಾಡಿಬಿಡುತ್ತದೆ.ಮತ್ತೆ ನವೆಂಬರ್ ಗೆ ಹೊಸ ಸೃಷ್ಟಿ. ಇದು ಪ್ರಕೃತಿಯ ವಿಚಿತ್ರದಾಟ.

ಹಾ ಈ ಸೃಷ್ಟಿ ರಹಸ್ಯವನ್ನು ಹೆಂಗಸರಿಗೆ ಹೇಳಬೇಡಿ .....ಮತ್ತೆ ಅನುಕರಿಸಿದರೆ ನಮ್ಮ ಗತಿ... !

ನಾನು ಗಂಡು ನೊಣ ಪೆಟ್ಟಿಗೆಯಲ್ಲಿ ಕಂಡೊಡನೆ ಅವುಗಳನ್ನು ಕೃತಕವಾಗಿ ಹಿಸ್ಸೆಮಾಡಿಸಬೇಕು. ಇಲ್ಲದಿದ್ದರೆ ನೀವು ನಮ್ಮಲ್ಲಿಗೆ ಬಂದಾಗ ಕೊಡಲು ಒಂದು ತೊಟ್ಟೂ ತುಪ್ಪ ಇರುವುದಿಲ್ಲ. ಹಾಗಾಗಿ ನಿತ್ಯ ಪೆಟ್ಟಿಗೆಯ ಮುಚ್ಚಳ ತೆಗೆದು ಬಂದೆಯಾ.. ಹೀರೋ..! ಎಂದು ನೋಡುತ್ತಲಿದ್ದೇನೆ. ಜೇನಿನ ಜೀವನದಲ್ಲಿ ಇಂತಹ ಹತ್ತಾರು ಅಚ್ಚರಿಯ ವಿಷಯಗಳಿವೆ ನಮ್ಮ ನಿಮ್ಮ ಜೀವನದಲ್ಲಿ ಇರುವಂತೆ. ಆದರೂ ಅದೇನೆ ಇರಲಿ ಜೇನು ನಮ್ಮ ಕನ್ನಡಕ್ಕೂ ತುಂಬಾ ನಂಟು ಎಂಬ ಹೊಸ ವಿಚಾರವನ್ನು ಸೇರಿಸಬಹುದು. ಕಾರಣ ಕನ್ನಡ ವರ್ಷಕ್ಕೊಮ್ಮೆ ಶುರುವಾಗುವುದು ನವಂಬರ್ ಒಂದರಿಂದ ಮತ್ತು ಜೇನಿನ ಹೊಸ ಜೀವನ ಚಕ್ರದ ಚ ಟುವಟಿಕೆ ಯ ಆರಂಭವೂ ನವೆಂಬರ್ರೇ.... ಹ್ಯಾಪಿ ಕನ್ನ್ಡಡ ರಾಜ್ಯೋತ್ಸವ, ವಣಕ್ಕಂ, ನಮಸ್ಕಾರಮು.

ಕೊನೆಯದಾಗಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇಂದು ಸಿಕ್ಕಿದೆ!ಸಿರಿಗನ್ನಡಂ ಗೆಲ್ಗೆ!ನಮ್ಮದು ಪರಿಪೂರ್ಣ ಭಾಷೆ!ಇಷ್ಟು ಪರಿಪೂರ್ಣವಾಗಿ ಬರೆಯಲು ಮತ್ತು ಉಚ್ಛರಿಸಲುಬೇರಾವ ಭಾಷೆಯಲ್ಲಿ ಸಾಧ್ಯ?
ಶಾಂತಿ ಸೌಹಾರ್ಧ ಕನ್ನಡ ನಾಡಿನಲ್ಲಿ ಮತ್ತು ನಮ್ಮ ದೇಶದಲ್ಲಿ ನೆಲೆಸಲಿ!ಇಂದು ಎಲ್ಲರಿಗೂಸಂತೋಷದ ರಾಜ್ಯೋತ್ಸವ! ಎಂದು ಪೆಜತ್ತಾಯ ಮೈಲ್ ಮಾಡಿದ್ದಾರೆ ಅವರಿಗೆ ಏನೆಂದು ಉತ್ತರಿಸಲಿ ಎಂದು ಆನಂದ ರಾಮಾ ಶಾಸ್ತ್ರಿಗಳನ್ನು ಕೇಳಿದೆ ಅದಕ್ಕವರು ಓಕೆ, ಥ್ಯಾಂಕ್ಯೂ ಸೇಮ್ ಟು ಯೂ ಅಂತ ಉತ್ತರಿಸು ಅದೇ ಸರಿಯಾದ ಕನ್ನಡ ಎಂದು ಬಿಡೋದೆ


Tuesday, October 28, 2008

ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ

ಆತ್ಮೀಯರೆ
ನಾಳೆ ಅಂದರೆ ೨೯-೧೦-೨೦೦೮ ರ ಸಂಜೆ ನಮ್ಮ ತಲವಾಟ ಶಾಲಾ ಆವರಣದಲ್ಲಿ ಕಟ್ಟೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಚಿಂತನ ವಿಕಾಸ ವಾಹಿನಿ ತಲವಾಟ ರವರು ಹಮ್ಮಿಕೊಂಡಿದ್ದಾರೆ. ಹಬ್ಬವನ್ನು ಇನ್ನಷ್ಟು ರಂಗಾಗಿಸೋಣ ಬನ್ನಿ. ಬರಲಾಗದಿದ್ದರೆ ನವೆಂಬರ್ ೧ ನೆ ತಾರೀಖು ನಿಮಗೆ ವಿಶೇಷಾಂಕದ ಪಿಡಿಎಫ್ ಪ್ರತಿ ಆನ್ ಲೈನ್ ಮುಖಾಂತರ ತಲುಪುತ್ತದೆ
ಧನ್ಯವಾದಗಳು
ಚಿಂತನ ವಿಕಾಸ ವಾಹಿನಿ
ಕಟ್ಟೆ ಪತ್ರಿಕೆ ತಲವಾಟ

Saturday, October 25, 2008

ದೀಪಾವಳಿಯಾದ ದೊಡ್ದಹಬ್ಬ



ದೀಪಾವಳಿ ಹಬ್ಬ ಎಂದರೆ ಬೆಳಕಿನ ಹಬ್ಬ ಅಂತ ಇತ್ತೀಚೆಗೆ ನಮಗೆ ಗೊತ್ತಾದದ್ದು. ಪಟ್ಟಣದ ಸಂಪರ್ಕ ಬಂದಮೇಲೆ ದೀಪಾವಳಿ ಅಂದರೆ ಪಟಾಕಿ ಹಬ್ಬ, ಸಾಲು ಸಾಲು ಹಣತೆಯ ಹಚ್ಚಿಡುವ ಬೆಳಕಿನ ಹಬ್ಬ ಮುಂತಾಗಿ ಅರಿವಾಗಿದ್ದು.ಅಲ್ಲಿಯವರೆಗೆ ಗೋವುಗಳ ಹಬ್ಬ ಎಂದು ನಮ್ಮಲ್ಲಿ ಚಿರಪರಿಚಿತ. ನಮ್ಮಲ್ಲಿ ಪಟಾಕಿ ಯ ಸದ್ದು ಕೇಳಬೇಕೆಂದರೆ ಅದು ಗಣೇಶ ಚೌತಿ. ಹಣತೆಯಲ್ಲಿ ದೀಪ ಹಚ್ಚಿಡಬೇಕೆಂದರೆ ಅದು ಕಾರ್ತಿಕ ಹಬ್ಬ. ಈಗ ಪಟ್ಟಣದಲ್ಲಿ ಟಿವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಂದಮೇಲೆ ದೀಪಾವಳಿಯಂದು ಪಟಾಕಿ ಹಚ್ಚಿ ನಂತರ ಸಂಜೆ ಹಣತೆಯಲ್ಲಿ ದೀಪ ಹಚ್ಚುವ ಪರಿಪಾಟ ಆರಂಭವಾಗಿದೆ. ಆ ಕಾರಣದಿಂದ ದೀಪಾವಳಿಯಲ್ಲಿ ಚೌತಿಯ ಪಟಾಕಿ ಕಾರ್ತಿಕದ ಹಣತೆ ಸೇರಿಕೊಂಡು ಮನೆಯ ಯಜಮಾನನೆಂಬ ಯಜಮಾನನಿಗೆ ಆರ್ಥಿಕ ಹೊರೆ ತುಸು ಹೆಚ್ಚಾಗಿದೆ. ಇರಲಿ ದೀಪಾವಳಿ ಎನ್ನುವ ಹಬ್ಬದ ಆಚರಣೆಯ ಜತೆ ಈ ಹೆಸರೂ ಕೂಡ ನಮಗೆ ಇತ್ತೀಚಿನದ್ದು. ಅದಕ್ಕೂ ಮುಂಚೆ ಇದು ದೊಡ್ಡಬ್ಬ ಎಂಬ ನಾಮಧೇಯದೊಂದಿಗೆ ಇತ್ತು. ದೊಡ್ಡಬ್ಬ ಎಂದು ಕರೆಯಿಸಿಕೊಳ್ಳುತ್ತಿದ್ದ ದೀಪಾವಳಿಗೆ ರಂಗು ಎರಡು ದಿವಸದ ಮೊದಲು ಬೂರೆ ಎಂಬ ಬಲೀಂದ್ರ ಎಂಬ ದೇವರನ್ನು ಸಾಯಂಕಲ ಮನೆ ತುಂಬಿಸಿಕೊಳ್ಳುವುದರಿಂದ ಆರಂಭದ ರಂಗು. ಬೆಳ್ಳಿ ಚೊಂಬಿಗೆ ತೆಂಗಿನಕಾಯಿ ತಲೆಯ ಮೇಲೆ ಇಟ್ಟು ಕಲಶ ಎಂದು ಕರೆಯಿಸಿಕೊಂಡ ಅದು ಬಲಿಯೇಂದ್ರನ ನಾಮಾಂಕಿತಗೊಳ್ಳುತ್ತದೆ. ಅಂದೇ ರಾತ್ರಿ ಊರಿನ ತರುಣರ ಬೂರುಗಳುವಿನ ಮಜ. ವರ್ಷದ ಆ ಒಂದು ರಾತ್ರಿ ಕಳ್ಳತನಕ್ಕೆ ಮುಕ್ತ ಮುಕ್ತ ಮುಕ್ತ.ಸೌತೇ ಕಾಯಿ ಚೆಂಡು ಹೂವು ಮುಂತಾದ ಹಬ್ಬಕ್ಕೆ ಬೇಕಾದ ಅತ್ಯಾವಶ್ಯಕ ವಸ್ತುಗಳನ್ನು ಬೂರೆಗಳುವು ಎಂಬ ಹೆಸರಿನಲ್ಲಿ ಕದಿಯಬಹುದು. ಕದಿಯುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಮನೆಯ ಯಜಮಾನ ಬೂರೆಗುದ್ದು ಗುದ್ದಬಹುದು. ಇದು ಬೂರೆ ಹಬ್ಬ ದ ಮಜ. ಊರಿನ ಕಡೆ ಈ ಬೂರೆಗಳುವಿನ ಅವಾಂತರಗಳನ್ನು ಒಂದು ಕಾದಂಬರಿಯನ್ನಾಗಿಸಬಹುದು. ಈ ಬೂರೆಗಳುವಿನ ಮುಖ್ಯ ಉದ್ದೇಶ ಮನುಷ್ಯನಲ್ಲಿ ಸುಪ್ತವಾಗಿ ಅಡಗಿರುವ ಕಳ್ಳತನದ ಮನೋರೋಗವನ್ನು ಹೊರಹಾಕುವುದು ಒಂದೆಡೆಯಾದರೆ ಹಬ್ಬಗಳಲ್ಲಿ ಉಳ್ಳವರು ಮಾತ್ರಾ ಮಜ ಉಡಾಯಿಸುವುದಲ್ಲ ಇಲ್ಲದಿದ್ದವರೂ ಆಚರಿಸಿಕೊಳ್ಳಲಿ ಎಂಬ ಸುಪ್ತ ಭಾವನೆ ಅಡಗಿದೆ. ಹೀಗೆ ಬೂರೆ ಮುಗಿದ ಮಾರನೇ ದಿವಸ ರೆಸ್ಟ್ ಆನಂತರದ ದಿವಸ ದೊಡ್ಡಬ್ಬ. ಚುಮು ಚುಮು ಬೆಳಗಿನಲ್ಲಿ ಎದ್ದು, ಕೊಟ್ಟಿಗೆಯಲ್ಲಿನ ಜಾನುವಾರುಗಳಿಗೆ ಬಿಸಿನೀರ ಸ್ನಾನ ಮಾಡಿಸಿ ಪೂಜೆ ಮಾಡಿ ಚೆಂಡು ಹೂವು ಗೋಟಡಿಕೆಯಿಂದ ಅಲಂಕರಿಸಿ ಸಾಮೂಹಿಕವಾಗಿ ದೇವಸ್ಥಾನಕ್ಕೆ ಎಲ್ಲರ ಮನೆಯ ಜಾನುವಾರುಗಳನ್ನು ಅಟ್ಟಿಸಿಕೊಂಡು ಹೋಗಿ ಅಲ್ಲಿ ಪೂಜೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಹೋಳಿಗೆ ಉಟ ಭಾರಿಸಿದರೆ ದೊಡ್ಡ ಬ್ಬ ಶೇಕಡಾ ತೊಂಬತ್ತು ಮುಗಿದಂತೆ. ನಂತರ ರಾತ್ರಿ ಕಕ್ಕಡಕ್ಕೆ ಬೆಂಕಿ ಹಚ್ಚಿಕೊಂಡು "ದಿಪ್ಪಡ ದಿಪ್ಪಡ ದಿವಾಳ್ಗೆಯೋ.. ಹಬ್ಬಕ್ಕೆ ಮೂರು ಹೋಳ್ಗೆಯೋ.." ಎಂದು ಕೂಗುತ್ತಾ ಕಕ್ಕಡವನ್ನು ಮನೆಯ ಸುತ್ತ ಎದುರು ಊರಿದರೆ ದೊಡ್ಡಹಬ್ಬ ಹಬ್ಬ ಪಿನಿಶ್.

ವರ್ಷದ ಏಕತಾನತೆಯಿಂದ ಹೊರಬರಲು. ನೆಂಟರಿಷ್ಟರೊಡನೆ ಬಾಂಧವ್ಯದ ಬೆಸುಗೆ ಏರ್ಪಡುವ ಹಬ್ಬಗಳು ಇಂದಿನ ಒಂಟಿ ಜೀವನ ಬಯಸುವ ಜಾಯಮಾನದಲ್ಲಿ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿವೆ. ಅರ್ಥಪ್ರಧಾನ ವ್ಯವಸ್ಥೆಯಲ್ಲಿ ಭಾವನಾತ್ಮಕ ವಿಷಯ ವಿಚಾರ ಪೇಲವವಾಗಿವೆ. ಹಳ್ಳಿಯಲ್ಲಿನ ಹವ್ಯಕರ ಮನೆಗಳಲ್ಲಿ ಕೊಟ್ಟಿಗೆಗಳು ಖಾಲಿ ಖಾಲಿ. ಜಾನುವಾರು ಕಟ್ಟುವುದು ಸಾಕುವುದು ಗಲೀಜು, ಲಾಭದಾಯಕವಲ್ಲ ಎಂಬ ಮಿದುಳಿನ ತರ್ಕಕ್ಕೆ ಇಳಿದ ಪರಿಣಾಮ ಬಹಳಷ್ಟು ಮನೆಗಳಲ್ಲಿ ಆ ಕಾರಣದಿಂದ ದೊಡ್ದಬ್ಬ ಎನ್ನುವುದು ದೀಪಾವಳಿ ಆಗಿದೆ. ದೀಪಾವಳಿ ಯ ಹಣತೆ ಬೆಳಕು ಕರೆಂಟ್ ಬೆಳಕಿನಡಿಯಲ್ಲಿ ಎಷ್ಟೋ ಮನೆಯನ್ನು ಬೆಳಗಿಸುವ ತಾಕತ್ತು ಕಳೆದುಕೊಂಡಿದೆ. ಹಣತೆ ಮಸುಕು ಮಸುಕಾಗಿ ಕಾಣಿಸುತ್ತಿದೆ. ಮನೆಯ ಹಿರಿಯರ ಯಾಜಮಾನಿಕೆಯಲ್ಲಿ ನಡೆಯುವ ಹಬ್ಬಗಳು ಆಧುನಿಕತೆಯ ಭರಾಟೆಯಲ್ಲಿ ಬುದ್ಧಿವಂತರು ಎಂದು ಕರೆಯಿಸಿಕೊಂಡ ಈಗಿನ ತಲೆಮಾರಿನವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೀರಸವಾಗುತ್ತಿದೆ. ಕಾಲಚಕ್ರ ಉರುಳುತ್ತಾ ಉರುಳುತ್ತಾ ಮತ್ತೆ ಅವೆಲ್ಲಾ ಮರುಕಳಚಿದರೂ ಆಶ್ಚರ್ಯವಿಲ್ಲ. ಕಾರಣ ಮನುಷ್ಯನಿಗೆ ಆರಂಭದಿಂದಲೂ ಹುಡುಕುವ ಹುಚ್ಚು , ಕಳೆದ ನೆಮ್ಮದಿ, ಇರದ ಬಾಂಧವ್ಯ,ವನ್ನು ಅರಸುತ್ತಾ ಹೊರಟರೆ ಮತ್ತೆ ಈ ದೊಡ್ಡಹಬ್ಬ ತನ್ನ ಹಳೆಯ ಮೆರುಗನ್ನು ಹಳೆಯ ವೈಭವಕ್ಕೆ ಕರೆದೊಯ್ದರೂ ಒಯ್ಯಬಹುದು.

ಕೊನೆಯದಾಗಿ: ಈ ಸಾಲು ಸಾಲು ಹಬ್ಬಗಳನ್ನು ಆಚರಿಸಬೇಕೇಕೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ." ಈ ವರ್ಷ ಹಬ್ಬ ಆಚರಿಸದಿದ್ದರೆ ಮುಂದಿನ ವರ್ಷ 'ಹೋದ್ವರ್ಷ ಹಬ್ಬ ಎಷ್ಟು ಚೆನ್ನಾಗಿತ್ತು' ಎಂದು ಅಲವತ್ತುಕೊಳ್ಳಲು ಆಗುವುದಿಲ್ಲವಲ್ಲ , ಆ ಕಾರಣಕ್ಕಾದರೂ ಈ ವರ್ಷ ಹಬ್ಬ ಆಚರಿಸಬೇಕು." ಎಂದರು. ನಾನು ಮಗುಮ್ಮಾದೆ.

ನಿಮ್ಮ ಬಾಳಿನ ದೀಪಕ್ಕೆ ಶುದ್ಧ ಎಣ್ಣೆ ದೊರೆತು ಜಗತ್ತಿಗೆ ಬೆಳಗಲಿ ಎನ್ನುತ್ತಾ ದೊಡ್ಡಹಬ್ಬದ ಶುಭಾಶಯಗಳು ನನ್ನಿಂದ ಹಾಗೂ ನಮ್ಮ ಆನಂದರಾಮ ಶಾಸ್ತ್ರಿಗಳಿಂದ.

Friday, October 17, 2008

ಎನ್ನಂಗಾ...? ಎನ್ನ ಪಂಡ್ರೆ ,, ಸಾಪಾಟ್ ಆಯಿಚ್ಚಾ...



ಸಾಪಟ ಆಯಿಚ್ಚಾ..? ಎನ್ನ ಪಂಡ್ರೆ..? ನಲ್ಲ ಇರ್ಕಂಗಳಾ..? ಎನ್ನ ಸಮಾಚಾರಮು? ಹೀಗೆ ಒಂದಿಷ್ಟು ಕನ್ನಡದಂತಿರುವ ತಮಿಳು ಶಬ್ದ ಬಿಟ್ಟರೆ ನನಗೆ ತಮಿಳು ಸುಟ್ಟುಕೊಂಡು ತಿನ್ನಲಿಕ್ಕೂ ಬಾರದು. ಆದರೂ ನಾನು ತಮಿಳು ಮಾತನಾಡಿದೆ. ಕಲ್ಯಾಣತ್ತಿಗೆ ಎನ್ನುವ ಮಡ್ರಾಸ್ ನ ಪೂನಂವೇಲಿಯ ಅರವತ್ತು ವರ್ಷದ ಗೃಹಿಣಿಯ ಕೈಯಲ್ಲಿ ಶಬ್ಬಾಷ್ ಎನ್ನಿಸಿಕೊಂಡೆ. ಅಥವಾ ಅವರು ಹೇಳಿದ್ದು ಶಬ್ಬಾಷ್ ಎಂದು ನಾನು ಅರ್ಥೈಸಿಕೊಂಡೆ. ಹೀಗೆಲ್ಲಾ ನಾನೂ... ತಮಿಳು ಮಾತನಾಡುವುದಕ್ಕೆ ಕಾರಣ ನನ್ನ ಅಕ್ಕನ ಮಗಳು ರಮ್ಯಾ ಮಡ್ರಾಸ್ ನ ಅಯ್ಯರ್ ಹುಡುಗ ರಾಜೇಶನನ್ನು ವರಿಸುತ್ತೇನೆ ಎಂದು ಘೋಷಿಸಿದ್ದು.ಹಾಗಾಗಿ ವರ ಮಹಾಶಯನ ಮನೆಗೆ ಹೆಣ್ಣಿನ ಕಡೆಯವರಾಗಿ ಭೇಟಿ ಕೊಡಬೇಕಲ್ಲ ಆ ಪ್ರಯುಕ್ತ ನಾವು ನಾಲ್ಕು ಜನ ರಮ್ಯಾಳ ವ್ಯಾಗನ್ ಆರ್ ಕಾರಿನಲ್ಲಿ ಮಡ್ರಾಸ್ ಗೆ ಹೊರಟಾಯಿತು. ಬೆಂಗಳೂರಿನಿಂದ ಹೊರಟು ಮೂವತ್ತೋ ನಲವತ್ತೋ ಕಿಲೋಮೀಟರ್ ದೂರದ ಹೊಸೂರು ತಲುಪಿದಾಕ್ಷಣ ನಾವು ಅಬ್ಬೇಪಾರಿಗಳಾಗಿಬಿಡುತ್ತೇವೆ, ಕನ್ನಡ ಎಂಬುದು ಎನ್ನಡ ಆಗಿ ಪರಿವರ್ತಿತವಾಗಿಬಿಡುತ್ತದೆ. ಎಲ್ಲಿ ಹುಡುಕಿದರೂ ಒಂದೇ ಒಂದು ಕನ್ನಡ ಅಕ್ಷರ ಸಿಗದು ಕನ್ನಡ ಪತ್ರಿಕೆಗಳು ಕೇಳಕೂಡದು. ಜಸ್ಟ್ ಮೂವತ್ತು ಕಿಲೋಮೀಟರ್ ಹಿಂದೆ ನಾವೇ ಕೋಲು ಎಂದು ಹಾರಾಡುವ ಹಾಯ್ ಅಗ್ನಿ ಲಂಕೇಶ್ ಮುಂತಾದ ಪತ್ರಿಕೆಗಳು ಹಾಗೂ ಅವರ ಥೀಂ ಗಳು ಇಲ್ಲಿ ಪೇಲವವಾಗಿಬಿಡುತ್ತವೆ. ಕನ್ನಡ ದಿನಪತ್ರಿಕೆ ಸಿಗುವುದಿರಲಿ ಬೀಡಾ ಅಂಗಡಿಯವ ಬೀಡಾ ಕಟ್ಟಿಕೊಡಲೂ ಕನ್ನಡ ಪತ್ರಿಕೆ ಬಳಸುವುದಿಲ್ಲ. ಇರಲಿ ಊರಲ್ಲಿ ಎಲ್ಲರೂ ರಂಗ ತಾನೆ ನಾವು ಪರ ಊರಿಗೆ ಬಂದಿದ್ದಾಗಿದೆ ಇಲ್ಲಿ ನಮ್ಮ ಜತೆ ನಮ್ಮವರೂ ಎಲ್ಲ ಮಂಗಗಳೇ. ಆದರೆ ತಮಿಳು ಮಾತ್ರಾ ಹಾಗಲ್ಲ ಮಡ್ರಾಸ್ ನಿಂದ ಸರಿ ಸುಮಾರು ಆರುನೂರು ಕಿಲೋಮೀಟರ್ ದೂರವಿರುವ ಕಾರ್ಗಲ್ ಜೋಗ್ ಮುಂತಾದ ಬೆಂಕಿಪೊಟ್ಟಣದಂತಿರುವ ಪಟ್ಟಣಗಳಲ್ಲಿಯೂ ನಿಮಗೆ ಸುಲಲಿತವಾಗಿ ನಡೆಯುತ್ತದೆ. ನಮ್ಮ ಕಾರ್ಗಲ್..! ನಲ್ಲಿ ತಮಿಳು ಪತ್ರಿಕೆ ಸಿಗುತ್ತದೆ "ಅಯ್ಯಾ ದೊರೆ ಇವೆಲ್ಲಾ ನಿನಗಿಂತ ಮೊದಲೇ ನಮಗೆ ಗೊತ್ತು ಕುಯ್ಯಬೇಡಾ .." ಎಂದಿರಾ..! ಬೇಡ ಬಿಡಿ ವಿಷಯಕ್ಕೆ ಬರೋಣ ತಮಿಳೆಂದರೆ ಒಂಥರಾ ಕನ್ನಡದಂತೆ.ಎಳನೀರಿಗೆ ,ತೆಂಗಿನ ಕಾಯಿಗೆ ಹೀಗೆ ಸುಮಾರು ಶಬ್ದಕ್ಕೆ ಕನ್ನಡಕ್ಕೆ ಅದಕ್ಕೆ ವ್ಯತ್ಯಾಸ ಇಲ್ಲ. "ಅಯ್ಯೋ ಇದೂ ಕೂಡ ನಮಗೆ ಗೊತ್ತು ಮುಂದುವರೆಸು" ಎಂದಿರಾ ಇರಲಿ ನಾನು ಕೇಳಿ ಹೇಳ ಹೊರಟಿರುವ ವಿಷಯಕ್ಕೆ ಬರೋಣ.
ಮನುಷ್ಯ ಭಾಷೆ ಎನ್ನುವುದನ್ನು ಪರಸ್ಪರ ಸಂವಹನಕ್ಕೆ ಮಾಡಿಕೊಂಡ. ನೂರಾರು ಭಾಷೆ ನೂರಾರು ದೇಶ ಇವೆಲ್ಲಾ ಸರಿ ಆದರೆ ಪ್ರಕೃತಿಯ ದೃಷ್ಟಿಯಲ್ಲಿ ಮನುಷ್ಯ ನೆಂದರೆ ಯಾವ ದೇಶಕ್ಕೂ ಭಾಷೆಗೂ ವ್ಯತ್ಯಾಸ ಇಲ್ಲ.ಎಲ್ಲರೂ ಒಂದೇ ಹಾಗಾಗಿ ಎಲ್ಲ ಮನುಷ್ಯರ ಜತೆ ಸಂಪರ್ಕಿಸಲು ಒಂದೇ ತರಹನಾದ ಭಾಷೆ ಇದೆ. ಅದು ಸುಪ್ತವಾಗಿ ಅಡಗಿದೆ. ಅದು ಮೌನದ ಭಾಷೆ. ಧ್ಯಾನದ ಭಾಷೆ. ಈ ಭಾಷೆಯಿಂದ ಮನುಷ್ಯ ಮನುಷ್ಯರೊಡನೆ ಬಾಂಧವ್ಯ ಸಾಧಿಸುವಂತೆ ಇತರೆ ಜೀವಿಗಳೊಡನೆಯೂ ಕೂಡ ಸುಮಧುರ ಬಾಂಧವ್ಯ ಸಾಧಿಸಭಹುದು. ಇಲ್ಲಿ ಮಾತನಾಡುವ ಅವಶ್ಯಕತೆಯೇ ಇಲ್ಲ. ನೀವು ನಿಮ್ಮ ಮಾತೃ ಭಾಷೆಯಲ್ಲಿ ಆಲೋಚಿಸಿದರೆ ಆಯಿತು ಅದು ಮುಖದಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ ತನ್ನಷ್ಟಕ್ಕೆ ಅದೇನೋ ಹೇಳಲಾರದ ಬಾಂಧವ್ಯ ಏರ್ಪಡುತ್ತದೆ. ಉದಾಹರಣೆಗೆ ಅಪರಿಚಿತರೊಬ್ಬರು ನಿಮಗೆ ಭೇಟಿಯಾದಾಗ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಅದೇನೋ ಅವರ ನಡವಳಿಕೆ ನಿಮಗೆ ಇಷ್ಟವಾಗುತ್ತದೆ. ಕಾರಣ ಗೊತ್ತಿರುವುದಿಲ್ಲ. ಇನ್ನು ಕೆಲವರನ್ನು ಕಂಡಾಗ ಕಾರಣವಿಲ್ಲದೆ ಅಸಹನೆ ಉಂಟಾಗುತ್ತದೆ. ಹಾಗಂತ ಅವರು ನಿಮಗೆ ಏನೂ ಅಪಾಯ ಮಾಡಿರುವುದಿಲ್ಲ. ಆದರೂ ಅದೇನೋ ಒಂಥರಾ ಹಿಂಸೆ. ಅದರ ಅಂತರಾರ್ಥ ತಿಳಿಯುತ್ತಾ ಹೋದಂತೆ ಅರಿವು ಉಂಟಾಗುತ್ತದೆ. ಅದಕ್ಕೆ ಆಳದ ಧ್ಯಾನ ಅಗತ್ಯ. ಅದು ನೀವು ಸಾಧಿಸಿದಿರಿ ಅಂತಾದರೆ ನೀವು ಕೇಳುವುದಕ್ಕಿಂತ ಮೊದಲೇ ನಿಮಗೆ ಅಪೇಕ್ಷೆ ಪಟ್ಟಿದ್ದು ದೊರಕುತ್ತದೆ. ಅನಪೇಕ್ಷಿತವಾದದ್ದನ್ನು ನೀವು ಕೇಳುವುದೂ ಇಲ್ಲ. ಹೀಗೆ ಹೇಳಲಾರದ ಅನುಭವಕ್ಕೆ ಮಾತ್ರಾ ಸಿಗುವ ಬಾಂಧವ್ಯ ಉಂಟಾದಾಗ ಬಾಷೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಮೂಕವಾದ ಮೌನ ಪ್ರಪಂಚ ಆಹ್ಲಾದಕರವಾಗಿರುತ್ತದೆ. ಹಾಗಾಗಿ ನಾವು ಈ ಹೊರಮನಸ್ಸಿನ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಇಲ್ಲ. ಹೊರ ಪ್ರಪಂಚದ ನೂರಾರು ಬಾಷೆಗಳ ಜ್ಞಾನ ಸುಲಭವಾಗಬೇಕು ಎಂದರೆ ಒಳಪ್ರಪಂಚದ ಮೌನದ ಭಾಷೆಯನ್ನು ಮೊದಲು ಚೆನ್ನಾಗಿ ಅರ್ಥಮಾಡಿಕೊಂಡರೆ ಪ್ರಪಂಚದ ಎಲ್ಲಾ ಭಾಷೆಗಲೂ ಲೀಲಾಜಾಲ.
ಇದೇನಪ್ಪಾ ಅರ್ಥವಾಗದ ಬರಹ ಅಂತ ನೀವು ಬಯ್ದುಕೊಂಡಿರಬಹುದು, ನನಗೂ ಸಂಪೂರ್ಣ ಅರ್ಥವಾಗಿಲ್ಲ ಕಣ್ರಿ ಇದು ನಮ್ಮ ಆನಂದರಾಮ ಶಾಸ್ತ್ರಿಗಳ ಬರಹ. ಮಾರ್ಚ್ ತಿಂಗಳಲ್ಲಿ ರಮ್ಯಾಳ ಮದುವೆ ಇದೆ ಅಷ್ಟರೊಳಗೆ ನಾನು ಇನ್ನೊಂದಿಷ್ಟು ತಮಿಳು ಕಲಿಯಬೇಕಿದೆ. ಹಾ ಹೇಳಲು ಮರೆತೆ ಕನ್ನಡ ಬಲ್ಲ ಹವ್ಯಕ ಹುಡುಗಿ ರಮ್ಯಾ ಹಾಗೂ ತಮಿಳಿನ ಅಯ್ಯರ್ ಹುಡುಗ ರಾಜೇಶ ನನ್ನು ಸೇರಿಸಿದ ಭಾಷೆ ಸಾವಿರಾರು ಕಿಲೋಮೀಟರ್ ದೂರ ಇರುವ ಆಂಗ್ಲ ಭಾಷೆ. ಜೈ ಆಂಗ್ಲೇಶ್ ಪೀಪಲ್ ಅನ್ನೋಣವೇ. ನಾವು ನೀವು ಅನ್ನದಿದ್ದರೂ ಅವರಿಬ್ಬರಂತೂ ಅನ್ನಲೇ ಬೇಕು. ಕಾರಣ ಅವನು ಕನ್ನಡ ಮಾತನಾಡಲು ಹೋಗಿ ಊಟ ಆಯಿರ್ಕದಾ..? ಅನ್ನುತ್ತಾನೆ ಇವಳು ತಮಿಳು ಮಾತನಾಡಲು ಹೋಗಿ ಸಾಪಟು ಆಯಿತಾ? ಅಂತಾಳೆ , ಇಂಗ್ಲೀಷ್ ಆದರೆ ಇಬ್ಬರಿಗೂ ಓ ಕೆ. ಹಾಗಿದ್ದಮೇಲೆ ತಲೆಬಿಸಿ ಯಾಕೆ?
ಕೊನೆಯದಾಗಿ:ನಿನಗೆ ಎಷ್ಟು ಭಾಷೆ ಬರುತ್ತದೆ ? ಎಂದು ಈ ಬಾರಿ ಆನಂದರಾಮ ಶಾಸ್ತ್ರಿಗಳೇ ನನ್ನನ್ನು ಪ್ರಶ್ನಿಸಿದರು. ಕನ್ನಡ ಒಂದು, ಹಿಂದಿ ಎರಡು, ಇಂಗ್ಲೀಷ್ ಅರ್ಥವಾಗುತ್ತೆ ಆದರೆ ಮಾತನಾಡಲು...ಬರೊಲ್ಲ .. ಹಾಗಾಗಿ ಅರ್ದ, ಈಗ ತಮಿಳು ಕಾಲು ಒಟ್ಟೂ. ಎರಡು ಮುಕ್ಕಾಲು ... " ಎಂದು ಎಣಿಸುತ್ತಿದ್ದೆ ಅಷ್ಟರಲ್ಲಿ "ಮೂರ್ಖ ನಿನಗೆ ಈ ಜನ್ಮದಲ್ಲಿ ಅರ್ಥವಾಗದು ಬಿಡು " ಎಂದು ಮೌನವಾದರು. ನಾನು ಕಣ್ಣು ಪಿಳುಕಿಸಿದೆ
ಟಿಪ್ಸ್: ಮನುಷ್ಯನ ಹೊರತಾಗಿ ಪ್ರಪಂಚದ ಯಾವ ಜೀವಿಯೂ ಹುಟ್ಟಿದ ಒಂದು ವರ್ಷದ ಮೇಲೆ ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ ಹಾಲಿನಲ್ಲಿ ಒಂದು ವರ್ಷದ ನಂತರದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇರುವುದಿಲ್ಲ. ಹಾಲು ಚಟಕ್ಕಾಗಿ ಮನುಷ್ಯ ಕುಡಿಯುತ್ತಿದ್ದಾನಷ್ಟೆ. ಸಾಯುವ ಅಂಚಿನಲ್ಲಿದ್ದರೂ ಒಂದು ಗುಟುಕು ಹಾಲು ಗುಟುಕರಿಸುತ್ತಾನೆ. ಹಾಗಾಗಿ ಹಾಲನ್ನು ತ್ಯಜಿಸಿ ಏನೂ ತೊಂದರೆ ಇಲ್ಲ ಬೇಕಾದರೆ ಅದರ ಹಾಲಿಗೆ ಪರ್ಯಾಯವಾಗಿ ಆಲ್ಕೋ ಹಿಂದೆ ಸೇರಿಸಿಕೊಳ್ಳಿ ಮಜವಂತೂ ಇದೆಯಂತೆ.

Tuesday, October 14, 2008

ಭೂಮಿ ಹುಣ್ಣಿಮೆ ಕಡುಬು ಮತ್ತು ಗೊಡ್ಡಲ್ಲದ ಶಾಸ್ತ್ರ






ಮಳೆಗಾಲ ಮುಗಿದು ಅತ್ತ ಚಳಿಗಾಲವೂ ಅಲ್ಲದ ಇತ್ತ ಬೇಸಿಗೆಯೂ ಅಲ್ಲದ ಕಾಲದಲ್ಲಿ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಅಂತಹ ಒಂದು ಹಬ್ಬ ಈ ಭೂಮಿಹುಣ್ಣಿಮೆ. ಹೆಸರೇ ಸೂಚಿಸುವಂತೆ ಭೂಮಿಯನ್ನು ನಂಬಿ ಬದುಕುತ್ತಿರುವವರ ಹಬ್ಬ . ಅಡಿಕೆ, ಭತ್ತ ಕಬ್ಬು ಹೀಗೆ ರೈತಾಪಿ ವರ್ಗ ತಾವು ಬೆಳೆಯುತ್ತಿರುವ ಕೃಷಿ ಕ್ಷೇತ್ರಕ್ಕೆ ಹೋಗಿ ಅಲ್ಲಿಯೇ ಕಲ್ಲಿನ ರೂಪ ತಳೆದು ಬಿದ್ದಿದ್ದಕ್ಕೆ ತಾತ್ಕಾಲಿಕ ದೇವರ ಪಟ್ಟ ಕೊಟ್ಟು ಪ್ರತಿಷ್ಟಾಪನೆ ಮಾಡಿ ಅದಕ್ಕೊಂದು ಪೂಜೆ ಸಲ್ಲಿಸಿ ಅಲ್ಲಿಯೇ ಒಂದಿಷ್ಟು ಕಡುಬು ತಿಂದು ನಂತರ ಮನೆಗೆ ಬಂದು ದೇವರಿಗೆ ನೈವೇದ್ಯ ಮಾಡಿ ಊಟ ಮಾಡಿದರೆ ಭೂಮಿ ಹುಣ್ಣಿಮೆ ಹಬ್ಬ ಮುಗಿದಂತೆ.
ಹೀಗೆ ನೂರಾರು ಸಂಪ್ರದಾಯದ ಹಬ್ಬಗಳು ಪ್ರತೀ ವರ್ಷ ಬಂದುಹೋಗುತ್ತವೆ. ಒಮ್ಮೊಮ್ಮೆ ನಾವು ಆಚರಿಸುವ ಈ ಹಬ್ಬಗಳನ್ನು ನೋಡಿ ನಮ್ಮಷ್ಟಕ್ಕೆ ನಗು ಬರುತ್ತದೆ. ದೂರದಿಂದ ನಿಂತು ನಮ್ಮ ಆಚರಣೆಗಳನ್ನು ನಾವೇ ನೋಡಿಕೊಂಡರೆ ಸಣ್ಣ ಮಕ್ಕಳಾಟದಂತೆ ಭಾಸವಾಗುತ್ತದೆ. ತೋಟದಲ್ಲಿ ಬಿದ್ದು ಹೊರಳಾಡುತ್ತಿದ್ದ ಕಲ್ಲು ದೇವರಂತೆ. ಅದಕ್ಕೆ ಕುಂಕುಮ ಅರಿಶಿನ ಹೂವು ಹಾಗೂ ಮನೆಯಿಂದ ಒಯ್ದಿದ್ದ ಲಕ್ಷ್ಮೀಕಾಸಿನ ಸರ ಮತ್ತು ನೈವೇದ್ಯ. ಅಲ್ಲೊಂದಿಷ್ಟು ಮಂತ್ರ ಹಾಗೂ "ಪೂಜೆಯ ಮಾಡುವೆ ಮಾಲಕ್ಷ್ಮೀ ನಾನಿನ್ನ... ತೇಜವಾ ಬೀರುತ್ತ ಬಾರಮ್ಮ....ಬಾರಮ್ಮ ನೀ ಮನೆಗೆ ... ಸಕಲ ಸೌಬಾಗ್ಯವಾ ತಾರಮ್ಮ.." ಎಂಬ ಹಾಡು. ಪೂಜೆ ಮುಗಿದ ಮರುಕ್ಷಣ "ಅಪಿ ಲಕ್ಷ್ಮೀ ಕಾಸಿನ ಸರ ತಗಂಡ್ಯಾ..? ದೀಪದ ಗುಡ್ಡು ಕಳದು ಹೋಕು... ಬಾಳೆ ಹಣ್ಣು ಸಿಪ್ಪೆ ತಗ ದನಕ್ಕೆ ಹಾಕಲಾಕ್ತು " ಎನ್ನುತ್ತಾ ಒಂಚೂರು ಅಲ್ಲಿ ಬಿಡದೆ ಕಲ್ಲನ್ನು ಮತ್ತೆ ಯಥಾ ಸ್ಥಾನಕ್ಕೆ ಇಟ್ಟು ಬರುವ ಪರಿ, ನಗೆ ತರಿಸುತ್ತದೆ. ಇರಲಿ ಅದು ನಂಬಿಕೆ ಅನ್ನೋಣ ಈ ಎಲ್ಲಾ ಸಂಪ್ರದಾಯಗಳನ್ನು ಪ್ರಶ್ನಿಸದೆ ಪಾಲಿಸಿಕೊಂಡವರ ಬಳಿ ಇದರ ಅರ್ಥ ಕೇಳಿದರೆ ಗುರಾಯಿಸುತ್ತಾರೆ. ಪುರೋಹಿತರ ಬಳಿ ಕೇಳಿದರೆ ನಮ್ಮನ್ನು ಉದ್ದಟತನದ ಪ್ರಶ್ನೆ ಎಂದು ಅವರೇ ತೀರ್ಮಾನಿಸಿ ಒರಟ ಎಂಬ ಪಟ್ಟ ಕಟ್ಟಿಬಿಡುತ್ತಾರೆ. ಹಾಗಾದರೆ ಭೂಮಿ ಹುಣ್ಣಿಮೆಯಂತಹ ಕೃಷಿಕರ ಹಬ್ಬಕ್ಕೆ ಏನಾದರೂ ಅರ್ಥವಿದೆಯಾ..? ಎಂದು ಕೆದಕಿದರೆ ಎಲ್ಲವುದಕ್ಕೂ ಅರ್ಥವಿಲ್ಲದಿದ್ದರೂ ಕೆಲವಕ್ಕೆ ಅರ್ಥವಿದೆ ಎಂಬ ಉತ್ತರ ನನಗೆ ಮೈಸೂರಿನ ಇಸ್ಕಾನ್ ನ ಹರೇಕೃಷ್ಣ ನೇಚರ್ ಪಾರ್ಮ ನ ಸಸ್ಟೈನ ಬಲ್ ಅಗ್ರಿಕಲ್ಚರ್ ಸಿಸ್ಟಮ್ ಆದ ಜೀವಚೈತನ್ಯ ಕೃಷಿ ಪದ್ದತಿ ಕಲಿಯುವಾಗ ಸಿಕ್ಕಿತು. ಭೂಮಿ ಹುಣ್ಣಿಮೆ ದಿನ ಕೆಮ್ಮಣ್ಣು ಹಾಗೂ ಜೇಡಿ ಮಣ್ಣನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ಅಡಿಕೆ ಹಾಗೂ ತೆಂಗಿನ ಮರಕ್ಕೆ ಹಚ್ಚುವ ಪದ್ದತಿ ಇದೆ. ಇದು ಜೀವ ಚೈತನ್ಯ ಪದ್ದತಿಯಲ್ಲಿಯೂ ಟ್ರೀ ಪೇಸ್ಟ್ ಎಂಬ ಹೆಸರಿನಲ್ಲಿ ಇದೆ. ಇದರಿಂದಾಗಿ ಮರದ ಆಯುಷ್ಯ ವೃದ್ಧಿಯಾಗುತ್ತದೆ. ಭೂಮಿ ಹುಣ್ಣಿಮೆ ದಿನ ಅನ್ನ ಹಾಗೂ ಹಲವಾರು ಸೊಪ್ಪುಗಳ ಪಲ್ಯವನ್ನು ಭೂಮಿಗೆ ಅಚ್ಚುವ ಪದ್ದತಿ ಇದೆ. ಇದರಿಂದ ಕೃಷಿ ಭೂಮಿಯಲ್ಲಿ ಅನುಕೂಲಕರ ಸೂಕ್ಷ್ಮಾಣು ಜೀವಿಗಳ ಬೆಳೆವಣಿಗೆಯಾಗುತ್ತದೆ. ಹೀಗೆ ಕೆಲವು ಪದ್ದತಿಗಳಿಗೆ ಪರಿಪೂರ್ಣ ಅರ್ಥವಿದೆ. ಆದರೆ ಅದನ್ನು ಹೀಗೆ ಹೀಗೆಂದು ಅರ್ಥೈಸಿ ಹೇಳುವವರಿಲ್ಲ. ಹಾಗಾಗಿ ಇಂದಿನ ತಲೆಮಾರಿನವರಿಗೆ ನಮ್ಮ ಸಂಪ್ರದಾಯಗಳು ಗೊಡ್ಡು ಎಂಬ ಅಪಹಾಸ್ಯಕ್ಕೆ ಕಾರಣವಾಗಿಬಿಡುತ್ತದೆ. ನಮ್ಮ ಸಂಧ್ಯಾವಂದನೆಯನ್ನು ತೆಗೆದುಕೊಳ್ಳಿ . ಬಹಳಷ್ಟು ಜನರಲ್ಲಿ ಸಂಧ್ಯಾವಂದನೆ ಎಂಬ ಉಪನಯನದ ನಂತರ ಕ್ರಿಯೆ ಒಂಥರಾ ಯಡವಟ್ಟು ಅನ್ನಿಸಿಕೊಂಡಿದೆ. ಆದರೆ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾದ ಜನರು ರವಿಶಂಕರ್ ಗುರೂಜಿ ಬಳಿ ಹೋಗಿ ತಕತಕ ಕುಣಿದು ಅದೇನೋ ಧ್ಯಾನ ಕಲಿತೆ ಎಂದು ಹತ್ತು ಸಾವಿರ ಪೀಕಿ ಮನೆಗೆ ಬಂದಾಗ ಒಂದು ಕ್ಷಣ ಯೋಚನೆ ಮಾಡಿದರೆ ತಿಳಿಯುತ್ತದೆ, ಅಪ್ಪ ಮಾಡಿದ ಉಪನಯನ ಹಾಗೂ ಸಂಧ್ಯಾವಂದನೆಯ ನಿಜವಾದ ಅರ್ಥ. ಆದರೆ ಅದು ನಮಗೆ ಅರ್ಥವಾಗಲು ನಾವು ದುಡಿದ ಹತ್ತು ಸಾವಿರ ಖಾಲಿಯಾದಾಗಲೇ ತಿಳಿಯುವುದು ಎಂಬುದು ವಿಪರ್ಯಾಸವಾದರೂ ಸತ್ಯ. ಹಾಗೂ ನಮಗೆ ಉಪನಯನ ಮಾಡಿಸಿದ ಪುರೋಹಿತರಿಗೂ ಸಂಧ್ಯಾವಂದನೆಯ ಮಹತ್ವ ತಿಳಿಯದಿರುವುದು ಕಹಿ ಸತ್ಯ. ಪಾಪ ಅವರ ಮನಸ್ಸು ಅಂದಿನ ಹಸಿರು ನೋಟು ಹಾಗೂ ಕೆಂಪು ನೋಟಿನ ಲೆಕ್ಕಾಚಾರದಲ್ಲಿ ಮಗ್ನವಾಗಿರುತ್ತದೆ. ರವಿಶಂಕರ್ ಗುರೂಜಿಯೋ ಬಾಬಾ ರಾಮನೋ ಪೀಟರ್ರೋ ತಮ್ಮ ಹೊಸಬಾಟಲಿಯಲ್ಲಿ ಈ ಹಳೆಯದನ್ನೇ ಕೊಟ್ಟಾಗ ನಾವು ವಾವ್ ಅಂದು ಅವರದೊಂದು ಫೋಟೋ ನಮ್ಮ ಕೋಣೆಯಲ್ಲಿ ತಗುಲಿಹಾಕಿಕೊಂಡುಬಿಡುತ್ತೇವೆ. ಇರಲಿ ಈಗ ಮತ್ತೆ ಭೂಮಿ ಹುಣ್ಣಿಮೆ ಹಬ್ಬಕ್ಕೆ ಬರೋಣ. ಟಿ.ವಿಯಲ್ಲಿ ಜಾಹಿರಾತೊಂದು ಬರುತ್ತದೆ. ಅದು ಹೀಗಿದೆ, ಮರುಭೂಮಿಯಲ್ಲಿ ನೀರಡಿಕೆಯಿಂದ ಒಬ್ಬಾತ ತಲೆತಿರುಗಿ ಬೀಳುತ್ತಾನೆ. ವೃದ್ಧ ದಂಪತಿಗಳು ಆತನಿಗೆ ನೀರು ಕೊಡಲು ಹೋಗುತ್ತಾರೆ ಆವಾಗ ಆತ ಅಂತಹಾ ಪರಿಸ್ಥಿತಿಯಲ್ಲಿಯೂ ಇದು ಪ್ಯೂರಿಫೈಡ್ ನೀರು ತಾನೆ ? ಇಲ್ಲದಿದ್ದರೆ ನನಗೆ ಬೇಡ ಅನ್ನುತ್ತಾನೆ. ಆಮೇಲೆ ಕಂಪನಿಯ ಹೆಸರು ಹೇಳಿ ಅದೇ ನೀರು ಅನ್ನುತ್ತಾನೆ ಆತ ಕುಡಿಯುತ್ತಾನೆ. ಮೊನ್ನೆ ನನ್ನ ಮಗ ಮತ್ತು ಅವನ ಟೀಂ ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಬಾಳೆ ಎಲೆ ಹಾಕಿಕೊಂಡು ಕಡುಬು ಬಾರಿಸಿದರು. ತೋಟದಲ್ಲಿ ಜಾಗ ಹೇಗಿರುತ್ತದೆ ಎಂದು ನಿಮಗೆ ಮತ್ತೆ ಹೇಳಬೇಕಾಗಿಲ್ಲ. ಅಲ್ಲೇ ಹರಿಯುತ್ತಿದ್ದ ನೀರಿನಲ್ಲಿ ಕೈತೊಳೆದರು ಮತ್ತು ಕೊನೆಯಲ್ಲಿ ಬೊಗಸೆ ನೀರು ಕುಡಿದರು. ಮತ್ತು ಸಂತೋಷವಾಗಿ ಮತ್ತೊಂದು ತೋಟಕ್ಕೆ ಕಡುಬು ಬಾರಿಸಲು ಹೋದರು. ಆ ಹುಡುಗರು ಇವತ್ತೂ ಆರಾಮವಾಗಿದ್ದಾರೆ. ಅದೇ ಜಾಹಿರಾತಿನ ಅಮ್ಮನಾಗಿದ್ದರೆ ಅಯ್ಯೋ ... ಎಂದು ರಾಗ ಎಳೆಯಬೇಕಾಗಿತ್ತು. ಶುದ್ದ ನೀರನ್ನು ಅಭ್ಯಾಸ ಮಾಡಿ ನಮ್ಮ ದೇಹವನ್ನು ಸೂಕ್ಷ್ಮ ಮಾಡಿಸುವುದಕ್ಕಿಂತಲೂ ಅಶುದ್ದ (!) ನೀರನ್ನು ದಕ್ಕಿಸಿಕೊಳ್ಳುವುದನ್ನು ನಮ್ಮ ದೇಹಕ್ಕೆ ಕಲಿಸಬೇಕು. ತೋಟದಂತಹ ಜಾಗದಲ್ಲಿ ಊಟ ಮಾಡುವುದರಿಂದ ನಮ್ಮ ದೇಹ ಏನನ್ನಾದರೂ ಜೀರ್ಣಿಸಿಕೊಳ್ಳುವುದನ್ನು ಕಲಿಯುತ್ತದೆ. ಹೀಗಿದೆ ನೋಡಿ ವಿಚಾರಗಳು ಹೌದಾದರೆ ಹೌದೆನ್ನಿ ದಯಮಾಡಿ ಅಲ್ಲವಾದರೂ ಹೌದೆನ್ನಿ.
ಕೊನೆಯದಾಗಿ: ನಾವು ಆಚರಿಸುವ ಪ್ರತೀ ಹಬ್ಬಕ್ಕೂ ಹಾಗೂ ಎಲ್ಲ ಶಾಸ್ತ್ರ ಸಂಪ್ರದಾಯಗಳಿಗೂ ವೈಜ್ಞಾನಿಕ ಅರ್ಥವಿದೆಯಾ ? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ." ಒಂದಿಷ್ಟಕ್ಕೆ ಅರ್ಥವಿದೆ ಮಿಕ್ಕವುಗಳಿಗೆ ಇಂದು ಅರ್ಥೈಸಲಾಗುತ್ತಿದೆ." ಎಂಬ ಉತ್ತರ ನೀಡಿದರು. ತಲೆಯಮೇಲೆ ಹೊಡೆದಂತಹ ಸತ್ಯದ ಮಾತಿಗೆ ಖುಷಿಯಾದೆ
ಟಿಪ್ಸ್: ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಂತಿಯಾಗುತ್ತದೆಯೇ? ಹಾಗಾದರೆ ಇನ್ನು ಚಿಂತೆ ಬಿಡಿ ನೆಲ್ಲಿಕಾಯಿಯ ಸೆಟ್ ಜತೆಯಲ್ಲಿ ಇಟ್ಟುಕೊಂಡು ಪ್ರಯಾಣಿಸಿ. ಅದು ಜತೆಯಲ್ಲಿ ಇಲ್ಲವೇ ಹಾಗಾದರೆ ಓದಲು ಕೊಂಡಿದ್ದ ದಿನ ಪತ್ರಿಕೆಯನ್ನು ಆಘ್ರಾಣಿಸಿ . ವಾಂತಿ ಆಗುವುದೇ ಇಲ್ಲ. ಅಂತ ವಾಂತೇಶ್ವರಿಯೊಬ್ಬರು ಹೇಳಿದ್ದರು, ಪ್ರಯೋಗಿಸಿ ಉತ್ತರ ತಿಳಿಸಿ. ನನಗೆ ಅನುಭವ ಇಲ್ಲ.
ಟಿಪ್ಸ್ ಓದಲು ಕಾಣಿಸದು ಎಂದರೆ ಸೆಲೆಕ್ಟ್ ಮಾಡಿ ಆವಾಗ ಕಾಣಿಸುತ್ತದೆ.

ಹೊಸ ಬ್ಲಾಗ್ ಮಾಹಿತಿ.

http://kannadabala.blogspot.com/ ಎಂಬ ಬ್ಲಾಗ್ ಇದೆ. ಅದು ಕನ್ನಡ ಬ್ಲಾಗಿಗಳ ವಿಳಾಸವನ್ನು ತಿಳಿಸುತ್ತದೆ. ಅದೇ ರೀತಿಯ ಹೊಸದಾದ ಇನ್ನೊಂದು ಬ್ಲಾಗ್ ತೆರೆಯಲಾಗಿದೆ. http://blogannada.blogspot.com/ ಇದರ ವಿಶೇಷವೆಂದರ ಬ್ಲಾಗಿನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಅಲ್ಲಿಯೇ ನೀಡಲಾಗಿದೆ. ಅದರ ಮೂಲಕ ನೀವು ಲಾಗ್ ಇನ್ ಆಗಿ ನಿಮಗಿಷ್ಟವಾದ ಬ್ಲಾಗ್ ಅಲ್ಲಿ ನಮೂದಿಸಬಹುದು. ಇದೊಂತರ ಉತ್ತರ ಭಾರತದ ದೇವಸ್ಥಾನವಿದ್ದಂತೆ. ಅಲ್ಲಿಯೂ ಹಾಗೆ ನೀವೇ ಸ್ವತಹ ಪೂಜಾರಿಗಳ ಸಹಾಯವಿಲ್ಲದೆ ದೇವರ ಪೂಜೆ ಮಾಡಬಹುದು. ಹೂವು ಏರಿಸಬಹುದು.( ಆದರೆ ನೀವು ವಾಪಾಸಾದ ಮರುಕ್ಷಣ ಆ ಹೂವನ್ನು ಮತ್ತೊಬ್ಬ ತೆಗೆದುಬಿಡುತ್ತಾನೆ . ಇಲ್ಲಿ ಹಾಗೆ ಮಾಡಬೇಡಿ ) ಅದೇ ತರಹ ಇದು ನಿಮಗಿಷ್ಟವಾದ ಮಾರ್ಪಾಡು ಮಾಡಿ. ಹೊಸ ಹೊಸ ನಿಮಗೆ ಗೊತ್ತಿರುವ ತಾಣ ಸೇರಿಸಿ . ಇದೊಂತರ ಸಮೂಹ ಬ್ಲಾಗ್.

ಸರಿ ಇನ್ನೇನು ಲಾಗ್ ಇನ್ ಆಗಿ. ಧನ್ಯವಾದಗಳು