Monday, January 18, 2010

ಬೀ ಈಟರ್ ಎಂಬ ತಿನ್ನುಬಾಕ ಹಕ್ಕಿ


ಬೀ ಈಟರ್ ಹೆಸರೇ ಹೇಳುವಂತೆ ಜೇನುಬಾಕ ಹಕ್ಕಿ.ಹಾರಾಟ ನೋಡಿದರೆ ಗಿಣಿಯೇನೋ ಎಂಬ ಭ್ರಮೆಗೆ ಹಚ್ಚುವ, ಗಿಳಿಯನ್ನೇ ಹೋಲುವ ಇದು ಗಂಡ ಹೆಂಡತಿ ಜೋಡಿಯಾಗಿ ಬದುಕು ಸಾಗಿಸುವ ಪಕ್ಷಿ. ಇರಲಿ ಅವೆಲ್ಲಾ ಅದರ ಹೆಗ್ಗಳಿಕೆಯಾಯಿತು. ಅದು ನನ್ನ ಹಾಗು ನನ್ನ ಜೇನಿನ ಬೆನ್ನೆತಿರುವ ಕತೆಗೆ ಬರೋಣ.
ಮಟಮಟ ಮಧ್ಯಾಹ್ನ ನಮ್ಮ ಮನೆಯ ಅಂಗಳದಲ್ಲಿ ಜೇನು ರೊಂಯ್ಯೋ ಅಂತ ಹಾರಾಡಲು ಶುರುಮಾಡಿತೆಂದರೆ ಬೀ ಈಟರ್ ಬಂದಿದೆ ಅಂತ ಅರ್ಥ. ಈ ಜೇನುಗಳೋ ಒಂಥರಾ ಯಡವಟ್ಟು ತಮ್ಮ ಪಾಡಿಗೆ ಪೆಟ್ಟಿಗೆಯೊಳಗೆ ಇದ್ದರೆ ಯಾರೂ (ಮನುಷ್ಯರನ್ನು ಹೊರತುಪಡಿಸಿ.....!) ಏನೂ ಮಾಡಲಾಗುವುದಿಲ್ಲ. ಆ ಹಕ್ಕಿಗಳಾದರೋ ಬಹು ಚುರುಕಿನವು. ಜೇನಿನ ಸಿಟ್ಟನ್ನು ಎನ್ ಕ್ಯಾಷ್ ಮಾಡಿಕೊಂಡು ಹೊಟ್ಟೆಯನ್ನು ಯಥೇಚ್ಚವಾಗಿ ತುಂಬಿಕೊಳ್ಳುತ್ತವೆ. ಅದು ನಡೆಯುವುದು ಹೀಗೆ...
ಹಕ್ಕಿಗಳೆರಡು ಜೇನು ಪೆಟ್ಟಿಗೆಯ ಹೊರಗೆ ಕುಳಿತು ಪಟಪಟನೆ ರಕ್ಕೆ ಬಡಿಯುತ್ತವೆ. ಆವಾಗಿನ ಸದಿಗೆ ಹೊರಹೊರಟ ಒಂದೆರಡು ಜೇನನ್ನು ಅಲ್ಲಿಯೇ ಕಟಂ ಕಟಂ ಅಂತ ತಿಂದುಬಿಡುತ್ತವೆ. ಇಷ್ಟಾಗಿದೆ ಹೀಗಾಗಿದೆ ಶತ್ರು ಮನೆಬಾಗಿಲಿಗೆ ಬಂದಾಗಿದೆ ಎಂಬ ಸುದ್ಧಿ ಪೆಟ್ಟಿಗೆಯೊಳಗೆ ಹೋಗಿದ್ದೇ ತಡ, ಒಳಗೆ ಕುಳಿತ ರಾಣಿಯಿಂದ "ಚಾರ್ಜ್" ಎಂಬ ಆರ್ಡರ್ ಬರುತ್ತದೆ. ತಕ್ಷಣ ಜೇನಿನ ದಂಡು ಹೊರಗೆಬರುತ್ತದೆ. ತಕ್ಷಣ ಹಸಿರುಬಣ್ಣದ ಬೀ ಈಟರ್ ಗಳೆರಡೂ ಹತ್ತಿರದ ಕರೆಂಟ್ ಲೈನ್ ಮೇಲೆ ಆರಾಮವಾಗಿ ಕುಳಿತುಬಿಡುತ್ತವೆ. ಈ ಜೇನು ಹುಳುಗಳೋ ತಾವು ಸಿಕ್ಕಾಪಟೆ ಜೋರೆಂಬ ಭ್ರಮೆಯಲ್ಲಿ ಹಕ್ಕಿಗಳ ಮೇಲೆ ಅಟ್ಯಾಕ್ ಮಾಡಲು ಬೆನ್ನೆಟ್ಟುತ್ತವೆ. ಈಗ ಬೀ ಈಟರ್ ಗೆ ಸುಗ್ಗಿಯೋ ಸುಗ್ಗಿ, ಕತ್ತನ್ನು ಒಮ್ಮೆ ಈ ಕಡೆ ತಿರುಗಿಸಿ ಕಟಂ , ಮತ್ತೊಮ್ಮೆ ಆಕಡೆ ತಿರುಗಿಸಿ ಕಟಂ. ಹತ್ತು ನಿಮಿಷಗಳಲ್ಲಿ ಸುಮಾರು ನೂರು ನೊಣಗಳು ಸ್ವಾಹಾ. ಭೂರಿ ಬೋಜನ ಪುಕ್ಕಟ್ಟೆ ಮುಗಿಸಿ ಪರ್ರನೆ ಹಾರುತ್ತಾ ಹೋಗಿಬಿಡುತ್ತವೆ.
ನನಗೀಗ ಮಧ್ಯಾಹ್ನ ಅದೇ ಕೆಲಸ ಹಕ್ಕಿ ಎಷ್ಟೋತ್ತಿಗೆ ಬರುತ್ತದೆ ಎಂದು ಕಾಯುವುದು ಮತ್ತು ಹಕ್ಕಿಗಳಿಗೆ ನಾನು ಎಷ್ಟೊತ್ತಿಗೆ ಬರುವುದಿಲ್ಲ ಎಂದು ಕಾಯುವುದು ಏತನ್ಮಧ್ಯೆ ಜೇನಿಗೆ ಮಾತ್ರಾ ಸಿಟ್ಟೋ ಸಿಟ್ಟು ಮತ್ತು ಅಪರದ ಭಟ್ರ ಕರೆಯಿಸಿಕೊಳ್ಳುವುದು.

Thursday, January 7, 2010

ಒಂದೆರಡು ಪೋಟೋ ನಿಮಗಾಗಿ

ನೀರು ಮತ್ತು ಸೂರ್ಯನ ಕಾಂಬಿನೇಷನ್ ಇದೆಯಲ್ಲಾ ಅದರ ಕ್ಷಣಗಳು ಯಾವಾಗಲೂ ಅದ್ಬುತವೇ. ಚುಮುಚು ಚುಮು ಛಳಿಗಾಲದ ಈ ದಿನಗಳಲ್ಲಿ ಸೂರ್ಯಾಸ್ತ ಹಾಗೂ ಸೂರ್ಯೋದಯ ನೀರಿನ ಹಿನ್ನೆಲೆಯಲ್ಲಿ ಒಂದು ಅದ್ಬುತವೇ ಸರಿ. ಮೊನ್ನೆ ಮಂಜು, ಅರ್ಚನಾ ಬಂದಾಗ ಹೊನ್ನೇಮರಡುವಿಗೆ ಹೋಗಿದ್ದಾಗಿತ್ತು. ಅವತ್ತು ಮೋಡಗಳಿಲ್ಲದ ಕ್ಲಿಯರ್ ಆಕಾಶ ನಮಗೆ ಸೂರ್ಯಾಸ್ತವನ್ನು ಸವಿಯಲು ಅವಕಾಶ ಮಾಡಿಕೊಟ್ಟಿತ್ತು. ಸೂರ್ಯ ನೀರಿನಲ್ಲಿ ಸೂಪರ್ ಮಜ . ಬೆಂಕಿಯುಂಡೆಯಾದ ಸೂರ್ಯನ ಒಂದೆರಡು ಪೋಟೋ ನಿಮಗಾಗಿ






Wednesday, January 6, 2010

ಎಲ್ಲಾ ಕಡೆ ಒಂದು ಇಡು-ಚಿಂತೆ ಬಿಡು


ನಲವತ್ತೆರಡು ಅಂದರೆ ಅದೇನು ಅಂತಾ ಕರಕರ ಅಂತ ಕರಗುಟ್ಟಬೇಕಾದ ವಯಸ್ಸಲ್ಲ ಬಿಡಿ. ಮಗ ಭುಜಕ್ಕೆ ಬಂದಿದ್ದಾನೆ, ಆಕೆಗೆ ಆವಾಗಾವಾಗ ಸೊಂಟ ಹಿಡಿದುಕೊಳ್ಳುತ್ತದೆ ನನಗೆ ಕನ್ನಡಕ ಬಂದಿದೆ. ತೀರಾ ಕರಕರ ಅನ್ನದಿದ್ದರೂ ಪುಟಿದೇಳುತ್ತಿದ್ದ ಉತ್ಸಾಹದ ದಿನಗಳಿಗೆ ಸ್ವಲ್ಪ ಬ್ರೆಕ್ ಬೀಳುವ ವಯಸ್ಸು.
ನಲವತ್ತು ಮೆಟ್ಟಿದಾಗ ದೃಷ್ಟಿಯದೊಂದು ದೋಷ ಬಂದು ತಗಲಿಕೊಳ್ಳುತ್ತದೆ ಅದಕ್ಕೆ ಛಾಳೀಸು ಅಂತಾರೆ ಅನ್ನುವುದು ಗೊತ್ತಿದ್ದರೂ ಅದು ಹೀಗೆ ಹೈರಾಣು ಮಾಡಿಬಿಡುತ್ತದೆ ಎಂಬ ಕಲ್ಪನೆ ಮುಂಚೆ ಗೊತ್ತಾಗುವುದೇ ಇಲ್ಲ. ಹಾ ಅದೇನು ಮಹಾ ಒಂದು ಕನ್ನಡಕ ಹಾಕಿಕೊಂಡರಾಯಿತು ಎಂಬ ಉಪೇಕ್ಷೆ. ಆದರೆ ವಾಸ್ತವ ಅದಲ್ಲ. ಛಾಳಿಸು ಬಂದ ನಂತರ ನನ್ನ ಪಾಡಂತೂ ಹೇಳತೀರದಾಗಿದೆ. ಓದುವ ಹವ್ಯಾಸ ಬಿಟ್ಟೋಗಿದೆ, ಬರೆಯುವ ಓಘ ನಿಂತೋಗಿದೆ. ಅದಕ್ಕೆಲ್ಲ ಮುಖ್ಯ ಕಾರಣ ಕಣ್ಣಿನ ಮುಂದೆ ಕೂರುವ ಎರಡು ಹಳ್ಳಿನದು. ಕನ್ನಡಕ ಇಲ್ಲದೆ ಓದಲೂ ಆಗದು ಬರೆಯಲೂ ಆಗದು ಸರಿ. ನನಗೆ ಓದುವ ಮೂಡು ಬಂದಾಗ ಕನ್ನಡಕ ಕೈಗೆ ಸಿಗುವುದಿಲ್ಲ ಕನ್ನಡಕ ಕೈಗೆ ಸಿಕ್ಕಾಗ ಪುಸ್ತಕ ಮತ್ತೆಲ್ಲಿಯೂ ಇರುತ್ತದೆ. ಕಂಪ್ಯೂಟರ್ ಮುಂದೆ ಕುಂತು ಇವತ್ತು ಏನಾದರೂ ಕು ಟ್ಟೋಣ ಅಂತ ಗುಡ್ ಮೂಡ್ ಬಂದಾಗ್ ಯಥಾಪ್ರಕಾರ ನಿನ್ನೆ ಮೊಬೈಲ್ ರಿಸೀವ್ಡ್ ನಂಬರ್ ನೋಡಲು ಬಳಸಿದ್ದ ಕನ್ನಡಕ ಜಗುಲಿಯಲ್ಲಿ ಇರುತ್ತದೆ. ಅದನ್ನು ಹುಡುಕಿ ವಾಪಾಸು ಬಂದು ಕಂಪ್ಯೂಟರ್ ಮುಂದೆ ಕುಳಿತಾಗ ಬ ರೆಯಲು ಹೊರಟಿದ್ದ ವಿಷಯ ಕ ನ್ನಡಕದ ಹುಡುಕಾಟದ ಅಡಿಯಲ್ಲಿ ಹೋಗಿಬಿಟ್ಟಿರುತ್ತದೆ. ಹೀಗಿದೆ ಸಣ್ಣ ವಿಷಯದ ದೊಡ್ಡ ಸಮಸ್ಯೆ.
ಈ ಚಾಳೀಸಿನ ರಗಳೆಯನ್ನು ಮಂಕಾಳೆಮನೆ ಸುಧಚಿಕ್ಕಿಯ ಹತ್ತಿರ ಹೇಳಿದೆ. ಅದಕ್ಕವಳು "ಅಯ್ಯೋ ಅದು ಸುಲಭವಾಗಿ ಬಗೆ ಹರಿಯ ಸಮಸ್ಯೆ ಮಾರಾಯ. ಎಪ್ಪತ್ತೈದು ರೂಪಾಯಿಯ ನಾಲ್ಕು ಕನ್ನಡಕ ತಗ ಎಲ್ಲಾ ಕಡೆ ಒಂದು ಇಡು" ಅಂತ ಅಂದಳು. ಅರೆ ಹೌದೇ ಹೌದು ಈಗ ಸಮಸ್ಯೇಯೇ ಇಲ್ಲ. ಓದಬೇಕಾದ ಬರೆಯಬೇಕಾದ ನೋಡಬೇಕಾದ ಕಡೆಯಲ್ಲೆಲ್ಲಾ ಒಂದು ಕನ್ನಡಕ ಇಟ್ಟುಬಿಟ್ಟಿದ್ದೇನೆ. ಗುಡ್ಡದಂತಿದ್ದ ಹುಡುಕಾಟದ ಸಮಸ್ಯೆ ಈಗಿಲ್ಲ.
ಇದು ಈ ಹೊತ್ತಿನ ವಿಷಯ ಮುಂದೆ ಐವತ್ತಾದಾಗ ಎನೋ ಯಾರಿಗೆ ಗೊತ್ತು. ?

Thursday, December 31, 2009

ಕಂಡೀರಾ... ನಮ ಸಾಂಬಾಶಿವನ


ಸಾಕ್ಷತ್ ಗುರುವರನಾ... ಕಂಡೀರಾ... ನಮ ಸಾಂಬಾಶಿವನ, ಉರಿಗಣ ಬಿಟ್ಟ ಮನ್ಮಥ ಸುಟ್ಟ..." ಎಂಬ ಲಯಬದ್ಧವಾದ ಹಾಡು, ಲಡ ಲಡ ಲಡ ಎಂಬ ಡಮರುಗದ ಶಬ್ಧ ಹಾಗೂ ಗಂಟಾನಾದದೊಂದಿಗೆ ಒಂದು ಬರೊಬ್ಬರಿ ಆಶಿರ್ವಾದ ಇವಿಷ್ಟು ಅಡಿಕೆ ಶ್ರಾಯದಲ್ಲಿ ಮೈಲಾರ ಕುಂಡಿಗೆ ಎಂಬ ಜನರು ಮನೆಬಾಗಿಲೆಗೆ ಬಂದು ಮಾಡುವ ಕ್ರಿಯೆ. ಮಲೆನಾಡಿನ ಭಾಗದ ಓದುಗರು ನೀವಾಗಿದ್ದರೆ ಒಮ್ಮೆ ಹಳೇ ನೆನಪಿಗೆ ಜಾರಿ ಖಂಡಿತಾ ಮಜ ಅನುಭವಿಸುತ್ತೀರಿ ಇಷ್ಟೊತ್ತಿಗೆ. ಬಯಲು ಸೀಮೆಯ ಈ ಮೈಲಾರಕುಂಡಿಗೆ(ಹಾಗೆಯೇ ಇರಬೇಕು ಅವರ ಹೆಸರು) ಜನಾಂಗ ಭಿಕ್ಷುಕರಲ್ಲ. ಎಲ್ಲಾ ಅವರ ಜೀವನಕ್ಕೆ ಸಾಕಾಗುವಷ್ಟು ಇರುವವರೇ. ಆದರೆ ಅವರದು ಇದೊಂದು ಪದ್ದತಿ. ಸಂಭಾವನೆ ಭಟ್ಟರ ತರಹ. ಹಾಗೆಯೇ ಜನರೂ ಕೂಡ ಅವರನ್ನು ಗೌರವದಿಂದ ನಡೆಯಿಸಿಕೊಳ್ಳುತ್ತಾರೆ. ಓಂದು ಉಟ್ಟ ಬಟ್ಟೆ ಒಂದು ಹೊಸಬಟ್ಟೆ ಕೊಟ್ಟು ಸಿಕ್ಕಾಪಟ್ಟೆ ಲಡ ಲಡ ಲಡ ಶಬ್ಧದ ತಮಟೆಯೊಂದಿಗೆ ಆಶೀರ್ವಾದ ಪಡೆದುಕೊಂಡರೆ ಮನೆಯವರಿಗೂ ಅದೇನೋ ಒಂಥರಾ ನೆಮ್ಮದಿ.
ನಾನು ಸಣ್ಣಕ್ಕಿದಾಗಿನಿಂದ (ಸುಮಾರು ಮೂವತ್ತು ವರ್ಷದ ಹಿಂದಿನಿಂದ) ಅವರದೇ ಆದ ಒಂದೇ ಕುಟುಂಬದ ತಂಡ ಬರುತ್ತಲೇ ಇದೆ. ಮತ್ತು " ಅಯ್ಯಾ ಇದು ನಮ್ಮ ಕಾಲಕ್ಕೆ ಮುಗೀತು ಇನ್ನು ಮುಂದಿನ ವರ್ಷದಿಂದ ಯಾರೂ ಬರೋದಿಲ್ಲ ಸೋಮಿ, ಕೈಬಿಚ್ಚಿ ದಾನ ಮಾಡಿ" ಎಂಬ ಡೈಲಾಗ್ ಕೇಳುತ್ತಾ ಬಂದಾಗಿದೆ. ಹಾಗೂ ಅಂದು ಒಂದೇ ಇದ್ದ ತಂಡ ಇಂದು ಹಿಸೆಯಾಗಿ ನಾಲ್ಕಾಗಿದೆ. ಆದರೆ ಡಮರುಘ ದ ಶಬ್ಧದಲ್ಲಿ ಏನೋ ಮಜ ಇದೆ. ಬೆಂಗಳೂರಿನ ಡಕ್ಕಣಕ ಡಕ್ಕಣಕ ಶಬ್ಧದ ತರಹ.

Friday, December 4, 2009

ತ್ಯಾಂಕ್ಸ್ ಹೇಳಿದರೆ ಅದೆಷ್ಟು ಖುಷಿ ಗೊತ್ತಾ?

ನಾವು ಸರ್ಕಾರಿ ಸ್ವಾಮ್ಯದ ಹಲವಾರು ಸಂಸ್ಥೆಗಳೊಂದಿಗೆ ದಿನನಿತ್ಯ ವ್ಯವಹರಿಸುತ್ತೇವೆ. ಅದು ಕರೆಂಟಿನ ಕೆಇಬಿ ಯಿಂದ ಹಿಡಿದು ಮೊಬೈಲ್ ನ ಬಿ ಎಸ್ ಎನ್ ಎಲ್ ನವರೆಗೂ ಕೆ ಎಸ್ ಆರ‍್ ಟಿಸಿ ಒಳಗೊಂಡಂತೆ ಹತ್ತಾರು ಹಲವಾರು. ಹಾಗೆ ವ್ಯವಹರಿಸುವಾಗೆಲ್ಲ ನಮ್ಮದು ಗೊಣಗಾಟ ಸರ್ವೇ ಸಾಮಾನ್ಯ. ಅಂತಿಮವಾಗಿ ಸರ್ಕಾರಿ ಸೇವೆ ಎಂದರೆ "ರಗಳೆ" ಎಂಬ ಲಂಚಬಾಕತನ ಎಂಬ ವರಾತ. ಆದರೆ ಇಲ್ಲಿ ನಮ್ಮದೂ ಒಂದಿಷ್ಟು ತಪ್ಪಿರುತ್ತದೆ ಅಂತ ನನಗೆ ಮೊನ್ನೆಯಷ್ಟೇ ತಿಳಿಯಿತು. ಅದು ಹೀಗಾಯ್ತು.
ನನ್ನ ವಿಲ್ ಪೋನ್ ಗೆ ಇಂಟರ್ ನೆಟ್ ಹಾಕಿಸಿಕೊಂಡು ಮೂರು ವರ್ಷ ಸಂದವು. ಆವಾಗಾವಾಗ ನೆಟ್ ಕೈಕೊಡುವುದು ಸರ್ವೇ ಸಾಮಾನ್ಯ. ಹಾಗಾದಾಗಲೆಲ್ಲ ಶಿವಮೊಗ್ಗ ಕಂಪ್ಲೇಂಟ್ ನಂಬರ್ ಗೆ ಫೋನ್ ಮಾಡಿ ದೂರುತ್ತಿದೆ. ಅವರಾದರೋ ಅಲ್ಲಿಂದ ದಾರವಾಡಕ್ಕೆ ಪೋನ್ ಹಚ್ಚಿ ದುರಸ್ತಿ ಮಾಡುತ್ತಿದ್ದರು. ಒಮ್ಮೊಮ್ಮೆ ೨ ದಿವಸ ಸರಿ ಆಗದೇ ಇದ್ದಾಗ ಸ್ವಲ್ಪ ಜೋರಾಗಿಯೇ ರಗಳೆ ಮಾಡಿದ್ದು ಇದೆ. ಆದರೆ ಕಳೆದ ಸೋಮವಾರದಿಂದ ಅರೆಕ್ಷಣವೂ ನೆಟ್ ಕೈಕೊಡಲಿಲ್ಲ. ಹೀಗೇ ನೆಟ್ ನಲ್ಲಿ ನೋಡುತ್ತಾ ಕುಳಿತವನಿಗೆ "ಅರೆ ಹೌದು ನಾವು ಕೆಟ್ಟಾಗ ಪೋನ್ ಮಾಡುತ್ತೇವೆ ಸರಿ ಇದ್ದಾಗ ಸುದ್ದಿಯೇ ಹೇಳುವುದಿಲ್ಲವಲ್ಲ. ಅವರುಗಳ ಕೆಲಸಕ್ಕೆ ಸಂಬಳ ಪಡೆಯುತ್ತಿರಬಹುದು ಆದರೆ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ನಾವು ಮಾಡುತ್ತಿರುವ ಕೆಲಸಕ್ಕೆ ಒಂದು ಹೊಗಳಿಕೆ ಜನರಿಂದ ಬರಲಿ ಅಂಬ ಆಸೆ ಇರಬಹುದಲ್ಲ" ಎಂದೆನಿಸಿ ಕಂಪ್ಲೇಂಟ್ ನಂಬರ್ ಗೆ ಫೋನ್ ಹಚ್ಚಿದೆ. ಹಾಗೂ ವಾರ ಪೂರ್ತಿ ಸರಿಯಿದ್ದ ನೆಟ್ ಬಗ್ಗೆ ಕಂಗ್ರಾಟ್ಸ್ ಹೇಳಿದೆ. ಕಂಪ್ಲೇಟ್ ರಿಸೀವ್ ಮಾಡಿದ ಮೇಡಂ ಗೆ ಮಹದಾಶ್ಚರ್ಯ. ಯಾರೂ ಹೀಗೆಲ್ಲ ವ್ಯವಸ್ಥೆ ಸರಿ ಇದ್ದದನ್ನು ಹೇಳುವುದೇ ಇಲ್ಲವಂತೆ. ಅವರು ಸಂಭ್ರಮದಿಂದ ಮತ್ತೊಬ್ಬ ಮೇಲಾಧಿಕಾರಿಯನ್ನು ಕರೆದು ಪೋನ್ ಕೊಟ್ಟರು, ಅವರದ್ದೂ ಅದೇ ಖುಷಿ.
ಹೀಗೆಲ್ಲಾ ಇದೆ ನಿಮಗೂ ಇಂತಹ ಅನುಭವ ಆಗಿರಬಹುದು ಆಗಿಲ್ಲದಿದ್ದರೆ ಇವತ್ತೇ ಅನುಭವ ಮಾಡಿಕೊಳ್ಳಬಹುದು.