Friday, June 4, 2010

ವಾಪಾಸ್ ಮೈಲ್ ಅಪೂಟ್ ಬಂದ್

Your E-mail ID Have Won £950.000.00 In Our M Benz Promo, Send Your Name, Phone,Occupation,Country. ಇಷ್ಟು ಅಥವಾ ತುಸು ಹೆಚ್ಚು ಸಂದೆಶವಿರುವ ಮೈಲ್ ಗಳ ಕಾಟ ಬಲು ಜೋರು . ಉತ್ತರ ಕೊಟ್ಟಿರೋ ಅಷ್ಟು ಕಳುಹಿಸಿ ಇಷ್ಟು ಕಳುಹಿಸಿ ನಿಮಗೆ ನಿಮ್ಮ ದುಡ್ಡು ಕಳುಹಿಸುವ ಖರ್ಚು ಇದು, ಎಂಬೆಲ್ಲಾ ತಿಳಿಸುತ್ತಾರೆ. ಅಪ್ಪಿ ತಪ್ಪಿ ದುಡ್ಡು ಕಳುಹಿಸಿದರೋ ಕತೆ ಅಷ್ಟೆ. ಅತಿ ಆಸೆಗೆ ಹೋಗಿ ಬಹಳಷ್ಟು ಜನ ಹಣ ಕಳೆದುಕೊಂಡಿದ್ದೂ ಉಂಟು. ಈ ಭೂಪರು ಹೀಗೆ ಮಾಡಿ ಮೋಸ ಮಾಡುವುದರ ಜತೆ ಇತ್ತೀಚೆಗೆ ಬೆಂಗಳೂರಿನವರೆಗೂ ಬಂದು ಹೋಗಿ ನಮ್ಮ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಇಂತಹ ಮೈಲ್ ಗಳನ್ನು ಸುಮ್ಮನೆ ನಿರ್ಲಕ್ಷಿಸಿವುದೊಳಿತು. ಅಥವಾ ಒಂದಿಷ್ಟು ತಮಾಷೆ ಬೇಕಾದರೆ ಮಾಡಬಹುದು. ನಿಮ್ಮ ವಿಳಾಸ ಕಳುಹಿಸಿದ ಗಂಟೆಯೊಳಗೆ ಮತ್ತೊಂದು ಮೈಲ್ ನಿಮಗೆ ಅವರು ತಕ್ಷಣ ಕಳುಹಿಸುತ್ತಾರೆ. ನಾನು ಸುಮ್ಮನೆ ಬೇಕಷ್ಟು ಸಲ ವಿಳಾಸ (ಸುಳ್ಳೆ ಪಳ್ಳೆ) ಕಳುಹಿಸಿ ಮಜ ತೆಗೆದುಕೊಂಡಿದ್ದೇನೆ. ಹಾಗೆ ಮೊನ್ನೆ ನನ್ನ ವಿಳಾಸ ವನ್ನು ಈ ಕೆಳಕಂಡಂತೆ ಕಳುಹಿಸಿದೆ. ವಾಪಾಸ್ ಮೈಲ್ ಅಪೂಟ್ ಬಂದ್. ನಾನು ಕಳುಹಿಸಿದ ನನ್ನ ವಿಳಾಸ
Name :Raghavendra Sharma K L
08183207303
Sub Inispecter Of Indian Police
INDIA

Saturday, May 29, 2010

ಹೂವು ಚೆಲುವೆಲ್ಲ ತಂದೆಂದಿತು........


ಅದು ಹಾಗೆ ಹೇಳಿತೋ ಇಲ್ಲವೋ ಗೊತ್ತಿಲ್ಲ. ಮನುಷ್ಯ ಹಾಗಂದಿದ್ದು ನಿಜ.ಏನಂತೀರಿ?

Sunday, May 23, 2010

ತ್ರಸ್ಥ ಎನ್ನುವ ಕತೆ ಬಂದಿದೆ

ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲೊಂದು ತ್ರಸ್ಥ ಎನ್ನುವ ಕತೆ ಬಂದಿದೆ ಬಿಡುವು ಇದ್ದಾಗ ಓದಿ. ಇಷ್ಟೆಲ್ಲಾ ಅಲವತ್ತುಕೊಂಡ ಮೇಲೆ ಬರೆದ ಭೂಪ ನಾನೇ ಎಂದು ಹೊಸತಾಗಿ ಹೇಳಬೇಕಾಗಿಲ್ಲ ತಾನೆ.? ಛಿ ಬೇಸರವಾಗುತ್ತದೆ ಈ ಲೇಖಕರುಗಳ.....! ಅವಸ್ಥೆ ಕಂಡು....!

ಇಲ್ಲಿದೆ ಕೊಂಡಿ.........

http://prajavani.net/Content/May232010/weekly20100522186235.asp

Wednesday, May 12, 2010

ಗಗನದಲ್ಲಿ ಹಕ್ಕಿಯಂತೆ ಹಾರಾಟ

ಗಗನದಲ್ಲಿ ಹಾರಾಡುವ ಮನುಷ್ಯನ ಕನಸು ಬಹಳ ಹಿಂದಿನದು. ರೈಟ್ಸ್ ಸಹೋದರರ ಪರಿಶ್ರಮದಿಂದ ಅದು ವಿಮಾನದಮೂಲಕ ಸಾದ್ಯವಾಯಿತು ಅಂತ ಇತಿಹಾಸದ ಪುಸ್ತಕಗಳು ಹೇಳುತ್ತವೆ.ಆನಂತರ ಹೆಲಿಕ್ಯಾಪ್ಟರ್ ಹೀಗೆ ಮುಂದುವರೆಯುತ್ತಲೇ ಸಾಗುತ್ತದೆ ನಾನಾರೀತಿಯ ಮನುಷ್ಯನ ಹಾರಾಟ. ಆದರೆ ಮನುಷ್ಯ ಇನ್ನೂ ಪಕ್ಕಾ ಹಕ್ಕಿಯಂತೆ ರಕ್ಕೆ ಕಟ್ಟಿಕೊಂಡು ಏಕಾಂಗಿಯಾಗಿ ಹಾರಾಡುವ ಕನಸನ್ನು ಕಾಣುತ್ತಲೇ ಇದ್ದ. ಯೇವ್ಸ್ ರೊಸ್ಸಿ ಎಂಬ ಸ್ವಿಸ್ ದೇಶದ ಪೈಲಟ್ ಒಬ್ಬಾತ ಈ ಕನಸನ್ನೂ ಕೂಡ ನನಸು ಮಾಡಿದ್ದಾನೆ. ರಕ್ಕೆಗಳಿಗೆ ಸಣ್ಣದಾದ್ ನಾಲ್ಕು ಜೆತ್ ಇಂಜನ್‌ಗಳನ್ನು ಜೋಡಿಸಿಕೊಂಡು ಸ್ವಿಡ್ಜರ್ ಲ್ಯಾಂಡ್ ನ ಆಕಾಶದಲ್ಲಿ ಈತ ಮೋಡಗಳ ನಡುವೆ ಪಕ್ಕಾ ಹಕ್ಕಿಯಂತೆ ಯಶಸ್ವೀ ಹಾರಾಟ ನಡೆಯಿಸಿ ಅಚ್ಚರಿ ಮೂಡಿಸಿದ್ದಾನೆ. ನಂತರ ಪ್ಯಾರಾಚೂಟ್ ಬಳಸಿಕೊಂಡು ನೆಲದಮೇಲೆ ಇಳಿದು ಮುಗುಳ್ನಗೆ ಬೀರಿದ್ದಾನೆ. ನೀವೂ ಬೇಕಾದರೆ ಹೀಗೆ ಯತ್ನಿಸಬಹುದು. ಕೊನೆಯದಾಗಿ ಆಕಾಶದಲ್ಲಿ ಹಾರಾಡಲು ಆಗ್ದಿದ್ದರೆ ನೆಲದ ಮೇಲಾದರೂ ಹಾರಾಡಬಹುದು...!.

Friday, May 7, 2010

ಮ್ಯಾಗ್ನೆಟಿಕ್ ಮನುಷ್ಯ



"ನನ್ನ ದೇಹ ಕಬ್ಬಿಣ ಇದ್ದಂಗೆ" ಅಂತ ನಿಮ್ಮ ಹತ್ತಿರ ಯಾರಾದರೂ ಹೇಳಿಯಾರು. ಆದರೆ "ನನ್ನ ದೇಹ ಆಯಸ್ಕಾಂತ ಇದ್ದಂಗೆ ಇದೆ" ಅಂತ ಹೇಳಿದವರನ್ನು ನೀವು ಕಂಡಿರಲಿಕ್ಕಿಲ್ಲ. ಅಂತಹ ಅಪರೂಪದ ವ್ಯಕ್ತಿಯೊಬ್ಬ ಮಲೇಶಿಯಾ ದೇಶದಲ್ಲಿದ್ದಾನೆ. ಆತನ ಹೆಸರು "ಲಿವ್ ತೊವ್ ಲಿನ್". ಆತ ಕೇವಲ ಹೇಳಿಕೊಳ್ಳುವುದಷ್ಟೇ ಅಲ್ಲ ನಿಜವಾಗಿಯೂ ಆತನ ದೇಹ ಆಯಸ್ಕಾಂತ ಮಾಡುವ ಕೆಲಸವನ್ನೇ ಮಾಡುತ್ತದೆ. ಈ ಚಿತ್ರದಲ್ಲಿ ಕಬ್ಬಿಣದ ವಸ್ತುಗಳು ಆತನ ದೇಹವನ್ನು ಹಿಡಿದುಕೊಂಡಿರುವ ಪರಿ ನೋಡಿದರೆ ನಿಮಗೇ ತಿಳಿಯುತ್ತದೆ. ವಿಜ್ಞಾನಕ್ಕೆ ಸವಾಲೆಸೆಯುವ ಈ ದೇಹದ ಆಯಸ್ಕಾಂತೀಯ ಗುಣ ಒಮ್ಮೆ ವಿಜ್ಞಾನಿಗಳನ್ನೂ ತಬ್ಬಿಬ್ಬು ಮಾಡಿದ್ದು ನಿಜವಾದರೂ ಯೂನಿವರ್ಸಿಟಿ ಟೆಕ್ನಾಲಜಿ ಆಫ಼್ ಮಲೇಶಿಯಾದ ಪ್ರೋ ನಸ್ರುಲ್ ಮೊಹಮದ್ ಸುದೀರ್ಘ ಪರೀಕ್ಷೆ ನಡೆಸಿ "ಲಿವ್" ನ ಚರ್ಮಕ್ಕೆ ಒಂಥರಾ ಸೆಳೆಯುವ ಶಕ್ತಿ ಇರುವುದು ನಿಜ ಆದರೆ ಅದು ಆಯಸ್ಕಾಂತದಂತಲ್ಲ, ಯಾವುದೇ ವಸ್ತುಗಳನ್ನೂ ಅದು ಹಾಗೆ ಸೆಳೆಯುತ್ತದೆ ಎಂಬ ಸರ್ಟಿಪಿಕೇಟ್ ನೀಡಿದರು. ಅಚ್ಚರಿಯೆಂದರೆ ಇದು ಲಿವ್ ದೊಂದೆ ಕತೆಯಲ್ಲ ಆತನ ಮಕ್ಕಳು ಹಾಗೂ ಮೊಮ್ಮಕ್ಕಳದ್ದೂ ಇದೇ ಕತೆ. ನಮ್ಮ ದೇಶದಲ್ಲಿ ಆಗಿದ್ದರೆ ಇದು ದೈವಿಕ ಶಕ್ತಿ ಎಂದು ನಂಬಿಸಿ ಹೇರಳ ಆಸ್ತಿ ಗಳಿಸಬಹುದಿತ್ತು. ಇರಲಿ ಈಗಲೂ ಕಾಲ ಮಿಂಚಿಲ್ಲ ಆತನನ್ನು ಪುಸಲಾಯಿಸಿ ಇಲ್ಲಿಗೆ ಕರೆತಂದು ಸಂಪಾದಿಸಬಹುದು....! ಎನಂತೀರೀ?

ಆಟ ಆಟ


ಯಕ್ಷಗಾನ ಮನರಂಜನೆಗೆ ವಸಂತಗಾನ....ನೋಡಲು ಮರೆಯದಿರಿ ಮರೆತು ನಿರಾಶರಾಗ

ದಿರಿ, ಆಟ ಆಟ ಒಂದೇ ಒಂದು ಆಟ , ಗಂಡು ಹೆಣ್ಣಾಗಿ ಹೆಣ್ಣನ್ನೇ ನಾಚಿಸು ಮಂಟಪರವರ........." ಹೀಗೆಲ್ಲಾ ಕೂಗುತ್ತಾ ಮೇಳದ ಕಾರು ಓಡುತ್ತಿದ್ದರೆ ಅದರ ಹಿಂದೆ ಬಣ್ಣ ಬಣ್ಣದ ಹ್ಯಾಂಡ್ ಬಿಲ್ ಹೆಕ್ಕಲು ಹುಡುಗರ ದಂಡು ಓಡುತ್ತಿತ್ತು. ಇದು ಮೂರು ದಶಕಗಳ ಹಿಂದಿನ ಚಿತ್ರಣ. ಈಗ ನಮ್ಮ ಕಡೆ ಯಕ್ಷಗಾನದ ಭರಾಟೆ ಅಷ್ಟೊಂದು ಜೋರಿಲ್ಲ. ಹಾಗಂತ ಮುಗಿದೇ ಹೋಗಿದೆ ಅನ್ನುವಂತೆಯೂ ಇಲ್ಲ. ಮೊನ್ನೆ ಹಿರೇಮನೆಯಲ್ಲಿ ನಡೆದ ದಕ್ಷಯಜ್ಞದ ಒಂದು ಚಿತ್ರ ನಿಮಗಾಗಿ, ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ.......

Sunday, May 2, 2010

ಬೇಲಿ ಎಂಬ ಕಥೆ

ನಾನು ಬರೆದ ಕಥೆಗಳು ಒಟ್ಟೂ ೪೨. ಪ್ರಕಟವಾಗಿದ್ದು ೩೬, ಕಥೆಗಳಲ್ಲಿನ ಪಾತ್ರಧಾರಿಗಳು ಎದ್ದು ಬಂದು ನನ್ನ ಮನೆಯ ಬಾಗಿಲು ತಟ್ಟಿದ ಉದಾಹರಣೆ ಹಲವಿದೆ. "ನೀನು ಊರಿನ ಜನರ ಕತೆಯನ್ನೆಲ್ಲಾ ಬರೆದು ಬಿಡುತ್ತೀ" ಎಂಬ ಆಪಾದನೆಯೂ ಇದೆ, ಕಥೆ ಚೆನ್ನಾಗಿತ್ತು ಅನ್ನುವವರೂ ಇದ್ದಾರೆ ನಮ್ಮೂರಿನ ಕತೆ ಬರೆದ ನಿನ್ನ ಕಾಲು ಮುರಿಯುತ್ತೀನಿ ಅಂತ ಅನ್ನಿಸಿಕೊಂಡಿದ್ದೂ ಇದೆ. ಇರಲಿ ಅವೆಲ್ಲಾ ಒಂಥರಾ ಮಜ ಇರುತ್ತದೆ. ಅವೆಲ್ಲಾ ಒತ್ತಟ್ಟಿಗಿರಲಿ .ಈ ನಡುವೆ ಕಳೆದ ವರ್ಷ "ಕಟ್ಟು ಕತೆಯ ಕಟ್ಟು" ಎಂಬ ಕಥಾ ಸಂಕಲನ ತಂದು ಬಿಡೋಣ ಅಂತ ಹೊರಟಿದ್ದೆ. ಆದರೆ ಮೂವತ್ತು ಸಾವಿರ ಹೊಂದಿಸಲಾರದೆ ಕೈಬಿಡಬೇಕಾಯಿತು. ಕಥಾ ಸಂಕಲನ ದ ಬಗ್ಗೆ ಬರೆದ ಬ್ಲಾಗ್ ಬೊಂಗಾಯಿತು. ಒಂದಲ್ಲಾ ಒಂದು ದಿನ ತರಬೇಕು ಕಥಾ ಸಂಕಲನ ಎಂಬ ಆಸೆ ಸುಪ್ತವಾಗಿದೆ. ಇರಲಿ,
ಇವತ್ತು ಅಂದರೆ ಮೆ ೨ ನೇ ತಾರೀಖಿನ ಭಾನುವಾರ "ಕನ್ನಡ ಪ್ರಭ" ದಲ್ಲಿ ಬೇಲಿ ಎಂಬ ಕಥೆ ಪ್ರಕಟವಾಗಿದೆ ಬಿಡುವು ಸಿಕ್ಕಾಗ ನೋಡಿ. ಯಾರೋ ಒಬ್ಬರು ಹೀಗೆ ಹೇಳಿದ್ದರು " ಕಥೆಗಳು ಕಾವ್ಯಗಳು ಹಾಗೂ ಲೇಖನಗಳಲ್ಲಿ ಸತ್ವ ತಾಕತ್ತು ಇದ್ದರೆ ಲೇಖಕ ನನ್ನದೊಂದು ಲೇಖನ ಪ್ರಕಟವಾಗಿದೆ ನೋಡಿ ಎಂದು ಹೇಳುವ ಅಗತ್ಯ ಇರುವುದಿಲ್ಲ" ಹಾಗೆ ಅಗತ್ಯ ಇದೆ ಎಂದಾದಲ್ಲಿ......!. ಇರಲಿ ಬಿಡಿ ಇದು ನಮ್ಮ ನಿಮ್ಮೊಳಗೆ....!
http://www.kannadaprabha.com/NewsItems.asp?ID=KP420100501180342&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=5/2/2010&Dist=0