Monday, August 23, 2010

ಮೇಣ ತೆಗೆಯೋನೆ ಜಾಣ





ಮಳೆಗಾಲ ಶುರುವಾಯಿತು ಎಂದಾಕ್ಷಣ ಹೆಜ್ಜೇನು ಬಯಲುಸೀಮೆಯತ್ತ ವಲಸೆಯನ್ನಾರಂಭಿಸುತ್ತವೆ. ಅವು ಬಿಟ್ಟುಹೋದ ತತ್ತಿಗಳು ಜೇನುಕೃಷಿಕರಿಗೆ ಉಪ ಆದಾಯವನ್ನು ತಂದುಕೊಡುತ್ತವೆ. ಒಂದೊಂದು ಮರದಲ್ಲಿ ಹತ್ತಾರು ಖಾಲಿತತ್ತಿಗಳು ಸಿಗುತ್ತವೆ. ಅವನ್ನು ತಂದು ಜೇನುಮೇಣವನ್ನಾಗಿಸಿ ಮಾರುಕಟ್ಟೆಗೆ ಒಯ್ದರೆ ವಾರಕ್ಕಾಗುವ ಖರ್ಚು ಕಿಸೆಗೆ ಖಂಡಿತ.
ಮನುಷ್ಯ ಪ್ರಕೃತಿಯಿಂದ ತೆಗೆದ ಮೊದಲ ಪ್ಲಾಸ್ಟಿಕ್ ಎಂಬ ಹೆಗ್ಗಳಿಗೆ ಜೇನು ಮೇಣಕ್ಕೆ. ಪಾಶ್ಚಾತ್ಯರು ಜೇನುಮೇಣವನ್ನು ಮೊಂಬತ್ತಿಗಾಗಿ ಉಪಯೋಗಿಸುತ್ತಾರೆ. ಚರ್ಚ್ ಗಳಲ್ಲಿ ಜೇನುಮೇಣದಿಂದ ತಯಾರಾಗಿರುವ ಮೊಂಬತ್ತಿಗೆ ಹೆಚ್ಚಿನ ಗೌರವವಿದೆ. ಮೇಣ ಉಕ್ಕದ, ವಿಷದ ಹೊಗೆ ಬರದ ಪರಿಸರ ಸ್ನೇಹಿ ಮೊಂಬತ್ತಿ ಎಂಬ ಹೆಗ್ಗಳಿಗೆ ಇದಕ್ಕಿದೆ. ಮರಗೆಲಸದವರು ಹೆಚ್ಚಾಗಿ ಜೇನುಮೇಣದ ಗ್ರಾಹಕರು ಅವರು ಮರ ನುಣುಪಾಗಲು ಜೇನುಮೇಣವನ್ನು ಬಳಸುತ್ತಾರೆ.
ಮೇಣತೆಗೆಯುವ ವಿಧಾನ: ಹೆಜ್ಜೇನು ಅಥವಾ ತುಡುಜೇನು ತತ್ತಿಗಳನ್ನು ಸಣ್ಣ ತುಂಡುಗಳನ್ನಾಗಿಸಿ ಪಾತ್ರೆಯೊಳಗೆ ಹಾಕಿ ನೀರು ತುಂಬಿಸಿ ಅರ್ದ ಘಂಟೆಗಳ ಕಾಲ ಕುದಿಸಬೇಕು. ನಂತರ ಬಟ್ಟೆಯಲ್ಲಿ ಕುದಿದ ನೀರನ್ನು ಮತ್ತೊಂದು ಪಾತ್ರೆಗೆ ಸೋಸಬೇಕು. ಜಿಡ್ಡು ಬಟ್ಟೆಯಲ್ಲಿಯೇ ಉಳಿಯುತ್ತದೆ. ನೀರಿನ ಜೊತೆ ಸೇರಿದ ಮೇಣ ಮತ್ತೊಂದು ಪಾತ್ರೆಯಲ್ಲಿ ಶೇಖರಣೆಯಾಗುತ್ತದೆ. ನೀರು ಆರಿದ ನಂತರ ಶುದ್ಧ ಜೇನುಮೇಣ ತೇಲತೊಡಗುತ್ತದೆ. ಕೈಯಿಂದ ಉಂಡೆ ಕಟ್ಟಿದರೆ ಅರಿಶಿನ ಬಣ್ಣದ ಮಿರಿಮಿರಿ ಮಿಂಚುವ ಸುಹಾಸನಾಯುಕ್ತ ಜೇನುಮೇಣ ಬಂದಂತೆ. ಆನಂತರ ಕುದಿಯುವ ನೀರಿನೊಳಗೆ ಪಾತ್ರೆಯೊಂದನ್ನಿಟ್ಟು(ನೇರ ಪಾತ್ರೆಯೊಳಗೆ ಮೇಣದುಂಡೆ ಇಡುವಂತಿಲ್ಲ, ಇಟ್ಟರೆ ಜೇನುಮೇಣದ ಬಣ್ಣ ಕೆಡುತ್ತದೆ) ಅದರೊಳಗೆ ಜೇನುಮೇಣದುಂಡೆಯಿಟ್ಟರೆ ಕರಗಿ ನೀರಾಗುತ್ತದೆ. ಕರಗಿದ ಮೇಣವನ್ನು ಬೇಕಾದ ಆಕಾರದ ಅಚ್ಚಿಗೆ ಸುರುವಿದರೆ ಜೇನುಮೇಣ ಮಾರುಕಟ್ಟೆಗೆ ಸಿದ್ಧ.
ಹೀಗೆ ಜೇನೆಂಬ ಕೀಟ ತನ್ನ ಎಲ್ಲಾ ಉತ್ಪನ್ನಗಳನ್ನೂ ಮನುಷ್ಯನ ಬಳಕೆಗೆ ಕೊಟ್ಟು ನೀನಾರಿಗಾದೆಯೋ ಎಲೆ ಮಾನವ? ಎಂಬ ಪ್ರಶ್ನೆ ಕೇಳುವಂತಾಗಿದೆ. ತುಪ್ಪದ ಮೂಲಕ ರೈತ ಬೆಳೆಯುವ ಬೆಳೆಗಳ ಪರಾಗಸ್ಪರ್ಷದ ಮೂಲಕ ಹಾಗೂ ಅಂತಿಮವಾಗಿ ಜೇನು ಮೇಣದ ಮೂಲಕ ಕೃಷಿಕರ ಬಾಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ ಜೇನು. ಉಳಿಸಿ ಬೆಳಸುವುದಷ್ಟೆ ನಮ್ಮ ಜವಾಬ್ದಾರಿ.
(ಇಂದಿನ ಲವಲವಿಕೆಯಲ್ಲಿ ಪ್ರಕಟಿತ)

Wednesday, August 18, 2010

ಹಣ್ಣೇ ನಿನಗೆ ಸಾಟಿಯಿಲ್ಲ


ಮಲೆನಾಡಿನ ಮಳೆಗಾಲದ ದಿನಗಳಲ್ಲಿ ಪುಕ್ಕಟ್ಟೆ ಪಾಯಿ ಚಪ್ಪರಿಸಬೇಕು ಎಂದಾದರೆ ಒಮ್ಮೆ ಈ ಅಂಕುಲಾ ಹಣ್ಣನ್ನು ಸವಿಯಬೇಕು. ಮಲೆನಾಡಿನ ಹಳ್ಳಿಯ ಶಾಲೆಯಮಕ್ಕಳಿಗೆ ಮಳೆಗಾಲದ ದಿನಗಳು ಎಂದರೆ ರಸ್ತೆಯಲ್ಲಿ ಹರಿಯುವ ಜುಳುಜುಳು ನೀರು ಹಾಗೂ ರಸ್ತೆಯಂಚಿನ ಪೆಪ್ಪರ್ ಮೆಂಟ್ ಹಣ್ಣು. ನಿಂಬೆಹುಳಿ ಪೆಪ್ಪರ್ ಮೆಂಟನ್ನು ಗಿಡದ ಮೇಲೆ ಜೋಡಿಸಿದಂತಿರುವ ಕಾರಣಕ್ಕಾಗಿ ಅಂಕುಲ ಹಣ್ಣಿಗೆ ಪರ್ಯಾಯ ಹೆಸರು ಇದು.
ಮಳೆಗಾಲದ ಕಾಡು ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಈ ಹಣ್ಣಿಗೆ ವಿಶಿಷ್ಠ ರುಚಿಯ ಜತೆಗೆ ವಿಶೇಷ ಬಣ್ಣವನ್ನು ಪ್ರಕೃತಿ ನೀಡಿದೆ. ಹಸಿರೆಲೆಗಳ ನಡುವೆ ಕಡುಕೆಂಪು ಬಣ್ಣದ ಈ ಹಣ್ಣಿನ ಸಿಪ್ಪೆ ಸುಲಿದು ಕೆಂಪಗೆ ಮಿರಿಮಿರಿ ಮಿಂಚುವ ರಸಭರಿತ ಹಣ್ಣು ಅಗಿಯುವುದಲ್ಲ ಸೀಬಬೇಕು. ಸೀಬಿದ ಮರುಕ್ಷಣ ವಾವ್ ಎಂಬ ಉದ್ಘಾರ ತನ್ನಷ್ಟಕ್ಕೆ ಹೊರಡುತ್ತದೆ. ಬೀಜವನ್ನು ಉಗಿಯುತ್ತಿದ್ದಂತೆ ಮತ್ತೊಂದು ಹಣ್ಣಿನ ಹುಡುಕಾಟ ತನ್ನಷ್ಟಕ್ಕೆ. ಶಾಲಾ ಮಕ್ಕಳ ಬಾಯಿಗೆ ಹಣ್ಣು ನೀಡುವುದು ಎಂದರೆ ಪ್ರಾಯಶಃ ಈ ಗಿಡಕ್ಕೂ ಅತ್ಯಂತ ಸಂತೋಷದ ಸಂಗತಿಯೆ. ತಮಗೇ ಗೊತ್ತಿಲ್ಲದಂತೆ ದಾರಿಯುದ್ದಕ್ಕೂ ಅಂಕುಲದ ಬೀಜ ಪ್ರಸರಣ ಮಾಡುವ ಕೆಲಸಗಾರರು ಇವರು.
ಅಂಕುಲ ಗಿಡ ಸ್ಥಳೀಯವಾದ ಭಾಷೆಗಳಲ್ಲಿ ಬೇರೆ ಬೇರೆ ಹೆಸರಿನ ಮೂಲಕ ಪರಿಚಯಿಸಿಕೊಳ್ಳುತ್ತದೆ. ಗಿಡ ಹಣ್ಣುಗಳ ಚಿತ್ರ ಕಂಡಾಗ ಓಹ್ ಇದು ಈ ಹಣ್ಣು ಎಂದು ನೆನಪಾಗುತ್ತದೆ. ಪಶ್ಚಿಮ ಘಟ್ಟದ ತಪ್ಪಲಿನ ವಾತಾವರಣದಲ್ಲಿ ಮಾತ್ರಾ ಕಾಣಿಸಿಕೊಳ್ಳುವ ಈ ಗಿಡ ಪೊದೆಯ ಆಶ್ರಯದಲ್ಲಿ ಮಾತ್ರಾ ಬೆಳೆಯಬಲ್ಲದು. ಅತ್ತ ಬಳ್ಳಿಯೂ ಅಲ್ಲ ಇತ್ತ ಗಿಡವೂ ಅಲ್ಲ ಎಂಬಂತಿರುವ ಅಂಕುಲ ಗಿಡದ ಹಣ್ಣಿನ ರುಚಿಗೆ ಮಾತ್ರಾ ಸಾಟಿಯಿಲ್ಲ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Monday, August 16, 2010

ಮರಕ್ಕೆ ಮ್ಯುತ್ಯುವಾಗದ ಕೊಡಲಿ ಕಾವು

ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬ ಗಾದ ಮಾತಿದೆ. ಮನೆ ಮಗ ಮನೆಹಾಳು ಕೆಲಸ ಮಾಡಿದಾಗ ಈ ಗಾದೆಯನ್ನು ಬಳಸುತ್ತಾರೆ. ಹಾಗೆ ಬಳಸಲು, ಹೀಗೆ ಅನ್ನಲು ಕಾರಣವಿದೆ. ಕಬ್ಬಿಣದ ಕೊಡಲಿಗೆ ಹಿಡಿಕೆಯಿಲ್ಲದಿದ್ದರೆ ಮರ ಕಡಿಯಲು ಆಗುವುದಿಲ್ಲ. ಕೊಡಲಿಯ ಹಿಡಿಕೆ ಮರದ್ದೇ ಆಗಿದ್ದರಿಂದ ಮರವನ್ನೇ ಬಳಸಿ ಮರ ಕಡಿದಾಗ ಹೀಗೆ ಅನ್ನುತ್ತಾರೆ. ಇಲ್ಲಿ ಎರಡು ರೀತಿಯಿಂದ ಮರಕಡಿತಲೆ, ಮೊದಲನೆಯದು ಕೊಡಲಿಯ ಹಿಡಿಕೆಗಾಗಿ ಎರಡನೆಯದು ಹಿಡಿಕೆಯ ಬಳಸಿ ಮರ ಕಡಿದಾಗ. ಇರಲಿ ಹೇಳಹೊರಟಿರುವ ವಿಷಯ ಅದಲ್ಲ ಬೇರೆಯೇ ಇದೆ.
ಕೊಡಲಿ, ಗುದ್ದಲಿ, ಪಿಕಾಸಿ ಮುಂತಾದ ಕೃಷಿ ಉಪಕರಣಗಳ ಕಾವಿ(ಹಿಡಿಕೆ)ಗಾಗಿ ಮರ ಕಡಿಯುವುದು ಅನಿವಾರ್ಯ. ಗಟ್ಟಿಮುಟ್ಟಾದ ನೇರವಾಗಿರಬೇಕಾದ ಹಿಡಿಕೆಗಾಗಿ ಉತ್ತಮ ಮರಗಳನ್ನೇ ಕಡಿಯಬೇಕಾಗುತ್ತದೆ. ಇದರಿಂದ ಅರಣ್ಯ ನಾಶ ಅಪಾರ. ಆದರೆ ಮರಕಡಿಯದೆ ಅತ್ಯುತ್ತಮ ಗುಣ ಮಟ್ಟದ ಹಿಡಿಕೆಗಳನ್ನು ಕೃಷಿಕರಿಗೆ ಮರವೊಂದು ಒದಗಿಸುತ್ತಿದೆ. ಅದರ ಹೆಸರು ಸೂಜಿಗರಗಲು.
ಸೂಜಿಗರಗಲು ಪಶ್ಚಿಮಘಟ್ಟಗಳ ಕಾಡಿನಲ್ಲಿರುವ ಕಾಡುಜಾತಿಯ ಮರ. ಇದರ ಕಾಂಡದಲ್ಲಿ ಕೃಷಿ ಉಪಕರಣಗಳಿಗೆ ಬೇಕಾಗುವಂತಹ ಹಿಡಿಕೆಗಳು ಉಬ್ಬಿ ನಿಂತಿರುತ್ತವೆ. ಬೇಕಾದ ಅಳತಗೆ ಕತ್ತರಿಸಿ ಕೊಡಲಿ ಅಥವಾ ಗುದ್ದಲಿಗೆ ಹಾಕಿಕೊಂಡರೆ ಮರಕ್ಕೆ ಹಾಗೂ ಅದರ ಬೆಳವಣಿಗೆಗೆ ಕಿಂಚಿತ್ತೂ ಅಪಾಯವಿಲ್ಲ. ಅತ್ಯಂತ ಗಟ್ಟಿ ಜಾತಿಯಾಗಿರುವ ಇದರ ಹಿಡಿಕೆ ಗುದ್ದಲಿ ಪಿಕಾಸಿಯ ಆಯುಷ್ಯವಿರುವವರೆಗೂ ಬಾಳಿಕೆ ಬರುತ್ತದೆ. ಹೀಗಾಗಿ ಕೃಷಿ ಉಪಕರಣಗಳ ಹಿಡಿಕೆಗಾಗಿ ಕಾಡುನಾಶ ಮಾಡದೆ ಅಷ್ಟರಮಟ್ಟಿಗಿನ ಅರಣ್ಯ ಉಳಿಸಬಹುದು ಎಂಬುದು ಅನುಭವಸ್ತರ ಮಾತು.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Saturday, August 14, 2010

ಮನೆಯೇ ವಸ್ತು ಸಂಗ್ರಹಾಲಯ


ಧರ್ಮಸ್ಥಳಕ್ಕೋ ಅಥವಾ ಮೈಸೂರಿಗೋ ಪ್ರವಾಸಕ್ಕೆ ಹೋದವರು ಒಮ್ಮೆ ವಸ್ತು ಸಂಗ್ರಹಾಲಯಕ್ಕೆ ಹೋಗದೇ ಬರಲಾರರು. ಒಂದುಕಾಲದಲ್ಲಿ ಮನುಷ್ಯ ಬಳಸುತ್ತಿದ್ದ ವಸ್ತುಗಳ ಒಪ್ಪಓರಣ ಜೋಡಣಯೇ ಅಲ್ಲಿನ ಪ್ರಮುಖ ಆಕರ್ಷಣೆ. ಈ ಸಂಗ್ರಹಗಳು ಬಹಳ ಪುರಾತನವಾದುದರಿಂದ ಅವುಗಳ ಮಹತ್ವ ಜಾಸ್ತಿ. ವಸ್ತುಗಳು ಹಳೆಯದಾದಂತೆಲ್ಲ ಮಹತ್ವ ಪಡೆಯುತ್ತಾ ಸಾಗುತ್ತದೆ. ಆದರೆ ಹಾಗೆ ಮಹತ್ವ ಪಡೆದುಕೊಳ್ಳಲು ಅವುಗಳನ್ನು ಕಾಪಿಡಬೇಕು.ಹಾಗೆ ಕಾಪಿಟ್ಟದ್ದನ್ನು ಅಂದವಾಗಿ ಒಪ್ಪಓರಣ ಮಾಡುತ್ತಾ ಇರಬೇಕು. ಆಗ ಅದು ಸಂಗ್ರಹಾಲಯ ಎಂದೆನಿಸಿಕೊಳ್ಳುತ್ತದೆ. ಅವೆಲ್ಲ ದೊಡ್ಡಮಟ್ಟದ ಸಂಗ್ರಹಾಲಯದ ಕತೆಯಾಯಿತು, ಹೀಗೆ ಹಳೆಯದಾದ ವಸ್ತುಗಳನ್ನು ಬಳಕೆಯಿಲ್ಲದೆ ಮೂಲೆಗೆಸೆದ ಹಳೆಯ ಅಮೂಲ್ಯ ವಸ್ತುಗಳನ್ನು ಅಚ್ಚುಕಟ್ಟಾಗಿ ಕಾಪಿಟ್ಟು, ಕೃಷಿಕ ವೃತ್ತಿಯ ಜತೆಯಲ್ಲಿಯೇ ತಮ್ಮ ಮನೆಯಲ್ಲಿ ಒಂದು ಪುಟ್ಟ ಹಳೆಯ ವಸ್ತು ಸಂಗ್ರಹಾಲಯ ಮಾಡಿದ ಹಳ್ಳಿ ಹೈದನ ಆಸಕ್ತಿಯ ನೋಟ ಇದು.
ಸಾಗರ ತಾಲ್ಲೂಕಿನ ತಲವಾಟ ನಲವತ್ತು ಮನೆಗಳ ಪುಟ್ಟ ಹಳ್ಳಿ. ಅಡಿಕೆ ಕೃಷಿ ಅಲ್ಲಿನ ಜನರ ಜೀವನಾಧಾರ. ಕೃಷಿಯ ಜತೆಯಲ್ಲಿ ಈ ಪುಟ್ಟ ಸಂಗ್ರಹಾಲಯವನ್ನು ನಡೆಸುತ್ತಿರುವ ವ್ಯಕ್ತಿ ಗುಂಡೂಮನೆ ಜಯಕೃಷ್ಣ. ಜಕ್ಕಣ್ಣ ಎಂದೇ ಪರಿಚಿತರಾಗಿರುವ ಇವರಿಗೆ ಪುರಾತನ ವಸ್ತುಗಳನ್ನು ಕಾಪಿಡುವ ಹವ್ಯಾಸ. ಅವರ ಹವ್ಯಾಸಕ್ಕೆ ಹಲವಾರು ಜನರು ತಮ್ಮ ಮನೆಯ ಅಟ್ಟದ ಮೂಲೆಯಲ್ಲಿ ಬಿದ್ದಿರುವ ವಸ್ತುಗಳನ್ನು ನೀಡಿದ್ದಾರೆ. ಜಯಕೃಷ್ಣ ಅವುಗಳನ್ನು ಅಲ್ಪ ಸ್ವಲ್ಪ ದುರಸ್ತಿ ಮಾಡಿಸಿ ಸುಸ್ಥಿಯಲ್ಲಿ ತಮ್ಮ ಮನೆಯ ಅಟ್ಟದಲ್ಲಿ ಜೋಡಿಸುತ್ತಾರೆ. ಅವರ ಈ ಪುಟ್ಟ ಸಂಗ್ರಹಾಲಯದಲ್ಲಿ ನೂರು ವರ್ಷ ಹಳೆಯದಾದ ಲಾಟೀನು, ಇನ್ನೂ ಹಳೆಯ ಇತಿಹಾಸವಿರುವ ದೀಪದ ಕಂಬ, ಐವತ್ತು ವರ್ಷದ ಹಳೆಯದಾದ ಕ್ಯಾಮೆರಾ, ಸ್ವಾತಂತ್ರ್ಯ ಪೂರ್ವದ ನಾಣ್ಯಗಳು, ತಾಳೇಗರಿ ಗ್ರಂಥಗಳು, ಮರದ ಒತ್ತು ಯಂತ್ರ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಕೃಷಿ ಉಪಕರಣಗಳಿಂದ ಪ್ರಾರಂಭವಾಗಿ ಕೃಷಿಕ ಬಳಸುತ್ತಿದ್ದ ಹಲವು ವಸ್ತುಗಳು ಇಲ್ಲಿವೆ. ನಿರುಪಯೋಗಿ ವಸ್ತುಗಳನ್ನು ಎಸೆದು ಕಸದಿಂದ ತುಂಬಿರುತ್ತಿದ್ದ ಮನೆಯ ಮಹಡಿ ಈಗ ಅದೇ ನಿರುಪಯೋಗಿ ವಸ್ತುಗಳನ್ನು ಒಪ್ಪ ಓರಣವಾಗಿಟ್ಟದ್ದರಿಂದ ವಸ್ತುಸಂಗ್ರಹದ ಕೋಣೆಯಾಗಿದೆ. ಮುಂದಿನ ತಲೆಮಾರಿನವರಿಗೆ ಹಿಂದಿನ ವಸ್ತುಗಳ ಪರಿಚಯಿಸುವ ಜಾಗವಾಗಿದೆ.
ಸ್ವಂತ ಹವ್ಯಾಸಕ್ಕೆಂದು ಶುರುಮಾಡಿದ ಸಂಗ್ರಹಾಲಯಕ್ಕೆ ಈಗ ಆಪ್ತರು,ಪರಿಚಯಸ್ತರು ಭೇಟಿ ನೀಡುವುದರ ಜತೆಗೆ ಅಪರೂಪಕ್ಕೊಮ್ಮೆ ಜೋಗ ನೋಡಲು ಬಂದ ಪ್ರವಾಸಿಗಳು ಬಂದು "ವಾವ್" ಎನ್ನುವುದುಂಟು, ಕೃಷಿಯ ಜತೆ ಇಂಥಹ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಭಾಹ್ಯ ಪ್ರಪಂಚದ ಪರಿಚಯದ ಜತೆ ಕೃಷಿಕನ ವ್ಯಾಪ್ತಿಯ ವಿಸ್ತಾರವೂ ಆಗುತ್ತದೆ ಎನ್ನುವುದು ಜಯಕೃಷ್ಣರವರ ಮಾತು. ಐದು ವರ್ಷಗಳ ಹಿಂದೆ ಮನೆಯಲ್ಲಿಯೇ ಇದ್ದ ನಾಲ್ಕು ವಸ್ತುಗಳಿಂದ ಪ್ರಾರಂಭವಾದ ಸಂಗ್ರಹಾಲಯ ಇಂದು ೧೪೫ ಹಳೆಯ ವಸ್ತುಗಳನ್ನು ಹೊಂದಿದೆ ಜತೆಯಲ್ಲಿ ಈ ಹವ್ಯಾಸದಿಂದಾಗಿ ಅಷ್ಟೇ ಪ್ರಮಾಣದ ಹೊಸ ಮಿತ್ರರನ್ನೂ ಗಳಿಸಿದ್ದೇನೆ ಎನ್ನುತ್ತಾರೆ ಜಕ್ಕಣ್ಣ. ಜೋಗಕ್ಕೆ ಹೋದಾಗ ಒಮ್ಮೆ ಭೇಟಿ ನೀವೂ ಕೊಡಬಹುದು.

ಜಯಕೃಷ್ಣರವರ ವಿಳಾಸ:

ಜಿ.ಎಸ್.ಜಯಕೃಷ್ನ
ಅಂ: ತಲವಾಟ
ಸಾಗರ -ಶಿವಮೊಗ್ಗ 577421 ಫೋ: 08183207361 ಈ ಮೈಲ್: ulimane@gmail.com

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Friday, August 6, 2010

ತಾವರೆಯ ಗಿಡ ಹುಟ್ಟಿ......

ಅದೇಕೆ ಹಾಗೆ ಚಂದದ ಹೂವು ಬಿಡುತ್ತದೆ ಅಂತ ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಸಾಮಾನ್ಯವಾಗಿ ಎಲ್ಲವೂ ಹೂವುಬಿಡುವುದು ಕಾಯಾಗಿಸುವುದಕ್ಕೆ. ಆದರೆ ತಾವರೆಯ ಹೂವಿಂದ ಕಾಯಾಗುವುದಿಲ್ಲ. ಬುಡದಲ್ಲಿ ಪುತಪುತ ಹಿಳ್ಳು ಒಡೆದು ತನ್ನ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳುತ್ತದೆ. ಆದರೂ ಸಿಕ್ಕಾಪಟ್ಟೆ ಚಂದದ ಹೂವುಬಿಡುತ್ತದೆ. ಸರಿ ಹೂವು ಬಿಡುತ್ತದೆ ನೋಡಲು ಚಂದ ಇದೆ ಇನ್ನೇನು ನಿನ್ನ ರಗಳೆ ಎಂದಿರಾ?. ಇರುವುದೇ ಅಲ್ಲ, ಘೋರಾಂಡ್ಲ ಮಳೆಗಾಲ್ದಲ್ಲಿ ದೇವರೆಂಬ ದೇವರಿಗೆ ಹೂವುಗಳೇ ಇಲ್ಲದಾಗ ಆ ಕೊರತೆಯನ್ನು ನೀಗಿಸುವ ತಾಕತ್ತು ಇರುವುದು ಈ ತಾವರೆ ಗಿಡಕ್ಕೆ. ಅಯ್ಯ ಅದೂ ಒಳ್ಳೆಯದೇ ಆಯಿತು ಮತ್ತೇನು ಸಮಸ್ಯೆ ಅಂತ ಕೇಳಬಹುದು ನೀವು. ಸಮಸ್ಯೆ ಇರುವುದೇ ಅಲ್ಲಿ, ತಾವರೆಯ ಹೂವಾಗುವ ಬಹಳ ಮುಂಚೆ ಅಂದರೆ ಗಿಡ ಹುಟ್ಟಿದಾಗ. ಆಚೀಚೆ ಮನೆಯವರು ಮತ್ತು ಊರಿನವರು "ನಿಮ್ಮಲ್ಲಿ ಕೇಸರಿ ತಾವ್ರೆ ಇದ್ದು ಅಂತ ಶಾರ್ದಕ್ಕ ಹೇಳಿದ್ದ ಒಂದು ಬುಡ ತಗಂಡು ಹೋಪನ ಅಂತ ಬಂದಿ" ಎಂದು ಬಂದಾಗ ನಿಜವಾದ ಸಮಸ್ಯೆ. ಅಯ್ಯೋ ಪುಣ್ಯಾತ್ಮ ಸಾಕು ಏನದು ಸಮಸ್ಯೆ ಹೇಳು ಅಂದಿರಾ ವಾಕೆ... ಕೇಳಿ ಈಗ.
ನಮ್ಮ ಮಲೆನಾಡಿನಲ್ಲಿ ಉದ್ಯೋಗ ಖಾತ್ರಿಯಿಂದಾಗಿ ಕೂಲಿ ಆಳಿನ ಸಮಸ್ಯೆ ಯಡ್ಡಾದಿಡ್ಡಿ. ನೂರಾ ಐವತ್ತು ರೂಪಾಯಿ ದಿನಕ್ಕೆ ಕೊಟ್ಟು ಯಾರನ್ನಾದರೂ ಹಿಡಕೊಂಡು ಬಂದು ನಾವು ಅವರನ್ನ ಕರೆದುಕೊಂಡು ಕಾದಿಗೆ ಚೊಕ್ಕ ಮಾಡಲು ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಚಾ ಕೊಟ್ಟ ಮನೆ ಹೆಂಗಸರು ಅವರನ್ನು " ಮಾರಿ(ಇದು ಹೆಸರು ಹೆದರಬೇಡಿ),,, ತಾವ್ರೆ ಗಿಡ ಹುಟ್ಟಿ ಹದಿನೈದು ದಿವ್ಸ ಆತು ಇನ್ನೂ ಅದಕ್ಕೆ ಗೂಟ ಕೊಡ್ಲಿಲ್ಲ, ಮಾರಾಯ, ಇವ್ರ ಹತ್ರ ಹೇಳಿರೆ ಹ್ವಾರ್ಯ ಇಲ್ಲ ಅಂತಾರೆ, ಹಿತ್ಲಾಕಡೆಯಿಂದ ಹೋಗಿ ಒಂದು ಹೊರೆ ಗೂಟ ತಂದುಕೊಡ" ಅಂತ ಪಾಲೀಷ್ ಮಾಡಿ ಕೆಲಸದವನನ್ನು ಕಳುಹಿಸಿಬಿಡುತ್ತಾರೆ. ಅಲ್ಲಿಗೆ ನಮ್ಮ ತೋಟದ ಕೆಲಸ ಅವತ್ತಿನ ಮಟ್ಟಿಗೆ ಪಿನಿಷ್. ಈಗ ನನ್ನ ಸಮಸ್ಯೆ ನನ್ನ ಸಮಸ್ಯೆ ಏನು ಸಮಸ್ತ ಭೂಲೋಕದಲ್ಲಿ ತಾವರೆ ಗಿಡ ಇರುವ ಮನೆಯ ಗಂಡಸರ ಸಮಸ್ಯೆ ಅರ್ಥವಾಗಿರಬೇಕು ನಿಮಗೆ.
ಹಾಗಂತ ಅದು ಅಷ್ಟಕ್ಕೆ ನಿಲ್ಲುವುದಿಲ್ಲ, ಆ ತಾವರೆ ಗಿಡ ಕೊಂಡೊಯ್ಯಲು ಬಂದಿರುತ್ತಾರಲ್ಲ ಅವರೆದುರು " ನಮ್ಮನೇಲಿ ಇವುಕ್ಕೆ ಆನು ಹೂವಿನ ಗಿಡ ಮಾಡದು ಅಂದ್ರೆ ಸಿಟ್ಟು ಮಾರಾಯ್ತಿ, ಒಂದು ಗೂಟ ತರ್ಸಲೆ ಬಿಡ್ತ್ವಲ್ಲೆ ಬೈತ" ಎಂದು ಮುಂದುವರೆಯುತಿರುತ್ತದೆ. ಆದರೂ ಅವೆಲ್ಲಾ ಒಂಥರಾ ನನ್ನ ಅಪ್ಪಯ್ಯ ಮಾಡುತ್ತಿದ ನಾನು ಮುಂದುವರೆಸುತ್ತೇನೆ ಅಷ್ಟೆ ಎನ್ನುವುದನ್ನು ಬಿಟ್ಟರೆ ಸಿಕ್ಕಾಪಟ್ಟೆ ರಗಳೆ ಇಲ್ಲ ಅನ್ನುವುದು ಬೇರೆ ಮಾತು.
ಆದರೂ ಕಾಯಾಗುವುದಿಲ್ಲ ಮತ್ತೇಕೆ ಹೂವಷ್ಟೇ ಬಿಟ್ಟು ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತದೆ ಎಂದು ಅರ್ಥವಾಗುತ್ತಿಲ್ಲ. ಇಷ್ಟಾದ್ರೂ ಚಂದ ಇದೆ ಮಾತ್ರಾ....

ಈ ಸಮಯ ನಿಂಬ್ ಗಾರಮಯ

ಗೊತ್ತು ನಿಂಬೆಬಾಗದ ಫೋಟೋ ನೋಡಿದ ತಕ್ಷಣ ನಿಮ್ಮ ಬಾಯೊಳಗೆ ಚೊಳ್ ಅಂತ ನೀರು ಬಂತು ಅಂತ. ಆದರೆ ಒಂದೇ ಒಂದು ಸಮಾಧಾನ ಎಂದ್ರೆ ಅಂಗಡಿಗೆ ಹೋಗಿ ನೀವೂ ಇನ್ನೊಂದೆರಡು ಘಂಟೆಯೊಳಗೆ ಟೇಸ್ಟ್ ನೋಡಿ ಲೊಟ್ಟ ಬಾರಿಸಬಹುದು. ಇರಲಿ ಅವೆಲ್ಲಾ ಆಮೇಲಿನ ಕತೆಯಾಯಿತು ಈಗ ವಿಷಯಕ್ಕೆ ಬರೋಣ.
ಹತ್ತು ಗಂಟೆಯ ಹೊತ್ತಿಗೆ ನಾನು ಮೆತ್ತಿನ ಮೇಲೆ ಕಂಪ್ಯೂಟರ್ ಕುಟ್ಟುತ್ತಾ ಇರುವಾಗ ಕೆಳಗಿನಿಂದ "ರೀ........." ಎಂಬ ವಿಶೇಷ ಸ್ವರ ಕೇಳಿತು ಅಂತಾದ ಕೂಡಲೆ ನಾನು ಕ್ಯಾಮೆರಾ ಹಿಡಿದು ಹೊರಟುಬಿಡುತ್ತೇನೆ. ಇದೆಲ್ಲಾ ಶುರುವಾಗಿದ್ದು "ಸೌತೇ ಕಾಯಿ ಉಪ್ಪುಕಾರದ" ಬರಹದಿಂದ. ಬ್ಲಾಗಲ್ಲಿ ನೋಡಿದ ನನ್ನ ಅಕ್ಕಂದಿರೋ ಮತ್ಯಾರೋ ನನ್ನವಳ ಪರಿಚಯಸ್ತರು " ಅಯ್ಯೋ ಕವಿತಾ..ನಿನ್ನ ಫೋಟೋ ಪೇಪರ್ರಲ್ಲಿ ಬೈಂದಲೇ...." ಅಂತ ಫೋನ್ ಮಾಡಬಿಟ್ಟಿದ್ದಾರೆ.(ಗುಟ್ಟು ಇದು ನಿಮ್ಮೊಳಗೆ ಇರಲಿ) ಆದರ ಪರಿಣಾಮವಾಗಿ ಈಗ ಮನೆಯಲ್ಲಿ ಏನೇ ಹೊಸ ಪದಾಥ ಮಾಡುವಾಗ ನಾನು ಅಡಿಗೆಮನೆಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲಬೇಕು, ಮತ್ತೆ ಮಾಡುವ ವಿಧಾನ ತಿಳಿಯಬೇಕು. ನಂತರ ಬ್ಲಾಗಲ್ಲಿ ಬರೆಯಬೇಕು. ನೀವಾದರೋ ಕಾಮೆಂಟಿನಲ್ಲಿ "ವಾವ್" ಎಂದು ಬರೆದು ಆಮೇಲೆ "ಇದು ಎಂತು ಹೇಳಿ ಬರ್ದಿಕ್ಕೆ, ಎಲ್ಲರಿಗೂ ಗೊತ್ತಿದ್ದಪ" ಅಂತ ಅಂದುಬಿಡಬಹುದು. ಆದರೆ ಇಲ್ಲಿ ನಿಮ್ಮ ಕಾಮೆಂಟಿಗೆ ಖುಷ್ ಆಗಿ ಮತ್ತೊಂದು ಪದಾರ್ಥ ಬರೀರಿ ಅಂತ ಹೇಳುವ ಜನ ತಯಾರಾಗಿರುತ್ತಾರೆ. ಇರಲಿ ಲೈಫು ಎಂದರೆ ವೈಫು, ಮುಂದೇ ನೋಡೋಣ.
ಬರೋಬ್ಬರಿ ಮಳೆಗಾಲದ ಆಗಸ್ಟ್ ತಿಂಗಳಿನಲ್ಲಿ ಹಿತ್ತಲಿನ ಗಿಡದಲ್ಲಿ ನಿಂಬೆ ಹಣ್ಣು ತೊನೆದಾಡುತ್ತಿರುತ್ತದೆ. ಉಪ್ಪಿನಕಾಯಿಯೂ ಬೇಸರ ಬರುವಷ್ಟು, ಪಾನಕ ಮಾಡಿ ತಣ್ಣಗೆ ನೇಟೋಣ ಎಂದರೆ ಚಳಿ ಚಳಿ. ಆಗಲೇ ಈ ನಿಂಬೆಗಾರದ ಬಗೆ. ಒಂದೇ ಒಂದು ಹನಿ ನಾಲಿಗೆ ಮೇಲಿಟ್ಟರೆ ಲೊಚ್ ಎಂಬ ಶಬ್ಧ ತನ್ನಷ್ಟಕ್ಕೆ. ಅದಕ್ಕೆ ಹಾಕುವ ಸೂಜಿಮೆಣಸಿನ ಕಾಯಿ ಗಂಟಲನ್ನು ಗರಂ ಮಾಡಿಬಿಡುತ್ತದೆ. ನಿಂಬೆ ಕಡಿಯಿಂದ ಬೀಜ ತೆಗೆದು ಕೇವಲ ರಸ ಪಾತ್ರೆಗೆ ಹಾಕಿಟ್ಟುಕೊಂಡು, ಸಾಸಿವೆ ಜೀರಿಗೆ ಹಾಗೂ ಉದ್ದಿನಬೇಳೆ ಸೂಜಿಮೆಣಸು ಹುರಿದುಕೊಂಡು ನಂತರ ಹುಳಿ ಸೇರಿಸಿ ಬೀಸಿದರಾಯಿತು. ಆನಂತರ ಒಳ್ಳೆಯ ಗೋಕರ್ಣದ ಇಂಗು ಹಾಕಿ ಒಂದು ಒಗ್ಗರಣೆ ಜಡಿದರೆ ನಿಂಬ್ ಗಾರ ರೆಡಿ.
ಗೊತ್ತಿದ್ದರೂ ಮಾಡಿ ಗೊತ್ತಿಲ್ಲದಿದ್ದರೂ ಮಾಡಿ ಅಥವಾ ನಾಳೆ ನಾಡಿದ್ದರೊಳಗೆ ನಮ್ಮ ಮನೆಗೆ ಬನ್ನಿ.

Wednesday, August 4, 2010

ಮತ್ತಿ ಎಲೆ ಶ್ಯಾಂಪು ನೆತ್ತಿ ಮೇಲೆ ತಂಪು.

ತಲೆಕೂದಲಿಗೊಂದು ಮಜಬೂತು ಸ್ನಾನ ಮಾಡಿಸಬೇಕು ಅಂತಾದರೆ ಈ ಕಾಲದಲ್ಲಿ ಶ್ಯಾಂಪೂ ಅತ್ಯವಶ್ಯಕ. ನೊರೆನೊರೆ ಯೆಂಬ ಬೆಳ್ಳನೆಯ ರಾಶಿ, ಸುವಾಸನೆ, ಸ್ನಾನದ ನಂತರ ಕೂದಲಿಗೆ ಬರುವ ಹೊಳಪು, ಮುಂತಾದವುಗಳಿಗೆ ಶ್ಯಾಂಪೂ ಪರಿಣಾಮಕಾರಿ. ಮಹಿಳೆಯರ ವಿಷಯದಲ್ಲಂತೂ ಕೂದಲು ಉನ್ನತ ಸ್ಥಾನ ಪಡೆದಿರುವುದರಿಂದ ಅದಕ್ಕೆ ವಿಶೇಷ ಆರೈಕೆ. ಬಳಸುವ ಶ್ಯಾಂಪೂ ಜತೆಗೆ ಕಂಡೀಷನರ್ ಮುಂತಾದವುಗಳ ಪಟ್ಟಿ ದೊಡ್ಡದಿರುತ್ತದೆ. ಮತ್ತೆ ಯಾವ ಕಂಪನಿಯ ಯಾವ ಬ್ರ್ಯಾಂಡ್ ಬಳಸಿದರೆ ಪರಿಣಾಮಗಳೇನು? ಎಂಬುದು ಬಾಯಿಪಾಠವಾಗಿರುತ್ತದೆ. ಇನ್ನು ರಾಸಾಯನಿಕ ಬಳಸಲು ಒಪ್ಪದ ಜನರು ಅಂಗಡಿಯಲ್ಲಿ ದೊರಕುವ ಶೀಕೆಕಾಯಿ ಅಂಟುವಾಳ ಚಿಗರೆ ಪುಡಿ ಮುಂತಾದವುಗಳಿಗೆ ಮೊರೆ ಹೋಗುತ್ತಾರೆ. ಆದರೆ ಮಲೆನಾಡ ಮಹಿಳೆಯರು ತಮ್ಮ ಕೂದಲಿಗೆ ಮೆರಗುಕೊಡಲು ಇನ್ನೂ ನಿಸರ್ಗವನ್ನೇ ಅವಲಂಬಿಸಿದ್ದಾರೆ. ಮತ್ತಿ ಎಂಬ ಗಿಡದ ಸೊಪ್ಪು ಅವರ ತಲೆಕೂದಲನ್ನು ನಿರಂತರವಾಗಿ ಆರೈಕೆ ಮಾಡುತ್ತಿದೆ.
ಮತ್ತಿ ಎಂಬ ಈ ಕಾಡುಗಿಡ ಮಲೆನಾಡಿನ ಪರಿಸರದಲ್ಲಿ ತನ್ನಷ್ಟಕ್ಕೆ ತಾನೇ ವಿಫುಲವಾಗಿ ಬೆಳೆಯುತ್ತದೆ. ಮರವಾದ ನಂತರ ಉತ್ತಮ ನಾಟವಾಗಿಯೂ ಇದು ಬಳಕೆಯಾಗುತ್ತದೆ. ಆದರೆ ಅದಕ್ಕಿಂತ ಮೊದಲು ಇದರ ಎಲೆಗಳು ಉತ್ತಮ ಶ್ಯಾಂಪೂವಾಗಿ ಲಾಗಾಯ್ತಿನಿಂದಲು ಮಲೆನಾಡಿನಲ್ಲಿ ಬಳಕೆಯಲ್ಲಿದೆ. ಇದರಲ್ಲಿ ಗಂಡುಮತ್ತಿ ಹೆಣ್ಣುಮತ್ತಿ ಎಂಬ ಎರಡು ಪ್ರಬೇಧಗಳಿದ್ದು ಯಥಾಪ್ರಕಾರ ಗಂಡುಮತ್ತಿ ಗಂಪನ್ನು ನೀಡಲಾರದು. ಹೆಣ್ಣುಮತ್ತಿಯ ಹತ್ತು ಎಲೆಗಳನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಹಾಕಿ ನಂತರ ಅದೇ ನೀರಿಗೆ ಸೊಪ್ಪನ್ನು ಕಿವುಚಿದರೆ ಗಂಪಿನ ಶ್ಯಾಂಪೂ ಒಂದು ತಲೆಯ ಬಳಕೆಗೆ ಸಿದ್ಧ. ಇದರ ಜತೆ ಸ್ವಲ್ಪವೇ ಸ್ವಲ್ಪ ಶೀಕೇಕಾಯಿ ಪುಡಿ ಬೆರಸಿ ಕೂದಲಿಗೆ ಹಚ್ಚಿದರೆ ಗಂಪಿನ ಜತೆ ತಂಪು ಕೂಡ. ಹಾಗಾಗಿ ಯಾವ ಕಂಪನಿಯ ಶ್ಯಾಂಪೂಗಳು ಇದರ ಮುಂದೆ ನಿಲ್ಲಲಾರವು. ಶೀಕೆಕಾಯಿ ಬೆರಸಿದ ನಂತರ ಮತ್ತಿಗಂಪು ಕಂಡೀಷನರ್ ನಂತೆ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಇದರ ಎಲೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡರೆ ವರ್ಷಪೂರ್ತಿ ಬಳಸಬಹುದು. ಆದರೆ ಆಗಷ್ಟೆ ಕೊಯ್ದ ಎಲೆಗಳಿಂದ ಮಾಡಿದ ಗಂಪಿನಷ್ಟು ತಾಜಾತನ ಇರುವುದಿಲ್ಲ. ಹೀಗೆ ಮತ್ತಿ ತನ್ನ ಎಲೆಗಳಮೂಲಕ ತಲೆತಲಾಂತರದಿಂದ ಮಹಿಳೆಯ ನೆತ್ತಿಯನ್ನು ತಂಪಾಗಿಸುತ್ತಾ ಬಂದಿದೆ
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)