Friday, December 17, 2010

ಆಮೆಯ ಬೇಟೆ



ಜೊರ್ರಂತ ಸುರಿವ ಮಲೆನಾಡಿನ ಮಳೆಗಾಲದಲ್ಲಿ ಈ ಚಿತ್ರದಲ್ಲಿನ ವೇಷಧಾರಿ ಹೊರಟರೆಂದರೆ ಅವತ್ತು ಒಂದಿಷ್ಟು ಆಮೆಯ ಆಯುಷ್ಯ ಮುಗಿಯಿತೆಂದು ಅರ್ಥ. ನೀರಿನಲ್ಲೂ , ನೆಲದ ಮೇಲೂ ಬದುಕಬಲ್ಲ ಆಮೆ ಅತ್ಯಂತ ನಿರುಪದ್ರವಿ. ಆದರೆ ಅದರ ಮಾಂಸ ರುಚಿಯಾಗಿರುವುದು ಅದರ ದುರ್ದೈವ. ಮಳೆಗಾಲ್ದ ದಿವಸಗಲಲ್ಲಿ ತುಂಬುತ್ತಿರುವ ಕೆರೆಗಳಿಂದ ಆಮೆಗಳು ನೆಲಕ್ಕೆ ಹೊರಟಿರುತ್ತವೆ. ನಿಧಾನಗತಿಗೆ ಹೆಸರಾಗಿದ್ದರೂ ಆಮೆ ಮಾತ್ರಾ ಸುಲಭವಾಗಿ ಬೇಟೆಗಾರರಿಗೆ ಸಿಗುವುದಿಲ್ಲ. ನೀರೊಂದಿದ್ದರೆ ಅದು ಪುಳುಕ್ ಅಂತ ದಡದಿಂದ ಹಾರಿ ಜಾರಿಕೊಂಡುಬಿಡುತ್ತದೆ. ಅದಕ್ಕಾಗಿ ಬೇಟೆಗಾರರು ಉಪಾಯ ಮಾಡುತ್ತಾರೆ. ತಲೆಗೆ ಸೊಪ್ಪು ಕಟ್ಟಿಕೊಂಡು ಕೆರೆಯ ಕಡೆಯಿಂದ ದಡದತ್ತ ನಿಧಾನ ನಡೆದುಬರುತ್ತಾರೆ. ಆಮೆಯು ಯಾವುದೋ ಗಿಡ ಎಂದು ಬಾವಿಸಿ ಅರಾಮವಾಗಿರುತ್ತದೆ. ಹಾಗೆ ಆರಾಮವಾಗಿರುವ ಮರುಕ್ಷಣ ಆಮೆ ಬೇಟೆಗಾರನ ಚೀಲ ಸೇರುತ್ತದೆ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ ಬೇಟೆಗಾರರು ಚೀಲ ಭರ್ತಿಯಾದೊಡನೆ ನಗುನಗುತ್ತಾ ಮನೆ ಸೇರುತ್ತಾರೆ. ಇದು ಪ್ರಕೃತಿಯ ಆಹಾರ ಚಕ್ರ. ಒಂದು ಜೀವಿಯ ಸಾವು ಮತ್ತೊಂದು ಜೀವಿಯಲ್ಲಿ ಬದುಕು ಕಾಣಿಸುತ್ತದೆ ಎಂದು ನೋಡುಗರು ಸುಮ್ಮನಾಗಬೇಕಷ್ಟೆ.

Tuesday, December 14, 2010

ಭೀಮೇಶ್ವರದಲ್ಲಿ ಮಾರ್ಚ್ ೨ ರಿಂದ "ಅತಿರುದ್ರ ಮಹಾಯಾಗ"




ಭೀಮೇಶ್ವರ ಸಾಗರ ತಾಲ್ಲೂಕಿನ ತುಟ್ಟ ತುದಿಯ ಯಾತ್ರಾಸ್ಥಳ. ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಕೋಗಾರಿನ ಬಳಿ ಇರುವ ಈ ಕ್ಷೇತ್ರ ಆಸ್ತಿಕರ ಜತೆ ಪ್ರಕೃತಿಪ್ರಿಯರ ಮನದಾಸೆಯನ್ನು ತಣಿಸುತ್ತದೆ. ಪ್ರತೀ ವರ್ಷ ಶಿವರಾತ್ರಿಯ ಸಮಯದಲ್ಲಿ ಜಾತ್ರೆಯನ್ನು ಇಲ್ಲಿ ನಡೆಸುತ್ತಾರೆ. ಈ ಬಾರಿ ೨ ಮಾರ್ಚ್ ೨೦೧೧ ರಿಂದ ಮಾರ್ಚ್ ೮ ನೇ ತಾರೀಕಿನವರೆಗೆ ಇಲ್ಲಿ "ಸಾಂಗ ಅತಿರುದ್ರ ಮಹಾ ಯಾಗ"ವನ್ನು ಭೀಮಲಿಂಗೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದು ಯಾಗ ಶಾಂತಿ ಹವನಗಳ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ., ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹ ಮತ್ತು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳ ಸಂಪೂರ್ಣ ಸಹಕಾರವನ್ನು ಸಮಿತಿಯವರು ಬಯಸಿದ್ದಾರೆ.
ಸ್ಥಳ ಪುರಾಣ: ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗ್ದಿದ್ದಾಗ ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದನಂತೆ, ಆಗ ಅದು ಎರಡು ಹೋಳಾಗಿ ಒಂದು ಹೋಳು ಬಳಕೆಗೆಬಂದಿತಂತೆ, ಇನ್ನೊಂದು ಭೀಮನ ಕಾಲಿನ ಹೆಜ್ಜೆಯ ಗುರುತಿನೊಂದಿಗೆ ಅಲ್ಲಿಯೇ ಉಳಿದಿದೆ. ಇಷ್ಟಾದನಂತರ ದೇವರ ಅಭಿಷೇಕಕ್ಕೆ ಅರ್ಜುನ ತನ್ನ ಬಿಲ್ಲಿನಿಂದ ಬಾಣವೊಂದನ್ನು ಹೋಡೆದಾಗ ಅಲ್ಲಿ ನೀರು ಚಿಮ್ಮಿತಂತೆ. ಅದಕ್ಕೆ ಸರಳಹೊಳೆ ಎಂದು ಹೆಸರಿಟ್ಟನಂತೆ. ಈ ಸರಳ ಹೊಳೆ ಇಂದಿಗೂ ದೇವಸ್ಥಾನಕ್ಕಿಂತ ನೂರು ಅಡಿ ಮೇಲ್ಬಾಗದಲ್ಲಿ ಜನಿಸಿ ವರ್ಷಪೂರ್ತಿ ಮೈತುಂಬಿ ಹರಿಯುತ್ತಿರುವುದು ವಿಶೇಷ. ಇಂದಿಗೂ ಈ ಸರಳ ಹೊಳೆಯ ಮತ್ತೊಂದು ವಿಶೇಷವೆಂದರೆ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಹರಿವಿನ ಪ್ರಮಾಣವೂ ತನ್ನಷ್ಟಕ್ಕೆ ಹೆಚ್ಚುತ್ತದೆ. ಭೀಮಲಿಂಗೇಶ್ವರ ದೇವಸ್ಥಾನ ಹಿಂಬಾಗ "ಹಿಡಿಂಬಾ" ವನ ಎಂದು ಖ್ಯಾತಿಯಾಗಿದ್ದು, ಪ್ರಕೃತಿ ಸಹಜ ವನಸ್ಪತಿಗಳಿಂದ ತುಂಬಿತುಳುಕಾಡುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು: ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅರ್ಚಕರು ಭೀಮೇಶ್ವರ : ೦೮೧೮೬-೨೧೦೯೬೬ - ೯೪೪೯೭೭೬೭೨೯

Sunday, December 12, 2010

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!

ನಿಮ್ಮ ಗಮನಕ್ಕೆ - 2) : ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ನಡೆದ ಕ್ಷಿಪ್ರ (ಮತ್ತು ನಮಗೆಲ್ಲ ತೀವ್ರ ಅಸಮಾಧಾನಕರ) ಬದಲಾವಣೆಗಳೆಂದರೆ ವಿಶ್ವೇಶ್ವರ ಭಟ್ ಅವರು ಸಂಪಾದಕ ಹುದ್ದೆಗೆ ರಾಜೀನಾಮೆಯಿತ್ತಿದ್ದಾರೆ, ಅವರನ್ನು ಹಿಂಬಾಲಿಸುತ್ತ ಪ್ರತಾಪ್ ಸಿಂಹ, ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಮುಂತಾಗಿ ಉಪಸಂಪಾದಕ ವರ್ಗದವರೂ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಅವರೆಲ್ಲರ ಆಕರ್ಷಕ ಅಂಕಣಗಳು ಈಗ ಪ್ರಕಟವಾಗುತ್ತಿಲ್ಲ. ಹಾಗೆಯೇ ಎಸ್. ಷಡಕ್ಷರಿಯವರ ಜನಪ್ರಿಯ ದೈನಂದಿನ ಅಂಕಣ ’ಕ್ಷಣಹೊತ್ತು ಆಣಿಮುತ್ತು’, ರವಿ ಬೆಳಗೆರೆಯವರ ಸಾಪ್ತಾಹಿಕ ಅಂಕಣ ’ಸೂರ್ಯ ಶಿಕಾರಿ’, ಹಾಲ್ದೊಡ್ಡೇರಿ ಸುಧೀಂದ್ರ ಅವರ ’ನೆಟ್ ನೋಟ’ ಅಂಕಣಗಳೂ ನಿಂತು ಹೋಗಿವೆ. ’ಪರಾಗ ಸ್ಪರ್ಶ’ ಅಂಕಣ?- stay tuned for further announcement...

ಹೀಗೆ ಈ ವಾರದ ಪರಾಗ ಸ್ಪರ್ಷದ ಜತೆ ಶ್ರೀವತ್ಸ ಜೋಷಿಯವರು ಒಂದು ಪರ್ಸನಲ್ ಮೈಲ್ ಮಾಡಿಬಿಟ್ಟಿದ್ದಾರೆ ಎಂಬಲ್ಲಿಗೆ ವಿಜಯಕರ್ನಾಟಕದಲ್ಲಿ ಅವರ ಅಂಕಣವೂ ಡೋಲಾಯಮಾನ ಅಂತಲೂ ಲೆಕ್ಕಾಚಾರಕ್ಕೆ ಇಳಿಯಬಹುದು. ಒಟ್ಟಿನಲ್ಲಿ ಕನ್ನಡದ ನಂ ೧ ಪ್ರಸಾರದ ವಿಜಯಕರ್ನಾಟಕದ ಒಳಗಡೆ ಏನೇನೋ ನಡೆದಿದೆ ಅಂತ ಪತ್ರಿಕೋದ್ಯಮದ ಆಸಕ್ತಿ ಇರುವವರಿಗೆ ಗೊತ್ತಾಗಿದೆ. ಕುಟ್ಟಿ ಕಟ್ಟಿ ಮೆಟ್ಟಿ ವಿಕ ಬೆಳಸಿದ "ವಿ ಭಟ್ರು ವಿಕ ಬಿಟ್ರು" ಎಂಬ ವಿಷಯದೊಂದಿಗೆ ಬಜ್, ಎಸ್ ಎಂ ಎಸ್ ಹರಿದಾಡಿದಾಗ ನಾನೂ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದೆ. ಆದರೆ ಬಟ್ಟೆ ಗಲೀಜಾದರೆ ಒಗೆಯಲೇ..! ಬೇಕಲ್ಲ ಅಂತ ಬೆಂಗಳೂರಿನಿಂದ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದಾಗ ಒಳಾರ್ಥ ಅರ್ಥವಾಗದೆ ಗಲಿಬಿಲಿಗೊಳಗಾದೆ. ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯನ್ನಾಧರಿಸಿ ಬಂದ ಫೋನ್ ಗಳು ಎನೇನನ್ನೋ ಹೇಳತೊಡಗಿದಾಗ "ಛೆ" ಅಂತ ನಿರ್ಲಕ್ಷ್ಯ ಮಾಡಿಬಿಟ್ಟೆ. ಕಾರಣ ಅವೆಲ್ಲಾ ದೊಡ್ಡವರ ಕತೆಗಳು ಎತ್ತರಕ್ಕೆ ಏರಿದ ಮನುಷ್ಯನ ಸುತ್ತ ಬೇಕಾದ್ದು ಬೇಡಾದ್ದು ಹುಟ್ಟಿಕೊಳ್ಳುವುದೂ ಸಹಜ. ಹಾಗೆಲ್ಲಾ ಬರೆಯುವ ಬೆಳೆಗೆರೆಯ ಬಗ್ಗೆಯೂ ನೂರಾರು ಕತೆಗಳಿವೆ, ನಾವು ಹಾಗೆ ಹುಟ್ಟುವ ಕತೆಗಳನ್ನು ತಲೆಯೊಳಗೆ ಇಟ್ಟು ಸಾಕತೊಡಗಿದರೆ ಅವರ ಬರಹಗಳನ್ನ ಸವಿಯಲು ಆಗುವುದೇ ಇಲ್ಲ ಎಂಬ ನನ್ನ ಓದುಗ ಮಿತ್ರರೊಬ್ಬರ ಮಾತು ನೆನಪು ಮಾಡಿಕೊಂಡು ಸುಮ್ಮನುಳಿದೆ.

ಏನೆಲ್ಲಾ ನಡೆಯುತ್ತದೇ ಈ ಪ್ರಪಂಚದಲ್ಲಿ ನಿತ್ಯ. ಕಾಲ ಅವನ್ನೆಲ್ಲಾ ತನಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಮುಗಳ್ನಗುತ್ತಾ ನುಂಗಿ ಮುನ್ನಡೆಯುತ್ತದೆ. ವಿಜಯ ಕರ್ನಾಟಕ ವಿ ಭಟ್ಟರೊಡನೆ ಒಂದು ದೊಡ್ಡ ಟೀಂ ಕಳೆದುಕೊಂಡಿದೆ. ಒಂದೆರಡು ದಿನ ಛೆ ಅಂತ ಅನ್ನಿಸಿ ಮತ್ತೆ ಮುನ್ನುಗ್ಗುತ್ತಿದೆ. ಹೊರ ಹೊರಟವರು ಮತ್ತೊಂದು ಪತ್ರಿಕೆ ಕಟ್ಟುತ್ತಾರಂತೆ ಎಂಬ ಸುದ್ದಿ ಸುದ್ದಿಮನೆಯ ಕತೆಯಂತೆ ಜನರ ಬಾಯಲ್ಲಿ ಹೊರಟು ನೂರೆಂಟು ಮಾತಾಗುತ್ತಿದೆ.
ನಮ್ಮೂರಿನ ಗಣಪತಿ ಭತ್ತವ ಕೊಯ್ದು ಹಸನು ಮಾಡುತ್ತಿದ್ದ. ಅವನಿಗೆ ವಿ.ಕ ಡಲ್ ಆಗಿದ್ದು ಸುದ್ದಿಯಲ್ಲ ಅದಕ್ಕೆ ಹಿಂದೆ ಚಾರ್ಮ್ ಬಂದಿದ್ದೂ ಸುದ್ದಿಯಲ್ಲ. ಲಾಭವೋ ನಷ್ಟವೋ ಅವನು ಪ್ರತೀ ವರ್ಷ ಭತ್ತ ಬಿತ್ತುತ್ತಾನೆ ಅಕ್ಕಿ ಬೆಳೆಯುತ್ತಾನೆ. ಅವನಿಗೆ ಸಿಟ್ಟು ಬಂದು ಭತ್ತ ಬೆಳೆಯುವುದ ನಿಲ್ಲಿಸುವವರಿಗೂ ನಮ್ಮ ತಾಕತ್ತು ಹೀಗೆ ಮುಂದುವರೆಯುತ್ತದೆ.

Thursday, December 2, 2010

ಜೋಗಕ್ಕೆ ಈಗ "ಹೋಂ ಸ್ಟೇ"ಗಳ ಮೆರುಗು



ಪ್ರವಾಸ ಎಂದರೆ ಮೋಜು ಮಜ ಮಸ್ತಿ. ನಿತ್ಯ ಜಂಜಡದಿಂದ ದೂರವಾಗಿ ಮನಸ್ಸಿಗೆ ಮುದಕೊಡಲು ಮನುಷ್ಯ ಆರಿಸಿಕೊಂಡ ಮಾರ್ಗ. ಪ್ರವಾಸಿಗರು ಅವರವರ ಅಭಿರುಚಿಗನುಗುಣವಾಗಿ ಪ್ರವಾಸಿ ಸ್ಥಳಗಳನ್ನು ಆಯ್ದುಕೊಳ್ಳುತ್ತಾರೆ. ದೇವಸ್ಥಾನಗಳು, ಪ್ರಕೃತಿ ನಿರ್ಮಿತ ಗುಡ್ಡಬೆಟ್ಟಗಳು, ನದಿತೊರೆಗಳು ಜಲಪಾತಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆ ಕಾರಣಕ್ಕಾಗಿ ಪ್ರವಾಸಿಗರ ದಾಹ ಇಂಗಿಸಲು ನೂರಾರು ಪ್ರೇಕ್ಷಣೀಯ ತಾಣಗಳು ಇವೆ. ಅವುಗಳಲ್ಲಿ ಮನುಷ್ಯ ನಿರ್ಮಿತ ಪ್ರಕೃತಿನಿರ್ಮಿತ ಎಂಬ ವಿಂಗಡನೆಯೊಂದಿಗೆ ವೀಕ್ಷಕರ ಮನ ತಣಿಸುತ್ತದೆ. ಆದರೆ ಅಲ್ಲಿ ಮೂಲ ಸೌಲಭ್ಯ ಇದೆಯೇ ಇದ್ದರೆ ಹೇಗಿದೆ ಎಂಬಂತಹ ಪ್ರಶ್ನೆ ಅಲ್ಲಿಗೆ ಹೋಗುವ ಮೊದಲು ಕಾಡುವ ಸಮಸ್ಯೆ. ಅಂತಹ ನೋಡಬೇಕಾದ ಜಾಗಗಳು ಮಾತ್ರಾ ಸುಂದರವಿದ್ದರೆ ಸಾಲದು ಅಲ್ಲಿನ ಸೌಲಭ್ಯವೂ ಸುಂದರ ಎನ್ನುವ ಪ್ರವಾಸಿಗರ ಮನದಾಸೆಗೆ ಹುಟ್ಟಿಕೊಂಡ ವ್ಯವಸ್ಥೆಯೆ ಹೋಂ ಸ್ಟೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ "ಬ್ರೆಡ್ ಎಂಡ್ ಬ್ರೇಕ್ ಫಾಸ್ಟ್" ಎಂಬ ಹೆಸರಿನೊಂದಿಗೆ ಚಾಲ್ತಿಗೆ ಬಂದ ವಸತಿ ವ್ಯವಸ್ಥೆ ಇದು. ಪ್ರವಾಸಿ ತಾಣಗಳಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಮನೆಯಲ್ಲಿ ಅತಿಥಿಗಳಿಗೆ ಉಳಿಯಲು ಅವಕಾಶ ಮಾಡಿಕೊಟ್ಟು ಅದಕ್ಕೆ ತಕ್ಕುದಾದ ಹಣವನ್ನು ಪಡೆಯುವ ವ್ಯವಸ್ಥೆಗೆ ನಮ್ಮ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅಂಕಿತ ನೀಡಿ ಪ್ರೋತ್ಸಾಹಿಸಿತು. ಅದರ ಪರಿಣಾಮ ಕೊಡಗು ಮಡಕೇರಿಗಳಲ್ಲಿ ದಶಕಗಳ ಹಿಂದೆಯೇ ನೂರಾರು ಹೋಂ ಸ್ಟೇ ಗಳು ಕಾರ್ಯಾರಂಬಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಮಲೆನಾಡಿನ ಜೋಗ ಜಲಪಾತದ ಸುತ್ತ ಆರಂಭವಾಗಿದ್ದು ಎರಡು ವರ್ಷಗಳ ಈಚೆಗೆ.
ಜೋಗ ಜಲಪಾತದ ಬಗ್ಗೆ "ಕಣ್ಣಿಗೆ ತಂಪು ಹೊಟ್ಟೆಗೆ ಕಿಚ್ಚು" ಎಂಬ ವಾಕ್ಯ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಅದಕ್ಕೆ ಕಾರಣ ಎಲ್ಲಾ ಸರ್ಕಾರಿ ಕೃಪಾಪೋಷಿತ ವಸತಿ ಊಟ ವ್ಯವಸ್ಥೆ. ಯೂತ್ ಹಾಸ್ಟೆಲ್ ಯುವಕರಿಗೆ ಇನ್ನುಳಿದ ಪ್ರವಾಸಿ ಬಂಗಲೆಗಳು ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮೀಸಲಾಗಿದ್ದರಿಂದ ಸಾರ್ವಜನಿಕರು ವಸತಿ ಹಾಗೂ ಉತ್ತಮ ಊಟಕ್ಕೆ ಪರದಾಡಬೇಕಾಗಿತ್ತು. ಹಾಗಾಗಿ ಜನಸಾಮಾನ್ಯರಿಗೆ ಸೂಕ್ತ ವಸತಿ ಊಟ ಜೋಗದಲ್ಲಿ ಇತ್ತೀಚಿನವರೆಗೂ ಇರಲಿಲ್ಲ. ಆದರೆ ಹೋಂ ಸ್ಟೇಗಳು ಕಾರ್ಯಾರಂಭ ಮಾಡಿದ ನಂತರ ಈಗ ಆ ವಾಕ್ಯ ಬದಲಾಗುತ್ತಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಮರ್ಪಕವಾಗಿ ಸ್ಪಂದಿಸಿದ ಪರಿಣಾಮವಾಗಿ ಈ ಎರಡು ವರ್ಷಗಳ ಈಚೆಗೆ ಜೋಗದ ಸುತ್ತ ಪ್ರಾರಂಭವಾದ ಹೋಂ ಸ್ಟೇ ಗಳು ಜೋಗ ಜಲಪಾತಕ್ಕೆ ಮೆರುಗು ನೀಡುತ್ತಿವೆ. ಅವುಗಳ ಚಿಕ್ಕ ಮಾಹಿತಿ ಇಲ್ಲಿದೆ.
ಮತ್ತುಗ
ಜೋಗದಿಂದ ಎಂಟು ಕಿಲೋಮೀಟರ್ ಹಿಂದೆ ರಾಷ್ಟೀಯ ಹೆದ್ದಾರಿ ೨೦೬ ರ ಪಕ್ಕದಲ್ಲಿ ಮನಮನೆ ಎಂಬ ಊರಿನ ಬಳಿ ಸಿಗುವ ಸುಸಜ್ಜಿತ ಹೋಂ ಸ್ಟೇ ಇದು. ಶ್ರೀ ನರಹರಿ ಹಾಗೂ ಕಾಮಾಕ್ಷಿ ದಂಪತಿಗಳು ಈ ಹೋಂ ಸ್ಟೆಯ ಯಜಮಾನರು. ಹತ್ತು ಎಕರೆ ವಿಶಾಲವಾದ ಅಡಿಕೆ ಏಲಕ್ಕಿ ಕಾಫಿ ತೋಟಗಳ ನಡುವೆ ಇರುವ "ಮತ್ತುಗ" ಕಳೆದೆರಡು ವರ್ಷದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಒಂದುಬಾರಿಗೆ ೨೨ ಜನರ ಆತಿಥ್ಯಕ್ಕೆ ಇಲ್ಲಿ ವ್ಯವಸ್ಥೆಯಿದೆ. ಒಮ್ಮೆಲೆ ಮೂರ್ನಾಲ್ಕು ಕುಟುಂಬಗಳೂ ಇಲ್ಲಿ ತಂಗಬಹುದು. ಶಾಖಾಹಾರಿ ಊಟ ಹಾಗೂ ಸುಸಜ್ಜಿತ ಕೊಠಡಿಗಳು ಎಲ್ಲವೂ ಪ್ರಥಮ ದರ್ಜೆಯದು. ಸಂಪರ್ಕ: Tel: 08183-207581 / 94480 68870 email: stay@matthuga.in Web: http://matthuga.in
ನಮ್ಮನೆ
ಜೋಗದಿಂದ ಏಳು ಕಿಲೋಮೀಟರ್ ಹಿಂದೆ ರಾಷ್ಟೀಯ ಹೆದ್ದಾರಿ ೨೦೬ ರ ಪಕ್ಕದಲ್ಲಿ ತಲವಾಟ ಎಂಬ ಊರಿನಲ್ಲಿರುವ ಉಳಿಮನೆ ಇದು. ಶ್ರೀ ಜಯಕೃಷ್ಣ ಹಾಗೂ ಸ್ನೇಹಿತರು ಈ ಹೋಂ ಸ್ಟೇ ಯ ನಿರ್ವಾಹಕರು. ಸಂಪೂರ್ಣ ಮಲೆನಾಡು ಶೈಲಿಯ ಮನೆಯ ಈ ಹೋಂ ಸ್ಟೇಯಲ್ಲಿ ಮೂರು ರೂಂಗಳಿದ್ದು ಒಮ್ಮೆ ೧೨ ಜನರ ವರೆಗೂ ಉಳಿಯಲು ಅವಕಾಶವಿದೆ. ಎಲ್ಲಾ ಹೋಂ ಸ್ಟೆಗಳಿಗಿಂತ ತುಸು ಭಿನ್ನವಾಗಿರುವ ಇದು ಅತಿಥಿಗಳಿಗೆ ಅವರದೇ ಮನೆಯಲ್ಲಿ ವಾಸವಾದ ಅನುಭವಕ್ಕಾಗಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.ಕಾಡಿನ ನಡುವೆ ಒಂಟಿಮನೆಯ ಅನುಭವ ನೀಡುವ ಇದು ಪ್ರಶಾಂತ ವಾತಾವರಣ ಹೊಂದಿದೆ. ಒಂದು ಬಾರಿ ಒಂದು ಕುಟುಂಬ ಎಂಬ ನಿಯಮ ಇಲ್ಲಿಯದು. ಮಲೆನಾಡು ಶೈಲಿಯ ಸಸ್ಯಹಾರಿ ಭೋಜನ ಇಲ್ಲಿನ ಹೆಗ್ಗಳಿಕೆ. ¥sÉÆÃ: 08183207361-9342253240 Email: ulimane@gmail.com
ಗುಂಡಿಮನೆ
ಜೋಗದಿಂದ ಭಟ್ಕಳ ಮಾರ್ಗದಲ್ಲಿರುವ ಈ ಹೋಂ ಸ್ಟೇ ಜೋಗದಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ಶ್ರೀ ಗಣಪತಿ ರಾವ್ ದಂಪತಿಗಳು ಇದರ ನಿರ್ವಾಹಕರು. ಶರಾವತಿ ನದಿಯ ಹಿನ್ನೀರಿನ ಸಮೀಪವಿರುವ ಈ ಹೋಂ ಸ್ಟೆ ಕಾಡುಗಳ ನಡುವೆ ಇದ್ದು ಪ್ರಕೃತಿಪ್ರಿಯರ ಏಕಾಂತ ಧ್ಯಾನಕ್ಕೆ ಹೇಳಿಮಾಡಿಸಿದ ಸ್ಥಳ. ಸುಂದರ ಬೆಟ್ಟಗುಡ್ಡಗಳ ನಡುವೆ ವಿಹಂಗಮ ದೃಶ್ಯ ಇಲ್ಲಿನ ಹಿರಿಮೆ. ಮಲೆನಾಡು ಸಸ್ಯಾಹಾರಿ ಊಟೋಪಚಾರ ಇಲ್ಲಿನ ಆಕರ್ಷಣೆ. ಫೋನ್: 9900956760, - 08186-243131 Email: gundimane@gmail.com . http://ulimane.blogspot.com Web: http://www.gundimane.com

ಶರಾವತಿ ಪ್ರಕೃತಿ ಶಿಬಿರ
ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿರುವ ಈ ವಸತಿ ವ್ಯವಸ್ಥೆ ಸಾರ್ವಜನಿಕರಿಗೂ ಮುಕ್ತ. ನಾಲ್ಕು ಮಧ್ಯಮ ತರಗತಿಯ ಕುಟೀರ ಹಾಗೂ ಎರಡು ಲಕ್ಷುರಿ ಕುಟೀರವನ್ನು ಹೊಂದಿರುವ ಪ್ರಕೃತಿ ಶಿಬಿರ ಜಲಪಾತಕ್ಕೆ ಅತೀ ಸನಿಹದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರಕುವ ವಸತಿ ನಿಲಯ. ಇಲ್ಲಿ ಶಾಖಾಹಾರಿ ಹಾಗೂ ಮಾಂಸಹಾರಿ ಊಟದ ವ್ಯವಸ್ಥೆ ಇದೆ. ಮುಂಗಡ ಕಾಯ್ದಿರಿಸುವ ವ್ಯವಸ್ಥೆಯಿದೆ. ಸಂಪರ್ಕ: ನಾರಾಯಣ್: ೯೪೪೯೬೧೮೦೫೬ ಮಂಜುನಾಥ್: ೯೪೮೧೩೪೯೧೩೩
ಹೊನ್ನೇಮರಡು

ದಿ ಅಡ್ವೆಂಚರರ್ಸ್ ನ ಎಸ್.ಎಲ್.ಎನ್. ಸ್ವಾಮಿ ಹಾಗೂ ನೊಮಿತೋ ದಂಪತಿಗಳ ನೇತೃತ್ವದ ಸಾಹಸ ಶಿಕ್ಷಣ ಸಮನ್ವಯ ಕೇಂದ್ರವಾದ ಹೊನ್ನೇಮರಡು ಜೋಗಕ್ಕೆ ೧೦ ಕಿ.ಮೀ ಹಿಂದೆ ಸಿಗುತ್ತದೆ. ಮುಂಗಡ ಕಾಯ್ದಿರಿಸುವ ಪ್ರವಾಸಿಗರಿಗೆ ಇಲ್ಲಿ ಕಯಾಕಿಂಗ್, ಸ್ವಿಮ್ಮಿಂಗ್ ಜತೆ ಕಾಡಿನಲ್ಲಿ ಟ್ರಕ್ಕಿಂಗ್ ಹಾಗೂ ನಡುಗುಡ್ಡೆಯಲ್ಲಿ ಟೆಂಟ್ ಹಾಕಿ ಕ್ಯಾಂಪ್ ಫೈರ್ ಮುಂತಾದ ವ್ಯವಸ್ಥೆ ಲಭ್ಯ. ಊಟ ವಸತಿ ಜತೆ ಇಲ್ಲಿ ಪರಿಸರ ಶಿಕ್ಷಣವೂ ಲಭ್ಯ. ಫೋ: ೦೮೧೮೩-೨೦೭೭೪೦
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Friday, November 26, 2010

ಬದಲಾಗುತ್ತಿವೆ "ಮಸಣದ ಮಾತುಗಳು"

ನಲವತ್ತು ವರ್ಷದ ದೃಢಕಾಯನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ತಂದೆ ತಾಯಿ ಬಂಧು ಬಳಗದ ಜತೆ ಹೆಂಡತಿ ಹಾಗೂ ಮಗುವನ್ನು ಅಗಲಿಹೋಗಿದ್ದಾನೆ. ಶೋಕ ಮನೆಯಲ್ಲಿ ಮಡುಗಟ್ಟಿದೆ. ರೋಧನ ತಾರಕಕ್ಕೇರಿದೆ. ಸಮಾಧಾನ ಸಂತಾಪ ಎಲ್ಲಾ ಅಸಾಹಾಯಕ ಕೆಲಸಗಳಂತೆ ನಡೆಯುತ್ತಿವೆ. ಜೀವವಿಲ್ಲದ ದೇಹ ಎಷ್ಟು ಹೊತ್ತು ಹಾಗೆಯೇ ಇರಲು ಸಾಧ್ಯ?. ಆ ಕಾರಣಕ್ಕಾಗಿ ಅಳುವವರ ನಡುವೆಯೇ ಚಿತೆಯೂ ಸಿದ್ಧವಾಗಿ ದೇಹಕ್ಕೆ ಅಗ್ನಿ ಇಡಲು ಸಿದ್ದತೆಯಾಗುತ್ತಿದೆ.
ಈ ಘಟನೆ ನಡೆದು ಆರು ತಿಂಗಳ ನಂತರ ಅದೇ ಮನೆಯಲ್ಲಿ ಮತ್ತೆ ಮದುವೆಯೊಂದರ ಸಿದ್ಧತೆ ನಡೆದಿದೆ. ಕಳೆದುಕೊಂಡ ಮಗನ ಸ್ಥಾನಕ್ಕೆ ಬದುಕುಳಿದ ಸೊಸೆಗೆ ಕಂಕಣ ಭಾಗ್ಯ ನೀಡುವುದರ ಜತೆ ಇಲ್ಲದ ಮಗನನ್ನು ಯಾರಲ್ಲೋ ಕಾಣುವ ತೀರ್ಮಾನಕ್ಕೆ ಅಪ್ಪ ಅಮ್ಮ ಬಂದಿದ್ದಾಗಿದೆ. ಮಗನ ಮದುವೆಯಷ್ಟು ಸಡಗರ ಸಂಭ್ರಮ ಇಲ್ಲ ನಿಜ ಆದರೆ ತೀರಾ ನೀರಸವಲ್ಲದ ಕಾರ್ಯಕ್ರಮದ ಮುಖಾಂತರ ಮದುವೆ ನಡೆಯುತ್ತದೆ.
ಇದು ಯಾವುದೇ ಸಿನೆಮಾದ ಕತೆಯಲ್ಲ. ಈ ದಶಕಗಳಲ್ಲಿ ನೈಜ ಘಟನೆಯ ಸಂಕ್ಷಿಪ್ತ ರೂಪ. ಇದೇ ಸಾವು ನೂರು ವರ್ಷದ ಹಿಂದಿನದಾಗಿದ್ದರೆ ಪತಿಯ ಜತೆ ಸತಿ ಸಹಗಮನಕ್ಕೆ ಸಜ್ಜಾಗಬೇಕಾಗಿತ್ತು. ಎಪ್ಪತ್ತೈದು ವರ್ಷಗಳ ಹಿಂದೆ ಆಗಿದ್ದರೆ ಪತ್ನಿ ತಲೆಕೂದಲು ಬೋಳಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆಯನ್ನುಟ್ಟು ಜೀವಮಾನ ಪೂರ್ಣ ವೈಧವ್ಯಕ್ಕೆ ಬಲಿಯಾಗಬೇಕಾಗಿತ್ತು. ಐವತ್ತು ವರ್ಷಗಳ ಹಿಂದಿನ ಘಟನೆಯಾಗಿದ್ದರೆ ಸಕೇಶಿ ಸರಿ ಆದರೆ ಮತ್ತೊಂದು ಮದುವೆ ಅಸಾದ್ಯದ ಮಾತು. ಹೀಗೆ ಆಯಾ ಕಾಲಘಟ್ಟದಲ್ಲಿ ಮನುಷ್ಯನ ಅರಿವು ಎಂಬುದು ಜಾಸ್ತಿಯಾಗಿ ಭಾರತದಂತಹ ಸಂಪ್ರದಾಯ ಬದ್ಧ ದೇಶದಲ್ಲಿನ ಅನಿಷ್ಠ ಪದ್ಧತಿಯೊಂದು ತನ್ನಷ್ಟಕ್ಕೆ ತಾನೇ ಸತ್ಯವನ್ನು ಕಂಡುಕೊಂಡು ಕುಸಿದುಹೋಗುತ್ತಿದೆ.

ಕಾಲ ದ ಶಕ್ತಿ ಅಗಾಧ. ಎಲ್ಲವನ್ನೂ ನುಂಗುತ್ತಾ ಶರವೇಗದಿಂದ ಮುನ್ನುಗ್ಗುವ ಕಾಲದೆದುರು ಮನುಷ್ಯನ ವೇಗ ಅರ್ಥಕಳೆದುಕೊಂಡುಬಿಡುತ್ತದೆ. ನಂಬಿಕೆಯ ಅಡಿಯಲ್ಲಿ ಬದುಕು ಸಾಗಿಸುವ ಮನುಷ್ಯ ಪ್ರಕೃತಿಯ ಅಡಿಯಲ್ಲಿನ ಜೀವಿಯಾಗಿ ಒಮ್ಮೊಮ್ಮೆ ಅಸಾಹಾಯಕನಂತೆ ಅನ್ನಿಸಿದರೂ ಅವನ ಸಾಹಸ ಮತ್ತದೇ ಪ್ರಕೃತಿಯ ಅಡಿಯಾಳಿನ ನಿರ್ಧಾರವೇ ಆಗಿದೆ ಎಂಬುದು ವಾಸ್ತವ. ಮನುಷ್ಯನ ಜೀವನದ ಮಟ್ಟಕ್ಕೆ ಯೋಚಿಸುವುದಾದರೆ ಅವನ ನಂಬಿಕೆಗೂ ಮೂಢನಂಬಿಕೆಗೂ ಕಾಲಕ್ಕೂ ಬಿಡಿಸಲಾರದ ನಂಟು. ನಂಬಿಕೆಯೇ ಜೀವನ ನಿಜ. ಆದರೆ ತನ್ನ ಜೀವನ ಸುಗಮವಾಗಿಸಲು ನಂಬಿದ ತತ್ವ ಸಿದ್ಧಾಂತಗಳೆಲ್ಲ ಸಮರ್ಪಕವಾದುದಲ್ಲ ಎಂಬ ಅರಿವು ಮೂಡಿ ಬದಲಾಯಿಸಿಕೊಂಡು ಸರಿದಾರಿಗೆ ಬರಲು ಮನುಷ್ಯ ತೆಗೆದುಕೊಂಡ ಕಾಲ ಅತೀ ದುಬಾರಿಯಾಗಿಬಿಡುತ್ತದೆ ಒಮ್ಮೊಮ್ಮೆ. ಅಂತಹ ಒಂದು ವಿಷಯವೇ ವಿಧವೆ ಎಂಬ ಪಟ್ಟ.
ಕಾಲವೊಂದಿತ್ತು,ಅದು ಶತಮಾನಗಳ ಹಿಂದಿನದು. ಬಾಲ್ಯ ವಿವಾಹ ಪದ್ಧತಿಯೇ ಸರಿ ಎಂಬ ತೀರ್ಮಾನದ್ದು. ಆ ಕಾಲದಲ್ಲಿ ಗಂಡ ಸಾವಿಗೀಡಾದರೆ ಜತೆಜತೆ ಯಲ್ಲಿಯೇ ಸತಿ ಸಹಗಮನ ಮಾಡಬೇಕಾಗಿತ್ತು. ಹೆಣ್ಣೆಂಬ ಜೀವಿಗೆ ಯಾವ ಅಧಿಕಾರವೂ ಇರಲಿಲ್ಲ. ಅದು ಗಂಡಿನ ದೌರ್ಜನ್ಯವೆನ್ನಿ, ಮನು ಸ್ಮೃತಿಯ ಅನುಷ್ಠಾನವೆನ್ನಿ ಪರಿಣಾಮ ಮಾತ್ರಾ ಹೆಣ್ಣಿನ ಮೇಲೆಯೇ ಎಂಬುದು ಸರ್ವವಿಧಿತ. ಹತ್ತು ವರ್ಷದ ಹೆಣ್ಣಿಗೆ ನಲವತ್ತು ವರ್ಷದ ಗಂಡು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಬದುಕಿಬಾಳಬೇಕಾಗಿದ್ದ ಆರೋಗ್ಯವಂತ ಹೆಣ್ಣೂ ಕೂಡ ಆಯುಷ್ಯ ಮುಗಿದು ಸತ್ತ ಗಂಡನೊಂದಿಗೆ ಚಿತೆ ಏರಬೇಕಾಗಿತ್ತು. ಮನಸ್ಸಿನಾಳದಲ್ಲಿ ಅದುವೇ ಸ್ವರ್ಗದ ರಹದಾರಿ, ಅದುವೇ ಧರ್ಮ,ನೀತಿ ಎಂದು ಬಿಂಬಿಸಲಾಗಿದ್ದರಿಂದ ಜ್ಞಾನದ ಮಟ್ಟ ಕಡಿಮೆಯಿದ್ದ ಹೆಣ್ಣುಗಳ ಜೀವನ ಆಹುತಿಯಾಗುತಿತ್ತು. ಜೀವವನ್ನು ತ್ಯಜಿಸಲು ಹೆಣ್ಣು ಜೀವ ಅದೆಷ್ಟು ಹೋರಾಡಿತೋ ಬಲ್ಲವರ್ಯಾರು.?
ಕಾಲ ಬದಲಾಯಿತು ಎನ್ನುವ ವಾಕ್ಯ ಸಮರ್ಪಕವಲ್ಲದಿದ್ದರೂ ವಾಡಿಕೆಯಂತೆ ಸರಿ. ಕಾಲದ ಜತೆ ಓಡುತ್ತಿದ್ದ ಜನರ ಭಾವನೆ ಕೊಂಚ ಸುಧಾರಿಸಿತು. ಬಾಲ್ಯವಿವಾಹ ಪದ್ಧತಿ ಹಾಗೆಯೇ ಉಳಿದರೂ ಜ್ಞಾನಿಗಳ ಅಣತಿಯತೆ ಮಾನವೀಯ ಗುಣಗಳ ಜನರ ಭಾವನೆಯಂತೆ ಸತಿಪದ್ಧತಿ ಮಾಯವಾಯಿತು. ಸತಿಸಹಗಮನ ಪದ್ದತಿ ಮಾಯವಾಗಲು ತೆಗೆದುಕೊಂಡ ಕಾಲ ದೀರ್ಘದ್ದು. ಅದೇನೋ ಮಾಯವಾಯಿತು ಸರಿ ಆದರೆ ಅಷ್ಟೇ ಪ್ರಮಾಣದ ಬದುಕಿನುದ್ದಕ್ಕೂ ಹೆಣ್ಣನ್ನು ಹಿಂಸಿಸುವ ವೈಧವ್ಯ ಪದ್ದತಿಯ ಆಚರಣೆ ಇನ್ನಷ್ಟು ಕಟ್ಟುಪಾಡುಗಳನ್ನು ಹೊತ್ತು ಜಾರಿಗೆ ಬಂತು. ಅಲ್ಲಿಯ ತನಕ ಹೆಣ್ಣು ಹೆತ್ತವರು ಅಳಿಯನ ಅಕಾಲಿಕ ಸಾವಿನ ಜತೆ ಮಗಳ ಚಿತೆಯೇರುವ ದು:ಖವನ್ನೂ ಭರಿಸಬೇಕಾಗಿತ್ತು. ಆನಂತರ ಮಗಳ ವೈಧವ್ಯದ ಬಾಳಿನ ಬಗ್ಗೆ ಮರುಕಪಡುವಷ್ಟರ ಮಟ್ಟಿಗೆ ಇಳಿಯಿತು.
ಕಾಲ ಮತ್ತಷ್ಟು ಸರಿಯಿತು. ಸತಿಪದ್ಧತಿ ಅಳಿಯಲು ರಾಜಾರಾಂ ಮೋಹನ್ ರಾಯ್, ಮೀರಾ ಬಾಯಿ ಮುಂತಾದ ಸಮಾಜ ಸೇವಕರು ಕಾರಣ ರಾದರೆ ಅನಂತರದ ವೈಧವ್ಯ ಪದ್ಧತಿ ಅಳಿಯಲು ಸಾಹಿತಿಗಳು ಚಲನಚಿತ್ರಗಳು ಕಾರಣವಾಗಿದ್ದು ವಿಶೇಷ. ಮಾದ್ಯಮಗಳು ಚುರುಕಾಗಿದ್ದು ಸುಮಾರು ಐವತ್ತರ ದಶಕದಲ್ಲಿ. ನೂರಾರು ಮಡಿಸೀರೆ ಮಹಿಳೆಯ ಭಾವಗಳನ್ನು ಪಣಿಯಮ್ಮ ಹೊತ್ತು ಚಲನಚಿತ್ರ ರೂಪದಲ್ಲಿ ಜನರ ಮನಸನ್ನು ತಲುಪುವಂತಾಯಿತು. ವಿಧವೆಯರ ಬದುಕುಬವಣೆಯನ್ನು ಹೊತ್ತ ಕಾದಂಬರಿ ಕತೆಗಳ ಮಹಾಪೂರವೇ ಹರಿದು ಬಂತು. ತತ್ಪರಿಣಾಮವಾಗಿ ಗಂಡ ಸತ್ತ ಮಹಿಳೆಯ ಕೂದಲು ಬೋಳಿಸುವ ಕ್ರಿಯೆ ಅನಿಷ್ಟದ್ದು ಎಂಬ ವಿಷಯ ಜನಜನಿತವಾಗಿ ತನ್ನಷ್ಟಕ್ಕೆ ನಿಂತುಹೋಯಿತು.
ಕೂದಲು ಕಳೆದುಕೊಳ್ಳುವ ಕ್ರಿಯೆಯಷ್ಟೆ ನಿಂತಿತಷ್ಟೆ ಆದರೆ ಸಕೇಶಿವಿಧವೆಯರ ಕಷ್ಟ ಮೊದಲಿನಿಗಿಂತ ಹೆಚ್ಚಿನ ಸುಧಾರಣೆಯಾಗಿರಲಿಲ್ಲ. ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಕೂದಲು ಕರಿಮಣಿ ಕುಂಕುಮ ಎಂಬ ಮುತ್ತೈದೆ ಭಾಗ್ಯ ಹೊಂದಿದವರಿಂದ ಈ ಮೂರನ್ನು ಇಟ್ಟುಕೊಂಡು ಆದರೆ ಗಂಡನನ್ನು ಕಳೆದುಕೊಂಡ ಮಹಿಳೆ ನಿಕೃಷ್ಟಕ್ಕೆ ಒಳಗಾಗುತ್ತಿದ್ದಳು. ಕುಂಕುಮದ ಬದಲು ಕಾಡಿಗೆ, ಕರಿಮಿಣಿಯ ಬದಲು ಸರ ಮುಂತಾದ ಸಣ್ಣಪುಟ್ಟ ವ್ಯತ್ಯಯಗಳನ್ನು ಸಕೇಶಿ ವಿಧವೆ ಅನುಭವಿಸಬೇಕಾಗಿತ್ತು. ಆದರೆ ಕಾಲನ ಹೊಡತಕ್ಕೆ ನಿಧಾನಗತಿಯಲ್ಲಿ ಬದಲಾವಣೆ ಚಾಲ್ತಿಗೆ ಬಂತು. ಶ್ಲೋಕವೊಂದರ "ನಸ್ತ್ರೀ ಸ್ವಾತಂತ್ರ್ಯ ಮರ್ಹತಿ" ಎಂಬಷ್ಟೇ ಸಾಲುಗಳನ್ನ ಆರಿಸಿಕೊಂಡ ಪುರುಷಪ್ರಧಾನ ಸಮಾಜ ಸ್ತೀ ಗೆ ತನಗೆ ಗೊತ್ತಿಲ್ಲದಂತಯೇ ತಲೆಬಾಗಿತು.
ಸತಿಪದ್ದತಿಯಿಂದ ಸಕೇಶಿ ವಿಧವೆ ಪದ್ದತಿಯ ಆಚರಣೆಗೆ ತೆಗೆದುಕೊಂಡ ಕಾಲ ದೀರ್ಘವಾಗಿದ್ದರೂ ನಂತರ ವಿಧವಾ ವಿವಾಹಕ್ಕೆ ಅತಿ ಶೀಘ್ರ ನಿರ್ಧಾರಕ್ಕೆ ಬಂತು ಸಮಾಜ.
ಮಹಿಳೆಯರ ಪಾಲಿಗೆ ಈಗಿನ ಕಾಲ ಒಂದು ದೃಷ್ಟಿಯಲ್ಲಿ ಸಮೃದ್ಧಿಯದು ಅನ್ನಬೇಕು. ಅನಿಷ್ಠ ಪದ್ದತಿಯನ್ನು ಪ್ರಕೃತಿಯ ಸಹಾಯದಿಂದಲೋ ಅಥವಾ ಮನುಜನ ಅನುಭವದಿಂದಲೋ ಮಹಿಳೆ ಗೆದ್ದಿದ್ದಾಳೆ. ಸಂಗಾತಿಯ ಆಯ್ಕೆಯ ವಿಷಯದಲ್ಲಿಯೂ ಈಗ ಪುರುಷರಿಗಿಂತ ಮಹಿಳೆ ಹೆಚ್ಚು ಸ್ವತಂತ್ರಳು. ಹಾಗೆಯೇ ಸಂಗಾತಿಯ ಮರಣದ ನಂತರ ಮತ್ತೆ ಮರು ಆಯ್ಕೆಯಲ್ಲಿಯೂ ಆಕೆಯದೇ ತೀರ್ಮಾನ. ಇವಕ್ಕೆಲ್ಲಾ ಪ್ರಮುಖ ಕಾರಣ ಮಹಿಳೆ ಅಡಿಗೆ ಮನೆಗೆ ಸೀಮಿತವಾಗಿರದೆ ದುಡಿಯಲು ಹೊರಟಿದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.
ನೂರು ವರ್ಷದ ಹಿನ್ನೋಟ ಇಂದಿನ ಸ್ಥಿತಿ ಅವಲೋಕಿಸಿದಾಗ ಒಟ್ಟಾರೆ ಸಿಗುವ ಫಲಿತಾಂಶ, ಮಹಿಳೆ ಈಗಷ್ಟೆ ಪುರುಷನಷ್ಟೇ ಸಮಾನ ಅಧಿಕಾರ ಪಡೆದಿದ್ದಾಳೆ. ಅದಕ್ಕೆ ಆಕೆ ತೆತ್ತ ಬೆಲೆ ಬಹುದೊಡ್ಡದು. ಹಾಗೆಯೇ ಅದನ್ನು ಉಳಿಸಿಕೊಂಡು ಹೋಗುವ ಕ್ರಿಯೆಯೂ ಅಷ್ಟೇ ಕಠಿಣದ್ದು. ಈಗ ಗಂಡ ಸತ್ತ ಹೆಣ್ಣಿನತ್ತ ಕರುಣೆಯ ದೃಷ್ಟಿ ಬದಲಾಗಿದೆ. ಹೆಂಡತಿ ಸತ್ತ ಗಂಡನತ್ತ ಅದು ವ್ಯಕ್ತವಾಗುವತ್ತ ಹೊರಟಿದೆ. ಮುಂದಿನ ಬದಲಾವಣೆಗಳು ಮತ್ತೆ ಯಥಾಪ್ರಕಾರ ಕಾಲ ನಿಗೆ ಬಿಟ್ಟದ್ದು. ಆದರೆ ಒಂದಂತೂ ಸತ್ಯ ಇಂದು ನಾವು "ಸತಿಪದ್ದತಿಯ" ಅರ್ಥ ಹುಡುಕಲು ನಿಘಂಟು ತಡಕಾಡಿದಂತೆ ಮುಂದಿನ ತಲೆಮಾರಿನ ಜನರು "ವೈಧವ್ಯ" ಎಂಬ ಪದಕ್ಕೆ ನಿಘಂಟು ಹುಡುಕುವಂತಾಯಿತು. ಕಾಲ ಸಂದಂತೆ ಇನ್ನಷ್ಟು ಹೊಸ ಸಮಸ್ಯೆ ಹುಟ್ಟಿಕೊಳ್ಳಬಹುದು ಆದರೆ ಇವತ್ತು ಗಂಡನ ಹೆಣ ಚಿತೆಯೇರುತ್ತಿದ್ದಂತೆ ಮಸಣಕ್ಕೆ ಬಂದಿರುವ ರಕ್ತ ಸಂಬಂಧಿಗಳಲ್ಲದವರು ತಮ್ಮ ಪೈಕಿ ಮದುವೆಯಾಗದೆ ಉಳಿದಿರುವ ಗಂಡಿನ ನೆನಪು ಮಾಡಿಕೊಳ್ಳುವಷ್ಟರ ಮಟ್ಟಿಗಿನ ಸುಧಾರಣೆಗೆ ನಮ್ಮ ಹೆಗಲನ್ನೇ ನಾವು ಧೈರ್ಯವಾಗಿ ತಟ್ಟಿಕೊಳ್ಳಬಹುದು. ಜೈ ಎನ್ನೋಣ ಅನಿಷ್ಟ ಹೋಗಿದ್ದಕ್ಕೆ.

Monday, November 8, 2010

ಕೈಗೆಟುಕದ ಲೇಡಿಸ್ ಫಿಂಗರ್


ತರಕಾರಿಯ ದರ ಆಕಾಶಕ್ಕೆ ಏರಿದೆ ಅಂತ ಗೊಣಗುಟ್ಟುವ ಜನರಿಗೆ ಯಾವತ್ತೂ ಕಡಿಮೆಯಿಲ್ಲ. ಇಲ್ಲೊಂದು ಬೆಂಡೆಗಿಡ ಆ ಮಾತಲ್ಲಿನ ಆಕಾಶಕ್ಕೆ ಎಂಬಷ್ಟೆ ಶಬ್ಧವನ್ನು ಅದೆಲ್ಲಿಯೋ ಕೇಳಿಸಿಕೊಂಡಿರಬೇಕು. ಹಾಗಾಗಿ ಎದೆಮಟ್ಟಕ್ಕೆ ಬೆಳೆದು ಫಸಲು ನೀಡಬೇಕಾಗಿದ್ದ ಬೆಂಡೆ ಗಿಡ ಬೆಳೆಯುತ್ತಲೇ ಸಾಗಿದೆ. ಅದೂ ಅಂತಿತಹ ಎತ್ತರವಲ್ಲ ಅನಾಮತ್ತು ಹದಿನೈದು ಅಡಿ. ಸಾಮಾನ್ಯವಾಗಿ ಬೆಂಡೆಗಿಡ ಎಂದರೆ ಮೂರ್ನಾಲ್ಕು ಅಡಿ ಎತ್ತರಕ್ಕೆ ಏರಿ ಗಣ್ಣು ಗಣ್ಣಿಗೂ ಕಾಯಿಬಿಟ್ಟು ಮನುಷ್ಯರ ಹೊಟ್ಟೆ ತಂಪಾಗಿಸುತ್ತದೆ. ಆದ್ರೆ ಈ ಗಿಡಕ್ಕೆ ಅದೇನನ್ನಿಸಿತೋ ಏನೋ ಬೆಳೆಯುತ್ತಲೇ ಸಾಗಿದೆ.
ಸಾಗರ ತಾಲ್ಲೂಕು ಕಡವಿನಮನೆಯ ಸವಿತ ಎಂಬುವವರು ನೆಟ್ಟ ಈ ಗಿಡ ಈಗ ಅವರ ಕೈಗೂ ಎಟುಕುವುದಿಲ್ಲ. ಹದಿನೈದು ಅಡಿ ಎತ್ತರದ ಮೇಲೆ ಒಂದು ಗೊಂಚಲು ಕಾಯಿಬಿಟ್ಟು ತೊನೆದಾಡುತ್ತಿದೆ. ಪೇಟೆಗೆ ಹೋಗಿ ಬೆಂಡೆ ಕೊಳ್ಳೋಣಾವೆಂದರೆ ದುಬಾರಿ ದರ ಕೈಗೆಟುಕದು ಎಂದು ಮನೆಯಲ್ಲಿ ಬೀಜ ಬಿತ್ತಿ ಗಿಡಬೆಳೆದು ತರಕಾರಿ ಕೊಯ್ದು ಜತೆಯಲ್ಲಿ ಬೆಳೆದ ಪೋಸ್ ಕೋಡೋಣ ಎಂದರೆ ದುರಂತ ನೋಡಿ ಇಲ್ಲೂ ಕೈಗೆಟುಕದೇ ಗಗನಕ್ಕೇರಿ ನಿಂತಿದೆ ಬೆಂಡೆ. ಬೆಂಡೆ ಗಿಡವನ್ನು ಬೆಂಡಾಗಿಸಿ ಕಾಯಿ ಕೊಯ್ಯೋಣವೆಂದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?. ಎಂಬ ಪ್ರಶ್ನೆ ಬೆಳೆದವರಿಗೆ. ತಳಕುತ್ತಾ ಬಳುಕುತ್ತಾ ಫಿಂಗರ್ ಗೆ ಎಟುಕದಂತೆ ಬೆಳೆದು ನಿಂತ ಈ ಲೇಡಿಸ್ ಫಿಂಗರ್ ನೋಡಲಂತೂ ಬಲು ಅಚ್ಚರಿಯೇ ಸರಿ.
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ)

Sunday, November 7, 2010

ಆಚೆ ಬಂತು ಕಟ್ಟು ಕತೆಯ ಕಟ್ಟು


ಕಟ್ಟು ಕತೆಯ ಕಟ್ಟು ಬಿಡುಗಡೆಯಾಯಿತು. ನಮ್ಮಂಥಹ ಪುಟ್ಟ ಹಳ್ಳಿಯಲ್ಲಿ ಅನಾಮತ್ತು ನೂರು ಜನ ಪಾಲ್ಗೊಂಡಿದ್ದರು. ಅರ್ಚನಾ ಶಿವಮೊಗ್ಗ ಹಾಡಿ ಅಕ್ಷರ ಹೆಗ್ಗೋಡು ಬಿಡುಗಡೆಯ ಮಾತನ್ನಾಡಿ ಹುರುಪು ತುಂಬಿದರು. ಕಟ್ಟು ಕತೆಯಲ್ಲಿನ ಕಟ್ಟಿಗಿಂತ ಅವರಿಗೆ ಇಷ್ಟವಾಗಿದ್ದು ಒಂದು ಜೇನಿನ ಹಿಂದೆ ಎಂಬ ನನ್ನ ಹಿಂದಿನ ಪುಸ್ತಕ. ನನಗೆ ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುವ ಮನಸ್ಸಿಲ್ಲ ಇದ್ದುದ್ದನ್ನು ಇದ್ದಹಾಗೆಯೇ ಹೇಳುತ್ತೇನೆ ಒಂದು ಜೇನಿನ ಹಿಂದೆ ಎಂಬುದು ಬರಿದೇ ಜೀನು ಸಾಕಾಣಿಕೆಯ ಪುಸ್ತಕವಲ್ಲ ಅದರಲ್ಲಿ ನಾವು ಕಳೆದುಕೊಂಡ ಜೀವನವಿದೆ ಅದೇ ಕಟ್ಟು ಕತೆಯ ಕಟ್ಟಿನಲ್ಲಿ ಕೆಲವು ಕಡೆ ಮರುಕಳಿಸಿದೆ ಇಲ್ಲೊಂದು ಅದ್ಬುತ ಬರಹಗಾರ ಇದ್ದಾರೆ ಎಂಬುದೇ ಸಂತೋಷ ಎಂದರು.

ನನಗೆ ಅದೇನೋ ಒಂಥರಾ ಆನಂದ, ಆ ಆನಂದ ಅಕ್ಷರ ನನ್ನ ಹೊಗಳಿದ್ದಕ್ಕಲ್ಲ, ಅವರೂ ಹೊಗಳಲೂ ಇಲ್ಲ, ಒಂದು ಜೇನಿನ ಹಿಂದೆ ಎಂಬ ಪುಸ್ತಕ ಬರೆದ ಮೂರು ವರ್ಷದನಂತರ ಅದನ್ನು ನಾನು ಬರೆದ ಅರ್ಥದಲ್ಲಿ ಓದಿದವರೊಬ್ಬರು ಹಾಗೆಯೇ ಹೇಳಿದರಲ್ಲ, ಅದಕ್ಕೆ ಖುಷಿಯಾಯಿತು.

ಮಿಕ್ಕಂತೆ ನೀವೆಲ್ಲಾ ಹರಸಿದ್ದೀರಿ ಬ್ಲಾಗ್ ಓದುಗರು ಮೂವರು ಬಂದಿದ್ದರು ಇನ್ನು ನಿಮಗೆ ಹೇಗಾದರೂ ಮಾಡಿ ಪುಸ್ತಕ ತಲುಪಿಸಬೇಕಿದೆ. ತಲುಪುವಂತಹ ತಾಕತ್ತು ಅದರಲ್ಲಿ ಇದ್ದರೆ ತಡವಾಗಿಯಾದರೂ ತಲುಪುತ್ತೆ ಬಿಡಿ. ತಲುಪಿ ನಿಮ್ಮ ಮನಸ್ಸಿನೊಳಗೆ ಇಳಿದಮೇಲೆ ಸಿಗುತ್ತೀರಲ್ಲ ಆವಾಗ ಒಂದಿಷ್ಟು ಕತೆ ಹೇಳೋಣ ಅಲ್ಲಿಯವರೆಗೆ ಕಟ್ಟುತ್ತಲೇ ಕುಟ್ಟುತ್ತಲೇ ಇರೋಣ ಮತ್ತೊಮ್ಮೆ ಹ್ಯಾಪೀ ದೀಪಾವಳಿ.