Friday, June 24, 2011

ಅದರಲ್ಲಿನ ಮಜ ಬಲ್ಲವನೇ ಬಲ್ಲ.



ಅಟ್ಟದ ಕೋಣೆಯ ಕಿಟಕಿಯ ಪಕ್ಕದ ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಕುಟ್ಟುತ್ತಾ ಕುಳಿತರೆ ಕಿವಿಗೆ ನೂರೆಂಟು ಸದ್ದು ಕಿಟಿಕಿಯಾಚೆಯಿಂದ ಕೇಳುತ್ತಿದೆ. ಕಪ್ಪೆಯ ವಟವಟ, ಜೀರುಂಡೆಯ ಜಿರ್ರ್ ಸರ್ ಪರ್ ಅಯ್ಯಯ್ಯೋ ಇಲ್ಲಿ ನಿಮಗೆ ಬರೆದು ತಿಳಿಸಲಾಗದಷ್ಟು ತರಹಾವಾರಿ. ಅವುಗಳ ಅರ್ಥವೇನಾದರೂ ನನಗೆ ತಿಳಿಯುವ ತಾಕತ್ತಿದ್ದರೆ ಹುಚ್ಚು ಹಿಡಿಯುತ್ತಿತ್ತೋ ಅಥವಾ ಹುಚ್ಚು ಹಿಡಿಸಬಹುದಿತ್ತೋ ಎಂಬುದಕ್ಕೆ ಈಗ ಉತ್ತರ ಸಿಗದ ಮಾತು ಬಿಡಿ.

ಆದರೂ ರಾತ್ರಿಯಿಡೀ ಅವೇಕೆ ಹಾಗೆ ಕೂಗುತ್ತವೆ ಎಂಬುದು ನನಗೆ ಯಕ್ಷಪ್ರಶ್ನೆಯಾಗಿ ಕಾಡುತ್ತದೆ. ಗಂಡ ಹೆಂಡತಿಯ ಜಗಳವೋ..? ಮನೆ ಮಕ್ಕಳ ಸಂವಾದವೋ, ಪ್ರೇಮಿಗಳ ಸಲ್ಲಾಪವೋ... ಶತ್ರುಗಳ ಜತೆ ಕಾದಾಟವೋ ಅಂತ ತಿಳಿಯದು. ನಾನು ಅದೆಷ್ಟು ವರ್ಷದಿಂದ ಈ ರಾತ್ರಿಯ ಸದ್ದುಗಳನ್ನು ಕೇಳುತ್ತಾ ಬಂದಿದ್ದೇನೆ. ಮಳೆಗಾಲದಲ್ಲಿ ತುಸು ಅತಿ ಎನ್ನಿಸುವಷ್ಟು ಜಾಸ್ತಿ, ಆದರೆ ಅದ್ಭುತ ಎಂದರೆ ಹುಲುಮಾನವರು ಕೆಟ್ಟುಹೋಯಿತು ಕಾಲ ಎಂದು ವಟಗುಟ್ಟುತ್ತಿರುವ ಈ ವರ್ತಮಾನದ ಕಾಲದಿಂದ ಹಿಡಿದು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದೆವು ಎಂದು ಹೇಳುವ ಭೂತ ಕಾಲದಲ್ಲಿಯೂ ನನ್ನ ಕಿವಿಗೆ ಕೇಳಿಸುತ್ತಾ ಇದ್ದದ್ದು ಇದೇ ಸದ್ದು. ತೀರಾ ದೂರ ಬೇಡ ವಿಂಡೋಸ್ ೯೫ ಕಾಲದಿಂದ ಅದೆಂತದೋ ವಿಂಡೋಸ್ ೭ ಎಂದೆಲ್ಲಾ ಮನುಷ್ಯ ಅಪ್ ಗ್ರೇಡ್ ಆಗುತ್ತಿರುವಾಗಲೂ ಈ ಜೀರುಂಡೆ ಕಪ್ಪೆ ಕ್ರಿಮಿಕೀಟಗಳು ಅದೇ ಸದ್ದು ಅದೇ ಸಪ್ಪಳ. ಅಂತಾದರೆ ಅವು ಮನುಷ್ಯರಂತೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಅಪ್ ಗ್ರೇಡ್ ಆಗುತ್ತಿಲ್ಲವೇ. ಅಥವಾ ಹುಲು ಮಾನವರಾದ ನಾವೇ ಹಿಂದುಳಿದವರೇ ಅವು ನಮ್ಮ ಸಾಹಸಗಳನ್ನೆಲ್ಲಾ ದಾಟಿ ಎಲ್ಲದರ ಕತೆ ಇಷ್ಟೇ ಅಂತ ತಿಳಿದು ಅಂತಿಮ ಹಂತ ತಲುಪಿ ಒಂದೇ ತರಹದ ಸದ್ದು ಮಾಡುತ್ತಾ ಇರಬಹುದೇ..? ಎಂಬಂತೆಲ್ಲಾ ಕೆಲಸಕ್ಕೆ ಬಾರದ ತರಲೆ ಪ್ರಶ್ನೆಗಳು ದುತ್ತನೆ ಹುಟ್ಟಿ ಹುಳವಾಗಿ ಕಾಡಿ ಉತ್ತರ ಸಿಗದೆ ಮಾಯವಾಗಿಬಿಡುತ್ತವೆ. ಅಲ್ಲ ಯಾತಕ್ಕೆ ಇಷ್ಟೆಲ್ಲಾ ರಗಳೆ ಎಂದರೆ ನಾನು ಎಂಬ ಈ ದೇಹ ಸಣ್ಣಕ್ಕಿದಾಗಲೂ ರಾತ್ರಿ ಇದೇ ವಟವಟ ಜಿರ್ರ್ ಸದ್ದು ಈಗಲೂ ಅದೇ ಅಂದರೆ ಪಕ್ಕಾ ಅದೇ ಸದ್ದು, ತುಸು ವ್ಯತ್ಯಾಸವೂ ಇಲ್ಲದಂತೆ ಅಂತ ಅನ್ನಿಸಿದರೂ ಮಗದೊಮ್ಮೆ ಅಥವಾ ಬದಲಾವಣೆ ಆಗಿರಬಹುದಾ ಸದ್ದುಗಳು ಅಂತಲೂ ಅನ್ನಿಸುತ್ತದೆ. ಆದರೆ ಮಿದುಳಿನ ನೆನಪಿನಕೋಶವನ್ನು ಎಳೆದೆಳೆದು ನೆನಪುಗಳನ್ನು ಹೊರಹಾಕಿದಾಗ ಇಲ್ಲ ಅದೇ ಸದ್ದು ನಿರಂತರ ಅಂತ ಗಟ್ಟಿ ನಿರ್ಧಾರ ಹೊರಬಂದಿದ್ದಿದೆ.

ಈಗ ಮಗದೊಮ್ಮೆ ವಿಷಯಕ್ಕೆ ಬರೋಣ ಮಲೆನಾಡಿನ ಈ ಮಳೆಗಾಲದ ಸದ್ದು ಕೇವಲ ಒಂದೇ ಜೀವಿಯದಲ್ಲ. ನೂರಾರು ಅಲ್ಲಲ್ಲ ಸಾವಿರಾರು ಕೀಟಗಳ ತಾಳಮೇಳ ಅವು. ಅಲ್ಲಿ ಒಂದು ಲಯ-ಗತಿ-ಮಂದ-ತಾರಕ ಎಂಬ ಶಿಸ್ತುಬದ್ದವಾದ ಕ್ರಮವಿದೆ. ಆಸ್ವಾದಿಸುವ ಮನಸ್ಸು ಸಮಯ ಇರಬೇಕಷ್ಟೆ. ನಮ್ಮ ಮನಸ್ಸನ್ನು ಹರಿಯಬಿಟ್ಟರೆ ಅದರಲ್ಲಿನ ಮಜ ಬಲ್ಲವನೇ ಬಲ್ಲ. ಮಳೆಗಾಲದಲ್ಲಿ ಹೆಚ್ಚಿನ ಕೀಟಗಳು ವಂಶಾಭಿವೃದ್ಧಿಯ ಚಟುವಟಿಕೆಯಲ್ಲಿ ತೊಡಗುತ್ತವೆ ಅಂತ ಎಲ್ಲೋ ಓದಿದ ನೆನಪು. ಅದರ ಆಧಾರದಲ್ಲಿ ಹೇಳುವುದಾದರೆ ಇದು ಒಂಥರಾ ಶೄಂಗಾರ ಕಾವ್ಯದ ಪಕ್ಕವಾದ್ಯ ಸಹಿತ ಸಂಗೀತ ಅಂತ ಬೇಕಾದರೆ ಕವಿಮನಸಿನ ಜನರ ಬಾಯಿಂದ ಹೇಳಿಸಬಹುದು. ಅದನ್ನ ನಮ್ಮನಿಮ್ಮಂತ ಜನ ಆಸ್ವಾದಿಸಬಹುದು. ಆದರೆ ನನಗೆ ಕಾಡುತ್ತಿರುವುದು ಅದಲ್ಲ, ಈಗ ಸುಮಾರು ಮೂವತ್ತು ವರ್ಷದ ಹಿಂದೆ ನಾನು ಕೇಳಿದ್ದ ಜಿರ್ರ್ ಜಿರ್ರ್-ವಟರ್ ವಟರ್-ಕಟ್ ಕಟ್-ಚಿರ್ರರ್ರೋ ಎಂಬಂತಹ ಸದ್ದು ಗಳು ಇಂದೂ ಕುಡ ಚಾಚೂ ತಪ್ಪದೆ ಕಿಟಕಿಯಾಚೆ ಹೊರಡುತ್ತಿದೆ. ಅಂದು ಇದೇ ಸದುಗಳನ್ನು ನನಗೆ ಉಣಬಡಿಸಿದ್ದ ಕೀಟದ ಮರಿ ಮರಿ ಮರಿ ಮಗ ಇಂದೂ ಕೂಡ ಹಾಗೆಯೇ ಸದ್ದು ಹೊರಡಿಸುತ್ತಾ ತನ್ನ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂಬಲ್ಲಿಗೆ ಆ ಕೀಟಗಳ ಪಾಲಿಗೆ ತಲೆಮಾರುಗಳ ಸರಣಿಯೇ ಸಂದುಹೋಗಿದೆ. ಆದರೆ ನನ್ನ ಪಾಲಿಗೆ ಇನ್ನೂ ಅರ್ದ ಆಯುಷ್ಯ ಬಾಕಿಯಿದೆ ಜತೆಗೆ ಆ ಕೀಟಗಳಿಗೆ ನನ್ನ ಇರುವಿಕೆಯೂ ತಿಳಿಯದಂತೆ ನನಗೆ ಅವುಗಳ ಮಾಹಿತಿ ತಿಳಿದಿದೆ.

ಭಗವಂತಾ ನಿನ್ನ ಸೃಷ್ಟಿಯ ರಹಸ್ಯ ಅಪಾರ, ಕೀಟಗಳಿಗೆ ನನ್ನ ಇರುವಿಕೆ ತಿಳಿಯದಂತೆ ನಿನ್ನ ಇರುವಿಕೆಯೂ ನನಗೆ ತಿಳಿಯುತ್ತಿಲ್ಲ. ನೀನೂ ನನ್ನಮೇಲೆ ಇಂತಹುದೇ ಬ್ಲಾಗ್ ಬರೆಯುತ್ತಿರಬಹುದು ಅದರಲ್ಲಿ ಮನುಷ್ಯರು ಮಳೆಯ ಚಳಿಗೆ ವಂಶಾಭಿವೃದ್ಧಿಯಲ್ಲಿ ತೊಡಗುತ್ತಾರೆ ಅಂತಲೂ ಒಂದು ಸಾಲು ಟೈಪಿಸಿರಬಹುದು ಆದ್ಅರೆ ಮಜ ನಿನಗೆ ಗೊತ್ತಿದೆಯೋ ಇಲ್ಲವೋ ಮನುಷ್ಯ ಆ "ಅದನ್ನು" ಈಗ ಕೇವಲ ವಂಶಾಭಿವೃದ್ಧಿಗಾಗಿ ಬಳಸುತ್ತಿಲ್ಲ, ಮಜಕ್ಕಾಗಿಯೇ ಹೆಚ್ಚು ಬಳಸುತ್ತಿದ್ದಾನೆ. ವಂಶಾಭಿವೃಧಿಯ ರಹಸ್ಯ ಗೆದ್ದು ಮಜದ ಹಿಡಿತ ಸಾಧಿಸಿ ಎಂತೆಂತದೋ ಸದ್ದುಗಳನ್ನು ಹೊರಡಿಸುತ್ತಿದ್ದಾನೆ.

ಕೊನೆಯದಾಗಿ ಕಾಡುವ ಕಟ್ಟಕಡೆಯ ಪ್ರಶ್ನೆಯೆಂದರೆ ಕೀಟಗಳು ಅದನ್ನೆಲ್ಲಾ ದಾಟಿ ವಟಗುಟ್ಟುತ್ತಿದೆಯೋ ಅಥವಾ ಆರಂಭವೋ..? ಗೊತ್ತಿಲ್ಲ....!

Thursday, June 23, 2011

ಹೀಗೆಲ್ಲಾ ಇತ್ತು..........

ನಮಗೆ ಮಳೆಯ ಚಳಿ ಅಡರಿಕೊಂಡು ಆಗಲೇ ಹತ್ತಿರ ತಿಂಗಳಿಗೆ ಬಂದಾಯ್ತು. ಜನರ ಲೆಕ್ಕಾಚಾರ ಯಾವ್ಯಾವ ಮಳೆ ಎಷ್ಟೆಷ್ಟು ಎಂಬುದರತ್ತ ಹರಿಯುತ್ತಿದ್ದರೆ ನನಗೆ ಹಳೆಕಾಲದ ಕಂಬಳಿ, ಹೊಡಚಲು, ಹಲಸಿನ ಬೀಜದ ಸೊಂಯ್ ಸೊಂಯ್ ಸದ್ದು ನೆನಪಾಗಿಹೋಯ್ತು.
ಜಡಿಮಳೆಯನ್ನು ಹೆದರಿಸಲು ಮಲೆನಾಡಿಗರು ಆಯ್ದುಕೊಂಡದ್ದು ಕಂಬಳಿ. ಕುರಿಯನ್ನು ಬೆಚ್ಚಗಿಟ್ಟ ರೋಮಗಳು ಅಲ್ಲಿ ತಮ್ಮ ಡ್ಯೂಟಿ ಪೂರೈಸಿ ಮನುಷ್ಯನ ಕೈಗೆ ಸಿಕ್ಕಿ ಹೈರಾಣಾಗಿ ಅವನ ರಕ್ಷಿಸಲು ಕಂಬಳಿಯಾಗಿ ಜಡಿಮಳೆಗಾಲಕ್ಕೆ ಸರಿಯಾಗಿ ಮಲೆನಾಡ ಬಾಗಿಲಬಡಿದು ಮಳೆಯ ರಕ್ಷಣೆ ಬಯಸುವವನ ಮಂಡೆಯನ್ನೇರುತ್ತದೆ. ಅದೇನೋ ತನ್ನ ಜನ್ಮದಲ್ಲಿಯೇ ಕಾಣದ ಇಂತಹ ಮಳೆಹನಿಗಳಿಗೆ ಕಂಬಳಿಯ ರೊಣೆಗಳೂ ಕೂಡ ಹೈರಾಣಾಗಿಬಿಡುತ್ತವೆ ಆವಾಗ ಹೊಡಚಲು ಎದ್ದುಕೂರುತ್ತದೆ.
ಸಾಮಾನ್ಯವಾಗಿ ಮನೆಯ ಹಿಂಬಾಗಿಲಿನ ಸಮೀಪ ನೆಲದಲ್ಲಿ ಒಂದು ಹೊಂಡ ಅದರ ಮಧ್ಯೆ ನಿಗಿನಿಗಿ ಬೆಂಕಿ ಸುತ್ತಲೂ ಜನ ನಾಲ್ಕಡಿ ಮೇಲೆ ಅಡ್ಡಕೋಲು ಕಟ್ಟಿ ಅದರಲ್ಲಿ ಮತ್ತೆ ನಾಳೆಯ ಮಳೆಗೆ ಮೈಯೊಡ್ಡಲು ತಯಾರಾಗುತ್ತಿರುವ ಕಂಬಳಿ. ಅದರಿಂದ ಹೊಡಚಲ ಮೇಲೆ ನಿಧಾನ ಬೀಳುವ ಒಂದೊಂದೇ ಹನಿ ನೀರು. ಅದರಿಂದಾಗಿ ಉಂಟಾಗುವ ಚೊಂಯ್ ಸದ್ದು. ಇದರ ನಡುವೆ ಮತ್ತೊಂದು ಕೆಲಸ ಸದ್ದಿಲ್ಲದೆ ಸಾಗುತ್ತಿರುತ್ತದೆ ಅದೇ ಹಲಸಿನ ಬೀಜ.
ಮೇ ಅಂತ್ಯದಲ್ಲಿ ಹಲಸಿನ ಹಣ್ಣು ತಿಂದು ಉಳಿದ ಅದರ ಬೀಜವನ್ನು ಕೆಮ್ಮಣ್ಣಿನಲ್ಲಿ ಕಲಸಿ ಇಟ್ಟಿರುತ್ತಾರೆ. ಈ ಹೊಡಚಲು ಶುರುವಾದಾಗ ಅಲ್ಲಿ ಹಲಸಿನ ಬೀಜವನ್ನು ಪಿನ್ ನಲ್ಲಿ ಒಂದು ತೂತು ಹೊಡೆದು ಸುಡುವ ಕಾರ್ಯಕ್ರಮ ಇರುತ್ತದೆ. ಅಲ್ಲೊಂದು ಇಲ್ಲೊಂದು ಬೀಜ ತೂತು ಮಾಡದೇ ಮರೆತಿದ್ದು ಡಬ್ ಎಂದು ಸದ್ದು ಮಾಡಿ ಸುತ್ತಲೂ ಕೂತವರ ಮಡಿಲಿಗೆ ಕೆಂಡವನ್ನು ಎರಚುವ ತಾಕತ್ತಿನ ಮಿನಿ ಬಾಂಬ್ ಆಗಿ ಕೆಲಸಮಾಡಿಬಿಡುತ್ತದೆ. ಹೀಗೆಲ್ಲಾ ಇತ್ತು ಹಳೆ ಕತೆಗಳು- ಮತ್ತೆ ನೆನಪಿದೆ ಎಂದಾದಮೇಲೆ ಅನುಷ್ಠಾನಕ್ಕೆ ತರಬಹುದು ಬಿಡಿ. ಇದೇನು ಅಂತಹಾ ಕಷ್ಟದ್ದಲ್ಲ, ಆದರೂ ನೆನಪುಗಳು ಹಾಗೂ ಕನಸುಗಳು ಮಾತ್ರಾ ಮಧುರ.....ಏನಂತೀರಿ..?

Friday, June 17, 2011

ನನ್ನ ನೆನಪು ನಿಮಗಾಗಿ ಅಷ್ಟೆ.



ಮಲೆನಾಡಿನಲ್ಲಿ ಮಳೆಗಾಲವೆಂದರೆ ಧೋ ಎಂಬ ಶಬ್ಧ ನಿರಂತರ. ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಸುರಿಯುವ ನೀರು ಹತ್ತು ಹಲವಾರು ನದಿತೊರೆಗಳನ್ನು ನಿರ್ಮಿಸುತ್ತದೆ. ಮಳೆಗಾಲದ ಆರಂಭದಲ್ಲಿ ನದಿತೊರೆಗಳಲ್ಲಿ ಕೆಂಪುನೀರು, ಅದಕ್ಕೆ ನಾವು ಸಣ್ಣಕ್ಕಿದ್ದಾಗ "ಮಣ್ಣುಕರಡಿ ಬತ್ತು" ಎಂದು ಹಿರಿಯರು ಹೆದರಿಸುತ್ತಿದ್ದರು. ಮಣ್ಣುಕರಡಿ ಎಂದರೆ ನಮ್ಮ ಲೆಕ್ಕ ಪ್ರಾಣಿ ಎಂದರ್ಥ ಆದರೆ ಅದು ಮಣ್ಣು ನೀರಲ್ಲಿ ಕರಡಿ ಬರುತ್ತದೆ ಎಂಬ ಬೇರೆ ಬೇರೆ ಶಬ್ಧದ ಒಳಾರ್ಥ ಅಲ್ಲಿತ್ತು. ಮಣ್ಣುಕರಡಿ ಮಾಯವಾದ ಮೇಲೆ ತಿಳಿನೀರು ಜುಳು ಜುಳು ಹರಿಯತೊಡಗುತ್ತದೆ ಎಲ್ಲೆಂದರಲ್ಲಿ. ಅದು ಬೆಟ್ಟುಜಲದ ನೀರು. ವಾವ್ ಅದರ ಅಂದ ಒನಪು ಒಯ್ಯಾರ ಬಲು ಚೆನ್ನ. ಅಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಆಟವಾಡಲು ಮಕ್ಕಳಿಗೇನು ನಲವತ್ಮೂರು ದಾಟುತ್ತಿರುವ ನನಗೂ ಯಾರಾದರೂ ಏನಾದರೂ ಅಂದುಕೊಳ್ಳದಿದ್ದರೆ ಇಂದೂ ಒಂದಷ್ಟು ಆಟವಾಡಿಬಿಡೋಣ ಅಂತ ಅನ್ನಿಸುತ್ತದೆ. ಹಾಗಿರುತ್ತದೆ ಆ ತಿಳಿನೀರಿನ ಮಹಿಮೆ.
ಅಂದಹಾಗೆ ಗೌರೀಶ ಕೊಂಡ ಜಾಗದಲ್ಲಿ ಹೋಂ ಸ್ಟೇ ತಯಾರಾಗುತ್ತಿದೆ ಅಂದನಲ್ಲ ಅದರ ತುಸು ಹಿಂದೆ ಈಗ ನಿಮಗೆ ಚಿತ್ರದಲ್ಲಿ ಕಂಡ ತಿಳಿನೀರಿನ ನದಿ ಮಳೆಗಾಲದಾದ್ಯಂತ ಜುಳುಜುಳು ಹೀಗೆಯೇ ಹರಿಯುತ್ತದೆ. ನಮ್ಮೆಲ್ಲರ ಬಾಲ್ಯ ಅಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಕಳೆದಿದೆ. ನನ್ನ ಅಕ್ಕನ ಮಕ್ಕಳೂ(ಈಗ ಅವರು ಸಾಪ್ಟ್ ವೇರ್ ಬಿಡಿ, "ಅಯ್ಯೋ ಈ ನೀರಾ..."ಎಂದು ರಾಗ ಎಳೆದರೂ ಎಳೆಯಬಹುದು, ಆದರೂ ಬಾಲ್ಯ ಅವರಿಗೂ ಖುಷಿಯೇ) ಇಲ್ಲಿ ಆಟವಾಡಿದ್ದಿದೆ.
ಹೀಗೆ ಸುಮ್ಮನೆ ಅವೆಲ್ಲಾ ನೆನಪಾಯಿತು, ಸಿಕ್ಕಾಪಟ್ಟೆ ಕೊರೆಯಲು ಸಮಯ ಕಡಿಮೆ, ಒಂದು ನನ್ನ ನೆನಪು ನಿಮಗಾಗಿ ಅಷ್ಟೆ.

Tuesday, May 31, 2011

"ಚಂದಮಾಮ"


"ಚಂದಮಾಮ" ಎಂಬ ನಾಲ್ಕಕ್ಷರದ ಮೋಡಿ ಬಲ್ಲವನೇ ಬಲ್ಲ. ಮಕ್ಕಳ ಮನಸ್ಸಿಗೆ ಚಂದ್ರ ಎಂಬ ಬೆಳ್ಳನೆಯ ಗ್ರಹ ಅದ್ಬುತವಾಗಿ ಆಶ್ಚರ್ಯಕರವಾಗಿ ಕಂಡು ಅವರವರ ತಾಯಿಂದರ ಮೂಲಕ ಚಂದಮಾಮ ನಾಗಿ ಪುಳಕಗೊಳಿಸುತ್ತಾ ಬಂದಿದ್ದಾನೆ ಲಾಗಾಯ್ತಿನಿಂದಲೂ. ಮನಸ್ಸನ್ನು ಪ್ರಪುಲ್ಲಗೊಳಿಸುವ ವಿಷಯಗಳಿಗೆಲ್ಲ ಚಂದಮಾಮನೇ ಮೂಲಾಧಾರ. ಅದೇಕೆ ತಾಯಿಂದರು ಚಂದಮಾಮನಿಗೆ ಗಂಟುಬಿದ್ದದ್ದು?, ಮಕ್ಕಳೇಕೆ ಮರುಳಾದದ್ದು?, ಎಂಬ ಪ್ರಶ್ನೆಗೆ ಪರಿಪೂರ್ಣ ಉತ್ತರ ಕಂಡುಹಿಡಿಯಲಾಗದಿದ್ದರೂ "ಚಂದಮಾಮ" ಎಂಬ ಶಬ್ದ ತಂಪಾಗಿ ಮನಸ್ಸನ್ನು ಪುಳಕಗೊಳಿಸುವುದಂತೂ ನಿಶ್ಚಿತ. ಕಪ್ಪುಕತ್ತಲ ಆಕಾಶದಲ್ಲಿ ಬೆಳ್ಳನೆಯ ಗೋಲವಾಗಿ ತೋರುವ ಚಂದ್ರ ಮನುಷ್ಯನ ಮಿದುಳಿನಲ್ಲಿ ತಂಪಾಗಿ ಅಚ್ಚಾಗಿದ್ದಾನೆ. ಹಾಗಾಗಿ ಕವಿಗಳು ಚಂದ್ರನ ಬಗೆಗೆ ಧಾರಾಳತನ ತೋರಿ ವರ್ಣಿಸಿದ್ದಾರೆ. ಸರಿ ಇವೆಲ್ಲಾ ಪ್ರಪಂಚದ ಎಲ್ಲಾ ಮನುಷ್ಯರಿಗೆ ಸಕಲ ಜೀವಿಗಳಿಗೆ ಅವರವರ ಮನಸ್ಸಿನ ಭಾವನೆಗಳಿ ತಕ್ಕಂತೆ ಮೂಡಿ ನೆನಪಿನಂಗಳದಲ್ಲಿ ಅಚ್ಚೊತ್ತಿದ ಚಂದ್ರನ ಕತೆಯಾಯಿತು, ಆದರೆ ಅದೇ "ಚಂದಮಾಮ" ಎಂಬ ನಾಲ್ಕಕ್ಷರ ಭಾರತೀಯ ಮನಸ್ಸಿಗೆ ಬೇರೆಯದೇ ಆದ ರೂಪದಲ್ಲಿ ಮೂಡಿದೆ. ಅದುವೆ ದಶಕಗಳಿಂದ ಭಾರತೀಯರ ಬಾಲ್ಯವನ್ನು ಪುಳಕಗೊಳಿಸುತ್ತಾ ತಿಂಗಳಿಗೊಮ್ಮೆ ಪ್ರಕಟವಾಗುತ್ತಾ ಬಂದಿರುವ ಕಥಾ ಪುಸ್ತಕ.
"ಚಂದಮಾಮ" ನಮ್ಮೆಲ್ಲರ ಬಾಲ್ಯದ ಸವಿನೆನಪು ಎಂದರೆ ತಪ್ಪಾಗಲಾರದು. ಬಾಲಮಿತ್ರ ಮಕ್ಕಳ ಪ್ರಪಂಚ ಎಂಬ ಹತ್ತು ಹಲವು ಕಥಾಪುಸ್ತಕಗಳು ಪ್ರಕಟಗೊಳ್ಳುತ್ತಿದ್ದರೂ ಚಂದಮಾಮ ಎಂಬ ಕಥಾ ಪುಸ್ತಕಕ್ಕೆ ವಿಶೇಷ ಸ್ಥಾನ. ೧೯೪೭ ರಲ್ಲಿ ಪ್ರಾರಂಭವಾದ ಚಂದಮಾಮ ಮಧ್ಯದಲ್ಲಿ ಕೆಲಕಾಲ ಸ್ಥಗಿತಗೊಂಡರೂ ತದನಂತರ ಮುಂದುವರೆಯುತ್ತಾ ಬಂದಿದೆ. ಬಿ.ನಾಗಿರೆಡ್ಡಿ ಹಾಗೂ ಚಕ್ರಪಾಣಿ, ಈ ಚಂದಮಾಮದ ಸೃಷ್ಟಿಕರ್ತರು. ಈ ಮಾಸಿಕವನ್ನು " ಭಾರತೀಯರ ಬಾಲ್ಯವನ್ನು ಸಾಂಪ್ರದಾಯಿಕ ಕತೆಗಳ ಮೂಲಕ ವಿದ್ಯಾವಂತರನ್ನಾಗಿಸುವ" ಪ್ರಮುಖ ಉದ್ದೇಶದೊಂದಿಗೆ ಆರಂಭಿಸಲಾಯಿತು.(ಕಿರು ಪರಿಚಯಕ್ಕೆ ಬಾಕ್ಸ್ ನೋಡಿ) ಬಾಲ್ಯ ಎಂಬುದು ಮನುಷ್ಯನಿಗೆ ಬಹು ಮುಖ್ಯ ಘಟ್ಟ. ಹಸಿಮಣ್ಣಿನ ಗೋಡೆಯಂತಹ ಮನಸ್ಸಿನ ಬಾಲ್ಯ ಅಚ್ಚೊತ್ತಿಕೊಳ್ಳುವ ವಿಧಾನದ ಮೂಲಕ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಆಡುತ್ತಾ ನೋಡುತ್ತಾ, ಗಮನಿಸುತ್ತಾ ತಿಳಿದುಕೊಳ್ಳುವ ಬಾಲ್ಯಕ್ಕೆ ಸುತ್ತಮುತ್ತಲಿನ ಪರಿಸರವೇ ಆಹಾರ. ನೋಟದ ಹಂತ ದಾಟಿದ ಬಾಲ್ಯಕ್ಕೆ ಕೇಳುವ ಹಂತ. ಅಲ್ಲಿ ಕತೆ ಹೇಳುವ ಅಜ್ಜಂದಿರು ಅಜ್ಜಿಯಂದಿರು ಇದ್ದರೆ ಅಂತಹ ಮನುಷ್ಯರ ಬಾಲ್ಯಕ್ಕೆ ಗಟ್ಟಿತನ ತನ್ನಷ್ಟಕ್ಕೆ ಮೂಡುತ್ತದೆ. ಕತೆ ಕೇಳುವ ಹಂತ ದಾಟಿದಾಗ ಪ್ರಾರಂಭವಾಗುವುದು ಓದಿ ಅರ್ಥೈಸಿಕೊಳ್ಳುವ ಹಂತ. ಕಣ್ಣುಗಳ ಮೂಲಕ ಅಕ್ಷರಗಳು ಸಾಗಿ ಮಿದುಳಿನ ಕೋಶಗಳಲ್ಲಿ ಚಿತ್ರಣಮೂಡಿ ಘಟನೆಗಳು ಅಚ್ಚೊತ್ತಬೇಕು. ಆಗ ಅಲ್ಲಿ ಒಂದು ಗಟ್ಟಿಯಾದ ಭವಿಷ್ಯದ ರೂಪುರೇಷೆಗಳು ಮೂಡತೊಡಗಬೇಕು. ಅದಕ್ಕೊಂದು ಉತ್ತಮ ಮಾದ್ಯಮ ಬೇಕು. ಈ ಎಲ್ಲಾ ಬೇಕುಗಳನ್ನು ಮಕ್ಕಳ ಮನಸ್ಸಿಗೆ ಉಣಬಡಿಸಿದ್ದು "ಚಂದಮಾಮ" ಎಂಬ ಕಥಾ ಪುಸ್ತಕ ಎಂದರೆ ತಪ್ಪಾಗಲಾರದು.
ಮಕ್ಕಳ ಮನಸ್ಸನ್ನು ಮುದಗೊಳಿಸಲು ಅವರಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಅವಶ್ಯಕತೆ ಪುರಾಣಪುಣ್ಯ ಕತೆಗಳು ಹಾಗೂ ಕುತೂಹಲ ಮೂಡಿಸುವ ವಿಷಯಗಳು. ಅವರ ಮನಸ್ಸುಗಳು ತರ್ಕ ವಿಶ್ಲೇಷಣೆ ಮುಂತಾದವುಗಳತ್ತ ಗಮನಹರಿಸುವಷ್ಟು ಪಕ್ವವಾಗಿರುವುದಿಲ್ಲ. ಹಾಗಾಗಿ ಅದನ್ನು ತಿಳಿಹೇಳುವ ತಾಳ್ಮೆ ಮಕ್ಕಳ ಕತೆಗಾರರಿಗೆ ಇರಬೇಕಾದ ತಾಕತ್ತು. ಚಂದಮಾಮ ಮಕ್ಕಳ ಈ ಮನಸ್ಸನ್ನು ಚನ್ನಾಗಿ ಅರಿತುಗೊಂಡಿತ್ತು ಹಾಗೂ ಅರಿತುಗೊಂಡಿದೆ. ಬಣ್ಣ ಬಣ್ಣದ ಚಿತ್ರಗಳು, ವಿಕ್ರಮ ಬೇತಾಳನ ಕತೆಗಳು, ರಾಮಯ್ಯ-ಸೋಮಯ್ಯ ನ ಕತೆಗಳು ಹೀಗೆ ಮಕ್ಕಳಿಗೆ ಏನು ಬೇಕು ಎಂಬ ನಾಡಿಮಿಡಿತವನ್ನು ಅರಿತುಕೊಂಡ ಕತೆಗಾರರ ತಂಡವನ್ನೇ ಚಂದಮಾಮ ಹೊಂದಿ ಯಶಸ್ಸಿನತ್ತ ಸಾಗುತ್ತಾ ಬಂದಿದೆ. ನಮ್ಮ ಬಾಲ್ಯಗಳಂತೂ ಟಿವಿ ಮೊಬೈಲ್ ಡಿಷ್ ಇಲ್ಲದ ದಿವಸಗಳು ಅಲ್ಲಿ ನಮಗೆ ಚಂದಮಾಮದ ಮೂಲಕ ಹೊರಗಿನ ಪ್ರಪಂಚ ನೋಡಿದ್ಡೇ ನೆನಪು. ವಿಕ್ರಮರಾಜನಿಗೆ ಬೇತಾಳ ಕತೆಯನ್ನು ಹೇಳುತ್ತಾ ಕತೆ ಕುತೂಹಲ ಘಟ್ಟಕ್ಕೆ ಬಂದಾಗ ದಿಡೀರನೇ ನಿಲ್ಲಿಸಿ ಪ್ರಶ್ನೆ ಕೇಳಿದಾಗ ನಮಗೆಲ್ಲಾ ಮೈಪರಚಿಕೊಳ್ಳುವಂತಹಾ ಪರಿಸ್ಥಿತಿ ಇಂದಿಗೂ ನೆನಪಿನ ಕೋಶದಲ್ಲಿ ಹಸಿರಾಗಿಯೇ ಇದೆ. ವಿಕ್ರಮನ ತಾಳ್ಮೆ, ಬೇತಾಳನ ಪ್ರಶ್ನೆ ಹಾಗೂ ನಂತರ ರಾಜ ನೀಡುವ ಉತ್ತರ ಮತ್ತೆ ಮೌನ ಮುರಿದ ರಾಜಾ ವಿಕ್ರಮನ ಹೆಗಲಿನಿಂದ ಪಳಕ್ಕನೆ ಮಾಯವಾಗುವ ಪರಿ ಹಾಗೂ ಆ ವಿಕ್ರಮರಾಜ ಮತ್ತೊಂದು ಬೇತಾಳ ಹೆಗಲಮೇಲೇರಿಸಿಕೊಳ್ಳಲು ಹೊರಡುವ ಸ್ಥಿತಿ ಮುಂತಾದವುಗಳೆಲ್ಲಾ ಮತ್ತೆ ಮತ್ತೆ ನಮ್ಮ ಜೀವನದ ಉದ್ದಕ್ಕೂ ನೆನಪಾಗಿ ತನ್ನದೇ ಆದಂತಹ ಛಾಪು ಮೂಡಿಸುತ್ತಿದೆ ಎಂದರೆ ಅದಕ್ಕೆ ಚಂದಮಾಮ ಹಾಗೂ ಅದನ್ನು ಓದಿದ ನಮ್ಮ ಬಾಲ್ಯವೇ ಕಾರಣ.
(ಈ ತಿಂಗಳ ಢರ್ಮಭಾರತಿಯಲ್ಲಿ ಪ್ರಕಟಿತ)

Tuesday, May 24, 2011

ಛೇ ಛೇ ಛೇ

ನಮಸ್ಕಾರ, ನೀವು ಯಾರು ಅಂತ ಗೊತ್ತಾಗಲಿಲ್ಲ?
"ನಾನು ....... ಪತ್ರಿಕೆಯ ರಿಪೋರ್ಟರ್, ಇವರು .......ಪತ್ರಿಕೆಯ ವರದಿಗಾರರು.
ಸರಿ ನಮ್ಮ ತೋಟಕ್ಕೆ ಬಂದು ಫೋಟೋ ಯಾಕೆ ತೆಗೆದುಕೊಂಡಿರಿ,
ಇಲ್ಲ ಹಾಗೆ ಸುಮ್ಮನೆ
ಹೇಳಿ ಪರವಾಗಿಲ್ಲ
ನೀವು ಲೈಸೆನ್ಸ್ ಇಲ್ಲದೆ ಮನೆ ಕಟ್ಟಿಸ್ತಾ ಇದೀರಂತೆ,ಜತೆಗೆ ಕೆರೆ ಒತ್ತುವರಿ ಮಾಡಿದೀರಂತೆ
ಈ ಅಂತೆಕಂತೆಗಳನ್ನ ಯಾರು ಹೇಳಿದ್ರು?
ಯಾರು ಹೇಳಿದ್ದು ಮುಖ್ಯವಲ್ಲ, ಅದು ನಿಜ ಅಂತ ನಮಗೆ ಅನ್ನಿಸಿದೆ
ಸರಿ, ಹಾಗಾದ್ರೆ ಮುಂದೆ
ಅದನ್ನ ನ್ಯೂಸ್ ಮಾಡ್ತೀವಿ
ಸರಿ ಮುಂದೆ
ಅದರ ಪರಿಣಾಮ ನೀವು ಎದುರಿಸಬೇಕಾಗುತ್ತೆ
ಸರಿ ಮುಂದೆ?
ನೀವು ಹೀಗೆಲ್ಲಾ ಉಪೇಕ್ಷೆ ಮಾಡಿದ್ರೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ, ನಾನು ಬಿಡಿ ಇವರು ಸಿಕ್ಕಾಪಟ್ಟೆ ಜೋರಾಗಿ ಬರೀತಾರೆ.
ಹಾಗಾದ್ರೆ ಒಂದು ಸುಸೈಡ್ ನೋಟ್ ಬರೆದಿಟ್ಟು ಹಗ್ಗ ಹುಡುಕೊದೊಂದೇ ದಾರಿ ಅಂತೀರಾ?
ಛೆ ಛೆ ಛೆ ಹಾಗೇನಿಲ್ಲ ನೀವು .....ಜತೆ ರಾಜಿಯಾಗಿಬಿಡಿ, ಅವರು ಬೇಲಿ ಕಟ್ಕೋಂಡ್ರೆ ನಿಮಗೇನು?
ಸ್ವಾಮಿ ಅವರು ಸರ್ಕಾರಿ ಜಾಗದಲ್ಲಿ ಬೇಲಿ ಕಟ್ಟಿದ್ದು, ನಾನು ಸ್ವಂತ ಜಾಗದಲ್ಲಿ ಮನೆ ಕಟ್ತಾ ಇದ್ದದ್ದು
ಆಗ್ಲೀರಿ ನೀವು ಅವರ ತಂಟೆಗೆ ಹೋಗ್ಬೇಡಿ, ರಾಜಿ ಯಾಗ್ಬಿಡಿ
ಅಯ್ಯಾ ಸರ್ಕಾರಿ ಜಾಗಕ್ಕೆ ಬೇಲಿ ಹಾಕಿದರೆ ಸರ್ಕಾರ ನೋಡಿಕೊಳ್ಳುತ್ತೆ
ನೊಡಿ ಕೊನೇದಾಗಿ ಹೇಳ್ತಾ ಇದೀನಿ,ನಾವು ಬರ್ಯೋದು ಅನಿವಾರ್ಯ
ಆಯ್ತು ಬರೀರಿ
ಹತ್ತಿರ ಬಂದು "ನೋಡಿ ಸತ್ಯ ಹೇಳ್ತೀನಿ ಅವ್ರು ಬರೀರಿ ಅಂತ ಸಾವಿರ ಕೊಟ್ಟಿದಾರೆ, ನೀವು ಫಂಡ್ ಆರೇಂಜ್ ಮಾಡಿದ್ರೆ...
ಮನೆಕಟ್ಟೋ ಮೇಸ್ತ್ರಿಗೆ ಕೊಡೋಕೆ ದುಡ್ಡಿಲ್ಲ, ಏನಾದ್ರು ಬರ್ಕೊಳ್ಳಿ"
ಮಾಡ್ತೀವಿ ನೋಡ್ತಾ ಇರಿ....

ಈ ಮೇಲಿನ ಸಂಭಾಷಣೆ ಅನುಭವದ್ದು. ಛೆ ಇಂಥಹಾ ಪತ್ರಕರ್ತರನ್ನು ಇಟ್ಟುಕೊಂಡು ಪತ್ರಿಕಾ ರಂಗ ಎತ್ತ ಸಾಗೀತು ಅಂತ ಅನ್ನಿಸಿತು. ಛೇ ಛೇ ಛೇ

Friday, May 20, 2011

ಇರಲಿ ಭಗವಂತ ಇದ್ದಾನೆ....!

"ಲೇಖನ ಓದಿದ ನಂತರ ಕಣ್ಣುಗಳು ಮಂಜುಮಂಜು. ಮುನಿಯಪ್ಪ ಒಂದು ಪ್ರತಿಮೆಯಂತೆ, ಆದರ್ಶದಂತೆ, ಕನಸಿನಂತೆ ಎದೆಯೊಳಗೆ ಕದಲದೆ ನಿಂತುಬಿಟ್ಟಿದ್ದಾರೆ. ಪ್ರಜಾವಾಣಿಗೆ, ಡಾ.ಆಶಾ ಬೆನಕಪ್ಪ ಅವರಿಗೆ ಕೃತಜ್ಞತೆಗಳು. ನೀವು ಈ ಲೇಖನವನ್ನೂ ಓದಿಲ್ಲವಾದರೆ ದಯವಿಟ್ಟು ಕೆಳಗಿನ ಲಿಂಕ್ ಬಳಸಿ, ಓದಿ.
http://www.prajavani.net/web/include/story.php?news=2151§ion=54&menuid=13"

ಹೀಗೆ ಮುಕ್ತಾಯಗೊಳ್ಳುವ ಸಂಪಾದಕೀಯ ಬ್ಲಾಗ್ ನ ಲೇಖನ ಆಶಾ ಬೆನಕಪ್ಪರವರ ಪ್ರಜಾವಾಣಿಗೆ ಬರೆದ ಲೆಖನಕ್ಕೆ ತೆರೆದುಕೊಳ್ಳುತ್ತದೆ. ಮಾನವೀಯತೆ ಇರುವ ಜನಕ್ಕೆ ಡಾ ಆಶಾ ಬೆನಕಪ್ಪರವರ ಮುನಿಯಪ್ಪನ ಕತೆ ಕಾಡದಿರದು. ಅದು ಆತ ತನ್ನ ಮಗನ ಹೆಣವನ್ನು ಟ್ರಂಕ್ ನ ಮೂಲಕ ಸಾಗಿಸುವ ಯತ್ನ ಕರುಳುಕಿವುಚುತ್ತದೆ. ಸರಿ ಅದೆಲ್ಲಾ. ಆದರೆ ನನಗೆ ಕಾಡುವುದು ಇನ್ನೂ ಒಂದು ಮೇಲಿನ ಹಂತ.
ನಾನು "ಗೇಣಿ" ಅಂತ ಒಂದು ಕತೆ ಬರೆದೆ. ಅದೂ ಕೂಡ ಇಂತಾದ್ದೆ . ಬಡವರ ಸಮಸ್ಯೆಯದು. ಆದರೆ ಬರೆದು ಪ್ರಕಟಣೆಗೆ ಕಳುಹಿಸುವ ಹಂತದಲ್ಲಿ ಆನಿಸಿತು. ನಾವು ಹೀಗೆ ಬಡವರ ಕತೆ ಬರೆಯುತ್ತಲೇ ಸಾಗುತ್ತೇವೆ. ಅವರಿಗಂತೂ ಅದರಿಂದ ಕವಡೆಕಾಸಿನ ಪ್ರಯೋಜನ ಇಲ್ಲ. ಹೊಟ್ಟೆ ತುಂಬಿದ ಒಂದಷ್ಟು ಜನ ಓದಿ ಛೆ ಪಾಪ ಅನ್ನುತ್ತಾರೆ. ಕತೆ ಬಹಳ ಚನ್ನಾಗಿ ಬರೆದಿದ್ದೀಯಾ ಅಂತ ಕೆಲವರು ಅನ್ನಬಹುದು. ಇದರಿಂದ ಅವರಿಗೆ ಏನು ಲಾಬ? ಅಂತ ಅನ್ನಿಸಿತು. ಮರುಕ್ಷಣ ಅವರ ಮನೆಗೆ ಹೋಗಿ ಅವನು ಬತ್ತದಲ್ಲಿ ಕಳೆದುಕೊಂಡ ಹಣ ಅಷ್ಟೂ ಅಲ್ಲದಿದ್ದರೂ ಒಂದಿಷ್ಟು (ನನ್ನ ಮಟ್ಟಕ್ಕೆ) ತಲುಪಿಸಿ ಬಂದೆ. ಹೀಗೆ ಆಶಾ ಬೆನಕಪ್ಪ ಅವರೂ ಕೂಡ ಮುನಿಯಪ್ಪನಿಗೆ ಬಹಳ ಸಹಾಯ ಮಾಡಿದ್ದಾರೆ. ಮಾರ್ಮಿಕವಾಗಿ ಟ್ರಂಕ್ ನಲ್ಲಿ ಹೆಣ ಸಾಗಿಸುವ ವ್ಯವಸ್ಥೆಯನ್ನು ಸ್ವಲ್ಪ ತಪ್ಪಿಸಬಹುದಾಗಿತ್ತೇನೋ ಅವರು. ಅದು ಅವರಿಗೆ ಕಷ್ಟಕರವಾಗಿರಲಿಲ್ಲವೇನೋ ಅಂತ ನನಗೆ ಅನಿಸಿತು.
ಇರಲಿ ಭಗವಂತ ಇದ್ದಾನೆ....!

Tuesday, May 10, 2011

ಗೇಣಿ

(ಚೈತ್ರರಶ್ಮಿ ಯಲ್ಲಿ ಬಹುಮಾನ ಪಡೆದ ಕತೆ)
ಬೆಳಿಗ್ಗೆ ಮನೆಬಿಟ್ಟ ಕರಿಯಜ್ಜ ವಾಪಾಸು ಮನೆಗೆ ಬಂದಾಗ ಮಟಮಟ ಮಧ್ಯಾಹ್ನ. ಮುಚ್ಚಿದ್ದ ಬಾಗಿಲೆದುರು ನಿಂತು ಮೂರ್ನಾಲ್ಕು ಬಾರಿ ಹೆಂಡತಿಯನ್ನು ಕೂಗಿ ಕರೆದ. ಒಳಗಿನಿಂದ ಉತ್ತರ ಬಾರದ್ದರಿಂದ ಲಚ್ಚಿಯ ಸಿಟ್ಟು ಇನ್ನೂ ತಣಿದಿಲ್ಲ ಅಂತ ಅಂದುಕೊಂಡು "ಬಡವಾ ನೀ.... ಮಡಗಿದಂಗೆ ಇರು ಅಂತ ಹೇಳಿದ್ರೆ ಕೇಳಿದ್ಯಾ..." ಎಂದು ತನ್ನನ್ನೇ ತಾನು ಬೈದುಕೊಂಡ, ಅಷ್ಟಕ್ಕೂ ತಣಿಯದ ಸಿಟ್ಟಿಗೆ ಬಲಗಾಲಿನಿಂದ ದಡಾರನೆ ಬಾಗಿಲನ್ನು ಒದ್ದ. ಆ ಒದೆತದ ರಭಸಕ್ಕೆ ಅಷ್ಟೇನೂ ಗಟ್ಟಿಮುಟ್ಟಾಗಿರದ ಜಾಯಿಕಾಯಿ ಹಲಗೆಯ ಬಾಗಿಲು ಮಗಚಿಕೊಂಡು ಬಿತ್ತು. ಮುರಿದು ಬಿದ್ದ ಬಾಗಿಲ ಶಬ್ದಕ್ಕೆ ಗೂಡೊಳಗಿದ್ದ ಕೋಳಿಗಳು ಬದುಕಿದರೆ ಕುಕ್ಕಿ ತಿಂದೇವು ಎಂದು ಪಟಪಟನೆ ರಕ್ಕೆ ಬಡಿದುಕೊಂಡು ಕೊ ಕ್ಕೊ ಕ್ಕೊ ಎನ್ನುತ್ತಾ ಹಾರಿಹೋದವು. ಕೋಳಿ ಹಾರಿದ ಸದ್ದಿಗೆ ಕರಿಯಜ್ಜನ ಬಡಕಲು ನಾಯಿ ಮೈತುಂಬಿ ಕೂಗುವಷ್ಟು ಶಕ್ತಿ ಇಲ್ಲದಿದ್ದರೂ ತನ್ನ ವಂಶಪಾರಂಪರ್ಯ ಕರ್ತವ್ಯಕ್ಕೆ ಚ್ಯುತಿ ತರಬಾರದೆಂಬ ಒಂದೇ ಕಾರಣದಿಂದ ಅಳಿದುಳಿದ ಶಕ್ತಿಯನ್ನು ಬಳಸಿ ಊಳಿತೊಡಗಿತು. ಅಷ್ಟರತನಕ ಕೋಗಿಲೆಯ ಶಾಂತ ಸ್ವರದಿಂದ, ಅರಸನ ಹಕ್ಕಿಯ ಗುಟುರುವಿಕೆಯಿಂದ ತಂಪಾಗಿದ್ದ ಸುತ್ತಲ ಪರಿಸರ ಅರೆಕ್ಷಣದಲ್ಲಿ ಕದಡಿ ಗಲಿಗಿಬಿಲಿಗೊಳಗಾಯಿತು. ಇಷ್ಟಕ್ಕೆಲ್ಲಾ ಕಾರಣನಾದ ಕರಿಯಜ್ಜನ ರಭಸ, ಬಾಗಿಲು ಮುರಿದು ಬಿದ್ದ ಮರುಕ್ಷಣ ಆಘಾತಕ್ಕೆ ಒಳಗಾಗಿ ಹತಾಶ ಸ್ಥಿತಿಗಿಳಿಯಿತು. ಬೋರಲು ಬಿದ್ದ ಬಾಗಿಲ ಬಳಿ ಗೊಡೆಗೊರಗಿ ತನ್ನ ಹಣೇಬರಹವನ್ನು ಶಪಿಸತೊಡಗಿದ ಕರಿಯಜ್ಜ. ತನ್ನ ಈ ದೈನೀಸಿ ಸ್ಥಿತಿಗೆ ಕಾರಣವಾದ ಘಟನೆಗಳು ನೆನಪಾಗತೊಡಗಿದವು.
*********
ಕರಿಯಜ್ಜನ ಈ ಹತಾಶ ವರ್ತನೆ ಶುರುವಾಗಿದ್ದು ಹದಿನೈದು ದಿವಸಗಳ ಹಿಂದಿನದಾಗಿದ್ದರೂ ಸ್ವಲ್ಪ ವಿಕಾರ ರೂಪ ತಾಳಿದ್ದು ಬೆಳಗ್ಗೆ ಲಚ್ಚಿಯ ಚುಚ್ಚು ಮಾತುಗಳಿಂದ ಎಂಬುದು ಸತ್ಯ. ಬಟ್ಟಲಿಗೆ ಗಂಜಿ ಬಡಿಸಿದ ಲಚ್ಚಿ, ಪಾತ್ರೆಯನ್ನು ಅಲ್ಲಿಯೇ ಇಟ್ಟು ಹಾಗೆಯೇ ಕುಕ್ಕುರುಗಾಲಿನಲ್ಲಿ ಕುಳಿತ ತಕ್ಷಣ ಕರಿಯಜ್ಜನಿಗೆ ಅನುಮಾನದ ವಾಸನೆ ಬಡಿದಿತ್ತು. ಗಂಜಿ ಕರಿಯಜ್ಜನ ಗಂಟಲು ಸೇರುವದೊರಳಗೆ ಮೂರು ತಿಂಗಳ ಹಿಂದೆ ಅಡವಿಟ್ಟ ಬಂಗಾರದ ಬೆಂಡೋಲೆಯ ಪ್ರಸ್ತಾಪವನ್ನು ಲಚ್ಚಿ ಶುರುವಿಟ್ಟುಕೊಂಡಾಗ ಅನುಮಾನ ನಿಜವಾಗಿತ್ತು. ಲಚ್ಚಿ ಕರಿಯಜ್ಜನನ್ನು ಹೀಗೆ ಹಣಿಯುವುದು ಊಟಕ್ಕೆ ಕುಳಿತಾಗಲೇ, ಊಟ ಬಿಟ್ಟು ಏಳಲೂ ಆಗದು ನೆಮ್ಮದಿಯಿಂದ ಊಟ ಮಾಡಲೂ ಆಗದು ಎನ್ನುವಂತಹ ದೈನೇಸಿ ಸ್ಥಿತಿಯನ್ನು ತಂದಿಟ್ಟುಬಿಡುತ್ತಿದ್ದಳು ಲಚ್ಚಿ. ಅವಳು ಹಾಗೆ ಮಾಡುವುದಕ್ಕೆ ಅವಳದ್ದೇ ಆದ ಕಾರಣವೆಂದರೆ ಕರಿಯಜ್ಜ ಅಸಾಹಾಯಕನಾಗಿ ಅವಳ ಕೈಗೆ ಸಿಗುವುದು ಅದೊಂದೇ ಸಮಯದಲ್ಲಿ, ಹಾಗಾಗಿ ಊಟಕ್ಕೆ ಬಡಿಸಿ ಕುಕ್ಕುರುಗಾಲಿನಲ್ಲಿ ಬಟ್ಟಲೆದುರು ಕುಳಿತ ಲಚ್ಚಿ ಶುರುವಿಟ್ಟುಕೊಂಡಿದ್ದಳು
"ಅಲ್ಲಾ, ಇವತ್ತು ದೇವಸ್ಥಾನದಾಗೆ ಅಸ್ಟಬಂಧದ ಪೂಜೆ ಐತೆ, ಅದ್ಕೆ ಕಿವಿಗೆ ಕಡ್ಡಿ ಹಾಕ್ಯಂಡು ಹೋಗದು ಹ್ಯಾಂಗೆ, ಸರಿಕರಮುಂದೆ ಮಾನ ಮರ್ವಾದೆ ಇರಾಕಿಲ್ಲ, ಪ್ಯಾಟಿಗೆ ಹೋಗಿ ಅಡ ಇಟ್ಟ ಬೆಂಡೋಲೆ ಬಿಡಿಸಿ ತಗ ಬರಬಹುದಿತ್ತು, ಇವತ್ತು ನಾಳೆ ಇವತ್ತು ನಾಳೆ ಅಂತ ಮೂರ್ ತಿಂಗ್ಳು ಕಳದೋತು"
"....."
"ಮಾಡದೆಲ್ಲಾ ಮಾಡಿ ಹಿಂಗೆ ಗುಮ್ಮನ ಹಂಗೆ ಕುತ್ಕಂಡ್ರೆ ಬೆಂಡೋಲೆ ಅದ್ರಷ್ಟಕ್ಕೆ ಮನೆ ಬಾಗ್ಲಿಗೆ ಬರ್ತೈತಾ?, ದೇವ್ರು ಕೊಟ್ಟಷ್ಟು ಉಂಡು ತೆಪ್ಪಗಿರನಾ ಅಂತ ಹೇಳಿದ್ರೆ ಕೇಳ್ದೆ, ಅಷ್ಟು ದುಡೀತೀನಿ ಇಷ್ಟು ಕಿಸಿತೀನಿ ಅಂತ ಗೇಣಿ ಗದ್ದೆ ಮಾಡೋಕೋದ್ರಿ ಈಗ ಬಂಗಾರ ಅನ್ನೋ ಹೆಸ್ರಿಗೆ ಅಂತ ಇರಾ ಒಂದು ಒಡ್ವೆನೂ ಕಳ್ಕಂಡಂಗೆ ಆತು, ಒಟ್ನಲ್ಲಿ ನನ್ನ ಹಣೇಬರಾ ನೆಟ್ಟಗಿಲ್ಲ" ಎನ್ನುತ್ತಾ ಮುಸಿಮುಸಿ ಶುರುಮಾಡಿದ್ದಳು ಲಚ್ಚಿ.
ಕರಿಯಜ್ಜ ಮಾತನಾಡಲಿಲ್ಲ. ಮಾತನಾಡುವ ಆಸೆ ಇತ್ತು ಆದರೆ ಲಚ್ಚಿಗೆ ಸಮಾಧಾನ ನೀಡುವಂತಹ ಉತ್ತರ ಅವನಲ್ಲಿಇಲ್ಲದರಿಂದ ಮುಗುಮ್ಮಾಗಿ ಕುಳಿತು ಗಂಜಿಯನ್ನು ಹೊಟ್ಟೆಗೆ ಸೇರಿಸುವತ್ತ ಗಮನಹರಿಸಿದ್ದ. ಗಂಡನ ಈ ನಿರ್ಲಕ್ಷ್ಯ ವರ್ತನೆಯಿಂದ ಕೆರಳಿದ ಲಚ್ಚಿ ತನ್ನ ಹಣೇಬರಹವನ್ನು ಶಪಿಸತೊಡಗಿದಳು. ಉಕ್ಕಿಬಂದ ಸಿಟ್ಟು ತಡೆಯಲಾರದೆ ಗಂಜಿ ಪಾತ್ರೆಯನ್ನು ನೆಲಕ್ಕೆ ಕುಕ್ಕಿ ಮೂಲೆ ಸೇರಿ ಹರಕು ಕಂಬಳಿಯೊಳಗೆ ತೂರಿಕೊಂಡಳು.
ಕರಿಯಜ್ಜ ಒಮ್ಮೆ ಅಧಿರನಾಗಿ ಅಸಾಹಾಯಕ ಪರಿಸ್ಥಿತಿಗೆ ಉತ್ತರ ಸಿಗದೆ ಮನೆಯಿಂದ ಹೊರನಡೆದ. ತಪ್ಪು ತನ್ನಿಂದ ಆಗಿದ್ದು ನಿಜವಾದರೂ ಅದು ಉದ್ದೇಶಪಟ್ಟು ಮಾಡಿದ ತಪ್ಪಾಗಿರಲಿಲ್ಲ. ಆಸೆಯೆಂಬುದು ಯಾರಿಗಿರುವುದಿಲ್ಲ?, ವರ್ಷವರ್ಷಗಳಿಂದ ಕೂಲಿ ಮಾಡಿದ್ದರೂ ಅರೆಹೊಟ್ಟೆ ಮಾಸಲು ಬಟ್ಟೆ. ಸ್ಥಿತಿಯನ್ನು ಉತ್ತಮ ಮಟ್ಟಕ್ಕೆ ಏರಿಸಿಕೊಳ್ಳಬೇಕು ಎನ್ನುವ ಕನಸಿಗಾಗಿ ಅಲ್ಲದಿದ್ದರೂ ಉಂಡುಟ್ಟು ಸುಖವಾಗಿ ಇರಬೇಕು ಎನ್ನುವ ಆಸೆಗೆ ಬಲಿಯಾಗಿ ಗೇಣಿಗದ್ದೆ ಮಾಡಿ ಕೈಸುಟ್ಟುಕೊಂಡದ್ದು, ಗೊಬ್ಬರ ತರಲು ಬೆಂಡೋಲೆ ಅಡ ಇಟ್ಟಿದ್ದು ಆನಂತರ ಬರುವಷ್ಟು ಬೆಳೆ ಕೈಗೆಬಾರದೆ ಬೆಳೆದ ಬತ್ತವೆಲ್ಲಾ ಗೌಡರ ಮನೆ ಸೇರಿದ್ದು ಬೆಂಡೋಲೆ ಮಾರ್ವಾಡಿಯ ಹತ್ತಿರವೇ ಉಳಿದದ್ದು ಎಲ್ಲವೂ ಸತ್ಯ. ಹೀಗಾಗದೆ ಇಪ್ಪತ್ತುಚೀಲ ಭತ್ತ ಬಂದಿದ್ದರೆ ಒಡೆಯರ ಮನೆಗೆ ಹತ್ತು ಚೀಲ ಕೊಟ್ಟು ಮಿಕ್ಕುಳಿದ ಹತ್ತು ಚೀಲದಲ್ಲಿ ವರ್ಷಪೂರ್ತಿ ನೆಮ್ಮದಿಯ ಕೂಳು ತಿನ್ನಬಹುದಿತ್ತಲ್ಲ. ಆದರೆ ವಿಧಿ ಹಾಗಿಲ್ಲ ಅಂತ ತಿಳಿದದ್ದು ಎಲ್ಲಾ ಮುಗಿದಮೇಲೆಯೇ.
************
ಕರಿಯಜ್ಜ ಹುಟ್ಟಿದ್ದು ಕೂಲಿಕಾರನಾಗಿಯೇ ಆದರೂ ಬೆಳದದ್ದು ಕೃಷಿಕರ ಅಂಗಳದಲ್ಲಿಯೇ. ನಲವತ್ತರ ಹರೆಯದ ಅವನ ಮೂಲ ಹೆಸರು ಬೆರೇಯೇ ಇದ್ದರೂ ಹೋಲಿಕೆಯಲ್ಲಿ ಅವನ ಅಜ್ಜನಂತೆ ಎಂಬ ಕಾರಣದಿಂದ ಹಾಗೂ ಅಜ್ಜನ ಕಾಲುಸುತ್ತುತ್ತಾ ಬೆಳೆದದ್ದರಿಂದ ಅಜ್ಜ ಸತ್ತನಂತರ ಊರತುಂಬೆಲ್ಲಾ ಕರಿಯಜ್ಜ ತನ್ನ ಅಜ್ಜನ ಹೆಸರಿನಿಂದ ನಾಮಾಂಕಿತನಾಗಿದ್ದ. ಅಜ್ಜ ಲಾಗಾಯ್ತಿನಿಂದ ಭೂಮಿಯ ಮಗನಾಗಿಯೇ ಬೆಳೆದ ಪರಿಣಾಮದಿಂದ ಗದ್ದೆಹೂಟಿ ಮಾಡುವುದು, ಅಗೆಹಾಕುವುದು. ನಾಟಿಮಾಡುವುದು ಹೀಗೆ ಎಲ್ಲಾ ಕೃಷಿಕೈಂಕರ್ಯದ ಕಲೆಗಳು ಕರಿಯಜ್ಜನಿಗೂ ಕರಗತವಾಗಿದ್ದವು. ಸ್ವಂತ ಜಮೀನು ಇಲ್ಲದ ಕಾರಣ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತ ಭಗವಂತ ಕೊಟ್ಟದ್ದು ತನ್ನದು ಎಂದು ಆರಾಮವಾಗಿದ್ದ. ಹಾಗಿದ್ದವನ ತಲೆಯೊಳಗೆ ಹುಳ ಬಿಟ್ಟದ್ದು ಊರಿನ ಗ್ರಾಮಪಂಚಾಯ್ತಿಯವರು ಏರ್ಪಡಿಸಿದ್ದ "ಗ್ರಾಮ ಸಭೆ"ಯ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಇಸ್ತ್ರೀ ಪ್ಯಾಂಟು ಹಾಕಿಕೊಂಡಿದ್ದ ಸರ್ಕಾರಿ ಅಧಿಕಾರಿಗಳು " ರೈತನೆಂದರೆ ದೇಶದ ಬೆನ್ನೆಲುಬು, ಅವನೇ ಅನ್ನದಾತ, ಅವನು ಕೆಸರಿನಲ್ಲಿ ಹೊರಳಾಡಿ ಅಕ್ಕಿಯೆಂಬ ಬಂಗಾರ ಬೆಳೆಯದಿದ್ದರೆ ಮಿಕ್ಕವರ ಆಟ ನಡೆಯೋದೆ ಇಲ್ಲ. ಸಿನೆಮಾ ನಟರಿಂದ ಹಿಡಿದು ದೇಶದ ಪ್ರಧಾನಿಯ ವರೆಗೂ ರೈತನ ಸಹಾಯವಿಲ್ಲದೆ ಬದುಕಿಲ್ಲ, ಹಾಗಾಗಿ ಆತ ದೇವರ ಸ್ವರೂಪ" ಎಂದೆಲ್ಲ ಅದ್ಬುತವಾಗಿ ಭಾಷಣ ಮಾಡಿದರು. ಹಿಂದಿನ ಸಾಲಿನಲ್ಲಿ ಭಾಷಣ ಕೇಳುತ್ತಾ ಕುಳಿತ ಕರಿಯಜ್ಜನಿಗೆ ತನಗೆ ಗೊತ್ತಿದ್ದ ವಿದ್ಯೆಗೆ ಇಷ್ಟೆಲ್ಲಾ ಮಾನ್ಯತೆ ಇದೆ ಎಂದಾಗ ಮೈಮೇಲೆ ಮುಳ್ಳುಗಳು ಏಳುವಂತಹಾ ರೋಮಾಂಚನವಾಯಿತು. ಆ ಕ್ಷಣ ತಾನೂ ಭತ್ತ ಬಿತ್ತಬೇಕು ಅಕ್ಕಿಬೆಳೆಯಬೇಕು ದೇವರಂತೆ ಪೂಜನೀಯನಾಗಬೇಕು ಎನ್ನುವಂತಹ ಆಸೆಗಳು ಚಿಗುರೊಡೆಯತೊಡಗಿದವು. ತಕ್ಷಣ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಕರಿಯಜ್ಜನ ಬಳಿ ಜಮೀನು ಇಲ್ಲದ ಕಾರಣ ಜಮೀನು ಇದ್ದು ಭತ್ತ ಬಿತ್ತದವರ ಬಗ್ಗೆ ಆಲೋಚಿಸಿದ. ರಾಮಕೃಷ್ಣ ಗೌಡ್ರು ಹತ್ತು ಎಕರೆ ಅಡಿಕೆ ತೋಟದ ಒಡೆಯರು, ಹಾಗಾಗಿ ಅವರು ಒಂದು ಎಕರೆ ಭತ್ತ ಬೆಳೆಯುವ ಗದ್ದೆಯನ್ನು ಹಾಳುಬಿಟ್ಟಿದ್ದರು, ಅದು ಕರಿಯಜ್ಜನ ಮನಸ್ಸಿಗೆ ಪಳಕ್ಕನೆ ನೆನಪಿಗೆ ಬಂತು. ಭಾಷಣದ ಮಾತುಗಳು ಮನಸ್ಸಿನಿಂದ ಹುರುಪು ತೆಗೆಯುವುದಕ್ಕಿಂತ ಮೊದಲೇ ಗೌಡ್ರಮನೆ ಬಾಗಿಲಿಗೆ ಹೋಗಿ ನಿಂತ ಕರಿಯಜ್ಜ.
ಪಾಳುಬಿದ್ದ ಗದ್ದೆಯಾದರೂ ಗೌಡ್ರು ಬಡಪೆಟ್ಟಿಗೆ ಗದ್ದೆಯನ್ನು ಗೇಣಿಗೆ ಕೊಡಲು ಒಪ್ಪಲಿಲ್ಲ. ಹಿಂದೆಮುಂದೆ ಅಡ್ಡ ಉದ್ದ ಚೌಕಾಶಿ ಮಾಡಿದನಂತರ ಹತ್ತುಚೀಲ ಭತ್ತ ನೂರು ಹೊರೆ ಬೈಹುಲ್ಲು ಕರಿಯಜ್ಜ ಗೌಡ್ರಿಗೆ ಗೇಣಿಕೊಡುವುದು ಹಾಗೂ ಗದ್ದೆಗೆ ಬೇಕಾಗುವಷ್ಟು ಸರ್ಕಾರಿಗೊಬ್ಬರ ಗೌಡ್ರು ಕೊಡುವುದು ಎಂಬ ತೀರ್ಮಾನದೊಂದಿಗೆ ಗೇಣಿ ಚಾಲ್ತಿಗೆ ಬಂತು. ಕರಿಯಜ್ಜನಿಗೆ ಸ್ವರ್ಗ ಮೂರೇಗೇಣು. ಖುಷಿಯಾಗಿ ಮನೆಗೆ ಬಂದು ಪ್ರಪಂಚಗೆದ್ದ ಭಾವನೆಯಿಂದ ಲಚ್ಚಿಗೆ ತಾನು ಗೇಣಿಗದ್ದೆ ಮಾಡುವ ವಿಷಯ ತಿಳಿಸಿದ. ಆದರೆ ಕೈಸುಟ್ಟುಕೊಳ್ಳುವ ವಾಸನೆ ಬಿದ್ದ ಲಚ್ಚಿ "ಅವೆಲ್ಲಾ ನಮಗೆ ಬ್ಯಾಡ, ಸುಮ್ನೆ ಕೂಲಿ ಮಾಡಿ ಬದುಕು ಅಂತ ಭಗವಂತ ಕಳ್ಸಿದಾನೆ, ಅದ್ರನ್ನ ಮಾಡಾದು ಕಲೀರಿ" ಅಂತ ಹೇಳಿದರೂ ಕರಿಯಜ್ಜ ಪಕ್ಕಾಪಕ್ಕಾ ಲಾಭದ ಲೆಕ್ಕಾಚಾರ ಕೊಟ್ಟಮೇಲೆ ಮನಸ್ಸಿನಮೂಲೆಯಲ್ಲಿ ಆಸೆಚಿಗುರಿ ನಂತರದ ನಷ್ಟಕ್ಕೂ ತನ್ನದೊಂದು ಮಾತು ಅಂತ ಇಟ್ಟುಕೊಂಡು "ನಿಮಗೆ ತೋಚಿದಂಗೆ ಮಾಡಿ" ಎಂದು ಹೇಳಿ ಸೈ ಅಂದಿದ್ದಳು.
ಕಿವಿಯಲ್ಲಿ "ರೈತರೆಂದರೆ ದೇವರ ಅವತಾರ" ಎಂಬ ಅಧಿಕಾರಿಗಳ ಭಾಷಣದ ತುಣುಕನ್ನೇ ಇಟ್ಟುಕೊಂಡು ಕರಿಯಜ್ಜ ಜಡಿಮಳೆಯಲ್ಲಿ ಹೂಟಿ ಮಾಡಿ ಬೀಜದ ಭತ್ತ ಕಡ ತಂದು ಬಿತ್ತಿದ. ನೋಡನೋಡುತ್ತಿದ್ದಂತೆ ಹಸಿರುಬಣ್ಣದ ಸಸಿಗಳು ಮಡುಗಟ್ಟಿ ಎದ್ದವು. ಲಚ್ಚಿ ಸೊಂಟಕ್ಕೆ ಸೆರಗುಸುತ್ತಿಕೊಂಡು ಮುರಿಯಾಳು ಕರೆದುಕೊಂಡು ಸಸಿನಾಟಿ ಮಾಡಿದಳು. ಏಳುವ ಸಸಿ, ಹೊರಡುವ ತೆನೆ, ಸಿಗುವ ಭತ್ತ, ಉಳಿಯುವ ಬೈಹುಲ್ಲು, ಎಲ್ಲವನ್ನೂ ಗುಣಿಸಿ ಬಾಗಿಸುತ್ತಿದ್ದಂತೆ ಗದ್ದೆಗೆ ಗೊಬ್ಬರಕೊಡುವ ದಿನಗಳು ಬಂದವು. ಗೌಡ್ರ ಬಳಿ ಗೊಬ್ಬರಕ್ಕೆ ಹಣ ಕೇಳಿದಾಗ ಅವರು "ಅಲ್ಲಾ ಕರಿಯಜ್ಜ ಈಗ ನಾನು ಪ್ಯಾಟಿಗೆ ಹೋಗಿ ಯಾವ್ಯಾವುದೋ ಗೊಬ್ಬರ ತರೋದು ಅದು ಸರಿಯಾಗದೇ ಇರೋದು, ಅವೆಲ್ಲಾ ರಗಳೆಯೇ ಬ್ಯಾಡ, ಅದರ ಬಾಬ್ತು ಅಂತ ಎರಡು ಚೀಲ ಭತ್ತ ಕಡಿಮೆಕೊಡು, ನೀನೆ ಗೊಬ್ಬರಾನ ತಂದು ಹಾಕು" ಎಂದು ಹೇಳಿದ ಮಾತಿಗೆ ಕರಿಯಜ್ಜ ಲೆಕ್ಕಾಚಾರಕ್ಕೆ ಇಳಿದು ನೂರಿನ್ನೂರು ಮಿಗುವ ಕಾರಣದಿಂದ ಲಚ್ಚಿಯ ಬಂಗಾರದ ಬೆಂಡೋಲೆ ಮಾರ್ವಾಡಿ ಅಂಗಡಿಗೆ ಸೇರಿಸಿ ಗೊಬ್ಬರ ಅಂಗಡಿಯಿಂದ ತಂದು ಗದ್ದೆಗೆ ಸುರುವಿದ.
ಪಾಳುಬಿದ್ದ ಗದ್ದೆಗೆ ಒಮ್ಮೆಲೆ ಗೊಬ್ಬರ ಬಿದ್ದದ್ದರಿಂದ ಭತ್ತ ಹುಲುಸಾಗಿ ಎದ್ದು ಅಕ್ಕಪಕ್ಕದವರ ಕಣ್ಣುಕುಕ್ಕುವಷ್ಟು ತೆನೆ ಒಡೆದು ತೊನೆದಾಡತೊಡಗಿತು. ಮಾಡಿದ ಕೆಲಸ ಕೈಗೆ ಹತ್ತಿದ್ದ ಖುಷಿಯಲ್ಲಿ ಲಚ್ಚಿಯೂ ಸಂಭ್ರಮಪಟ್ಟು ಹೊಟ್ಟೆಕಿಚ್ಚುಪಡುವ ಮಂದಿಯ ಕಾಕದೃಷ್ಟಿಗೆ ಗದ್ದೆ ಹಾಳಾಗಬಾರದು ಎಂದು ಹಳೆ ಬಟ್ಟೆ ಸುತ್ತಿ ಬೆರ್ಚಪ್ಪನನ್ನು ಮಾಡಿ ಗದ್ದೆಯ ಮದ್ಯೆ ನಿಲ್ಲಿಸಿದಳು. ದಿನಗಳು ಸಂದಂತೆ ಹಸಿರುಬಣ್ಣದ ಗದ್ದೆ ಕೆಂಬಣ್ಣಕ್ಕೆ ತಿರುಗಿ ಕೊಯ್ಲಿನ ದಿನ ಬಂದೇಬಿಟ್ಟಿತು. ಕರಿಯಜ್ಜ ಲಚ್ಚಿ ಒಂದೆರಡು ಮುರಿಯಾಳಿನೊಡನೆ ಗದ್ದೆ ಕೊಯ್ಲು ಮುಗಿಸಿ ಒಕ್ಕಲು ಕಣಕ್ಕೆ ತಂದು ಹಾಕಿದರು. ಹುರುಪಿನಿಂದ ಹುಲ್ಲುಬಡಿದು ಭತ್ತ ಬೇರ್ಪಡಿಸಿ ಗುಡ್ಡೆಹಾಕಿ ಗೇಣಿ ಭತ್ತ ಒಯ್ಯಲು ಗೌಡ್ರಿಗೆ ಸುದ್ದಿ ಕಳುಹಿಸಿದರು. ಗೌಡ್ರು ಬರುವುದಕ್ಕೆ ಮೊದಲು ಒಮ್ಮೆ ಕರಿಯಜ್ಜ ಅರಿಶಿನ ಬಣ್ಣದ ಗೋಪುರದಂತಹ ಭತ್ತದ ರಾಶಿಯ ಕಣ್ತುಂಬಿಕೊಂಡ, ಜೀವನದಲ್ಲಿ ಪ್ರಥಮಬಾರಿಗೆ ತಾನೇ ಉತ್ತಿ ತಾನೇ ಬಿತ್ತಿ ತಾನೇ ಬೆಳೆದ ಭತ್ತದ ರಾಶಿ ಕರಿಯಜ್ಜನಿಗೆ, ಮಕ್ಕಳೇ ಆಗದೆಂದುಕೊಂಡ ತಾಯಿ ಮಗು ಹೆತ್ತಾಗಿನ ಸಂತೋಷದಂತೆ ಅನುಭವಿಸಿದ. ಗೌಡ್ರಿಗೆ ಹತ್ತುಚೀಲ ಕೊಟ್ಟು ಉಳಿಯುವ ಭತ್ತ ಹಾಗೂ ಬೈಹುಲ್ಲು ಬೆಂಡೋಲೆ ಬಿಡಿಸಿ ನಂತರ ವರ್ಷಪೂರ್ತಿ ಅನುಭವಿಸಬಹುದಲ್ಲ ಎಂಬ ಸಂತೋಷ ಕರಿಯಜ್ಜನಿಗೆ ಉನ್ಮಾದ ತಂದಿತ್ತು. ಆದರೆ ಅದು ಹೆಚ್ಚುಹೊತ್ತು ಇರಲಿಲ್ಲ.
ಗೇಣಿ ಕೊಂಡೊಯ್ಯಲು ಗೌಡರು ಮಗನೊಟ್ಟಿಗೆ ವ್ಯಾನಿನಲ್ಲಿ ಚೀಲದ ಸಮೇತ ಬಂದರು. ಲಚ್ಚಿ ಕರಿಯಜ್ಜ ಚೀಲ ಪಡೆದು ಭತ್ತವನ್ನು ಬೆತ್ತದ ಮೊರದಲ್ಲಿ ಮೊಗೆದು ತುಂಬತೊಡಗಿದರು. ಅರ್ದ ಗಂಟೆಯಲ್ಲಿ ಚೀಲತುಂಬುವ ಕೆಲಸ ಮುಗಿಸಿ ಚೀಲ ಎಣಿಸುವಾಗ ಕರಿಯಜ್ಜ ಅಧಿರನಾಗತೊಡಗಿದ. ಕನಿಷ್ಠ ಇಪ್ಪತೈದು ಚೀಲ ಭತ್ತ ಇರಬಹುದೆಂದು ಲೆಕ್ಕ ಹಾಕಿದ್ದ ಕರಿಯಜ್ಜನಿಗೆ ಬಾರಿ ಬಾರಿ ಎಣಿಸಿದಾಗಲೂ ಲೆಕ್ಕಕ್ಕೆ ಸಿಗುತ್ತಿರುವುದು ಹತ್ತೇ ಚೀಲ ಭತ್ತ. ತಾನು ತಪ್ಪಿದ್ದು ಎಲ್ಲಿ ಅಂತ ಕರಿಯಜ್ಜನಿಗೆ ತಿಳಿಯಲಿಲ್ಲ. ಬೈಹುಲ್ಲು ಹೊರೆಯತ್ತ ಕೈಕಟ್ಟಿ ನಿಂತಿದ್ದ ಗೌಡರು ಗತ್ತಿನಿಂದ "ಏನಾ ಕರಿಯಾ ಹುಲ್ಲಿನ ಹೊರೆ ನನಗೆ ಕೊಡುವುದು ಅಂತ ಸಣ್ಣ ಕಟ್ಟು ಕಟ್ಟಿದ್ದೀಯನಾ?" ಎಂದು ಪ್ರಶ್ನಿಸುತ್ತಿದ್ದರು. ಹುಲ್ಲಾದರೂ ಜಾಸ್ತಿ ಇರಬಹುದೆಂದು ಕರಿಯಜ್ಜ ಅದರ ಲೆಕ್ಕಾಚಾರಕ್ಕೆ ಇಳಿದ, ಅದೂ ಕೂಡ ಅಷ್ಟೆ ನೂರಾಹತ್ತು ಹೊರೆ ಇತ್ತು. ನೂರುಹೊರೆ ಗೌಡರಿಗೆ ಕೊಟ್ಟರೆ ತನಗುಳಿಯುವುದು ಹತ್ತು ಹೊರೆ ಹುಲ್ಲು ಅಂದರೆ ನೂರಾ ಐವತ್ತು ರೂಪಾಯಿ ಎನ್ನುವುದು ಕರಿಯಜ್ಜನಿಗೆ ಅರ್ಥವಾಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳ ಭಾಷಣದಿಂದ ಇಲ್ಲಿಯತನಕ ಅನುಭವಿಸಿದ್ದ ಸಂತೋಷ, ಪಟ್ಟ ಸಂಭ್ರಮ, ಹಾಕಿದ ಲೆಕ್ಕಾಚಾರ ಎಲ್ಲಾ ಆಯೋಮಯವಾಗಿತ್ತು . ಆರು ತಿಂಗಳ ಕಾಲ ಮೈ ಬಗ್ಗಿಸಿ ದುಡಿದ ಲಚ್ಚಿ ಕಣದ ಮೂಲೆಯಲ್ಲಿ ಭತ್ತ ಮೊಗೆದ ಮೊರವನ್ನು ಕೈಯಲ್ಲಿ ಹಿಡಿದುಕೊಂಡು ಕಕ್ಕಾಬಿಕ್ಕಿಯಾಗಿ ನಿಂತಿದ್ದಳು.
ಕರಿಯಜ್ಜನ ಹತಾಶ ಸ್ಥಿತಿಕಂಡು ಅಲ್ಲಿಯೇ ನಿಂತಿದ್ದವರೊಬ್ಬರು ಗೌಡರ ಬಳಿ "ಗೌಡ್ರೇ, ಕರಿಯಜ್ಜ ಲೆಕ್ಕ ಗೊತ್ತಿಲ್ಲದೆ ಗೇಣಿಗೆ ಒಪ್ಕೊಂಡಿದ್ದಾನೆ, ಒಂದೆಕರೆಗೆ ಯಾರೂ ನಾಲ್ಕು ಚೀಲದ ಮೇಲೆ ಭತ್ತ ಕೊಡಲ್ಲ, ಏನೋ ಪಾಪ ಆರು ತಿಂಗಳು ಶ್ರಮ ಇದೆ, ಒಂದೈದು ಚೀಲ ಭತ್ತ ಕೊಡಿ ಪಾಪ" ಎಂದರು.
"ನೋಡಪ್ಪ ಈ ರಾಮಕೃಷ್ಣೇ ಗೌಡ ಎಂದೂ ಮಾತಿಗೆ ತಪ್ಪೋನಲ್ಲ, ಗೊಬ್ರದ ಬಾಬ್ತು ಅಂತ ಒಂದು ಚೀಲ ಕೊಡ್ತೀನಿ ಅಂತ ಹೇಳಿದ್ದೆ ಅದಕ್ಕೆ ಕಡಕ್ ಕೊಡ್ತೀನಿ, ಹತ್ತು ಹೊರೆ ಹುಲ್ಲು ಅವನಿಗೆ ಉಳಿತಲ್ಲ," ಎಂದು ಹೇಳಿ ಮಿಕ್ಕ ಹುಲ್ಲು ಭತ್ತ ವ್ಯಾನಿನಲ್ಲಿ ಹೇರಿಕೊಂಡು ಮಗನೊಟ್ಟಿಗೆ ಬರ್ರ್ ಅಂತ ಹೋದರು. ಗೊಬ್ಬರದ ಬಾಬ್ತು ಎರಡು ಚೀಲ ಭತ್ತ ಎಂದು ಹೇಳುವಷ್ಟೂ ಶಕ್ತಿಯಿಲ್ಲದೆ ಕರಿಯಜ್ಜ, ಲಚ್ಚಿ ಗೇಣಿ ಭತ್ತದ ಚೀಲವನ್ನು ನೋಡುತ್ತಾ ಉಳಿದರು. ಹಾಗಾಗಿ ಲಚ್ಚಿಯ ಬೆಂಡೋಲೆ ಮಾರ್ವಾಡಿಯ ಅಂಗಡಿಯಲ್ಲೇ ಉಳಿಯಿತು.
*************
ಮೆನೆಯೆದುರು ಹೆಜ್ಜೆಸಪ್ಪಳಕ್ಕೆ ಕರಿಯಜ್ಜ ಮನೆಯಾಚೆ ಯಾರೋ ಬರುತ್ತಿರುವ ಸದ್ದಾಗಿ ನೆನಪಿನ ಸರಣಿಗೆ ಮುಕ್ತಾಯ ಹಾಡಿ ಎದ್ದು ನಿಂತು ಮುರಿದುಬಿದ್ದ ಬಾಗಿಲನ್ನು ಎತ್ತಿ ಗೋಡೆಗೊರಗಿಸಿ ಹೊರಗೆ ಬಗ್ಗಿ ನೋಡಿದ. ಲಚ್ಚಿ ಒಡೆದ ತೆಂಗಿನ ಕಾಯಿ ಪ್ರಸಾದ ಹಿಡಿದುಕೊಂಡು ತೆಲೆತುಂಬಾ ಸೆರಗು ಮುಚ್ಚಿಕೊಂಡು ಮನೆಯತ್ತ ಬರುತ್ತಿದ್ದಳು. ಮುಚ್ಚಿಕೊಂಡ ಸೆರಗು ಇಲ್ಲದ ಬೆಂಡೋಲೆಯ ಅಸ್ತಿತ್ವ ಉಳಿಸಿಕೊಳ್ಳಲು ಎಂಬುದು ಕರಿಯಜ್ಜನಿಗೆ ಮಾತ್ರಾ ತಿಳಿದಿತ್ತು. ತನ್ನ ಅಸಾಹಾಯಕ ಸಿಟ್ಟಿನಿಂದ ಮುರಿದ ಬಾಗಿಲಿನ ಸ್ಥಿತಿಯಾದರೂ ಲಚ್ಚಿಗೆ ತಿಳಿಯದಿರಲಿ ಎಂದು ಕರಿಯಜ್ಜ ಬಾಗಿಲು ಬೀಳದಂತೆ ಗೊಡೆಗೆ ಆನಿಸಿ ನಿಂತುಕೊಂಡ.
ಅನತಿ ದೂರದಲ್ಲಿ ದೇವಸ್ಥಾನದ ಅಷ್ಟಬಂಧ ಕಮಿಟಿಯ ನೇತಾರ ಜಯರಾಮ ಶೆಟ್ರು ಮೈಕಿನಲ್ಲಿ " ಮಹಾದಾನಿ ರಾಮಕೃಷ್ಣೇ ಗೌಡ್ರು ಈ ದಿನದ ಅನ್ನ ಸಂತರ್ಪಣೆಗಾಗಿ ಹತ್ತುಚೀಲ ಅಕ್ಕಿಯನ್ನು ದಾನ ಮಾಡಿದ್ದಾರೆ, ಅವರಿಗೆ ಅವರ ಕುಟುಂಬಕ್ಕೆ ಶ್ರೀ ಮಹಾಗಣಪತಿಯು ಆಯುರಾರೋಗ್ಯ ಐಶ್ವರ್ಯ ದಯಪಾಲಿಸಲಿ" ಎಂದು ಕೂಗುತ್ತಿದ್ದರು. ಕರಿಯಜ್ಜ ಹಾಗೂ ಲಚ್ಚಿ ಆ ಮಾತನ್ನು ಕೇಳಿ ಒಮ್ಮೆ ದೇವಸ್ಥಾನದತ್ತ ನೋಡಿ ನಕ್ಕರು. ಆ ನಗುವಿನಲ್ಲಿ ವ್ಯಂಗ್ಯ, ವಿಷಾದ ಹಾಗೂ ಆಳವಾದ ನೋವೂ ಅಡಗಿತ್ತು. ಆದರೆ ಅದಕ್ಕೆ ಬೆಲೆಕೊಡುವ ಜನ ಮಾತ್ರಾ ಯಾರೂ ಅಲ್ಲಿ ಇರಲಿಲ್ಲ.
-ಆರ್.ಶರ್ಮಾ.ತಲವಾಟ