Monday, June 27, 2011

ಆಣೆ ಪುರಾಣ ...!

"ದೇವ್ರಾಣೆ ಯಂಗೊತ್ತಿಲ್ಲೆ", (ನನಗೆ ಗೊತ್ತಿಲ್ಲ) ಎಂದು ನಾವೆಲ್ಲ ಸಣ್ಣಕ್ಕಿದ್ದಾಗ ಗೊತ್ತಿದ್ದ ವಿಷಯಗಳಿಗೂ ಹೇಳುತ್ತಿದ್ದೆವು. ಗೊತ್ತಿಲ್ಲದ ವಿಷಯಕ್ಕಂತೂ ಹೇಗೂ ಹೇಳುತ್ತಿದ್ದೆವು. ಆದರೆ ಪರಿಣಾಮ ದುಷ್ಪರಿಣಾಮ ಎರಡೂ ಆಗಿದ್ದ ಸಾಕ್ಷಿಗಳು ಇಲ್ಲ ಬಿಡಿ. ವಾರದಿಂದೀಚೆಗೆ ನಮ್ಮ ರಾಜ್ಯ ಮಟ್ಟದಲ್ಲಿ ಆಣೆ ಪ್ರಮಾಣ ಪ್ರಹಸನ ನಡೆಯುತ್ತಿದ್ದಾಗ ನನಗೂ ಅವೆಲ್ಲಾ ನೆನಪಿಗೆ ಬಂತು. ನಮ್ಮೂರಲ್ಲಿ ಒಬ್ಬರಿದ್ದಾರೆ. ಅವರ ಬಳಿ ಯಾರಾದರೂ "ಒಂದು ನೂರು ರೂಪಾಯಿ ಇದ್ರೆ ಕೊಡು" ಅಂತ ಕೇಳಿದರೆ ಅವರು ಅದಕ್ಕೆ "ದೇವ್ರಾಣೆ ದಮಡಿ ಕಾಸೂ ಇಲ್ಲ ಮಾರಾಯ" ಎನ್ನುತ್ತಾರೆ ಲಾಗಾಯ್ತಿನಿಂದಲೂ. ಹಾಗೆ ಅವರು ಧೈರ್ಯವಾಗಿ ದೇವರನ್ನು ಆಣೆಕಟ್ಟಿ ತನ್ನ ಬಳಿ ಇರುವ ದುಡ್ಡನ್ನು ಇಲ್ಲ ಎನ್ನುತ್ತಲೇ ಬಂದಿದ್ದಾರೆ, ದೇವ್ರಾಣೆ ಕಟ್ಟಿದ್ದರಿಂದ ಯಾವ ಪರಿಣಾಮವೂ ಆಗಿಲ್ಲ ಅವರು ಜತನವಾಗಿ ಕಾಪಿಟ್ಟುಕೊಂಡು ಬಂದ ದುಡ್ಡಿನ ಗಂಟಿನ ಮೇಲೆ. ಇರಲಿಬಿಡಿ ನಮಗೆ ನಿಮಗೆ ಯಾತಕ್ಕೆ ಬೇರೆಯವರ ಗಂಟಿನ ಚಿಂತೆ. ನಮ್ಮೂರಲ್ಲಿ ಒಬ್ಬಾತನಿದ್ದ, ಆತ ಸಂಜೆಮುಂದೆ ಸ್ವಲ್ಪ ಗಳಾಸು ತೆಗೆದುಕೊಂಡು ರಂಗಾಗುತ್ತಿದ್ದ. ಆ ರಂಗಾದ ಸಮಯದಲ್ಲಿ "ಏಯ್ ಏನಾ ಮಾರಾಯ ನಿನ್ನಂಥೋರು ಹೀಗೆ ಕುಡಿದರೆ ಎಂತಾ ಕಥೆಯಾ" ಎಂದು ಯಾರಾದರೂ ಕೇಳಿದರೆ "ಅಮ್ಮನ ಮೇಲಾಣೆ ನಾನು ಕುಡಿಯದು ಬಿಟ್ಟು ಒಂದು ವರ್ಷ ಆತು’ ಎನ್ನುತ್ತಾ ಅರಾಮಾಗಿದ್ದ. ಮತ್ತೊಂದು ಘಟನೆ ಒಳ್ಳೆ ಮಜ ಇದೆ. ನನ್ನ ಮೊಬೈಲ್ ಕಾಣೆಯಾಯಿತು. ಅದಕ್ಕೆ ಕಾರಣ ಗ್ಯಾರೇಜ್ ಹುಡುಗ ಅಂತ ಪಕ್ಕಾ ಆಗಿಹೋಯಿತು. ಆತನ ಬಳಿ ವಿಚಾರಿಸಿದಾಗ ಆತ ಹಿಂದುಮುಂದು ನೋಡದೆ "ಧರ್ಮಸ್ಥಳದ ದೇವರಾಣೆ ನಾನು ಕದ್ದಿಲ್ಲ,ನಾನು ಅಂಥಹವನಲ್ಲ" ಎಂದು ಅಳತೊಡಗಿದ. ನನ್ನ ಜತೆಯಲ್ಲಿದವನೊಬ್ಬ "ಬೋ...ಮಗನೆ ನಿನಗೆ ಆಣೆ ಭಾಷೆ ಬೇರೆ ಕೇಡು, ತಲೆ ಬುಲ್ಡೆ ಬಿಚ್ಚೋ ತರಹ ಬಡಿತೇನೆ ನೋಡು ಈಗ " ಎನ್ನುತ್ತಾ ಕೈಯೆತ್ತಿಕೊಂಡು ಹೊಡೆಯಲು ಹೋದಾಗ "ಅಯ್ಯೋ ಹೊಡಿಬ್ಯಾಡಣ್ಣ ಮನೇಲಿ ಇದೆ ಮೊಬೈಲ್, ತರ್ತೀನಿ ಈಗ" ಎನ್ನುತ್ತಾ ಓಟ ಕಿತ್ತ. ಅದು ಕಳೆದು ಎರಡು ವರ್ಷ ಸಂದಿದೆ ಆತ ಅರಾಮಾಗಿ "ದಸ್ ನಂಬರ್ ಸ್ಪ್ಯಾನರ್ ಲಾರೇ..."ಎನ್ನುತ್ತಾ ಅರಾಂ ಆಗಿದ್ದಾನೆ. ಆಯ್ತು ಈಗ ನೇರವಾಗಿ ಹೇಳಹೊರಟಿರುವುದನ್ನು ಹೇಳಿಬಿಡುತ್ತೇನೆ ಕೇಳಿ.
ಸಿ ಎಂ ಎಂಡ್ ಮಾಜಿ ಸಿ ಎಂ ಆಣೆ ಪ್ರಮಾಣ ಮಾಡುತ್ತೇನೆಂದು ಜಗಜ್ಜಾಹೀರು ಮಾಡಿದಾಗ ನಿಜವಾಗಿ ಬೆಚ್ಚಿಬಿದ್ದವರು ವಿರೇಂದ್ರ ಹೆಗ್ಗಡೆಯವರಂತೆ. ಕಾರಣ ಇಬ್ಬರೂ ಸ್ಥಳಕ್ಕೆ ಬಂದು ಆಣೆ ಮಾಡಿ ವಾಪಾಸು ತೆರಳಿ ವಾರದೊಳಗೋ, ತಿಂಗಳೊಳಗೋ ಸಣ್ಣಪುಟ್ಟ ಬರ್ ಬರ್ ಭೇಧಿಯಿಂದ ಹಿಡಿದು ಬೃಹತ್ ಪ್ರಮಾಣದ ಯಾವುದೇ ತೊಂದರೆ ಆದರೆ ಸರಿ, ಕ್ಷೇತ್ರದ ಸತ್ಯಾಸತ್ಯತೆಯ ಬಗ್ಗೆ ಮತ್ತಷ್ಟು ರಕ್ಕೆಪುಕ್ಕ ಸಿಗುತ್ತದೆ. ಆದರೆ ಎನೂ ಆಗದೇ ಇದ್ದರೆ ...! ಆವಾಗ ಕ್ಷೇತ್ರದ ಆಣೆಗೆ ರಾಜ್ಯದಲ್ಲಿ ಸಿಕ್ಕಾಪಟ್ಟೆ ಹಿನ್ನಡೆ...! ತತ್ ಪರಿಣಾಮ ಕ್ಷೇತ್ರದ ಬೊಕ್ಕಸ....! ಇವೆಲ್ಲಾ ರಗಳೆಯೇ ಬೇಡ ಎಂದು ಫೋನ್ ಟೊಂಯ್ ಪಂಯ್ ಎಂದು ದಿಲ್ಲಿಯ ತಲೆಯವರೆಗೂ ಹರಿಬಿಟ್ಟರಂತೆ. ಅಲ್ಲಿಂದ ಗಡ್ಕರಿ ಯಡ್ಡಿಗೆ ಗುದ್ದಿದರಂತೆ ಎಂಬಲ್ಲಿಗೆ ಆಣೆಪ್ರಮಾಣ ಬಂದ್ ಆಯಿತೆಂದು ನನ್ನ ಮಿತ್ರನೊಬ್ಬ ಇಲ್ಲಿ ಆಣೆಪ್ರಮಾಣ ಮಾಡಿ ಹೇಳುತ್ತಿದ್ದಾನೆ. ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು.

ಆ ಭಗವಂತನದೇ ರಿಸ್ಕ್.




ಸುದ್ದಿ ಕೇಳಿ ಒಮ್ಮೆ ಕಂಪಿಸಿದೆ ನಾನು. ಆ ಕಂಪನ ತನ್ನಷ್ಟಕ್ಕೆ ಒಳಗಿನಿಂದ ಬಂದದ್ದು. ಅದು ತಣಿದು ವಾಸ್ತವಕ್ಕೆ ಬಂದಮೇಲೆ ವಿಚಾರಕ್ಕಿಳಿದೆ. ಈತನ ಹೆಸರು ಸತ್ಯನಾರಾಯಣ ಕರಾರುವಕ್ಕಾಗಿ ನನ್ನದೇ ವಾರಿಗೆ. ಊರು ತಲವಾಟ. ವೃತ್ತಿ ಕೃಷಿ. ಸಿಕ್ಕಾಪಟ್ಟೆ ಶ್ರಮಜೀವಿ. ಮಿಕ್ಕ ವಿಚಾರವೆಂದರೆ ದಿನನಿತ್ಯ ಪತ್ರಿಕೆಯಲ್ಲಿ ಬರುವಂತೆ "ಈತ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾನೆ". ಯಾರದೋ ಸುದ್ದಿಯಾಗಿದ್ದರೆ ಮುಂದಿನ ವಿಷಯದತ್ತ ಗಮನಹರಿಸಬಹುದಿತ್ತು. ಆದರೆ ನನಗೆ ಈತ ವಾರಿಗೆಯವನು ಹಾಗೂ ನಿತ್ಯ ಕಣ್ಣಿಗೆ ಕಾಣಿಸುವವನು. ಗಟ್ಟಿಮುಟ್ಟಾದ ಈ ದೇಹದಿಂದ ಜೀವ ಹೊರಡಲು ಕಾರಣವಾದದ್ದು ವಿದ್ಯುತ್. ಮನೆಯ ಪಕ್ಕದಲ್ಲಿ ಅರ್ಥಿಂಗ್ ವೈರ್ ಜೋತಾಡುತ್ತಿತ್ತು. ಮನೆಯ ಮೀಟರ್ ಸುಟ್ಟು ಆ ವೈರ್ ನಲ್ಲಿ ಕರೆಂಟ್ ಹರಿಯುತಿತ್ತು. ಜೋರು ಮಳೆಯಿಂದ ನಿಂತ ನೀರನ್ನು ಸಾರಾಗವಾಗಿ ಹರಿಯಕೊಡಲು ಹೋದವನು ತಂತಿ ಮುಟ್ಟಿದ. ಕೆಲಕ್ಷಣಗಳಲ್ಲಿ ಜೀವ ಹರಿದುಹೋಯಿತು. ಸರಿ ಸಾವು ನಮ್ಮ ಕೈಯಲ್ಲಿ ಇಲ್ಲ ಹುಟ್ಟೂ ನಮ್ಮದಲ್ಲ ಅಂತ ವೇದಾಂತ ಹೇಳಬಹುದು ಆದರೆ ಬದುಕಿರುವ ಆ ಮೂವರಿಗೆ ಸ್ವಲ್ಪ ಕಷ್ಟ. ಅದನ್ನು ಸಹಿಸುವ ಶಕ್ತಿ ಒನ್ಸ್ ಅಗೈನ್ ಆ ಭಗವಂತನದೇ ರಿಸ್ಕ್.

Sunday, June 26, 2011

ಹೌದೇ ಹೌದು ಇದು ಹಾಗೆ ಬೇಕಾದರೂ ಅರ್ಥ ಕೊಡುತ್ತದೆ.

ಕೆಲ ವರ್ಷದ ಹಿಂದೆ ಚಂದನ ಟಿವಿ ವಾಹಿನಿಯಲ್ಲಿ "ಬೆಳಗು" ಎಂಬ ಕಾರ್ಯಕ್ರಮದಲ್ಲಿ ನನಗೊಂದು ಅವಕಾಶ ಕೊಟ್ಟಿದ್ದರು ಕೊರೆದು ಬಿಸಾಕಲು. ಸರಿ ಬಿಡಿ ಅಲ್ಲಿ ಕಡಿದು ಕಟ್ಟೆ ಹಾಕಿದ್ದರ ಬಗ್ಗೆ ಹೇಳಿ ಗರಿ ಗರಿ ಒಂದೂವರೆ ಸಾವಿರ ರೂಪಾಯಿ ಚೆಕ್ ರೂಪದ ಹಣ ಜೇಬಿಗಿಳಿಸಿದ್ದಾಯಿತು ಅದರ ಕತೆ ಬಿಟ್ಟು ಅದೇಕೆ ಈಗ ನೆನಪಾಯಿತು ಎಂಬುದರ ಬಗ್ಗೆ ಹೊರಡೊಣ.
ಚಂದನ ವಾಹಿನಿಯ ಸಂದರ್ಶಕ ಕಾರ್ಯಕ್ರಮದ ಮುಂಚೆ ಪಳಪಳ ಮಿಂಚಿಸಲು ನಿಮ್ಮದೆ ಆದ ಒಂದು ವಾಕ್ಯದ ಹಿತನುಡಿ ಕೊಡಿ ಅಂತ ಕೇಳಿದರು. ಹಾಗೆಲ್ಲಾ ದಿಡೀರನೆ ಒಂದು ವಾಕ್ಯದ ಹಿತನುಡಿ ಕೊಡಲು ನಾನೇನು ಕಗ್ಗ ಬರೆದೆ ಡಿವಿಜಿಯೋ ಅಥವಾ ಈಗಿನ ಹಲವರ ಬಾಯಲ್ಲಿ ಹೊರಡುವ ಗ್ನಾನಿಯೋ...! ಅಲ್ಲವಲ್ಲ. ಆದರೂ ಎಂತದೋ ಒಂದು ಸಾಲು ಹೇಳಲೇಬೇಕೆಂದು ಅವರು ವಿನಂತಿಸಿದ ಪರಿಣಾಮವಾಗಿ ಸಿಕ್ಕಾಪಟ್ಟೆ ತ್ರಾಸು ತೆಗೆದುಕೊಂಡು ಹೇಳಿದೆ " ನಮ್ಮ ಇಂದಿನ ಯೋಚನೆಗಳು ನಾಳೆಯನ್ನು ಕಟ್ಟಿಕೊಡುತ್ತವೆ". ಹಾಗೆ ಹೇಳಿದವನು ಅಂದೇ ಮರತೆ. ಆದರೆ ಜನ ಮರೆಯಲಿಲ್ಲ. ಅದೆಲ್ಲಾ ಕಳೆದು ಒಂದು ವರ್ಷದ ನಂತರ ಪರಿಚಯದ ಜನರೊಬ್ಬರು "ಏಯ್ ನಿನ್ನ ಸಂದರ್ಶನ ಮತ್ತೆ ಡಿಡಿ ಯಲ್ಲಿ ಬಂದಿತ್ತು," ಅಂದರು. ಒಳಗೊಳಗೆ ಖುಷಿಯಾಗಿ "ಓಹೋ" ಎಂದೆ. ಮುಂದುವರೆಸಿದ ಅವರು " ಆದರೆ ನೀನು ಅಂದು ಹೇಳಿದ ಸ್ಲೋಗನ್ ಮಾತ್ರಾ ಮತ್ತೆ ಹಾಕ್ಲೇ ಇಲ್ವಪ್ಪ, ತುಂಬಾ ಚೆನ್ನಾಗಿತ್ತು ಅದು" ಎಂದರು. ನಾನು ಕಕ್ಕಾಬಿಕ್ಕಿ ಏನು ಹೇಳಿದ್ದೆ ಅಂತ ನನಗೆ ನೆನಪಿಲ್ಲ ಆದರೆ ಅವರಿಗೆ ನೆನಪಿದೆ, ಹಾಗಂತ ಆ ಸಾಲು ಎಲ್ಲಿಂದಲೋ ಕದ್ದಿದಲ್ಲ ತನ್ನಷ್ಟಕ್ಕೆ ನನ್ನಿಂದ ಹುಟ್ಟಿದ್ದು ಆದರೆ ನೆನಪಿಲ್ಲ. ನನ್ನ ತಡಬಡಾಯಿಸುವಿಕೆ ಅವರಿಗೆ ಅರ್ಥವಾಯಿತಿರಬೇಕು ಅವರೇ ಮತ್ತೆ ಅದೇ ಸಾಲನ್ನು ಹೇಳಿದರು, ಮತ್ತು ಅವರದೇ ಆದ ದಾಟಿಯಲ್ಲಿ ಅದನ್ನು ತುಂಬಾ ಚನ್ನಾಗಿ ವ್ಯಾಖ್ಯಾನಿಸಿದರು. ನಾನು ಅಷ್ಟೆಲ್ಲಾ ಅರ್ಥ ಇಟ್ಟು ಹೇಳಿದ್ದಂತೂ ಅದು ಆಗಿರಲಿಲ್ಲ ಆದರೆ ಅದೊಂದು ಸಾಲು ಹಿಡಿದು ಅವರು ಸುಮಾರು ಹೊಳವುಗಳನ್ನು ಅದರಮೇಲೆ ನೀಡಿದರು.
ನನ್ನಿಂದಲೇ ಹೊರಟ ಆ ಸಾಲುಗಳು ಆಕಾಶಕ್ಕೆ ನೆಗೆದು ಅವರಮನೆ ಟಿವಿಯಲ್ಲಿ ಕಂಡು ಅವರ ಮಿದುಳೊಳಗೆ ಮಥನಗೊಂಡು ವಿವಿಧ ಅರ್ಥ ಹೊಂದಿ ಮತ್ತೆ ನನಗೆ ಒಂದು ವರ್ಷದ ನಂತರ ಬಂದು, ನನಗೆ ಮರತೇ ಹೋಗಿರುವಾಗ ಕದ ತಟ್ಟಿತ್ತು. ಅಬ್ಬಾ ಈ ನೆನಪಿನ ಕೋಶಗಳ ತಾಕತ್ತೇ ಅಂತ ನನಗೆ ಆ ಕ್ಷಣ ಅನಿಸಿ ಇಲ್ಲಿಯವರೆಗೂ ಹಲಬಾರಿ ಕಾಡುತ್ತಿರುತ್ತದೆ. ಕಗ್ಗ ಬರೆದ ಡಿವಿಜಿಯವರಿಗೆ ಅವರ ಜೀವನದಲ್ಲಿ ಅವುಗಳನ್ನು ಪಾಲಿಸಲಾಗಲಿಲ್ಲವೇನೋ ಅಥವಾ ಅದರ ಅನುಭವ ಸಾರವನ್ನು ಜೀವನಕ್ಕೆ ಅಳವಡಿಸಿಕೊಳ್ಳಲಾಗಲಿಲ್ಲವೇನೋ ಆದರೆ ಓದಿದ ಹಲವರು ತಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿಟ್ಟುಕೊಂಡು ಬೇಕಾದ ಸಮಯದಲ್ಲಿ ಬಳಸಿಕೊಳ್ಳುತ್ತಿರಬಹುದು.
ಅದೇ ರೀತಿ ಮೊನ್ನೆ ಜಿ ಟಾಕ್ ಸ್ಟೇಟಸ್ ನಲ್ಲಿ ಹಾಗೆ ಸುಮ್ಮನೆ "ಕಂಡ ಕೂಡ್ಲೆ ಇಷ್ಟವಾಗೋರು ಆಮೇಲೆ ಕಷ್ಟವಾಗ್ತಾರೆ" ಅಂತ ಜಡಿದೆ. ದಿಗ್ವಾಸ್ "ಬಹಳ ಚನ್ನಾಗಿದೆ ನಿನ್ನ ಸ್ಟೇಟಸ್" ಅಂದ, ಲಕ್ಷ್ಮಿ "ನಿಮ್ಮ ಲವ್ ಎಟ್ ಫಸ್ಟ್ ಸೈಟ್ ಕತೆ ನಂಗೂ ಹೇಳ್ರಿ... ಕವಿತಂಗೆ(ನನ್ನ ಅರ್ದಾಂಗಿ) ಹೆದ್ರಿಕೋ ಬೇಡಿ, ನಾನೂ ಹೇಳಲ್ಲ " ಅನ್ನೋದೆ...!. ಅಯ್ಯ ಈ ಸ್ಲೋಗನ್ನಿಗೂ ಲವ್ ಎಟ್ ಫಸ್ಟ್ ಸೈಟ್ ಗೂ ಎತ್ತೆಣದೆತ್ತಣ ಸಂಬಂಧ ಅಂತ ನನಗೆ ಅನ್ನಿಸಿ ಹ ಹ ಹ ಎಂದಷ್ಟೇ ಹೇಳಿ ಟೈಪಿಸಿದೆ. ಆದರೆ ಕೆಲಕ್ಷಣಗಳ ನಂತರ ಪಕಪಕನೆ ಮಿಂಚಿತು ಹೌದೇ ಹೌದು ಇದು ಹಾಗೆ ಬೇಕಾದರೂ ಅರ್ಥ ಕೊಡುತ್ತದೆ. ಲಗುಬಗೆಯಿಂದ ಸಿಕ್ಕಾಪಟ್ಟೆ ಅನಾಹುತವಾಗುವುದರ ಮೊದಲು "ಕಿವಿಯಲ್ಲಿ ಒಂದು ಹುಳ ಬಿಟ್ರೆ ಮಂಡೆಯಲ್ಲಿ ನೂರು ಹುಳ ತುಂಬಿಕೊಳ್ಳುತ್ತೆ" ಅಂತ ಸ್ಟೇಟಸ್ ಬದಲಾಯಿಸಿದೆ. ಇದಕ್ಕೂ ಇನ್ನು ಯಾವ್ಯಾವ ಅರ್ಥ ಇದೆಯೋ ಯಾರು ಬಲ್ಲ? ಅವರವರ ಭಾವಕ್ಕೆ...ಅವರವರ ಭಕುತಿಗೆ ಅಂದುಬಿಡೋಣವೆ..?

Friday, June 24, 2011

ಅದರಲ್ಲಿನ ಮಜ ಬಲ್ಲವನೇ ಬಲ್ಲ.



ಅಟ್ಟದ ಕೋಣೆಯ ಕಿಟಕಿಯ ಪಕ್ಕದ ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಕುಟ್ಟುತ್ತಾ ಕುಳಿತರೆ ಕಿವಿಗೆ ನೂರೆಂಟು ಸದ್ದು ಕಿಟಿಕಿಯಾಚೆಯಿಂದ ಕೇಳುತ್ತಿದೆ. ಕಪ್ಪೆಯ ವಟವಟ, ಜೀರುಂಡೆಯ ಜಿರ್ರ್ ಸರ್ ಪರ್ ಅಯ್ಯಯ್ಯೋ ಇಲ್ಲಿ ನಿಮಗೆ ಬರೆದು ತಿಳಿಸಲಾಗದಷ್ಟು ತರಹಾವಾರಿ. ಅವುಗಳ ಅರ್ಥವೇನಾದರೂ ನನಗೆ ತಿಳಿಯುವ ತಾಕತ್ತಿದ್ದರೆ ಹುಚ್ಚು ಹಿಡಿಯುತ್ತಿತ್ತೋ ಅಥವಾ ಹುಚ್ಚು ಹಿಡಿಸಬಹುದಿತ್ತೋ ಎಂಬುದಕ್ಕೆ ಈಗ ಉತ್ತರ ಸಿಗದ ಮಾತು ಬಿಡಿ.

ಆದರೂ ರಾತ್ರಿಯಿಡೀ ಅವೇಕೆ ಹಾಗೆ ಕೂಗುತ್ತವೆ ಎಂಬುದು ನನಗೆ ಯಕ್ಷಪ್ರಶ್ನೆಯಾಗಿ ಕಾಡುತ್ತದೆ. ಗಂಡ ಹೆಂಡತಿಯ ಜಗಳವೋ..? ಮನೆ ಮಕ್ಕಳ ಸಂವಾದವೋ, ಪ್ರೇಮಿಗಳ ಸಲ್ಲಾಪವೋ... ಶತ್ರುಗಳ ಜತೆ ಕಾದಾಟವೋ ಅಂತ ತಿಳಿಯದು. ನಾನು ಅದೆಷ್ಟು ವರ್ಷದಿಂದ ಈ ರಾತ್ರಿಯ ಸದ್ದುಗಳನ್ನು ಕೇಳುತ್ತಾ ಬಂದಿದ್ದೇನೆ. ಮಳೆಗಾಲದಲ್ಲಿ ತುಸು ಅತಿ ಎನ್ನಿಸುವಷ್ಟು ಜಾಸ್ತಿ, ಆದರೆ ಅದ್ಭುತ ಎಂದರೆ ಹುಲುಮಾನವರು ಕೆಟ್ಟುಹೋಯಿತು ಕಾಲ ಎಂದು ವಟಗುಟ್ಟುತ್ತಿರುವ ಈ ವರ್ತಮಾನದ ಕಾಲದಿಂದ ಹಿಡಿದು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದೆವು ಎಂದು ಹೇಳುವ ಭೂತ ಕಾಲದಲ್ಲಿಯೂ ನನ್ನ ಕಿವಿಗೆ ಕೇಳಿಸುತ್ತಾ ಇದ್ದದ್ದು ಇದೇ ಸದ್ದು. ತೀರಾ ದೂರ ಬೇಡ ವಿಂಡೋಸ್ ೯೫ ಕಾಲದಿಂದ ಅದೆಂತದೋ ವಿಂಡೋಸ್ ೭ ಎಂದೆಲ್ಲಾ ಮನುಷ್ಯ ಅಪ್ ಗ್ರೇಡ್ ಆಗುತ್ತಿರುವಾಗಲೂ ಈ ಜೀರುಂಡೆ ಕಪ್ಪೆ ಕ್ರಿಮಿಕೀಟಗಳು ಅದೇ ಸದ್ದು ಅದೇ ಸಪ್ಪಳ. ಅಂತಾದರೆ ಅವು ಮನುಷ್ಯರಂತೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಅಪ್ ಗ್ರೇಡ್ ಆಗುತ್ತಿಲ್ಲವೇ. ಅಥವಾ ಹುಲು ಮಾನವರಾದ ನಾವೇ ಹಿಂದುಳಿದವರೇ ಅವು ನಮ್ಮ ಸಾಹಸಗಳನ್ನೆಲ್ಲಾ ದಾಟಿ ಎಲ್ಲದರ ಕತೆ ಇಷ್ಟೇ ಅಂತ ತಿಳಿದು ಅಂತಿಮ ಹಂತ ತಲುಪಿ ಒಂದೇ ತರಹದ ಸದ್ದು ಮಾಡುತ್ತಾ ಇರಬಹುದೇ..? ಎಂಬಂತೆಲ್ಲಾ ಕೆಲಸಕ್ಕೆ ಬಾರದ ತರಲೆ ಪ್ರಶ್ನೆಗಳು ದುತ್ತನೆ ಹುಟ್ಟಿ ಹುಳವಾಗಿ ಕಾಡಿ ಉತ್ತರ ಸಿಗದೆ ಮಾಯವಾಗಿಬಿಡುತ್ತವೆ. ಅಲ್ಲ ಯಾತಕ್ಕೆ ಇಷ್ಟೆಲ್ಲಾ ರಗಳೆ ಎಂದರೆ ನಾನು ಎಂಬ ಈ ದೇಹ ಸಣ್ಣಕ್ಕಿದಾಗಲೂ ರಾತ್ರಿ ಇದೇ ವಟವಟ ಜಿರ್ರ್ ಸದ್ದು ಈಗಲೂ ಅದೇ ಅಂದರೆ ಪಕ್ಕಾ ಅದೇ ಸದ್ದು, ತುಸು ವ್ಯತ್ಯಾಸವೂ ಇಲ್ಲದಂತೆ ಅಂತ ಅನ್ನಿಸಿದರೂ ಮಗದೊಮ್ಮೆ ಅಥವಾ ಬದಲಾವಣೆ ಆಗಿರಬಹುದಾ ಸದ್ದುಗಳು ಅಂತಲೂ ಅನ್ನಿಸುತ್ತದೆ. ಆದರೆ ಮಿದುಳಿನ ನೆನಪಿನಕೋಶವನ್ನು ಎಳೆದೆಳೆದು ನೆನಪುಗಳನ್ನು ಹೊರಹಾಕಿದಾಗ ಇಲ್ಲ ಅದೇ ಸದ್ದು ನಿರಂತರ ಅಂತ ಗಟ್ಟಿ ನಿರ್ಧಾರ ಹೊರಬಂದಿದ್ದಿದೆ.

ಈಗ ಮಗದೊಮ್ಮೆ ವಿಷಯಕ್ಕೆ ಬರೋಣ ಮಲೆನಾಡಿನ ಈ ಮಳೆಗಾಲದ ಸದ್ದು ಕೇವಲ ಒಂದೇ ಜೀವಿಯದಲ್ಲ. ನೂರಾರು ಅಲ್ಲಲ್ಲ ಸಾವಿರಾರು ಕೀಟಗಳ ತಾಳಮೇಳ ಅವು. ಅಲ್ಲಿ ಒಂದು ಲಯ-ಗತಿ-ಮಂದ-ತಾರಕ ಎಂಬ ಶಿಸ್ತುಬದ್ದವಾದ ಕ್ರಮವಿದೆ. ಆಸ್ವಾದಿಸುವ ಮನಸ್ಸು ಸಮಯ ಇರಬೇಕಷ್ಟೆ. ನಮ್ಮ ಮನಸ್ಸನ್ನು ಹರಿಯಬಿಟ್ಟರೆ ಅದರಲ್ಲಿನ ಮಜ ಬಲ್ಲವನೇ ಬಲ್ಲ. ಮಳೆಗಾಲದಲ್ಲಿ ಹೆಚ್ಚಿನ ಕೀಟಗಳು ವಂಶಾಭಿವೃದ್ಧಿಯ ಚಟುವಟಿಕೆಯಲ್ಲಿ ತೊಡಗುತ್ತವೆ ಅಂತ ಎಲ್ಲೋ ಓದಿದ ನೆನಪು. ಅದರ ಆಧಾರದಲ್ಲಿ ಹೇಳುವುದಾದರೆ ಇದು ಒಂಥರಾ ಶೄಂಗಾರ ಕಾವ್ಯದ ಪಕ್ಕವಾದ್ಯ ಸಹಿತ ಸಂಗೀತ ಅಂತ ಬೇಕಾದರೆ ಕವಿಮನಸಿನ ಜನರ ಬಾಯಿಂದ ಹೇಳಿಸಬಹುದು. ಅದನ್ನ ನಮ್ಮನಿಮ್ಮಂತ ಜನ ಆಸ್ವಾದಿಸಬಹುದು. ಆದರೆ ನನಗೆ ಕಾಡುತ್ತಿರುವುದು ಅದಲ್ಲ, ಈಗ ಸುಮಾರು ಮೂವತ್ತು ವರ್ಷದ ಹಿಂದೆ ನಾನು ಕೇಳಿದ್ದ ಜಿರ್ರ್ ಜಿರ್ರ್-ವಟರ್ ವಟರ್-ಕಟ್ ಕಟ್-ಚಿರ್ರರ್ರೋ ಎಂಬಂತಹ ಸದ್ದು ಗಳು ಇಂದೂ ಕುಡ ಚಾಚೂ ತಪ್ಪದೆ ಕಿಟಕಿಯಾಚೆ ಹೊರಡುತ್ತಿದೆ. ಅಂದು ಇದೇ ಸದುಗಳನ್ನು ನನಗೆ ಉಣಬಡಿಸಿದ್ದ ಕೀಟದ ಮರಿ ಮರಿ ಮರಿ ಮಗ ಇಂದೂ ಕೂಡ ಹಾಗೆಯೇ ಸದ್ದು ಹೊರಡಿಸುತ್ತಾ ತನ್ನ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂಬಲ್ಲಿಗೆ ಆ ಕೀಟಗಳ ಪಾಲಿಗೆ ತಲೆಮಾರುಗಳ ಸರಣಿಯೇ ಸಂದುಹೋಗಿದೆ. ಆದರೆ ನನ್ನ ಪಾಲಿಗೆ ಇನ್ನೂ ಅರ್ದ ಆಯುಷ್ಯ ಬಾಕಿಯಿದೆ ಜತೆಗೆ ಆ ಕೀಟಗಳಿಗೆ ನನ್ನ ಇರುವಿಕೆಯೂ ತಿಳಿಯದಂತೆ ನನಗೆ ಅವುಗಳ ಮಾಹಿತಿ ತಿಳಿದಿದೆ.

ಭಗವಂತಾ ನಿನ್ನ ಸೃಷ್ಟಿಯ ರಹಸ್ಯ ಅಪಾರ, ಕೀಟಗಳಿಗೆ ನನ್ನ ಇರುವಿಕೆ ತಿಳಿಯದಂತೆ ನಿನ್ನ ಇರುವಿಕೆಯೂ ನನಗೆ ತಿಳಿಯುತ್ತಿಲ್ಲ. ನೀನೂ ನನ್ನಮೇಲೆ ಇಂತಹುದೇ ಬ್ಲಾಗ್ ಬರೆಯುತ್ತಿರಬಹುದು ಅದರಲ್ಲಿ ಮನುಷ್ಯರು ಮಳೆಯ ಚಳಿಗೆ ವಂಶಾಭಿವೃದ್ಧಿಯಲ್ಲಿ ತೊಡಗುತ್ತಾರೆ ಅಂತಲೂ ಒಂದು ಸಾಲು ಟೈಪಿಸಿರಬಹುದು ಆದ್ಅರೆ ಮಜ ನಿನಗೆ ಗೊತ್ತಿದೆಯೋ ಇಲ್ಲವೋ ಮನುಷ್ಯ ಆ "ಅದನ್ನು" ಈಗ ಕೇವಲ ವಂಶಾಭಿವೃದ್ಧಿಗಾಗಿ ಬಳಸುತ್ತಿಲ್ಲ, ಮಜಕ್ಕಾಗಿಯೇ ಹೆಚ್ಚು ಬಳಸುತ್ತಿದ್ದಾನೆ. ವಂಶಾಭಿವೃಧಿಯ ರಹಸ್ಯ ಗೆದ್ದು ಮಜದ ಹಿಡಿತ ಸಾಧಿಸಿ ಎಂತೆಂತದೋ ಸದ್ದುಗಳನ್ನು ಹೊರಡಿಸುತ್ತಿದ್ದಾನೆ.

ಕೊನೆಯದಾಗಿ ಕಾಡುವ ಕಟ್ಟಕಡೆಯ ಪ್ರಶ್ನೆಯೆಂದರೆ ಕೀಟಗಳು ಅದನ್ನೆಲ್ಲಾ ದಾಟಿ ವಟಗುಟ್ಟುತ್ತಿದೆಯೋ ಅಥವಾ ಆರಂಭವೋ..? ಗೊತ್ತಿಲ್ಲ....!

Thursday, June 23, 2011

ಹೀಗೆಲ್ಲಾ ಇತ್ತು..........

ನಮಗೆ ಮಳೆಯ ಚಳಿ ಅಡರಿಕೊಂಡು ಆಗಲೇ ಹತ್ತಿರ ತಿಂಗಳಿಗೆ ಬಂದಾಯ್ತು. ಜನರ ಲೆಕ್ಕಾಚಾರ ಯಾವ್ಯಾವ ಮಳೆ ಎಷ್ಟೆಷ್ಟು ಎಂಬುದರತ್ತ ಹರಿಯುತ್ತಿದ್ದರೆ ನನಗೆ ಹಳೆಕಾಲದ ಕಂಬಳಿ, ಹೊಡಚಲು, ಹಲಸಿನ ಬೀಜದ ಸೊಂಯ್ ಸೊಂಯ್ ಸದ್ದು ನೆನಪಾಗಿಹೋಯ್ತು.
ಜಡಿಮಳೆಯನ್ನು ಹೆದರಿಸಲು ಮಲೆನಾಡಿಗರು ಆಯ್ದುಕೊಂಡದ್ದು ಕಂಬಳಿ. ಕುರಿಯನ್ನು ಬೆಚ್ಚಗಿಟ್ಟ ರೋಮಗಳು ಅಲ್ಲಿ ತಮ್ಮ ಡ್ಯೂಟಿ ಪೂರೈಸಿ ಮನುಷ್ಯನ ಕೈಗೆ ಸಿಕ್ಕಿ ಹೈರಾಣಾಗಿ ಅವನ ರಕ್ಷಿಸಲು ಕಂಬಳಿಯಾಗಿ ಜಡಿಮಳೆಗಾಲಕ್ಕೆ ಸರಿಯಾಗಿ ಮಲೆನಾಡ ಬಾಗಿಲಬಡಿದು ಮಳೆಯ ರಕ್ಷಣೆ ಬಯಸುವವನ ಮಂಡೆಯನ್ನೇರುತ್ತದೆ. ಅದೇನೋ ತನ್ನ ಜನ್ಮದಲ್ಲಿಯೇ ಕಾಣದ ಇಂತಹ ಮಳೆಹನಿಗಳಿಗೆ ಕಂಬಳಿಯ ರೊಣೆಗಳೂ ಕೂಡ ಹೈರಾಣಾಗಿಬಿಡುತ್ತವೆ ಆವಾಗ ಹೊಡಚಲು ಎದ್ದುಕೂರುತ್ತದೆ.
ಸಾಮಾನ್ಯವಾಗಿ ಮನೆಯ ಹಿಂಬಾಗಿಲಿನ ಸಮೀಪ ನೆಲದಲ್ಲಿ ಒಂದು ಹೊಂಡ ಅದರ ಮಧ್ಯೆ ನಿಗಿನಿಗಿ ಬೆಂಕಿ ಸುತ್ತಲೂ ಜನ ನಾಲ್ಕಡಿ ಮೇಲೆ ಅಡ್ಡಕೋಲು ಕಟ್ಟಿ ಅದರಲ್ಲಿ ಮತ್ತೆ ನಾಳೆಯ ಮಳೆಗೆ ಮೈಯೊಡ್ಡಲು ತಯಾರಾಗುತ್ತಿರುವ ಕಂಬಳಿ. ಅದರಿಂದ ಹೊಡಚಲ ಮೇಲೆ ನಿಧಾನ ಬೀಳುವ ಒಂದೊಂದೇ ಹನಿ ನೀರು. ಅದರಿಂದಾಗಿ ಉಂಟಾಗುವ ಚೊಂಯ್ ಸದ್ದು. ಇದರ ನಡುವೆ ಮತ್ತೊಂದು ಕೆಲಸ ಸದ್ದಿಲ್ಲದೆ ಸಾಗುತ್ತಿರುತ್ತದೆ ಅದೇ ಹಲಸಿನ ಬೀಜ.
ಮೇ ಅಂತ್ಯದಲ್ಲಿ ಹಲಸಿನ ಹಣ್ಣು ತಿಂದು ಉಳಿದ ಅದರ ಬೀಜವನ್ನು ಕೆಮ್ಮಣ್ಣಿನಲ್ಲಿ ಕಲಸಿ ಇಟ್ಟಿರುತ್ತಾರೆ. ಈ ಹೊಡಚಲು ಶುರುವಾದಾಗ ಅಲ್ಲಿ ಹಲಸಿನ ಬೀಜವನ್ನು ಪಿನ್ ನಲ್ಲಿ ಒಂದು ತೂತು ಹೊಡೆದು ಸುಡುವ ಕಾರ್ಯಕ್ರಮ ಇರುತ್ತದೆ. ಅಲ್ಲೊಂದು ಇಲ್ಲೊಂದು ಬೀಜ ತೂತು ಮಾಡದೇ ಮರೆತಿದ್ದು ಡಬ್ ಎಂದು ಸದ್ದು ಮಾಡಿ ಸುತ್ತಲೂ ಕೂತವರ ಮಡಿಲಿಗೆ ಕೆಂಡವನ್ನು ಎರಚುವ ತಾಕತ್ತಿನ ಮಿನಿ ಬಾಂಬ್ ಆಗಿ ಕೆಲಸಮಾಡಿಬಿಡುತ್ತದೆ. ಹೀಗೆಲ್ಲಾ ಇತ್ತು ಹಳೆ ಕತೆಗಳು- ಮತ್ತೆ ನೆನಪಿದೆ ಎಂದಾದಮೇಲೆ ಅನುಷ್ಠಾನಕ್ಕೆ ತರಬಹುದು ಬಿಡಿ. ಇದೇನು ಅಂತಹಾ ಕಷ್ಟದ್ದಲ್ಲ, ಆದರೂ ನೆನಪುಗಳು ಹಾಗೂ ಕನಸುಗಳು ಮಾತ್ರಾ ಮಧುರ.....ಏನಂತೀರಿ..?

Friday, June 17, 2011

ನನ್ನ ನೆನಪು ನಿಮಗಾಗಿ ಅಷ್ಟೆ.



ಮಲೆನಾಡಿನಲ್ಲಿ ಮಳೆಗಾಲವೆಂದರೆ ಧೋ ಎಂಬ ಶಬ್ಧ ನಿರಂತರ. ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಸುರಿಯುವ ನೀರು ಹತ್ತು ಹಲವಾರು ನದಿತೊರೆಗಳನ್ನು ನಿರ್ಮಿಸುತ್ತದೆ. ಮಳೆಗಾಲದ ಆರಂಭದಲ್ಲಿ ನದಿತೊರೆಗಳಲ್ಲಿ ಕೆಂಪುನೀರು, ಅದಕ್ಕೆ ನಾವು ಸಣ್ಣಕ್ಕಿದ್ದಾಗ "ಮಣ್ಣುಕರಡಿ ಬತ್ತು" ಎಂದು ಹಿರಿಯರು ಹೆದರಿಸುತ್ತಿದ್ದರು. ಮಣ್ಣುಕರಡಿ ಎಂದರೆ ನಮ್ಮ ಲೆಕ್ಕ ಪ್ರಾಣಿ ಎಂದರ್ಥ ಆದರೆ ಅದು ಮಣ್ಣು ನೀರಲ್ಲಿ ಕರಡಿ ಬರುತ್ತದೆ ಎಂಬ ಬೇರೆ ಬೇರೆ ಶಬ್ಧದ ಒಳಾರ್ಥ ಅಲ್ಲಿತ್ತು. ಮಣ್ಣುಕರಡಿ ಮಾಯವಾದ ಮೇಲೆ ತಿಳಿನೀರು ಜುಳು ಜುಳು ಹರಿಯತೊಡಗುತ್ತದೆ ಎಲ್ಲೆಂದರಲ್ಲಿ. ಅದು ಬೆಟ್ಟುಜಲದ ನೀರು. ವಾವ್ ಅದರ ಅಂದ ಒನಪು ಒಯ್ಯಾರ ಬಲು ಚೆನ್ನ. ಅಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಆಟವಾಡಲು ಮಕ್ಕಳಿಗೇನು ನಲವತ್ಮೂರು ದಾಟುತ್ತಿರುವ ನನಗೂ ಯಾರಾದರೂ ಏನಾದರೂ ಅಂದುಕೊಳ್ಳದಿದ್ದರೆ ಇಂದೂ ಒಂದಷ್ಟು ಆಟವಾಡಿಬಿಡೋಣ ಅಂತ ಅನ್ನಿಸುತ್ತದೆ. ಹಾಗಿರುತ್ತದೆ ಆ ತಿಳಿನೀರಿನ ಮಹಿಮೆ.
ಅಂದಹಾಗೆ ಗೌರೀಶ ಕೊಂಡ ಜಾಗದಲ್ಲಿ ಹೋಂ ಸ್ಟೇ ತಯಾರಾಗುತ್ತಿದೆ ಅಂದನಲ್ಲ ಅದರ ತುಸು ಹಿಂದೆ ಈಗ ನಿಮಗೆ ಚಿತ್ರದಲ್ಲಿ ಕಂಡ ತಿಳಿನೀರಿನ ನದಿ ಮಳೆಗಾಲದಾದ್ಯಂತ ಜುಳುಜುಳು ಹೀಗೆಯೇ ಹರಿಯುತ್ತದೆ. ನಮ್ಮೆಲ್ಲರ ಬಾಲ್ಯ ಅಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಕಳೆದಿದೆ. ನನ್ನ ಅಕ್ಕನ ಮಕ್ಕಳೂ(ಈಗ ಅವರು ಸಾಪ್ಟ್ ವೇರ್ ಬಿಡಿ, "ಅಯ್ಯೋ ಈ ನೀರಾ..."ಎಂದು ರಾಗ ಎಳೆದರೂ ಎಳೆಯಬಹುದು, ಆದರೂ ಬಾಲ್ಯ ಅವರಿಗೂ ಖುಷಿಯೇ) ಇಲ್ಲಿ ಆಟವಾಡಿದ್ದಿದೆ.
ಹೀಗೆ ಸುಮ್ಮನೆ ಅವೆಲ್ಲಾ ನೆನಪಾಯಿತು, ಸಿಕ್ಕಾಪಟ್ಟೆ ಕೊರೆಯಲು ಸಮಯ ಕಡಿಮೆ, ಒಂದು ನನ್ನ ನೆನಪು ನಿಮಗಾಗಿ ಅಷ್ಟೆ.

Tuesday, May 31, 2011

"ಚಂದಮಾಮ"


"ಚಂದಮಾಮ" ಎಂಬ ನಾಲ್ಕಕ್ಷರದ ಮೋಡಿ ಬಲ್ಲವನೇ ಬಲ್ಲ. ಮಕ್ಕಳ ಮನಸ್ಸಿಗೆ ಚಂದ್ರ ಎಂಬ ಬೆಳ್ಳನೆಯ ಗ್ರಹ ಅದ್ಬುತವಾಗಿ ಆಶ್ಚರ್ಯಕರವಾಗಿ ಕಂಡು ಅವರವರ ತಾಯಿಂದರ ಮೂಲಕ ಚಂದಮಾಮ ನಾಗಿ ಪುಳಕಗೊಳಿಸುತ್ತಾ ಬಂದಿದ್ದಾನೆ ಲಾಗಾಯ್ತಿನಿಂದಲೂ. ಮನಸ್ಸನ್ನು ಪ್ರಪುಲ್ಲಗೊಳಿಸುವ ವಿಷಯಗಳಿಗೆಲ್ಲ ಚಂದಮಾಮನೇ ಮೂಲಾಧಾರ. ಅದೇಕೆ ತಾಯಿಂದರು ಚಂದಮಾಮನಿಗೆ ಗಂಟುಬಿದ್ದದ್ದು?, ಮಕ್ಕಳೇಕೆ ಮರುಳಾದದ್ದು?, ಎಂಬ ಪ್ರಶ್ನೆಗೆ ಪರಿಪೂರ್ಣ ಉತ್ತರ ಕಂಡುಹಿಡಿಯಲಾಗದಿದ್ದರೂ "ಚಂದಮಾಮ" ಎಂಬ ಶಬ್ದ ತಂಪಾಗಿ ಮನಸ್ಸನ್ನು ಪುಳಕಗೊಳಿಸುವುದಂತೂ ನಿಶ್ಚಿತ. ಕಪ್ಪುಕತ್ತಲ ಆಕಾಶದಲ್ಲಿ ಬೆಳ್ಳನೆಯ ಗೋಲವಾಗಿ ತೋರುವ ಚಂದ್ರ ಮನುಷ್ಯನ ಮಿದುಳಿನಲ್ಲಿ ತಂಪಾಗಿ ಅಚ್ಚಾಗಿದ್ದಾನೆ. ಹಾಗಾಗಿ ಕವಿಗಳು ಚಂದ್ರನ ಬಗೆಗೆ ಧಾರಾಳತನ ತೋರಿ ವರ್ಣಿಸಿದ್ದಾರೆ. ಸರಿ ಇವೆಲ್ಲಾ ಪ್ರಪಂಚದ ಎಲ್ಲಾ ಮನುಷ್ಯರಿಗೆ ಸಕಲ ಜೀವಿಗಳಿಗೆ ಅವರವರ ಮನಸ್ಸಿನ ಭಾವನೆಗಳಿ ತಕ್ಕಂತೆ ಮೂಡಿ ನೆನಪಿನಂಗಳದಲ್ಲಿ ಅಚ್ಚೊತ್ತಿದ ಚಂದ್ರನ ಕತೆಯಾಯಿತು, ಆದರೆ ಅದೇ "ಚಂದಮಾಮ" ಎಂಬ ನಾಲ್ಕಕ್ಷರ ಭಾರತೀಯ ಮನಸ್ಸಿಗೆ ಬೇರೆಯದೇ ಆದ ರೂಪದಲ್ಲಿ ಮೂಡಿದೆ. ಅದುವೆ ದಶಕಗಳಿಂದ ಭಾರತೀಯರ ಬಾಲ್ಯವನ್ನು ಪುಳಕಗೊಳಿಸುತ್ತಾ ತಿಂಗಳಿಗೊಮ್ಮೆ ಪ್ರಕಟವಾಗುತ್ತಾ ಬಂದಿರುವ ಕಥಾ ಪುಸ್ತಕ.
"ಚಂದಮಾಮ" ನಮ್ಮೆಲ್ಲರ ಬಾಲ್ಯದ ಸವಿನೆನಪು ಎಂದರೆ ತಪ್ಪಾಗಲಾರದು. ಬಾಲಮಿತ್ರ ಮಕ್ಕಳ ಪ್ರಪಂಚ ಎಂಬ ಹತ್ತು ಹಲವು ಕಥಾಪುಸ್ತಕಗಳು ಪ್ರಕಟಗೊಳ್ಳುತ್ತಿದ್ದರೂ ಚಂದಮಾಮ ಎಂಬ ಕಥಾ ಪುಸ್ತಕಕ್ಕೆ ವಿಶೇಷ ಸ್ಥಾನ. ೧೯೪೭ ರಲ್ಲಿ ಪ್ರಾರಂಭವಾದ ಚಂದಮಾಮ ಮಧ್ಯದಲ್ಲಿ ಕೆಲಕಾಲ ಸ್ಥಗಿತಗೊಂಡರೂ ತದನಂತರ ಮುಂದುವರೆಯುತ್ತಾ ಬಂದಿದೆ. ಬಿ.ನಾಗಿರೆಡ್ಡಿ ಹಾಗೂ ಚಕ್ರಪಾಣಿ, ಈ ಚಂದಮಾಮದ ಸೃಷ್ಟಿಕರ್ತರು. ಈ ಮಾಸಿಕವನ್ನು " ಭಾರತೀಯರ ಬಾಲ್ಯವನ್ನು ಸಾಂಪ್ರದಾಯಿಕ ಕತೆಗಳ ಮೂಲಕ ವಿದ್ಯಾವಂತರನ್ನಾಗಿಸುವ" ಪ್ರಮುಖ ಉದ್ದೇಶದೊಂದಿಗೆ ಆರಂಭಿಸಲಾಯಿತು.(ಕಿರು ಪರಿಚಯಕ್ಕೆ ಬಾಕ್ಸ್ ನೋಡಿ) ಬಾಲ್ಯ ಎಂಬುದು ಮನುಷ್ಯನಿಗೆ ಬಹು ಮುಖ್ಯ ಘಟ್ಟ. ಹಸಿಮಣ್ಣಿನ ಗೋಡೆಯಂತಹ ಮನಸ್ಸಿನ ಬಾಲ್ಯ ಅಚ್ಚೊತ್ತಿಕೊಳ್ಳುವ ವಿಧಾನದ ಮೂಲಕ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಆಡುತ್ತಾ ನೋಡುತ್ತಾ, ಗಮನಿಸುತ್ತಾ ತಿಳಿದುಕೊಳ್ಳುವ ಬಾಲ್ಯಕ್ಕೆ ಸುತ್ತಮುತ್ತಲಿನ ಪರಿಸರವೇ ಆಹಾರ. ನೋಟದ ಹಂತ ದಾಟಿದ ಬಾಲ್ಯಕ್ಕೆ ಕೇಳುವ ಹಂತ. ಅಲ್ಲಿ ಕತೆ ಹೇಳುವ ಅಜ್ಜಂದಿರು ಅಜ್ಜಿಯಂದಿರು ಇದ್ದರೆ ಅಂತಹ ಮನುಷ್ಯರ ಬಾಲ್ಯಕ್ಕೆ ಗಟ್ಟಿತನ ತನ್ನಷ್ಟಕ್ಕೆ ಮೂಡುತ್ತದೆ. ಕತೆ ಕೇಳುವ ಹಂತ ದಾಟಿದಾಗ ಪ್ರಾರಂಭವಾಗುವುದು ಓದಿ ಅರ್ಥೈಸಿಕೊಳ್ಳುವ ಹಂತ. ಕಣ್ಣುಗಳ ಮೂಲಕ ಅಕ್ಷರಗಳು ಸಾಗಿ ಮಿದುಳಿನ ಕೋಶಗಳಲ್ಲಿ ಚಿತ್ರಣಮೂಡಿ ಘಟನೆಗಳು ಅಚ್ಚೊತ್ತಬೇಕು. ಆಗ ಅಲ್ಲಿ ಒಂದು ಗಟ್ಟಿಯಾದ ಭವಿಷ್ಯದ ರೂಪುರೇಷೆಗಳು ಮೂಡತೊಡಗಬೇಕು. ಅದಕ್ಕೊಂದು ಉತ್ತಮ ಮಾದ್ಯಮ ಬೇಕು. ಈ ಎಲ್ಲಾ ಬೇಕುಗಳನ್ನು ಮಕ್ಕಳ ಮನಸ್ಸಿಗೆ ಉಣಬಡಿಸಿದ್ದು "ಚಂದಮಾಮ" ಎಂಬ ಕಥಾ ಪುಸ್ತಕ ಎಂದರೆ ತಪ್ಪಾಗಲಾರದು.
ಮಕ್ಕಳ ಮನಸ್ಸನ್ನು ಮುದಗೊಳಿಸಲು ಅವರಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಅವಶ್ಯಕತೆ ಪುರಾಣಪುಣ್ಯ ಕತೆಗಳು ಹಾಗೂ ಕುತೂಹಲ ಮೂಡಿಸುವ ವಿಷಯಗಳು. ಅವರ ಮನಸ್ಸುಗಳು ತರ್ಕ ವಿಶ್ಲೇಷಣೆ ಮುಂತಾದವುಗಳತ್ತ ಗಮನಹರಿಸುವಷ್ಟು ಪಕ್ವವಾಗಿರುವುದಿಲ್ಲ. ಹಾಗಾಗಿ ಅದನ್ನು ತಿಳಿಹೇಳುವ ತಾಳ್ಮೆ ಮಕ್ಕಳ ಕತೆಗಾರರಿಗೆ ಇರಬೇಕಾದ ತಾಕತ್ತು. ಚಂದಮಾಮ ಮಕ್ಕಳ ಈ ಮನಸ್ಸನ್ನು ಚನ್ನಾಗಿ ಅರಿತುಗೊಂಡಿತ್ತು ಹಾಗೂ ಅರಿತುಗೊಂಡಿದೆ. ಬಣ್ಣ ಬಣ್ಣದ ಚಿತ್ರಗಳು, ವಿಕ್ರಮ ಬೇತಾಳನ ಕತೆಗಳು, ರಾಮಯ್ಯ-ಸೋಮಯ್ಯ ನ ಕತೆಗಳು ಹೀಗೆ ಮಕ್ಕಳಿಗೆ ಏನು ಬೇಕು ಎಂಬ ನಾಡಿಮಿಡಿತವನ್ನು ಅರಿತುಕೊಂಡ ಕತೆಗಾರರ ತಂಡವನ್ನೇ ಚಂದಮಾಮ ಹೊಂದಿ ಯಶಸ್ಸಿನತ್ತ ಸಾಗುತ್ತಾ ಬಂದಿದೆ. ನಮ್ಮ ಬಾಲ್ಯಗಳಂತೂ ಟಿವಿ ಮೊಬೈಲ್ ಡಿಷ್ ಇಲ್ಲದ ದಿವಸಗಳು ಅಲ್ಲಿ ನಮಗೆ ಚಂದಮಾಮದ ಮೂಲಕ ಹೊರಗಿನ ಪ್ರಪಂಚ ನೋಡಿದ್ಡೇ ನೆನಪು. ವಿಕ್ರಮರಾಜನಿಗೆ ಬೇತಾಳ ಕತೆಯನ್ನು ಹೇಳುತ್ತಾ ಕತೆ ಕುತೂಹಲ ಘಟ್ಟಕ್ಕೆ ಬಂದಾಗ ದಿಡೀರನೇ ನಿಲ್ಲಿಸಿ ಪ್ರಶ್ನೆ ಕೇಳಿದಾಗ ನಮಗೆಲ್ಲಾ ಮೈಪರಚಿಕೊಳ್ಳುವಂತಹಾ ಪರಿಸ್ಥಿತಿ ಇಂದಿಗೂ ನೆನಪಿನ ಕೋಶದಲ್ಲಿ ಹಸಿರಾಗಿಯೇ ಇದೆ. ವಿಕ್ರಮನ ತಾಳ್ಮೆ, ಬೇತಾಳನ ಪ್ರಶ್ನೆ ಹಾಗೂ ನಂತರ ರಾಜ ನೀಡುವ ಉತ್ತರ ಮತ್ತೆ ಮೌನ ಮುರಿದ ರಾಜಾ ವಿಕ್ರಮನ ಹೆಗಲಿನಿಂದ ಪಳಕ್ಕನೆ ಮಾಯವಾಗುವ ಪರಿ ಹಾಗೂ ಆ ವಿಕ್ರಮರಾಜ ಮತ್ತೊಂದು ಬೇತಾಳ ಹೆಗಲಮೇಲೇರಿಸಿಕೊಳ್ಳಲು ಹೊರಡುವ ಸ್ಥಿತಿ ಮುಂತಾದವುಗಳೆಲ್ಲಾ ಮತ್ತೆ ಮತ್ತೆ ನಮ್ಮ ಜೀವನದ ಉದ್ದಕ್ಕೂ ನೆನಪಾಗಿ ತನ್ನದೇ ಆದಂತಹ ಛಾಪು ಮೂಡಿಸುತ್ತಿದೆ ಎಂದರೆ ಅದಕ್ಕೆ ಚಂದಮಾಮ ಹಾಗೂ ಅದನ್ನು ಓದಿದ ನಮ್ಮ ಬಾಲ್ಯವೇ ಕಾರಣ.
(ಈ ತಿಂಗಳ ಢರ್ಮಭಾರತಿಯಲ್ಲಿ ಪ್ರಕಟಿತ)