Wednesday, June 4, 2008

ಊರಲ್ಲಿ ರಂಗ ಪರ ಊರಲ್ಲಿ..


"ಮೆ ಇದರ್ಸೆ ಏಕ್ ಮೈಲ್ ಸಕ್ತಾ ... .... ...?". ಹೊಸನಗರದ ಗೋ ಸಮ್ಮೇಳನದಲ್ಲಿ ಮೀಡಿಯಾ ಸೆಂಟರ್ರಿನ ಕಂಪ್ಯೂಟರ್ ಮುಂದೆ ಕುಳಿತುಕೊಂಡು ನ್ಯೂಸ್ ಮಾಡುತ್ತಾ ಇದ್ದಾಗ ಹಿಂದಿನಿಂದ ಒಂದು ದನಿ ಕೇಳಿಸಿತು. ದನಿ ಬಂದತ್ತ ತಿರುಗಿ ನೊಡಿದೆ. ಶ್ವೇತ ವಸ್ತ್ರದಾರಿಯಾದ ಸುಮಾರು ಅರವತ್ತು ವಯಸ್ಸಿನ ವ್ಯಕ್ತಿ ನಿಂತಿದ್ದರು. "ಆವೋ.. ಬೈಟೋ" ಎಂದು ಹೇಳಿದೆ. " ನಹಿ, ನಹಿ ಮುಝ್ಕೋ ಕಂಪ್ಯೂಟರ್ ಕಾಮ್ ಆತಾ ನಹಿ, ಆಪ್ ಮೆರೆಲಿಯೆ ಕಾಮ್ ಕರ್ನಾ" ಎಂದು ಹೇಳಿತು. ಸರಿ ನಾನಿದ್ದದ್ದು ಆ ಕೆಲಸಕ್ಕಾಗಿಯೇ ಎಂದು ಹೇಳಿ ಅವರ ಕೆಲಸ ಮುಗಿಸಿಕೊಟ್ಟೆ. ಅವರು ಥ್ಯಾಂಕ್ಸ್ ಹೇಳಿ ಹೊರಟು ಹೋದರು. ಅದೇ ದಿನ ಸಾಯಂಕಾಲ ಆ ದಿನದ ನ್ಯೂಸ್ ಟೈಪ್ ಮಾಡಿ ಮೈಲ್ ಗೆ ಪೋಟೋ ಅಟ್ಯಾಚ್ ಮಾಡುವಾಗ ಅದರಲ್ಲಿದ್ದ ಈ ವ್ಯಕ್ತಿ ಬೆಳಿಗ್ಗೆ ಬಂದಿದ್ದರಲ್ಲ ಎಂದು ನೊಡಿದರೆ, ಅರೆ ಹೌದು ಅವರು ಒರಿಸ್ಸಾದ ಕ್ಯಾಬಿನೆಟ್ ದರ್ಜೆ ಸಚಿವರು. ಪಕ್ಕದಲ್ಲಿದ್ದ ವರದಿಗಾರನಿಗೆ ಕರೆದು ಘಟನೆ ಹೇಳಿದೆ. " ಅಯ್ಯೋ ಬೆಳಿಗ್ಗೆ ಈತ ನನ್ನ ಬಳಿ ಬಂದು ಮೈಲ್ ಕಳುಹಿಸಬಹುದಾ ಅಂತ ಕೇಳಿದ " ಇಲ್ಲಿ ಅಲೋ ಇಲ್ಲ ಅಂತ ಕಳುಹಿಸಿದನಲ್ಲ ಮಾರಾಯ" ಎಂದು ಅಲವತ್ತುಕೊಂಡ.


ಗುಲ್ಬರ್ಗಾದ ಗಂವ್ಹಾರದಲ್ಲಿ ನಡೆದ ಶಿವಸತ್ರದ ಕಾರ್ಯಕ್ರಮದಲ್ಲಿ ನನ್ನದು ಮೀಡಿಯಾ ಸೆಂಟರ್‍ ನಲ್ಲಿ ನ್ಯೂಸ್ ತಯಾಋ ಮಾಡಿ ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಕಳುಹಿಸುವ ಕೆಲಸ. ಭಾರತೀಶ, ದತ್ತಿ, ಮತ್ತಿಗಾರು ನಾಗರಾಜ ಸೇರಿದಂತೆ ನಾಲ್ಕು ಜನರ ಟೀಂ ನಮ್ಮದು. ವಿಜಯಕರ್ನಾಟಕದ ರಾ.ಭಡ್ತಿ ಬೆಂಗಳೂರಿನಿಂದ ಸಲಹೆ ಸೂಚನೆ ನೀಡುತ್ತಿದ್ದರು. ಒಟ್ಟು ೯ ದಿನಗಳ ಕಾರ್ಯಕ್ರಮ. ರಣಬಿಸಿಲಿನ ನಡುವೆ ಸೇವಾ ದೃಷ್ಟಿಯಲ್ಲಿ ಕೆಲಸ ಮಾಡುವ ನಮಗೆ ಆದ್ಯಾವುದೋ ಹೇಳಲಾರದ ಆನಂದವೊಂದನ್ನು ಬಿಟ್ಟರೆ ಮತ್ಯಾವ ಲಾಭವೂಇಲ್ಲ. ಕಾರ್ಯಕ್ರಮದ ನಾಲ್ಕನೇ ದಿನ ನಲವತ್ತು ವಯಸ್ಸಿನ ಬಿಳಿ ಧಿರಿಸು ದರಿಸಿದ ವ್ಯಕ್ತಿಯೊಬ್ಬ ಮೀಡಿಯಾ ಸೆಂಟರ್ರಿಗೆ ಬಂದರು. ಗಡ್ಡ ಬಿಟ್ಟಿದ್ದ ದಪ್ಪ ವ್ಯಕ್ತಿ ಎಲ್ಲಿ? ಎಂದು ನಮ್ಮನ್ನು ಕೇಳಿದರು. ದತ್ತಿ ಲಚ್ಚಣ್ಣನನ್ನು ಹುಡುಕುತ್ತಿದ್ದಾರೆ ಎಂದು ನಮಗೆ ತಿಳಿಯಿತು. ಅವರು ನ್ಯೂಸ್ ಗೆ ಹೋಗಿದ್ದಾರೆ ಎಂದು ಹೇಳಿಯಾಯಿತು. ನಲವತ್ತರ ಯುವಕನಿಗೆ ತಳಮಳ, ಕೂತಲ್ಲಿ ಕೂರಲಾರ ನಿಂತಲ್ಲಿ ನಿಲ್ಲಲಾರ. ಅವರ ಚಡಪಡಿಕೆಯನ್ನು ನೋಡಿ ನಾನು ಏನಾಗಬೇಕಿತ್ತು ? ಅಂತ ಕೇಳಿದೆ. ನನಗೆ ಇನ್ನರ್ಧ ಗಂಟೆಯಲ್ಲಿ ವೇದಿಕೆಯನ್ನೇರಿ ಭಾಷಣ ಮಾಡಬೇಕೆಂದು ಶ್ರೀಗಳಿಂದ ಅಣತಿ ಬಂದಿದೆ. ಆದರೆ ಏನು ಮಾತನಾಡಬೇಕೆಂದು ಗೊತ್ತಿಲ್ಲ, ಗಡ್ಡಬಿಟ್ಟಿದ್ದಾರಲ್ಲ ಅವರು ಬರೆದುಕೊಡುತ್ತೇನೆ ಎಂದಿದ್ದರು, ಆದರೆ ಅವರು ಕಾಣಿಸುತ್ತಿಲ್ಲ. ನೀವು ಸ್ವಲ್ಪ ಭಾಷಣ ಬರೆದುಕೊಡುತ್ತೀರಾ? ಎಂದು ಕೇಳಿದರು. ಆಯಿತು ಅದರಲ್ಲೇನಿದೆ ಮಹಾ ಎಂದು ಪಟಪಟ ಟೈಪ್ ಮಾಡಿ ಪ್ರಿಂಟ್ ತೆಗೆದು ಕೊಟ್ಟೆ. ಖುಷಿಯಾದ ಅವರು ಉಷ್ಹಪ್ಪಾ ಎಂದು ಹೊರಟು ಹೋದರು. ಅರ್ದ ಗಂಟೆಯ ನಂತರ ನನ್ನ ಮಾತು ವೇದಿಕೆಯಲ್ಲಿ ಮೊಳಗುತ್ತಿತ್ತು.
ದತ್ತಿ ಲಚ್ಚಣ್ಣ ಬಂದ ನಂತರ ಭಾಷಣದ ಕತೆ ಹೇಳಿದೆ. ಅವರು " ಅಯ್ಯೊ ಹೌದು ನಮ್ಮ ಹೊಸನಗರದ ಶಾಸಕ ಹಾಲಪ್ಪ , ಅವರ ಪಿ.ಎ ಬಂದಿಲ್ಲ ಭಾಷಣ ಬರೆದುಕೊಡಿ ಎಂದಿದ್ದರು ನಾನು ಮರೆತೆ . ಎಂದ.
ಆ ಭಾಷಣ ಬರೆದುಕೊಟ್ಟಿದ್ದರ ಮಹತ್ವ ಕೊನೆಗೆ ಕಾರ್ಯಕ್ರಮ ಮುಗಿಯುವವರೆಗೂ ಅದೆಂತೋ, ನರಿಬೋಳ, ದುಡ್ಡಪ್ಪ ಗೌಡ ... ಹೀಗೆ ಹತ್ತಾರು ಬಿಳಿ ವಸ್ತ್ರದ ಜನರ ಧ್ವನಿಯಾದೆ.
ಈಗ ಹಾಲಪ್ಪ ಕ್ಯಾಬಿನೆಟ್ ದರ್ಜೆ ಸಚಿವರು. ನಾನು ಇಲ್ಲಿ ತೌಡು ಕುಟ್ಟುತ್ತಿದ್ದೇನೆ.
ಅವರುಗಳಿಗೆ ಪರಊರಿನಲ್ಲಿಯೂ ರಂಗನಾಗುವುದು ಗೊತ್ತು , ನಾನು ಊರಿನಲ್ಲಿಯೇ ಮಂಗ ನಾಗಿದ್ದೇನಾ ಅಂತ ಗುಮಾನಿ...

Monday, June 2, 2008

ಮೇಲ್ಮಾತು .......ಹೀಗೆ ಸುಮ್ಮನೆ


ನಾನಂತೂ ವಾಚಾಳಿ, . ಎಷ್ಟರಮಟ್ಟಿಗೆ ಎಂದರೆ ನಿದ್ರೆಯಲ್ಲಿಯೂ ದೊಡ್ಡದಾಗಿ ಮಾತನಾಡುತ್ತೇನೆ. ಯಾರೂ ಸಿಗದಿದ್ದರೆ ಮನಸ್ಸಿನಲ್ಲೇ ಮಾತಾಡುತ್ತಿರುತ್ತೇನೆ. ಎಲ್ಲರೂ ಹಾಗೆ ಮಾತನಾಡುವುದಿಲ್ಲ. ಕೆಲವರು ಹೆಚ್ಚು ಮಾತನಾಡುತ್ತಾರೆ. ಅದೆಲ್ಲಾ ಮಾತಿನ ಮಾತಾಯಿತು. ಈಗ ನಾನು ಹೇಳ ಹೊರಟಿರುವುದು ಮಾತಿನ ಮೇಲಿರದಿದ್ದರೂ ಅಂತಹ ಹೆಸರನ್ನು ಗಳಿಸಿಕೊಂಡ ಮೇಲ್ಮಾತಿನ ಕುರಿತು. ನಮ್ಮ ಹಳ್ಳಿಯ ಜನರಲ್ಲಿ ಬಹಳಷ್ಟು ಜನರದ್ದು ಈ ಹವ್ಯಾಸ, ಪೇಟೆಯಲ್ಲಿಯೂ ಇಲ್ಲವೆಂದಲ್ಲ ನನಗೆ ಗೊತ್ತಿಲ್ಲ. ಶಿವಾಯಿ, ಶಿವ, ಏನಪಾ ಅಂದ್ರೆ ಗೊತ್ತಾಯ್ತ ಇಲ್ಯ, ಏನ್ ಹೇಳು?, ಮತ್ತೆ, ಸರ್ವೇ ಸಾಮಾನ್ಯವಾಗಿ, ಬೇಜಾರು ಮಾಡ್ಕೋಬೇಡಿ, ಹೀಗೆ ನೂರಾರು ತರಹದ ಮೇಲ್ಮಾತುಗಳಿವೆ. ಅವು ಒಮ್ಮೊಮ್ಮೆ ಹಾಸ್ಯ ಸನ್ನಿವೇಷವನ್ನು ಸೃಷ್ಟಿಸಿಬಿಡುತ್ತವೆ. ಕೆಲವೊಮ್ಮೆ ಸಿಟ್ಟಿನ ರಂಪಾಟಕ್ಕೂ ಕಾರಣವಾಗುತ್ತದೆ.

ಸಾಗರದ ಸಮೀಪದ ಕುಂಟಗೋಡಿನಲ್ಲಿ ಯಜಮಾನರೊಬ್ಬರಿದ್ದರು. ಅವರಿಗೆ ಮಾತಿನ ಆರಂಭಕ್ಕೊಂದು "ಶಿವ" ಅಂತ್ಯಕ್ಕೊಂದು ಶಿವ ಸೇರಿಸದಿದ್ದರೆ ಮಾತನಾಡಲೇ ಬರುತ್ತಿರಲಿಲ್ಲ. ಒಮ್ಮೆ ಅವರಿಗೆ ತಹಶೀಲ್ದಾರರನ್ನು ಕಾಣುವ ಕೆಲಸವಿತ್ತು. ಸರಿ ತಲೆಯಮೇಲೊಂದು ಟೋಪಿ ಬಗಲಲ್ಲೊಂದು ಚೀಲ ತೂಗಿಸಿಕೊಂಡು ಆಫೀಸಿನ ಒಳಗೆ ಯಾರನ್ನೂ ಕೇಳದೆ ನುಗ್ಗಿದರು. ತಹಶೀಲ್ದಾರರೋ ಹಮ್ಮಿನ ಗಿರಾಕಿ. ಆದರೆ ನುಗ್ಗಿದವರು ವಯಸ್ಸಾದ ಜನರಾದ್ದರಿಂದ ಸ್ವಲ್ಪ ಸಿಟ್ಟು ನುಂಗಿಕೊಂಡು "ಯಜಮಾನ್ರೆ ಏನಾಗ್ಬೇಕು?" ಅಂತ ಕೇಳಿದರು. ಇವರು" ಶಿವ, ನಮ್ಮ ತೋಟದ ಪಹಣಿಯಲ್ಲಿ ಸರ್ವೆ ನಂಬರ್ರು ತಪ್ಪಾಗಿ ಎಂಟ್ರಿ ಆಗಿದೆ ಶಿವ". ಈಗ ತಹಶೀಲ್ದಾರರು ಸ್ವಲ್ಪ ಗರಂ ಆದಂತೆ ಕಂಡುಬಂದರು. ಇವರ ಪ್ರಶ್ನೆಗೆ ಉತ್ತರಿಸಲಿಲ್ಲ. ಮತ್ತೆ ಯಜಮಾನರು, "ಅಲ್ಲಾ ಶಿವ, ಶ್ಯಾನುಬೋಗಂಗೆ ಹೇಳಿದರೆ ದುಡ್ಡು ಕೊಡಿ ಸರಿ ಮಾಡ್ತೀನಿ ಅಂತಾನೆ, ಇದು ಸರೀನಾ ಶಿವ" ಎಂದು ರಾಗ ಎಳೆದರು. ತಹಶೀಲ್ದಾರರಿಗೆ ಅದೆಲ್ಲಿತ್ತೊ ಸಿಟ್ಟು" ಎನ್ರೀ ಯಜಮಾನ್ರೆ ಏನೋ ವಯಸ್ಸಾಗಿದೆ ಅಂತ ಗೌರವ ಕೊಟ್ರೆ ತಲೆ ಹರಟೆ ಮಾಡ್ತೀರಾ?" ಅಂತ ಗರಂ ಆದರು. " ಅಯ್ಯ ಶಿವ ಅದ್ಯಾಕೆ ಹಂಗೆ ರೇಗ್ತೀರಿ ಶಿವ ನಾನೇನು ತಪ್ಪು ಮಾಡ್ದೆ..? " ಅಂತ ತಹಶೀಲ್ದಾರರ ಸಿಟ್ಟು ಅರ್ಥವಾಗದೆ ಯಜಮಾನರು ಅಲವತ್ತುಕೊಡರು. ಈಗ ಅದೆಲ್ಲಿತ್ತೋ ತಹಶೀಲ್ದಾರರಿಗೆ " ಮುಚ್ಚಯ್ಯಾ ಮುದುಕಾ.. ಸುಮ್ನೆ ನಡಿಯಾಚೆ" ಅಂತ ರೇಗಾಡಿ ಅಕ್ಷರಶಃ ಯಜಮಾನರನ್ನು ಹೊರದಬ್ಬಿದರು. ತಹಶೀಲ್ದಾರರ ಮಂಗಾಟ ಅರ್ಥವಾಗದ ಯಜಮಾನರು ಜವಾನನ ಬಳಿ ಬಂದು ಸವಿವರವಾಗಿ ಹೇಳಿ "ಶಿವ ಅವರು ಯಾಕೆ ಹಿಂಗಾಡ್ತಾರೆ ಶಿವ ?" ಅಂತ ಕೇಳಿದಾಗ ಗುಟ್ಟು ರಟ್ಟಾದದ್ದು. ತಹಶೀಲ್ದಾರರ ಜೆಸರು ಶಿವಪ್ಪ ಅಂತ. ಯಜಮಾನರು ಮಾತು ಮಾತಿಗೆ ಮೆಲ್ಮಾತಾಗಿ ಶಿವ ಶಿವ ಅಂತ ಹೇಳಿದ್ದನ್ನು ಅವರು ತಮ್ಮನ್ನು ಏಕವಚನದಿಂದ ಹೆಸರು ಹೇಳಿ ಕೂಗುತ್ತಿದ್ದಾರೆ ಯಜಮಾನರು ಅಂತ ಅಂದುಕೊಂಡಿದ್ದರು. ಕೊನೆಗೂ ಯಜಮಾನರು " ಶಿವಾ ಎಂತ ಕಾಲ ಬಂತು ಶಿವಾ ನಿನ್ನ ಹೆಸರನ್ನೂ ಹೆಳುವಂತಿಲ್ಲ ಶಿವಾ" ಎನ್ನುತ್ತಾ ಜಾಗ ಖಾಲಿ ಮಾಡಿದರು.

(-ಮುಂದುವರೆಯುತ್ತದೆ)

Sunday, June 1, 2008

ಬಡ ಬ್ರಾಹ್ಮಣ ಮತ್ತು ಬಡ ಸಾಹಿತಿಗಳಿಬ್ಬರೂ ಬೆಂಕಿಯಂತಂತೆ


ಒಂದಾನೊಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನು " ಎಂದು ಆರಂಭವಾಗುವ ಕತೆಗಳನ್ನು ನೀವು ಓದಿದ್ದೀರಿ. ಅದೇ ರೀತಿ ಕಾಸಿಲ್ಲದ ಸಾಹಿತಿಯ ಬಗ್ಗೆಯೂ ವ್ಯಂಗ್ಯ ಹಾಸ್ಯಬರಹಗಳನ್ನು ಓದಿರುತ್ತೀರಿ. ಇದೇಕೆ ಬ್ರಾಹ್ಮಣನನ್ನು ಹಾಗೂ ಸಾಹಿತಿಗಳನ್ನೂ ಬಡವನನ್ನಾಗಿ ಚಿತ್ರಿಸುತ್ತಿದ್ದರು ಅಂತ ಒಮ್ಮೆಯಾದರೂ ಯೋಚಿಸಿಯೇ ಯೋಚಿಸುತ್ತೀರಿ. ನಿಮ್ಮದೇ ಆದ ಉತ್ತರ ಸಿಕ್ಕಿರಲೂಬಹುದು. ಆದರೆ ಇದೂ ಕೂಡ ಒಂದು ಉತ್ತರ ಎಂಬ ಸತ್ಯ ನಿಮ್ಮೆದುರಿಗೆ ಇದೆ.
ಮನು ಮಾಡಿದ ನಾಲ್ಕು ವರ್ಣಗಳು ಹುಟ್ಟಿನಿಂದಲ್ಲ. ಅದು ಮನಸ್ಥಿತಿಯಿಂದ. ಅವರವರ ಮನಸ್ಥಿತಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಂತರದ ದಿನಗಳಲ್ಲಿ ಅವುಗಳು ಜಾತಿಯೆಂಬ ರೂಪ ಪಡೆದು ಹುಟ್ಟಿನಿಂದಲೇ ಅಂಟಿಕೊಂಡು ಬಿಡುತ್ತವೆ. ಬ್ರಾಹ್ಮಣ ಮನಸ್ಥಿತಿಯೆಂದರೆ, ಪುಂಖಾನು ಪುಂಖವಾದ ಯೋಚನೆಯ ಮಿದುಳು. ಮಿದುಳಿಗೆ ಕ್ಷಣ ಕ್ಷಣಕ್ಕೂ ಆಹಾರ ಬೇಕು. ಕ್ಷತ್ರಿಯ ಮನಸ್ಥಿತಿಯೆಂದರೆ ಧೈರ್ಯ, ಹಿಂದು ಮುಂದಿನ ಆಲೋಚನೆ ಯಿಲ್ಲ ದ ಹುಂಬತನ. ವೈಶ್ಯ ಮನಸ್ಥಿತಿಯೆಂದರೆ ಕುಂತಿದ್ದಕ್ಕೂ ನಿಂತಿದ್ದಕ್ಕೂ ಲಾಭ ನಷ್ಟದ ಲೆಕ್ಕಾಚಾರ, ಶೂದ್ರ ಮನಸ್ಥಿತಿಯೆಂದರೆ ಹಿಡಿದ ಕೆಲಸವನ್ನು ಬೇಸರವಿಲ್ಲದೆ ಎಡಬಿಡದೆ ಮಾಡುವುದು. ಈ ಎಲ್ಲಾ ಗುಣಗಳೂ ಎಲ್ಲರಲ್ಲಿಯೂ ಇದ್ದು, ಒಂದು ಗುಣ ಇಡೀ ವ್ಯಕ್ತಿತ್ವವನ್ನು ಆಳುತ್ತಿರುತ್ತದೆ. ಬ್ರಾಹ್ಮ್ಣಣ ವ್ಯಕ್ತಿತ್ವ ನಿಮ್ಮನ್ನಾಳುತ್ತಿದ್ದರೆ, ನಿಮಗೆ ಯೋಚಿಸಿದಂತೆಲ್ಲಾ ಯೋಚನೆಗಳ ಸರಣಿಯೇ ನಿರ್ಮಾಣವಾಗುತ್ತದೆ. ಪಾಸಿಟೀವ್ ಯೋಚನೆ ಶುರು ಮಾಡಿದರೆ ಅದೇ ರಿಸಲ್ಟ್. ನೆಗೆಟೀವ್ ಯೋಚನೆ ಬೆನ್ನತ್ತಿದರೆ ಅದೇ ರಿಸಲ್ಟ. ಹೆದರಿಕೆಯ ಕುರಿತು ಯೋಚನೆ ಆರಂಭಿಸಿದರೆ ಅದಕ್ಕೂ ಅಂತ್ಯವೇ ಇಲ್ಲ. ಈ ಮನಸ್ಥಿತಿಯವರಿಗೆ ಅದ್ಭುತ ಕಲ್ಪನಾಶಕ್ತಿ. ಹಾಗಾಗಿ ಹಿತೋಪದೇಶಕ್ಕೂ ಶಕ್ತರು. ಕತೆ ಕಟ್ಟುವುದಕ್ಕೂ ನಿಸ್ಸೀಮರು. ಆದರೆ ಈ ಮನಸ್ಥಿತಿಯವರಿಗೆ ಪಾಪ ಪುಣ್ಯ ಜಾಸ್ತಿ, ಲಾಭ ನಷ್ಟಗಳ ಅಂದಾಜು ಇಲ್ಲ. ಹಿಡಿದ ಕೆಲಸ ನಿರಂತರ ಮಾಡಲಾರರು. ಅವರ ಹಿಡಿತವಿಲ್ಲದ ಯೋಚನಾಲಹರಿಗೆ ಧ್ಯಾನ, ಸಂದ್ಯಾವಂದನೆಯಂತಹ ಕ್ರಿಯೆಗಳ ಮುಖಾಂತರ ಕನಿಷ್ಟ ದಿನಕ್ಕೊಮ್ಮೆಯಾದರೂ ಬ್ರೆಕ್ ಹಾಕಿದರೆ ಸ್ವಸ್ಥ ರಾಗಿರ ಬಲ್ಲರು. ಇಲ್ಲದಿದ್ದರೆ ನಿರಂತರ ಯೋಚಿಸಿ ಅಧೋಗತಿಗಿಳಿದುಬಿಡುತ್ತಾರೆ.ಸಾಹಿತಿಗಳೂ ಈ ಬ್ರಾಹ್ಮಣ ಮನಸ್ಥಿತಿಯ ಜನರು ಆಗಿರುವುದರಿಂದ ಮಿಕ್ಕ ಜನರ ಆಲೋಚನಾ ಮಟ್ಟಕ್ಕಿಂತ ಮೇಲ್ಮಟ್ಟದ ಆಲೋಚನೆ ಇವರಾದ್ದರಿಂದ. ಜನಸಾಮಾನ್ಯರಿಂದ ಅಹಂಕಾರದವರು ಎಂಬ ಪಟ್ಟ ಕಟ್ಟಿಕೊಂಡು ತಮ್ಮ ಜೀವನವನ್ನು ಲಾಭ ನಷ್ಟಗಳ ವ್ಯವಹಾರಕ್ಕೆ ಇಳಿಸಲಾರದೆ ಅಸಾಹಾಯಕರಾಗಿ ಆರ್ಥಿಕ ಹಿನ್ನಡೆಹೊಂದುತ್ತಾರೆ
ಆದ್ದರಿಂದ ಬಡ ಬ್ರಾಹ್ಮಣ ಹಾಗೂ ಸಾಹಿತಿ ಬೆಂಕಿಯಂತೆ ತಾವು ಉರಿದು......ಬೆಚ್ಚನೆಯ ಬೆಳಕು ನೀಡಬಲ್ಲರು, ಕೋಪಾಗ್ನಿಯಾದರೆ ಸುಡಲೂ ಬಲ್ಲರು. ಉತ್ತಮ ಸಾಹಿತಿ ಅಥವಾ ಬ್ರಾಹ್ಮಣ ಪರಿಪೂರ್ಣ ಅಂತ ಕಂಡು ಹಿಡಿಯಲು ಆತನ ಆರ್ಥಿಕ ಪರಿಸ್ಥಿತಿ ನೋಡಿದರೆ ಸಾಕು. ಉತ್ತಮ ಆರ್ಥಿಕ ಪರಿಸ್ಥಿತಿ ಇದ್ದೂ ಒಳ್ಳೆಯ ಸಾಹಿತ್ಯ ಸೃಷ್ಟಿಕರ್ತ ನೆಂದರೆ ಆತನಿಗೆ ಶ್ರೀಮಂತಿಕೆ ವಂಶಪಾರಂಪರ್ಯ ಆಗಿರುತ್ತದೆ. ಅವನ ಅಂತ್ಯಕಾಲದಲ್ಲಿ ಆತ ದಿವಾಳಿಯಂಚಿಗೆ ಬಂದರೂ ಆಶ್ಚರ್ಯವಿಲ್ಲ.
ಆದ್ದರಿಂದ ಬಡ ಬ್ರಾಹ್ಮ್ಣಣ ಬಡ ಸಾಹಿತಿ ಎಂದು ಆರಂಭದಲ್ಲಿ ಶುರುವಾಗಿದ್ದು.
ಇವೆಲ್ಲಾ ತುಂಬಾ ರಗಳೆ ಅಂತ ಅನಿಸಿತಾ ಸಾರಿ ನೀವು ಶೂದ್ರ ಮನಸ್ಥಿತಿಯವರು ಎಂದರ್ಥ. ನೀವು ನಿಮ್ಮಷ್ಟಕ್ಕೆ ಸುಖಿಗಳು .ಎಂಜಾಯ್ ಯುವರ್ ಲೈಫ್.

Friday, May 30, 2008

ಒಂಟಿತನ ಮತ್ತು ಪ್ರಪಂಚ


ಗುಂಪಿನಲ್ಲಿದ್ದಾಗ ಉನ್ಮಾದವಿರುತ್ತದೆ. ಉತ್ಸಾಹವಿರುತ್ತದೆ. ನಿಮ್ಮ ಗುಂಪಿಗೆ ವಿರುದ್ಧವಾಗಿ ಮತ್ತೊಂದು ಗುಂಪು ಇದ್ದರಂತೂ ಇನ್ನಷ್ಟು ಉಮೇದು ಇರುತ್ತದೆ. ಒಂಟಿಯಾಗಿದ್ದಾಗ ಅದು ಸ್ವಲ್ಪ ಕಷ್ಟ. ಇನ್ನು ನೀವು ಹುಟ್ಟಾ ಮೌನಿಗಳಾದರೆ ಗುಂಪೂ ಒಂದೇ ಒಂಟಿತನವೂ ಒಂದೆ. ಒಂಟಿಯಾಗಿ ಒಳಗೊಳಗೆ ಖುಷಿಯಾಗಿ ನಗುನಗುತ್ತಾ ಇರುವವರು ಎಲ್ಲಿಯೂ ಗೆಲ್ಲಬಹುದು. ಅದೇ ವಾಚಾಳಿ ಸ್ವಭಾವ ನಿಮ್ಮದಾಗಿದ್ದರೆ ಒಂಟಿಯಾಗುವ ಸಮಯಕ್ಕೆ ಬಹಳ ಮಹತ್ವ. . ಅದ್ಯಾವುದೋ ಚಿಂತೆ ನಿಮಗೆ ಕಾಡುತ್ತಿದೆ ಆದರೆ ಜನರೆದಿರು ಹೇಳಲಾಗುತ್ತಿಲ್ಲ ಎಂಬಂತಹ ಯೋಚನೆಗಳು ಮುತ್ತತೊಡಗಿದರೆ ಅಲ್ಲಿಗೆ ಲೈಫ್ ಕಷ್ಟಕರವಾದಂತೆ. ಅದೇನೂ ಚಿಂತೆಯೇ ಆಗಬೇಕೆಂದಿಲ್ಲ. ಗಂಡ ತಂದಿರುವ ನೆಕ್ ಲೆಸ್, ಬಂಗಾರದ ಬಳೆ ಬೇರೆಯವರಿಗೆ ತೋರಿಸಿದ ಹೊರತೂ ಸಮಾಧಾನವಾಗದಿದ್ದಂತಹ ಮನಸ್ಥಿತಿ ತಲುಪಿದರೆ ಜೀವನ ರಗಳೆಗೆ ಬಿದ್ದಂತೆ. ನಾವು ಸಹಜವಾಗಿ ತೋರಿಸುತ್ತಿದ್ದೇವೆ ಎಂಬ ವಸ್ತುಗಳು ಎದುರಿದ್ದವರಿಗೆ ಅವಮಾನ ಅಂತ ಅನ್ನಿಸಿ ಬೇಸರದ ಸ್ವರ ಅಥವಾ ಮುಖ ಹೊರಹೊಮ್ಮಲು ಸಾಕು. ಗುಂಪಿನಿಂದ ಹೊರಬಂದು ಒಂಟಿತನದ ನಿಮ್ಮ ಚಿಂತೆಗೆ ಇಷ್ಟು ಸಾಕು .ನಾನು ಇಲ್ಲಿಯವರೆಗೆ ಅಕ್ಕಿಬೆಳೆದಿಲ್ಲ ಬಟ್ಟೆ ನೇಯ್ದಿಲ್ಲ ಆದರೂ ನನ್ನ ಇಲ್ಲಿಯವರೆಗಿನ ಜೀವನದಲ್ಲಿ ಅಂತಹ ನಿತ್ಯಾವಶ್ಯಕ ವಸ್ತುಗಳು ನಿರಂತರ ಪೂರೈಕೆಯಾಗುತ್ತಿವೆ. ಎಂಬಂತ ಆಲೋಚನೆಗಳಾದರೂ ಆದೀತು, ಬರ್ಬಾದ್ ಆಗಲು. ಆವಾಗ ಆಗುವುದಿಷ್ಟೆ ಗುಂಪಿನಲ್ಲಿದ್ದಾಗ ಮರೆಯುತ್ತವೆ. ಹಾಸಿಗೆಗೆ ತಲೆಕೊಟ್ಟಾಗ, ಸಂಡಾಸಿನಲ್ಲಿ ಕಾಲುಮಡಚಿದಾಗ, ಊಟಕ್ಕೆ ಕುಂತಾಗ ಧುತ್ತನೆ ಕಾಡತೊಡಗುತ್ತವೆ. ಅದು ಟೆನ್ಷನ್ ರೂಪ ತಾಳಿ ಏನು ಇದು? ಪರಿಹಾರ ಹೇಗೆ? ಎಂಬ ನೂರಾರು ಯೋಚನೆ. ಒಂದಿಷ್ಟು ಜನ ವೈದ್ಯರ ಬಳಿ ಒಂದಿಷ್ಟು ಜನ ಶಾಸ್ತಿಗಳ ಬಳಿ ಮತ್ತೊಂದಿಷ್ಟು ಜನ ಸಲಹೆಕಾರರ ಬಳಿ ಓಡುತ್ತಾರೆ. ಸಮಸ್ಯೆ ಇರುವುದು ನಮ್ಮಲ್ಲಿ ಎಂದು ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇವಕ್ಕೆಲ್ಲಾ ಮೀರಲು , ಒಂಟಿತನವನ್ನು ಇಷ್ಟಕರ ಮಾಡಿಕೊಳ್ಳಬೇಕು . ಅದಕ್ಕೆ ಸುಲಭೋಪಾಯ ವೆಂದರೆ ವರ್ತಮಾನವನ್ನು ಗಮನಿಸುವುದು ಮತ್ತು ವರ್ತಮಾನವನ್ನಷ್ಟೇ ಆಲೋಚಿಸುವುದು. ಮತ್ತು ವರ್ತಮಾನವನ್ನೂ ಕೂಡ ಅತ್ಯಂತ ಕಡಿಮೆ ಯೋಚಿಸುವುದು. ಒಂಟಿತನದಲ್ಲಿ ಉತ್ಸಾಹದಿಂದಿರುವ ವ್ಯಕ್ತಿ ಹಾಗೂ ಅವನ ಆಲೋಚನೆಗಳು ಮುಂದೆ ಗುಂಪಿನಲ್ಲಿ ಸೂಪರ್ ಸಕ್ಸಸ್, ಅದೇ ಗುಂಪಿನ ಆಲೋಚನೆಗಳು ಒಂಟಿಯಾದಾಗ ಫೆಲ್ಯೂರ್. ಹಾಗಾಗಿ ಒಂಟಿಯಾಗಿ ಒಳ್ಳೆ ಆಲೋಚನೆ ಮಾಡಿ ಮತ್ತು ಗುಂಪಿನಲ್ಲಿ ಹೀರೋಗಳಾಗಿ.. ಗುಂಪಿನಲ್ಲಿ ಹೀರೋಗಳಾಗಿ ನಂತರ ಒಂಟಿಯಾದಾಗ ಜೀರೋಗಳಾಗಬೇಡಿ ಕಾರಣ ನಾವು ಇಲ್ಲಿಗೆ ಬಂದಿದ್ದು ಒಂಟಿ ಹೋಗುವುದು ಒಂಟಿ ಮಿಕ್ಕೆಲ್ಲ ನೆಪಗಳಷ್ಟೆ.
ಕೊನೆಯದಾಗಿ ಈ ಮೇಲಿನ ಸಲಹೆಗಳು ನಿಮಗೆ ಇಷ್ಟವಾದರೆ ನೀವು ಸಮಸ್ಯೆಯಲ್ಲಿದ್ದೀರಿ ಎಂದರ್ಥ. ಹಾಗಾಗಿ ಶೀಘ್ರದಲ್ಲಿ ಪರಿಹರಿಸಿಕೊಳ್ಳಿ, ರಗಳೆಯಾದರೆ ನೀವು ಸರಿಯಾಗಿದ್ದೀರಿ ಎಂದರ್ಥ ಮುಂದುವರೆಯಿರಿ . ಹ್ಯಾಪಿ ಒಂಟಿ
ನನಗೆ ಕೊನೆಯ ಸಾಲೂ ಸೇರಿದಂತೆ ಎಲ್ಲವೂ ಇಷ್ಟವಾಯಿತು. ಪರಿಹರಿಸಿಕೊಳ್ಳಬೇಕು. ನೀವು? ನನಗೆ ಗೊತ್ತಿಲ್ಲ

Thursday, May 29, 2008

ಹೊನ್ನೇಮರಡು ಪರಿಸರ ಶಿಕ್ಷಣ ಮತ್ತು ನನ್ನ ಮುಚ್ಕಣ್ಣು



ಕಣ್ಣುಮುಚ್ಚಿ ಗಮನಿಸಿ ಕೇಳಿ ಎಂದು ನೊಮಿತೋ ಮೆಡಂ ಹೇಳುತ್ತಾರೆ. ಬಿದಿರುಮಳೆಯಿಂದ ಆವರಿಸಿದ ರೌಂಡ್ ಬಯಲು ಮಂಟಪದಲ್ಲಿ ಬಣ್ಣ ಬಣ್ಣದ ಅಂಗಿತೊಟ್ಟ ಬೆಂಗಳೂರಿನ ಹಾಲುಗಲ್ಲದ ಹಸುಳೆಗಳು ಹಸಿರುಹೊದಿಕೆಯ ಕೆಳಗೆ ಕಣ್ಣುಮುಚ್ಚಿ ಕುಳಿತುಕೊಂಡರು. ನಾನೂ ಅವರ ಜತೆ ಸೇರಿಕೊಂಡೆ , ಚಿಲಿಪಿಲಿ ಹಕ್ಕಿಗಳ ಕೂಗು, ಎಣಿಸುತ್ತಾ ಸಾಗಿದೆ ಹದಿನೆಂಟು ತರಹದ ಕೂಗು ಕೇಳಿಸಿತು. ನೊಮಿತೋ ಮೆಡಂ ಈಗ ಕಣ್ಣು ಬಿಡಿ ಎಂದು ಗಡಸು ದನಿಯಲ್ಲಿ ಹೇಳಿದಾಗ ಒಲ್ಲದ ಮನಸ್ಸಿನಿಂದ ಕಣ್ತೆರೆದೆ. ಅಬ್ಬಾ ಎಷ್ಟೊಂದು ಮಜ. ಅದ್ಯಾವುದೋ ಹೊಸ ಲೋಕಕ್ಕೆ ಬಂದ ಅನುಭವ. ಒಂಟಿಮನೆಯ ಕಾಡಿನ ನಡುವೆಯೇ ವಾಸವಾಗಿರುವ ನಲವತ್ತು ವರ್ಷದ ನಾನು ಇಷ್ಟೊಂದು ಕಾಲವೂ ಹೀಗೆ ಕಣ್ಮಿಚ್ಚಿಕೊಂಡು ಹಕ್ಕಿಯ ಸ್ವರ ಕೇಳಿರಲಿಲ್ಲ . ಗುಜರಾತಿನ ನೊಮಿತು ಬೆಂಗಳೂರಿನ ಸ್ವಾಮಿಯನ್ನು ಮದುವೆಯಾಗಿ ಇಬ್ಬರೂ ಹೊನ್ನೆಮರಡು ಎಂಬ ಕುಗ್ರಾಮಕ್ಕೆ ಬಂದು ನನಗೆ ಇದನ್ನು ಹೇಳಿಕೊಡಬೇಕಾಯಿತು. ಕಣ್ಮುಚ್ಚಿ ದೇವರ ಧ್ಯಾನ ಮಾಡು ಎಂದಾಗ ಹಿರಿಯರ ಅಣತಿ ಮೀರಲಾರದೆ ಹೆದರಿಕೆಯಿಂದ ಕಣ್ಮುಚ್ಚಿಕುಳಿತು ಬೇಡದ ಆಲೋಚನೆ ತಡೆಗಟ್ಟಲಾಗದೆ ಒದ್ದಾಡಿಹೋಗಿದ್ದೆ. ದೇವರ ಎದುರಿನಿಂದ ಎದ್ದೆಳುವಾಗ ದೇಹವೆಲ್ಲಾ ಮಣಭಾರವಾದಂತೆ ಅನ್ನಿಸಿತ್ತು. ಆದರೆ ಈಗ ಹಾಗಲ್ಲ. ದೇವರು ಎಂಬ ವಿಷಯ ನಮ್ಮ ಎಣಿಕೆಗೆ ಸಿಗುವಂತಹದ್ದಲ್ಲ, ಅದರ ಮೊದಲ ಮೆಟ್ಟಿಲು ಪ್ರಕೃತಿಯಿಂದಲೂ ಏರಲು ಸಾಧ್ಯ ಅಂಬ ಸುಲುಬೋಪಾಯವನ್ನು ಹೊನ್ನೇಮರಡುವಿನಲ್ಲಿ ಕಲಿತೆ. ಅದೆಲ್ಲಾ ಇರಲಿ ಬೆಂಗಳೂರಿನ ಎಂಟು ಹತ್ತು ವರ್ಷ ವಯಸ್ಸಿನ ಬೋರ್ಡಿಂಗ್ ಸ್ಕೂಲಿನ ಮಕ್ಕಳು ಮುನ್ನೂರು ಕಿಲೋಮೀಟರ್ ದೂರದ ಹೊನ್ನೆಮರಡುವಿಗೆ ಬಂದು ಪರಿಸರವನ್ನು ಅಭ್ಯಾಸ ಮಾಡುತ್ತಾರೆ. ಈಜು ಕಲಿಯುತ್ತಾರೆ. ಗುಡ್ಡ ಹತ್ತುತ್ತಾರೆ. ನಲಿಯುತ್ತಾರೆ.ಕುಣಿಯುತ್ತಾರೆ. ಮತ್ತೆ ಸವಿನೆನಪಿನೊಂದಿಗೆ ವಾಪಾಸು ಹೋಗುತ್ತಾರೆ. ಇಲ್ಲಿ ಆಟದ ಮೂಲಕ ಪಾಠ ಕಲಿಯುತ್ತಾರೆ. ಇದೇ ಪರಿಸರದಲ್ಲಿನ ನಮ್ಮ ಮಕ್ಕಳು ಟಿ.ವಿ ಬಿಟ್ಟೇಳುವುದಿಲ್ಲ. ಕಾರ್ಟೂನ್ ನೆಟ್ವರ್ಕ್ ತುಂಬಾ ಇಷ್ಟ ಅಂತಾರೆ. ಗೀಜಗ, ಕೆಂಬೂತ ಹಸಿರು ಗಿಳಿ, ರೇಷ್ಮೆ ಹುಳ, ಗೋಪಿ ಹಕ್ಕಿ ಯಾವುದೂ ಅವುಕ್ಕೆ ಗೊತ್ತಿಲ್ಲ.

ತಪ್ಪು ನಮ್ಮದು ಅಂತ ಅನ್ನಿಸುತ್ತದೆ . ಸ್ವರ್ಗದಲ್ಲಿದ್ದ ಅವುಕ್ಕೆ ನಾವು ಕಂಪ್ಯೂಟರ್ ಕಲಿಸಲು ಒದ್ದಾಡುತ್ತೇವೆ. ಕಂಪ್ಯೂಟರ್ ಕೊನೆಗೂ ಕಲಿಯಬಹುದು ಎಂದು ಬೆಂಗಳೂರಿನ ಮಕ್ಕಳು ಪರಿಸರ ಪಾಠ ಕಲಿಯುತ್ತಿವೆ, ಒಟ್ಟನಲ್ಲಿ ದೂರದ ಬೆಟ್ಟ ನುಣ್ಣಗೆ.

Tuesday, May 27, 2008

ಅಪ್ಪಯ್ಯನ ಗಾಯಿತ್ರಿ ಮಂತ್ರ ಮತ್ತು ನನ್ನ ಅಬದ್ಧ ಪ್ರಲಾಪ


ಕೆಲಸ ಮಾಡಿ ಕೆಟ್ಟೊರಿಲ್ಲ, ಕೂತು ಹಾಳೋದೋರು ಇಲ್ಲ ಹಾಗೆಯೇ ಸಂಧ್ಯಾವಂದನೆ ಮಾಡಿ ಹಾಳೋದವರಿಲ್ಲ, ಮಾಡದೇ ಕೆಟ್ಟು ಹೋದೋರು ಇಲ್ಲ. ದೇವರು ಕೆಲಸ ಜಪತಪ ಪೂಜೆ ಅವೆಲ್ಲಾ ಅವರವರಿಗೆ ಬಿಟ್ಟಿದ್ದು. 78 ವರ್ಷದ ನನ್ನ ಅಪ್ಪಯ್ಯ ಮಾತ್ರಾ ನನಗೆ ಬುದ್ದಿ ಬಲ್ಲಾದಲ್ಲಿಂದ ಬೆಳಿಗ್ಗೆ ಆರು ಗಂಟೆಗೆ ಎದ್ದು ಕಾಫಿ ಕುಡಿದು ಒಂದು ಕವಳ ಹಾಕಿ ನಂತರ ಖುಷಿ ಖುಷಿಯಾದ ನಾಲ್ಕು ಮಾತಾಡಿ ಸ್ನಾನಕ್ಕೆ ಹೋಗುತ್ತಾರೆ. ಅನಾಮತ್ತು ಎರಡು ತಾಸು ಪೂಜೆ ಜಪ ತಪದ ನಂತರ ಗರಂ ಆಗುತ್ತಾರೆ. ಆವಾಗ ಬೆಳ್ಳಣ್ಣೆಯ ಶಂಭುಲಿಂಗೇಶ್ವರ ನ ಮುಖಭಾವ ಅವರದ್ದು. ಮತ್ತೆ ಸರಳಆಗಬೇಕು ಅಂದರೆ ಮಧ್ಯಾಹ್ನ ಊಟ ಮಾಡಿ ಮಲಗೇಳಬೇಕು. ಅವರ ಆ ಗರಂ ವರ್ತನೆಗೆ ಎರಡು ತಾಸಿನ ಪೂಜೆಯೇ ಕಾರಣ ಅಂತ ಅವರ ಐದೂ ಮಕ್ಕಳಾದ ನಮ್ಮೆಲ್ಲರ ಒಟ್ಟೂ ಅಭಿಮತ, ಗಾಯಿತ್ರಿ ಜಪದಿಂದ ಶಕ್ತಿ ಬರುತ್ತದೆ ಅಂತ ಎಲ್ಲರ ಆಂಬೋಣ . ಆದರೆ ಶಕ್ತಿ ಬರುತ್ತದೆ ಅಂತ ನಂಬಿಕೊಂಡವರ ಮುಖವಂತೂ ಖಂಡಿತಾ ಘನಗಂಬೀರವಾಗುತ್ತದೆ. ಇವತ್ತು 108 ಗಾಯಿತ್ರಿ ಜಪ 216 ಅಷ್ಟಾಕ್ಷರಿ ಜಪ 432 ಪಂಚಾಕ್ಷರಿ ಜಪ ನನ್ನಿಂದ ಮಾಡಲ್ಪಟ್ಟಿದೆ ಹಾಗಾಗಿ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ಆಳವಾಗಿ ಕುಳಿತುಕೊಂಡಿತು ಎಂದರೆ ಕಣ್ಣು ಮುಖ ಹಾಗೂ ವರ್ತನೆಗಳಲ್ಲಿ ಸ್ವಾಭಿಮಾನ ತುಂಬಿ ತುಳುಕಾಡುತ್ತದೆ. ಅರ್ದ ಜನ ಆ ಮುಖಭಾವಕ್ಕೆ ಬೀಳುತ್ತಾರೆ. ಇನ್ನರ್ಧ ಜನ ಲೆಕ್ಕಕ್ಕೆ ಇಲ್ಲ ಜಮಾಕ್ಕೂ ಇಲ್ಲ. ಈ ಮೇಲಿನ ಫೋಟೊ ಪೂಜೆ ಮುಗಿಸಿ ಸಾಗರಕ್ಕೆ ಹೊರಟಾಗ ತೆಗದದ್ದು. ಕವಳ ಬಾಯಲ್ಲಿ ತುಂಬಿದ್ದರೂ ಅದೇನು ಗತ್ತು ನೋಡಿ. ಬಿ.ಪಿ ಇಲ್ಲ ಷುಗರ್ ಇಲ್ಲ ದೇಹಕ್ಕೆ ೮೦ ರ ಸನಿಹದ ವಯಸು ಮನಸ್ಸಿಗೆ ೨೦ ಲವಲವಿಕೆಯ ವಯಸು. ರಾತ್ರಿ 3 ಗಂಟೆಗೆ ತಿರುಗಾಟದಿಂದ ಬಂದು ಮಲಗಿದರೂ ಬೆಳಿಗ್ಗೆ 6 ಗಂಟೆಗೆ ಎದ್ದು ಪೂಜೆ ಜಪ ತಪ ತಪ್ಪಿಸುವಂತಿಲ್ಲ. ೧೦ ಗಂಟೆಗೆ ಮತ್ತೆ ತಾಳಗುಪ್ಪಕ್ಕೆ ಒಂದು ರೌಂಡ್ ಹೊರಡಲು ರೆಡಿ. 40 ರ ಹರೆಯದ ನಾನು ಸುಸ್ತಾಗಿದ್ದೇನೆ. ಅಪ್ಪಯ್ಯನನ್ನು ಅವರ ಉತ್ಸಾಹಕ್ಕೆ ತಕ್ಕಂತೆ ತಿರುಗಾಡಿಸಲು ಆಗುತ್ತಿಲ್ಲ. ನಮಗೆ ಜೀವನೋತ್ಸಾಹ ಅಷ್ಟೊಂದು ಇಲ್ಲ.
ಅಪ್ಪಯ್ಯನ ಈ ಜೀವನೋತ್ಸಾಹಕ್ಕೆ ಗಾಯಿತ್ರಿ ಜಪವೇ ಕಾರಣವೆ.? ಎಂಬ ಪ್ರಶ್ನೆ ಕಾಡುತ್ತದೆ. ನಮ್ಮಗಳ ಗೊಡ್ಡು ಅಹಂಕಾರದಿಂದ ಹಾಗೆಲ್ಲಾ ಪ್ರಶ್ನೆ. ಆದರೆ ವಾಸ್ತವವೆಂದರೆ "ಅಯ್ಯೋ ಮಂಕೆ ದಾಸರು ಹೇಳಿದ್ದಾರೆ ನಂಬಿಕೆಟ್ಟವರಿಲ್ಲವೋ... ಎಂದು ಹಾಗಾಗಿ ನಂಬು, ಕೊಂಕದೆ ಕೊನಲದೆ ನಂಬು ಆವಾಗ ಎಲ್ಲಾ ಉತ್ಸಾಹಗಳೂ ಪುಟಿದೇಳುತ್ತದೆ. ನಂಬದಿದ್ದರೆ ಗೊಂದಲದ ಗೂಡಾಗುತ್ತದೆ. ಆಮೇಲೆ ದೇಹ ಲಡ್ಡಾದ ನಂತರ ಅನಿವಾರ್ಯವಾಗಿ ನಂಬಲು ತೊಡಗುತ್ತದೆ. " ಎನ್ನುತ್ತದೆ ಒಳಮನಸ್ಸು.
ಸ್ನಾನ ಮಾಡುವಾಗ "ಏನಾದರಾಗಲಿ ಇವತ್ತಿನಿಂದ ನಾನೂ ಸಂದ್ಯಾವಂದನೆ ಮಾಡಬೇಕು ಅಂತ ಮನಸ್ಸು ತೀರ್ಮಾನಿಸಿದ ಮರಕ್ಷಣದಿಂದ ಗಾಯಿತ್ರಿಜಪ ಮಾಡುವಾಗಲೂ ಒಂದೇ ಪ್ರಶ್ನೆ " ಇವೆಲ್ಲಾ ಸತ್ಯವಾ? ಇವೆಲ್ಲ ಅವಶ್ಯಕತೆ ಇದೆಯಾ?" ಕಳ್ಳ ಮನಸ್ಸುಇದು ಮಾಡಿದರೆ ಒಂದು ಮಾಡದಿದ್ದರೆ ಮತ್ತೊಂದು. ಆ ಪ್ರಶ್ನೆ ಏಳದೆ ಇದ್ದವರು ಸುಖಿಗಳು. ಪ್ರಶ್ನೆ ಎದ್ದೂ ನಗಣ್ಯ ಪ್ರಶ್ನೆಯನ್ನು ಮಾಡಿದವರು ಮದ್ಯಮವಂತರು. ಪ್ರಶ್ನೆಗೆ ಉತ್ತರ ಹುಡುಕಿತ್ತೀನಿ ಎಂದು ಪ್ರಾರ್ಥನೆಗಳನ್ನು ನಿಲ್ಲಿಸುವವರು ಗ್ರಹಚಾರವಂತರು. ನಾನಂತೂ ಮೂರನೆಯದು ಮುಗಿಸಿ ಎರಡನೆಯ ಹಂತಕ್ಕೆ ಏರಿದ್ದೇನೆ.

Monday, May 26, 2008

ಬಂತು ಮಳೆ . ಚಳಕ್ ಎಂತು ಬೆನ್ನಿನ ಎಳೆ







26-05-2008



ನಿನ್ನೆ ಘೋರಾಕಾರದ ಬಿಸಿಲು. ಯಡ್ಡಿ ಚುನಾವಣೆಯ ದಗೆ,ಅವರು ಗೆಲ್ತಾರಾ ಇವರು ಸೋಲ್ತಾರಾ ಅನ್ನೋ ಬಿಸಿ ಬಿಸಿ ಚರ್ಚೆಯ ನಡುವೆ ಬೆವರೋ ಬೆವರು. ಆದರೆ ಇಂದು ಬೆಳಿಗ್ಗೆ ಯಡ್ಡಾದಿಡ್ಡಿ ಮಳೆ. ಬೆಂಗಳೂರಲ್ಲಿ ಯಡ್ಡಿಗೆ ತಂಪಾಗುತ್ತದೆಯೋ ಇಲ್ಲವೋ ಇನ್ನೂ ಸರಿಯಾಗಿ ಗೊತ್ತಿಲ್ಲ. ಆದರೆ ಇಲ್ಲಂತೂ ಧರೆ ತಂಪಾಯ್ತು. ಈ ತರ ದಿಡೀರನೆ ವಾತಾವರಣ ಬದಲಾದಗಲೆಲ್ಲ ಮನಸ್ಸು ಮುದುಡಿಕೊಂಡುಬಿಡುತ್ತದೆ. ಅದೇನೋ ಹೇಳಲಾರದ ತಿಳಿಯದ ಬೇಸರ. ಈ ಬೇಸರದ ನಡುವೆಯೇ ಮಳೆಯನ್ನು ನೋಡಲು ಕಿಟಿಕಿಯ ಮೂಲಕ ಕಣ್ಣಾಡಿಸಿದೆ. ಆವಾಗ ಕಣ್ಣಿಗೆ ಕಂಡಿದ್ದು ನನ್ನನ್ನು ಹದಿನೈದು ವರ್ಷದಿಂದ ಹಿಂಡಿ ಹಿಪ್ಪೆ ಮಾಡುತ್ತಿರುವ ಬೆನ್ನು ನೋವಿಗೆ ಕಾರಣವಾದ ಕರೆಂಟು ಕಂಬ. ಸ್ವಯಂಕೃತಾಪರಾಧದ ಆ ಘಟನೆ ನೆನಪಾಯಿತು.


ಅಂದು ಮೆ ೧೩ ೧೯೯೩. ಹೀಗೆ ಸಂಜೆ ಮಳೆ ಬಂತು. ಮಳೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಕರೆಂಟ್ ಡಮಾರ್. ಕರೆಂಟಿಲ್ಲದೆ ಹೊತ್ತು ಕಳೆಯುವುದು ಎಂದರೆ ಬಲು ಬೇಸರ. ಮೂರು ಫೇಸಿನ ಲೈನ್ ನಲ್ಲಿ ಒಂದು ಫೇಸ್ ಕರೆಂಟು ಇತ್ತು. ಮನೆಗೆ ಕರೆಂಟ್ ತರುವ ಉಮೇದಿನಲ್ಲಿ ಕಂಬ ಹತ್ತಿದೆ. ಕಂಬ ಹತ್ತಿ ಕರೆಂಟ್ ತಂದಿದ್ದು ಅದೇ ಮೊದಲನೇ ಸರಿ ಆಗಿರಲಿಲ್ಲ. ಆದರೆ ಈ ಬಾರಿ ಅದೇನು ವ್ಯತ್ಯಾಸವಾಯಿತೋ ತಿಳಿಯಲಿಲ್ಲ. ಒಂದು ವೈರ್ ತಿರುಗಿ ಕೈಮೇಲೆ ಕುಳಿತುಕೊಂಡಿತು. ಜುಮ ಜುಮ ಇಡೀ ಮೈ ಅದೇನೋ ಆಗುತ್ತಿದೆ. ಕರೆಂಟು ಹೊಡೆಯುತ್ತಿರುವುದು ನಾನು ಕಂಬದ ಮೇಲೆ ಇರುವುದು ಎಲ್ಲಾ ತಿಳಿಯುತ್ತಿದೆ. ಆದರೆ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಮೂರ್ನಾಲ್ಕು ಅಸಾಹಾಯಕ ಪ್ರಯತ್ನದ ನಡುವೆ ಸಾವಿನಂಚಿನ ಅನುಭವವಾದಂತಾಯಿತು. ಅಂತಹ ಸಂದರ್ಭದಲ್ಲಿ ಮನೆಯವರೆಲ್ಲಾ ನೆನಪಿಗೆ ಬಂದರು. ನನ್ನ ಇಡೀ ದೇಹ ಸಣ್ಣವಾಗುತ್ತಿರುವಂತೆಯೂ ಹಾಗೆ ಹಾಗೂ ಹಗೂರವಾದಂತೆಯೂ ಅನುಭವ ಆಗತೊಡಗಿತು. ಅಂತಹ ಸಂದರ್ಭದಲ್ಲಿಯೂ ಸಾವು ಎಂದರೆ ಇದೇನಾ, ವಾವ್ ಎನ್ನುವ ಅನುಭವ. ನಾನು ಹತ್ತಿದ ಕಂಬದೆದುರು ನಾವು ಸಣ್ಣಕ್ಕಿದ್ದ ಕಾಲದಿಂದಲೂ ನಂಬಿದ ಯಕ್ಷಿ ಬಣ್ಣ ಇತ್ತು ಜುಮ ಜುಮ ಕರೆಂಟಿನ ಷಾಕ್ ನ ನಡುವೆ ಯಕ್ಷಿಬಣ್ಣ ಕಂಡಿತು. ಅದೇನು ಪವಾಡವೋ, ಸತ್ಯವೋ, ಅಥವಾ ನನ್ನ ನಂಬಿಕೆಯೂ ನನಗೆ ಇಂದೂ ಅರ್ಥವಾಗಿಲ್ಲ. ಯಕ್ಷಿಕಲ್ಲು ಕಣ್ಣಿಗೆ ಕಂಡ ಮರುಕ್ಷಣ ನನ್ನ ಕೈಗೆ ತಗುಲಿದ್ದ ವೈರ್ ತಪ್ಪಿತು. ಕಂಬದ ಮೇಲಿಂದ ದಡಾರನೆ ಕೆಳಗೆ ಬಿದ್ದೆ. ೫೦ ಅಡಿ ಕೆಳಗೆ ಬೀಳಬೇಕಾಗಿದ್ದ ಜಾಗದಲ್ಲಿ ಸಣ್ಣ ಗಿಡವೊಂದರ ಕಾರಣದಿಂದ ೨೦ ಅಡಿ ಕೆಳಗೆ ಬಿದ್ದೆ. ಸ್ಪೈನಲ್ ಕಾರ್ಡ್ ಡಮಾರ್ ಅಂತು. ಅಲ್ಲಿಂದ ಸಾಗರಕ್ಕೆ ನಂತರ ಮಣಿಪಾಲಿಗೆ ೧೫ ದಿವಸದ ನಂತರ ವಾಪಾಸು ಮನೆಗೆ ಆನಂತರ ಮೂರು ತಿಂಗಳು ಅಪೂಟ್ ಬೆಡ್ ರೆಸ್ಟ್. ಮತ್ತೆ ನಂತರವೆಂದರೆ ಹಾಗೂ ಅದರ ಕೊಡುಗೆಯೆಂದರೆ ಈ ಗಳಿಗೆಯವರೆಗೂ ನಿರಂತರ ಕಾಡುವ ಬೆನ್ನು ನೋವು. ಆ ನೋವನ್ನು ಸಹಿಸಬಹುದು ೩೬ ಹರೆಯದ ಭಟ್ಟು ಬಾಯಿ ಕ್ಯಾನ್ಸರ್ ಬಂದು ಆಲೋಪತಿಯೆಲ್ಲಾ ಮೋಸ ನಾಟಿಯೇ ಸರಿ ಎಂದು ಮೂರುತಿಂಗಳಿಂದ ಚಕ್ಕೆ ತೆಯ್ದು ಹಚ್ಚುತ್ತಾ ಶೀಘ್ರದಲ್ಲಿಯೇ ಹುಷಾರಾಗ್ತು ನೋಡು ಎನ್ನುತ್ತಾ ಮಲಗಿದ್ದಾನೆ. ಅದಕ್ಕಿಂತ ಈ ನೋವೇ ಎಷ್ಟೋ ವಾಸಿ ಎಂಬ ಸಮಾಧಾನ.



ಇದು ಒಂದು ಗಳಿಗೆಯ ಕರೆಂಟ್ ಪಡೆಯಲು ಹೋದ ಕತೆ. ಕೆ.ಇ.ಬಿ ಯವರು ಕೇಸ್ ಹಾಕುತ್ತಾರೆ ಎಂದು ಯಾರೋ ಹೇಳಿದ್ದರಿಂದ. ಮನೆಯ ಆಂಟೆನಾ ಸರಿಮಾಡಲು ಹೋಗಿ ಕೆಳಗೆ ಬಿದ್ದೆ ಎಂಬ ಹಸಿ ಸುಳ್ಳು ಹೇಳಯಾಯಿತು. ಇವತ್ತು ಆವತ್ತಿನ ತರಹದ್ದೇ ಮಳೆ ಬಂದಿದೆ ಇನ್ನು ಯಾರಿಗೆ ಕಾದಿದೆಯೋ...