Monday, July 20, 2009

ಆತ್ಮಸ್ಥೈರ್ಯ ಎಂದರೆ ಇದೆನಾ..? ಒಮ್ಮೆ ನೋಡಿ,

Wednesday, July 15, 2009

ಎಣಿಸಿ ಹೇಳಿ.

ಈ ಕೆಳಗಿನ ವಾಕ್ಯದಲ್ಲಿ ಎಷ್ಟು " ಎಫ್" ಇದೆ ಎಂಬುದನ್ನು ಎಣಿಸಿ ಹೇಳಿ.
ಷರತ್ತುಗಳು. ಒಂದೇ ಬಾರಿ ಓದಬೇಕು ಹಾಗೂ ಎಣಿಸಬೇಕು ಮತ್ತು ಹೇಳಬೇಕು. ಎರಡನೇ ಬಾರಿ ಓದಿದರೆ ಅಡ್ಡಿಯಿಲ್ಲ ಆದರೆ ಆವಾಗ ಎಷ್ಟು ಎಫ್ ಇದೆ ಅಂಬುದನ್ನು ಹಾಗೆಯೇ ಹೇಳಬೇಕು. ನೋಡಿ ಎಣಿಸಿ. ಸರಿ ಉತ್ತರಕ್ಕೆ ಬಹುಮಾನ................!
FINISHED FILES ARE THE RE
SULT OF YEARS OF SCIENTI
FIC STUDY COMBINED WITH
THE EXPERIENCE OF YEARS...


Sunday, July 12, 2009

"ಹೌದಾಯಿಕ್ಕಲ, ಹಲ್ಲುನೋವಿಗೆಲ್ಲ ಬಾವಿ ಹಾರನ ಅಂತ ......




"ಮೊನ್ನೆಯಷ್ಟೆ ಭಾನುವಾರ ಕಳೆದಿತ್ತು ಅಬ್ಬಾ ಅದೆಷ್ಟು ಬೇಗ ಮತ್ತೊಂದು ಭಾನುವಾರ, ದಿನ ಅದೆಷ್ಟು ಬೇಗ ಓಡುತ್ತಿದೆ" ಎನ್ನುವ ಮಾತು ಯಾರ ಬಾಯಿಂದ ಬಂತೋ ಅವರು ಸುಖದಿಂದ ಇದ್ದಾರೆ ಅಂತ ಅರ್ಥ. ಯಾವುದು ವೇಗದಿಂದ ಬೇಗನೆ ಕಳೆಯುತ್ತಿದೆ ಎಂಬ ಭಾವನೆ ಹುಟ್ಟಿಸುತ್ತದೆಯೋ ಅದು ಸುಖ.

ಅದೇ ಹಲ್ಲುನೋವು ಬಂದ ರಾತ್ರಿಯನ್ನು ನೆನಪಿಸಿಕೊಳ್ಳಿ ಒಂದು ರಾತ್ರಿ ಎಂದರೆ ಶುರುವಾಗಿ ಸುಮಾರು ವರ್ಷಗಳೇ ಸಂದವೇನೋ ಎಂಬ ಭಾವ ಹುಟ್ಟಿಸುತ್ತದೆ. ಇಡೀ ಪ್ರಪಂಚ ನಿದ್ರೆಗೆ ಜಾರಿರುತ್ತದೆ, ನೀರವ ವಾತವರಣ, ಆದರೆ ನಾವು ದಿಂಬಿಗೆ ತಲೆ ಕೊಟ್ಟರೆ ಮೂಲೆಯಲ್ಲಿರುವ ದವಡೆ ಹಲ್ಲು ತಣತಣ ಅಂತ ಶುರುವಾಗಿ ಚುಳ್ ಅಂತ ಬೆಚ್ಚಿಬೀಳಿಸುತ್ತದೆ. ಅಮ್ಮಾ ಯಾವುದನ್ನಾದರೂ ತಡೆದುಕೊಳ್ಳಬಹುದು ಈ ಹಲ್ಲುನೋವನ್ನೊಂದನ್ನು ಬಿಟ್ಟು ಅಂತ ಅನ್ನಿಸಿದರೂ ಹಲ್ಲೇನು? ಯಾವ ನೋವು ಬಂದಾಗಲೂ ಮತ್ತೊಂದರತ್ತ ಬೆಟ್ಟು ಸಹಜ ಅಷ್ಟೆ.

ಹಲ್ಲೆಂಬ ಹಲ್ಲಿನೊಳಗಿನ ಗುಳು ಬೃಹದಾಕಾರದ ಬಾವಿಯಂತೆ ಭಾಸವಾಗುತ್ತದೆ. ಕನ್ನಡಿ ಹಿಡಿದು ನೋಡಿಕೊಂದರೆ ಛೀ ಇದೇ ಕ್ಷುಲ್ಲಕ ಹಲ್ಲೇ ಇಷ್ಟೊಂದು ನೋವು ನೀಡುತ್ತಿರುವುದು ಅಂತ ಅನ್ನಿಸಿದರೂ ಕನ್ನಡಿ ಪಕ್ಕಕ್ಕಿಟ್ಟ ಮರುಕ್ಷಣ ಅಮ್ಮಾ ಎಂದು ಅಂಗೈ ತನ್ನಿಂದತಾನೆ ಕೆನ್ನೆಯತ್ತ ಓಡುತ್ತದೆ. ಮನಸ್ಸು ಹಲ್ಲುನೋವನ್ನೊಂದು ಬಿಟ್ಟು ಮತ್ತಿನ್ನೇನೂ ಯೋಚಿಸಲು ಅಸಮರ್ಥವಾಗಿರುತ್ತದೆ. ಎಂತಹ ಸಿನೆಮಾ ಇರಲಿ ಮೈನವಿರೇಳಿಸುವ ಪುಸ್ತಕ ಇರಲಿ ಕಡುಬು ಕಜ್ಜಾಯವಿರಲಿ, ಸಾವಿರದ ನೋಟಿನ ಕಂತೆಯಿರಲಿ, ತ್ರಿಪುರ ಸುಂದರಿಯಿರಲಿ, ಮನ್ಮಥ ಎದ್ದು ಬಂದಿರಲಿ. ಹೇ ಭಗವಂತಾ ಈ ಹಲ್ಲು ನೋವಿನಿಂದ ಮುಕ್ತಿಗೊಳಿಸು ಎಂಬ ಒಂದೇ ಒಂದು ವಿನಂತಿ. ಇಷ್ಟೊತ್ತಿಗೆ ಸುಮಾರು ಬೆಳಕಾಗಿರಬಹುದಾ? ಎಂದು ಗಂಟೆ ನೋಡಿದರೆ ಇನ್ನೂ ಹತ್ತೂ ಕಾಲು. ಮಾಮೂಲಿ ದಿನಗಳಾದರೆ ಹೀಗೆ ಹಾಸಿಗೆಗೆ ತಲೆಯೂರಿದರೆ ಕಣ್ಣು ಬಿಟ್ಟಾಗ ಚುಮುಚುಮು ಬೆಳಗು ಆದರೆ ಇಂದು ಮಾತ್ರಾ ಊಹ್ಞೂ ಬೆಳಗೇ ಆಗದು ಎಂಬ ಭಾವನೆ, ಹಲ್ಲಿನ ಸಂದಿಯಲ್ಲಿ ತಣತಣ ತಡೆಯಲಾರದೇ ಬಾವಿ ಹಾರಿಬಿಡೋಣ ಎಂಬಷ್ಟು ಯೋಚನೆ ಬರುತ್ತದೆ. ಒಮ್ಮೆ ಹಾಗೆ ಆಯಿತು

ರಾತ್ರಿಯೆಲ್ಲಾ ಹಲ್ಲುನೋವು ಸಿಕ್ಕಾಪಟ್ಟೆ ಇತ್ತು. ಬೆಳಿಗ್ಗೆ ನಮ್ಮ ಪಕ್ಕದ ಮನೆ ಗೀತಕ್ಕ ಬಂದಿದ್ದಳು "ಏನೋ ಮುಖ ಎಲ್ಲಾ ಒಂಥರಾ ಇದೆ" ಅಂದಳು. "ರಾತ್ರಿ ಎಲ್ಲಾ ಹಲ್ಲು ನೋವಿತ್ತು , ಅದೆಷ್ಟು ನೋವಿತ್ತು ಅಂದರೆ ತಡೆಯಲಾರದೆ ಬಾವಿ ಹಾರಿ ಪ್ರಾಣ ಕಳೆದುಕೊಂಡು ಬಿಡೋಣ ಅಂತ ಅನ್ನಿಸ್ತು" ಅಂತ ಅಂದೆ "ಹೌದಾಯಿಕ್ಕಲ, ಹಲ್ಲುನೋವಿಗೆಲ್ಲ ಬಾವಿ ಹಾರನ ಅಂತ ಕಂಡ್ರೆ ಇನ್ನು ಮಿಕ್ಕಿದ್ದಕ್ಕೆಲ್ಲಾ ಹ್ಯಾಂಗೋ" ಅಂತ ನಕ್ಕು ಹೊರಟು ಹೋದಳು. ಆನಂತರದ ದಿನಗಳಲ್ಲಿ ನಾನು ಅದನ್ನ ಮರೆತಿದ್ದೆ. ಮತ್ತೊಂದು ದಿವಸ ಹಾಗೆಯೇ ಬಂದ ಗೀತಕ್ಕ" ರಾಘು ಹೌದೋ ಅವತ್ತು ನೀನು ಹೇಳಿದ್ದು, ಬಾವಿಗೆ ಹಾರಿಬಿಡಣ ಅಂತ ಕಾಂಬ್ದು ಸುಳ್ಳಲ್ಲ ಮಾರಾಯ" ಅಂತ ಅಲವತ್ತುಕೊಂಡಳು. ಹಾಗಿರುತ್ತೇ ಹಲ್ಲುನೋವಿನ ಮಹಿಮೆ.

ಹುಳುಕು ಹಲ್ಲನ್ನು ಕಿತ್ತು ಎಸೆದಾಗ ಮತ್ತೆ ಆಸೆ ಚಿಗುರುತ್ತದೆ, ಸಿಟ್ಟು ಸಡಾಕು ಮರಳುತ್ತದೆ, ಉಪದೇಶ ಉಪದ್ವಾಪ ಅರಳುತ್ತದೆ. ಪ್ರೀತಿ ಪ್ರೇಮ ರಾಗ ಭಯ ಭಕ್ತಿ ದ್ವೇಷ ಎಲ್ಲಾ ಮಾಮೂಲಿ, ಅಯ್ಯ ದಿನಗಳು ಎಷ್ಟು ಬೇಗ ಕಳೆಯುತ್ತಿದೆ ಎಂಬ ಡೈಲಾಗೂ.....

Friday, July 10, 2009

"ತಬಕಲು ತಗ ಬಾರಾ"



"ತಬಕಲು ತಗ ಬಾರಾ" ಅಂತ ಅಂದ್ರೆ ಈಗಿನ ತಲೆ ಮಾರಿನವರಿಗೆ ಅರ್ಥವೇ ಆಗಲಿಕ್ಕಿಲ್ಲ. ಹೌದು ಹಾಗಂದರೆ ಏನು? ಅಂದಿರಾ. ಎಲೆಅಡಿಕೆ ಹರಿವಾಣ ಕಣ್ರಿ. ಅದೇ ಕವಳದ ಸಿಬಿಲು. ಎಲೆ ಅಡಿಕೆ ಅಂದ್ರೆ ಗೊತ್ತಾಯಿತು ಅದೇನು ಹರಿವಾಣ? ಅದೆಂತದು ಕವಳದ ಸಿಬಿಲು?. ಎಂಬ ಪ್ರಶ್ನೆ ನಿಮ್ಮಿಂದ ಅಂತ ನನಗೆ ಗೊತ್ತು. ಹರಿವಾಣ ಅಂದ್ರೆ ಅಚ್ಚ ಕನ್ನಡ...! ದಲ್ಲಿ ಪ್ಲೇಟ್ ಅಂತ....!


"ಓಹೋ ಪ್ಲೇಟಾ ... ಹಾಗೆ ಹೇಳಿ ಮತ್ತೆ ಅದೇನೋ ಹರಿವಾಣ ತಬಕಲು ಅಂತೆಲ್ಲಾ ಹೇಳಿದರೆ ನಮಗೆ ಹೇಗೆ ತಿಳಿಯಬೇಕು?. ಆಮೇಲೆ ಕವಳದ ಸಿಬಿಲು.. ಅಂದ್ರೆ ? ಎಂದು ನೀವು ಉದ್ಗಾರ ತೆಗಯಬಹುದು. ಅದೂ ಅದೆ. ಅವೆಲ್ಲಾ ಆಡು ಸ್ಥಳೀಯ ಭಾಷೆಗಳು. ಇರಲಿಬಿಡಿ ಈಗ ಅರ್ಥ ಆಯಿತಲ್ಲ ಮುಂದೆ ಹೋಗೋಣ.


ನಮ್ಮ ಕೃಷಿಕರ ಮನೆಗಳಲ್ಲಿ ಜಗುಲಿ( ಎದುರಿನ ಹಜಾರ) ಯ ಮೇಜಿನ ಮೇಲೆ ಹೀಗೊಂದು ಬಟ್ಟಲು ಎಲೆ ಅಡಿಕೆ ಸುಣ್ಣ ಗಳಿಂದ ಸಾಲಂಕೃತಗೊಂಡು ತಣ್ಣಗೆ ಕುಳಿತಿರುತ್ತದೆ. ಈಗೆಲ್ಲಾ ಸ್ಟೀಲ್ ಪ್ಲೇಟ್ ಸಾಮಾನ್ಯವಾಗಿದೆ. ಆದರೆ ಸುಮಾರು ಮೂವತ್ತು ವರ್ಷಗಳ ಹಿಂದೆ ಈ ತಬಕಲು ಎನ್ನುವ ಬಟ್ಟಲು ಒಂದು ಘನಗಂಭೀರತೆಯನ್ನು ಹೊಂದಿರುತ್ತಿತ್ತು. ಮರದಿಂದ ಮಾಡಿದ ಸಾಲಂಕೃತ ಬಟ್ಟಲು, ಹಿತ್ತಾಳೆಯ ಅಂದದ ಬಟ್ಟಲು. ಪಂಚಲೋಹದ ಬಟ್ಟಲು ತಾಮ್ರದ ಕವಳದ ಸಿಬ್ಲು. ಹೀಗೆ ಅವರವರ ಮಟ್ಟಕ್ಕೆ ತಕ್ಕುದಾದ ನಾನಾ ತರಹದ ಬಟ್ಟಲು ಕಾಣಸಿಗುತ್ತಿತ್ತು. ಈಗಲೂ ಹಲವಾರು ಮನೆಗಳಲ್ಲಿ ಹಲವಾರು ತರಹದ ಹರಿವಾಣಗಳು ಸಿಗುತ್ತವೆ. ಆದರೆ ಮೊದಲಿನಷ್ಟು ವಿವಿಧತೆ ಕಡಿಮೆಯಾಗಿದೆ.


ನನ್ನ ಆಪ್ತರಾದ ಪೆಜತ್ತಾಯರ ಬೆಂಗಳೂರಿನ ಮನೆಯಲ್ಲಿದ್ದ ಅಂತಹ ಒಂದು ಪಂಚಲೋಹದ ಎಲೆಅಡಿಕೆ ಹರಿವಾಣವನ್ನು ನಮ್ಮ ಮನೆಗೆ ತಂದು ತಂದೆಯವರಿಗೆ ಕೊಟ್ಟೆ. ಪೆಜತ್ತಾಯರು ಅಡಿಕೆ ಬೆಳೆಗಾರರು ಆದರೆ ಎಲೆಅಡಿಕೆ ಹಾಕರು ಹಾಗಾಗಿ ಅದು ಅಲ್ಲಿ ತನ್ನ ಕುಲಕಸುಬನ್ನು ಮಾಡದೆ ಮೂಲೆಯಲ್ಲಿ ಕುಳಿತಿತ್ತು. ಪೆಜತ್ತಾಯರ ಕೊಡುಗೆ ಈಗ ನಮ್ಮ ಮನೆಯಲ್ಲಿ ತನ್ನ ಡ್ಯೂಟಿ ಮಾಡುತ್ತಿದೆ. ಆಮೆಯ ರೂಪದ ಈ ಪಂಚಲೋಹದ ತಬಕಲು ತೂಕವೂ ಇರುವುದರಿಂದ ಹಾಗೂ ನೋಡಲೂ ಅಪರೂಪದ ರಚನೆ ಇರುವುದರಿಂದ ನಮ್ಮ ಮನೆಗೆ ಬರುವ ಅತಿಥಿಗಳ ಕಣ್ಣು ಒಮ್ಮೆ ತಬಕಲಿನತ್ತ ಹೋಗಿ ಅಬ್ಬಾ...! ಎಂಬ ಉದ್ಗಾರವನ್ನು ಹೊರಡಿಸುತ್ತಿದೆ. ಹಾಗೆಯೇ ಅವರ ಬಾಯನ್ನೂ ಕೆಂಪಗಾಗಿಸುತ್ತಿದೆ.


ಒಮ್ಮೆ ಬರ್ರಲಾ... ತಬಕು ನೋಡಿಕೊಂಡು ಎಲೆ ಅಡಿಕೆಹಾಕಿ ಹೋಗುವಿರಂತೆ.


ಹಾಗೆಯೇ ಇನ್ನು ಮಲೆನಾಡಿನ ಮನೆಗಳಿಗೆ ಹೋದಾಗ ಒಮ್ಮೆ ಮೇಜಿನಮೇಲೆ ಕುಳಿತಿರುವ ತಬಕಿನತ್ತ ಕಣ್ಣಾಡಿಸಿ ಎಂತೆಂತಹ ಹರಿವಾಣಗಳು ನಿಮ್ಮನ್ನು ಅಚ್ಚರಿಗೆ ತಳ್ಳಿಬಿಡಬಹುದು.

Tuesday, July 7, 2009

ಅನ್ನದಾತೋ ಸುಖೀ ಭವ


ವರುಣ ತಡವಾಗಿಬಂದ ಹಾಗಾಗಿ ನಮ್ಮೂರ ಧೀರೆಯರು ಈ ವರ್ಷ ತಡವಾಗಿ ಕೆಸರಿಗೆ ಇಳಿದಿದ್ದಾರೆ. ಕೈಕೆಸರಾದರೆ ಬಾಯಿ ಮೊಸರಂತೆ ಎಂಬ ಗಾದೆ ಸತ್ಯ ಇರಬಹುದು. ಆದರೆ ಇವರಿಗೆ ಅದು ಅನ್ವಯ ಆಗೋದು ಯಾವಾಗ ಅಂಬ ಪ್ರಶ್ನೆ ನನಗೆ ಯಾವಾಗಲೂ ಕಾಡುತ್ತಿರುತ್ತದೆ. ವೈಟ್ ಕಾಲರ್ ಜನ ಎಂಬ ಮನುಷ್ಯರಿಗೆ ಮೊಸರುಣಿಸಲು ಜೀವಮಾನಪೂರ್ತಿ ಕೈಕೆಸರು ಮಾಡಿಕೊಳ್ಳುವ ಈ ರೈತರುಗಳು ಮಹಾನ್ ಎಂಬುದು ನನ್ನ ವೈಯಕ್ತಿಕ ಅಭಿಮತ. ಬಹುಪಾಲು ಜನರು ಒಂದೇ ಒಂದು ಹನಿ ಕಾಲಿನ ಮೇಲೆ ಬಿದ್ದರೂ ಡೆಟ್ಟಾಲ್ ಹಾಕಿ ಗಂಟೆಗಟ್ಟಲೆ ತೊಳೆದು ಅದೇನೋ ಮಹಾನ್ ರೋಗ ಬಂದುಬಿಟ್ಟಿತೇನೋ ಎಂದು ಹಲುಬುವ ಮಂದಿಯ ಹೊಟ್ಟೆ ತಂಪಾಗಿರಿಸಲು ಇವರು ಕೆಸರಿನಲ್ಲಿ ವರ್ಷಾನುಗಟ್ಟಲೆಯಿಂದ ಮುಳುಗೇಳುತ್ತಿದ್ದಾರೆ. ದೇಶದ ಆಹಾರ ಕಣಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಕಾಲವಾಗುತ್ತಿದ್ದಾರೆ. ಅವರುಗಳಿಗೆ ನಮ್ಮ ಶುಭ ಹಾರೈಕೆ ಬೇಕು. ನಾವಿಲ್ಲದಿದ್ದರೆ ಅವರು ಇರಬಲ್ಲರು ಆದರೆ ಅವರಿಲ್ಲದಿದ್ದರೆ ನಮ್ಮನ್ನು ಊಹಿಸಿಕೊಳ್ಳಲ್ಲೂ ಸಾದ್ಯವಾಗದು.
ಅನ್ನದಾತೋ ಸುಖೀ ಭವ. ಅಂತ ಒಂದು ಸಣ್ಣ ಹಾರೈಕೆಯನ್ನಾದರೂ ಹಾಕುವ ತಾಳ್ಮೆ ಸಮಯ ನಮ್ಮದಾಗಲಿ.

Wednesday, July 1, 2009

ಕೃಷಿಕ ಬಾಂಧವರೇ ಟ್ರೈ ಮಾಡಿ ನೋಡಿ

ವೆನಿಲಾ ನಿಮಗೆ ನೆನಪಿರಬಹುದು. ನನ್ನದು ಇಷ್ಟು ವೆನಿಲಾ ಬಳ್ಳಿಯಿದೆ ಅಂದರೆ ಅದಕ್ಕೊಂದು ಲೆವಲ್ ಇತ್ತು. ಅದರ ಪಾಲಿನೇಷನ್, ಅದರ ಹಬ್ಬುವಿಕೆ ಅದರ ಕೃಷಿ ಅಬ್ಬಬ್ಬಾ ಅದೇನು ಡೈಲಾಗ್ ಅದೇನು ಸ್ಟೈಲ್ . ಕೆಜಿಗೆ ಬರೊಬ್ಬರಿ ನಾಲ್ಕುಸಾವಿರ ಮುಟ್ಟಿದಾಗಲಂತೂ ಕೇಳಬಾರದು ಬಿಡಿ. ಇರಲಿ ಅವೆಲ್ಲಾಕನಸಿನಂತೆ ಕರಗಿ ಹೋಯಿತು. ಆನಂತರ ಅಂತಹ ದುಡ್ಡಿನ ಥೈಲಿಯ ಬೆಳೆ ಬರಲಿಲ್ಲ. ಮುಂದೆ ಗೊತ್ತಿಲ್ಲ.
ಆದರೆ ಸತ್ಯವೋ ಸುಳ್ಳೋ ಗೊತ್ತಿಲ್ಲ ಬೀಜಕ್ಕೆ ಕೆಜಿಗೆ ಲಕ್ಷ ರೂಪಾಯಿಯಂತೆ ಅಕೋ ಅಲ್ಲೊಬ್ಬರು ಬೆಳೆಯುತ್ತಾರಂತೆ ಅದಕ್ಕೂ ಹ್ಯಾಂಡ್ ಪಾಲಿನೇಶನ್ ಆಗಬೇಕಂತೆ ಎಂಬ ಅಂತಕಂತೆಗಳ ಸುದ್ದಿಯೊಂದು ಆರ್ಕಿಡ್ ಜಾತಿಗೆ ಸೇರಿದ ಮತ್ತೊಂದು ಗಿಡದ ಸುತ್ತ ಸುದ್ದಿ ಹರಡುತ್ತಿದೆ.
ಚೌತಿ ಹಬ್ಬದಲ್ಲಿ ಗಣೇಶನ ಮುಂದೆ ಪಳೆಯುಳಿಗೆ(ಸರಿಯಾದ ಶಬ್ಧ ಗೊತ್ತಿಲ್ಲ) ಅಂತ ದೇವರ ಮುಂದೆ ಒಂದಿಷ್ಟು ತರಕಾರಿ ಹಾಗೂ ಕಾಡ ಹಣ್ಣುಗಳು ಹಾಗೂ ಹೂವು ಕಟ್ಟುವ ಸಂಪ್ರದಾಯ ನಮ್ಮ ಮಲೆನಾಡಿನಲ್ಲಿದೆ. ಅದಕ್ಕೆ ಗೌರಿ ಹೂವು ಎಂಬ ಅತ್ಯಂತ ಸುಂದರ ಕೆಂಪು ಅರಿಶಿನ ಬಣ್ಣದ ಹೂವನ್ನು ಕಾಡಿನಿಂದ ತಂದು ಬಳಸುತ್ತಾರೆ. ಈಗ ಸುದ್ಧಿ ಹಬ್ಬುತ್ತಿರುವುದು ಆ ಹೂವಿನ ಸುತ್ತ. ನಾನೂ ಆ ಹೂವಿನ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು (ಅದರ ಇಂಗ್ಲೀಷ್ ಹೆಸರು ಗೊತ್ತಿಲ್ಲ) ನೆಟ್ ನಲ್ಲಿ ಗೂಗ್ಲಿಸಿದೆ. ಸಿಕ್ಕಿತು ಸಿಕ್ಕಿಯೇ ಬಿಟ್ಟಿತು. ಇಂಗ್ಲೀಷ್ ನಲ್ಲಿ ಅದಕ್ಕೆ Gloriosa superba ಎನ್ನುತ್ತಾರೆ. ಹೌದು ಅದರ ಬೀಜದ ಕುರಿತು ಏನೇನೋ ನಡೆಯುತ್ತಿದೆ. ಆದರೆ ಇನ್ನೂ ದರ ಮಾತ್ರಾ ಸಿಕ್ಕಿಲ್ಲ ನನಗೆ. ಹಾಗಂತ ಇದೇನೂ ಸಂಪೂರ್ಣ ಹಣ ಲೂಟ್ ಮಾಡುವ ಕೃಷಿ ಅಂತೇನೂ ತಿಳಿಯಬೇಕಾಗಿಲ್ಲ. ವಿವರ ಮಾರ್ಕೆಟ್ ಇನ್ನಷ್ಟು ತಿಳಿಯಬೇಕಿದೆ.
ಹೀಗೆ ಆಸಕ್ತರು ಒಂದಿಷ್ಟು ಮಾಹಿತಿ ಸಂಗ್ರಹಿಸಿ ತಿಳಿಯುವಂತಾಗಲಿ ಎಂದು ಹೇಳುತ್ತಿದ್ದೇನಷ್ಟೆ.
Gloriosa superba ಗೂಗ್ಲ್ ಮಾಡಿದರೆ ಹತ್ತಾರು ವೆಬ್ ಸೈಟ್ ಓಪನ್ ಆಗುತ್ತದೆ. ಮುಂದಿನದು ಶಿವನೇ ಬಲ್ಲ. ಟ್ರೈ ಮಾಡಿ ನೋಡಿ ಕೃಷಿಕ ಬಾಂಧವರೇ. ಹೆಚ್ಚಿನ ಮಾಹಿತಿ ಸಿಕ್ಕರೆ ನನಗೂ ತಿಳಿಸಿ.