Saturday, May 1, 2010

ಪ್ರಕಟವಾಗಿರದ ಕತೆ

ಈಗ ರಾಣಿ ಗೂಡಿಗೆ...
" ರಾಣಿ ಈಗ ಗೂಡಿಗೆಗಂಡು ಯಮನ ಬೀಡಿಗೆ" ಮುನ್ನಾದಿನ ಮುತ್ತಣ್ಣ ಹೇಳಿದ ಕವನದ ಕೊನೆಯ ಸಾಲುಗಳನ್ನು ಗುಣುಗುಣಿಸುತ್ತಾ ಚೆನ್ನ ನಸುಕಿನಲ್ಲಿ ಗುಡ್ಡ ಏರುತ್ತಿದ್ದ. ಕವನದ ವಿಸ್ತಾರದ ಕತೆ ಕೇಳಿದ ಚೆನ್ನನಿಗೆ ಆ ಕೊನೆಯ ಸಾಲಿನ ಹೊರತಾಗಿ ಮತ್ಯಾವುದೂ ನೆನಪಿಗೆ ಬರಲಿಲ್ಲ. ಇಡೀ ಕತೆಯ ಸಾರಾಂಶವನ್ನು ಅವೆರಡು ಸಾಲಿಗೆ ತುಂಬಿಕೊಂಡು ಆಸ್ವಾದಿಸುತ್ತಾ ಪದೇ ಪದೇ ಅವಷ್ಟೇ ಸಾಲುಗಳನ್ನು ಹಿಂದುಮುಂದಾಗಿ ತನ್ನದೇ ಆದ ದಾಟಿಯಲ್ಲಿ ಹಾಡುತ್ತಾ ನಡು ನಡುವೆ ಹಣೆಯಮೇಲೆ ಕೈಯನ್ನಿಟ್ಟು ಸೂರ್ಯನ ಕಿರಣದಿಂದ ಕಣ್ತಪ್ಪಿಸಿ ಮುನ್ನಡೆಯುತಿದ್ದ. ಚೆನ್ನನ ಉತ್ಸಾಹಕ್ಕೆ ಜೇನು ಹುಡುಕುವ ಭರಾಟೆಯೋ ಅಥವಾ ಉಲ್ಲಾಸದಾಯಕ ವಾತಾವರಣವೋ ಎನ್ನುವುದನ್ನ ತರ್ಕಿಸಿ ತೀರ್ಮಾನ ತೆಗೆದುಕೊಳ್ಳುವ ಗೋಜಿನ ಮನಸ್ಥಿತಿ ಅವನದಾಗಿರಲಿಲ್ಲವಾದ್ದರಿಂದ ಉತ್ಸಾಹವನ್ನು ಮಾತ್ರಾ ಅನುಭವಿಸುತ್ತಿದ್ದ. ಅವನಿಗೆ ಬುದ್ದಿಬಂದಾಗಿನಿಂದ ಇಬ್ಬನಿ ಬೀಳುವ ಕಾಲದಲ್ಲಿ ಹೀಗೆ ಜೇನು ಹುಡುಕುತ್ತಾ ಹೊರಡುವುದು ಇಷ್ಟವಾದ ಕೆಲಸ. ಕಳೆದ ವರ್ಷದವರೆಗೂ ಜೇನಿಗೂ ಚೆನ್ನನಿಗೂ ಕೇವಲ ಹಣದ ಸಂಬಂಧ ಮಾತ್ರಾ ಇತ್ತು. ಕಾಡಿಗೆ ಹೋಗುವುದು ಮರದ ಪೊಟರೆಯಲ್ಲಿಯೋ, ಹುತ್ತದ ಆಳದಲ್ಲಿಯೂ ಹುದುಗಿದ್ದ ಜೇನನ್ನು ಪತ್ತೆ ಮಾಡುವುದು, ಹಾಗೂ ಬೀಡಿ ಹೊಗೆ ಹಾಕಿ ಜೇನಿನ ಕುಟುಂಬ ಹಾರಿಸುವುದು ಮತ್ತು ತುಪ್ಪ ತೆಗೆದು ಪೇಟೆಗೋ ಅಥವಾ ಗಿರಾಕಿಗೋ ಮಾರಿ ಹಣ ಎಣಿಸುವುದು. ಒಂದು ಕುಡಗೋಲು, ತುಪ್ಪ ಹಾಕಲು ಒಂದು ಪಾತೆ, ಬೀಡಿಕಟ್ಟು ಬೆಂಕಿಪೊಟ್ಟಣ ಇಷ್ಟಿದ್ದರೆ ಚೆನ್ನನಿಗೆ ಒಂದುದಿನದ ಸಂಬಳ ಬಂದಂತೆ. ಆದರೆ ಪಟ್ಟಣದಲ್ಲಿ ಇಂಜನಿಯರ್ ಆಗಿದ್ದ ಮುತ್ತಣ್ಣ ನಿವೃತ್ತ ಜೀವನಕ್ಕೆ ಹಳ್ಳಿಯನ್ನು ಆರಿಸಿಕೊಂಡು ಊರಿಗೆ ಬಂದಮೇಲೆ ಚೆನ್ನನ ಜೇನಿನ ಪಾಲನೆಯ ರೀತಿರಿವಾಜುಗಳು ಬದಲಾಗತೊಡಗಿದವು. ಕಾಡಿಗೆ ಹೋಗಿ ಜೇನು ಗೂಡು ಪತ್ತೆಮಾಡಿ ಅವನ್ನು ಪೆಟ್ಟಿಗೆಗೆ ತುಂಬಿ ಮನೆಯಂಗಳಕ್ಕೆ ತಂದು ಸಾಕಾಣಿಕೆ ಆರಂಭಿಸಲು ಪ್ರೋತ್ಸಾಹಿಸಿದ್ದೇ ಮುತ್ತಣ್ಣ. ಹಾಗಾಗಿ ಕಾಡಿಗೆ ಹೊರಡುವ ಚೆನ್ನನ ಕೈಯಲ್ಲಿ ಈಗ ಒಂದು ಕೂಡುಪೆಟ್ಟಿಗೆ, ಹಗ್ಗ, ಕೈಹುಟ್ಟು, ಮುಂತಾದ ಹೊಸ ಪರಿಕರಗಳು ಕೂಡಿಕೊಂಡಿದ್ದವು. ಜೇನು ತತ್ತಿ ಹಿಂಡಿ ಹಿಪ್ಪೆಮಾಡಿ ತುಪ್ಪ ತೆಗೆದು, ಹುಳುಗಳನ್ನು ಹೊಗೆ ಹಾಕಿಸಿ ಹಿಂಸೆ ಮಾಡುವ ಚೆನ್ನನ ಮಾಮೂಲಿ ವಿಧಾನಗಳಿಗೆ ವಿದಾಯ ಹೇಳಿದ್ದ. ಚೆನ್ನ ಮುತ್ತಣ್ಣನಿಂದ ಶಿಸ್ತಿನ ಜೇನುಸಾಕಾಣಿಕೆದಾರನಾಗಿದ್ದ. ಮನೆಯ ಸುತ್ತಮುತ್ತ ನಾಲ್ಕೈದು ಜೇನುಪೆಟ್ಟಿಗೆಗಳನ್ನಿಟ್ಟು ಆದಾಯದ ಜತೆ ಜೀವನಾನುಭೂತಿಯನ್ನು ಪಡೆದುಕೊಳ್ಳುವಂತಾಗಿದ್ದ. ದಿನನಿತ್ಯ ಜೇನು ಸಾಮ್ರ್ಯಾಜ್ಯದ ಹೊಸ ಹೊಸ ವಿಷಯಗಳನ್ನು ಕಥಾ ರೂಪದಲ್ಲಿ ಕೇಳುತ್ತಾ ಬೆರಗಾಗುತ್ತಿದ್ದ. ಮನುಷ್ಯರಂತೆ ಹಿಸ್ಸೆಯಾಗುವುದು, ಯುದ್ಧ ಮಾಡುವುದು, ಆಹಾರ ಕಾಪಿಡುವುದು ಮುಂತಾದ ಹತ್ತಾರು ವಿಷಯಗಳನ್ನು ಮುತ್ತಣ್ಣ ಹೇಳಿದ್ದರೂ ಹಾಡಿನ ರೂಪದಲ್ಲಿ ನಿನ್ನೆ ಹೇಳಿದ ವಿಷಯ ಮಾತ್ರಾ ಚೆನ್ನನನ್ನು ಮಹದಾಶ್ಚರ್ಯಕ್ಕೆ ತಳ್ಳಿತ್ತು. ಹತ್ತಿಪ್ಪತ್ತು ವರ್ಷಗಳಿಂದ ಜೇನುಹುಟ್ಟಿನಲ್ಲಿ ಕೈ ಇಟುಕೊಂಡು ಕುಳಿತಿದ್ದ ಚೆನ್ನನಿಗೆ ಅಲ್ಲೊಂದು ಜೀವಂತ ಪ್ರಪಂಚ ಇದೆ ಎಂದು ಅರಿವು ಮೂಡತೊಡಗಿದ್ದು ಇತ್ತೀಚಿಗಷ್ಟೆ. "ಹಳೆಯ ರಾಣಿ ಚಳಿಗಾಲದ ಒಂದು ದಿನ ಗೂಡಿನಲ್ಲಿದ್ದ ಅರ್ದದಷ್ಟು ಹುಳುಗಳನ್ನು ಕರೆದುಕೊಂಡು ಬೇರೆಯ ಗೂಡನ್ನು ಅರಸುತ್ತಾ ಹೊರಟುಬಿಡುತ್ತದೆಯೆಂದರೆ ಅದು ಹಿಸ್ಸೆಯ ಸಂಭ್ರಮ ಎಂದರ್ಥ. ಮೂರ್ನಾಲ್ಕು ದಿವಸಗಳಲ್ಲಿ ಗೂಡಿನಲ್ಲಿ ಹೊಸ ರಾಣಿ ಮೊಟ್ಟೆಯಿಂದ ಈಚೆ ಬಂದು ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ನವಯೌವನದ ರಾಣಿಗೆ ಹುಟ್ಟಿದ ಮಾರನೆಯ ದಿನವೇ ಗಂಡಿನೊಡನೆ ಸೇರುವ ಯೋಗ. ರಾಣಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರಾ ಗಂಡಿನೊಡನೆ ಸೇರುತ್ತದೆ, ಆನಂತರ ನಿರಂತರ ಮೊಟ್ಟೆಯನ್ನಿಡುತ್ತಾ ಜೇನು ಸಾಮ್ರಾಜ್ಯವನ್ನು ವಿಸ್ತರಿಸುತ್ತದೆ. ಜೇನು ರಾಣಿ ಹುಟ್ಟಿದ ಮಾರನೇ ದಿನ ಗಂಡು ನೊಣದೊಂದಿಗೆ ಹೊರ ಹೊರಟು ಸೇರುವ ಕ್ರಿಯೆ ಪ್ರಕೃತಿಯ ಅದ್ಬುತ ಸಂಯೋಜನೆ. ರಾಣಿಗೆ ದಾರಿ ತೋರಿಸಲು ನಾಲ್ಕಾರು ಕೆಲಸಗಾರ ನೊಣಗಳು , ಹತ್ತಾರು ಗಂಡುನೊಣಗಳು ರಾಣಿಯ ಸೇರಲು ಜತೆಯಾಗಿ ಗೂಡಿನಿಂದ ಹೊರಹೊರಡುತ್ತವೆ. ರಾಣಿಯ ಮಿಲನ ಬಾನಂಗಳದಲ್ಲಿ ಪ್ರಕೃತಿ ನಿಗದಿಪಡಿಸಿದೆ. ಹೊರ ಹಾರಾಟದಲ್ಲಿ ರಾಣಿಯ ಜತೆ ಗಂಡು ಸ್ಪರ್ಧೆಗೆ ಇಳಿಯಬೇಕು, ರಾಣಿ ತನ್ನ ಉದ್ದನೆಯ ನುಣುಪಾದ ದೇಹ, ಅಗಲವಾದ ರಕ್ಕೆಯನ್ನು ಬಳಸಿಕೊಂಡು ಮೇಲೇರಲು ಆರಂಭಿಸುತ್ತದೆ. ಈಗ ಗಂಡು ನೊಣಗಳು ರಾಣಿಯ ಜತೆ ಹಾರಾಟದ ಸ್ಪರ್ಧೆಗೆ ಇಳಿಯುತ್ತವೆ. "ಏರಿ ಏರಿ ಮೇಲಕೇರಿ" ಎಂಬಂತೆ ರಾಣಿ ನೊಣ ಏರುತ್ತಲೇ ಸಾಗುತ್ತದೆ. ಹತ್ತಾರು ಗಂಡು ನೊಣಗಳ ಪೈಕಿ ಅಶಕ್ತ ನೊಣಗಳು ರಾಣಿಯ ಜತೆ ಏರಲಾಗದೆ ಹಾರಲಾಗದೆ ಹಿಂದುಳಿಯುತ್ತವೆ. ಅಂತಿಮವಾಗಿ ಸಶಕ್ತ ಗಂಡುನೊಣವೊಂದು ಬಾನಂಗಳದಲ್ಲಿ ರಾಣಿಯನ್ನು ಕೂಡುತ್ತವೆ. ಪಾಪ ಆ ಗಂಡುನೊಣದ ಮಿಲನ ಎಂದರೆ ತನ್ನದೇ ಚರಮಗೀತೆ ಎಂದು ತಿಳಿಯದೆ ರಾಣಿನೊಣವನ್ನು ಸಂಭ್ರಮದ ಸಂಗೀತದ ನಿನಾದದೊಂದಿಗೆ ಸೇರುತ್ತದೆ. ಆರೋಗ್ಯವಂತ ಸಶಕ್ತ ಜೇನುಪೀಳಿಗೆಗೆ ನಾಣ್ಣುಡಿ ಬರೆದು ರಾಣಿಯ ಸೇರಿದ ಕೆಲಕ್ಷಣಗಳ ನಂತರ ಅದು ಸಾವನ್ನಪ್ಪುತ್ತದೆ. ರಾಣಿನೊಣ ಗರ್ಭವತಿಯಾಗಿ ಮಿಕ್ಕ ಕೆಲಸಗಾರನೊಣಗಳ ಅಣತಿಯಂತೆ ಗೂಡಿನ ದಾರಿ ಹಿಡಿಯುತ್ತದೆ. ಅಲ್ಲಿಗೆ ಮತ್ತೊಂದು ಹೊಸ ಜೇನು ಸಂಸಾರ ಆರಂಭವಾದಂತೆ. ಈಗ ನಿನಗೆ ಅರ್ಥವಾಗಿರಬೇಕು ಜೇನು ಪ್ರಪಂಚದಲ್ಲಿ ಅಂಗವೈಕಲ್ಯತೆ ಯಾಕಿಲ್ಲ?, ಸಶಕ್ತ ಹುಳುಗಳ ಸೃಷ್ಟಿ ಮಾತ್ರಾ ಅಲ್ಲಿದೆ" ಅಂತ ಹಾಡಿನ ಸಹಿತ ಹೇಳಿದ ಮುತ್ತಣ್ಣನ ಮಾತುಗಳು ಬೆರಗು ಮೂಡಿಸಿದ್ದವು. ಮುತ್ತಣ್ಣ ಹೇಳಿದ ಕತೆಯನ್ನು ಮೆಲುಕು ಹಾಕುತ್ತಾ ಜೇನು ಪ್ರಪಂಚದೊಳಗಿದ್ದ ಚೆನ್ನ ಮಾವಿನ ಹಕ್ಕಿಯ ಕೂಗಿಗೆ ವಾಸ್ತವಕ್ಕೆ ಬಂದ. ಮಾವಿನ ಹಕ್ಕಿ ಕೂಗಿತೆಂದರೆ ಅಲ್ಲೆಲ್ಲಿಯೋ ಜೇನು ಇದೆ ಅಂತ ನೆನಪಾಗುತ್ತಲೆ ಸೂರ್ಯನ ಎಳೆ ಕಿರಣಕ್ಕೆ ಕೈ ಅಡ್ಡ ಇಟ್ಟು ಹುಡುಕತೊಡಗಿದ. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಜೇನು ಹುಳುಗಳು ಹತ್ತಿರದ ಹುತ್ತದಿಂದ ಪುರುಪುರನೆ ಹೊರಡುತ್ತಿದ್ದವು. ಒಮ್ಮೊಮ್ಮೆ ದಿನಗಟ್ಟಲೆ ಅಲೆದರೂ ಸಿಗದ ಜೇನು ಮಗದೊಮ್ಮೆ ಹೀಗೆ ಅಚ್ಚರಿ ಮೂಡಿಸುವಷ್ಟು ಬೇಗನೆ ಸಿಗುವುದು ಚೆನ್ನನಿಗೆ ಹೊಸತೇನಲ್ಲ. ಕೂಡು ಪೆಟ್ಟಿಗೆ ತಲೆಯಿಂದ ಇಳಿಸಿ ಕೈ ಹಾರೆಯಿಂದ ಹುತ್ತದ ಬಾಯಿ ಬಿಡಿಸಿ ಬಗ್ಗಿ ಹುತ್ತದೊಳಗೆ ಕಣ್ಣಾಡಿಸಿದ. ಬಿಳಿಯದಾದ ಬರೊಬ್ಬರಿ ಐದು ತತ್ತಿಗಳು ಗೋಚರಿಸಿತು. "ಅಬ್ಬಾ ಸಣ್ಣಾಟದ ಜೇನಲ್ಲ ಇದು" ಎಂದು ತನ್ನಷ್ಟಕ್ಕೆ ಹೇಳಿಕೊಂಡ. ಚೆನ್ನನ ಕೈಹಾರೆಯಿಂದಾದ ಶಬ್ಧಕ್ಕೆ ಗಾಬರಿ ಬಿದ್ದ ಜೇನು ಕುಟುಂಬ ತತ್ತಿ ಬಿಟ್ಟು ಮೇಲೇರತೊಡಗಿತ್ತು. ಸ್ಪಷ್ಟವಾಗಿ ಕಾಣಿಸುತಿದ್ದ ಜೇನು ತತ್ತಿಗಳನ್ನು ಗಮನಿಸಿದ ಚೆನ್ನ ಒಮ್ಮೆ ಹತಾಶನಾದ. ಕಾರಣ ತತ್ತಿಯ ಬುಡದಲ್ಲಿ ನಾಲ್ಕಾರು ರಾಣಿ ಮೊಟ್ಟೆ ಜೋತಾಡುತಿತ್ತು. ಗಂಡು ನೊಣಗಳ ಸಂಖ್ಯೆ ವಿಪುಲವಾಗಿತ್ತು. ಅದರ ಅರ್ಥ ರಾಣಿ ಹೆಸ್ಸೆಯಾಗಿ ಹಾರಿ ಹೋಗಿದೆ. ಇನ್ನಷ್ಟೇ ಹೊಸ ರಾಣಿ ಬರಬೇಕಿದೆ. ಎಂದು ಆಲೋಚಿಸುತ್ತಾ ಹುತ್ತದೊಳಗೆ ಕೈ ಹಾಕಿದಾಗ ಹತ್ತಾರು ಗಂಡುನೊಣಗಳು ಪುರುಪುರು ಶಬ್ಧ ಮಾಡುತ್ತಾ ಹೊರಬಂದವು . ಗಂಡು ನೊಣಗಳ ಸಂಭ್ರಮದ ಹಾರಾಟ ನೋಡಿದ ಚೆನ್ನ, ಮುತ್ತಣ್ಣ ಹೇಳಿದ ಸಾವಿನ ಕತೆ ನೆನಪಾಗಿ ಮನಸ್ಸಿನಲ್ಲಿಯೇ ನಕ್ಕ. ಒಂದೊಂದೇ ತತ್ತಿಗಳನ್ನು ಬಿಡಿಸಿ ಬಾಳೆಪಟ್ಟೆ ಹಗ್ಗದಲ್ಲಿ ತತ್ತಿಗಳನ್ನು ನಿಧಾನವಾಗಿ ಮರದ ಚೌಕಟ್ಟಿಗೆ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಕೈಹುಟ್ಟಿನಲ್ಲಿ ಜೇನು ನೊಣಗಳನ್ನು ಪೆಟ್ಟಿಗೆಗೆ ತುಂಬತೊಡಗಿದ. ಮುಕ್ಕಾಲು ಪಾಲು ನೊಣಗಳು ಪೆಟ್ಟಿಗೆ ಸೇರಿದ ನಂತರ ಮುಚ್ಚಲು ಹಾಕಿ ಮಿಕ್ಕ ಹುಳುಗಳ ಪೆಟ್ಟಿಗೆ ಪ್ರವೇಶವನ್ನು ನೋಡುತ್ತಾ ಬೀಡಿ ಹಚ್ಚಿದ. ಪೆಟ್ಟಿಗೆಯ ಹೊರಗಡೆ ದಪ್ಪನೆಯ ಕಪ್ಪನೆಯ ಗಂಡುಹುಳುಗಳ ಹಾರಾಟ ಹೆಚ್ಚತೊಡಗಿತು. ಈ ಗಂಡು ಹುಳಗಳನ್ನು ನೋಡಿದಾಗಲೆಲ್ಲ ಚೆನ್ನನಿಗೆ ನೆನಪಿಗೆ ಬರುವುದು ನಾಣ ಭಟ್ಟರ ಪ್ರಣಯ ಪ್ರಕರಣ. ಕಪ್ಪಗೆ ಪುಷ್ಟಿಯಾಗಿ ಗಂಡುನೊಣದಂತೆ ಇರುವ ಯಕ್ಷಗಾನದ ಹವ್ಯಾಸಿಯಾದ ನಾಣಭಟ್ಟರು ಮೂರು ಮದುವೆ ಮಾಡಿಕೊಂಡು ಮತ್ತೂ ಪ್ರಕರಣಗಳನ್ನು ಸೃಷ್ಟಿಸಿಕೊಂಡು ಊರಿನ ಜನರ ಬಾಯಿಗೆ ಗ್ರಾಸವಾಗಿದ್ದರು. ಭಗವಂತ ಜೇನು ರಾಣಿ ಕೂಡಿದ ಗಂಡುನೊಣಕ್ಕೆ ಸಾವಿನ ನಿಯಮ ಇಟ್ಟಂತೆ ಮನುಷ್ಯರಿಗೂ ಇದ್ದಿದ್ದರೆ ..ನಾಣಭಟ್ಟರ ಕತೆ ಎಂದೋ ಇಲ್ಲವಾಗಿತ್ತು ಅಂತ ಚೆನ್ನನಿಗೆ ಅನ್ನಿಸಿದರೂ ಮರುಕ್ಷಣ ತಾನೂ ಇರುತ್ತಿರಲಿಲ್ಲ ಎಂದು ಅರಿವಾಗಿ ತನ್ನಷ್ಟಕ್ಕೆ ಮುಗುಳ್ನಕ್ಕ. ಆದರೆ ಭಗವಂತ ಮನುಷ್ಯರ ಮಟ್ಟಿಗೆ ತಿದ್ದುಪಡಿಮಾಡಿ ಎರಡನೆ ಹೆಣ್ಣಿನ ತಂಟೆಗೆ ಹೋದರೆ ಸಾವು ಅಂತ ಇಡಬೇಕಾಗಿತ್ತು ಎಂದು ಆಲೋಚಿಸಿದ. ಜೇನು ಹುಳುಗಳು ಸಂಪೂರ್ಣ ಪೆಟ್ಟಿಗೆಯೊಳಗೆ ತೂರಿಕೊಂಡಿದ್ದರಿಂದ ಯೋಚನಾಸರಣಿಯಿಂದ ಹೊರಬಂದ ಚೆನ್ನ ಪೆಟಿಗೆ ಮನೆಗೆ ತೆಗೆದುಕೊಂಡುಹೋಗಲು ಸಂಜೆ ಬರಬೇಕೆಂದು ಇಲ್ಲದಿದ್ದಲ್ಲಿ ಹೂವುತರಲು ಹೋದ ಜೇನುಗಳು ಅನಾಥವಾಗುತ್ತವೆ ಎಂದು ಎಣಿಸಿ, ಪೆಟ್ಟಿಗೆಗೆ ಇರುವೆ ಮುತ್ತದಿರಲು ನುಮ್ಮಣ್ಣು ಸುತ್ತರಿಸಿ ಮನೆಯತ್ತ ಹೊರಟ. ಕುಂಬ್ರಿಗುಡ್ಡ ಇಳಿದು ಅಡಿಕೆ ತೋಟದ ಸೊಪ್ಪಿನ ಬೆಟ್ಟದ ಒಳದಾರಿ ಹಿಡಿದ ಚೆನ್ನನಿಗೆ ಯಾರೋ ದೊಡ್ಡದಾಗಿ ಮಾತನಾಡುತ್ತಾ ಮರ ಕಡಿಯುತ್ತಿರುವ ಸದ್ದು ಕೇಳಿಸಿ ಅಲ್ಲಿಯೇ ನಿಂತ. ತೋಟಕ್ಕೆ ಸೊಪ್ಪು ಹಾಕುವ ಕಾಲ ಇದಲ್ಲ ಹಾಗಾದರೆ ಈಗ ಯಾರು ಯಾಕೆ ಮರ ಕಡಿಯುತ್ತಿರಬಹುದು, ಕಳ್ಳ ನಾಟದವರಾ? ಎಂಬಂತಹ ಹತ್ತಾರು ಪ್ರಶ್ನೆ ಒಟ್ಟಿಗೆ ಮೂಡಿತು. ಅಂತಿಮವಾಗಿ ನಿಷಣಿ ಸೊಪ್ಪಿನ ನೆನಪಾಗಿ "ಓಹೋ ಯಾರೋ ನಿಷಣಿ ಸೊಪ್ಪು ಕಡಿತಾ ಇದಾರೆ, ದುಡ್ಡಿನಾಸೆಗೆ ಮರ ಕಡ್ದು ಕಾಡು ಲೂಟಿ ಮಾಡ್ಬಿಟ್ರು ಕಳ್ರು" ಎಂದು ತನ್ನಷ್ಟಕ್ಕೆ ಹೇಳಿಕೊಂಡು ಯಾರಿರಬಹುದು ಎಂದು ತಿಳಿಯಲು ಇನ್ನಷ್ಟು ಹತ್ತಿರಕ್ಕೆ ಹೋದ. ನಿಷಣಿ ಮರದ ಹತ್ತಿರ ಹೋದಂತೆಲ್ಲಾ ನಿಷಣಿ ಸೊಪ್ಪು ಕಡಿಯವರು ತನ್ನ ಹೆಸರಲ್ಲೇ ಸುದ್ದಿ ಹೇಳುತ್ತಿರುವುದು ಕೇಳಿದಂತಾಗಿ ಅವರಿಗೆ ಕಾಣದಂತೆ ನಿಂತ.
" ಅಲ್ಲ ಮಾರಾಯ ಆ ನಾಣ ಭಟ್ರಿಗೆ ದೇವ್ರು ಕಬ್ಣದ್ದು ಹಾಕಿ ಕಳ್ಸಿದಾನ ಅಂತ ನಂಗೆ ಅನುಮಾನ" ಮರದ ಮೇಲಿದ್ದವ ಹೇಳಿದ
"ಎಂತಕಾ..?" ಸೊಪ್ಪು ಬಿಡಿಸುತ್ತಾ ಕೆಳಗಡೆ ಇದ್ದವ ಕೇಳಿದ.
"ಮತ್ತೆಂತ ಅವ್ರಿಗೆ ಅರವತ್ತು ವರ್ಷ ಆತು, ಈಗ ಚೆನ್ನನ ಹೆಂಡ್ತಿ ಸಹವಾಸ ಶುರು ಮಾಡಿದ್ರಲೋ.. ಪಾಪ ಚೆನ್ನಂಗೆ ಇದೆಲ್ಲ ಗೊತಿಲ್ಲ, ಅಂವ ಮಳ್ಳು ಜೇನು ಹಿಡೀತಾ ಕಾಡಲ್ಲಿ ಅಲಿತಾ..ರಾಣುಹುಳು ಹಿಂದೆ ಬಿದ್ದಿದ್ದಾ.... ಇಲ್ಲಿ ಅವನ ರಾಣಿ ತಲೆ ಈ ಭಟ್ರು ಕೆಡ್ಸೀರು, ಅವ್ಳು ಪಾಪದವ್ಳೂ,,, ಇವ್ರು ತಮ್ಮ ಸಂಸಾರ್ ಹಾಳು ಮಾಡೋದಲ್ದೇ ಊರಿನವ್ರನೆಲ್ಲಾ ಹಾಳು ಮಾಡ್ತ್ರು..ಮತೆ ಕೇಳಿರೇ ನಾನೇ ದೊಡ್ಡ ಜನ, ಯಕ್ಷಗಾನದಾಗೆ ಅಂತ ಹೇಳ್ತ್ರು..........ಈಗ ನಾನು ಬರ್ತಾ ಇರೋವಾಗ ಭಟ್ರು ಅವ್ರ ಮನೆಗೆ ಹೋದ್ರಪಾ... ಆ ಯಡವಟ್ಟು ಚೆನ್ನ ಎಲ್ಲಿ ಕಾಡಿಗೆ ಹೋದ್ನ ಮಳ್ಳು...................."
************
ಅನತಿ ದೂರದಲ್ಲಿ ನಿಂತು ತನ್ನದೇ ಸಂಸಾರದ ಕತೆ ಊರವರ ಬಾಯಲ್ಲಿರುವುದನ್ನು ಕೇಳಿದ ಚೆನ್ನನಿಗೆ ಒಮ್ಮೆ ಏನು ಮಾಡಬೇಕೆಂದು ತೋಚಲಿಲ್ಲ. ನಾಣಭಟ್ಟರ ಅಲ್ಲಿ ಇಲ್ಲಿನ ಕತೆ ತನ್ನ ಮನೆಯ ಚಾವಡಿಯಲ್ಲಿಯೇ ನಡೆಯುತ್ತಿದೆ ಎಂಬ ಲವಲೇಶದ ಅನುಮಾನವೂ ಇಷ್ಟು ದಿನ ಚೆನ್ನನಿಗೆ ಇರಲಿಲ್ಲ. ಅಕಸ್ಮಾತ್ ಕಿವಿಯಮೇಲೆ ಬಿದ್ದ ಈ ಸುದ್ದಿಯಿಂದ ಒಮ್ಮೆ ಅಧಿರನಾದ ಚೆನ್ನ ಮರುಕ್ಷಣ ಮೈಮೇಲೆ ದೇವರು ಬಂದವನಂತೆ ಕೊಂಡಿಯಲ್ಲಿದ್ದ ಕತ್ತಿಯನ್ನು ಎತ್ತಿ ಹಿಡಿದು ಮನೆಯತ್ತ ಓಡಿದ. "ಏಯ್ ಹಲ್ಕಟ್ ರಂಡೇ ತೆಗಿ ಬಾಗಿಲ, ನಿಮ್ಮಿಬ್ಬರ ರುಂಡ ಚೆಂಡಾಡ್ತೀನಿ ಇವತ್ತು" ಎಂದು ದಬ ದಬ ಬಾಗಿಲ ಒದೆದ ಚೆನ್ನ. ಬಾಗಿಲು ತೆರೆಯಲಿಲ್ಲ. ಇನ್ನಷ್ಟು ಸಿಟ್ಟಿನಿಂದ ಬಾಗಿಲು ಒದ್ದ. ಚೆನ್ನನ ಹೊಡೆತಕ್ಕೆ ದಡಾರನೆ ಬಾಗಿಲು ಮುರಿದು ಬಿತ್ತು. ಮುರಿದ ಬಾಗಿಲ ಬದಿಯಿಂದ ನಾಣ ಭಟ್ಟರು ಓಡಲೆತ್ನಿಸಿದರು. ಉಗ್ರ ನರಸಿಂಹನ ಅವತಾರ ಎತ್ತಿ ನಿಂತಿದ್ದ ಚೆನ್ನ ಎಡ ಕೈಯಲ್ಲಿ ಭಟ್ಟರನ್ನು ಹಿಡಿದುಕೊಂಡು ಒಮ್ಮೆ ಹೆಂಡತಿಯತ್ತ ನೋಡಿ "ಈಗ ರಾಣಿ ಗೂಡಿಗೆ....."ಎಂದು ಅಬ್ಬರಿಸಿ ಕೂಗಿ ಮರುಕ್ಷಣ "ಗಂಡು....ಗಂಡು.... ಯಮನ ಬೀಡಿಗೆ" ಎಂದು ಕತ್ತಿ ಎತ್ತಿದ. ಚೆನ್ನನ ಅಬ್ಬರಾಟಕ್ಕೆ ಮಾಡೊಳಗಿದ್ದ ಪಾರಿವಾಳ, ಗೂಡಿನಲ್ಲಿದ್ದ ಕೋಳಿ, ದಣಪೆ ಬಳಿಯಿದ್ದ ನಾಯಿ ತಮಗೆ ತಿಳಿಯದಂತೆ ಚಿತ್ರ ವಿಚಿತ್ರ ಸದ್ದು ಮಾಡುತ್ತಾ ಕಂಬಿ ಕಿತ್ತವು. ಮನೆಯ ಅಂಗಳದಲ್ಲಿದ್ದ ಪೆಟ್ಟಿಗೆಯಲ್ಲಿ ಜೇನು ರಾಣಿಯೊಂದು ಆಗಷ್ಟೇ ತನ್ನ ಮಿಲನ ಮಹೋತ್ಸವ ಮುಗಿಸಿ ತತ್ತಿ ಸೇರಲು ಹವಣಿಸುತ್ತಿತ್ತು. ಮಿಲನಕ್ಕೆ ಕಾರಣವಾದ ಗಂಡು ಅಲ್ಲೆಲ್ಲೋ ದೂರದಲ್ಲಿ ತಿರುಗಿ ತಿರುಗಿ ಬೀಳುತ್ತಾ ಪ್ರಪಂಚಕ್ಕೆ ವಿದಾಯ ಹೇಳುತ್ತಿತ್ತು.
**************************

Friday, April 30, 2010

ಹ ha ha


Sunday, April 25, 2010

ಬಸ್ಸೊಳಗೆ ಜನರೋ ಜನರೊಳಗೆ ಬಸ್ಸೊ?


ದೀಪಾವಳಿ ಹಬ್ಬದಂದೋ ಅಥವಾ ಗಣೇಶ ಚತುರ್ಥಿಯ ಹಬ್ಬದ ಮಾರನೇ ದಿವಸ ಬಸ್ ನಿಲ್ದಾಣದಲ್ಲಿ ಜನಜಂಗುಳಿಯನ್ನು ನೀವು ನೋಡಿರಬಹುದು. ಸಾವಿರ....? ಅಲ್ಲ ಎರಡು ಸಾವಿರ ಹೀಗೆ ಅಂತೂ ಭರ್ಜರಿ ಜನಸಾಗರ. ಎಲ್ಲರ ಕಣ್ಣೂ ಹೊರಡುವ ಬಸ್ ಗಳತ್ತ. ಹೆಚ್ಚುವರಿ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥೆ ಮಾಡಿಲ್ಲ ಅಂತ ಹಲವರ ಗೊಣಗಾಟದಲ್ಲಿ ನೀವೂ ಸೇರಿರಬಹುದು. ಕೊನೆಗೂ ಪ್ರಯಾಣ ಮಾಡಲಾಗ್ದೇ ಮತ್ತೆ ವಾಪಾಸು ಮನೆಗೂ ಹೋಗಲಾರದೇ ಅಲ್ಲೇ ಬೆಳಗು ಮಾಡಿದ್ದಿರಬಹುದು. ಸರ್ಕಾರಗಳನ್ನು ಆಡಳಿತವನ್ನೂ ಸಿಕ್ಕಾಪಟ್ಟೆ ಅಂದಿದ್ದಿರಬಹುದು. ಇರಲಿ ಅವೆಲ್ಲಾ ವರ್ಷಕ್ಕೊಮ್ಮೆಯೋ ಅಥವಾ ಎರಡು ಸಾರಿಯೋ ಆಗಿದೆ ಬಿಡಿ. ಆದರೆ ಈ ಚಿತ್ರ ನೋಡಿದಿರಲ್ಲ ನೀವು. ಇದು ಚೀನಾದ ಬೀಜಿಂಗ್ ನಗರದ ಸಾರ್ವಜನಿಕ ಬಸ್ ಸ್ಟ್ಯಾಂಡ್ ನ ಚಿತ್ರ. ಇಲ್ಲಿ ಪ್ರತೀ ಶುಕ್ರವಾರ ಅಂದರೆ ವೀಕೆಂಡ್ ನಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯ. ಜನರ ನೂಕು ನುಗ್ಗಲು ತಪ್ಪಿಸಲು ಹೆಚ್ಚು ಕಡಿಮೆ ಅಷ್ಟೇ ಮೀಸಲು ಪೋಲಿಸರಿರಬೇಕು....!. ಇದು ಅವಸ್ಥೆಯೋ ದುರವಸ್ಥೆಯೋ ಆ ಭಗವಂತನೇ ಬಲ್ಲ. ಅಲ್ಲಿಯ ಪಾಡು ಏನಾದರಾಗಲಿ ಈ ಚಿತ್ರ ನೋಡಿದ ಮೇಲೆ ಹುಣ್ಣಾದವನು ಹುಳ ಆದವನನ್ನು ನೆನೆಯಬೇಕಂತೆ ಎಂಬಂತೆ ನೀವು ನಾವು ಇಲ್ಲಿಯ ಪರಿಸ್ಥಿತಿಗೆ ಗೊಣಗಾಟ ನಿಲ್ಲಿಸಬಹುದು. ಏನಂತೀರಿ?.

Saturday, April 24, 2010

ರಸ್ತೆಯ ಅವಸ್ಥೆ



"ಅಯ್ಯೋ ರಸ್ತೆ - ಏನೀ ಅವಸ್ಥೆ", "ರಸ್ತೆಯ ನಡುವೆ ನಾಟಿ ಮಾಡಿ ಪ್ರತಿಭಟನೆ" "ಇಂಥಹಾ ರಸ್ತೆಗಳಿದ್ದರೆ ಹೆರಿಗೆ ಆಸ್ಪತ್ರೆ ಬೇಡ" . ಇಂಥಹಾ ಹಲವಾರು ತರಹದ ಹೆಡ್ ಲೈನ್ ಗಳನ್ನು ನೀವು ನಿತ್ಯ ಪತ್ರಿಕೆಗಳ ಮುಖಪುಟದಲ್ಲಿ ಕಾಣುತ್ತೀರಿ. ವಾಚಕರವಾಣಿಯ ಬಹುಪಾಲು ಪತ್ರಗಳು ರಸ್ತೆಯ ಅವಸ್ಥೆಯ ಕುರಿತಾದದ್ದೇ, ರಾಜಕಾರಣಿಗಳ ಭರವಸೆಯ ಪ್ರಥಮ ಆದ್ಯತೆಯೇ ಈ ರಸ್ತೆ. ಇರಲಿಬಿಡಿ ಇದು ನಮ್ಮ ಭಾರತದ ಕತೆ ಆಯಿತು. ಈ ಚಿತ್ರ ನೋಡಿ ರಷ್ಯಾದ ಕತೆ ಓದಿದ ನಂತರ ನೀವು ನಮ್ಮ ದೇಶದ ರಸ್ತೆಯ ಬಗ್ಗೆ ಎಂದೂ ಗೊಣಗಲಾರಿರಿ. ಈ ಚಿತ್ರದಲ್ಲಿ ಕಾಣಿಸುವುದು ರಷ್ಯಾ ದೇಶದ ಫೆಡರಲ್ ಹೈವೆ. ದಕ್ಷಿಣ ರಷ್ಯಾದಿಂದ ಯಾಕುತ್ಸ್ಕ್ ನಗರವನ್ನು ಸೇರಿಸುವ ರಸ್ತೆ ಇದು. ಚಳಿಗಾಲದಲ್ಲಿ ಇದು ಸೂಪರ್ ಹೈವೆ . ನಂತರ ಶುರುವಾಗು ಬೇಸಿಗೆಯಲ್ಲಿ ಅಕಸ್ಮಾತ್ ಮಳೆ ಆರಂಭವಾಯಿತೆಂದರೆ ಈ ಹೈವೇ ಯ ಅವಸ್ಥೆ ಬಲ್ಲವನೇ ಬಲ್ಲ. ಅಯ್ಯೋ ಟಾರ್ ಹಾಕಬಹುದಲ್ಲ ಅಲ್ಲಿಯೂ ಕೂಡ ಟಾರ್ ಹಾಕಿದಂತೆ ಟೆಂಡರ್ ಕರೆದು ಗುಳುಂ ಅನಿಸಿಬಿಟ್ಟರೇ ಎಂಬ ಉದ್ಘಾರ ತೆಗೆಯದಿರಿ. ಕಾರಣ ಇಲ್ಲಿ ಟಾರ್ ಹಾಕಲು ಬರುವುದಿಲ್ಲ. ಪ್ರತೀ ಬೇಸಿಗೆಯಲ್ಲಿಯೂ ರಸ್ತೆ ಒಂದು ಮೀಟರ್ ಕುಸಿದುಹೋಗುತ್ತದೆ ಹಾಗಾಗಿ ಟಾರ್ ಕಾಂಕ್ರೀಟ್ ಏನನ್ನೇ ಬಳಸಿದರೂ ಎಲ್ಲಾ ಮಂಗಮಾಯ. ಹಾಗಾಗಿ ಈ ಅನಿವಾರ್ಯದ ದುರವಸ್ಥೆ.

Friday, April 23, 2010

ಕಟ್ಟಿಗೆ ಲೋಡ್ ತಯಾರು

ನೀರಿನ ಮೇಲೆ ತೆಪ್ಪದಲ್ಲಿ ಕುಳಿತು ತೇಲುವುದೆಂದರೆ ಅದೊಂದು ಮಧುರ ಅನುಭವ. ತಿಳಿ ನೀರಿನಲ್ಲಿ ಹುಟ್ಟು ಹಾಕುತ್ತಾ ಸಾಗುತ್ತಿದರೆ ತನ್ನಷ್ಟಕ್ಕೆ ಹಾಡು ಗುನುಗುತ್ತದೆ. ದೂರದಲ್ಲಿ ಕಾಣುವ ಮೂರು ಜನ ತೆಪ್ಪದಲ್ಲಿ ಹೀಗೆಯೇ ಮಾಡುತ್ತಾ ಹೋಗುತ್ತಲಿದ್ದಾರೆ ಎಂದೆಣಿಸಿದರೆ ಅದು ಸುಳ್ಳು. ತೆಪ್ಪದಂತೆ ತೋರುವ ಆದರೆ ತೆಪ್ಪವಲ್ಲದ ಈ ಕೆಲಸದ ಹಿನ್ನಲೆ ತಿಳಿದರೆ ತನ್ನಷ್ಟಕ್ಕೆ ಅಬ್ಬಾ ಈ ಜನರ ಸಾಹಸವೇ ಎಂಬ ಉದ್ಘಾರ ಹೊರಡದಿರದು. ಮಾರ್ಚ್ ತಿಂಗಳು ಬಂತೆಂದರೆ ಮಲೆನಾಡಿನಲ್ಲಿ ಕಬ್ಬು ಕಟಾವಿನ ಸಮಯ. ಗಾಣಕ್ಕೆ ಕಬ್ಬು ಕೊಟ್ಟು ಹಾಲು ತೆಗೆದು ಕಾಯಿಸಿ ಬೆಲ್ಲ ಮಾಡುವ ಕೆಲಸ ಭರಾಟೆಯಿಂದ ಸಾಗುತ್ತಿರುತ್ತದೆ. ಈ ಬೆಲ್ಲ ಕಾಯಿಸುವ ಕೆಲಸಕ್ಕೆ ಉರುವಲು ಹೇರಳ ಬೇಕಾಗುತ್ತದೆ. ಊರಿನಂಚಿನ ಕಾಡುಗಳಲ್ಲಿ ಕಟ್ಟಿಗೆಗಳು ಮನೆ ಬಳಕೆಗೆ ಸೀಮಿತ. ರಕ್ಷಿತ ಅರಣ್ಯಗಳಿಂದ ಉರುವಲು ತರಲು ಅರಣ್ಯಾಧಿಕರಗಳ ಕಾಟ. ಇದಕ್ಕೆ ಉಪಾಯ ಈ ಕಾಷ್ಠೋತ್ಸವ. ಲಿಂಗನಮಕ್ಕಿ ಹಿನ್ನೀರಿನ ನಡುಗುಡ್ಡೆಗಳು ಒಣಗಿದ ಮರಗಳ ತೌರು. ಆದರೆ ಅಲ್ಲಿರುವ ಕಟ್ಟಿಗೆ ಹಿನ್ನೀರು ದಾಟಿ ಈಚೆ ಬರಬೇಕೆಂದರೆ ಈ ಸಾಹಸ. ಊರಿನಲ್ಲಿ ಕಬ್ಬು ಬೆಳೆಯುವ ರೈತರು ಮೂರ್ನಾಲ್ಕು ಜನ ಸೇರಿ ವಾರಕ್ಕಾಗುವ ಆಹಾರ ಕಟ್ಟಿಕೊಂಡು ಹಿನ್ನೀರಿನ ನಡುಗುಡ್ಡೆ ಸೇರುತ್ತಾರೆ. ಅಲ್ಲಿ ಒಣಗಿದ ಮರದ ದಿಮ್ಮಿಗಳನ್ನು ಕಡಿದು ಒಂದೆಡೆ ಗುಡ್ಡೆ ಹಾಕುತ್ತಾರೆ. ಸಾಕಷ್ಟು ಉರುವಲು ಸಂಗ್ರಹವಾಯಿತು ಎಂದಾಗ ನೀರಿನಲ್ಲಿ ಒಂದೊಂದೇ ದಿಮ್ಮಿಗಳನ್ನು ಹಾಕಿ ಮರದ ಬಳ್ಳಿಯಿಂದ ಕಟ್ಟುತ್ತಾರೆ. ಹೀಗೆ ಒಂದರ ಮೇಲೆ ಒಂದು ಒಣಗಿದ ಮರ ಇಟ್ಟಾಗ ತೆಪ್ಪ ಕಂ ಕಟ್ಟಿಗೆ ಲೋಡ್ ತಯಾರು. ಅಲ್ಲಿಯೇ ಮರದ ಹುಟ್ಟು ತಯಾರಿಸಿ ಊರಿನತ್ತ ಹುಟ್ಟುಹಾಕುತ್ತಾರೆ. ಸಂಜೆ ಹೊತ್ತಿಗೆ ವರ್ಷಕ್ಕಾಗುವಷ್ಟು ಕಟ್ಟಿಗೆಯೊಂದಿಗೆ ತಟದ ಸಮೀಪದ ಊರಿಗೆ ಮರಳುತ್ತಾರೆ. ಈ ಚಿತ್ರದಲ್ಲಿ ಕಾಣಿಸುತ್ತಿರುವ ಕಟ್ಟಿಗೆ ಸುಮಾರು ಎರಡು ಲಾರಿ ಲೋಡ್ ನಷ್ಟಿದೆ. ಶೇಕಡಾ ಇಪ್ಪತ್ತರಷ್ಟು ಮೇಲ್ಬಾಗದಲ್ಲಿ ಕಾಣಿಸುತ್ತಿದ್ದರೆ ಇನ್ನುಳಿದ ಎಂಬತ್ತರಷ್ಟು ನೀರಿನಲ್ಲಿ ಮುಳುಗಿದೆ. ದಿನವಿಡೀ ತೇಲುವ ಮಜ ಅನುಭವಿಸುವ ಇವರಿಗೆ ಒಮ್ಮೊಮ್ಮೆ ಅಧಿಕಾರಿಗಳಿಂದ ಕಿರುಕುಳವೂ ಇದೆ. ವಾರಪೂರ್ತಿ ಕಾಡಿನಲ್ಲಿ ಇರುವ ಧೈರ್ಯವಿದ್ದರೆ ಕೊನೆಯ ದಿನದ ತೇಲು ತೆಪ್ಪ ವನ್ನು ನೀವೂ ಅನುಭವಿಸಬಹುದು..!.

Wednesday, April 21, 2010

ಬಾಟಲುಗಳ ದೇವಸ್ಥಾನ


ನಮ್ಮಲ್ಲಿ ಗಾದೆಯ ಮಾತೊಂದಿದೆ "ಕಟಕಟೆ ದೇವರಿಗೆ ಮರದ ಜಾಗಟೆ. ಇದೂ ಅದೇತರಹದ್ದು ಇರಬೇಕು, ಈ ದೇವಸ್ಥಾನ ಕಟ್ಟಿದ ವಸ್ತುಗಳನ್ನ ನೋಡಿದರೆ ಎಣ್ಣೆ ದೇವರಿಗೆ ಬಾಟಲೀ ದೇವಸ್ಥಾನ ಅಂತ ಗಾದೆ ಮಾಡಬಹುದು. ಅಂದ ಹಾಗೆ ಈ ದೇವಸ್ಥಾನ ದ ಹೆಸರು "ವಾತ್ ಪಾ ಮಹಾ ಕಾವ್" ಎಂದು. ಬೌದ್ಧ ಧರ್ಮದ ಈ ದೇವಸ್ಥಾನ ಇರುವುದು ಥಾಯ್ಲೆಂಡ್ ನಲ್ಲಿ. ಬ್ಯಾಂಕಾಂಗ್ ನಿಂದ ೩೭೦ ಮೈಲಿ ದೂರದಲ್ಲಿರುವ ಈ ದೇವಸ್ಥಾನವನ್ನು ೧೯೮೪ ರಲ್ಲಿ ಕಟ್ಟಲು ಆರಂಭಿಸಲಾಯಿತು. ಸರಿ ಸುಮಾರು ೧.೫ ಮಿಲಿಯನ್ ಬಾಟಲಿಗಳನ್ನು (ಖಾಲಿ....!) ಬಳಸಿ ಕಟ್ಟಿರುವ ಈ ದೇವಸ್ಥಾನ ಪ್ರತಿನಿತ್ಯ ಸಾವಿರಾರು ಪ್ರೇಕ್ಷಕರನ್ನು ಅಚ್ಚರಿಯಿಂದ ಸೆಳೆಯುತ್ತಿದೆ. ಎಲ್ಲಾ ಕಡೆ ಬಾಟಲಿಯನ್ನೇ ಬಳಸಿರುವುದರಿಂದ ದೇವಸ್ಥಾನ ಯಾವಾಗಲೂ ಬಣ್ಣ ಮಾಸದೇ ಜಗಮಗಿಸುತ್ತಿರುತ್ತದೆ ಎನ್ನುತ್ತಾರೆ ಆಡಳಿತದವರು. ನೀವೂ ನಿತ್ಯ ಬಾಟಲಿ ಬಳಸುವರಾಗಿದ್ದರೆ ಇವತ್ತಿನಿಂದ ಹಾಗೆ ಎತ್ತಿಡಿ. ಮುಂದೆ ದೇವಸ್ಥಾನ ಕಟ್ಟಿಸಬಹುದು. ಹಾಗಂತ ಬಾಟಲಿ ಬಳಸುವ ಅಭ್ಯಾಸವಿಲ್ಲದಿದ್ದರೆ " ನಾನು ದೇವಸ್ಥಾನ ಕಟ್ಟಿಸಬೇಕು ಹಾಗಾಗಿ ಬಾಟಲಿ ಬಳಸಲು ಆರಂಭಿಸಿದೆ ಎನ್ನಬೇಡಿ. ಈಗಾಗಲೆ ಬಳಸುವರಾಗಿದ್ದರೆ ಪುಣ್ಯದ ಕೆಲಸಕ್ಕಾಗಿ ಈಗ ಬಾಟಲಿ ಬಳಸುತಿದ್ದೇನೆ ಎಂದು ಸಮಜಾಯಿಶಿ ಮಾಡಿಕೊಳ್ಳಿ ಬೇಕಾದರೆ..!

Thursday, April 8, 2010

ಹೃದಯದ ಮಾತು ಮತ್ತು ಓಶೋ ಎಂಬ ಸಂತ ..ಹಾಗೂ ಬಿಟ್ಟಾಕು..... ಬಿಟ್ಟಾಕು ....ಬಿಟ್ಟಾಕು


ಆ ಕಣ್ಣುಗಳಲ್ಲಿ ಅದೆಂತಹಾ ಭಾವ, ಆ ಮುಖದಲ್ಲಿ ಅದೆಂತದೋ ಶಕ್ತಿ ಆ ನೋಟದಲ್ಲಿ ಉನ್ಮಾದ ಎಂಬಂತಹ ಡೈಲಾಗ್ ಗಳನ್ನು ಬದಿಗಿರಿಸಿ ಓಶೋವನ್ನು ನೋಡೋಣ. ಎಲ್ಲ ಸಂತ ಸನ್ಯಾಸಿಗಳೂ ನನ್ನನ್ನು ನಂಬಿ ನಾನು ಹೇಳಿದ್ದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯಿರಿ ಎಂದರೆ ಈ ಮಹಾನುಬಾವ ಉಲ್ಟಾ ಹೇಳಿದ್ದ. "ನಾನು ಹೇಳುತ್ತೇನೆಂದು ನಂಬಬೇಡಿ, ಅದು ನಿಮ್ಮ ಅನುಭವಕ್ಕೆ ಬಂದಾಗ ನಂಬಿ. ನಿಮಗೆ ನೀವೆ ಗುರು ಅಪ್ಪಿತಪ್ಪಿಯೂ ನನ್ನನ್ನು ಗುರು ಎಂದು ನಂಬಬೇಡಿ,ಯಾರು ದೇವರನ್ನು ತೋರಿಸುತ್ತೇನೆ ಎಂದು ಹೇಳುತ್ತಾರೋ ಅವರು ಸುಳ್ಳು ಹೇಳುತ್ತಿದ್ದಾರೆಂದು ಅರ್ಥ, ದೇವರನ್ನು ಅವರವರೇ ಕಾಣಬೇಕು, ಬೇರೆಯವರು ತೋರಿಸಲು ಸಾಧ್ಯವಿಲ್ಲ. ಮಾರ್ಗ ಸಾವಿರಾರುಇದೆ ಆಯ್ಕೆ ಅವರವರದ್ದು. ಸೆಕ್ಸ್ ಎಂಬುದು ಪ್ರಕೃತಿ ಸಹಜ ಅದನ್ನು ತಲೆಯೊಳಗೆ ಇಟ್ಟುಕೊಂಡು ರುಗ್ಣರಾಗಬೇಡಿ ತಲೆಯೊಳಗೆ ಇದ್ದಷ್ಟು ಅದು ವಿಕಾರರೂಪ ತಾಳುತ್ತದೆ," ಎಂಬಂತಹ ವಾಕ್ಯಗಳನ್ನು ಹೇಳಿದ ಗುರುವಲ್ಲದ ಗುರು ಸಂತನಲ್ಲದ ಸಂತ ಒಶೋ ರಜನೀಶ್ ಎಂದು ನಿಮಗೆ ಗೊತ್ತು. ಆತ ಸಾವಿರಾರು ಪುಸ್ತಕಗಳನ್ನು ಓದಿದ ಹಾಗೂ ಬರೆದ ಮತ್ತು ವಿಧವಿಧವಾದ ಜೀವನಾನುಭವವನ್ನು ಪಡೆದ ಮಹಾನುಭಾವಿ. ಹಾಗೆಹೇಳುತ್ತಾ ಹೇಳುತ್ತಾ ಕಾಲವಾದ ಅವರ ತತ್ವ ಸ್ವಲ್ಪ ಅರ್ಥವಾದರೆ ಸುಂದರ ಸುಮಧುರ ಪ್ರಪಂಚದ ಅರಿವಾಗುತ್ತದೆ.
ಎಲ್ಲರಂತೆ ನಾವು ಅಲ್ಲ ಎಂಬ ಭಾವನೆ ಎಲ್ಲರಲ್ಲಿಯೂ ಇರುತ್ತದೆ. ನಾವು ಕೆಲಸ ಮಾಡುತ್ತೇವೆ ಮಾತನಾಡುತ್ತೇವೆ ಬರೆಯುತ್ತೇವೆ, ಓದುತ್ತೇವೆ, ಊಟ ಆಟ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ ಅವೆಲ್ಲಾ ಒಂದೆಡೆ ಇರಲಿ. ಇವುಗಳನ್ನೆಲ್ಲಾ ಮಾಡುವುದಕ್ಕೆ ಕೆಲವರು ಮೆದುಳನ್ನು ಬಳಸುತ್ತಾರೆ ಇನ್ನು ಕೆಲವರು ಹೃದಯವನ್ನು ಬಳಸುತ್ತಾರೆ ಎಂದು ಓಶೋ ಹೇಳುತ್ತಾರೆ . ಇದೇನು ತರ್ಲೆ ಅಂದಿರಾ , ಇರಲಿ ಸ್ವಲ್ಪ ಸಹಿಸಿಕೊಳ್ಳಿ ಮುಂದೆ ನೋಡೋಣ
ಒಂದಾನೊಂದು ಊರಲ್ಲಿ ಒಬ್ಬ ಗ್ರಹಸ್ಥನಿದ್ದ, ಬೆಳ್ಳನೆಯ ಹೆಂಡತಿ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ ಕೈತುಂಬಾ ಕಾಸು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸುಖೀ ಸಂಸಾರ ಆತನದು. ಆತ ತನ್ನನ್ನು ತನ್ನ ಸಂಸಾರವನ್ನು ಹೊರತುಪಡಿಸಿ ಮಿಕ್ಕ ಯಾರಿಗೂ ಕವಡೆಕಾಸಿನ ಉಪಕಾರವನ್ನು ಮಾಡುತ್ತಿರಲಿಲ್ಲ ಹಾಗಾಗಿ ಆತನನ್ನು ಕೃಪಣ ಜಿಪುಣ ಮುಂತಾಗಿ ಊರವರು ಕರೆಯುತ್ತಿದ್ದರು. ಇದ್ದಕ್ಕಿಂದಂತೆ ಆತನಿಗೆ ಹೃದಯಾಘಾತವಾಯಿತು . ಹಣಕಾಸಿನ ತೊಂದರೆ ಇಲ್ಲದ್ದರಿಂದ ಆತ ವೈದ್ಯರುಗಳ ಶ್ರಮದಿಂದ ಬದುಕುಳಿದ. ಹೃದಯಾಘಾತದ ಆಘಾತ ಮಾಯವಾಗುವ ಮೊದಲೆ ಅದ್ಯಾರೋ ಕೋರ್ಟಿನಲ್ಲಿ ಅವನ ವಿರುದ್ಧ ಕೇಸು ಹಾಕಿದರು. ಹೀಗೆ ಸುಖವಾಗಿದ್ದ ಸಂಸಾರದಲ್ಲಿ ಒಂದರ ಹಿಂದೆ ಒಂದಂತೆ ಆಘಾತಗಳು ಎರಗತೊಡಗಿದವು. ಆವಾಗ ಸಲಹೆಕಾರರು ಆಕಳೊಂದನ್ನು ಸಾಕು ಗೋಪೂಜೆಯಿಂದ ಎಲ್ಲಪರಿಹಾರವಾಗುತ್ತದೆ ಎಂದರು. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಆತನಿಗೆ ಅದು ಸತ್ಯ ಅಂತ ಅನ್ನಿಸತೊಡಗಿತು. ಕಾರಣ ಪಕ್ಕದ ಮನೆಯಲ್ಲಿ ಉತ್ತಮ ಆಕಳು ಕರುಗಳೊಡನೆ ಕೊಟ್ಟಿಗೆ ತುಂಬಿ ತುಳುಕಾಡುತ್ತಿತ್ತು. ಅವರ ಮನೆಯಲ್ಲಿ ಹೃದಯಾಘಾತವೂ ಇರಲಿಲ್ಲ, ಕೋರ್ಟು ಕಛೇರಿಯ ತರ್ಲೆ ತಾಪತ್ರಯವೂ ಇರಲಿಲ್ಲ. ಆದಾಯದ ಐವತ್ತು ಭಾಗವನ್ನು ಅವರು ಗೋಸೇವೆಗೆ ಖರ್ಚು ಮಾಡುತ್ತಿದ್ದರು. ಸರಿ ಮಾರನೇ ದಿನ ಈತನೂ ಒಂದು ಆಕಳನ್ನು ಖರೀದಿಸಿದ. ನಿತ್ಯ ಮೈ ತೊಳೆಯುವುದು, ದಾಣಿ ಇಡುವುದು ಮುಂತಾದ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಅದೇನು ಕಾಕತಾಳೀಯವೋ ಸತ್ಯವೋ ಹೃದಯ ಸರಿಯಾಯಿತು. ಕೋರ್ಟು ಕೇಸು ದಿಡೀರನೆ ಖುಲಾಸ್. ಆಕಳು ತಂದ ಎರಡು ತಿಂಗಳೊಳಗೆ ಎಲ್ಲಾ ಮಾಮೂಲಿಯಂತೆ ನಡೆಯತೊಡಗಿತು( ಇದು ಕತೆ . ಕೋರ್ಟು ಹೃದಯದ ತೊಂದರೆಯಿದ್ದವರೆಲ್ಲಾ ಆಕಳು ಸಾಕಲು ಶುರುಮಾಡಿ ಪರಿಹಾರ ಕಾಣದಿದ್ದರೆ ನಾನು ಜವಾಬ್ದಾರನಲ್ಲ..........!) ಈಗ ಆತನಿಗೆ ಮಿದುಳು ಕೆಲಸಮಾಡಲು ಶುರುಮಾಡಿತು. ಈ ಆಕಳಿಗೆ ಇಷ್ಟೆಲ್ಲಾ ಖರ್ಚು ಮಾಡಿ ಸುಮ್ಮನೆ ಹಣವನ್ನು ವ್ಯರ್ಥ ಮಾಡುತ್ತಿದ್ದೇನಲ್ಲ ಅಂತ ಅನ್ನಿಸತೊಡಗಿತು. ಸರಿ ಆತ ಮಾರನೇದಿನ ಆಕಳುಹಾಗೂ ಕರುವನ್ನು ಮಾರಲು ತೀರ್ಮಾನಿಸಿದ. ಆದರೆ ಕೊಳ್ಳಲು ಸುಲಭವಾಗಿ ಯಾರೂ ಮುಂದೆಬರಲಿಲ್ಲ. ಆವಾಗ ಆತ ತಾನು ಸಮಸ್ಯೆಯಲ್ಲಿ ಸಿಕ್ಕಿದ್ದು ಹಾಗೂ ಆಕಳು ಮನೆಗೆ ಬಂದನಂತರ ಸಮಸ್ಯೆಗಳು ಬಾಳೆಹಣ್ಣು ಸುಲಿದಂತೆ ಮಾಯವಾದದ್ದು ಮುಂತಾದವುಗಳನ್ನು ಎಳೆ ಎಳೆಯಾಗಿ ಜನರ ಬಳಿ ಹೇಳತೊಡಗಿದ. ಕೆಲದಿನದಲ್ಲಿ ಊರಿನ ಮತ್ತೊಬ್ಬರಿಗೆ ಹೃದಯಾಘಾತವಾಯಿತು . ಮಾರನೆ ದಿವಸ ಈತನ ಆಕಳು ದುಪ್ಪಟ್ಟು ದರಕ್ಕೆ ಅವರಿಗೆ ಮಾರಾಟವಾಯಿತು.
ಈಗ ನಿಮಗೆ ಅರ್ಥವಾಗಿರಬೇಕು ಮಿದುಳಿನ ಕೆಲಸವೆಂದರೆ ಯಾವುದು ಅಂತ. ಇದೇ ಕತೆಯಲ್ಲಿ ಹೃದಯ ಕೆಲಸದ ಉದಾಹರಣೆ ಇದೆ, ಆದಾಯದ ಐವತ್ತು ಭಾಗ ಆಕಳು ಕೊಟ್ಟಿಗೆಗೆ ವ್ಯಯಿಸುತ್ತಿದ್ದಾನಲ್ಲ ಆತನದು. ಅವನಿಗೆ ಆಯ ವ್ಯಯ ದ ಬಗ್ಗೆ ಗಮನವಿರುವುದಿಲ್ಲ , ಹೃದಯಪೂರ್ವಕವಾಗಿ ಆಕಳನ್ನು ಸಾಕುತ್ತಿರುತ್ತಾನೆ
ಇಂತಹ ಸಣ್ಣ ಸಣ್ಣ ಕತೆಗಳ ಮೂಲಕ ಓಶೋ ಇಷ್ಟವಾಗುತ್ತಾರೆ .
ಯಾರಾದರೂ ನಿಮ್ಮ ಬಳಿ ನಿಮ್ಮ ಕೆಲಸಕ್ಕೆ "ನಾನು ನಿಮ್ಮನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ " ಎಂದು ಹೇಳಿದ ನಂತರ ಒಂದು ಕ್ಷಣ ಯೋಚಿಸಿ ಅದು ಖಂಡಿತ ಅವರ ಮಿದುಳಿನ ಕೆಲಸ. ನಿಮ್ಮನ್ನು ಹೀಗೆ ಅಭಿನಂದಿಸುವುದರಿಂದ ತನಗೆ ಲಾಭವಿದೆ ಎಂದು ಅವರ ಮಿದುಳು ಲೆಕ್ಕಾಚಾರ ಹಾಕಿ ಈ ಮಾತನ್ನು ಹೇಳಿಸುತ್ತದೆ. ನಿಜವಾಗಿಯೂ ಅವರ ಹೃದಯ ನಿಮ್ಮ ಕೆಲಸಕ್ಕೆ ತುಂಬಿಬಂದಿದ್ದರೆ ಅವರು ನಿಮ್ಮ ನ್ನು ಭೇಟಿ ಮಾಡಿದ ತಕ್ಷಣ ಅವರ ಮುಖ ಅವರ ಕಣ್ಣುಗಳು ಅಭಿನಂದನೆಗಳನ್ನು ಸಲ್ಲಿಸಿಬಿಟ್ಟಿರುತ್ತದೆ. ಹೃದಯಪೂರ್ವಕ ಅಭಿನಂದನೆಗಳನ್ನು ಬರೆದು ಸಲ್ಲಿಸಬಹುದು , ಭೇಟಿಯಾದಾಗ ಹೇಳುವ ಅವಶ್ಯಕತೆ ಇರುವುದಿಲ್ಲ. ಇದೆ ಅಂತಾದರೆ ಅದು ಪಕ್ಕಾ ಮೆದುಳಿನ ಕೆಲಸ. ಇಂತಹ ನೂರಾರು ಹೊಸ ಹೊಸ ಯೋಚನೆಗಳು ವಿಷಯಗಳು ಒಶೋವಿನ ಬುಟ್ಟಿಯಲ್ಲಿವೆ. ಸ್ವಲ್ಪ ಬಸಿದುಕೊಂಡರೆ ಏಕಾಂಗಿಯಾದಾಗ ಆಸ್ವಾದಿಸಬಹುದು.
ಪ್ರೀತಿ ಪ್ರೇಮ ದೇವರು ಧರ್ಮ ಮುಂತಾದ ಶಭ್ದಗಳು ಹೃದಯಕ್ಕೆ ಸಂಬಂಧಪಟ್ಟಿದ್ದು. ಹಣ, ಲೋಭ ಲಾಭ,ಮೋಹ ಮದ ಮತ್ಸರ ಮುಂತಾದವುಗಳೆಲ್ಲಾ ಮಿದುಳಿಗೆ ಸಂಬಂಧಪಟ್ಟಿದ್ದು. ಹೃದ್ಯಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಸುಖ ಸ್ವಲ್ಪ ಹೆಚ್ಚು ಮೆದುಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸುಖ ಸ್ವಲ್ಪ ಕಷ್ಟ.
ಓಶೋ ಹೇಳಿದ್ದು ಅದನ್ನೆ ಅನುಭವಕ್ಕೆ ಬಂದರೆ ನಂಬು ಇಲ್ಲದಿದ್ದರೆ ಬಿಟ್ಟಾಕು.... ...... ಬಿಟ್ಟಾಕು ....ಬಿಟ್ಟಾಕು