Saturday, August 14, 2010

ಮನೆಯೇ ವಸ್ತು ಸಂಗ್ರಹಾಲಯ


ಧರ್ಮಸ್ಥಳಕ್ಕೋ ಅಥವಾ ಮೈಸೂರಿಗೋ ಪ್ರವಾಸಕ್ಕೆ ಹೋದವರು ಒಮ್ಮೆ ವಸ್ತು ಸಂಗ್ರಹಾಲಯಕ್ಕೆ ಹೋಗದೇ ಬರಲಾರರು. ಒಂದುಕಾಲದಲ್ಲಿ ಮನುಷ್ಯ ಬಳಸುತ್ತಿದ್ದ ವಸ್ತುಗಳ ಒಪ್ಪಓರಣ ಜೋಡಣಯೇ ಅಲ್ಲಿನ ಪ್ರಮುಖ ಆಕರ್ಷಣೆ. ಈ ಸಂಗ್ರಹಗಳು ಬಹಳ ಪುರಾತನವಾದುದರಿಂದ ಅವುಗಳ ಮಹತ್ವ ಜಾಸ್ತಿ. ವಸ್ತುಗಳು ಹಳೆಯದಾದಂತೆಲ್ಲ ಮಹತ್ವ ಪಡೆಯುತ್ತಾ ಸಾಗುತ್ತದೆ. ಆದರೆ ಹಾಗೆ ಮಹತ್ವ ಪಡೆದುಕೊಳ್ಳಲು ಅವುಗಳನ್ನು ಕಾಪಿಡಬೇಕು.ಹಾಗೆ ಕಾಪಿಟ್ಟದ್ದನ್ನು ಅಂದವಾಗಿ ಒಪ್ಪಓರಣ ಮಾಡುತ್ತಾ ಇರಬೇಕು. ಆಗ ಅದು ಸಂಗ್ರಹಾಲಯ ಎಂದೆನಿಸಿಕೊಳ್ಳುತ್ತದೆ. ಅವೆಲ್ಲ ದೊಡ್ಡಮಟ್ಟದ ಸಂಗ್ರಹಾಲಯದ ಕತೆಯಾಯಿತು, ಹೀಗೆ ಹಳೆಯದಾದ ವಸ್ತುಗಳನ್ನು ಬಳಕೆಯಿಲ್ಲದೆ ಮೂಲೆಗೆಸೆದ ಹಳೆಯ ಅಮೂಲ್ಯ ವಸ್ತುಗಳನ್ನು ಅಚ್ಚುಕಟ್ಟಾಗಿ ಕಾಪಿಟ್ಟು, ಕೃಷಿಕ ವೃತ್ತಿಯ ಜತೆಯಲ್ಲಿಯೇ ತಮ್ಮ ಮನೆಯಲ್ಲಿ ಒಂದು ಪುಟ್ಟ ಹಳೆಯ ವಸ್ತು ಸಂಗ್ರಹಾಲಯ ಮಾಡಿದ ಹಳ್ಳಿ ಹೈದನ ಆಸಕ್ತಿಯ ನೋಟ ಇದು.
ಸಾಗರ ತಾಲ್ಲೂಕಿನ ತಲವಾಟ ನಲವತ್ತು ಮನೆಗಳ ಪುಟ್ಟ ಹಳ್ಳಿ. ಅಡಿಕೆ ಕೃಷಿ ಅಲ್ಲಿನ ಜನರ ಜೀವನಾಧಾರ. ಕೃಷಿಯ ಜತೆಯಲ್ಲಿ ಈ ಪುಟ್ಟ ಸಂಗ್ರಹಾಲಯವನ್ನು ನಡೆಸುತ್ತಿರುವ ವ್ಯಕ್ತಿ ಗುಂಡೂಮನೆ ಜಯಕೃಷ್ಣ. ಜಕ್ಕಣ್ಣ ಎಂದೇ ಪರಿಚಿತರಾಗಿರುವ ಇವರಿಗೆ ಪುರಾತನ ವಸ್ತುಗಳನ್ನು ಕಾಪಿಡುವ ಹವ್ಯಾಸ. ಅವರ ಹವ್ಯಾಸಕ್ಕೆ ಹಲವಾರು ಜನರು ತಮ್ಮ ಮನೆಯ ಅಟ್ಟದ ಮೂಲೆಯಲ್ಲಿ ಬಿದ್ದಿರುವ ವಸ್ತುಗಳನ್ನು ನೀಡಿದ್ದಾರೆ. ಜಯಕೃಷ್ಣ ಅವುಗಳನ್ನು ಅಲ್ಪ ಸ್ವಲ್ಪ ದುರಸ್ತಿ ಮಾಡಿಸಿ ಸುಸ್ಥಿಯಲ್ಲಿ ತಮ್ಮ ಮನೆಯ ಅಟ್ಟದಲ್ಲಿ ಜೋಡಿಸುತ್ತಾರೆ. ಅವರ ಈ ಪುಟ್ಟ ಸಂಗ್ರಹಾಲಯದಲ್ಲಿ ನೂರು ವರ್ಷ ಹಳೆಯದಾದ ಲಾಟೀನು, ಇನ್ನೂ ಹಳೆಯ ಇತಿಹಾಸವಿರುವ ದೀಪದ ಕಂಬ, ಐವತ್ತು ವರ್ಷದ ಹಳೆಯದಾದ ಕ್ಯಾಮೆರಾ, ಸ್ವಾತಂತ್ರ್ಯ ಪೂರ್ವದ ನಾಣ್ಯಗಳು, ತಾಳೇಗರಿ ಗ್ರಂಥಗಳು, ಮರದ ಒತ್ತು ಯಂತ್ರ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಕೃಷಿ ಉಪಕರಣಗಳಿಂದ ಪ್ರಾರಂಭವಾಗಿ ಕೃಷಿಕ ಬಳಸುತ್ತಿದ್ದ ಹಲವು ವಸ್ತುಗಳು ಇಲ್ಲಿವೆ. ನಿರುಪಯೋಗಿ ವಸ್ತುಗಳನ್ನು ಎಸೆದು ಕಸದಿಂದ ತುಂಬಿರುತ್ತಿದ್ದ ಮನೆಯ ಮಹಡಿ ಈಗ ಅದೇ ನಿರುಪಯೋಗಿ ವಸ್ತುಗಳನ್ನು ಒಪ್ಪ ಓರಣವಾಗಿಟ್ಟದ್ದರಿಂದ ವಸ್ತುಸಂಗ್ರಹದ ಕೋಣೆಯಾಗಿದೆ. ಮುಂದಿನ ತಲೆಮಾರಿನವರಿಗೆ ಹಿಂದಿನ ವಸ್ತುಗಳ ಪರಿಚಯಿಸುವ ಜಾಗವಾಗಿದೆ.
ಸ್ವಂತ ಹವ್ಯಾಸಕ್ಕೆಂದು ಶುರುಮಾಡಿದ ಸಂಗ್ರಹಾಲಯಕ್ಕೆ ಈಗ ಆಪ್ತರು,ಪರಿಚಯಸ್ತರು ಭೇಟಿ ನೀಡುವುದರ ಜತೆಗೆ ಅಪರೂಪಕ್ಕೊಮ್ಮೆ ಜೋಗ ನೋಡಲು ಬಂದ ಪ್ರವಾಸಿಗಳು ಬಂದು "ವಾವ್" ಎನ್ನುವುದುಂಟು, ಕೃಷಿಯ ಜತೆ ಇಂಥಹ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಭಾಹ್ಯ ಪ್ರಪಂಚದ ಪರಿಚಯದ ಜತೆ ಕೃಷಿಕನ ವ್ಯಾಪ್ತಿಯ ವಿಸ್ತಾರವೂ ಆಗುತ್ತದೆ ಎನ್ನುವುದು ಜಯಕೃಷ್ಣರವರ ಮಾತು. ಐದು ವರ್ಷಗಳ ಹಿಂದೆ ಮನೆಯಲ್ಲಿಯೇ ಇದ್ದ ನಾಲ್ಕು ವಸ್ತುಗಳಿಂದ ಪ್ರಾರಂಭವಾದ ಸಂಗ್ರಹಾಲಯ ಇಂದು ೧೪೫ ಹಳೆಯ ವಸ್ತುಗಳನ್ನು ಹೊಂದಿದೆ ಜತೆಯಲ್ಲಿ ಈ ಹವ್ಯಾಸದಿಂದಾಗಿ ಅಷ್ಟೇ ಪ್ರಮಾಣದ ಹೊಸ ಮಿತ್ರರನ್ನೂ ಗಳಿಸಿದ್ದೇನೆ ಎನ್ನುತ್ತಾರೆ ಜಕ್ಕಣ್ಣ. ಜೋಗಕ್ಕೆ ಹೋದಾಗ ಒಮ್ಮೆ ಭೇಟಿ ನೀವೂ ಕೊಡಬಹುದು.

ಜಯಕೃಷ್ಣರವರ ವಿಳಾಸ:

ಜಿ.ಎಸ್.ಜಯಕೃಷ್ನ
ಅಂ: ತಲವಾಟ
ಸಾಗರ -ಶಿವಮೊಗ್ಗ 577421 ಫೋ: 08183207361 ಈ ಮೈಲ್: ulimane@gmail.com

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Friday, August 6, 2010

ತಾವರೆಯ ಗಿಡ ಹುಟ್ಟಿ......

ಅದೇಕೆ ಹಾಗೆ ಚಂದದ ಹೂವು ಬಿಡುತ್ತದೆ ಅಂತ ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಸಾಮಾನ್ಯವಾಗಿ ಎಲ್ಲವೂ ಹೂವುಬಿಡುವುದು ಕಾಯಾಗಿಸುವುದಕ್ಕೆ. ಆದರೆ ತಾವರೆಯ ಹೂವಿಂದ ಕಾಯಾಗುವುದಿಲ್ಲ. ಬುಡದಲ್ಲಿ ಪುತಪುತ ಹಿಳ್ಳು ಒಡೆದು ತನ್ನ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳುತ್ತದೆ. ಆದರೂ ಸಿಕ್ಕಾಪಟ್ಟೆ ಚಂದದ ಹೂವುಬಿಡುತ್ತದೆ. ಸರಿ ಹೂವು ಬಿಡುತ್ತದೆ ನೋಡಲು ಚಂದ ಇದೆ ಇನ್ನೇನು ನಿನ್ನ ರಗಳೆ ಎಂದಿರಾ?. ಇರುವುದೇ ಅಲ್ಲ, ಘೋರಾಂಡ್ಲ ಮಳೆಗಾಲ್ದಲ್ಲಿ ದೇವರೆಂಬ ದೇವರಿಗೆ ಹೂವುಗಳೇ ಇಲ್ಲದಾಗ ಆ ಕೊರತೆಯನ್ನು ನೀಗಿಸುವ ತಾಕತ್ತು ಇರುವುದು ಈ ತಾವರೆ ಗಿಡಕ್ಕೆ. ಅಯ್ಯ ಅದೂ ಒಳ್ಳೆಯದೇ ಆಯಿತು ಮತ್ತೇನು ಸಮಸ್ಯೆ ಅಂತ ಕೇಳಬಹುದು ನೀವು. ಸಮಸ್ಯೆ ಇರುವುದೇ ಅಲ್ಲಿ, ತಾವರೆಯ ಹೂವಾಗುವ ಬಹಳ ಮುಂಚೆ ಅಂದರೆ ಗಿಡ ಹುಟ್ಟಿದಾಗ. ಆಚೀಚೆ ಮನೆಯವರು ಮತ್ತು ಊರಿನವರು "ನಿಮ್ಮಲ್ಲಿ ಕೇಸರಿ ತಾವ್ರೆ ಇದ್ದು ಅಂತ ಶಾರ್ದಕ್ಕ ಹೇಳಿದ್ದ ಒಂದು ಬುಡ ತಗಂಡು ಹೋಪನ ಅಂತ ಬಂದಿ" ಎಂದು ಬಂದಾಗ ನಿಜವಾದ ಸಮಸ್ಯೆ. ಅಯ್ಯೋ ಪುಣ್ಯಾತ್ಮ ಸಾಕು ಏನದು ಸಮಸ್ಯೆ ಹೇಳು ಅಂದಿರಾ ವಾಕೆ... ಕೇಳಿ ಈಗ.
ನಮ್ಮ ಮಲೆನಾಡಿನಲ್ಲಿ ಉದ್ಯೋಗ ಖಾತ್ರಿಯಿಂದಾಗಿ ಕೂಲಿ ಆಳಿನ ಸಮಸ್ಯೆ ಯಡ್ಡಾದಿಡ್ಡಿ. ನೂರಾ ಐವತ್ತು ರೂಪಾಯಿ ದಿನಕ್ಕೆ ಕೊಟ್ಟು ಯಾರನ್ನಾದರೂ ಹಿಡಕೊಂಡು ಬಂದು ನಾವು ಅವರನ್ನ ಕರೆದುಕೊಂಡು ಕಾದಿಗೆ ಚೊಕ್ಕ ಮಾಡಲು ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಚಾ ಕೊಟ್ಟ ಮನೆ ಹೆಂಗಸರು ಅವರನ್ನು " ಮಾರಿ(ಇದು ಹೆಸರು ಹೆದರಬೇಡಿ),,, ತಾವ್ರೆ ಗಿಡ ಹುಟ್ಟಿ ಹದಿನೈದು ದಿವ್ಸ ಆತು ಇನ್ನೂ ಅದಕ್ಕೆ ಗೂಟ ಕೊಡ್ಲಿಲ್ಲ, ಮಾರಾಯ, ಇವ್ರ ಹತ್ರ ಹೇಳಿರೆ ಹ್ವಾರ್ಯ ಇಲ್ಲ ಅಂತಾರೆ, ಹಿತ್ಲಾಕಡೆಯಿಂದ ಹೋಗಿ ಒಂದು ಹೊರೆ ಗೂಟ ತಂದುಕೊಡ" ಅಂತ ಪಾಲೀಷ್ ಮಾಡಿ ಕೆಲಸದವನನ್ನು ಕಳುಹಿಸಿಬಿಡುತ್ತಾರೆ. ಅಲ್ಲಿಗೆ ನಮ್ಮ ತೋಟದ ಕೆಲಸ ಅವತ್ತಿನ ಮಟ್ಟಿಗೆ ಪಿನಿಷ್. ಈಗ ನನ್ನ ಸಮಸ್ಯೆ ನನ್ನ ಸಮಸ್ಯೆ ಏನು ಸಮಸ್ತ ಭೂಲೋಕದಲ್ಲಿ ತಾವರೆ ಗಿಡ ಇರುವ ಮನೆಯ ಗಂಡಸರ ಸಮಸ್ಯೆ ಅರ್ಥವಾಗಿರಬೇಕು ನಿಮಗೆ.
ಹಾಗಂತ ಅದು ಅಷ್ಟಕ್ಕೆ ನಿಲ್ಲುವುದಿಲ್ಲ, ಆ ತಾವರೆ ಗಿಡ ಕೊಂಡೊಯ್ಯಲು ಬಂದಿರುತ್ತಾರಲ್ಲ ಅವರೆದುರು " ನಮ್ಮನೇಲಿ ಇವುಕ್ಕೆ ಆನು ಹೂವಿನ ಗಿಡ ಮಾಡದು ಅಂದ್ರೆ ಸಿಟ್ಟು ಮಾರಾಯ್ತಿ, ಒಂದು ಗೂಟ ತರ್ಸಲೆ ಬಿಡ್ತ್ವಲ್ಲೆ ಬೈತ" ಎಂದು ಮುಂದುವರೆಯುತಿರುತ್ತದೆ. ಆದರೂ ಅವೆಲ್ಲಾ ಒಂಥರಾ ನನ್ನ ಅಪ್ಪಯ್ಯ ಮಾಡುತ್ತಿದ ನಾನು ಮುಂದುವರೆಸುತ್ತೇನೆ ಅಷ್ಟೆ ಎನ್ನುವುದನ್ನು ಬಿಟ್ಟರೆ ಸಿಕ್ಕಾಪಟ್ಟೆ ರಗಳೆ ಇಲ್ಲ ಅನ್ನುವುದು ಬೇರೆ ಮಾತು.
ಆದರೂ ಕಾಯಾಗುವುದಿಲ್ಲ ಮತ್ತೇಕೆ ಹೂವಷ್ಟೇ ಬಿಟ್ಟು ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತದೆ ಎಂದು ಅರ್ಥವಾಗುತ್ತಿಲ್ಲ. ಇಷ್ಟಾದ್ರೂ ಚಂದ ಇದೆ ಮಾತ್ರಾ....

ಈ ಸಮಯ ನಿಂಬ್ ಗಾರಮಯ

ಗೊತ್ತು ನಿಂಬೆಬಾಗದ ಫೋಟೋ ನೋಡಿದ ತಕ್ಷಣ ನಿಮ್ಮ ಬಾಯೊಳಗೆ ಚೊಳ್ ಅಂತ ನೀರು ಬಂತು ಅಂತ. ಆದರೆ ಒಂದೇ ಒಂದು ಸಮಾಧಾನ ಎಂದ್ರೆ ಅಂಗಡಿಗೆ ಹೋಗಿ ನೀವೂ ಇನ್ನೊಂದೆರಡು ಘಂಟೆಯೊಳಗೆ ಟೇಸ್ಟ್ ನೋಡಿ ಲೊಟ್ಟ ಬಾರಿಸಬಹುದು. ಇರಲಿ ಅವೆಲ್ಲಾ ಆಮೇಲಿನ ಕತೆಯಾಯಿತು ಈಗ ವಿಷಯಕ್ಕೆ ಬರೋಣ.
ಹತ್ತು ಗಂಟೆಯ ಹೊತ್ತಿಗೆ ನಾನು ಮೆತ್ತಿನ ಮೇಲೆ ಕಂಪ್ಯೂಟರ್ ಕುಟ್ಟುತ್ತಾ ಇರುವಾಗ ಕೆಳಗಿನಿಂದ "ರೀ........." ಎಂಬ ವಿಶೇಷ ಸ್ವರ ಕೇಳಿತು ಅಂತಾದ ಕೂಡಲೆ ನಾನು ಕ್ಯಾಮೆರಾ ಹಿಡಿದು ಹೊರಟುಬಿಡುತ್ತೇನೆ. ಇದೆಲ್ಲಾ ಶುರುವಾಗಿದ್ದು "ಸೌತೇ ಕಾಯಿ ಉಪ್ಪುಕಾರದ" ಬರಹದಿಂದ. ಬ್ಲಾಗಲ್ಲಿ ನೋಡಿದ ನನ್ನ ಅಕ್ಕಂದಿರೋ ಮತ್ಯಾರೋ ನನ್ನವಳ ಪರಿಚಯಸ್ತರು " ಅಯ್ಯೋ ಕವಿತಾ..ನಿನ್ನ ಫೋಟೋ ಪೇಪರ್ರಲ್ಲಿ ಬೈಂದಲೇ...." ಅಂತ ಫೋನ್ ಮಾಡಬಿಟ್ಟಿದ್ದಾರೆ.(ಗುಟ್ಟು ಇದು ನಿಮ್ಮೊಳಗೆ ಇರಲಿ) ಆದರ ಪರಿಣಾಮವಾಗಿ ಈಗ ಮನೆಯಲ್ಲಿ ಏನೇ ಹೊಸ ಪದಾಥ ಮಾಡುವಾಗ ನಾನು ಅಡಿಗೆಮನೆಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲಬೇಕು, ಮತ್ತೆ ಮಾಡುವ ವಿಧಾನ ತಿಳಿಯಬೇಕು. ನಂತರ ಬ್ಲಾಗಲ್ಲಿ ಬರೆಯಬೇಕು. ನೀವಾದರೋ ಕಾಮೆಂಟಿನಲ್ಲಿ "ವಾವ್" ಎಂದು ಬರೆದು ಆಮೇಲೆ "ಇದು ಎಂತು ಹೇಳಿ ಬರ್ದಿಕ್ಕೆ, ಎಲ್ಲರಿಗೂ ಗೊತ್ತಿದ್ದಪ" ಅಂತ ಅಂದುಬಿಡಬಹುದು. ಆದರೆ ಇಲ್ಲಿ ನಿಮ್ಮ ಕಾಮೆಂಟಿಗೆ ಖುಷ್ ಆಗಿ ಮತ್ತೊಂದು ಪದಾರ್ಥ ಬರೀರಿ ಅಂತ ಹೇಳುವ ಜನ ತಯಾರಾಗಿರುತ್ತಾರೆ. ಇರಲಿ ಲೈಫು ಎಂದರೆ ವೈಫು, ಮುಂದೇ ನೋಡೋಣ.
ಬರೋಬ್ಬರಿ ಮಳೆಗಾಲದ ಆಗಸ್ಟ್ ತಿಂಗಳಿನಲ್ಲಿ ಹಿತ್ತಲಿನ ಗಿಡದಲ್ಲಿ ನಿಂಬೆ ಹಣ್ಣು ತೊನೆದಾಡುತ್ತಿರುತ್ತದೆ. ಉಪ್ಪಿನಕಾಯಿಯೂ ಬೇಸರ ಬರುವಷ್ಟು, ಪಾನಕ ಮಾಡಿ ತಣ್ಣಗೆ ನೇಟೋಣ ಎಂದರೆ ಚಳಿ ಚಳಿ. ಆಗಲೇ ಈ ನಿಂಬೆಗಾರದ ಬಗೆ. ಒಂದೇ ಒಂದು ಹನಿ ನಾಲಿಗೆ ಮೇಲಿಟ್ಟರೆ ಲೊಚ್ ಎಂಬ ಶಬ್ಧ ತನ್ನಷ್ಟಕ್ಕೆ. ಅದಕ್ಕೆ ಹಾಕುವ ಸೂಜಿಮೆಣಸಿನ ಕಾಯಿ ಗಂಟಲನ್ನು ಗರಂ ಮಾಡಿಬಿಡುತ್ತದೆ. ನಿಂಬೆ ಕಡಿಯಿಂದ ಬೀಜ ತೆಗೆದು ಕೇವಲ ರಸ ಪಾತ್ರೆಗೆ ಹಾಕಿಟ್ಟುಕೊಂಡು, ಸಾಸಿವೆ ಜೀರಿಗೆ ಹಾಗೂ ಉದ್ದಿನಬೇಳೆ ಸೂಜಿಮೆಣಸು ಹುರಿದುಕೊಂಡು ನಂತರ ಹುಳಿ ಸೇರಿಸಿ ಬೀಸಿದರಾಯಿತು. ಆನಂತರ ಒಳ್ಳೆಯ ಗೋಕರ್ಣದ ಇಂಗು ಹಾಕಿ ಒಂದು ಒಗ್ಗರಣೆ ಜಡಿದರೆ ನಿಂಬ್ ಗಾರ ರೆಡಿ.
ಗೊತ್ತಿದ್ದರೂ ಮಾಡಿ ಗೊತ್ತಿಲ್ಲದಿದ್ದರೂ ಮಾಡಿ ಅಥವಾ ನಾಳೆ ನಾಡಿದ್ದರೊಳಗೆ ನಮ್ಮ ಮನೆಗೆ ಬನ್ನಿ.

Wednesday, August 4, 2010

ಮತ್ತಿ ಎಲೆ ಶ್ಯಾಂಪು ನೆತ್ತಿ ಮೇಲೆ ತಂಪು.

ತಲೆಕೂದಲಿಗೊಂದು ಮಜಬೂತು ಸ್ನಾನ ಮಾಡಿಸಬೇಕು ಅಂತಾದರೆ ಈ ಕಾಲದಲ್ಲಿ ಶ್ಯಾಂಪೂ ಅತ್ಯವಶ್ಯಕ. ನೊರೆನೊರೆ ಯೆಂಬ ಬೆಳ್ಳನೆಯ ರಾಶಿ, ಸುವಾಸನೆ, ಸ್ನಾನದ ನಂತರ ಕೂದಲಿಗೆ ಬರುವ ಹೊಳಪು, ಮುಂತಾದವುಗಳಿಗೆ ಶ್ಯಾಂಪೂ ಪರಿಣಾಮಕಾರಿ. ಮಹಿಳೆಯರ ವಿಷಯದಲ್ಲಂತೂ ಕೂದಲು ಉನ್ನತ ಸ್ಥಾನ ಪಡೆದಿರುವುದರಿಂದ ಅದಕ್ಕೆ ವಿಶೇಷ ಆರೈಕೆ. ಬಳಸುವ ಶ್ಯಾಂಪೂ ಜತೆಗೆ ಕಂಡೀಷನರ್ ಮುಂತಾದವುಗಳ ಪಟ್ಟಿ ದೊಡ್ಡದಿರುತ್ತದೆ. ಮತ್ತೆ ಯಾವ ಕಂಪನಿಯ ಯಾವ ಬ್ರ್ಯಾಂಡ್ ಬಳಸಿದರೆ ಪರಿಣಾಮಗಳೇನು? ಎಂಬುದು ಬಾಯಿಪಾಠವಾಗಿರುತ್ತದೆ. ಇನ್ನು ರಾಸಾಯನಿಕ ಬಳಸಲು ಒಪ್ಪದ ಜನರು ಅಂಗಡಿಯಲ್ಲಿ ದೊರಕುವ ಶೀಕೆಕಾಯಿ ಅಂಟುವಾಳ ಚಿಗರೆ ಪುಡಿ ಮುಂತಾದವುಗಳಿಗೆ ಮೊರೆ ಹೋಗುತ್ತಾರೆ. ಆದರೆ ಮಲೆನಾಡ ಮಹಿಳೆಯರು ತಮ್ಮ ಕೂದಲಿಗೆ ಮೆರಗುಕೊಡಲು ಇನ್ನೂ ನಿಸರ್ಗವನ್ನೇ ಅವಲಂಬಿಸಿದ್ದಾರೆ. ಮತ್ತಿ ಎಂಬ ಗಿಡದ ಸೊಪ್ಪು ಅವರ ತಲೆಕೂದಲನ್ನು ನಿರಂತರವಾಗಿ ಆರೈಕೆ ಮಾಡುತ್ತಿದೆ.
ಮತ್ತಿ ಎಂಬ ಈ ಕಾಡುಗಿಡ ಮಲೆನಾಡಿನ ಪರಿಸರದಲ್ಲಿ ತನ್ನಷ್ಟಕ್ಕೆ ತಾನೇ ವಿಫುಲವಾಗಿ ಬೆಳೆಯುತ್ತದೆ. ಮರವಾದ ನಂತರ ಉತ್ತಮ ನಾಟವಾಗಿಯೂ ಇದು ಬಳಕೆಯಾಗುತ್ತದೆ. ಆದರೆ ಅದಕ್ಕಿಂತ ಮೊದಲು ಇದರ ಎಲೆಗಳು ಉತ್ತಮ ಶ್ಯಾಂಪೂವಾಗಿ ಲಾಗಾಯ್ತಿನಿಂದಲು ಮಲೆನಾಡಿನಲ್ಲಿ ಬಳಕೆಯಲ್ಲಿದೆ. ಇದರಲ್ಲಿ ಗಂಡುಮತ್ತಿ ಹೆಣ್ಣುಮತ್ತಿ ಎಂಬ ಎರಡು ಪ್ರಬೇಧಗಳಿದ್ದು ಯಥಾಪ್ರಕಾರ ಗಂಡುಮತ್ತಿ ಗಂಪನ್ನು ನೀಡಲಾರದು. ಹೆಣ್ಣುಮತ್ತಿಯ ಹತ್ತು ಎಲೆಗಳನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಹಾಕಿ ನಂತರ ಅದೇ ನೀರಿಗೆ ಸೊಪ್ಪನ್ನು ಕಿವುಚಿದರೆ ಗಂಪಿನ ಶ್ಯಾಂಪೂ ಒಂದು ತಲೆಯ ಬಳಕೆಗೆ ಸಿದ್ಧ. ಇದರ ಜತೆ ಸ್ವಲ್ಪವೇ ಸ್ವಲ್ಪ ಶೀಕೇಕಾಯಿ ಪುಡಿ ಬೆರಸಿ ಕೂದಲಿಗೆ ಹಚ್ಚಿದರೆ ಗಂಪಿನ ಜತೆ ತಂಪು ಕೂಡ. ಹಾಗಾಗಿ ಯಾವ ಕಂಪನಿಯ ಶ್ಯಾಂಪೂಗಳು ಇದರ ಮುಂದೆ ನಿಲ್ಲಲಾರವು. ಶೀಕೆಕಾಯಿ ಬೆರಸಿದ ನಂತರ ಮತ್ತಿಗಂಪು ಕಂಡೀಷನರ್ ನಂತೆ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಇದರ ಎಲೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡರೆ ವರ್ಷಪೂರ್ತಿ ಬಳಸಬಹುದು. ಆದರೆ ಆಗಷ್ಟೆ ಕೊಯ್ದ ಎಲೆಗಳಿಂದ ಮಾಡಿದ ಗಂಪಿನಷ್ಟು ತಾಜಾತನ ಇರುವುದಿಲ್ಲ. ಹೀಗೆ ಮತ್ತಿ ತನ್ನ ಎಲೆಗಳಮೂಲಕ ತಲೆತಲಾಂತರದಿಂದ ಮಹಿಳೆಯ ನೆತ್ತಿಯನ್ನು ತಂಪಾಗಿಸುತ್ತಾ ಬಂದಿದೆ
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Saturday, July 31, 2010

ಆಷಾಢದ ಅಡುಗೆಗೆ ಕಾಡು ತರಕಾರಿಗಳು

ಬೆಂಗಳೂರಿನ ತರಕಾರಿ ಅಂಗಡಿಗೆ ಹೋಗಿ " ಒಂದು ಕಟ್ಟು ಚೊಗಟೆ ಸೊಪ್ಪು, ಎರಡು ಕಟ್ಟು ಕೆಸ, ಒಂದು ಕೆ ಜಿ ಕಳಲೆ, ಎಲವರಿಗೆ, ಚಕ್ರಮಣಿ, ಕರಡಿಸೊಪ್ಪು, ಮರಗೆಸ ಕೊಡಿ" ಅಂತ ಕೇಳಿದರೆ ಅಂಗಡಿಯಾತ ಕಣ್ಣು ಕಣ್ಣುಬಿಡುತ್ತಾನೆ. ಇದು ಯಾವ ಸೀಮೆ ಗಿರಾಕಿ ಅಂತ ನಗಲೂ ಬಹುದು. ಹಾಗಂತ ಹೀಗೆ ಕೇಳಿದವರು ತರಕಾರಿಯಲ್ಲದ ಸೊಪ್ಪನ್ನೇನೂ ಕೇಳಿಲ್ಲ ಕೇಳಿದ ಸ್ಥಳ ವ್ಯತ್ಯಾಸ ಅಷ್ಟೆ. ಇದೇ ಮಾತನ್ನು ಮಲೆನಾಡಿನ ಹಳ್ಳಿಗಳಲ್ಲಿ ಕೇಳಿದರೆ ಖುಷ್ ಖುಷಿಯಾಗಿ ಮೇಲೆ ಹೇಳಿದ ಎಲ್ಲಾ ಸೊಪ್ಪು ತರಕಾರಿ ಕೊಟ್ಟು ಅಡಿಗೆ ಮಾಡುವ ವಿಧಾನವನ್ನೂ ಹೇಳಿಕೊಟ್ಟುಬಿಡುತ್ತಾರೆ. ಅದೂ ಪುಕ್ಕಟೆಯಾಗಿ.
ಆಹಾರವೆಂಬುದು ಔಷಧಿಯೂ ಆದಾಗ ಆರೋಗ್ಯ ನಳನಳಿಸುತ್ತದೆ. ದಿನನಿತ್ಯ ಮಾತ್ರೆ ನುಂಗುವುದಕ್ಕಿಂತಲೂ ಆಹಾರದ ಜತೆಯಲ್ಲಿ ಔಷಧಿಯುಕ್ತ ಪೌಷ್ಟಿಕಾಂಶ ಸೇವನೆ ವೈದ್ಯರನ್ನು ಗಾವುದ ದೂರ ವಿಡುತ್ತದೆ. ಎಂಬಂತಹ ವಾಕ್ಯಗಳನ್ನು ಹೇಳಲಷ್ಟೆ ಚೆನ್ನ ಅನುಷ್ಠಾನ ಕಷ್ಟಕರ ಎಂಬುದೂ ಸತ್ಯವಾದರೂ ತೀರಾ ಅನುಸರಿಸಲಾಗದ ಸಂಗತಿಯೇನಲ್ಲ. ಔಷಧಿಯುಕ್ತ ಆಹಾರ ಸೇವನೆಗೆ ಮಲೆನಾಡು ಲಾಗಾಯ್ತಿನಿಂದಲೂ ಪ್ರಸಿದ್ಧಿ. ಇಲ್ಲಿನ ಪ್ರಕೃತಿಯಲ್ಲಿ ದೊರಕುವ ಕಾಡು ಜಾತಿಯ ಸೊಪ್ಪುಗಳ ಬಳಕೆ ಬಹಳ ಹಿಂದಿನಿಂದಲೇ ಕಂಡುಕೊಂಡಿದ್ದಾರೆ. ಅವುಗಳ ಸಂಪೂರ್ಣ ಬಳಕೆ ಆಷಾಢಮಾಸದಲ್ಲಿ ಎನ್ನುವುದು ಇನ್ನೊಂದು ಅಂಶ. ಮಲೆನಾಡಿನಲ್ಲಿ ಆಷಾಢವೆಂದರೆ ಕುಂಭದ್ರೋಣ ಮಳೆಗಾಲ. ಮನೆಯಾತನಿಗೆ ಪೇಟೆಗೆ ಹೋಗಿ ತರಕಾರಿ ತರಲೂ ಆಗದಷ್ಟು ಜಡಿ ಮಳೆ. ಮನೆಯ ಪುಟ್ಟ ಹಿತ್ತಲಿನಲ್ಲಿ ಬೆಳಸಿದ ತರಕಾರಿಗಳೆಲ್ಲವೂ ಗಿಡ ಸಮೇತ ಕೊಳೆತು ಹೋಗಿರುತ್ತವೆ. ಆದರೆ ಹೊಟ್ಟೆ ಮಳೆ ಎಂದರೆ ಕೇಳುವುದಿಲ್ಲವಲ್ಲ. ಮನೆ ಮಂದಿಯ ಹೊಟ್ಟೆ ತುಂಬಿಸುವ ಜವಾಬ್ದಾರಿ ಹೊತ್ತ ಮನೆಯಾಕೆ ಮನೆಪಕ್ಕದ ಕಾಡಿಗೆ ಇಳಿಯುವುದೇ ಆವಾಗ.
ಚೊಗಟೆ, ಚಕ್ರಮಣಿ,ಕರಡಿ,ಚಿತ್ರಮೂಲ,ಒಂದೆಲಗ,ಶ್ರೀಗಂಧ, ಕಳಲೆ,ಮರಗೆಸ, ಕಾಡುಗೆಸ, ಗೋಳಿ, ಮುಂತಾದ ನೂರಾರು ಜಾತಿಯ ಸೊಪ್ಪು ತಂಬುಳಿ, ಚಟ್ನಿಯಾಗಿ ಮನೆಯವರ ಹೊಟ್ಟೆ ತುಂಬಿಸುತ್ತದೆ. ಹಾಗೆಯೇ ಆರೋಗ್ಯ ಕೂಡ ನಳನಳಿಸುವಂತೆ ಮಾಡುತ್ತದೆ. ಅತಿ ಮಳೆಯಿಂದ ತಂಡಿಯಾದ ದೇಹದ ಉಷ್ಣತೆ ಹೆಚ್ಚುವಂತೆಯೂ ಮಾಡುತ್ತದೆ ಈ ನೈಸರ್ಗಿಕ ತರಕಾರಿಗಳು.ಆಷಾಡಮಾಸದಲ್ಲಷ್ಟೇ ದೊರಕುವ ಕಳಲೆ ಎಂಬ ಬಿದಿರಿನ ಮೊಳಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡಿ ವರ್ಷಪೂರ್ತಿ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ.
ಈ ಕಾಡುತರಕಾರಿಗಳು ಕೇವಲ ಔಷಧಿ ಮಾತ್ರವಲ್ಲ ರುಚಿಯೂ ಹೌದು. ಮರಗೆಸದಿಂದ ಮಾಡುವ ಪತ್ರೊಡೆ ಯ ರುಚಿ ಸವಿದವನೇ ಬಲ್ಲ. ಸೊಪ್ಪಿನಿಂದ ಮಾಡುವ ಚಟ್ನಿ ತಂಬುಳಿಗಳ ರುಚಿಯ ನೆನಪು ವರ್ಷಪೂರ್ತಿ ಇರುತ್ತದೆ.ಮಳೆ ಬಿದ್ದಾಕ್ಷಣ ರಸ್ತೆಪಕ್ಕದಲ್ಲಿ ಹುಟ್ಟುವ ಎಲವರೆಗೆ ಚೊಗಟೆ ಮುಂತಾದ ಎಲೆಗಳನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ, ಕಾಯಿ ತುರಿ ಬೆರಸಿ ರುಚಿಗೆ ತಕ್ಕಷ್ಟು ಉಪ್ಪು ಹುಳಿ ಖಾರ ಹಾಕಿ ಸುಲಭದಲ್ಲಿ ಪದಾರ್ಥ ಮಾಡಬಹುದಾದ ಇವುಗಳ ಸವಿರುಚಿ ಗೆ ಮರುಳಾಗದವರಿಲ್ಲ. ಕಾಸು ಖರ್ಚಿಲ್ಲದೆ ತಿಂಗಳುಗಳ ಕಾಲ ಮಲೆನಾಡಿನ ಮಹಿಳೆ ಪ್ರಕೃತಿಯ ಸೊಪ್ಪನ್ನು ಬಳಸಿ ಮನೆಮಂದಿಯ ಆರೋಗ್ಯ ನಳನಳಿಸುವಂತೆ ಮಾಡಿಬಿಡುತ್ತಾಳೆ. ಆರೋಗ್ಯವೇ ಭಾಗ್ಯ ಎಂದಾದ ಮೇಲೆ ಅದೊಂದೆ ಸಾಕು ಇನ್ನು ರುಚಿ ಬೋನಸ್ ಇದ್ದಂತೆ.
(ಇಂದಿನ ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Sunday, July 25, 2010

ಶಬ್ದವಿಲ್ಲದ ಸದ್ದುಗಳು.

ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ವಿಶಧಿಸುವ ಬಗೆ ಹೇಗೆ?
ಮೂಡುವ ಸ್ವರಗಳನ್ನ

ಟಪ ಟಪ ಎನ್ನುವ ಮಳೆಹನಿಗಳ
ಸದ್ದು ಹಾಗೆಯೇ ಇಲ್ಲ
ಕುಹೂ ಕುಹೂ ಎನ್ನುವ ಕೋಗಿಲೆ
ಹಾಗೆ ಕೂಗುವುದಿಲ್ಲ
ಕಾಕಾ ಅನ್ನುವ ಕಾಗೆ
ಅಷ್ಟಕ್ಕೇ ನಿಲ್ಲಿಸುವುದಿಲ್ಲ

ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ಚಿತ್ರವಿಚಿತ್ರ ಬಗೆಯಾಗಿ
ಮನಸೂರೆಗೊಳ್ಳುವ ದನಿಗಳನ್ನ.

ಜುಳು ಜುಳು ಹರಿವ ನದಿಯ
ನಿನಾದ ಬೇರೆ
ವಟರ್ ವಟರ್ ಎನ್ನುವ ಕಪ್ಪೆಯ
ಸ್ವರವೇ ಬೇರೆ
ಜಿರ್ ಜಿರ್ ಎನ್ನುವ ಜೀರುಂಡೆಯ
ದನಿಯೇ ಬೇರೆ


ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ವಿಶಿಷ್ಟ ವಿಕಾರ
ವಿಚಕ್ಷಣ ಸದ್ದುಗದ್ದಲವನ್ನ


ಚಟಿಲ್ ಎನ್ನುವ ಸಿಡಿಲು
ಗುಡುಗಿನಂತಿಲ್ಲ
ಗೊಂಡಾರಣ್ಯದ ಸದ್ದು
ಸಾಗರದಲ್ಲಿಲ್ಲ
ಭೂಮ್ಯಾಕಾಶದಲಿ
ನೀರವತೆಯಿಲ್ಲ

ಹೇಗೆ ಹೇಳಲಿ ನಿಮಗೆ ಸದ್ದುಗಳನ್ನ,
ಮನದೊಳಗಿನ ಶಬ್ದಗಳನ್ನ.

ಅಕ್ಷರಾಕ್ಷರ ಜೋಡಿಸಿ ಶಬ್ದಗಳು
ಕೇಳಿಸಿ ಆಲಿಸಿ ತಿಳಿದಿವೆ ಸದ್ದುಗಳು


ಕೇಳಿರಿ ಪ್ರಾಣಿಪಕ್ಷಿಗಳ ದನಿಯನ್ನ
ಆಲಿಸಿ ನದಿತೊರೆಗಳ ಸದ್ದುಗಳನ್ನ
ಅರಣ್ಯದ ಚೀತ್ಕಾರವನ್ನ,
ಸಾಗರದ ಭೋರ್ಗರೆತವನ್ನ,
ಮತ್ತಾಗ ಓದಿ ಆಲಿಸಿರಿ
ಅಕ್ಷರದಲ್ಲಿರುವ ಶಬ್ದವಿಲ್ಲದ ಸದ್ದುಗಳನ್ನ.

Thursday, July 22, 2010

ಐಸ್ ಒಳಗೆ ಹೋಟೆಲ್ಲು


ಅತಿ ಸೆಕೆಯಿಂದ ಬಾಯಾರಿಕೆಯಾದಾಗ ಹೊಟೆಲ್ ಗೆ ಹೋಗಿ ತಣ್ಣನೆಯ ಐಸ್ ಯುಕ್ತ ಪಾನೀಯಗಳನ್ನು ಬಯಸುವುದು ಸಹಜ. ಅದು ಬೆಚ್ಚನೆಯ ಹೋಟೆಲ್ ನ ಐಸ್ ಬಳಸಿ ಮಾಡಿದ ತಿನಿಸು. ಆದರೆ ಇಡೀ ಹೊಟೆಲ್ ಐಸ್ ನದ್ದಾದರೆ ಹೋಗಿ ತಿನ್ನುವುದು ಏನನ್ನು?. ಹಾಗೊಂದು ವ್ಯವಸ್ಥೆ ಜಪಾನ್ ನ ಹೊಕ್ಕಿಯಾಡೊ ದ್ವೀಪದಲ್ಲಿ "ಟೊಮ್ಮಾಮು ಐಸ್ ವಿಲೇಜ್" ನಿರ್ಮಿಸಿಬಿಟ್ಟಿದ್ದಾರೆ. ಈ ಹೋಟೆಲ್ ನಲ್ಲಿ ಗೋಡೆಗಳು ಕೂರುವ ಖುರ್ಚಿಗಳು ಟೇಬಲ್ ಗಳು ಕೊನೆಯದಾಗಿ ಲೋಟ ತಟ್ಟೆಗಳೂ ಸೇರಿದಂತೆ ಎಲ್ಲವೂ ಐಸ್ ಮಯ. ಐಸ್ ಲೋಟದಲ್ಲಿ ನೀಡುವ ಪಾನೀಯ ಗಟಗಟ ಕುಡಿಯದಿದ್ದರೆ ಅಲ್ಲಿಯೇ ಹಿಮದ ಗಡ್ಡೆಯಾದರೂ ಆಶ್ಚರ್ಯವಿಲ್ಲ. ಹಾಗಾಗಿ ಬಿಸಿ ಬಿಸಿ ಕಾಫಿಯನ್ನೂ ಇಲ್ಲಿ ತಣ್ಣಗೆ ಕುಡಿಯಬೇಕು. ಉಳಿದುಕೊಳ್ಳುವ ರೂಂ ಲಿವಿಂಗ್ ಹಾಲ್ ಎಲ್ಲಾ ಐಸ್‌ಮಯವಾದರೂ ಸದ್ಯ ಬೆಡ್‌ಶೀಟ್ ಗಳು ಮಾಮೂಲಿಯಾಗಿಯೇ ಇವೆ ಎಂಬುದು ಬೆಚ್ಚನೆಯ ಮಾತು.
ಈ ಹೋಟೆಲ್ ಎಲ್ಲರಿಗೂ ಒಗ್ಗದು. ಇಲ್ಲಿ ಉಳಿಯಲು ಸ್ವಲ್ಪ ಐಸ್ ನ್ನು ನಿರ್ವಹಿಸುವ ತಾಕತ್ತು ದೇಹಕ್ಕಿರಬೇಕು. ಕೇವಲ ದೇಹದ ತಾಕತ್ತೊಂದಿದ್ದರೆ ಸಾಲದು ಜೇಬಿನ ತಾಕ್ತೂ ಗಟ್ಟಿಯಿರಬೇಕು. ಒಂದು ರಾತ್ರಿ ಇಲ್ಲಿನ ಐಸ್ ಕೋಣೆಯಲ್ಲಿ ತಂಗಲು ಜೋಡಿಯೊಂದಕ್ಕೆ ತಗಲುವ ವೆಚ್ಚ ೬೯೬ ಯೆನ್ ಅಂದರೆ ಸರಿ ಸುಮಾರು ೩೫೦೦೦...! ರೂಪಾಯಿಗಳು ಮಾತ್ರಾ. ಬಹಳಷ್ಟು ಜನ ದರ ಕೇಳಿಯೇ ಫ್ರೀಜ್ ಆಗಿಬಿಡುವ ಸಾದ್ಯತೆ ಇರುವುದರಿಂದ ತೀರಾ ಅಲ್ಲಿಗೆ ಹೋಗಿ ಅನುಭವಿಸುವುದರಲ್ಲಿ ಅರ್ಥವಿಲ್ಲ ಅಂದುಬಿಡಬಹುದು. ಆದರೂ ಇಲ್ಲಿ ರೂಂ ಗಳು ಸಿಗಬೇಕೆಂದರೆ ತಿಂಗಳುಗಟ್ಟಲೆ ಮುಂಚಿತವಾಗಿ ಬುಕಿಂಗ್ ಮಾಡಬೇಕು. ಫೆಬ್ರವರಿ ೧೫ ರ ನಂತರ ಸೆಕೆ ಜಾಸ್ತಿಯಾಗಿ ಹಿಮ ಕರಗಿ ಹೊಟೇಲ್ ಮುಚ್ಚುವುದರಿಂದ ಅಷ್ಟರೊಳಗೆ ಹೋಗಿ ಜೇಬು ಕರಗಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಇಷ್ಟೆಲ್ಲಾ ಇದ್ದರೂ ಹೊಕ್ಕಿಯಾಡೊ ದ ಈ ಐಸ್ ಹೋಟೆಲ್ಲಿಗಿಂತ ಸ್ವೀಡನ್ ದೇಶದ ಐಸ್ ಹೋಟೆಲ್ ಗಳು ಬಹು ಉತ್ತಮವಂತೆ. ಇವೆಲ್ಲದಕ್ಕಿಂತ ಅಲ್ಲಿ ಒಂದುರಾತ್ರಿ ತಂಗುವ ದುಡ್ಡಿನಲ್ಲಿ ಇಲ್ಲಿ ದೊಡ್ಡ ಫ್ರಿಜ್ ತಂದು ದಿನಾರಾತ್ರಿ ತಣ್ಣಗೆ ಮಲಗಿಕೊಳ್ಳಬಹುದು ಎಂಬುದು ಬುದ್ಧಿವಂತರ ಮಾತು
(ಇಂದಿನ ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ ಬರಹ)