Wednesday, July 20, 2011

ಅಷ್ಟರಲ್ಲಿ ಆತ್ ಡಣ್ ಡಣ್ ಎನ್ನುತ್ತಾನೆ.




"ಅಪ್ಪಾ ಉದ್ದ ಮುಳ್ಳು ಎಷ್ಟಕ್ಕೆ ಇದ್ದು, ಗಿಡ್ಡ ಮುಳ್ಳು ಎಷ್ಟಕ್ಕೆ ಇದ್ದು" ಅಂತ ವೆಂಕಟರಮಣನ ಪುಟಾಣಿ ಮಗಳು ಕೇಳಿದಾಗ ಒಮ್ಮೆಲೆ ನಾನು ಬಾಲ್ಯಕ್ಕೆ ಜಾರಿದೆ. ಅಬ್ಬಾ ಇದೆಂತ ಮಜ ನೋಡಿ, ನಾನು ಹೀಗೆ ಸಣ್ಣಕ್ಕಿದ್ದಾಗ ಕೇಳಿದ್ದೆ, ನನ್ನ ಮಗನೂ ಕೇಳಿದ್ದ, ಈಗ ಈ ಪುಟಾಣಿಯೂ ಕೇಳುತ್ತಿದ್ದಾಳೆ. ಹಲವು ಸಂಗತಿಗಳು ಹೀಗೆಯೇ ಅಲ್ವಾ..? ಇರಲಿ, ಅಸಲಿಗೆ ಹಾಗೆ ಕೇಳಿದ್ದು ಏತಕ್ಕೆ ಏನಕ್ಕೆ ಅಂತ ನಿಮಗೆ ಪಟಕ್ಕನೆ ಅರ್ಥವಾಗದಿದ್ದರೆ ಸ್ವಲ್ಪ ಕೇಳಿ ಅಲ್ಲಲ್ಲ ಓದಿ ನನ್ನ ವರಾತ.
ಟಿಕ್ ಟಿಕ್ ಗೆಳೆಯನಾದ ’ಪೆಂಡುಲಮ್ ಗಡಿಯಾರ’ ನಮ್ಮ ಬಾಲ್ಯದ ಅಚ್ಚರಿಗಳಲ್ಲೊಂದು, ಗಂಟೆ ಹೊಡೆಯುವ ಮುಂಚೆ ಕಿಶ್......... ಎಂದು ಸದ್ದು ಮಾಡಿ ನಂತರ ಡಣ್ ಡಣ್ ಎಂದು ಸದ್ದು ಮಾಡುವ ಎರಡಡಿ ಉದ್ದ ಹಾಗೂ ಒಂದಡಿ ಅಗಲದ ಗಡಿಯಾರ ಈಗಲೂ ಹಲವು ಮನೆಗಳಲ್ಲಿ ಕಾಣಬಹುದು. ವಾರಕ್ಕೊಮ್ಮೆ ಖುರ್ಚಿ ಹಾಕಿಕೊಂಡು ಅದರಮೇಲೆ ಹತ್ತಿ ನಿಂತು ಗಡಿಯಾರಕ್ಕೆ ಕೀಲಿ ಕೊಡುವುದು ಮನೆಯ ಯಜಮಾನನ ಗತ್ತಿನ ಕೆಲಸದಲ್ಲೊಂದು. ಹಾಗೆ ಕೀಲಿಕೊಟ್ಟ ನಂತರ ಆ ಕೆಲಸಕ್ಕಾಗಿಯೇ ತಾತ್ಕಾಲಿಕ ನಿಲ್ಲಿಸಿಕೊಂಡ ಪಳಪಳ ಹೊಳೆಯುವ ಕೋಟೆಡ್ ಪೆಂಡುಲಂ ನ ಮತ್ತೆ ಅಲುಗಾಡಿಸಿ ಕೆಳಗಿಳಿದರೆ ಯಜಮಾನನ ಗಂಟು ಮುಖಕ್ಕೆ ಇನ್ನೊಂದು ಮೆರುಗು. ನಮಗೆ ಆ ಪೆಂಡುಲಂ ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಆಕಡೆ ಈಕಡೆ ಓಲಾಡುವುದನ್ನ ನೋಡುವುದೇ ಒಂದು ಮಜ. ಇನ್ನೇನು ಗಂಟೆ ಹೊಡೆಯುತ್ತದೆ ಎಂಬ ಕೆಲಕ್ಷಣಗಳ ಮುಂಚಿನ ಕಿಶ್.. ಸದ್ದು ಗಂಟೆ ಹೊಡೆಯುವ ಮಧುರ ಸದ್ದಿನ ಪೂರ್ವ ಸೂಚನೆ. ನಂತರ ಶುರು ನಿನಾದ, ಹನ್ನೆರಡು ಗಂಟೆಯೆಂದರೆ ಬಲು ಮೋಜು ಮಜ. ಹನ್ನೆರಡರ ನಂತರ ಹೊಡೆಯುವ ಗಂಟೆಗಳ ಮೇಲೆ ಸಣ್ಣದಾದ ಒಂದು ಬುದ್ದು ಕತೆಯೂ ಇತ್ತು.
ಒಬ್ಬಾತ ಗಡಿಯಾರ ಮನೆಗೆ ತಂದನಂತೆ. ಗೋಡೆಯ ಮೇಲೆ ಇಟ್ಟನಂತರ ಹೆಂಡತಿಗೆ ತೋರಿಸಿ ಅದು ಗಂಟೆಯನ್ನು ಹೊಡೆಯುವ ಬಗ್ಗೆ ಕೊಚ್ಚಿಕೊಂಡನಂತೆ. ಹನ್ನೆರಡೂ ವರೆಗೆ ಒಂದುಸಾರಿ ಕೇಳಿದ ಡಣ್ ಎಂಬ ಸದ್ದು ಕೇಳಿಸಿ ಬೀಗಿದನಂತೆ, ನಂತರ ಮತ್ತೆ ಡಣ್ ಎಂದು ಭಾರಿಸುತ್ತದೆ ನೋಡು ಎಂದು ಹೇಳಿದನಂತೆ, ಅರ್ದ ಗಂಟೆಯ ನಂತರ ಮತ್ತೆ ಒಂದೇ ಸಾರಿ ಡಣ್ ಸದ್ದು ಬಂತಂತೆ. ಮತ್ತೆ ಅರ್ದ ಗಂಟೆ ನಂತರವೂ ಕೇವಲ ಒಂದೇ ಸಾರಿ ಡಣ್ ಎಂಬ ಸದ್ದು ಬಂತಂತೆ, ಆಗ ಹೆಂಡತಿ "ಅಯ್ಯಾ ಈ ನಿಮ್ಮ ಗಡಿಯಾರ ಯಾವಾಗಲೂ ಒಂದೇ ಸಾರಿ ಡಣ್ ಅನ್ನುತ್ತದೆ" ಎಂದು ಮೂದಲಿಸಿದಳಂತೆ. ಹತಾಶನಾದ ಗಂಡ ಗಡಿಯಾರದ ಮೇಲೆ ಕೋಪಗೊಂಡು ಬಿಸಾಡಿದನಂತೆ. ಎಂಬ ತಮಾಷೆಯೆಂಬ ಕತೆ ಹೇಳುವವರ ತಾಕತ್ತಿಗನುಗುಣವಾಗಿ ಜನರನ್ನು ರಂಜಿಸುತ್ತಿತ್ತು.
ದಿನಕ್ಕೆ ಮೂರು ಸಾರಿ ಒಂದೊಂದೇ ಸಾರಿ ಡಣ್ ಎಂದು ಗಂಟೆ ಹೊಡೆಯುತ್ತದೆ, ಅದು ಯಾವಾಗ? ಎಂಬ ಒಗಟೂ ಕೂಡ ಚಾಲ್ತಿಯಲ್ಲಿತ್ತು. ಹನ್ನೇರಡೂವರೆ, ಒಂದು, ಒಂದೂವರೆ ಗಂಟೆಗೆ ಎಂಬ ಉತ್ತರ ಪಟಕ್ಕನೆ ಹೇಳಿದರೆ ಒಂದು ಹಂತದ ಗತ್ತನ್ನು ಪ್ರದರ್ಶಿಸಬಹುದಿತ್ತು.

ಹೀಗೆ ಅವರವರ ಕ್ಷೇತ್ರದಲ್ಲಿ ತನ್ನ ಪ್ರಭಾವ ಬೀರಿದ್ದ ಪೆಂಡುಲಂ ಗಡಿಯಾರ ಕಾಲಚಕ್ರದ ಹೊಡೆತಕ್ಕೆ ಸಿಲುಕಿ ನಿಧಾನಗತಿಯಲ್ಲಿ ಕಡಿಮೆಯಾಗುತ್ತಾ ಬಂದರೂ ಈಗಲೂ ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಇದೆ. ಹಾಗೂ ತನ್ನನ್ನು ನೋಡಿ ಹೀಗೆ ಉದ್ದಮುಳ್ಳು ಗಿಡ್ಡಮುಳ್ಳು ಎಂಬ ಗಂಟೆ ನೋಡುವ ಕಲಿಕಾ ವಿಧಾನವನ್ನು ಪರಿಚಯಿಸುತ್ತಾ ಸಾಗಿದೆ.

ಅಂದು ಗಂಟೆ ನೋಡುವುದು ಒಂದು ಬ್ರಹ್ಮಾಂಡ ವಿದ್ಯೆಯಾಗಿತ್ತು. "ಅಯ್ಯೋ ಅಪಿ ನಿಂಗೆ ಗಂಟೆ ನೋಡಲೆ ಬತಲ್ಯಾ ಇನ್ನೂ" ಎಂದು ಯಾರಾದರೂ ಹೇಳಿದರೆ ಅದು ಮರ್ಯಾದೆ ಹರಾಜಿನಂತೆ ಭಾಸ. ಆ ಗಂಟೆ ನೋಡುವ ಕಲಿಕಾ ವಿಧಾನ ಸಾಮಾನ್ಯವಾಗಿ ಮೊದಲಗುರುವಿನಿಂದ ಪ್ರಾರಂಭ. "ಮಗಾ ಒಂಚೂರು ಗಂಟೆ ನೋಡಿ ಬಂದು ಹೇಳು" ಎಂದು ಮಕ್ಕಳ ಬಳಿ ಹೇಳಿದಾಗ, ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಜಗುಲಿಗೆ ಬಂದು ಒಮ್ಮೆ ಗಡಿಯಾರದತ್ತ ಮಿಕಮಿಕ ನೋಡಿದ ಕೂಡಲೇ, ಅಪ್ಪ "ಉದ್ದ ಮುಳ್ಳು ಮೂರಕ್ಕೆ ಗಿಡ್ಡ ಮುಳ್ಳು ಒಂಬತ್ತಕ್ಕೆ" ಎಂದರೆ ಮಗು ಅದನ್ನೇ ಪದೆ ಪದೇ ಹೇಳುತ್ತಾ ಅಡುಗೆ ಮನೆಗೆ ದೌಡು. ಅಮ್ಮನ ಬಳಿ ಅದನ್ನ ಪುನರಾವರ್ತನೆ, ಅಲ್ಲಿಗೆ ಅಮ್ಮನಿಂದ "ಹಂಗಂದ್ರೆ ಒಂಬತ್ತೂ ಕಾಲು" ಎಂಬ ಪ್ರಾರಂಬಿಕ ಹಂತದ ಕಲಿಕೆ. ನಂತರ ಮಗು ಅಂಕೆ ಕಲಿತಾದಮೇಲೆ ಅಪ್ಪನ ಸಹಾಯ ಇಲ್ಲ. ಆದರೆ "ಹಂಗಂದ್ರೆ ಒಂಬತ್ತೂ ಕಾಲು" ಅನ್ನಲು ಅಮ್ಮ ಬೇಕೇ ಬೇಕು. ಕೆಲದಿನಗಳ ನಂತರ ಎಲ್ಲಾ ತನ್ನಷ್ಟಕ್ಕೆ.

ಇವತ್ತು ಬೆಳಿಗ್ಗೆ ವೆಂಕಟರಮಣನ ಮಗಳು "ಉದ್ದಮುಳ್ಳು........." ಎಂದು ಅಪ್ಪನ ಬಳಿ ಕೇಳಿದ್ದಕ್ಕೆ ಇವೆಲ್ಲಾ ನೆನಪಾಯಿತು. ಕಾಲ ಎಂಬುದು ಚಕ್ರವೇ ಇಲ್ಲಿ ಹೊಸತನ ಬದಲಾವಣೆ ಅಂತೆಲ್ಲಾ ನಾವು ಅಂದುಕೊಳ್ಳುತ್ತೇವೆ, ಎಲ್ಲಾ ಹಾಗೆಯೇ ಪುನರಾವರರ್ತನೆಯಲ್ಲಿಯೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಮುಂದುವರೆಯುತ್ತೇವೆ.

ನಮ್ಮ ಮನೆಯ "ಟಿಕ್ ಟಿಕ್ ಗೆಳೆಯ" ಡಣ್ ಎಂದು ಭಾರಿಸುತ್ತಿದ್ದಾನೆ. ಅಲ್ಲಿಗೆ ಗಂಟೆ ಒಂದಾಯಿತು, ಇನ್ನು ಸ್ನಾನ ಮಾಡಿ ಸಂಧ್ಯಾವಂದನೆ(ಮಟ ಮಟ ಮಧ್ಯಾಹ್ನ....!) ಮಾಡಿ ಊಟ ಮಾಡಬೇಕು ಅಷ್ಟರಲ್ಲಿ ಆತ್ ಡಣ್ ಡಣ್ ಎನ್ನುತ್ತಾನೆ. ಅವನು ಹೀಗೆ ಇನ್ನು ಎಷ್ಟು ಸಮಯವೋ ಪಾಪ, ಸಮಯ ಹೇಳುತ್ತಾ ತೋರಿಸುತ್ತಾ ಸವೆಯುತ್ತಿದ್ದಾನೆ, ಆತನಿಗದು ತಿಳಿದಿಲ್ಲ ನಮಗೆ ತಿಳಿದಿದೆ ಹೊಸತಕ್ಕೆ ಹೋಗಬೇಕು ಅಂತ ನಾವು ಅಂದುಕೊಳ್ಳೋದು ಆದರೆ ಆ ಕಾಲಪುರುಷ ನಮ್ಮ ಲೆಕ್ಕವನ್ನು ಎಲ್ಲಿಯವರೆಗೆ ಇಟ್ಟಿದ್ದಾನೋ ಸವೆಯುವವರೆಗೋ ಅಥವಾ ಗಟ್ಟಿ ಇದ್ದಾಗಲೋ ಯಾರಿಗೆ ಗೊತ್ತು.?.

Friday, July 15, 2011

ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.

"ಮನೋ ಮಧುಕರೋ ಮೇಘೋ ಮಾನಿನೀ ಮದನೋ ಮರುತ್ ಮಾಮರೋ ಮರ್ಕಟೋರ್ಮತ್ಸ್ಯೋ ಮಕಾರಾತ್ ದಶ ಚಂಚಲಾ:" ಅಂತ ಸಂಸ್ಕೃತದಲ್ಲಿ ಒಂದು ಉಕ್ತಿ ಇದೆಯಂತೆ. ಸ್ವಲ್ಪ ಹೆಚ್ಚುಕಮ್ಮಿ ಇದ್ದರೂ ಇರಬಹುದು ಬಿಡಿ. ಒಟ್ಟಿನಲ್ಲಿ ಮ ಕಾರದಿಂದ ಪ್ರಾರಂಭವಾಗುವ ಹಲವು ಶಬ್ಧಗಳು ಚಂಚಲತೆಗೆ ಉದಾಹರಣೆ ಎಂಬುದು ತಾತ್ಪರ್ಯ. ಹಾಗೆ ನೋಡಿದಲ್ಲಿ ಇಡೀ ಪ್ರಪಂಚವೇ ಒಂಥರಾ ಚಂಚಲ. ಸ್ಥಿರ ಎನ್ನುವುದು ನಮ್ಮ ತರ್ಕವಷ್ಟೆ. ಆದರೆ ಈ ಮೇಲಿನ ಮಕಾರ ದಿಂದ ಪ್ರಾರಂಭವಾಗುವ ವಿಷಯ ಚಂಚಲತೆ ಹೆಚ್ಚು ಅನ್ನಬಹುದು.

ನಿಂತಲ್ಲಿ ನಿಲ್ಲಲಾರ, ಕುಂತಲ್ಲಿ ಕೂರಲಾರ, ಮಾಡಿದ್ದನ್ನು ಮಾಡಲಾರ ಮಾಡದೆಯೂ ಇರಲಾರ ಎಂಬ ವ್ಯಕ್ತಿತ್ವಕ್ಕೆ ಚಂಚಲ ಮನಸ್ಥಿತಿ ಯ ಜನ ಅಂತ ನಾಮಕರಣ ಮಾಡಿಯಾಗಿದೆ. ಇದು ವ್ಯಕ್ತಿಯ ಹೊರಗಿನ ಚಂಚಲತೆಯ ಕತೆಯಾದರೆ ವ್ಯಕ್ತಿಯೊಳಗಿನ ಚಂಚಲತೆ ಇದೆಯಲ್ಲ ಅದರದ್ದು ಬೃಹತ್ ಸಮಸ್ಯೆ ಹಲವರಿಗೆ.
ಮಠ ಸಿನೆಮಾದಲ್ಲಿ " ಮನಸ್ಸಿನೊಳಗಿನ ಮಾತನಾಡುವ ಗಿಳಿಯನ್ನು ಸುಮ್ಮನಾಗಿಸುವುದೇ ದಾನ್ಯ" ಎಂದು ಮಜವಾಗಿ ಧ್ಯಾನದ ಕುರಿತು ಹೇಳಿದ್ದಾರೆ. ಈ ಚಂಚಲತೆಯನ್ನು ಸ್ಥಿರಗೊಳಿಸುವ ಕೆಲಸಕ್ಕೆ ಮಿದುಳ ಬಳಸಿ ಬದುಕುವ ಮಂದಿ ಬಹಳ ಬೆಲೆಯನ್ನು ತೆತ್ತಿದ್ದಾರೆ ತೆತ್ತುತ್ತಲಿದ್ದಾರೆ. ಆ ಮಾತನಾಡುವ ಗಿಳಿ ಇದೆಯಲ್ಲ ಅದರ ನಿಯಂತ್ರಣಕ್ಕೆ ಹಾಕಿದ ಹಾಕುತ್ತಿರುವ ಹಾಕುವ ವೇಷ ಹಲವು ತರಹದ್ದು. ಜನಸಾಮಾನ್ಯರ ಈ ದೌರ್ಬಲ್ಯವನ್ನರಿತ ಒಂದು ತೂಕ ಹೆಚ್ಚಿನ ಬುದ್ದಿವಂತರು ಅದಕ್ಕೆ ಹಾಗೆ ಮಲಗಿ, ಹೀಗೆ ಕೂತು ಉಸಿರು ಬಿಡಿ, ಮತ್ತೆ ಆಳವಾಗಿ ಉಸಿರಾಡಿ, ಹ ಹ ಹ ಎಂದು ಹಾರಿಹಾರಿ ಬೀಳಿ, ಅಂತಿಮವಾಗಿ ನಾವು ಹೀಗೆ ಕಲಿಸಿಕೊಟ್ಟದ್ದಕ್ಕೆ ಇಷ್ಟು ಹಣ ಕಕ್ಕಿ ಎಂಬಲ್ಲಿಯವರೆಗೆ ಈ ಗಿಳಿಯ ಆಟ ನಡೆಯುತ್ತಲಿದೆ. ನಿರಂತರವಾಗಿ ಪುತುಪುತುನೆ ಏಳುವ ಆಲೋಚನೆಯ ಬೆನ್ನುಹತ್ತಿ ಉತ್ತರ ಸಿಗದೆ ತಡಬಡಾಯಿಸುವ ಹಲವರಿಗೆ ಈ ಗಿಳಿಯ ಕಾಟ ಅಷ್ಟಿಷ್ಟಲ್ಲ. ಶುರುವಾದ ಆಲೋಚನೆಗೆ ಪಟಕ್ಕನೆ ಬ್ರೆಕ್ ಹಾಕುವ ತಾಕತ್ತು ರೂಢಿಸಿಕೊಂಡರೆ ಇವರ ಪಾಲಿಗೆ ಜಗತ್ತ ಗೆದ್ದಂತೆ. ಉದ್ಯೋಗದಲ್ಲಿ ಜೀವನಕ್ಕಾಗಿ ಮಿದುಳು ಉಪಯೋಗಿಸುವ ಮಂದಿಯ ದೇಹ ಒಂಥರಾ ಜಡ್ಡಾಗಿರುತ್ತದೆ. ದೇಹದ ಶ್ರಮದ ಮೂಲಕ ಅಥವಾ ಶ್ರಮದ ಕೆಲಸದ ಮೂಲಕ ಮಿದುಳಿನ ಯೋಚನೆಯನ್ನು ನಿಯಂತ್ರಿಸುವುದು ಸುಲಭ ಅಥವಾ ಸುಲಭ ಅನ್ನುವುದಕ್ಕಿಂತಲೂ ಅದು ಪ್ರಕೃತಿ ಸಹಜ. ದೇಹ ಶ್ರಮಕ್ಕೆ ಹಾರ್ಡ್ ವರ್ಕ್ ಅಂತ ಒಂಥರಾ ಜಿಗುಪ್ಸೆಯ ಪದಪ್ರಯೋಗ ಬಳಕೆಗೆ ಬಂದ ನಂತರ ಈ ಧ್ಯಾನ ಎಂಬ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಬಿಕರಿಗಿಟ್ಟ ಸರಕು "ಶಾಂತಿ..ನೆಮ್ಮದಿ....ಸುಖ " ಎಂಬ ನಮ್ಮೊಳಗೇ ಇರುವ ನಾವೇ ಸೃಷ್ಟಿಸಿಕೊಳ್ಳಬೇಕಾಗಿರುವ ವಿಷಯಗಳು. ಮಜ ಎಂದರೆ ಅದಕ್ಕೆ ನಾವು ಹಣ ಕೊಟ್ಟು ಅಲ್ಲಿದೆ, ಎಲ್ಲಿದೆ..? ಅಲ್ಲೆಲ್ಲೋ ಇದೆ, ಎಂದು ಹಗಲಿನಲ್ಲಿ ಬ್ಯಾಟರಿ ಬಳಸಿ ಹುಡುಕಾಡುತ್ತಿದ್ದೇವೆ. ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.

ನನ್ನದು ಈಟಿಂಗ್ ಬಾಬತ್ತಿಗೆ



ಬಾಳೆಹಣ್ಣು ಎಂದಾಗ ಬಾಯಲ್ಲೇನೋ ನೀರೂರದು ನಿಜ. ಆದರೆ ಸುಕ್ಕೇಳಿ ಸುದ್ದಿ ಹೇಳಿದಾಗ ಮಿದುಳಿನ ಮೂಲೆಯಿಂದ ಸಿಕ್ಕರೆ ನಾಲಿಗೆಯ ಮೇಲಿಡು ಎಂಬ ಸಂದೇಶ ಮೊಳಕೆಯೊಡೆಯಲಾರಂಬಿಸುತ್ತದೆ. ಬಾಳೆಹಣ್ಣನ್ನು ಸಕ್ಕರೆಪಾಕದಲ್ಲಿ ಅದ್ದಿ ಬಿಸಿಲಿನಲ್ಲಿ ಒಣಗಿಸಿ ತಯಾರು ಮಾಡುವ ಸುಕ್ಕೇಳಿಯನ್ನ ಒಮ್ಮೆ ತಿಂದಿರಾದರೆ ಇವೆಲ್ಲಾ ಆಗುತ್ತದೆ. ಸುಕ್ಕೇಳಿಗೆ ಇನ್ನಷ್ಟು ಮೆರುಗು ಸಿಗಬೇಕೆಂದರೆ ಬಾಳೆಹಣ್ಣಿನ ಜಾತಿಯೂ ಬಹುಮುಖ್ಯ ಪಾತ್ರವಹಿಸುತ್ತದೆ. ವಾಟ್ ಬಾಳೆ, ಸುಗನ್ ಬಾಳೆ, ಮಿಟ್ಲ ಬಾಳೆ, ಕರಿ ಬಾಳೆ, ಉದ್ಬಾಳೆ ,ಮುಂತಾದ ಮಲೆನಾಡಿನ ಸಾಂಪ್ರದಾಯಿಕ ತಳಿಗಳು ಸುಕ್ಕೇಳಿ(ಡ್ರೈ ಬನಾನ) ಗೆ ಯೋಗ್ಯವಾದವು. ಪಚ್ಚಬಾಳೆ ಮುಂತಾದ ಸುಧಾರಿತ ತಳಿಗಳು ಅಷ್ಟೊಂದು ಪರಿಮಳ ನೀಡಲಾರವು. ಆದರೂ ತೀರಾ ಗೊಡ್ಡೇನಲ್ಲ ಬಿಡಿ. ಈಗ ಸುಕ್ಕೇಳಿಯುಂದ ಫೋಟೋದಲ್ಲಿನ ಬಾಳೆಹಣ್ಣಿನ ಕತೆಗೆ ಹೋಗೋಣ

"ಬೂದಿಬಾಳೆ" ಎಂಬುದು ಚಿತ್ರದಲ್ಲಿನ ಬಾಳೆಯ ಸಾಂಪ್ರದಾಯಿಕ ಹೆಸರು. ಇದಕ್ಕೆ ಆ ಹೆಸರುಬರಲು ಮುಖ್ಯ ಕಾರಣ ಇದರ ಹಣ್ಣನ್ನು ಬಬ್ಬೂದಿಯಲ್ಲಿ( ಅಯ್ಯೋ ಬಬ್ಬೂದಿ ಅಂದ್ರೆ ಏನು? ಎಂದಿರಾ, ಕಟ್ಟಿಗೆ ಬೆಂಕಿಯ ಕೆಂಡದ ಬಿಸಿ ಬೂದಿ ಅಷ್ಟೆ) ಸುಟ್ಟು ತಿಂದರೆ ಅದ್ಬುತ ರುಚಿಯ ಕಾರಣ ಇದಕ್ಕೆ ಅದೇ ಹೆಸರು ಅಂತ ಗುಸುಗುಸು ಪಿಸಪಿಸ. ಇರಲಿ ಹೆಸರು ಏನು ಮಾಡುತ್ತೆ ರುಚಿಯಿದ್ದರೆ ಆಯಿತಪ್ಪಾ ಅಲ್ಲವೇ?, ಇದು ಅಜೀರ್ಣ ತೊಂದರೆಯ ಹೊಟ್ಟೆನೋವಿಗೆ ದಿವ್ಯ ಔಷಧ. ಒಂದೆರಡು ಹಣ್ಣು ತಿಂದರೆ ಹೊಟ್ಟೆ ನೋವು ಮಾಯ.

ಈ ಹಣ್ಣು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ. ಕಾರಣ ಇದನ್ನು ತಿನ್ನುವ ವಿಧಾನ ಬಹಳ ಜನರಿಗೆ ಗೊತ್ತಿಲ್ಲದಿರುವುದೂ ಒಂದಿರಬಹುದು. ಎಲ್ಲಿ ಹಣ ಹುಟ್ಟುವುದಿಲ್ಲವೋ ಜನ ಅದರಿಂದ ನಿಧಾನ ದೂರ ಸರಿಯುತ್ತಾರೆ. ಹಾಗಾಗಿ ಬೂದಿಬಾಳೆ ಬೆಳೆಯುವವರಿಲ್ಲ. ಆ ಕಾರಣಕ್ಕೆ ಇದು ಅಳಿವಿನ ಅಂಚಿನಲ್ಲಿರುವ ಬಾಳೆ ಯಾಗಿದೆ. ನಾನು ಒಂದೆರಡು ಗುಂಪು ಉಳಿಸಿಕೊಂಡಿದ್ದೇನೆ, ಪರಿಸರ ಪ್ರೇಮಿಗಳ ಡೈಲಾಗ್ "ಈ ಭೂಮಿ ನಮ್ಮ ಮುಂದಿನ ಪೀಳಿಗೆಯಿಂದ ಎರವಲು ಪಡೆದದ್ದು, ಅವರಿಗೆ ಸುರಕ್ಷಿತವಾಗಿ ಮರಳಿಸೋಣ" ಎಂದೆಲ್ಲಾ ಅಂತಾರಲ್ಲ ಅದಕ್ಕೆ ನನ್ನದೂ ಒಂದು ಅಳಿಲು ಸೇವೆಯಾಗಲಿ ಎಂದು.

ಯಾವಾಗ ನೋಡಿದ್ರೂ ತಿನ್ನೋ ವಿಚಾರನೇ ಬರಿತೀಯಪ್ಪಾ... ಬೇರೇ ಇಲ್ವಾ....? ಅಂತ ನೀವು ಗೊಣಗುಟ್ಟಿದಂತಾಯಿತು. ಪುಷ್ಠಿಕರವಾದ್ದು ತಿಂದರೆ ತಾನೇ ನಮ್ಮ ನಿಮ್ಮ ಆಟ, ಓಟ, ನೋಟ , ಎಲ್ಲಾ, ಹಾಗಾಗಿ ಅದೆಂತದೋ ಫಸ್ಟ್ ಪ್ರಿಯಾರಿಟಿ ಅಂತ ಅಂತಾರಲ್ಲ ಅದು ನನ್ನದು ಈಟಿಂಗ್ ಬಾಬತ್ತಿಗೆ ಅಷ್ಟೆ. ನಿಮ್ಮದು...? ನನಗೇನು ಗೊತ್ತು?.

Wednesday, July 13, 2011

ಇವತ್ತು ಇಷ್ಟೆ.

ಜೋಗಕ್ಕೆ ಹೋಗಬೇಕು,ನಿಮಗೆ ಅಲ್ಲಿನ ಜಲಪಾತದ ಇವತ್ತಿನ ಪಟ ತೆಗೆದು ತೋರಿಸಬೇಕು, ಎಂತೇನೂ ಹೋದದ್ದಲ್ಲ. ಮೆಸ್ಕಾಂ ನಲ್ಲಿ ಕೆಲಸ ಇತ್ತು ಹೋಗಿದ್ದೆ. ಹಾಗೇ ಸೀದಾ ಮನೆಗೆ ಬಂದುಬಿಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಆವಾಗ ಸತ್ಯವಾಗಿ ಹೇಳುತ್ತೇನೆ ನಿಮ್ಮ ನೆನಪಾಯಿತು. ಸೀದಾ ಜೋಗಜಲಪಾತದ ಕಡೆ ಕಾರು ತಿರುಗಿಸಿದೆ. ನೀರು ಸುಮಾರಾಗಿ ಬೀಳುತ್ತಿತ್ತು. ಬಿಕೋ ಎನ್ನುವಷ್ಟರ ಮಟ್ಟಿಗಿನ ಜನ ಅಲ್ಲದಿದರೂ ಕಡಿಮೆ ಪ್ರವಾಸಿಗರಿದ್ದರು. ಕಾರು ಒಳಗೆ ಪ್ರವೇಶಿಸಲು "ಇಪ್ಪತ್ತು ರೂಪಾಯಿ ಮಡಗಿ" ಎಂದ ಗೇಟಿಗ. ಬೇಡ ಎನ್ನುತ್ತಾ ಹೊರಗಡೆಯಿಂದ ಫೋಟೋ ತೆಗೆದುಕೊಂಡು ಬಂದೆ. ಅಯ್ಯೋ ಏನ್ ಖಂಜೂಸ್ ಜನ ಅಂತ ಅನ್ನಬೇಡಿ, ನೀರು ಸಿಕ್ಕಾಪಟ್ಟೆ ಜೋರು ಇದ್ದಿದ್ದರೆ ಅದರ ಫೋಟೋ ತೆಗೆಯಲು ಇಪ್ಪತ್ತು ರೂಪಾಯಿ ಅಂತ ನೋಡುತ್ತಿರಲಿಲ್ಲ. ನೀರು ಕೊಂಚ ಇದ್ದದ್ದರಿಂದ ಹಾಗೆ ಮಾಡಿದೆ. ಜಲಪಾತದ ರಭಸ ಜೋರಾದರೆ ಅದರ ಫೋಟೋ ಕತೆ ಅಂದು ನೋಡೋಣ. ಇವತ್ತು ಇಷ್ಟೆ.

ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.



ಆಷಾಢ ಮಾಸದ ಜಡಿಮಳೆಯಲ್ಲಿ ಮಧ್ಯಾಹ್ನ ಊಟಕ್ಕೆ ನಿಂಬ್ಗಾರ ಇದ್ದರೆ ’ಉಫ್’ ಅದರ ಮಜವೇ ಮಜ. ಕಣ್ಣಲ್ಲಿ ನೀರು ಬಾಯಲ್ಲಿ ನೀರು , ಒಟ್ಟಿನಲ್ಲಿ ಮಜ ಬಿಡಿ. ಆ ನಿಂಬ್ಗಾರಕ್ಕೆ ನಿಜವಾದ್ ರುಚಿಕೊಡುವ ಕೆಲಸ ಮಾಡುವುದು ನಿಂಬೆಹಣ್ಣು. ಈ ನಿಂಬ್ಗಾರ ಎನ್ನುವ ಉಪ್ಪಿನಕಾಯಿ ನೀವು ಈಗಾಗಲೆ ತಿಂದ ಜನ ಆಗಿದ್ದರೆ ಇದನ್ನ ಓದುತ್ತಿದ್ದಂತೆ ಬಾಯಲ್ಲಿ "ಚುಳ್" ಅಂತ ನೀರು ಬಂದಿರುತ್ತದೆ. ನನಗೆ ಹೀಗೆ ಟೈಪಿಸುವಾಗ ಬಾಯಿತುಂಬಾ ಬಂದಾಯ್ತು. ಆಗಲಿ ಈ ಪದಾರ್ಥಕ್ಕೆ ಸಾಸಿವೆ ಕಾಳು, ಸೂಜಿಮೆಣಸು ರುಚಿಕಟ್ಟನ್ನು ಒದಗಿಸುವ ಕೆಲಸ ಮಾಡಿದರೆ ಅದಕ್ಕೊಂದು ವಿಶೇಷ ರುಚಿ ಒದಗಿಸುವ ಕೆಲಸ ಮಾಡುವುದು ಆಷಾಢ ನಿಂಬೆ.
ಅಯ್ಯೋ ಇದ್ಯಾವುದಪ್ಪಾ "ಆಷಾಢನಿಂಬೆ" ಅಂತ ತಲೆಕೆಡಿಸಿಕೊಳ್ಳದಿರಿ. ಇದು ಮಾಮೂಲಿ ನಿಂಬೆಹಣ್ಣು ಆಷಾಢಮಾಸದಲ್ಲಿ ಸಿಕ್ಕಾಪಟ್ಟೆ ಬಿಡುತ್ತದೆ ಅದಕ್ಕೆ ಆ ಹೆಸರು ಕೊಟ್ಟೆ. ಸಾಮಾನ್ಯವಾಗಿ ನಮ್ಮ ತೋಟದ ಬದುವಿನಲ್ಲ್ಲಿ ನಿಂಬೆಗಿಡ ಹಾಕಿರುತ್ತಾರೆ. ಅದು ಈಗ ಗಿಡದತುಂಬಾ ಅರಿಶಿನ ಬಣ್ಣಕ್ಕೆ ತಿರುಗಿಸಿಕೊಂಡ ಹಣ್ಣು ಬಿಟ್ಟಿರುತ್ತದೆ. ಹಾಗೆ ಬಿಟ್ಟದ್ದನ್ನು ಕೊಯ್ಯುವಾಗಲೇ ಒಂಥರಾ ಮಜ. ಪ್ರತೀ ಹಣ್ಣು ಕೊಯ್ದಾಗಲೂ ಅದರಿಂದ ಹೊರಡುವ ಪರಿಮಳ ಇದೆಯಲ್ಲಾ ಅದು ನರನಾಡಿಗಳಿಗೂ ತನ್ನ ಇರುವಿಕೆಯನ್ನು ತಲುಪಿಸುತ್ತದೆ. ತೋಟದಿಂದ ಮನೆಗೆ ತಂದಾಗ ಜಗುಲಿ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿದ್ದವರು "ಅಯ್ಯೋ ನಿಂಬೆ ಹಣ್ಣು ಕೊಯ್ಕಬಂದ್ಯನಾ... ಏನ್ ಪರಿಮಳ ನೋಡು " ಎನ್ನುವಷ್ಟು ಮಜ ಇರುತ್ತದೆ. ಅದರ ರಸ ಹಿಂಡಿ ಏನೇನೋ ಮಾಡಿ ಒಂದು ವಗ್ಗರಣೆ ಜಡಿದು ಊಟಕ್ಕೆ ಮುಂಚೆ ಬಾಳೆ ತುದಿಯಲ್ಲಿ ಬಡಸಿದಾಗ, ಹಸಿದು ಕುಳಿತ ಜನ ಒಂದು ಚೂರು ತೋರ್ಬೇರಳಿನಲ್ಲಿ ನೆಕ್ಕಿದ ಕೂಡಲೆ ನಾಲಿಗೆ "ಲೊಚ್" ಎಂದು ತನ್ನಷ್ಟಕ್ಕೆ ಲೊಟ್ಟೆ ಹೊಡೆದು ವಾವ್ ಎಂಬ ಉದ್ಘಾರವನ್ನು ಬೇಡವೆಂದರೂ ಹೊರಡಿಸುತ್ತದೆ.
ಅಯ್ಯೋ ನೀವೆಷ್ಟು ಅದೃಷ್ಟವಂತರು, ಹಳ್ಳಿಯ ಜೀವನ ಅದೆಷ್ಟು ಚೆನ್ನ, ಹೀಗೆ ತೋಟಕ್ಕೆ ಹೋಗಿ ಹಾಗೆ ನಳನಳಿಸುವ ನಿಂಬೆ ಹಣ್ಣು ಕೊಯ್ದು ತಂದು ಆಘ್ರಾಣಿಸಿ ಅನುಭವಿಸಬಹುದು, ಹಾಗೂ ಇಲ್ಲಿನ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಹಳ್ಳಿಯಲ್ಲಿ ಒಂದೆಕರೆ ತೋಟ ತೆಗೆದುಕೊಂಡು ಹಾಯಾಗಿದ್ದುಬಿಡೋಣ, ಈ ಯಾಂತ್ರಿಕ ಜೀವನ ಬೋರ್ ಬೋರ್" ಎಂದೆಲ್ಲಾ ಅಂದುಕೊಳ್ಳದಿರಿ. ಅಲ್ಲಿನೀವು ಸಂಪಾದಿಸುವ ನೂರನೇ ಒಂದು ಭಾಗದ ಸಂಪಾದನೆ ಇಲ್ಲಿಲ್ಲ. ಆ ಸಂಪಾದನೆಯಲ್ಲಿ ಹತ್ತು ರೂಪಾಯಿ ಕೊಟ್ಟರೆ ಅಂಗಡಿಯಲ್ಲಿ ನಿಮಗೆ ಇದರ ಅಪ್ಪನಂತಹ ನಿಂಬೆ ಹಣ್ಣು(ವಯಸ್ಸಾದದ್ದು ಅಂತಲ್ಲ ಮತೆ) ದೊರಕುತ್ತದೆ. ಆ ಹತ್ತು ರೂಪಾಯಿ ಯಾವ ಲೆಕ್ಕ. ಆದರೆ ಇಲ್ಲಿ ಹತ್ತು ರೂಪಾಯಿ(ಸಂಪಾದನೆಯ ವಿಷಯದಲ್ಲಿ) ಯೇ ದೊಡ್ಡ ಲೆಕ್ಕ. ಹಾಗಾಗಿ ನಿಮ್ಮ ಮಜ ನಿಮಗೆ, ನಮ್ಮ ಮಜ ನಮಗೆ. ಪುರ್ಸೊತ್ತಾದರೆ ನಮ್ಮ ಮನೆಗೆ ಬಂದು ಒಂದು ಅನುಭವ ತೆಗೆದುಕೊಳ್ಳಿ. ಅಪರೂಪಕ್ಕೆ ಎಲ್ಲವೂ ಚಂದ ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.

Tuesday, July 12, 2011

"ಹೃದಯದ ಪ್ರೀತಿಯಂತೆ"...



"ಹೃದಯದ ಪ್ರೀತಿಯಂತೆ" ಎಂಬ ತಲೆ ಬರಹದೊಂದಿಗೆ ೧೦-೦೭-೧೧ ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಒಂದು ಜೇನಿನಹಿಂದೆ ಪುಸ್ತಕದ ರಿವ್ಯೂ ಬಂದಿದೆ. ಬರೆದ ಆರ್ ಸುಧೀಂದ್ರ ಕುಮಾರ್ ರವರಿಗೂ ಪ್ರಜಾವಾಣಿ ಬಳಗಕ್ಕೂ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಕ್ಷರ ಹೆಗ್ಗೋಡು ಇವರಿಗೂ ಮತ್ತು ನಿಮಗೂ ಅನಂತಾನಂತ ಧನ್ಯವಾದಗಳು

Monday, July 11, 2011

ಏನಾಗುತ್ತೋ ಆ ಶಿವನೇ ಬಲ್ಲ.



"ಯಮ್ಮನೆ ಸೊಸೆ ಮೀಟಿಂಗ್ ಇದ್ದು ಹೇಳಿ ಹೊಯ್ದ, ಇನ್ನೂ ಬರ್ಲ್ಯಪ ಎಂತ ಮಾಡ್ತ ಏನ" ಇದು ಈಗ ಮೂರ್ನಾಲ್ಕು ವರ್ಷದಿಂದ ಈಚೆಗೆ ನಮ್ಮ ಹಳ್ಳಿ ಮನೆಯಲ್ಲಿನ ವೃದ್ಧರ ಗೊಣಗಾಟ. ಸ್ತ್ರೀ ಶಕ್ತಿ ಸಂಘಟನೆ ಹಳ್ಳಿ ಹಳ್ಳಿಯ ಮೂಲೆ ಮೂಲೆಯಲ್ಲಿಯೂ ಮೂಲೆ ಮೂಲೆಯಲ್ಲಿಯೂ ಹಬ್ಬಿ ತಿಂಗಳಿಗೊಂದು ಮೀಟಿಂಗ್ ಚರ್ಚೆ ವಾದ ವಿವಾದ ಮುಂತಾದವುಗಳು ಸಾಂಗೋಪಸಾಂಗವಾಗಿ ನಡೆಯುತ್ತಿವೆ. ಮೂರುವರ್ಷದ ಹಿಂದಿದ್ದ ರಭಸ ಕೊಂಚ ಕಡಿಮೆಯಾದರೂ ಏನೋ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ ಹಳ್ಳಿಯ ಮಹಿಳಾಮಣಿಗಳು. ಆರಂಭದಲ್ಲಿ ಇಪ್ಪತ್ತರ ಸಂಖ್ಯೆಯಲ್ಲಿದ್ದ ಸದಸ್ಯರ ತಂಡ ೮-೧೦ ಕ್ಕೆ ಇಳಿದಿದೆ ಕೆಲವೆಡೆ, ಮತ್ತೆ ಒಡೆದು ಹರಿದು ಹಂಚಿ ಮೂರ್ನಾಲ್ಕು ಸಂಘಗಳಾಗಿವೆ ಹಲವೆಡೆ.

ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯ ಒಡತಿಯ ಮೇಲೆ ಸಂಸಾರ ಅವಲಂಬಿತವಾಗಿರುತ್ತದೆ. ಇಲ್ಲಿ ಗಂಡು ಒಂಥರಾ ಜೇನಿನಲ್ಲಿನ ಗಂಡು ನೊಣ ಇದ್ದ ಹಾಗೆ. ಕೆಲಸ ಮಾಡಿದರೂ ನಡೆಯುತ್ತದೆ ಮಾಡದಿದ್ದರೂ ತೀರಾ ವ್ಯತ್ಯಯ ಏನಿಲ್ಲ. ಬಹುಪಾಲು ಗಂಡಸರ ಕೆಲಸ ಎಂದರೆ ಪೇಟೆ ಪೇಟೆ ಪೇಟೆ. ಆದರೆ ಮಹಿಳೆ ಮಾತ್ರಾ ಹಾಗಲ್ಲ, ಮನೆಯ ಒಪ್ಪಓರಣದಿಂದ ಹಿಡಿದು ಅಡುಗೆ ತುಡುಗೆ ಮುಗಿಸಿ ನಂತರ ತೋಟ ಗದ್ದೆಯವರೆಗೂ ವಿಸ್ತರಿಸುತ್ತದೆ ಆಕೆಯ ವ್ಯಾಪ್ತಿ. "ಗೃಹಣೀ ಗೃಹ ಮುಚ್ಚ್ಯತೆ" ಎಂಬ ಸ್ಲೋಗನ್ ನೂರಕ್ಕೆ ನೂರರಷ್ಟು ಹಳ್ಳಿಯ ಹೆಂಗಸಿಗೆ ಅನ್ವಯಿಸುತ್ತದೆ. ಪೇಟೆಯಲ್ಲಿ ಗಂಡಸು ಕೂತರೆ ಸಂಸಾರ ಕಷ್ಟ ಇಲ್ಲಿ ಹೆಣ್ಣು ಕೂತರೆ ಸೇಮ್ ಟು ಸೇಮ್.( ಈಗ ದುಡಿಯುವ ಹೆಣ್ಣುಮಕ್ಕಳು-ಇಬ್ಬರ ದುಡಿಮೆ ಇದಕ್ಕೆಲ್ಲಾ ಹೊರತಾಗಿ)

ಈ ಸಂಘಗಳು ಬಂದಮೇಲೆ ಹೆಂಗಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಣಕಾಸಿನ ವ್ಯವಹಾರಕ್ಕೂ ತೊಡಗಿಸಿಕೊಂಡಿದ್ದಾರೆ. ಒಂಥರಾ ಬೇಷ್ ಎನ್ನಬಹುದಾದ ಕೆಲಸವೇ, ಆದರೆ ಮತ್ತೊಂದು ದೃಷ್ಟಿಯಲ್ಲಿ ನೋಡಿದಾಗ ಹಳ್ಳಿಯ ಸಂಸಾರಗಳು ಸ್ವಲ್ಪ ಯಡವಟ್ಟು ಹೆಜ್ಜೆಯನ್ನಿಡಲು ಕಾರಣವಾಗಿದೆ. ಅದೇನು ಅಂತಹಾ ಪ್ರಪಂಚ ಮುಳುಗುವಂತಹಾ ಅಥವಾ ಎಲ್ಲಾ ಯಕ್ಕುಟ್ಟಿ ಹೋಯಿತು ಎನ್ನುವಂತಹ ಸಮಸ್ಯೆ ಅಲ್ಲದಿದ್ದರೂ ತೀರಾ ಹಣದ ಹಿಂದೆ ಬಿದ್ದರೆ ಅಲ್ಪಸ್ವಲ್ಪ ಏರುಪೇರು ಖಂಡಿತ ಅಂತ ಬಹುಜನರ ಮಾತು. ಸಂಘಗಳಿಗೆ ಹೇರಳ ಹಣ ಹರಿದು ಬರುತ್ತಿವೆ. ಅದು ಸಾಲದ ರೂಪದಲ್ಲಿ, ವಾರಕ್ಕೊಮ್ಮೆ ಕಂತಿನ ಮೂಲಕ ಕಟ್ಟುವ ಷರತ್ತಿನೊಂದಿಗೆ. ಹಾಗೆ ಹರಿದು ಬಂದ ಹಣ ಸಾಲದ ಕೂಪಕ್ಕೆ ನಿಧಾನವಾಗಿ ಮಹಿಳೆಯರನ್ನು ತಳ್ಳುತ್ತಿದೆ. ಇದು ವಿರಳ ಸಂಖ್ಯೆಯಲ್ಲಿ ಜನರಿರುವ ಸ್ಥಳವಾದ್ದರಿಂದ ಪಡೆದ ಸಾಲ ದುಡಿಮೆಗೆ ಒಡ್ಡುವುದು, ಮತ್ತೆ ಅದರಿಂದ ಗಳಿಸುವುದು ಕಷ್ಟಸಾದ್ಯ. ಹಾಗಾಗಿ ಪಡೆದ ಸಾಲ ಕೊಳ್ಳುಬಾಕತನಕ್ಕೆ ವ್ಯಯವಾಗುತ್ತಿದೆ. ಸದ್ಯ ಸಣ್ಣರೂಪದ ಸಮಸ್ಯೆ ಮುಂದೆ ಬೃಹತ್ ಗಾತ್ರದ ಸಮಸ್ಯೆಯಾಗುವ ಮುನ್ನೋಟ ಗೋಚರಿಸುತ್ತಿದೆ ಎಂಬುದು ಚಾಲ್ತಿ ಮಾತು.

ಇಷ್ಟೆ ಸಣ್ಣದೊಂದು ಸಮಸ್ಯೆಯ ನಡುವೆ ಹಳ್ಳಿ ಮಹಿಳೆ ಮುಂದೆ ಬರುವ ಹೆಜ್ಜೆ ಇಡುತ್ತಿದ್ದಾಳೆ, ಏನಾಗುತ್ತೋ ಆ ಶಿವನೇ ಬಲ್ಲ.