Monday, October 6, 2008

ನವರಾತ್ರಿ ಸಂಜೆಯಲಿ..ನಾನುಡಿವ ಮಾತಿನಲಿ...


ಪ್ರಶ್ನೆಯೊಂದು ಮೂಡಿಹುದು ಕೇಳಮ್ಮ, ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ ಉತ್ತರವು ಅಡಗಿಹುದು ಕೇಳಮ್ಮ. ಹೀಗೆ ಹಾಡು ಮುಂದುವರೆಯುತ್ತದೆ. ಅದೇಕೋ ಗೊತ್ತಿಲ್ಲ ನವರಾತ್ರಿ ಬಂದಾಗಲೆಲ್ಲ ನನಗೆ ಈ ಹಾಡು ನೆನಪಾಗುತ್ತದೆ. ನವರಾತ್ರಿ ಎಂಬ ಶಬ್ದ ಹಾಡಿನಲ್ಲಿದ್ದ ಕಾರಣವಿರಬಹುದು. ಇರಲಿ ವಿಷಯಕ್ಕೆ ಬರೋಣ. ಎರಡು ರೇಖೆಗಳು ಸಿನೆಮಾದಲ್ಲಿ ನಾಯಕನಿಗೆ ಎರಡು ಹೆಂಡಿರು. ಅವರುಗಳ ಅನುಮಾನವನ್ನು ಪರಸ್ಪರ ಹಾಡಿನ ಮೂಲಕ ಪರಿಹರಿಸಿಕೊಳ್ಳಲು ಹಾಡುವ ಹಾಡು ಅದು. ಹಾಡು ಸಮಯಕ್ಕೆ ಸರಿಯಾಗಿ ಹಾಗೂ ಕತೆಗೆ ಪೂರಕವಾಗಿದೆ. ಸಿನೆಮಾ ಅದ್ಭುತವಾಗಿದೆ, ಕಥೆ ಚೆನ್ನಾಗಿದೆ, ಅಲ್ಲಿ ಒಂದು ಸಂದೇಶವಿದೆ. ಗಂಭೀರವಾದ ಚಿಂತನೆಗೆ ಅವಕಾಶವಿದೆ. ಹೀಗೆ ಚಿಂತನೆಗೆ ಅವಕಾಶವಿರುವ ಹಲವಾರು ಸಿನೆಮಾಗಳಲ್ಲಿ ಅದೂ ಒಂದು. ಒಬ್ಬಾಕೆಯೊಡನೆ ಬಡತನದ ಸಂಸಾರ ಮತ್ತೊಬ್ಬಾಕೆ ಡಿ.ಸಿ . ಹಲವು ಹೊಯ್ದಾಟದ ನಡುವೆ ಇಬ್ಬರು ಹೆಂಡಿರುಗಳೊಡನೆ ಅಂತಿಮವಾಗಿ ಸುಖಸಂಸಾರ. ಅದು ಬೊಂಬಾಟಾಗಿತ್ತು. ಇರಲಿ ಅದು ಸಿನೆಮಾ ಜಗತ್ತು ಪರದೆಯಲ್ಲಿ ತೋರಿಸುವಂತೆ ಸ್ವತಃ ಅವರೂ ಇರಲಾರರು, ಈಗ ವಾಸ್ತವಕ್ಕೆ ಬರೋಣ. ವಾಸ್ತವವೆಂದರೆ ಅದೇ ಮದುವೆಯದೇ ಸಮಸ್ಯೆ.

ನಮ್ಮ ಹವ್ಯಕರ ಹಳ್ಳಿಗಳಲ್ಲಿ ಮೂವತ್ತರಿಂದ ನಲವತ್ತೈದು ವರ್ಷಗಳವರೆಗಿನ ಗಂಡುಗಳು ಬೇಕಷ್ಟು ಸಿಗುತ್ತವೆ. ಎರಡು ರೇಖೆಗಳಂತೆ ಎರಡು ಹೆಂಡಿರ ಕಥೆ ಆಮೇಲಾಯಿತು ಮೊದಲನೇ ಹೆಂಡತಿಯೇ ಇಲ್ಲದಂತಾಗಿದೆ. ಹೆಣ್ಣುಮಕ್ಕಳು ವಿದ್ಯಾವಂತರಾಗಿದ್ದು ಒಂದೆಡೆಯಾದರೆ, ಹಳ್ಳಿಯ ಸಂಪ್ರದಾಯಬದ್ಧ ಸ್ವಾತಂತ್ರ್ಯ ರಹಿತ ಜೀವನದ ಬೇಸರ ಇನ್ನೊಂದೆಡೆ. ಹಾಗೂ ಆರ್ಥಿಕ ವಾಗಿ ಹಳ್ಳಿಯ ಯುವಕರು ಹಿಂದು ಎಂಬ ವಿಚಾರ ಮತ್ತೊಂದೆಡೆ, ಹೀಗೆ ನಾನಾ ಕಾರಣಗಳಿಂದ ಹಳ್ಳಿಯ ಹೈದರಿಗೆ ಮದುವೆ ಇಲ್ಲ. ಅದು ಹವ್ಯಕ ಬ್ರಾಹ್ಮಣರಲ್ಲಿ ಹೆಚ್ಚಿದ ಸಮಸ್ಯೆ. ನೀವು ಹಲವಾರು ಮಾದ್ಯಮಗಳಲ್ಲಿ ಇದನ್ನು ಓದಿರುತ್ತೀರಿ ಹಾಗೂ ಕೇಳಿರುತ್ತೀರಿ. ಹೀಗಾಗಿ ನಮ್ಮ ಹಳ್ಳಿಗಳಲ್ಲಿ ನಾಲ್ಕು ಜನ ಸೇರಿದೆಡೆ ಈ ಒಂದು ಸಮಸ್ಯೆ ಕುರಿತು ಮಾತುಗಳು ಹರಿದಾಡುತ್ತಲೇ ಇರುತ್ತವೆ. ಯಾರಬಳಿಯಾದರೂ ಈ ಸಮಸ್ಯೆ ಹೇಳಿದರೆ "ಅಯ್ಯೋ ಈ ಮದುವೆಯಾಗದವರ ಕಾಲದಲ್ಲಿ ನಮ್ಮ ಹೆಂಡಿರನ್ನು ಕಾಪಾಡುವುದೇ ಕಷ್ಟವಾಗಿದೆ, ಇನ್ನು ಅವರಿಗೆ ಹೆಣ್ಣುಹುಡುಕುವುದು ಯಾರು ಮಾರಾಯ? ಎಂಬ ತಮಾಷೆಯ ಮಾತಿನಿಂದ ಹಿಡಿದು, ಹೌದು ಇದೊಂದು ಪೀಳಿಗೆಯ ಸಮಸ್ಯೆ, ಹೀಗೆ ಮುಂದುವರೆದಲ್ಲಿ ಅಂತ್ಯ ತುಂಬಾ ಕಷ್ಟಕರ ಎಂಬ ಗಂಭೀರ ಚರ್ಚೆಯವರೆಗೂ ಮುಂದುವರೆಯುತ್ತದೆ.

ಈಗ ಸಮಸ್ಯೆಗೆ ಪರಿಹಾರ ಹುಡುಕುವುದು ಒಂದೆಡೆಯಾದರೆ, ನಮ್ಮ ಹಳ್ಳಿಯ ಹೈದರ ಮನಸ್ಥಿತಿಯನ್ನು ಗಮನಿಸಬೇಕಾದ ಕೆಲಸ ಇನ್ನೊಂದೆಡೆ. ನಿಜವಾಗಿ ಹಳ್ಳಿ ಹೈದರಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದು ಹಸೀ ಸುಳ್ಳಿನ ಸಂಗತಿ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಹಳ್ಳಿಯ ಗಂಡುಗಳಿಗೆ ಮದುವೆಯ ಜವಾಬ್ದಾರಿಯ ಉಮ್ಮೇದೇ ಇಲ್ಲ ಎಂಬುದು ಒಳಗುಟ್ಟು.

ತಿಳಿದವರ ಪ್ರಕಾರ ಮದುವೆ ಎನ್ನುವುದು ಗಂಡಿಗೆ ತಿಳುವಳಿಕೆ ಬರುವುದಕ್ಕಿಂತ ಮೊದಲೇ ಆಗಬೇಕಾದ ಪ್ರಕ್ರಿಯೆ. ಪ್ರಕೃತಿಯಲ್ಲಿ ಗಂಡು ಎಂಬ ಪ್ರಾಣಿ ಸಹಜವಾಗಿ ಬೇಜವಾಬ್ದಾರಿ ಹಾಗೂ ಸೋಮಾರಿ. ಅದೊಂದು ಉನ್ಮಾದದ ಹಂತದ ಸುಮಾರು ಇಪ್ಪತ್ನಾಲ್ಕು ಇಪ್ಪತೈದ್ರ ವಯಸ್ಸಿನಲ್ಲಿ ಗಂಡಿಗೆ ಮದುವೆಯ ಉಮೇದು ಇರುತ್ತದೆ ಹಾಗೂ ಪ್ರಪಂಚದ ತಿಳುವಳಿಕೆ ಇರುವುದಿಲ್ಲ. ಆನಂತರ ಆತ ಹಗೂರವಾಗಿ ಬೇಜವಾಬ್ದಾರಿ ಜೀವನಕ್ಕೆ ಜಾರುತ್ತಾನೆ. ಕೆಲಸ ಕರ್ತವ್ಯ ಮಾಡಬಹುದು ಆದರೆ ಅದೇನೋ ನಿರುತ್ಸಾಹ ತುಂಬತೊಡಗುತ್ತದೆ. ಮದುವೆ ಜವಾಬ್ದಾರಿ ಹೊರೆ ಮುಂತಾದವುಗಳಾಗಿ ಅನ್ನಿಸತೊಡಗುತ್ತದೆ. ಇಲ್ಲಿ ಆಗಿದ್ದು ಅದೇ, ಹಳ್ಳಿಯಲ್ಲಿರುವವರು ಜೀವನೋತ್ಸಾಹ ಕಳೆದುಕೊಂಡು ಅಲೆದಾಡುತ್ತಿದ್ದಾರೆ ಎಂಬುದು ವಾಸ್ತವ ಸತ್ಯ. ಗಂಡೊಂದು ಮದುವೆಯಾಗಲೇ ಬೇಕೆಂಬ ಹಠಕ್ಕೆ ಬಿದ್ದರೆ ಹೆಣ್ಣುಗಳು ಖಂಡಿತಾ ಸಿಗುತ್ತಾರೆ. ಹೆಣ್ಣೆಂದರೆ ನೀರಿದ್ದಂತೆ, ಪಾತ್ರೆಯಲ್ಲಿದ್ದರೆ ಪಾತ್ರೆಯ ಆಕಾರ, ಲೋಟದಲ್ಲಿದ್ದರೆ ಲೋಟದ ಆಕಾರ. ಆದರೆ ಇಲ್ಲಿರುವುದು ಗಂಡುಗಳ ನಿರುತ್ಸಾಹ. ಮೊದಲಿನಂತೆ ಮನೆಬಾಗಿಲಿಗೆ ಹೆಣ್ಣುಗಳ ಜಾತಕ ಹಿಡಿದುಕೊಂಡು ಬರುವವರು ಇಲ್ಲ, ಹತ್ತೆಂಟು ಹೆಣ್ಣು ನೋಡಿ ಕೇಸರಿಬಾತು ಖಾಲಿ ಮಾಡುವ ಅವಕಾಶ ಇಲ್ಲ ಎಂಬುದನ್ನು ಬಿಟ್ಟರೆ ಇಂದೂ ಕೂಡ ಹಳ್ಳಿಯ ಗಂಡುಗಳಿಗೆ ಹೆಣ್ಣುಗಳು ಅವರವರ ಯೋಗ್ಯತೆಯನುಸಾರವಾಗಿ ಇವೆ. ಆದರೆ ಈ ಗಂಡುಗಳು ಅದೇಕೋ ಅದರಬಗ್ಗೆ ಆಲೋಚನೆ ಮಾಡದೆ ಹಾಯಾಗಿ ಇವೆ. ಅದಕ್ಕೆ ಗುಟ್ಕಾವೂ ಕಾರಣ ಎಂಬ ಆಪಾದನೆಯೂ ಇದೆ ಎನ್ನಿ. ಇರಲಿ ಕಾರಣವೇನಿರಲಿ ಸಮಸ್ಯೆ ಇರುವುದಂತೂ ನಿಜ. ಮಜ ನೋಡಿ ಇಂತಹ ಜ್ವಲಂತ ಸಮಸ್ಯೆ ಇದ್ದರೂ ನಮ್ಮ ಹಳ್ಳಿಯ ಕಡೆ ಐವತ್ತು ದಾಟಿದವರು ಯಶಸ್ವಿಯಾಗಿ ಎರಡನೆ ಮದುವೆ ಮಾಡಿಕೊಂಡು ಅಷ್ಟಕ್ಕೂ ತೃಪ್ತರಾಗದೆ ಸೊಪ್ಪಿನ ಬೆಟ್ಟದಲ್ಲಿ " ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ" ಹಾಡಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದೇ ಅರ್ಥವಾಗದ್ದು ಎಂದರೆ. ಇರಲಿ ಕಾಲಾಯ ತಸ್ಮೈ ನಮಃ ಅಲ್ಲವೇ?

ಕೊನೆಯದಾಗಿ: " ಹಳ್ಳಿಗಳಲ್ಲಿ ಯುವಕರು ಮುದುಡುತ್ತಿದ್ದಾರೆ ಮುದುಕರು ಯುವಕರಾಗಿದ್ದಲೂ ಪುಟಿಯುತ್ತಿದ್ದರು ಈಗಲೂ ಪುಟಿಯುತ್ತಿದ್ದಾರೆ, ಯಾಕೆ ಹೀಗೆ ?" ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು "ಅರಳಿದ ಹೂವಿಗೆ ದುಂಬಿ ಜೇನು ತಮ್ಮ ಕೆಲಸ ಮಾಡದಿದ್ದರೆ ಸೊಳ್ಳೆಗಳನ್ನು ಹೂವು ಆಕರ್ಷಿಸುವುದು ಹೂವಿಗೆ ಅನಿವಾರ್ಯ" ಅಂತ ಅಂದು ಬಿಡೋದೆ. ಅವರ ಮಾತನ್ನು ಕೇಳಿದ ಹಳ್ಳಿಯ ಜೇನಿನಂತ ಯುವಕರಿಗೆ ಈ ಮಾತು ಹೇಳಬೇಕು ಅಂತ ಅನ್ನಿಸಿತು.
ಅಂತಿಮವಾಗಿ: ಕನ್ನಡಪ್ರಭದವರು ಈ ವಾರದ ಸಾಪ್ತಾಹಿಕದಲ್ಲಿ ನಿಮ್ಮ ಗ್ರಹಚಾರವೋ ನನ್ನ ಯೋಗವೋ ಯಾವುದೇ ಇರಲಿ ನನ್ನದೊಂದು ಕಥೆ ಪ್ರಕಟಿಸಿದ್ದಾರೆ ತದ್ಗತ್ ಆದಾಗ ಓದಿ, ಅಥವಾ ಓದದಿದ್ದರೂ ಹೀಗೆ ಸಿಕ್ಕಾಗ ಓದಿದೆ ಚೆನ್ನಾಗಿತ್ತು ಅಂತಲಾದರೂ ಹೇಳಿ. http://www.kannadaprabha.com/news.asp?id=KP420081004035740
ಟಿಪ್ಸ್: ಸಿಕ್ಕಾಪಟ್ಟೆ ಕಾರ ತಿಂದು ಬಾಯಿಬಾಯಿ ಬಡಕೊಳ್ಳುವಂತಾದಾಗ ಸಕ್ಕರೆ ತಿಂದು ಒದ್ದಾಡುವುದಕ್ಕಿಂತಲೂ ಸುಲಭದ ಮಾರ್ಗವೆಂದರೆ ಬಾಯಿ ಕಳೆದು ನಾಲಿಗೆ ಹೊರಗೆ ಚಾಚಿ ಬಗ್ಗಿ ಕುಳಿತುಕೊಳ್ಳುವುದು. ಆವಾಗ ನಾಲಿಗೆಯಿಂದ ಬುಳುಬುಳು ನೀರು ಬೀಳತೊಡಗುತ್ತದೆ. ಕ್ಷಣಮಾತ್ರದಲ್ಲಿ ಕಾರದ ಪ್ರಾಬ್ಲಂ ಮಾಯವಾಗಿ ಒಂಥರಾ ಮಜ ಸಿಗುತ್ತದೆ.

3 comments:

ವಿನಾಯಕ ಕೆ.ಎಸ್ said...

sharmare,
nimma kategalu tuba chennagiruttave.

Unknown said...

To Vinayaka

Thanks

ವಿ.ರಾ.ಹೆ. said...

ಶರ್ಮಣ್ಣ,

ಕಥೆ ಓದಿದೆ. ಡಿಫರೆಂಟಾಗಿ ಚೆನ್ನಾಗಿದೆ.