Wednesday, October 8, 2008
ಬಿದಿರಿನ ಕಟ್ಟೆಯೂ ನೆಗೆಟೀವ್ ಯೋಚನೆಯೂ....?
ಬಿದಿರುಮಳೆಗೆ ಕಟ್ಟೆ ಬಂದರೆ ಬರಗಾಲ ಬರುತ್ತದೆ. ಬಿದಿರು ಅಕ್ಕಿಯನ್ನೇ ಉಣ್ಣುವ ಪರಿಸ್ಥಿತಿ ಖಂಡಿತ ಅಂತ ಹಳ್ಳಿಗಾಡಿನಲ್ಲಿ ನಂಬಿಕೆಯಿದೆ. ಗೋರಾಂಡಲ ರಣಬೇಸಿಗೆಯಲ್ಲಿ ಹಸಿರು ಹಸಿರಾಗಿರುವ ಬಿದಿರು ಒಣಗಿ ನಿಂತುಬಿಡುತ್ತದೆ. ಇದು ಅರವತ್ತು ವರ್ಷಕ್ಕೊಮ್ಮೆ ಸಂಭವಿಸುವ ಘಟನೆ ಎಂದು ಬಾಯಿಂದ ಬಾಯಿಗೆ ಹಬ್ಬಿ ಬಂದಿರುವ ಮಾಹಿತಿ . ಕಳೆದ ಬೇಸಿಗೆಯಲ್ಲಿ ನಮ್ಮೂರಿನ ನೂರಾರು ಬಿದಿರು ಒಣಗಿನಿಂತಿತ್ತು. ಆದರೆ ಬರಗಾಲವೇನೂ ಸಾಮೂಹಿಕವಾಗಿ ಬಂದಿಲ್ಲ. ಎಲ್ಲರೂ ಊಟ ಮಾಡುತ್ತಿದ್ದಾರೆ, ಅಂಡಿಗೆ ಬೈಕ್ ಹಾಕಿಕೊಂಡು ತಿರುಗುತ್ತಿದ್ದಾರೆ, ಕಾರ್ ಇರುವವರು ಅದರಲ್ಲಿ ಸುತ್ತುತ್ತಿದ್ದಾರೆ. ಆದರೆ ಏಪ್ರೀಲ್ ನಲ್ಲಿ ಎಲ್ಲರದ್ದೂ ಒಂದೇ ಗೊಣಗಾಟ ಇತ್ತು, ಈವರ್ಷ ಬಿದಿರಿಗೆ ಕಟ್ಟೆ ಬಂದಿದೆ ಹಾಗಾಗಿ ಬರಗಾಲ ಖಂಡಿತ, ಊಟ ಮಾಡುವುದು ಹೇಗೋ? ಹಾಗೇ ಹೀಗೆ ಮುಂತಾಗಿ. ಮಳೆಗಾಲದಲ್ಲಿ ಅಡಿಕೆಗೆ ಕೊಳೆಬಂದಾಗಲೂ ಪಾಪದ ಬಿದಿರಿಗೆ ಕಟ್ಟೆ ಬಂದಿದ್ದನ್ನೇ ಉದಾಹರಿಸಿ ಈ ವರ್ಷ ಬದುಕುವುದು ಕಷ್ಟ ಇದೆ ಅನ್ನುತ್ತಿದ್ದರು. ಪಾಪ ಈ ಸಾಮೂಹಿಕ ಯೋಚನೆಯ ಮಾತುಗಳನ್ನು ಕೇಳಿದ ಅಮಾಯಕರು ಬದುಕು ಅತ್ಯಂತ ಕಷ್ಟವಾಗುತ್ತದೆ ಎಂದು ನಿತ್ಯ ಅವ್ಯಕ್ತ ಭಯದಿಂದ ನರಳುತ್ತಾರೆ. ಈ ಸಾಮೂಹಿಕ ನೆಗೆಟಿವ್ ಯೋಚನೆ ಪ್ರಪಂಚದ ಎಲ್ಲಾ ಸ್ಥರಗಳಲ್ಲಿಯೂ ಹರಿದಾಡುತ್ತಿರುತ್ತದೆ. ಮೊನ್ನೆ ಮೊನ್ನೆ ಶೇರು ಮಾರುಕಟ್ಟೆ ಕುಸಿದಾಗ ಎಲ್ಲರಿದ್ದೂ ಇದೇ ತರಹದ ಭಯದ ಮಾತುಗಳು. ಇನ್ನು ಐಟಿ ಇಂಡಸ್ಟ್ರೀಸ್ ಕಥೆ ಮುಗಿದಂತಯೇ ಇಂಜನಿಯರಿಂಗ ಓದುವುದು ವೇಸ್ಟ್, ಮುಂತಾಗಿ ನೆಗೆಟಿವ್ ಯೋಚನೆಗಳು ಹರಿದಾಡಲಾರಂಬಿಸಿವೆ. ಸಧ್ಯ ಬಿದಿರು ಮಳೆಗೆ ಕಟ್ಟೆ ಬಂದಿದ್ದರಿಂದ ಶೇರು ಮಾರುಕಟ್ಟೆ ಕುಸಿದಿದೆ ಐಟಿ ಬಿದ್ದಿದೆ ಅಮೆರಿಕಾದ ಅರ್ಥ ವ್ಯವಸ್ಥೆ ಜಾರಿದೆ ಎಂಬ ಕತೆ ಶುರುವಾಗಿಲ್ಲ. ಇದಕ್ಕೆ ಪಟ್ಟಣದಲ್ಲಿ ಬಿದಿರುಮಳೆ ಇಲ್ಲದಿದ್ದದ್ದೂ ಕಾರಣವಿರಬಹುದು.
ಪ್ರಕೃತಿಯಲ್ಲಿನ ವ್ಯತ್ಯಯಗಳನ್ನು ನಮ್ಮ ನಮ್ಮ ಜೀವನಕ್ಕೆ ಹೋಲಿಸಿಕೊಂಡು ಋಣಾತ್ಮಕ ಯೋಚನೆಗಳನ್ನು ತಲೆಗೇರಿಸಿಕೊಂಡು ನರಳುವ ಪದ್ದತಿ ಮನುಷ್ಯನ ಆರಂಭಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಆದರೆ ಇದನ್ನೇ ಧನಾತ್ಮಕವಾಗಿ ಬಳಸಿಕೊಂಡು ಸುಖವಾಗಿ ಬದುಕಬಹುದು ಎಂಬ ಆಲೋಚನೆ ನಮಗೆ ಬರುವುದೇ ಇಲ್ಲ. ನೆನಪಿಸಿಕೊಳ್ಳಿ ಈಗ ಹತ್ತು ವರ್ಷದ ಹಿಂದೆ ಐಟಿ ಕ್ಷೇತ್ರದಲ್ಲಿ ಶೇರು ಮಾರುಕಟೆಯಲ್ಲಿ, ಹಳ್ಳಿಗಾಡಿನಲ್ಲಿ ಬದುಕುವುದೇ ಕಷ್ಟ ಎಂಬಂತಹ ಇದೇ ತರಹದ ನೆಗೇಟೀವ್ ಮಾತುಗಳು ಹರಿದಾಡುತ್ತಿತ್ತು. ಹಾಗಂತ ಯಾರೂ ಸತ್ತಿಲ್ಲ. ಕೆಲಸ ಮಾಡುವವರು ತಮ್ಮ ಪಾಡಿಗೆ ತಾವು ಮಾಡುತ್ತಿದ್ದಾರೆ, ಮನೆ ಕಟ್ಟಿಸುವವರು ಕಟ್ಟಿಸಿದ್ದಾರೆ , ಕಾರ್ ಕೊಳ್ಳುವವರು ಕೊಂಡಿದ್ದಾರೆ, ಬಾಯಲ್ಲಿ ಮಾತ್ರಾ ಬದುಕುವುದೇ ಕಷ್ಟ ಎಂಬ ಒಣ ಡೈಲಾಗ್. ಸತ್ಯ ಹೇಳಲಾ ಇದು ಅತಿ ಹೆಚ್ಚು ಕಾಡುವುದು ಇತಿಹಾಸದ ಮೇಲೆ ಬದುಕು ಕಟ್ಟಿಕೊಳ್ಳುತ್ತಿರುವ ನಮ್ಮಂತಹ ದೇಶದ ಜನರ ಮನಸ್ಥಿತಿ. ಅಮೆರಿಕಾದಂತಹ ಭವಿಷ್ಯಕ್ಕಾಗಿ ವರ್ತಮಾನವನ್ನು ಸವೆಸುತ್ತಿರುವ ಮನಸ್ಥಿತಿಯಲ್ಲಿ ಈ ತರಹ ವೃಥಾ ನೆಗೇಟೀವ್ ಮಾತುಗಳು ಬಹು ಕಡಿಮೆ. ನೆಗೆಟೀವ್ ಯೋಚನೆಯಿಂದ ವರ್ತಮಾನದ ಜೀವನದ ಮಜ ಕಳೆದುಹೋಗುತ್ತದೆ. ನಾನು ಕೂಡ ವೈಯಕ್ತಿಕವಾಗಿ ಅದರ ಕಷ್ಟ ಅನುಭವಿಸಿದ್ದೇನೆ. ಒಂದೋ ಭೂತಕಾಲವನ್ನು ಸ್ಮರಿಸುತ್ತಾ ಜೀವನ ಸವೆಸಬೇಕು ಅಥವಾ ಭವಿಷ್ಯಕ್ಕೆ ಕನಸು ಕಟ್ಟುತ್ತಾ ಜೀವನ ಸಾಗಿಸಬೇಕು. ಅದು ಸುಖವಾಗಿರಬೇಕು ಎಂದಾದರೆ ಭವಿಷ್ಯದ ಕನಸು ಪಾಸಿಟೀವ್ ಆಗಿರಬೇಕು ಭೂತದ ಆಲೋಚನೆ ಹೇಗಿದ್ದರೂ ಅಂತಹಾ ತೊಂದರೆಯಿಲ್ಲ.
ಹೇಗೆಂದರೆ ಅಬ್ಬಾ ಬಿದಿರಿಗೆ ಕಟ್ಟೆ ಬಂತು ಈ ವರ್ಷ ಒಣಗಿದ ಬೊಂಬು ಬೇಕಷ್ಟು ಸಿಗುತ್ತದೆ. ಬಿದಿರಿನ ಅಕ್ಕಿಯಿಂದ ಸಾವಿರಾರು ಹೊಸ ಮೊಳಕೆ ಹುಟ್ಟುತ್ತದೆ. ಹಸಿರು ಕಾಡು ಸಮೃದ್ಧವಾಗುತ್ತದೆ. ಶೆರು ಮಾರುಕಟ್ಟೆ ಬಿದ್ದದ್ದು ಒಳೆಯದೇ ಆಯಿತು, ಸಸ್ತಾದರದಲ್ಲಿ ಶೇರು ಕೊಳ್ಳಬಹುದು. ಹೀಗೆ ಆಲೋಚಿಸಿದರೆ ಒಂದಿಷ್ಟು ಆರಾಮು ಅಂತ ಅನ್ನಿಸುತ್ತದೆ ನನಗೆ , ನಿಮಗೆ ಹೇಗೋ ನನಗೆ ಗೊತ್ತಿಲ್ಲ. ಇದು ರಗಳೆ ಅಂತ ಅನ್ನಿಸಿದರೆ ನೀವು ಸುಖಿಗಳು. ಹೌದು ಅಂತ ಅನ್ನಿಸಿದರೆ ನೀವು ನನ್ನಂತೆ. ಸುಳ್ಳು ಅಂತ ಅನ್ನಿಸಿದರೆ ನೀವು ಈಗಾಗಲೇ ಗೆದ್ದಿದ್ದೀರಿ ಅಂತ ಅರ್ಥ.
ಕೊನೆಯದಾಗಿ: ನೆಗೆಟೀವ್ ಪಾಸಿಟೀವ್ ಯೋಚನೆ ಅಂತ ಇದೆಯಾ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೆಣಕಿದೆ. ಯೋಚನೆಗಳಲ್ಲಿ ಹಾಗೆ ವಿಭಾಗ ಇಲ್ಲ ಆದರೆ ಯೋಚಿಸುವವನಲ್ಲಿ ಇದೆ. ಯೋಚನೆಯೆಂದರೆ ಅರ್ದ ಬಾಟಲಿ ಮದ್ಯ ಯೋಚಿಸುವವ ಇಷ್ಟು ಇದೆ , ಇಷ್ಟೇ ಇದೆ ಎಂದು ವಿಭಾಗಿಸಿಕೊಂಡು ಒದ್ದಾಡುತ್ತಾನೆ ಸುಖಿಸುತ್ತಾನೆ, ಪರಿಣಾಮ ಅರ್ದ ಬಾಟಲಿ ಮದ್ಯದ ಮೇಲಾಗದು ಎಂಬಂತಹ ಕಬ್ಬಿಣದ ಕಡಲೆಯಂತ ಉತ್ತರ ಕೊಟ್ಟರು. ನಾನು ಸುಮ್ಮನುಳಿದೆ. ಒಮ್ಮೊಮ್ಮೆ ಲೂಸ್ ತರಹ ಆಡುತ್ತಾರವರು
ಟಿಪ್ಸ್: ಹುಡುಗಿಗೆ ಹುಡುಗ ಇಷ್ಟವಾದರೆ ಆಕೆ ತನಗೆ ಅರಿವಿಲ್ಲದಂತೆ ತನ್ನ ಮೂಗಿನಮೇಲೆ ಕೈ ಆಡಿಸುತ್ತಾಳಂತೆ. ಲವ್ ಮಾಡೋ ಹುಡುಗರು ಇದೊಂದು ವರ್ತನೆಯ ಮುಖಾಂತರ ತಮ್ಮ ಪ್ರಪೋಸಲ್ ಹೇಳುವ ಧೈರ್ಯ ಮಾಡಬಹುದು. ಯಡವಟ್ಟಾದ್ರೆ ನಾನು ಜವಾಬ್ದಾರನಲ್ಲ.
Subscribe to:
Post Comments (Atom)
3 comments:
ರಾಘಣ್ಣ,
ಮೊನ್ನೆ ಬಾನುವಾರದ ವಿಜಯಕರ್ನಾಟಕದಲ್ಲಿ ಇದರ ಬಗ್ಗೆ ಬಂದಿತ್ತು. ಅದಕ್ಕೆ ಸರಿಯಾದ ಮಾಹಿತಿಯನ್ನು ಒದಗಿಸಿದ್ದರು.
ಬಿದಿರು ಹೂವು ಬಿಡುವುದು ೬೦ ವರ್ಷಗಳಿಗೊಮ್ಮೆಯಂತೆ. ಹಾಗೆ ಬಿಟ್ಟ ಹೂಗಳು ಭೂಮಿಗೆ ಬಿದ್ದಾಗ ಅದನ್ನು ಹೆಗ್ಗಣಗಳು ತಿಂದು ಅವರ ಸಂತತಿ ಸಾವಿರ ಪಟ್ಟು ಜಾಸ್ತಿಯಾಗುತ್ತದೆಯಂತೆ. ಆ ಹೆಗ್ಗಣಗಳಿಂದ ಕ್ಷಾಮ ಬರುತ್ತದೆ ಅಂತ ಹೇಳಿದ್ದರು.
ನನಗೆ ನೆನಪಿದ್ದುದ್ದನ್ನು ಬರೆದಿದ್ದೇನೆ. ಯಾರಿಗಾದರು ಹೆಚ್ಚಿನ ಮಾಹಿತಿಯಿದ್ದರೆ ತಿಳಿಸಿ.
ಇತಿಹಾಸದ ಮೇಲೆ ಬದುಕು ಕಟ್ಟಿಕೊಳ್ಳುತ್ತಿರುವ ನಮ್ಮಂತಹ ದೇಶದ ಜನರ ಮನಸ್ಥಿತಿ.
ಸರ್ಯಾಗಿ ಹೇಳಿದ್ರಿ ನೋಡಿ. ನಂಗೂ ಹಂಗೇ ಅನಿಸ್ತು.
ಯಾವುದೂ ಏನೂ ಆಗೋಲ್ಲ, ಕೊರಗೋದಂತೂ ನಿಲ್ಲಲ್ಲ !
Good post and topic. Negative thoughts and superstitions travel fast and will be remembered longer.
Post a Comment