Tuesday, December 30, 2008

ಅಪ್ಪಯ್ಯಾ..ಅಪ್ಪಯ್ಯಾ.. ಆನು ಟೂರಿಗೆ ಹೋಕ್ತಿ..

ಅಂತ ಏಳನೆ ಕ್ಲಾಸಿನಲ್ಲಿ ಓದುತ್ತಿರುವ ಮಗ ವರಾತ ಶುರು ಹಚ್ಚಿದ. ಏಕಮಾತ್ರ ಒಬ್ಬನೇ ಒಬ್ಬ(!!!!) ಮಗನನ್ನು ಶಾಲೆಯ ಟೂರಿಗೆ ಕಳುಹಿಸುವುದೆಂದರೆ ಅದೇನೋ ಆತಂಕ ಮನೆಯವಳಿಗೆ. ನನಗೂ ಆತಂಕ ಇಲ್ಲವೆಂದಲ್ಲ ಆದರೂ ಅವಳಷ್ಟಿಲ್ಲ. ನನ್ನ ಆತಂಕದ ಕಾರಣ ಇಲ್ಲಿಂದ ಚಿತ್ರದುರ್ಗ ಸರಿ ಸುಮಾರು ಇನ್ನೂರಾ ಐವತ್ತು ಕಿಲೋಮೀಟರ್ ದೂರ. ಹೋಗಿ ಬರುವುದು ಒಂದೇ ದಿನದಲ್ಲಿ. ಸುಸ್ತಾಗುತ್ತಲ್ಲ ಎಂಬುದು. ಆದರೂ ಅವನ ಆರಂಬಿಕ ಉತ್ಸಾಹಕ್ಕೆ "ಟೂರು ಗೀರು ಎಲ್ಲಾ ಬ್ಯಾಡ ಸುಮ್ನಿರು" ಎಂದು ತಣ್ಣೀರೆರಚಿದೆ. (ನನ್ನ ಅಪ್ಪಯ್ಯನೂ ಹೀಗೆ ಮಾಡುತ್ತಿದ್ದ ನನಗೆ) ನನ್ನೆದುರು ಸುಮ್ಮನಾದ ಮಗ ದೊಡ್ಡಪ್ಪನ ಮನೆಗೆ ಹೋದ. ಸಂಜೆ ದೊಡ್ಡಪ್ಪನ " ಹೋಗ್ಬರ್ಲಾ ಹುಡುಗ್ರು ಟೂರಿಗೆ ಹೋಪ್ದು ಅಂದ್ರೆ ಖುಷಿಯಪಾ ಪಾಪ" ಎಂಬ ವಶೀಲಿಬಾಜಿಯೊಂದಿಗೆ ವಾಪಾಸು ಬಂದ. ಆದರೂ ನಾನು ಬಗ್ಗಲಿಲ್ಲ. ಮಾರನೇ ದಿನ ಅವನ ಮಂಜುಮಾವನ ವಶೀಲಿ ಸಿಕ್ಕಾಪಟ್ಟೆ ಬಿಗಿಯಾಗಿದ್ದರಿಂದ ಹಾಗೂ ಮಗನ ಕಡೆ ಪಾರ್ಟಿ ದೊಡ್ದದಾದ್ದರಿಂದ ಟೂರಿಗೆ ತಾತ್ವಿಕ ಒಪ್ಪಿಗೆ ಕೊಟ್ಟೆ. ಮಗ ದಿಲ್ ಕುಷ್.
ಇವಿಷ್ಟು ಟೂರಿಗೆ ಇನ್ನೂ ಹದಿನೈದು ದಿವಸ ಇರುವಾಗಲೇ ಮುಗಿದ ಮಾತುಕತೆ. ಈ ಮಾತುಕತೆ ಮುಗಿದ ಮಾರನೇ ದಿನ ಅಡಿಗೆ ಮನೆಯಲ್ಲಿ ದಡಾರನೆ ಬಿದ್ದು ಮಳ್ಳಂಡೆಯನ್ನು ಬುರುಬುರು ಉಬ್ಬಿಸಿಕೊಂಡು ಕೂತ ಮಗರಾಯ. ಸರಿ ಡಾ. ಪ್ರಸನ್ನರಲ್ಲಿಗೆ ಕರೆದುಕೊಂಡು ಹೋಗಿ ಅದಕ್ಕೊಂದು ರಿಮೂವಬಲ್ ಬ್ಯಾಂಡೇಜ್ ಸುತ್ತಿಸಿ ಸಾವಿರ ರೂಪಾಯಿ ತೆತ್ತು ಮನೆಯತ್ತ ಮಗನನ್ನು ಕರೆದುಕೊಂಡು ಹೊರಟೆ. ಆವಾಗ " ಅಪ್ಪಯ್ಯಾ ಡಾಕ್ಟ್ರಿಗೆ ಎಷ್ಟು ಖರ್ಚಾತು..?" ಎಂದ. " ಸಾವಿರ ರೂಪಾಯಿ" ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದವ ನಂತರ " ನಿಂಗೆ ಸುಮ್ನೆ ದುಡ್ಡು ದಂಡ ಮಾಡ್ಸಿ ಬಿಟ್ಟಿ ಹಂಗಾಗಿ ಟೂರಿಗೆ ಆನು ಹೋಕ್ತ್ನಲ್ಲೆ ಅದರ ದುಡ್ಡು ನಿಂಗೆ ಉಳತ್ತು ತಗ" ಎಂದ. ಇರ್ಲಿ ಬಿಡು ಅಂತ ಸುಮ್ಮನುಳಿದೆ.
ಕಾಲಿಗೆ ಬ್ಯಾಂಡೇಜ್ ಸುತ್ತಿದ್ದರಿಂದ ಮಡಚಲು ಆಗುತ್ತಿರಲಿಲ್ಲ. ಹಾಗಾಗಿ ಸ್ಕೂಲಿಗೆ ದಿನಾಲೂ ಬೈಕಿನಲ್ಲಿ ಬಿಟ್ಟು ಬರುವುದು ಹಾಗೂ ಸಂಜೆ ಕರೆದುಕೊಂಡು ಬರುವುದು ನಿತ್ಯದ ಕಾಯಕವಾಯಿತು. ಏತನ್ಮಧ್ಯೆ ಸ್ಕೂಲಿನ ಚಿತ್ರದುರ್ಗದ ಟೂರು ಹತ್ತಿರ ಬರುತ್ತಿತ್ತು. ಪ್ರಾಯಶ: ನಿತ್ಯ ಕ್ಲಾಸಿನಲ್ಲಿ ಟೂರಿನದ್ದೇ ಮಾತುಕತೆ ನಡೆಯುತ್ತಿತ್ತು . ಹಾಗಾಗಿ ಸಂಜೆ ಮನೆಗೆ ಬರುವಾಗ ಮಗರಾಯನಿಗೆ ಟುರಿನದೇ ಕತೆ " ಅಪ್ಪಯ್ಯ ಚಿತ್ರದುರ್ಗ ಅಂದ್ರೆ ಬಯಲು ಸೀಮೆ ಸಿಕ್ಕಾಪಟ್ಟೆ ಬಿಸಿಲು, ಅಲ್ಲಿಗೆ ಹೋಪ್ದು ಎಷ್ಟು ತ್ರಾಸು, ಆನು ಹೋಪದು ಇಲ್ಲೆ ಅರಾಮಾತು ಯಂಗೆ" ಅಂತಲೋ ಅಥವಾ " ಅಪ್ಪಯ್ಯಾ ಬೆಳಗಿನ ಜಾವ ಐದು ಗಂಟೆಗೆ ಹೊರಡಕಡ, ರಾತ್ರಿ ವಾಪಾಸು ಸ್ಕೂಲಿಗೆ ಬಂದು ಉಳಿಯಕಡ, ಆನು ಹೋಪದು ಇಲ್ಲೆ ಅರಾಮಾತು ಯಂಗೆ " ಹೀಗೆ ಒಂಥರಾ ಹೋಗಲಾರೆನಲ್ಲ ಎಂಬುದನ್ನು ಒಳ್ಳೆಯದೇ ಆತು ಎಂದು ತನ್ನಷ್ಟಕ್ಕೆ ಸಮಾಧಾನದ ಕಾರಣದೊಂದಿಗೆ ನಿತ್ಯ ಸುದ್ದಿ ಹೇಳಲು ಶುರು ಮಾಡಿದ. ಅಲ್ಲಿಗೆ ನನಗೆ ಅವನ ಟೂರಿನ ಗುಂಗು ಮನವರಿಕೆಯಾಗತೊಡಗಿತು. ಆದರೆ ಡಾಕ್ಟರ್ ಇಪ್ಪತ್ತು ದಿವಸ ಬ್ಯಾಂಡೇಜ್ ಬಿಚ್ಚುವಂತಿಲ್ಲ ಎಂದಿದ್ದರು.ಅದಕ್ಕೊಂದು ಉಪಾಯ ಟೂರಿಗೆ ಇನ್ನು ಮೂರು ದಿನ ಬಾಕಿ ಇದೆ ಎನ್ನುವಾಗ ಶುರುವಾಯಿತು.
ಬೆಳಿಗ್ಗೆ ಸ್ನಾನ ಮಾಡಲು ಬ್ಯಾಂಡೇಜ್ ಬಿಚ್ಚಿದಾಗ " ಅರೆ ಒಂಚೂರು ನೋವೇ ಇಲ್ಲೆ" ಎಂದು ದಡಬಡ ಬಚ್ಚಲು ಮನೆಯಿಂದ ನಡೆದುಕೊಂಡು ಬಂದು ಹೇಳಿದ. ಪಟಪಟ ಮಡಚಿದ. ಆದರೆ ಬಡ್ಡಿಮಗಂದು ಕಾಲು ಸ್ವಲ್ಪ ನೋಯುತ್ತಿತ್ತು ಎಂಬುದು ಮುಖದಲ್ಲಿ ಗೊತ್ತಾಗುತ್ತಿತ್ತು. ಆದರೂ ಹಲ್ಲುಕಚ್ಚಿ ಸಹಿಸಿಕೊಂಡ. ಅಂತೂ ಹಾಗೂ ಹೀಗೂ ಮಾಡಿ ಟೂರಿಗೆ ಹೋಗುವುದು ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಸೈಕಲ್ ಹೊಡೆದು ತಾನು ಪರ್ ಫೆಕ್ಟ್ ಎಂದು ರುಜುವಾತು ಪಡಿಸಿ " ಅಪ್ಪಯ್ಯಾ ಬಿಸಿಲು ಜೋರಾದ್ರೆ ಹೆಂಗಿರ್ತು ಅಂತ ಗೊತ್ತಾಪ್ಲೆ ಬಯಲು ಸೀಮೆಗೆ ಹೋಯಕು ಅಲ್ದಾ..? ಬೆಳಿಗಿನ ಜಾವ ಎದ್ದು ಹೋಪ್ಲೆ ಲಾಯ್ಕಿರ್ತು ಅಲ್ದಾ?. ರಾತ್ರಿ ಸ್ಕೂಲಲ್ಲೇ ಉಳ್ಕಂಬದು ಎಂದ್ರೆ ಒಂಥರಾ ಮಜಾ ಅಲ್ದಾ?" ಎನ್ನುವ ಪ್ರಶ್ನೆಗಳ ಮೂಲಕ ತಾನು ಟೂರಿಗೆ ಹೋಗುವೆ ಅನ್ನುವ ವಿಚಾರ ಮನದಟ್ಟು ಮಾಡಿದ.
ಹೊರಡುವ ಮುನ್ನಾದಿನ ರಾತ್ರಿ ನಿದ್ರೆಯೇ ಇಲ್ಲ. ಅಮ್ಮ " ನಾಲ್ಕು ಗಂಟೆ ಆತಾ" ಎಂದು ಹನ್ನೆರಡೂವರೆಯಿಂದಲೇ ಶುರು ಹಚ್ಚಿ ಕೊನೆಗೂ ಮೂರೂವರೆಗೆ ಎದ್ದು ಸ್ನಾನ ಸಂದ್ಯಾವಂದನೆ ಪೂರೈಸಿ ತಾನೆ ಬಟ್ಟೆ ಹುಡುಕಿ ಹಾಕಿಕೊಂಡ ( ದಿನನಿತ್ಯ ಇವಕ್ಕೆಲ್ಲಾ ತಾಯಿ ಮಗನ ಮಧ್ಯೆ ಒಂದು ದೊಡ್ಡ ಯುದ್ಧವೇ ನಡೆಯುತ್ತಿತ್ತು) "ಸರ್ ಕ್ಯಾಮೆರಾ ತರಲು ಹೇಳಿದ್ದಾರೆ ಎಂದು ಅದನ್ನು ತೆಗೆದುಕೊಂಡು ಖರ್ಚಿಗೆ ಅಂತ ಇನ್ನೂರು ಇಸಕೊಂಡು ಟಾ ಟಾ ಹೇಳಿದ.
ಮತ್ತೆ ಯಥಾಪ್ರಕಾರ ಚಿತ್ರದುರ್ಗಕ್ಕೆ ಟೂರಿಗೆ ಹೋಗಿ ಬಂದ. ಅದು ಮಕ್ಕಳೆಂದರೆ ಹಾಗೆ ಮತ್ತು ಅಪ್ಪಯ್ಯನೆಂದರೆ ಹೀಗೆ ಹಾಗೂ ಯಾವತ್ತೂ ಯಾವಕಾಲಕ್ಕೂ ಹಾಗೆ ಹೀಗೆ. ನಾನೂ ಮೂವತ್ತು ವರ್ಷಗಳ ಹಿಂದೆ ಹೀಗೆ ಟೂರಿಗೆ ಬೇಡ ಅಂದಾಗ ಅಂದಿದ್ದೆಲ್ಲ ನೆನಪಾಯಿತು . ಕಾಲ ಚಕ್ರವೇ ಉರುಳು ಉರುಳುರುಳು. ಅದೆಷ್ಟು ಬೇಗ ನಾನು ಹೀಗೆಯೇ ಟೂರಿಗೆ ಹೋಗಿದ್ದ ನೆನಪು ಹಸಿರಿರುವಾಗಲೇ ನನ್ನ ಮಗನೂ ಹೀಗೊಂದು ಟೂರಿಗೆ ಹೋಗಿ ಬರುವ ಸಮಯ ಬಂತು. ಅಲ್ಲಿಗೆ ನನಗೆ.......?
ಹಾ ಮರೆತೆ ಅದೇ ಸೂರ್ಯ ಅದೇ ಭೂಮಿ ಅದೇ ನೀರು ಅದೇ ಗಾಳಿ ಅಂತ ಹೊರನೋಟಕ್ಕೆ ಅನಿಸಿದರೂ ಎಲ್ಲವೂ ಬೇರೆಯದೇ. ಹೋದ ವರ್ಷ ನಗು ನಗುತ್ತಾ ಇದ್ದವರು ಇಂದು ಅಳುತ್ತಿರಬಹುದು ಹೋದ ವರ್ಷ ಅಳುತ್ತಾ ಇದ್ದವರು ಇಂದು ನಗುತ್ತಾ ಇರಬಹುದು ನಗು ಅಳು ಎಲ್ಲಾ ಆರಂಭವೂ ಅಲ್ಲ ಅಂತ್ಯವೂ ಅಲ್ಲ. ಮತ್ತೆ ಮತ್ತೆ ಹುಟ್ಟುತ್ತವೆ ಸಾಯುತ್ತವೆ ಬದಲಾಗುತ್ತವೆ. ಈ ನಡುವೆ ಮತ್ತೊಂದು ವರ್ಷ ಬಂದಿದೆ. ನನಗೆ ನಿಮಗೆ ಹರ್ಷ ತರಲಿ, ಕಷ್ಟ ಎದುರಿಸುವ ಶಕ್ತಿ ಬರಲಿ.

4 comments:

Unknown said...

ಚೊಲೋ ಇದ್ದು ಲೇಖನ. ನನಗೂ ಹಿಂದಿಂದೆಲ್ಲಾ ನೆನಪಾತು.
ಟೂರ್ ಗೆ ಕಳಿಸದೇ ಇದ್ರೆ ಎಷ್ಟು ಬೇಜಾರಾಗ್ತು ಹೇಳಿ ನನಗೆ ಗೊತ್ತಿದ್ದು. ಮತ್ತೆ ಹಳೇದೆಲ್ಲಾ ನೆನಪಿಗೆ ಬರ್ತು ಅಲ್ದಾ?

Harisha - ಹರೀಶ said...

ಏಕಮಾತ್ರ ಒಬ್ಬನೇ ಒಬ್ಬ ಮಗ!

:-)

ಮೂರ್ತಿ ಹೊಸಬಾಳೆ. said...

ಸ್ಟೂರಿನ ಕರ್ಚು ಈಗ 100 ರುಪಾಯಿ ಅಯಿದನೋ!!! ನನ್ನ ಕಾಲಕ್ಕೆ 5 ರುಪಾಯಿ ಇತ್ತು ನಿನ್ನ ಕಾಲದಲ್ಲಿ ಬಹುಷ್ಹ ನಾಕೆಂಟಣೆ ಇತ್ತೇನ.

Anonymous said...

ರಾಗಣ್ಣ ಚೆನ್ನಾಗಿದೆ. Lively.
ನನ್ನದೂ ಒಂದು ಕಥೆ ಇದೆ.
ಕಾಲೇಜಿನಲ್ಲಿದ್ದೆ. ಡಿಗ್ರಿಯ ಎರಡನೇ ವರ್ಷ. ಗೋವಾಕ್ಕೆ ಹೊರಟಿದ್ದೆವು.
ಹೋಗುವವರಿಗೆ ಅವರವರ ಮನೆಯಿಂದೇನೂ ಬೇಡ ಎಂಬ ಕಾಟ ಅಷ್ಟೇನೂ ಇರಲಿಲ್ಲ. ಇದ್ದದ್ದು ನಮ್ಮ ಮೇಷ್ಟರಿಂದ.
ಗೋವಾ ತುಂಬ ರಿಸ್ಕು. ಹುಡುಗಿಯರಿಗಂತೂ ಕೇಳುವುದೇ ಬೇಡ. ಏನು ಬೇಕಾದರೂ ಆಗಬಹುದು. ಆದ್ದರಿಂದ ಕ್ಯಾನ್ಸಲ್ ಮಾಡುವುದೇ ಒಳ್ಳೆಯದು ಎಂದು ಕಡೆಯ ಕ್ಷಣದವರೆಗೂ ಗೋಳಾಡಿದರು.
ನಾವು ಬಿಡಲಿಲ್ಲ. ಹೋಗುವುದೇ ಎಂದು ಹಟ ಹಿಡಿದೆವು. ಅಕಸ್ಮಾತ್ ನಿರೀಕ್ಷೆಗಿಂತ ಹೆಚ್ಚಿನ ಖರ್ಚೇನಾದರೂ ಬಂದರೆ ನಾವೇ ಒಂದಷ್ಟು ಜನ ಹಾಕಿಕೊಳ್ಳುವುದು ಅಂತ ಮಾತಾಡಿಕೊಂಡೆವು. ಅದು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಕೂಟ ಆಗಿದ್ದಿದ್ದು ವಿಶೇಷ.
ಅದಕ್ಕಾಗಿ ನಾನು ಸಕ್ರಿಯನಾಗಿದ್ದಿದ್ದಕ್ಕೆ ಒಂದು ವಿಭಿನ್ನ ಕಾರಣವೇ ಇತ್ತು. ಸಮುದ್ರ ಸ್ನಾನಕ್ಕೆ ಮೈಯ್ಯೊಡ್ಡುವ ಹಂಬಲ ಪ್ರಬಲವಾಗಿ ಬಾಧಿಸುತ್ತಿತ್ತು. ಉಳಿದವರಿ ಮಿಂಡ್ ಮಜಾದ್ದೇ ಗುಂಗು.
ಹೊರಡುವ ಕೆಲ ಕ್ಷಣಗಳ ಮುಂಚೆ ನಮ್ಮೊಬ್ಬ ಪ್ರೊಫೇಸರ್, ಕೃಷ್ಣಮೂರ್ತಿ, ಒಂಥರಾ very serious vulgar ಮನುಷ್ಯ. ನಮ್ಮ ಹತ್ತಿರ ಬಂದು 'ಗೋವಾ ಟೂರ್ ವೆರಿ adventurous. ಖುಷಿಯ ಬಗಲಿಗೇ ಬೆವರಿನ ವಾಸನೆ ಅಡರುವ ಸಾಧ್ಯತೆ ಹೆಚ್ಚು. ನಿಮ್ಮ ಜೊತೆ ಬರುವ ಹುಡುಗಿಯರ ಬಗ್ಗೆ ನಿಗಾ ಇರಲಿ. ಪಬ್ಲಿಕ್ಕಿನಲ್ಲಿ ನೀವೇ ಅವರನ್ನು ಚುಡಾಯಿಸಬೇಡಿ. ಉಳಿದವರಿಗೆ ಚುಡಾಯಿಸಲು ಸುಲಭವಾಗುತ್ತದೆ. ಇನ್ನು ನೀವು ಹೇಗೋ ಗೊತ್ತಿಲ್ಲ. ನಮ್ಮ ಸೌತ್ ಕೆನರಾದ ಹುಡುಗರು ಸಮಸ್ತವನ್ನೂ ಕಳೆದುಕೊಂಡು ಅವರವರಿಂದ ತಪ್ಪಿಸಿಕೊಂಡು ಹೋದರೂ ಯಾವುದೇ ಭೀತಿಯಲ್ಲಿ ಕೊರಗಿ ನೀರಾಗದೇ ಏನಾದರೂ ಮಾಡಿಕೊಂಡು ಊರಿಗೆ ಮರಳುತ್ತಾರೆ. ನಿಮ್ಮನ್ನು ನೋಡಿದರೆ ಅಷ್ಟು daring ಅನ್ನಿಸುವುದಿಲ್ಲ. ಹೋಗಿ, ಬನ್ನಿ. ಒಳ್ಳೆಯದಾಗಲಿ' ಅಂತ ಹೇಳಿ ಕತ್ತಲಲ್ಲಿ ಮನೆಯ ಕಡೆಗೆ ಮಾಯವಾದರು.
ಗೋವಾದಲ್ಲಿ ಇಳಿದೆವು. ಸುಮಾರು factoryಗಳಿಗೆ ಭೇಟಿ ನೀಡಿದೆವು. ಅದರಲ್ಲಿ ವಿಶೇಷ ಭೇಟಿ ಎಂದರೆ kingfishorಗೆ ಹೋಗಿದ್ದು. ಮದ್ಯರಾಶಿಯ ಮಧ್ಯದಲ್ಲಿ ಸುಳಿದಾಡಿದೆವು. ನಮ್ಮಲ್ಲೊಬ್ಬ conveyor belt ಮೇಲೆ ಪಾಸಾಗುತ್ತಿದ್ದ bearನ್ನು ಕಳ್ಳ ಮಾಯದಲ್ಲಿ ಕುಡಿದು ಬಂದದ್ದು ನಮ್ಮನ್ನೆಲ್ಲ ಚಕಿತಗೊಳಿಸಿತ್ತು.
ಸಂಜೆ ಪ್ರೋತಿಮಾ ಬೇಡಿ ಓಡಾಡಿದ್ದ ಮೀರಾಮಾರ್ ಬೀಚಿಗೆ ಹೋದೆವು. ಎಲ್ಲವೂ ಖಾಲಿಖಾಲಿ. ಕಡೆಗೆ ಗೊತ್ತಾಯಿತು. ಅವಳಂತೆ ಓಡಾಡುವುದು ನಿಷೇಧಿಸಿದಲ್ಲಿಂದ ಹೀಗಾಗಿದೆ ಅಂತ. ಸುಮ್ಮನೆ ನೀರಿನಲ್ಲಿ ಒಂದಷ್ಟು ಹೊತ್ತು ಕುಣಿದೆವು. ಸ್ನಾನ ಮಾಡಲು ನಮ್ಮ ಮೇಷ್ಟರುಗಳು ಬಿಡಲಿಲ್ಲ. ಮತ್ತೆ, ಅಲ್ಲಿ ಅಲೆ ಏನೂ ಇಲ್ಲದ್ದರಿಂದ ನಮಗೂ ಪ್ರಚೋದನೆ ಸಿಗಲಿಲ್ಲ.
ಆ ದಿನ ರಾತ್ರಿ. ನಮ್ಮಲ್ಲೇ ಹಲವಾರು ಬಳಗಗಳು ಪರಸ್ಪರ ಕದ್ದುಮುಚ್ಚಿ ಗೋವಾ ಪಾನಿಯನ್ನು ಕುಡಿಯುವ ಮಜಾ. ನಮ್ಮ ರೂಮಿನಲ್ಲಿ ಲೋಡನ್ನು ಉಲ್ಟಾಪಲ್ಟಾ ಮಾಡಿದರು. ಬಾಟ್ಲಿ, ಪ್ಯಾಕೆಟ್ ಎಲ್ಲ ಹರಡಿಕೊಂಡರು. ಒಂದು ಆರೇಳು ಜನ ಸುತ್ತ ಕೂತರು. ಕುಡಿಯುವ ಕಾತರ ಥ್ರಿಲ್ಲೋ ಥ್ರಿಲ್ಲು. ಗೋವಾ ಪಾನಿ ಗಂಟಲಿಗೆ ಇಳಿದದ್ದೇ ತಡ ಒಡಕು ರುಚಿಯಿಂದ ನಿರಾಸೆ ಆಯಿತು. ಅಮಲು ಏರಬಹುದೇನೋ ಎಂಬ ಆಸೆ ಹೆಚ್ಚಾಯಿತು. ಕುಡಿಯುತ್ತ-ಕುಡಿಯುತ್ತ ಒಂದಷ್ಟು ಹಾಸಿಗೆಯ ಮೇಲೆ ಚೆಲ್ಲಿಯೂ ಹೋಯಿತು. ಅದರ ಕಲೆಯನ್ನು ತೆಗೆಯುವುದು ಹೇಗೆ ಅಂತ tension ಶುರಾಯಿತು.
ನಾನೂ ಪಕ್ಕದಲ್ಲೇ ಮಲಗಿದ್ದೆ. ನಿದ್ದೆ ಬಂದಿರಲಿಲ್ಲ. ಇವರ ಸಂಭ್ರಮ ನೋಡಿ ನಾನೂ ಒಂದು ಹುಂಡು ಗೋವಾ ಪಾನಿಯನ್ನು ಬಾಯಿಗಿಳಿಸಿದೆ. ಒಡಕು, ಒಗರು ರುಚಿ. ಥುತ್ತೆರಿಕಿ! ದುಡ್ಡು ಕೊಟ್ಟು ಇಂತಹ ಕಷ್ಟ ಅನುಭವಿಸಬೇಕಲ್ಲ ಅ ನಿಸಿತು.
ಮರುದಿನ ಸಂಜೆ ಕಾಲಂಗೋಟ್, english beachಗೆ ಪಯಣ. ಸಂಜೆ ಆಗಿದ್ದರಿಂದ ಅರ್ದಂಬರ್ಧ ಬಿಚ್ಚಿಕೊಂಡು ಮೇಲೆ ಕೂತವರೇ ಹೆಚ್ಚಿನವರಿದ್ದರು. ನಮ್ಮ ಮಾಸ್ತರರು ಸಮುದ್ರಕ್ಕೆ ಇಳಿಯುವುದೇ ಬೇಡ ಎಂದು ಹೇಳುತ್ತಿದ್ದಂತೆ, ನಮ್ಮ - ಅವರ ಮಧ್ಯದ್ದಲ್ಲಿ ಕಟಿಪಿಟಿ ಶುರಾಯಿತು. ಪ್ಯಾಂಟ್ ಕಳಚಿ, ಗೋವಾ ಚಡ್ಡಿ ಏರಿಸಿ ನಾವೊಂದಿಷ್ಟು ಜನ ಬೀಚಿನ ದೂರದ ತುದಿಗೆ ತಪ್ಪಿಸಿಕೊಂಡು ಓಡಲು ಶುರುಮಾಡಿದೆವು. ನೀರಿಗೆ ಇಳಿದೆವು. ಮಜಾ ಮಾಡಿದೆವು. ಅಲೆಯ ಮೇಲೆ ಬಿದ್ದೆವು. ಕೂಗಿದೆವು. ಮರಳ ಮೇಲೆ ಮಲಗಿದೆವು. ಉಪ್ಪು ನೀರಿಗೆ ಕಣ್ಣನ್ನು ಬಿಟ್ಟು ಕೊಟ್ಟೆವು. ನೀರಿನಲ್ಲಿ ಮಜಾ ಮಾಡುತ್ತಿದ್ದ ಜೋಡಿಯ ಪಕ್ಕಕ್ಕೆ ನಿಂತೆವು. ಒಟ್ಟಾರೆಯಾಗಿ ಮೇಲಿನ ಖುಷಿಯಿಂದ ಕೆಳಗಿನ ಖುಷಿಯ ವೆರೆಗೂ ಜಾರಿದೆವು.
ಸರಿ, ಎಲ್ಲ ಮುಗಿಸಿ ಶೃಂಗೇರಿಗೆ ವಾಪಸ್ ಪ್ರಯಾಣ.
ನಮ್ಮಲ್ಲೊಬ್ಬ ಬಕ್ರ. ಬೀಚಿನಲ್ಲಿ ಸಮಾ ಏರಿಸಿದ್ದ. ಬಸ್ಸಿನಲ್ಲಿ ಹಿಂದಿನ ಸೀಟಿನಲ್ಲಿ ಕೂತು ಮತ್ತೂ ಏಕ್ದಮ್ ಏರಿಸಿದ. ಮಧ್ಯದಲ್ಲಿ ಊಟಕ್ಕೆ ಅಲ್ಲೆಲ್ಲೋ ಬಸ್ ನಿಲ್ಲಿಸಿದ್ದರು. ಅಲ್ಲಿ ಅವನು ಮೋರಿ ಕಟ್ಟೆಯ ಮೇಲೆ ಕೂತು ವಾಂತಿ ಮಾಡುತ್ತಿದ್ದರೆ, ಎದುರುಗಡೆ ನಮ್ಮ ಜುಗ್ಗ, ಧಾರ್ಮಿಕ ಪ್ರೊಫೇಸರ್ ಕುಳಿತುಕೊಂಡು ಒಂದೇ ಸಮನೆ 'ಸುಭಾಷ, ನೀನು ಹೀಗಿದ್ದವನೆಂದು ಗೊತ್ತಿರಲಿಲ್ಲ. ಅಲ್ಲ, ಹುಡುಗಿಯರ ಜೊತೆ ಟೂರಿಗೆ ಬಂದವನು, ಬಸ್ನಲ್ಲಿ ಕೂತು ಹಿಂಗಿದ್ದು ಮಾಡ್ಲಿಕ್ಕೆ ನಾಚಿಕೆ ಆಗಲಿಲ್ವಾ? ನಿಮ್ಮಂಥೋರಿಗೆ ಹಿಂಗೇ ಆಗ್ಬೇಕು. ಖಂಡಿತ ನಾನು ಪ್ರಿನ್ಸಿಪಾಲರ ಹತ್ತಿರ ಹೇಳದೇ ಬಿಡುವುದಿಲ್ಲ. ಮುಂದೇನಾಗುತ್ತೋ ಅದಕ್ಕೆ ನಾನು ಜವಾಬ್ದಾರನಲ್ಲಿ' ಹೀಗೇ ಏನೇನೋ, ಅವರೇ ಕುಡಿದುಕೊಂಡಿದ್ದಾರೇನೋ ಎನ್ನುವಂತೆ ಒದರುತ್ತಿದ್ದರು.
ಎಲ್ಲ ಮಜಮಜದ ನಡುವೆಯೂ ನಾವು, ನಮ್ಮ ಹುಡುಗಿಯರೂ ಸೇಫಾಗಿ ಮನೆಗೆ ಮರಳಿದೆವು.

ಎಲ್ಲರ,
ಭಾರತೀಶ