"ಹಲೊ ಚೆನಾಗಿದೀರಾ? ಹೋ..ಗಿ ಬರ್ತೇನೆ.... ವಾವ್ ಇತ್ಸ್ ಬ್ಯೂತಿಪುಲ್, ಊತ ಆಯ್ತಾ" ಇವಿಷ್ಟು ಕ್ರಿಸ್ಟಿನಾಳ ಕನ್ನಡ. ದೂರದ ಜರ್ಮನಿಯಿಂದ ಈ ಇಪ್ಪತೈದು ವರ್ಷದ ಹುಡುಗಿ ಹೊನ್ನೇಮರಡೆಂಬ ಕಾಡಲ್ಲಿ ಬಂದು ಠಿಕಾಣಿ ಹೂಡಿದ್ದಾಳೆ. ಜರ್ಮನಿಯ ಯುನಿವರ್ಸಿಟಿಯಲ್ಲಿ ಪಿ ಎಚ್ ಡಿ ಮಾಡುತ್ತಿದ್ದಾಳೆ. ಆಕೆ ಆರಿಸಿಕೊಂಡ ವಿಷಯ ಪರಿಸರಕ್ಕೆ ಸಂಬಂಧಪಟ್ಟದ್ದು. ಹಾಗಾಗಿ ಆಕೆಗೆ ಹೊನ್ನೇಮರಡು ಪ್ರಶಸ್ತವಾದ ಸ್ಥಳ.
ನೀವುಹೊನ್ನೇಮರಡುವನ್ನು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಗುಂಪುಗುಂಪಾಗಿ ಒಂದಿಷ್ಟು ಜನ ಬಂದುಬೋಟಿಂಗ್ ಮಾಡಿ ಜಾಕೆಟ್ ಬುಕ್ ಮಾಡಿ ಈಜಿಕೊಂಡು   ನಾಲ್ಕೈದು ತಾಸು ಕಳೆಯಲು ಒಳ್ಳೆಯ ಜಾಗ. ಆದರೆ  ಅಲ್ಲಿಯೇ  ಮೂರ್ನಾಲ್ಕು ತಿಂಗಳು ಕಾಲ ಎಲ್ಲಿಗೂ ಹೋಗದೇ    ಕಾಲ  ಕಳೆಯಬೇಕೆಂದರೆ  ತಲೆ ಸರಿ ಇಟ್ಟುಕೊಳ್ಳುವುದು ಕಷ್ಟಕರ. ನೀರವ ಮೌನ ಹಕ್ಕಿಯ ಚಿಲಿಪಿಲಿ ಮರಗಳ ತಿಕ್ಕಾಟದ ಶಬ್ಧ ಎಲ್ಲವೂ   ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಆದರೆ  ಬಲು ಚೆನ್ನ. ಪಟ್ಟಣದ ಗೌಜು ಗದ್ದಲ ಪಿಚ್ಚೆನಿಸಿದರೆ ಅಂತಹ ಸ್ಥಳ  ಅಪ್ಯಾಯಮಾನವಾಗಿರುತ್ತದೆ. ಆದರೆ  ನಿತ್ಯ  ಅಷ್ಟೇ ಆದರೆ  ಇಷ್ಟೆಯಾ? ಎಂಬ ಭಾವನೆ ಅರಳಿ ಹೊಟ್ಟೆಯೊಳಗಿನಿಂದ  ಒಂಥರಾ  ಬೇಸರವೆನಿಸಿಬಿಡುತ್ತದೆ.  ಆದರೆ  ಹೊನ್ನೆಮರಡುವಿನಲ್ಲಿ ಇಪ್ಪತ್ತು  ವರ್ಷದಿಂದ  ಇರುವ  ಎಸ್.ಎಲ್.ಎನ್ ಸ್ವಾಮಿ ದಂಪತಿಗಳಿಗೆ  ಹಾಗೆ  ಅನ್ನಿಸಲಿಲ್ಲ. ಬಿಡಿ  ಸ್ವಾಮಿ  ಇಲ್ಲಿಯವರೇ ಆಗಿಬಿಟ್ಟಿದ್ದಾರೆ   ಕ್ರಿಸ್ಟಿನಾ..?  ಆಕೆಯ  ಧೈರ್ಯಕ್ಕೆ  ಪಿ ಎಚ್.ಡಿ  ಮಾಡುವ ಉತ್ಸಾಹಕ್ಕೆ   ಮೆಚ್ಚಲೇ ಬೇಕು. ಇಪ್ಪತ್ತದು  ವರ್ಷದ  ಆ ಹುಡುಗಿ  ಕಾಡಿನ ಮನೆಯಂತಿರುವ ಮನೆಯಲ್ಲಿ  ಒಮ್ಮೊಮ್ಮೆ  ಒಬ್ಬಂಟಿಯಾಗಿಯೂ  ಇರಬೇಕಾಗಿಬರುತ್ತದೆ.  ಆದರೂ  ಆಕೆ   ಖುಷ್ ಖುಷಿಯಿಂದ ಈಜುತ್ತಲೋ  ಬರೆಯುತ್ತಲೋ  ಕಾಲ ಹಾಕುತ್ತಿದ್ದಾಳೆ. ಮಾರ್ಚ್ ವರೆಗೆ  ಅವಳ ವೀಸಾ ಇದೆಯಂತೆ  ಅಲ್ಲಿಗೆ  ಅವಳ  ಪಿಎಚ್ ಡಿ ಯ ಅವಧಿ ಕೂಡ ಮುಗಿಯುತ್ತಂತೆ ನಂತರ  ಜರ್ಮನಿಗೆ  ತೆರಳಿ  ದಾಕ್ಟ ರೇಟ್ ಗೆ ಕುತ್ತಿಗೆಯೊಡ್ಡಿ  ನಿಂತರಾಯಿತು.
ಹೀಗೆ  ಹಿನ್ನೀರಿನ ಪರಿಸರ ಎಂತೆಂತಹಾ  ವಿಷಯಕ್ಕೆ  ಬಳಕೆಯಾಗುತ್ತಿದೆ. ಈಜು ಕಲಿಯಲು. ಪಿಎಚ್ ಡಿ ಪೈರ್ ಕ್ಯಾಂಪ್ ಕಯಾಕಿಂಗ್,  ಬೋಟಿಂಗ್.  ಹತ್ತು  ಹಲವು.  ಆದರೆ  ಇದೇ  ಹಿನ್ನೀರು  ಸಹಸ್ರಾರು  ಕುಟುಂಬವನ್ನು  ಮುಳುಗಿಸಲು  ಕಾರಣವಾಗಿದೆ. ಶರಾವತಿ ನದಿಯ ಪಾತ್ರಗಳಲ್ಲಿ  ಜನಜೀವನ  ಕಂಡುಕೊಂಡಿದ್ದ  ನೂರಾರು ಕುಟುಂಬಗಳು  ಇಂದು  ಎಲ್ಲೆಲ್ಲಿಯೂ  ಹಂಚಿ  ಪಂಚಂಪಾಡು  ಅನುಭವಿಸುತ್ತಿದೆ.   ಅಂದು  ಸರ್ಕಾರ  ಕೊಟ್ಟ  ಜಮೀನು  ಇಂದಿನವರೆಗೂ  ಮಂಜೂರಿ  ಪಡೆಯಲಾರದೆ  ನಿತ್ಯ  ಅಲೆದಾಟ  ಮುಂದುವರೆಸಿವೆ.  ಪಾಪ  ಅವುಕ್ಕೆ  ಪಿಎಚ್ ಡಿ  ಇರಲಿ   ಪಚಡಿಯೂ  ಇಲ್ಲ.  ಆದರೆ  ತುಂಬಿ  ನಿಂತ  ನೀರು  ವಿದ್ಯುತ್ ರೂಪ ತಾಳಿ  ಜಗತ್ತನ್ನು ಬೆಳಗುತ್ತಿದೆ. ಮುಳುಗಿದವರ  ಬದುಕೊಂದನ್ನು ಬಿಟ್ಟು.
    ಕ್ರಿಸ್ಟಿನಾ ಳ   ಬಳಿ   ಹೀಗೆ  ಬದುಕು ಕಳೆದುಕೊಂಡವರ ಕಥೆ  ನನ್ನ  ಹರಕು  ಮುರುಕು  ಇಂಗ್ಲೀಷ್  ನಲ್ಲಿ    ಹೇಳಿದೆ.  ಆಕೆಗೆ  ಹೀಗೊಂದು ವಿಷಯ  ಈ ಶಾಂತ  ನೀರಿನ ಹಿಂದಿದೆ  ಅಂತ  ಅಂದಾಜು ಮಾಡಲೂ ಆಗಿರಲಿಲ್ಲವಂತೆ. ಪಾಪ  ಪಿಚ್  ಎಂದಳು.  ಮಾರನೆ  ದಿವಸ  ಅವಳ  ನೋಡಲು  ಬಂದಿದ್ದ  ಅಪ್ಪ  ಅಮ್ಮ ನನ್ನುಕರೆದುಕೊಂಡು  ನಮ್ಮ  ಮನೆಯ  ನೋಡಲು  ಬಂದಳು.  ಹಾಗೂ   ಅಲ್ಲಿ ಮುಳುಗಿದ  ನೀವು  ಇಲ್ಲಿ  ಎದ್ದಿರಲ್ಲ  ಎಂದಳು.  ಎಲ್ಲ  ಮಾಡಿದ್ದು  ಅಪ್ಪ  ಅಮ್ಮ  ಎನ್ನುತ್ತಾ  ನಾನು ನಕ್ಕೆ..
 
 
7 comments:
ಅಂದು ಸರ್ಕಾರ ಕೊಟ್ಟ ಜಮೀನು ಇಂದಿನವರೆಗೂ ಮಂಜೂರಿ ಪಡೆಯಲಾರದೆ ನಿತ್ಯ ಅಲೆದಾಟ ಮುಂದುವರೆಸಿವೆ. ಪಾಪ ಅವುಕ್ಕೆ ಪಿಎಚ್ ಡಿ ಇರಲಿ ಪಚಡಿಯೂ ಇಲ್ಲ. ಆದರೆ ತುಂಬಿ ನಿಂತ ನೀರು ವಿದ್ಯುತ್ ರೂಪ ತಾಳಿ ಜಗತ್ತನ್ನು ಬೆಳಗುತ್ತಿದೆ. ಮುಳುಗಿದವರ ಬದುಕೊಂದನ್ನು ಬಿಟ್ಟು.
ನೆಲೆ ಕಳೆದುಕೊಂಡವರ ಕಥೆಯ ಸಂಪೂರ್ಣ ಚಿತ್ರಣವಿಲ್ಲಿದೆ.
ಪಾಪ ನಿಮ್ಮ ಕಥೆ ಕೇಳಿ ಆಕೆಗೆ ಪಿ ಎಚ್ ಡಿ ಕ್ಷುಲ್ಲಕವೆನಿಸಿರಬೇಕು.
ಅಶೋಕ ಉಚ್ಚಂಗಿ
http://mysoremallige01.blogspot.com/
“ಆದರೆ ತುಂಬಿ ನಿಂತ ನೀರು ವಿದ್ಯುತ್ ರೂಪ ತಾಳಿ ಜಗತ್ತನ್ನು ಬೆಳಗುತ್ತಿದೆ,ಮುಳುಗಿದವರ ಬದುಕೊಂದನ್ನು ಬಿಟ್ಟು” ಹನ್ನೆರಡು ಪದಗಳಲ್ಲಿ ಒಂದು ಜನಾಂಗದ ದುರಂತವನ್ನೆಲ್ಲ ವ್ಯಕ್ತಪಡಿಸಿಬಿಟ್ಟೆ ! ಹೀಗೆಲ್ಲ ಬರೆಯೋದು ಯಾವಾಗ ಕಲ್ತೆ?
ರಾಘಣ್ಣ...
"ಆದರೆ ತುಂಬಿ ನಿಂತ ನೀರು ವಿದ್ಯುತ್ ರೂಪ ತಾಳಿ ಜಗತ್ತನ್ನು ಬೆಳಗುತ್ತಿದೆ. ಮುಳುಗಿದವರ ಬದುಕೊಂದನ್ನು ಬಿಟ್ಟು."
ಹಾಗೂ
"ಅಲ್ಲಿ ಮುಳುಗಿದ ನೀವು ಇಲ್ಲಿ ಎದ್ದಿರಲ್ಲ"
ಎಂಬಂತಹ ಮಾತುಗಳು ಓದುತ್ತಲೇ ಹಿಡಿದಿಡುತ್ತವೆ.
ಚಂದದ ಲೇಖನಕ್ಕೆ ಧನ್ಯವಾದ.
ಹಾಗೆಯೇ
ಕ್ರಿಸ್ಟಿನಾ ಅವರಿಗೆ ನನ್ನದೊಂದು ‘ಹಾಯ್’ ತಲುಪಿಸಿಬಿಡಿ.
ಟು ಅಶೋಕ್
ಧನ್ಯವಾದಗಳು. ಬರುತ್ತಾ ಇರಿ
ಟು ಎಂ.ಎಂ.
ಎಲ್ಲೋ ಒಳಗೆ ಇತ್ತಿರಬೇಕು. ನನಗೇ ಗೊತ್ತಿಲ್ಲದಂತೆ ಅದಾಗಿಯೇ ಹೊರಗೆ ಬಂದಿದೆ
ಟು ಶಾ.ಭಂಡಿ.
ಹಾಯ್ ತಲುಪಿಸುತ್ತೇನೆ. ಒಮ್ಮೆ ಕಾಫಿ ಬೈಟ್(ಹಿಂಗೆ ಬರದ್ದಕ್ಕೆ ಬ್ಯಾಜಾರು ಮಾಡ್ಕ್ಯಳ್ಳಾಗ ಮತೆ) ಸಮೇತ ಬನ್ನಿ ಹೊನ್ನೇಮರಡುವಿಗೆ ಒಂದು ಟ್ರಿಪ್ ಹೋಗಿಬಂದು ಬಿಡೋಣ.ಅಲ್ಲಿ ಇಂತಹದ್ದೇ ನೂರಾರು ಕತೆಗಳಿವೆ.
ರಾಘಣ್ಣ,
ನಾನೂ ಶರಾವತಿ ಹಿನ್ನೀರಿನ ಪ್ರದೇಶದವನೇ!! ಮುಳುಗಡೆಗೆ ಹೋದಾಗ ಈಗಲೂ ಅಳಿದುಳಿದ ಅವಶೇಷಗಳಾದ ಮನೆ ಮಂದಾಣ,ಗದ್ದೆಯ ಏರಿಗಳು ಇದನ್ನೇಲ್ಲ ನೋಡಿದರೆ, ಶರವಾವತಿ ನಾಡಿಗೆ ಬೆಳಕು ನೀಡಿದರೂ ಎಷ್ಟು ಮನೆಯ ಬೆಳಕು ಆರಿಸಿದೆಯಲ್ಲ ಎನಿಸುತ್ತದೆ. ನಮ್ಮ ನೆಂಟರಲ್ಲಿ ಕೆಲವರು ಮುಳುಗಡೆಯ ದೆಸೆಯೆಯಿಂದ ಎಲ್ಲೆಲ್ಲೋ ಚದುರಿಹೋಗಿದ್ದಾರೆ.
ಇನ್ನೊಂದು ವಿಪರ್ಯಾಸ ನೋಡಿ. ನಾಡಿಗೆ ಬೆಳಕು ನೀಡಲು ಅಷ್ಟು ಕಷ್ಟ ಅನುಭವಿಸಿದ ಹಿನ್ನೀರಿನ ಜನ ಇಂದೂ ಪವರ್ ಕಟ್ ಶಾಪದಿಂದ ಕತ್ತಲಲ್ಲೇ ಕೊಳೆಯಬೇಕಾಗಿದೆ.
- ರಾಘವೇಂದ್ರ ಕೆಸವಿನಮನೆ.
ದೀಪದಡಿ ಕತ್ತಲು..(:)
-ತುಂಬುಪ್ರೀತಿ,
ಚಿತ್ರಾ
Post a Comment