ಕಾಂ ಕೆ ಕಾಹಾ
ಕಯಾ ಕಾಭ್ಯಾಂ ಕೈಹಿ...
ಹೀಗೆ ಸಂಸ್ಕೃತ ಮೇಷ್ಟ್ರು ನಮಗೆ ಪಾಠ ಮಾಡುತ್ತಿದ್ದರೆ ನಾವು ಕಾಕೆ ತರಹ ಕೂಗಾಡುತ್ತಿದ್ದೆವು. ಅದು ಎಂಟನೇ ಕ್ಲಾಸಿನಲ್ಲೋ ಒಂಬತ್ತನೇ ಕ್ಲಾಸಿನಲ್ಲಿಯೋ ಸಂಸ್ಕೃತದ ರಾಮ: ರಾಮೌ ರಾಮಾ: ತರಹದ ವಿಭಕ್ತಿ ಪ್ರತ್ಯಯದ ಅಭ್ಯಾಸಗಳು. ಅದು ಯಾಕೆ ಬೇಕು? ಹಾಗೆ ಕಲಿತರೆ ನಾವು ಏನಾಗಬಹುದು? ಮುಂತಾದ ಅಂದಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನನಗೆ ಗೊತ್ತಿಲ್ಲ. ಗಣಿತದ ಎ ಪ್ಲಸ್ ಬಿ ಹೋಲ್ ಸ್ಕ್ವೇರ್ ಇದ್ದಂತೆ. ಅದು ಮುಂದೆ ನಮ್ಮ ಜೀವನದಲ್ಲಿ ಎಲ್ಲಿ ಸಹಾಯಕ್ಕೆ ಬರುತ್ತದೆ ಅಂತ ಇಲ್ಲಿಯವರೆಗೆ ಅನುಭವಕ್ಕೆ ಬಂದಿಲ್ಲ. ಇರಲಿ ಅದು ಡಾಕ್ಟರ್ ಇಂಜಿನಿಯರ್ ಮುಂತಾದ ದುಡ್ಡು ಮಿಂಟ್ ಮಾಡುವ ಉದ್ಯೋಗಗಳಿಗೆ ಅವಶ್ಯಕತೆ ಇರಬಹುದು. ಕಾಕೆ ಕಾ: ಅಥವಾ ರಾಮ: ರಾಮೌ ಪುರೋಹಿತರ ವೃತ್ತಿಗೆ ಕೆಲಸಕ್ಕೆ ಬರಬಹುದು ನಾನು ಅಲ್ಲಿ ಏಗಿದವನಲ್ಲ ಹಾಗಾಗಿ ನನಗೆ ಅದು ಗೊತ್ತಿಲ್ಲ. ಅಪ್ಪಯ್ಯ ಘನಂದಾರಿ ಪುರೋಹಿತರು ಆದ್ದರಿಂದ ನಾನು ರಾಮ: ಕಲಿತಿದ್ದರೆ ಚಂಡಿಹವನದ ಅದ್ಧೂರ್ಯಕ್ಕೆ ವಿಭೂತಿ ಬಳಿದು ಕುಳಿತುಕೊಳ್ಳಬಹುದಿತ್ತು. ಎ ಪ್ಲಸ್ ಬಿ ಯನ್ನಾದರೂ ಕಲಿತಿದ್ದರೆ ದೂರದ ದೇಶದಲ್ಲೇಲ್ಲೋ ಇಂಜನಿಯರ್ ಆಗಬಹುದಿತ್ತು ಆದರೆ ನಾನು ಅವೆರಡನ್ನೂ ಮಾಡಲಿಲ್ಲ. ನಾನು ಹಿಡಿದುಕೊಂಡ ಕೃಷಿಯೆಂಬ ಕೃಷಿಯ ಪಾಠವನ್ನು ಅವರ್ಯಾರೂ ಕಲಿಸಲಿಲ್ಲ. ಪಾಪ ಅವರನ್ನು ದೂರುವುದು ತಪ್ಪು ಆ ಪಠ್ಯದಲ್ಲಿ ಇರಲಿಲ್ಲ. ಮುಂದೆ ಮುಂದೆ ಓದಿ ಕೃಷಿಯ ಪದವಿಯನ್ನು ಆರಿಸಿಕೊಂಡರೆ ಅಲ್ಲಿ ಇದೆಯಂತೆ. ಅದು ಮುಂದಿನದಾಯಿತು ಬೇಸಿಕ್ ನಲ್ಲಿ ಇಲ್ಲ. ಹಾಗಾಗಿ ನಾನು ಪರಿಸ್ಥಿತಿ ಬಂದ ಹಾಗೆ ಬದುಕನ್ನಾಯ್ದುಕೊಂಡೆ. ಹಾಗಾಗಿ ಕಾಕೆ ಕಾಹಾ ವೂ ಎ ಪ್ಲಸ್ ಬಿ ಗಳನ್ನೂ ವೇಸ್ಟ್ ಮಾಡಿದೆ.
ಮೊನ್ನೆ ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿರುವ ನಾಲ್ಕನೆ ಕ್ಲಾಸಿನ ಹುಡುಗನೊಬ್ಬನನ್ನು ನೋಡಿದೆ( ಆ ಶಾಲೆಯ ಕಲಿಕೆಯ ವಿದಿವಿಧಾನಗಳೇ ವಿಚಿತ್ರ) ಆತ ಮೈಲಿಗಟ್ಟಲೆ ಆರಾಮವಾಗಿ ಈಜುತ್ತಿದ್ದ.ಚಕಚಕನೆ ಮರ ವೇರಿ ಇಳಿಯುತ್ತಿದ್ದ. ಕಾಡೊಳಗೆ ಯಾವ ಅಂಜಿಕೆಯೂ ಇಲ್ಲದೆ ನುಗ್ಗುತ್ತಿದ್ದ . ಅವನಲ್ಲಿ ಪ್ರಕೃತಿಯೊಡನೆ ಬಾಳಿ ಬದುಕಲು ಬೇಕಾದ ಎಲ್ಲಾ ಧೈರ್ಯದ ಪಾಠಗಳು ಮಿಳಿತಗೊಂಡಿತ್ತು. ನಮ್ಮ ಸಂಪ್ರದಾಯಗಳಲ್ಲಿ ಮನೆಯ ಅಪ್ಪಿ ಸಂಧ್ಯಾವಂದನೆ ಮಾಡಿದರೆ ಅದು ದೊಡ್ಡ ಸಾಧನೆ. ಅಕಸ್ಮಾತ್ ನೀರಿಗಿಳಿಯುವ ಸಂದರ್ಭ ಬಂದರೆ ಕೈಕಾಲು ಬಡಿದುಕೊಂಡು ಹೇತ್ಲಾಂಡಿಯಾಗಿಬಿಡುತ್ತಾನೆ. ನೀರಿನಲ್ಲಿ ಈಜುವುದು ಎಂಬುದು ಪ್ರಾಣಿಗಳಿಗೆ ಪ್ರಕೃತಿ ನೀಡಿದ ಸಹಜ ಕ್ರಿಯೆ. ಆದರೆ ಮನುಷ್ಯರೆಂಬ ಮನುಷ್ಯರಾದ ನಾವು ಶಿಷ್ಟಾಚಾರ ಶಿಸ್ತು ಎಂಬ ಸೋಗಿನಲ್ಲಿ ಅಂತಹ ಸಹಜವಾದ್ದಕ್ಕೆ ಹೆದರಿಕೆಯೆಂಬ ಆಹಾರವನ್ನು ನೀಡಿ ಚಿವುಟಿಬಿಟ್ಟಿದ್ದೇವೆ. ಟ್ವಿಂಕಲ್ ಟ್ವಿಂಕಲ್ ಹಾಡು ಹೇಳಿತು ಮಗು ಎಂದರೆ ಅಪ್ಪಾಅಮ್ಮಂದಿರಾದ ನಮಗೆ ಆಕಾಶ ಮೂರೇಗೇಣು. ಯು ಕೆ ಜಿ ಯಲ್ಲಿ ಹೆಚ್ಚು ಅಂಕ ಪಡೆದರೆ ಮಾರ್ಕ್ಸ್ ಕಾರ್ಡ್ ಹಿಡಿದು ಬೀದಿ ಬೀದಿ ಅಲೆದು ನಮ್ಮ ಮಗು ಜೋರು ಎಂಬುದನ್ನು ಸಾರಿ ಬರುತ್ತೇವೆ. ಹೀಗೆ ಪ್ರಕೃತಿಯಿಂದ ದೂರವಾದ ಮಕ್ಕಳು ತಮ್ಮ ಜೀವನದ ಧನಾರ್ಜನೆಗೆ ಒಂದು ಭವಿಷ್ಯದ ಯಂತ್ರವಾಗುತ್ತವಷ್ಟೆ. ಆದರೆ ಪ್ರಪಂಚ ಹೀಗೆಯೇ ಇರುವುದಿಲ್ಲ ಬದಲಾಗುತ್ತಿರುತ್ತದೆ ಎಂಬುದಕ್ಕೆ ಮತ್ತೆ ಬೆಂಗಳೂರಿನ ಆ ಶಾಲೆಯೇ ಸಾಕ್ಷಿ. ಇತಿಹಾಸ ಮರುಕಳಚುತ್ತದೆ ಎಂಬುದಕ್ಕೆ ಹೊಸ ಉದಾಹರಣೆ ಬೇಡ.
ಜೀವನ ಹಳ್ಳಿಯಲ್ಲಾಗಲಿ ಪಟ್ಟಣದಲ್ಲಾಗಲಿ ಆದರೆ ಜೀವನಾರಂಭದಲ್ಲಿ ಮಕ್ಕಳ ಕಲಿಕೆಯ ಅವಸ್ಥೆಯಲ್ಲಿ ಪ್ರಕೃತಿ ಸಹಜವಾದದ್ದು ಕಲಿತುಬಿಡಬೇಕು. ಕಾಕೆ ಕಾಹಾ ಯಾವಾಗ ಬೇಕಾದರೂ ಕಲಿಯಬಹುದು ಆದರೆ ಪ್ರಕೃತಿ ಸಹಜವಾದ ಈಜು ಮರ ಹತ್ತುವುದು ಮೈಲುಗಟ್ಟಲೆ ನಡೆಯುವುದು ಎಲ್ಲಾ ಮುದುಕರಾದ ಮೇಲೆ ಕಲಿಯಲು ಆಗದು. ಆದರೆ ವಿಪರ್ಯಾಸ ವೆಂದರೆ ನಮ್ಮ ಹಳ್ಳಿಗಳಲ್ಲೇ ಪಟ್ಟಣ ನೋಡಿ ಬೆಳೆಯುತ್ತಿರುವ ಮಂದಿಯಿಂದಾಗಿ ಶೇಕಡಾ ತೊಂಬತ್ತು ಮಂದಿಗೆ ನೀರು ಎಂದರೆ ಭಯ ಕಾಡು ಎಂದರೆ ಹೆದರಿಕೆ ಜೇನು ಎಂದರೆ ಅಮ್ಮಾ... ನಡೆಯುವುದು ಎಂದರೆ ಅಯ್ಯೋ... ಹಾಗಾಗಿ ಎ ಪ್ಲಸ್ ಬಿ ಅನಿವಾರ್ಯ!.
ಆಗಲಿ ಮಕ್ಕಳು ಇಂಜನಿಯರ್ ಆಗಲಿ ಡಾಕ್ಟರ್ ಆಗಲಿ ಕೋಟಿಗಟ್ಟಲೆ ಸಂಪಾದಿಸುವಂತಾಗಲಿ ಆದರೆ ಅದರ ನಡುವೆ ಅಕ್ಕಿ ಭತ್ತದಿಂದಲೂ ಭತ್ತ ಗಿಡದಿಂದಲೂ ಗಿಡ ಭೂಮಿಯಿಂದಲೂ ಎಂಬ ತತ್ವ ಬಾಲ್ಯದಲ್ಲಿಯೇ ತಿಳಿದಿರಲಿ. ನೀರು ನಮ್ಮ ಮಿತ್ರ ಅದರ ಗೆಳೆತನ ಬೇಕು ಕಾಡು ಮರ ಇದ್ದರೆ ನಾವು ಮುಂತಾದ ವಿಷಯಗಳಲ್ಲಿ ಧೈರ್ಯ ವಿಶ್ವಾಸ ತುಂಬಿರಲಿ.
7 comments:
ಹೌದು ನನಗೆ ಈಗ ಈಜಬೇಕು ಅನ್ನೋ ಆಸೆಯಾಗುತ್ತಿದೆ. ಆದರೆ....!
ಹ್ಮ್.. ನಿಜ
ಹೌದು ಸರ್..ನೀವಂದಿದ್ದು ನಿಜ. ಪುಟ್ಟ ಮಕ್ಕಳಿರುವಾಗ ಭಯ ತುಂಬಿದರೆ ದೊಡ್ಡವರಾದ ಮೇಲೂ ಅದೇ ಮುಂದುವರಿಯುತ್ತದೆ. ನಂಗೂ ಈಜಲು ಬರುವುದಿಲ್ಲ..ಈಗ ಕಲಿಯೋಣ ಅಂದ್ರೆ ಹೆದರಿಕೆಯಾಗುತ್ತೆ. ಬೆಳೆಯೋ ಹಂತದಲ್ಲಿ ನಾವು ಏನು ಕಲಿತುಕೊಳ್ಳುತ್ತಿವೋ ಅದೇ ಸೈ..
-ತುಂಬುಪ್ರೀತಿಯಿಂದ,
ಚಿತ್ರಾ
New York Life Insuranceನ advertisement ನೋಡಿ. ಇದೇ ಧ್ವನಿ ಇದೆ. ಆದರೆ, ಕಡೆಗೆ ಅದರಲ್ಲಿ ಬರುವ ಮುದುಕ ಸೇತುವೆ ಮೇಲಿಂದ ನೀರಿಗೆ ಧುಮುಕುವ ಧೈರ್ಯ ಮಾಡುತ್ತಾನೆ. ಕಮರಿ ಹೋಗಿದ್ದ ಆಸೆಗಳಿಗೆ ಜೀವ ತುಂಬಲು ಮತ್ತೆ ಸಜ್ಜಾಗುತ್ತಾನೆ.
ಈ ಬಾಧೆ ಶಿಕ್ಷಣ ಕ್ರಮದಿಂದಲೂ ಆವರಿಸಿಕೊಳ್ಳುತ್ತದೆ. ನಿಜ.
ಆದರೆ, ನನ್ನನಿಕೆಯಲ್ಲಿ ಮಗು ಹುಟ್ಟಲು ಸಿದ್ಧತೆಯಾಗುವಾಗಲೇ ಈ formalityಗೆ ಕೆಸರುಗಲ್ಲು ಹಾಕಿರುತ್ತೇವೆ. ಹುಟ್ಟಿದ ಮೇಲೆ ಎಲ್ಲರ ಮಧ್ಯದಲ್ಲಿ ನಮ್ಮ ಮಗು ಕಾಣಿಸುವುದಿಲ್ಲ. ಬದಲಾಗಿ, ನಮ್ಮದು ಮಾತ್ರ ಕಾಣಿಸುತ್ತದೆ.
ಆಗ, ಕಲ್ಪನೆಯ ರಾಮಃ, ರಾಮೌ, ರಾಮಾಃ ; (a+b)2ಗಳನ್ನು ಆವಾಹನೆ ಮಾಡಿಸುವುದು ಅನಿವಾರ್ಯವಾಗುತ್ತದೆ. ಈಜು ನೀರಿನಲ್ಲಿ ಮುಳುಗುತ್ತದೆ.
ನಿಮ್ಮವ,
ಭಾರತೀಶ
ನೀವು ಹೇಳುವುದು ಸರಿ.ಆದರೆ ಇಂದು ಅನೇಕ ತಂದೆತಾಯಿಗಳಿಗೆ ಮಕ್ಕಳು ಸಕಲಕಲಾವಲ್ಲಭರಾಗುವುದು ಬೇಕಿಲ್ಲ.ಒಂದು ಕ್ಷೇತ್ರದಲ್ಲಿ ಪರಿಣಿತಿ ಪಡೆದರೆ ಸಾಕು ಎಂಬ ವ್ಯಾವಹಾರಿಕ ಯೋಚನೆ.ಈ ಕಾರಣ ಇಂತಹ ಚಟುವಟಿಕೆಗಳಿಗೆ ಆಸ್ಪದ ಸಿಗುತ್ತಿಲ್ಲ.ಈಗಿನ ಕೆಲವು ಶಾಲೆಗಳು ನಿಸರ್ಗದ ಮಡಿಲಲ್ಲಿ ಕಲಿಸುವ ಪದ್ದತಿ ರೂಢಿಸಿಕೊಳ್ಳುತ್ತಿವೆ.(ನಮ್ಮ ಹಿಂದಿನ ಪದ್ದತಿ ಅದೇ ತಾನೆ.)ಇದು ಒಳ್ಳೆಯದೇ.ಆದರೆ ಹೀಗೆ ಕಲಿಸುತ್ತೇವೆ ಎಂದು ಚಿಕ್ಕಮಕ್ಕಳನ್ನು ಒಂಟಿಯಾಗಿ ಬಿಟ್ಟು ಕೈಗೆ ಹಾರೆ,ಗುದ್ದಲಿ ಕೊಡುವುದು,ಮರಹತ್ತುವುದು.ಈಜುವುದನ್ನು ಹೇಳಿಕೊಡದೇ ಅಪಾಯಕ್ಕೆ ಎಡೆಮಾಡಿಕೊಡಬಾರದಲ್ಲವೆ?
ಈ ಕಾರಣ ಅವುಗಳಿಗೆ ಬುದ್ದಿ ತಿಳಿದ ನಂತರ ಕಲಿಸುವುದು ಒಳ್ಳೆಯದು.
ಈಜುವುದು,ಮರಹತ್ತುವುದು ಯಾವಾಗ ಬೇಕಾದರೂ ಕಲಿಬಹುದು ಅದು ನಿಸರ್ಗ ಸಹಜ ವಿದ್ಯೆ ಎಂಬುದು ನನ್ನ ಅಭಿಪ್ರಾಯ.
ಅಶೋಕ ಉಚ್ಚಂಗಿ
http://mysoremallige01.blogspot.com/
ಟು ಪ್ರಜಾವಾಣಿ
ಪ್ರಯತ್ನಿಸಿ
ವಿಕಾಸ್
ತ್ಯಾಂಕ್ಸ್
ಚಿತ್ರಾ.
ಈಗಲೂ ನೀವು ಕಲಿಯಬಹುದು. ಸ್ವಲ್ಪ ತ್ರಾಸು ಅಷ್ಟೆ. ಬಾಲ್ಯದಲ್ಲಾದರೆ ಬಲು ಸುಲಭ
ಭಾರತೀಶ
ದಾರ್ಶನಿಕರ ಮಾತು ಅಲ್ಲ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ
ಅಶೋಕ್
ಹೌದು. ಅಪಾಯ ಆಗುತ್ತೆ ಅನ್ನುವುದೂ ಒಂದು ವೃಥಾ ಅವ್ಯಕ್ತ ಭಯ ಅಷ್ಟೆ. ಆಗಲೇಬೇಕಾದ ಅಪಾಯ ಹೇಗಾದರೂ ಆಗುತ್ತದೆ ಎಂಬ ಧೈರ್ಯದ ಜೀವನದಲ್ಲಿ ಬಹಳ ಮಜ ಇದೆ.
ತ್ಯಾಂಕ್ಸ್
ನಾನೂ ಕಲ್ಯಕ್ಕು ಈಜದ್ನ ..
ಅಂದ ಹಂಗೆ .. ಆ ಬೆಂಗಳೂರಿನ ಶಾಲೆ ಯಾವ್ದು?
Post a Comment