ನಿನ್ನ ಬ್ಲಾಗಿನ 'ಹಾರುತ ದೂರ ದೂರ....' ಬರಹವನ್ನು ಓದಿ ನನ್ನ ಮನಸ್ಸು ೧೯೬೦ ನೇ ಇಸವಿಗೆ ಹೋಗಿ ಆಗ ನಾನು ಇದೇ ವಿಷಯದ ಮೇಲೆ ಬರೆದಿದ್ದ ಒಂದು ಕವನವನ್ನು ನೆನಪಿಸಿಕೊಂಡಿತು. ಅದರ ಬಗ್ಗೆ ಎರಡು ಮಾತು ಹೇಳಿದರೆ ನಿನಗೆ ಬೇಸರವಾಗದೆಂದುಕೊಂಡಿದ್ದೇನೆ.ಕಾಕೋಳು ರಾಘವೇಂದ್ರ ಅವರ ನೇತೃತ್ವದ ಬೆಂಗಳೂರಿನ ಸರಸ್ವತಿ ಕಲಾನಿಕೇತನ ಎಂಬ ಸಂಸ್ಥೆ ಅಖಿಲ ಕರ್ನಾಟಕ ಕವನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅದಕ್ಕೆ ನಾನು 'ಭ್ರಮರ ಪ್ರಣಯ' ಎಂಬ ಕವನವನ್ನು ಕಳಿಸಿದೆ. ಸ್ವಲ್ಪ ಸಮಯದ ನಂತರ, ನನ್ನ ಕವನಕ್ಕೆ ಮೊದಲ ಬಹುಮಾನ ಬಂದಿದೆಯೆಂದೂ, ಬಹುಮಾನ ವಿತರಣೆ ಸಮಾರಂಭವನ್ನು ಏರ್ಪಡಿಸಿರುವುದಾಗಿಯೂ, ಪು.ತಿ.ನ. ಅವರ ಹಸ್ತದಿಂದ ಬಹುಮಾನವನ್ನು ಸ್ವೀಕರಿಸಲು ಆ ಸಮಾರಂಭಕ್ಕೆ ಬೆಂಗಳೂರಿಗೆ ಬರಬೇಕಾಗಿಯೂ ಅವರಿಂದ ಪತ್ರ ಬಂತು. ಆಬ್ವಿಯಸ್ ಕಾರಣದಿಂದ ಅದಕ್ಕೆ ನಾನು ಹೋಗಲಿಲ್ಲ. (ಹೋಗಿದ್ದರೆ, ೪ಅಡಿ ೪ಅಂಗುಲ ಎತ್ತರದ, ೪೫ ಕೇಜಿ ತೂಗುತ್ತಿದ್ದ, ಮೀಸೆ ಬರದಿದ್ದ ನನ್ನನ್ನು ನೋಡಿ ಅವರು ಇದು ಕೃತಿಚೌರ್ಯದ ಕೇಸು ಎಂದುಕೊಳ್ಳುತ್ತಿದ್ದರೇನೋ!) ಸಮಾರಂಭದ ನಂತರ ಅವರಿಂದ ಮತ್ತೆ ಪತ್ರ ಬಂತು. ಪು.ತಿ.ನ. ಅವರು ಕವನವನ್ನು ಬಹಳವಾಗಿ ಮೆಚ್ಚಿಕೊಂಡರೆಂದೂ, ಅದನ್ನು ತುಂಬ ಶ್ಲಾಘಿಸಿ ಮಾತಾಡಿದರೆಂದೂ ಅದರಲ್ಲಿ ತಿಳಿಸಿದ್ದರು. ನಾಡಿನ ಶ್ರೇಷ್ಠ ಕವಿಯೋರ್ವರಿಂದ ಪ್ರಶಂಸಿಸಲ್ಪಟ್ಟಿದ್ದ ಆ ಕವನವನ್ನು ಈ ಕೆಳಗೆ ಬರೆದಿದ್ದೇನೆ.
ಭ್ರಮರ ಪ್ರಣಯ
ನೀಲದಾಳದಂತರಾಳ
ಪ್ರಕೃತಿಯೆಸೆದ ಮೋಹಜಾಲ
ಪ್ರಕೃತಿಯೆಸೆದ ಮೋಹಜಾಲ
ಭೋಗಕೆಂದು ನೀಲ ನೂಲ
ನೆಯ್ದು ರಚಿಸಿದಾ ದುಕೂಲ.
ರಾಣಿಯೊಂದು ಮುಂದಕೆ
ದುಂಬಿವಿಂಡು ಹಿಂದಕೆ.
ಮೇಲೆ ಮೇಲೆ ಮೇಲೆ ಹಾರಿ
ಬಂದು ಎನ್ನ ಬಳಿಯ ಸೇರಿ
ಶಕ್ತರಲ್ಲದವರ ದಾರಿ
ಸುಗಮವಲ್ಲ ಹಿಂದೆ ಸಾರಿ
ಎಂಬ ರಾಣಿ ಮುಂದಕೆ
ದುಂಬಿಯೊಂದು ಹಿಂದಕೆ.
ಮೇಲೆ ಮೇಲೆ ಮೇಲೆ ಹಾರಿ
ಬಂದೆ ಎನ್ನ ಬಳಿಯ ಸೇರಿ
ನೀನೆ ಆಣ್ಮ ಓ! ವಿಹಾರಿ
ವಿರಮಿಸೆನ್ನ ತೋಳ ಸೇರಿ
ಎಂದು ರಾಣಿಯುಲಿಯಿತು
ಭ್ರಮರದಾತ್ಮ ನಲಿಯಿತು.
ಪ್ರಿಯೆಯ ಪ್ರೇಮ ಸತ್ಯ ಅಮರ
ಮಧುರದಧರ ನಿತ್ಯ ರುಚಿರ
ಜಗದ ಸೊಗದ ಬಾಳ್ವೆ ಮಧುರ
ಎಂದು ನಕ್ಕಿತಾಗ ಭ್ರಮರ.
ಕಾಲದೂತ ಫಕ್ಕನೆ
ಅದರ ಹಿಂದೆ ನಕ್ಕನೆ?
ಪ್ರಕೃತಿಯಾಟ ಅದಕೆ ಅರಿದು
ಬಂಧ ಸಡಿಲಲುದರ ಬಿರಿದು
ಕರುಳು ಕಿತ್ತು ಹೊರಗೆ ಹರಿದು
ಚಣದಿ ಶಾಂತವಾಯ್ತು ಮೊರೆದು.
ರಾಣಿ ಭ್ರಮರ ಯೋಗವು
ಮಾದ್ರಿ ಪಾಂಡು ಭೋಗವು.
ನೀಲದಾಳದಂತರಾಳ
ಕಾಲನೆಸೆದ ಮೃತ್ಯುಜಾಲ
ಬೀಸಿ ಮೊದಲು ಮೋಹಜಾಲ
ಸೊಗದ ಕಾಲಕಿರಿವ ಶೂಲ!
ಈಗ ರಾಣಿ ಗೂಡಿಗೆ
ಗಂಡು ಯಮನ ಬೀಡಿಗೆ!
ಒಮ್ಮೆ ಓದಿ ಮತ್ತೊಮ್ಮೆ ಓದಿ ಅರ್ಥ ಮಾಡಿ ಸುಖಿಸಬಹುದಾದ ಅದ್ಬುತ ಕವನ ಅಂತ ನನ್ನ ಭಾವನೆ. ಪುತಿನ ಮೆಚ್ಚಿದ್ದರಲ್ಲಿ ಆಶ್ಚರ್ಯ ಇರೋಲ್ಲ ಅಲ್ಲವೆ?
8 comments:
ಸರ್,
ನಿಜಕ್ಕೂ ಅದ್ಬುತವಾದ ಕವನ ಅವರಿಗೆ ಬಹುಮಾನ ಬಂದಿರುವುದು ಸೂಕ್ತವಾಗಿದೆ....ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ.....
ಮತ್ತೆ ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ. ಹಾಕಿಕೊಳ್ಳಲು ಬನ್ನಿ...ಖಾಲಿಯಾಗುವ ಮೊದಲು...
ಶ್ರೀಶ೦ ಅವರೇ,
ಅ೦ದ್ಕೊ೦ಡೆ, ತು೦ಬಾ ದಿನದಿ೦ದ ನಿಮ್ಮ ಬ್ಲಾಗ್ update ಆಗಿಲ್ಲವಲ್ಲ ಅ೦ತ.ಕವನ ನಿಜಕ್ಕೂ ಚೆನ್ನಾಗಿದೆ. ಅವರಿಗೆ ನನ್ನ ಕಡೆಯಿ೦ದಲೂ ಅಭಿನ೦ದನೆ ತಿಳಿಸಿ. ನನ್ನ ಬ್ಲಾಗ್ ಕಡೆಗೂ ಒಮ್ಮೆ ಹಣಿಕಿ ಹಾಕಿ.
ಮುತ್ತು ಮಾವನ ಕವನ ನಿಜವಾಗಿಯೂ ಅರ್ಥಪೂರ್ಣ ವಾಗಿದೆ.
ಶ್ರೀ ಶಂ ಸರ್,
ನೀವು ನನ್ನ ಬ್ಲಾಗಿನಲ್ಲಿ ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್.....
ನೀವು ಹೇಳಿದಂತೆ ನಾನು ತೆಗೆದ ಫೋಟೊ ಮತ್ತು ಲೇಖನಗಳನ್ನು ಸುಧಾ, ತರಂಗ ವಾರಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದೆ....ಹಾಗೆ ಫೋಟೊಗ್ರಫಿಗೆ ಸಂಭಂದಿಸಿದಂತೆ ಬರೆಯಲು ಪ್ರೇರೆಪಿಸಿದ್ದೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು...ಅವರು ಆಗ ಸುಧಾ ಸಂಪಾದಕರಾಗಿದ್ದರು. ಅವರ ನಂತರ ಮಂಜುಳ ಮೇಡಮ್ರವರು ಇದ್ದಾಗಲು ಇದೇ ಪ್ರೋತ್ಸಾಹ ನನ್ನನ್ನು ಸೇರಿದಂತೆ ಎಲ್ಲಾ[ನಾನು, ಮಲ್ಲಿಕಾರ್ಜುನ್, ನಾಗೇಂದ್ರ ಮತ್ಮರ್ಡು, ವಿನಾಯಕ್ ನಾಯಕ್, ಪ್ರಕಾಶ ಕಂದಕೋರ, ಇತ್ಯಾದಿ] ಯುವ ಬರಹಗಾರರಿಗೆ ಇತ್ತು. ಎಲ್ಲರೂ ಒಬ್ಬರಿಗಿಂತ ಒಬ್ಬರು ಆರೋಗ್ಯಪೂರ್ಣವಾದ ಸ್ಪರ್ಧೆ ಮತ್ತು ಸ್ಫೂರ್ತಿಯಿಂದ ಬರೆಯುತ್ತಿದ್ದೇವು ಮತ್ತು ಹಾಗೆ ಪ್ರಕಟವಾಗಿಯೂ ಇತ್ತು.....ಯಾವಾಗ ಇವರಿಬ್ಬರ ಸ್ಥಾನ ಬದಲಾಗಿ ಬೇರೆಯವರು ಬಂದರೋ ಅಲ್ಲಿಂದಾಚೆಗೆ ನಾವು ಕೊಟ್ಟ [ಈಗಲೂ ಕೊಡುತ್ತಿರುವ]ಫೋಟೊಗಳು, ಅದಕ್ಕೆ ಸಂಭಂದಪಟ್ಟ ಬರಹಗಳೆಲ್ಲಾ ಗೋಡೆಗೆಸೆದ ಬಾಲಿನಂತೆ ವಾಪಸು ಬರುತ್ತಿವೆ.[ನಾವು ಕೊಡುವ ಬರಹಗಳೆಲ್ಲಿ ಹೊಸತನವಿಲ್ಲ, ಸೃಜನಶೀಲತೆಯಿಲ್ಲವೆಂದು ಸಂಪಾದಕರು ಹೇಳಿದರು]..ಇನ್ನೂ ಕೆಲವು ಗಾಳಿ ಇಳಿದ ಬಲೂನಿನಂತೆ ಕ.ಬು ಸೇರುತ್ತಿವೆ...ಆಮೇಲೆ ನಾವೆಲ್ಲಾ ಈ ರೀತಿ ಬ್ಲಾಗಿಗೆ ಬಂದಿದ್ದು...
ಮತ್ತೊಂದು ವಿಚಾರ. ನಾನು ವೃತ್ತಿಯಲ್ಲಿ ದಿನಪತ್ರಿಕೆ ವಿತರಕ..ಹಿರಿಯ ಸಂಪಾದಕರಿದ್ದ ಸಮಯದಲ್ಲಿ ನಾನು ೨೫ ಸುಧಾ ಮತ್ತು ೩೦ ತರಂಗಗಳನ್ನು ಗಿರಾಕಿಗಳ ಮನೆಗೆ ಕಳಿಸುತ್ತಿದ್ದೆ...ಆಗ ಓದುಗರಿದ್ದರು..ಈಗ ಕೇವಲ ೮ ಸುಧಾ, ಮತ್ತು ೧೧ ತರಂಗಗಳನ್ನು ತರಿಸುತ್ತೇನೆ...ಗಿರಾಕಿಗಳನ್ನು ಕೇಳಿದರೆ ಆಯ್ಯೋ ಹೋಗ್ರಿ..ಅದರಲ್ಲಿ ಏನಿರುತ್ತೆ...ಕವರ್ ಪೇಜಿನಲ್ಲಿ ಕತ್ರಿನಾ ಕೈಫ್ ಫೋಟೊ ಹಾಕೊ ಮಟ್ಟಕ್ಕೆ ಬಂದಿದೆ ಸುಧಾ ಅದರಲ್ಲಿ ಏನು ಒದೋದು ಅನ್ನುತ್ತಾರೆ. ಇದೇ ಅಭಿಪ್ರಾಯ ತರಂಗ ಮೇಲು ಇದೆ.]
ಮತ್ತೆ ನನ್ನ ಬಳಿ ಇನ್ನೂ ಸುಮಾರು ೫ ಸರಣಿಗಾಗುವಷ್ಟು ಟೋಪಿಗಳಿವೆ...ಅವುಗಳನ್ನು ಮುಂದೆ ಹಾಕುತ್ತೇನೆ..ಹೀಗೆ ಬರುತ್ತಿರಿ....
ಸಾಧ್ಯವಾದರೆ ನಿಮ್ಮ ಈಮೇಲ್ ಐಡಿ ಕೊಡ್ತೀರಾ....
೪೯ ವರ್ಷಗಳ ಹಿಂದೆ ಬರೆದ ಕವನದ ಸತ್ಯ ಈಗಲೂ ಸತ್ಯ. ಕವಿ ಕಾವ್ಯದ ಮೂಲಕ ಕಾಲಾತೀತನಾಗುತ್ತಾನೆ ಎಂಬುದು ಈ ಕಾರಣಕ್ಕಾಗಿಯೆ.
ಶ್ರೀಶಂ ಸರ್,
ಬರಹಗಳಿಲ್ಲದೆ ತುಂಬಾ ದಿನಗಳಾಯಿತು..?! ರಾಣಿ ಜೇನು ಕಡಿದಿದೆಯಾ?!!!
ಕೋಡ್ಸರ
ನಾನೂ ನಿಮ್ಮನ್ನು ಹುಡುಕಿ ಹುಡುಕಿ ಸುಸ್ತಾದೆ. ಕೊನೆಗೆ ಶರ್ಮಣ್ಣ ಮನೆಗ್ ಹೋಯ್ದ ಅಂದ್ರು. ಫ್ರೆಂಚ್ ಗಡ್ಡ ಇರಲಿಲ್ಲ , ಅವತ್ತು ಫುಲ್ ಶೇವ್ಡ್ :) ಋಣಾನುಬಂಧ ಇರಲಿಲ್ಲ ಅನ್ಸುತ್ತೆ.. ಹ್ಹ ಹ್ಹ ಹ್ಹ್ಹ ಹ್ಹ.
ಚೆಂದದ ಕವನ :-)
Post a Comment