ನಮ್ಮ ಸೋಮು ಗೊತ್ತಲ್ಲ,....! (ಗೊತ್ತಿಲ್ಲದಿದ್ದರೆ ಯಾರನ್ನಾದರೂ ಕೇಳಿ,ಖಂಡಿತಾ ಅವರಿಗೆ ಗೊತ್ತಿರುತ್ತದೆ) ಆತ ಇತ್ತೀಚೆಗೆ ಮದುವೆ ಆದ, ಸರಿ ಅದರಲ್ಲೇನು ವಿಶೇಷ ಅಂದಿರಾ, ವಿಶೇಷವಿರುವುದೇ ಅಲ್ಲಿ, ಆತ ಹೇಳಿ ಕೇಳಿ ನವ್ಯ ಕವಿ ಕುಂತಿದ್ದಕ್ಕೂ ನಿಂತಿದ್ದಕ್ಕೂ ಒಂದೊಂದು ಕವನ ಕಟ್ಟಿ ಬಿಸಾಕುವವನು,
ನಾನು ಕವಿ
ಅವನು ಕಪಿ(ಕನ್ಯಾ ಪಿತೃ)
ಅವನಿಗೊಂದು ಕಪಿ
ನನಗೆ ಬಿತ್ತು ಟೋಪಿ
ಎನ್ನುವಂತಹ ನೂರಾರು ಅರ್ಥವಿಲ್ಲದ ಹಾಗೂ ಯಾವಾಗಲೂ ಸದ್ಯದಲ್ಲಿಯೇ ಪ್ರಕಟಗೊಳ್ಳುವ ಸಿದ್ದತೆಯಲ್ಲಿರುವ ನವ್ಯ ಕವನದ ಸ್ವಯಂ ಘೋಷಿತ ಕವಿ ನಮ್ಮ ಸೋಮು.
ಸಾಮಾನ್ಯವಾಗಿ ನಾನು ಕವಿ ಅಂತ ಯಾರಲ್ಲಾದರೂ ಪರಿಚಯ ಮಾಡಿಕೊಂಡರೆ, ಅದು ಸರಿ ಹೊಟ್ಟೆಪಾಡಿಗೆ ಏನು ಮಾಡಿಕೊಂಡಿದ್ದೀರಾ? ಎಂಬ ಪ್ರಶ್ನೆ ಎದುರು ಇರುವ ವ್ಯಕ್ತಿಗಳಿಂದ ಸಿಡಿಗುಂಡಿನಂತೆ ಬರುತ್ತದೆ. ಇಂತಾ ಕಾಲದಲ್ಲಿ ನಮ್ಮ ಸೋಮು ಹೊಟ್ಟೆಪಾಡಿಗೂ ಅದನ್ನೇ ವೃತ್ತಿಯಾಗಿಸಿಕೊಂಡಿದ್ದೇನೆ ಎಂದು ಉತ್ತರಿಸುವವನು, ಎಂತೆಂಥಾ ಅಗಡಬಾಂಕ್ ಗಂಡು ಮಕ್ಕಳು ಹೆಣ್ಣು ಸಿಗದೆ ಆಕಾಶ ನೋಡುತ್ತಿರಬೇಕಾದ ಇಂಥಾ ತುಟ್ಟಿ ಕಾಲದಲ್ಲಿ ಸೋಮುವಿನಂಂಥಾ ಕವಿವರೇಣ್ಯನಿಗೆ ಧೈರ್ಯ ಮಾಡಿ ಹೆಣ್ಣುಕೊಡುವವರು ಯಾರು, ಯಾರಾದರೂ ಕೊಟ್ಟಾರು ಆದರೆ ಇವನಿಗೆ ಹೆಣ್ಣು ಕೊಡಿ ಅಂತ ಕೇಳಲು ಧೈರ್ಯವಿರುವುದಾದರೂ ಯಾರಿಗೆ? ಎಂಬಂಥಹ ಪ್ರಶ್ನೆ ಇರುವಾಗ ಸೋಮು ಮದುವೆ ಮಾಡಿಕೊಂಡು ಬಿಟ್ಟ.
ಸೋಮುವಿಗೆ ಹೆಣ್ಣು ಸಿಕ್ಕಿದ್ದೇ ಒಂದು ಅದ್ಬುತ ಕಥೆ. ಅಕ್ಕಪಕ್ಕದ ಊರಿನಲ್ಲಿ ಯಾರ ಮನೆಯಲ್ಲಿಮದುವೆಗಳಾದರೂ ಸೋಮು ಅಲ್ಲಿ ಹಾಜರಿರುತ್ತಿದ್ದ, ಪ್ಯಾಂಟಿನ ಜೇಬಿಗೆ ಕೈ ತೂರಿಸಿ ಅತ್ತಿಂದಿತ್ತ ಓಡಾಡುತ್ತಾ ಬರೋಬ್ಬರಿ ಬ್ಯುಸಿ ವ್ಯಕ್ತಿಯಂತೆ ತೋರಿಸಿಕೊಂಡು ಕೊನೆಯಲ್ಲಿ ವಧುವರರಿಗೆ ಒಂದು ನವ್ಯಕಾವ್ಯದ ಹನಿಗವನವನ್ನು ಬರೆದು ಉಡುಗೊರೆಯಾಗಿ ನೀಡಿ ಮನೆಗೆ ವಾಪಾಸಾಗುತ್ತಿದ್ದ. ಅದೇನೆ ಇರಲಿ ಅಲ್ಲಿ ಅವನ ಕವನಗಳು ರಂಜನೀಯವಾಗಿರುತ್ತಿದ್ದುದಂತೂ ನಿಜ, ಹಲವು ಸಾರಿ ಹನಿಗವನ ಕೇಳಿದವರಿಗೆ ಈ ಕವನ ಎಲ್ಲೋ ಕೇಳಿದಂತೆ ಅನ್ನಿಸುತ್ತಿದಾರೂ ಎಲ್ಲಿ ಎಂದು ಸ್ಪಷ್ಟವಾಗಿ ಹೇಳಲಾಗದೇ ನಗುವುದು ಅನಿವಾರ್ಯವಾಗುತ್ತಿತ್ತು.
ಇಂದು ಇವನು ವರ
ನಾಳೆಯಿಂದ ವರವರ
ಆದರೂ ಇಲ್ಲ ಬೇಸರ
ದೇವರು ನನಗೆ ಕೊಡಲಿಲ್ಲ ಈ ಮದುವೆಯೆಂಬ ವರ
ಎನ್ನುವಂತಹ ಹತಾಶ ಹನಿಗವನದಿಂದ ಶುರುವಾದ ಸೋಮುವಿನ ಕಾವ್ಯವಾಚನ ಕೆಲವೊಮ್ಮೆ ಶೃಂಗಾರ ರಸವನ್ನು ಹೊಂದಿರುತ್ತಿತ್ತು.
ನೀನು ಅವನ ನಲ್ಲೆ
ಅವನ ನೀನು ಬಲ್ಲೆ
ಮೀರಬೇಡ ಎಲ್ಲೆ
ಎನ್ನಬೇಡ ಒಲ್ಲೆ
ಒಂದು ವರ್ಷದಲ್ಲೆ ಹೆರು ಹೆಣ್ಣ ಒಡಲಲ್ಲೆ
ಇಂಥಹಾ ಕವನಗಳನ್ನು ಓದುವ ಮೊದಲೇ ಆತ ಇದು ಇದು ಶೃಂಗಾರ ಕವನ ಇದು ಹಾಸ್ಯ ಕವನ ಎಂದು ವಿಭಾಗಿಸಿ ಹೇಳಿಕೊಂಡು ಓದುತ್ತಿದ್ದುದರಿಂದ ಕೇಳುಗರೂ ಮಾನಸಿಕವಾಗಿ ಸಿದ್ದರಾಗಬಹುದಿತ್ತು. ಹೀಗೆ ಒಂದು ಮದುವೆ ಸಮಾರಂಭದಲ್ಲಿ ಕವನ ವಾಚಿಸುತ್ತಾ ಇರಬೇಕಾದರೆ ಆಗಾಗ ತನ್ನ ಕವನ ವಾಚನವನ್ನು ಮದುವೆ ಮನೆಗೆ ಜರಿಲಂಗ ಹಾಕಿಕೊಂಡು ಬಂದ ಕನ್ಯಾಮಣಿಗಳು ಗಮನಿಸುತ್ತಾರಾ? ಎಂದು ಓರೆಗಣ್ಣಿನಿಂದ ನೋಡುತ್ತಲಿರುತ್ತಿದ್ದ. ಅವನಿಗೆ ಮೊದಲಬಾರಿ ಮೈ ಜುಂ ಎಂದಿದ್ದು. ರೋಮಾಂಚನವಾಗಿದ್ದು ಹಾಗೂ ಕವನದ ಮುಂದಿನ ಸಾಲುಗಳು ತಡರಾಬಡರಾ ಆಗಿದ್ದು ಈ ಕವನ ಓದಿದಾಗಲೆ. ಸೋಮುವಿನ ಹನಿಗವನ ವಾಚನ ಸಮಯದಲ್ಲಿ ಅಲ್ಲಿಯವರೆಗೂ ಒಂದೋ ಕಿವಿಕೇಳದ ಬೊಚ್ಚುಬಾಯಿಯವರು ಅಥವಾ ಅರ್ಥವಾಗದ ಮಕ್ಕಳು ನಕ್ಕದ್ದು ಬಿಟ್ಟರೆ ಹದಿಹರೆಯದ ಕಣ್ಣೊಟದಿಂದಲೇ ರೋಮಾಂಚನಗೊಳಿಸುವ ತಾಕತ್ತಿರುವ ಹೆಣ್ಣುಮಕ್ಕಳು ಯಾರೂ ನಕ್ಕಿರಲಿಲ್ಲ,ತಿರುಗಿ ನೋಡಿಯೂ ಇರಲಿಲ್ಲ. ಆದರೆ ಮೊದಲಬಾರಿಗೆ ಆಕೆ ನಕ್ಕಳು ಮತ್ತು ಕುತೂಹಲದಿಂದ ಮುಂದಿನ ಕವನ ಓದು ಎಂದು ಕಣ್ಣಂಚಿನಲ್ಲಿಯೇ ಸೂಚಿಸಿದಳು. ಸೋಮುವಿಗೆ ಮೂರ್ಲೋಕಗಳು ಕೈಗೆ ಸಿಲುಕಿದಂತಾಯಿತು, ಇನ್ನು ಸ್ವರ್ಗ ಮೂರೇ ಗೇಣು, ಅಲ್ಪ ಸ್ವಲ್ಪ ಸ್ವರ್ಗ ಅಲ್ಲಿಯೇ ಕಾಣಿಸುತ್ತಿದೆ ಎನ್ನುವಂತಾಯಿತು. ತಕ್ಷಣ ಸ್ಥಳದಲ್ಲಿಯೇ ರಚಿಸಿದ ಸೋಮು
ಎಲ್ಲಿದ್ದೆ ಇಲ್ಲೀ ತನಕ
ನನ್ನಲ್ಲಿಲ್ಲ ಧನಕನಕ
ಬಂದರೆ ನನ್ನ ಮನೆತನಕ
ಕವನವಿದೆ ಕೊನೆತನಕ
ಕವನ ಓದಿದ ಮರುಕ್ಷಣ ಆಕೆ ಖುಷಿಯಿಂದ ಕುಳಿತಲ್ಲಿಂದ ಎದ್ದು ಬಂದು ನೀವು ತುಂಬಾ ದೊಡ್ಡ ಕವಿಗಳು, ನನಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಎಂದಮೇಲಂತು ಸೋಮು ನಖಶಿಕಾಂತ ಗಡಗಡನೆ ಬೆವರಿಬಿಟ್ಟ. ಅದು ಹೇಗೋ ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಆಕೆ ಸ್ವಲ್ಪ ಹೊರಗಡೆ ಬನ್ನಿ ಮಾತಾಡಬೇಕು ಅಂದೇಬಿಟ್ಟಳು. ಆಚೆ ಈಚೆ ನೋಡುತ್ತಾ ತೆಪರಗಾಲು ಹಾಕುತ್ತಾ ಜರಿಲಂಗದ ಚಲುವೆಯ ಹಿಂದೆ ಸಾಗಿದ ಸೋಮು. ಮದುವೆ ಮನೆಗಿಂತ ಅನತಿ ದೂರದಲ್ಲಿ ನಿರ್ಜನ ಜಾಗದಲ್ಲಿ ಚಲುವೆ ನಿಂತಳು. ಅವಳನ್ನುನೋಡಿದ ಸೋಮುವಿನ ಕವಿ ಹೃದಯ ಜಾಗೃತಗೊಂಡು
ಪೆಡ್ಡೆಗಳು ಜಾರಿ ಬೀಳದಿರಲಿ ಎಂದು,
ನಡು ರಸ್ತೆಯಲ್ಲಿವೆ ಹಂಪು.
ಪೆಡ್ಡೆಗಳು ಜಾರಿ ಬೀಳಲಿ ಎಂದು,
ನಡುವಿನ ಮೇಲ್ಗಡೆ ಈ ಹಂಪು.
ಎಂದು ಹೇಳಬೇಕು ಅಂತ ಅನ್ನಿಸಿತಾದರು ಅದೇಕೋ ಅದು ಹೇಳಬಾರದ ಕವನ ಅಂದೆನಿಸಿ ಜರಿಲಂಗದ ಚಲುವೆಯ ಮುಖವನ್ನು ನೋಡುತ್ತಾ ನಿಂತ ಸೋಮು. ನೀವು ಹಾಗೆ ನೋಡಿದರೆ ನನಗೆ ನಾಚಿಕೆ ಆಗುತ್ತೆಜರಿಲಂಗ ಕಾಲಿನ ಬೆರಳಿನಿಂದ ನೆಲ ಕೆರೆಯುತ್ತಾ ನುಲಿಯಿತು. ಒಮ್ಮೆ ಸೋಮು ಕಕ್ಕಾಬಿಕ್ಕಿಯಾದ, ತಾನು ಹಾಸ್ಯ ಕವನ ಎಂದು ಸಭಿಕರ ಮುಂದೆ ಓದಿದಾಗ ಯಾರೂ ನಗದಿದ್ದರೂ ಇಷ್ಟು ಕಕ್ಕಾಬಿಕ್ಕಿಯಾಗಿರಲಿಲ್ಲ. ನಾನು ಪ್ರೇಮ ಪಾಶದಲ್ಲಿ ಬಂದಿಯಾಗಿದ್ದೇನೆ ಅದಕ್ಕೆ ಮದುವೆಯೇ ಉತ್ತರ, ನೀವು ಒಪ್ಪಿಗೆ ಕೊಟ್ಟರೆ ನನ್ನ ಬಾಳು ಹಸನಾಗುತ್ತದೆ ಚಲುವೆ ಕೆನ್ನೆ ಕೆಂಪಗಾಗಿಸಿಕೊಂಡು ಹೇಳಿದಳು.ಸೋಮುವಿಗಿರಲಿ ಆಗದು ಎನ್ನಲು ಯಾರಿಗೆ ಮನಸ್ಸು ಬರುತ್ತದೆ. ಸೋಮುವಿಗೆ ತಾನಾಗಿಯೇ ಇಂಥಾ ಅವಕಾಶ ಸೃಷ್ಟಿಸಿಕೊಟ್ಟ ದೇವರ ಮೇಲೆ ಅಪಾರ ಭಕ್ತಿ ಉಕ್ಕಿ ಹರಿದು ಮನಸ್ಸಿನಲ್ಲಿಯೇ ನಮಿಸಿ ಆಯಿತು ಎಂದು ಚಲುವೆಗೆ ಒಪ್ಪಿಕೊಟ್ಟ. ಈಗ ಒಪ್ಪಿಗೆ ಕೊಟ್ಟು ಆಮೇಲೆ ನಮ್ಮ ಮನೆಗೆ ಬಂದು ಅಪ್ಪನ ಎದುರಲ್ಲಿ ಆಗದು ಎಂದರೆ ನಾನು ಕೆರೆಬಾವಿ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನನ್ನ ಕೈಮೇಲೆ ಕೈ ಇಟ್ಟು ಆಣೆ ಮಾಡಿ ಹೇಳಿ ಹುಡುಗಿ ಹೇಳಿತು. ದೇವರು ಕಲ್ಪಿಸಿಕೊಟ್ಟ ಮತ್ತೊಂದು ಅವಕಾಶವನ್ನು ಉಪಯೋಗಿಸಿ ಕೊಂಡ ಸೋಮು ಚಲುವೆಯ ಕೈ ಮೇಲೆ ಕೈ ಇಟ್ಟು ನಾನು ನಿನ್ನ ಪ್ರೇಮಪಾಶ ಬಿಡಿಸುತ್ತೇನೆ ಎಂದು ಕವಿವರೇಣ್ಯರ ಮೇಲೆ ಆಣೆ ಇಟ್ಟು ಹೇಳಿದ. ಸುಂದರಿಯ ಕೈ ಹಿಡಿದ ಸಂದರ್ಭದಲ್ಲಿ ಮೊಟ್ಟ ಮೊದಲು
ಹಿಡಿದೆ ಹುಡುಗಿಯ ಕೈ
ಜುಂ ಎಂದಿತು ಇಡೀ ಮೈ
ಇನ್ನು ಮದುವೆಯೇ ಸೈ
ಇಂದಿನಿಂದ ಒಂಟಿ ಜೀವನಕ್ಕೆ ಬೈ ಬೈ
ಎಂಬ ಬ್ರಹ್ಮಚಾರಿ ದಿನದ ಕೊನೆ ಕವನ ಎಂಬಂತೆ ರಚಿಸಿ ಹೇಳಿ ಮುಗಿಸಿದ ಸೋಮು, ಚಲುವೆಯ ಹಿಂದೆ ಅವಳ ಅಪ್ಪನ ಎದುರಿನಲ್ಲಿ ಮದುವೆ ವಿಚಾರ ಮಾತನಾಡಲು ಹೋದ. ಸೋಮುವಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋದ ಜರಿಲಂಗ ಮನೆ ಒಳಗಡೆ ಸೇರಿದಳು. ಸೋಮು ಜಗುಲಿಯಲ್ಲೆ ಕುಳಿತುಕೊಂಡ, ಹುಡುಗಿಯ ಅಪ್ಪ ಗತ್ತಿನಿಂದ ಬಂದು ಸೋಮುವನ್ನು ಹಿಂದೆ ಮುಂದೆ ವಿಚಾರಿಸಿ ಮಾತನಾಡಿಸಿದ್ದೂ ಆಯಿತು. ದಪ್ಪ ಮೀಸೆಯ ದೊಡ್ಡ ಗಾತ್ರದ ಅವನ ದೇಹವನ್ನು ಕಂಡು ಸೋಮು ಒಮ್ಮೆ ಹೆದರಿದನಾದರೂ ಚೆಲುವೆ ಅವಳಾಗಿಯೇ ಕರೆದುಕೊಂಡು ಬಂದದ್ದರಿಂದ ಧೈರ್ಯವಾಗಿ ಕುಳಿತ. ನಂತರ ಮುಖ್ಯ ವಿಷಯಕ್ಕೆ ಬಂದು ನೀವು ನಮ್ಮ ಹುಡುಗಿಯನ್ನು ಮದುವೆಯಾಗುವುದು ಖಂಡಿತಾ ತಾನೆ? ಎಂದು ಅಪ್ಪ ಕೇಳಿದ. ಹೋ ಹೋ ಅದರಲ್ಲಿ ಅನುಮಾನವೇ ಇಲ್ಲ ಹುಡುಗಿಯನ್ನು ನೋಡಿ ಒಪ್ಪಿದ್ದೀರಿ ತಾನೆ? ಹೌದು ಹೌದು ಆಮೇಲೆ ಅದೂ ಇದೂ ಎಂದು ವರಾತ ತೆಗೆದರೆ ನಾನು ಮೊದಲೇ ಕುಸ್ತಿ ಪೈಲ್ವಾನ ಗೊತ್ತಲ್ಲ.... ಛೇ ಛೇ ಛೇ ಹಾಗೆ ಆಗೋಕೆ ಸಾಧ್ಯಾನೇ ಇಲ್ಲ. ಇವತ್ತೇ ಬೇಕಾದರೂ ಮದುವೆಗೆ ರೆಡಿ. ಆಯ್ತು ನಿಶ್ಚಿತಾರ್ಥ ಶಾಸ್ತ್ರ ಇವತ್ತೇ ಮುಗಿಸೋಣ, ಅವಳನ್ನ ಕರೆದು ಕೊಂಡು ಬಾರೆ ಎಂದು ಒಳಗಡೆಗೆ ಕೂಗಿ ಹೇಳಿದ ಅಪ್ಪ.ಸೋಮುವನ್ನು ಮದುವೆಯಾಗೆಂದು ಕೇಳಿದ್ದ ಚಲುವೆ ಹುಡುಗಿಯೊಬ್ಬಳ ಕೈ ಹಿಡಿದು ತಂದು ಕೂರಿಸಿ ಒಳಗಡೆ ಹೋದಳು. ಕುಳಿತ ಹುಡುಗಿ ಸೋಮುವನ್ನು ನೋಡಿದಳು. ಸೋಮುವಿಗೆ ಆಕೆ ಆಕಾಶ ನೋಡಿದಂತೆ ಕಾಣಿಸಿತು. ಈಕೆ ಯಾರು? ಇವಳೇಕೆ ಇಲ್ಲಿ ಬಂದು ಕುಂತಳು ಅಂತ ಸೋಮು ಲೆಕ್ಕೆಚಾರ ಹಾಕುವಷ್ಟರಲ್ಲಿ ಅಪ್ಪ ಹ್ಞೂಂಕರಿಸಿ ಉಂಗುರ ತೊಡಿಸು ಎಂದ ಸೋಮು ಅದೂ.... ಅದೂ....... ನಾನು ಮದುವೆಯಾಗುತ್ತೇನೆ ಎಂದಿದ್ದು ಇವಳಲ್ಲ ಅವಳು ಜರಿಲಂಗ..... ಚಲುವೆ .... ಎಂದು ತೊದಲಿದ. ಧ್ವನಿ ಎಲ್ಲೋ ಗಂಟಲಿನಾಳದಿಂದ ಬಂದಂತಿತ್ತು. ಹುಡುಗಿಯ ಅಪ್ಪ ದಡಕ್ಕನೆ ಮುಖ ಕೆಂಪಗೆ ಮಾಡಿಕೊಂಡು ಕುಳಿತಲ್ಲಿಂದ ಎದ್ದ. ಸೋಮು ಕ್ಷಣಮಾತ್ರದಲ್ಲಿ ಹುಡುಗಿಯ ಕೈಗೆ ಉಂಗುರ ತೊಡಿಸಿದ. ಹುಡುಗಿ ಇವನೆ ನನ ಗಂಡ ಇವನೆ ನನ ಗಂಡ ಎಂದು ಗೊಜಲು ಗೊಜಲಾಗಿ ಕೂಗತೊಡಗಿದಳು. ಬಾಗಿಲ ಸಂದಿಯಿಂದ ಚಲುವೆ ಬಾವಾ ನಾನು ಸಾಫ್ಟವೇರ್ ಇಂಜನಿಯರ್‌ನ್ನು ಲವ್ ಮಾಡಿದ್ದೆ. ಅಕ್ಕನ ಮದುವೆಯಾಗದಿದ್ದರೆ ನಿನಗೆ ಮದುವೆ ಇಲ್ಲ ಎಂದು ಅಪ್ಪ ಗುಟುರು ಹಾಕಿದ್ದರು. ನನ್ನ ಪ್ರೇಮಪಾಶ ಬಿಡಿಸಿದ್ದಕ್ಕೆ ಥ್ಯಾಂಕ್ಸ್ ಎಂದಳು.
ಅಯ್ಯೋ ಚಲುವೆ
ನಿನ್ನ ಮೇಲೆ ನನ್ನ ಒಲವೆ
ನನ್ನ ಹೆದರಿಸಿದ್ದು ನಿನ್ನ ಅಪ್ಪನ ಬಲವೆ
ಬಯಸಿದ್ದು ಗೆಲುವೆ
ಆದರೆ ಸಿಕ್ಕಿದ್ದು ನೀರಿಲ್ಲದ ಕಾಲುವೆ
ಎಂದು ಕವನ ರಚಿಸಿ ಹೇಳಿದ. ಸೋಮುವಿನ ಹೊಸ ಹುಡುಗಿ ಬ್ಯಾ..... ಬ್ಯಾ ......ಎಂದಳು. ಸೋಮು ಅದನ್ನು ವಾ ವಾ ಎಂದು ಅರ್ಥ ಮಾಡಿಕೊಂಡ. -ಆರ್.ಶರ್ಮಾ.ತಲವಾಟ
5 comments:
hahaha bahala dinada nantara mattomme nagisiddakke dhanyavaadagalu
inresting!!! enjoyed it.
ಶರ್ಮರೇ,
ನಿಮ್ಮ ಸೋಮು ಪುರಾಣ ಬಹಳ ಚೆನ್ನಾಗಿದೆ. ಕಚಗುಳಿಯಿಡುವ ಕವನಗಳು, ಅಷ್ಟೇ ಸಮರ್ಥವಾದ ಗದ್ಯ ನಿರೂಪಣೆ, ಓದಿ ನಗೆ ಬ೦ತು. ಅ೦ದ ಹಾಗೆ ಯಾರು ಮಾರಾಯರೇ ಈ ಸೋಮು? ನಮ್ಮ ನಡುವೆ ಇರುವಒ೦ದು ವ್ಯಕ್ತಿಯ೦ತೆ ಭಾಸವಾಗುತ್ತದೆ.
ರಾಘಣ್ಣ...
ನಗೆಹನಿಬರಹ ತುಂಬ ಇಷ್ಟವಾಯಿತು. ಸಂಧರ್ಬೋಚಿತ ಹನಿಗವನಗಳಿಂದ ಸಿಂಗರಿಸಿದ್ದು ಓದುವಾಗ ಇನ್ನಷ್ಟು ಖುಷಿಕೊಡುತ್ತದೆ.
ಧನ್ಯವಾದಗಳು.
ನಮ್ಮ ನವಿಲ್ಗರಿ ಸೋಮನೇ?;-)
Post a Comment