Wednesday, March 18, 2009

ಪಣಿಯಕ್ಕ

ನನಗೆ ಅನ್ನಿಸುತ್ತದೆ ಪಣಿಯಕ್ಕ ಹುಚ್ಚಿಯಲ್ಲ, ಆದರೆ ನಾನೂ ಎಲ್ಲರೆದುರು ಹಾಗೆ ಹೇಳಲಾರೆ. "ಯಾರಿಗೆ ಯಾರುಂಟು ಯರವೀನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲೋ ಹರಿಯೇ" ಎನ್ನುವ ಹಾಡು ಕೇಳಿತೆಂದರೆ ಪಣಿಯಕ್ಕನ ಸವಾರಿ ನಮ್ಮ ಮನೆಗೆ ಪ್ರವೇಶವಾಗಿದೆ ಎಂದು ಅರ್ಥ. ಒಂದರ ಹಿಂದೆ ಒಂದು ಹಾಡುಗಳನ್ನು ಹೇಳುತ್ತಾ ಮರುಕ್ಷಣದಲ್ಲಿ "ಭಟ್ರು ಬಾ ಅಂದಿದ್ರು,ನನಗೆ ಯಾರ ಮನೆಗೂ ಬರಬಾರದು ಹೋಗಬಾರದು ಅಂತ ಏನಿಲ್ಲ, ಆದರೆ ಕೊಳೆ ಔಷಧಿ ಹೊಡೆದು ಆಗಲಿಲ್ಲ, ದೇವರಿಗೆ ಎರಡು ಹೂವು ಹಾಕಿದ್ರೆ ನಾಳೆ ದೊಡಗದ್ದೆಗೆ ಹೋಗಿ, ಮಳ್ಳು ಅಂತಂದ್ರೆ ಹೆಬ್ಬೆಟ್ಟಿಗೂ ಬೆಲೆ ಇಲ್ಲ " ಎಂದು ಒಂದು ವಿಷಯಕ್ಕೂ ಮತ್ತೊಂದು ವಿಷಯಕ್ಕೂ ಕೊಂಡಿ ಇಲ್ಲದ ಮಾತನ್ನು ಆರಂಬಿಸಿ ನಂತರ ಮತ್ತೆ " ಕರೆದರೂ ಬರುವೆಯೆಂದೂ ಶ್ರೀ ಕೃಷ್ಣನಾ..... " ಎಂದು ಮತ್ತೆ ಮರಳಿ ಹಾಡಿಗೆ ಹೊರಳುತ್ತಿತ್ತು.
ಪಣಿಯಕ್ಕಳ ಈ ರೀತಿಯ ಓಡಾಟದ ವರ್ತನೆಗೆ ಊರಿನ ಜನರು "ಅವಳಿಗೆ ಕೂತು ಉಣ್ಣುವಷ್ಟು ಆಸ್ತಿ ಇದ್ದರೂ ಅವಳ ಅವಸ್ಥೆ ಹೀಗೆ, ಅಮಾವಾಸೆ ಹುಣ್ಣಿಮೆಯ ಎದುರಿನಲ್ಲಿ ಮಳ್ಳು ಜಾಸ್ತಿಯಾಗಿ ಊರು ಅಲೆಯುವ ಭಾಗ್ಯ" ಎನ್ನುತ್ತಿದ್ದರು. ಅಮಾವಾಸೆ ಮತ್ತು ಹುಣ್ಣಿಮೆಯ ಎದುರಿನ ದಿವಸಗಳಲ್ಲಿ ಪಣಿಯಕ್ಕಳಿಗೆ ಹುಚ್ಚು ಜಾಸ್ತಿಯಾಗುತ್ತದೆ ಎನ್ನುವುದು ನಿಜವೋ ಸುಳ್ಳೊ ಎಂದು ಯಾರೂ ಕೂಲಂಕುಷವಾಗಿ ಪತ್ತೆ ಮಾಡಲು ಹೋಗದಿದ್ದರೂ, ಅವಳು ಹೀಗೆ ಊರಿನ ಮೇಲೆ ಹೊರಟಾಗಲೆಲ್ಲಾ "ಅಮವಾಸೆ ಬಂತು ಅಂತ ಕಾಣಿಸ್ತದೆ ಪಣಿಯಕ್ಕನ ಸವಾರಿ ಊರ್ ಮೇಲೆ ಹೊಂಟಿದೆ" ಎನ್ನುವ ಮಾತು ಚಾಲ್ತಿಗೆ ಬಂದಿತ್ತು. ಆದರೆ ಪಣಿಯಕ್ಕನ ಓಡಾಟಕ್ಕೂ ಅಮವಾಸೆ ಹುಣ್ಣಿಮೆಗೂ ಯಾವುದೇ ಸಂಬಂಧವಿರಲಿಲ್ಲ. ಹಾಗಂತ ಅವಳು ಊರಿನಲ್ಲಿ ಎಲ್ಲರ ಮನೆಗೆ ಹೋಗುತ್ತಿರಲಿಲ್ಲ ಕೆಲವು ಮನೆಗೆ ಮಾತ್ರ ಹೋಗಿ ಒಂದರ್ದ ತಾಸು ಹಾಡು ಹೇಳಿ ವಟವಟ ಎಂದು ಮಾತನಾಡಿ ಅಲ್ಲಿಂದ ಮತ್ತೊಂದು ಮನೆಗೆ ಹೊರಡುತ್ತಿದ್ದಳು. ತೀರಾ ಒತ್ತಾಯ ಮಾಡಿದರೆ ಒಂದು ಲೋಟ ಕಾಫಿ ಕುಡಿಯುತ್ತಿದ್ದಳಷ್ಟೆ.
******************
ನನಗೆ ಒಮ್ಮೊಮ್ಮೆ ಆಕೆಗೆ ಹುಚ್ಚು ಅಂತ ಅನ್ನಿಸುತ್ತಿರಲಿಲ್ಲ. ಆಕೆ ಹೇಳುವ, ಮಾತನಾಡುವ ವಿಧಾನ ಹಾಗಿತ್ತಾದರೂ ಕಳಚಿದ ಕೊಂಡಿ ಸೇರಿಸಿದರೆ ಅದಕ್ಕೊಂದು ಅರ್ಥ ಬರುತಿತ್ತು. ನಡೆದಿದ್ದನ್ನು ನಡೆದಹಾಗೆ ಹಲವು ಬಾರಿ ಹೇಳಿಬಿಡುತ್ತಿದ್ದಳು ಅದು ಹುಚ್ಚಿನ ಮಾತಾಗಿರದೇ ಸತ್ಯದ ಮಾತಾಗಿರುತ್ತಿತ್ತು. ಆದರೆ ಅವಳ ಮಾತಿಗೆ ಅರ್ಥ ಕಲ್ಪಿಸುವವರು ಅವಳನ್ನು ತಮ್ಮ ಅನುಕೂಲಕ್ಕೆ ಹುಚ್ಚಿಯನ್ನಾಗಿಸಿದ್ದರು ಅಂತ ಅನಿಸುತ್ತಿತ್ತು. "ಮಗಳ ಅತ್ತೆ ಮಗಳು ಹೇಳ್ದಂಗೆ ಕೇಳ್ಬೇಕು, ಕಡ್ಡಿ ಮುರಿದರೆ ಬೆಂಕಿ ಹತ್ತೋಕೆ ಏನ್ ತೊಂದ್ರೆ,ಆಸ್ತಿ ಸಿಕ್ಕಿದ್ಮೇಲೆ ಯಾರ ಹಂಗು ಯಾಕೆ, ಕಲ್ಲೂ ಅಂದ್ರೆ ದೇವ್ರು ದೇವ್ರೂ ಅಂದ್ರು ಕಲ್ಲೂ, ತನ್ನ ಸೊಸೆ ಮಾತ್ರಾ ತಾನು ಹೇಳ್ದಂಗೆ ಕೇಳ್ಬೇಕು, ಬಾರೋ ಬಾರೋ ಬಾರೋ ಗಣಪ...." ಎಂಬಂತಹ ಪಣಿಯಕ್ಕಳ ಬಾಯಿಂದ ಹೊರಡುವ ವಾಕ್ಯವನ್ನು ಸರಿಯಾಗಿ ಜೋಡಿಸಿ ಅರ್ಥೈಸಿಕೊಂಡರೆ ಅದೊಂದು ವಾಸ್ತವವನ್ನು ತೋರಿಸುತ್ತಿತ್ತು. ಅಲ್ಲಿ ಬೂಟಾಟಿಕೆ ಇರಲಿಲ್ಲ, ಔಪಚಾರಿಕ ಮಾತುಗಳೂ ಇರಲಿಲ್ಲ, ಆದರೆ ನಿತ್ಯ ಪ್ರಪಂಚದಲ್ಲಿ ಬದುಕಲು ನಾಟಕದ ಅವಶ್ಯಕಥೆ ಇದ್ದುದರಿಂದ ಸರಿಯಿದ್ದವರು ಎಂದು ಅನ್ನಿಸಿಕೊಂಡವರ ಪ್ರಕಾರ ಅದು ಹುಚ್ಚಾಗಿತ್ತು.
ನನಗೆ ಒಮ್ಮೊಮ್ಮೇ ಯೋಚಿಸಿದಾಗ ಪಣಿಯಕ್ಕ ಬೇಕಂತಲೇ ಹೀಗೆ ಆಡುತ್ತಿರಬಹುದಾ ಅಂತ ಅನುಮಾನವೂ ಕಾಡುತ್ತಿತ್ತು. ಪಣಿಯಕ್ಕ ಸುಮಾರು ತನ್ನ ಐವತ್ತೈದನೇ ವರ್ಷಗಳವರೆಗೂ ಎಲ್ಲಾ ಗೃಹಣಿಯರಂತೆ ಅಚ್ಚುಕಟ್ಟಾಗಿ ಸಂಸಾರ ಸಾಗಿಸಿಕೊಂಡು ಬಂದವಳು. ಸಾದು ಸ್ವಭಾವದ ಗಂಡ, ಮದ್ಯಮವರ್ಗದ ಜೀವನಕ್ಕೆ ಸಾಕಾಗುವಷ್ಟು ಅಡಿಕೆ ತೋಟ, ಅರಮನೆಯಲ್ಲದಿದ್ದರೂ ಊರಿನ ಅಂಚಿನಲ್ಲಿ ಪುಟ್ಟದೊಂದು ಮನೆ ಹೀಗೆ ಸುಖೀ ಸಂಸಾರ. ಆದರೆ ಗಂಡ ಹೆಂಡತಿ ಇಬ್ಬರಿಗೂ ಇದ್ದ ಎಕೈಕ ಕೊರಗೆಂದರೆ ಮಕ್ಕಳಿಲ್ಲದಿರುವುದು. ಮಕ್ಕಳಿಲ್ಲದ ಕೊರಗನ್ನು ದಂಪತಿಗಳು ಮನಸ್ಸಿಗೆ ಹಚ್ಚಿಕೊಳ್ಳದೆ ಊರಿನ ಎಲ್ಲಾ ಮಕ್ಕಳ ಮುಖದಲ್ಲಿ ತಮ್ಮ ಮಕ್ಕಳನ್ನು ಕಾಣುತ್ತಿದ್ದರು. ಆ ಮಮತೆ ಪ್ರೀತಿ ಬಾಯಿಮಾತಿಗಿರದೆ ದೀಪಾವಳಿ ಹಬ್ಬದ ವಸ್ತ್ರಡುಕು ಆಚರಣೆಗೆ ಊರಿನ ಎಲ್ಲಾ ಮಕ್ಕಳ ತಲೆ ಎಣಿಸಿ ಅವರ ಅಳತೆಗೆ ಸರಿ ಹೊಂದಿಸುವ ಬಟ್ಟೆ ಕೊಂಡು ವಾರಗಟ್ಟೆಲೆ ಊರಿನ ಏಕೈಕ ಮಹಿಳಾ ಟೈಲರ್ ಲಕ್ಷಮ್ಮನ ಬಳಿ ಹೊಲಿಸಿ ಕೊಡುತ್ತಿದ್ದರು. ಪಣಿಯಕ್ಕಳ ಮನೆಗೆ ಬಂದ ಊರಿನ ಎಲ್ಲಾ ಮಕ್ಕಳೂ ಚಾಕಲೇಟ್ ಇಲ್ಲದೆ ಮರಳುವಂತೆ ಇರಲಿಲ್ಲ. ಅದು ನಿಜವಾದ ಪ್ರೀತಿಯಾದ್ದರಿಂದ ಶಾಲೆಗೆ ರಜ ಇತ್ತೆಂದರೆ ಮಕ್ಕಳ ದಂಡು ಪಣಿಯಕ್ಕಳ ಮನೆಯಲ್ಲಿ ಜಾಂಡಾ ಊರಿಬಿಡುತ್ತಿತ್ತು. ಮಕ್ಕಳ ನಡುವೆ ಮಕ್ಕಳಾಗಿ ಅವರಿಗೆ ಅಚ್ಚರಿಯ ಕಥೆ ಹೇಳುವ ಕೆಲಸ ಪಣಿಯಕ್ಕಳ ಗಂಡ ಮಾಡುತ್ತಿದ್ದರೆ, ಮಕ್ಕಳ ಅಳು ಜಗಳಗಳನ್ನು ಸಂಬಾಳಿಸುವ ಕೆಲಸ ಪಣಿಯಕ್ಕಳಿದ್ದಾಗಿತ್ತು. ಮಂಕುತಿಮ್ಮನ ಕಗ್ಗವನ್ನು ಬಾಯಿಪಾಠ ಮಾಡಿಕೊಂಡಿದ್ದ ದಂಪತಿಗಳು ಊರಿನವರ ಜೀವನ ಜಂಜಡದ ಸಮಸ್ಯೆಗೆ ಕಗ್ಗದ ಉದಾಹರಣೆಯೊಡನೆ ಧೈರ್ಯ ತುಂಬುತ್ತಿದ್ದುದರಿಂದ ಊರಿನ ಹಿರಿಯರಿಗೂ ಅವರ ಮಾತನ್ನು ಮೀರಲಾಗದ ಗೌರವ. ಹೆಂಗಳೆಯರಿಗಂತೂ ಪಣಿಯಕ್ಕಳ ಮಾತು ವೇದವಾಕ್ಯ ಕಾರಣ ಪಣಿಯಕ್ಕಳಿಗೆ ಕನಿಷ್ಟವೆಂದರು ಒಂದು ಸಾವಿರ ಹಾಡುಗಳು ಬಾಯಿಗೆ ಬರುತ್ತಿತ್ತು. ಹಳೆಯ ಹಾಡು ಕಲಿಯುವವರು, ಮತ್ತು ಬರೆದುಕೊಳ್ಳುವವರು ನಿತ್ಯ ಪಣಿಯಕ್ಕಳ ಹಿಂದೆ ಇರುತ್ತಿದ್ದರು.
ಕಾಲ ಎನ್ನುವುದು ಎಲ್ಲವುದಕ್ಕೂ ಒಂದು ಅಂತ್ಯವನ್ನು ಇಟ್ಟಿರುತ್ತದೆಯೆಲ್ಲ. ಅದು ಪಣಿಯಕ್ಕಳ ದಿನಚರಿಯನ್ನು ಬದಲಾಯಿಸುವಂತೆ ಮಾಡಿತು. ಗುಂಡು ಕಲ್ಲಿನಂತೆ ಗಟ್ಟಿಯಾಗಿದ್ದ ಗಂಡ ಅದೇನೋ ತಿಳಿಯದ ಖಾಯಿಲೆಯಿಂದ ಅಕಸ್ಮಾತ್ ತೀರಿಕೊಂಡ. ಪಣಿಯಕ್ಕಳಿಗೆ ದಿಕ್ಕು ತೋಚದಾಗಿದ್ದೇ ಆವಾಗ. ಹಗಲೂ ಕತ್ತಲಿನಂತೆ ಅವಳಿಗೆ ಅನ್ನಿಸತೊಡಗಿತು. ಜೀವನ ಕಗ್ಗತ್ತಿಲಿನ ಕೂಪಕ್ಕೆ ತಳ್ಳಿದಾಗ ವಾಸ್ತವ ಮಾತ್ರ ಉತ್ತರ ನೀಡಬಲ್ಲದು ಎನ್ನುವ ಅರಿವಾಯಿತು.ಊಟ ಸೇರದು, ನಿದ್ರೆ ಬಾರದು ಮನೆಯಲ್ಲಾ ಬಣಬಣ ಅನ್ನಿಸಿ ಈ ಮನೆಯಲ್ಲಿ ಒಂಟಿಯಾಗಿ ತಾನು ಬದುಕಲಾರೆ ಎಂಬ ತೀರ್ಮಾನಕ್ಕೆ ಬಂದಳು. ಹೇಗೂ ಒಂದು ಕುಟುಂಬದ ಜೀವನಕ್ಕಾಗುವಷ್ಟು ಆಸ್ತಿ ಇದೆ, ನಾನು ಇನ್ನೆಷ್ಟು ದಿನ ಬದುಕಿಯೇನು? ನಂತರ ಯಾರೋ ಸಂಬಂಧವಿಲ್ಲದವರ ಪಾಲಾಗುವುದು ಬೇಡವೆಂದು ಅನಾಥರನ್ನು ಹುಡುಕಿ ಕರೆದುಕೊಂಡುಬಂದು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅಂಬ ಆಲೋಚನೆಗೆ ರೂಪುಕೊಡಲು ಪರಿಚಯದವರ ಹತ್ತಿರ "ಯಾರಾದರೂ ಬಡವರು ಇದ್ದರೆ ಹೇಳಿ, ನನಗೂ ಆಸರೆ ಅವರಿಗೆ ಆಸರೆ" ಎಂದಳು. ಆವಾಗ ಸಿಕ್ಕಿದ ದಂಪತಿಗಳೇ ಕಾರಗೋಡು ಮಂಜಪ್ಪ,ಮತ್ತು ಸರಸಮ್ಮ.
ಕಾರಗೋಡು ಮಂಜಪ್ಪ ಸಾಗರದ ಪೇಟೆ ಬೀದಿಯಲ್ಲಿ ಹಳ್ಳಿಗರಿಂದ ವೀಳ್ಯದೆಲೆ ಖರಿದಿ ಮಾಡಿ ಅಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿದ್ದ. ಮದುವೆಗೆ ಮೊದಲು ಉಡುಪಿಯಲ್ಲಿ ಮೋಟಾರ್ ಸೈಕಲ್ ಗ್ಯಾರೇಜ್‌ನಲ್ಲಿ ಮ್ಯಕಾನಿಕ್ ಆಗಿದ್ದ ಮಂಜಪ್ಪ ಅಲ್ಲಿಯ ಬಿಸಿಲಿನ ಜಳ ತನ್ನ ದೇಹಕ್ಕೆ ಒಗ್ಗದೆ ಸಾಗರ ಸೇರಿದ್ದೆ ಎಂದು ಹೇಳುತ್ತಿದ್ದ. ಆದರೆ ನಿಜ ಸಂಗತಿಯೆಂದರೆ ಗ್ಯಾರೇಜ್‌ನ ಪಕ್ಕದ ಮನೆಯ ಕ್ರಿಶ್ಚಿಯನ್ ಹುಡುಗಿಯ ಪ್ರಕರಣ ಅವನನ್ನು ಉಡುಪಿಯನ್ನು ತೊರೆಯುವಂತೆ ಮಾಡಿತ್ತು. ಶೋಕಿ ಜೀವನ ಅಭ್ಯಾಸವಾಗಿದ್ದ ಮಂಜಪ್ಪನಿಗೆ ಸಾಗರಕ್ಕೆ ಬಂದು ಗ್ಯಾರೇಜ್ ಹಾಕಲು ಕೈಯಲ್ಲಿ ದುಡ್ಡಿರಲಿಲ್ಲ, ಹಾಗಂತ ಯಾವುದಾದರೂ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಲು ಮನಸ್ಸಿರಲಿಲ್ಲ. ಕೊನೆಯಲ್ಲಿ ಏನೂ ದಾರಿಕಾಣದೆ ಬಂಡವಾಳವಿಲ್ಲದ ವೀಳ್ಯದೆಲೆ ವ್ಯಾಪಾರ ಶುರುಮಾಡಿದ್ದ. ಆದರೆ ಅದರಿಂದ ಬರುವ ಆದಾಯ ಎರಡು ಮಕ್ಕಳ ನೆಮ್ಮದಿಯ ಸಂಸಾರಕ್ಕೆ ಸಾಲುತ್ತಿರಲಿಲ್ಲ. ಆವಾಗ ಅವನಿಗೆ ಪಣಿಯಕ್ಕಳ ಸುದ್ದಿ ಕಿವಿಗೆ ಬಿತ್ತು. ಪಣಿಯಕ್ಕ ವರಸೆಯಲ್ಲಿ ದೂರದ ಚಿಕ್ಕಮ್ಮನಾಗಬೇಕು ಎಂಬ ಮಾಹಿತಿ ಆತನಿಗೆ ಸಿಕ್ಕಿ, ತಾನು ಸರಿಯಾದ ಜೀವನ ಕಂಡುಕೊಂಡರೆ ಅಲ್ಲಿಯೇ ಎಂದು ತೀರ್ಮಾನಿಸಿ ಓಬಿರಾಯನ ನೆಂಟಸ್ತನವನ್ನು ಮುಂದುಮಾಡಿಕೊಂಡು ಆ ಎಳೆಯ ಆಧಾರದ ಮೇಲೆ ಸಾಗಿ ಪಣಿಯಕ್ಕಳ ಮನೆ ಸೇರಿದ.
ಮಂಜಪ್ಪನ ಹೆಂಡತಿ ಸರಸಮ್ಮ ಮುಗ್ದ ಸ್ವಭಾವದವಳು. ಹೊಸ ದಂಪತಿಗಳ ಪ್ರವೇಶವಾಗಿ ಮೊದಲನೇ ವರ್ಷ ಎಲ್ಲವೂ ಸಸೂತ್ರವಿತ್ತು. ಪಣಿಯಕ್ಕ ತನ್ನ ಪಾಡಿಗೆ ಊರಿನ ಮಕ್ಕಳೊಡನೆ ನಲಿಯುತ್ತಾ, ದೇಹವೆಂಬುದು ಕುದುರೆ ಆತ್ಮನದರಾರೋಹಿ .......ಎನ್ನುವ ಕಗ್ಗವನ್ನು ಗುಣುಗುಣಿಸುತ್ತಲೋ ಅಥವಾ ಹಾಡುತ್ತಲೋ ಮೊದಲಿನಂತೆ ಇದ್ದಳು. ನಂತರದ ದಿನಗಳಲ್ಲಿ ಮಂಜಪ್ಪನ ಬೇರು ಗಟ್ಟಿಯಾಗತೊಡಗಿತು. ಮನೆಗೆ ಬರುವ ಮಕ್ಕಳಿಗೆ ಮಂಜಪ್ಪ ಗದರಿಸತೊಡಗಿದ, ಪಣಿಯಕ್ಕ ಕೇಳಿದರೆ ಅವು ದುಡ್ಡು ಕದಿಯುತ್ತವೆ ಅಂತ ಸುಳ್ಳು ಹೇಳಿದ. ಮಂಜಪ್ಪನ ಅಹಂಕಾರದ ಸ್ವಭಾವದಿಂದ ನಿಧಾನ ಪಣಿಯಕ್ಕಳ ಮನೆಗೆ ಜನ ಬರುವುದು ಕಡಿಮೆಯಾಯಿತು. ನಿಧಾನ ತಮ್ಮ ಮನೆಗೆ ಮಕ್ಕಳು ಊರಿನವರು ಬಾರದಿದ್ದುದನ್ನು ಮನಗಂಡ ಪಣಿಯಕ್ಕ ತಾನೇ ಜನರ ಬಳಿ ಹೋಗತೊಡಗಿದಳು. ಪಣಿಯಕ್ಕ ಜನರ ಬಳಿ ಹೊರಟಾಗ ಮಂಜಪ್ಪನ ಒಂದೊಂದೇ ಅವತಾರದ ಪರಿಚಯವಾಗತೊಡಗಿತು. "ಅಲ್ಲಾ... ಪಣಿಯಕ್ಕ ಹೋಗಿ ಹೋಗಿ ಊರಿಗೆ ಒಂದು ಮಾರಿ ತಂದು ಹಾಕಿದ್ಯಲ್ಲೇ, ನಮ್ಮ ಮನೆ ಜಾಗ ತನಗೆ ಸೇರ್ತದೆ ಅಂತ ನಿಮ್ಮನೆ ಮಂಜಪ್ಪ ಕೋರ್ಟಿಗೆ ಹೋಗಿದಾನಲ್ಲೇ".ಅಂತಲೋ ಅಥವಾ " ಅಲ್ಲಾ ಪಣಿಯಕ್ಕ ನಿನ್ನ ಮಂಜಪ್ಪ ಉಡುಪಿಯಲ್ಲಿ ಅದ್ಯಾರೋ ಕ್ರಿಶ್ಚಿಯನ್ ಹುಡುಗಿ ಹತ್ರ ಹೊಡೆತ ತಿಂದ್ನಂತಲ್ಲೇ".ಎಂದೋ ಅಥವಾ "ನಿನ್ನ ಮಂಜಪ್ಪ ಬೆಂಗಳೂರಿಗೆ ಕ್ರಿಶ್ಚಿಯನ್ ಆಗೋದಕ್ಕೆ ಹೋಗಿದ್ನಂತಲ್ಲೇ, ನೀನು ಆಸ್ತಿ ಅವನಿಗೆ ಬರೆದುಕೊಡದಿದ್ರೆ ಕೋರ್ಟಿಗೆ ಹೋಕ್ತಾನಂತಲ್ಲೆ" ಎಂದು ಕೇಳತೊಡಗಿದಾಗ ಪಣಿಯಕ್ಕಳಿಗೆ ತಾನು ನಿಂತಲ್ಲೇ ಭೂಮಿ ಕುಸಿಯಬಾರದೇ ಅಂತ ಅನ್ನಿಸತೊಡಗಿತು. ಊರಿಗೆ ಊರೇ ಮೆಚ್ಚುವಂತೆ ಬದುಕಿದ್ದ ತನ್ನನ್ನು ಇಂಥಾ ಪರಿಸ್ಥಿತಿಯಲ್ಲಿ ತಂದಿಟ್ಟೆಯಲ್ಲಾ ದೇವರೆ ಎಂದು ಪಣಿಯಕ್ಕ ಕೊರಗತೊಡಗಿದಳು. ಮಂಜಪ್ಪನ ರಾಕ್ಷಸ ಸ್ವಭಾವನ್ನು ಸಹಿಸಲೂ ಆಗದೆ ಊರಿನವರಿಗೆ ಮುಖ ತೋರಿಸಲೂ ಆಗದೆ ದಿನದಿಂದ ದಿನಕ್ಕೆ ಪಣಿಯಕ್ಕಳ ಮನಸ್ಸು ದೇಹ ಹದಗೆಡುತ್ತಾ ಹೋಯಿತು. ಆಗೆಲ್ಲಾ ಮಂಜಪ್ಪನ ಹೆಂಡತಿ ಸರಸಮ್ಮ ಪಣಿಯಕ್ಕಳನ್ನು ತಾಯಿಗಿಂತ ಹೆಚ್ಚಾಗಿ ನೋಡಿಕೊಂಡರೂ ಪಣಿಯಕ್ಕಳ ಸ್ಥಿತಿ ಬಿಗಡಾಯಿಸುತ್ತಲೇ ಹೋಗಿ ಅತೀವ ಜ್ವರದಿಂದ ಹಾಸಿಗೆ ಹಿಡಿಯುವಂತಾಯಿತು.
ಇದೇ ಸಮಯ ಎಂದು ಜ್ವರದ ತಾಪದಿಂದ ನರಳತೊಡಗಿದ್ದ ಪಣಿಯಕ್ಕಳ ಹೆಬ್ಬೆಟ್ಟಿಗೆ ಮಂಜಪ್ಪ ಕೈ ಹಾಕಿದ. ಮಂಚದ ಮೇಲೆ ಮಲಗಿದ ಪಣಿಯಕ್ಕಳ ಹೆಬ್ಬೆಟ್ಟನ್ನು ಇಂಕ್ ಪ್ಯಾಡಿಗೆ ಒತ್ತಿಸಿ ಕೊಂಡು ಇನ್ನೇನು ಸ್ಟಾಂಪ್ ಪೇಪರ್ ಮೇಲೆ ಒತ್ತಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಪಣಿಯಕ್ಕ ದಡಕ್ಕನೆ ಎದ್ದು ಸುಡುತ್ತಿರುವ ಜ್ವರದ ತಾಪದ ನಡುವೆಯೂ ಊರಿನ ನಡುವೆ ಕೂಗುತ್ತಾ ಓಡಿದಳು. ಅಂದಿನಿಂದ ಇಂದಿನ ವರೆಗೂ ಪಣಿಯಕ್ಕ ಹಾಗೆಯೇ ಓಡಾಡುತ್ತಲೇ ಇರುತ್ತಾಳೆ, ಮತ್ತು ಮಾತನಾಡುತ್ತಲೇ ಇರುತ್ತಾಳೆ. ಮತ್ತು ಅವಳ ಕೊಂಡಿಯಿಲ್ಲದಂತೆ ಕಾಣುವ ಮಾತಿನ ನಡುವೆ ಮಂಜಪ್ಪನ ಕಥೆ ಸ್ಪಷ್ಟವಾಗಿ ಬಿಚ್ಚಿಕೊಳ್ಳುತ್ತದೆ.
ನನಗೆ ಇಂದೂ ಅನ್ನಿಸುತ್ತದೆ ಪಣಿಯಕ್ಕ ಹುಚ್ಚಿಯಲ್ಲ, ಆದರೆ ನಾನೂ ಎಲ್ಲರೆದುರು ಹಾಗೆ ಹೇಳಲಾರೆ ಕಾರಣ ಮಂಜಪ್ಪನ ಕೈಯಲ್ಲಿ ಈಗ ಬೇಕಾದಷ್ಟು ದುಡ್ಡಿದೆ ಮತ್ತು ಪಣಿಯಕ್ಕ ಹುಚ್ಚಿಯೆಂದು ಆತ ಹೇಳಿದ್ದಾನೆ, ಮತ್ತು ಊರು ಕೂಡ ಹಾಗೆ ಹೇಳುತ್ತಿದೆ. ಹಾಗೂ ತನಗೆ ಈ ಅವಸ್ಥೆಯೇ ಒಳ್ಳೆಯದೂ ಎಂದು ಪಣಿಯಕ್ಕನೂ ಒಪ್ಪಿಕೊಂಡಿದ್ದಾಳೆ!.

No comments: