ಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೊಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು ನಿಲ್ಲಿಸುವ ಪರಿ ತಿಳಿಯದೆ ಪರದಾಡತೊಡಗಿದ. ಎದುರು ಕುಳಿತ ಸ್ವಾಮೀಜಿಯ ಕಣ್ಣುಗಳನ್ನು ದುರುಗುಟ್ಟಿ ನೋಡಿದ. ಐದು ನಿಮಿಷಕ್ಕೆ ಮೊದಲು ಫಲತಾಂಬೂಲ ಅರ್ಪಿಸಿ ಪಾದಕ್ಕೆ ಎರಗುವಾಗಿನ ಮುಖಭಾವ ಈಗಿರಲಿಲ್ಲ. ಕಣ್ಣುಗಳು ಕೆಂಪೇರತೊಡಗಿತು. ಹೊಕ್ಕುಳಬಳ್ಳಿ ಛಳಕ್ಕೆಂದಿತು.ಗಂಟಲಿನಾಳಾದಿಂದ ಧ್ವನಿ ಹೊಮ್ಮತೊಡಗಿತು.
"ನಮ್ಮಂತೆ ಮನುಷ್ಯರು ನೀವು, ಕಾವಿ ಬಟ್ಟೆ ಉಟ್ಟಾಕ್ಷಣ ಬೇರೆಯಾಗುವ ಬಗೆ ಹೇಗೆ. ನಮ್ಮಷ್ಟೆ ದುಡ್ಡಿನ ವ್ಯಾಮೋಹ ನಿಮಗೆ. ದುಡ್ಡಿಲ್ಲದ ಕ್ಷಣವನ್ನು ನೀವೂ ನಮ್ಮಂತೆ ಊಹಿಸಿಕೊಳ್ಳಲಾರಿರಿ. ಜೀವನದ ಅಭದ್ರತೆ ನಮ್ಮಂತೆ ನಿಮಗೂ ಕಾಡುತ್ತದೆ. ಯಾಕೆ? ಅಷ್ಟೇ ಯಾಕೆ? ಸ್ವಪ್ನ ಸ್ಖಲನ ನಿಮಗೂ ಆಗಿಲ್ಲವೇನು?. ಆವಾಗ ಸುಂದರ ಸ್ತ್ರೀ ನಿಮ್ಮ ಕನಸಿನಲ್ಲಿಯೂ ಬರಲಿಲ್ಲವೇನು?. ಸ್ಖಲನವಾಗಲಿಲ್ಲ ಎಂದು ನನ್ನ ಬಳಿ ಸುಳ್ಳು ಹೇಳಬೇಡಿ, ಆಗದಿದ್ದರೆ ಅದು ಪ್ರಕೃತಿಗೆ ವಿರುದ್ಧವಾದ ಕ್ರಿಯೆ. ಆವಾಗ ನೀವು ಮುವತ್ತೈದನೇ ವಯಸ್ಸಿನೊಳಗೆ ಇಹಲೋಕ ತ್ಯಜಿಸಲೇಬೇಕಿತ್ತು." ಹೀಗೆ ಮುಂದುವರೆಯುತ್ತಲೇ ಇತ್ತು.
ಸ್ವಾಮೀಜಿಗಳ ಶಿಷ್ಯ ಕೋಠಿ ಒಮ್ಮೆ ಭ್ರಮಿಸಿತಾದರೂ ನಂತರ ಎಚ್ಚೆತ್ತುಕೊಂಡು ಅವನನ್ನು ಹೆಚ್ಚುಕಮ್ಮಿ ಹೊತ್ತುಕೊಂಡು ಆಚೆ ಬಿಟ್ಟಿತು. ಗಣ್ಯ ವ್ಯಕ್ತಿಯಾದ್ದರಿಂದ ಧರ್ಮದೇಟು ಬೀಳಲಿಲ್ಲ, ಸಾರ್ವಜನಿಕರ ದೃಷ್ಟಿಯಲ್ಲಿ ಅವನಿಗೆ ಮಾನಸಿಕ ರೋಗಿಯ ಪಟ್ಟ ದೊರಕುವ ಲಕ್ಷಣ ನಿಚ್ಚಳವಾಗತೊಡಗಿತು.
ಹಾಗಂತ ಅವನೇನು ಹುಚ್ಚನಲ್ಲ, ಮಾನಸಿಕ ರೋಗಿಯೂ ಅಲ್ಲ. ಎಲ್ಲರಂತೆ ಸಾಮಾನ್ಯನೂ ಅಲ್ಲ. ಇಡೀ ತಾಲ್ಲೂಕಿನಲ್ಲಿ ಅವನದ್ದೆ ಆದ ಹೆಸರು ಗಳಿಸಿದ್ದ. ಇಪ್ಪತ್ತು ವರ್ಷಗಳಿಂದ ಹಲವಾರು ಸಂಘಸಂಸ್ಥೆಗಳಲ್ಲಿ, ಮಠ ಮಾನ್ಯಗಳಲ್ಲಿ ದುಡಿದು ಜನನಾಯಕ ಎನಿಸಿಕೊಂಡಿದ್ದ.ಇದೇ ವೇಗದಲ್ಲಿ ಮುನ್ನುಗ್ಗಿದರೆ ಆತ ಶಾಸಕನೂ ಆಗಬಹುದೆಂಬ ಮಾತು ತಾಲ್ಲೂಕಿನಾದ್ಯಂತ ಪ್ರಚಾರದಲ್ಲಿತ್ತು.ನಲವತ್ತರ ಸಣ್ಣ ವಯಸ್ಸಿನಲ್ಲಿ ಅವನಿಗೆ ಸಿಕ್ಕ ಜನಮನ್ನಣೆಗೆ ಹಲವಾರು ಜನರು ಕರುಬುತ್ತಿದ್ದರು. ಆದರೆ ಅಷ್ಟರಲ್ಲಿ ಈ ತರಹದ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕು ಪರಿಹಾರ ಕಾಣದೆ ಮಿಸುಕಾಡುತ್ತಿದ್ದ.
ಮೊದಲ ಬಾರಿ ಈ ರೀತಿ ಅನುಭವವಾದಾಗ ಆತ ಬಹಳ ಜನರ ಪ್ರತಿಭಟನೆ ಎದುರಿಸಬೇಕಾಯಿತು.ಅಡಿಕೆದರದ ಕುಸಿತಕ್ಕೆ ಬೆಂಬಲ ಬೆಲೆ ನೀಡುವುದರ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆಯೊಂದರಲ್ಲಿ ಭಾಷಣ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಒಂದರ ಹಿಂದೆ ಒಂದರಂತೆ ಆಲೋಚನೆಗಳು ನಿರಂತರವಾಗಿ ಮೂಡಿ ಬರತೊಡಗಿದವು. ಎಲ್ಲವನ್ನೂ ದೊಡ್ಡದಾಗಿ ಕೂಗಿ ಹೇಳಬೇಕೆನಿಸಿತು. ತಲೆ ಸಿಡಿದು ಹೋಗುತ್ತಿರುವ ಅನುಭವ ತಡೆಯಲಾರದೆ
" ಮಹನೀಯರೆ ಅಡಿಕೆಗೆ ಈಗಾಗಲೆ ಇರುವ ದರ ಸಾಕಷ್ಟಿದೆ, ಬೆಲೆ ಹೆಚ್ಚಾದಾಗ ನಾವು ಸರ್ಕಾರಕ್ಕೆ ಕೊಡುವುದಿಲ್ಲ.ಕಡಿಮೆಯಾದಾಗ ಕೇಳಬಾರದು. ಇಷ್ಟಕ್ಕೂ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಅಡಿಕೆಯಿಂದ ಹಾನಿಯೇ ಹೊರತು ಪ್ರಯೋಜನವಿಲ್ಲ. ಅಡಿಕೆ ತಂಬಾಕಿನೊಂದಿಗೆ ಸೇರಿದ ಕಾರಣಕ್ಕೆ ಅದಕ್ಕೊಂದು ಬೆಲೆ. ಗುಟ್ಕಾದ ಸೇವನೆಯಿಂದ ನಮ್ಮ ಯುವಜನತೆಯ ದೇಹ ರೋಗಗಳ ಗೂಡಾಗುತ್ತಿದೆ. ನಮ್ಮ ಮಕ್ಕಳು ಅಡಿಕೆ ತಿಂದರೆ ಅಡಿಕೆ ಬೆಳೆಗಾರರಾದ ನಾವು ಹೊಡೆಯುತ್ತೇವೆ. ಹಾಗಿದ್ದ ಮೇಲೆ ಬೇರೆಯವರು ತಿಂದು ಹಾಳಾಗಲಿ ಎಂದು ಬಯಸುವುದು ಶುದ್ಧ ತಪ್ಪು.ಇಲ್ಲಿ ಸೇರಿರುವ ಅಡಿಕೆ ಬೆಳೆಗಾರರಲ್ಲಿ ಅವರು ಸ್ವತಃ ಉಪಯೋಗಿಸುವ ಅಡಿಕೆ ಎಷ್ಟು?.ಅವರೇಕೆ ಉಪಯೋಗಿಸುವುದಿಲ್ಲ. ಯೋಚಿಸಿ ಅಡಿಕೆ ತಂಬಾಕುಗಳಂತಹ ಸಮಾಜದ ಆರೋಗ್ಯ ಹಾಳುಮಾಡುವ ಬೆಳೆಗಳನ್ನು ನಿಷೇಧಿಸಬೇಕು. ಆಹಾರ ಪದಾರ್ಥಗಳನ್ನು ಬೆಳೆಯುವ ಭತ್ತದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅವರಿಗೆ ಸರ್ಕಾರದಿಂದ ಸಹಾಯಧನ ನಿಡಬೇಕು.ಅಡಿಕೆಗೆ ತೆರಿಗೆ ಹಾಕಿ ಆ ಹಣವನ್ನು ಆಹಾರ ಪದಾರ್ಥ ಬೆಳೆಯುವ ರೈತರಿಗೆ ನೀಡಬೇಕು"
ಅವನಿಂದ ಓತಪ್ರೋತವಾಗಿ ಹರಿದುಬರುತ್ತಿತ್ತು. ಅಡಿಕೆಗೆ ಬೆಂಬಲ ನೀಡುವುದಕ್ಕಾಗಿ ಸೇರಿದ್ದ ಸಭೆಯಲ್ಲಿ ಅಡಿಕೆಬೆಳೆಗಾರರೇ ಜಾಸ್ತಿ ಇದ್ದುದರಿಂದ ಅವನನ್ನು ಅಲ್ಲಿಂದ ಆಚೆ ಕರೆದುಕೊಂಡುಹೋಗುವುದಕ್ಕೆ ಪರದಾಟ ಪಡುವಂತಾಯಿತು. ಸಭಿಕರು ಕೈಗೆ ಸಿಕ್ಕ ವಸ್ತುಗಳನ್ನು ಅವನತ್ತ ಎಸೆದರು.ಅದೃಷ್ಟವಶಾತ್ ಅವನಿಗೆ ಅದು ತಗುಲಲಿಲ್ಲ.
ಸಭೆಯಲ್ಲಿ ಅಷ್ಟು ಹೇಳಿದ ನಂತರ ಅವನ ಮನಸ್ಸಿನ ಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ನಂತರ ತನ್ನಿಂದಾದ ಪ್ರಮಾದದ ಅರಿವಾಯಿತು. ತಾನು ಸಭೆಯಲ್ಲಿ ಹೇಳಿದ ಮಾತುಗಳನ್ನು ಒಮ್ಮೆ ಜ್ಞಾಪಿಸಿಕೊಂಡ "ಅರೆ ನಿಜ ತಾನು ಸಭೆಯಲ್ಲಿ ಹೇಳಿದ್ದು ಸತ್ಯ. ಹೇಳಬಾರದ ಸತ್ಯವಲ್ಲ ಆದರೆ ಅಲ್ಲಿ ಅದು ಕಹಿ ಸತ್ಯ. ಇದೊಂದೇ ಕಾರಣದಿಂದ ಅಡಿಕೆ ಬೆಳೆಗಾರರ ವಕ್ರದೃಷ್ಟಿಗೆ ಗುರಿಯಾದೆನಲ್ಲ ಇಪ್ಪತ್ತು ವರ್ಷಗಳ ಶ್ರಮ ಮಣ್ಣುಪಾಲಾಯಿತಲ್ಲ " ಎಂದು ವ್ಯಥೆಪಟ್ಟ.
ನಂತರ ಒಬ್ಬನೆ ಕುಳಿತು ಆ ಕ್ಷಣದ ಯೋಚನೆ ಮಾಡಿದಾಗೆಲ್ಲಾ ಅವನಿಗೆ ಭಯವಾಗುತ್ತಿತ್ತು. ತನ್ನ ನಿಯಂತ್ರಣದಲ್ಲಿಲ್ಲದ ಇದು ಖಾಯಿಲೆಯಾ ಎಂಬ ಚಿಂತೆ ಅವನನ್ನು ಕಾಡಿತು. ಛೆ ತನ್ನಂತ ದೃಢಮನಸ್ಸಿನವನಿಗೆ ಇಪ್ಪತ್ತು ವರ್ಷಗಳಿಂದ ನೂರಾರು ಸ್ವಭಾವದ ಸಾವಿರಾರು ಜನರೊಂದಿಗೆ ವ್ಯವಹರಿಸಿದವನಿಗೆ ಖಾಯಿಲೆ ಅದೂ ಮಾನಸಿಕೆ ಖಾಯಿಲೆ ಸಾಧ್ಯವೆ ಇಲ್ಲ ಎಂದು ಸಮಾಧಾನ ಮಾಡಿಕೊಂಡರೂ ಮರುಕ್ಷಣ ನೆನಪುಗಳು ಕಾಡುತ್ತಿತ್ತು. ಆ ತರಹದ ಯೋಚನೆಗಳು ಸ್ವಲ್ಪ ದಿನ ಕಾಡಿ ನಂತರ ಮಾಯವಾಯಿತು. ಅಷ್ಟರಲ್ಲಿ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದರಿಂದ ಜನರೂ ಅದನ್ನು ಮರೆತರು.
ಎರಡನೆ ಸಲ ಹೊಕ್ಕುಳ ಬಳ್ಳಿ ಛಳಕ್ಕೆಂದಾಗ ಆತ ಸ್ವಾಮೀಜಿಗಳೊಂದಿಗೆ ಪ್ರಮುಖವಾದ ವಿಷಯದ ಸಂವಾದದಲ್ಲಿದ್ದ. ಜನರು ಈ ಬಾರಿ ಮಾತ್ರ ಕ್ಷಮಿಸಲಿಲ್ಲ. ಗುರುದ್ರೋಹಿ ಎಂದರು,ಬಹಿಷ್ಕಾರ ಹಾಕುವ ಪ್ರಸ್ತಾಪವೂ ಬಂತು, ಸ್ವಾಮೀಜಿಗಳ ಬಳಿ ನಿಯೋಗವೊಂದು ಹೋಯಿತು. ಅದರ ನೇತ್ರತ್ವವನ್ನು ಅವನ ಏಳ್ಗೆಯನ್ನು ಸಹಿಸಲಾರದವನೊಬ್ಬ ವಹಿಸಿದ್ದ. ಗುರುಗಳಿಗೆ ಹೇಳಬಾರದ್ದನ್ನೆಲ್ಲಾ ಹೇಳಿದ ಆತನ ವರ್ತನೆಯನ್ನು ಖಂಡಿಸಿದರು, ಅವನಿಗೆ ಮಠದಲ್ಲಿ ನೀಡಲಾದ ಹುದ್ದೆಯನ್ನು ವಾಪಾಸುಪಡೆದು ಸಮಾಜದಿಂದ ಆತನನ್ನು ಹೊರಗಟ್ಟುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು. ಆದರೆ ಸ್ವಾಮೀಜಿಗಳು ಮಾತ್ರಾ ಮುಗುಳ್ನಕ್ಕು ನಿಯೋಗದ ಕ್ರಮವನ್ನು ಅನುಷ್ಠಾನಗೊಳಿಸದೆ ಅವರಿಗೆ ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರು. ಸ್ವಾಮೀಜಿಯ ವರ್ತನೆ ನಿಯೋಗದವರಿಗೆ ಅರ್ಥವಾಗದಿದ್ದರೂ ಸ್ವಾಮಿಜಿಗೆ ಅವನಾಡಿದ ನಗ್ನ ಸತ್ಯದ ಮಹತ್ವ ತಿಳಿದಿತ್ತು.
ಅವನಿಗೆ ಕುಳಿತಲ್ಲಿ ನಿಂತಲ್ಲಿ ನಿಯಂತ್ರಣ ಮೀರಿದ ತನ್ನ ವರ್ತನೆಯ ಭಯ ಆವರಿಸತೊಡಗಿತು. ಸ್ವಾಮೀಜಿಯ ಬಳಿ ಕ್ಷಮಾಪಣೆ ಕೇಳಲು ಅವನು ಸಿದ್ಧನಿದ್ದ ಆದರೆ ಸ್ವಾಮೀಜಿಯ ಪರಿವಾರ ಇವನನ್ನು ಮಠದ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಸ್ವಾಮೀಜಿ ದರ್ಶನಕ್ಕೆ ಪೂರ್ಣ ಪ್ರಮಾಣದ ಮನಸ್ಸಿನಿಂದ ಆತನಿಗೆ ಹೋಗಲು ಧೈರ್ಯವಿರಲಿಲ್ಲ. ಮತ್ತೆ ಮೊದಲಿನಂತೆ ಆದರೆ ಎಂಬ ಹೆದರಿಕೆ. ಮನೋವೈದ್ಯರ ಭೇಟಿ ಮಾಡುವುದೇ ಸರಿಯಾದ ಕ್ರಮ ಎಂದು ಪರಿಚಯದವರೊಬ್ಬರು ಸಲಹೆ ಇತ್ತರು. ತಾನು ಮನೋರೋಗಿ ಅಂತ ಸಮಾಜ ಪರಿಗಣಿಸಿಬಿಡಬಹುದೆಂಬ ಭಯ ಇದ್ದರೂ ಸಲಹೆ ತಿರಸ್ಕರಿಸಲು ಆಗದೆ ಒಪ್ಪಿಕೊಂಡ.
ಮರುಕ್ಷಣ ಆತನಿಗೆ ಅನಿಸಿತು. ನನ್ನ ವರ್ತನೆಯಲ್ಲಿ ತಪ್ಪೇನಿದೆ?. ನಾನಾಡಿದ ಮಾತುಗಳು ಪಥ್ಯವಾಗದಿರಬಹುದು ಆದರೆ ಸತ್ಯವಂತೂ ಹೌದು.ಎಷ್ಟೊಂದು ದಿವಸಗಳಿಂದ ನಿಜವಾದ ಪ್ರಪಂಚದ ಕುರಿತು ಮನದೊಳಗೆ ಹೀಗೆಯೇ ಯೋಚಿಸುತ್ತಿರಲಿಲ್ಲವೇ? ಡಂಬಾಚಾರದ ಬಗ್ಗೆ ಚಿಂತಿಸಿರಲಿಲ್ಲವೆ? ಈಗ ಅದನ್ನು ಹೇಳಿಯಾಗಿದೆ ಅಷ್ಟೆ....... ಹೌದು ತಪ್ಪಿದ್ದೇ ಅಲ್ಲಿ "ನ ಬ್ರೂಯಾತ್ ಸತ್ಯಮಪ್ರಿಯಂ" ಹೈ ಸ್ಕೂಲಿನಲ್ಲಿ ಸಂಸ್ಕೃತ ಮೇಷ್ಟು ಹೇಳಿಕೊಟ್ಟ ಶ್ಲೋಕದ ಸಾಲುಗಳು ನೆನಪಾದವು. ಹಾಗಂದಮೇಲೆ ನನ್ನಲ್ಲೇನೋ ದೋಷವಿದೆ ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಮನೋವೈದ್ಯರಬಳಿ ತೆರಳಿದ.
ಈಗ ಬೆಳಿಗ್ಗೆ ಮೂರು ಮಾತ್ರೆಗಳೊಂದಿಗೆ ಅವನ ದಿನಚರಿ ಆರಂಭವಾಗುತ್ತಿತ್ತು ರಾತ್ರಿ ಮೂರು ಮಾತ್ರೆಗಳೊಂದಿಗೆ ಮುಗಿಯುತ್ತಿತ್ತು.ದಿನದ ಹೆಚ್ಚಿನ ಭಾಗ ನಿದ್ರೆಯಲ್ಲಿ ಕಳೆಯುತ್ತಿತ್ತು. ಯೋಚನೆಗಳೆ ಬರುತ್ತಿರಲಿಲ್ಲ ಇನ್ನು ಹೇಳುವುದೆಲ್ಲಿ.ಆದರೆ ಅದೂ ಕೂಡ ಹೆಚ್ಚು ದಿನಗಳ ಕಾಲ ತಡೆಯಲಿಲ್ಲ.
ಮೂರು ತಿಂಗಳ ನಂತರ ಅವನ ತಂದೆಯ ಶ್ರಾಧ್ದದ ದಿನ ಮತ್ತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಈಗ ಮಾತಿನಲ್ಲಿ ಮೊದಲಿನಷ್ಟು ಗಡಸುತನವಿರಲಿಲ್ಲ. ನಿಧಾನವಾದರೂ ಓತಪ್ರೋತವಾಗಿ ಮಾತುಗಳು ಹೊರಬರುತ್ತಿತ್ತು.ಈ ಬಾರಿ ಶ್ರಾದ್ಧ ಮಾಡಿಸಲು ಬಂದ ಪುರೋಹಿತರು ಅವನ ಧಾಳಿಗೆ ತುತ್ತಾಗಿದ್ದರು.
" ನೀವು ಪುರೋಹಿತರುಗಳೆಂದರೆ ದೇವರ ಏಜೆಂಟರಾ? "ಮಾತೃ ದೇವೋಭವ ಪಿತೃ ದೇವೋ ಭವ" ಎಂದು ಆಶೀರ್ವದಿಸುವ ನೀವು ನಿಮ್ಮ ತಂದೆತಾಯಿಂದರನ್ನು ಕಾಲಿನ ಕಸಕ್ಕಿಂತ ಕಡೆಗಾಣಿಸುವುದೇಕೆ. ನೀವೇನೂ ವೇದ ಓದಿಲ್ಲವಾ ,ಅಥವಾ ವೇದದಲ್ಲಿಯೂ ಹಾಗೆ ಇದೆಯಾ, ನಿಮ್ಮ ಹತ್ತಿರ ಆಚರಣೆ ಮಾಡಲಾಗದ್ದನ್ನು ಅದೇಕೆ ಬೇರೆಯವರಿಗೆ ಹೇಳುತ್ತೀರಿ?. ನಾನು ದುಡ್ದು ಕೊಟ್ಟರೆ ನಿಮ್ಮ ಶಾಸ್ತ್ರ ಬೇಕಾದ ಹಾಗೆ ಬದಲಾಗುತ್ತದೆಯಲ್ಲವೆ. ನಿಮ್ಮ ಶಿಷ್ಯ ಸಮೂಹಕ್ಕೆ ಖಾಯಿಲೆ ಬಂದಾಗ ಮೃತ್ಯುಂಜಯ ಹವನ ಮಾಡಿಸಿ ಎನ್ನುವ ನೀವು ನಿಮಗೆ ಖಾಯಿಲೆ ಬಂದಾಗ ಡಾಕ್ಟರ ಬಳಿ ಓಡುವುದೇಕೆ?.ಇವೆಲ್ಲಾ ಅಮಾಯಕರನ್ನು ನಂಬಿಸಿ ಮಾಡುವ ಸುಲಿಗೆಯಲ್ಲವೆ?. ಅದು ಕಲ್ಲೆಂದು ನಿಮಗೆ ಗೊತ್ತಿದ್ದೂ ಜನರ ಬಳಿ ಸುಳ್ಳು ಹೇಳುವುದೇಕೆ?. ನೀವು ನಂಬದೆ ಪರರನ್ನು ನಂಬಿಸಿ ಹಣ ಕೀಳುವುದಕ್ಕಿಂತ ದರೋಡೆ ಮಾಡಿ"
ಆವತ್ತು ಶ್ರಾದ್ಧ ನಡೆಯಲಿಲ್ಲ. ಪುರೋಹಿತರು ಸಿಟಗೊಂಡು ಹೋದಮೇಲೆ ಶ್ರಾಧ್ದ ಮಾಡಿಸಲು ಮತ್ಯಾರೂ ಸಿಗಲಿಲ್ಲ. ಮನೆಯವರೆಲ್ಲಾ ಖಂಡಿತಾ ಏನೋ ಅನಾಹುತ ಆಗುತ್ತದೆ ಎಂದು ಕಾದರು ಆದರೆ ಏನೂ ಆಗಲಿಲ್ಲ. ಕಡುಬು ಕಜ್ಜಾಯಗಳನ್ನು ಕಾಗೆಗೆ ಹಾಕಿದರು,ಗೋಗ್ರಾಸ ನೀಡಿದರು ಮತ್ತು ಎಲ್ಲರೂ ರಾತ್ರಿ ಊಟ ಮಾಡಿದರು. ಪ್ರತಿನಿತ್ಯದಂತೆ ಸೂರ್ಯಮುಳುಗಿದ ಹಾಗು ಕತ್ತಲಾಯಿತು.
ಆದರೆ ಅವನಿಗೆ ತನ್ನ ಪರಿಸ್ಥಿತಿ ಕಂಡು ಮರುಗುವಂತಾಯಿತು. ತನಗೆ ಶ್ರಾದ್ಧ ಮಾಡು ಅಂತೇನು ಪುರೋಹಿತರು ಹೇಳಿರಲಿಲ್ಲ. ತಾನಾಗಿಯೇ ಅವರನ್ನು ಮನೆಗೆ ಕರೆದು ಅವಮಾನ ಮಾಡಿದೆನಲ್ಲಾ ಎಂಬ ಕೊರಗು ಕಾಡಲು ಶುರುವಾಯಿತು. ಜನರು ಅವರಾಗಿಯೇ ಇಷ್ಟಪಡುವುದರಿಂದ, ಹಾಗು ಅದರಿಂದ ಮಾನಸಿಕ ನೆಮ್ಮದಿ ಹೊಂದುವುದರಿಂದ ತಾನೆ ಪುರೋಹಿತರು ಕಾರ್ಯಕ್ರಮ ಮಾಡಿಸುವುದು. ಜನರು ಕರೆಯದಿದ್ದರೆ ಅವರೇಕೆ ಬರುತ್ತಾರೆ? ಇದರಲ್ಲಿ ಪುರೋಹಿತರ ತಪ್ಪೇನಿದೆ?. ನಿಜ ಅವೆಲ್ಲಾ ತಾನು ಹೇಳಬಾರದಿತ್ತು. ಇಷ್ಟು ವರ್ಷಗಳ ಕಾಲ ಇವೆಲ್ಲಾ ಗೊತ್ತಿದ್ದೂ ಹೇಳಿರಲಿಲ್ಲ. ಈಗ ಇದು ತನ್ನ ಕೈಮೀರಿದ ನಡವಳಿಕೆ ಆದರೆ ತನ್ನ ಪರಿಸ್ಥಿತಿ ಯಾರಿಗೂ ಅರ್ಥವಾಗುವುದಿಲ್ಲವಲ್ಲ?. ರಾತ್ರಿಯೆಲ್ಲಾ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದ. ಆದರೆ ಕಾಲಮಿಂಚಿತ್ತು, ಹೇಳಬಾರದ ಅಂತರಂಗದ ಸಂಗತಿ ಎಲ್ಲಾ ಹೇಳಿಯಾಗಿತ್ತು.
ಅವನು ಈ ಬಾರಿ ಪುರೋಹಿತರನ್ನು ಕರೆದು ಅವಮಾನ ಮಾಡಿದ್ದರಿಂದ ಬಹಳಷ್ಟು ಜನರ ವಿರೋಧ ಎದುರಿಸಬೇಕಾಯಿತು. ಕೆಲವರಂತೂ ಅವನಿಗೆ ಹೊಡೆದರೆ ಸರಿಯಾಗುತ್ತದೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಧರ್ಮ ವಿರೋಧಿ, ಊರಿಗೆ ಮಾರಿ ಎಂಬ ತೀರ್ಮಾನದ ಠರಾವು ಹೊರಟಿತು.ಅವನು ಕಟ್ಟಿ ಬೆಳಸಿದ ಸಂಘ ಸಂಸ್ಥೆಗಳು ಯಾವುದೂ ಅವನ ಸಹಾಯಕ್ಕೆ ಬರಲಿಲ್ಲ. ಅವನು ಸಂಘದ ಅಧ್ಯಕ್ಷನಾಗಿದ್ದಾಗ ಕೆಲವರ ಅವ್ಯವಹಾರವನ್ನು ಹೊರಹಾಕಿದ್ದ ಅವರೆಲ್ಲಾ ಈಗ ಒಂದಾದರು. ಹಾಗೆಯೇ ಅವನು ಬಹಳಷ್ಟು ಜನರ ಬಾಳಿಗೆ ಬೆಳಕಾಗಿದ್ದ ಅವರೆಲ್ಲಾ ಸುಮ್ಮನುಳಿದರು.
ಊರಿನಲ್ಲಿ ಒಂದು ಸಭೆ ಕರೆಯಲಾಯಿತು ಅದರ ನೇತೃತ್ವವನ್ನು ಅವನಿಂದ ಸೋಲುಂಡವರು ವಹಿಸಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಚರ್ಚೆಗಳಾಗಿ ಅವನಿಲ್ಲದಾಗ ಅವನ ಮೇಲಿನ ಸೇಡನ್ನು ನಾಲಿಗೆಯ ತೀಟೆಯನ್ನು ಎಲ್ಲರೂ ತೀರಿಸಿಕೊಂಡರು. ಮಠದ ಗುರುಗಳಿಗೆ ಬಿಡುವಿನ ದಿನ ಊರಿಗೆ ಕರೆಯಿಸಿ ಪಾದಪೂಜೆ ಮಾಡಿ ನಂತರ ಧರ್ಮಭೃಷ್ಟನಾದ ಅವನನ್ನು ಜಾತಿಯಿಂದ ಬಹಿಷ್ಕಾರ ಹಾಕಿಸುವುದು ಮತ್ತು ಅವನ ಕುಟುಂಬದ ಜತೆ ಸಮಾಜ ಭಾಂಧವರೆಲ್ಲಾ ಸಂಪರ್ಕ ಕಡಿದುಕೊಳ್ಳುವುದು.ಎಂಬ ಅಂತಿಮ ತೀರ್ಪು ಹೊರಬಿತ್ತು. ಗುರುಪೀಠದ ಆಗಮನಕ್ಕೆ ದಿನಾಂಕ ಗೊತ್ತುಪಡಿಸಲು ನಿಯೋಗವೊಂದನ್ನು ಕಳುಹಿಸುವ ತೀರ್ಮಾನವನ್ನು ತೆಗೆದುಕೊಂಡು ಸಭೆ ವಿಸರ್ಜನೆಯಾಯಿತು.
ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ ಕೊಡದವರೂ ಅಲ್ಲಿದ್ದರು.
ಜನರಲ್ಲಿ ದುಗುಡ ತುಂಬಿತ್ತು. ಒಂದಿಷ್ಟು ಜನರಿಗೆ ಅಂತರಾಳದಲ್ಲಿ ತಡೆಯಲಾರದ ಖುಷಿ ಹೊರಗಡೆ ನಡೆಯಬಾರದ ಅನಾಹುತ ನಡೆಯುತ್ತದೆ ಎಂಬ ಮುಖಭಾವವನ್ನು ತಂದುಕೊಳ್ಳಲು ಹರಸಾಹಸ ಪಡುತ್ತಿದ್ದರು.ಅಷ್ಟರಲ್ಲಿ ಅವನಿಗೆ ಹೊಕ್ಕುಳ ಬಳ್ಳಿ ಛಳಕ್ಕೆಂತು.
"ಇಲ್ಲಿ ಸೇರಿರುವವರೆಲ್ಲಾ ಭಕ್ತರೂ ಅಲ್ಲ, ಇವರಲ್ಲಿ ಭಕ್ತಿಯೂ ಇಲ್ಲ. ಎಲ್ಲರೂ ಪರಮ ಸ್ವಾರ್ಥಿಗಳು ಮತ್ತು ಪರಮ ಲೋಭಿಗಳು. ತಮಗೆ ಒಳ್ಳೆಯದಾಗಲಿ ಎಂದು ಗುರುಗಳ ಮಂತ್ರಾಕ್ಷತೆ ಪಡೆಯಲು ಬಂದವರು. ದಿನನಿತ್ಯ ಧರ್ಮ ವಿರೋಧಿ ಚಟುವಟಿಕೆ ಇವರ ಜೀವನ. ಸ್ವಾಮೀಜಿಗಳೆದುರಿಗೆ ಕೈಮುಗಿದು ನಾಟಕವಾಡುವ ಇವರು ನಂತರ ನಡೆ ನುಡಿಯಲ್ಲಿ ಹೆಜ್ಜೆ ಹೆಜ್ಜೆಗೂ ಮಠವನ್ನು ದೂಷಿಸುತ್ತಾರೆ. ಹಣದ ವಿಚಾರದಲ್ಲಿ ದಾಹಿಗಳು. ಇವತ್ತು ಇವರು ಈ ಪರಿ ಸೇರಿದ್ದು ಭಕ್ತಿಯಿಂದಲ್ಲ ಈ ಪರಿಸ್ಥಿತಿಯ ಲಾಭ ತನಗೆಷ್ಟು ಎಂದು ನೋಡಲು ಬಂದವರು......ಒಳ್ಳೆಯ ಕಾರ್ಯಕ್ಕೆ ಹತ್ತು ಜನ ಸೇರಿಸಲು ನಾನು ಪಾಡು ಪಟ್ಟಿದ್ದೇನೆ ಆದರೆ ಇಂದು..ನೋಡಿ......"
ಸಭೆಯಲ್ಲಿ ಗದ್ದಲ ಶುರುವಾಯಿತು. ಒಬ್ಬರು ಆತನಿಗೆ ಹೊಡೆಯಿರಿ ಎಂದರೆ ಮತ್ತೊಬ್ಬರು ಬಡಿಯಿರಿ ಎನ್ನುತ್ತಿದ್ದರು. ಆತನಿಗೆ ದೇಶದಿಂದಲೇ ಓಡಿಸಬೇಕು ಎನ್ನುತ್ತಿದ್ದರು ಮಗದೊಬ್ಬರು. ಗುರುಗಳು ಇಲ್ಲದಿದ್ದರೆ ಅವನ ಕಥೆ ನೋಡಬೇಕಿತ್ತು ಎನ್ನುತ್ತಿದ್ದ ಇನ್ನೊಬ್ಬ. ಆಶ್ಚರ್ಯವೆಂದರೆ ಹಾಗೆ ಹೇಳುತ್ತಿದ್ದಾತ ಆ
ದಿನದವರೆಗೂ ಪಕ್ಕಾ ನಾಸ್ತಿಕನಾಗಿದ್ದ ಮಠ ಸ್ವಾಮೀಜಿಗಳನ್ನು ಆತ ತಾನು ಮಾನ್ಯಮಾಡುವುದಿಲ್ಲ ಅದು ಸೋಮಾರಿಗಳ ಸಂತೆ ಎನ್ನುತ್ತಿದ್ದ.
ಇಷ್ಟು ಗಲಭೆ ಗಲಾಟೆಗಳಾಗುತ್ತಿದ್ದರೂ ಸ್ವಾಮೀಜಿಗಳು ಮಾತ್ರ ಮುಗುಳ್ನಗುತ್ತಿದ್ದರು. ಅವರ ಈ ವರ್ತನೆ ಅವನ ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಸ್ವಾಮೀಜಿಗಳ ಸಹಾನುಭೂತಿ ಅವನೆಡೆಗೆ ಬಿದ್ದರೆ ಕಷ್ಟ ಎಂಬ ಚಿಂತೆ ಕಾಡುತ್ತಿತ್ತು. ಸ್ವಾಮಿಜಿಗೆ ಅವನ ಬಗ್ಗೆ ಸರಿಯಾಗಿ ಹೇಳಿದ್ದೀರಾ ಬಹಿಷ್ಕಾರ ಖಂಡಿತಾ ತಾನೆ, ಎಂದು ನಿಯೋಗದವರೊಡನೆ ಗುಸುಗುಸು ಪಿಸ ಪಿಸ ಮಾಡುತ್ತಿದ್ದರು. ಅವರಲ್ಲೊಬ್ಬನಿಗೆ ತಡೆಯದಾಯಿತು. ಪೀಠದ ಬಳಿ ಹೋಗಿ ತಾನು ಹೊದೆದ ಶಲ್ಯವನ್ನು ತನ್ನ ಬಾಯಿಗೆ ಅಡ್ಡ ಹಿಡಿದು " ಅವನಿಗೆ ಬಹಿಷ್ಕಾರ ಹಾಕಲು ಇದು ಸರಿಯಾದ ಸಮಯ ನಿರ್ಣಯ ಕೊಡಿ ಎಂದ". ಸ್ವಾಮೀಜಿಗಳು ನಿಧಾನವಾಗಿ ಪೀಠದಿಂದ ಮೇಲೆದ್ದರು
ಸಭೆ ಒಮ್ಮೆಲೆ ಸ್ತಬ್ದವಾಯಿತು. ಇಷ್ಟು ಹೊತ್ತು ಸಭೆಯ ಗಲಾಟೆಯಿಂದ ಅವನ ಮಾತುಗಳು ಯಾರಿಗೂ ಕೇಳುತ್ತಿರಲಿಲ್ಲ. ಈಗ ಮತ್ತೆ ಆವನ ಮಾತುಗಳು ಎಲ್ಲರಿಗೂ ಕೇಳಲಾರಂಬಿಸಿತು.
"ಓ ಅಲ್ಲಿದಾರರಲ್ಲ ಅವರು ಇಷ್ಟು ದಿವಸ ಮಠವನ್ನು ವಿರೋಧಿಸುತ್ತಿದ್ದವರು, ಒಂದು ರೂಪಾಯಿ ದೇಣಿಗೆ ಕೊಟ್ಟವರಲ್ಲ, ಇವತ್ತು ಬಂದಿದ್ದು ಸ್ವಾರ್ಥಕ್ಕೆ, ಸಮಾಜವನ್ನು ಒಡೆಯಲು ಅವರ ಕಾಣಿಕೆ ಬಹಳ,ಅವರು ಹಿಂಸಾವಿನೋದಿಗಳು, ಮತ್ತೊಬ್ಬರಿಗೆ ತೊಂದರೆಯಾಗುತ್ತದೆಯಾದರೆ ಬೆಳಿಗ್ಗೆವರೆಗೂ ಸಭೆ ನಡೆಸುವ ಕುತ್ಸಿತ ಮನಸ್ಸಿನವರು. ಧರ್ಮ ದೇವರು ಎಲ್ಲಾ ಸುಳ್ಳು, ನೈತಿಕತೆ,ಸತ್ಯ ನ್ಯಾಯ ಎಲ್ಲಾ ಅನುಕೂಲಸಿಂಧು ಕಾರ್ಯಕ್ರಮಗಳು.ದುಡ್ಡು ಸಿಗುತ್ತದೆಯೆಂದರೆ ಧರ್ಮವನ್ನು ದೇವರನ್ನೂ,ನ್ಯಾಯ ನೀತಿಯನ್ನೂ ಧಿಕ್ಕರಿಸುವ ಜನರು...."
ಕೆಲವರು ಧರ್ಮನಿಂದನೆ ಎಂದು ಕಿವಿ ಮುಚ್ಚಿಕೊಂಡರು. ಹಲವರು ಖುಷಿಪಡುತ್ತಿದ್ದರು. ಕಾರಣ ಕುರಿ ಕೊಬ್ಬಿದಷ್ಟು ಕಟುಕನಿಗೆ .....
ಇಷ್ಟೆಲ್ಲಾ ನಡೆದರೂ ಸ್ವಾಮೀಜಿಗಳ ಮುಖದಲ್ಲಿ ಮಂದಹಾಸವಿತ್ತು. ಕರಂಡಿಕೆಗೆ ಕೈಹಾಕಿ ಶ್ರೀಗಂಧವನ್ನು ತೆಗೆದುಕೊಂಡು ನಿಧಾನ ಅವನ ಬಳಿ ಹೋಗಿ ಮೂಗಿನ ಮೇಲೆ ದಪ್ಪನೆಯ ಒಂದು ಶ್ರೀಗಂಧದ ನಾಮ ಹಾಕಿದರು.
ತಕ್ಷಣ ಆತನ ಮಾತುಗಳು ನಿಂತವು. ಅವನ ಕಣ್ಣುಗಳಿಂದ ದಳದಳನೆ ನೀರು ಇಳಿದು ಬರತೊಡಗಿತು. ಅವನು ನಿಧಾನವಾಗಿ ತನ್ನ ಎರಡೂ ಕೈಗಳನ್ನು ಜೋಡಿಸಿ ಸ್ವಾಮೀಜಿಗಳತ್ತ ಧನ್ಯತಾಭಾವದ ನೋಟದೊಂದಿಗೆ ಕುಸಿದು ಕುಳಿತ.
ಅದ್ಬುತವನ್ನು ಕಣ್ಣಾರೆ ಕಂಡ ಭಕ್ತಾಧಿಗಳು ಹರ್ಷೋದ್ಗಾರ ಹಾಕಿದರು. ಕಲಿಯುಗದಲ್ಲಿ ಅವತರಿಸಿದ ಪರಮಾತ್ಮ ಎಂದು ಸ್ವಾಮೀಜಿಗಳೆದುರು ಕೈಮುಗಿದು ನಿಂತರು.ಇದೆಲ್ಲಾ ಸಹಜವೆಂಬಂತೆ ಸ್ವಾಮಿಜಿ ಭಕ್ತರಿಗೆ ಮಂತ್ರಾಕ್ಷತೆ ನೀಡತೊಡಗಿದರು
ಅವನ ವಿರೋಧಿಗಳಿಗೆ ಸ್ವಾಮೀಜಿಯ ಈ ವರ್ತನೆ ಅಷ್ಟೊಂದು ಸಹ್ಯವಾಗಲಿಲ್ಲ. ತಾತ್ಕಾಲಿಕವಾಗಿ ಆಸ್ತಿಕರಾಗಿದ್ದವರು ಮತ್ತೆ ತಮ್ಮ ಮೂಲ ತತ್ವವಾದ ಮಠವಿರೋಧಿ ನಿಲುವಿಗೆ ಮರಳಿದರು.
ಸ್ವಾಮೀಜಿಗಳ ಕಾರು ಧೂಳೆಬ್ಬಿಸುತ್ತಾ ಮಾಯವಾಯಿತು.
ಅವನಿಗೆ ಜೀವನದಲ್ಲಿ ಮತ್ತೆಂದೂ ಹೊಕ್ಕಳಬಳ್ಳಿ ಛಳಕ್ಕೆನ್ನಲಿಲ್ಲ ಹಾಗು ಆನಂತರ ಮಠದ ಕೆಲಸಗಳಿಗೆ ತನ್ನನ್ನು ಇನ್ನೂ ಹೆಚ್ಚು ತೊಡಗಿಸಿಕೊಂಡು ಪುನೀತನಾದ.
***************
ಇವೆಲ್ಲ ಘಟನೆಗಳ ನಡುವೆ ಶ್ರೀಗಂಧದೊಂದಿಗೆ ಸೂಜಿಮೆಣಸಿನ ಪುಡಿ ಬೆರಸಿ ಅವನ ಮೂಗಿನ ಮೆಲೆ ಹಚ್ಚಿ ಅವನ ಮನಸ್ಸಿನ ಒತ್ತಡವನ್ನು ದೇಹದ ಉರಿಯತ್ತ ಹೊರಳಿಸಿ ಯಶಸ್ವಿಯಾದ ಸ್ವಾಮೀಜಿಯ ತಂತ್ರ, ಶ್ರೀಗಂಧಕ್ಕೆ ಮೆಣಸಿನಪುಡಿ ಬೆರಸಿದ ಗಿಂಡಿಮಾಣಿಯ ಹೊರತಾಗಿ ಯಾರಿಗೂ ತಿಳಿಯಲಿಲ್ಲ.
No comments:
Post a Comment