Thursday, April 9, 2009

ಹಾರುವ ನೋಟುಗಳು

-ಆರಾಮು ಖುರ್ಚಿಯಲ್ಲಿ ಕುಳಿತಿದ್ದ ಶ್ಯಾಮರಾಯರಿಗೆ ನಂಬಲಸಾಧ್ಯವಾದ ವಿಚಿತ್ರ ಅನುಭವವಾಯಿತು. ಒಳಗಡೆಯ ಕೋಣೆಯಿಂದ ಹೊಚ್ಚ ಹೊಸದಾದ ಒಂದೊಂದೇ ನೋಟುಗಳು ಹೊರ ಹಾರಿಬರತೊಡಗಿದವು. ಅದೂ ಎಲ್ಲಾ ಸಾವಿರ ರೂಪಾಯಿಯ ನೋಟುಗಳೇ. ಮೊದಮೊದಲು ಹೊಸ್ತಿಲು ದಾಟಿ ಹುತ್ತದಿಂದ ರಕ್ಕೆ ಬಂದ ವರಲೆಯಂತೆ ಒಂದೊಂದೆ ಹೊರಬಂದು ನಂತರ ನೋಡನೋಡುತ್ತಿದ್ದಂತೆ ಕೊಕ್ಕರೆ ಹಿಂಡಿನಂತೆ ಎಣಿಸಲಾರದಷ್ಟು ಹೊರಗಡೆ ಹಾರಿ ಬರತೊಡಗಿದವು. ನಡುಕೋಣೆಯ ಒಳಗಿನಿಂದ ಹಾರಿಬಂದ ನೋಟುಗಳು ಜಗಲಿಯಲ್ಲಿ ನಿಲ್ಲಲಿಲ್ಲ ಪ್ರಧಾನ ಬಾಗಿಲು ದಾಟಿ ಹೊರಗಿನ ಆಕಾಶದತ್ತ ಹೊಗತೊಡಗಿದವು. ಶ್ಯಾಮರಾಯರ ಎದೆಬಡಿತ ಜಾಸ್ತಿಯಾಗಿದ್ದೇ ಆವಾಗ. ಹೋಗಿದ್ದು ಹೋಯಿತು ಉಳಿದದ್ದಾದರೂ ಬಾಗಿಲು ಹಾಕಿ ಉಳಿಸಿಕೊಳ್ಳೋಣ ಎಂದು ಖುರ್ಚಿಯಿಂದ ಮೇಲೆಳಲು ಯತ್ನಿಸಿದರು. ಮೇಲೆಳಲು ಸುಲಭದಲ್ಲಿ ಆಗಲಿಲ್ಲ. ಕೈಕಾಲು ದೇಹವೆಲ್ಲಾ ಮಣಭಾರ. ಆದರೆ ಹಾರಿಹೋಗುತ್ತಿದ್ದ ನೋಟಿನ ಆಸೆ ಶ್ಯಾಮರಾಯರನ್ನು ಎಬ್ಬಿಸಿತು. ಕಷ್ಟಪಟ್ಟು ಅಗಳಿ ಹಾಕಲು ಬಾಗಿಲಿನವರೆಗೆ ಬಂದರು ಆವಾಗ ಸಳಕ್ಕನೆ ಎದೆ ಹಿಡಿದುಕೊಂಡಿತು, ಸಹಿಸಲಾರದ ಯಾತನೆ ಅದ್ಯಾರೂ ಇಡೀ ಎದೆಯನ್ನು ಹಿಂಡಿ ಹಿಪ್ಪೆಮಾಡಿದಂತೆ. ಅತಿಯಾದ ಎದ್ನೋವು ನೋವು ತಡೆಯಲಾಗಲಿಲ್ಲ ಅಸಹಾಯಕತೆಯಿಂದ ಎಡಗೈಯಲ್ಲಿ ಎದೆಹಿಡಿದುಕೊಂಡು ಕುಸಿದು ಕುಳಿತು ಹಿಂಡಿ ಹಿಪ್ಪೆ ಮಾಡುತ್ತಿದ್ದ ಎದೆ ನೋವನ್ನೂ ಮರೆತು ಹಾರಿಹೋಗುತ್ತಿದ್ದ ನೋಟನ್ನು ನೋಡುತ್ತಾ ಲೇ ॒ಲೇ.॒ ನೀನಾದರೂ ಬಾರೇ.... ಬಾಗಿಲು ಹಾಕೇ... ಎಂದು ಹೆಂಡತಿಯನ್ನು ಕೂಗಲೆತ್ನಿಸಿದರು ಆದರೆ ಊ.. ಊ ಎಂಬ ಹ್ಞೂ ಕಾರದ ವಿಚಿತ್ರ ಧ್ವನಿಯ ಹೊರತಾಗಿ ಸ್ವರ ಹೊರಡಲಿಲ್ಲ. ರೀ ರೀ ಏನಾಯ್ತು . ಯಾಕೆ ಹಾಗೆ ಕೂಗ್ತಾ ಇದೀರಿ ಎಂದು ಹೆಂಡತಿ ಶ್ಯಾಮರಾಯರನ್ನು ಅಲುಗಿಸಿ ಎಬ್ಬಿಸಿದಾಗಲೇ ಅವರಿಗೆ ಅರಿವಾಗಿದ್ದಿದ್ದು ತಾವು ಕಂಡದ್ದು ದುಸ್ವಪ್ನ ಎಂದು. ಹಾಸಿಗೆ ಮೆಲೆ ದಡಕ್ಕನೆ ಎದ್ದುಕುಳಿತ ರಾಯರು ನಖಶಿಖಾಂತ ಬೆವರಿದರು. ಎದೆ ಮುಟ್ಟಿ ನೋಡಿಕೊಂಡರು ನೋವಿಲ್ಲ ಯಾತನೆಯೂ ಇಲ್ಲ. ಅಲ್ಲಿಗೆ ಶ್ಯಾಮರಾ೦iiರಿಗೆ ತಾವು ಕಂಡಿದ್ದು ಸ್ವಪ್ನ ಎಂಬುದು ಖಚಿತವಾಯಿತು. ಸ್ವಪ್ನ ಎಂಬುದು ಖಚಿತವಾದರೂ ಇಂದು ಶನಿವಾರ ಎಂದು ನೆನಪಾದೊಡನೆ ಶ್ಯಾಮರಾಯರಿಗೆ ಗಾಬರಿ ಮತ್ತಷ್ಟು ಜಾಸ್ತಿಯಾಯಿತು. ಹೌದು ಇದೇ ಸ್ವಪ್ನ ಕಾಣಿಸುತ್ತಿರುವುದು ಈ ಶನಿವಾರವೂ ಸೇರಿದರೆ ಮೂರನೆ ಶನಿವಾರ. ಮೊದಲ ಶನಿವಾರ ಇದೇ ಸ್ವಪ್ನ ಕಂಡಾಗ ನೋಟಿನ ಸಂಖ್ಯೆ ವಿರಳವಾಗಿತ್ತು ಹಾಗೂ ಎದೆ ನೋವೂ ಕೂಡ ಕಡಿಮೆ ಇತ್ತು, ಅಂದು ಇದೊಂದು ಸಹಜ ಸ್ವಪ್ನ ಎಂದು ನಿರ್ಲಕ್ಷಿಸಿದ್ದರು. ಎರಡನೆ ಶನಿವಾರ ಮೊದಲನೇ ವಾರಕ್ಕಿಂತ ಕೊಂಚ ಜಾಸ್ತಿ . ಆವತ್ತು ಸ್ವಲ್ಪ ಭಯ ಎಂದೆನಿಸಿದರೂ ಬೆವರಿರಲಿಲ್ಲ. ಆದರೆ ಮೂರನೆ ವಾರ ಸಹಿಸಲು ಸಾಧ್ಯವಾಗದಷ್ಟು ಎದೆ ನೋವು, ಏಣಿಸಲು ಆಗದಷ್ಟು ನೋಟುಗಳು, ಹಾಗಾಗಿ ಬೆವರು ಹಣೆಯಿಂದ ಹಾಸಿಗೆಯ ವರೆಗೂ ತೊಯ್ದು ತೊಪ್ಪೆ ಮಾಡಿತ್ತು. ಮುಂದಿನ ಶನಿವಾರದ ಅವ್ಯಕ್ತ ಭಯ ಇನ್ನಷ್ಟು ಗಾಬರಿಮೂಡಿಸಿತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕು ಎಂಬ ಆಲೋಚನೆ ಶ್ಯಾಮರಾಯರಿಗೆ ಬಂತು. ಹೆಂಡತಿಯ ಬಳಿ ಹೇಳಿದರೆ ಹೇಗೆ ಎಂಬ ಯೋಚನೆಯ ಜತೆಗೆ ಆಕೆ ಹೇಳುವ ಅಯ್ಯೋ ನಿಮಗೆಲ್ಲೋ ಬ್ರಾಂತು ಹಿಡಿದಿದೆ. ನೋಟು ಹಾರಿಹೋಗುವುದು ಅಂದರೆ ಏನು? ನೀವು ಹಿಡಿಯಲು ಹೊರಾಟಾಗ ಎದೆನೋವು ಕಾಣಿಸಿಕೊಳ್ಳುವುದೆಂದರೆ ಎಂತು?, ಎಚ್ಚರವಾದಾಗ ನೋವೇ ಮಾಯ ಅಂದರೆ ಎಲ್ಲಿ ? ನೀವು ಮೊದಲು ವಯಸ್ಸಿಗೆ ತಕ್ಕುದಾದ ನಡತೆ ಕಲಿತುಕೊಳ್ಳಿ ಎಂಬಂತಹ ನಿರ್ಲಕ್ಷ್ಯಪೂರಿತವಾದ ಪ್ರಶ್ನೆ ಹಾಗೂ ನೀಡುವ ಸಲಹೆ ನೆನಪಾಗಿ ಅದು ವ್ಯರ್ಥ ಎಂದೆನಿಸಿ ಬೆಳಿಗ್ಗೆ ಫ್ಯಾಮಿಲಿ ಡಾಕ್ಟರ್ ಬಳಿ ಸಲಹೆ ಕೇಳುವುದೇ ಒಳಿತೆಂಬ ತಾತ್ಕಾಲಿಕ ತೀರ್ಮಾನಕ್ಕೆ ಬಂದು ಸಧ್ಯದ ನಿದ್ರೆಗೆ ಗುಳಿಗೆಗೆ ಮೊರೆಹೋದರು. ******* ಶ್ಯಾಮರಾಯರು ಕಷ್ಟಜೀವಿ, ವಾರಾನ್ನದಲ್ಲಿ ಓದಿ ಸ್ವಸಾಮರ್ಥ್ಯದಿಂದ ವಿದ್ಯೆ ಗಳಿಸಿ ಸಾರ್ವಜನಿಕರಿಗೆ ಒಳ್ಳೆಯ ಸೇವೆ ನೀಡಬೇಕೆಂಬ ಮಹತ್ತರ ಆಸೆಯಿಂದ ಸರ್ಕಾರಿ ಇಲಾಖೆಗೆ ಕೆಲಸಕ್ಕೆ ಸೇರಿದರು. ಅವರ ಓದಿಗೆ ಸಿಕ್ಕದ್ದು ಸಾರಿಗೆ ಇಲಾಖೆ. ಅವರ ಬಿಗಿ ನಿಲುವು ಕಡಕ್ಕಾದ ಸೇವೆಯ ಪರಿಣಾಮ ನಿರಂತರ ಮೂವತ್ತು ವರ್ಷಗಳ ಕಾಲ ಊರಿಂದುರಿಗೆ ಅಲೆಯುವಂತಾಯಿತು. ಒಕ್ಕಣ್ಣ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡಿದ್ದರೆ ಲೇಸು ಎಂಬ ನಾಣ್ಣುಡಿ ಅರಿವಾಗುವಷ್ಟರಲ್ಲಿ ನಿವೃತ್ತಿಗೆ ಇನ್ನು ಎಂಟು ವರ್ಷವಷ್ಟೇ ಉಳಿದಿತ್ತು. ಅಷ್ಟರಲ್ಲಿ ಆರ್.ಟಿ.ಒ ಆಗಿದ್ದ ರಾಯರು ಹೆಂಡತಿಯ ಒತ್ತಾಸೆಯ ಹಾಗೂ ಅವಳ ಐಷರಾಮಿನ ಇಚ್ಚೆ ಪೂರೈಸಲೋಸುಗ ಆಫೀಸಿನಲ್ಲಿ ಕಣ್ಣುಮುಚ್ಚಿಕೊಳ್ಳುವುದನ್ನು ಕಲಿತ ನಂತರ ಹಣದ ಹೊಳೆ ಹರಿಯತೊಡಗಿತು. ಸೋಮವಾರದಿಂದ ಶನಿವಾರದವರೆಗಿನ ಸಂಪಾದನೆ ತಂದು ಗುಡ್ಡೆಹಾಕುವುದಷ್ಟೇ ಅವರ ಕೆಲಸವಾಯಿತು. ಆದರೆ ಶಿಸ್ತು ಅಳವಡಿಸಿಕೊಂಡ ಜೀವನದಿಂದ ಆಚೆ ಬರುವಾಗ ಸ್ವಲ್ಪ ಕಷ್ಟವೆನಿಸಿತ್ತು. ಐವತ್ತು ವರ್ಷದವರೆಗೆ ಕಾಡದ ಖಾಯಿಲೆಗಳು ಬಿ.ಪಿ ಷುಗರ್ ಮುಂತಾದ ಬಣ್ಣ ತಳೆದು ಕಾಡಲಾರಂಬಿಸಿದವು. ಅವುಗಳಷ್ಟೇ ಆಗಿದ್ದರೆ ಮಾತ್ರೆ ನುಂಗಿ ಗಟಗಟನೆ ನೀರು ಕುಡಿದು ಸುಧಾರಿಸಿಕೊಳ್ಳಬಹುದಿತ್ತು. ಆದರೆ ಈಗ ಅರ್ಥವಿಲ್ಲದ ವಾರಾಂತ್ಯದಲ್ಲಿ ಭೀಕರ ಸ್ವಪ್ನರೂಪದಲ್ಲಿ ನಿದ್ರೆಗೂ ಸಂಚಕಾರ ತಂದಿತ್ತು. ಬೆಳಿಗ್ಗೆ ಬೇಗನೆ ಎದ್ದ ಶ್ಯಾಮರಾಯರು ನಿತ್ಯಕರ್ಮ ಪೂರೈಸಿ ತಿಂಡಿತಿಂದು ಫ್ಯಾಮಿಲಿ ಡಾಕ್ಟರ್ ಬಳಿ ತೆರಳಿ, ಕಾಡುವ ಸ್ವಪ್ನ, ನಿಜದಂತೆ ತೋರುವ ಎದೆನೋವು ಅದೂ ಶನಿವಾರ ರಾತ್ರಿ ಮಾತ್ರಾ ಕಾಡುವ ಪರಿ ಹೀಗೆ ಎಲ್ಲದರ ವಿಷದಪಡಿಸಿದರು. ಡಾಕ್ಟರ್ ಮಾಮೂಲಿ ಪ್ರಶ್ನೆಗಳನ್ನು ಹಿಂದೆಮುಂದೆ ಕೇಳಿ , ಸ್ತೇಥಾಸ್ಕೋಪ್ ಇಟ್ಟು ಬಿ.ಪಿ ಚೆಕ್ ಮಾಡಿ ನಂತರ ಎಲ್ಲಾ ನಾರ್ಮಲ್ ಇದೆ ಏನು ತೊಂದರೆ ಇಲ್ಲ, ಆದರೂ ನನ್ನ ಎಣಿಕೆಗೆ ಬಾರದ ಸಮಸ್ಯೆ ಇದು, ಹಾಗಾಗಿ ಒಮ್ಮೆ ದೊಡ್ಡಾಸ್ಪತ್ರೆಗೆ ತೋರಿಸಿ. ಸ್ವಲ್ಪ ಹೆಚ್ಚಿನ ಹಣ ಬೇಡುತ್ತದೆ, ಹೋಲ್ ಬಾಡಿ ಸ್ಕ್ಯಾನಿಂಗ್ ಮಾಡಿಸಿ ಎಂದರು. ಶ್ಯಾಮರಾಯರಿಗೆ ಕಾಡುವ ದುಸ್ವಪ್ನ ಮತ್ತು ಎದೆನೋವು ಮಾಯವಾದರೆ ಸಾಕು ಎಂದು ದೊಡ್ಡ ಬೋರ್ಡ್ ಲಗತ್ತಿಸಿರುವ ಪಳಪಳ ಹೊಳೆಯುವ ಆಸ್ಪತ್ರೆಯ ಡಾಕ್ಟರ್‌ರ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಮೂರ್ನಾಲ್ಕು ದಿನ ಅವರು ಹೇಳಿದಂತೆ ಮಲಗಿ ಎದ್ದು , ನಾಲ್ಕಾರು ಕಡೆ ಚುಚ್ಚಿಸಿಕೊಂಡು, ಹತ್ತಾರು ಟೆಸ್ಟ್ ಮುಗಿಸಿದರು. ಗಂಭೀರ ಮುಖದ ವೈದ್ಯರುಗಳು ತಮ್ಮ ಪಾಲಿನದನ್ನು ತೆಗೆದುಕೊಂಡು ಶ್ಯಾಮರಾಯರ ಬಳಿ ಎಲ್ಲಾ ನಾರ್ಮಲ್ ಇದೆ, ಇದು ಮನೋದೈಹಿಕ ಖಾಯಿಲೆ ಹಾಗಾಗಿ ನೀವು ಮನೋವೈದ್ಯರನ್ನು ಕಾಣುವುದೊಳಿತು ಎಂದು ಅಲ್ಲಿಗೆ ರವಾನಿಸಿದರು. ಮನೋವೈದ್ಯರು ಸಿಗ್ಮಂಡ್ ಫ್ರಾಯ್ಡ್ ಮಾಡಿದ ಸಂಶೋಧನೆಯಂತೆ ಕನಸುಗಳು ನಮ್ಮ ಹಗಲಿನ ಯೋಚನೆಯ ಫಲ. ಮತ್ತು ನೀವು ಖಾಯಿಲೆ, ಹಣ ಮುಂತಾದವುಗಳ ಬಗ್ಗೆ ಹೆಚ್ಚು ಯೋಚನೆಗಳನ್ನು ಪದೆ ಪದೆ ಮಾಡಿದ್ದರಿಂದ ಹಾಗಾಗಿದೆ , ಭಯಪಡಬೇಕಾದ್ದೇನಿಲ್ಲ ಬೇಕಾದರೆ ಧ್ಯಾನ ಯೋಗ ಮಾಡಿ ಮತ್ತು ಈ ಬಿಳಿ ಮಾತ್ರೆ ಬೆಳಿಗ್ಗೆ ಕೆಂಪು ಮಾತ್ರೆ ರಾತ್ರಿ ತೆಗೆದುಕೊಳ್ಳಿ ಎಂದರು. ಶ್ಯಾಮರಾಯರು ಅಶ್ವಿನಿ ದೇವತೆಗಳ ಸಾಕಾರ ರೂಪದಂತಿದ್ದ ವೈದ್ಯರ ಸಲಹೆಯನ್ನು ಪಾಲಿಸುವ ಹೊತ್ತಿಗೆ ಮತ್ತೊಂದು ಶನಿವಾರ ಬಂತು. ಶ್ಯಾಮರಾಯರಿಗೆ ಸ್ವಪ್ನದ ಚಿಂತೆಯಲ್ಲಿ ನಿದ್ರೆ ಹತ್ತಿರ ಸುಳಿಯಲಿಲ್ಲ. ರಾಯರ ಹೊರಳಾಟ ಸಹಿಸಲಾಗದ ಹೆಂಡತಿ ಗೊಣಗಿ ದೂರ ಸರಿದಳು. ಬೆಳಗಿನ ಜಾವವ ಮಂಪರು ನಿದ್ರೆ ಹತ್ತಿದಾಗ ಮತ್ತದೇ ಸ್ವಪ್ನ. ಆದರೆ ಈ ಬಾರಿ ಸಾವಿರದ ನೋಟಗಳು ವಿರಳವಾಗಿತ್ತು. ಹಿಡಿಯಲು ಹೊರಟಾಗ ಕೈಕಾಲುಗಳು ಮಣಭಾರವಾಗಲಿಲ್ಲ. ಎದೆನೋವು ಅಷ್ಟೊಂದು ಕಾಣಿಸಿಕೊಳ್ಳಲಿಲ್ಲ. ನೋಟು ಹೊರಹಾರಿಹೋಗದಂತೆ ಬಾಗಿಲ ಹಾಕಲು ಎದ್ದು ಹೊರಡಲನುವಾದಾಗ ಎಚ್ಚರವಾಯಿತು. ಈಬಾರಿ ಶ್ಯಾಮರಾಯರಿಗೆ ಅಷ್ಟೊಂದು ಭಯ ಕಾಡದಿದ್ದರೂ ನೆಮ್ಮದಿಯ ನಿದ್ರೆಯ ಸಮಾಧಾನ ಸಿಗಲಿಲ್ಲ. ಯಜಮಾನರ ಸಂಕಟ ನೋಡಲಾರದ ಧರ್ಮಪತ್ನಿ ಇಂತವುಕ್ಕೆಲ್ಲಾ ವಿಜ್ಞಾನದಲ್ಲಿ ಉತ್ತರ ಸಿಗದು ಜ್ಯೋತಿಷ್ಯ ಮತ್ತು ಧಾರ್ಮಿಕ ವಿಧಿವಿಧಾನಗಳಿಂದ ಮಾತ್ರಾ ಪರಿಹಾರ ಸಾಧ್ಯ ನನ್ನ ತವರುಮನೆಯ ಕಡೆ ಹೇಮಂತ ಭಟ್ಟರೆಂಬ ಜ್ಯೋತಿಷಿಗಳಿದ್ದಾರೆ ಅವರು ಕಾರ್ಯಕ್ರಮವನ್ನು ಮಾಡಿಸಿಕೊಡುತ್ತಾರೆ. ಇಂಥಹ ನೂರಾರು ದುಸ್ವಪ್ನ ಮಾಯಮಾಡಿದ್ದಾರೆ ಎಂಬ ಸಲಹೆ ನೀಡಿದ್ದನ್ನು ಶ್ಯಾಮರಾಯರು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತಾಯಿತು. ನಿಮ್ಮ ಪೂರ್ವಿಕರಿಗೆ ಅಂತಿಮ ಸಂಸ್ಕಾರ ಸಮರ್ಪಕವಾಗಲಿಲ್ಲ. ಪ್ರೇತಗಳು ಪ್ರಾರಂಭದಲ್ಲಿ ಸ್ವಪ್ನರೂಪವಾಗಿ ಕಾಡುತ್ತವೆ, ಆನಂತರ ನಿಜಕ್ಕೆ ಆವಾಹನೆಗೊಳ್ಳುತ್ತವೆ. ಅದಕ್ಕಾಗಿ ನೀವು ಮೊದಲು ಪ್ರೇತಸಂಸ್ಕಾರ ಕಾರ್ಯಕ್ರಮ ನಂತರದ್ದು ಶನಿವಾರ ಕಾಡುವ ಸ್ವಪ್ನವಾದ್ದರಿಂದ ಶನಿದೇವನಿಗೆ ಒಂದು ತಿಲಹೋಮ ಆಮೇಲೆ ಎದೆಭಾಗಕ್ಕೆ ನೋವು ಇರುವುದರಿಂದ ಮೃತ್ಯುಂಜಯ ಹವನ ಹಾಗೂ ನಿಮ್ಮ ಹಾಗೂ ಕುಟುಂಬದ ಉತ್ತರೋತ್ತರ ಭವಿಷ್ಯಕ್ಕೆ ಸಹಸ್ರ ಚಂಡಿಕಾ ಯಾಗ ಮಾಡಿಸಿದರೆ ಶ್ರೇಯೋಭಿವೃzದಿ ನೀಡಬಲ್ಲದು ಎಂಬ ಹೇಮಂತ ಭಟ್ಟರ ಸಲಹೆ ದುಡ್ಡಿನ ಮುಖ ನೋಡದೆ ಮುಂದಿನ ಮೂರುದಿನಗಳಲ್ಲಿ ಅನುಷ್ಠಾನಕ್ಕೆ ಬಂತು. ಹೆಂಡತಿಯ ತವರಿನಲ್ಲಿ ಸಪತ್ನಿ ಸಮೇತರಾಗಿ ಹೋಮ ಹವನಗಳಲ್ಲಿ ಪಾಲ್ಗೊಂಡ ಶ್ಯಾಮರಾಯರು ವಾಪಾಸು ಊರಿಗೆ ಬಂದಾಗ ಮತ್ತೊಂದು ಶನಿವಾರ ಬಂದಿತ್ತು. ಧಾರ್ಮಿಕ ಕಾರ್ಯಕ್ರಮದ ಹೋಮ ಹವನದ ಸುವಾಸನೆಯ ಬಲವೋ ಮೂರ್ನಾಲ್ಕು ದಿನದ ಪ್ರಯಾಣದ ಸುಸ್ತೋ ಅಂತೂ ಶ್ಯಾಮರಾಯರಿಗೆ ನಸುಕಿನವರೆಗೆ ಸೊಂಪಾದ ನಿದ್ರೆ. ಇನ್ನೇನು ಬೆಳಗಾಯಿತು ಎನ್ನುವಾಗ ಮತ್ತದೇ ಸ್ವಪ್ನ. ಆದರೆ ಈ ಬಾರಿ ಬದಲಾವಣೆಯೆಂದರೆ ಐದು ನೂರರ ನೋಟುಗಳು ಹಾರಿ ಹೋಗುತ್ತಿದ್ದವು. ಒಳಬಾಗಿಲಿನ ಬಳಿ ಸಾಗಿ ಬಾಗಿ ತಡವಿ ಕಣ್ಣಗಲಿಸಿ ನೋಡಿದರೂ ಒಂದೇ ಒಂದು ಸಾವಿರದ ನೋಟು ಕಾಣಿಸಲಿಲ್ಲ. ಮತ್ತೊಂದು ಬೆಳವಣಿಗೆಯೆಂದರೆ ರಾಯರು ಯಾವ ನೋವೂ ಇಲ್ಲದೆ ಆರಾಮಾಗಿ ಖುರ್ಚಿಯಿಂದ ಮೇಲೆದ್ದು ಬಾಗಿಲವರೆಗೆ ಬಂದಿದ್ದರು. ಇನ್ನೇನು ಬಾಗಿಲು ಹಾಕಬೇಕು ಎನ್ನುವಷ್ಟರಲ್ಲಿ ಎಚ್ಚರವಾಯಿತು.
ಸ್ವಪ್ನದಲ್ಲಿನ ಸುಧಾರಣೆ ಶ್ಯಾಮರಾಯರಿಗೆ ಕೊಂಚ ನಿರಾಳತನೆಯನ್ನು ತಂದಿತ್ತಾದರು ಸಂಪೂರ್ಣ ಸಮಾಧಾನ ಸಿಕ್ಕಿರಲಿಲ್ಲ. ಅಯ್ಯೋ ಇವುಗಳಿಗೆಲ್ಲಾ ಜ್ಯೋತಿಷ್ಯ ಮಾಟ ಮಂತ್ರ ದಿಂದ ಮುಕ್ತಿ ಸಾಧ್ಯವಿಲ್ಲ. ಪಾರಮಾರ್ಥಿಕ ಸಾಧನೆ ಮಾಡಿದ ಧರ್ಮಗುರುಗಳು ಲೌಕಿಕ ತಂತ್ರಗಳ ಮೂಲಕ ಪರಿಹಾರ ಕೊಡಬಲ್ಲರು ಎಂಬ ಸಹೋದ್ಯೋಗಿಯೊಬ್ಬರ ಮಾತು ಶ್ಯಾಮರಾಯರಿಗೆ ಹಿಡಿಸಿತು. ಹಾರುವ ನೋಟಿನ ಸ್ವಪ್ನ ನಿಂತರೆ ಸಾಕೆಂದು ಧರ್ಮಗುರುಗ ಭೇಟಿಗೆ ಸಮಯ ನಿಗದಿಪಡಿಸಿದರು. ಈ ಜಗತ್ತೇ ಒಂದು ಸ್ವಪ್ನ, ಅದು ದು:ಸ್ವಪ್ನವಾಗಿ ಕಾಡಬಾರದು ಎಂದರೆ ಭಗವಂತನ ಸಾನ್ನಿದ್ಯ, ಅವನ ಸ್ನೇಹ ಸಂಪಾದಿಸಬೇಕು. ಇನ್ನು ನಿಮ್ಮ ಸ್ವಪ್ನದ ಯೋಚನೆ ಶ್ರೀಮಠಕ್ಕೆ ಬಿಡಿ. ನಿಮಗೆ ನಾವು ಶ್ರೀ ಮಠದ ಭಕ್ತವೃಂದದ ವತಿಯಿಂದ ಧರ್ಮಭೀರು ಸದ್ಗ್ರಹಸ್ಥ ಪ್ರಶಸ್ತಿಯನ್ನು ನಾಡಿದ್ದು ಉತ್ಸವದ ದಿವಸ ಲಕ್ಷಾಂತರ ಜನರೆದುರು ಪ್ರಧಾನಮಾಡುತ್ತೇವೆ. ಅದು ನಿಮಗೆ ಜನಮನ್ನಣೆ ನೀಡುತ್ತದೆ ಆ ನಂತರ ಎಲ್ಲಾ ಸರಿಯಾಗುತ್ತದೆ. ಹ್ಞಾ ಹಾಗೇಯೇ ಇನ್ನೊಂದು ವಿಚಾರ, ಶ್ರೀ ಮಠದ ಮಹಾದ್ವಾರ ನೋಡಿದ್ದೀರಲ್ಲ..? ಅದು ಶಿಥಿಲಗೊಂಡಿದೆ. ಅದರ ವಿಚಾರ ಮಠದ ಮುಕ್ತೇಸರರ ಬಳಿ ಮಾತನಾಡಿ ಎಂದು ಶ್ರೀಗಳು ಶ್ಯಾಮರಾಯರಿಗೆ ಫಲಮಂತ್ರಾಕ್ಷತೆ ನೀಡಿದರು. ಶ್ಯಾಮರಾಯರಿಗೆ ಅದೇನೋ ಅನಿರ್ವಚನೀಯ ಆನಂದದ ಅನುಭವ ಆಯಿತು. ಮುಕ್ತೇಸರರು ಹತ್ತಾರು ಲಕ್ಷ ರೂಪಾಯಿಗಳ ಮಹಾದ್ವಾರದ ಯೋಜನೆಯನ್ನು ರಾಯರ ಮುಂದಿಟ್ಟರು. ರಾಯರಿಗೆ ಮಠದಿಂದ ಪ್ರಧಾನವಾಗುವ ಧರ್ಮಭೀರು ಸದ್ಗ್ರಹಸ್ಥ ಪ್ರಶಸ್ತಿ ಹಾಗೂ ಮಾಯವಾಗುವ ದುಸ್ವಪ್ನದೆದುರು ಸಾವಿರದ ನೋಟಿನ ಕಂತೆಗಳು ಪೇಲವ ಅಂತ ಅನಿಸಿತು. ********** ಪ್ರಶಸ್ತಿ ಸ್ವೀಕರಿಸಿ ಊರು ಸೇರಿದ ಶ್ಯಾಮರಾಯರು ತಿಂಗಳಾಂತ್ಯದ ಎಲ್ಲಾ ವ್ಯವಹಾರ ಚುಕ್ತಾ ಮಾಡಲು ಬ್ಯಾಂಕ್ ಪಾಸ್ ಪುಸ್ತಕ ತೆಗೆದರು. ಅದು ಜೀರೋ ಬ್ಯಾಲೆನ್ಸ್ ತೋರುತ್ತಿತ್ತು. ಆಗ ಅವರಿಗೆ ನಿರುಮ್ಮಳ ಭಾವದ ಅನುಭವವಾಯಿತು. ಆನಂತರದ ಶನಿವಾರಗಳಲ್ಲಿ ಶ್ಯಾಮರಾಯರಿಗೆ ಸ್ವಪ್ನ ಕಾಣುತ್ತಿರಲಿಲ್ಲವೋ ಅಥವಾ ಕಂಡದ್ದು ನೆನಪಿರುತ್ತಿರಲಿಲ್ಲವೋ ಎಂದು ತಿಳಿಯದಂತಹ ಆಳವಾದ ನಿದ್ರೆ ಬರತೊಡಗಿತು. ಆದರೆ ಅಂದಿನಿಂದ ರಾಯರ ಧರ್ಮಪತ್ನಿಗೆ ತೆರೆದ ಬಾಗಿಲ ಬಳಿಯಲಿ ಒಂಟಿಯಾಗಿ ತಾನು ನಿಂತಂತೆ ಹಾಗೂ ಸಾವಿರ ಐನೂರರ ನೂರಾರು ನೋಟುಗಳು ಆಚೆ ಈಚೆ ಮನೆಯ ಬಾಗಿಲೊಳಗೆ ಮಾತ್ರಾ ತೂರಿ ಹೋದಂತೆ ಮತ್ತು ಎಷ್ಟು ಕೈಬೀಸಿದರೂ ತಮ್ಮ ಮನೆಯೊಳಗೆ ಅವು ಬಾರದಂತೆ ಮಸುಕು ಮಸುಕು ಸ್ವಪ್ನ ಬೀಳತೊಡಗಿತು.
***************

2 comments:

ಮೃತ್ಯುಂಜಯ ಹೊಸಮನೆ said...

ಕತೆ ತುಂಬ ಚೆನ್ನಾಗಿದೆ. (ಮೂರ್ನಾಲ್ಕು "ತುಂಬ".)

ಮೂರ್ತಿ ಹೊಸಬಾಳೆ. said...

hahah olleya kathe