ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿರುವಾಗಲೋ, ಅತ್ಯಂತ ಇಷ್ಟವಾದ ಸೀರಿಯಲ್ ನೋಡುತ್ತಿರುವಾಗಲೋ, ಊಟ ಮಾಡುತ್ತಿರುವಾಗಲೋ , ಪಟ್ಟಂತ ವಿದ್ಯುತ್ ಹೋಗುತ್ತದೆ. ಸರಿ ಆವಾಗ ಮನೆಮಂದಿಯೆಲ್ಲ ಸೇರಿ ಕರೆಂಟ್ ಕಂಪನಿಯವರಿಗೆ ಒಂದಿಷ್ಟು ಹಿಡಿಶಾಪ ಹಾಕುತ್ತೇವೆ. ಐದತ್ತು ನಿಮಿಷದೊಳಗೆ ಕರೆಂಟ್ ಬಂತೋ ಅಷ್ಟಕ್ಕೆ ನಿಲ್ಲುತ್ತದೆ ಆದರೆ ಗಂಟೆ ಕಳೆದರೂ ಬರಲಿಲ್ಲ ಅಂತಾದರೆ ಯಡ್ಯೂರಪ್ಪನಿಂದ ಶುರುವಾಗಿ ರಾಜಕೀಯ ನಾಯಕರೆಲ್ಲಾ ಮುಗಿಸಿ ಹುರಿದು ಮುಕ್ಕುತ್ತೇವೆ. ಆ ನಡುವೆ ಓಟು ಹಾಕಿ ಮುಗುಮ್ಮಾಗಿ ಕುಳಿತ ನಮ್ಮನ್ನೊಂದು ಬಯ್ದುಕೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಮಿಕ್ಕವರೆಲ್ಲಾ ಸರಿ ಇಲ್ಲ ಎಂಬ ವಾಗ್ದಾಳಿ ಅವ್ಯಾಹತವಾಗಿ ಮುಂದುವರೆಯುತ್ತದೆ. ಇರಲಿ ಅದರ ಕತೆ ಬದಲಾಗುವುದಿಲ್ಲ ಆಗುವುದೂ ಬೇಡ. ಈಗ ಫೋಟೋ ಸುದ್ದಿಗೆ ಬರೋಣ.
ಜೋಗ ಜಲಪಾತ ನೀವು ನೋಡಿರುತ್ತೀರಿ ಅಥವಾ ಅದ್ಭುತವಾಗಿದೆ ಎಂಬ ಸುದ್ಧಿಯನ್ನು ಕೇಳಿರುತ್ತೀರಿ. ಈ ಜಲಪಾತ ಸೃಷ್ಟಿಮಾಡಿದ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಹಾಕಿದ್ದಾರೆ. ಆ ಆಣೆಕಟ್ಟಿನ ನೀರಿನಿಂದ ಜಲವಿದ್ಯುತ್ ಮೂರುಕಡೆ ಉತ್ಪಾದಿಸುತ್ತಾರೆ(ಅಯ್ಯೋ ಅವೆಲ್ಲಾ ಗೊತ್ತು ಕೊರೆಯಬೇಡ, ಎಂದಿರಾ?. ಇದು ಗೊತ್ತಿಲ್ಲದವರಿಗಾಗಿ..!) ಅಂತಹ ಒಂದು ನಿಮಗೆ ಕಾಣಿಸುತ್ತಿರುವ ತಳಕಳಲೆ ಡ್ಯಾಮ್. ಹತ್ತು ಬೃಹತ್ ಗಾತ್ರದ ಪೈಪ್ ಗಳು ಕೆಳಗಿಳಿದಿವೆ ಹಾಗೆಯೇ ಹತ್ತು ತಂತಿಗಳು ಮೇಲೇರಿವೆ. ಹೊರನೋಟಕ್ಕೆ ಸುಂದರ ದೃಶ್ಯವಾಗಿ ಗೋಚರಿಸುವ ಈ ನೋಟ ಒಳಗೆ ಇಳಿದಂತೆಲ್ಲಾ ಮನುಷ್ಯನ ಇಚ್ಛಾ ಶಕ್ತಿಯನ್ನು ಬಿಚ್ಚಿಡುತ್ತವೆ. ಅಲ್ಲಿಂದಲೇ ನಮ್ಮ ಊಟ ಟಿವಿ ಕ್ರಿಕೆಟ್ ಗಳ ಮಜ ಹಾಗೂ ಗೊಣಗಾಟ ದ ಮೂಲ ಉತ್ಪಾದನೆಯಾಗುತ್ತದೆ. ಹತ್ತು ಪೈಪ್ ಗಳಲ್ಲಿ ರಭಸವಾಗಿ ನುಗ್ಗುವ ನೀರು ಟರ್ಬೈನ್ ತಿರುಗಿಸಿ ತಂತಿಯ ಮೂಲಕ ಚರ್ ಚರ್ ಎಂಬ ಶಬ್ಧದೊಂದಿಗೆ ತಲುಪುವಲ್ಲಿಗೆ ತಲುಪಿ ಬೆಳಗುತ್ತದೆ ಮತ್ತು ಮಿನುಗುತ್ತದೆ. ಸಹಸ್ರ ಸಹಸ್ರ ಕೈಗಳ ಶ್ರಮದ ಫಲ ಅದು. ಐವತ್ತು ವರ್ಷಗಳ ಹಿಂದೆ ಅದೆಷ್ಟು ಕುಟುಂಬಗಳು ಅಲ್ಲಿ ಪ್ರಾಣ ತೆತ್ತವೋ ಅವೆಷ್ಟು ಕುಟುಂಬಗಳು ಬೀದಿ ಪಾಲದವೋ ಕೇಳುಗರೇ ಇಲ್ಲದ ಅವರ ಗೊಣಗಾಟ ಅದೆಲ್ಲಿ ಕರಗಿ ಹೋಯಿತೋ ಬಲ್ಲವರ್ಯಾರು? . ಪೈಪಿನೊಳಗೆ ಹರಿದು ಬರುವ ನೀರು ಲಿಂಗನ ಮಕ್ಕಿ ಆಣೆಕಟ್ಟಿನಲ್ಲಿ ನಿಂತಾಗ ಅದೆಷ್ಟು ಸಹಸ್ರ ಜನ ಮನೆ ಮಠ ಸಂಸ್ಕೃತಿ ಕಳೆದುಕೊಂಡರೋ..? ಲೆಕ್ಕ ಇಟ್ಟವರ್ಯಾರು..? . ಕೇವಲ ಮನುಷ್ಯ ಮಾತ್ರ ಇಳಿಯುವುದು ಕಷ್ಟ ಎಂಬಂತಹ ಜಾಗಗಳಲ್ಲಿ ಆನೆಗಾತ್ರದ ಪೈಪ್ ಗಳು ಇಳಿಸುವಾಗ ಅದೆಷ್ಟು ಅನಾಹುತಗಳಾಯಿತೋ..? ಎಷ್ಟು ಜೀವಗಳು ಅಲ್ಲಿ ನಲುಗಿ ಹೋಯಿತೋ..?. ಅದೆಷ್ಟು ಮರ ಗಿಡ ಪ್ರಾಣಿ ಪಕ್ಷಿಗಳು ಅಕಾಲ ಮೃತ್ಯುವಿಗೆ ತುತ್ತಾದವೋ ಬಲ್ಲವರ್ಯಾರು?. ಅವರುಗಳ ಶ್ರಮದ ಪ್ರತಿಫಲ ನಾವು ಅನುಭವಿಸುತ್ತಿದ್ದೇವೆ.
ಆದರೂ ಹತ್ತೆ ಹತ್ತು ನಿಮಿಷ ಕರೆಂಟು ಹೋದಾಗ ಮುಳುಗಿ ಹೋಗುವುದು ಎನೂ ಇಲ್ಲದಿದ್ದರೂ " ತತ್ತ್ ಈ ದರಿದ್ರ ಕೆಇಬಿ ಯವರ ಹಣೇಬರಹವೇ ಇಷ್ಟು " ಎಂಬ ನಮ್ಮ ಹಿಡಿ ಶಾಪ ಮುಂದುವರೆಯುತ್ತದೆ.
ಅಯ್ಯೋ ಹಾಗೆ ಆಲೋಚಿಸುತ್ತಾ ಹೋದರೆ ಬದುಕಿನ ಮಜವೇ ಇಲ್ಲ ಎಂದಿರಾ.? ಓ ಕೆ ಒಂಥರಾ ಅದೂ ಸರೀನೆ. ಯಾಕೆಂದರೆ
ಇದು ಪ್ರಪಂಚ ಇದುವೇ ಪ್ರಪಂಚ..! ಅಲ್ಲವೇ?
3 comments:
ಮನುಷ್ಯ ತುಂಬಾ ಧೂರ್ತ ಪ್ರಾಣಿ....
ಅವನ ಆಸೆಯಿಂದ ಮನುಕುಲವೇ ವಿನಾಶದಂಚಿಗೆ ಬಂದಿದೆ.
ಮನುಷ್ಯ ಧೂರ್ತ ಹೌದೇ ಹೌದು ಎಂದಾದರೆ ವಿನಾಶದ ಅಂಚಿಗೆ ಹೋದರೆ ಏನು ಸಮಸ್ಯೆ ? ಅಯ್ಯೋ! ನಾವೂ ಸಾಯಬೇಕಲ್ಲ ಎಂಬುದು ನಿಮ್ಮ ಅಭಿಪ್ರಾಯವಿರಬಹುದು. ಅಲ್ಲವೇ ?
ಭಾರತೀಶ
ಯಾಕೆ ಸ್ವಾಮಿ ನಾವೆಲ್ಲ ಸಾಯಲಿಕ್ಕಾಗಿಯೇ ಹುಟ್ಟಿರೋದು,
ಇದರಲ್ಲಿ ಅನುಮಾನ ಇದೆಯೇ?
ಯಾರು ಏನಾದರೂ ಆಗಲಿ ನಾನು ಸುಖವಾಗಿರಬೇಕೆಂಬ
ದುರಾಸೆಯಿಂದ ಪ್ರಪಂಚ ಇವತ್ತು ಹೀಗಾಗಿದೆ.....
Post a Comment