Tuesday, October 13, 2009

ನಮ್ಮ ಪೆಜತ್ತಾಯರ ಕಾಗದದ ದೋಣಿ ಮತ್ತು ಬೇಳೂರು ಸುದರ್ಶನರ ಮಾತು

ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ ಮನುಕುಲವೆಂಬ ಬಳಗದ ಎಲ್ಲ ಸದಸ್ಯರಲ್ಲಿ ಇರಬೇಕಾದ ಗುಣಗಳು. ಈ ಗುಣಗಳು ಇರಬೇಕೆಂದು ಹೇಳುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ!

pejathaya-mitramaadhyama

ಮೂರು ವಾರಗಳ ಹಿಂದೆ ಮಿಂಚಂಚೆ ಮೂಲಕ, ಆಮೇಲೆ ದೂರವಾಣಿ ಮೂಲಕ ಪರಿಚಯವಾದ ಎಸ್ ಎಂ ಪೆಜತ್ತಾಯ ಇಂಥ ಮಾತುಗಳನ್ನು ಚಾಚೂ ತಪ್ಪದೆ ತಮ್ಮ ಜೀವನದ ಉದ್ದಕ್ಕೂ ಆಚರಿಸುತ್ತಿರುವ ಕೆಲವೇ ಚೇತನಗಳಲ್ಲಿ ಒಬ್ಬರು ಎಂದು ನನಗೆ ಅನ್ನಿಸಿದ್ದು ಅವರು ಪ್ರೀತಿಯಿಂದ ಕಳಿಸಿದ `ಕಾಗದದ ದೋಣಿ’ ಪುಸ್ತಕವನ್ನು ಓದಿದಾಗ.

ಅನನ್ಯ ಜೀವನಾನುಭವದ ನೆನಪಿನ ಬುತ್ತಿ ಎಂಬ ವಿಶೇಷಣಗಳನ್ನು ಹೊತ್ತು ತಂದ ಮುಖಪುಟವನ್ನು ಬದಿಗೆ ಸರಿಸಿಂ ಓದಿದರೂನೂ ಅವರ ಜೀವನಪ್ರೀತಿಯನ್ನು ಎಲ್ಲ ಪುಟಗಳಲ್ಲಿ ಕಾಣಬಹುದು. ನಿಜಕ್ಕೂ ಅನನ್ಯ ಜೀವನ ಎಂದು ಒಪ್ಪಿಕೊಳ್ಳಬಹುದು!

ಈ ಪುಸ್ತಕದಲ್ಲಿ ಇರುವುದೆಲ್ಲ ಅವರ ಜೀವನದಲ್ಲಿ ನಡೆದ ಹಲವು ಘಟನೆಗಳು; ಅವರು ಕಂಡ ಹಲವು ವ್ಯಕ್ತಿತ್ವಗಳು. ೨೮೩ ಪುಟಗಳಲ್ಲಿ ಹರಡಿರುವ ಈ ೫೫ ಕಥೆಗಳು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಕಥೆಗಳು. ಕೆಲವು ವೈಯಕ್ತಿಕ ಘಟನೆಗಳ ನಿರೂಪಣೆಯಾಗಿದ್ದರೆ, ಕೆಲವು ಅವರು ಕಂಡ ವ್ಯಕ್ತಿತ್ವಗಳ ಪರಿಚಯ, ಯಾವುದಕ್ಕೂ ಅಂಥ ವಿಶೇಷಣಗಳೇನೂ ಇಲ್ಲ. ಮೊದಲು ಆತ್ಮಕಥೆಯಂತೆ ಆರಂಭವಾಗುವ ಈ ಪುಸ್ತಕ ಕೊನೆಗೆ ಬದುಕಿನ ಹಲವು ಅನುಭವಗಳನ್ನು ಕಟ್ಟಿಕೊಡುವ ಸಾಮಾಜಿಕ ದಾಖಲೆಯಾಗಿ ಪರಿವರ್ತಿತವಾಗುತ್ತವೆ. ಪೆಜತ್ತಾಯರು ಬಾಲ್ಯದಲ್ಲಿ ಅನುಭವಿಸುತ್ತಿದ್ದ ಬೇಸಗೆ ರಜಾಕಾಲದ ಅನುಭವದಿಂದ ಆರಂಭವಾಗುವ ಈ ಪುಸ್ತಕ `ನನಗೂ ಹೃದಯದ ಶಸ್ತ್ರಚಿಕಿತ್ಸೆ ಆಯಿತು’ ಎಂಬ ಖಾಸಗಿ ಬ್ಲಾಗ್‌ನೊಂದಿಗೆ ಮುಗಿಯುತ್ತದೆ. ತಮ್ಮ ಮಒದಲ ಲೇಖನದಲ್ಲಿ `ಯಾವ ಊರಿಗೂ ಹೋಗದೆ, ಯಾವ ಸಮ್ಮರ್ ಕ್ಯಾಂಪಿಗೂ ಹೋಗದೆ ಬೇಸಗೆ ರಜಾ ಕಳೆಯುತ್ತಿದ್ದ’ ಪೆಜತ್ತಾಯರು ಬದುಕಿನ ಹಲವು ಮಜಲುಗಳನ್ನು ದಾಟಿದ ಮೇಲೆ `ಪಥ್ಯದ ಆಹಾರ ಸೇವನೆ ಮತ್ತು ಡಾಕ್ಟರುಗಳು ಹೇಳಿದಷ್ಟು ವ್ಯಾಯಾಮಗಳನ್ನು ತಪ್ಪದೇ ಮಾಡುತ್ತಾ, ನಾನು ನನ್ನ ಮುಂದಿನ ಜೀವಿತವನ್ನು ಕಳೆಯುವ ನಿರ್ಧಾರ ಮಾಡಿದ್ದೇನೆ’ ಎಂಬ ಹೇಳಿಕೆಯೊಂದಿಗೆ ಪುಸ್ತಕವನ್ನು ಮುಗಿಸಿದ್ದಾರೆ. ಬದುಕು ಎಷ್ಟೆಲ್ಲ ಕಲಿಸುತ್ತದೆ ಅಲ್ಲವೆ?

ದಕ್ಷಿಣ ಕನ್ನಡದಲ್ಲಿ ಹುಟ್ಟಿ ಚಿಕ್ಕಮಗಳೂರಿನಲ್ಲಿ ಕೃಷಿ ಮಾಡಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀನಿವಾಸ ಮಧುಸೂಧನ ಪೆಜತ್ತಾಯರದು ಸ್ನೇಹಪ್ರಿಯ ವ್ಯಕ್ತಿತ್ವ. ಆದ್ದರಿಂದಲೇ ಅವರಿಗೆ ಬಾಲ್ಯದಿಂದಲೂ ಹಲವು ಹಿರಿಯ ಗೆಳೆಯರು ಸಿಕ್ಕಿದ್ದಾರೆ; ಅವರಿಗೆ ಬದುಕಿನ ಪಾಠ ಕಲಿಸಿದ್ದಾರೆ. ಸಾಮಾನ್ಯವಾಗಿ ಈ ಎಲ್ಲ ಪ್ರಬಂಧಗಳಲ್ಲೂ ಅವರು ಅತ್ಯಂತ ಮುಕ್ತ ಮನಸ್ಸಿನಿಂದ ತಾವು ಕಲಿತ ಸಂಗತಿಗಳನ್ನು ಪಟ್ಟಿ ಮಾಡಿ, ಕಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಲ್ಲೂ ಆಧುನಿಕ ಸಾಹಿತ್ಯದ ಕ್ಲೀಷೆಗಳನ್ನು ಬಳಸದೆ, ತಮಗೆ ಬಂದ ಭಾಷೆಯಲ್ಲಿ ಸರಳವಾಗಿ ಕಥೆ ಹೇಳಿದ್ದರಿಂದಲೇ ಪೆಜತ್ತಾಯ ಅದ್ಭುತ ಸಾಹಿತಿಯಾಗಿ ರೂಪುಗೊಂಡಿದ್ದಾರೆ. ಅನುಭವ ಅವರನ್ನು ಮಾಗಿಸಿದೆ. ಉತ್ಪ್ರೇಕ್ಷೆ ಇಲ್ಲದ, ವಿಶೇಷಣಗಳಿಲ್ಲದ, ಈ ಕಥೆಗಳಲ್ಲಿ ಪೆಜತ್ತಾಯರು ಕಂಡ ದೃಶ್ಯಗಳಿವೆ. ಅನುಭವಗಳನ್ನು ಇಷ್ಟು ಸರಳವಾಗಿ ಬರೆಯಬಹುದೇ ಎಂಬುದಕ್ಕೆ ಈ ಪುಸ್ತಕ ಒಂದು ಮಾದರಿಯಾಗಿದೆ.

ಈ ಪುಸ್ತಕವನ್ನು ಓದುವಾಗ ನನಗೆ ಫಕ್ಕನೆ ನೆನಪಾಗಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಯವರ `ಮರೆಯಲಾದೀತೇ?’ ಪುಸ್ತಕ. ಅಲ್ಲೂ ವ್ಯಕ್ತಿಚಿತ್ರಣಗಳಿವೆ. ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಅನುಭಾವಿಗಳನ್ನು ಕುರಿತ ಅನುಭವದ ಲೇಖನಗಳಿವೆ. ಇಲ್ಲಿ ಪೆಜತ್ತಾಯರು ಅಲೌಕಿಕವಾದದ್ದೇನನ್ನೂ ಹೇಳುವುದಿಲ್ಲ. ಅವರು ಎಲ್ಲವನ್ನೂ ಹೇಳಿದ ಮೇಲೆ ಈ ಬದುಕು ಎಷ್ಟೆಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ ಎಂಬ ಭಾವ ಆವರಿಸುತ್ತದೆ.
ಸಾಹಿತ್ಯ ರಚನೆ ಮಾಡಿ ಬದುಕನ್ನು ಕಾಲ್ಪನಿಕ ಘಟನೆಗಳಲ್ಲಿ ವಿವರಿಸುವುದಕ್ಕಿಂತ ಬದುಕನ್ನು ಅನುಭವಿಸಿ ಸತ್ಯ ಘಟನೆಗಳನ್ನೇ ಸರಳ ಭಾಷೆಯಲ್ಲಿ ಬರೆದರೆ ಅದೇ ಬಹುದೊಡ್ಡ ಸಾಹಿತ್ಯಕೃತಿಯಾಗಬಹುದು ಎನ್ನುವುದಕ್ಕೆ ಪೆಜತ್ತಾಯರದು ಹೊಸ ಉದಾಹರಣೆ ಅಷ್ಟೆ.

ಈ ಪುಸ್ತಕ ಬಹುಶಃ ಇತ್ತೀಚೆಗೆ ಬಂದ ಆತ್ಮಕಥನಗಳಲ್ಲೇ ಅತ್ಯಂತ ಸರಳ ನಿರೂಪಣೆಯದು. ನನ್ನ ಅತಿಪ್ರಿಯ ಕನ್ನಡ ಪುಸ್ತಕಗಳಲ್ಲಿ ಇದೂ ಒಂದಾಗಿದೆ. ನೀವೂ ಓದಿ ಎಂದು ಮನಸಾರೆಯಾಗಿ ಶಿಫಾರಸು ಮಾಡುತ್ತಿರುವೆ!

-ಮಿತ್ರಮಾಧ್ಯಮದ ಬೇಳೂರು ಸುದರ್ಶನರಿಂದ


1 comment:

Sharath Akirekadu said...

freind,

where do i get this book? i was reading his episodes in kendasampige.But unfortunately it is shut down now.

thanks in advance


Sharath.A