Wednesday, September 8, 2010

ವಾಮಾಚಾರಿ ಸದಾಚಾರಿಯಾದ ಬಗೆ...!

ಅದೊಂದು ಮೂವತ್ತು ಮನೆಗಳ ಸಣ್ಣ ಊರು. ಎಲ್ಲರ ಮನೆಗಳೂ ಬಹುಪಾಲು ಖಾಲಿ ಖಾಲಿ. ಹುಡುಗರು ಪಟ್ಟಣ ಸೇರಿದ್ದು-ಪಾಲಕರು ಕುಟುಂಬ ಯೋಜನೆ ಪಾಲಿಸಿದ್ದು ಹೀಗೆ ಹತ್ತಾರು ಕಾರಣಗಳು ಊರು ಭಣ ಭಣ ಎನ್ನಲು. ಇಡೀ ಊರು ಜಾಲಾಡಿದರು
ಆಗರ್ಭ ಶ್ರೀಮಂತರು ಇಲ್ಲ. ಬಹುಪಾಲು ಜನ ಅವರಮಟ್ಟಿಗಿನ ಜೀವನಕ್ಕೆ ಸಾಕಾಗುವಷ್ಟು.
ಆತನಿಗೂ ಅಷ್ಟೆ ಎರಡೆ ಎಕರೆ ತೋಟ ಹತ್ತು ವರ್ಷದ ಹಿಂದೆ. ಇದ್ದಕ್ಕಿದ್ದಂತೆ ಒಂದು ದಿವಸ ಮನೆಯಮೇಲೆ ಕಲ್ಲುಗಳು ಬೀಳತೊಡಗಿದವು. ಅಲ್ಲಿಗೆ ಜ್ಯೋತಿಷ್ಯ ಪ್ರಾರಂಭವಾಯಿತು. ಮಾಟಮಂತ್ರ ಜಪತಪ ನಿತ್ಯ. ಜನರ ಕಷ್ಟಗಳ ಪ್ರಮಾಣ ಪ್ರಪಂಚದಲ್ಲಿ ಎಷ್ಟಿದೆ ನೋಡಿ? ಹತ್ತೇ ವರ್ಷದಲ್ಲಿ ಆತ ೧೩ ಎಕರೆ ಭಾಗಾಯ್ತು ಒಡೆಯನಾದ. ಮನೆಯೆದುರು ಮೂರು ಕಾರುಗಳು ಸ್ವಂತದ್ದು. ಶ್ರಾವಣ ಮಾಸದಲ್ಲಿ ಕನಿಷ್ಟವೆಂದರೂ ನಾಲ್ಕದು ಲಕ್ಷದ ಸಂಪಾದನೆ. ಆತ ಎಸ್ ಎಸ್ ಎಲ್ ಸಿ ಫೇಲ್. ಆದರೆ ಬರುವ ಜನರು ಇಂಜನಿಯರಿಂಗ್ ಮೆಡಿಕಲ್ ಪಾಸ್. ಇಷ್ಟಿದರೂ ಆತ ಊರಿನ ದೇವಸ್ಥಾನಕ್ಕೆ ವರಾಡ ಕೊಡುತ್ತಿರಲಿಲ್ಲ. ಸೀಮೆಯ ದೇವಸ್ಥಾನಕ್ಕೂ ನಾಸ್ತಿ. ಆದರೂ ದೇವರ ನಂಬಿ ಜೀವನ....!
ಊರಿನ ತಲೆಯಲ್ಲೊಂದು ಎರಡೆಕರೆ ವಿಶಾಲ ಜಾಗ. ಅಲ್ಲಿ ಲಕ ಲಕ ಎನ್ನುವ ಅರಳಿ ಮರ. ಊರವರು ನೂರಾರು ವರ್ಷದಿಂದ ಪೂಜಿಸುತ್ತಿದ್ದ ಜಟಕ ಚೌಡಿಗಳ ನಂಬಿಕೆಯ ಸ್ಥಳ. ಅದು ಆತನಿಗೆ ಕಣ್ಣಿಗೆ ಬಿತ್ತು. ಬೇಲಿ ಹಾಕಿದ. ಮಲಗಿದ್ದ ಊರು ಪುಟಿದೆದ್ದಿತು. ಪ್ರತಿಭಟಿಸಿತು. ಹಣವಿಲ್ಲದವರ ಕೂಗು ಎಷ್ಟರವರೆಗೆ ನಡೇದೀತು ಎಂಬ ಹಮ್ಮು ಆತನದ್ದು. ಆದರೆ ತಾತ್ಕಾಲಿಕ ವಿಜಯ ಊರವರಿಗೆ. ಬೇಲಿ ಕಿತ್ತೆಸೆಯಲ್ಪಟ್ಟಿತು.
ಬಂತು ಶ್ರಾವಣ ಮಾಸ. ಆತ ತನ್ನ ದಾರಿ ಬದಲಿಸಿದ. ಬಾಗಿನದ ಹೆಸರಿನಲ್ಲಿ ಸುತ್ತಮುತ್ತಲಿನ ನೂರಾರು ದಂಪತಿಗಳನ್ನು ಮನೆಗೆ ಕರೆಯಿಸಿದ. ಜನ ಬೆಂಬಲ ತನಗಿದೆ ಎಂದು ಸಹಿ ಹಾಕಿಸಿಕೊಂಡ. ಅಲ್ಲಿಯವರೆಗೆ ದೇವರ ಪೂಜೆ ಮಾಡದಿದ್ದವರು ಬಂದು ಎರಡು ಸೀರೆ ಪಡೆದು ಉಂಡೆದ್ದು ಹೋದರು. ಟ್ರಸ್ಟ್ ಶ್ರಾವಣ ಮಾಸದಲ್ಲಿ ರಚಿಸಿದ. ಶಾಲೆಗೆ ಬೀರು ಕೊಟ್ಟ, ಮೂರೂವರೆ ಸಾವಿರ ರೂಪಾಯಿಯ ಬೆಲೆಯ ಬೀರು ಕೊಡಲು ಒಂದು ನೂರಾಐವತ್ತು ಜನರ ಬರೊಬ್ಬರಿ ಮೆರವಣಿಗೆ. ನಂತರ ಒಂದು ಕಾರ್ಯಕ್ರಮ ಅಲ್ಲಿ "ಜಾಗ ಬಿಡೆವು" ಎಂಬ ಪರೋಕ್ಷ ಘೋಷಣ ದೂರದೂರದಿಂದ ನೂರೈವತ್ತು ಜನರು ಇಲ್ಲಿಗೆ ಬರಲು ಖರ್ಚಾದ ಹಣ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು. ಪಕ್ಕದೂರಿನ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟ. ಈಗ ಆ ಜಾಗ ಟ್ರಸ್ಟ್ ಗೆ ಬೇಕು ಕೊಡಿ ಎಂದು ಸರ್ಕಾರಕ್ಕೆ ಅರ್ಜಿ. ಅಲ್ಲೊಂದು ಔಷಧಿವನ ದ ತಯಾರಿ ನಡೆದಿದೆ. ನೋಡಿ ಉದ್ದೇಶ ಒಂದೆ ಜಾಗ ಕಬಳಿಸುವುದು ಆದರೆ ಮಾರ್ಗ ಬೇರೆ. ಆದರೆ ಏನೇನೋ ಮಾಡುತ್ತಿದ್ದವನನ್ನು ಸದಾಚಾರಿಯನ್ನಾಗಿಸಿ ಟರ್ನ್ ಮಾಡಿದ ಹೆಮ್ಮೆಯಿಂದ ಬಡಗ್ರಾಮಸ್ಥರು ಒಳಗೊಳಗೆ ನಗುತ್ತಿದ್ದಾರೆ.
ಇರಲಿ ಹಣಬಲವೋ ಸತ್ಯಬಲವೋ ಎಂಬುದು ಕಾಲ ನಿರ್ಧರಿಸುತ್ತದೆ. ಆದರೆ ಪ್ರಪಂಚ ಎಷ್ಟೇ ಮುಂದುವರೆದರೂ ಮಂದಿಯ ಮಟ್ಟ ಮಾತ್ರಾ ವಿಚಿತ್ರ ವಿಶೇಷ ವಿಪರ್ಯಾಸ. ಪ್ರಕೃತಿಯ ಶಕ್ತಿ ಅಗಾಧ. ಯಾರ ಜೀವನವೂ ಯಾರ ಕೈಯಲ್ಲಿಯೂ ಇಲ್ಲ ಎಂಬುದು ಮೇಲ್ಮಟ್ಟದ ಆಲೋಚನೆಗೆ ಸಿಗುತ್ತದೆ. ಆದರೆ ಬಳಸಿಕೊಳ್ಳುವವರು ಬುದ್ಧಿವಂತರು ಕಾಲನ ಚಕ್ರಕ್ಕೆ ಸಿಕ್ಕಿ ಕಾಲವಾಗುತ್ತಾರೆ ಎಂಬ ಸರಳ ತತ್ವ ಮರೆತಿರುತ್ತಾರೆ. ಅದಕ್ಕೆ ಎನ್ನುವುದು "ಕರ ಎಷ್ಟು ಹಾರಿದರೂ ಗೂಟದ ಕೆಳಗೆ". ಪ್ರಕೃತಿಯೆಂಬ ಗೂಟ ನಿಗೂಢ ಹುಲು ಮನುಷ್ಯ ಅದ ತಿಳಿಯದೇ ಹಾರುತ್ತಲೇ ಇದ್ದಾನೆ ಲಾಗಾಯ್ತಿನಿಂದ ಸತ್ಯ ತಿಳಿಯದೆ. ಪಿಚ್ಚೆನಿಸುತ್ತದೆ.






2 comments:

ಸೀತಾರಾಮ. ಕೆ. / SITARAM.K said...

ತುಂಬಾ ಮಾರ್ಮಿಕ ವಿಡಂಬನೆಯ ಕಥೆ. ಧನ್ಯವಾದಗಳು.

ಸಾಗರದಾಚೆಯ ಇಂಚರ said...

ತುಂಬಾ ಹ್ರದಯಕ್ಕೆ ನಾಟುವ ಕಥೆ
ಸುಂದರ ಶೈಲಿ