Friday, August 31, 2012

ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

ಬಹು ಸುಲಭ, ಬಹು ಕಷ್ಟ ಹೀಗೆ ನಾವು ವಿಂಗಡಿಸಬಹುದು ವಿಷಯಗಳನ್ನ ಘಟನೆಗಳನ್ನ ವಿದ್ಯಮಾನಗಳನ್ನ....ಗಳನ್ನ ಗಳನ್ನ ಗಳನ್ನ. ಬಿಡಿ ಅದು ಬಹಳ ಇದೆ ಪ್ರಸ್ತುತ ಅವನ್ನೆಲ್ಲಾ ಬಿಟ್ಟು ಸಮಸ್ಯೆಗಳ ವಿಷಯವನ್ನಷ್ಟೆ ನೋಡೋಣ.
ಹೀಗೊಂದು ಸಮಸ್ಯೆ ಬಂದಾಗ ಪರಿಹಾರ ಹುಡುಕುವ ವಿಷಯ ಇದೆಯಲ್ಲ ಅಥವಾ ಸಮಸ್ಯೆಯಿಂದ ಆಚೆ ಬರುವ ವಿಚಾರ ಇದೆಯಲ್ಲ ಅದು ಬಹು ಸುಲಭ ಹಾಗೂ ಬಹು ಕಷ್ಟ ಅಂತ ವಿಂಗಡಿಸಬಹುದು. ಯಾವುದು ಕಷ್ಟ ಯಾವುದು ಸುಲಭ ಅಂತಾದರೆ, ಬೇರೆಯವರ ಸಮಸ್ಯೆಗೆ ತಟಕ್ಕನೆ ಪರಿಹಾರ ಹುಡುಕುವುದು ಬಹು ಸುಲಭ, ನಮ್ಮ ಸಮಸ್ಯೆಗೆ ಪರಿಹಾರ ಬಲು ಕಷ್ಟ.
ಸನ್ಯಾಸಿಯೊಬ್ಬ ನಿದ್ದ. ಭಕ್ತರ ನಿತ್ಯ ಸಮಸ್ಯೆಗೆ ಪರಿಹಾರ ಅವನ ಕಾಯಕಗಳಲ್ಲೊಂದು. ಬರುವ ಭಕ್ತರದ್ದೋ ಹತ್ತು ಹಲವು ಸಮಸ್ಯೆಗಳು. ಹೆಂಡತಿ ಹೊಂದಿಕೊಳ್ಳುವುದಿಲ್ಲ ಎಂದು ಗಂಡ, ಗಂಡನದು ದುಶ್ಚಟ ಎಂದು ಹೆಂದತಿ, ವ್ಯಾಪಾರದಲ್ಲಿ ನಷ್ಟ ಎಂದ ವ್ಯಾಪಾರಿ, ಉದ್ಯಮ ಏಳದು ಎಂಬ ಉದ್ಯಮಿ ಹೀಗೆ ಬರುವ ಭಕ್ತರ ಸಮಸ್ಯೆಗೆ ಸನ್ಯಾಸಿ ಚಟಕ್ಕನೆ ಉತ್ತರ ನೀಡಿ ಸಮಾಧಾನ ಪಡಿಸುತ್ತಿದ್ದ. ಹೀಗೆ ಸಮಾಧಾನ ಹೊಂದಿದವರು ಒಂದಿಷ್ಟು ಹಣ ನೀಡುತ್ತಿದ್ದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ.
         ಆತ ದುಂಡನೆಯ ಹೊಟ್ಟೆ ಹೊತ್ತು ಬರುವ ಜನಕ್ಕೆ "ನೀವು ಬೇರೆಯವರ ಆಹಾರವನ್ನೂ ತಿನ್ನುವ ಕಾರಣಕ್ಕೆ ನಿಮ್ಮ ಹೊಟ್ಟೆಯಲ್ಲಿ ಶೇಖರಣೆಯಾಗಿದೆ, ನಿಮ್ಮ ದುಡಿಮೆಯದು ತಿನ್ನಿ" ಎನ್ನುತ್ತಿದ್ದ. ಕೇಳಿದವರಿಗೆ ಇದು ಅರ್ಥವಾಗಿ ಅವರು ಉದ್ಧಾರವಾಗಿ ಹೋದರು ಹೊಟ್ಟೆಯನ್ನೂ ಇಳಿಸಿಕೊಂಡರು. ಅವರೂ ಸನ್ಯಾಸಿಗೆ ಹಣವನ್ನು ಹಾಕಿದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ ಕೊಂಚ ಕಡಿಮೆ ಯಾಯಿತು.
      "ಪತ್ನಿಯನ್ನು ಪ್ರೀತಿಸಿ, ಪರಪತ್ನಿಯನ್ನಲ್ಲ" ಅಂತ ಮೇಲ್ಮಟ್ಟದ ಮಾತನ್ನಾಡಿ ಕೆಳಮಟ್ಟಕ್ಕಿಳಿದವರನ್ನೂ ಮೇಲೆತ್ತಿದ. ಮೂರು ಪದದ ಮಾತಿನಲ್ಲಿ ಮುನ್ನೂರು ಅರ್ಥ ಪಡೆದುಕೊಂಡು ಭಕ್ತರು ಧನ್ಯರಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಸುಖವನ್ನು ಕಾಣಹತ್ತಿದರು. ಅವರೂ ಸನ್ಯಾಸಿಯ ಪಾದಕ್ಕೆ ಹಣವನ್ನು ಹಾಕಿದರು, ಸನ್ಯಾಸಿ ಚೆಲ್ಲಾಪಿಲ್ಲಿಯಾಗುತ್ತಿದ್ದ ದುಡ್ಡನ್ನು ಒಂದೆಡೆ ಪೇರಿಸಿಟ್ಟ.
      "ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ" ಎಂದ ಸನ್ಯಾಸಿ, ಭಕ್ತರು ತೆರೆದ ಬಾಯಿ ಮುಚ್ಚಲಿಲ್ಲ. ಒಬ್ಬ ಭಕ್ತ ಹೇಳಿದ" ಹೌದು ಎಷ್ಟು ಆಳವಾದ ಮಾತಿದು, ನಾವು ಊಟ ಮಾಡುವುದು ಕೈಯಲ್ಲಿ, ಅಂತಾದ ಮೇಲೆ ಊಟ ಒಳ್ಳೆಯದಾಗಿದ್ದರೆ ಆರೋಗ್ಯ ಅಂತ ಅರ್ಥ ". ಮತ್ತೊಬ್ಬ ಹೇಳಿದ " ಆಕ್ಯೂಪ್ರೆಷರ್ ನ ಸಂಪೂರ್ಣ ಅರ್ಥವನ್ನು ಒಂದೇ ವಾಕ್ಯದಲ್ಲಿ ಸನ್ಯಾಸಿಗಳು ಹೇಳಿದ್ದಾರೆ ಅಬ್ಬ"  ಮಗದೊಬ್ಬ " ಹೌದು ಕೈ ಬಾಯಿ ಶುದ್ಧವಾಗಿದ್ದರೆ" ಆರೋಗ್ಯ ಅಂತ ಅದರ ಅರ್ಥ ಅಂದ. ಎಲ್ಲಾ ಭಕ್ತರೂ ಒಂದೇ ವಾಕ್ಯದಲ್ಲಿ ಪುನೀತರಾಗಿ ಹಣವನ್ನು ಪಾದಕ್ಕೆ ಹಾಕಲೆತ್ನಿಸಿದರು. ಸನ್ಯಾಸಿಗೆ ಪೇರಿಡಿಸುವುದು ಸಮಸ್ಯೆಯಾಗಿ ಒಂದು ಪೆಟ್ಟಿಗೆ ತರಿಸಿ ಅದರಲ್ಲಿ ಹಾಕುವಂತೆ ಅಣತಿ ಮಾಡಿದ
       ದಿನಕಳೆದಂತೆ ಸನ್ಯಾಸಿ ಪ್ರಖ್ಯಾತನಾಗುತ್ತಾ ಸಾಗಿದ. ಆಶ್ರಮ ಸ್ಥಾಪನೆಯಾಯಿತು, ಪೀಠ ಬಂತು, ಸೇವಕಿಯರು ಬಂದರು,ಸಮಸ್ಯೆ ಹೊತ್ತು ಬರುವವರ ಸಂಖ್ಯೆ ವಿಸ್ತಾರ ಪಡೆಯುತ್ತಾ ಸಾಗಿತು.
       ಮತ್ತು ಈಗ ಸನ್ಯಾಸಿ ಸಮಸ್ಯೆಯಲ್ಲಿದ್ದಾರೆ.. ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

3 comments:

Anonymous said...

Nityanandana...?



bharat

Anonymous said...

Nityanandana...?



bharat

RAMESHA HEGADE said...

ಅವರವರ ಭಾವಕ್ಕೆ ಅವರವರ ಭಕುತಿಗೆ ಅನ್ನೊತರ ನಂಗೆ ಯಾಕೊ ಗೊತ್ತಿಲ್ಲ ನಿಮ್ಮ ಲೇಖನದಲ್ಲಿ ಹೆಂಡತಿ ಅನ್ನೊ ಪದ ಹೆಂದತಿ ಅಂತ ಆಗಿದ್ದು ಕಾಣುಸ್ತು